Pages

Ads 468x60px

Thursday 21 June 2018

ತುಳುವ ಹಣ್ಣಿನ ಹಲ್ವ

   


      


ಈ ಬಾರಿ ತುಳುವ ಹಲಸಿನ ಹಣ್ಣನ್ನು ತೋಟದಿಂದ ತಂದಿದ್ದೇ ಇಲ್ಲ. ಇತ್ತೂ, ಮರದಲ್ಲಿ ಅಡಿಯಿಂದ ಮುಡಿತನಕ. ಬಕ್ಕೆ ಹಲಸು ಇರುವಾಗ ಈ ಪಿಚಿಪಿಚಿ ಹಣ್ಣನ್ನು ಕೇಳೋರಿಲ್ಲ. ಆದರೂ ತೋಟದಲ್ಲಿರುವ ಫಲವಸ್ತುವನ್ನು ವರ್ಷಕ್ಕೊಮ್ಮೆಯಾದರೂ ತಿನ್ನಬೇಡವೇ, ಚೆನ್ನಪ್ಪನ ಮೂಲಕ ಒಂದು ತುಳುವನ ಹಣ್ಣನ್ನು ತರಿಸಿದ್ದೂ ಆಯ್ತು, ಇಡ್ಲಿ ಮಾಡಿ ತಿಂದೂ ಆಯ್ತು.

“ ಇಡ್ಲಿಯನ್ನು ಹೇಗೆ ಮಾಡಿದ್ದೂ? “ ಹುಬ್ಬೇರಿಸದಿರಿ. ವರ್ಷಗಳ ಹಿಂದೆಯೇ ಚಿತ್ರ ಸಹಿತ ವಿವರಣೆಯೊಂದಿಗೆ ಬರೆದಿರಿಸಿದ್ದೇನೆ. ಆಸಕ್ತರು ಹುಡುಕಿ ಓದಿರಿ.

ಈಗ ನಾವು ತುಳುವ ಹಲಸಿನ ಹಣ್ಣಿನಿಂದ ಹಲ್ವ ಮಾಡುವವರಿದ್ದೇವೆ.

ನಾರು ಅಧಿಕವಾಗಿರುವ ತುಳುವ ಹಲಸಿನ ಹಣ್ಣಿನ ರಸ ಮಾತ್ರ ಸಂಗ್ರಹಿಸಬೇಕಾಗಿದೆ. ಜಾಲರಿ ತಟ್ಟೆಯಲ್ಲಿ ಬೀಜಸಹಿತವಾಗಿ ಹಣ್ಣನ್ನು ಉಜ್ಜಿ ಉಜ್ಜಿ ರಸ ಸಂಗ್ರಹ ಆಯಿತು. ಅಂದಾಜು ಒಂದು ಲೀಟರ್ ರಸ ಸಿಕ್ಕಿತೂ ಅನ್ನಿ.

ಬಾಣಲೆಗೆ ಎರೆದು ಕುದಿಸುತ್ತಾ ಇರಬೇಕು, ಆಗಾಗ ಸೌಟು ಆಡುತ್ತಲಿರಬೇಕು.
ಸಾಕಷ್ಟು ಆರಿದೆ, ಹಲಸಿನ ರಸ ಹಿಟ್ಟಿನಂತಾಗಿದೆ, ಹಿಟ್ಟಿನ ಗಾತ್ರದಷ್ಟೇ ಬೆಲ್ಲ ಯಾ ಸಕ್ಕರೆ ಹಾಕಬೇಕು, ಬೆಲ್ಲ ಉತ್ತಮ.
ಬೆಲ್ಲವೂ ಕರಕರಗಿ, ಪಾಕದೊಂದಿಗೆ ಬೆರೆತಾಗ, ಒಂದು ಸೌಟು ತುಪ್ಪ ಎರೆಯಿರಿ, ಹಲ್ವ ಎಂಬ ಹೆಸರು ಕೊಡಬೇಡವೇ…
ಈ ಹಂತದಲ್ಲಿ ದ್ರಾಕ್ಷಿ, ಗೇರುಬೀಜ, ಯಾಲಕ್ಕಿ ಪುಡಿಗಳನ್ನು ಹಾಕಬೇಕು, ಇಲ್ಲದಿದ್ದರೂ ಬಾಧಕವಿಲ್ಲ.
ತುಪ್ಪವೂ ಈ ಘನಪಾಕದೊಂದಿಗೆ ಮಿಶ್ರಿತವಾಗಿ, ತಳ ಬಿಟ್ಟು ಬಂದಾಗ ಉರಿ ಆರಿಸಿ.
ಸಾಕಷ್ಟು ತಣಿದ ನಂತರ ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ.
ಚೆನ್ನಾಗಿ ಆರಿದ ಮೇಲೆ ಬೇಕಾದ ಆಕೃತಿಯಲ್ಲಿ ತುಂಡು ಮಾಡಿ ಡಬ್ಬದಲ್ಲಿ ತುಂಬಿಸಿ ಇಟ್ಕೊಳ್ಳಿ.
ಬಾಯಿಚಪಲವಾದಾಗ ತಿನ್ನಿ.
ಇದೇನೂ ಬೇಗ ಹಾಳಾಗುವಂತಾದ್ದಲ್ಲ.



        



Saturday 16 June 2018

ಹಲಸಿನ ಹಣ್ಣಿನ ಪೊಂಗಲ್




ವಿದ್ಯುತ್ ಸಂಪರ್ಕ ಇರಲಿಲ್ಲ, ಧಾರಾಕಾರ ಮಳೆ ಬೇರೆ. ಕತ್ತಲು ಕಳೆದು ಬೆಳಗಾಯ್ತು, ತಿಂಡಿ ಏನ್ಮಾಡ್ಲೀ… ಉಪ್ಪಿಟ್ಟೇ ಗತಿ, ತಪ್ಪಿದ್ರೆ ಅವಲಕ್ಕಿ ತಿನ್ನಬೇಕಷ್ಟೆ.  

ಕಡಿಯಕ್ಕಿ (ನುಚ್ಚಕ್ಕಿ ) ಇದೆ,  
ಒಂದು ಲೋಟ ನುಚ್ಚಕ್ಕಿ ತೊಳೆದು ಕುಕ್ಕರಿಗೆ ಹಾಕಿ,
 ಮೂರು ಲೋಟ ನೀರು ಎರೆದು,
 ರುಚಿಗೆ ತಕ್ಕಷ್ಟು ಉಪ್ಪು ಹಾಕಿ,
 ಒಂದು ಸೀಟಿ ಕೂಗಿಸಿ, ಕೆಳಗಿಳಿಸಿದ್ದೂ ಆಯ್ತು.

ಇನ್ನೀಗ ನೀರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕಾಯಿತುರಿ ಎಂದು ತಡಕಾಡಬೇಕಿದೆ,
ಥಟ್ ಎಂದು ನೆನಪಾಯಿತು,
ಹಲಸಿನಹಣ್ಣಿನ ಮುದ್ದೆ ಮಾಡಿಟ್ಟಿದ್ದೀನಲ್ಲ,
ಹೊಸರುಚಿಯ ಪ್ರಯೋಗ ಮಾಡಿಯೇ ಬಿಡೋಣ.

ಬಾಣಲೆಗೆ ಮೂರು ಚಮಚ ತುಪ್ಪ ಎರೆದಾಗ,
ಒಂದು ಚಮಚ ಜೀರಿಗೆ,
ಒಂದು ಚಮಚ ಕಾಳುಮೆಣಸು ಗುದ್ದಿ ಹಾಕಿದಾಗ,
ಬಿಸಿಯೇರಿ ಪರಿಮಳ ಬೀರಿದಾಗ,
ಒಂದು ಹಿಡಿ ತೆಂಗಿನತುರಿ ಬಿದ್ದಿತಾಗ,
ಸೌಟಾಡಿಸುತ್ತ ಇದ್ದಾಗ,
ಅರ್ಧ ಲೋಟ ಹಣ್ಣಿನ ಮುದ್ದೆ ಬಿದ್ದಿರಲು,
ಬೇಕಿದ್ದಷ್ಟು ನುಚ್ಚನ್ನ ಕೂಡಿರಲು
ಎದ್ದು ಬಂದಿತಲ್ಲ
ಹಲಸಿನ ಹಣ್ಣಿನ ಪೊಂಗಲ್!

ಮುಂಜಾನೆಯ ತಿಂಡಿ ಭಲೇ ಭರ್ಜರಿ ಆಗೇ ಹೋಯ್ತು.
ರಸಭರಿತ ಹೊಸರುಚಿಯನ್ನು ತಿನ್ನುತ್ತ, “ ಹಲಸಿನ ಹಣ್ಣಿನ ಕೊಟ್ಟಿಗೆ ಮಾಡಲು ತಿಳಿಯದವರಿಗೆ ಈ ತಿಂಡಿ ಇಷ್ಟವಾದೀತು. “ ಎಂದರು ಗೌರತ್ತೆ .

ನನ್ನ ಹಲಸಿನ ಹಣ್ಣಿನ ಮುದ್ದೆಯಲ್ಲಿ ಬೆಲ್ಲವೂ ಇದ್ದಿತು. ಸಿಹಿ ಬೇಕಿಲ್ಲದಿದ್ದರೆ ಬೆಲ್ಲ ಹಾಕದಿದ್ದರಾಯಿತು.
“ಮುದ್ದೆ ಅಂತ ಬರೆದದ್ದು ಎಲ್ಲರಿಗೂ ಅರ್ಥವಾಗಲಿಕ್ಕಿಲ್ಲ… “
“ ಅದಕ್ಕೇನ್ಮಾಡ್ಲೀ? “
“ ಹಲಸಿನಹಣ್ಣಿನ ಜಾಮ್ ಅಂದ್ರೆ ಸರಿ ಹೋದೀತು. “ ಗೌರತ್ತೆ ತಿದ್ದುಪಡಿಯನ್ನೂ ಸೂಚಿಸಿ ಕೊಟ್ಟರು.

          




         



Friday 8 June 2018

ಹಲಸಿನ ಹಣ್ಣು ಗೆಣಸಲೆ





“ ಹಲಸಿನ ಹಣ್ಣಿನದ್ದು ಕೊಟ್ಟಿಗೆ ಮಾಡಿದ್ದಾಯ್ತಲ್ಲ, ಇನ್ನೊಂದ್ಸಾರಿ ಗೆಣಸಲೆ ಮಾಡು ತಿಳೀತಾ… “. ಗೌರತ್ತೆಯ ಬಾಯಿಪಟಾಕಿ ಸಿಡಿಯಿತು.
“ ಗೆಣಸಲೆಗೆ ಕೆಲ್ಸ ಜಾಸ್ತಿ ಅಲ್ವ? “
“ ಹಾಗೇನೂ ಇಲ್ಲ, ಹೇಗೂ ಕೊಟ್ಟಿಗೆಗೆ ಬೆಲ್ಲ, ತೆಂಗು ಹಾಕಿಯೇ ಮಾಡ್ತೀಯ, ಗೆಣಸಲೆಗೆ ಒಳಗೆ ತುಂಬಿಸೂದು ಅಷ್ಟೇ. “
 ಹೌದಲ್ವೇ, ಪುರುಸೊತ್ತು ಸಿಕ್ಕಾಗ ಮಾಡಿಯೇ ಬರೆಯೋಣ.

ನಿನ್ನೆ ತಾನೇ ಹಲಸಿನಕಾಯಿ ಕೊಯ್ದು ತಂದಿಟ್ಟಿದ್ದಾನೆ ಚೆನ್ನಪ್ಪ, ಹಣ್ಣಾಗಲಿಕ್ಕೆ ಎರಡು ದಿನವಾದರೂ ಬೇಕು.

ಚೆನ್ನಾಗಿ ಹಣ್ಣಾದಾಗ ಚೆನ್ನಪ್ಪನೂ ಬಂದ, “ ಹಲಸಿನ ಹಣ್ಣು ತುಂಡು ಮಾಡಿ ಆಯ್ದು ಇಡು, ಹಾಗೇ ಅರ್ಧ ಹಣ್ಣು ನೀನೇ ತೆಗೆದುಕೋ…, ಮನೆಯಲ್ಲಿ ಮೊಮ್ಮಕ್ಕಳಿಗೆ ತಿನ್ನಲಿಕ್ಕಾಯ್ತು. “ ಎಲ್ಲವನ್ನೂ ನಾನೇ ಇಟ್ಕೊಂಡು ಏನ್ಮಾಡ್ಲಿ? ಹಲಸಿನ ಹಣ್ಣಿನ ವಿಲೇವಾರಿ ಆಯ್ತು.

“ ನಾಳೆ ಬೆಳ್ತಂಗಡಿಗೆ ಹೋಗುವುದಿದೆ, ಮದುವೆಯ ಊಟ… ಬೇಗ ಹೊರಡು, ಪಟ್ಟೆಸೀರೆ ಇವತ್ತೇ ಇಸ್ತ್ರಿ ಹಾಕಿ ಇಟ್ಟುಕೋ… ಎಲ್ಲವನ್ನೂ ನಾನೇ ಹೇಳಬೇಕಾ? “
“ ಹಾಗಿದ್ರೆ ಈ ಹಲಸಿನ ಹಣ್ಣಿನ ಕೊಟ್ಟಿಗೆ ಮಾಡೂದು ಬೇಡವೇ? “
“ ಏನು ಬೇಕಾದ್ರೂ ಮಾಡಿಕೋ, ನಾಳೆ ಬೇಗ ಹೊರಡು ಅಷ್ಟೇ… “

ಬಾಳೆ ಎಲೆ ಕೊಯ್ದು ಇಟ್ಟಿಲ್ಲ, ಮರೆಗುಳಿ ಚೆನ್ನಪ್ಪ. ಬಾಳೆಲೆ ಇದ್ದಿದ್ರೆ ಕೊಟ್ಟಿಗೆ ಮಾಡಿಟ್ಟು, ಮುಂಜಾನೆಯ ಟಿಫಿನ್ ಮುಗಿಸಿ ಹೊರಡೋದು ಸುಲಭ ಆಗ್ತಿತ್ತು. ಈಗ ಕತ್ತಲು ಆಗುತ್ತ ಬಂದಿದೆ, ಬಾಳೆಲೆಗಾಗಿ ತೋಟಕ್ಕೆ ಹೋಗಲು ಸೊಳ್ಳೆಕಾಟ ಹಾಗೂ ಹಂದಿಗಳ ಭಯ ಬೇರೆ.

ಹಲಸಿನ ಹಣ್ಣು ತಿಂದು ಮುಗಿಯದು,
ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿಟ್ಟು,
ಬಾಣಲೆಯಲ್ಲಿ ತುಂಬಿ ಒಲೆ ಮೇಲಿಟ್ಟು,
ರಪರಪನೆ ಸೌಟಾಡಿಸಿ,
ಓ, ಇದೀಗ ಬೆಂದ ಪರಿಮಳ ಬಂತಲ್ಲ,
ಹಲಸಿನ ಹಣ್ಣಿನ ಮುದ್ದೆ ಆಯ್ತು...
ಫೋಟೋ ತೆಗೆದಿರಿಸಲು ಮರೆತೇ ಹೋಯ್ತು.

ಮಾರನೇ ದಿನ ಉಪ್ಪಿಟ್ಟು ಹಾಗೂ ಹಲಸಿನ ಹಣ್ಣಿನ ಮುದ್ದೆಯ ಸಾಂಗತ್ಯದೊಂದಿಗೆ ಬ್ರೇಕ್ ಫಾಸ್ಟ್ ಗೆದ್ದಿತು.
“ ಬಾಳೆ ಎಲೆ ತಂದಿಡುತ್ತಿದ್ದರೆ ಕೊಟ್ಟಿಗೆ ತಿನ್ನಬಹುದಾಗಿತ್ತು, ಈಗ ಈ ಮುದ್ದೆಯ ರುಚಿ ನೋಡು. “ ಚೆನ್ನಪ್ಪನಿಗೂ ಮುದ್ದೆಯ ತಿನಿಸು ದೊರೆಯಿತು.
“ ಎಲೆಯಾ, ನೀವು ಹೇಳಲಿಲ್ಲ, ನಾನು ತರಲಿಲ್ಲ… “
“ ಚಿಂತೆಯಿಲ್ಲ, ಹೀಗೂ ತಿನ್ನಬಹುದು ಅಂತ ಗೊತ್ತಾಯ್ತಲ್ಲ. “

ಮಗನೊಂದಿಗೆ ಫೋನ್ ಸಂಭಾಷಣೆಯಲ್ಲಿ ತೊಡಗಿದ್ದ ನಮ್ಮವರು, “ ನಾಳೆ ಮಧು ಬರ್ತಿದಾನೆ. “ ಅನ್ನೋದೇ!
ಸರಿ ಹೋಯ್ತು, ಈಗ ಹಣ್ಣಿನ ಮುದ್ದೆಗೆ ಗೆಣಸಲೆಯ ರೂಪ ಕೊಡೋದೇ ಸೈ!

ಸಂಜೆಯಾಗುವ ಮೊದಲೇ ತೋಟದಿಂದ ಬಾಳೆ ಎಲೆಗಳನ್ನು ನಾನೇ ಕೊಯ್ದು ತಂದಿಟ್ಟೆ.
ಒಂದೇ ಗಾತ್ರದಲ್ಲಿ ಕತ್ತರಿಸಿ,
ಗ್ಯಾಸ್ ಜ್ವಾಲೆಯಲ್ಲಿ ಬಾಡಿಸಿ,
ಒಣ ಬಟ್ಟೆಯಲ್ಲಿ ಒರೆಸಿ ಬಾಳೆಲೆಗಳನ್ನು ಹೊಂದಿಸಿ ಇಟ್ಕಕೊಂಡಿದ್ದಾಯ್ತು.

ಎರಡು ಲೋಟ ಆಗುವಷ್ಟು ಹಲಸಿನ ಹಣ್ಣಿನ ಮುದ್ದೆ ಇದೆ.
ಎರಡು ಲೋಟ ಬೆಳ್ತಿಗೆ ಅಕ್ಕಿಯನ್ನು ಅಳೆದು, ನೀರಿನಲ್ಲಿ ನೆನೆಸಿ, ತೊಳೆದೂ ಆಯಿತು.
ಅರ್ಧ ಹೋಳು ತೆಂಗಿನ ತುರಿ ಸಿದ್ಧವಾಯಿತು.
ಒಂದು ಅಚ್ಚು ಬೆಲ್ಲ ( ಕಿತ್ತಳೆ ಹಣ್ಣಿನ ಗಾತ್ರದ್ದು ) ಪುಡಿಗೈಯಲ್ಪಟ್ಟಿತು.
ಬೆಲ್ಲವೂ ತೆಂಗಿನತುರಿಯೂ ಒಲೆಯ ಮೇಲೇರಿ ಬೆರೆಸಲ್ಪಟ್ಟು ಪಾಕವಾದೆನೆಂದಿತು.
ಅಕ್ಕಿಯು ಯಂತ್ರದ ಸ್ಪರ್ಶದಿಂದ ಹಿಟ್ಟಾದೆನೆಂದಿತು. ನುಣ್ಣಗಾದಷ್ಟೂ ಉತ್ತಮ.
ಅಕ್ಕಿ ಹಿಟ್ಟಿನ ದ್ರಾವಣ, ಹಲಸಿನ ಹಣ್ಣಿನ ಮುದ್ದೆಯೊಂದಿಗೆ ಬೆರೆಯಿತು, ಕೈಯಲ್ಲೇ ಬೆರೆಸುವುದು ಉತ್ತಮ, ರುಚಿಗೆ ಉಪ್ಪು ಮರೆಯಬಾರದು.
ಒಲೆಯ ಮೇಲೆ ಅಟ್ಟಿನಳಗೆ ( ಇಡ್ಲಿ ಪಾತ್ರೆ ) ಇರಿಸಿ ನೀರು ಕುದಿಯಲಾರಂಭವಾಗುವ ಮೊದಲೇ…
ಬಾಳೆ ಎಲೆಯ ಮೇಲೆ ಒಂದು ಸೌಟು ಹಿಟ್ಟು ಹರಡಿ,
ಒಂದು ಚಮಚ ತೆಂಗುಬೆಲ್ಲದ ಪಾಕವನ್ನು ಹಿಟ್ಟಿನ ಮೇಲೆ ಉದ್ದವಾಗಿ ಇರಿಸಿ,
ಬಾಳೆಯನ್ನು ಹಿಟ್ಟು ಹೊರ ಚೆಲ್ಲದಂತೆ ನಾಜೂಕಾಗಿ ಮಡಚಿ ಉಗಿಯಲ್ಲಿರಿಸಿ,
ಬಾಳೆ ಎಲೆ ಹಾಗೂ ಹಿಟ್ಟು ಮತ್ತು ತೆಂಗುಬೆಲ್ಲದ ಹೂರಣ ಅಚ್ಚುಕಟ್ಟಾಗಿ ಅಟ್ಟಿನಳಗೆಯೊಳಗೆ ಕುಳಿತ ನಂತರ ಬಿಗಿಯಾಗಿ ಮುಚ್ಚಿ, 15 ರಿಂದ 20 ನಿಮಿಷ ಬೇಯಿಸುವಲ್ಲಿಗೆ ಗೆಣಸಲೆಗಳು ಸಿದ್ಧವಾಗಿವೆ.
ತುಪ್ಪದೊಂದಿಗೆ ಬಿಸಿ ಇರುವಾಗಲೂ ತಿನ್ನಿ, ಆರಿದ ನಂತರವೂ ತಿನ್ನಿ. ಹಸಿವೆ ಎಂದರೇನು ಎಂಬುದನ್ನು ಮರೆಸುವ ಶಕ್ತಿ ಈ ಗೆಣಸಲೆಗೆ ಇದೆ.


          



Friday 1 June 2018

ಜೀಗುಜ್ಜೆ ದೋಸೆ




ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆಯ ಸಮಾರಾಧನೆ ಅಡುಗೆಗಾಗಿ ಜೀನಸು ವಗೈರೆ, ತರಕಾರಿಗಳ ಲಿಸ್ಟ್ ಬರೆದು ಇಡುತ್ತಿದ್ದಂತೆ ಅಂಗಳದ ಮರದಲ್ಲಿ ಜೀಗುಜ್ಜೆ ಇದೆಯೆಂದು ನೆನಪಾಗಿ, ಹಿತ್ತಲಲ್ಲಿ ಏನೋ ಕುಟುಕುಟು ಮಾಡುತ್ತಿದ್ದ ಚೆನ್ನಪ್ಪನನ್ನು ಕರೆದು, ಮರವನ್ನು ತಪಾಸಿಸಲಾಗಿ ಸಾಕಷ್ಟು ಬೆಳೆದ ಜೀಗುಜ್ಜೆಗಳಿವೆಯೆಂದು ತಿಳಿಯಿತು. ಊಟದ ಬಾಬ್ತು ಜೀಗುಜ್ಚೆ ಕೊದ್ದೆಲ್ ಸಿಕ್ಕಿತೂ ಅನ್ನಿ.

ದೇಗುಲದ ಸಮಾರಾಧನೆ ಖರ್ಚಿಗಾಗಿ ಏಳೆಂಟು ಘನ ಜೀಗುಜ್ಜೆಗಳನ್ನು ಕಟ್ಟಿ ಇಟ್ಟು ಆಯಿತು.ಸಮಾರಾಧನೆ ಊಟ ಮುಗಿಸಿ ಬರುವಾಗ ನಮ್ಮ ರಾತ್ರಿಯೂಟದ ಅಗತ್ಯಕ್ಕೆ ತಕ್ಕಷ್ಟು ಸಾಂಬಾರು ಅಲ್ಲಿಂದಲೇ ತಂದಿದ್ದೆ.

ಮಾರನೇ ದಿನ ಪುನಃ ಜೀಗುಜ್ಚೆಯ ಸ್ವಾಗತ, ಚೆನ್ನಪ್ಪ ಕೊಯ್ದು ಇಟ್ಟಿದ್ದ. ನಿನ್ನೆ ಜೀಗುಜ್ಚೆ ಸಾಂಬಾರು ತಿಂದಾಗಿದೆ, ಇವತ್ತೂ ಅದನ್ನೇ ತಿನ್ನಲು ಬೇಜಾರು ಕಣ್ರೀ, ತೋಟದಿಂದ ನೆಲಬಸಳೆ ತಂದು ಸರಳವಾಗಿ ಒಂದು ಸಾರು ಮಾಡಿಟ್ಟೆ.

ಸಂಜೆಯಾಗುತ್ತಿದ್ದ ಹಾಗೆ, “ ನಾಳೆಯ ತಿಂಡಿ ಏನು? “ ಗೌರತ್ತೆಯ ಪ್ರಶ್ನೆ.
“ ಏನಾದೀತು? “ ನನ್ನ ಮರು ಪ್ರಶ್ನೆ.
“ ಜೀಗುಜ್ಚೆ ಹಾಳು ಮಾಡ್ಬೇಡ, ದೋಸೆ ಮಾಡಿ ತಿನ್ನಬಹುದಲ್ಲ… “
“ ದೋಸೆ ಆಗುತ್ತ? ಮೊದಲೇ ಹೇಳಬಾರದಿತ್ತೇ… “
“ ಹೇಳೂದೆಂತದು, ಹಲಸಿನಕಾಯಿ ದೋಸೆ ಥರಾನೇ ಮಾಡೂದು. ಮೊದಲೆಲ್ಲ ಮಾಡ್ತಿದ್ರು, ಈಗ ಜೀಗುಜ್ಚೆ ಅಂದ್ರೆ ಎಂತದು? ಅಂತ ಕೇಳೋರೇ ಆಯ್ತು. “ ಭಾಷಣ ಬಿಗಿದರು ಗೌರತ್ತೆ.

ಸರಿ, ಚೆನ್ನಾಗಿ ಬೆಳೆದ ಈ ಜೀಗುಜ್ಚೆ ಈಗಲೇ ಮೆತ್ತಗಾಗಲು ಶುರು ಆಗ್ಬಿಟ್ಟಿದೆ, ನಾಳೆ ಸಾಂಬಾರು ಮಾಡೋ ಹಾಗಿಲ್ಲ, ಬಿಸಾಡಬೇಕಾದೀತು. ಹೀಗೆಲ್ಲ ಚಿಂತನ ಮಂಥನಗಳು ನಡೆದು ಎರಡು ಪಾವು ಅಕ್ಕಿ ನೀರಿಗೆ ಬಿದ್ದಿತು.

ಜೀಗುಜ್ಚೆಯ ನಿರುಪಯುಕ್ತ ಭಾಗಗಳನ್ನು ತೆಗೆದು ಹೋಳು ಮಾಡಿ, ಚಿಕ್ಕದಾಗಿ ಹೆಚ್ಚಿಟ್ಟು, ಮಿಕ್ಸಿಯಲ್ಲಿ ತಿರುಗಿಸಿದಾಗ ಜೀಗುಜ್ಚೆಯ ಹಿಟ್ಟು, ಅಂದಾಜು ಎರಡು ಲೋಟ ಆಗುವಷ್ಟು ದೊರೆಯಿತು.

ಅಕ್ಕಿಯನ್ನು ಚೆನ್ನಾಗಿ ತೊಳೆದು ಅರೆಯಿರಿ.
ನುಣ್ಣಗಾದ ಅಕ್ಕಿ ಹಿಟ್ಟಿಗೆ ಜೀಗುಜ್ಚೆಯ ಹಿಟ್ಟು ಬೆರಸಿ,
ರುಚಿಗೆ ಉಪ್ಪು ಕೂಡಿಸಿ,
ಇಡ್ಲಿ ಹಿಟ್ಟಿನ ಸಾಂದ್ರತೆ ಇರಲಿ.
ದೋಸೆ ಎರೆಯಿರಿ.
ಹಲಸಿನಕಾಯಿ ದೋಸೆ ತರಹವೇ ಇದು ಕೂಡಾ ಹುಳಿ ಬರಬಾರದು, ದಿಢೀರ್ ದೋಸೆ ಅನ್ನಿ.
ದೋಸೆ ಎರೆಯುವಾಗಲೂ ಕಾವಲಿ ಎಣ್ಣೆಣ್ಣೆ ಆಗಿರಕೂಡದು. ಎಣ್ಣೆಪಸೆಯನ್ನು ಒರೆಸಿ ತೆಗೆಯಿರಿ. ಕಾವಲಿ ಬಿಸಿಯೇರಿದ ನಂತರ ದೋಸೆ ಹಚ್ಚಿರಿ, ತೆಳ್ಳಗಾದಷ್ಟೂ ಚೆನ್ನ.

ಬೆಲ್ಲದ ಜೇನುಪಾಕ, ತೆಂಗಿನಕಾಯಿ ಚಟ್ಣಿ ಹಾಗೂ ಗಟ್ಟಿಮೊಸರು ಕೂಡಿ ಸವಿಯಿರಿ.