Pages

Ads 468x60px

Friday 31 August 2018

ಹಾಲಿನ ಬರ್ಫಿ





  ಪುರೋಹಿತರ ಮಂತ್ರೋಚ್ಛಾರಣೆಯೂ, ಶಂಖಜಾಗಟೆಗಳ ನಿನಾದವೂ, ಊದುಬತ್ತಿ ಕರ್ಪೂರಗಳ ಸುಗಂಧವೂ, ಮಲ್ಲಿಗೆ ಸೇವಂತಿಗೆ ಹಾರಗಳ ಅಲಂಕರಣವೂ ಸೇರಿ ನಾಗರಪಂಚಮಿಯಂದು ಹಿರಣ್ಯದ ನಾಗಬನದಲ್ಲಿ ಹಾಲಿನ ಅಭಿಷೇಕ ನಡೆದಿತ್ತು. ಪೂಜಾದಿಗಳ ತರುವಾಯ ಉಳಿಕೆಯಾದ ಹಾಲು ಮನೆಗೆ ಬಂದಿತು, ಅದೂ ನಂದಿನಿ ಪ್ಯಾಕೆಟ್ ಹಾಲು. ನಾಳೆಯ ಕಾಫಿಗಾದೀತು ಎಂದು ಫ್ರಿಜ್ ಒಳಗ್ಹೋಯಿತು.

ಮೂರನೇ ದಿನ ಪ್ಯಾಕೆಟ್ ತೂತು ಮಾಡಿ ಹಾಲು ಬಗ್ಗಿಸಿ ಕಾಯಿಸಲಿಟ್ಟಾಗ ಹಾಲೇನೋ ಕುದಿಯಿತು, ಆದರೆ ಒಡೆದಿದೆ. ಇರಲಿ ಎಂದು ತೆಗೆದಿರಿಸಿದ್ದ ಊರಿನ ಡೈರಿ ಹಾಲಿನಿಂದ ಕಾಫಿ ಮಾಡಿಟ್ಟು, ಮುಳ್ಳುಸೌತೆಯ ಕೊಟ್ಟಿಗೆ ತಿಂದ್ಬಿಟ್ಟು ನಾವು ಹೊರಟೆವು.

“ ಹೌದ, ದೂರಪ್ರಯಾಣವೇ… “
“ ಇಲ್ಲೇ ಹತ್ತಿರ, ಪೊಸಡಿಗುಂಪೆ ಹತ್ತಿ ಇಳಿದರಾಯಿತು… “ ಭೋಜನಕೂಟ ಮುಗಿಸಿ, ಸ್ನೇಹಿತರ ಮನೆಗೆ ಭೇಟಿ ಕೊಟ್ಟು ಮನೆ ತಲಪುವಾಗ ರಾತ್ರಿಯಾಗಿತ್ತು. ಗ್ಯಾಸ್ ಪಕ್ಕ ಮುಚ್ಚಿಟ್ಟಿದ್ದ ಒಡೆದ ಹಾಲು ಹಾಗೇನೇ ತಣ್ಣಗೆ ಕೊರೆಯುತ್ತಿತ್ತು. ಕೆಟ್ಟ ವಾಸನೆಯೂ ಇಲ್ಲ, ಹುಳಿಯೂ ಆಗಿಲ್ಲ. ಇದಕ್ಕೊಂದು ಗತಿಗಾಣಿಸಿ ಮಲಗುವುದು.

ದಪ್ಪಗಟ್ಟಿದ ಹಾಲಿನ ನೀರಿನಂಶವನ್ನು ಬಸಿಯುವುದು, ಒಂದು ದೊಡ್ಡ ಲೋಟ ಹಾಲಿನ ನೀರು (whey water) ಸಿಕ್ಕಿತು. ಹಾಲನ್ನು ಜೀರ್ಣಸಲು ಕಷ್ಟವಾದಾಗ ಬಿಸಿ ಹಾಲಿಗೆ ಲಿಂಬೆ ರಸ ಹಿಂಡಿ ದಿಢೀರೆಂದು ಈ ಥರ ವ್ಹೇ ವಾಟರ್ ಮಾಡುವುದಿದೆ, ಕಲ್ಲುಸಕ್ಕರೆ ಬೆರೆಸಿ ಕುಡಿಯುವುದಿದೆ. ನಾವೂ ಕುಡಿಯೋಣ, ಇರಲಿ. ನಮ್ಮ ಅಚ್ಚಕನ್ನಡದಲ್ಲಿ ಮೊಸರಿನ ರಸ ಅನ್ನಬಹುದಾಗಿದೆ, ಎಲ್ಲರೂ ಕುಡಿಯಬಹುದಾದ ಈ ರಸವನ್ನು ಚೆಲ್ಲದಿರಿ. ಹಾಲಿನ ಉತ್ಪನ್ನವಾದ ಈ ರಸವನ್ನು ತಂಪುಪೆಟ್ಟಿಗೆಯಲ್ಲಿ ಇರಿಸಿ ನಾಲ್ಕಾರು ದಿನ ಬಳಸಬಹುದು. ಕುಡಿಯಲು ಇಷ್ಟವಾಗದಿದ್ದರೆ ಚಪಾತಿ ಹಿಟ್ಟು ಕಲಸಿಕೊಳ್ಳಿ, ಮೃದುವಾದ ಚಪಾತಿಗಳನ್ನು ಪಡೆಯಿರಿ.

ಹಾಲಿನ ಘನವನ್ನು ಒಂದು ನಾನ್ ಸ್ಟಿಕ್ ತಪಲೆಗೆ ಸುರುವಿ, ಅಷ್ಟೇ ಅಳತೆಯ ಸಕ್ಕರೆ ಬೆರೆಸಿ ಇಂಡಕ್ಷನ್ ಸ್ಟವ್ ಮೇಲೆ ಇಟ್ಟು ಕುದಿಸುವುದು.
ಮರದ ಸಟ್ಟುಗದಲ್ಲಿ ತಿರುವುತ್ತಾ ಇದ್ದಂತೆ,
ಸಕ್ಕರೆ ಕರಕರಗಿ ನೀರಾಗಿ,
ಕುದಿಕುದಿದು ಸಾಂದ್ರವಾಗಿ,
ಹೆಚ್ಚೆಂದರೆ ಹತ್ತು ನಿಮಿಷದಲ್ಲಿ,
ಗಟ್ಟಿ ಕಲ್ಲಿನಂತಾಗುವ ಮೊದಲೇ ಕೆಳಗಿಳಿಸಿ,
ಇನ್ನೊಂದು ತಟ್ಟೆಗೆ ವರ್ಗಾಯಿಸಿ ಆರಲು ಬಿಡುವುದು.
ಚೂರಿಯಲ್ಲಿ ಗೆರೆ ಎಳೆದು ಕತ್ತರಿಸಿ ತಿನ್ನುವುದು.
ಎರಡು ದಿನ ಸಂಜೆಯ ಚಹಾ ಪಾನಕ್ಕೆ ದೊರೆಯಿತು ರಸಗಟ್ಟಿ!


          

Sunday 26 August 2018

ಜೀಗುಜ್ಜೆಯ ಸಿಹಿ





“ ಇದು ಬೆಳೆದಿದ್ದು ಅತಿಯಾಯ್ತು, ಹಣ್ಣಾಗಿದೆ, ಸಾಂಬಾರ್ ಮಾಡಲಿಕ್ಕೆ ನಾಲಾಯಕ್… “ ಎಂದರು ಗೌರತ್ತೆ, ಅಡುಗೆಮನೆಯಲ್ಲಿದ್ದ ಏಕಮಾತ್ರ ಜೀಗುಜ್ಜೆ ಅವರ ಮಾತಿನ ಧಾಳಿಗೆ ಇನ್ನೂ ಮೆತ್ತಗಾಯಿತು.

“ ಹೋಗಲಿ, ಬಿಸಾಡಿದ್ರಾಯ್ತು, ಕೊದಿಲ್, ಮೇಲಾರ, ಪಲ್ಯ, ಪೋಡಿ ಎಲ್ಲ ಮಾಡಿ ತಿಂದಾಯ್ತಲ್ಲ. “
“ ಹಲ್ವ ಮಾಡು, ಸಂಜೆಯ ತಿಂಡಿಗಾದೀತು… “
“ ಜೀಗುಜ್ಜೆಯ ಹಲ್ವವೇ, ನಂಗೊತ್ತಿಲ್ಲಪ್ಪ… “
“ ಬಾಳೆಹಣ್ಣು, ಹಲಸಿನಹಣ್ಣು ಹಲ್ವ ಮಾಡುವ ಕ್ರಮದಲ್ಲೇ ಇದನ್ನೂ ಮಾಡುವುದು. “
“ ಮೊದಲೇ ಹೇಳಬಾರದಿತ್ತೇ! ಜೀಗುಜ್ಜೆಯ ಸಿಹಿತಿಂಡಿ ಮಾಡಲಿಕ್ಕಾಗುವುದಿಲ್ಲ ಅಂತ ಬ್ಲಾಗಿನಲ್ಲಿ ಬರೆದಾಗಿದೆಯಲ್ಲ... “
“ ಅದಕ್ಕೇನಂತೆ, ಈವಾಗ ಗೊತ್ತಾಯ್ತು ಅಂತ ಬರೆದ್ಬಿಡು… “ ಗೌರತ್ತೆಯ ಉಪಸಂಹಾರದೊಂದಿಗೆ ನಾವು ಈಗ ಜೀಗುಜ್ಜೆಯ ಹಲ್ವ ತಿನ್ನುವವರಿದ್ದೇವೆ.

ಈಗಾಗಲೇ ಮೇಲೆ ವರ್ಣಿಸಿದಂತಹ ಜೀಗುಜ್ಜೆಯ ಸಿಪ್ಪೆ ಹಾಗೂ ಒಳಗಿನ ನಿರುಪಯುಕ್ತ ತೊಟ್ಟಿನ ಭಾಗವನ್ನು ಬೇರ್ಪಡಿಸಿ, ಮೃದುವಾದ ತಿರುಳನ್ನು ಸಂಗ್ರಹಿಸಿ.

ಒಂದು ಲೋಟ ಜೀಗುಜ್ಜೆಯ ತಿರುಳು ದೊರೆಯಿತು.
ದಪ್ಪ ತಳದ ಬಾಣಲೆ ಒಲೆಗೇರಿಸಿ.
ನಾಲ್ಕು ಚಮಚ ತುಪ್ಪ ಎರೆದು ಜೀಗುಜ್ಜೆಯನ್ನು ಬೇಯಿಸಿ, ನೀರು ಹಾಕಲೇಬಾರದು, ತುಪ್ಪದ ಶಾಖದಲ್ಲಿ ಹಣ್ಣಾದ ಜೀಗುಜ್ಜೆ ಬೇಯಲಿ. ಬಹು ಬೇಗನೇ ಬೇಯುವಂತಹುದು, ಅತ್ತ ಇತ್ತ ಹೋಗದಿರಿ.
ಸೌಟಾಡಿಸುತ್ತ ಇದ್ದ ಹಾಗೆ ತುಪ್ಪವನ್ನೂ ತುಸು ತುಸುವೇ ಎರೆಯಿರಿ, ಹಲ್ವಕ್ಕೆ ತುಪ್ಪ ಕಡಿಮೆಯಾಗಬಾರದು.
ಜೀಗುಜ್ಜೆ ಬೆಂದಿದೆ,
ಒಂದು ಲೋಟ ಸಕ್ಕರೆ ಹಾಕುವುದು,
ಸಕ್ಕರೆ ಕರಗಲಿ,
ಏಲಕ್ಕಿ ಗುದ್ದಿ ಇಟ್ಟು,
ದ್ರಾಕ್ಷಿ ಗೋಡಂಬಿ ತುಪ್ಪದಲ್ಲಿ ಹುರಿದು, ಹಲ್ವ ತಳ ಬಿಟ್ಟು ಬರುವಾಗ ಹಾಕುವುದು.
ಸೌಟಿನಲ್ಲಿ ಚೆನ್ನಾಗಿ ತಿರುವಿ ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ.
ಆರಿದ ನಂತರ ತುಂಡು ಮಾಡಲು ಬರುವಂತಿದ್ದರೆ ಕತ್ತರಿಸಿ, ಇಲ್ಲವೇ, ಹಾಗೇನೇ ಚಮಚದಲ್ಲಿ ತೆಗೆದು ತಿನ್ನಿ.
ಹಬ್ಬಕ್ಕೊಂದು ಸಿಹಿ ಆಯ್ತು ಅನ್ನಿ.


        



Saturday 18 August 2018

ಸುರುಳೆ ದೋಸೆ




ಮಧ್ಯಾಹ್ನದ ರಸದೂಟಕ್ಕಾಗಿ ಅಡುಗೆಯ ಸಿದ್ಧತೆ ನಡೆದಿದೆ, ಅನ್ನ ಮಾಡಿಟ್ಟು ಆಯ್ತು. ತೆಂಗಿನಕಾಯಿ ತುರಿದಿದ್ದೂ ಆಯ್ತು, ಹಲಸಿನ ಹಪ್ಪಳ ಇರುವಾಗ ಟೊಮ್ಯಾಟೋ ಸಾರು ಒಂದಿದ್ದರೆ ಸಾಕು, ಪಪ್ಪಾಯಿ ಹಣ್ಣಾಗಿ ಕುಳಿತಿದೆ, ರಸಾಯನ ಮಾಡಿದ್ರೆ ಹೇಗೆ? ತಿಂದ ಅನ್ನವೂ ಸಲೀಸಾಗಿ ಒಳಗ್ಹೋದೀತು, ಹಾಗೇನೇ ತಿನ್ನಲೊಪ್ಪದವರಿಗೆ ಇದುವೇ ಸುಲಭದ ಉಪಾಯ. ತೆಂಗಿನಕಾಯಿ ಎಲ್ಲವೂ ತುರಿಯಲ್ಪಟ್ಟಿತು, ಕಾಯಿಹಾಲು ಆಗಬೇಡವೇ…

ಅದೇ ಹೊತ್ತಿಗೆ ಪಕ್ಕದ ಮನೆಯಿಂದ ನಮ್ಮಕ್ಕ ಕೂಗಿ ಕರೆದಳು, “ ಅಡುಗೆ ಆಯ್ತಾ ನಿಂದು? “
“ ಇನ್ನೂ ಇಲ್ಲ… “
“ ಈಗ ಬಂದೆ.. “ ಬರುವಾಗ ತಟ್ಟೆ ತುಂಬ ಜೀಗುಜ್ಜೆ ಪಲ್ಯ, ಬಟ್ಟಲು ತುಂಬ ಪಾಯಸ, ಅದೂ ಬೆರಟಿ ಪಾಯಸ ಬಂದಿತು. ಅವಳಿಗೂ ಮನೆ ಮಕ್ಕಳು ಬೆಂಗಳೂರಿನಿಂದ ಬಂದಿದ್ದಾರೆ, ಸಂಭ್ರಮದ ವಾತಾವರಣವನ್ನು ಹೀಗೆ ಹಂಚಿಕೊಳ್ಳುವಂತಾಯಿತು.

ಈವಾಗ ನನ್ನ ಪಪ್ಪಾಯ ರಸಾಯನ ಮೂಲೆಗೆ ಒತ್ತರಿಸಲ್ಪಟ್ಟಿತು. ಟೊಮ್ಯಾಟೋ ಸಾರು ಮಾಡಿ ಇಡುವಲ್ಲಿಗೆ ನನ್ನ ಅಡುಗೆ ಮುಗಿಯಿತು.

ಊಟವೂ ಆಯ್ತು ಅನ್ನಿ, ಆದ್ರೆ ತೆಂಗಿನಕಾಯಿ ತುರಿದಿಟ್ಟಿದ್ದೇನೆ, ಅದಕ್ಕೇನು ಗತಿಗಾಣಿಸಲಿ ಎಂದು ಚಿಂತೆ ಕಾಡಲಾರಂಭವಾಯಿತು. ಇರಲಿ ಎಂದು ಎರಡು ದೊಡ್ಡ ಚಮಚ ಮೆಂತೆ ನೀರಿನಲ್ಲಿ ಹಾಕಿಟ್ಟೆ. ಎರಡು ಲೋಟ ದೋಸೆ ಅಕ್ಕಿಯೂ ( ಬೆಳ್ತಿಗೆ ಅಕ್ಕಿ ) ನೀರು ತುಂಬಿಕೊಂಡಿತು.

ಯಾವ ಮಾದರಿಯ ದೋಸೆಯನ್ನು ನನ್ನ ಅಳತೆ ಸಾಮಗ್ರಿಯಿಂದ ಮಾಡಬಹುದೆಂಬ ಘನಚಿಂತನೆಯೊಂದಿಗೆ ಕಡಂಬಿಲ ಸರಸ್ವತಿಯವರ ಪಾಕಪುಸ್ತಕದ ಪುಟಗಳನ್ನು ತಿರುವಿ ಹಾಕಿದಾಗ, ‘ ಸುರುಳೆ ದೋಸೆ ‘ ಎಂಬ ಹೆಸರು ಹೊತ್ತ ದೋಸೆ ದೊರೆಯಿತು. ಇದಕ್ಕೆ ಒಂದು ಪಾವು ಅವಲಕ್ಕಿಯೂ ಬೇಕಾಗಿದೆ.

ಅವಲಕ್ಕಿಯೇನೋ ಇದೆ, ಸಂಜೆಯ ಚಹಾದೊಂದಿಗೆ ಮೆಲ್ಲಲು ಬೇರೇನೂ ದಿಢೀರ್ ತಿನಿಸು ಸಿಗದಿದ್ದರೆ ಅವಲಕ್ಕಿ ತಿನಿಸು ಬೇಗನೆ ಆಗುವಂತಹುದು. ಇಂತಹ ಆಪತ್ಬಾಂಧವ ಅವಲಕ್ಕಿಯನ್ನು ದೋಸೆ ಇಡ್ಲಿ ಹಿಟ್ಟುಗಳಿಗೆ ಹಾಕಿ ವ್ಯರ್ಥ ಮಾಡಲೇಕೆ ಎಂಬ ಸಿದ್ಧಾಂತ ನನ್ನದು.

ಅವಲಕ್ಕಿಯ ಬದಲು ಹೊದಳು ( ಅರಳು ) ಹಾಕೋಣ. ಮೊನ್ನೆ ತಾನೇ ನಾಗರಪಂಚಮಿಯ ಬಾಬ್ತು ನಾಗಬನದಲ್ಲಿ ತಂಬಿಲ ಸೇವೆ ನಡೆದಿತ್ತಾಗಿ, ಉಳಿಕೆಯಾದ ಹೊದಳು ಒಂದು ಸೇರು ಆಗುವಷ್ಟು ಇದೆ. ಅಕ್ಕಿಯ ಅಳತೆಯಷ್ಟೇ ಹೊದಳು ತೆಗೆದಿರಿಸಿದ್ದಾಯಿತು.

ಸಂಜೆಯಾಗುತ್ತಲೂ ದೋಸೆಗಾಗಿ ಹಿಟ್ಟು ಸಿದ್ಧ ಪಡಿಸುವ ವೇಳೆ,  

ನೆನೆದ ಮೆಂತೆ ಹಾಗೂ ತುರಿದಿಟ್ಟ ತೆಂಗಿನ ತುರಿ ( ಒಂದು ಲೋಟ ತುರಿ ಇರಬೇಕು ) ಅರೆಯಿರಿ. ನುಣ್ಣಗಾದಾಗ ತೆಗೆಯಿರಿ.
ಅಕ್ಕಿಯನ್ನು ತೊಳೆದು ಅರೆಯಿರಿ, ನುಣ್ಣಗಾದಾಗ, ಹೊದಳನ್ನು ತುಸು ನೀರಿನಲ್ಲಿ ನೆನೆಸಿ ಅಕ್ಕಿ ಹಿಟ್ಟಿಗೆ ಬೆರೆಸಿ ಇನ್ನೊಮ್ಮೆ ಮಿಕ್ಸಿ ಯಂತ್ರವನ್ನು ತಿರುಗಿಸಿ ಅರೆದು ತೆಗೆಯಿರಿ.
ಎರಡೂ ಹಿಟ್ಟುಗಳನ್ನು ಕೂಡಿಸಿ, ರುಚಿಗೆ ಉಪ್ಪು ಹಾಗೂ ಲಿಂಬೆ ಗಾತ್ರದ ಬೆಲ್ಲ ಬೆರೆಸಿ ಮುಚ್ಚಿ ಇಡುವುದು.
ಮಾರನೇ ದಿನ ಹಿಟ್ಟು ಹುದುಗು ಬಂದಿರುತ್ತದೆ.
ಹಿಟ್ಟು ಹುಳಿ ಬಂದ ಪ್ರಮಾಣವನ್ನು ನೋಡಿಕೊಂಡು ಒಂದು ಸೌಟು ಹಾಲು ಯಾ ಒಂದು ಸೌಟು ಮೊಸರು ಎರೆಯಬೇಕು, ಯೀಸ್ಟ್ ಯಾ ಸೋಡಾ ಹುಡಿ ಹಾಕುವ ರಗಳೆ ನಮಗೆ ಬೇಡ. ನನ್ನ ಅಡುಗೆಮನೆಯಲ್ಲಿ ಅದಕ್ಕೆ ಜಾಗ ಇಲ್ಲ.
ತವಾ ಬಿಸಿಯೇರಿದಾಗ,
ದೋಸೆ ಹಿಟ್ಟನ್ನು ವೃತ್ತಾಕಾರದಲ್ಲಿ ಎರೆದು,
ತೆಳ್ಳಗೆ ಹರಡಲಿಕ್ಕಿಲ್ಲ,  
ಒಂದು ಬದಿ ಬೆಂದ ನಂತರ,
ಮೇಲಿನಿಂದ ತುಪ್ಪ ಎರೆದು,
ಕವುಚಿ ಹಾಕಿ,
ಹೊಂಬಣ್ಣ ಬಂದಾಗ ತೆಗೆದು,
ಒಂದರ ಮೇಲೊಂದರಂತೆ,
ಮೂರು ನಾಲ್ಕು ದೋಸೆ ಪೇರಿಸಿಟ್ಟಲ್ಲಿ
ಸುರುಳೆ ದೋಸೆಯೆಂಬ ಸೆಟ್ ದೋಸೆ ಬಂದಿತಲ್ಲ!

ಚಟ್ಣಿ ಹಾಗೂ ಜೇನುಬೆಲ್ಲ
ಮೊಸರು ಇದ್ದರಂತೂ
ಸೊಗದ ಸವಿ...

“ ಅಹಹ! ಬಿಸಿ ಫಿಲ್ಟರ್ ಕಾಫಿ ಪಕ್ಕದಲ್ಲಿರತಕ್ಕದ್ದು… “ ಗೌರತ್ತೆಯ ಚೆನ್ನುಡಿ ಬಂದಿತು.


         



Saturday 11 August 2018

ಪೆಲತ್ತರಿಯ ಪುಲಾವ್





ಹಲಸಿನ ಸೊಳೆಗಳನ್ನು ಆಯ್ದು ಇಡುವಾಗ ಬೇಳೆಗಳನ್ನು ಬಿಸಾಡುವುದಕ್ಕಿಲ್ಲ, ತೆಗೆದಿರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ನನ್ನ ಉಪಯೋಗಕ್ಕೆ ಬಾರದಿದ್ದರೂ ಕಲ್ಯಾಣಿ ಇದನ್ನು ಒಯ್ಯುವಾಕೆ, ಬೇಳೆಗಳನ್ನು ಭದ್ರವಾಗಿ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟೂ ಕಾಪಾಡಿಕೊಳ್ಳಬಹುದು ಎಂಬ ಗುಟ್ಟನ್ನು ಅವಳು ಪ್ಲಾಸ್ಟಿಕ್ ಚೀಲಗಳ ಆಗಮನದೊಂದಿಗೇ ಕಂಡುಕೊಂಡಿದ್ದಳು. ಮಳೆಗಾಲದ ಆಟಿ ತಿಂಗಳಲ್ಲಿ ಹಲಸಿನಬೇಳೆಯ ತಿನಿಸುಗಳನ್ನು ಮಾಡಿ ತಿನ್ನಬೇಕು ಎಂದು ರೂಢಿಯೂ ಇದೆ. ಇದಕ್ಕೆ ಕಾರಣವಿಲ್ಲದಿಲ್ಲ. ಬಿರುಸಾಗಿ ಮಳೆ ಹುಯ್ಯುತ್ತಿರುವಾಗ, ಕೂಲಿಕಾರ್ಮಿಕರಿಗೆ ಕೆಲಸವಿಲ್ಲ, ದುಡ್ಡುಕಾಸು ಕೈಯಲ್ಲಿ ಇಲ್ಲ. ಒಂದು ಹೊತ್ತಿನ ಊಟ ಮಾಡಬೇಕಾದರೆ ಗದ್ದೆಯ ಕೊಯಿಲು ಮುಗಿದು ಭತ್ತ ಅಕ್ಕಿಯಾಗಿ ಸಿಗುವ ತನಕ ಉಪವಾಸವೇ ಗತಿ. ಅಂತಹ ಸಂದರ್ಭದಲ್ಲಿ ಜೋಪಾನವಾಗಿ ಇಟ್ಟಂತಹ ಹಲಸಿನಬೇಳೆ, ನಮ್ಮ ಆಡುಮಾತು ತುಳುವಿನಲ್ಲಿ ‘ ಪೆಲತ್ತರಿ ‘ ಆಹಾರವಸ್ತು. ಈ ಪೆಲತ್ತರಿಯಿಂದ ಬಗೆಬಗೆಯ ಖಾದ್ಯಗಳನ್ನು ಮಾಡಬಲ್ಲವರು ನಾವು. ಪಲ್ಯ, ಗಸಿ, ಕೂಟು, ರೊಟ್ಟಿ, ವಡೆ ಸಾಲದುದಕ್ಕೆ ಹೋಳಿಗೆಯ ಹೂರಣವನ್ನೂ ಹಲಸಿನಬೇಳೆಯಿಂದಲೇ ಮಾಡುವ ಪಾಕತಜ್ಞರು ನಮ್ಮಲ್ಲಿದ್ದಾರೆ.

“ ಹೋಳಿಗೆ ಆಗುತ್ತದಾದರೆ ಪರೋಟಾ ಕೂಡಾ ಮಾಡಬಹುದಲ್ಲ... “
“ ಆಗದೇನು, ಪರೋಟವೂ ಮಾಡಿಕೋ… ಆದ್ರೆ ಜಾಸ್ತಿ ತಿನ್ಬೇಡ. “ ಎಚ್ಚರಿಸುವ ಸರದಿ ಗೌರತ್ತೆಯದು.
“ ಏನೇ ತಿಂಡಿ ತಿನಿಸು ಮಾಡಿದ್ರೂನೂ ಹಿತಮಿತವಾಗಿ ತಿನ್ನಲೂ ತಿಳಿದಿರಬೇಕು. “
“ ಹಂಗಂತೀರಾ, ಆದ್ರೆ ಹಿಂದಿನಕಾಲದಲ್ಲಿ ಹಲಸಿನಬೇಳೆ ತಿಂದೇ ಜೀವನ… ಅಂತ ಕತೇನೂ ಚೆನ್ನಾಗಿ ಹೇಳ್ತೀರಲ್ಲ! “
“ ಅದನ್ನೆಲ್ಲ ವಿವರವಾಗಿ ತಿಳಿಯಬೇಕಿದ್ದರೆ ನಿನ್ನ ಚೆನ್ನಪ್ಪನನ್ನೇ ಕೇಳಿಕೋ… “ ಎಂದರು ಗೌರತ್ತೆ.

ಹತ್ತು ಗಂಟೆಯಾಯಿತೇ, ಚೆನ್ನಪ್ಪನ ಚಹಾ ವೇಳೆ. “ ಹೌದ ಚೆನ್ನಪ್ಪ, ನಿನ್ನೆ ಮಾಡಿದ ತಿಂಡಿ ಇತ್ತಲ್ಲ, ಅದೇ ಕಡಿಯಕ್ಕಿ ಉಪ್ಪಿಟ್ಟು, ಅದನ್ನು ಹಲಸಿನಬೇಳೆ ಹಾಕಿಯೂ ಮಾಡಬಹುದಲ್ಲವೇ? “ ನನ್ನ ಪ್ರಶ್ನೆಯ ಬಾಣ.
“ ಅಕ್ಕಿ ಯಾಕೆ, ಬರೇ ಪೆಲತ್ತರಿ ( ಹಲಸಿನಬೇಳೆ ) ಬೇಯಿಸೂದು, ಆ ಮೇಲೆ ಪುಡಿ ಪುಡಿ ಮಾಡೂದು, ಬೆಲ್ಲ ಕಾಯಿತುರಿ ಹಾಕಿ ತಿನ್ನೂದು ಅಷ್ಟೇಯ… “
“ ಹಾಗಾದ್ರೆ ಅಕ್ಕಿ ಇಲ್ಲದೇ ತಿಂಡಿ ಆಗುತ್ತೇ… “
“ ನಾನು ಚಿಕ್ಕೋನಿದ್ದಾಗ ಅಕ್ಕಿ ಎಲ್ಲಿಂದ ಬರಬೇಕು, ಹೀಗೇ ಪೆಲತ್ತರಿಯೇ ನಮ್ಮ ಹೊಟ್ಟೆಗೆ, ಅದೂ ಇಲ್ಲವಾದರೆ ಹಲಸಿನ ಹಣ್ಣನ್ನು ಇರುವಲ್ಲಿಂದ ಕೇಳಿ ತಂದು ಬೇಯಿಸಿ ತಿನ್ನುವುದು, ಅಕ್ಕಿಯೇ ಇಲ್ಲ ಆಗ… “
ಹಲಸಿನ ಬೇಳೆಯು ಪೆಲತ್ತರಿ ಹೇಗಾಯ್ತು ಎಂದು ಈಗ ಅರ್ಥವಾಯಿತು, ಪೆಲಕ್ಕಾಯಿತ ಅರಿ ಎಂದು ಬಿಡಿಸಿ ಓದಿದಾಗ ತುಳು ಭಾಷೆಯ ಈ ಶಬ್ದಾರ್ಥ ಹಲಸಿನಕಾಯಿಯ ಅಕ್ಕಿ ಎಂದಾಯಿತು. ಹಲಸಿನಕಾಯಿ ಒಳಗಿರುವ ಬೇಳೆಯನ್ನು ಅಕ್ಕಿಯಾಗಿ ಉಪಯೋಗಿಸುವ ಮರ್ಮ ಇಲ್ಲಿದೆ.

ಹೌದು, ಬೇಸಾಯದ ಗದ್ದೆ ಕಟಾವ್ ಆಗುವ ತನಕ, ಕೊಯ್ಲು ಕೆಲಸ ಆದ ನಂತರ ಗದ್ದೆಯ ಯಜಮಾನ ಕೂಲಿ ಮಜೂರಿ ಎಂದು ಭತ್ತ ಅಳೆದು ಕೊಡುವ ತನಕ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಮಂದಿ ಅಕ್ಕಿಯನ್ನು ಕಾಣಲಿಕ್ಕಿಲ್ಲ ಎಂದು ನನ್ನ ಅಪ್ಪ ಎಂದೋ ಹೇಳಿದ್ದು ನೆನಪಾಯಿತು.

“ ಹೌದಂತೆ, ಕೊಯ್ಲು ಆದ ನಂತರ ಗದ್ದೆಯಲ್ಲಿ ಬಿದ್ದ ಭತ್ತವನ್ನೂ ಆಯ್ದು ಕೊಂಡೊಯ್ಯುತ್ತಿದ್ದರಂತೆ… “ ಅನ್ನುವಲ್ಲಿಗೆ ನಮ್ಮ ಮಾತುಕತೆ ಮುಗಿಯಿತು.

ಈಗ ಹೇಗೂ ಆಷಾಢಮಾಸ, ಹಲಸಿನಬೇಳೆಯನ್ನು ಹೇಗೋ ಒಂದು ವಿಧವಾಗಿ ತಿನ್ನೋಣವೆಂದು ಪುಲಾವ್ ಎಂಬ ಜನಪ್ರಿಯ ತಿಂಡಿಯನ್ನು ಆಯ್ಕೆ ಮಾಡಿದ್ದಾಯಿತು.

7 - 8 ಹಲಸಿನಬೇಳೆಗಳು. ಹೊರಸಿಪ್ಪೆಯನ್ನು ತೆಗೆದು, ಚೂರಿಯಲ್ಲಿ ಒಂದೇಗಾತ್ರದ ತುಂಡುಗಳನ್ನಾಗಿಸಿ, ಕುಕ್ಕರಿನಲ್ಲಿ ಬೇಯಿಸಿ ಇಡುವುದು.
ಒಂದು ಲೋಟ ಸೋನಾಮಸೂರಿ ಅಕ್ಕಿಯಿಂದ ಉದುರುದುರಾದ ಅನ್ನ ಮಾಡಿ ಇಡುವುದು.
ಅನ್ನ ಮಾಡುವಾಗಲೇ ಉಪ್ಪು ಹಾಕಿಕೊಳ್ಳಿ, ಅನ್ನ ಮುದ್ದೆಗಟ್ಟುವುದಿಲ್ಲ ಹಾಗೂ ಪುನಃ ಉಪ್ಪು ಹಾಕದಿದ್ದರಾಯಿತು.
ತರಕಾರಿಗಳ ಆಯ್ಕೆ ನಿಮ್ಮದು. ಬೇಗನೆ ಬೇಯುವಂತಹ ನೀರುಳ್ಳಿ, ಟೊಮ್ಯಾಟೋ, ಬೀನ್ಸ್, ಕ್ಯಾರೆಟ್ ಇತ್ಯಾದಿಗಳನ್ನು ಅಗತ್ಯವಿದ್ದ ಹಾಗೆ ಒಂದೇ ಗಾತ್ರದಲ್ಲಿ ಕತ್ತರಿಸಿ ಇಡುವುದು.
ಹಸಿರು ಬಟಾಣಿ ಯಾ ಇನ್ಯಾವುದೇ ಕಾಳು ಈ ದಿನ ಬೇಡ, ನಾವು ಹಲಸಿನಬೇಳೆ ಹಾಕುವವರಿದ್ದೇವೆ.

ಬಾಣಲೆಗೆ ಅಡುಗೆಯ ಎಣ್ಣೆ ಯಾ ತುಪ್ಪ ಎರೆದು,
ಲವಂಗ ಚಕ್ಕೆ ಚೂರುಗಳನ್ನು ಹಾಕಿ,
ಜೀರಿಗೆ, ಕಾಳುಮೆಣಸಿನ ಹುಡಿಯನ್ನೂ ಹಾಕಿ ಹುರಿಯಿರಿ.

ನೀರುಳ್ಳಿ, ಜಜ್ಜಿ ಇಟ್ಟ ಶುಂಠಿ ಬೆಳ್ಳುಳ್ಳಿ ಹಾಕಿ, ಹಸಿವಾಸನೆ ಹೋಗುವ ತನಕ ಬಾಡಿಸಿ.
ಟೊಮ್ಯಾಟೋ ಹಾಗೂ ಇತರ ತರಕಾರಿಗಳನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ, ಸೌಟಾಡಿಸಿ.
ಈ ಹಂತದಲ್ಲಿ ತುಪ್ಪ ಸಾಕಾಗದಿದ್ದರೆ ಇನ್ನಷ್ಟು ಎರೆಯಿರಿ.
ಬೇಯಿಸಿಟ್ಟ ಹಲಸಿನಬೇಳೆ ಹಾಕಿ,
ನಿಮ್ಮ ರುಚಿಗನುಸಾರ ಪುಲಾವ್ ಮಸಾಲೆ ಹುಡಿ ಉದುರಿಸಿ.
ಮಾಡಿಟ್ಟ ಅನ್ನ, ಒಂದು ಹಿಡಿ ಕಾಯಿತುರಿ ಬೆರೆಸಿ, ಕೊತ್ತಂಬರಿ ಸೊಪ್ಪಿನ ಅಲಂಕರಣ ಇರಲಿ.
ಬಿಸಿಬಿಸಿಯಾಗಿ ಬಡಿಸಿಕೊಂಡು ತಿನ್ನಿರಿ.
ಕೂಡಿಕೊಳ್ಳಲು ದಪ್ಪ ಮೊಸರು ಸಾಕು,
“ದಪ್ಪ ಮೊಸರಿಗೆ ಒಗ್ಗರಣೆ ಹಾಕಿ, ಸ್ವಲ್ಪ ಉಪ್ಪು… “ ಗೌರತ್ತೆಯ ವಗ್ಗರಣೆ ಬಂದಿತು.

         



Friday 3 August 2018

ಹಲಸು - ಹೊಸ ಫಲ



“ ಇದು ಆ ಮರದಲ್ಲಿ ಒಂದೇ ಆಗಿದ್ದು. “
“ ಹೊಸ ಫಲ ಬಂತು ನೋಡು… “ ನನಗೆ ಕರೆ.
“ ಹಣ್ಣು ಆದ ನಂತರವೇ ತುಳುವನೋ, ಬರಿಕ್ಕೆಯೋ ಎಂದು ತಿಳಿದೀತು. “
ಹಲಸಿನಕಾಯಿ ಹಣ್ಣಾಯಿತು.
ಯಥಾಪ್ರಕಾರ ಚೆನ್ನಪ್ಪನ ಸುಪರ್ದಿಯಲ್ಲಿ ಹಲಸು ಹೋಳಾಗಿ ಬಿಡಿಸಲ್ಪಟ್ಟಿತು.
“ ಇದು ಅರೆ ತುಳುವನಂತಿದೆ... “
“ ಅರೆ ಬರಿಕ್ಕೆ ಎಂದರೆ ಸರಿ… “
ಮಾವಿನಹಣ್ಣುಗಳಲ್ಲಿ ವೈವಿಧ್ಯತೆ ಇರುವಂತೆ ಹಲಸು ಕೂಡಾ ವೈವಿಧ್ಯತೆಯ ಆಕರ್ಷಣೆಯನ್ನು ಹೊಂದಿದೆ. ಬಣ್ಣದಲ್ಲಿ, ರುಚಿಯಲ್ಲಿ, ಆಕೃತಿಯಲ್ಲಿ, ಸುವಾಸನೆಯಲ್ಲಿ ಒಂದು ಹಲಸಿನಂತೆ ಇನ್ನೊಂದಿಲ್ಲ.
ಮಳೆಗಾಲ ಅಲ್ವೇ, ಯಾವುದೇ ಜಾತಿಯ ಹಲಸನ್ನೂ ಹಾಗೇನೇ ಗುಳುಂಕ್ ಎಂದು ತಿನ್ನಲು ಧೈರ್ಯ ಬಾರದು.
ಕಡ್ಲೇ ಹಿಟ್ಟು, ಅಕ್ಕಿಹಿಟ್ಟು ಕೂಡಿದ ಹಿಟ್ಟಿನಲ್ಲಿ ಮುಳುಗಿಸಿ ಪೋಡಿ ಕರಿದು ತಿಂದೆವು.

ಉಳಿದ ಹಣ್ಣಿನ ಗತಿಯೇನಾಯ್ತು?
ಅದನ್ನೂ ಕೊಟ್ಟಿಗೆ ಮಾಡಿ ಇಡೂದು, ಎರಡು ದಿನ ತಿನ್ನಲಿಕ್ಕೆ ಬೇಕಾದಷ್ಟಾಯಿತು ಅನ್ನಿ..

“ ಹೌದೂ, ಅರೆ ಬಕ್ಕೆ ಯಾ ಅರೆ ಬರಿಕ್ಕೆ ಎಂದರೇನು? “
ಅರೆ ಬಕ್ಕೆಯನ್ನು ತುಳುವ ಹಣ್ಣು ಅನ್ನುವಂತಿಲ್ಲ, ಬಕ್ಕೆ ಹಣ್ಣು ಕೂಡಾ ಇದಲ್ಲ, ಒಂದು ವಿಧವಾದ ಮಿಶ್ರ ತಳಿ ಅನ್ನಬೇಕಾಗುತ್ತದೆ. ನಾವೇನೂ ಕಸಿ ಕಟ್ಟಿ ಈ ಹಣ್ಣನ್ನು ಪಡೆದವರೂ ಅಲ್ಲ, ಇದು ನಿಸರ್ಗದ ವಿಸ್ಮಯ ಅಂದರೆ ಸರಿ ಹೋದೀತು.

ನಾರು ಪದಾರ್ಥದಿಂದ ಕೂಡಿ, ಪಿಚಿಪಿಚಿಯಾಗಿ, ಬೇಳೆ ಬಿಡಿಸಿ ತಿನ್ನಲು ಕಷ್ಟ ಅಂತಿರುವ ಸೊಳೆ ( ತೊಳೆ ) ಇರುವಂತಾದ್ದು ತುಳುವ ಹಲಸು. ಇದರ ಕೊಟ್ಟಿಗೆ, ಪಾಯಸ ಮಾಡಬೇಕಿದ್ದರೆ ನಾರು ತೆಗೆದು ರಸ ಸಂಗ್ರಹಿಸುವ ವಿಧಾನ ತಿಳಿದಿದ್ದರೆ ಮಾತ್ರ ತಿಂಡಿ ತಿನಿಸು ಮಾಡಿಕೊಳ್ಳಬಹುದು. ರಸ ಸಂಗ್ರಹಿಸುವ ಕ್ರಮವನ್ನು ಈ ಹಿಂದೆಯೇ ಬರೆದಿದ್ದೇನೆ. ಆಸಕ್ತರು ಹುಡುಕಿ ಓದಿರಿ.

ಬರಿಕ್ಕೆ ಯಾ ಬಕ್ಕೆ ಹಲಸಿನ ಸೊಳೆಗಳು ಕೋಮಲವಾಗಿದ್ದರೂ ಚಿಕ್ಕದಾಗಿ ಹೆಚ್ಚಿಕೊಳ್ಳುವ ಅನಿವಾರ್ಯತೆ ಇದೆ.

ಅರೆ ಬಕ್ಕೆ ಹಲಸಿನ ಸೊಳೆಗಳನ್ನು ಬಿಡಿಸಿಕೊಳ್ಳಲು ಏನೇ ತಕರಾರು ಇಲ್ಲ.
ತಿಂಡಿತಿನಿಸು ಮಾಡಿಕೊಳ್ಳಲು ಚಿಕ್ಕದಾಗಿ ಹೆಚ್ಚಿಕೊಳ್ಳಬೇಕಿಲ್ಲ.
ನಾರು ತೆಗೆಯಬೇಕಿಲ್ಲ, ರಸ ಸಂಗ್ರಹಣೆಯೂ ಬೇಡ.

ಈಗ ಅರೆ ಬಕ್ಕೆಯ ಕೊಟ್ಟಿಗೆ ಯಾ ಕಡುಬು ಯಾ ಇಡ್ಲಿ ಮಾಡಿದ್ದು ಹೇಗೆ?

2 ಲೋಟ ಕಡಿಯಕ್ಕಿ ( ನುಚ್ಚಕ್ಕಿ )
3 ಲೋಟ ಬೇಳೆ ಬಿಡಿಸಿದ ಹಲಸಿನ ಸೊಳೆಗಳು
ಅರ್ಧ ಕಡಿ ತೆಂಗಿನ ತುರಿ
2 ಅಚ್ಚು ಬೆಲ್ಲ
ರುಚಿಗೆ ಉಪ್ಪು

ಅರ್ಧ ಗಂಟೆ ನೆನೆಸಿದ ಕಡಿಯಕ್ಕಿಯನ್ನು ತೊಳೆದು ಮಿಕ್ಸಿ ಜಾರ್ ಒಳಗೆ ಅದರ ಸಾಮರ್ಥ್ಯಕ್ಕನುಸಾರ ತುಂಬಿಸಿ ಅರೆಯಿರಿ, ನೀರು ಹಾಕಲೇ ಬಾರದು, ಹಲಸಿನ ಸೊಳೆಗಳಲ್ಲಿರುವ ರಸವೇ ಸಾಕು. ಕಡಿಯಕ್ಕಿಯಾಗಿರುವುದರಿಂದ, ಮೃದುವಾದ ಸೊಳೆಗಳೂ ಇರುವುದರಿಂದ ಅರೆಯುವ ಕೆಲಸ ಕ್ಷಣ ಮಾತ್ರದಲ್ಲಿ ಮುಗಿಯಿತು, ಇಡ್ಲಿ ಹಿಟ್ಟಿನ ಸಾಂದ್ರತೆಯ ಹಿಟ್ಟು ನಮ್ಮದಾಯಿತು.  

ಅಟ್ಟಿನಳಗೆಯಲ್ಲಿ ( ಇಡ್ಲಿ ಪಾತ್ರೆ ) ನೀರು ಕುದಿಯುತ್ತಿರಲಿ.
ಬಾಡಿಸಿದ ಬಾಳೆ ಎಲೆಗಳನ್ನು ಒರೆಸಿ.
ಒಂದೇ ಅಳತೆಯಲ್ಲಿ ಹಿಟ್ಟು ತುಂಬಿಸಿ, ಕ್ರಮದಲ್ಲಿ ಬಾಳೆ ಎಲೆಗಳನ್ನು ಹಿಟ್ಟು ಹೊರ ಚೆಲ್ಲದಂತೆ ಮಡಚಿಟ್ಟು, ಅಟ್ಟಿನಳಗೆಯೊಳಗೆ ಸೂಕ್ತವಾಗಿ ಹೊಂದಿಸಿ ಇಡುವುದೂ ಒಂದು ಕಲೆ ಎಂದೇ ತಿಳಿಯಿರಿ.
ಹಬೆಯಲ್ಲಿ ಇಪ್ಪತ್ತರಿಂದ ಇಪ್ಪತೈದು ನಿಮಿಷ ಬೇಯಿಸುವಲ್ಲಿಗೆ ಅರೆ ಬಕ್ಕೆ ಹಲಸಿನ ಹಣ್ಣಿನ ಕಡುಬು, ಇಡ್ಲಿ, ಕೊಟ್ಟಿಗೆ ಸಿದ್ಧವಾಗಿದೆ.
ಬಿಸಿ ಇರುವಾಗಲೇ ತುಪ್ಪ ಸವರಿ ತಿನ್ನಿ.  
ರಾತ್ರಿಯೂಟಕ್ಕೂ ಸೊಗಸು, ಮುಂಜಾನೆ ತಿಂಡಿ ಬೇರೆ ಮಾಡಬೇಕಿಲ್ಲ.