Pages

Ads 468x60px

Tuesday 25 December 2018

ಶ್ಯಾವಿಗೆ ಪೊಂಗಲ್




ನಾಗಬನದ ಪರಿಸರದಲ್ಲಿ ಅಷ್ಟಮಂಗಲ ಸ್ವರ್ಣಪ್ರಶ್ನೆಯ ವೇಳೆ ದೈವಸಾನ್ನಿಧ್ಯದ ಕುರುಹುಗಳ ಕುರಿತು ತಿಳಿದಾಗಿನಿಂದ ಧಾರ್ಮಿಕ ವಿಧಿವಿಧಾನಗಳೂ, ಹೋಮಹವನಗಳೂ, ಭಕ್ತಾದಿಗಳ ಜನಜಾತ್ರೆಯೂ ಸೇರಿ ಆಗ್ಗಿಂದಾಗ್ಗೆ ಅನ್ನಸಂತರ್ಪಣೆಯ ಸಂಭ್ರಮಕಾಲ. ಆದಷ್ಟು ಬೇಗ ದೇವಾಲಯ ನಿರ್ಮಾಣದ ಸಂಕಲ್ಪದೊಂದಿಗೆ ದುರ್ಗಾಮಾತೆಗೆ ತಾತ್ಕಾಲಿಕ ನೆಲೆ ಒದಗಿಸಿ ಕೊಟ್ಟು ಬಾಲಾಲಯ ಪ್ರತಿಷ್ಠೆಯೂ ನಡೆಯಿತು. ವ್ಯವಸ್ಥಿತವಾಗಿ ಕಾರ್ಯಕ್ರಮಗಳು ನಡೆದ ನಂತರ ದೇವಿಯ ಆಲಯ ನಿರ್ಮಾಣ ಆಗುವ ತನಕ ಪ್ರತಿ ತಿಂಗಳೂ ಸಂಕ್ರಾಂತಿಯ ದಿವಸ, ಸಂಧ್ಯಾಕಾಲದಲ್ಲಿ ದುರ್ಗಾಪೂಜೆ, ಹೂವಿನಪೂಜೆ, ಕುಂಕುಮಾರ್ಚನೆ, ಭಜನೆಗಳನ್ನು ಭಕ್ತ ಸಮುದಾಯ ಹಮ್ಮಿಕೊಂಡಿದೆ.

ಊಟೋಪಚಾರದ ವ್ಯವಸ್ಥೆಗಾಗಿ ತಂದಿದ್ದ ಅಡುಗೆ ಸಾಮಗ್ರಿಗಳೂ, ತರಕಾರಿಗಳೂ, ಮಜ್ಜಿಗೆ, ಹಾಲು ಇತ್ಯಾದಿ ಉಳಿದಿವೆ. ಉಳಿಕೆಯಾಗಿದ್ದನ್ನು ಪುನಃ ಜಗ್ಗಣ್ಣನ ಅಂಗಡಿಗೆ ವಾಪಸ್ ಮಾಡುವ ವ್ಯವಸ್ಥೆ, ಬಾಲಕೃಷ್ಣ ಶೆಟ್ಟಿಯ ನೇತೃತ್ವದಲ್ಲಿ ನಡೆಯುತ್ತ ಇದ್ದಾಗ, ಅಡುಗೆ ಮನೆಯೊಳಗೆ ಇದ್ದಂತಹ ಪ್ಯಾಕೇಟುಗಳು, ಎಣ್ಣೆ, ಮೆಣಸಿನ ಹುಡಿ, ಅವಲಕ್ಕಿ, ಸಕ್ಕರೆ ಇತ್ಯಾದಿಗಳು ಹೊರ ನಡೆದುವು. ತರಕಾರಿ, ಮಜ್ಜಿಗೆ ವಗೈರೆ ಹಂಚಿಕೊಂಡಿದ್ದಾಯ್ತು, ನನಗೂ ಒಂದು ಕುಂಬಳಕಾಯಿ ದೊರೆಯಿತು.

“ ದಾಸಪ್ಪ, ಈ ಬಕೇಟ್ ಒಳಗೆ ನಾಲ್ಕು ಶಾವಿಗೆ ಪ್ಯಾಕೇಟು ಉಂಟಲ್ಲ… “
“ ಇದನ್ನು ಪಾಯಸ ಮಾಡದೇ ಇಟ್ಟಿದ್ದು ಯಾಕೆ? “
“ ಈ ಅಡುಗೆಯವರಿಗೆ ಶಾವಿಗೆ ಪ್ಯಾಕಟ್ಟು ಕೊಟ್ರೆ ಏನೋ ಮಾಡಿ ಹಾಕ್ತಾರೆ.. ಬಂದವರಿಗೆ ಪಾಯಸ ಸುರಿದು ಉಂಡ ಹಾಗೆ ಆಗಬೇಕಲ್ಲ. ಶಾವಿಗೆ ಪಾಯಸಕ್ಕೆ ಸಕ್ಕರೆ ಹಾಕ್ಬೇಕು. ಪಾಯಸದ ಖುಷಿ ಸಿಗಬೇಕಾದ್ರೆ ಕಡ್ಲೆಬೇಳೆಯದ್ದೇ ಆಗ್ಬೇಕು, ಅದೂ ದಪ್ಪ ದಪ್ಪ ಇರಬೇಕು, ಹೆಸ್ರುಬೇಳೆ ಆಗ್ತದೆ, ಅದನ್ನು ಹುರಿಯಬೇಕು, ಹುರಿದದ್ದು ಹೆಚ್ಚುಕಮ್ಮಿ ಆದ್ರೂ ಮೋಸವೇ... “ ಬಾಲಕೃಷ್ಣನ ವಾಗ್ಝರಿ ಮುಂದುವರಿಯುತ್ತಿದ್ದ ಹಾಗೆ, “ ಹ್ಞಾ, ಸರಿ ಸರಿ.. “ ಎಂದು ಒಪ್ಪಲೇ ಬೇಕು.

ಅಂತೂ ನಾಲ್ಕೂ ಶ್ಯಾವಿಗೆ ಪ್ಯಾಕೇಟುಗಳನ್ನು ನನ್ನ ಅಡುಗೆ ಪ್ರಯೋಗಶಾಲೆಗೆ ಒಪ್ಪಿಸಲಾಯಿತು.
“ ಏನ್ಮಾಡ್ಲೀ… “
ಏನೋ ಒಂದು ಹೊಸ ರುಚಿ ಮಾಡೋಣ.

ಶ್ಯಾವಿಗೆಯನ್ನು ಹುರಿಯಬೇಕಿಲ್ಲವೆಂಬ ಸೂಚನೆ ಪ್ಯಾಕೇಟಿನಲ್ಲಿ ಇದ್ದಿತು.
ಒಂದು ಲೋಟ ತುಂಬ ಶ್ಯಾವಿಗೆ,
ಎರಡು ಲೋಟ ನೀರು ತುಂಬಿ,
ಚಿಟಿಕೆ ಉಪ್ಪು ಹಾಕಿ ಕುಕ್ಕರಿನಲ್ಲಿ ಒಂದು ಸೀಟಿ ಕೂಗಿಸಿ,
ಕೆಳಗಿಳಿಸಿ,
ಒತ್ತಡ ಇಳಿದ ನಂತರ ಮುಚ್ಚಳ ತೆರೆದು,
ಬೆಂದಿದೆ,
ಧೊಡ್ಡ ಅಚ್ಚು ಬೆಲ್ಲ ಹಾಕಿರಿಸುವುದು, ಕರಗುತ್ತಿರಲಿ. ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಎರೆದಿರಾದರೆ, ನೀರನ್ನು ಇಂಗಿಸಲು ವೃಥಾ ಶ್ರಮ ಪಡಬೇಕಾದೀತು. ಸಮಯವೂ ಹಾಳು.
2 ಚಮಚ ತುಪ್ಪ ಎರೆಯಿರಿ.
ಒಂದು ಹಿಡಿ ತೆಂಗಿನತುರಿ ಹಾಕುವುದು.
ಪುನಃ ಕುಕರ್ ಒಲೆಗೇರಲಿ, ಸಟ್ಟುಗದಲ್ಲಿ ಆಡಿಸುತ್ತ ಇದ್ದ ಹಾಗೆ ಬೆಲ್ಲ ಕರಗಿ ಶ್ಯಾವಿಗೆಯೊಂದಿಗೆ ಬೆರೆತು ಬಂದಾಗ ಹುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಹುರಿದ ಗೇರುಬೀಜ, ದ್ರಾಕ್ಷಿ ಹಾಕುವುದು.

ಬಹಳ ಬೇಗನೇ ಆಗುವ ಈ ಸಿಹಿ ತಿನಿಸನ್ನು ನಮ್ಮ ಮನೆಯವರು ಇಷ್ಟಪಟ್ಟು ತಿಂದರು.
ಸಂಜೆವೇಳೆ ಬಾಲಕೃಷ್ಣ ಬಂದ, ಖುಷಿಖುಷಿಯಾಗಿ ತಿಂದ್ಬಿಟ್ಟು, “ ಹೌದೂ, ಇದೇನು ಹಲ್ವದ ಹಂಗಾಯ್ತಲ್ಲ… “ ಅಂದ.
“ ಧನುರ್ಮಾಸ ಬಂತಲ್ಲ, ಇದೂ ಶ್ಯಾವಿಗೆ ಪೊಂಗಲ್… “

               




Saturday 15 December 2018

ನೂಕಡ್ಡೆ ರಸಾಯಣ






             

ಮುಂಜಾನೆಯ ತಿಂಡಿ ತಟ್ಟೆಯನ್ನು ಈ ದಿನ ಒತ್ತುಶಾವಿಗೆಯಿಂದ ಅಲಂಕರಿಸಲಾಯಿತು.
“ಏನೂ, ನೆಂಟರು ಇದ್ರಾ? “
“ ಹಾಗೇನೂ ಇಲ್ಲ, ನಾವೇ ಇದ್ದಿದ್ದು, ತಿನ್ನಬೇಕು ಅನ್ನಿಸಿದಾಗ ಮಾಡಿಕೊಂಡು ತಿಂದೆವು…. ಮತ್ತೊಂದು ವಿಷಯ ಗೊತ್ತಾ, ನೆಂಟರು ಬಂದಾಗ ಒತ್ತುಶಾವಿಗೆ ತಂದು ಎದುರಿಗಿಟ್ರೆ ‘ ಗಂಟುಮೂಟೆ ಕಟ್ಟಿ ಹೊರಡು ‘ ಎಂಬ ಸಾಂಕೇತಿಕ ಅರ್ಥವೂ ಇದೆ. “
“ ಹೌದಾ, ಶಾವಿಗೆ ಪ್ಯಾಕೇಟು ಸಿಗುತ್ತೇ, ತಂದು ಒಗ್ಗರಣೆ ಮಸಾಲೆ ಹಾಕಿ ತಿನ್ನಲು ನಮಗೆ ಗೊತ್ತುಂಟು. “

ನಮ್ಮ ಮಕ್ಕಳು ಚಿಕ್ಕವರಿರಬೇಕಾದ್ರೆ ಒತ್ತುಶಾವಿಗೆ ಅಂದ್ರೆ ಪಂಚಪ್ರಾಣ. ನನ್ನ ಶಾವಿಗೆ ಒರಳು ಕೆಟ್ಹೋಗಿತ್ತು, ಮೇಲಕ್ಕೂ ಕೆಳಕ್ಕೂ ಹೋಗ್ತಾ ಇರಲಿಲ್ಲ. ತುಂಬ ಹಳೆಯದಾದ ಅಂದ್ರೆ ಓಬೀರಾಯನ ಕಾಲದ ಶಾವಿಗೆ ಒರಳು ನಿರುಪಯುಕ್ತ ವಸ್ತುಗಳೊಂದಿಗೆ ಅಟ್ಟ ಸೇರಿತ್ತು.

ಹೀಗಿರಬೇಕಾದ್ರೆ ಒಂದು ದಿನ ಬ್ಯಾಂಕ್ ವ್ಯವಹಾರಕ್ಕೆಂದು ಉಪ್ಪಳ ಪೇಟೆಗೆ ಹೋದ ಗೌರತ್ತೆ ಹೊಸ ಶಾವಿಗೆ ಒರಳು ಖರೀದಿಸಿ ತಂದರು. “ ಮಕ್ಕಳು ಆಸೆ ಪಡ್ತಾವೆ, ಮಾಡಿಕೊಡು ತಿನ್ನಲಿಕ್ಕೆ… “ ಅವರಿಗೂ ತಿನ್ನಬೇಕಾಗಿತ್ತು ಅನ್ನಿ.

ಮೊದಲೆಲ್ಲ ಮನೆಗೆ ಬರುತ್ತಿದ್ದ ನೆಂಟರು ತಿಂಗಳಾನುಗಟ್ಟಲೆ ಝಂಡಾ ಊರುತ್ತಿದ್ದರು, ಆ ಕಾಲವೇ ಹಾಗಿತ್ತು, ಒಂದೂರಿಂದ ಮತ್ತೊಂದೂರಿಗೆ ನಡೆದೇ ಪ್ರಯಾಣ, ರಸ್ತೆ ಸಾರಿಗೆ ವ್ಯವಸ್ಥೆಯಿಲ್ಲ, ಇದ್ದರೂ ಕೈಯಲ್ಲಿ ದುಗ್ಗಾಣಿಯಿಲ್ಲ. ಮಕ್ಕಳುಮರಿ ಸಮೇತ ಬಂದ ನೆಂಟರು ಮಳೆಗಾಲ ಮುಗಿಯದೆ ಹೊರಡಲಿಕ್ಕಿಲ್ಲ. ಬಂದವರು ಅದೆಷ್ಟೇ ಆತ್ಮೀಯ ಬಳಗವಾಗಿದ್ದರೂ ಊಟೋಪಚಾರ, ಅತಿಥಿಸತ್ಕಾರ ಎಲ್ಲವೂ ನಾಲ್ಕಾರು ದಿನಕ್ಕೆ ಸೀಮಿತ. ‘ ಬಂದವರು ಹೋಗಲಿ ‘ ಎಂಬ ಸೂಚನೆಯನ್ನು ಸೇಮಿಗೆ ರಸಾಯನ ಮಾಡಿ ಸತ್ಕರಿಸುವುದರ ಮೂಲಕ ತಿಳಿಯಪಡಿಸುವ ರೂಢಿ ಇದ್ದಿತು. ಒತ್ತಾಯದಿಂದ ಬಂದ ಅತಿಥಿಗಳನ್ನು ಬಲವಂತವಾಗಿಯಾದರೂ ಹೊರ ತಳ್ಳುವಂತೆ ಒತ್ತುಶಾವಿಗೆಯು ಒಂದು ವಿಶೇಷವಾದ ತಿನಿಸೂ ಹೌದು. ತಯಾರಿಸಲು ಶ್ರಮವೂ ಅನಿವಾರ್ಯ ಆಗಿದ್ದ ಕಾಲ ಅದಾಗಿತ್ತು. ಸೇರಕ್ಕಿ ಅರೆದು, ಕಾಯಿಸಿ, ಹಬೆಯಲ್ಲಿ ಬೇಯಿಸಿ, ನೂಲಿನೆಳೆಯಂತೆ ಒತ್ತಿ ಹೊರ ಬಂದ ಸೇಮಿಗೆಯು ನೂಕಡ್ಡೆ ಎಂದೂ ಹೆಸರು ಪಡೆದಿದೆ.  

ನಾನೂ ಶಾವಿಗೆ ಮಾಡದೆ ತುಂಬ ಸಮಯವಾಗಿತ್ತು, ಮೊದಲು ಶಾವಿಗೆ ಒತ್ತು ಯಂತ್ರ ಎಲ್ಲಿದೆಯೆಂದು ಹುಡುಕಿ, ಹೊರತಂದು ಶುಚಿಗೊಳಿಸಿ, ಯಂತ್ರದ ನಟ್ಟು ಬೋಲ್ಟುಗಳೆಲ್ಲ ಸಮರ್ಪಕ ಸ್ಥಿತಿಯಲ್ಲಿವೆ ಎಂಬ ತೀರ್ಮಾನಕ್ಕೆ ಬಂದು…

ಗದ್ದೆ ಬೇಸಾಯ ಇದ್ದ ಕಾಲದಲ್ಲಿ ಕುಚ್ಚುಲಕ್ಕಿಯಿಂದಲೇ ಶಾವಿಗೆ ಮಾಡುವ ರೂಢಿ ಇಟ್ಕೊಂಡಿದ್ದೆವು. ಅದನ್ನು ಬೇಯಿಸಲು ಜಾಸ್ತಿ ಸಮಯ ಬೇಕು, ಕಟ್ಟಿಗೆಯ ಒಲೆಯೂ ಇದ್ದ ಕಾಲ ಅದು, ಅರೆಯಲಿಕ್ಕೂ ಗ್ರೈಂಡಿಗ್ ಮೆಶೀನ್ ಅನಿವಾರ್ಯ. ಕುಚ್ಚುಲಕ್ಕಿ ಹಾಗೂ ಬೆಳ್ತಿಗೆ ಅಕ್ಕಿ ಸಮಪ್ರಮಾಣದಲ್ಲಿ ಹಾಕಿ ಶಾವಿಗೆಮಾಡುವುದೂ ಇದೆ. ಏನೇ ಆದರೂ ಈಗಿನ ವೇಗದ ಜೀವನಶೈಲಿಯಿಂದಾಗಿ ಹಳೆಯ ಪದ್ಧತಿಗಳು ಮೂಲೆಗುಂಪಾಗಿವೆ.

               

ಇದೆಲ್ಲ ಬೇಡ, ಬೇಗನೆ ಆಗುವಂತಹ ಬೆಳ್ತಿಗೆ ಅಕ್ಕಿಯೇ ಹಿತ, ಮಲ್ಲಿಗೆಯಂತಹ ಒತ್ತುಶಾವಿಗೆ ತಿನ್ನೋಣ.  
2 ಲೋಟ ಬೆಳ್ತಿಗೆ ಅಕ್ಕಿ ನೀರಿನಲ್ಲಿ ತೊಳೆದು ನೆನೆಯಲು ಇರಿಸುವುದು. ಅಕ್ಕಿಯ ಗುಣಮಟ್ಟ ಚೆನ್ನಾಗಿದ್ದಷ್ಟೂ ಶಾವಿಗೆ ರುಚಿಕರವಾಗಿರುತ್ತದೆ.

ನಾಲ್ಕಾರು ಗಂಟೆ ನೆನೆದ ಅಕ್ಕಿಯ ನೀರು ಬಸಿದು ಮಿಕ್ಸಿ ಯಂತ್ರದಲ್ಲಿ ಅರೆಯಿರಿ.
2 ಲೋಟ ಅಕ್ಕಿ ಅಳೆದಿದ್ದೇವೆ, ಮೂರು ಲೋಟ ನೀರು ಅರೆಯಲಿಕ್ಕೆಂದು ಅಳೆದು ಇರಿಸಿಕೊಳ್ಳಿ.
ಮಿಕ್ಸಿಯ ಜಾರ್ ಒಳಗೆ ಅದರ ಸಾಮರ್ಥ್ಯ ಇರುವಷ್ಟೇ ಅಕ್ಕಿ ಹಾಕಿ, ಸುಸೂತ್ರವಾಗಿ ತಿರುಗಲು ಬೇಕಾದಷ್ಟೇ ನೀರು ಹಾಕಿ ಅರೆಯಿರಿ. ಎಲ್ಲ ಅಕ್ಕಿಯೂ ಅರೆಯಲ್ಪಟ್ಟಿತು, ರುಚಿಗೆ ತಕ್ಕಷ್ಟು ಉಪ್ವು ಬೀಳಲಿ. ಅಳೆದು ಇಟ್ಕೊಂಡ ಮೂರು ಲೋಟ ನೀರು ಮುಗಿದಿಲ್ಲ ಅಲ್ಲವೇ,

ದಪ್ಪ ತಳದ ಬಾಣಲೆಗೆ ಈ ಹಿಟ್ಟನ್ನು ಸುರಿದು, ಉಳಿಕೆಯಾಗಿರುವ ನೀರನ್ನು ಎರೆಯಿರಿ. ಇದೀಗ ನೀರು ದೋಸೆಯ ಹಿಟ್ಟಿನಂತಾಗಿದೆ. ಶಾವಿಗೆ ನೂಲೆಳೆಯಂತೆ ಬರಬೇಕಾದರೆ ನಾವು ಎರೆಯುವ ನೀರಿನ ಅಂದಾಜು ಸರಿಯಾಗಿರಬೇಕು. ನೀರು ಕಡಿಮೆಯಾದರೆ ಹಿಟ್ಟು ಸರಿಯಾಗಿ ಬೇಯದೇ ಹೋದೀತು, ಬೆಂದರೂ ಶಾವಿಗೆ ಯಂತ್ರದಿಂದ ಕೆಳಗಿಳಿಸಲು ಹರಸಾಹಸ ಪಡಬೇಕಾದೀತು. ನೀರಿನ ಅಳತೆ ಜಾಸ್ತಿ ಆದ್ರೂನೂ ಒತ್ತಿದ ಶಾವಿಗೆ ಪಿಚಿ ಪಿಚಿಯಾಗಿ ಮುದ್ದೆಯಾದೀತು. ಇವಿಷ್ಟು ಮುಂಜಾಗ್ರತೆಯ ಸಲಹೆಗಳನ್ನು ಶಾವಿಗೆ ಒತ್ತುಮಣೆಯನ್ನು ತಂದ ಗೌರತ್ತೆ ಹೇಳಿದ್ದು.

ಒಂದೇ ಹದನಾದ ಉರಿಯಲ್ಲಿ ಮರದ ಸಟ್ಟುಗದಲ್ಲಿ ತಳ ಹಿಡಿಯದಂತೆ ಕೈಯಾಡಿಸುತ್ತ ಇದ್ದ ಹಾಗೆ ನೀರಿನಂತಿದ್ದ ಹಿಟ್ಟು ಘನ ರೂಪಕ್ಕೆ ಬಂದಿದೆ, ಕೈಗಳಿಗೆ ಹಸಿ ಹಿಟ್ಟಿನಂತೆ ಅಂಟಿಕೊಳ್ಳಬಾರದು. ಪರೀಕ್ಷಿಸಿ ಸರಿಯಾದ ಹೊತ್ತಿಗೆ ಸ್ಟವ್ ಆರಿಸಿ, ಬಾಣಲೆ ಕೆಳಗಿಳಿಸಿ. ಅಕ್ಕಿ ಹಿಟ್ಟಿನ ಮುದ್ದೆಯನ್ನು ಇನ್ನೊಂದು ತಪಲೆಗೆ ಆ ಕೂಡಲೇ ವರ್ಗಾಯಿಸಿ.

ತುಸು ಆರಿದ ನಂತರ, ಶಾವಿಗೆ ಒರಳೊಳಗೆ ಹಿಡಿಸುವಂತಹ ಉಂಡೆ ಮಾಡಿಟ್ಟು, ಅಟ್ಟಿನಳಗೆ ಯಾ ಇಡ್ಲಿಪಾತ್ರೆಯೊಳಗೆ ಜೋಡಿಸಿ ಇಡುವುದು.

ಮುಂಜಾನೆ ಎದ್ದೊಡನೆ ಅಟ್ಟಿನಳಗೆಯನ್ನು ಒಲೆಗೇರಿಸಿ, ನೀರು ಕುದಿದು, ಹದಿನೈದು ನಿಮಿಷಗಳಲ್ಲಿ ಉಂಡೆಗಳು ಬೆಂದಿರುತ್ತವೆ. ಭಾನವಾರದ ರಜಾ ದಿನ ಒತ್ತುಶಾವಿಗೆಯ ಆಟಕ್ಕೆ ಸೂಕ್ತವಾಗಿದೆ. ಮನೆಯ ಸದಸ್ಯರ ಸಹಾಯವನ್ನು ಪಡೆದುಕೊಳ್ಳಿ. ಒಂದೊಂದೇ ಉಂಡೆಯನ್ನು ಶಾವಿಗೆ ಒರಳೊಳಗೆ ತುಂಬಿಸಿ ಒತ್ತುವುದು, ನೂಕಡ್ಡೆ ಸಿದ್ಧ.

ಹಿಂದೆ ಕೂಡು ಕುಟುಂಬಗಳಿದ್ದ ಕಾಲದಲ್ಲಿ ಮನೆಯ ಸ್ಥಿತಿವಂತಿಕೆಯನ್ನೂ ಶಾವಿಗೆ ಯಂತ್ರದಿಂದಲೇ ಅಳೆಯಬಹುದಾಗಿತ್ತು. ಶಾವಿಗೆ ಒರಳನ್ನು ವೈವಿಧ್ಯಮಯ ವಿನ್ಯಾಸಗಳಲ್ಲಿ ಕಾಣಬಹುದಾಗಿತ್ತು. ಮರದ ಕುಸುರಿ ಕಲೆಗಳಿಂದ, ಕಣ್ಸೆಳೆಯುವ ವಿನ್ಯಾಸಗಳಿಂದಲೂ ಕೂಡಿದ ಪುರಾತನ ಶಾವಿಗೆ ಒತ್ತುಮಣೆಗಳು ನಮ್ಮ ಆಧುನೀಕರಣಗೊಂಡ ಜೀವನಶೈಲಿಯಿಂದಾಗಿ ಅಟ್ಟ ಸೇರಿ ಮೂಲೆಗುಂಪಾಗಿರುವ ಸಾಧ್ಯತೆ ಅಧಿಕ.

                    

      
ಸಿದ್ಧವಾದ ಒತ್ತು ಶಾವಿಗೆಯನ್ನು ತಿನ್ನುವ ಬಗೆ ಹೇಗೆ?

ಇದನ್ನು ಬರೆಯುವಾಗ ಸಹಜವಾಗಿ ನನ್ನ ಮಾವನವರ ನೆನಪಾಗದೆ ಇದ್ದೀತೆ, ವೃದ್ಧರಾಗಿದ್ದ ನನ್ನ ಮಾವ ಡಯಾಬಿಟೀಸ್ ಕಾಯಿಲೆಯನ್ನೂ ಅಂಟಿಸಿಕೊಂಡಿದ್ದರು, ಸಾಲದಿದ್ದಕ್ಕೆ ಅದೇನೋ ಕೊಲೆಸ್ಟರಾಲ್ ಭೀತಿಯೂ ಅವರದಾಗಿತ್ತು. “ ನೋಡು, ನಿನ್ನ ರಸಾಯನ, ಒಗ್ಗರಣೆ ಯಾವುದೂ ಬೇಡ, ನನಗೆ ಶಾವಿಗೆ ಇರುವ ಹಾಗೆ ತಿನ್ನಲಿಕ್ಕೆ ಇಟ್ಟಿರು… “

ಬಾಳೆಹಣ್ಣು ರಸಾಯನ ಇದಕ್ಕೆ ಸೊಗಸಾಗಿ ಹೊಂದಿಕೆಯಾಗುವಂತಹುದಾಗಿದೆ, ನನ್ನ ಬಳಿ ಇವತ್ತು ಬಾಳೆಹಣ್ಣು ಇಲ್ಲ, ಅಂಗಡಿಯಿಂದ ತಂದ ಖರ್ಜೂರದ ಪ್ಯಾಕೆಟ್ ಇದೆ, ಖರ್ಜೂರದಿಂದ ರಸಾಯನ ಮಾಡೋಣ.

ಖರ್ಜೂರ ಹತ್ತೂ ಹದಿನೈದು ಇರಲಿ.
ಬಿಡಿಸಿ ಬೀಜ ತೆಗೆದು ಕುದಿಯುವ ನೀರು ಎರೆದು ಮುಚ್ಚಿ ಇರಿಸಿ.
ಒಂದು ಕಡಿ ತೆಂಗಿನಕಾಯಿ ತುರಿದು, ಅರೆದು ಕಾಯಿಹಾಲು ಮಾಡಿರಿಸಿ, ದಪ್ಪ ಹಾಲು ಮಾತ್ರ ಸಾಕು.
ಮೆತ್ತಗಾಗಿರುವ ಖರ್ಜೂರವನ್ನು ಕೈಯಲ್ಲಿ ತುಸು ಹಿಸುಕಿ ಇಟ್ಟು,
ಒಂದು ಅಚ್ಚು ಬೆಲ್ಲ ಪುಡಿ ಮಾಡಿ ಸೇರಿಸಿ,
ಅರ್ಧ ಚಮಚ ಎಳ್ಳು ಹುರಿದು ಗುದ್ದಿ,
ದಪ್ಪ ಕಾಯಿಹಾಲು ಎರೆಯುವಲ್ಲಿಗೆ
ರಸಾಯನ ಆಯ್ತು ಅನ್ನಿ.
ದ್ರಾಕ್ಷಿ ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ಹಾಕಿದಾಗ ಇನ್ನೂ ಸ್ವಾದಿಷ್ಟ ರಸಾಯನ ನಮ್ಮದಾಯಿತು.

ಕೇವಲ ಬೆಲ್ಲ ಹಾಗೂ ತೆಂಗಿನಕಾಯಿಹಾಲುಗಳ ಮಿಶ್ರಣವೂ ಶಾವಿಗೆಯ ರಸದೂಟಕ್ಕೆ ಸಾಕಾಗುತ್ತದೆ, ಇದನ್ನು ನಮ್ಮ ಕಡೆ ಬೆಲ್ಲಕಾಯಿಹಾಲು ಅನ್ನುವ ರೂಢಿ.

ಒತ್ತು ಶಾವಿಗೆ ಇದ್ದರೆ ಸಾಕು, ಶಾವಿಗೆ ಉಪ್ಕರಿ, ಶಾವಿಗೆ ಪುಳಿಯೋಗರೆ, ಶಾವಿಗೆ ಚಿತ್ರಾನ್ನ, ಶಾವಿಗೆ ಪುಲಾವ್, ಶಾವಿಗೆ ವೆಜಿಟೆಬಲ್ ಬಾತ್…. ಹೀಗೆ ಅಡುಗೆಯ ರಸರುಚಿಗಳನ್ನು ಜೋಡಿಸುತ್ತ ಹೋಗಬಹುದು.

               





                 

Friday 7 December 2018

ಚಟ್ಟಂಬಡೆಯ ಚಹಾಕೂಟ





“ ನಾಳೆ ಸಂಜೆ ಒಂದೈವತ್ತು ಜನ ಬಂದು ಸೇರುವುದಿದೆ... “
“ ಆಯ್ತು, ಬಂದೋರಿಗೆ ತಿಂಡಿತೀರ್ಥ ಆಗೋದು ಬೇಡವೇ.. “
“ ನೀನು ತಲೆ ಕೆಡಿಸ್ಕೋ ಬೇಡ, ಅಡುಗೆ ಗಣಪಣ್ಣನ ಕೈಲಿ ಹೇಳಿದ್ದಾಗಿದೆ, ಅವನೇ ಮಾಡಿ ತರ್ತಾನೆ… “
“ ಸರಿ ಹಾಗಿದ್ರೆ… “ ನನಗೂ ಬಿಡುವು.

ಹಿರಣ್ಯದ ಆವರಣದೊಳಗೆ ಅವಗಣಿತವಾಗಿದ್ದ ನಾಗಬನವನ್ನು ಪುನರ್ನಿಮಾಣ ಮಾಡಬೇಕಾದರೆ ಅಷ್ಟಮಂಗಲಪ್ರಶ್ನೆಯಲ್ಲಿ ದೇವೀ ಸಾನ್ನಿಧ್ಯವೂ ಆಸುಪಾಸಿನಲ್ಲಿ ಇದೆಯೆಂದು ದೈವಜ್ಞರ ಮುಖೇನ ತಿಳಿದು ಬಂದಿತ್ತು. ಆ ಪ್ರಕಾರವಾಗಿ ಕೊಲ್ಲೂರಿಗೂ ಹೋಗಿ ದೇವಿಯ ದರ್ಶನ ಮಾಡಿಕೊಂಡು ಬಂದಿದ್ದೆವು. ಈಗ ಮುಂದಿನ ಹೆಜ್ಜೆಯಾಗಿ ದೇವಿಗೊಂದು ಆಲಯ ಆಗಬೇಕಾಗಿದೆ. ಆ ಪೂರ್ವಿಭಾವಿ ಸಿದ್ಧತೆಗಳಿಗಾಗಿ ಊರಿನ ಹತ್ತೂ ಸಮಸ್ತರು ಸೇರಲಿರುವ ಸಭಾ ಕಾರ್ಯಕ್ರಮಕ್ಕೆ ಒಂದು ಚಹಾಕೂಟ.

ಐವತ್ತು ಜನ ಬಂದಿರ್ತಾರೆ ಅಂದಿದ್ರೂ ಗಣಪಣ್ಣನ ಚಟ್ಟಂಬಡೆಗಳು ಚಹಾಪಾನದೊಂದಿಗೆ ಮುಗಿಯುವುದೆಂತು, ಚಹಾ ಕೂಡಾ ಉಳಿಯಿತು. 15 - 20 ಚಟ್ಟಂಬಡೆಗಳು ಬಿಕರಿಯಾಗದೆ ಉಳಿದುವು.

“ ಈ ಚಹಾ ಫ್ರಿಜ್ ಒಳಗಿಟ್ಟರೆ ನಾಳೆಗೂ ಆದೀತು… “ ಸೇರಿದ್ದ ಮಹಿಳೆಯರಲ್ಲಿ ಅಕ್ಕಪಕ್ಕದವರು ಕೂಡಿ ಚಹಾ ಹಂಚಿಕೊಂಡಿದ್ದಾಯ್ತು.

ಚಟ್ಟಂಬಡೆಗಳನ್ನು ಪೊಟ್ಟಣಗಳಲ್ಲಿ ತುಂಬಿ ಆತ್ಮೀಯ ಸ್ನೇಹಿತರಿಗೆ ಕೊಟ್ಟಿದ್ದೂ ಆಯ್ತು.

“ ಹೌದಾ… ನಾವೂ ಬರುತ್ತಿದ್ದೆವಲ್ಲ! “

ಈಗ ಚಟ್ಟಂಬಡೆ ಮಾಡುವ ವಿಧಾನ ಬರೆಯೋಣ, ಕೇವಲ ತಿನ್ನುವ ಅತ್ಯಾಸಕ್ತಿ ಇದ್ದರೆ ಸಾಲದು, ಮಾಡಲೂ ತಿಳಿದಿರಬೇಕು. ಹೋಟಲ್ ಗೆ ಹೋಗಿ ಕೇವಲ ಚಹಾ ಕುಡಿಯಬೇಕಿದ್ರೂ ರೂಪಾಯಿ ಮೂವತ್ತು ಕೈಯಲ್ಲಿ ಇರಬೇಕು.

ಒಂದು ಲೋಟ ಕಡ್ಲೆ ಬೇಳೆ, ನೀರಿನಲ್ಲಿ ನೆನೆಸಿ ಇಡಬೇಕು.
ಎರಡು ಚಮಚ ಅಕ್ಕಿ ಹಿಟ್ಟು.
ರುಚಿಗೆ ಉಪ್ಪು.
ಕರಿಯಲು ಅರ್ಧ ಲೀಟರ್ ಅಡುಗೆಯ ಎಣ್ಣೆ.
ಉಳಿದಂತೆ ಮಸಾಲಾ ಸಾಮಗ್ರಿಗಳು ಏನೇನು?
ಕರಿಬೇವು, ಹಸಿಮೆಣಸು, ಶುಂಠಿ, ನೀರುಳ್ಳಿ, ಕೊತ್ತಂಬರಿ ಸೊಪ್ಪು. ಅಗತ್ಯಕ್ಕೆ ತಕ್ಕಂತೆ ಆಯ್ದು ಹೆಚ್ಚಿಟ್ಟು ಕೊಳ್ಳುವುದು.
ಒಂದು ಚಮಚ ಮೆಣಸಿನ ಹುಡಿ.

ತರಿತರಿಯಾಗಿ ಕಡ್ಲೆಬೇಳೆಯನ್ನು ನೀರು ತಾಕಿಸದೆ ರುಬ್ಬುವುದು, ನುಣ್ಣಗಾಗಲೂ ಬಾರದು, ಕೆಲವಾರು ಕಡ್ಲೆಕಾಳುಗಳು ಹುಡಿಯಾಗದಿದ್ರೂ ಆದೀತು.
ಒಂದು ತಪಲೆಗೆ ಎಲ್ಲ ಸಾಮಗ್ರಿಗಳನ್ನು ಹಾಕಿ ಕಲಸುವುದು.
ಸ್ವಲ್ಪ ಹೊತ್ತು ಬಿಟ್ಟು, ದೊಡ್ಡ ಲಿಂಬೆ ಗಾತ್ರದ ಉಂಡೆ ಮಾಡಿ, ಅಂಗೈಯಲ್ಲಿ ತಟ್ಟಿ ಚಟ್ಟೆ ಮಾಡಿಕೊಂಡು, ಕಾದ ಎಣ್ಣೆಗೆ ಹಾಕಿ, ಹೊಂಬಣ್ಣ ಬರುವಾಗ ತೆಗೆಯುವುದು. ಎಣ್ಣೆಯಲ್ಲಿ ಹಿಡಿಸುವಷ್ಟು ಒಂದೇ ಬಾರಿ ಹಾಕಿ ಕರಿಯುವುದು ಜಾಣತನ.

ಅಕ್ಕಿ ಹುಡಿ ಹಾಕುವುದರಿಂದ ಚಟ್ಟಂಬಡೆ ಗರಿಗರಿಯಾಗಿರುತ್ತದೆ.
ಶುಭ ಸಮಾರಂಭಗಳು, ಧಾರ್ಮಿಕ ಸಮಾವೇಶಗಳಲ್ಲಿ ಚಟ್ಟಂಬಡೆ ಮಾಡುವುದಿದ್ದರೆ ನೀರುಳ್ಳಿ ಹಾಕುವಂತಿಲ್ಲ.
ಕಡ್ಲೆಬೇಳೆಯೊಂದಿಗೆ ಉದ್ದಿನಬೇಳೆ, ತೊಗರಿಬೇಳೆ ಸಮಾನವಾಗಿ ಹಾಕಿ ಚಟ್ಟಂಬಡೆ ಮಾಡುವುದು ಸಾಂಪ್ರದಾಯಿಕ ವಿಧಾನ. ಒಂದು ಲೋಟ ಅಳತೆಯಲ್ಲಿ ಮೂರೂ ಬಗೆಯ ಬೇಳೆಗಳನ್ನು ಹೊಂದಿಸಿ ಮಾಡಿಕೊಳ್ಳಬಹುದು. ಮಕ್ಕಳಿಗೆ ಪುಷ್ಟಿದಾಯಕ ತಿಂಡಿಯೂ ಆಯ್ತು.
ಮಸಾಲಾ ಸಾಮಗ್ರಿಗಳ ಜೊತೆಗೆ ಇಂಗು ಕೂಡಾ ಹಾಕಿದ್ರೆ ಇನ್ನೂ ಪರಿಮಳ ಹಾಗೂ ರುಚಿಯೆಂದು ಗೌರತ್ತೆಯ ಒಕ್ಕಣೆಯೊಂದಿಗೆ ಚಟ್ಟಂಬಡೆ ಮಾಡುವ ವಿಧಿವಿಧಾನಗಳನ್ನು ತಿಳಿದಾಯ್ತು.