Pages

Ads 468x60px

Friday 27 September 2019

ಖಾರಾ ಪೊಂಗಲ್








ಹಿರಣ್ಯದ ನಾಗಬನ ಹಾಗೂ ಶ್ರೀದೇವಿ ದೇವಸ್ಥಾನಗಳಿಗೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ಒಂದು ಕೆರೆ, ಇದುವರೆಗೆ ಪೊಟ್ಟು ಕೆರೆ ಆಗಿ ಇದ್ದಿತು.

" ಹೇಗೂ ನಾಗಬನದ ಎದುರುಗಡೆ ಇದೆ, ಸ್ತ್ರೀಯರ ಶೋಕನಾಶಕವಾದ ಅಶೋಕೆಯೂ ಇಲ್ಲಿ ಇರುವುದರಿಂದ ಈ ಕೆರೆಯನ್ನು ಚಂದ ಮಾಡಿದರಾದೀತು, ಈ ಜಾಗಕ್ಕೇ ಒಳ್ಳೆಯ ನೋಟ ಬಂದೀತು... " ಎಂದು ನಮ್ಮ ಮನೆ ಯಜಮಾನರ ಚಿಂತನೆ.

ಹ್ಞೂಗುಟ್ಟಲು ನಮ್ಮ ಬಳಗ ಸಾಕಷ್ಟು ದೊಡ್ಡದಾಗಿಯೇ ಇದೆ. ದೇಗುಲದ ಅನತಿ ದೂರದಲ್ಲಿ ಪರಿವಾರ ದೈವಗಳಿಗೆ ಚಾವಡಿಮನೆಯೂ, ಅಣ್ಣಪ್ಪಪಂಜುರ್ಲಿ ದೈವಗಳ ಕಟ್ಟೆಯೂ ಎದ್ದು ನಿಂತಿವೆ. ದೈವಗಳಿಗೆ ಸಂಧ್ಯಾಕಾಲದಲ್ಲಿ ದೀಪ ಬೆಳಗಿಸಿ ಇಡಬೇಕು. ಅದಕ್ಕಾಗಿ ನಿಯೋಜಿತರಾದವರಿಗೆ ವಾಸ್ತವ್ಯದ ವ್ಯವಸ್ಥೆ, ಆಧುನಿಕ ಪರಿಭಾಷೆಯಲ್ಲಿ ಔಟ್ ಹೌಸ್ ಅನ್ನೋಣ, ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದೆ.

ಇಲ್ಲಿರುವ ವೆಂಕಪ್ಪ ಶೆಟ್ಟಿ, ನುರಿತ ಕೆಲಸಗಾರನೂ ಆಗಿರುವುದರಿಂದ ಕೂಡಲೇ ಕಾರ್ಯತತ್ಪರನಾದ.
" ನೋಡೂ, ನಾಳೆ ಪೊಟ್ಟುಕೆರೆಯ ರಿಪೇರಿಗೆ ಇನ್ನೂ ಇಬ್ಬರು ಬರುತ್ತಾರೆ. ಹತ್ತೂ ಗಂಟೆಗೆ ಚಹಾ ತಿಂಡಿ ಕೊಟ್ಬಿಡು, ಮದ್ಯಾಹ್ನಕ್ಕೆ ಸಾಂಬಾರ್, ಮಜ್ಜಿಗೆ, ಉಪ್ಪಿನಕಾಯಿ ಸಾಕು.. ಕುಚ್ಚುಲಕ್ಕಿ ಅನ್ನ ಅವರೇ ಮಾಡಿಕೊಳ್ತಾರೆ..."

" ಆಯಿತು.. " ನಾನು ಹಿರಣ್ಯ ಮನೆಗೆ ಬಂದಾಗ, ಇವತ್ತಿಗೆ ಅಂದಾಜು ಮೂವತ್ತೈದು ವರ್ಷ ಅಂತಿಟ್ಕೊಳ್ಳಿ, ಆ ಕೆರೆ ಕೆಸರಿನಿಂದ ತುಂಬಿದ್ದರೂ ತಾವರೆಯ ಹೂಗಳು ಅರಳಿ ನಳನಳಿಸುತ್ತ ಇದ್ದದ್ದು ಈಗಲು ಹಸಿರು ನೆನಪು. ಇಂತಹ ಕೆರೆಗೆ ಕಾಯಕಲ್ಪವಾಗಲಿದೆ ಎಂದಾಗ ಮನ ತುಂಬಿ ಬಂದಿತು, ಹೊಸ ಹುರುಪಿನಿಂದ ನನ್ನ ಅಡುಗೆಯ ಸಿದ್ಧತೆ ಆರಂಭ ಆಯ್ತು.

ಏನಾಯ್ತಪಾ ಅಂದ್ರೆ ಅಡುಗೆಯ ಪ್ರಮಾಣ ಹೆಚ್ಚಾಗಿ ಅನ್ನ ಉಳಿಯಿತು.
ನಾಳೆ ಈ ಉಳಿದ ಅನ್ನದ ಚಿತ್ರಾನ್ನ ಮಾಡೂದು, ಬೇಕಿದ್ದರೆ ಮಸಾಲೆ ಅವಲಕ್ಕೀ, ಬಾಳೆಹಣ್ಣು.. ಹತ್ತು ಗಂಟೆಯ ಚಹಾದೊಂದಿಗೂ ಸಾಕಾಗುವಂತೆ ಮಾಡಬೇಕಿದೆ, ಇರಲಿ ಎಂದು ಮಲಗುವ ಮೊದಲು ಒಂದು ಲೋಟ ಪಚ್ಚೆಸ್ರುಕಾಳು ನೀರೆರೆದು ಇಟ್ಟೆ.

" ಏನಾಯ್ತೂ ಹೆಸ್ರುಕಾಳು? "
ರುಚಿಗೆ ಉಪ್ಪು ಸಹಿತವಾಗಿ ಕುಕ್ಕರಿನಲ್ಲಿ ತುಂಬಿಸಿ, ನೀರೆರೆದು ಎರಡು ಸೀಟಿ ಕೂಗಿಸಿದ್ದಾಯ್ತು.
ನನ್ನ ಇಲೆಕ್ಟ್ರಿಕ್ ರೈಸ್ ಕುಕ್ಕರಿನಲ್ಲಿ ಉಳಿದ ಅನ್ನ ಸಾಕಷ್ಟು ಇತ್ತು, ಚೆನ್ನಾಗಿಯೇ ಇತ್ತು ಅನ್ನಿ.

ತೆಂಗಿನಕಾಯಿ ತುರಿಯಿರಿ.
ನಾಲ್ಕಾರು ಹಸಿಮೆಣಸು ಸಿಗಿಯಿರಿ.
ಶುಂಠಿ, ಸಿಪ್ಪೆ ಹೆರೆದು, ಚಿಕ್ಕದಾಗಿ ಹೆಚ್ಚಿರಿ.
ಕೊತ್ತಂಬರಿ ಸೊಪ್ಪು ಕತ್ತರಿಸಿ.
ಕರಿಬೇವು ಸಿದ್ಧಪಡಿಸಿ,

ಬಾಣಲೆಯಲ್ಲಿ ನಾಲ್ಕು ಚಮಚ ತೆಂಗಿನೆಣ್ಣೆ ಎರೆದು ಒಲೆಯ ಮೇಲಿರಿಸಿ,
ಸಾಸಿವೆ ಸಿಡಿದಾಗ,
ಮೇಲೆ ಸಿದ್ಧಪಡಿಸಿದಂತಹ ಸಾಹಿತ್ಯಗಳನ್ನು ಹಾಕುತ್ತ ಬನ್ನಿ.

ಕುಕ್ಕರಿನಲ್ಲಿರುವ ಪಚ್ಚೆಸ್ರು ಬೆಂದಿದೆ, ನೀರು ಬಸಿಯಿರಿ. ಚೆಲ್ಲದಿರಿ, ಮಧ್ಯಾಹ್ನದ ಅಡುಗೆಗೆ ಬಳಸಿರಿ.
ಹೆಸ್ರುಕಾಳನ್ನು ಕೊತ್ತಂಬರಿ ಸೊಪ್ಪು ಕೂಡಿ ಅನ್ನವನ್ನೂ ಸುರಿಯಿರಿ.
ರುಚಿಗಾಗಿ ಉಪ್ಪಿನ ಹುಡಿ, ಬೇಕಿದ್ದರೆ ಸಕ್ಕರೆ ಯಾ ಬೆಲ್ಲ ಹಾಕಬಹುದು.
ತುಸು ತೆಂಗಿನತುರಿ ಹಾಕಲೇಬೇಕು, ಸೌಟಾಡಿಸಿ, ಕೆದಕಿ ಬಿಸಿಯೇರುವಷ್ಟು ಹೊತ್ತು ಉರಿಯಲ್ಲಿ ಮುಚ್ಚಿ ಇಡಬೇಕು, ನಂತರ ಕೆಳಗಿಳಿಸಿ ಬಿಸಿ ಕಾಫಿಯೊಂದಿಗೆ ಹಾಯಾಗಿ ತಿನ್ನುತ್ತಿರಬೇಕು.
ಆ ವೇಳೆಗೆ ಬೆಂಗಳೂರಿಂದ ಫೋನ್ ಬರಬೇಕು.
" ತಿಂಡಿ ಆಯ್ತಾ.."
" ಆಯ್ತು ನೋಡು, ಮಾಡಿದ್ದು ಹೇಗೆ ಗೊತ್ತುಂಟೋ.. " ವರದಿ ಒಪ್ಪಿಸಲೇ ಬೇಕು.
" ಓ, ಖಾರಾ ಪೊಂಗಲ್ ! ನಂಗೆ ತುಂಬ ಇಷ್ಟ.. "



ಬ್ಲಾಗ್ ಓದುಗರಿಗೆ ನವರಾತ್ರಿಯ ಶುಭಾಶಯಗಳು, ಶ್ರೀದೇವಿಯ ಕರುಣೆ ಸದಾ ನಮ್ಮೊಂದಿಗಿರಲಿ.

Saturday 21 September 2019

ಕೆಸುವಿನ ದಂಟಿನ ಗಸಿ








ಅಡುಗೆಯ ಹೊತ್ತು, ವಿದ್ಯುತ್ ಕೈ ಕೊಟ್ಟಿದೆ. ಅಡುಗೆಮನೆಯ ಉಳಿದೆಲ್ಲ ಕೈಚಳಕ ಮಾಡಿದ್ದಾಯ್ತು, ತೆಂಗಿನಕಾಯಿ ಅರೆಯದೆ ಸಾಂಬಾರ್ ಆಗಬೇಕಿದೆ.

ಆಗಬೇಕು, ಹೇಗೆ?
ಅರ್ಧ ಲೋಟ ತೊಗರಿಬೇಳೆ ತೊಳೆದು, ಮುಳುಗುವಷ್ಟು ನೀರೆರೆದು ಕುಕ್ಕರಿನಲ್ಲಿ ಬೇಯಿಸುವುದು, ಭರ್ತಿ ಮೂರು ಸೀಟಿ ಹಾಕಲಿ, ಬೇಳೆ ಮೆತ್ತಗಾದಷ್ಟೂ ಉತ್ತಮ.

ತರಕಾರಿ ಯಾವುದು?
ನಾಲ್ಕು ದಿನ ಹಿಂದೆ ಕೆಸುವಿನೆಲೆಯ ಪತ್ರೊಡೆ ಮಾಡಿದಾಗ ಕೆಸುವಿನ ದಂಟು ಸಹಿತವಾಗಿ ಕೊಯ್ದು ಇಟ್ಟಿದ್ದರಲ್ಲಿ ದಂಟುಗಳು ಹಾಗೇನೆ ತರಕಾರಿ ಬುಟ್ಟಿಯಲ್ಲಿ ಬಿದ್ದಿವೆ. ದಂಟುಗಳಿಗೆ ಒಂದು ಗತಿ ಕಾಣಿಸೋಣ.

ಕೆಸುವಿನ ದಂಟು ತುಸು ಬಾಡಿರಬೇಕು, ಹೊರಸಿಪ್ಪೆಯ ನಾರು ತೆಗೆಯುವುದು ಬಹಳ ಸುಲಭದ ಕಾರ್ಯ. ಅಲ್ಪಸ್ವಲ್ಪ ನಾರು ಉಳಿದರೂ ತೊಂದರೆಯಿಲ್ಲ, ಕರಿಕೆಸು ತುರಿಸುವ ಭಯವಿಲ್ಲ.
ಸಮಾನ ಗಾತ್ರದ ಹೋಳು ಮಾಡುವುದು.
ಬೇಯಿಸಿಟ್ಟ ತೊಗರಿಬೇಳೆಗೆ ಕೆಸುವಿನ ದಂಟಿನ ಹೋಳುಗಳನ್ನು ಸೇರಿಸಿ, ರುಚಿಗೆ ಸೂಕ್ತವಾಗುವಂತೆ ಉಪ್ಪು ಹಾಗೂ ಹುಳಿ ಹಾಕಿ ಬೇಯಿಸಿ. ಸಿಹಿ ಇಷ್ಟಪಡುವವರು ಬೆಲ್ಲವನ್ನೂ ಹಾಕಬಹುದು.
ಕುಕ್ಕರ್ ಒಂದು ಸೀಟಿ ಹಾಕಿದೊಡನೆ ಕೆಳಗಿಳಿಸಿ, ನಿಧಾನವಾಗಿ ಒತ್ತಡ ತೆಗೆಯಿರಿ, ಬೆಂದಿರುತ್ತದೆ.

ಒಗ್ಗರಣೆಗೆ,
ಏಳೆಂಟು ಸುಲಿದ ಬೆಳ್ಳುಳ್ಳಿ,
ಒಂದೆಸಳು ಕರಿಬೇವು,
ಮೂರು ಚಮಚ ತೆಂಗಿನೆಣ್ಣೆ,
ಸಾಸಿವೆ, ಒಣಮೆಣಸಿನ ಚೂರುಗಳು,
ಒಗ್ಗರಣೆ ಸಿದ್ಧ, ಇದೀಗ ಗ್ಯಾಸ್ ಆರಿಸಿ.
ಉದ್ದಿನಕಾಳಿನಷ್ಟು ಇಂಗು ನೀರಿನಲ್ಲಿ ಕರಗಿಸಿ ಮೊದಲೇ ಇಟ್ಟುಕೊಂಡಿರಬೇಕು, ಇಂಗಿನ ನೀರನ್ನು ಒಗ್ಗರಣೆಗೆ ಎರೆಯಿರಿ.
ತಲಾ ಅರ್ಧ ಚಮಚ ಸಾರಿನ ಹುಡಿ, ಮೆಣಸಿನ ಹುಡಿ, ಗರಂ ಮಸಾಲಾ ಹುಡಿ, ಚಿಟಿಕೆ ಅರಸಿಣಗಳು ಒಗ್ಗರಣೆಗೆ ಬೀಳಲಿ.
ಕುಕ್ಕರ್ ಒಳಗಿರುವ ಬೆಂದ ಅಡುಗೆಗೆ ಈ ಮಸಾಲಾ ಒಗ್ಗರಣೆ ಸುರಿಯಿರಿ.

ಸೌಟಾಡಿಸಿ, ರುಚಿಕರವಾಗಿದೆಯಲ್ಲ!
ಕೆಸುವಿನ ದಂಟಿನ ಗಸಿ ಸಿದ್ಧವಾಗಿದೆ. ಅನ್ನ ಮಾತ್ರವಲ್ಲದೆ ಚಪಾತಿ, ದೋಸೆ, ಇಡ್ಲಿಗಳಿಗೂ ಹೊಂದಿಕೊಳ್ಳುವ ಅಡುಗೆ ನಮ್ಮದಾಗಿದೆ.

ಈ ಗಸಿಯನ್ನು ಸಾರು ಮಾಡುವುದು ಹೇಗೆ?
ತೊಗರಿಬೇಳೆಯ ಪ್ರಮಾಣ ಕಡಿಮೆ ಮಾಡಿದರಾಯಿತು, ಕೆಸುವಿನ ದಂಟಿನ ಸಾರು ಅನ್ನಿ, ಹಪ್ಪಳವನ್ನೂ ಹುರಿದು ಸಾರಿನೂಟ ಬೇಕಾದಷ್ಟಾಯಿತು ಅನ್ನಿ.

ಕೆಸುವಿನ ದಂಟಿನ ಬೋಳು ಹುಳಿ ಸಾಮಾನ್ಯವಾಗಿ ಮಾಡುವ ಅಡುಗೆ. ಇದಕ್ಕೆ ಬೇಳೆಕಾಳು ಬೇಡ, ಉಪ್ಪು ಹುಳಿಯೊಂದಿಗೆ ಬೆಂದ ಹೋಳುಗಳಿಗೆ ಬೆಳ್ಳುಳ್ಳಿ ಒಗ್ಗರಣೆ ಬಿದ್ದರೆ ಸಾಕು.

ನವರಾತ್ರಿ ಸಮಯದಲ್ಲಿ ಹೊಸ ಅಕ್ಕಿ ಊಟ (ಹೊಸ್ತು ) ಮಾಡುವ ಸಂಪ್ರದಾಯವಿದೆ. ಪ್ರಕೃತಿಯಲ್ಲಿ ದೊರೆಯುವ ವಿಧವಿಧವಾದ ತಾಜಾ ಮಾಲುಗಳಿಂದಲೇ ಭೋಜನ ಸಿದ್ಧ ಪಡಿಸುವ ಪದ್ಧತಿ ಇಲ್ಲಿದೆ. ಕೆಸುವಿನ ದಂಟಿನ ಬೆಂದಿ ಆಗಲೇಬೇಕು.

ಬೆಂದಿ ಹೇಗೆ?
ತೊಗರಿಬೇಳೆ ಬೇಡ, ಕೆಸುವಿನ ದಂಟುಗಳನ್ನು ಈಗಾಗಲೇ ಹೇಳಿದ ಕ್ರಮದಲ್ಲಿ ಬೇಯಿಸುವುದು.
ಅರ್ಧ ಕಡಿ ತೆಂಗಿನತುರಿಯನ್ನು ನಾಲ್ಕು ಒಣಮೆಣಸು ಕೂಡಿ ನುಣ್ಣಗೆ ಅರೆದು ಸೇರಿಸಿ, ಕುದಿಸಿ ಒಗ್ಗರಣೆ ಕೊಡುವುದು. ಬೆಳ್ಳುಳ್ಳಿ ಗಿಳ್ಳುಳ್ಳಿ ಬೇಡ. ಇದು ಒಂದು ಸಾಂಪ್ರದಾಯಿಕ ಅಡುಗೆ.

ಸೂಚನೆ: ನಾನು ಅಡುಗೆಗೆ ಬಳಸಿದ್ದು ಕರಿಕೆಸು, ಇದಕ್ಕೆ ಏನೂ ತರಿಕೆಯಿಲ್ಲ, ಮಾಮೂಲಿ ಅಡುಗೆಗೆ ಹಾಕುವ ಹುಳಿ ಸಾಕು. ಕಾಡುಕೆಸುವಿನ ದಂಟು ಅಡುಗೆಗೆ ಬಳಸಬಹುದಾದರೂ ಹುಣಸೆಹುಳಿ ಜಾಸ್ತಿ ಹಾಕಬೇಕು.

ಕರಿಕೆಸು, Colocasia esculenta ಒಂದು ಹಿತ್ತಲ ಬೆಳೆ ಹಾಗೂ ಅಲಂಕಾರಿಕ ಸಸ್ಯ. ಚೆನ್ನಾಗಿ ನೀರು ದೊರೆಯುವ ಸ್ಥಳದಲ್ಲಿ ನೆಟ್ಟರೆ ಸದಾ ಕಾಲವೂ ನಳನಳಿಸುತ್ತಿರುತ್ತದೆ. ಬೇಕಿದ್ದಾಗ ಕೊಯ್ದು ದಂಟುಗಳ ಸಾಂಬಾರ್, ಸೊಪ್ಪಿನ ಪತ್ರೊಡೆ ತಿಂದು ಆನಂದಿಸಬಹುದು. ಚೇಂಬು ಎಂದು ಕರೆಯಲ್ಪಡುವ ಇದರ ಗೆಡ್ಡೆ ಪುಷ್ಠಿದಾಯಕ ಆಹಾರ.


Thursday 12 September 2019

ಗಡಿ ಮದ್ದಿನ ಸೊಪ್ಪು








" ಅಕ್ಕ, ತೋಟದ ಹುಲ್ಲು ತೆಗೆಯುವ ಕೆಲಸ ಉಂಟಲ್ಲ, ಕೈಯೆಲ್ಲ ಗಾಯ..."
" ಕತ್ತಿ ತಾಗಿತೋ ಹೇಗೆ? "
" ಕತ್ತಿ ಗೀರಿದ್ದಲ್ಲ, ನಾಚಿಕೆಮುಳ್ಳು ಕೀಳುವಾಗ.. " ಅಂಗೈ ಪ್ರದರ್ಶಿಸಿದ ಚೆನ್ನಪ್ಪ.
ಸ್ನಾನದ ಮನೆಯಿಂದ ಹೊರ ಬರುತ್ತಿದ್ದ ಗೌರತ್ತೆ, " ಆ ಗಡಿ ಮದ್ದಿನ ಸೊಪ್ಪಿನ ಎಣ್ಣೆ ಮಾಡಿ ಹಚ್ಚಿಕೊಳ್ಳಲಿ... " ಎಂದರು.
" ಅದು ಯಾವ ಸೊಪ್ಪೂ? "
" ಅವನೇ ತಂದು ಕೊಡ್ತಾನೆ ಬಿಡು..."
" ಎಣ್ಣೆ ಏನೂ ಬೇಡ, ಹಾಗೇ ಸುಮ್ಮನೆ ಕಮ್ಯುನಿಸ್ಟ್ ಸೊಪ್ಪಿನಲ್ಲಿ ಉಜ್ಜಿಕೊಂಡ್ರೂ ನಡೆಯುತ್ತೆ,. ನಾಯಿತುಳಸಿಯೂ ಆಗ್ತದೆ.. "
ನನಗೆ ತಡೆಯದ ಕುತೂಹಲ. " ನೀನು ಸೊಪ್ಪು ತಾ, ಸೊಪ್ಪಿನೆಣ್ಣೆ ಮಾಡಿ ಕೊಟ್ಟರಾಯಿತಲ್ಲ.." ಸಮಜಾಯಿಸಿ ನನ್ನದು.
" ತರುವುದೆಂತದು, ಇಲ್ಲೇ ಉಂಟು.. " ಗೋಡೆ ಬದಿಯಲ್ಲಿ ಬೆಳೆದಿದ್ದ ಗಿಡದ ಎಲೆಗಳನ್ನು ಕಿತ್ತು ಕೊಟ್ಟ.
" ಓ.. ಇದು ಜರಿ ಗಿಡ. "

" ಬಂತಾ ಸೊಪ್ಪು? " ಗೌರತ್ತೆಯ ನಿರ್ದೇಶನಾಸಾರ ಎಣ್ಣೆ ತಯಾರಿಸಲಾಯಿತು.
" ನಾಲ್ಕು ಚಮಚ ಎಣ್ಣೆ ಈ ತಪಲೆಗೆ ಹಾಕು. "
" ಒಲೆ ಮೇಲೆ ಇಡು.."
 " ಒಗ್ಗರಣೆಗೆ ಕರಿಬೇವಿನೆಲೆ ಹಾಕುವ ಹಾಗೆ ಇದರ ಎಲೆಯನ್ನೂ ಹಾಕೂದು, ಒಂದು ಮುಷ್ಟಿ ಸಾಕು.."
" ಚಟಚಟ ಸದ್ದು ನಿಲ್ಲಬೇಕು, ಸೊಪ್ಪಿನ ಸಾರ ಎಣ್ಣೆಗೆ ಬಂತು ನೋಡು... ಈಗ ಗ್ಯಾಸ್ ಆರಿಸು, ಎಣ್ಣೆ ಕರಟಿಹೋಗಬಾರದು. "
ಎಣ್ಣೆಯನ್ನು ಪುಟ್ಟ ಶೀಸೆಯಲ್ಲಿ ತುಂಬಿಸಿಟ್ಟೆ.

ತಂಪು ವಾತಾವರಣದಲ್ಲಿ ತನ್ನ ವಲಯವನ್ನು ವಿಸ್ತರಿಸುತ್ತ ಬೆಳೆಯುವ ಈ ಜರಿ ಗಿಡ ಸದಾ ಹಚ್ಚಹಸಿರು.. ಕಾಂಡದಲ್ಲಿ ಕಪ್ಪು ಕೂದಲಿನಂತಹ ಬಳ್ಳಿಗಳು ಇಳಿದಿರುತ್ತವೆ, ಹಾಗಾಗಿ ಆಂಗ್ಲ ಭಾಷಾ ಪಂಡಿತರು ಇದನ್ನು Maidenhair fern, walking fern ಎಂದಿದ್ದಾರೆ. ಸಸ್ಯವಿಜ್ಞಾನಿಗಳು adiantum ಅಂದಿದ್ದಾರೆ.

ತಲೆಬೇನೆ, ಕೂದಲು ಉದುರುವ ರೋಗ, ತಲೆಹೊಟ್ಟುಗಳಿಗೆ ಈ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ನಿವಾರಣೆ ಸಾಧ್ಯವಿದೆ.

ಅಸ್ತಮಾ, ಶ್ವಾಸಸಂಬಂಧಿ ಕಾಯೀಲೆ, ಮಧುಮೇಹ, ಬೊಜ್ಜು, ಇತ್ಯಾದಿ ಅಗಣಿತ ಕಾಯಿಲೆಗಳಿಗೆ ಔಷಧಿಯೆಂದು ಪ್ರಾಚೀನ ಪರ್ಶಿಯನ್ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಪರ್ಶಿಯಾದಿಂದ ವಿದ್ವಾಂಸರು ಭಾರತಕ್ಕೆ ಬರುತ್ಕಿದ್ದರಂದು ಇತಿಹಾಸದ ಅಭ್ಯಾಸಿಗಳಿಗೆ ತಿಳಿದಿದೆ, ಮೂಲ ಅಕರ ಗ್ರಂಥವು ಸಂಸ್ಕೃತದಲ್ಲಿ ಇದ್ದಿರಬೇಕು. ಏನೇ ಆಗಿರಲಿ, ಸಂಶೋಧನಾಸಕ್ತರನ್ನು, ಅಧ್ಯಯನಶೀಲರನ್ನು ತನ್ನತ್ತ ಸೆಳೆಯುವ ಶಕ್ತಿ ಈ ಪುಟ್ಟ ಸಸ್ಯದ್ದು.

ಆ್ಯಂಟಿ ಓಕ್ಸಿಡೆಂಟ್, ಆ್ಯಂಟಿಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್ ಎಂದು ಬಿರುದಾಂಕಿತವಾಗಿರುವ ಈ ಸಸ್ಯಸಮೂಹ ಇರುವಲ್ಲಿ ಪರಿಸರ ಪರಿಶುದ್ಧವಾಗಿರುತ್ತದೆ ಎಂದೇ ತಿಳಿಯಿರಿ. ಮನೆಯ ಒಳಾಂಗಣದಲ್ಲಿ ಸಸ್ಯಗಳನ್ನು ಸಾಕುವ ಹವ್ಯಾಸಿಗಳು ಈ ಜರಿ ಸಸ್ಯವನ್ನೂ ಸಾಕಿ ಸಲಹುವುದು ಉತ್ತಮ.




.
ಟಿಪ್ಪಣಿ: ಈ ಬರಹಕ್ಕೆ ಕಾರಣವಾದ ಕಿರುಮಾಹಿತಿ ಒದಗಿಸಿದವರು ಶ್ರೀಯುತ ಕೃಷ್ಣಕುಮಾರ್ ಬೋನಂತಾಯ, ಬೆಂಗಳೂರು.