Pages

Ads 468x60px

Saturday 26 October 2019

ಚಿಗುರೆಲೆಗಳ ದೋಸೆ




ಸ್ವಾತಿ ಮಳೆ ಹನಿಯುತ್ತಿದೆ, ಚಳಿಯೂ ಬೇರೆ, ಮನೆಯೊಳಗೇ ಇದ್ದು ಜಡ್ಡು ಹಿಡಿದಂತಾಗಿತ್ತು. ಮಳೆ ಬಿಟ್ಟ ಸಮಯ ನೋಡಿ ಪುಟ್ಟ ಕೈಗತ್ತಿಯೊಂದಿಗೆ ಹಿತ್ತಲ ಅಂಗಳಕ್ಕಿಳಿದಾಗ ಕಾಡಿನಂತೆ ಬೆಳೆದಿದ್ದ ಸಸ್ಯಗಳ ಸ್ವಾಗತ ದೊರೆಯಿತು. " ಅತ್ತಿತ್ತ ಹೋಗಲೂ ದಾರಿಯಿಲ್ಲವೇ ಶಿವನೇ... " ಎನ್ನುತ್ತ ಕೈಗತ್ತಿ ಅಡ್ಡಾಡಿತು. ಎತ್ತರವಾಗಿ ಬೆಳೆದಿದ್ದ ಒಂದು ಸಸ್ಯ ಧರೆಗುರುಳಿತು. " ಏನು ಹೂವುಗಳು! ಕಾಯಿಗಳೂ ಹಣ್ಣುಗಳೂ ಸೊಗದ ನೋಟ ಬೀರಿದುವು.  





ಮುಡಿಯಲಾರದ ಹೂವುಗಳ ತಿನ್ನಲಾಗದ ಹಣ್ಣುಗಳ ಗುಚ್ಛ ಗೃಹಾಲಂಕರಣದ ಶೋಭೆಯನ್ನು ಹೆಚ್ಚಿಸಿದ್ದು ಸುಳ್ಳಲ್ಲ.

ಕುಡಿ ಚಿಗುರುಗಳನ್ನು ಅಡುಗೆಗಾಗಿ ತೆಗೆದಿರಿಸಲಾಯಿತು. ಏನು ಮಾಡಲಿ? ಚಿಗುರೆಲೆಗಳ ತಂಬುಳಿ...
ಅದು ಹಳೆಯದಾಯ್ತು, ಏನೂ ಒಂದು ಹೊಸತನ ತರೋಣ.

ಚಿಗುರೆಲೆಗಳನ್ನು ಎಳೆಯ ದಂಟು ಸಹಿತವಾಗಿ ಚಿಕ್ಕದಾಗಿ ಹೆಚ್ಚಿಡುವುದು.
ಅರ್ಧ ಲೋಟ ಅಕ್ಕಿ ಹಿಟ್ಟು
ಅರ್ಧ ಲೋಟ ಕಡ್ಲೆ ಹಿಟ್ಟು
ನೀರೆರೆದು ಬೆರೆಸಿ ದೋಸೆ ಹಿಟ್ಟಿನ ಸಾಂದ್ರತೆ ಬರಲಿ.

2 ಚಮಚ ತೆಂಗಿನತುರಿಯೊಂದಿಗೆ ರುಚಿ ಹಾಗೂ ಸುವಾಸನೆಗೆ ತಕ್ಕಷ್ಟು ಒಣಮೆಣಸು, ಕೊತ್ತಂಬರಿ, ಜೀರಿಗೆ ಅರೆಯಿರಿ, ನುಣ್ಣಗಾಗಬೇಕೆಂದೇನೂ ಇಲ್ಲ. ಹಿಟ್ಟಿಗೆ ಕೂಡಿಸಿ.

ನನ್ನ ಅಡುಗೆಯ ಸಮಯದಲ್ಲಿ ವಿದ್ಯುತ್ ಹೋಗಿತ್ತು. ಮೆಣಸಿನಹುಡಿ, ಸಾರಿನಹುಡಿ ಹಾಕಬೇಕಾಗಿ ಬಂದಿತು.
ತೊಂದರೆಯಿಲ್ಲ, ಹೇಗೂ ನಡೀತದೆ ಅನ್ನಿ.

ಹೆಚ್ಚಿಟ್ಟ ಚಿಗುರೆಲೆಗಳನ್ನು ಬೆರೆಸಿ, ರುಚಿಗೆ ಸೂಕ್ತವಾಗುವಂತೆ ಉಪ್ಪು ಬೀಳಲಿ.

ದೋಸೆಯಂತೆ ಎರೆಯಿರಿ, ತುಪ್ಪ ಸವರಿ ಎರಡೂ ಬದಿ ಬೇಯಿಸಿ. ಪುಟ್ಟ ಮಕ್ಕಳಿಗೆ ಪುಟ್ಟ ಪುಟ್ಟ ದೋಸೆ ಎರೆದು ಬೆಣ್ಣೆಯೊಂದಿಗೆ ತಿನ್ನಲು ನೀಡಿ. ಸಂಜೆಯ ಚಹಾದೊಂದಿಗೆ ಸವಿಯಿರಿ.

" ಹೌದೂ, ಯಾವ ಸೊಪ್ಪು ಅಂದ್ರೀ? "
" ಚಕ್ರಮುನಿ.. ವಿಟಮಿನ್ ಸೊಪ್ಪು, ಸರ್ವಸಾಂಬಾರ್ ಸೊಪ್ಪು ಇತ್ಯಾದಿ ಬಿರುದಾಂಕಿತ ಸಸ್ಯ ಇದು. ಆಂಗ್ಲ ಭಾಷೆಯಲ್ಲಿ star gooseberry ಎಂದೂ ಸಸ್ಯವಿಜ್ಞಾನಿಗಳು sauropus androgynus ಅಂದಿದ್ದಾರೆ.


ಇದರ ಕಾಂಡದಿಂದಲೇ ಸಸ್ಯಾಭಿವೃದ್ಧಿ, ಎಲ್ಲೇ ಕತ್ತರಿಸಿ ಬಿಸುಟರೂ ಬಲಿಷ್ಠವಾದ ಕಾಂಡದ ತುಂಡು ಇದ್ದರೆ ಸಾಕು ಚಿಗುರಿ ಬೆಳೆಯುವ ಈ ಗಿಡದ ಸಾಕುವಿಕೆ ಕಷ್ಟವೇನಲ್ಲ.



Sunday 20 October 2019

ಗೌರತ್ತೆಯ ಪುಳಿಂಜಿ







ಅಕ್ಟೋಬರ್, 17ರ ಸಂಕ್ರಾಂತಿ ಬಂದಿದೆ, ವಿಶೇಷತೆ ಏನೆಂದರೆ ಇದು ಕಾವೇರಿ ಸಂಕ್ರಮಣ. ಈ ಬಾರಿಯ ತೀರ್ಥಸ್ನಾನವು ಸರ್ವಪಾಪ ನಾಶಿನಿ ಎಂದೇ ಪ್ರಸಿದ್ಧವಾಗಿದೆ. ನಾವೂ ತೀರ್ಥಸ್ನಾನದಿಂದ ಪುನೀತರಾಗೋಣ.

ಮುಂಜಾನೆಯಿಂದಲೇ ಕ್ಷೇತ್ರದಲ್ಲಿ ಮಂಗಳಕಾರ್ಯಗಳು ಆರಂಭವಾಗಲಿದ್ದು ಶ್ರೀದೇವಿಯ ಕಲಶಾಭಿಷೇಕದ ನಂತರವೇ, ಅಂದಾಜು 9 ಗಂಟೆಯ ಹೊತ್ತಿಗೆ ಭಕ್ತಜನರ ತೀರ್ಥಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ..

ಸಂಕ್ರಮಣದ ದಿನ ಎಂದಿನಂತೆ ಹಿರಣ್ಯ ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಸಾಯಂಕಾಲ ಭಜನೆ, ದುರ್ಗಾಪೂಜೆ ಇರುತ್ತದೆ. ತದನಂತರ ಅನ್ನಪ್ರಸಾದವನ್ನೂ ಸ್ವಿಕರಿಸಬೇಕಾಗಿ ಭಕ್ತಬಾಂಧವರಲ್ಲಿ ವಿನಂತಿ.

ಇದು ನಮ್ಮ ವಾಟ್ಸಪ್, ಫೇಸ್ ಬುಕ್ ಮಾಧ್ಯಮಗಳಲ್ಲಿ ಹರಿಯಬಿಟ್ಟ ಪ್ರಕಟಣೆ.

ಇದುವರೆಗೆ ಎಲ್ಲಿಗೂ ತೀರ್ಥಸ್ನಾನಕ್ಕೆಂದು ಹೋಗದ ಗೌರತ್ತೆಯೂ ನಾನೂ ಸ್ನಾನ ಮಾಡಿ ಪುನೀತರಾದೆವು.

ಸಾಯಂಕಾಲ ಭಜನೆ ಹಾಗೂ ದುರ್ಗಾಪೂಜೆ, ಅನ್ನಸಂತರ್ಪಣೆಯ ಕಾರುಭಾರು. ಎಲ್ಲರೂ ಉಂಡ ನಂತರ ಸುಧರಿಕೆಯ ಅಣ್ಣಂದಿರೂ ನಾನೂ ಸೇರಿ ಉಳಿದ ಪಾಯಸ, ನೈವೇದ್ಯ ಪ್ರಸಾದಗಳನ್ನು ಪರಸ್ಪರ ಹಂಚಿ ಸಮಾಧಾನ ಪಟ್ಟೆವು.

ಬೆಳಗಾಯ್ತು, ಗೌರತ್ತೆ ಎದ್ದವರೇ ಭೋಜನಶಾಲೆಯ ತಪಾಸಣೆ ನಡೆಸಿ ಗಣಪಣ್ಣ ಅಡುಗೆಗೆ ಬಳಸದೇ ಬಿಟ್ಟಿದ್ದ ಹಸಿಮೆಣಸು, ಶುಂಠಿಗಳನ್ನು ಸಂಗ್ರಹಿಸಿ ತಂದರು.

" ಲಕ್ಷಣವಾಗಿ ಒಂದು ಪುಳಿಂಜಿ ಮಾಡಿ ಇಡು, ಜೀರ್ಣಕ್ಕೆ ಒಳ್ಳೇದು.. "

" ಹುಣಸೆಹುಳಿ ಹಾಕಬೇಡವೇ.. ಇಲ್ಲಿ ಟೊಮ್ಯಾಟೋ ಹಾಳಾಗುತ್ತ ಉಂಟು, ಅದನ್ನೇ ಹಾಕಿ ಮಾಡಿದ್ರಾದೀತಲ್ಲ..."

" ಹೇಗೆ ಬೇಕೋ ಹಾಗೇ ಮಾಡಿಕೋ, ತಿನ್ನುವ ಹಾಗಿದ್ದರಾಯಿತು.. "

3 ಟೊಮ್ಯಾಟೋ ತೊಳೆದು ಹೆಚ್ಚಿ ಇಡುವುದು
2 ಹಸಿಮೆಣಸು ಮುರಿದು ಇಡುವುದು
1 ಇಂಚು ಉದ್ದದ ಶುಂಠಿಯನ್ನು ಸಿಪ್ಪೆ ಹೆರೆದು ಕತ್ತರಿಸಿ ಇಡುವುದು.
ಎಲ್ಲವನ್ನೂ ಮಿಕ್ಸಿಯಲ್ಲಿ ತಿರುಗಿಸಿ ತೆಗೆದಿರಿಸುವುದು.

ಬಾಣಲೆ ಬಿಸಿಯಾಗಲು ಇಡುವುದು.
2 ಚಮಚ ತುಪ್ಪ ಎರೆಯುವುದು.
ಸಾಸಿವೆ ಸಿಡಿಸಿ ಕರಿಬೇವು ಹಾಕುವುದು.
ಟೊಮ್ಯಾಟೋ ಮಿಶ್ರಣವನ್ನು ಹಾಕಿ ಸೌಟಾಡಿಸುವುದು.
ಬೆಂದ ಪರಿಮಳ ಬಂದಾಗ ರುಚಿಗೆ ಸೂಕ್ತವಾಗುವಷ್ಟು ಕಲ್ಲುಪ್ಪು ಹಾಗೂ ಬೆಲ್ಲ ಹಾಕುವುದು.
ಬೆಲ್ಲ ಕರಗಿ ಪಾಕದ ಹದಕ್ಕೆ ಬಂದಾಗ ಕೆಳಗಿಳಿಸಿ.
ಗೌರತ್ತೆಯ ಬಾಯಿಚಪಲಕ್ಕೆ ಹಿತವಾದ ಪುಳಿಂಜಿ ಎದ್ದು ಬಂದಿತು.




ಅನ್ನದೊಂದಿಗೆ ಬಲು ರುಚಿ, ಉಪ್ಪಿನಕಾಯಿ ಬೇಕೆನಿಸದು.
ಟೊಮ್ಯಾಟೋ ಉಪ್ಪಿನಕಾಯಿ ಎಂದೂ ಹೆಸರಿಸಬಹುದಾದ ಈ ವ್ಯಂಜನ ಒಂದೆರಡು ದಿನ ಹಾಳಾಗದು. ಫ್ರಿಜ್ ಒಳಗೆ ಇಟ್ಟರೂ ಆದೀತು.

ಮುಂಜಾನೆಯ ತಿಂಡಿಗಳಾದ ದೊಸೆ ಇಡ್ಲಿ ಚಪಾತಿಗಳಿಗೂ ಚಟ್ಣಿಯಂತೆ ಕೂಡಿಕೊಳ್ಳಬಹುದು.

ತೊಗರಿಬೇಳೆ ಬೇಯಿಸಿ ಟೊಮ್ಯಾಟೋ ಪುಳಿಂಜಿ ಎರೆದು ಸಾರು ಆಯ್ತು ಅನ್ನಿ.

ನೆಲಕಡಲೆಯ ಒಗ್ಗರಣೆ ಹಾಕಿ ಅನ್ನಕ್ಕೆ ಬೆರೆಸಿ ಚಿತ್ರಾನ್ನವೆನ್ನಿ.

ನಮ್ಮ ಆಯ್ಕೆಗನುಸಾರ ವಿವಿಧ ಅಡುಗೆಗಳಲ್ಲಿ ಬಳಸಬಹುದಾದ ಟೊಮ್ಯಾಟೋ ಪುಳಿಂಜಿ ನನ್ನ ಅಚ್ಚುಮೆಚ್ಚಿನದು. ಏನಂತೀರ?



Friday 4 October 2019

ಹೂವಿನ ಬಜ್ಜಿ






ಮಳೆ ಬಿಟ್ಟು ಸೊಂಪಾದ ಬಿಸಿಲು ಬಂದಿದೆ, ಗೌರತ್ತೆ ಮುಂಜಾನೆ ಎದ್ದವರೇ ವಾಕಿಂಗ್ ಹೊರಡುವ ಸಿದ್ಧತೆಯಲ್ಲಿದ್ದರು, " ದೂರ ಹೋಗ್ಬೇಡಿ... ಹತ್ತೇ ನಿಮಿಷದಲ್ಲಿ ಮನೆಗೆ ಬನ್ನಿ. " ತಾಕೀತು ಮಾಡಿದ್ದಾಯ್ತು.

" ದೂರ ಯಾಕೆ ಹೋಗಲಿ, ಮಳೆ ಬಂದ್ರೆ ಕಷ್ಟ.. ಒಂದು ಮುರುಕು ಕೊಡೆಯೂ ಇಲ್ವಲ್ಲ... ಶ್ರೀದೇವಿಗೆ ಒಂದು ಪ್ರದಕ್ಷಿಣೆ, ನಾಗಬನಕ್ಕೆ ಒಂದು ಸುತ್ತು ಹಾಕಿ ದೇವಿಯ ತೀರ್ಥಕ್ಕೆ ತಲೆಯೊಡ್ಡಿ ಬರೂದು..."

"ಸರಿ ಹಾಗಿದ್ರೆ.. " ಚಟ್ನಿಗಾಗಿ ಕಾಯಿ ತುರಿಯಬೇಕಿದೆ.
ನನ್ನ ದೋಸೆ ಚಟ್ನಿಗಳು ಸಿದ್ಧವಾದವು.
ಗೌರತ್ತೆಯೂ ಬಂದ್ರು, " ನೋಡೇ ಹೂವುಗಳು! "
" ಅಹ.. ಹೂದಾನಿಯಲ್ಲಿ ಇಡಲಿಕ್ಕೆ ಲಾಯಕ್.."
" ಅಯ್ಯ.. ಚಂದ ನೋಡಿ ಮಾಡುದೆಂತದು, ಚಟ್ಣಿಗಾದೀತು."

ಗೌರತ್ತೆ ಚೀನಿಕಾಯಿ ಹೂಗಳನ್ನು ಕೊಯ್ದದ್ದು ಎಲ್ಲಿಂದಾ.. ಅಂತೀರಾ,

ಹಿರಣ್ಯ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಬ್ರಹ್ಮಕಲಶ ಆಗಿತ್ತಲ್ಲ, ಆವಾಗ ವಾರಪೂರ್ತಿ ಅನ್ನಸಂತರ್ಪಣೆ ಇದ್ದಿತು. ಮೇಲೋಗರಕ್ಕೆ ತರಕಾರಿಗಳ ರಾಶಿಯೇ ಬಂದಿತ್ತು. ದೊಡ ಮಟ್ಟದ ಅಡುಗೆಗೆ ಸಿಹಿಗುಂಬಳ ( ಚೀನಿಕಾಯಿ ) ಬಳಕೆ ಜಾಸ್ತಿ. ಅಂದಿನ ಅಡುಗೆಯ ಚೀನಿಕಾಯಿ ಬೀಜಗಳು ವರ್ಷಧಾರೆಗೆ ಸಿಕ್ಕಸಿಕ್ಕಲ್ಲಿ ಕುಡಿಯೊಡೆದು, ಬಳ್ಳಿ ಹಬ್ಬಿ ಈಗ ಹೂ ಬಿರಿದಿವೆ. ಫಲ ನೀಡದ ಹೂಗಳನ್ನು ಅಡುಗೆಯಲ್ಲಿ ಬಳಸಿ ಸವಿಯಬಹುದಾಗಿದೆ. ಚಟ್ಣಿ, ಪೋಡಿ, ಗೊಜ್ಜು, ಸಾರು, ಸಾಂಬಾರು, ಮೇಲಾರ... ಎಂದು ನಮ್ಮ ಕಲ್ಪನೆಗೆ ಹೊಳೆದಂತೆ ಸವಿರುಚಿಗಳನ್ನು ಮಾಡಬಹುದಾಗಿದೆ.

ಇದರಲ್ಲಿ ಪ್ರಸಿದ್ಧವಾದದ್ದು ಗೌರತ್ತೆ ಈಗಾಗಲೇ ಹಳಿದ ಚಟ್ಣಿ, ನಮ್ಮ ಕಾಸರಗೋಡು, ದ.ಕನ್ನಡದ ಆಡುಮಾತಿನಲ್ಲಿ ಚಟ್ಣಿ ಹಾಗೂ ಬಜ್ಜಿ ಒಂದೇ ಅರ್ಥದ ಪದಗಳು. ಈಗ ನಾವು ಚಟ್ಣಿ ಯಾ ಬಜ್ಜಿ ಮಾಡೋಣ.

ಹೂವುಗಳನ್ನು ಇದ್ದ ಹಾಗೇನೆ ಉಪಯೋಗಿಸುವಂತಿಲ್ಲ.
ಬಾಟನಿ ಶಾಸ್ತ್ರ ರೀತ್ಯಾ ಪುಷ್ಪಪಾತ್ರೆ, ದಂಟು, ಹೂಕೇಸರ ನಮ್ಮ ಅಡುಗೆಗೆ ಆಗದು. ಕೇವಲ ಹೂವಿನ ಎಸಳು ಮಾತ್ರ ಬರುವಂತೆ ತೊಟ್ಟು ಬಿಡಿಸಿ, ಅಗಲವಾಗಿ ಬಿಡಿಸಿದ ಎಸಳುಗಳಲ್ಲಿ ಕ್ರಿಮಿಕೀಟಗಳ ವಾಸ್ತವ್ಯ ಇದೆಯೋ ಎಂದೂ ತಪಾಸಿಸಲೇಬೇಕು. ಇದೀಗ ಸಿದ್ಧತೆ ಆಯ್ತು.

10 - 12 ಹೂ ಎಸಳುಗಳು
ತೆಂಗಿನತುರಿ

ನಾಲ್ಕಾರು ಕುಮ್ಟೆ ಮೆಣಸು, ಒಂದೆರಡು ಚಮಚ ಕೊತ್ತಂಬರಿ, ಸ್ವಲ್ಪ ಜೀರಿಗೆ ತುಸು ಎಣ್ಣೆಪಸೆಯಲ್ಲಿ ಹುರಿದು, ಹೂವುಗಳನ್ನೂ ಹಾಕಿ ಬಾಡಿಸಿ,
ರುಚಿಗಗೆ ತಕ್ಕಷ್ಟು ಹುಣಸೆಹುಳಿ, ಉಪ್ಪು ಕೂಡಿ ತೆಂಗಿನತುರಿಯೊಂದಿಗೆ ಅರೆದು,
ಸಿಹಿ ಬೇಕಿದ್ದರೆ ಬೆಲ್ಲವನ್ನೂ ಹಾಕಿ ಅರೆಯಿರಿ, ನೀರು ನೀರಾಗಬಾರದು,
ಗಟ್ಟಿ ಮುದ್ದೆಯಂತಿರಲಿ,
ಒಗ್ಗರಣೆಯಿಂದ ಅಲಂಕರಿಸಿ.
ಚಟ್ಣಿ ಸಿದ್ದ.
ಇದು ಊಟದ ಬಟ್ಟಲಲ್ಲಿ ಒಂದು ಸಹವ್ಯಂಜನ.

ಟೊಮ್ಯಾಟೋ ಸಾರು ಕುದಿಸುವಾಗ ಹೂವುಗಳನ್ನು ಹೆಚ್ಚಿ ಹಾಕಿ, ಸಾಂಬಾರು, ಪಲ್ಯಗಳಿಗೂ ಹಾಕಬಹುದು.
ಹೂವುಗಳನ್ನು ತುಪ್ಪದಲ್ಲಿ ಹುರಿದು ಯಾ ತುಸು ನೀರಿನಲ್ಲಿ ಬೇಯಿಸಿ ಮೊಸರು ಎರೆಯಿರಿ, ಶುಂಠಿ, ಹಸಿಮೆಣಸು ಹೆಚ್ಚಿ ಹಾಕಿ ಮೊಸರುಗೊಜ್ಜು ಅನ್ನಿ.

ನೀರು ದೋಸೆಯ ಅಕ್ಕಿ ಹಿಟ್ಟು ಉಳಿದಿದೆ. ದಪ್ಪ ಆಗುವಷ್ಟು ಕಡ್ಲೆ ಹಿಟ್ಟು ಬೆರೆಸಿ.
ಉಪ್ಪು, ಸಾರಿನಹುಡಿ, ಮೆಣಸಿನಹುಡಿ, ಇಂಗು ಇತ್ಯಾದಿಗಳನ್ನು ಸೂಕ್ತ ಪ್ರಮಾಣದಲ್ಲಿ ಸೇರಿಸಿ.
ಹೂವಿನ ಎಸಳುಗಳನ್ನು ಈ ಹಿಟ್ಟಿನಲ್ಲಿ ಅದ್ದಿ,
ಬಿಸಿಯೇರಿದ ದೋಸೆಕಾವಲಿಗೆ ಎಣ್ಣೆ ಸವರಿ ಬೇಯಿಸಿ.
ದೋಸೆಯಂತೆ ಕವುಚಿ ಹಾಕಿ ತೆಗೆಯಿರಿ.
ಸಂಜೆಯ ಚಹಾದೊಂದಿಗೆ ಯೋಗ್ಯ ತಿನಿಸು.

ಕೋಮಲವಾದ ಈ ಹೂವುಗಳನ್ನು ಇನ್ನಿತರ ಬಜ್ಜಿ ಪಕೋಡಗಳಂತೆ ನೇರವಾಗಿ ಎಣ್ಣೆಯಲ್ಲಿ ಕರಿಯುವುದಕ್ಕಿಲ್ಲ, ದೋಸೆ ಕಾವಲಿಯೇ ಸಾಕು.