Pages

Ads 468x60px

Sunday 31 May 2020

ಕೆಂಪು ಹಣ್ಣಿನ ಪಲ್ಯ







ಕೆಂಪು ಹಲಸಿನ ಮರದ ಹಣ್ಣು ಕೆಳಗಡೆ ಇದ್ದದ್ದು ಹಂದಿ ತಿಂದ್ಬಿಟ್ಟಿದೆ. "
ಅಯ್ಯೋ.. "
 ಅದೇನೂ ಬೆಳೆದಿರಲಿಲ್ಲ ನಾನು ದಿನಾ ನೋಡ್ತೀನಲ್ಲ ಮೇಲೆ ಇರುವುದು ನಮ್ಮ ಕೊಕ್ಕೆಗೂ ಸಿಗುವಂತದ್ದಲ್ಲ ಇದೇ ಕೊನೆಯದು."  ಎನ್ನುತ್ತ ನಮ್ಮೆಜಮಾನ್ರು ತಂದ ಹಣ್ಣನ್ನು ಮೆಟ್ಟುಕತ್ತಿಯಲ್ಲಿ ಹೋಳಾಗಿಸಿ  ಸೀಳುಗಳನ್ನಾಗಿಸಿ ಇಟ್ಟರು.

ಲಾಕ್ ಡೌನ್ ಸ್ಟೇ ಹೋಂ ಎಂಬ  ಸಮಯದಲ್ಲಿ ತೋಟದೊಳಗೆ ಕಾರ್ಮಿಕರಿಲ್ಲ ಮನೆಗೆ ಬಂದು ಪಟ್ಟಾಂಗ ಹೊಡೆಯುವವರೂಇಲ್ಲ ಹಣ್ಣನ್ನು ಹಂಚಿ ತಿನ್ನುವುದಕ್ಕೂ ಇಲ್ಲ ಘನ ಗಾತ್ರವಿರದಿದ್ದರೂ ನಾವೇ ತಿಂದು ಮುಗಿಸುವ ಹಣ್ಣಲ್ಲ.

ಹಂದಿಗೂ ಹೊಟ್ಟೇಪಾಡು ಆಗ್ಬೇಕಲ್ಲ..  ನನಗೆ ಹಣ್ಣಿನ ಪಲ್ಯ ಮಾಡಿ ಇಟ್ಬಿಡು ರಾತ್ತಿಯ ತನಕ ಬೇಕಾದಷ್ಟಾಯಿತು.. " ಎಂದರುಗೌರತ್ತೆ.

ಗೌರತ್ತೆಯೇನೋ ಪಲ್ಯ ಅಂದ್ರು ಎಲ್ಲ ಹಲಸುಗಳೂ ಒಂದೇ ಥರ ಅಲ್ಲ.   ಏನೂ ಒಂದು ಹಲಸಿನಹಣ್ಣು ಬೇಯಿಸಿ ಇಟ್ಟಂತೆ ಆಗಬಾರದು.    ಕೆಂಪು ಹಲಸಿನ ಪಲ್ಯ ಇದುವರೆಗೂ ಮಾಡಿಲ್ಲ.    ಬಾರಿ ಮಾಡೋಣ.

ಆಯ್ದು ಇಟ್ಟ ಹಲಸಿನ ಹಣ್ಣಿನ ಸೊಳೆಗಳು ಎಷ್ಟೂ?
ನಮಗೆ ಬೇಕಿದ್ದಷ್ಟು ಚಿಕ್ಕ ಗಾತ್ರದಲ್ಲಿ ಹೆಚ್ಚಿಟ್ಟುಕೊಳ್ಳಿ.  
ಗೌರತ್ತೆ ಹಾಗೇನೇ ಕೈಯಲ್ಲಿ ಸಿಗಿದು ಇಟ್ಟಿದ್ರು.
ಹಾಗೂ ಆದೀತು ಹೇಗೂ ಆದೀತು.

ನಾನ್ ಸ್ಟಿಕ್ ಬಾಣಲೆಯನ್ನು ಒಲೆಗೇರಿಸಿ.
ಚಮಚ ತೆಂಗಿನೆಣ್ಣೆ ಎರೆಯಿರಿ.
ಸಾಸಿವೆ,
ಉದ್ದಿನಬೇಳೆ,
ಒಂದು ಒಣಮೆಣಸನ್ನು ನಾಲ್ಕಾಗಿ ಮುರಿದು ಹಾಕಿ.
ಸಾಸಿವೆ ಸಿಡಿದ ನಂತರ ಕರಿಬೇವು,
ನಂತರ  ಹಲಸಿನಹಣ್ಣಿನ ಹೋಳುಗಳನ್ನು ಹಾಕಿ ಸೌಟಾಡಿಸಿ.
ನೀರು ಎರೆಯಬೇಕಿಲ್ಲ ಎರೆಯಲೂ ಬಾರದು.
ಕೇವಲ ಸಿಹಿ ಇದ್ದರಾಗದು ಪುಡಿಯುಪ್ಪು ರುಚಿಗೆ ಸೂಕ್ತ ಪ್ರಮಾಣದಲ್ಲಿ ಬೆರೆಸಿ.
ಅರ್ಧ ಚಮಚ ಮೆಣಸಿನ ಹುಡಿಕಾಲು ಚಮಚ ಅರಸಿಣ ಹುಡಿ ಬೆರೆಸತಕ್ಕದ್ದು.
ಒಂದು ಹಿಡಿ ತೆಂಗಿನತುರಿ ಹಾಕಿ ಸೌಟಾಡಿಸುತ್ತ ಇದ್ದಂತೆ ಬೆಂದ ಸುವಾಸನೆ ಬಂದಿತು.
ಸ್ಟವ್ ನಂದಿಸಿ ಮುಚ್ಚಿ ಇರಿಸಿ.

  ಪಲ್ಯವು ಸಂಜೆಯ ಚಹಾ ಸೇವನೆಯೊಂದಿಗೆ ಮೆಲ್ಲಲು ಸೂಕ್ತ ತಿನಿಸು.

ಯಾಕೆ ತಡ ಇವತ್ತೇ ಹಲಸಿನ ಹಣ್ಣಿನ ಬೇಟೆಗಾಗಿ ಹೊರಡಿ ಮತ್ತೇ ಲಾಕ್ ಡೌನ್ ಅಂತ ಮನೆಯೊಳಗೇ ಇದ್ದರಾದೀತೇ...






Saturday 23 May 2020

ಹಣ್ಣಿನ ಪಾಯಸ





" ಯಾವ ಹಣ್ಣೂ.. "
ಕೇಳಬೇಕಾಗಿಯೇ ಇಲ್ಲ, ಈಗ ತೋಟದಲ್ಲಿ ಉಚಿತವಾಗಿ ಸಿಗುವ ಫಲವಸ್ತು, ಹಲಸಿನಹಣ್ಣು. ಮನೆಯೊಳಗೂ ಹೊರಗೂ ನಾವೇ ಇರುವ ಲಾಕ್ ಡೌನ್ ಕಾಲದಲ್ಲಿ ನಮ್ಮ ಹಲಸಿನ ಆಸೆ ತಣಿಸುವಷ್ಟು ಹಲಸಿನ ಮರದಿಂದ ಕೆಂಪು ರಂಗಿನ ಸೊಳೆ ತುಂಬಿದ ಹಣ್ಣು ಮನೆಗೆ ಬಂದಿತು.

ನಮ್ಮ ಯಜಮಾನರೇ ತಂದಂತಹ ಹಣ್ಣನ್ನು ಸದುಪಯೋಗ ಪಡಿಸಲೇ ಬೇಕು. ಮೊದಲಾಗಿ ತುಸು ಬಿಡಿ ಸೊಳೆಗಳಿಂದ ಪಾಯಸ ಮಾಡೋಣ.

" ಹಸಿ ಹಸೀ ಹಣ್ಣು ತಿನ್ನುವುದಕ್ಕಿಂತ ಬೆಲ್ಲ, ತೆಂಗಿನಕಾಯಿ ಹಾಕಿದ ಪಾಯಸ ಆರೋಗ್ಯಕ್ಕೆ ಹಿತ. " ಎಂದರು ಗೌರತ್ತೆ.

ಹಲಸಿನ ಸೊಳೆ ಬಿಡಿಸಿ ಹೆಚ್ಚಿಟ್ಟು ಕೊಳ್ಳುವುದು, ಒಂದು ಲೋಟ ತುಂಬ ಇರಲಿ.
ಒಂದು ಹಸಿ ತೆಂಗಿನಕಾಯಿ ಸುಲಿದು, ಒಡೆದು ತುರಿ ಮಾಡಿಟ್ಟು ಅರೆದು ಕಾಯಿಹಾಲು ತೆಗೆದಿರಿಸುವುದು, ನೀರು ಹಾಲು, ದಪ್ಪ ಹಾಲು ಪ್ರತ್ಯೇಕ ತೆಗೆದಿರಿಸುವುದು.
3 ಚಮಚ ಅಕ್ಕಿ ಹುಡಿ, ಒಂದು ಲೋಟ ನೀರೆರೆದು ಗಂಟುಗಳಿರದಂತೆ ಕಲಸಿ ಇಡಬೇಕು.
ದಪ್ಪ ತಳದ ತಪಲೆಯಲ್ಲಿ, ಕುಕ್ಕರ್ ಕೂಡಾ ಆದೀತು, ನೀರು ಕಾಯಿಹಾಲು ಎರೆದು, ಹೆಚ್ಚಿಟ್ಟ ಹಲಸಿನ ಹಣ್ಣಿನ ಚೂರುಗಳನ್ನು ಹಾಕಿ ಬೇಯಿಸಿ.
ಬೇಗನೇ ಬೇಯುವ ಹಲಸಿನ ಹಣ್ಣಿನ ಸುವಾಸನೆ ಬಂದಾಗ ಅಕ್ಕಿ ಹಿಟ್ಟನ್ನೂ ಎರೆಯಿರಿ.
ಈಗ ತಳ ಹಿಡಿಯದಂತೆ ಸೌಟಾಡಿಸುತ್ತ ಇರಬೇಕು.
ಅಕ್ಕಿ ಹಿಟ್ಟು ಬೆಂದಂತೆ ದಪ್ಪ ಸಾಂದ್ರತೆ ಬರುವುದು.
ಈಗ 2 ಅಚ್ಚು ಬೆಲ್ಲ ಗುದ್ದಿ ಪುಡಿ ಮಾಡಿ ಹಾಕುವುದು, ಬೆಲ್ಲ ಕರಗಲಿ.
ನೀರು ಕಾಯಿಹಾಲು ಉಳಿದಿದ್ದರೆ ಈಗ ಎರೆಯಿರಿ.
ಬೆಲ್ಲ ಕರಗಿ ಅಕ್ಕಿ ಹಿಟ್ಟು ಹಲಸಿನೊಂದಿಗೆ ಬೆರೆತಿದೆ ಎಂದಾಗ,
ದಪ್ಪ ಕಾಯಿಹಾಲು ಎರೆಯುವುದು.
ಎಲ್ಲ ಹಲಸಿನ ಹಣ್ಣುಗಳೂ ಒಂದೇ ತೆರನಾದ ಸುವಾಸನೆ ಬೀರುವುದಿಲ್ಲ, ಪರಿಮಳ ಸಾಲದು ಎಂದಿದ್ದರೆ ತುಸು ಏಲಕ್ಕಿ ಗುದ್ದಿ ಹಾಕಬಹುದಾಗಿದೆ.
ಹಲಸಿನ ಹಣ್ಣಿನ ಯಾವುದೇ ಸಿಹಿ ತಿನಿಸು ಇರಲಿ, ಹುರಿದ ಎಳ್ಳು ಹಾಕಲೇಬೇಕು. ಹಲಸಿನ ಹಣ್ಣಿನ ಪಾಯಸಕ್ಕೆ ಒಂದು ಪರಿಪೂರ್ಣತೆ ಹುರಿದು ಜಜ್ಜಿದ ಎಳ್ಳು ಹಾಕುವಲ್ಲಿಗೆ ಬಂದಿತೆಂದು ತಿಳಿಯಿರಿ.
ಇದು ಹಲಸಿನ ಹಣ್ಣು ಇರುವಾಗ ಬೇಗನೆ ಮಾಡಬಹುದಾದ ಪಾಯಸ.


ಗೌರತ್ತೆ ಹೇಳಿದಂತೆ ಹಲಸಿನ ಹಣ್ಣು ಎಷ್ಟೇ ರುಚಿಕರವಾಗಿದ್ದರೂ ಹಸಿ ಹಸಿಯಾಗಿ ತಿನ್ನಲು ಯೋಗ್ಯವಲ್ಲ. ಬೇಯಿಸಿ, ತುಪ್ಪ ಯಾ ತೆಂಗಿನೆಣ್ಣಿ, ತೆಂಗಿನಕಾಯಿ, ಬೆಲ್ಲ ಇತ್ಯಾದಿಗಳ ಸಂಮಿಶ್ರಣದ ಪಾಕದಿಂದ ಹದವರಿತು ತಿನ್ನುವ ಜಾಣರು ನಾವಾಗಿರಬೇಕು. ಇಂತಹ ಹಲಸಿನ ಅಡುಗೆಯ ಸೇವನೆಯಿಂದ ಹಸಿವು ಎಂದರೇನು ಎಂದೇ ತಿಳಿಯಲಾರದು. ಆಗಾಗ್ಗೆ ಏನಾದರೂ ಕುರುಕಲು ತಿಂಡಿ ಡಬ್ಬದಿಂದ ತೆಗೆದು ತಿನ್ನುತ್ತ ಇರೋಣ ಎಂದೂ ಅನಿಸದು.






Saturday 16 May 2020

ಪೈನಾಪಲ್ ಕರ್ರಿ




ದಿನವೂ ಮಕ್ಕಳೊಂದಿಗೆ ಸರಸ ಸಂಭಾಷಣೆ,
ಈ ಬಾರಿ ಮಗಳು ಬೆಂಗಳೂರಿನಿಂದ ಕರೆದಳು.
" ಅಮ್ಮ, ಅನನಾಸ್ ಹಣ್ಣಿನ ಮೆಣಸ್ಕಾಯಿ ಮಾಡೂದು ಹೇಗೆ? "

ನಾನು ಫೋನ್ ಕಿವಿಗಿಟ್ಟು ಮಾಡುವ ವಿಧಾನ ಒದರುತ್ತ ಹೋದಾಗ, ಸ್ವಲ್ಪ ಹೊತ್ತು ಕೇಳಿಸ್ಕೊಂಡ ಮಗಳು, “ ಅಮ್ಮ, ನೀನು ವಾಟ್ಸಪ್ ನಲ್ಲಿ ಬರೆದು ಕಳಿಸ್ತೀಯಾ.. " ಅಂದಳು.

" ಹಂಗಂತೀಯ, ಸರಿ ಬಿಡು.. “

ಮಗಳಿಗಾಗಿ ಬರೆದ ಮೆಣಸ್ಕಾಯಿ ಸಾಹಿತ್ಯ ಬ್ಲಾಗ್ ಪ್ರವೇಶಿಸಿ ಬಿಟ್ಟಿದೆ.




ಅನನಾಸ್ ಹೋಳು ಚಿಕ್ಕ ಚೂರು ಆಗಿರಲಿ

ಮಸಾಲೆ
ತೆಂಗಿನತುರಿ 4 ಚಮಚ
ಎಳ್ಳು 3 ಚಮಚ ಎಣ್ಣೆ ಹಾಕದೆ ಹುರಿಯುವುದು
ಎಳ್ಳು ತೆಗೆದಿಟ್ಟು
ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ
ಕ್ರಮವಾಗಿ ಉದ್ದಿನಬೇಳೆ 1 ಚಮಚ
ಮೆಣಸು 3
ಜೀರಿಗೆ ಅರ್ಧ ಚಮಚ
ಇಂಗು ಉದ್ದಿನಕಾಳಿನಷ್ಟು
ಕರಿಬೇವು
ಚಿಟಿಕೆ ಅರಸಿನ ಹಾಕಿ
ಮೇಲಿನಿಂದ 3 ಚಮಚ ಕಾಯಿತುರಿ ಹಾಕಿ ಬಾಡಿಸುವುದು.

ಆರಿದ ನಂತರ ಎಳ್ಳು ಸಹಿತವಾಗಿ ನುಣ್ಣಗೆ ಅರೆಯುವುದು. ನೀರು ಹಾಕಿ ಅರೆಯಬೇಕು.

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,
ಕರಿಬೇವು, ಹಸಿಮೆಣಸು ಹಾಕಿ ಬಾಡಿದ ನಂತರ ಅನನಾಸ್ ಹೋಳು ಹಾಕುವುದು.
ನೀರೆರೆದು ಮೆತ್ತಗೆ ಬೇಯಿಸಿ.
ರುಚಿಗೆ ತಕ್ಕಷ್ಟು ಉಪ್ಪು
ಬೆಲ್ಲ ದೋಡ್ಡ ಲಿಂಬೆಯಷ್ಟು ಇರಲಿ
ನೆಲ್ಲಿ ಗಾತ್ರದ ಹುಣಸೆ ಹುಳಿಯ ರಸ ಎರೆಯಬೇಕು.

ಈಗ ಮಸಾಲೆ ಹಾಕುವ ಸಮಯ.
ಎಲ್ಲವನ್ನೂ ಬೆರೆಸಿ, ನೀರು ಎರೆದು ಹದ ಮಾಡಿ ಕುದಿಸಬೇಕು.
ಸಾರಿನ ಹಾಗೆ ಆಗಬಾರದು,  ದಪ್ಪ ಸಾಂದ್ರತೆಯಿರಬೇಕು.
ಆಯಿತು ಪೈನಾಪಲ್ ಕರ್ರಿ
ಇದನ್ನು ಮುಗಿಯುವ ತನಕ ಉಪಯೋಗಿಸುವುದು.
ದಿನವೂ ಕುದಿಸಿ ಇಡಬೇಕು.



Thursday 7 May 2020

ಪೈನಾಪಲ್ ಪಾನಕ




ಹಣ್ಣುಗಳ ಕಾಲ ಅಲ್ವೇ, ತಿಂಡಿತೀರ್ಥ ಆದ ನಂತರ ಒಂದು ಪೈನಾಪಲ್ ಕತ್ತರಿಸಿ ಇಟ್ಟಾಯ್ತು, ಹತ್ತು ಗಂಟೆಯ ಚಹಾಪಾನದೊಂದಿಗೆ ಹಣ್ಣು. ಬಿಸಿಲ ತಾಪಕ್ಕೆ ಒಳ್ಳೆಯದು. ಸ್ವಲ್ಪ ತಿಂದು ಮುಗಿಯಿತು.

ಉಳಿದ ಹಣ್ಣಿನ ಹೋಳುಗಳನ್ನು ಮಿಕ್ಸಿಯ ಜಾರಿನೊಳಗೆ ತುಂಬಿ,
ಸುಸೂತ್ರವಾಗಿ ತಿರುಗಲು ಬೇಕಾದಷ್ಟೇ ನೀರು ತುಂಬಿ,
ಚಿಕ್ಕ ಚೂರು ಶುಂಠಿ ಸಿಪ್ಪೆ ತೆಗೆದು, ಜಜ್ಜಿ,
ಪುಡಿ ಮಾಡಿದ ಲಿಂಬೆ ಗಾತ್ರದ ಬೆಲ್ಲ,
ಸುರುಚಿಗೋಸ್ಕರ ಉಪ್ಪು ಇರಲಿ,
ತಿರುಗಿಸಿ,
ಜಾಲರಿ ಸೌಟಿನಲ್ಲಿ ಶೋಧಿಸಿ.
ಇನ್ನೂ ಒಂದು ಲೋಟ ನೀರು ಎರೆದು ಚರಟ ಮಾತ್ರ ಉಳಿಯುವಂತೆ ಶೋಧಿಸಿಕೊಳ್ಳಿ.

ಅನನಾಸ್ ನಾರುಯುಕ್ತ ಹಣ್ಣು ಆದರೂ ಜಾಲರಿ ಸೌಟಿನಲ್ಲಿ ಕೇವಲ ಎರಡು ಚಮಚದಷ್ಟು ಚರಟ ಉಳಿಯಿತು.

ಅನಾನಸ್ ರಸ ದಪ್ಪ ಯಾ ಸಾಂದ್ರವಾಗಿದ್ದರೆ ಕುಡಿಯಲು ಯೋಗ್ಯವಾಗುವಂತೆ ನೀರು ಬೆರೆಸುವುದು ಉತ್ತಮ.

ಹಣ್ಣುಗಳ ರಸಕ್ಕೆ ಸಿಹಿ ಸೇರಿಸದೇ ಕುಡಿಯುವುದು ಬಹಳ ಉತ್ತಮ.

ತಂಪಾಗಿಸಿ, ಲೋಟಗಳಿಗೆ ತುಂಬಿಸಿ ಕುಡಿಯಿರಿ, ಹಾಯಾಗಿರಿ.

ರಸಭರಿತ ಹಣ್ಣುಗಳು ಮೂಳೆಗಳ ಬಲವರ್ಧಕ, ಸ್ನಾಯುಗಳ ಶಕ್ತಿವರ್ಧಕ. ಕ್ಯಾಲ್ಸಿಯಂ ಇನ್ನಿತರ ಖನಿಜಾಂಶಗಳನ್ನು ನೈಸರ್ಗಿಕವಾಗಿಯೇ ಪಡೆಯಿರಿ, ಔಷಧಾಲಯಗಳ ಮಾತ್ರೆಗಳು ಸುಮ್ಮನೆ ಅನ್ನಿರಿ.