Pages

Ads 468x60px

Sunday 28 June 2020

ಹಣ್ಣಿನ ಗೊಜ್ಜು




"ಮಳೆ ಬರುವಾಗ ಬಿಸಿ ಬಿಸಿಯಾಗಿ ಹಲಸಿನ ಹಣ್ಣಿನ ಪಾಯಸ ಚಿನ್ನಾಗಿರುತ್ತೆ.."

ಹಲಸಿನ ಹಣ್ಣು ಹಾಳಾಗದಂತೆ ಬೆರಟಿ ಕಾಯಿಸುತ್ತಾ ಇದ್ದಾಗ ಗೌರತ್ತೆಯ ನುಡಿಮುತ್ತುಗಳು  ತೆರನಾಗಿ ಬಂದವು.


ಸುಮ್ಮನೇ ಕಾಯಿಸಿಟ್ಟು ಮಾಡೂದಾದ್ರೂ ಏನು ನಾಳೆ ಇನ್ನೊಂದು ಹಲಸಿನ ಹಣ್ಣು ಬರುತ್ತೆ ಅಂದ್ಬಿಟ್ಟು ಪಾಯಸ ಮಾಡಿ ಕುಡಿದೆವೂ ಅನ್ನಿ.


ಕಾಯಿಸಿಟ್ಟ ಎಲ್ಲವನ್ನೂ ಪಾಯಸ ಮಾಡಿ ಕುಡಿಯಲು ನಮ್ಮಿಂದಾಗದು ಒಂದು ಲೋಟದಷ್ಟು ಕಾಯಿಸಿಟ್ಟ ಹಲಸಿನಹಣ್ಣು ಫ್ರಿಜ್ ಒಳಗೆ ಕುಳಿತಿತು ಇದಕ್ಕೆ ಬೆಲ್ಲವನ್ನೂ ಹಾಕಿಲ್ಲತುಪ್ಪವೂ ಬಿದ್ದಿಲ್ಲ.



ಹೊಸದಾಗಿ ಹಲಸಿನಕಾಯಿಗಳು ತೋಟದಿಂದ ಬಂದಿವೆ.  

"ಫ್ರಿಜ್ ಒಳಗಿರೂದು ಹೊರ ಬರಲಿ.." ಎಂದರು ಗೌರತ್ತೆ.

ಏನು ಮಾಡೂದಂತೀರಾ.. ?

ಪಾಯಸ ಬೇಡ ಹಣ್ಣಿನ ಸಾರು ಆದೀತು.."


ತಂಪು ಪೆಟ್ಟಿಗೆಯಿಂದ ಹಲಸಿನಹಣ್ಣಿನ ಮುದ್ದೆ ಹೊರ ನೆಗೆಯಿತು.

ತಪಲೆಗೆ ಇಳಿಯಿತು.

ಒಂದು ಲೋಟ ನೀರಿನೊಂದಿಗೆ ಬೆರೆಯಿತು.

ರುಚಿಗೆ ಉಪ್ಪು ಬಿದ್ದಿತು

ಒಲೆಯಲ್ಲಿ ಕುದಿಯಿತು.

ತುಪ್ಪದಲ್ಲಿ ಕರಿಬೇವಿನ ಒಗ್ಗರಣೆ ಬಿದ್ದಿತು.


ಭೋಜನಕಾಲೇ..  ಪಾಯಸದಂತೆ ಹಲಸಿನ ಹಣ್ಣಿನ ಗೊಜ್ಜು ಸವಿಯುವ ಯೋಗ ದೊರೆಯಿತು.





Thursday 25 June 2020

ಹಲಸಿನ ವಡೆ



ಹಲಸಿನ ಸೊಳೆಗಳು ನಮಗೇನು ಗತಿಯೆಂದು ಕಾದು ಕುಳಿತಿವೆ.

ಹಾಗೇನೇ ಗುಳುಂಕರಿಸಲಾದೀತೇ, ನಮ್ಮ ಪಾಕಶಾಲೆಗೆ ಒಯ್ಯಲಾಯಿತು.  

ಚೂರಿಯಲ್ಲಿ ಚಕಚಕನೆ ಕತ್ತರಿಸಿ,

ಮಿಕ್ಸಿಯಲ್ಲಿ ಗಿರಗಿರನೆ ತಿರುಗಿಸಿ,

ರುಚಿಯ ಯೋಗ್ಯತೆಗೆ ತಕ್ಕಷ್ಟು ಉಪ್ಪು ಕೂಡಿಸಿ,

2 ಲೋಟದಷ್ಟು ಮುದ್ದೆ ಹಿಟ್ಟು ಆಗಿ ಬಿಟ್ಟಿತು.


ಒಂದು ದೊಡ್ಡ ನೀರುಳ್ಳಿ, 2 ಹಸಿಮೆಣಸು, ಸಿಪ್ಪೆ ಹೆರೆದ ಶುಂಠಿಗಳನ್ನು ಕತ್ತರಿಯಾಡಿಸಿ ಹಿಟ್ಟಿಗೆ ಸೇರಿಸಲಾಯಿತು. ಕರಿಬೇವು ಕೊತ್ತಂಬರಿ ಸೊಪ್ಪುಗಳನ್ನೂ ಬಿಡುವಂತಿಲ್ಲ.

ಕಡ್ಲೆ ಗಾತ್ರದ ಇಂಗು ನೀರಿನಲ್ಲಿ ನೆನೆದು ಕೂಡಿಕೊಂಡಿತು.

ಡಬ್ಬದಿಂದ ಅಕ್ಕಿ ಹುಡಿ ಹೂರ ಬಂದಿತು.

ಅರ್ಧ ಲೋಟ ನೀರು ಪಕ್ಕದಲ್ಲಿರಲಿ, 

ಅಗತ್ಯವಿದ್ದಲ್ಲಿ ಸೇರಿಸಲು ನೀರು ಇರಬೇಕು.

ಒಂದು ಲೋಟ ಅಕ್ಕಿ ಹಿಟ್ಟು ಬೆರೆಸಿ ಮುದ್ದೆಯಾಯಿತೇ..

ಕೈಗಳಿಗೆ ಅಂಟಿಕೊಳ್ಳದಂತಿರಬೇಕು, ಸಾಲದಿದ್ದರೆ ಅಕ್ಕಿ ಹಿಟ್ಟು ಹಾಕಿದರಾಯಿತು.  

ಉದ್ದಿನ ವಡೆಯ ಹಿಟ್ಟಿನಂತಾಯಿತು ಅನ್ನಿ.


ಬಾಣಲೆಗೆ ಎಣ್ಣೆ ಎರೆದು ಒಲೆಯ ಮೇಲಿರಿಸಿ

ಹಿಟ್ಟನ್ನು ಲಿಂಬೆ ಗಾತ್ರದ ಉಂಡೆಗಳನ್ನಾಗಿಸಿ

ಅಂಗೈಯಲ್ಲಿ ತಟ್ಟಿ 

ಬೆರಳಿನಲ್ಲಿ ತೂತು ಕೊರೆದು

ಎಣ್ಣೆಗಿಳಿಸಿ.

ಒಂದೇ ಬಾರಿ ಎಣ್ಣೆಯಲ್ಲಿ ಹಿಡಿಸುವಷ್ಟು ಹಾಕಿ,

ಕವುಚಿ ಮಗುಚಿ

ಎರಡೂ ಬದಿ ಬೆಂದ ನಂತರ ತೆಗೆಯಿರಿ.


ಬಿಸಿ ಇರುವಾಗಲೇ ಚಹಾ ಜೊತೆ " ಅಹ.. ಅಹ.. " ಅನ್ನುತ್ತ ಸವಿಯಿರಿ.






Thursday 18 June 2020

ಮಸಾಲಾ ಪೈನಾಪಲ್




 ಹಣ್ಣಿನ ಕಾಲ ಬರುವಾಗ ಮಳೆಯೂ ಶುರು ಆಯ್ತಲ್ಲ..  ಜ್ಯೂಸೂ ಬೇಡ ಸಕ್ಕರೆಯೂ ಬೇಡ.. " ಗೌರತ್ತೆಯ ನುಡಿಮುತ್ತುಉದುರಿತು.   ಬೆಂಗಳೂರಿಂದ ಮಕ್ಕಳು ಬರ್ತಾರೇಂತ ಕಾದಿದ್ದೇ ಬಂತು.. "


ಯಾರಿಗೂ ಬರಲಿಕ್ಕಾಗುವುದಿಲ್ವೇ ಜ್ಯಾಮ್ ಮಾಡಿದ್ರಾದೀತು.. "


ಯಾಕೆ ಸುಮ್ಮನೆ ಸಕ್ಕರೆ ಸುರಿಯಬೇಕು.."

ಈಗ ಪೋಡಿ ಪುನಃ ಮಾಡುವುದೋ ಹೇಗೆ? "

ಪೋಡಿ ತಿಂದಾಯ್ತಲ್ಲ..."


ಹಾಗೇ ಸುಮ್ಮನೆ ಕಾವಲಿಯಲ್ಲಿ ಬಿಸಿ ಮಾಡಿದ್ರೆ ಹೇಗೆ... "  ಅನ್ನುತ್ತಲೂ ಐಡಿಯಾ ಕಾರ್ಯರೂಪಕ್ಕಿಳಿಯಿತು.


ಮೊದಲು ಪೈನಾಪಲ್ ತೆಳ್ಳಗೆ ಕತ್ತರಿಸಿ ಇಡುವುದು.


ಮಸಾಲೆ ಪುಡಿಗಳು ಏನೇನಿವೆ?


ಮೆಣಸಿನ ಹುಡಿ ಒಂದ್ ಸ್ವಲ್ಪ ಸಾಕು..  ಇದ್ದ ಬದ್ದ ಹುಡಿಯೆಲ್ಲ ಹಾಕ್ಬೇಡ.. " 

ಸರಿ ಹಾಗೇ ಮಾಡೋಣ.

ಸ್ವಲ್ಪ ಅರಸಿಣ ಹುಡಿ ಹಾಕಿದ್ರಾದೀತು. "


ಅನನಾಸ್ ಹೋಳುಗಳಿಗೆ ಪುಡಿಯುಪ್ಪು ಸವರಿ ಇಡುವುದು.


ನಾನ್ ಸ್ಟಿಕ್ ತವಾ ಒಲೆಗೇರಿಸುವುದು.

ಚಮಚ ತುಪ್ಪ ಎರೆದು ಬೆಣ್ಣೆಯೂ ಆದೀತು.

ತವಾ ಬಿಸಿಯೇರುತ್ತಿದ್ದಂತೆ ಅನನಾಸ್ ಹೋಳುಗಳನ್ನು ಇರಿಸುವುದು

ಮೇಲಿನಿಂದ ತುಸು ಅರಸಿಣ ಹುಡಿಮೆಣಸಿನ ಹುಡಿ ಉದುರಿಸಿ.

ಗರಂ ಆಗಿ ತಿನ್ನ ಬಯಸುವವರು ಕಾಳುಮೆಣಸುಜೀರಿಗೆಕೊತ್ತಂಬರಿ ಹುಡಿಗಳನ್ನೂ ಉದುರಿಸಿ.


ಚಮಚ ಮತ್ತು ಫೋರ್ಕ್ ಸಹಾಯದಿಂದ ಕವುಚಿಮಗುಚಿ ಹಾಕುತ್ತ ಇರಬೇಕು.

ದೋಸೆಯಂತೆ ಮುಚ್ಚಿ ಬೇಯಿಸುವಂತಿಲ್ಲ ಬಿಸಿ ನೀರ ಹನಿ ಬಿದ್ದು ಮೆತ್ತಗಾದೀತು.

ಸಣ್ಣ ಉರಿಯಲ್ಲಿರಲಿ ಕರಟಬಾರದು

ಪಸೆ ಆರಿದೆ ತುಸು ಗರಿಗರಿ ಆದರೆ ಸಾಕು.

ತೆಗೆದು ತಟ್ಟೆಗೆ ಹಾಕಿಕೊಳ್ಳಿ..

ಬಿಸಿ ಬಿಸಿಯಾಗಿ ಫೋರ್ಕ್ ಚುಚ್ಚಿ ತಿನ್ನಿ.


ಊಟದೊಂದಿಗೆ ಸವಿಯುತ್ತ ಇದ್ದಾಗಫೈವ್ ಸ್ಟಾರ್ ಹೋಟಲ್ ತಿನಿಸು ತಿಂದ ಖುಷಿ ಸಿಕ್ಕಿದ್ದು ಸುಳ್ಳಲ್ಲ.





Friday 12 June 2020

ಪೈನಾಪಲ್ ಪೋಡಿ



ಧೋರೆಂದು ಮಳೆ ಬರುತ್ತಾ ಇದೆ.


" ಹಲಸಿನ ಹಣ್ಣು ಎಷ್ಟೇ ಚೆನ್ನಾಗಿದ್ರೂ ಚಳಿ ಹವೆ ಬೇರೆ.. ನಂಗೆ ಬೇಡ. "  ಎಂದರು ಗೌರತ್ತೆ.


ಸಂಜೆಯ ಹೊತ್ತು ಬಿಸಿ ಬಿಸಿಯಾಗಿ ಹಲಸಿನ ಹಣ್ಣಿನ ಪೋಡಿ ಮಾಡೋಣ. "  


ಬೇಕಾದಂತಹ ಎಣ್ಣೆ ಕಡ್ಲೇ ಹಿಟ್ಟು ಅಕ್ಕಿಹಿಟ್ಟು ಗೋಧಿಹಿಟ್ಟು ಇತ್ಯಾದಿಗಳೆಲ್ಲ ಇವೆ ಹಾಗೂ ಯಾವುದೇ ಮಸಾಲಾ ಸಾಮಗ್ರಿಗಳು ಈ ಹಣ್ಣುಗಳ ಪೋಡಿಗೆ ಬೇಡ.


ಹಿಟ್ಟುಗಳನ್ನೆಲ್ಲ ಒಂದೇ ಅಳತೆಯಲ್ಲಿ ಕೂಡಿಸಿ ರುಚಿಗನುಸಾರ ಉಪ್ಪು ಬೆರೆಸಿ ನೀರೆರೆದು ದ್ರವರೂಪಕ್ಕೆ ತಂದಾಯ್ತು.

ಹಿಟ್ಟು ತೆಳ್ಳಗಾಗಕೂಡದು ಅತಿಯಾಗಿ ದಪ್ಪವೂ ಆಗಬಾರದು.

ಹಲಸಿನ ಹಣ್ಣನ್ನು  ಹಿಟ್ಟಿನಲ್ಲಿ ಮುಳುಗಿಸಿ ಬಿಸಿಯಾದ ಎಣ್ಣೆಗೆ ಹಾಕಿ , ಎರಡೂ ಬದಿ ಕೆಂಪಾದ ನಂತರ ಎಣ್ಣೆಯಿಂದ ತೆಗೆದು..

ಬಿಸಿ ಇರುವಾಗಲೇ  ಆಹ.. ಆಹ ಅನ್ನುತ್ತ ತಿನ್ನುವುದು.


ಸಾಮಾನ್ಯವಾಗಿ ಹೋಟಲ್ ಗಳಲ್ಲಿ ಪೋಡಿ ಸಿಗುವುದಾದರೂ ಅಲ್ಲಿ ಮೈದಾ ಹಿಟ್ಟಿನಿಂದ ಪೋಡಿಗಳನ್ನು ಮಾಡುತ್ತಾರೆ ಮೈದಾ ನಮಗೆ ಬೇಡ.


ನನ್ನ ಅಳತೆಯಲ್ಲಿ ಒಂದು ಲೋಟ ಹಿಟ್ಟು ಇದೆ ಬೇಕಾಗಿರುವುದು ಏಳೆಂಟು ಪೋಡಿ..

ಹಿಟ್ಟು ಉಳಿದ್ರೆ ಏನು ಮಾಡೂದು? "

ಫ್ರಿಜ್  ಒಳಗೆ ಅನಾನಸ್ ಇಟ್ಕೊಂಡಿದ್ದೀಯಲ್ಲ ಅದನ್ನು ಪೋಡಿ ಮಾಡಿದರೇನಾದೀತು? "  ಗೌರತ್ತೆ ಮರು ಪ್ರಶ್ನೆ ಎಸೆದರು.

ಹೌದಲ್ವೇ.."

 ಪ್ರಕಾರವಾಗಿ ಪೈನಾಪಲ್ ಪೋಡಿ ಎದ್ದು ಬಂದಿತು.

 ಸಂಜೆಯ ತಿನಿಸು ಸರಳವಾಗಿ ತಿಂದು ಮುಗಿಯಿತು.







Sunday 7 June 2020

ಗಂಜೆ ದೋಸೆ




ನಮ್ಮ ನಾಯಿಮರಿ ಏನೇ ಕಸರತ್ತು ಮಾಡಿದ್ರೂ ಅನ್ನ 
ತಿನ್ನಲು ಕಲಿಯಲಿಲ್ಲ ಅಥವಾ ನಮಗೆ ತಿಳಿಯಲಿಲ್ಲ ಗರಿಗರಿಯಾದ ದೋಸೆಗಳೇ ಅದರ ಆಹಾರ.

ಒಂದು ದಿನ ನನಗೂ ಹಟ ಬಂದಿತು ನಾಯಿಗೆ ಅನ್ನ ತಿನ್ನಿಸಿಯೇ ಸಿದ್ಧ.
ಒಂದಷ್ಟು ಕುಚ್ಚುಲಕ್ಕಿ ಅನ್ನ ಮಿಕ್ಸಿಯಲ್ಲಿ ಗಿರಗಿರ ತಿರುಗಿಕು
ಅದಕ್ಕೆ ಹೊಂದುವಷ್ಟು ಅಕ್ಕಿ ಹಿಟ್ಟು ಹಾಗೂ ಗೊಧಿ ಹಿಟ್ಟು ಬೆರೆಸಿದೋಸೆ ಎರೆಯಲಾಯಿತು ಅನ್ನದ ದೋಸೆ ನೋಡಿ ನನ್ನ ಬಾಯಲ್ಲೂ ನೀರು ಬಂದಿದ್ದು ಸುಳ್ಳಲ್ಲ ಕಣ್ರೀ..

ಚಿಂತೆಯಿಲ್ಲ ನಾಳೆ ಎಲ್ಲರಿಗೂ ಸಾಕಾಗುವಷ್ಟು ದೋಸೆ ಮಾಡು.. " ಎಂದರು ಗೌರತ್ತೆ.

ಲೋಟ ಬೆಳ್ತಿಗೆ ಅಕ್ಕಿ ತೊಳೆದು ನೀರೆರೆದು ಇಡುವುದು.
ಒಂದು ಲೋಟ ಅನ್ನ ಮೊದಲು ಅರೆಯಿರಿ.
 ಅಕ್ಕಿಯನ್ನೂ ನುಣ್ಣಗೆ ಅರೆದು,
ರುಚಿಗೆ ಉಪ್ಪು,
ಒಂದು ಲೋಟ ಗೋಧಿ ಹಿಟ್ಟನ್ನೂ ಸೇರಿಸಿ,
ಅವಶ್ಯವಿದ್ದ ಹಾಗೆ ನೀರು ಎರೆದು ,
ದೋಸೆ ಹಿಟ್ಟಿನ ಸಾಂದ್ರತೆಗೆ ತನ್ನಿ.
ನೀರು ದೋಸೆ ಹಿಟ್ಟಿನಂತೆ ನೀರ್ ನೀರಾಗಕೂಡದು.
ದೋಸೆ ಎರೆಯಿರಿ ಲಘುವಾಗಿ ಹರಡಿ,
ಗರಿಗರಿಯಾಗಿ ಎಬ್ಬಿಸಿ.

ತೆಂಗಿನ ಚಟ್ಣಿ ಬೆಲ್ಲದ ಪಾಕದೊಂದಿಗೆ ಸವಿಯಿರಿ.

ದೋಸೆ ಹಿಟ್ಟು ಮಿಕ್ಕಿದ್ದನ್ನು ತೆಗೆದಿರಿಸಿ ಉಳಿದ ಚಟ್ಣಿಯನ್ನೂ ಬೆರೆಸಿ ತಂಪುಪೆಟ್ಟಿಗೆಯಲ್ಲಿ ಇಟ್ಟಾಯ್ತು.
ನನ್ನ ಶೇಖರಣಾ ವಿಧಾನ ಕಂಡು ಗೌರತ್ತೆಗೂ ನಗು..
ಸಂಜೆ ಚಟ್ನಿಯೂ ಕೂಡಿದಂತಹ ದೋಸೆ  ಥರ ಎದ್ದು ಬಂದಿತು.

ಆಹಾ... ದೋಸೆಯೇ ಏನು ನಿನ್ನ ಹೆಸರು?
ಚಟ್ನಿ ದೋಸೆಯೆನ್ನಲೇ ಗಂಜಿ ದೋಸೆಯೆನ್ನಲೇ...
ತಿಳಿಯದಾಗಿದೆ.

ಚಟ್ನಿ ಮಾಡಿದ್ದು ಹೇಗೇ?

ತೆಂಗಿನ ತುರಿ 4 ಚಮಚ
ದೊಡ್ಡ ನೀರುಳ್ಳಿ
ಹಸಿಮೆಣಸು
ಚಿಕ್ಕ ತುಂಡು ಶುಂಠಿ
ಅಗತ್ಯದ ಉಪ್ಪು ಹುಣಸೆ ಬೀಜದ ಗಾತ್ರದ ಹುಳಿ.
ನೀರು ಹಾಕದೇ ಅರೆಯಿರಿ ನೀರುಳ್ಳಿಯ ನೀರು ಅರೆಯಲು ಸಾಕು.

ಮಿಕ್ಕ ಅನ್ನದ ಸದ್ಬಳಕೆ ಮಾಡಲು ನಾಯಿ ತಿಳಿಸಿ ಕೊಟ್ಟಿತು.








Wednesday 3 June 2020

ಉಪ್ಪು ಸೊಳೆ ದೋಸೆ





ದಿನವೂ ನನ್ನ ಹಲಸಿನಕಾಯಿ ತಿಂಡಿಗಳನ್ನು ಫೇಸ್ ಬುಕ್ ಇನ್ ಸ್ಟಾಗ್ರಾಮ್ಬ್ಲಾಗ್ಟ್ವಿಟರುಗಳಲ್ಲಿ ನೋಡುತ್ತ  ಲಾಕ್ ಡೌನ್ ಕಾಲದಲ್ಲಿ ಊರಿಗೆ ಬರಲಾಗದೆ ಬೆಂಗಳೂರಿನಲ್ಲೇ ಇರಬೇಕಾಗಿ ಬಂದಂತಹ ನಮ್ಮ ಮಧು ಒಂದು ದಿನ ತಡೆಯಲಾಗದೆ ಮಂಗಳೂರು ಸ್ಟೋರ್ ಕಡೆ ಹೋಗಿ ಉಪ್ಪು ಸೊಳೆಯ ಪ್ಯಾಕ್ ಹಿಡಿದು ಕೊಂಡು ಬಂದ.

ನನಗೆ ಕಾಲ್ ಮಾಡಿದ ಅಮ್ಮ.."
ನಾಳೆ ದೋಸೆ ಏನ್ಮಾಡ್ತೀಯ ಸುಮ್ಮನೇ ತೆಳ್ಳವು ಎರೆದು ಬೆಲ್ಲಸುಳಿ ಹಾಕ್ಕೊಂಡು ತಿನ್ನಿ ಇಬ್ರೂ.. "
ತೆಳ್ಳವು ಏನೂ ಬೇಡ ನಾನೀಗ ಉಪ್ಪು ಸೊಳೆ ತಂದಿಟ್ಟಿದ್ದೇನೆ ಅದನ್ನು ಹೇಗೆ ದೋಸೆ ಮಾಡೂದೂಂತ ಬರೆದು ಕಳಿಸು.. "
ಉಪ್ಪು ಸೊಳೆಯ ರೊಟ್ಟಿ ಮಾಡೂದಲ್ವ...  ಅದೆಲ್ಲ ರಗಳೆಯ ಕೆಲಸ ಬಾಳೆ ಎಲೆ ರೊಟ್ಟಿಮಣೆ ಅಂತ ಹರಗಣ.. "
ಇದು ಫ್ರೆಶ್ ಬಂದಿದ್ದು,   ಹಾಗಾದ್ರೆ ದೋಸೆ ಇಲ್ವಾ.. “
ಆಯ್ತಪ್ಪರೊಟ್ಟಿ ಬೇಡದೋಸೆ ಮಾಡು... ಮೊದಲು ಅಕ್ಕಿ ನೀರಿಗೆ ಹಾಕು ಸೊಳೆ ಉಪ್ಪು ಬಿಡಲಿಕ್ಕೆ ನೀರು ಎರೆದು ಇಡು.
ಅಕ್ಕಿ ಒಂದು ಲೋಟ,  ಸೊಳೆಯೂ ಒಂದು ಲೋಟ ಆಯ್ತಾ,  ಮಾಡುವ ಕ್ರಮ ಈಗ್ಲೇ ಬರೆದು ಕಳಿಸ್ತೇನೆ..."



ಲೋಟ ಅಕ್ಕಿ
ತೊಳೆದು ನೀರು ಹಾಕಿ 4 ಗಂಟೆ ಇಡಬೇಕು.
ಎರಡು ಹಿಡಿ ಆಗುವಷ್ಟು ಸೊಳೆಯನ್ನು ಉಪ್ಪು ಬಿಡಿಸಲು ನೀರೆರೆದು ಇಡಬೇಕು.
ಸೊಳೆಯನ್ನು ಉದ್ದಗೆ ಸಿಗಿಯಲು ಬರುತ್ತದೆ ತುಂಡು ತುಂಡು ಮಾಡಿ ಲೋಟ ಭರ್ತಿ ಮಾಡಿ ಇಡುವುದು ಒತ್ತಿ ಒತ್ತಿ ಇಡಬೇಕು.
ಒಂದೇ ಲೆಕ್ಕದ ಅಳತೆ ಆಯಿತು.

 ಮೊದಲು ಸೊಳೆಯನ್ನು ನೀರು ಹಾಕದೆ ತಿರುಗಿಸಿ ನೋಡುವುದು ಹುಡಿ ಅಥವಾ ಪೇಸ್ಟ್ ತರ ಆದರೆ ಸಾಕು.
ಅದಕ್ಕೇ ತೊಳೆದ ಅಕ್ಕಿ ಹಾಕಿ ಅರೆಯುವುದು
ತಿರುಗಲು ಬೇಕಾದಷ್ಟೇ ನೀರು ಎರೆದರೆ ಸಾಕು.

ಉಪ್ಪು ಸೊಳೆಯಲ್ಲವೇ ಪುನಃ ಉಪ್ಪು ಹಾಕಬೇಡ.
ಅಂದಾಜು ಒಂದು ನಿಮಿಷದಲ್ಲಿ ನುಣ್ಣಗಾದೀತು.

ಹಿಟ್ಟು ತೆಗೆದು ತಪಲೆಗೆ ಹಾಕುವುದು.
ಉದ್ದಿನ ದೋಸೆ ಯಾ ಇಡ್ಲಿ ಹಿಟ್ಟಿನ ಹಾಗಿರಬೇಕು
ಹಿಟ್ಟು ನೀರಾಗಿದೇ ಅಂತಾದರೆ ಒಂದೆರಡು ಚಮಚ  ಅಕ್ಕಿ ಹುಡಿ ಬೆರೆಸುವುದು.

ದೋಸೆ ಎರೆಯುವಾಗ ಕಾವಲಿ ಎಣ್ಣೆಣ್ಣೆ ಆಗಿರಬಾರದು 
ಜಿಡ್ಡು ಇದ್ದರೆ  ಮೊದಲೇ ಒರೆಸಿ ತೆಗೆದು ಗ್ಯಾಸ್ ಮೇಲೆ ಇಡುವುದು.

ಕಾವಲಿ ಕಾದಾಗ ನೀರು ಸಿಡಿಸಿ ನೋಡಿನಂತರ ಪೇಪರ್ ದೋಸೆ ಎರೆಯುವುದು.
ದೋಸೆಗೆ ತುಪ್ಪ ಸವರ ಬಾರದು ಪುನಃ ಜಿಡ್ಡು ತೆಗೆಯುವ ಕೆಲಸ ಬೇಡ.
ತಿನ್ನುವಾಗ ದೋಸೆಗೆ ತುಪ್ಪ ಎಣ್ಣೆ ಹಾಕಬಹುದು 
ಇದು oil free ದೋಸೆ.

ರವೆ ಎರೆದು ತಿನ್ನುವುದು.

ಮಗನಿಗಾಗಿ ಬರೆದ ದೋಸೆಯ ವಿಧಾನ ಇಲ್ಲಿ ಬಂದಿದೆ.  ದೋಸೆ ಹಾಗೂ ಉಪ್ಪುಸೊಳೆಯ ಫೋಟೋ ಅವನೇ ಕಳಿಸಿದ್ದು.