Pages

Ads 468x60px

Monday, 25 May 2015

ಕಿತ್ತಳೆ ಗೊಜ್ಜು

ಕಿತ್ತಳೆ ಹಣ್ಣು ತಂದಿದ್ದೀರಿ, ತಿಂದಿದ್ದೀರಿ, ಸಿಪ್ಪೆ ಆಚೆ ಎಸೆಯುತ್ತೀರಿ, ಹ್ಞಾ, ಅದೊಂದು ಮಾಡದಿರಿ.  ನಮ್ಮ ಸ್ವಚ್ಛಭಾರತ ಅಭಿಯಾನದಲ್ಲಿ ಹಣ್ಣಿನ ಸಿಪ್ಪೆ ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಕಿತ್ತಳೆ ಸಿಪ್ಪೆ ಇಟ್ಕೊಳ್ಳಿ.
ಕೇವಲ ಎರಡು ಚೂರು ಸಿಪ್ಪೆ ಸಾಕು, ನೀರಿನಲ್ಲಿ ಕುದಿಸಿ ಇಟ್ಕೊಳ್ಳಿ.
ಕಾಯಿತುರಿ ಇಲ್ಲವೇ, ತುರಿದಿಟ್ಕೊಳ್ಳಿ.
2-3 ಒಣಮೆಣಸು, 2 ಚಮಚ ಕೊತ್ತಂಬ್ರಿ, ಕಾಳಿನಷ್ಟು ಇಂಗು, 1 ಚಮಚ ಉದ್ದಿನಬೇಳೆ, 2 ಚಮಚ ಎಳ್ಳು, ಒಂದೆಸಳು ಕರಿಬೇವು ಎಣ್ಣೆಪಸೆಯಲ್ಲಿ ಹುರಿದಿಟ್ಕೊಳ್ಳಿ.
ಕಾಯಿತುರಿಯೊಂದಿಗೆ ಹುರಿದ ಮಸಾಲಾ ಸಾಮಗ್ರಿಗಳನ್ನು
ಅರೆಯಿರಿ. ಅರೆಯುವಾಗಲೇ ಹುಳಿ ಹಾಕಿಕೊಳ್ಳಿ, ಬೀಂಬುಳಿ ಇದ್ದರೆ ಅದೇ ಆದೀತು. ಹ್ಞಾ, ಬೇಯಿಸಿಟ್ಟ ಕಿತ್ತಳೆ ಸಿಪ್ಪೆಯನ್ನೂ ಅರೆಯುವಾಗ ಕೂಡಿಸಿಕೊಳ್ಳಿ. ಅರೆದ ಅರಪ್ಪನ್ನು ತೆಗೆದಿರಿಸಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟಿರಾ, ಸಾಸಿವೆ ಸಿಡಿದಾಗ ಕರಿಬೇವು ಬೀಳಲಿ.
2 ಹಸಿಮೆಣಸು ಸಿಗಿದು ಹಾಕಿ, ಬಾಡಲಿ.
ಕಿತ್ತಳೆ ಸಿಪ್ಪೆ ಬೇಯಿಸಿದ ನೀರು ಇಟ್ಕೊಂಡಿದೀರಾ ತಾನೇ, ಒಗ್ಗರಣೆ ಸಹಿತವಾಗಿ ಅರೆದಿಟ್ಟ ಮಸಾಲೆ ( ಅರಪ್ಪು ) ಕೂಡಿಸಿ.
ರುಚಿಯಾಗುವಂತೆ ಬೆಲ್ಲ ಬೆರೆಯಲಿ.
ಉಪ್ಪು ಮರೆಯದಿರಲಿ.
ಅನ್ನದೊಂದಿಗೆ ಸವಿಯಿರಿ. " ಪುಳಿಯೋಗರೆಗಿಂತಲೂ ಈ ಗೊಜ್ಜು ಚೆನ್ನ " ಅಂತ ಹೇಳಿಯೇ ಹೇಳ್ತೀರಾ.
ಹೊತ್ತುಹೊತ್ತಿಗೆ ಕುದಿಸಿಟ್ಟುಕೊಂಡಲ್ಲಿ ಮುಗಿಯುವ ತನಕ ಸವಿದೇ ಸವಿಯುತ್ತೀರಾ.

🍋🍋🍋🍋🍋


ಹಣ್ಣಿಗಿಂತ ಅಂದರೆ ಕಿತ್ತಳೆ ತೊಳೆಗಿಂತಲೂ ಹೆಚ್ಚು ನಾರು ಹೊಂದಿರುವಂತ ಕಿತ್ತಳೆ ಸಿಪ್ಪೆಯಲ್ಲಿ ಇರುವ tangeretin ಮತ್ತು nobiletin ರಸ ಪದಾರ್ಥಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಪ್ರಬಲ ಶಕ್ತಿಯನ್ನು ಪಡೆದಿವೆ.

ಕಿತ್ತಳೆ ಸಿಪ್ಪೆಯಲ್ಲಿ ಇನ್ನೂ ಏನೇನಿವೆ? ನೋಡೋಣ. ಸುಮಾರಾಗಿ 100ಗ್ರಾಂ ಕಿತ್ತಳೆ ಸಿಪ್ಪೆಯಲ್ಲಿ ನಾರು ಮಾತ್ರವಲ್ಲದೆ ಸಿಟ್ರಸ್ ಎಣ್ಣೆ ಅಲ್ಪ ಪ್ರಮಾಣದಲ್ಲಿರುತ್ತದೆ. ಪ್ರೊಟೀನ್ ಯುಕ್ತ ಹಾಗೂ ವಿಟಮಿನ್ ಬಿ, ವಿಟಮಿನ್ ಸಿ ಗಳಿಂದ ಕೂಡಿರುವ ಕಿತ್ತಳೆ ಸಿಪ್ಪೆ ಖನಿಜಾಂಶಗಳಿಂದ ಸಮೃದ್ಧವಾಗಿದೆ.

ಒಂದು ಅಧ್ಯಯನದ ಪ್ರಕಾರ ನಿಯಮಿತವಾಗಿ ಕಿತ್ತಳೆ ಸಿಪ್ಪೆ ತಿನ್ನುವ ಅಭ್ಯಾಸ ಇರುವವರಿಗೆ ಚರ್ಮದ ಯಾ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇಲ್ಲ. ಕೊಲೆಸ್ಟರಾಲ್ ಮಟ್ಟವನ್ನೂ ಕುಗ್ಗಿಸುವ ಶಕ್ತಿ ಸಿಪ್ಪೆಯಲ್ಲಿದೆ.

ಅತಿಯಾದ ದೇಹತೂಕ ಹೊಂದಿರುವವರಿಗೆ ಇಲ್ಲಿ ಸಂತಸ ತರುವ ಸುದ್ದಿ ಇದೆ! ದಿನವೂ ಕಿತ್ತಳೆ ಸಿಪ್ಪೆ ತಿನ್ನಿ, ತೂಕ ಇಳಿಸಿ. ತೂಕ ಇಳಿದು ನಿತ್ರಾಣಿಗಳಾದೇವೆಂಬ ಭಯ ಬೇಡ. ಶರೀರದ ಮೆಟಬಾಲಿಸಮ್, ಅಂದರೆ ಜೀವರಾಸಾಯನಿಕ ಕ್ರಿಯೆಯನ್ನು ಸುವ್ಯವಸ್ಥಿತವಾಗಿರಿಸುವುದಲ್ಲದೆ ಅತಿಯಾದ ಬೊಜ್ಜು ಕರಗಿಯೇ ಹೋಗುವುದು.

ಎಸಿಡಿಟಿಯಿಂದಾಗಿ ಎದೆ ಉರಿ ಏಳುವುದಿದೆ, ತಂಪುಗುಣ ಹೊಂದಿರುವ ಕಿತ್ತಳೆ ಸಿಪ್ಪೆ ಸಣ್ಣಪುಟ್ಟ ಎಸಿಡಿಟಿ ತೊಂದರೆಗಳ ಪರಿಹಾರಕ. ಪಚನಾಂಗಗಳ ಕಾರ್ಯವೂ ಸುಲಲಿತವಾಗಿರುವುದು, ಅಜೀರ್ಣವ್ಯಾಧಿ ಬಾಧಿಸದು, ಪೆಕ್ಟಿನ್ ಎಂಬ ರಸದ್ರವ್ಯದ ಇರುವಿಕೆಯಿಂದಾಗಿ ಮಲಬದ್ಧತೆಯ ಕಿರಿಕಿರಿಯೂ ಇರದು. ವಿಟಮಿನ್ ಸಿ ಹಾಗೂ ಎ ಅನ್ನಾಂಗಗಳಿಂದ ತುಂಬಿದ ಕಿತ್ತಳೆ ಸಿಪ್ಪೆ ಒಂದು ನೈಸರ್ಗಿಕ ಆಂಟಿಓಕ್ಸಿಡೆಂಟ್ ಆಗಿರುತ್ತದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಂತದ್ದು.

ಎಷ್ಟೇ ಹಲ್ಲುಜ್ಜಿದರೂ ಬಾಯಿ ದುರ್ನಾತ ಬೀರುತ್ತಿದೆಯಾದಲ್ಲಿ ಕಿತ್ತಳೆ ಸಿಪ್ಪೆಯನ್ನು ಅಗಿಯಿರಿ. ದುರ್ವಾಸನೆ ತಡೆಗಟ್ಟಿ, ದಂತಕುಳಿಗಳೊಡನೆ ಹೋರಾಡಿ ಗೆಲ್ಲುವುದೀ ಸಿಪ್ಪೆ. ಆದರೆ ದಂತವೈದ್ಯರನ್ನು ಭೇಟಿಯಾಗಲು ಮರೆಯದಿರಿ!

ಆಯ್ತು, ಕಿತ್ತಳೆ ಸಿಪ್ಪೆ ತಿನ್ನೋದು ಹೇಗೆ ?

ರಸ್ತೆ ಬದಿಯಲ್ಲಿ ಕಿತ್ತಳೆ ಹಣ್ಣು ಖರೀದಿಸಿದ್ದೀರಾ, ಸಿಪ್ಪೆಯನ್ನು ತೊಳೆಯಲೇ ಬೇಕು. ನೀರ ಪಸೆ ಆರಿದ ನಂತರ ಚಿಕ್ಕದಾಗಿ ಕತ್ತರಿಸಿ, ನಮ್ಮ ಅಡುಗೆಮನೆಯ ಯಂತ್ರ ಮಿಕ್ಸೀ ಕೂಡಾ ಪುಡಿ ಮಾಡಿ ಕೊಡುತ್ತದೆ. ಡಬ್ಬದಲ್ಲಿ ಇಟ್ಟು ಉಪಯೋಗಿಸುವುದಾದರೆ ಹಪ್ಪಳ ಒಣಗಿದಂತಿರಬೇಕು. ಬಿಸಿಲಿಗಿಟ್ಟು ಒಣಗಿಸಿ, ಬಿಸಿಲಿಲ್ಲವೇ, ಮೈಕ್ರೋವೇವ್ ಅವೆನ್ ಇದೆಯಾ, ಒಣಗಿಸಲಿಕ್ಕೆ ಅದೂ ಆದೀತು.

ಶೀತ, ಕೆಮ್ಮು, ಬಾಯಿರುಚಿ ಕೆಟ್ಟಾಗ ಬಿಸಿಬಿಸಿಯಾಗಿ ಚಹಾ ಕುಡೀತೀರಾ, ಮರೆಯದೆ ಕಿತ್ತಳೆ ಸಿಪ್ಪೆ ಹಾಕಿಯೇ ನೀರು ಕುದಿಸಿ, ತಕ್ಷಣದ ಉಪಶಮನ ಪಡೆಯಿರಿ. ಕೇವಲ ಸಿಪ್ಪೆಯನ್ನು ಹತ್ತು ಹದಿನೈದು ನಿಮಿಷ ಕುದಿಸಿ ಕಷಾಯದಂತೆ ಕುಡಿಯುವುದರಿಂದಲೂ ಜಡತನವನ್ನು ತೊಲಗಿಸಬಹುದು.

ಸಾವಯವ ಪದ್ಧತಿಯಲ್ಲಿ ಬೆಳೆದ ಹಣ್ಣುಗಳನ್ನು ಹುಡುಕಿ ಖರೀದಿಸಬೇಕಾಗಿದೆ. ಕಿತ್ತಳೆಹಣ್ಣು ವಾಣಿಜ್ಯಬೆಳೆ ಆಗಿರುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಕೃಷಿಕರು ರಸಗೊಬ್ಬರಗಳನ್ನೂ ಕೀಟನಾಶಕಗಳನ್ನೂ ಬಳಸದಿರುತ್ತಾರೆಯೇ, ಮಾರುಕಟ್ಟೆಗೆ ಬಂದ ಹಣ್ಣು ಕೆಡದಂತಿರಲು, ತಾಜಾತನ ಉಳಿಸಿಕೊಳ್ಳಲು ಇನ್ನಷ್ಟು ಪ್ರಯೋಗಗಳಿಗೆ ಬಲಿಪಶುವಾಗಿ ಕೊನೆಗೆ ಗ್ರಾಹಕರ ಕೈ ಸೇರುವ ಕಿತ್ತಳೆ, ಸಿಪ್ಪೆ ಹೇಗೆ ತಿನ್ನಲಿ ಎಂದು ಕೇಳಲೆ...

🍊🍊🍊🍊🍊


ನಾನು ಕಲೆಹಾಕಿದ್ದ ಕಿತ್ತಳೆ ಸಿಪ್ಪೆಯ ಮಾಹಿತಿಗಳನ್ನು ನಮ್ಮೆಜಮಾನ್ರು ಓದಿಕೊಂಡಿದ್ರೂಂತ ಕಾಣುತ್ತೆ, ಪೇಟೆಯಿಂದ ಬರುವಾಗ ಚೀಲ ತುಂಬಾ ಚಿತ್ತುಪುಳಿ ಹಣ್ಣುಗಳನ್ನು ತಂದಿದ್ದರು. " ಇದರ ಸಿಪ್ಪೆ ಅಡುಗೆ ಮಾಡ್ಬೋದು, ನಮ್ಮ ಊರಿಂದೇ ಹಣ್ಣಲ್ವೇ.."
" ಆದೀತೇನೋ..."
" ಬೆಂಗ್ಳೂರಿಗೆ ಹೋಗಿದ್ವಲ್ಲ, ಮಡಿಕೇರಿ ರಸ್ತೆಯಲ್ಲಿ ರಾಶಿ ರಾಶಿ ಮರಾಟ ಆಗ್ತಾ ಇದ್ದಿದ್ದು ನೆನಪಿದ್ಯಾ ..."

ಚಿತ್ತುಪುಳಿ ಕಿತ್ತಳೆಯಷ್ಟು ಸಿಹಿ ಇರುವುದಿಲ್ಲ, ತುಸು ಹುಳಿ, ಗಾತ್ರದಲ್ಲೂ ಪುಟ್ಟದು. ಸಿಪ್ಪೆಯಂತೂ ಘಮ ಘಮ. ಅಂತೂ ನಮ್ಮೆಜಮಾನ್ರು ಹೇಳಿದಂತೆ ಚಿತ್ತುಪುಳಿ ಸಿಪ್ಪೆಗಳನ್ನು ಬಿಸಿಲಿಗಿಟ್ಟು ಒಣಗಿಸುವ ತಯಾರಿಯೂ ನಡೆಯಿತು. ಹಿಂದೆ ಮೈಕ್ರೋವೇವ್ ಅವೆನ್ ಇದ್ದಾಗ ಅದರೊಳಗಿಟ್ಟು ಒಣಗಿಸಿದ್ದೂ ನೆನಪಾಯಿತು. ಹಾಗೆ ಒಣಗಿಸಿದ್ದು ಮಾತ್ರವಲ್ಲದೆ ನುಣ್ಣಗೆ ಪುಡಿ ಮಾಡಿ ಇಟ್ಕೊಂಡಿದ್ದೆ. ಜಾಡಿ ತುಂಬ ಇದ್ದ ಕಿತ್ತಳೆ ಪುಡಿಯನ್ನು ನಡಿ ನನ್ನಮ್ಮ " ಸ್ವಲ್ಪ ನಂಗೂ ಕೊಟ್ಟಿರು, ಐಸ್ ಕ್ರೀಂ ಮಾಡಲಿಕ್ಕೂ ಆಗ್ತದೆ.." ಅಂದಿದ್ದೂ ನೆನಪಾಯಿತು.ಈದಿನ ಹಸಿ ಸಿಪ್ಪೆಯಿಂದ ತಂಪುಹುಳಿ ಮಾಡೋಣ.
ಒಂದು ಚಿಕ್ಕ ತುಂಡು ಹಸಿ ಸಿಪ್ಪೆಯನ್ನು ಕುದಿಯುವ ನೀರಿನಲ್ಲಿ ಹಾಕಿಟ್ಟಿರಿ. ನಾನ್ ಸ್ಟಿಕ್ ತವಾದಲ್ಲಿ ಹುರಿದುಕೊಂಡರೂ ಆದೀತು.
ತುಸು ಹಸಿ ಕಾಯಿತುರಿ, ಸಿಹಿಮಜ್ಜಿಗೆಯೊಂದಿಗೆ ಅರೆಯಿರಿ.
ರುಚಿಗೆ ತಕ್ಕಷ್ಟು ಉಪ್ಪು ಕೂಡಿಸಿ.
ಸುವಾಸನೆ ಹೊಂದಿರುವ ಈ ತಂಬುಳಿಗೆ ಜೀರಿಗೆ ಇತ್ಯಾದಿ ಹಾಕಬೇಕಾಗಿಲ್ಲ. ನೀರು ಎರೆದು ತೆಳ್ಳಗೆ ಮಾಡಿದರೆ ಉತ್ತಮ.ಊಟದ ಕೊನೆಗೆ ಮಜ್ಜಿಗೆ ನೀರು ಕುಡಿಯುತ್ತೀರಾ ? ಹಾಗಿದ್ದರೆ ಮಜ್ಜಿಗೆ ನೀರಿಗೆ ಸಿಪ್ಪೆಯ ಪುಡಿ ಉದುರಿಸಿ, ಕುಡಿಯಿರಿ.

ತಂಬುಳಿ ಆಯ್ತಲ್ಲ, ಊಟದ ಸಿದ್ಧತೆ ನಡೆಯಿತು. ತಂಬುಳಿ ಉಣ್ಣಲು ಚೆನ್ನಪ್ಪನೂ ಅಡಿಕೆ ಹಾಳೆಯ ಬಟ್ಟಲು ಮಾಡಿಟ್ಟು ಕೂತಿದ್ದ. ಅನ್ನ ವ್ಯಂಜನಾದಿಗಳನ್ನು ಬಡಿಸುತ್ತ " ಚಿತ್ತುಪುಳಿ ಸಿಪ್ಪೆಗೆ ಔಷಧಿ ಬಿಡ್ತಾರೇನೋ .." ಎಂದು ಅವನನ್ನು ಕೆಣಕಲಾಗಿ " ಎಂಥದು ಅಕ್ಕ ನೀವು ಕೇಳೂದು, ಮದ್ದು ಹಾಕದಿದ್ದರೆ ಈಗ ಯಾವ್ದೂ ಆಗೂದಿಲ್ಲ " ಹೇಳುತ್ತಾ ಚೆನ್ನಪ್ಪನೂ ತಂಬುಳಿಯನ್ನೇ ಸವಿದು ತಿಂದಾ ಅನ್ನಿ.

ತಂಬುಳಿ ಮಾಡಬಹುದಾದದ್ದು ಚಟ್ನಿಗೂ ಆಗುತ್ತದೆ. ಮಾಮೂಲು ಉದ್ದಿನ ದೋಸೆಗೆ ನೀರುಳ್ಳಿ ಬೆಳ್ಳುಳ್ಳಿಗಳ ಚಟ್ನಿ ಮಾಮೂಲಲ್ವೇ... ನಾವೀಗ ಚಿತ್ತುಪುಳಿ ಸಿಪ್ಪೆಯ ಚಟ್ನಿ ತಯಾರಿಸೋಣ. ಹಸಿಮೆಣಸು, ಕಾಯಿತುರಿ, ಹುರಿದ ಅಥವಾ ಕುದಿ ನೀರಿನಲ್ಲಿ ನೆನೆದ ಸಿಪ್ಪೆ, ಹುಣಸೇ ಬೀಜದ ಗಾತ್ರದಷ್ಟು ಹುಳಿ, ರುಚಿಗೆ ಉಪ್ಪು ಕೂಡಿಕೊಂಡಲ್ಲಿ ಚಟ್ನಿ ಸಿದ್ಧಪಡಿಸಲು ಎಷ್ಟು ಹೊತ್ತು? ಅದೂ ಕರೆಂಟ್ ಇದ್ದರೆ!
ಇನ್ನಷ್ಟು ಚಿತ್ತುಪುಳಿ ಸಿಪ್ಪೆಗಳು ಚೆನ್ನಾಗಿ ಹುರಿಯಲ್ಪಟ್ಟುವು. ಒಂದೆರಡು ಚಮಚ ಕಾಳುಮೆಣಸು ಕೂಡಾ ಹುರಿಯಲಾಯಿತು. ನಾನ್ ಸ್ಟಿಕ್ ತವಾ ಇದೆ, ಇಂಡಕ್ಷನ್ ಒಲೆಯೂ ಇರುವಾಗ ಎಲ್ಲವೂ ಲೀಲಾಜಾಲ. ರುಚಿಗೆ ಉಪ್ಪು ಹುಳಿ ಕೂಡಿಸಿ ನುಣ್ಣಗೆ ಹುಡಿ ಮಾಡಿ ಇಟ್ಟುಕೊಳ್ಳತಕ್ಕದ್ದು. ಜಾಡಿಯಲ್ಲಿ ಈ ಚಟ್ನೀಪುಡಿ ಭದ್ರವಾಗಿಡಿ.

" ಹೌದೂ, ಈ ಚಟ್ನೀಪುಡಿ ಯಾಕಾಗಿ ?"
ಐಯ್ಯಂಗಾರ್ ಪುಳಿಯೋಗರೆ ಅಂತ ಮಾಡೋದಿದೆಯಲ್ಲ, ಜೊತೆಗೆ ಈ ಹುಡಿಯೂ ಕೂಡಿದಲ್ಲಿ ಪುಳಿಯೋಗರೆಯ ಸುಗಂಧಿತ ಸ್ವಾದ ಮನೆಮಂದಿಯನ್ನು ಅಡುಗೆಮನೆಯೊಳಗೆ ಓಡಿ ಬರುವಂತೆ ಮಾಡೀತು!


ಬೇಕಾದಾಗ ಉಪ್ಪು ಹುಳಿ ಬೆಲ್ಲಗಳ ದ್ರಾವಣ ಮಾಡಿ ಈ ಚಟ್ನೀಪುಡಿ ಅಗತ್ಯವಿದ್ದಷ್ಟು ಹಾಕಿ ಗೊಜ್ಜು ಮಾಡಬಹುದು, ಇದೂ ಒಂಥರಾ ಪುಳಿಂಜಿಯ ಹಾಗೇ ಅನ್ನಿ.
ಈ ಮೊದಲೇ ಹೇಳಿದಂತೆ ಮಜ್ಜಿಗೆ ನೀರಿಗೆ ಹಾಕಬಹುದಲ್ಲ, ಹೊಸರುಚಿಯ ನೀರುಮಜ್ಜಿಗೆ ಕುಡಿಯಬಹುದಲ್ಲ !

ಇನ್ನಷ್ಟು ವಿಚಾರಗಳನ್ನು ಹಂಚಿಕೊಳ್ಳಲು ಕುಂಬ್ಳೆಯಲ್ಲಿರುವ ತಂಗಿಗೆ ದೂರವಾಣಿ ಕರೆ ಹೋಯಿತು.
" ಏನಕ್ಕಾ ಸುದ್ದೀ ..."
" ಕಿತ್ತಳೆ ಸಿಪ್ಪೇದು....." ರಾಗ ತೆಗೆದೆ.
" ನಾನು ಒಂದ್ಸಾರಿ ಕಿತ್ತಳೆ ಸಿಪ್ಪೆ ಒಳ್ಳೇದೂಂತ ಮುಖಕ್ಕೆ ಉಜ್ಜಿದ್ದೂ, ತುರಿಸಲಿಕ್ಕೇ ಶುರುವಾಯ್ತು... ಹಾಳಾದ್ದು ಅದರ ಸುದ್ದಿ ತೆಗೀ ಬೇಡ " ಅನ್ನೋದೇ, ನನ್ ಕರ್ಮ...ಟಿಪ್ಪಣಿ: ಮೇ, 2015 ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತವಾಗಿರುವ ಲೇಖನ ಇದಾಗಿದೆ. ಜೊತೆಗೆ ' ಕುಶಲೋಪರಿ ' ಪುಟವೂ ಇಲ್ಲಿದೆ.


Saturday, 16 May 2015

ಚಪಾತಿಗೊಂದು ಕೂಟು


ಮಳೆಗಾಲ ಬಂದಿಲ್ಲ, ಆದರೇನಂತೆ, ಗುಡುಗು ಸಿಡಿಲುಗಳ ಅಟ್ಟಹಾಸ. ನಾಳೆ ಮುಂಜಾನೆ ಚಪಾತಿ ಮಾಡ್ಕೊಳ್ಳೋಣ
ಅಂತ ತೀರ್ಮಾನಕ್ಕೆ ಬಂದಿದ್ದೆ. ಗಳಿಗೆಗೊಮ್ಮೆ ಹೋಗುತ್ತಾ, ಬರುತ್ತಾ ಇರುವ ಈ ವಿದ್ಯುತ್ತನ್ನು ನಂಬಿ ಅಕ್ಕಿ, ಉದ್ದು ಅರೆಯುವ ದುಃಸಾಹಸ ಬೇಡ.


ಚಪಾತಿಗೊಂದು ಕೂಟು ಆಗ್ಬೇಡವೇ ? ಆಗಲೇಬೇಕು, ಸುಮ್ಸುಮ್ನೇ ಚಪಾತಿ ಹರಿದು ತಿನ್ನುವುದೆಂದರೇನು ? ಅದೂ ಅಡುಗೆಮನೆಯಲ್ಲಿ ಏನೇನೋ ಸಾಹಿತ್ಯಗಳು ಸಿದ್ಧವಿರುವಾಗ ? ನಮ್ಮೂರಿನ ಜನಪ್ರಿಯ ಬೇಳೆಕಾಳು ಪದೆಂಗಿ. " ಅರೆ! ಪದೆಂಗಿ ಅಂದ್ರೇನೂ... ಅಂದ್ಬಿಟ್ಟೀರಾ ಮತ್ತೆ, ನಮ್ಮ ಜನಸಾಮಾನ್ಯರ ಭಾಷೆ ತುಳು, ಮೂಂಙ್ ದಾಲ್ ಅಂತ ಆಂಗ್ಲಭಾಷಾ ಪ್ರವೀಣರು ಹೇಳ್ತಾರಲ್ಲ, ಆ ಹೆಸ್ರು ಕಾಳು ಇದು.

ಎರಡು ಮುಷ್ಠಿ ಕಾಳುಗಳನ್ನು ನೆನೆ ಹಾಕಿ ಆಯ್ತು. ಚಪಾತಿ ಹಿಟ್ಟು ನಾಳೆ ಕಲಸಿದ್ರಾಯ್ತು. ರಾತ್ರಿ ಮುಂಚಿತವಾಗಿ ಕಲಸಿಟ್ಟರೆ ಒಂದೆರಡು ಚಪಾತಿ ಹೆಚ್ಚು ಸಿಗುತ್ತಂತೆ, ಇರೋದು ನಾವಿಬ್ರೇ, ಹೆಚ್ಚುವರಿ ಚಪಾತಿಗಳ ಅಗತ್ಯವೇನೂ ಇಲ್ಲ.

ಬೆಳಗಾಯಿತು, ಹಲ್ಲುಜ್ಜಿ ಬರುವಾಗಲೇ ಕುಕ್ಕರು್ರ ಮಡಿಯಾಗಿ ಒಳಗೆ ಬಂದಿತು, ಪಚ್ಚೆಸ್ರು ಬೇಯಿಸಬೇಕಲ್ಲ.

ಚಪಾತಿ ಹಿಟ್ಟು ಕಲಸೋಣ. 2 ಲೋಟ ಹಿಟ್ಟು, ಒಂದು ಲೋಟ ಕುದಿಯುತ್ತಿರುವ ನೀರು, ಉಪ್ಪು ಕೂಡಿದ್ದಾಗಿರಬೇಕು. ಇದು ವಾಡಿಕೆಯ ಲೆಕ್ಕಾಚಾರ.

ಹಿಟ್ಟಿಗೆ ಕುದಿನೀರು ಎರೆದು ಕಲಸಿ, ಕೈ ಸುಡದಂತೆ ಮರದ ಸಟ್ಟುಗ ಬಳಸಿ. ತುಸು ಆರಿದ ನಂತರ ಕೈಯಲ್ಲೇ ಮುದ್ದೆಗಟ್ಟಿ, ಚೆನ್ನಾಗಿ ನಾದಿರಿ. ಈ ವೇಳೆಗೆ ಹೆಸ್ರು ಕಾಳು ಬೆಂದಿರುತ್ತದೆ. ಇದನ್ನೊಂದು ಕೂಟು ಯಾ ಕರಿ್ರ ಎಂಬೋಪಾದಿಯಲ್ಲಿ ಪರಿವರ್ತಿಸುವುದು ಹೇಗೆ ?

ಒಂದು ದೊಡ್ಡ ನೀರುಳ್ಳಿ, ಚಿಕ್ಕದಾಗಿ ಕತ್ತರಿಸಿ.
ಒಂದು ಬೀಟ್ರೂಟ್ ತುಂಡನ್ನು ನೀರುಳ್ಳಿ ಥರಾನೇ ಕತ್ತರಿಸಿಕೊಳ್ಳಿ,
ಒಂದು ಹಿಡಿ ಕಾಯಿತುರಿ.
ಇವೆಲ್ಲವೂ ಬೆಂದ ಪಚ್ಚೆಸ್ರು ಬೇಳೆಯೊಂದಿಗೆ ಸೇರಲಿ. ರುಚಿಗೆ ಉಪ್ಪು ಬೀಳಲಿ. ಚೆನ್ನಾಗಿ ಕಲಸಿಕೊಳ್ಳಿ.. ಬೇಕಿದ್ದರೆ ಒಗ್ಗರಣೆ, ಮಸಾಲೆಪುಡಿ ಹಾಕಬಹುದು. ನಾನು ಹಾಕಿಲ್ಲ, ಪುನಃ: ಕುದಿಸಲೂ ಇಲ್ಲ. ಹಸಿ ತರಕಾರಿಗಳ ಕೋಸಂಬರಿ ಥರ, ಜತೆಗೆ ಬೇಯಿಸಿದ ಹೆಸ್ರು....

ವಾಡಿಕೆಯಂತೆ ಮಗಳು ಬಂದಿದ್ದಾಗ ಇದೇ ಪಚ್ಚೆಸ್ರು ಕೂಟು ಪುನರಾವರ್ತನೆ ಆಯಿತು. ಈ ಬಾರಿ ಬೀಟ್ರೂಟಿಲ್ಲ, ನೀರುಳ್ಳಿ, ಹಸಿಮೆಣಸು, ಕಾಯಿತುರಿ ಹಾಕಿದ್ದು ಬಿಟ್ರೆ ಬೇರೇನಿಲ್ಲ. ಚಪಾತಿ ತಿನ್ನುತ್ತಾ ಮಗಳಂದಿದ್ದು, " ಇನ್ನು ಚಪಾತಿಗೆ ಇದೇ ಕೂಟು ಮಾಡಮ್ಮ"

Saturday, 9 May 2015

ಮಲ್ಲಿಗೆಯ ಮಳೆಬಂದದ್ದು
ಗುಡುಗು ಸಿಡಿಲಿನ
ಬಿರುಮಳೆ
ಮನೆಯಂಗಳದಿ
ಅರಳಿದ್ದು
ಹೂ ಮಳೆ


ಗುಡು ಗುಡು ಸದ್ದು ಕೇಳುತ್ತಿತ್ತು
ಸಿಟಿ ಸಿಟಿಲ್ ಮಿಂಚು ಹೊಳೆಯುತ್ತಿತ್ತು
ನಿನ್ನೆ ಸಂಜೆ,
ಸೆಕೆ ದೂರ ಹೋಗಿದೆ
ತಂಪೂ ತಂಪಾಗಿದೆ
ಹೌದಲ್ಲ,
ಎಲ್ಲೋ ದೂರದಲ್ಲಿ
ಮಳೆ ಬಂದ ಹಾಗಿದೆ
ಓ ಅಕ್ಕಾ,
ಇಲ್ಲಿ ಹೂವರಳಿದೆನೆಲ ಕೋಮಳೆಯ
ಅಂತರಾಳ
ಕ್ಷಣಿಕ ಈ ಬದುಕು
ಹೂ ಬಳುಕು
ಫಳಫಳ ಬೆಳಕು

ಬಿಸಿಲ ಗಾವು
ಇದ್ದಕಿದ್ದ ಹಾಗೆ
ಗಾಳಿಯಲ್ಲಿ ಎದ್ದು
ಬಂದ ಸದ್ದು
ಧಪಧಪನೆ
ಹನಿ ಹನಿ
ಮಳೆ ಬಿದ್ದು
ಮಣ್ಣಿಗೂ ಪರಿಮಳ ಬಂದಿದ್ದು
ಜಾಲಿನ ಅಡಿಕೆ ಒದ್ದೆಯಾಗಿದ್ದು
ನೆಲದ ನೀರದಾಹ ಇಂಗದೇ
ಆಹ....
ದುಂಡುಮಲ್ಲಿಗೆ ಅರಳದೇ
ಟಿಪ್ಪಣಿ:  ಜೂನ್ 17,  ಶನಿವಾರ,  2017  ಕವನ ಮುಂದುವರಿದಿದೆ.


                               


                                  
ಬಂಡೆಕಲ್ಲುಗಳ ಸಂದಿಯಲ್ಲಿ

ತೂರಿ ಬಂದ ಮಲ್ಲಿಗೆಯ ಬಳ್ಳಿ

ಕಣ್ಣೆದುರಲ್ಲಿ ಹೂವರಳಿದರೂ

ಸುರಿದ ಮಳೆಯ ಅಬ್ಬರದಲ್ಲಿ

ಮಲ್ಲಿಗೆಯ ಕಂಪು ಹೋಯಿತೆಲ್ಲಿಗೆ?

Saturday, 2 May 2015

ತ್ಯಕ್ತ - ಅವ್ಯಕ್ತ
ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಳಂತೆ
ಒಳಚಕ್ಷು ಮುಚ್ಚಿತ್ತೆ
ಕುಂತಿಯಾದರೂ ಎಲ್ಲಿದ್ದಳಂತೆ|

ಸೀತೆಯನ್ನು ಎತ್ತಿ ಒಯ್ದನಂತೆ
ತ್ಯಕ್ತಳಾದಳೇ ಸೀತೆ
ಅದ್ಯಾವನೋ ಅಗಸನಂತೆ
ಏನೋ ಅಂದನಂತೆ
ಕರ್ಣಪಟಿಲಗಳಿಗೆ ಅಪ್ಪಳಿಸಿತೇ
ಹೀಗೊ ವ್ಯಕ್ತವಾಗುವುದಿತ್ತೇ|

ದೇವೇಂದಿರನಂತೆ
ಸೋಗಲಾಡಿ ವೇಷ ಕಣೇ ಹೇಳಿದವರಿಲ್ಲವಂತೆ
ಕಲ್ಲಾಗಿ ಹೋದಳಂತೆ
ಕೊನೆಗೂ ಕಾಯುತ್ತಿದ್ದಳಂತೆ|


ನೆಲದಾಳ
ಎಳೆಎಳೆಯ ಎಲೆ
ಎದ್ದು ಬಂದಿದ್ದು ಮೇಲೆ
ಚಿಮ್ಮುವ ಅಗ್ನಿಮುಖಿ
ಓಹ್, ಸೆರಗಲ್ಲಿ ಬಚ್ಚಿಟ್ಟ ಕೆಂಡ !
ಹೇಳಕ್ಕಾ ಇದರರ್ಥ
ಈ ಸೃಷ್ಟಿ ಯಾರ ಪ್ರೀತ್ಯರ್ಥ ?