Pages

Ads 468x60px

Friday 26 March 2021

ಬೆಂಡೆಯ ಮಜ್ಜಿಗೆ ಹುಳಿ



 ಈಗ ತಾನೇ ಗಿಡದಿಂದ ಕೊಯ್ದ ಬೆಂಡೆಕಾಯಿಗಳು ಬಂದಿವೆ.  ಇಂತಹ ಊರ ಬೆಂಡೆಕಾಯಿಗಳು  ಕಡುಬೇಸಿಗೆಯಲ್ಲಿ ಸಿಗಬೇಕಾದರೆಪುಣ್ಯ ಮಾಡಿರಬೇಕು.   ಬೆಂಡೆ ಬೆಳೆದವರ ಹೊಟ್ಟೆ ತಂಪಾಗಿರಲಿ.   ಬೆಂಡೆಯಷ್ಟು ತಂಪು ತರಕಾರಿ ಇನ್ನೊಂದಿಲ್ಲ.


 ಬೇಸಿಗೆಗೆ ತಂಪು ತಂಪಾದ ಮಜ್ಜಿಗೆಹುಳಿಯನ್ನೇ ಮಾಡೋಣ ಸಾಕಷ್ಟು ಮಜ್ಜಿಗೆಯೂ ಇದೆ ಹಸಿ ತೆಂಗಿನಕಾಯಿಯೂ ಇದೆ.   ಇನ್ನೇಕೆ ತಡ..


ಕತ್ತರಿಸುವ ಮುನ್ನಬೆಂಡೆಕಾಯಿಗಳನ್ನು ತೊಳೆಯಿರಿ.

ಆಯ್ದು ಇರಿಸೋಣ.

ಬೆಳೆದ ಬೆಂಡೆಕಾಯಿಗಳನ್ನು ಹುಡುಕಿ ತೆಗೆದಿರಿಸಬೇಕು ಅಡುಗೆಗೆ ಆಗದು ಬೆಂಡೆಯ ತುದಿ ಕೈಯಲ್ಲಿ ಮುರಿಯಲು ಬಂದಿತಾದರೆ ಉತ್ತಮ ಮುರಿಯಲಾಗದಿದ್ದರೆ ಬೆಳೆದಿದೆ ಎಂದರ್ಥ.

ನನಗೆ ದೊರೆತ ಬೆಂಡೆಗಳೆಲ್ಲ ಚೆನ್ನಾಗಿದ್ದುವು.   ಏಳೆಂಟು ಬೆಂಡೆಗಳು ಇಂದಿನ ಪಾದಾರ್ಥಕ್ಕೆ ಸಾಕು ಉಳಿದದ್ದು ನಾಳೆಗಾಯಿತು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟು ತಂಪು ಪೆಟ್ಟಿಗೆಯಲ್ಲಿರಿಸುವುದು.


ಹದ ಗಾತ್ರದ ಹೋಳುಗಳಾಗಲಿ ತಪ್ಪಿಯೂ ನೀರಿನಲ್ಲಿರಿಸಬಾರದು ಅಡುಗೆಯೇ ಕೆಟ್ಟೀತು.


ಒಂದು ಲೋಟ ಹುಳಿ ಮಜ್ಜಿಗೆಗೆ ಬೆಂಡೆಕಾಯಿಗಳು ಮುಳುಗುವಷ್ಟು ನೀರೆರೆದು ಕುದಿಯಲು ಇರಿಸಿ ಸೂಕ್ತ ಪ್ರಮಾಣದಲ್ಲಿ ಉಪ್ಪುಹಾಕಿರಿ ಮಜ್ಜಿಗೆಯ ದ್ರಾವಣ ಕುದಿದ ನಂತರ ಬೆಂಡೆಯ ಹೋಳುಗಳನ್ನು ಹಾಕಿರಿ.   ಬೇಗನೇ ಬೇಯುವ ತರಕಾರಿಯಾಗಿರುವುದರಿಂದ ಕುಕ್ಕರ್ ಅವಶ್ಯವಿಲ್ಲ.

ಕುಕ್ಕರಿನಲ್ಲೇ ಬೇಯಿಸುವವರು ನೀವಾಗಿದ್ದರೆ ಒಂದು ಸೀಟಿ ಹಾಕಿದ ಕೂಡಲೆ ಕೆಳಗಿಳಿಸಿ ಒತ್ತಡವನ್ನೂ ಕೊಡಲೇ ತೆಗೆಯುವ ಜಾಣರೂ ನಾವಾಗಿರಬೇಕು ಕುಕ್ಕರನ್ನು ನೀರಿನ ನಲ್ಲಿಯ ಕೆಳಗೆ ಹಿಡಿದರೆ ಬೇಗನೆ ಮುಚ್ಚಳ ತೆರೆಯಲು ಬರುತ್ತದೆ.

ಇಲ್ಲದೇ ಹೋದಲ್ಲಿ ಬೆಂಡಯ ಹೋಳುಗಳೆಲ್ಲ ಬಿಡಿಸಲ್ಪಟ್ಟು ಬೆಂಡೆಯ ಬೀಜಗಳು ಮಜ್ಜಿಗೆಯಲ್ಲಿ ಮುಳುಗೇಳುತ್ತಿರುವುದನ್ನು ನೋಡಿ ಆನಂದಿಸಬೇಕಷ್ಟೆ


ಅಂತೂ ಬೆಂಡೆಕಾಯಿಗಳನ್ನು ಹುಳಿಮಜ್ಜಿಗೆಯ ನೀರಿನಲ್ಲಿ ಬೇಯಿಸಿ ಆಯಿತು.

ಮಜ್ಜಿಗೆ ಹುಳಿಗೆ ಮುಖ್ಯವಾಗಿ ತೆಂಗಿನಕಾಯಿಯನ್ನು ನುಣ್ಣಗೆ ಅರೆಯಬೇಕಾಗಿದೆ ನಮ್ಮ ಮಿಕ್ಸಿ ಅರೆದು ಕೊಡುವಷ್ಟು ನುಣ್ಣಗೆ ಅರೆಯುವುದು ನನ್ನ ಬಳಿ ಹಸಿ ಅರಸಿಣ ಗೆಡ್ಡೆ ಇದ್ದಿತು ಚಿಕ್ಕ ಚಿಕ್ಕ ಚೂರುಗಳನ್ನಾಗಿಸಿ ಅರೆಯುವಾಗ ಹಾಕಲಾಯಿತು ಸುವಾಸನೆಯನ್ನೂ ಬಣ್ಣವನ್ನೂ ನೀಡುವ ಅರಸಿಣ ರಕ್ತಶುದ್ಧಿಕಾರಕ ವಿವಿಧ ಅಡುಗೆಯಲ್ಲಿ ಬಳಸುವ ಜಾಣರು ನಾವೆಂದು ಹೇಳಿಕೊಳ್ಳೋಣ.


ಬೇಯಿಸಿದ ಬೆಂಡೆಯಲ್ಲಿರುವ ಮಜ್ಜಿಗೆಯ ದ್ರಾವಣವನ್ನು ಬಸಿಯಿರಿ.

ತೆಂಗಿನ ಅರಪ್ಪನ್ನು ಕೂಡಿರಿ.

ಒಂದು ಲೋಟ ಸಿಹಿ ಮಜ್ಜಿಗೆ ಎರೆಯಿರಿ.

ಬೇಕಿದ್ದರೆ ಚಿಕ್ಕದೊಂದು ಬೆಲ್ಲ ಹಾಕಿರಿ.

ಬೆಂಡೆಯ ಮಜ್ಜಿಗೆ ಹುಳಿಯೆಂಬ ದ್ರವ ಪದಾರ್ಥವು ದಪ್ಪ ಗಸಿಯಂತಾಗಬಾರದು.

ಬಸಿದಿಟ್ಟ ಬೇಯಿಸಿದ ನೀರನ್ನು ಅವಶ್ಯಕತೆಗೆ ತಕ್ಕಷ್ಟು ಎರೆಯಿರಿ.

ಕುದಿಸಿರಿ.   ಹಾಲಿನ ಕೆನೆ ಮೇಲೆದ್ದು ಬರುವಂತೆ ಕುದಿದಾಗ ಸ್ಟವ್ ಆರಿಸಿ.   ಗಳಗಳನೆ ಕುದಿಯಲು ಬಿಡಬಾರದು ಮಜ್ಜಿಗೆ ಹುಳಿಯ ರುಚಿಯೇ ಹೋಯ್ತೆಂದು ತಿಳಿಯಿರಿ.

ತೆಂಗಿನ ಎಣ್ಣೆಯೇ ಒಗ್ಗರಣೆಗೆ ಸೂಕ್ತ ಕರಿಬೇವು ಕೂಡಿದ ಒಗ್ಗರಣೆ ಇರಲಿ ಒಗ್ಗರಣೆಗೆ ಹಾಕುವ ಮೆಣಸಿನ ಚೂರುಗಳೇ ಇದರ ಖಾರ.   ಖಾರ ಬೇಕಿದ್ದವರು ಉಣ್ಣುವಾಗ ಹಸಿಮೆಣಸನ್ನು ಕೂಡಿ ತಿನ್ನಿರಿ ಮಜ್ಜಿಗೆ ಹುಳಿಯ ರಸದಲ್ಲಿ ಹಸಿಮೆಣಸನ್ನು ನುರಿನುರಿದು ಉಣ್ಣಿರಿ.






Sunday 14 March 2021

ಪೂಂಬೆ ಗೊಜ್ಜು

 


ಸಂಕ್ರಾಂತಿಯ ದಿನ ಹತ್ತಿರವಾದಂತೆ ತೋಟದಿಂದ ಬಾಳೆಗೊನೆಗಳನ್ನು ಕಡಿದಿರಿಸಬೇಕಾಗಿದೆ ಹಿರಣ್ಯ ದುರ್ಗಾಪರಮೇಶ್ವರಿಯ ಪೂಜಾದಿನಊರ ಪರವೂರ ಭಕ್ತಾದಿಗಳ ಸೇವೆಹರಕೆಗಳಿಗೆ ದೇವಿ ಓಗೊಟ್ಟು  ಬೇಡಿಕೆಗಳಿಗೆ ಪ್ರತಿಸ್ಪಂದನೆ ಸಿಗಲು ಮುಂಜಾನೆಯಿಂದ ರಾತ್ರಿಯ ತನಕ ಪೂಜಾಕೈಂಕರ್ಯ


ನಾನೇನೂ ಕತ್ತಿ ಹಿಡಿದು ಬಾಳೆಯ ತೋಟಕ್ಕೆ ಹೋಗಬೇಕಾದ್ದಿಲ್ಲ.   ಅದರ ಉಸ್ತುವಾರಿಯ ಹೊಣೆ ರಘು ತನ್ನದಾಗಿಸಿಕೊಂಡಿದ್ದಾನೆ ರಘು ಬಂದ.   ಅಕ್ಕ ಕತ್ತಿ ಕೊಡಿ ಹಾಗೇ ಎರಡು ಊದುಬತ್ತಿಬೆಂಕೆಪೆಟ್ಟಿಗೆ.. "


ಊದುಬತ್ತಿ ಹಚ್ಚಿಟ್ಟು ಕಟಾರದೊಳಗೆ ಬಾಳೆಗೊನೆಗಳನ್ನು ಇಟ್ರೆ ಮುಗೀತು ಎರಡೇ ದಿನದಲ್ಲಿ ಹಣ್ಣುಗಳು ಲಭ್ಯ.


ಹೌದೂ ಬಾಳೆಗೊನೆ ಕಡಿದು ಪೂಂಬೆ ಅಲ್ಲೇ ಬಿಸಾಡಿ ಬರಬೇಡ ಚಟ್ಟಣಿ ಮಾಡಲಿಕ್ಕೆ ತಾ... "


ಮೂರು ಪೂಂಬೆಗಳು ಬಂದುವು ಪೂಂಬೆ ಅಂದ್ರೇನಪಾ ಎಂದು ತಲೆ ತುರಿಸ್ಕೋ ಬೇಡಿ.   ನಮ್ಮ ಆಡು ಭಾಷೆ ತುಳುವಿನಲ್ಲಿ  ಬಾಳೆಹೂವನ್ನು ಪೂಂಬೆ ಅನ್ನುವ ವಾಡಿಕೆ.   ಕನ್ನಡದಲ್ಲಿ ಕುಂಡಿಗೆ ಅಂತಲೂ ಬಾಳೆ ಮೋತೆ ಎಂದೂ ಹೆಸರು ಸಿಗುತ್ತದೆ.   ಉಳಿದಂತೆ ಬಾಳೆಹೂವು ಅಂದರಾಯಿತು ಬಾಳೆ ಹೂ ಅಂದ್ರೆ ಅಲಂಕಾರಿಕ ಸಸ್ಯವರ್ಗವೂ ಇದೆ ನಮ್ಮ ಅಡುಗೆಗೆ ಬೇಕಾಗಿರೋದು ಬಾಳೆಗೊನೆಯ ತುದಿಯಲ್ಲಿ ನೇತಾಡುತ್ತಿರುವ ಹೂವು.


ಬಂದ ಕುಂಡಿಗೆಗಳಲ್ಲಿ ಒಂದು ಪುಟ್ಟದು ಕೆಂಬಣ್ಣದ ಎಸಳುಗಳೆಲ್ಲ ಉದುರಿ ಬೆಳ್ಳಗಿನ ತಿರುಳು ಮಾತ್ರ ಉಳಿದಿತ್ತು ನಮಗೆ ಬೇಕಾಗಿರೋದೂ ಇದೇ ಚಿಕ್ಕದಾಗಿ ಹೆಚ್ಚಿ ಸ್ವಲ್ಪವೇ ನೀರಿನಲ್ಲಿ ಕುಕರ್ ಒಂದು ಸೀಟಿ ಹಾಕುವಲ್ಲಿಗೆ ಬೆಂದಿತು ರುಚಿಗೆ ಉಪ್ಪು ಹಾಗೂ ಚಿಟಿಕೆ ಅರಸಿಣ ಬೇಯುವಾಗಲೇ ಹಾಕಲು ಮರೆಯಬಾರದು.

ಎರಡು ಚಮಚ ಕಾಯಿತುರಿ ತುಸು ಜೀರಿಗೆಯೊಂದಿಗೆ ಅರೆಯಲ್ಪಟ್ಟಿತುನೀರು ಎರೆಯದಿರಿ ನಮ್ಮಅಡುಗೆಯೋ ಲಘುಪ್ರಮಾಣದ್ದು ತೆಂಗಿನ ಮಸಾಲೆ ಬೆರೆಸಿ ಒಂದು ಸೌಟು ಮೊಸರು ಎರೆದು ಒಗ್ಗರಣೆಯ ಸಾಸಿವೆಕಾಳು ಉದುರಿಸುವಲ್ಲಿಗೆ ಮೊಸರುಗೊಜ್ಜು ಸಿದ್ಧ.   ಬೆಂಗಳೂರಿಗರು ಇಂತಹ ಹಸಿ ಅಡುಗೆಯನ್ನು ಬಾಳೆಹೂವಿನ ರಾಯಿತ ಅನ್ನಿರಿ ನಮ್ಮದೇನೂ ಅಡ್ಡಿಯಿಲ್ಲ ಬೇಸಿಗೆಯ ತಾಪವನ್ನು ಎದುರಿಸಲು ಇಂತಹ ಗೊಜ್ಜಡುಗೆಗಳೂ ನಮಗೆ ತಿಳಿದಿರಬೇಕು ಅರೆಯುವಾಗ ಸಾಸಿವೆ ಹೆಚ್ಚೇನೂ ಬೇಡ ಹತ್ತು ಕಾಳು ಸಾಕು ಹಾಕಿಕೊಂಡು ಅರೆದರೆ ಸಾಸಮೆ ಆಯ್ತು ಅಲ್ಪಸ್ವಲ್ಪ ವ್ಯತ್ಯಾಸದಲ್ಲಿ ಅಡುಗೆಯಲ್ಲಿ ಭಿನ್ನತೆ ತರುವುದು ನಮ್ಮಕೈಯಲ್ಲಿದೆ.


ಮಾರನೇ ದಿನವೂ ಇದೇ ಮಾದರಿಯಲ್ಲಿ ಇನ್ನೊಂದು ಪೂಂಬೆಯ ಗೊಜ್ಜು ಎದ್ದು ಬಂದಿತು ತೆಂಗಿನತುರಿ ಅರೆಯುವಾಗ ಮಾವಿನಶುಂಠಿ ಹಾಗೂ ಹಸಿಮೆಣಸು ಕೂಡಿದುದರಲ್ಲಿ ಹೊಸರುಚಿ ದೊರೆಯಿತು.


ಇನ್ನೂ ಒಂದು ಪೂಂಬೆ ಇದೆ ದೋಸೆ ಆಗುತ್ತೇಂತ ಗಾಯತ್ರಿ ಹೇಳಿದ್ದು ನೆನಪಾಯ್ತು.   ಅವಳಿಗೊಂದು ಫೋನಿನ ಗಂಟೆ ಬಾರಿಸಿ ಕೇಳಿ ದೋಸೆ ಮಾಡುವ ಅಂದಾಜು ಏನಂತೀರಾ?

ದೋಸೆ ರುಚಿರುಚಿಯಾದ್ರೆ ಇಲ್ಲಿಗೂ ಬರುತ್ತೆ ಅಲ್ವೇ..  






Thursday 4 March 2021

ಬದನೆಯ ಸಾರು





 ನೆರೆಯ ಮುಳಿಯದಿಂದ ತಂಗಿಯ ಭಾವ ಹೀಗೇ ಕಾರ್ಯನಿಮಿತ್ತ ಬಂದಿದ್ದಾಗ ಮನೆಯಲ್ಲೇ ಬೆಳೆದ ಹಸಿರು ತರಕಾರಿ ಬದನೆ ಹಾಗೂ ಲಿಲಿಪುಟ್ ಗಾತ್ರದ ಕ್ಯಾಪ್ಸಿಕಂ ತಂದು ಕೊಟ್ಟರು.  ನಾವು ಹಳ್ಳಿಯ ವಾಸಿಗಳೇ ಹೀಗೆ,  ಒಬ್ಬರಿಗೊಬ್ಬರು ಕೊಡುತ್ತ ತರುತ್ತ ಇರಬೇಕು.  ನನಗಂತೂ ಜಾನುವಾರುಗಳೂ ಇಲ್ಲವಾಗಿ ಸಾವಯವ ತರಕಾರಿಗಳ ಬೆಳೆ ಇಲ್ಲವಾಗಿದೆ.  ವಿಶೇಷವಾಗಿ ದೊರೆತ ಬದನೆಗಳಿಂದ ಏನೇನು ಅಡುಗೆ ಆದೀತೆಂದು ತಿಳಿಯೋಣ.

ಬದನೆಯ ಮಜ್ಜಿಗೆಹುಳಿ ಅರ್ಥಾತ್ ಮೇಲಾರ ಇವತ್ತು ಸಿಹಿಮಜ್ಜಿಗೆ ಇಲ್ಲ ಮಾಡಲಿಕ್ಕಾಗದು.  

ಸಾಂಬಾರು,

ತೊಗರಿಬೇಳೆ ಹಾಕಿಯೂ ಹಾಕದೆಯೂ ಆಗುತ್ತೆ,

ಬದನೆ ಪಲ್ಯ

ಪೋಡಿ,  

ಬದನೆಯ ಗೊಜ್ಜು,

ಬದನೆ ಸುಟ್ಟು ತಿನ್ನಲು ಬಲೇ ರುಚಿ ಕಣ್ರೀ...

ಹೀಗೇ ಲೆಕ್ಕಾಚಾರ ಹಾಕ್ತಾ ಇದ್ರೆ ಊಟದ ವೇಳೆ ಬಂದೇ ಬಿಡ್ತು ಅನ್ನಿ ಹೇಗೂ ಸೆಕೆ ಶುರುವಾಯ್ತು ಬದನೆಯ ಸಾರು ಮಾಡಿಬಿಡೋಣ.


ಇದನ್ನೂ ಅಷ್ಟೇ ತೊಗರಿಬೇಳೆ ಹಾಕಿ ಯಾ ಹಾಕದೇ ಮಾಡಬಹುದಾಗಿದೆ.   ಹೇಗೂ ಸೆಕೆ ಸೆಕೆ ಅನ್ನುವ ಸಮಯ ದೇಹಕ್ಕೆ ಹಿತವಾಗುವಂತೆ ಬೇಳೆಕಾಳುಗಳ ಹಂಗಿಲ್ಲದೆ ಸಾರು ಮಾಡಿಕೊಳ್ಳೋಣ.


ಎರಡು ಬದನೆ ಸಾಕು ಹೆಚ್ಚಿಟ್ಟು ನೀರಿನಲ್ಲಿ ಹಾಕಿರಿಸುವುದು ಇದು ಮನೆಯಲ್ಲೇ ಬೆಳೆದ ಬದನೆ ಆಗಿರೋದ್ರಿಂದ ಕನರು ಯಾ ಚೊಗರು ಬಿಟ್ಕೊಳ್ಳಲಿಲ್ಲ.   ಅಂಗಡಿಯಿಂದ ತಂದ ಮಾಲು ವಿಪರೀತ ಬೆಳೆದಿರುತ್ತದೆ ಹೆಚ್ಚಿಟ್ಟ ಬದನೆಗೆ ತುಸು ಸುಣ್ಣದ ನೀರನ್ನು ಹಾಕಿ ಕದಡಿಸಬೇಕಾಗುತ್ತದೆ.

ಇರಲಿ ಬದನೆ ಹೋಳು ಆಯ್ತು.

ಸಾರು ತಯಾರಿಕೆಗೆ ಏನೇನು ಇರಬೇಕು?

ಸಾಂಬಾರು ಮರಿಗೆಯ ಬಾಯಿ ತೆರೆಯಿತು.

ಇಂಗು ನಾಲ್ಕು ಒಣಮೆಣಸುಎರಡು ಚಮಚ ಕೊತ್ತಂಬರಿ ತುಸು ಜೀರಿಗೆ ಹಾಗೂ ಮೆಂತೆ ಎಣ್ಣೆ ಪಸೆಯಲ್ಲಿ ಹುರಿಯಲ್ಪಟ್ಟವು ಇಲ್ಲಿ ನಾನು ಉದ್ದಿನಬೇಳೆ ಹಾಕಿಲ್ಲ ಹಾಕಿದರೆ ಸಾಂಬಾರು ಇಲ್ಲವೇ ಕೊದ್ದೆಲ್ ಆಗಬಹುದಿತ್ತು.

ಇವಿಷ್ಟೇ ಮಸಾಲೆಗಳ ವ್ಯತ್ಯಾಸ ಎಂದು ತಿಳಿಯಿರಿ.

ಕೊನೆಯಲ್ಲಿ ಕರಿಬೇವಿನೆಸಳು ಹಾಕುವಲ್ಲಿಗೆ ಮಸಾಲೆ ಹುರಿಯುವಿಕೆ ಆಯ್ತು.  


ಇವತ್ತಿನ ಅಡುಗೆಗೆ ತೊಗರಿಬೇಳೆ ಹಾಕಿಲ್ಲತೆಂಗಿನತುರಿಯಾದರೂ ಇರಲೇಬೇಕುಅರ್ಧ ಕಡಿ ಕಾಯಿ ತುರಿಯಿರಿ.   ತೆಂಗಿನತುರಿಯನ್ನೂ ಮಸಾಲಾ ಸಾಮಗ್ರಿಗಳೊಂದಿಗೆ ಕೊನೆಯ ಹಂತದಲ್ಲಿ ಬಾಡಿಸಿಕೊಂಡರೆ ಇನ್ನೂ ಉತ್ತಮ

ಮಸಾಲೆ ಅರೆಯಿರಿ ನೀರು ಹಾಕದೇ ಅರೆದರೆ ಸುವಾಸನೆ ಜಾಸ್ತಿ.


ಬದನೆ ಬೇಯಿಸಿ ಆಯಿತೇ ಬೇಗನೇ ಬೇಯುವ ತರಕಾರಿ ಇದು ಕುಕರ್ ಇಲ್ಲದಿದ್ದರೂ ನಡೆಯುತ್ತೆ ಬೇಯುತ್ತಿರುವಾಗಲೇ ರುಚಿಯ ಅಳತೆಗನುಗುಣವಾಗಿ ಉಪ್ಪು ಹುಳಿ ಬೆಲ್ಲ ಹಾಕಿರಿ ಬೆಲ್ಲ ಹಿತವಾಗದವರು ಹಾಕದಿರಿ.


ನಂತರ ಅರೆದ ಮಸಾಲೆಯನ್ನು ಸುರಿದು ಸೌಟಾಡಿಸಿ ರುಚಿಕಟ್ಟಾಗಿದೆಯೋ ಎಂದು ಪರಿಶೀಲಿಸಿ ಅವಶ್ಯವಿದ್ದಂತೆ ಉಪ್ಪು ಖಾರ ಉದುರಿಸಿ.

ಕೊನೆಯಲ್ಲಿ ಕರಿಬೇವು ಬೆಳ್ಳುಳ್ಳಿ ಕೂಡಿದ ಒಗ್ಗರಣೆ ಮರೆಯದಿರಿ.