Pages

Ads 468x60px

Friday, 17 March 2017

ಸೊಪ್ಪಿನ ಹುಳಿ

ಬೇಸಿಗೆ ಬಂದಿದೆ.   ಸೆಕೆಯಲ್ಲಿ ಬೇಯುತ್ತ ಅಡುಗೆಮನೆಯ ಒದ್ದಾಟವನ್ನು ಹಗುರಾಗಿಸಿಕೊಳ್ಳಬೇಕಾದ ಸಮಯ.  ಹಾಗಂತ ಕೇವಲ ಸಾರು,  ಬೋಳುಹುಳಿ,  ನೀರುಗೊಜ್ಜು ಎಂದು ಮಾಡಿಟ್ರೆ ದೇಹಕ್ಕೆ ಬೇಕಾದ ತ್ರಾಣಶಕ್ತಿ ಎಲ್ಲಿಂದ ಬರಬೇಕು?  ಸಂತುಲಿತ ಪೋಷಕಾಂಶಗಳಿಂದ ಕೂಡಿದ ಒಂದು ಸಂಯುಕ್ತ ಪದಾಥ೯ವನ್ನು ಮಾಡೋಣ.


ಹಿತ್ತಲಲ್ಲಿ ಪಚ್ಚೆ ಹರಿವೆ ಆಳೆತ್ತರಕ್ಕೆ ಬೆಳೆದು ಕದಿರು ಬಿಟ್ಟಿದೆ,  ಬುಡದಲ್ಲಿ ಪುಟ್ಟ ಪುಟ್ಟ ಸಸಿಗಳು.  ಹರಿವೆ ದಂಟು ಹಾಗೂ ಹಲವಾರು ಸಸಿಗಳೂ ಕೂಡಿದಾಗ ಇಂದಿನ ಪದಾಥ೯ಕ್ಕೆ ಬೇಕಾದಷ್ಟಾಯಿತು.


" ಇದನ್ನು ಸಾಸ್ಮೆ ಮಾಡೂದಾ ಹೇಗೆ? "

" ಸಾಸಮೆ ರಾತ್ರಿಗೂ ಉಳಿಯುವಂತದ್ದಲ್ಲ,  ಸಂಜೆಯಾಗುತ್ತಲೂ ಇನ್ನೊಮ್ಮೆ ಅಡುಗೆಗೆ ಹೊರಡಬೇಕಾಗುತ್ತದೆ.   ಹರಿವೆ ಮೇಲಾರ,  ಅಂದ್ರೆ ಮಜ್ಜಿಗೆಹುಳಿ ಮಾಡೋಣ. "


ಒಂದು ಹಿಡಿ ತೊಗರಿಬೇಳೆ ಹಾಗೂ ಒಂದು ಹಿಡಿ ಹೆಸ್ರುಬೇಳೆಗಳನ್ನು ಚೆನ್ನಾಗಿ ತೊಳೆದು ಕುಕ್ಕರಿನಲ್ಲಿ ಬೇಯಿಸಿ,  ಬೇಯಲು ಅವಶ್ಯವಿರುವಷ್ಟೇ ನೀರು ಹಾಕುವುದು ಜಾಣತನ.

ಹರಿವೆಯನ್ನೂ ಶುಚಿ ಮಾಡಿಟ್ಟು ಆದಷ್ಟು ಕಡಿಮೆ ನೀರು ಬಳಸಿ ಬೇಯಿಸಿ,  ರುಚಿಯ ಉಪ್ಪನ್ನು ಬೇಯಿಸುವಾಗಲೇ ಹಾಕಿರಿ.

ಒಂದು ಕಡಿ ಹಸಿ ತೆಂಗಿನಕಾಯಿ ತುರಿಯಿರಿ.  

ಅಂದ ಹಾಗೆ ನನ್ನ ಹಿತ್ತಲ ತರಕಾರಿ ಬೆಳೆಯಲ್ಲಿ ಬಜ್ಜಿ ಮೆಣಸು ಕೂಡಾ ಇದೆ.

ಒಂದು ಬಜ್ಜಿ ಮೆಣಸು,  2 ಸೌಟು ಸಿಹಿ ಮಜ್ಜಿಗೆ ಎರೆದು ತೆಂಗಿನಕಾಯಿ ಅರೆಯಿರಿ.  ಮಜ್ಜಿಗೆ ಹುಳಿಯೆಂಬ ಪದಾರ್ಥ ಸಾರಿನಂತಾಗಬಾರದು,  ಅದಕ್ಕಾಗಿ ಕಾಯಿ ಅರೆಯುವಾಗಲೇ ಮಜ್ಜಿಗೆ ಕೂಡಿದ್ದು,  ತಿಳಿಯಿತಲ್ಲ.

ತಪಲೆಗೆ ಬೆಂದ ಬೇಳೆ, ತರಕಾರಿ ಹಾಗೂ ತೆಂಗಿನಕಾಯಿ ಅರಪ್ಪು ಸೇರಿಸಿ ಸೌಟಿನಲ್ಲಿ ಬೆರೆಸಿದಾಗ ಒಂದು ಸಂಯುಕ್ತ ಮಿಶ್ರಣ ದೊರೆಯಿತಲ್ಲ,  ಉಪ್ಪು ಸಾಲದಿದ್ದರೆ ನೋಡಿಕೊಂಡು ಹಾಕಬೇಕು,  ಸಿಹಿ ಇಷ್ಟವಿರುವವರು ಒಂದು ತುಂಡು ಬೆಲ್ಲ ಹಾಕುವುದು,  ಸಾರಿನಂತಾಗಿಲ್ಲ ತಾನೇ,  ಚಟ್ಣಿ ಥರ ಆಗಿದ್ಯಾ?  ಹಾಗಿದ್ದರೆ ತುಸು ನೀರು ಎರೆದುಕೊಳ್ಳಿ. ಸೌಟಿನಲ್ಲಿ ಬಡಿಸಲು ಸಾಧ್ಯವಾಗುವ ದ್ರವ ಆದರೆ ಸಾಕು,  ಈಗ ಕುದಿಸಿ,  ಒಂದು ಕುದಿ ಬಂದಾಗ ಕೆಳಗಿಳಿಸಿ ಒಗ್ಗರಣೆ ಕೊಡುವಲ್ಲಿಗೆ ಹರಿವೆ ಸೊಪ್ಪಿನ ಹುಳಿ ಸಿದ್ಧವಾದಂತೆ.


ಹರಿವೆ ಬಸಳೆಗಳಂತಹ ಸೊಪ್ಪುಗಳನ್ನು ಮಜ್ಜಿಗೆಹುಳಿ ಮಾಡುವಾಗ ತೊಗರಿಬೇಳೆ ಹಾಕಿದ್ರೆ ಚೆನ್ನಾಗಿರುತ್ತೆ ಎಂದು ಕಿವಿಮಾತು ಹೇಳಿದ್ದು ನಮ್ಮ ಗೌರತ್ತೆ.  ಹೆಸ್ರುಬೇಳೆ ಉರಿಬಿಸಿಲಿಗೆ ತಂಪು ಎಂದು ನಾನು ಸೇರಿಸಿಕೊಂಡಿದ್ದು.   ಬಸಳೆ ಚಪ್ಪರದಲ್ಲಿ ಅತಿಯಾಗಿ ಸೊಪ್ಪು ತುಂಬಿದ್ದರೆ ಎಳೆಯ ಕುಡಿ ದಂಟುಗಳಿಂದಲೂ ಈ ಮಾದರಿಯ ಹುಳಿ ಮಾಡಿಕೊಳ್ಳಬಹುದು.   ನಮ್ಮೂರ ಕಡೆ ಸೊಪ್ಪು ತರಕಾರಿ ಅಂದ್ರೆ ಹರಿವೆ ಯಾ ಬಸಳೆ.  ಮೆಂತೆ ಸೊಪ್ಪು,   ಸಬ್ಬಸಿಗೆ ಸೊಪ್ಪು,  ಪಾಲಕ್ ಇತ್ಯಾದಿಯಾಗಿ ಸೊಪ್ಪುಗಳಿಂದಲೂ ಮಜ್ಜಿಗೆ ಹುಳಿ ಮಾಡ್ಕೊಳ್ಳಿ.
Monday, 13 March 2017

ಹಾಗಲಕಾೖ ಚಟ್ಣಿ
ನೆರೆಮನೆಯ ಪ್ರೇಮಕ್ಕ ತನ್ನ ರಬ್ಬರು ತೋಟದ ಸರ್ವೇ ಮುಗಿಸಿ ನಮ್ಮ ಮನೆಯಂಗಳಕ್ಕೆ ಬಂದರು.   ಅದೂ ಇದೂ ಮಾತನಾಡುತ್ತ,  "ನಿನ್ನ ಹಾಗಲಬಳ್ಳಿಯಲ್ಲಿ ಹಾಗಲಕಾೖ ಉಂಟಲ್ಲ! "


" ಅಯ್ಯೋ,  ಅದು ಇನ್ನೂ ಬೆಳೆದಿಲ್ಲ,  ಚೆನ್ನಪ್ಪ ಬರಲಿ,  ಕೊಯ್ದು ತರ್ತಾನೆ ಬಿಡು. "


" ಸರಿ,  ಹಾಗೇ ಮಾಡು,    ' ಉತ್ಥಾನ '  ಇದ್ರೆ ಕೊಡು. "   ಉತ್ಥಾನ ಪತ್ರಿಕೆಯ ಪ್ರತಿಯೊಂದಿಗೆ ಪ್ರೇಮಕ್ಕನ ಸವಾರಿ ತೆರಳಿತು.


ಚೆನ್ನಪ್ಪ ಯಾಕೋ ನಾಲ್ಕಾರು ದಿನ ಬರಲಿಲ್ಲ,  ನನಗೂ ಹಾಗಲಕಾಯಿ ಕೊಯ್ಯಲಿಕ್ಕೆ ನೆನಪಾಗಲಿಲ್ಲ.   ಅವನು ಬಂದಾಗ ಹಣ್ಣು ಹಾಗಲ ಕೊಯ್ಯುವಂತಾಯಿತು.


" ಕಾಯಿ ಇದ್ದಾಗಲೇ ಕೊಯ್ಯಬೇಕಿತ್ತು.. "


" ತೊಂದರೆಯಿಲ್ಲ,  ಹಣ್ಣು ಹಾಗಲವನ್ನೂ ಪದಾರ್ಥ ಮಾಡಲಿಕ್ಕೆ ಬರುತ್ತದೆ. "


ನಮ್ಮ ಈ ದಿನದ ಅಡುಗೆ ಹಣ್ಣು ಹಾಗಲದಿಂದ ಮಾಡುವವರಿದ್ದೇವೆ.


ಮುಂದಿನ ಬೆಳೆಗಾಗಿ ಹಾಗಲದ ಬೀಜಗಳನ್ನು ತೆಗೆದಿರಿಸಿದ್ದಾಯ್ತು.


ಹಾಗಲವನ್ನು ಚಿಕ್ಕದಾಗಿ ಕತ್ತರಿಸಿಟ್ಟು ತುಸು ಪುಡಿಯುಪ್ಪು ಬೆರೆಸಿ ಇಡುವುದು.

2 ನೀರುಳ್ಳಿ,  2 ಹಸಿಮೆಣಸು ಕೊಚ್ಚಿ ಇಟ್ಟು,  ಉಪ್ಪು ನೀರಿನೊಂದಿಗೆ ಕಹಿಯೂ ಇಳಿದುಹೋಗುವಂತೆ ಹಾಗಲದ ಚೂರುಗಳನ್ನು ಅಂಗೈಯಲ್ಲಿ ಹಿಂಡುವುದು ಉತ್ತಮ.   ತಪಲೆಗೆ ಈ ಎಲ್ಲ ಸಾಮಗ್ರಿಗಳನ್ನು ಹಾಕಿಕೊಂಡು ತುಸು ನೀರೆರೆದು ಬೇಯಿಸಿ.

ರುಚಿಕರವಾಗಲು ಹುಣಸೇ ಹಣ್ಣಿನ ರಸ,  ಬೆಲ್ಲ ಹಾಗೂ ಉಪ್ಪು ಸೇರಿಸುವ ಅಗತ್ಯವಿದೆ.  ಈಗ ಇದು ಹಾಗಲ ಗೊಜ್ಜು ಎನ್ನುವ ಹಂತಕ್ಕೆ ಬಂದಿದೆ,  ಬೇಕಿದ್ದರೆ ಒಂದು ಒಗ್ಗರಣೆ ಕೊಟ್ಟರಾಯಿತು.


ಗೊಜ್ಜು ಆಯ್ತಲ್ಲ,  ಈಗ ಇದನ್ನು ರಸಂ ಆಗಿ ಪರಿವರ್ತಿಸೋಣ.

ರಸಂ ಯಾ ಸಾಂಬಾರು ಅನ್ನಿಸಬೇಕಾದರೆ ತೊಗರಿಬೇಳೆ ಅವಶ್ಯ.   ಒಂದು ಹಿಡಿ ತೊಗರಿಬೇಳೆ ಬೇಯಿಸಿ.


ಅರ್ಧ ಕಡಿ ಕಾಯಿ ತುರಿಯಿರಿ.

5 - 6 ಒಣಮೆಣಸು

2 ಚಮಚ ಕೊತ್ತಂಬರಿ

ಒಂದು ಚಮಚ ಉದ್ದಿನಬೇಳೆ

ಪುಟ್ಟ ಚಮಚದಲ್ಲಿ ಜೀರಿಗೆ ಹಾಗೂ ಮೆಂತೆ

ಕಡ್ಲೆಕಾಳಿನಷ್ಟು ಇಂಗು

ಒಂದೆಸಳು ಕರಿಬೇವು

ಎಣ್ಣೆಪಸೆಯಲ್ಲಿ ಮೇಲಿನ ಮಸಾಲಾ ಸಾಮಗ್ರಿಗಳನ್ನು ಹುರಿಯಿರಿ.

ತೆಂಗಿನತುರಿಯೊಂದಿಗೆ ಅರೆಯಿರಿ.

ಬೇಯಿಸಿದ ಹಾಗಲ ತರಕಾರಿ ಹಾಗೂ ತೊಗರಿಬೇಳೆಗಳನ್ನು ತೆಂಗಿನಕಾಯಿ ಮಸಾಲೆಯೊಂದಿಗೆ ಕೂಡಿರಿ.  ಕುದಿಸಿ ಒಗ್ಗರಣೆ ಕೊಡುವಲ್ಲಿಗೆ ಹಾಗಲಕಾಯಿ ರಸಂ ಸಿದ್ಧ.

ನಾವು ಕರಾವಳಿಯ ಮಂದಿ ಸಾಂಬಾರು ಅಥವಾ ಕೊದಿಲು ಯಾ ಕೊದ್ದೆಲ್ ಮಾಡುವ ವಿಧಾನವೇ ಇಲ್ಲಿ ಬಂದಿದೆ.  ನಿಮಗಿಷ್ಟವಾದ ಇನ್ಯಾವುದೇ ತರಕಾರಿಯಿಂದಲೂ ಈ ಮಾದರಿಯ ರಸಂ ಮಾಡಬಹುದಾಗಿದೆ.


ಹೀಗೇ ಸುಮ್ಮನೆ ಪಟ್ಟಾಂಗಕ್ಕೆಂದು ಬಂದಿದ್ದ ಪ್ರೇಮಕ್ಕ,   " ಹಾಗಲಕಾಯಿ ಚಟ್ಣಿ ಗೊತ್ತಾ... ಮೆಣಸು ಎಳ್ಳು ಹುರಿದು,  ಹಾಗಲಕಾಯನ್ನೂ ಹುರಿದು,  ತೆಂಗಿನಕಾಯನ್ನೂ ಹುರಿದು,  ಹುಳಿ ಬೆಲ್ಲ ಹಾಕಿ ಅರೆದು... "


" ಹೌದೂ,  ಹುರಿಯುವಾಗ ಉದ್ದಿನಬೇಳೆ ಬೇಡವೇ..? "

" ಹ್ಞಾಂ,  ಉದ್ದು ಹಾಕ್ಬೇಕು,  ಅದನ್ನೂ ಹುರಿದು.. "

" ಹಾಗಿದ್ರೆ ಕೊತ್ತಂಬರಿ ?"

" ಅದೇನೂ ಬೇಡ,  ಗಟ್ಟಿ ಚಟ್ಣಿ ಅರೆದು ಇಡು.  ನೀರು ಮುಟ್ಟಿಸ್ಬೇಡಾ...  ಎರಡ್ಮೂರು ದಿನ ಇಟ್ಕೋಬಹುದು. "


" ಇಲ್ಲೊಂದು ಪುಟ್ಟ ಹಾಗಲ ಇದೆ,  ಹುಳ ಗಿಳ ಇದ್ಯೋ ನೋಡಿಕೋ. "  ಎಂದು ಹಾಗಲಕಾಯನ್ನೂ ಕೊಯ್ದು ಇಟ್ಟ ಪ್ರೇಮಕ್ಕ  ನನ್ನ ಚಹಾ ಪೇಯವನ್ನೂ ಸ್ವೀಕರಿಸಿ,  ನಾಲ್ಕಾರು ಬಸಳೆ ಕುಡಿಗಳೊಂದಿಗೆ ಮನೆಗೆ ಹೋದರು.   

ಪ್ರೇಮಕ್ಕ ಹೇಳಿಕೊಟ್ಟಂತೆ ಹಾಗಲದ ಚಟ್ಣಿ ತಯಾರಾಯಿತು.   ಅನ್ನದೊಂದಿಗೆ ಕಲಸಿ ತಿನ್ನುವಾಗ,  ಪ್ರೇಮಕ್ಕನಿಗೂ ಇಲ್ಲೇ ಊಟ ಮಾಡಿ ಹೋಗಲು ಹೇಳಬೇಕಾಗಿತ್ತು ಎಂದೆನ್ನಿಸದಿರಲಿಲ್ಲ.


ಉದುರುದುರಾದ ಅನ್ನದೊಂದಿಗೆ ಈ ಚಟ್ಣಿ ಕಲಸಿ,  ಕಡ್ಲೆಬೀಜ ಹಾಗೂ ಕರಿಬೇವಿನ ಒಗ್ಗರಣೆ ಕೊಟ್ಟಿರಾ,  ಹಾಗಲಕಾಯ್ ಚಿತ್ರಾನ್ನ ಅಥವಾ ಪುಳಿಯೋಗರೆ ಅಂದರೂ ನಡೆದೀತು.


ನಾವಂತೂ ಚೆನ್ನಾಗಿ ಸವಿದೆವು,  ರಾತ್ರಿಯೂಟಕ್ಕೂ ಹಾಳಾಗದ ಚಟ್ಣಿ ನಮ್ಮದಾಯಿತು.


ನನ್ನ ಅಳತೆ ಪಟ್ಟಿ:


3 ಒಣಮೆಣಸು

3 ಚಮಚ ಬಿಳಿ ಎಳ್ಳು 

1 ಚಮಚ ಉದ್ದಿನಬೇಳೆ

ಎಣ್ಣೆಪಸೆಯಲ್ಲಿ ಪರಿಮಳ ಬರುವಂತೆ ಹುರಿಯಿರಿ.

ಒಂದು ಕಡಿ ತೆಂಗಿನ ತುರಿ,  ಇದನ್ನೂ ಹುರಿದುಕೊಳ್ಳುವುದು.

ರುಚಿಗೆ ಉಪ್ಪು,  ಸಿಹಿಗೆ ಬೆಲ್ಲ,  ಹುಣಸೆಹುಳಿ ಲಿಂಬೆ ಗಾತ್ರದಷ್ಟು ಇರಲಿ.  ಸಿಹಿ ಹಾಗೂ ಖಾರವನ್ನು ಬಾಯಿರುಚಿಗನುಗುಣವಾಗಿ ಹಾಕಿಕೊಳ್ಳಿ.


ಹಾಗಲಕಾಯಿ ಇಲ್ಲವೇ,  ಹಾಗಲಬಳ್ಳಿಯ ಕುಡಿ ಎಲೆಗಳಿದಲೂ ಈ ಮಾದರಿಯ ಚಟ್ಣಿ ಮಾಡಿಕೊಳ್ಳಬಹುದಾಗಿದೆ,  ಎಲೆಗಳನ್ನು ತುಪ್ಪದ ಪಸೆಯಲ್ಲಿ ಹುರಿದುಕೊಂಡರಾಯಿತು.


ನಾನಂತೂ ಚಟ್ಣಿಯ ರುಚಿಗೆ ಮನಸೋತು ಕರಿಬೇವಿನ ಎಲೆಗಳನ್ನು ಇತರ ಮಸಾಲಾ ಸಾಮಗ್ರಿಗಳೊಂದಿಗೆ ಹುರಿದು ಇನ್ನೊಂದು ಚಟ್ಣಿ ಮಾಡಿಟ್ಕೊಂಡೆ.  ಇದೂ ಡೈನಿಂಗ್ ಟೇಬಲ್ ಮೇಲೆ ಮೆರೆಯಿತು.   ಹುರಿದ ಎಳ್ಳು ಉಂಟಲ್ಲ,  ಅದರ ಸುವಾಸನೆ ಹಾಗೂ ರುಚಿಯೇ ಇದರ ಆಕರ್ಷಣೆಯೆಂದು ಎರಡನೇ ಪ್ರಯೋಗದಲ್ಲಿ ತಿಳಿಯಿತು.   ತೆಂಗಿನತುರಿ ಮಿಕ್ಕಿದ್ದಾಗ ನಿರ್ಲಕ್ಷ್ಯ ಮಾಡದೆ ಈ ಥರ ಎಳ್ಳಿನಚಟ್ಣಿ ಮಾಡಿಕೊಳ್ಳಿ.

 " ಮಂದಿನ ವಾರ ಬರುವುದಿದೆ,   ಕರಿಬೇವಿನ ಚಟ್ಣಿ ಮಾಡಿಟ್ಟಿರು... " ಮಗಳು ಅಂದಿದ್ದು.   ಮಾಮೂಲಿನ ಈ ಚಟ್ಣಿಗೆ ಮುಖ್ಯವಾಗಿ ಬೇಕಾಗಿರುವುದು ಕರಿಬೇವಿನೆಲೆಗಳು ಹಾಗೂ ಒಣ ಕೊಬ್ಬರಿ.


ನೀರಾಡದ ಗೋಟುಕಾಯಿಯನ್ನು ಚೆನ್ನಪ್ಪ ಅಟ್ಟದಿಂದ ತಂದು ಸುಲಿದು ಒಡೆದೂ ಕೊಟ್ಟ,   ಒಣಕಲು ಕಾಯಿ ಆದರೂ ಕೆಟ್ಟು ವಾಸನೆ ಬರಬಾರದು.


ಕರಿಬೇವಿನೆಲೆಗಳನ್ನು ನಿನ್ನೆಯೇ ತೋಟದಿಂದ ತಂದಿಟ್ಕೊಂಡಿದ್ದೆ,   ಅಂದಾಜು ಇಪ್ಪತೈದು ಎಸಳು ಸಾಕು.   ಬೇವಿನೆಲೆಗಳನ್ನು ಕಡ್ಡಿಯಿಂದ ಬೇರ್ಪಡಿಸಿ ಪರಪರಾ ಅನ್ನೋ ಹಾಗೆ ಹುರಿದೂ ಆಯಿತು.   ಹುಳ ತಿಂದ ಕೆಟ್ಟು ಎಲೆಗಳನ್ನು ಆಯ್ದು ಬೇರ್ಪಡಿಸುವ ಅಗತ್ಯವೂ ಇದೆ.


ಒಣ ಕೊಬ್ಬರಿಯನ್ನು ತುರಿಯುವುದು.   ಹೆಚ್ಚು ದಿನ ಬಾಳ್ವಿಕೆ ಬರಲು ಇದನ್ನೂ ಪರಿಮಳ ಬರುವಂತೆ ಹುರಿಯಿರಿ.


ಮಸಾಲೆ ಏನೇನು?

7 - 8  ಒಣಮೆಣಸು

ಒಂದು ದೊಡ್ಡ ಚಮಚ ಉದ್ದಿನಬೇಳೆ

3 ದೊಡ್ಡ ಚಮಚ ಬಿಳಿ ಎಳ್ಳು

ಎಲ್ಲವನ್ನೂ ಎಣ್ಣೆಪಸೆಯಲ್ಲಿ ಹುರಿಯಿರಿ.


ಮಿಕ್ಸಿಯ ಜಾರ್,  ಶುಭ್ರವೂ ಒಣಗಿಯೂ ಇದೆ ತಾನೇ,   ಇನ್ನೊಮ್ಮೆ ಚೆನ್ನಾಗಿ ಒರೆಸಿಕೊಳ್ಳಿ.


ಮೊದಲಾಗಿ, ತೆಂಗಿನತುರಿ ಹಾಗೂ ಕರಿಬೇವು ತಿರುಗಿಸಿಕೊಳ್ಳಿ.   ಕರಿಬೇವು ತೆಂಗಿನತುರಿಯೊಂದಿಗೆ ಬೇಗನೆ ಪುಡಿಯಾಗುತ್ತದೆ,  ಇದು ನನ್ನ ಅನುಭವಕ್ಕೆ ಬಂದ ವಿಷಯ.


ನಂತರ ಮಸಾಲಾ ಸಾಮಗ್ರಿಗಳನ್ನು ಹಾಕಿ ತಿರುಗಿಸಿ.   ಕೊನೆಯದಾಗಿ ರುಚಿಗೆ ಉಪ್ಪು,  ಲಿಂಬೆಗಾತ್ರದ ಹುಣಸೆಹುಳಿ ಹಾಗೂ ಬೆಲ್ಲ ಕೂಡಿಕೊಂಡು ಅರೆಯಿರಿ.  ಸಿಹಿ ಬೇಕಿಲ್ಲವೆಂದಾರೆ ಬೆಲ್ಲ ಯಾ ಸಕ್ಕರೆ ಹಾಕೋದು ಬೇಡ.   ಒಂದು ಬಾರಿ ಸೌಟಿನಲ್ಲಿ ತಿರುವಿ,  ಪುಡಿಯ ಮಿಶ್ರಣ ಏಕಪ್ರಕಾರವಾಗಲು ಇನ್ನೊಮ್ಮೆ ಮಿಕ್ಸಿ ಟುರ್ರ ಟುರೆ್ರನಿಸಿದರಾಯಿತು.   ಕರಿಬೇವಿನ ಚಟ್ಣಿ ಬೆಂಗಳೂರು ಪಯಣಕ್ಕೆ ಸಿದ್ಧವಾಗಿದೆ.            ಟಿಪ್ಪಣಿ:  ಉತ್ಥಾನ ಮಾಸಪತ್ರಿಕೆಯ 2017ರ ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟಿತ ಬರಹ.
 


Tuesday, 7 March 2017

ಪಾಯಸದ ಬಟ್ಟಲು
                       
ಈ ಭಾನುವಾರ,  ಹಿರಣ್ಯದ ನಾಗಬನದಲ್ಲಿ ಮುಂಜಾನೆ ಎಂಟರಿಂದ ಹತ್ತು ಗಂಟೆ ತನಕ ತಂಬಿಲಸೇವೆ ಇದ್ದಿತು.   ಎಂದಿನಂತೆ ಸಡಗರ,  ಭಕ್ತಾದಿಗಳ ಆಗಮನ,  ಮನೆ ತುಂಬ ಬಂಧುಬಳಗ...


ಹತ್ತು ಗಂಟೆಗೆಲ್ಲ ದೇವತಾ ಪೂಜಾವಿಧಿಗಳು ಮುಗಿದುವು.  ನೆರೆಕರೆಯ,  ಊರ ಪರವೂರ ಮಂದಿ ಪಾನಕ, ಪ್ರಸಾದಸೇವೆ ಸ್ವೀಕರಿಸಿ ಹೋದರು.  ಕೊನೆಯಲ್ಲಿ ಐದಾರು ಜನ ನೆಂಟರಿಷ್ಟರು ಮಾತುಕತೆಯಾಡುತ್ತ ಉಳಿದರು,  ರಜಾದಿನ ಅಲ್ವೇ...


ನಾನೂ ಪಟ್ಟಾಂಗವಾಡುತ್ತ ಕೂತರಾದೀತೇ,  ಊಟದ ತಯ್ಯಾರಿ ಆಗಬೇಡವೇ?


ಅನ್ನಕ್ಕಾಗಿ ಕುಕರ್ ಒಲೆಗೇರಿತು.  ದೊಡ್ಡದಾದ ತೆಂಗಿನಕಾಯಿ ಒಡೆಯಲ್ಪಟ್ಟಿತು.  ಸಾರೂ ಅನ್ನ ಮಾಡಿದ್ರೆ ಸಾಲದು,  ಬಂಧುಬಳಗ ಸೇರಿರುವಾಗ ಪಾಯಸದೂಟ ಆಗಲೇಬೇಕು.


ಅಡುಗೆಮನೆಯ ಡಬ್ಬದಲ್ಲಿ ಏನಾದ್ರೂ ಇದೆಯಾ?  ತಿಣುಕಾಡಿ ಪ್ರಯೋಜನವಿಲ್ಲ,  ಪಾಯಸ ಮಾಡಬಹುದಾದ ಯಾವುದೇ ಬೇಳೆಕಾಳು ಯಾ ಶಾವಿಗೆ ಪ್ಯಾಕೆಟ್ ಕೂಡಾ ಇದ್ದಂತಿಲ್ಲ.  " ಏನೂ ಇಲ್ಲ ಮಾರಾಯರೇ... " ಎಂದು ಹೊರಚಾವಡಿಗೆ ಕೇಳುವಂತೆ ಹೇಳುವ ಹಾಗೂ ಇಲ್ಲ.   ಇಂತಹ ದ್ವಂದ್ವದಲ್ಲಿ ನಾನಿದ್ದಾಗ ತೆಂಗಿನಕಾಯಿ ತುರಿದಾಯ್ತು,   ತರಕಾರಿ ತಂದಿಟ್ಟಿದ್ದು ಏನೇನಿದೆ ಎಂದು ಚೀಲ ಸುರುವಿ ತಪಾಸಿಸಲಾಗಿ ಹೊರಬಿದ್ದವು,  ಬದನೆ,  ನುಗ್ಗೆ,  ಟೊಮ್ಯಾಟೋ,  ಪುದಿನ,  ಹಸಿಮೆಣಸು,  ಬೀನ್ಸ್,  ಮುಳ್ಳುಸೌತೆ,  ಕ್ಯಾರೆಟ್ ....


" ವಾಹ್,  ಮುಳ್ಳುಸೌತೆ ಇದ್ದರೆ ಸಾಕು,  ಪಾಯಸ ಆದ ಹಾಗೇ,  ಜೊತೆಗೊಂದು ಕ್ಯಾರೆಟ್ಟೂ ಹಾಕೋಣ.  ಬಣ್ಣ ಬಣ್ಣ ಬರುತ್ತೆ.. "


" ಹೌದೂ,   ಮುಳ್ಳುಸೌತೆ ಪಾಯಸಕ್ಕೆ ಅಕ್ಕಿ ಹಿಟ್ಟು ಬೇಕಲ್ವೇ.. "

" ಅಕ್ಕಿ ಕಡಿ ಇದೆ,  ಅದನ್ನೇ ಹಾಕಿ ಬಿಡೋಣ. "


" ಕಡಿಯಕ್ಕಿ ಅಂದ್ರೆ... "

" ಒಂದು ಅಕ್ಕಿ ಕಾಳು ಏಳೆಂಟು ತುಂಡು ಆಗಿರುವಂತದ್ದು ಕಡಿಯಕ್ಕಿ,  ಒಳ್ಳೆಯ ಗುಣಮಟ್ಟದ ಸೋನಾಮಸೂರಿ ಅಕ್ಕಿಯ ಕಡಿ ಕೂಡಾ ಮಾರುಕಟ್ಟೆಯಲ್ಲಿ ಇದೆ.

"ಓ, ಸರಿ ಹಾಗಿದ್ರೆ.. "


ಈಗ ಪಾಯಸ ಮಾಡಿದ ವಿಧಾನ:

ಒಂದು ಲೋಟ ಕಡಿಯಕ್ಕಿ

ಎರಡು ಮುಳ್ಳುಸೌತೆಯ ತುರಿ,  ಪುಟ್ಟದಾಗಿದ್ರಿಂದ ಎರಡು ಬೇಕಾಯ್ತು.

ಒಂದು ಕ್ಯಾರೆಟ್ ತುರಿ


ಅಕ್ಕಿ ಕಡಿಯನ್ನು ಚೆನ್ನಾಗಿ ತೊಳೆಯಿರಿ.    ಕಾಯಿ ತುರಿದಿದ್ದೇವೆ,  ಸಾಂಬಾರಿಗೆ ಅವಶ್ಯವಿರುವ ಕಾಯಿತುರಿ ತೆಗೆದಿರಿಸಿ ಉಳಿದ ಕಾಯಿಯನ್ನು ನೀರು ಕೂಡಿಸಿ ಅರೆದು ದಪ್ಪ ಹಾಲು ತೆಗೆದಿರಿಸಿ,  ಇನ್ನೊಂದಾವರ್ತಿ ನೀರೆರೆದು ತೆಳ್ಳಗಿನ ಕಾಯಿಹಾಲನ್ನು ಕೂಡಾ ಇಟ್ಟುಕೊಳ್ಳಿ.


ಅನ್ನ ಮಾಡಲು ಹಾಕುವ ಅಳತೆಯ ನೀರು ಎರೆದರೆ ಸಾಲದು, ಪಾಯಸಕ್ಕಾಗಿ ಬೆಂದ ಅಕ್ಕಿ ಗಂಜಿಯಂತಿರಬೇಕು.  ಅದಕ್ಕಾಗಿ ಒಂದು ಲೋಟ ಅಕ್ಕಿಗೆ ಎರಡೂವರೆ ಲೋಟ ನೀರಿನೊಂದಿಗೆ ತೆಳ್ಳಗಿನ ಕಾಯಿಹಾಲನ್ನೂ ಎರೆಯಿರಿ.  ತುರಿದಿಟ್ಟಿರುವ ಮುಳ್ಳುಸೌತೆ ಹಾಗೂ ಕ್ಯಾರೆಟ್ ಕೂಡಾ ಸೇರಿಕೊಂಡು ಬೇಯಲಿ.  ಎರಡು ವಿಸಿಲ್ ಕೂಗಿದ್ರೆ ಸಾಕು,  ಸ್ಟವ್ ನಂದಿಸಿ. 


ಬೆಂದಿದೆ.  ಎರಡು ಅಚ್ಚು ಬೆಲ್ಲ ಯಾ ಬೆಲ್ಲದ ಹುಡಿ ಹಾಕಿರಿ,  ಕರಗುತ್ತಿರಲಿ.  ಸಿಹಿ ಸಾಕಾಗದಿದ್ದರೆ ಕೊನೆಯಲ್ಲಿ ನೋಡಿಕೊಂಡು ಸಕ್ಕರೆ ಹಾಕುವುದು.


ಮಂದ ಉರಿಯಲ್ಲಿ ಬೇಯುತ್ತಿರುವ ಪಾಯಸದ ಮಿಶ್ರಣಕ್ಕೆ ಸೌಟು ಹಾಕಿ ಕದಡಿಸುತ್ತಿರಿ,  ಬೆಲ್ಲ ಕರಗಿತೇ,  ದಪ್ಪ ಕಾಯಿಹಾಲು ಎರೆದು ಕುದಿಸಿ, ಎರಡು ಚಮಚ ತುಪ್ಪ ಮೇಲಿಂದ ಎರೆಯಿರಿ.   ನಾಲ್ಕು ಏಲಕ್ಕಿ ಗುದ್ದಿ ಹಾಕಿದಾಗ ಪಾಯಸ ಸಿದ್ಧವಾದಂತೆ.  ದ್ರಾಕ್ಷಿ,  ಗೇರುಬೀಜ ಇದ್ದವರು ಹಾಕಿಕೊಳ್ಳಿ.  ಹಾಗೇ ಸುಮ್ಮನೆ ಹಾಕೋದಲ್ಲ,  ಘಮಘಮಿಸುವ ತುಪ್ಪದಲ್ಲಿ ಹುರಿದು ಹಾಕಬೇಕು. 


ಇದ್ಯಾವುದೂ ಬೇಡ,  ಹಾಗೇ ಸುಮ್ಮನೆ ಅಕ್ಕಿ ಪಾಯಸ ಮಾಡಬಹುದಲ್ಲವೇ... ?


ಹೌದು,  ಮಾಡೋಣ ಹೀಗೆ,


ಒಳ್ಳೆಯ ಗುಣಮಟ್ಟದ ಸೋನಾಮಸೂರಿ ಅಕ್ಕಿ 

ತೆಂಗಿನಕಾಯಿ ಹಾಲು

ಬೆಲ್ಲ ಯಾ ಸಕ್ಕರೆ

ಏಲಕ್ಕಿ, ದ್ರಾಕ್ಷೀ, ಗೇರುಬೀಜ


ಮಾಡುವ ವಿಧಾನ ಈ ಹಿಂದೆ ಬರೆದಂತೆ,  ಕಡಿಯಕ್ಕಿಯ ಬದಲು ಇಡಿಯಕ್ಕಿ,  ಕ್ಯಾರೆಟ್,  ಮುಳ್ಳುಸೌತೆ ಇಲ್ಲ.