Pages

Ads 468x60px

Saturday, 25 January 2014

ಬೆಂಗಳೂರಿನಲ್ಲಿ ಚಿತ್ರಾನ್ನ ......
ಮೇಲುಕೋಟೆಯಿಂದ ತಿರುಗಿ, ನಮ್ಮ ಗಾಡಿ ಬೆಂಗಳೂರಿಗೆ ಅಭಿಮುಖವಾಗಿ ಚಲಿಸಿತು. ಬೆಂಗಳೂರು ಹೊರ ವಲಯ ತಲಪಿದ ಕೂಡಲೇ ಮಗನಿಗೊಂದು ಫೋನ್ ಕರೆ. " ಅಲ್ಲೇ ನಿಂತಿರಿ... ಈಗ ಬಂದೆ " ಅಂದ. ಬೈಕಿನಲ್ಲಿ ದೌಡಾಯಿಸಿ ಬಂದ ಮಧು ನಮ್ಮನ್ನು ನಾಗರಬಾವಿಯ ತಂಗಿಯ ಮನೆ ತಲಪಿಸಿದ. ಆಯಾಸ ಪರಿಹಾರಕ್ಕಾಗಿ ಬಿಸಿ ನೀರ ಸ್ನಾನ, ಅತಿಥಿ ಸತ್ಕಾರ ಸ್ವೀಕರಿಸಿ, ಎಲ್ಲರೂ ವಿಶ್ರಾಂತಿ ಪಡೆದೆವು.

ಏನೂ ಚಳಿಯಿಲ್ಲದೆ ಬೆಂಗಳೂರಿನಲ್ಲಿ ಬೆಳಗಾಯಿತು. ತಂಗಿಯ ಅಡುಗೆಮನೆಯಲ್ಲಿ ತಿಂಡಿತೀರ್ಥಗಳ ವ್ಯವಸ್ಥೆ ಅಡುಗೆಯಾಕೆಯದ್ದು. ತಂಗಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥೆ, ಆಕೆಯ ಪತಿ ಯು. ಕೆ. ಭಟ್ ಉದ್ಯಮಿ, ಸುಮಾರು ಮೂವತ್ತು ವರ್ಷಗಳಿಂದ ಬೆಂಗಳೂರನ್ನೇ ಉದ್ಯಮದ ಕ್ಷೇತ್ರವನ್ನಾಗಿಸಿಕೊಂಡಿದ್ದಾರೆ. ಇರಲಿ, ನಾವೀಗ ಚಿತ್ರಾನ್ನ ತಿನ್ನೋಣ. ಕ್ಯಾಪ್ಸಿಕಂ ಚಿತ್ರಾನ್ನ ನಮಗೆಲ್ಲರಿಗೂ ಹಿಡಿಸಿತು, ಉದ್ದಿನ ವಡೆ ಕೂಡಾ ಬಂದಿತು. ಪ್ರತಿ ಬಾರಿಯೂ ಬೆಂಗಳೂರಿಗೆ ಬಂದಿದ್ದಾಗ ಇಲ್ಲಿನ ಕಾಫಿ ತುಂಬ ಇಷ್ಟ ಪಟ್ಟು ಕುಡಿಯುವಂಥದ್ದು. ಇಲ್ಲಿನ ಹವೆ ಕಾಫಿಪ್ರಿಯರಿಗೆ ಹೇಳಿಸಿದ್ದು ಎಂದೇ ನನ್ನ ಅನ್ನಿಸಿಕೆ. ನಾವೆಲ್ಲರೂ ಬೆಂಗಳೂರು ತಿರುಗಾಟಕ್ಕೆ ಸಿದ್ಧರಾದೆವು. ನಮಗೆ ಮಾರ್ಗದರ್ಶಕನಾಗಿ ಮಧು ಕೂಡಾ ಸಿದ್ಧನಾದ.
ನನ್ನ ಮಗ ನಮ್ಮನ್ನು ತನ್ನ ಮನೆಗೆ ಕರೆದೊಯ್ಯಲು ಏನೇನೂ ಉತ್ಸುಕನಾಗಿರಲಿಲ್ಲ, ಈಗ ತನ್ನ ಆಫೀಸ್ ಕಡೆ ಬೇಗನೇ ಹೊರಡಿಸಿದ. ಅಲ್ಲಿಂದ ಮತ್ತೆ ಎಂ. ಜಿ. ರೋಡ್, ಮೆಟ್ರೋ ರೈಲು, ಶಾಪಿಂಗ್ ಮಾಲ್ ದರ್ಶನ. ಶಾಪಿಂಗ್ ಮಾಲ್ ಅಂದೊಡನೆ ನಾನು ಶೀಲಾ ಬಳಿ ಅಂದೆ " ಬೆಂಗಳೂರಿಗೆ ಬಂದ ನೆನಪಿಗೆ ಒಂದು ಸೀರೆ ಹಾಗೂ ಒಂದು ಪುಸ್ತಕ ಖರೀದಿಸೋಣ " ಅವಳೂ ಹ್ಞೂಂಗುಟ್ಟಿದಳು.

" ಈಗ ಪೇಟೆ ನೋಡ್ತಾ ಹೋಗೂದು, ಪರ್ಚೇಸ್ ಗಿರ್ಚೇಸ್ ಗೆ ಸಮಯ ಇಲ್ಲ " ಅಂದ್ರು ನಮ್ಮೆಜಮಾನ್ರು. ಮಾಗಡಿ ರಸ್ತೆಯಲ್ಲಿರುವ ಮಗನ PACE WISDOM SOLUTIONS ಆಫೀಸ್ ಸಂದರ್ಶಿಸಿ ಮುಂದುವರಿದೆವು. ಒಂದು ಸ್ವೀಟ್ ಸ್ಟಾಲ್ ನಲ್ಲಿ ಹಾಲಿನ ಕೆನೆಯಿಂದಲೇ ಮಾಡಿದ್ದ ಒಂದು ಸಿಹಿ, ರಸಮಲೈ ತಿಂದಾಯಿತು. ಎಂ. ಜಿ. ರೋಡ್ ಉದ್ದಕೂ ನಮ್ಮ ರಥ ನಿಧಾನವಾಗಿ ಚಲಿಸಿತು. ಮೆಟ್ರೋ ರೈಲು ನಿಲ್ದಾಣದಲ್ಲಿ ಕಾರು ಪಾರ್ಕಿಂಗ್ ಮಾಡಿ, ಟಿಕೇಟು ಖರೀದಿಸಿ ಒಳ ಹೋಗಬೇಕಾದರೇ ತಪಾಸಣೆಗೊಳಪಟ್ಟೆವು.


ರೈಲು ಬೆಂಗಳೂರು ನಗರ ಸೌಂದರ್ಯವನ್ನು ತೋರಿಸುತ್ತಾ ಮುಂದೆ ಸಾಗಿತು. ಕೊಳೆಗೇರಿಗಳೂ, ಎತ್ತರೆತ್ತರ ಕಟ್ಟಡಗಳೂ ಎದುರಾದವು. ಯಾವುದೇ ವಾಸ್ತು ವಿನ್ಯಾಸವಿಲ್ಲದ, ಬೆಂಕಿಪೊಟ್ಟಣಗಳನ್ನು ಸಾಲಾಗಿ ಇರಿಸಿದಂತಹ ಈ ನಗರಸೌಂದರ್ಯ ವೀಕ್ಷಣೆಯಲ್ಲಿ ಆಸಕ್ತಿ ಇಲ್ಲವಾಯಿತು. ಈ ಮೆಟ್ರೊ ರೈಲಿನಲ್ಲಿ ಚಲಿಸುತ್ತಾ ಕಂಡಂಥ ತಾರಸಿ ಕಟ್ಟಡಗಳ ಮೇಲ್ಭಾಗದ ದೃಶ್ಯಗಳು - ನೀರಿನ ಪ್ಲಾಸ್ಟಿಕ್ ಟಾಂಕಿಗಳು, ಒಣ ಹಾಕಲ್ಪಟ್ಟ ವಿಧವಿಧವಾದ ಬಟ್ಟೆಗಳು, ಟೀವಿ ಆಂಟೆನಾಗಳು, ಟೆಂಟ್ ಗುಡಾರಗಳು, ಕೆಲವೆಡೆ ಖಾಲಿ ಜಾಗಗಳು, ಖಾಲಿ ಜಾಗದಲ್ಲಿ ಬೇಕಾಬಿಟ್ಟಿ ಬೆಳೆದಿದ್ದ ಕಳೆಸಸ್ಯಗಳು, ಪ್ಲಾಸ್ಟಿಕ್ ಕಸ...... ಒಂದೇ ಎರಡೇ ? ಅಂತೂ ಮೆಟ್ರೋ ಪ್ರವಾಸ ಮುಗಿಯಿತು, ನಾವು ಯಥಾಪ್ರಕಾರ ಕಾರು ನಿಲ್ಲಿಸಿದಲ್ಲಿಗೆ ಬಂದಿದ್ದೆವು. ರೈಲ್ವೇ ನಿಲ್ದಾಣದಲ್ಲಿ ಎಲ್ಲಿಯೂ ಕಸ್ತೂರಿ ಕನ್ನಡದ ಪರಿಮಳ ಬರಲಿಲ್ಲ, ಅಲ್ಲಿದ್ದ ಕಾರ್ಯನಿರ್ವಾಹಕರು ಕನ್ನಡಿಗರಂತೆ ಕಾಣಿಸಲೂ ಇಲ್ಲ. ರೈಲಿನ ಒಳಗೆ ಯಾಂತ್ರಿಕ ಧ್ವನಿ ನಿಲುಗಡೆ ಬಂದಾಗ ಕನ್ನಡದಲ್ಲಿಯೂ ಕೇಳಿಸುತ್ತಾ ಇದ್ದಿದ್ದೇ ಒಂದು ಸಮಾಧಾನ. ಮೆಟ್ರೋ ರೈಲು ನೋಡದಿದ್ದವರು ಒಂದು ಬಾರಿ ಕುಳಿತು ಕೊಳ್ಳಬಹುದು.
ಊಟದ ಹೊತ್ತು, " ಊಟಕ್ಕೇನು ಮಾಡೋಣ ಮಧೂ " ಗಿರೀಶ್ ಕೇಳಿದ್ದು.

" ಹೋಗುವಾ ಮುಂದೆ ಮುಂದೆ..."

ಕಾರು ಎಂ. ಜಿ. ರಸ್ತೆಯುದ್ದಕ್ಕೂ ಹುಡುಕುತ್ತಾ ಮುಂದುವರಿಯಿತು. ಚೈನೀಸ್ ಹೋಟಲ್, ನಾನ್ ವೆಜ್ ರೆಸ್ಟರಾಂಟ್ ಗಳೇ ಕಂಡವಲ್ಲದೆ ನಮಗೆ ಬೇಕಾಗಿದ್ದ ಸಸ್ಯಾಹಾರಿ ಉಪಾಹಾರ ಗೃಹಗಳು ಈ ರಸ್ತೆಯನ್ನು ಹುಡಿಗೈಯುವಂತೆ ತಿರುಗಿದರೂ ಕಾಣಲೊಲ್ಲದು. ಮುಂಜಾನೆ ತಂಗಿಮನೆಯ ಕ್ಯಾಪ್ಸಿಕಂ ಚಿತ್ರಾನ್ನ ನನಗೆ ಹೊಸರುಚಿಯಾಗಿದ್ದುದರಿಂದ ಪಟ್ಟಾಗಿ ತಿಂದಿದ್ದೆ. ಬಸವಳಿದ ನಮ್ಮ ಕಾರು ಬೇರೊಂದು ರಸ್ತೆಗೆ ತಿರುಗಿತು. ಅಜ್ಜೀಪುಣ್ಯವೋ ಎಂಬಂತೆ ಒಂದು ಬಫೆ ಊಟದ ಸ್ಟಾಲ್ ಎದುರಾಯಿತು. ನಮ್ಮ ಸಾಂಪ್ರದಾಯಿಕ ಊಟ, ಅನ್ನ ಸಾಂಬಾರು ತಿಂದು ಮುಂದಿನ ಬೆಂಗಳೂರು ದರ್ಶನಕ್ಕೆ ಗಾಡಿ ಹೊರಟಿತು.

" ಮಾಲ್ ಸಂಸ್ಕೃತಿ ನಮ್ಮ ಕಿರಾಣಿ ಅಂಗಡಿಗಳನ್ನು ಧೂಳೀಪಟ ಮಾಡಲಿದೆ " ಇತ್ಯಾದಿ ಲೇಖನಗಳನ್ನು ಪತ್ರಿಕೆಗಳಲ್ಲಿ ಓದಿ ಮಾತ್ರ ಗೊತ್ತಿದ್ದ ನನಗೆ ಮಾಲ್ ಸಂದರ್ಶಿಸುವ ಅವಕಾಶ ಸಿಕ್ಕಿತು.

" ಇಲ್ಲಿ ನಮ್ಮಂತವರು ಕೊಳ್ಳಲಿಕ್ಕೇನೂ ಇಲ್ಲ, ಸುಮ್ಮನೇ ನೋಡ್ಬಿಟ್ಟು ಬರೂದು ತಿಳೀತಾ..." ಪಟ್ಟಣಕ್ಕೆ ಬಂದ ಪುಟ್ಟಕ್ಕನಂತೆ ಹ್ಞೂಂಗುಟ್ಟದೇ ವಿಧಿಯಿಲ್ಲ.

ಸಂಜೆ ಆಯಿತು. ಒಂದು ಮದುವೆ ರಿಸೆಪ್ಷನ್ ಪಾರ್ಟಿ ನಮಗಾಗಿ ಕಾಯುತ್ತಿತ್ತು. ಅದೇನಾಗಿತ್ತೂಂದ್ರೆ ಪುತ್ತೂರಿನ ನಮ್ಮ ಸಂಬಂಧಿಕರ ಮುದುವೆಗೆ ಹೋಗಲು ಏನೋ ಕಾರಣದಿಂದ ಹೋಗಲು ಸಾಧ್ಯವಾಗಿರಲಿಲ್ಲ, ಕೆಲವೊಮ್ಮೆ ಮರೆತೂ ಹೋಗುವುದಿದೆ. ಇದೂ ಹಾಗೇ ಆಗಿತ್ತೂ ಅನ್ನಿ.

" ಮದುವೆಗೆ ಹೇಗೂ ಹೋಗಲಿಲ್ಲ, ಈಗ ಪಾರ್ಟಿ ಬೆಂಗಳೂರಿನಲ್ಲಿ ಇಟ್ಕೊಂಡಿದಾರೆ, ಮರೆಯದೇ ಹೋಗಿ " ಕಿರಿಯ ತಂಗಿ ಗಾಯತ್ರಿ ಸಲಹೆ ಕೊಟ್ಟಿದ್ದನ್ನು ಸ್ವೀಕರಿಸಿ ಬೆಂಗಳೂರಿನ ಔತಣಕೂಟದಲ್ಲಿ ಪಾಲ್ಗೊಂಡೆವು. ಬಫೇ ಊಟ, ಏನೇನೋ ಪಂಚಭಕ್ಷ್ಯ ಪರಮಾನ್ನಗಳಿದ್ದರೂ ನೆಲದ ಮೇಲೆ ಚಕ್ಕಳಮಕ್ಕಳ ಕುಳಿತು ಉಂಡಂತ ಸುಖ ಇದರಲ್ಲಿ ಇಲ್ಲ.


- ಮುಂದುವರಿಯಲಿದೆ.Posted via DraftCraft app

Saturday, 18 January 2014

ಮೇಲುಕೋಟೆಯ ಮೇಲೆ ಪುಳಿಯೋಗರೆ!
ಮೇಲುಕೋಟೆಯ ದಾರಿಯಾಗಿ ನಮ್ಮ ವಾಹನ ಚಲಿಸಿತು.  ನಮಗೆ ಶ್ರೀರಂಗಪಟ್ಟಣ,   ರಂಗನತಿಟ್ಟು ಪಕ್ಷಿಧಾಮಗಳೂ ಲಭ್ಯವಿದ್ದವು.   ಹೇಗಿದ್ದರೂ ರಾತ್ರಿಯೊಳಗಾಗಿ ತಂಗಿಯ ಮನೆಯೊಳಗಿರಬೇಕು ಎಂದೇ ನನ್ನ ಉದ್ಧೇಶವಾಗಿತ್ತು.     " ಹಕ್ಕಿಗಳನ್ನು ಇನ್ನೊಮ್ಮೆ ನೋಡೋಣ ಗಿರೀ... ಈಗ ಸೀದಾ ಕಾರು ಮುಂದೆ ಹೋಗಲಿ "  ಪುಸಲಾಯಿಸದೆ ವಿಧಿಯಿಲ್ಲ.   ಸಸ್ಯ ಸಮೃದ್ಧವಾಗಿರುವ ನಮ್ಮ ಅಡಿಕೆ ತೋಟದಲ್ಲಿ  ಕಾಗೆ, ಕೋಗಿಲೆಯಾದಿಯಾಗಿ ನವಿಲುಗಳೂ ಸೂಕ್ಷ್ಮ ದೃಷ್ಟಿ ಇರುವವರಿಗೆ ವೀಕ್ಷಣೆಗೆ ಲಭ್ಯವಿರುವಾಗ ಬೇರೆ ಪಕ್ಷಿಧಾಮ ಬೇಕೇ...

ಮೇಲುಕೋಟೆಗೆ ಮಂಡ್ಯ ದಾರಿಯಲ್ಲಿ ಹೋಗಬೇಕು.   ದಾರಿಯುದ್ದಕ್ಕೂ ಕಬ್ಬಿನ ಗದ್ದೆಗಳು.   ಕಣ್ತುಂಬ ಹಸಿರು,   ಆಗಾಗ ತೂಕಡಿಸುತ್ತಾ ನನ್ನ ದೃಶ್ಯವೀಕ್ಷಣೆ.   ಎಲ್ಲೋ ಒಂದು ಕಡೆ ಹೋಟಲ್ ಚಹಾ ತಿಂಡಿ ಹೊಟ್ಟೆಗೆ ಬಿತ್ತು.   ಡ್ರೈವಿಂಗ್ ಮಾಡುತ್ತಾ ಗಿರೀಶನ ಚಟಾಕಿಗಳು ಉಲ್ಲಾಸವನ್ನೂ ತರುತ್ತಿತ್ತು.    ಅವನ ಶಬ್ದ ಭಂಡಾರ ಅಷ್ಟಿದೆ,    ತೂಕಡಿಸುತ್ತಿದ್ದವಳಿಗೆ ಅದ್ಯಾವುದೂ ಈಗ ನೆನಪಿಲ್ಲವಾಗಿದೆ.  ಮೇಲುಕೋಟೆ ಬಂದೇ ಬಿಟ್ಟಿತು ನೋಡಿ,  ಈ ಬೆಟ್ಟವನ್ನು ಗಿರೀಶ್ ಜೊತೆ ನೋಡಿ ಬರೋಣ.   ಅತಿ ಎತ್ತರದ ಗಿರಿಧಾಮ ಸೌಂದರ್ಯದ ತಾಣ,   ಇಲ್ಲಿ ಎಂತಹ ಅರಸಿಕನೂ ಕಲಾವಿಹಾರಿಯಾಗಬಲ್ಲ. 

" ಇಂತಹ ಜಾಗದಲ್ಲಿ ಫೊಟೋ ತೆಗೀವಾಗ ಬೆರ್ಚಪ್ಪನ ಥರ ನಿಲ್ಲೂದಲ್ಲ,  ಹೀಗೆ ಅಭಿನಯ,  ಹಾವಭಾವ ಕೊಡಲೂ  ತಿಳಿದಿರಬೇಕು " ಅಂದರು ಎಚ್.ಟಿ. ಭಟ್.

" ಆಗಲಿ ಗುರುಗಳೇ " ಅಂದ ಗಿರಿ.
ಕಾರಿನಲ್ಲಿ ಹಾಯಾಗಿ ಕಾಲು ನೀಡಿ ಮಲಗಿ ನಿದ್ರಿಸುತ್ತಿದ್ದ ನನ್ನನ್ನು ಗಿರೀಶ್ ಎಬ್ಬಿಸಿದ.   " ಇಲ್ಲೇ ಹತ್ತಿರ ಇನ್ನೋಂದು ಗುಡಿ ಇದೆ,  ಹೆಚ್ಚು ನಡೆಯಲಿಕ್ಕಿಲ್ಲ,  ಹತ್ತಲಿಕ್ಕೂ ಇಲ್ಲ "  ಕಾರೊಳಗೇ ಕೂತಿದ್ದು ಸಾಕಾಗಿತ್ತು.  ಎದ್ದು ಹೊರಟೆ,   ಚೆಲುವರಾಯನ ಗುಡಿಗೆ,  ಮುಸ್ಸಂಜೆಯಾಗಿತ್ತು,   ಗುಡಿಯ ಬಾಗಿಲು ತೆರೆದಿರಲಿಲ್ಲ.   ಸುಮಾರು ಏಳೂವರೆ ಗಂಟೆ ಹೊತ್ತಿಗೆ ಬಾಗಿಲು ತೆರೆಯಿತು.  ನಗಾರಿ,  ವಾದ್ಯಘೋಷ,  ದೊಂದಿಯ ಬೆಳಕು ಇತ್ಯಾದಿಗಳ ದೇವರ ಸೇವೆ ಆದ ಮೇಲೆ ಭಕ್ತಾದಿಗಳಿಗೆ ಒಳ ಪ್ರವೇಶ.   ಅಷ್ಟು ಚಿಕ್ಕ ಗ್ರಾಮದಲ್ಲೂ ತುಂಬಾನೇ ಜನ ಸಮೂಹ ಇದ್ದಿತು.  ಶಿಲಾಮಯ ದೇಗುಲದ ಒಳಗೆ ಆಕರ್ಷಕ ಕೆತ್ತನೆ ಕೆಲಸ,  ರಾತ್ರಿಯಾಗಿದ್ದುದರಿಂದ ಹೆಚ್ಚಿನ ರಸಾಸ್ವಾದನೆ ಸಾಧ್ಯವಾಗಲಿಲ್ಲ.   ಒಳಾಂಗಣದಲ್ಲಿ ಸ್ವಲ್ಪ ಹೊತ್ತು ಕೂತಿದ್ದು,  ದೇವರ ಸೇವಾ ಪ್ರಸಾದವನ್ನೂ ಚೀಲಕ್ಕೇರಿಸಿ ಹೊರಟೆವು.

ಗುಡಿ ಗೋಪುರಗಳಿದ್ದಲ್ಲಿ ಭರ್ಜರಿ ಸಂತೇ ಮಾರಾಟ,   ಮೇಲುಕೋಟೆ ಬಿಡುವಾಗ ಗಂಟೆ ಒಂಭತ್ತು ದಾಟಿತ್ತು.   ತಳ್ಳುಗಾಡಿಯಲ್ಲಿ ಪುಳಿಯೋಗರೆ ಎದುರಾಯಿತು.    ಪುಳಿಯೋಗರೆಗೆ ಮೈಸೂರು ಹೆಸರುವಾಸಿ.

  " ಇಲ್ಲಿ ತಿಂದು ನೋಡ್ಬಿಟ್ಟು  ಮನೆಗೆ ಹೋದ ಮೇಲೆ ಮಾಡಬಹುದು " ಅಂದೆ.  

" ಕರೆಕ್ಟ್,  ಬೇಕಿದ್ರೆ ಬ್ಲಾಗ್ ಬರೆಯಬಹುದು " ಇದು ಗಿರೀಶ್ ನುಡಿ.

 ಒಂದು ತಟ್ಟೆಯನ್ನು ನಾಲ್ವರೂ ಹಂಚಿ ತಿಂದೆವು.   ಖಾರದ ಕೊಳ್ಳಿಯಂತಿದ್ದ ಪುಳಿಯೋಗರೆ ತಿಂದ ನಂತರ ಗಾಡಿಯ ಹುಡುಗನೇ ಕುಡಿಯಲು ನೀರು ಕೊಟ್ಟ.   " ನೋಡಪ್ಪಾ ನಿನ್ನ ಪುಳಿಯೋಗರೆಗೆ ಇನ್ನೂ ಹುಳಿ, ಬೆಲ್ಲ ಹಾಕ್ಬೇಕಾಗಿತ್ತು " ಅಂದೆ.   ಪುಳಿಯೋಗರೆ ಹುಡಿಯನ್ನೂ ನಾನು ಹಾಗೂ ಶೀಲಾ ಒಂದೊಂದು ಪ್ಯಾಕ್ ಖರೀದಿಸಿದೆವು.
ನಾವೂ ಪುಳಿಯೋಗರೆ ಮಾಡೋಣ,
ಅವಶ್ಯವಿರುವಷ್ಟು ಅನ್ನ,  ಉದುರುದುರಾಗಿರಲಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು,  ಸಾಸಿವೆ ಸಿಡಿದ ನಂತರ ಉಪ್ಪು,  ಹುಳಿ,  ಬೆಲ್ಲ ಮಿಶ್ರಣದ ದ್ರಾವಣವನ್ನು ಎರೆದು ಕುದಿಸಿ.   ರುಚಿಗೆ ಬೇಕಾದಷ್ಟೇ ಪುಳಿಯೋಗರೆ ಹುಡಿ ಸೇರಿಸಿ,  ಅನ್ನವನ್ನೂ ಹಾಕಿ ಮಿಶ್ರ ಮಾಡಿ,  ಸ್ವಲ್ಪ ಹೊತ್ತು ಒಲೆಯಲ್ಲಿ ಮುಚ್ಚಿಟ್ಟಿರಿ.   ಬಿಸಿ ಬಿಸಿಯಾಗಿ ತೆಗೆದಿಟ್ಟು ತಿನ್ನಿ. ನಾವು ಖರೀದಿಸಿದ ಪುಳಿಯೋಗರೆ ಪ್ಯಾಕ್ ನಲ್ಲಿ ಒಗ್ಗರಣೆ ಕೂಡಾ ಇದ್ದಿತು,   ಅನ್ನಕ್ಕೆ ಹಾಗೇ ಕಲಸಿ ತಿಂದರಾಯಿತು.

ಅಂತೂ ಪುಳಿಯೋಗರೆ ಮುಂದೆ ತಂಗಿ ಮನೆಯಲ್ಲೂ ಸಿಕ್ಕಿತು.  ನಮ್ಮ ಊರಿನ ಔತಣಕೂಟಗಳಲ್ಲೂ ಕೆಲವೊಮ್ಮೆ ಪುಳಿಯೋಗರೆ ಬರುವುದಿದೆ.   ತಾಜಾ ಪುಳಿಯೋಗರೆ ಹೇಗಿರುತ್ತದೆ ಎಂದು ಈ ಪ್ರವಾಸ ನಿಮಿತ್ತದಿಂದ ತಿಳಿಯುವಂತಾಯಿತು.

ಮನೆಯಲ್ಲಿ ಪುಳಿಯೋಗರೆ ಹುಡಿ ತಯಾರಿ ಹೇಗೆ ?
ಉಪ್ಪು, ಬೆಲ್ಲ, ಹುಳಿಗಳ ದ್ರಾವಣ ಮಾಡಿಕೊಳ್ಳುವುದು ಮೊದಲನೇ ಸಿದ್ಧತೆ.
ಮಸಾಲೆಗೆ ಬೇಕಾಗಿರುವ ಸಾಮಗ್ರಿ:
ಒಣಮೆಣಸು 3-4
ಕಾಳುಮೆಣಸು 4-6 ಕಾಳು
ಎಳ್ಳು 2 ಚಮಚ
ಕೊತ್ತಂಬ್ರಿ 3 ಚಮಚ 
ಕಡ್ಲೇಬೇಳೆ 2 ಚಮಚ
ಒಣಕೊಬ್ಬರಿ ತುರಿ 3 ಚಮಚ
ಈ ಮಸಾಲೆಗಳನ್ನು ಹುರಿದು, ಕೊಬ್ಬರಿತುರಿಯೊಂದಿಗೆ ಹುಡಿ ಮಾಡಿ.
ಒಗ್ಗರಣೆಗೆ  ನೆಲಕಡಲೆ ಹಾಗೂ ಬೇವಿನಸೊಪ್ಪು ಅವಶ್ಯ.
ಎಣ್ಣೆಯೂ ಅಷ್ಟೇ,  ತೆಂಗಿನೆಣ್ಣೆ ಬೇಡ,  ಕಡ್ಲೇಕಾಯಿ ಎಣ್ಣೆ ಬಳಸಿ,   ರಿಫೈನ್ಡ್ ಎಣ್ಣೆಯೂ ಆದೀತು.
ಒಗ್ಗರಣೆಗಿಟ್ಟು,  ಸಾಸಿವೆ ಸಿಡಿದಾಗ ಬೆಲ್ಲ, ಹುಳಿ, ಉಪ್ಪುಗಳ ದ್ರಾವಣ ಹಾಕಿ ಕುದಿಸಿ.   ಮಸಾಲೆ ಹುಡಿಯನ್ನೂ ಸೇರಿಸಿ ಒಂದು ಮುದ್ದೆಗೆ ಬರುವ ತನಕ ಒಲೆಯ ಮೇಲಿಟ್ಟಿರಿ.   ಆರಿದ ನಂತರ ಒಣ ಜಾಡಿಯಲ್ಲಿ ತುಂಬಿಸಿ.  ಬೇಕಾದಾಗ ತುಪ್ಪ ಬೆರೆಸಿದ ಅನ್ನದೊಂದಿಗೆ,   ಒತ್ತುಶಾವಿಗೆಯೊಂದಿಗೆ,  ಅವಲಕ್ಕಿಯೊಂದಿಗೆ ಕಲಸಿ ತಿನ್ನಿ.   

ಮನೆಯಲ್ಲಿ ಕುಚ್ಚುಲಕ್ಕಿ ಅನ್ನವನ್ನೇ ತಿನ್ನುವ ದಕ್ಷಿಣ ಕನ್ನಡಿಗರು ಹಾಗೂ ಕೇರಳೀಯರು ಅನ್ನದಿಂದ ಮಾಡುವ ತಿನಿಸುಗಳಾದ ಪುಳಿಯೋಗರೆ,  ಚಿತ್ರಾನ್ನ,  ಪುಲಾವ್ ಇತ್ಯಾದಿಗಳನ್ನು ಇಷ್ಟ ಪಡುವುದೇ ಇಲ್ಲ,  ಮಾಡುವುದಿದ್ದರೂ ಔತಣಕೂಟಗಳಲ್ಲಿ ಸಹತಿನಿಸಾಗಿ ಮಾತ್ರ ತಯಾರಿಸುವ ರೂಢಿ.


- ಮುಂದುವರಿಯಲಿದೆ.Posted via DraftCraft app

Saturday, 11 January 2014

ಮೈಸೂರಿನ ಆಶ್ರಮ ಸಂದರ್ಶನ

ಅರಮನೆ ಹಾಗೂ ಚಾಮುಂಡಿ ಬೆಟ್ಟಗಳನ್ನು ಸುತ್ತಾಡಿಯೇ ಮದ್ಯಾಹ್ನ ಆಯಿತು.  ಹೋಟಲ್ ಹೊಕ್ಕು ಊಟ ಮುಗಿಸಿದೆವು.   ಮುಂದೆ ನಾವೊಂದು ಆಶ್ರಮಕ್ಕೆ ಭೇಟಿ ನೀಡಲಿದ್ದೇವೆ ಎಂದ ಗಿರೀಶ.   ಈ ಮೈಸೂರು ಗಣೇಶಪುರಿ ಶ್ರೀ ನಿತ್ಯಾನಂದ ಆಶ್ರಮ ಗಿರೀಶ್ ಹೆಚ್ಚಾಗಿ ಭೇಟಿ ನೀಡುವ ಒಂದು ಪ್ರಶಾಂತ ತಾಣ. ಈ ಆಶ್ರಮದ ಮಾತಾಜಿ,  ಶ್ರೀ ರಾಜಯೋಗಿನಿ ಹಸನ್ ಮಾತಾಜಿ ಇಲ್ಲಿ ಸಮಾಧಿಸ್ಥರಾಗಿ ಒಂದು ವರ್ಷವಾಗುತ್ತಾ ಬಂದಿತೆಂಬ ವಿವರ ಶೀಲಾ ತಿಳಿಸಿದಳು.   ಬನ್ನಿ,   ಗಿರೀಶ್ ಜೊತೆಯಲ್ಲಿ ಆಶ್ರಮದ ಒಳ ಹೊರ ಸುತ್ತಾಡಿ ಬರೋಣ. ಒಳಾಂಗಣ  ವಿಶಾಲವಾಗಿಯೂ,  ಅಚ್ಚುಕಟ್ಟಾಗಿಯೂ ಇದೆ.   ಆಶ್ರಮದ ಹೊರಗೆ  ಸಸ್ಯೋದ್ಯಾನ.

ಇಲ್ಲಿ ಸಾಕಷ್ಟು ಹೊತ್ತು ತಂಗಿದ್ದು,  ಸುತ್ತಾಡಿ ಆದಾಗ ಸಂಜೆಯಾಗುತ್ತಾ ಬಂದಿತ್ತು.   ಮಂಡ್ಯ ರಸ್ತೆಯಲ್ಲಿ ಬೆಂಗಳೂರು ತಲಪಲಿದ್ದೇವೆ ಎಂದು ತಂಗಿಯ ಮನೆಗೆ ಕರೆ ಹೋಯಿತು.   ಮಗನ ಮೊಬೈಲ್ ಕರೆ ಆಗಾಗ ಬರ್ತಾ ಇತ್ತು.   ಮಂಡ್ಯ ದಾರಿಯಲ್ಲಿ ಹೋಗುವ ಮೂಲಕ ಮೇಲುಕೋಟೆಯ ಯೋಗನಾರಸಿಂಹ ದೇವಸ್ಥಾನ,  ಚೆಲುವರಾಯ ಸ್ವಾಮಿ ದೇವಸ್ಥಾನಗಳನ್ನು ನೋಡಿಕೊಂಡೇ ಮುಂದುವರಿಯುವ ಇರಾದೆ ಗಿರೀಶನದ್ದು.

" ಇದನ್ನೆಲ್ಲಾ ನೋಡಿ ಬಂದ ಮೇಲೆ ಒಂದೊಂದೇ ಪ್ರವಾಸೀ ಸ್ಥಳದ ಮೇಲೆ ಬ್ಲಾಗ್ ಬರೀರೀ ಶುಭಕ್ಕಾ "

" ಹಾಗಂತೀಯಾದ್ರೆ ಬರೆಯುವಾ "

" ಫೊಟೋ ಬೇಕಾದಷ್ಟು ಸಿಗ್ತದಲ್ಲ,  ಮತ್ಯಾಕೆ ಚಿಂತೆ.." ಅಂದ.   ಇವರು " ಬೀಗದ ಕೈ ಎಲ್ಲಿಟ್ಟಿದ್ದೀ " ಎಂದು ಕೇಳಿದ ಹೊತ್ತಿನಿಂದ ನನ್ನ ಮೂಡ್ ಹಾಳಾಗಿತ್ತು. 
 
 " ಆಗಾಗ ಬರೆದಿಟ್ಕೊಳ್ಳಿ,  ಮರೆತು ಹೋಗಬಾರದಲ್ಲ "

" ಪೆನ್ನು, ಪುಸ್ತಕ ಎಲ್ಲಿದೇ ?"

" ಐ ಪಾ್ಯಡ್ ಇದೆಯಲ್ಲ,  ಅದ್ರಲ್ಲೇ ಬರೆದಿಡಿ "  ಅವನು  ಐ ಪಾ್ಯಡ್ ತಂದಿದ್ದ,   ಗೂಗಲ್ ಮ್ಯಾಪ್ ನೋಡ್ತಾ ಪ್ರಯಾಣ ಮಾಡುವುದುತ್ತಮ ಅಂತ  ಐ ಪಾಡೂ ಜೊತೆಗೆ ಬಂದಿತ್ತು.


ಇಷ್ಟೂ ಬರೆಯುತ್ತಿರಬೇಕಾದರೆ ಗಿರೀಶ್ ಬಗ್ಗೆ ಸ್ವಲ್ಪವೂ ಹೇಳದಿದ್ದರೆ ತಪ್ಪಾದೀತು.   ನಮ್ಮವರು ಹಾಗೂ ಗಿರೀಶ್ ಸ್ನೇಹ ಹಳೆಯದು,  ಹತ್ತು ವರ್ಷಕ್ಕೂ ಮೇಲ್ಪಟ್ಟ ಸ್ನೇಹ ಇವರಿಬ್ಬರದು.   ನಮ್ಮ ಎಚ್.ಟಿ. ಭಟ್,   ಸುರತ್ಕಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಿಂದ ಹೊರ ಬಂದ ಮೇಲೆ ಸರ್ಕಾರೀ ಕೆಲಸದ ಹಿಂದೆ ಹೋಗದೆ ಸ್ವತಂತ್ರವಾಗಿ ಇಲೆಕ್ಟ್ರಾನಿಕ್ಸ್ ಉದ್ಯಮಿಯಾಗಿ ಉಪ್ಪಳವನ್ನು ನೆಲೆಯಾಗಿರಿಸಿ ಮಂಗಳೂರು, ಕಾಸರಗೋಡು,  ಪುತ್ತೂರುಗಳಲ್ಲಿ ವ್ಯವಹರಿಸುತ್ತಾ ಬಂದವರು.   ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಇವರಿಂದ ಕಲಿಯಲೆಂದೇ ಎಷ್ಟೋ ಮಂದಿ ಬರುತ್ತಿರುತ್ತಾರೆ.   ಹಾಗೆ ಡಿಜಿಟಲ್ ತಂತ್ರಜ್ಞಾನವನ್ನು ಕಲಿಯುವ ಸ್ಟೂಡೆಂಟ್ ಆಗಿ ಗಿರೀಶ್ ಅಂದು ಬಂದವನು ಇಂದು ಮನೆಯ ಸದಸ್ಯರಲ್ಲೊಬ್ಬನಾಗಿದ್ದಾನೆ.   ಇದಕ್ಕೂ ಕಾರಣವಿದೆ,   ಪಾದರಸದಂತೆ ಚುರುಕಾದ ಗಿರೀಶ್ ಪರಿಚಿತನಾದಾಗ ನನ್ನ ಮಕ್ಕಳಿಬ್ಬರೂ ಚಿಕ್ಕವರು.   ಇಬ್ಬರೂ ಅವನ ಒಡನಾಡಿಗಳಾಗಿ ಮುಂದುವರಿದರು. ಪೈವಳಿಕೆಯ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ನನ್ನ ಮಗ ಕಂಪ್ಯೂಟರ್ ಸಾಧನಗಳೊಂದಿಗೆ ಲೀಲಾಜಾಲವಾಗಿ ವ್ಯವಹರಿಸುವ ಗಿರೀಶ್ ಕುಶಾಗ್ರಮತಿಗೆ ಮಾರು ಹೋದ.   ಮಕ್ಕಳ ಮನೋದೈಹಿಕ ಬೆಳವಣಿಗೆಗೆ ಇಂತಹ ಪೂರಕ ವಾತಾವರಣ ಗಿರೀಶನಿಂದಾಗಿಯೇ ನಮ್ಮ ಮನೆಯೊಳಗೆ ನಿರ್ಮಾಣವಾಯಿತು.

ತಾಂತ್ರಿಕ ಕ್ಷೇತ್ರದಲ್ಲಿ ಬಹಳ ಮುಂದೆ ಇರುವ ಗಿರೀಶ್ ವೃತ್ತಿಯಲ್ಲಿ ಮಂಗಳೂರಿನ ಅಡ್ವೊಕೇಟ್.   ಲಾಯರ್ ಗಿರಿ ವೃತ್ತಿಯಾದರೂ ಅಂತರ್ಜಾಲದ ಮೇಲಿನ ಅವನ ಹಿಡಿತ ಮಂಗಳೂರಿನ ಇತರ ವಕೀಲರಿಗೆ ಇರಲಾರದು.   ಪರಿಚಿತನಾದ ಮೇಲೆ ಹಿಂದು ಮುಂದು ತಿಳಿಯದಿರುತ್ತೇನಾ,  ಗಿರೀಶ್ ಚುಳ್ಳಿಕ್ಕಾನ ಮನೆತನದವನೆಂದು ತಿಳಿದಾಗ ನನಗೂ ಹಿಗ್ಗಾಯಿತು,   ಯಾತಕ್ಕೇಂದ್ರೆ ಚುಳ್ಳಿಕ್ಕಾನ ನನ್ನ ಸೋದರತ್ತೆಯ ಮನೆ.   ಅಲ್ಲಿಗೆ ನಮ್ಮೊಳಗೆ ನೆಂಟಸ್ತನವೂ ಇದೆ ಅಂತಲೂ ಆಯ್ತು.

ಗಿರೀಶ್ ಪತ್ನಿ ಶೀಲಾ ಕೂಡಾ ವಿದ್ಯಾವಂತೆ,  ಬಿ.ಕಾಂ. ಪದವೀಧರೆ,   ಸಂಸ್ಕೃತದಲ್ಲಿ ಸ್ನಾತಕ ಪದವಿ ಪಡೆದಿದ್ದಾಳೆ ಹಾಗೂ ಕಾಲೇಜು ಅಧ್ಯಾಪಕಿ.   ನನ್ನ ಮಗಳಿಗೂ ಶೀಲಾ ಅಚ್ಚುಮೆಚ್ಚಿನ ಸ್ನೇಹಿತೆ.   ನನ್ನ ಬರವಣಿಗೆಯನ್ನು ಉತ್ತೇಜಿಸಿದ ಗಿರೀಶ್,   ಬರಹಗಳ ಪ್ರಕಟಣೆಗೆ  ತನ್ನ ಭಾವ,  ' ಗಲ್ಫ್ ಕನ್ನಡಿಗ '  ಅಂತರ್ಜಾಲ ಪತ್ರಿಕೆಯ ಪದ್ಯಾಣ ರಾಮಚಂದ್ರರನ್ನೂ ಪರಿಚಯಿಸಿ ಕೊಟ್ಟ.    ಆರಂಭಿಕ ಹಂತದ ಬರಹಗಳನ್ನು ಮೇಲ್ ಕಳುಹಿಸಲೂ,  ಫೋಟೋ ಲಗತ್ತಿಸಲೂ ತಿಳಿಯದಿದ್ದ ನಾನು ಮನೆಯೊಳಗಿನ ಪೂರಕ ವಾತಾವರಣದಿಂದಾಗಿಯೇ ಎಲ್ಲವನ್ನೂ ಕಲಿಯುವಂತಾಯಿತು.   ಆರಂಭದ ಬರಹಗಳೆಲ್ಲವೂ ದುಬೈ ಮೂಲದ ಅಂತರ್ಜಾಲ ಪತ್ರಿಕೆಗಳಾದ  ಗಲ್ಫ್ ಕನ್ನಡಿಗ ಹಾಗೂ ವಿಶ್ವ ಕನ್ನಡಿಗದಲ್ಲಿ ಬಂದಿವೆ.   ಪದ್ಯಾಣ ರಾಮಚಂದ್ರ ನನ್ನ ಕಿರು ಬರಹಗಳನ್ನು ದಿನ ಪತ್ರಿಕೆಗಳಲ್ಲೂ ಪ್ರಕಟಿಸಿ ಸ್ಪೂರ್ತಿ ನೀಡಿದರು.  ದುಬೈಯಿಂದಲೇ ಬರವಣಿಗೆಯ ಸೂಕ್ಷ್ಮ ವಿಚಾರಗಳ ಅರಿವು ಮೂಡಿಸಿದರು. ಬರೆದದ್ದನ್ನು ಬ್ಲಾಗ್ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳಲೂ ಗಿರೀಶನೇ ಉಮೇದು ಕೊಟ್ಟವನು.

- ಮುಂದುವರಿಯಲಿದೆ.

Posted via DraftCraft app

Friday, 3 January 2014

ಮೈಸೂರಿನ ಪತ್ರೊಡೆಕಾರು ಹೊರಟಿತು.   ಕಾರು ಹೊರಡುವ ಮೊದಲು ನಮ್ಮವರು ಇಳಿದು ಮನೆ ತನಕ ಹೋಗಿ ಬಂದರು.   " ಏನಿಲ್ಲ, ಹಿಂಬಾಗಿಲು ಹಾಕಿದ್ಯೋ ಇಲ್ವೋ ಅಂತ ನೋಡಿದ್ದೂ...." ಅಂತಂದ್ರು.   ಹೀಗೆ ಹೊರಡುವಾಗ ಇರಿಸು ಮುರಿಸು ಆಗೂದು ಸಹಜವೇ.  ನಾವು ಹಳ್ಳೀ ಮಂದಿ ಯಾವತ್ತೂ ಮನೆ ಬೀಗ ಹಾಕಿ ಹೋದೋರೇ ಅಲ್ಲ.   ಹಾಗಂತ ಬಾಗಿಲು ಹಾಕಿ ಮನೆಯೊಳಗೇ ಇರುವವರೂ ಅಲ್ಲ,   ಮುಂಬಾಗಿಲು ಸದಾ ತೆರೆದಿರುವಂತದು,   ರಾತ್ರಿ ಮಲಗುವ ಮೊದಲು ಬಾಗಿಲು ಜಡಿದರಾಯಿತು.   ಗದ್ದೆ,  ತೋಟ,  ಜಾನುವಾರುಗಳು ಪ್ರತಿದಿನವೂ ಸಹಸ್ಪಂದನ ಬಯಸುವಂತಹವು.  ವಿಶಾಲ ವ್ಯಾಪ್ತಿಯ ಪ್ರದೇಶದಲ್ಲಿ ಜನವಸತಿಯೂ ಇರಬೇಕು ಎಂಬ ದೂರದರ್ಶಿತ್ವದಿಂದ ನಮ್ಮೆಜಮಾನ್ರೇ ಇಲ್ಲಿ ಹಲವು ಮನೆಗಳು ಇರುವ ಹಾಗೆ ನೋಡಿಕೊಂಡಿದ್ದಾರೆ.  ಅವರಿಗೆಲ್ಲಾ ಹೇಳ್ಬಿಟ್ಟು ಆಗಿತ್ತು.   ದಿನಾ ಮನೆಕಾವಲು ಮಾಡಲು ಖಾದರ್,  ಚಿದಾನಂದ್ ಒಪ್ಪಿಕೊಂಡೂ ಆಗಿತ್ತು.

ಮಡಿಕೇರಿ,  ಕುಶಾಲನಗರ ಅತಿವೇಗದಿಂದ ತಲಪಿದ ಹಾಗೇ ಇವರಿಗೆ ಇನ್ನೊಂದು ಅನುಮಾನ ಬಂದಿತು.   " ಹೌದೂ,  ಬೀಗದಕೈ ಎಲ್ಲಿಟ್ಟಿದ್ದೀ "  ನನ್ನನ್ನೇ ಕೇಳೋದೇ!

" ಇದೊಳ್ಳೆ ಚೆನ್ನಾಯ್ತು, ಬೀಗ ಹಾಕಿದೋರು ನೀವಲ್ವಾ?  ನನ್ಹತ್ರ ಕೊಟ್ಟಿಲ್ಲ "  ಆದ್ರೂ ವ್ಯಾನಿಟಿ ಬ್ಯಾಗ್ ಬಿಡಿಸಿ ಹುಡುಕಿದೆ,  ಇದ್ದರಲ್ವೇ ಸಿಗೂದು.

   " ಇನ್ನೇನ್ಮಾಡೂದಂತೀರಾ..." ನನ್ನ ಕಂಗಾಲು ಸ್ಥಿತಿ ನೋಡಿ ಇವರಿಗೂ ಅಯ್ಯೋ ಅನಿಸಿರಬೇಕು. 

 " ಈಗ ಚಿಂತೆ ಮಾಡ್ತಾ ಕೂತಿರ್ಬೇಡ,  ಸುಮ್ಮನಿದ್ದು ಬಿಡು "
ಇನ್ನೇನು ಮೈಸೂರು ತಲಪಲಿದ್ದೇವೆ ಎಂದಾದಾಗ ನಮ್ಮವರು ಅಕ್ಕನ ಮನೆಗೆ ಕರೆ ಕೊಟ್ಟೂ ಆಯಿತು.    ಆಗ ಸಂಜೆಯಾಗಿತ್ತು.   ಸಂಜೆಯ ತಿಂಡಿಗೆ ಅಕ್ಕನ ಮನೆಗೆ ಎಂಬ ಸಂತಸ ನಮ್ಮವರಿಗೆ.    ಮೈಸೂರು ನಗರ ಕಾಣಿಸ ತೊಡಗಿತು. 

  " ಇಲ್ಲೇ ಕಾರ್ ನಿಲ್ಲಿಸಿ ಮನೆಗೆ ರೂಟ್ ಎಲ್ಲಿಂದ ಎಲ್ಲಿಗೆ ಅಂತ ಕೇಳಿಯೇ ಬಿಡೋಣ " ಎಂದ ಗಿರಿ.

   " ಅಲ್ಲೇ ನಿಂತಿರಿ,  ಐದು ನಿಮಿಷದಲ್ಲಿ ಬಂದ್ಬಿಟ್ಟೆ " ಅಂದ್ರು ಇವರ ಭಾವ ಮೊಬೈಲ್ ಕರೆಗೆ ಓಗೊಟ್ಟು.

  " ಓಹ್!  ನಾವು ನಿಂತ ಪಾಯಿಂಟ್ ಅಷ್ಟು ಕರೆಕ್ಟ್ " ಗಿರೀಶ್ ಗೆದ್ದ ನಗು.

ಚಹಾ,  ತೆಳ್ಳವು ಸಮಾರಾಧನೆ ಆಯ್ತು,   ಬಿಸಿನೀರ ಸ್ನಾನ ಮುಗಿಸಿ ಎಲ್ಲರೂ ಪುನಃ ತಯಾರಾದರು.   " ಈ ರಾತ್ರಿ ಕನ್ನಂಬಾಡಿ ನೋಡಿ ಬಂದ್ಬಿಡೋಣ " 

" ಇವತ್ತು ರಜಾದಿನ,  ಸಂಜೆ ವೇಳೆ ಮೈಲುದ್ದ ಕ್ಯೂ ಇರ್ತದೆ "

" ಹಾಗಿದ್ರೆ ನೀವೆಲ್ಲ ಹೋಗ್ಬನ್ನಿ,  ನಾನು ಮನೇಲಿರ್ತೇನೆ " ಅತ್ತಿಗೆ ಜೊತೆ ಪಟ್ಟಾಂಗಕ್ಕಿಳಿದೆ.  ಊರ ಸುದ್ದಿ,  ಟೀವಿ ಸುದ್ದಿ,  ಧಾರಾವಾಹಿ ಸುದ್ದಿ ಆಯ್ತು.

   " ನಾಳೆ ತಿಂಡಿ ಏನು "

" ಪತ್ರೊಡೆ ಮಾಡೋಣಾಂತ ತಯಾರು  ಮಾಡಿ ಆಗ್ಲೇ ಆಗಿದೆ,  ಇನ್ನು ಅಟ್ಟಿನಳಗೆಯಲ್ಲಿ ಬೇಯ್ಸಿದ್ರಾಯ್ತು " ಅನ್ನುವ ಹೊತ್ತಿಗೆ ಬೆಳಗ್ಗೆ ಹತ್ತೂ ಗಂಟೆಗೆ ಮನೆಯಿಂದ ಹೊರ ಹೋಗಿದ್ದ ಮಗ ಸೊಸೆ ಹಾಗೂ ಮೊಮ್ಮಗ ಹಾಜರಾದರು.   ಅರ್ಚನಾ ಖುಷಿ ಖುಷಿಯಿಂದ ರಾತ್ರಿಯೂಟದ ಸಿದ್ಧತೆ ನಡೆಸಿದಳು. 

 " ಶಾವಿಗೆ ಪಾಯಸ ಮಾಡ್ತೇನೆ,   ಪಾಯಸಕ್ಕೆ ಹಾಲು ಎರೆಯಲೋ,  ಕಾಯಿಹಾಲು ಮಾಡಲೋ "  ಎಂಬ ಅವಳ ಜಿಜ್ಞಾಸೆಗೆ ಅವಳ ಗಂಡಾನೇ ಉತ್ತರ ಕೊಟ್ಟ.  " ಕಾಯಿಹಾಲನ್ನೇ ಹಾಕು "

ರಾತ್ರಿ ಊಟ ಮುಗಿದು ಮಲಗುವ ಸಿದ್ಧತೆ ನಡೆಸಿದಾಗಲೂ ಚಳಿಯ ಸುದ್ದಿಯಿಲ್ಲ.   " ನಮ್ಮೂರಿನ ಥರಾನೇ ಆಗ್ತಿದೆ,  ಚಳಿ ಎಲ್ಹೋಯ್ತು?" 

" ಮುಗಿಲು ಇದ್ರೆ ಚಳಿ ಇಲ್ಲ ಅತ್ತೆ "  ಅಂದ ಕುಮಾರ.   " ಚಳಿ ಬೇಕಿತ್ತಾ "  ಛೇಡಿಸಿದ.

" ಬ್ಯಾಡಪ್ಪ,  ಈ ಹವೆ ಚೆನ್ನಾಗಿದೆ "

ಪತ್ರೊಡೆ ತಿನ್ನುತ್ತಿರಬೇಕಾದರೆ ತಯಾರಿಯ ವಿಧಾನವನ್ನೂ ಅತ್ತಿಗೆ ಹೇಳಲಾರಂಭಿಸಿದರು.   ಮನೆಯ ಹಿಂದೆ ಇರುವ ಪುಟ್ಟ ಜಾಗದಲ್ಲಿ ಕರಿಕೆಸವು ನೆಟ್ಟುಕೊಂಡಿದ್ದಾರೆ,   ಏನೂ ತುರಿಸದು.   ಅಕ್ಕಿಯೊಂದಿಗೆ ಉದ್ದಿನಬೇಳೆಯನ್ನೂ ಅರೆದಿದ್ದಾರೆ.

" ಇದೇನು ಬೆಳ್ತಿಗೆ ಅಕ್ಕಿ ಹಾಕಿದ್ದೂ...." 

" ಅದು ಹೊಸಾ ಕ್ರಮದಲ್ಲಿ ಮಾಡಿದ್ದು "

ಪತ್ರೊಡೆ ನಂಗೆ ಹೊಸ ತಿಂಡಿಯೇನೂ ಅಲ್ಲ,   ಮನೆಯಲ್ಲಿ ಮುಜಾನೆಗೊಂದು ತಿಂಡಿಯಲ್ಲಿ ಇದಕ್ಕೆ ಖಾಯಂ ಸ್ಥಾನವಿದೆ,   ನೆಂಟರಿಷ್ಟರು,   ಆಳುಕಾಳುಗಳು ಇರುವ ಹೊತ್ತಿಗೆ ಸಂಜೆ ತಯಾರು ಮಾಡಿ ಇಟ್ಬಿಟ್ರೆ ರಗಳೆಯಿಲ್ಲ.   ನಾವು ಸಾಂಪ್ರದಾಯಿಕವಾಗಿ ತಯಾರಿಸುವ ವಿಧಾನ ಹೀಗಿದೆ.

2 ಕಪ್ ಕುಚ್ಚುಲಕ್ಕಿ,   ನೀರಿನಲ್ಲಿ 5-6 ಗಂಟೆ ನೆನೆದಿರಬೇಕು.
1 ಕಪ್ ಕಾಯಿತುರಿ
2-3 ಒಣಮೆಣಸು
ಒಂದು ಹಿಡಿ ಕೊತ್ತಂಬರಿ
ಚಿಕ್ಕ ಚಮಚದಲ್ಲಿ ಅರಸಿನ
ರುಚಿಗೆ ಬೇಕಾದ ಉಪ್ಪು, ಹುಳಿ, ಬೆಲ್ಲ

ಮೊದಲು ಕಾಯಿತುರಿಯೊಂದಿಗೆ ಮಸಾಲೆ ಸಾಮಗ್ರಿಗಳನ್ನು ಅರೆದಿಡಿ.   ಅಕ್ಕಿಯನ್ನು ಚೆನ್ನಾಗಿ ತೊಳೆದು ಹಾಕಿಕೊಂಡು ಪುನಃ ತರಿ ತರಿಯಾಗಿ ಮಸಾಲೆ ಚೆನ್ನಾಗಿ ಕೂಡಿ ಬರುವಂತೆ ಅರೆದು ತೆಗೆಯಿರಿ.   ಮಿಕ್ಸೀಗಿಂತ ಕಡೆಯುವ ಕಲ್ಲು ಚೆನ್ನ.   ಕೆಸುವಿನ ಸೊಪ್ಪು ಕತ್ತರಿಸಿಟ್ಟಿದ್ದೀರಾ,   ಬಾಳೆಲೆ ಬಾಡಿಸಿ ಇಟ್ಕೊಂಡಿದ್ದೀರಾ,   ಇನ್ನೇಕೆ ತಡ ಮಾಡ್ತೀರಿ?  ಟೀವಿ ಕಾರ್ಯಕ್ರಮಗಳನ್ನು ನಾಳೆ ನೋಡಿದ್ರಾಯ್ತು.   ಅಟ್ಟಿನಳಗೆ ಒಲೆಗೇರಿಸಿ ನೀರು ಕುದಿಸಿ.

ಹಿಟ್ಟು ಹಾಗೂ ಕೆಸುವಿನ ಸೊಪ್ಪು ಚೆನ್ನಾಗಿ ಬೆರೆಸಿ,   ಬಾಡಿಸಿದ ಬಾಳೆಲೆಯೊಳಗಿಟ್ಟು,  ಮಡಚಿಟ್ಟು ಅಟ್ಟಿನಳಗೆಯೆಂಬ ಉಗಿಪಾತ್ರೆಯೊಳಗಿಡಿ.  ಅರ್ಧ ಗಂಟೆ ಹೊತ್ತು ಬೇಯಿಸಿ.   ರಾತ್ರಿಯೂಟದೊಂದಿಗೂ ತಿನ್ನಿ,  ಮಾರನೇ ದಿನ ಬೆಳಗ್ಗೆ ಪುಡಿ ಮಾಡಿ ಒಗ್ಗರಣೆ ಹಾಕಿ ಬಾಣಲೆಯಲ್ಲಿ ಬಿಸಿ ಬಿಸಿಯಾಗಿಸಿ ತಿನ್ನಿ.   

ಪತ್ರೊಡೆ ಉಪ್ಕರಿ ಮಾಡುವ ವಿಧಾನ:

ಬಾಳೆಲೆಯೊಳಗೆ ಬೆಂದ ಪತ್ರೊಡೆಯನ್ನು ಬೇಕಿದ್ದಷ್ಟು ಹುಡಿ ಮಾಡಿಟ್ಕೊಳ್ಳಿ.  
ಒಂದು ಕಡಿ ತೆಂಗಿನ ತುರಿ
ಒಗ್ಗರಣೆ ಸಾಮಗ್ರಿಗಳು: ಎಣ್ಣೆ,  ಸಾಸಿವೆ,  ಉದ್ದಿನಬೇಳೆ,  ಮೆಣಸು
ಒಂದು ಕಪ್ ಬೆಲ್ಲದ ಹುಡಿ
ಒಂದು ಕಪ್ ನೀರು,  ರುಚಿಗೆ ಉಪ್ಪು, ಬೇಕಿದ್ದರೆ ಹುಳಿಯನ್ನೂ ಈ ನೀರಿನಲ್ಲಿ ಕಲಸಿಟ್ಟುಕೊಳ್ಳಿ.

ಬಾಣಲೆಯನ್ನು ಒಲೆ ಮೇಲಿಟ್ಟು ಒಗ್ಗರಣೆ ಸಿದ್ಧಪಡಿಸಿ,  ಚಟಪಟ ಸದ್ದು ನಿಂತಾಗ ಬೆಲ್ಲ ಸುರಿದು ನೀರು ಎರೆಯಿರಿ.  ಬೆಲ್ಲ ಚೆನ್ನಾಗಿ ಕರಗಿ ನೀರಾಯಿತೇ,  ಈಗ ತೆಂಗಿನ ತುರಿಯೊಂದಿಗೆ ಪತ್ರೊಡೆಹುಡಿ ಹಾಕಿ ಸೌಟಿನಲ್ಲಿ ಮಗುಚಿ ಒಂದೆರಡು ನಿಮಿಷ ಮುಚ್ಚಿ ಬೇಯಿಸಿ.   ಬೆಲ್ಲದ ಸುವಾಸನೆಯ ಘಮಘಮಿಸುವ ಸಿಹಿ ಉಪ್ಕರಿ ಸಿದ್ಧ.   ಬೆಲ್ಲ ಆಗದವರಿಗೆ ನೀರುಳ್ಳಿ ಹಾಕಿದರಾಯಿತು,  ಇದು ಖಾರ ಪತ್ರೊಡೆ ಉಪ್ಕರಿ ಆಯ್ತು.

ತೆಂಗಿನತುರಿಯೊಂದಿಗೆ ಜೀರಿಗೆ ಅರೆದು,  ಮೇಲೆ ಹೇಳಿದಂತೆ ಒಗ್ಗರಣೆಗಿಟ್ಟು ,  ತೆಂಗಿನ ಮಸಾಲೆ ಕುದಿಸಿ, ಅದಕ್ಕೆ ಪತ್ರೊಡೆ ಹುಡಿ ಬೆರೆಸಿದ್ದು ಪತ್ರೊಡೆ ಬೆಂದಿ ಎಂಬ ಹೆಸರಿನಿಂದ ತಿನ್ನಿ.   ದಪ್ಪ ಮೊಸರಿಗೆ ಒಗ್ಗರಣೆ ಹಾಕಿಟ್ಟು ಪತ್ರೊಡೆ ಹುಡಿ ಹಾಕಿದಲ್ಲಿ ಮೊಸರು ಬಜ್ಜಿ  ಬಂದಿತು.  

ವೃತ್ತಾಕಾರದಲ್ಲಿ ತೆಳ್ಳಗೆ ಬಿಲ್ಲೆಗಳಂತೆ ಕತ್ತರಿಸಿ ಕಾವಲಿಗೆ ಎಣ್ಣೆ ಸವರಿ ಬಿಸಿ ಮಾಡಿ ತಿನ್ನುವುದು ಇನ್ನೊಂದು ವಿಧಾನ.  ಕಡ್ಲೇ ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕರಿದು ತೆಗೆಯಿರಿ,  ಪತ್ರೊಡೆ ಪೋಡಿ ಆನ್ನಿ.   ಸಂಜೆಯ ಚಹಾದೊಂದಿಗೆ ಬಿಸಿ ಬಿಸಿಯಾಗಿ ತಿನ್ನಿ.
ಪತ್ರೊಡೆಯ ಸಮ್ಮಾನದೊಂದಿಗೆ ನಾವು ಮುಂದಿನ ಪಯಣಕ್ಕೆ ಸಿದ್ಧರಾದೆವು.   ಮೈಸೂರಿನ ಪ್ರೇಕ್ಷಣೀಯ ಸ್ಥಳಗಳು ಎಲ್ಲರಿಗೂ ಗೊತ್ತಿರುವಂಥದೇ.   ರಸ್ತೆಯುದ್ದಕ್ಕೂ ಕಾರು ಚಲಿಸುತ್ತಿದ್ದಂತೆ ಮೈಸೂರು ಸುಂದರ ನಗರವೆಂದು ತಿಳಿಯಿತು.    ಅಂತಹ ವಾಹನ ದಟ್ಟಣೆಯೇನೂ ಇಲ್ಲದ ಪ್ರಶಾಂತ ನಗರ.   ಚಾಮುಂಡೇಶ್ವರೀ ದರ್ಶನ ಹಾಗೂ ಮೈಸೂರರಮನೆ ವೀಕ್ಷಣೆ ನಮ್ಮ ಮುಂದಿನ ಗುರಿಯಾಗಿಟ್ಟು ವಾಹನ ಚಲಿಸಿತು.

  " ಮೃಗಾಲಯ ನೋಡಬಹುದಿತ್ತು "  ಅಂದಳು ಶೀಲಾ.

  " ಮೃಗಾಲಯದೊಳಗೆ ನಡೆದಾಡಿ ಹೊರ ಬರಬೇಕಾದರೇ ಸಂಜೆಯಾದೀತು,  ಅದನ್ನು ಮುಂದಿನ ಟ್ರಿಪ್ ನಲ್ಲಿ ನೋಡೋಣ "   ಕತ್ತಲಾಗುವ ಮೊದಲೇ ಬೆಂಗಳೂರು ತಲಪುವ ನಿಶ್ಚಯ ಮಾಡಿದ್ದ ಗಿರೀಶ್.   ಅರಮನೆ ಹಾಗೂ ಆವರಣದಲ್ಲೆಲ್ಲೂ ಫೊಟೊ ತೆಗೆಯುವಂತಿಲ್ಲ.   ಚಾಮುಂಡೀ ಬೆಟ್ಟದಲ್ಲಿ ಇಂತಹ ನಿರ್ಬಂಧಗಳು ಕಾಣಿಸಲಿಲ್ಲ. ಬೆಟ್ಟದ ಮೇಲೆ ಸಂತೇ ವ್ಯಾಪಾರಗಳದ್ದೇ ಕಾರ್ಬಾರು.    ನಮ್ಮ ರಾಜನೆಲ್ಲಿಕಾಯಿ ಕೂಡಾ ಮಾರಾಟದ ಸರಕುಗಳಲ್ಲಿ ಕಾಣ ಸಿಕ್ಕಿತು.

- ಮುಂದುವರಿಯಲಿದೆ.


Posted via DraftCraft app