Pages

Ads 468x60px

Tuesday, 22 December 2015

ಅಡಿಕೆ ಹೆಕ್ಕುವ ಯಂತ್ರಫೇಸ್ ಬುಕ್ ನಲ್ಲಿ ಕೃಷಿಕರ ಗುಂಪು ( agriculturist ) ಇದೆ.  ಈಗ ಅಡಿಕೆ ಹಣ್ಣಾಗಿ ಕೊಯ್ಲಿನ ಕಾಲ,  ಕಳೆದ ವರ್ಷ ಇದೇ ಸಮಯದಲ್ಲಿ ಅಡಿಕೆ ಕೃಷಿಕರ ಬಳಿ ಪ್ರಶ್ನೆಯೊಂದನ್ನು ಎಸೆದಿದ್ದೆ.

" ಬಿದ್ದ ಅಡಿಕೆ ಹೆಕ್ಕಿ ಹೆಕ್ಕೀ ಸೊಂಟನೋವು ಬಂದಿದೆ,  ಅಡಿಕೆ ಸಂಗ್ರಹಣೆ ಸುಲಭಸಾಧ್ಯವಾಗಿಸುವ ಉಪಕರಣ ಯಾರ ಬಳಿ ಇದೆ ?"  ಇದು ನನ್ನ ಪ್ರಶ್ನೆಯಾಗಿತ್ತು.

ಪ್ರತಿಕ್ರಿಯೆಗಳು ಬಂದುವು,  ಸಲಹೆಗಳೂ ಸಿಕ್ಕವು.  

" ಗೆರಟೆ ಸೌಟಿನಲ್ಲಿ ಬಗ್ಗದೇ ಹೆಕ್ಕಬಹುದು " ಹೀಗೆ ಹತ್ತು ಹಲವಾರು ಪ್ರಶ್ನೋತ್ತರ ಪ್ರತಿಕ್ರಿಯೆಗಳನ್ನು ಓದಿ ಸ್ಪೂರ್ತಿ ಪಡೆದ ನಮ್ಮೆಜಮಾನ್ರು ತಾವೇ ಅಡಿಕೆ ಹೆಕ್ಕುವ ಯಂತ್ರದ ನಿರ್ಮಾಣಕ್ಕೆ ಮುಂದಾದರು.

ಅಡಿಕೆ ಮರ ಹತ್ತುವ,  ತೆಂಗಿನ ಮರದಿಂದ ಕಾಯಿಗಳನ್ನು ಇಳಿಸಬಲ್ಲ ಹಲವು ಯಂತ್ರಗಳನ್ನು ಯೂ-ಟ್ಯೂಬ್ ನಲ್ಲಿ ಕಾಣಬಹುದು.   ಆದರೆ ಪ್ರತಿದಿನವೂ ಅಡಿಕೆ ಹಣ್ಣಾಗಿ ಬೀಳುತ್ತ ಇರುವುದಿದೆಯಲ್ಲ,  ಆ ಅಡಿಕೆಗಳನ್ನು ಆ ದಿನಕ್ಕೆ ಆ ದಿನವೇ ಹೆಕ್ಕಿ ತರದಿದ್ದರೆ ಆಗದು.   ಮರದಲ್ಲಿಯೇ ಹಣ್ಣಾದ ಅಡಿಕೆ ಹಾಗೂ ತಾನಾಗಿಯೇ ಉದುರಿದಂತಹುದು ಅತ್ಯುತ್ತಮ ಗುಣಮಟ್ಟದ್ದಾಗಿರುತ್ತದೆ.   " ಬೀಳುವಷ್ಟೂ ಬೀಳಲಿ,  ಒಂದೇ ಬಾರಿ ಕೂಲಿಯಾಳುಗಳ ಕೈಲಿ ತರಿಸೋಣ ". ಈ ವಾದವೂ ಸರಿಯಲ್ಲ.   ತೋಟದ ತೇವಾಂಶ,  ಗೊಬ್ಬರ, ಕಸಕಡ್ಡಿಗಳೆಡೆಯಲ್ಲಿ ಚೆನ್ನಾಗಿರುವ ಹಣ್ಣಡಿಕೆ ಹಾಳಾಗುವುದೂ,  ಅಲ್ಲೇ ಒಣಗಿ ಕಣ್ಣಿಗೆ ಕಾಣಿಸದಾಗಿ ಬೆಲೆಯಿಲ್ಲದ ಅಡಿಕೆ ಆಗಿ ಬಿಡುವ ಸಾಧ್ಯತೆ ಹೆಚ್ಚು.   ಹಿಂದಿನಂತೆ ಹತ್ತಾರು ಕೂಲಿಯಾಳುಗಳನ್ನು ಸಾಕಲು ಸಾಧ್ಯವಿಲ್ಲದ ಕಾಲ,  ನಮ್ಮದು ಕೇರಳ ರಾಜ್ಯವೂ ಆಗಿರುವುದರಿಂದ ಕಾರ್ಮಿಕರೆಲ್ಲರೂ ಸರ್ಕಾರೀ ನೌಕರರು ಎಂದರೂ ತಪ್ಪಿಲ್ಲ.

ನನ್ನ ಬಳಿ ತರಗೆಲೆಗಳನ್ನು ಒಟ್ಟುಗೂಡಿಸುವ ಒಂದು ಸಲಕರಣೆ ಇದ್ದಿತು.  ಅದರ ಬೆರಳುಗಳಂತಹ ರಚನೆಯನ್ನು ವಿಸ್ತರಿಸಿ ಮೊದಲ ಮಾಡೆಲ್ ಸಿದ್ಧವಾಯಿತು.  ಅದರ ಸಹಾಯದಿಂದ ಬಗ್ಗದೇ ಒಂದೊಂದೇ ಅಡಿಕೆ ಹೆಕ್ಕಲು ಸಾಧ್ಯವಾಯಿತು.  ಪ್ರತಿದಿನವೂ ಸುಧಾರಿತ ಮಾಡೆಲ್ ವಿನ್ಯಾಸವಾದಂತೆ ಈಗಿರುವ ಯಂತ್ರದ ರೂಪ ಬಂದಿತು.

ಕಳೆದ ವರ್ಷದ ಅಡಿಕೆಯೆಲ್ಲವೂ ಈ ಯಾಂತ್ರಿಕ ಶ್ರಮದ ಮೂಲಕವೇ ಮನೆಗೆ ಬಂದಿದೆ.  ಕೊನೆಗೆ ಚೆನ್ನಪ್ಪ,  " ನಾನೇ ಕೊಯ್ದು ಹಾಕುತ್ತೇನೆ..." ಅಂದ್ರೂ ನಮ್ಮೆಜಮಾನ್ರು ಒಪ್ಪಲಿಲ್ಲ!   " ಅವನು ಒಂದೇ ಬಾರಿಗೆ ಕಾಯಿ, ಅರೆಗಾಯಿ,  ಸಿಂಗಾರ ಎಲ್ಲ ಎಳೆದು ಹಾಕೋನು...  ಆಮೇಲೆ ನಮಗೆ ತೋಟದಲ್ಲಿ ಏನು ಕೆಲ್ಸ...ಅದೇನೂ ಬೇಡ..."  ಎಂದು ತೀರ್ಮಾನಕ್ಕೆ ಬಂದಿದ್ದಾರೆ.


ನಮ್ಮೆಜಮಾನ್ರು  ಎಚ್. ಟಿ. ಭಟ್,  ಸುರತ್ಕಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜ್ ಪದವೀಧರರು ಹಾಗೂ ಸ್ವತಂತ್ರ ಇಲೆಕ್ಟ್ರಾನಿಕ್ಸ್ ಉದ್ಯಮಿಯಾಗಿ ಗುರುತಿಸಿಕೊಂಡವರಾಗಿದ್ದಾರೆ.
ವೀಡಿಯೋ ನೋಡಿರಿ.

                                                     ಟಿಪ್ಪಣಿ:  3/2/2016 ರಂದು ಮುಂದುವರಿದಿದೆ

ಅಡಿಕೆ ಹೆಕ್ಕುವ ಯಂತ್ರದ ಬರಹ ಸಿದ್ಧಪಡಿಸಿ,  ನಮ್ಮೆಜಮಾನ್ರು ಹೇಳಿಕೊಟ್ಟಂತೆ ವೀಡಿಯೋ ಛಾಯಾಗ್ರಹಣವನ್ನೂ ಮಾಡಿಟ್ಟು ಬ್ಲಾಗ್ ಗೇರಿಸಿ ಆಗಿತ್ತು.

ಇದೇನೂ ಅಡುಗೆ ಆಧಾರಿತ ಬರಹವಲ್ಲ,  ಬಾಯಲ್ಲಿ ನೀರೂರಿಸುವಂತಹ ತಿಂಡಿತಿನಿಸುಗಳ  ಚಿತ್ರಗಳೂ ಇದರಲ್ಲಿಲ್ಲ.   ಹಾಗಾಗಿ ಯಾರೂ ಕೇಳುವುದಕ್ಕಿಲ್ಲದ ಚಿತ್ರ - ಸುದ್ದಿ ಆದೀತಷ್ಟೇ ಈ ಯಂತ್ರೋಪಕರಣ ಅಂದ್ಕೊಂಡು ಸುಮ್ಮನಿದ್ದೆ.
ಸಂಜೆಯಾಗುತ್ತಲೂ ನನಗೊಂದು ಇ-ಮೇಲ್ ಬಂದಿತು.   ನೋಡಿದ್ರೆ ಶ್ರೀಪಡ್ರೆಯವರದು,  ಫೇಸ್ ಬುಕ್ ಮಿತ್ರರೂ ಆಗಿರುವ ಶ್ರೀಪಡ್ರೆ, ಕೃಷಿತಜ್ಞ,  ಅಡಿಕೆ ಪತ್ರಿಕೆಯ ರೂವಾರಿ ಹಾಗೂ ನಾಡಿನ ಖ್ಯಾತ ಪತ್ರಕರ್ತರೂ ಹೌದು.

" ಓ,  ಇವರೆಲ್ಲೋ ಬ್ಲಾಗ್ ಬರಹ ನೋಡಿದ್ದಿರಬೇಕು "  ಅಂದುಕೊಳ್ಳುತ್ತಾ ಅವರ ಮಿಂಚಂಚೆಗೆ ಏನೆಂದು ಪ್ರತಿಕ್ರಿಯಿಸಲೀ ಅಂದಿದ್ದಾಗ ದೂರವಾಣಿ ಕರೆ ಮೊಳಗಿತು!

ಅತ್ತ ಕಡೆಯಿಂದ ಪಡ್ರೆಯವರೇ ಮಾತು ಆರಂಭಿಸಿದರು.   " ಅಕ್ಕ,  ನಿಮ್ಮ ಬ್ಲಾಗ್ ವೀಡಿಯೋ ಎಲ್ಲಾ ವಾಟ್ಸಪ್ ಗ್ರೂಪುಗಳಲ್ಲಿ ತಿರುಗಾಡುತ್ತಾ ಇದೆ,  ನನಗೆ ಇದರ ವಿವರ ಇನ್ನಷ್ಟು ಬೇಕಲ್ಲ... ನಿಮ್ಮ ಯಜಮಾನರ ಕಿರುಪರಿಚಯ,   ಕ್ಲೋಸ್ ಅಪ್ ಫೊಟೋ ...  ಆ ಉಪಕರಣದ್ದು... " ಅನ್ನುತ್ತಾ ಹೋದರು.

" ಇನ್ನೇನು ಅರ್ಧ ಗಂಟೆಯಲ್ಲಿ ಇವರು ಬರಲಿಕ್ಕಾಯಿತು... ಎಲ್ಲ ವಿವರ ಅವರೇ ಕೊಡ್ತಾರೆ ಬಿಡಿ..." ಅಂದ್ಬಿಟ್ಟು ಸುಮ್ಮನಾಗಬೇಕಾಯಿತು.

ಮುಂದೆ ನಮ್ಮವರೂ ಪಡ್ರೆಯವರೂ ಫೋನ್ ಪಟ್ಟಾಂಗ ಮುಂದುವರಿಸಿದರು.
ಕೊನೆಗೆ ಇವರು ಹೇಳಿದ್ದು,  " ನೀವು ಬರೆದಿದ್ದನ್ನು ನಾನು ಓದಿದ ನಂತರ ಪತ್ರಿಕೆಯಲ್ಲಿ ಪ್ರಕಟಿಸಿ. "
ನುಡಿದಂತೆ ಅವರೂ ಲೇಖನದ ಪ್ರತಿಯನ್ನು ಕಳುಹಿಸಿ ಕೊಟ್ಟರು.
ಅವರ ಬರವಣಿಗೆಯನ್ನು ಓದಿ ನಮ್ಮೆಜಮಾನ್ರು ಸೋತುಹೋದರು.

" ಛೇ... ಇಷ್ಟು ಚೆನ್ನಾಗಿ ಬರೀತಾರೆ ಅಂತ ಗೊತ್ತಿದ್ದಿದ್ರೆ ಇನ್ನೂ ವಿಷಯ ಹೇಳ್ತಿದ್ದೆ... ಕೇವಲ ನಾನು ಫೋನಿನಲ್ಲಿ ಹೇಳಿದ ಶಬ್ದಗಳನ್ನು  ಯಾರಿಗೂ ಪ್ರಶ್ನೆ ಹಾಕಲು ಅವಕಾಶವಿಲ್ಲದ ಹಾಗೆ ಈ ಥರ ಬರೆದಿರಬೇಕಾದ್ರೇ... "
ನನಗೋ ನಗು,  " ಮತ್ತೇ ಪತ್ರಕರ್ತರೆಂದರೆ ಸುಮ್ಮನೆಯಾ..."

" ಅಡಿಕೆ ಪತ್ರಿಕೆ "  ಹೆಸರೇ ಸೂಚಿಸುವಂತೆ ಕೃಷಿಕರಿಗಾಗಿ ಇರುವ ಮಾಸಪತ್ರಿಕೆ.  ಇದು ಕೃಷಿಕರೇ ರೂಪಿಸುವ ಕೃಷಿಕಪರ ಮಾಧ್ಯಮ.  2016, ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟಿತವಾಗಿರುವ ಚಿತ್ರಲೇಖನ,    ಇದರ PDF ಪ್ರತಿಯನ್ನು ಶ್ರೀಪಡ್ರೆಯವರೇ ನಮ್ಮ ಓದಿಗಾಗಿ ಮಿಂಚಂಚೆಯಲ್ಲಿ ರವಾನಿಸಿದ್ದು ಇಲ್ಲಿದೆ.

                                            


 
 

ಟಿಪ್ಪಣಿ: ಈ ಯಂತ್ರ ಕೇವಲ ಬಗ್ಗಿ ಹೆಕ್ಕುವ ಕೆಲಸದಲ್ಲಿ ಮಾತ್ರ ಸುಧಾರಣೆ ತಂದಿದ್ದಲ್ಲ,  high speed pickup tool    ಆಗಿರುತ್ತದೆ.


                          

Thursday, 17 December 2015

ಲಲಿತಕ್ಕನ ಹೂಮಾಲೆ


ತದೇಕಚಿತ್ತದಿಂದ ಲಲಿತಕ್ಕ ಹೂಮಾಲೆ ಕಟ್ಟುತ್ತಿದ್ದರು.   ಮಡಿಲಲ್ಲಿ ಅಡಿಕೆ ಸಿಂಗಾರದ ಎಸಳುಗಳು,   ಕೈಯಲ್ಲಿ ಬಾಳೆನಾರಿನ ಮೂರು ಎಳೆಗಳು,  ವೀಣಾವಾದಕ ತಂತಿಯನ್ನು ಎಳೆಯುವಂತೆ,  ಬಾಳೆನಾರುಗಳೂ ಅಡಿಕೆ ಸಿಂಗಾರದ ಎಸಳುಗಳೂ ಒಂದಕ್ಕೂಂದು ಸೆಳೆಯಲ್ಪಟ್ಟು ಹೀಗೊಂದು ಮಾಲೆ ಸಿದ್ಧವಾಯಿತು ದೇವರ ಪೂಜೆಗೆ.

ನನ್ನ ಕೆಮರಾ ಕ್ಲಿಕ್ಕೆಂದಿತು.
" ನಿನ್ನೆ ಕಟ್ಟಿದ ಮಾಲೆ ತುಳಸೀಕಟ್ಟೆಗೆ ಹಾಕಿಟ್ಟಿದ್ದೇನೆ,  ಅದನ್ನೂ ಪಟ ತೆಗ್ದು ಇಟ್ಕೋ..." ಎಂದಳು ನಮ್ಮಕ್ಕ.  ನಿನ್ನೆ ರಾತ್ರಿ ಸತ್ಯನಾರಾಯಣ ಪೂಜೆ,  ದುರ್ಗಾಪೂಜೆ ಇದ್ದಿತು.  ಇಂದು ಪುನಃ ಶಿವಪೂಜೆಯ ಅಲಂಕಾರಕ್ಕೆಂದು ಸಿಂಗಾರದ ಮಾಲೆ ನೇಯುತ್ತಿದ್ದಾಗ ನನ್ನ ಐಪಾಡ್ ಓಡೋಡಿ ಬಂದಿದ್ದು.

ಶಿವಪೂಜೆಯಲ್ಲಿ ಬಿಳಿ ಹೂಗಳಿಗೆ ಪ್ರಾಶಸ್ತ್ಯವು.  ಅದರಲ್ಲೂ ಅಡಿಕೆಮರದ ಹೂವು,  ಸಿಂಗಾರ ಎಂದೇ ಜನಪ್ರಿಯವಾಗಿರುವಂಥದ್ದು,  ಇದಿಲ್ಲದೆ ಪೂಜೆ ನಡೆಯದು.  ಹೆಚ್ಚೇಕೆ,  ಮದುಮಗನ ಬಾಸಿಂಗದ ಅಲಂಕಾರವೆಂದರೆ ಅಡಿಕೆಯ ಸಿಂಗಾರ.

ನಮ್ಮಲ್ಲಿ ದೇವತಾರ್ಚನೆಗೆ,  ಶುಭಕಾರ್ಯಗಳೇನಿದ್ದರೂ ಅಡಿಕೆ ಇಲ್ಲದೆ ಆಗುವುದಿಲ್ಲ.  ಹರಿವಾಣದಲ್ಲಿ ವೀಳ್ಯೆದೆಲೆ ಅಡಿಕೆಯ ನೋಟವೇ ಕಣ್ಗಳಿಗೆ ಹಿತವೆನಿಸುವುದು.   ದೇವಕಾರ್ಯಗಳಲ್ಲಿ ಪರಮ ಪವಿತ್ರವೂ ಮಂಗಳವೂ ಎಂದು ನಿರ್ಣಯಿಸಲ್ಪಟ್ಟ ಅಡಿಕೆ,  ಆರೋಗ್ಯತಜ್ಞರ ವಿಶ್ಲೇಷಣೆ ಪ್ರಕಾರ ಮಾರಕ,  ಯಾಕೋ ತಿಳಿಯದು.   ಸುಂದರವೂ,  ಶುಭ್ರವರ್ಣದ ಸಿಂಗಾರವೇ ಮುಂದೆ ಅಡಿಕೆಗೊನೆಯಾಗಿ ಮಾರ್ಪಾಡಾದಾಗಲೂ  " ಅಡಿಕೆಯ ನೋಟ ಚೆನ್ನ, ತೋಟದ ಬೆಳೆಯು ಚಿನ್ನ " ಎಂದು ಹಾಡಿನ ಸೊಲ್ಲು ಹೊರಹೊಮ್ಮದಿದ್ದೀತೇ? 

ಅಡಿಕೆ ಸಿಂಗಾರವೂ ಉನ್ನತವಾದ ಮರದಲ್ಲಿ ಮುಚ್ಚಿದ ಕವಚದೊಳಗೆ ಅವಿತಿರುತ್ತದೆ.  ಮುಚ್ಚಿದ ಬಾಗಿಲನ್ನು ತೆರೆದು ಹೂ ಹೊರ ಬಿರಿಯುವ ಪರಿಯನ್ನು ನೋಡಿಯೇ ಆನಂದಿಸಬೇಕಲ್ಲದೆ ಬರೆಯಲು ಬಾರದು.

  Areca catechu ಎಂಬ ವೈಜ್ಞಾನಿಕ ಹೆಸರಿನ ಅಡಿಕೆ ಮರ,  ಭಾರತ ಮೂಲದ ತಾಳೆ ಜಾತಿಗೆ ಸೇರಿದ ಒಂದು ಸಸ್ಯ ವರ್ಗ.  ಆಯುರ್ವೇದ ವಿಜ್ಞಾನವು ಅಡಿಕೆಯ ರಸಸಾರವನ್ನು  ರಕ್ತಭೇದಿಗೆ, ಅತಿಸಾರಕ್ಕೆ  ಉಪಯೋಗಿಸಬಹುದೆಂದಿದೆ.  ಸಂಸ್ಕೃತದಲ್ಲಿ ಇದು ಪೂಗ ಫಲವೆಂದು ಕರೆಯಲ್ಪಡುತ್ತದೆ.     Saturday, 12 December 2015

ಮೌನಿಯ ಮಾತುಕತೆ
    
  

ತೆಂಗುಕಂಗುಗಳ
ಮೀರಿ ನಿಂದಿಹೆ
ಬಾನೆತ್ತರ ತೂಗಿ ಅಳೆಯುವ
ಹುನ್ನಾರ ನಡೆಸಿಹೆ
ಒಹೊಹೋ, ಇನ್ನರೆಗಳಿಗೆ
ಧರಾಶಾಯಿಯಾಗಲಿಹೆ
ಅಕ್ಕಾ, ಮರುಗದಿರು
ನಾಳೆ ಮರಳಿ ಬರಲಿಹೆ
ಹೂವೇ ನೀ ಅರಳು
ತಾರೇ ಹೊಸ ಎಸಳುFriday, 27 November 2015

ಖರ್ಜೂರದ ದೋಸೆ

ಮುಂಜಾನೆಗೊಂದು ತಿಂಡಿ ತಿಂದಾಯ್ತು.  ಆಗಲೇ  " ನಾಳೆಗೇನು ?" ಎಂದು ತೀರ್ಮಾನ ಆಗಲೇಬೇಕು.  ಉದ್ದಿನ ದೋಸೆ ಎರೆಯಲೋ,  ಚಪಾತಿ ಲಟ್ಟಿಸಲೋ ಎಂಬ ಘನಯೋಚನೆಯಲ್ಲಿ ತೊಡಗಿದ್ದಂತೆ ನೇತಾಡುತ್ತಿದ್ದ ಬಾಳೆಗೊನೆ ಕಣ್ಣಿಗೆ ಬಿತ್ತು.

" ಹ್ಞ, ನಾಳೆಗೆ ಇದೆಲ್ಲ ಕಪ್ಪಗಾಗಿ ಹಾಳಾಗೋದೇ,  ಇವತ್ತೇ ದೋಸೆಹಿಟ್ಟಿನೊಂದಿಗೆ ಅರೆದಿಟ್ಟರೆ ನಾಳೆ ಬ್ರೆಡ್ ನಂತಹ ಬಾಳೆಹಣ್ಣು ದೋಸೆ ತಿನ್ನಬಹುದು "  ಅಂದುಕೊಳ್ಳುತ್ತಿದ್ದಂತೆ 2 ಪಾವು ಬೆಳ್ತಿಗೆ ಅಕ್ಕಿ ನೀರಿಗೆ ಬಿದ್ದಿತು.   ಒಂದು ಹಿಡಿ ಉದ್ದಿನಬೇಳೆ,  2 ಪುಟ್ಟ ಚಮಚೆ ಮೆಂತೆ ಇಲ್ಲದಿದ್ದರಾದೀತೇ,  ಸಂಜೆ ವೇಳೆ  ಅರೆದರಾಯಿತು.

ಹತ್ತು ಗಂಟೆಯ ಚಹಾದೊಂದಿಗೆ ನಮ್ಮೆಜಮಾನ್ರು  " ಬಾಳೆಹಣ್ಣು ನಾಳೆ ಹಾಳಾದೀತು ". ಅನ್ನುತ್ತಾ ಎರಡು ಹಣ್ಣು ಸುಲಿದು ತಿಂದರು.

 " ಹೌದಲ್ವೇ "  ಅನ್ನುತ್ತಾ ನಾನೂ ತಿಂದಾಯ್ತು.

ಅಂತೂ ನಾನು ಅರೆಯಲು ಹೊರಟಾಗ ಬಾಳೆಗೊನೆ ಖಾಲಿಯಾಗಿತ್ತು.  ದೋಸೆಯ ಲೆಕ್ಕಾಚಾರ ತಲೆಕೆಳಗು ಆಗ್ಹೋಯ್ತಲ್ಲ  ಎಂಬ ಚಿಂತೆ ಕಾಡಿತು.  ಬಾಳೆಹಣ್ಣು ಹಾಕೋದಿದೆ,  ಉದ್ದು ಕಾಟಾಚಾರಕ್ಕಷ್ಟೇ ಹಾಕಿದ್ದು,  ದೋಸೆ ರಣಕಲ್ಲಿನಂತಾದೀತು,  ಇದಕ್ಕೇನು ಪರಿಹಾರ ಕಲ್ಪಿಸಲಿ ಎಂಬ ಘನಚಿಂತನೆ,  ಅಡುಗೆಮನೆಯ ಡಬ್ಬಗಳು  ಬಾಯ್ಬಿಟ್ಟು  ಖರ್ಜೂರದ ಪ್ಯಾಕೆಟ್ಟು ಸಿಗುವಲ್ಲಿಗೆ ಸುಖಾಂತ್ಯಗೊಂಡಿತು.

" ಆಹಾ...!"   ಖರ್ಜೂರದ ಪ್ಯಾಕೆಟ್ಟು ಬಿಡಿಸಲ್ಪಟ್ಟಿತು.  ಬೀಜಗಳನ್ನು ಹೊರದಬ್ಬಿ,  ಲೋಟ ತುಂಬಿತೇ,   ಇನ್ನೇಕೆ ತಡ,  ಅಕ್ಕಿ,  ಉದ್ದು,  ಮೆಂತೆಗಳೊಡಗೂಡಿ ಖರ್ಜೂರವೂ ನುಣ್ಣಗೆ ಅರೆಯಲ್ಪಟ್ಟಿತು.   ಹಿಟ್ಟಿಗೆ ಉಪ್ಪು ಬೆರೆಸಿ ಸುಖವಾಗಿ ಮಲಗುವಂತಾಯಿತು. 

ಬೆಳಗು ಆಯಿತು, ದೋಸೆ ಎರೆಯುವ ಮೊದಲಾಗಿ ಚಟ್ಣಿ ಆಗ್ಬೇಕಾಗಿದೆ.  ಮಾಮೂಲಿ ನೀರುಳ್ಳಿ ಚಟ್ಣಿ ಒಂದು ಕಡಿ ಕಾಯಿತುರಿಯಲ್ಲಿ ತಯಾರಾಯಿತು.
ದೋಸೆಯೂ ಸಿದ್ಧವಾಯಿತು.
ಫಿಲ್ಟರ್ ಕಾಫಿಯೊಂದಿಗೆ ದೋಸೆ ಉದರಕ್ಕಿಳಿಯಿತು.

ಹ್ಞಾ,  " ಖರ್ಜೂರದ ಪಾಯಸ ಮಾಡಮ್ಮ..."  ಖರ್ಜೂರದ ಪ್ಯಾಕೆಟ್ ಬರೋ ಹಾಗೆ ಮಾಡಿದ್ದು ನನ್ಮಗಳು.   ಈಗ ದೋಸೆ ಆಯ್ತು.


ಚಿಪ್ಪಣಿ:  28/11/2015 ರಂದು ಸೇರಿಸಿದ್ದು.

ಖರ್ಜೂರದ ದೋಸೆಯನ್ನು ಬರೆದು,  ಚಿತ್ರವನ್ನೂ ಕಡತದಲ್ಲಿ ಹಡುಕಿ ತೆಗೆದು,  ಸಿದ್ಧಪಡಿಸಿ ಬ್ಲಾಗ್ ಗೇರಿಸಿದ್ದು ನಿನ್ನೆ ಸಂಜೆ.   ಈಗಲೂ ಬಾಳೆ ಹಣ್ಣು ಇದೆ,   " ಮಾಡೋಣ "  ಅಂದ್ಬಿಟ್ಟು ಮೇಲೆ ಬರೆದ ಅಳತೆಯಲ್ಲಿ ಬಾಳೆ ಹಣ್ಣು ದೋಸೆ ಸಿದ್ಧವಾಯಿತು.  ಉದ್ದು ಕಡಿಮೆ ಹಾಕಿದರೂ ದೋಸೆಯ ರುಚಿಗೇನೂ ಕೊರತೆಯಿಲ್ಲ.   ಬಾಳೆ ಹಣ್ಣಿನಿಂದಾಗಿ ಸೊಗಸಾದ ಹೊಂಬಣ್ಣವೂ ಬಂದಿತು.   ಇದೆಯೆಂದು ವಿಪರೀತ ಹಣ್ಣುಗಳನ್ನು ಹಾಕದಿರಿ,  ದೋಸೆಯನ್ನು ಮೇಲೆಬ್ಬಿಸಲು ಕಷ್ಟವಾದೀತು.   " ಬಾಳೆ ಹಣ್ಣು ಹಾಕಿದ್ದೀಯಾ..."  ಕೇಳುವಂತಿರಬಾರದು.

ಶುಂಠಿಯೂ ಸೇರಿದ ತೆಂಗಿನ ಚಟ್ಣಿ ಸಿದ್ಧವಾಗಲಿ.
ದಪ್ಪ ಮೊಸರು ಇರಲೇಬೇಕು.

Friday, 20 November 2015

ತೊಂಡೆ ಚಪ್ಪರದಿ ಅರಳಿದ ಹೂವ ಕಂಡಿರೇ...


ತೊಂಡೇ ಚಪ್ಪರ ಮನೆಯ ಹಿತ್ತಲಿಗೆ ಅಲಂಕಾರ ಅಥವಾ ಭೂಷಣ ಅಂದ್ರೂ ಸರಿ.   ನನ್ನ ಅತ್ತೆ ಮರತೊಂಡೆ ಬಳ್ಳಿಯನ್ನು ಸಾಕಿ ಸಲಹಿದ್ದರು,  ಅದಕ್ಕೊಂದು ವಿಶಾಲವಾದ ಚಪ್ಪರ.  ಮನೆಕೆಲಸಕ್ಕೆ ನಾಲ್ಕಾರು ಹೆಣ್ಣಾಳುಗಳು ಇದ್ರೂನೂ,  ದಿನಾ ತೊಂಡೆ ಬುಡಕ್ಕೆ ನೀರು ಹರಿದು ಹೋಗುವಂತೆ ಪಾತ್ರೆಗಳನ್ನು ತೊಳೆಯುವುದೇನು,   ಕಟ್ಟಿಗೆಯ ಒಲೆಯಲ್ಲಿ ಮಸಿ ಹಿಡಿದ ಹಿತ್ತಾಳೆಯ ಪಾತ್ರೆಗಳು,  ತಿಕ್ಕಿ ತೊಳೆಯಲಿಕ್ಕೆ ಒಲೆಯ ಬೂದಿ ಹಾಗೂ ತೆಂಗಿನಕಾಯಿ ಸಿಪ್ಪೆ.    " ಅಕ್ಕಿ ತೊಳೆದ ನೀರು ಭಾರೀ ಒಳ್ಳೇದೂ "  ಅನ್ನುತ್ತಾ ಅಕ್ಕಿ ತೊಳೆಯುವುದೇನು,  ಆಗೆಲ್ಲಾ ನಮ್ಮ ಮನೆ ಖರ್ಚಿಗೆ ಮೂರು ಸೇರಕ್ಕಿ ಬೇಕಾಗುತ್ತಾ ಇತ್ತು.
ಇಂತಹ ತೊಂಡೇ ಚಪ್ಪರವನ್ನು ನಾನೂ ಉಳಿಸಿಕೊಂಡು ಸಾಕುತ್ತಾ ಬಂದಿದ್ದೆ.   ಆದರೂ ಈಗ ಕೆಲವು ವರ್ಷಗಳಿಂದ ತೊಂಡೆಗೆ ಚಪ್ಪರ ಹಾಕುವವರಿಲ್ಲದೆ ತೊಂಡೇಕಾಯಿಗೂ ಪೇಟೆಗೆ ಹೋಗುವ ಪರಿಸ್ಥಿತಿ ಬಂದಿತ್ತು.

ಈ ಬಾರಿ ಮಳೆಗಾಲದ ಅವತರಣ ಬಹು ಬೇಗನೆ ಆಗಿರುವುದರಿಂದ,  ಬಿಡಬಾರದೆಂಬ ಹಟದಿಂದ ಚೆನ್ನಪ್ಪ ಬಂದಿದ್ದಾಗ,  ತೊಂಡೆಕಾಯಿಗೂ ಗತಿಯಿಲ್ಲದ ಕಾಲ ಬಂದಿದ್ದನ್ನು ವರ್ಣಿಸಿದಾಗ,  ಮಾರನೇ ದಿನವೇ ತೊಂಡೆಬಳ್ಳಿಗಳೊಂದಿಗೆ ಚೆನ್ನಪ್ಪ ಪ್ರತ್ಯಕ್ಷನಾದ.

 ತೊಂಡೆ ನಾಟಿ ಹೇಗೆ?
ಚಚ್ಚೌಕನೆಯ ಗುಂಡಿ ತೋಡುವುದು,  ನೀರು ಸರಾಗವಾಗಿ ಹರಿದು ಬರುವ ಸ್ಥಳಕ್ಕೆ ಆದ್ಯತೆ.
ಬಲಿಷ್ಠವಾದ ತೊಂಡೆಬಳ್ಳಿಗಳು,  2ಅಡಿ ಉದ್ದದ ನಾಲ್ಕು ಬಳ್ಳಿಗಳು ಬೇಕಾಗುತ್ತವೆ.
ತೊಂಡೆಬಳ್ಳಿಗಳನ್ನು ಗುಳಿಯಲ್ಲಿ ಓರೆಯಾಗಿ ಮಲಗಿಸುವುದು,  ಮೇಲಿಂದ ಮಣ್ಣು ಮುಚ್ಚುವುದು.
ಬಿದಿರಿನ ಕಡ್ಡಿಗಳನ್ನು ಆಧಾರ ಕೊಡುವುದು.
ಬುಡಕ್ಕೆ ಹಸಿರೆಲೆಗಳನ್ನು ಹರಡುವುದು.

ತೊಂಡೆಬಳ್ಳಿ ಚಿಗುರಿತು.  ಈಗ ಚೆನ್ನಪ್ಪ ನೆಟ್ಟಿದ್ದು ಎಲ್ಲ ಕಡೆಯೂ ಅಂದರೆ ಮಾರುಕಟ್ಟೆಯಲ್ಲಿಯೂ ಸಿಗುವಂತಹ ಊರತೊಂಡೆಯಾಗಿತ್ತು.  ಇದು ಹೆಚ್ಚಿನ ಆರೈಕೆಯನ್ನೂ,  ನಿರ್ವಹಣೆಯನ್ನೂ ಬಯಸುವಂತಾದ್ದು.   ಮರತೊಂಡೆಗೆ  ಸಮಸ್ಯೆಗಳಿಲ್ಲ,  ರೋಗಬಾಧೆಯೂ ಇಲ್ಲ,  ಬಹುಶಃ ಕಾಡು ಜಾತಿಯಿರಬೇಕು.  ರುಚಿಗೇನೂ ಮೋಸವಿಲ್ಲದ ಮರತೊಂಡೆ ಬಳ್ಳಿಯ ಬುಡ ಇದೆಯೋ ಎಂದು ಈ ಮೊದಲು ಇದ್ದಲ್ಲಿ ಹುಡುಕಾಡಿದಾಗ ಸಿಕ್ಕಿಯೇಬಿಟ್ಟಿತು,  ಮಳೆ ಬಂದು ಹಸನಾದ ನೆಲದಲ್ಲಿ,  ಯಾರೂ ಕೇಳುವವರಿಲ್ಲದಿದ್ದರೂ ಮರತೊಂಡೆಯ ಬಳ್ಳಿ ಚಿಗುರಿ ಸುತ್ತಮುತ್ತ ಇದ್ದ ರಥಹೂಗಳ ಪೊದರನ್ನು ಹಬ್ಬಲು ಹವಣಿಸುತ್ತಾ ಇದ್ದಿತು.
" ನೋಡೂ,  ಮರತೊಂಡೆಯ ಬಳ್ಳಿ ಇಲ್ಲಿದೇ,  ಇದನ್ನೇನು ಮಾಡೂದಂತೀಯ?"
" ಅದಕ್ಕೂ ಒಂದು ಚಪ್ಪರ ಹಾಕುವಾ "
" ಹೌದಾ,  ಮನೆಯಲ್ಲಿ ಎರಡೆರಡು ಚಪ್ಪರ ಹಾಕ್ಬಾರದೂಂತ ಶಾಸ್ತ್ರ ಇದೆಯಲ್ಲ "
 " ಹಂಗೇನಿಲ್ಲ,  ನಂದೂ ನಾಲಕ್ಕು ಚಪ್ಪರ ಮನೇಲಿ ಉಂಟಲ್ಲ "
" ತೊಂಡೆಕಾೖ ಮಾರಾಟವೂ ಉಂಟು ಹಾಗಾದ್ರೆ "
" ಹೂಂ, ಆಚೀಚೆ ಮನೆಯವ್ರು ಕೊಯ್ದುಕೊಡ್ತಾರೆ "
" ಸರಿ. ಹಾಗಿದ್ರೆ ಈ ಮರತೊಂಡೆಗೂ ಒಂದು ಚಪ್ಪರ ಹೊದೆಸಿ ಬಿಡು "

ಮರತೊಂಡೆಯೂ ಚಪ್ಪರದಲ್ಲಿ ಹಬ್ಬಿ ಹೂವರಳಿಸಿಯೇ ಬಿಟ್ಟಿತು.   ತೊಂಡೆಬಳ್ಳಿಯಲ್ಲಿ ಅರಳಿದ ಹೂ, ಕಾಯಿ ಆದ ಹಾಗೇ ಲೆಕ್ಕ,   ಹಲಕೆಲವು ತರಕಾರಿ ಸಸ್ಯಗಳು ಮೊದಲು ಫಲ ನೀಡದ ಹೂಗಳನ್ನು ತೋರಿಸಿ ನಮ್ಮನ್ನು ಮರುಳು ಮಾಡುವವುಗಳಾಗಿರುತ್ತವೆ,  ಇಂತಹ ಹೂವುಗಳನ್ನು  ' ಮರುಳು ಹೂವು '  ಎಂದೇ ಹೇಳುವ ವಾಡಿಕೆ.   " ತೊಂಡೆ ಚಪ್ಪರದಿ ಅರಳಿದ ಹೂವ ಕಂಡಿರೇ.... " ಗುಣುಗುಣಿಸುತ್ತ ಫೋಟೋ ತೆಗೆದೂ ಆಯಿತು.

ಮೊದಲ ಬಾರಿ ಕೊಯ್ಯಲು ಸಿಕ್ಕಿದ್ದು ಹತ್ತು - ಹನ್ನೆರಡು ಕಾಯಿಗಳಾದರೂ,  ಬೀಟ್ರೂಟ್ ಗೆಡ್ಡೆಯ ಜೊತೆಗೂಡಿ ಪಲ್ಯ ಸಿದ್ಧವಾಯಿತು.

ಅನ್ನದೊಂದಿಗೆ ಪಲ್ಯದ ಅವಶ್ಯಕತೆ ಇದೆ.  ಹಸಿರು ತರಕಾರಿಗಳನ್ನು ರುಚಿಗೆ ಉಪ್ಪು ಹಾಗೂ ಒಗ್ಗರಣೆಯೊಂದಿಗೆ ಬೇಯಿಸಿ,  ಕಾಯಿತುರಿಯ ಅಲಂಕರಣ,  ಹ್ಞಾ.. ತೆಂಗಿನತುರಿಯೂ ತರಕಾರಿ ಹೌದೆಂದು ತಿಳಿಯಿರಿ.   ನಾರುಯುಕ್ತವಾದ ತೆಂಗಿನತುರಿಯನ್ನು ಪಲ್ಯಗಳಿಗೆ ಧಾರಾಳವಾಗಿ ಬಳಸಿರಿ,  ಒಗ್ಗರಿಸಲೂ ತೆಂಗಿನೆಣ್ಣೆ ಅತ್ಯುತ್ತಮ.   ಪಲ್ಯಗಳನ್ನು ದೇಹಕ್ಕೆ ಬೇಕಾದ ಶಕ್ತಿ,  ವಿಟಮಿನ್,  ಖನಿಜಾಂಶಗಳಿಂದ ಕೂಡಿದ ತರಕಾರಿ,  ಸೊಪ್ಪು,  ಗೆಡ್ಡೆಗೆಣಸು,  ಬೇಳೆಕಾಳುಗಳನ್ನು ಬಳಸಿ ಮಾಡಬಹುದಾಗಿದೆ.   ನಮ್ಮ ಊಟದ ಅವಿಭಾಜ್ಯ ಅಂಗವಾಗಿರುವ ತರಕಾರಿಗಳನ್ನು ಅಧಿಕವಾಗಿ ಸೇವಿಸಬೇಕೆಂದೇ ವೈದ್ಯರು ಹೇಳುತ್ತಿರುತ್ತಾರೆ,  ಅದು ಪಲ್ಯದ ರೂಪದಲ್ಲಿದ್ದರೆ ಉತ್ತಮ.

ಆಂಗ್ಲಭಾಷೆಯಲ್ಲಿ ivy gourd ಎಂದು ಕರೆಯಲ್ಪಡುವ ತೊಂಡೆಕಾೖ,  ನಿಸ್ಸಂಶಯವಾಗಿ ಭಾರತದ ವಿಸ್ಮಯಕಾರಿ ಸಸ್ಯ.   ಮಧುಮೇಹ ನಿಯಂತ್ರಕ,  ಅಥವಾ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹತೋಟಿಗೆ ತರಬಲ್ಲ ತೊಂಡೆಯ ರಸಸಾರವನ್ನು ಹೋಮಿಯೋಪತಿ ಚಿಕಿತ್ಸೆಯಲ್ಲಿ ಬಳಸಲಾಗುವುದು.   ಬಹುಶಃ ಆಯುರ್ವೇದ ವೈದ್ಯ ಪದ್ಧತಿ ಇದರ ಮೂಲವಾಗಿರಬಹುದು.

ಬಾಯಿಹುಣ್ಣು ಆದಾಗ ಹಸಿ ತೊಂಡೆಕಾಯಿಗಳನ್ನು ಅಗಿದು ತಿನ್ನುವುದೂ ಒಂದು ಮನೆಮದ್ದು.
ಎಲೆಗಳನ್ನು ಜಜ್ಜಿ ತಯಾರಿಸಿದ ಮುಲಾಮು ಚರ್ಮದ ಬೊಕ್ಕೆ, ಉರಿಯೂತ, ತುರಿಗಜ್ಜಿ, ಸಾಮಾನ್ಯವಾಗಿ ಸೆಕೆಗಾಲದ ಪೀಡೆಗಳಿಗೆ ಔಷಧಿಯಾಗಿದೆ.
ಇದು ನಿಮಗೆ ಗೊತ್ತೇ,  ತೊಂಡೆಕಾಯಿ ಕಫನಿವಾರಕ,  ಅಲ್ಪಪ್ರಮಾಣದ ಸಂಧಿವಾತ ಪರಿಹಾರಕ.
ತೊಂಡೆಕಾಯಿ ಎಲೆಗಳ ರಸ ಸೇವನೆಯಿಂದ ಕಿಡ್ನಿ ಸಮಸ್ಯೆ ಬಲುದೂರಕ್ಕೆ ಹೋದೀತು.
ಕೆಲವಾರು ಲೈಂಗಿಕ ರೋಗಗಳಿಗೂ ರಾಮಬಾಣ ಈ ತೊಂಡೆ.
ಊಟವಾದ ಮೇಲೆ ಎಳೆಯ ತೊಂಡೆಕಾಯಿಗಳನ್ನು ಅಗಿದು ತಿನ್ನಿ,  ಜೀರ್ಣಾಂಗಗಳು ಚುರುಕಾಗಿರುವುದು ಹಾಗೂ ಮಲಬದ್ಧತೆಯ ಸಮಸ್ಯೆ ಕಾಡದು.     ಸಸ್ಯ ವಿಜ್ಞಾನಿಗಳು ಇದರಲ್ಲಿ ಎರಡು ಜಾತಿಗಳನ್ನು ಗುರುತಿಸಿದ್ದಾರೆ.    Cephalandra Indica,  Coccinia indica ಎಂಬ ಈ ಸಸ್ಯ ಭಾರತದ ವಿಸ್ಮಯವೆಂದಿದ್ದಾರೆ.

" ಹೌದಲ್ಲ,  ಹಸೀ ತೊಂಡೇಕಾಯಿ ತಿನ್ನೂದು ಹೇಗೇಂತ ಬೇಕಲ್ಲ !"
ಎಳೆಯ ತೊಂಡೇಕಾಯಿಗಳ ಸಲಾಡ್ ಮಾಡಿ ತಿನ್ನಬಹುದು.   ಇನ್ನಿತರ ತರಕಾರಿಗಳ ಒಟ್ಟಿಗೆ ಸೇರಿಸಿ ಉಪ್ಪಿನಕಾಯಿ  ಕೂಡಾ ಚೆನ್ನಾಗಿರುತ್ತದೆ.

" ಆಯ್ತೂ,  ಸೊಪ್ಪು ತಿನ್ನೂದು ಹೇಗೆ ?"
ಎಳೆಯ ಕುಡಿಗಳ ತಂಬುಳಿ ಮಾಡಿದ್ರಾಯ್ತು.   ತೆಂಗಿನತುರಿ,  ದಪ್ಪ ಮಜ್ಜಿಗೆ,  ಎಳೇ ಕುಡಿಗಳು,  ಜೀರಿಗೆ ಹಾಗೂ ತಕ್ಕಷ್ಟು ಉಪ್ಪು,  ನುಣ್ಣಗೆ ಅರೆದು ಅವಶ್ಯಕವಾದ ನೀರು ಕೂಡಿಸುವಲ್ಲಿಗೆ ತಂಬುಳಿ ಸಿದ್ಧವಾದಂತೆ.

ತೊಂಡೆಕಾಯಿ ಮಜ್ಜಿಗೆಹುಳಿ:
ಸಾಕಷ್ಟು ತೊಂಡೆಕಾಯಿ ಹೋಳುಗಳು
ಒಂದು ತೆಂಗಿನಕಾಯಿಯಿಂದ  ನುಣ್ಣಗೆ ಅರೆದ ಅರಪ್ಪು
ದಪ್ಪ ಸಿಹಿ ಮಜ್ಜಿಗೆ 
ರುಚಿಗೆ ಸಾಕಷ್ಟು ಉಪ್ಪು
ಚಿಟಿಕೆ ಅರಸಿಣ
ಒಗ್ಗರಣೆ ಸಾಹಿತ್ಯ:  ಕರಿಬೇವು, ಎಣ್ಣೆ ಇತ್ಯಾದಿ...

ತೊಂಡೆಕಾಯಿ ಹೋಳುಗಳು ರುಚಿಗೆ ಉಪ್ಪು ಕೂಡಿ ಬೇಯಲಿ.  ತೊಂಡೆಕಾಯಿಗಳು ಹೆಚ್ಚು ಬೇಯಬಾರದು,  ಸತ್ವಹೀನವಾಗುತ್ತವೆ ಹಾಗೂ ರುಚಿಯೂ ಇರುವುದಿಲ್ಲ.  ತೆಂಗಿನಕಾಯಿ ಅರಪ್ಪು ಕೂಡಿಸಿ ಮಜ್ಜೆಗೆ ಎರೆದು ಕುದಿಸಿ ಒಗ್ಗರಣೆ ಕೊಟ್ಟರಾಯಿತು.  ಸಿಹಿ ಬೇಕಿದ್ದರೆ ಬೆಲ್ಲ,  ಖಾರ ಬೇಕೂಂತಿದ್ರೆ ಎರಡು ಹಸಿ ಮೆಣಸು ಸಿಗಿದು ಹಾಕಬೇಕು.  

ತೊಂಡೆಕಾಯಿ ಹುಳಿಮೆಣಸು:

ಚಪ್ಪರದಿಂದ ಕೊಯ್ದ ಕಾಯಿಗಳು ಹಣ್ಣೂ ಆಗಿರುವುದಿದೆ.   ಹಿಂದೆಲ್ಲ ಕೊಯ್ದು ಕೊಡುವಾಕೆ ನನ್ನ ಕೆಲಸಗಿತ್ತಿ ಕಲ್ಯಾಣಿ,  ಹಣ್ಣಾದ ತೊಂಡೆಗಳನ್ನು ಆಯ್ದಿಟ್ಟು ತನ್ನ ಮನೆಖರ್ಚಿಗೆ ಒಯ್ಯತ್ತಿದ್ದಳು.  ವಿಪರೀತ ಹಣ್ಣಾದದ್ದು ಬೇಡ,  ಗುಂಡುಕಲ್ಲಿನಲ್ಲಿ ತುಸು ಜಜ್ಜಿ ಅಥವಾ ಚೂರಿಯಲ್ಲಿ ಗೀರು ಹಾಕಿ, ರುಚಿಗೆ ಉಪ್ಪು ಕೂಡಿಸಿ,  ಅಗತ್ಯದ ನೀರೆರೆದು ಬೇಯಿಸಿ.

ತೊಗರೀಬೇಳೆಯ ಅವಶ್ಯಕತೆ ಇಲ್ಲಿಲ್ಲ.   ಮಸಾಲಾ ಸಾಮಗ್ರಿಗಳು ಕೂಡಾ ಬೇಡ.
"ಮತ್ತೇನನ್ನು ಹಾಕೋದೂ...?"
ತೆಂಗಿನತುರಿ,  ನಾಲ್ಕಾರು ಒಣಮೆಣಸು,  ಹುಳಿ,  ಚಿಟಿಕೆ ಅರಸಿಣದೊಂದಿಗೆ ನುಣ್ಣಗೆ ಅರೆಯಿರಿ.  ಅರೆದ ತೆಂಗಿನ ಅರಪ್ಪು,  ಬೆಂದ ತರಕಾರಿಯೊಂದಿಗೆ ಕೂಡಿ ಕುದಿಯಲಿ,  ಬೆಳ್ಳುಳ್ಳಿ ಒಗ್ಗರಣೆ ಮರೆಯದಿರಲಿ.    ಬೆಳ್ಳುಳ್ಳಿ ಹಿತವಾಗದವರಿಗೆ ತೆಂಗಿನಕಾಯಿ ಅರೆಯುವಾಗ ತುಸು ಕೊತ್ತಂಬ್ರಿ ಹಾಕಿಕೊಳ್ಳುವುದು.  ಒಣಮೆಣಸು ಕೂಡಾ  ಹುರಿಯಬೇಕಾಗಿಲ್ಲ,  ಹ್ಞಾ, ಅರೆಯುವ ಮೊದಲು ನೀರಲ್ಲಿ ಹಾಕಿಟ್ಟೀರಾದರೆ ಅರೆಯುವ ಕಾಯಕ ಸುಲಭವಾದೀತು.

ವಿಧವಿಧವಾದ ತರಕಾರಿಗಳೊಡನೆ ತೆಂಗಿನ ಅರಪ್ಪು ಕೂಡಿದ ಅವಿಯಲ್ ಅಥವಾ ಅವಿಲು ಗೊತ್ತಲ್ಲ,  ಇದಕ್ಕೂ ತೊಂಡೆಕಾಯಿ ಇಲ್ಲದಿದ್ದರಾದೀತೇ?  ಈ ವ್ಯಂಜನ ಮಜ್ಜಿಗೆಯನ್ನು ಬಯಸದು,  ಬದಲಾಗಿ ಮಾವಿನಕಾಯಿ,  ಅಂಬಟೆಯಂತಹ ಹುಳಿ ಇರುವ ತರಕಾರಿಗಳನ್ನು ಬಳಸಬೇಕು.  ಖಾರಕ್ಕಾಗಿ ಹಸಿಮೆಣಸು ಮಾತ್ರ ಹಾಕಬೇಕು,  ಮಸಾಲೆ ಹುಡಿ ಯಾವುದೂ ಹಾಕಬೇಕಾಗಿಲ್ಲ,  ಕರಿಬೇವು ಒಗ್ಗರಣೆ ಕಡ್ಡಾಯ.

ಚಪ್ಪರದಲ್ಲಿ ತುಂಬಿ ತುಳುಕುತ್ತಿರುವ ತೊಂಡೆಕಾಯಿಗಳನ್ನು ತಿಂದು ಮುಗಿಸಲಾಗದಿದ್ದರೆ ಮಾರಾಟ ಮಾಡಿ ಹಣ ಗಳಿಸಬಹುದು.  " ಮಾರಾಟ ಮಾಡಿ ಏನಾಗ್ಬೇಕಾಗಿದೆ..." ಅಂತೀರಾ,  ಅದಕ್ಕೂ ಉಪಾಯವಿದೆ.

ತೊಂಡೆಕಾಯಿಗಳನ್ನು ಬೇಕಾದ ಆಕೃತಿಯಲ್ಲಿ ಸಿಗಿದು ಉಪ್ಪು ಬೆರೆಸಿ,  ಬಿಸಿಲಿಗೆ ಇಟ್ಟು ಒಣಗಿಸಿ.  ಚೆನ್ನಾಗಿ ಒಣಗಿದ ನಂತರ ಡಬ್ಬದಲ್ಲಿ ತುಂಬಿಸಿ ದಾಸ್ತಾನು ಇಡಬಹುದು.  ಬೇಕಿದ್ದಾಗ ಎಣ್ಣೆಯಲ್ಲಿ ಕರಿದು ತೊಂಡೆಯ ಬಾಳ್ಕ ಅನ್ನಿ,  ಸಾರೂ ಅನ್ನದೊಂದಿಗೆ ಮಳೆಗಾಲದಲ್ಲಿ ತಿನ್ನಲು ರುಚಿ.

ಟಿಪ್ಪಣಿ:  ಇದು ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತವಾಗಿರುವ ಚಿತ್ರ - ಬರಹ.
Tuesday, 10 November 2015

ಪ್ರಗತಿಯ ಪದಗತಿ


ಶೀಲಕ್ಕ ಹೆಣೆದಳು ಜಂಭದ ಚೀಲ
ಹೆಗಲಿಗೆ ಏರಿತು  ಕೈಚೀಲ |

ಚೀಲವನಾಡಿಸುತಿರಲು
ರೂಪಾಯಿ ನೋಟು ಕೆಳಗೆ ಬೀಳಲು
ಶೀಲಕ್ಕ ನೋಡದೆ ಇರಲು
ಮಾಲಕ್ಕ ಓಡೋಡಿ ಬರಲು
ಬಿದ್ದ ನೋಟು ಹೆಕ್ಕೀ ಕೊಡಲು |

"ಇವಳೇ ಜಾಣೆ ಪೆಣ್ಮಣಿ
ಕನ್ನಡವೇ ನಮ್ಮ ಕಣ್ಮಣಿ "
ಕನ್ನಡ ಪದಗಳ ಉಳಿಸೋಣ
ಕನ್ನಡದಲ್ಲೇ ಉಲಿಯೋಣ
ಬರೆ ನೀ ಕವನವ ಓ ಅಕ್ಕ |


ರೂಪದರ್ಶಿ:  ಪ್ರಗತಿ ಹಿರಣ್ಯ

Sunday, 25 October 2015

ಲಿಂಬೇ ಚಹಾಗಜಲಿಂಬೆಯ ಹಣ್ಣುಗಳ ಗೊಂಚಲು ಗಿಡದಲ್ಲಿ ತೊನೆದಾಡುತ್ತಿರುವಾಗ,  ಸಂಜೆಯ ಹೊತ್ತು ಯಾರೇ ಬರುವವರಿದ್ದರೂ ಶರಬತ್ತು ಮಾಡಿಟ್ಟು ರೂಢಿ ಆಗ್ಹೋಗಿದೆ.   ಕಾಫಿ, ಟೀ ಅಂತೆಲ್ಲ ಮಾಡೋದೇನಿದ್ರೂ ಮುಂಜಾನೆ ಹೊತ್ತು.

ಅದರಲ್ಲೂ ಈಗ ನಮ್ಮ ಮನೆ ಹುಡುಗ ಪ್ರಕಾಶ್,  ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದಾನೆ.  ಗೃಹಪ್ರವೇಶ ಆಗ್ಬೇಡವೇ,  ನಾವೆಲ್ಲ ಹೋಗ್ಬೇಡವೇ,  ಆಮಂತ್ರಣದೊಂದಿಗೆ ಸಂಜೆ ಮನೆ ಕಡೆ ಬಂದ.  ಬರುವಾಗ ಸಕುಟುಂಬ ಸಹಿತವಾಗಿ ಎಲ್ಲರೂ ಬಂದ್ರು.   ಬರ್ತಾನೇಂತ ಗೊತ್ತಿದ್ದುದರಿಂದ ಲಿಂಬೇ ಪಾನಕ ಮಾಡಿದ್ದೂ ಆಗಿತ್ತು.

" ಅರೆ!  ಪಾನಕ ಮಾಡೋ ವಿಧಾನ ಸ್ವಲ್ಪ ಹೇಳ್ರೀ "

10 - 12 ಲೋಟ ಪಾನಕ ಆಗಬೇಕಿದೆ.
4 ಲಿಂಬೆ ಹಣ್ಣು.
ಒಂದು ಪಾವು ಸಕ್ಕರೆ.
ಪಾವು ಅಳತೆ ತಿಳಿಯದವರು 2 ದೊಡ್ಡ ಸೌಟು ಸಕ್ಕರೆ ಅಂತ ಬರೆದುಕೊಳ್ಳಿ.
3 ಲೋಟ ನೀರು ಕುದಿಯಲಿ.
ಕುದಿದ ನೀರಿಗೆ ಸಕ್ಕರೆ ಬೀಳಲಿ,  ಕರಗುತ್ತಾ ಇರಲಿ.
ಉಳಿದ 9 ಲೋಟ ನೀರನ್ನೂ ಬಿಸಿ ಮಾಡ್ತಾ ಇದ್ದ ಹಾಗೆ ಲಿಂಬೆ ಹಣ್ಣುಗಳನ್ನು ಕತ್ತರಿಸಿ ರಸ ತಗೆದು,  ಬೀಜಗಳಿದ್ದರೆ ಆರಿಸಿ ತೆಗೆಯಿರಿ.
ಲಿಂಬೆಯ ಸಿಪ್ಪೆಗಳನ್ನೂ ನೀರಿಗೆ ಹಾಕಿ  ಹಿಂಡಿ ತೆಗೆಯಬಹುದಾಗಿದೆ,  ಸಿಪ್ಪೆ ಒಂದು ಅತ್ಯುತ್ತಮ ಆ್ಯಂಟಿ ಓಕ್ಸಿಡೆಂಟ್.
ಸಿದ್ಧವಾದ ಸಕ್ಕರೆಯ ದ್ರಾವಣಕ್ಕೆ ಲಿಂಬೆರಸ, ಬಿಸಿನೀರು ಎರೆಯಿರಿ.
ಬಿಸಿ ಬಿಸಿ ಶರಬತ್ತು ತಯಾರಕರು ಮೊದಲಾಗಿ ಕುಡಿದು  " ವಾಹ್ ವಾಹ್ "  ಅನ್ನಿರಿ.

ಬಂದವರೆಲ್ಲ ಅಚ್ಚುಕಟ್ಟಾಗಿ ಶರಬತ್ತು ಕುಡಿದು ಹೋದರು.  ಆದರೂ ಒಂದು ಲೋಟ ಶರಬತ್ತು ಉಳಿಯಿತು,  ನಾನೇ ಕುಡಿಯಬಹುದಾಗಿತ್ತು,  ಆದ್ರೇನ್ಮಾಡ್ಲೀ,  ಈಗಾಗಲೇ 2 ಲೋಟ ಕುಡಿದಿದ್ದಾಗಿದೆ,  ನಾಳೆಗೆ ಇಟ್ಕೊಳ್ಳೋಣ.

ಆ ನಾಳೆ ಬಂದಿತು.  ಚಹಾ ಸಮಯ,  ಗಂಟೆ ಹತ್ತಾಯಿತು.
ಅರ್ಧ ಲೋಟ ನೀರು ಕುದಿಯಿತು, ಚಹಾಪುಡಿ ನೀರಿಗೆ ಬಿದ್ದಿತು.
ತಣ್ಣನೆಯ ಶರಬತ್ತು ಬೆಚ್ಚಗಾಯಿತು,  ಕುದಿಸದಿರಿ.
ಬಿಸಿಬಿಸಿಯಾದ ಚಹಾ ದ್ರಾವಣ ಲಿಂಬೇ ಪಾನಕಕ್ಕೆ ಇಳಿಯಿತು.
" ವಾರೆವ್ಹಾ,  ಲೆಮೆನ್ ಟೀ ಅಂದ್ರೆ ಇದು "  ನಮ್ಮೆಜಮಾನ್ರು ಈ ಚಹಾ ಕುಡಿದು ನೂರಕ್ಕೆ ನೂರು ಮಾರ್ಕು ಕೊಟ್ಟಿದ್ದು ಸುಳ್ಳಲ್ಲ !  

ಅಂದ ಹಾಗೆ ಕುದಿಯುವ ನೀರಿನಲ್ಲಿ ಶರಬತ್ತು ಮಾಡಲು ಸೂಚಿಸಿದ್ದು ನನ್ಮಗ ಮಧು,  ಅವನೂ ಬೆಂಗಳೂರಿನಲ್ಲಿದಾನೇ,  " ತಣ್ಣಗಿನ ನೀರು ಇಲ್ಲಿ ಕುಡಿಯೋ ಹಾಗಿಲ್ಲ,  ನಾವು ಹಾಟ್ ಜ್ಯೂಸ್ ಕುಡಿಯೋದು " ಅಂದಿದ್ದ.Saturday, 17 October 2015

ಕಣ್ಣೆದುರಲ್ಲಿ ಕಾಷ್ಠ ಕಲೆವೆಂಕಟೇಶಂದು ದೂರವಾಣಿ ಕರೆ,  " ಅಕ್ಕಾ, ಅಪ್ಪಂದು ತಿಥಿ ಇದೇ ತಿಂಗಳು 25ನೇ ತಾರೀಕು...."
" ಹ್ಞೂ "  ಅಂದ್ಬಿಟ್ಟು ತಾರೀಕು ನೆನಪಿಗಾಗಿ ಕ್ಯಾಲೆಂಡರ್  ಪುಟದಲ್ಲಿ ಗುರುತು ಮಾಡಿಟ್ಟೂ ಆಯಿತು.  ಈಗ ಮರೆತು ಹೋಗದಂತಿರಲು ಆ್ಯಪ್ಸ್ ಬಂದಿವೆ,  ನನ್ನ ಐಪಾಡ್ ಕೂಡಾ reminder apps ಅನ್ನು ಹೊಂದಿದೆ.   ಅದೂ ವಾರ, ದಿನ, ಗಂಟೆ ಎಲ್ಲವನ್ನೂ ತುಂಬಿಸಿ ಕೊಟ್ರೆ ಆ ಹೊತ್ತಿಗೆ ಅಲರಾಂ ಕೊಟ್ಬಿಡುತ್ತೆ,  ಈಗೇನಿದ್ರೂ ತಂತ್ರಗಳ ಕಾಲ ಅಲ್ವೇ, ಇರಲಿ.

ದಿನ ಮುಂಚಿತವಾಗಿ ಮಗಳೂ ಬೆಂಗಳೂರಿನಿಂದ ಬಂದಿದ್ದಳು.   ಒಳ್ಳೆಯದೇ ಆಯಿತು,  ಅಜ್ಜನ ತಿಥಿಯ ಹೋಳಿಗೆ ಮೊಮ್ಮಗಳು ತಿನ್ನದಿದ್ದರಾದೀತೇ,  ಬೆಳಗಿನ ಜಾವ ಟಿಫಿನ್ ಮುಗಿಸಿ ನಮ್ಮ ವಾಹನ ಹೊರಟಿತು.

ಶ್ರಾದ್ಧದ ಔಪಚಾರಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುತ್ತಿದ್ದಂತೆ ಐ ಫೋನ್ ಕೆಮರಾವೂ ಅಲ್ಪಸ್ವಲ್ಪ ಕೆಲಸ ಮಾಡದೇ ಬಿಡಲಿಲ್ಲ.   ಹಳೆಯಮನೆಯನ್ನು ಹಾಗೇ ಉಳಿಸಿಕೊಂಡು ಅದಕ್ಕೆ ತಾಗಿದಂತೆ ಮನೆಯನ್ನು ಹೊಸ ಮಾದರಿಯಲ್ಲಿ ವಿಸ್ತರಿಸಿದ್ದರು ನಮ್ಮಪ್ಪ.  ಆಧುನಿಕ ವಿನ್ಯಾಸದ ಕಾಂಕ್ರೀಟ್ ಕಟ್ಟಡಗಳೇ ಎಲ್ಲೆಡೆ ತುಂಬಿ ಹೋಗಿರುವಾಗ ಹಳೇ ಕಟ್ಟಡಗಳ ಕುಸುರಿ ಕೆಲಸ ಈಗ ಎಲ್ಲೂ ಕಾಣ ಸಿಗದು.
ನಮ್ಮ ಮಧು,  ಎರಡು ವರ್ಷಗಳ ಹಿಂದೆ ಕುವೆಂಪು ಅವರ ಕುಪ್ಪಳ್ಳಿ ನಿವಾಸವನ್ನು ನೋಡಿಕೊಂಡು ಬಂದಿದ್ದ.  " ಹಾಗಿದೆ,  ಹೀಗಿದೆ... " ಮುಗಿಯದ ವರ್ಣನೆ ಕೇಳಿ ನಾನು ಸುಸ್ತು.  ಕಣ್ಣೆದುರಲ್ಲಿ ಕಾಷ್ಠ ಕಲೆಯನ್ನು ನೋಡುತ್ತಲೇ ಬೆಳೆದವರು ನಾವು,  ಅವನಿಗದೆಲ್ಲಿಂದ ಅರ್ಥವಾಗಬೇಕು ?

ತರವಾಡು ಮನೆಗಳ ಸೊಗಸೇ ಬೇರೆ,  ದೇವರಮನೆಯ ಬಾಗಿಲು,   ದ್ವಾರದ ವಿನ್ಯಾಸ,  ಕಿಟಿಕಿಗಳನ್ನು ನಮ್ಮ ಕಡೆ  ' ಗಿಳಿಬಾಗಿಲು ' ಅನ್ನೋ ರೂಢಿ,  ಗಿಳಿಬಾಗಿಲು ಎಂಬ ಶಬ್ದ ಹೇಗೆ ಅಥವಾ ಯಾಕೆ ಬಳಕೆಗೆ ಬಂದಿತೆಂದು ಕಿಟಿಕಿಯ ವಿನ್ಯಾಸ  ನೋಡಿದ್ರೇನೇ ತಿಳಿದೀತು.   ಹೊರಚಾವಡಿಯ ಮರದ ಮುಚ್ಚಿಗೆ,  ಅದಕ್ಕೂ ಆಧಾರಸ್ತಂಭ ಸಂಪೂರ್ಣವಾಗಿ ಮರದ ಕೆತ್ತನೆ ಕೆಲಸ.
ಬರೆಯುತ್ತಾ ಇದ್ದ ಹಾಗೆ ಇಂತಹ  ಆಧಾರಸ್ತಂಭಗಳಿಗೆ ನಮ್ಮ ಕಡೆ ಒಂದು ಹೆಸರಿದೆ ಎಂದು ನೆನಪಾಯಿತು.   ಆ ಮನೆಯಲ್ಲೇ ವಾಸವಾಗಿರುವ ತಮ್ಮನ ಬಳಿಯೇ ಕೇಳಬೇಕಾಯಿತು.  " ಅಕ್ಕ,  ನಾವು ಹೇಳೂದು ಬಾಜಾರ ಕಂಬ " ಅಂತಂದ,   " ಇನ್ನು ಕನ್ನಡದಲ್ಲಿ ಹೇಗೆ ಹೇಳುವುದೋ ಗೊತ್ತಿಲ್ಲ "

ಅಂತೂ ಮರೆತು ಹೋದದ್ದು ತಿಳಿದ ಹಾಗೂ ಆಯಿತು.  ಕುಂಬ್ಳೆಯಲ್ಲಿ ಸಿವಿಲ್ ಇಂಜಿನಿಯರ್ ತಂಗಿ ಇರುವಾಗ ಸೂಕ್ತ ಕನ್ನಡ ಪದ ತಿಳಿಯಲು ಕಷ್ಟವೇನೂ ಆಗದು ಎಂಬ ಅನಿಸಿಕೆ ನನ್ನದಾಗಿತ್ತು.
" ಅದೂ ಇಂಗ್ಲೀಷಿನಲ್ಲಿ column ಅಂತಾರೆ,  ಕನ್ನಡದಲ್ಲಿ ಹೇಗೋ ಗೊತ್ತಿಲ್ಲ.... " ಅಂದಳು ಗಾಯತ್ರಿ.
" ಹೌದಾ, ಬೇಕಾದಷ್ಟು online ಡಿಕ್ಷನರಿಗಳು ಸಿಗ್ತವೆ,  ಆ್ಯಪ್ ಕೂಡಾ ಇರುವಾಗ, ನಿನ್ನ ಇಂಗ್ಲೀಷ್ ಶಬ್ದಕ್ಕೆ ಕನ್ನಡ ಅರ್ಥ ಸಿಗಬಹುದು "
ಹುಡುಕಾಟ ನಡೆಸಿದಾಗ  ' ಕುಂದ ' ಪದ ಪದಾರ್ಥ ಸಿಕ್ಕಿಯೇ ಬಿಟ್ಟಿತು!
"ಸಿಕ್ತಾ... "
" ಹ್ಞೂ,  ಕುಂದ ಅನ್ನುತ್ತಾರೆ ನಮ್ಮ ಕನ್ನಡ ಭಾಷೇಲಿ "
" ಅಡಿಕೆ ಮರದ ಕುಂದ ಹಾಕೂದು ... "  ಅವಳಿಗೆ ನಗು.


Friday, 9 October 2015

ಸೃಷ್ಟಿಯ ನೋಟ
ಬರೆಯಲಿಕ್ಕೂ ಆ್ಯಪ್ಸ್,  ಬರೆದಿದ್ದನ್ನು ಸಂಗ್ರಹಿಸಲು ನೋಟ್ ಪ್ಯಾಡ್ ಆ್ಯಪ್ಸ್.  ಬರೆಯಲು ಶಬ್ದಗಳ ಕೊರತೆಯೇ,  ಅದಕ್ಕೂ ಆ್ಯಪ್ಸ್ ಬಂದಿವೆ.   ಫೊಟೋ ತೆಗೆಯಲು ಆ್ಯಪ್ಸ್,  ಫೊಟೋ ಚೆನ್ನಾಗಿ ಬಂದಿಲ್ವೇ,  ಇನ್ನಷ್ಟು ಕುಸುರಿ ಕೆಲಸಗಳಿಗೆ ಹಲವಾರು ಆ್ಯಪ್ಸ್.  ಈಗ ನಾಲ್ಕಾರು ವರ್ಷಗಳಿಂದ ಇಂತಹ ಆ್ಯಪ್ಸ್ ಒಡನಾಟ,  ಇದೂ ಒಂಥರಾ ಮಕ್ಕಳಾಟ.  ಆ್ಯಪ್ಸ್ ಗಳ ಮೂಲಕವೇ ಬ್ಲಾಗ್ ಬರಹಗಳಲ್ಲಿ ಸೃಜನಶೀಲತೆ ಬಂದಿತು.   ಅದು ಕನ್ನಡ ಭಾಷಾಶಾಸ್ತ್ರವೂ ಆಗಿರಬಹುದು,  ಡಿಕ್ಷನರಿ ಬೇಕೇ, ಆ್ಯಪ್ ಇದೆ.  ತಂತ್ರಜ್ಞಾನಗಳು ಮುಂದುವರಿದ ಹಾಗೆಲ್ಲ ನಾವೂ ದಾಪುಗಾಲಲ್ಲಿ ಮುಂದಕ್ಕೆ ಓಡುತ್ತಿದ್ದರೇನೇ ಅಂತರ್ಜಾಲ ಪ್ರಪಂಚದಲ್ಲಿ ನಮ್ಮದೇ ಛಾಪು ಮೂಡಿಸಲು ಸಾಧ್ಯ.  ಇಂತಹ ಲಕ್ಷಾಂತರ ಆ್ಯಪ್ಸ್,   ಆ್ಯಪ್ ಸ್ಟೋರ್ ನಲ್ಲಿ ಉಚಿತವಾಗಿ ಲಭ್ಯ.

Saturday, 3 October 2015

ಬೀಟ್ರೂಟ್ ಬೆಸುಗೆ
ಈ ಬಾರಿ ಮಳೆಗಾಲ ಬಹು ಬೇಗನೇ ಬಂದಿದೆ.   ಉಪ್ಪಿನಕಾಯಿ ಹಾಕುವುದಕ್ಕಿಲ್ಲ,  ಹಪ್ಪಳ ಒಣಗಿಸುವುದಕ್ಕೂ ಇಲ್ಲ,  ಧೋ... ಎಂದು ಸಂಜೆಯಾದೊಡನೆ ಸುರಿಯುವ ಮಳೆ,  ಜೊತೆಗೆ ಸುಳಿಗಾಳಿಯ ಅಟ್ಟಹಾಸ.   ಗಾಳಿಯ ರಭಸಕ್ಕೆ ಮಾವಿನಕಾಯಿಗಳೂ ಹಣ್ಣಾಗುವ ಮೊದಲೇ ಬಿದ್ದಿದ್ದೂ ಆಯಿತು.  ನನ್ಮಗಳು  " ಉಪ್ಪಿನ್ಕಾಯಿ ಹಾಕಮ್ಮಾ..." ಎಂದು ಹೊತ್ತು ತಂದಿದ್ದೂ ಆಯಿತು.

" ಉಪ್ಪಿನಕಾೖ ಹಾಕೂದಾ,  ಆಗ್ಲೀ..."  ಮಾವಿನಕಾೖ ಬಂತಲ್ಲ, ಅದಕ್ಕೇನೂ ಗಡಿಬಿಡಿಯಿಲ್ಲ.   ಮಾಮೂಲಿ ಅಡುಗೆ ಆಗಲೇಬೇಕಲ್ಲ.   ನಿನ್ನೆ ಬಸಳೇ ಬೆಂದಿ,  ಮೊನ್ನೆ ಕಾಟ್ ಹರಿವೆಯ ಮಜ್ಜಿಗೆಹುಳಿ,  ಸೊಪ್ಪುಗಳದ್ದೇ ದರ್ಬಾರು  ಅಡುಗೆಮನೆಯಲ್ಲಿ.    ಇವತ್ಯಾವ ಸೊಪ್ಪೂ ಅಂತ ಅಂಗಳದಲ್ಲಿ  ಅಡ್ಡಾಡುತ್ತಿದ್ದಾಗ ನನ್ನ ಬಣ್ಣದ ಹರಿವೆ ಮೈದುಂಬಿ ನಿಂತಿತ್ತು,  ಅದರದ್ದೇ ಸಾಮ್ರಾಜ್ಯ,  ಲಾನ್ ಅಂತ ಮಾಡ್ತಾರಲ್ಲ,  ಅದೇ ಥರ,  ವಿಸ್ತಾರವಾಗಿ ಹರಡಿಕೊಂಡಿತ್ತು.

ಸೊಪ್ಪುಗಳು ಆರೋಗ್ಯಕ್ಕೆ ಒಳ್ಳೆಯದು ಅಂತಂದುಕೊಳ್ಳುತ್ತಾ ಕೈಯಲ್ಲಿ ಹಿಡಿಸುವಷ್ಟು ಸೊಪ್ಪುಗಳನ್ನು ಚಿವುಟಿ ಅಡುಗೆಮನೆಗೆ ತಂದಿದ್ದಾಯ್ತು.  ಇದನ್ನು ಏನು ಮಾಡಲಿ ಎಂದು ಚಿಂತಿಸುತ್ತಿದ್ದ ಹಾಗೇ ಮೂಲೆಗೆ ಒತ್ತರಿಸಲ್ಪಟ್ಟ ಬೀಟ್ರೂಟು ಕಣ್ಣಿಗೆ ಬಿತ್ತು.   ತೆಂಗಿನಕಡಿಯೂ ದೊಡ್ಡದಿತ್ತು,  ಸರಿಹೋಯ್ತು,  ಮಜ್ಜಿಗೆಹುಳಿ ಮಾಡಿ ನೋಡೋಣ, ಸೊಪ್ಪು ಹಾಗೂ ಬೀಟ್ರೂಟ್ ಬೆಸುಗೆ! 

ಕತ್ತರಿಸಿದ ಸೊಪ್ಪಿನ ಚೂರುಗಳು ಒಂದು ಸೇರು ಇದ್ರೂನೂ ಬೆಂದಾಗ ಒಂದು ಹಿಡಿಯಷ್ಟಾಗುವುದು ಗೊತ್ತಲ್ಲ,  ಮಜ್ಜಿಗೆಹುಳಿಯೋ,  ಸೊಪ್ಪಿನ ತಂಬುಳಿಯೋ ಎದು ಪರಿಹಾಸ ಮಾಡುವಂತಿರಬಾರದು,  ಬೀಟ್ರೂಟ್ ಇದ್ದದ್ದು ಒಳ್ಳೆಯದಾಯಿತು.

ಸೊಪ್ಪು ನೀಟಾಗಿ ಕತ್ತರಿಸಲ್ಪಟ್ಟಿತು.
ಬೀಟ್ರೂಟು ಹೆಚ್ಚಿಲ್ಲ,  ಒಂದ್ಹತ್ತು ಹೋಳುಗಳು ತಯಾರಾದವು,  ಹೋಳು ದೊಡ್ಡದಿರಲಿ.
ತೆಂಗಿನಕಾಯಿಯೂ ಒಂದ್ಲೋಟ ಸಿಹಿ ಮಜ್ಜಿಗೆ ಕೂಡಿ ಅರೆಯಲ್ಪಟ್ಟಿತು.  ಖಾರಪ್ರಿಯರು ಹಸಿಮೆಣಸು ಯಾ ಗಾಂಧಾರಿಮೆಣಸು ಅರೆಯುವಾಗ ಹಾಕಿಕೊಳ್ಳುವುದು.
ಬೀಟ್ರೂಟು ಹೋಳುಗಳು,  ಸೊಪ್ಪುಗಳು ರುಚಿಗೆ ತಕ್ಕಂತೆ ಉಪ್ಪು ಕೂಡಿ ಬೇಯಲ್ಪಟ್ಟುವು,  ತೆಂಗಿನಕಾಯಿ ಅರಪ್ಪು ಕೂಡಿಕೊಂಡಿತು.  ಕುದಿಯಲ್ಪಟ್ಟು ಒಗ್ಗರಣೆಯೂ ಬಿದ್ದಿತು.

ಇದೀಗ ಏನಾಯಿತು ?
ನನ್ನ ಕಾಟಂಗೋಟಿ ಸೂಪ್ಪು, ಕೆಂಪು ದಂಟಿನ ಹರಿವೆಯ ಮಜ್ಜಿಗೆಹುಳಿಯೋಪಾದಿಯಲ್ಲಿ ಶೋಭಾಯಮಾನವಾಯಿತು!
ರುಚಿಗೆ ಉಪ್ಪು ಮರೆಯದಿರಿ.
ಹುಳಿ ಮಜ್ಜಿಗೆಯಲ್ಲೇ ಇದೆ.
ಸಿಹಿ  ಬೀಟ್ರೂಟಿನಲ್ಲಿದೆ.
ಇನ್ನೂ ಖಾರವಾಗಬೇಕಿದ್ದರೆ ಒಗ್ಗರಣೆ ಮೆಣಸು ಜಾಸ್ತಿ ಹಾಕ್ರೀ... ಮಳೆಗಾಲದ ವ್ಯಂಜನಗಳು ಘರಂ ಆಗಿದ್ರೇ ಊಟ ಸೊಗಸು.

ಮಳೆಗಾಲದ ವೈಭವವೇ ಹಾಗೆ,  ನಮ್ಮ ಹಿಂದಿನವರು ಗುಡ್ಡಗಾಡುಗಳಲ್ಲಿ,  ಹೊಲಗದ್ದೆಗಳ ಬದುವಿನಲ್ಲಿ ಬೆಳೆಯುತ್ತಿದ್ದ ಗಿಡಗಂಟಿಗಳ ಚಿಗುರೆಲೆಗಳನ್ನು ತಂದು ಬೇಯಿಸಿ,  ಹೊಲಕುಡಿ ತಂಬುಳಿ ತಿನ್ನದಿದ್ದವರಲ್ಲ.   ನಾವು ಈಗ ಆಧುನಿಕರಾಗಿದ್ದೇವೆ,  ಹೊಲಗದ್ದೆಗಳನ್ನೂ ಕಾಣೆವು,  ಗುಡ್ಡಗಾಡುಗಳಲ್ಲಿ ಅಲೆದಾಟಕ್ಕೂ ವ್ಯವಧಾನವಿಲ್ಲದವರಾಗಿದ್ದೇವೆ.

 ಬಣ್ಣದ ಹರಿವೆ ಎಂದು ನನ್ನ ಕೈಲಿ ಕರೆಸಿಕೊಂಡಿರುವ ಈ ಸಸ್ಯವನ್ನು ಕುಂಡದಲ್ಲಿ ನೆಟ್ಟು ಬೆಳೆಸಬಹುದು.   ಇದರ ಬಗ್ಗೆ ಈ ಮೊದಲೂ ಬರೆದಿದ್ದೇನೆ.   ಹೆಸರು ತಿಳಿದಿರದಿದ್ದ ಈ ಸಸ್ಯದ ಬಗ್ಗೆ ಫೇಸ್ ಬುಕ್ ಮಾಧ್ಯಮ ಸ್ನೇಹಿತರು ಇಂತಹುದೇ ಸಸ್ಯ ಎಂದು ಹೆಸರಿಸಿಯೂ ಇದ್ದಾರೆ.   ಸಸ್ಯ ಸಂಕುಲದಲ್ಲಿ Amaranthaceae ಕುಟುಂಬ ಬಲುದೊಡ್ಡದು.  ಹರಿವೆ ಪ್ರವರ್ಗಕ್ಕೆ ಸೇರಿದ ಈ ಮಾದರಿಯ ಸಸ್ಯಗಳನ್ನು wild spinach ಎಂದು ಗುರುತಿಸಬಹುದಾಗಿದೆ.  ನೈಸರ್ಗಿಕವಾಗಿ ಲಭ್ಯವಿರುವ ಸಸ್ಯ,  ಯಾವುದೇ ಮಾರಕ ಕೀಟನಾಶಕವಾಗಲೀ,  ರಸಗೊಬ್ಬರವಾಗಲೀ ಇದಕ್ಕೆ ಅವಶ್ಯವಿಲ್ಲ.  ಮನೆಯ ಹಿತ್ತಲಲ್ಲಿ,  ಬಾಲ್ಕನಿಯಲ್ಲಿ ನೆಟ್ಟು ಸಲಹಲು ಏನೂ ಕಷ್ಟವಿಲ್ಲ.


Saturday, 26 September 2015

ತೆಳ್ಳವು ಪಾಯಸವೂ, ಓಡುಪ್ಪಳೆಯೂ....ನಾವು ನೀರುದೋಸೆ ಪ್ರಿಯರು,   ಮಕ್ಕಳಿಗೂ ಬೆಲ್ಲಸುಳಿ ಬೆರೆಸಿ ದೋಸೆ ತಿನ್ನುವ ಹಂಬಲ.   ಆದರೂ ಮೂರೋ ನಾಲ್ಕೋ ದೋಸೆ ಉಳಿಯಿತು.   ಹೇಗೂ ಮಕ್ಕಳಿಬ್ಬರೂ ಮನೇಲಿದಾರೇ,  ಉಳಿದ ದೋಸೆಗಳನ್ನೇ ಪಾಯಸವನ್ನಾಗಿ ಪರಿವರ್ತಿಸೋಣ.

ಒಂದು ಹಸಿ ತೆಂಗಿನಕಾಯಿ,  ಕಾಯಿ ಅರೆದು ದಪ್ಪ ಹಾಲು ತೆಗೆದಿರಿಸಿ.  ಕಾಯಿ ಚರಟಕ್ಕೆ ಇನ್ನೂ ಎರಡು ಬಾರಿ ನೀರೆರೆದಾಗ ನೀರುಕಾಯಿಹಾಲು ಲಭ್ಯ.

2 ಅಚ್ಚು ಬೆಲ್ಲ,  ನೀರು ಕಾಯಿಹಾಲಿನಲ್ಲಿ ಕರಗಿ ಕುದಿಯಲಿ.
ಕುದಿಯುತ್ತಿರುವ ಬೆಲ್ಲದ ದ್ರಾವಣಕ್ಕೆ ದೋಸೆಗಳನ್ನು ಹಾಕಿರಿ.   ದೋಸೆಸಹಿತವಾಗಿ ಕುದಿಯುತ್ತಿರುವ ಹಾಗೇನೇ ದಪ್ಪ ಕಾಯಿಹಾಲು ಎರೆಯಿರಿ.  ಚಿಟಿಕೆ ಏಲಕ್ಕಿಪುಡಿ ಉದುರಿಸಿ.  ಇನ್ನೊಂದು ಕುದಿ ಬಂದಾಗ ಕೆಳಗಿಳಿಸಿ,  ಪಾಯಸ ಸಿದ್ಧ.  ಅನಾವಶ್ಯಕವಾಗಿ ಸೌಟಿನಲ್ಲಿ ಕಲಕದಿರಿ,  ದೋಸೆಗಳನ್ನು ಬಟ್ಟಲಿಗೆ ಹಾಕಿಕೊಳ್ಳುವಾಗಲೂ ಹರಿಯದಂತೆ ಜಾಗ್ರತೆ ವಹಿಸುವ ಅಗತ್ಯವಿದೆ.

ಈ ಪಾಯಸವನ್ನು ಮಕ್ಕಳೊಂದಿಗೆ ಸವಿಯುತ್ತಿದ್ದಂತೆ   ' ಓಡುಪ್ಪಳೆ '  ಎಂಬ ಸಿಹಿತಿನಿಸು ನೆನಪಾಯಿತು.  ಓಡುಪ್ಪಳೆಯನ್ನು ನಾನು ಬಾಲ್ಯದಲ್ಲಿ ತಿಂದಿದ್ದೇ ಇಲ್ಲ.   ಹೀಗೊಂದು ತಿಂಡಿ ಇದೆ ಅಂತಾ ಗೊತ್ತೂ ಇರಲಿಲ್ಲ ಅನ್ನಿ.   ನಮ್ಮಮ್ಮ ಮಾಡಿದ್ರೆ ತಾನೇ ಗೊತ್ತಾಗಿರೋದು!   ಮದುವೆ ಆದ ನಂತರವೂ ನಮ್ಮ ಮನೆಯಲ್ಲಿ ಓಡುಪ್ಪಳೆ ಮಾಡಿದ್ದನ್ನು ಕಂಡಿಲ್ಲ.

ಯಾವಾಗ ನನ್ನ ಕೆಲಸಗಾರ್ತಿಯರೆಲ್ಲ ಸರ್ಕಾರೀ ರೋಜ್ಗಾರ್ ಯೋಜನೆಯಲ್ಲಿ ತೊಡಗಿಸಿಕೊಂಡರೋ ಅವಾಗ ನಮ್ಮ ಅಡಿಕೆತೋಟದೊಳಗೆ ಕಾರ್ಮಿಕರ ಅಭಾವ ಕಾಡಲು ತೊಡಗಿತು.

" ಸರ್ಕಾರೀ ಸಂಬಳ ನಾವೂ ಕೊಟ್ಟು ಕೆಲ್ಸ ಮಾಡ್ಸೋಣ "  ಅಂತ ನಮ್ಮೆಜಮಾನ್ರು ಅಂದ್ಬಿಟ್ಟು ನಾಲ್ಕಾರು ಹೆಣ್ಣಾಳುಗಳು ಬರುವ ಏರ್ಪಾಡಾಯಿತು. 

"ನೋಡೂ... ಹೇಗೂ ಗವರ್ಮೆಂಟ್ ಸಂಬಳಾನೇ ಕೊಡ್ಬೇಕು,  ಊಟ ಚಹಾ ಕೊಡಲಿಕ್ಕಿಲ್ಲ ತಿಳೀತಾ...  ಅವ್ರೇ ತರ್ತಾರೆ "  ಅಂದಿದ್ದು ನಮ್ಮವರು.

" ಆಗ್ಲೀ,  ಇದೂ ಒಳ್ಳೆಯದೇ "

ಹಾಳೆ ಮುಟ್ಟಾಳೆ ಧರಿಸಿ ಬಂದ ಕೆಲಸಗಾತಿಯರು ನನಗೆ ಪರಿಚಿತರೇ ಆಗಿದ್ದುದರಿಂದ  " ಚಹ ಜೊತೆ ಏನು ತಿಂಡಿ ತಂದಿದ್ದೀರಾ..." ತುಳುವಿನಲ್ಲಿ ವಿಚಾರಣೆ ನನ್ನದು.

" ಓಡುಪ್ಪಳೆ ಅಕ್ಕಾ.. " ಈಗ ಓಡುಪ್ಪಳೆ ನನ್ನ ಕಿವಿಗೆ ಬಿತ್ತು.

" ಹೌದಾ,  ಹ್ಯಾಗಿರುತ್ತೇ ಓಡುಪ್ಪಳೇ ?"  ಅವಳೋ ಟಿಫಿನ್ ಬಾಕ್ಸ್ ಬಿಡಿಸಿ ತೋರಿಸಿದ್ಥೂ ಆಯಿತು.    ಅದು ಮಾಮೂಲಿ ದೋಸೆ ಥರಾನೇ ಇದ್ದಿತು.   

" ಹೇಗೇ ಮಾಡಿದ್ದೂ ? "

" ಬೆಳ್ತಿಗೆ ಅಕ್ಕಿ ನುಣ್ಣಗೆ ಅರೆದು,  ಅದಕ್ಕೆ ಅನ್ನ ಹಾಕಿ ಪುನಃ ಅರೆಯುವುದು,  ಮಣ್ಣಿನ ಓಡು ಉಂಟಲ್ಲ, ಅದರಲ್ಲಿ ಎರೆದು..."

" ಓ, ಹಾಗೆಯಾ...." ಇದೂ ಅನ್ನದ ದೋಸೆ ಅನ್ನದೆ ವಿಧಿಯಿಲ್ಲ.  ಮಣ್ಣಿನ ಕಾವಲಿ ಬೇರೆ ಆಗಬೇಕು, ನನ್ನಂತವರಿಗಲ್ಲ ಅಂತ ಸುಮ್ಮನಾಗಬೇಕಾಯಿತು.   ಆದರೂ ನಮ್ಮ ಪಾಕತಜ್ಞೆ ಕಡಂಬಿಲ ಸರಸ್ವತಿ ಏನು ಬರೆದಿದ್ದಾರೇಂತ ಓದಿಕೊಂಡೆ.   ಬೆಳ್ತಿಗೆ ಅಕ್ಕಿ ಹಾಗೂ ಕುಚ್ಚಿಲು ಅಕ್ಕಿ ಸಮ ಪ್ರಮಾಣದಲ್ಲಿ ನುಣ್ಣಗೆ ಅರೆದು,  ಬಾಣಲೆಯಲ್ಲಿ ಎರೆದು... ಅಂತ.   ಅನ್ನ ಹಾಕುವ ಪ್ರಸ್ತಾವ ಇಲ್ಲಿಲ್ಲ.  ನೀರು ದೋಸೆ  ಥರಾನೇ ಇದು ಅಂತಾಯ್ತು.  ಮಾಮೂಲಿ ಕಾವಲಿಯಲ್ಲಿ ತೆಳ್ಳಗೆ ಎರೆಯುವ ಬದಲು ದಪ್ಪನಾಗಿ ಬೇಯಿಸುವಲ್ಲಿಗೆ ಇದು ಓಡುಪ್ಪಳೆ.  ಅದರಲ್ಲೂ ಮಣ್ಣಿನ ಬಾಣಲೆಯಾದರೆ ಒಂದು ತೆರನಾದ ಮಣ್ಣಿನ ಸುವಾಸನೆ.

ಈ ಥರ ದೋಸೆಗಳನ್ನು ಮಾಡಿಟ್ಟು ಬೆಲ್ವ ಹಾಕಿದ ತೆಂಗಿನಕಾಯಿಹಾಲಿನಲ್ಲಿ ನೆನೆಸಿಟ್ಟು ಸಿಹಿ ಓಡುಪ್ಪಳೆಗಳನ್ನು ತಿನ್ನಲು ರುಚಿಕರ.  ಸಿಹಿ ಬೇಕಿಲ್ಲದವರು ರಸಂ, ಕೂಟು, ಸಾರು,  ಕೊದ್ದೆಲ್ ಇತ್ಯಾದಿ ವ್ಯಂಜನಗಳನ್ನು ಬಳಸಬಹುದಾಗಿದೆ.

ಒಂದು ನಾಲಕ್ಕು ದಿನ ಕಳೆದಾಗ ನಮ್ಮತ್ತಿಗೆ ಊರಿಗೆ ಬಂದರು.  ಅವರೋ ಹಳೇ ಕ್ರಮದ ಅಡುಗೆಗಳನ್ನು ಬಲ್ಲವರು.

" ಅಯ್ಯೋ, ಓಡುಪ್ಪಳೆ ಗೊತ್ತಿಲ್ವಾ ನಿಂಗೆ ?  ಮುಂಚೆ ಅಪ್ಪಂಗೆ ದಿನಾ ಸಂಜೆ ಕಾಫಿಗೆ ಓಡುಪ್ಪಳೆಯೇ ಆಗ್ಬೇಕಿತ್ತು ಗೊತ್ತಾ ...."

" ಹೌದಾ,  ನಂಗೊತ್ತೇ ಇಲ್ಲ.. "  ಯಾವುದಕ್ಕೂ ನಮ್ಮತ್ತೆ ಮಣ್ಣಿನ ಪಾತ್ರೆಪರಡಿಗಳನ್ನು ನನ್ಕೈಲಿ ಮುಟ್ಟೋದಿಕ್ಕೆ ಬಿಟ್ರೆ ತಾನೇ...

"ಬೆಲ್ಲದ ಕಾಯಿಹಾಲು ಹಾಕಿ ಓಡುಪ್ಪಳೆ ತಿನ್ನುವ ಗೌಜಿ.... ಅತ್ತಿಗೆ ಭಾವುಕರಾದರು.   ನಾನು ಬಂದಾಗಲೇ ಮಾವ ಷುಗರ್ ಪೇಶೆಂಟ್ ಅಂತ ಹಾರಾಡ್ತಿದ್ರು.   ಯಾಕಾದ್ರೂ ನಾನು ಬೆಲ್ಲ ಹಾಕಿದ ಸಿಹಿತಿಂಡಿಗಳನ್ನು ಮಾಡಿ ಅವರ ಎದುರಿಗಿಡಲಿ?   ಮಾಡಲಿಕ್ಕೆ ಕಲಿಯದಿದ್ದುದೇ ಒಳ್ಳೆಯದಾಯಿತು.

ಹೊಸದಾಗಿ ಓಡುಪ್ಪಳೆ ಮಾಡಬಯಸುವವರಿಗೆ ಪುಕ್ಕಟೆ ಸಲಹೆ ಇಲ್ಲಿದೆ.

ಹೊಸದಾದ ಮಣ್ಣಿನ ಬಾಣಲೆ ಖರೀದಿಸಿದ್ದೀರಾ,  ಅಟ್ಟದಿಂದ ಕೆಳಗಿಳಿಸಿದ್ದೀರಾ,  ಏನೇ ಆಗಿರಲಿ,  ಚೆನ್ನಾಗಿ ತೊಳೆಯಿರಿ.  ಅಡುಗೆ ಎಣ್ಣೆ ಸವರಿ ಒಲೆಯ ಮೇಲೇರಿಸಿ ನೀರು ಕುದಿಸಿ.   ಇದು  ಸ್ವಚ್ಛಗೊಳಿಸುವ ಕ್ರಿಯೆ.   ಒಂದೆರಡು  ಬಾರಿ ಈ ಥರ ಮಾಡಿದಿರಾದರೆ ಈ ಮಣ್ಣಿನ ಕಾವಲಿ ಉಪಯೋಗಿಸಲು ಸಿದ್ಧ.

ಹಿಟ್ಟನ್ನು ಅರ್ಧ ಸೌಟು ಎರೆದು,  ಮುಚ್ಚಿ ಬೇಯಿಸಿ.  ಬೆಂದಾಗ ಬದಿಯಿಂದ ಏಳುತ್ತಾ ಬರುತ್ತದೆ.  ಇದನ್ನು ಕವುಚಿ ಮಗುಚಿ ಹಾಕಲಿಕ್ಕಿಲ್ಲ,  ಎಣ್ಣೆ ಯಾ ತುಪ್ಪ ಎರೆಯಲಿಕ್ಕೂ ಇಲ್ಲ.  ಬೆಂದ ಓಡುಪ್ಪಳೆಯನ್ನು ಬೆಲ್ಲ ಹಾಕಿದ ತೆಂಗಿನಕಾಯಿಹಾಲಿಗೆ ಹಾಕಿ ಬಿಡಬೇಕು. ಅರ್ಧ ಘಂಟೆ ಬಿಟ್ಟು ತಿನ್ನಬೇಕು.   Friday, 18 September 2015

ಚಿನ್ನ ಚಿನ್ನ ಹೂವೇ...
ಮುಂಜಾನೆಯ ದಿನಪತ್ರಿಕೆ ಓದುತ್ತಿದ್ದಾಗ,  ಈಗ ಏನಿದ್ರೂ ಇಂಟರ್ನೆಟ್ ಓದು ತಾನೇ...  ಒಂದು ಸುದ್ದಿ ಗಮನ ಸೆಳೆಯಿತು.   " ಅಡಿಕೆ ತೋಟಕ್ಕೆ ಮಾರಕ ಈ ಕಳೆ ಸಸ್ಯ " ಎಂಬ ಶೀರ್ಷಿಕೆಯಲ್ಲಿ ಸುದ್ದಿ ಇದ್ದಿತು.  ಪತ್ರಿಕಾವರದಿ ಓದಿ ಆಯ್ತು,  ಆದ್ರೇ ಅಡಿಕೆ ಮರಗಳೇ ಇರುವ ನಮ್ಮ ತೋಟದಲ್ಲಿ ಈ ಕಳೆ ಇಲ್ಲ!   ಪತ್ರಿಕೆ ಹಾಕಿರುವ ಚಿತ್ರದಲ್ಲಿ ಸಸ್ಯದ ಸೂಕ್ಷ್ಮ ವಿವರಗಳು ಗೊತ್ತಾಗುವಂತಿಲ್ಲ.  ಯಾವುದಕ್ಕೂ ತಿಳಿಯುವುದು ಸೂಕ್ತ ಎಂಬ ಅನಿಸಿಕೆಯಿಂದ ಸುದ್ದಿಯನ್ನು ಕತ್ತರಿಸಿ ಫೇಸ್ ಬುಕ್ ಅಂಗಣದ ಕೃಷಿಕರ ಗುಂಪು ಇರುವ ತಾಣ ( agriculturist ) ದಲ್ಲಿ ನನ್ನ ಸುದ್ದಿ ಬಂದಿಳಿಯಿತು,  ಆಸಕ್ತರ ಗಮನವನ್ನೂ ಸೆಳೆಯಿತು.   ಅಡಿಕೆ ಬೆಳೆಗಾರರಿಂದ ಪ್ರತಿಕ್ರಿಯೆಗಳೂ,  ಹೂವಿನ ವಿಧವಿಧವಾದ ಚಿತ್ರಗಳೂ ಬಂದುವು.  ಈ ಗಿಡದ ವೈಜ್ಞಾನಿಕ ವಿವರಗಳೂ ತಿಳಿದೇ ಹೋಯಿತು.  ಸಸ್ಯಶಾಸ್ತ್ರೀಯವಾಗಿ ಇದು Sphagneticola trilobata ಎಂಬ ಹೆಸರನ್ನೂ ಹೊಂದಿದೆ,  asteraceae ಕುಟುಂಬವಾಸಿ.

ಅಂತೂ ನಮ್ಮ ತೋಟದಲ್ಲಿ ಈ ಕಳೆ ಸಸ್ಯ ಇಲ್ಲವೆಂದು ಸುಮ್ಮನಾಗಬೇಕಿತ್ತು.   ಆದರೂ ಸಂಜೆಯ ವಾಕಿಂಗ್ ವೇಳೆ,  ಎದುರುಗಡೆ ಹೇಮಕ್ಕನ ಮನೆಯ ರಸ್ತೆ ಪಕ್ಕದಲ್ಲೇ ಇದೇ ಹಳದಿ ಹೂಗಳು ಚಾಪೆ ಹಾಸಿದಂತೆ ಸ್ವಾಗತಿಸಬೇಕೇ...  ಛೆ, ಕೈಯಲ್ಲಿ ಫೊಟೋ ತೆಗೆಯಲು ಬೇಕಾದ ಸಲಕರಣೆ ಇರಲಿಲ್ವೇ,  ಗೇಣುದ್ದದ ಹೂ ಬಳ್ಳಿಯೇ ಅಂಗಳದ ಮೂಲೆಯಲ್ಲಿ ವಿರಾಜಮಾನವಾಯಿತು.

ನನ್ನ ಚಟುವಟಿಕೆಗಳನ್ನು ಗಮನಿಸಿದ್ದ ನಮ್ಮೆಜಮಾನ್ರು  " ಯಾಕೇ ತಂದು ನೆಟ್ಟಿದ್ದೂ,  ತೋಟ ತುಂಬಾ ಹೂ ಆಗ್ಲೀ ಅಂತಾನಾ...?" 
" ಹಾಗೇನಾಗ್ತದೇ... ಇರಲಿ "

ಸೇವಂತಿಗೆ ಹೂವಿನಂತೆ ಕಂಡರೂ ಸುವಾಸನೆ ಇಲ್ಲ,  ಕೇವಲ ನಿರ್ಗಂಧ ಕುಸುಮ.  ಝೀನಿಯಾ ಹೂಗಳಂತೆ ಬೀಜದಿಂದ ಹಬ್ಬುವ ಜಾತಿಯೂ ಅಲ್ಲ,  ತುಂಡರಿಲ್ಪಟ್ಟ ಕಾಂಡಗಳೇ ತೇವಾಂಶಭರಿತ ಮಣ್ಣಿನಲ್ಲಿ ಅತಿವೇಗದಲ್ಲಿ ವೃದ್ಧಿಸುತ್ತವೆ,  ಬಿಸಿಲೂ ಇರುವಲ್ಲಿ ಹೂಗಳ ದಟ್ಟಣೆ ಜಾಸ್ತಿ.

ದ. ಅಮೆರಿಕಾ ಮೂಲದ ಸಸ್ಯ,  ಇದು ವಿದೇಶೀಯ ಹೂವು ಆಗಿರುವುದರಿಂದ ನಮ್ಮ ಆಯುರ್ವೇದ ಶಾಸ್ತ್ರ ರೀತ್ಯಾ ಯಾವುದೇ ಔಷಧೀಯ ಗುಣಗಣಗಳನ್ನು ಹೇಳುವಂತಿಲ್ಲ,  ಆದರೂ ಸೊಪ್ಪುಗಳನ್ನು ಅರೆದು ಗಾಯವಾದಲ್ಲಿ ಲೇಪ ಹಾಕಬಹುದೆಂದು ಆಫ್ರಿಕಾ ಬುಡಕಟ್ಟು ಜನರ ಸಂಶೋಧನೆ.    " ಅಕ್ಕಾ, ಕಮ್ಯೂನಿಷ್ಟ್ ಸೊಪ್ಪು (ಪಾರ್ಥೇನಿಯಂ ಕಳೆ ) ರಸ ತೆಗೆದು ಗಾಯಕ್ಕೆ ಹಾಕಿದ್ರಾಗ್ತದೆ " ಅಂದಿದ್ದಳು ಕಲ್ಯಾಣಿ!

ಮನೆಯಂಗಳದ ಅಲಂಕಾರಿಕ ಸಸ್ಯವಾಗಿ ಬೆಳೆಸುವ ಈ singapore daisy ಕ್ರಮೇಣ ಹೊರಗೆಸೆಯಲ್ಪಡುವ ಒಂದು ಕಳೆ ಸಸ್ಯ.   ಹೇಮಕ್ಕ ಮನೆಯಂಗಳದಿಂದ ಹೊರ ಬಿಸುಟಿದ್ದೂ, ರಸ್ತೆ ಪಕ್ಕ ಹಳದಿ ಹೂಗಳ ತೋಟ ನನಗೆ ಗೋಚರವಾಗಲೂ, ಕಾರಣ ಈಗ ತಿಳಿಯಿತಲ್ಲ!

ಚೌತಿ ಹಬ್ಬ ಮುಗಿಯುತ್ತಿದ್ದ ಹಾಗೆ, ನಮ್ಮ ಮನೆಯಂಗಳ ಸ್ವಚ್ಛಗೊಳಿಸುವ ಕ್ರಿಯೆ ಆರಂಭ.  ತೋಟದ ಅಡಿಕೆ ಒಣ ಹಾಕಲು ಅಂಗಳದ ಕಳೆ,  ಕಸಕಡ್ಡಿ  ಎಲ್ಲವೂ ಗೊಬ್ಬರದ ಗುಂಡಿಗೆ ಸೇರುವ ಕಾಲ ಬಂದಿದೆ,  ನಾನೂ ಪುಟ್ಟ ಪುಟ್ಟ ಹಳದಿ  ಹೂಗಳ ಫೊಟೋ ತೆಗೆದು ಇಟ್ಟೆ.


Friday, 11 September 2015

ಉಪ್ಪು ಸೊಳೆ ರೊಟ್ಟಿಮಳೆಗಾಲದ ಮುಂಜಾನೆಗೊಂದು ತಿಂಡಿಯ ಸೊಗಸು ಉಪ್ಪು ಸೊಳೆ ರೊಟ್ಟಿ.   ನಮ್ಮ ಮನೆ ಮಕ್ಕಳು ದಿನಾ ಮಾಡಿ ಕೊಟ್ರೂ ತಿನ್ತಿದ್ರು,  ರೊಟ್ಟಿ ಮೇಲೆ ಬೆಣ್ಣೆ,  ಜೊತೆಗಿಷ್ಟು ಹುಡಿಬೆಲ್ಲ ಇದ್ದರೆ ಸ್ವರ್ಗವೇ ಧರೆಗಿಳಿದು ಬಂದಂತೆ !

ರೊಟ್ಟಿ ಮಾಡಲು ಉಪ್ಪು ಸೊಳೆ ಹಾಕಿಟ್ಟಾಗಿದೆ,  ಎರಡು ಅಥವಾ ಮೂರು ಹಿಡಿ ಸೊಳೆಗಳನ್ನು ಉಪ್ಪಿನಿಂದ ತೆಗೆದು ನೀರಿನಲ್ಲಿ ಹಾಕಿರಿಸಲೇ ಬೇಕು,  ಮನೆಯ ಹಿಂಭಾಗದಲ್ಲಿ ಹರಿದು ಬರುತ್ತಿರುವ ನೀರಿನ ಕಾಲುವೆಯಲ್ಲಿ ಒಂದು ಬಟ್ಟೆಯಲ್ಲಿ ಗಂಟು ಕಟ್ಟಿ ನೀರಿನಲ್ಲಿ ಮುಳುಗಿಸಿಟ್ಟರೂ ನಡೆಯುತ್ತದೆ,  ಉಪ್ಪೆಲ್ಲವೂ ನೀರಿಗೆ ಬಿಟ್ಟುಕೊಳ್ಳಲೇ ಬೇಕು.
ಸೊಳೆಯಲ್ಲಿನ ಉಪ್ಪಿನ ಸಾಂದ್ರತೆಯೆಲ್ಲವೂ ತೊಳೆದು ಹೋಯಿತು,  ನೀರಿನಿಂದ ತೆಗೆದು ಬಸಿದು ಇಟ್ಟಾಯ್ತು.

ಅರ್ಧ ಕಡಿ ತೆಂಗಿನ ತುರಿ.
ಎರಡು ಲೋಟ ಅಕ್ಕಿ ಹುಡಿ.
ತುಸು ಜೀರಿಗೆ.
ರುಚಿಗೆ ಉಪ್ಪು ಬೇಡ, ತಿಳಿಯಿತಲ್ಲ.
ಮೊದಲು ಸೊಳೆಗಳನ್ನು ಅರೆಯುವುದು,  ಕಾಯಿತುರಿ, ಜೀರಿಗೆ ಕೂಡಿಕೊಂಡು ಪುನಃ ತಿರುಗಿಸಿ ತೆಗೆಯುವುದು.
ಅಕ್ಕಿ ಹುಡಿ ಹಾಕಿಕೊಳ್ಳುವುದು.
ಮುದ್ದೆಯಾದ ಹಿಟ್ಟಿನಿಂದ ಉಂಡೆಗಳನ್ನು ಮಾಡಿಕೊಳ್ಳುವುದು.
ಬಾಳೆ ಎಲೆಗೆ ಎಣ್ಣೆ ಸವರಿ,  ಉಂಡೆಯನ್ನು ಇಟ್ಟು ರೊಟ್ಟಿಮಣೆಯ ಸಹಾಯದಿಂದ ರೊಟ್ಟಿ ತಟ್ಟುವುದು.  ( ಕೈಯಲ್ಲೇ ತಟ್ಟಿಕೊಳ್ಳಲೂ ಬರುತ್ತದೆ )

ಉಪ್ಪು ಸೊಳೆ ಧಾರಾಳ ಇರುವುದಾದರೆ ಅಕ್ಕಿಹುಡಿ ಇಲ್ಲದೆಯೂ ರೊಟ್ಟಿ ಮಾಡಬಹುದಾಗಿದೆ.
ನೀರುಳ್ಳಿ,  ಹಸಿಮೆಣಸು,  ಕರಿಬೇವು,  ಶುಂಠಿ, ಕೊತ್ತಂಬರಿ ಸೊಪ್ಪು ಇತ್ಯಾದಿ ಹಾಕಲಡ್ಡಿಯಿಲ್ಲ.Wednesday, 2 September 2015

ಸಜ್ಜಿಗೆ ಇಡ್ಲಿ
ಪ್ರತಿದಿನವೂ ಅಕ್ಕಿಯಿಂದಲೇ ತಿಂಡಿಗಳನ್ನು ಮಾಡುತ್ತಿರಬಾರದು,   ವೈವಿಧ್ಯತೆ ಇರಬೇಕು,  ತಿನ್ನುವವರು  " ದಿನಾ ಮಾಡಿದ್ದನ್ನೇ ಮಾಡ್ತೀಯ "  ಎಂದು ಹೇಳುವಂತಿರಬಾರದು.  ಅದಕ್ನುಗುಣವಾಗಿಯೋ ಎಂಬಂತೆ ನಮ್ಮ ಹಿರಿಯರು ತಮ್ಮ ಧಾರ್ಮಿಕ ವಿಧಿವಿಧಾನಗಳಲ್ಲಿ ಹಲವಾರು ಕಟ್ಟುಪಾಡುಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ..  ವ್ರತ,  ಉಪವಾಸ ಇತ್ಯಾದಿಗಳ ಆಚರಣೆಯಲ್ಲಿ ಮುಂಜಾನೆ ಅಕ್ಕಿಯನ್ನು ಬಳಸಿ ತಿಂಡಿತಿನಿಸು ತಯಾರಿಸುವಂತಿಲ್ಲ.   ಆ ಹೊತ್ತು ಗೋಧಿಗೆ ಪ್ರಾಶಸ್ತ್ಯ.  ಗೋಧಿಯ ಯಾವುದೇ ರೂಪಾಂತರವೂ ಆದೀತು.  ಗೋಧಿಕಾಳುಗಳ ದೋಸೆ,  ಗೋಧಿ ಕಡಿಯ ಪಾಯಸ,  ಗೋಧಿ ರವೆಯ ಉಪ್ಪಿಟ್ಟು ಅಥವಾ ಇಡ್ಲಿ,  ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು.

ಇಡ್ಲಿಗಳಲ್ಲಿ ನೂರಾರು ವಿಧ.   ಈ ದಿನ ಸಜ್ಜಿಗೆ ಇಡ್ಲಿ ಮಾಡೋಣ.    ಸಜ್ಜಿಗೆಯಲ್ಲೂ ಬೇರೆ ಬೇರೆ ನಮೂನೆಗಳು,   ಮಾಮೂಲಿ ಸಜ್ಜಿಗೆ ಉಪ್ಪಿಟ್ಟು ಮಾಡಲಿಕ್ಕೆ ನಾನು ಕೊಳ್ಳುವುದು ಮೀಡಿಯಂ ರವಾ ಅಂತ ಬರೆದಿರುವ ಪ್ಯಾಕೆಟ್ಟು.

" ಸಜ್ಜಿಗೆ ಅಂದ್ರೇನ್ರೀ... ?"
ಅಕ್ಕಿ ರವೆಯಿಂದ ಉಪ್ಪಿಟ್ಟೂ,  ಇಡ್ಲಿ ಮಾಡ್ತೀವಲ್ಲ,  ಅದೇ ಥರ ಗೋಧಿ ರವೆ ಕೂಡಾ ಮಾರುಕಟ್ಟೆಯಲ್ಲಿ ಸಿಗುತ್ತದೆ,  ಇದನ್ನೇ ನಮ್ಮ ಕರಾವಳಿ ಕನ್ನಡಿಗರು ಸಜ್ಜಿಗೆ ಅನ್ನೂದು.  ಸಜ್ಜಿಗೆಯಲ್ಲೂ ದೊಡ್ಡ ಸಜ್ಜಿಗೆ,  ಬಾಂಬೇ ಸಜ್ಜಿಗೆ,  ಗೋಧಿನುಚ್ಚು ಅಥವಾ ಗೋಧಿಕಡಿ ಹೀಗೆಲ್ಲ ವೈವಿಧ್ಯಗಳಿವೆ.   ಈಗ ನಾವು ಮಧ್ಯಮ ಗಾತ್ರದ ಸಜ್ಜಿಗೆಯನ್ನು ಆಯ್ದುಕೊಂಡಿದ್ದೇವೆ.

ಈ ಇಡ್ಲಿಗೆ ಏನೇನು ಬೇಕು ?
ಒಂದು ಕುಡ್ತೆ ಉದ್ದು,  
ಎರಡೂವರೆ ಕುಡ್ತೆ ಸಜ್ಜಿಗೆ.

" ಕುಡ್ತೆ ಅಂದ್ರೇನ್ರೀ...?"
ಕುಡ್ತೆ ಅಂದ್ರೆ ಒಂದು ಅಳತೆಯ ಪ್ರಮಾಣ,  ಪಾವು,  ಸೇರು, ಕಳಸಿಗೆ, ಮುಡಿ...  ಈ ಥರ ಕುಡ್ತೆಯ ಅಳತೆ ಪುಟ್ಟ ಗಾತ್ರದ ಒಂದು ಲೋಟ ಅಂತಿಟ್ಕೊಳ್ಳಿ.  ಮಾಮೂಲಿಯಾಗಿ ಒಂದು ಕಪ್ಪು ಸಜ್ಜಿಗೆ,  ಇನ್ನೊಂದು ಕಪ್ಪು ಉದ್ದೂ ಅಂತ ಬರೆಯೋ ಬದಲು ಅಚ್ಚಗನ್ನಡದಲ್ಲಿ ಬರೆದಿದ್ದೇನೆ ಅಷ್ಟೇ.

ಆಯ್ತಾ,  ಈಗ ಉದ್ದು ನೆನೆ ಹಾಕಿಟ್ಟಿರಿ.   ಅರ್ಧ ಘಂಟೆ ಬಿಟ್ಟು ತೊಳೆದು ಅರೆಯಿರಿ.  ಅರೆದ ಹಿಟ್ಟನ್ನು  ತಪಲೆಗೆ ವರ್ಗಾಯಿಸಿ.  ಸಜ್ಜಿಗೆಯನ್ನೂ ನೀರು ಕೂಡಿಸಿ, ( ಹುರಿಯುವ ಅಗತ್ಯವಿಲ್ಲ )  ಉದ್ದಿನ ಹಿಟ್ಟಿನೊಂದಿಗೆ ಬೆರೆಸುವುದು.  ರುಚಿಕಟ್ಟಲು ಉಪ್ಪುಹಾಕಿ ಮುಚ್ಚಿಟ್ಟು, ಹುದುಗು ಬರಲು ಎಂಟು ಘಂಟೆಗಳ ಕಾಲ ಬಿಡಬೇಕಾದ್ದು ಕಡ್ಡಾಯ.

 ಚೆನ್ನಾಗಿ ಹುದುಗಿದಂಥ ಹಿಟ್ಟು  ದೊರೆಯಿತೇ,  ಇಡ್ಲಿ ಪಾತ್ರೆ ಯಾ ಅಟ್ಟಿನಳಗೆ ಒಲೆಗೇರಲಿ.   ನೀರು ಕುದಿಯಲಿ,   ಒಂದೊಂದೇ ಸೌಟು ಹಿಟ್ಟನ್ನು ಇಡ್ಲಿ ಬಟ್ಟಲುಗಳೊಳಗೆ ತುಂಬಿಸಿ,  ಹತ್ತರಿಂದ ಹನ್ನೆರಡು ನಿಮಿಷಗಳ ಕಾಲ  ಬೇಯಿಸಿ,  ಬೇಗನೇ ಮಾಡಬಹುದಾದ ತಿನಿಸು ಇದಾಗಿದೆ.  ತೆಂಗಿನ ಚಟ್ಣಿಯೊಂದಿಗೆ ಸವಿಯಿರಿ.


ಸಜ್ಜಿಗೆ ಇಡ್ಲಿಗೆ ಸೂಕ್ತವಾದ ಚಟ್ಣಿ ಯಾವುದು?
ಚಟ್ಣಿಯಲ್ಲಿ ನೀರುಳ್ಳಿ,  ಬೆಳ್ಳುಳ್ಳಿಗಳ ಬಳಕೆ ಸಾಮಾನ್ಯ.   ಆದರೆ ವ್ರತ ಪೂಜಾದಿಗಳ ಎಡೆಯಲ್ಲಿ ನೀರುಳ್ಳಿ,  ಬೆಳ್ಳುಳ್ಳಿಗಳನ್ನು ಯಾವುದೇ ಅಡುಗೆಯಲ್ಲಿ  ಬಳಸುವಂತಿಲ್ಲ.  ಸಾಂಬಾರ್ ಮಾಡುವುದಿದ್ದರೂ ನೀರುಳ್ಳಿ ಯಾ ಬೆಳ್ಳುಳ್ಳಿ ಹಾಕುವಂತಿಲ್ಲ.

ಶುಂಠಿ,  ಮಾವಿನಕಾೖ ಯಾ ಮಾವಿನಶುಂಠಿ,  ಹಸಿಮೆಣಸು ಯಾ ಒಣಮೆಣಸಿನೊಂದಿಗೆ ತೆಂಗಿನತುರಿ ಅರೆದು ತಯಾರಿಸಿದ ಚಟ್ಣಿ ಶ್ರೇಷ್ಠ.  ಅರೆಯುವಾಗ ಕೊತ್ತಂಬ್ರಿ ಸೊಪ್ಪು ಧಾರಾಳವಾಗಿ ಹಾಕಿದಲ್ಲಿ ಚಟ್ಣಿಯ ರುಚಿ ಹಾಗೂ ಪರಿಮಳ ಇಮ್ಮಡಿಸುವುದು,  ಕೊನೆಯದಾಗಿ ಒಗ್ಗರಣೆ ಮರೆಯುವಂತಿಲ್ಲ,  ಕರಿಬೇವು ಬಿಡುವಂತಿಲ್ಲ. 
ಟಿಪ್ಪಣಿ:  ಸದಭಿರುಚಿಯ ಮಾಸಪತ್ರಿಕೆ  'ಉತ್ಥಾನ'ದ ಆಗಸ್ಟ್ , 2015 ರ ಸಂಚಿಕೆಯಲ್ಲಿ ಪ್ರಕಟಿತ.

Friday, 21 August 2015

ಭಾವಚಿತ್ರ - ಅನಾವರಣ" ಅಪ್ಪನ ಫೊಟೋ ಬೇಕಂತಲ್ಲ ಲೈಬ್ರರಿಗೇ..."
" ಯಾಕೇ... ?" ಪ್ರಶ್ನೆ ಎಸೆದೆ.
" ಲೈಬ್ರರಿ ಸ್ಥಾಪನೆ ಆಗಿ 60 ವರ್ಷ ಆದ ಲೆಕ್ಕದಲ್ಲಿ ....."
" ಓ,  ಹಾಗೋ.... ಹಳೇ ಆಲ್ಬಂ ಹುಡುಕಿದರಾಯ್ತು ",  ಅನ್ನುತ್ತಿದ್ದಂತೆ ನೆನಪಾಯಿತು,  " ಮಾವ ಪುಸ್ತಕ ಹಿಡಿದು ಓದುತ್ತಾ ಇರೋ ಚಿತ್ರ ಇದೇ..."
" ಹೌದ,  ಲೈಬ್ರರಿಗೆ ಅದೇ ಚೆನ್ನ " ಅಂದ್ರು ನಮ್ಮೆಜಮಾನ್ರು.

ಆಲ್ಬಂಗಳನ್ನು ತಪಾಸಣೆಗೊಳಪಡಿಸಿದಾಗ ಉದ್ದೇಶಿತ ಭಾವಚಿತ್ರ ಸಿಕ್ಕಿತಾದರೂ,  ಯಾರೋ ಅಜ್ಜನ ಮೊಮ್ಮಕ್ಕಳು ಅಜ್ಜನ ಬೆಳ್ಳಗಿನ ಅಂಗಿ ಮೇಲೆ ಏನೋ ಕಲೆ ಮಾಡ್ಬಿಟ್ಟಿದ್ದಾರೇ,  ಅದೂ ಅಲ್ಲದೆ ಚಿತ್ರವೂ ಕಪ್ಪು ಬಿಳುಪಿನದು.
" ಫೊಟೋ ಚೆನ್ನಾಗಿದೆ,  ಕಲೆ ತೆಗೆಯಬಹುದಲ್ಲ "
" ಹ್ಞೂ, ತೆಗೆಯಬಹುದು " ಫೊಟೋ ಎಡಿಟಿಂಗ್ ಆ್ಯಪ್ ಮೂಲಕ, ಹಿಂದೊಮ್ಮೆ ನನ್ನಜ್ಜ ಕುಕ್ಕಿಲ ಕೃಷ್ಣ ಭಟ್ಟರ ಮೇಲೆ ಆಗಿದ್ದ ಶಾಯಿಕಲೆಯನ್ನು ಅಳಿಸಲು ಸಾದ್ಯವಾಗಿತ್ತು.

ಈ ಪಟ್ಟಾಂಗ ಆಗಿ ಕೆಲವೇ ದಿನಗಳಲ್ಲಿ ನಮ್ಮ ಕುಟುಂಬವರ್ಗ ಒಂದೆಡೆ ಅಂದ್ರೆ ನಮ್ಮನೆಯಲ್ಲಿ ಕಲೆಯುವ ಸಂದರ್ಭ ಒದಗಿ ಬಂತು.  ಯಥಾಪ್ರಕಾರ ಅಪ್ಪನ ಫೊಟೋ ಮಾತಿಗೆ ವಸ್ತುವಾಯಿತು.
" ಫೊಟೋ ಕಟ್ಟು ಹಾಕಿದ್ದೇ ಇದೆ, ಅದೂ ಮಾವ ಮಲಗುತ್ತಿದ್ದ ಉಗ್ರಾಣ*ದಲ್ಲೇ ನೇತಾಡುತ್ತಿದೆಯಲ್ಲ " ಎಂದಳು ನಮ್ಮನೆ ಹಿರಿಯಕ್ಕ.  " ಅದೂ ಹಾಳಾಗುವ ಸ್ಥಿತಿಗೆ ಬಂದಿದೆ "
*ಉಗ್ರಾಣ  =  ಕೋಣೆ, room.

ಸಂಜೆಯಾಗುತ್ತಲೂ ಚಿತ್ರಪಟ ಹಿಡಿದುಕೊಂಡು ನಮ್ಮಕ್ಕ ಬಂದಳು.
" ನೋಡೇ ನಮ್ಮಪ್ಪನ ಪಟ ಬಂತು, ಒಂದು ಇಮೇಜ್ ತೆಗೆದಿಡು..." ನಮ್ಮೆಜಮಾನ್ರ ಹುಕುಂ.
ಕೈಯಲ್ಲಿದ್ದ iPad Air 2  ಫೊಟೋ ಕ್ಲಿಕ್ಕಿಸಿ ಕೊಟ್ಟಿತು.  ಅಕ್ಕ ಅಂದಂತೆ ಚಿತ್ರದ ಹಿನ್ನಲೆ ತೀರಾ ಕೆಟ್ಟು ಹೋಗಿತ್ತು.   ಪೂರಕವಾಗಿ ಇನ್ನೊಂದು ಹಿನ್ನಲೆ ಚಿತ್ರ ಇದ್ದರೆ super imposing ಮಾಡಬಹುದು,  ಇದು ನನ್ನ ತರ್ಕ.

" ಇನ್ನೊಂದು ಬ್ಯಾಗ್ರೌಂಡ್ ಫೊಟೋ ಸಿಲೆಕ್ಟ್ ಮಾಡು..."
" ಆಯ್ತು,  ಈ ಟೇಬಲ್ ಮೇಲಿರೋ ಲ್ಯಾಪ್ಟಾಪ್ ಆದೀತು.." ಮಿರಮಿರನೆ ಮಿಂಚುತ್ತ ಇದ್ದಿತು ಆ ಆ್ಯಪಲ್ MacBook !
ಫೊಟೋ ಎಡಿಟಿಂಗ್ ಆ ಕೂಡಲೇ ಶುರು ಮಾಡಿದ್ದೂ ಆಯಿತು.  2 ನಿಮಿಷದಲ್ಲಿ ನಮ್ಮ ಮಾವನವರು ಹೊಸ ಗೆಟಪ್ ನಲ್ಲಿ ಪ್ರತ್ಯಕ್ಷ ಆಗ್ಬಿಟ್ರು.

ಅಂತೂ ನನ್ನ ಕೆಲಸ ಮುಗಿಯಿತೇ,  ಛೇ ... ಇಲ್ಲಾಪ್ಪ.  ಜಾಣಾತಿಜಾಣರಾದ ಮೊಮ್ಮಕ್ಕಳಿಗೆ ಅವರಜ್ಜನನ್ನು ತೋರಿಸದಿದ್ದರೆ ಹೇಗಾದೀತು?  ಮಂಗಳೂರು, ಬೆಂಗಳೂರು ನಗರಗಳಲ್ಲಿ ಸ್ವತಂತ್ರ ಉದ್ಯೋಗಿಗಳೂ, ಸಾಪ್ಟ್ ವೇರ್ ತಂತ್ರಜ್ಞರೂ ಆಗಿರುವ ಅಜ್ಜನ ಮುದ್ದಿನ ಕಂದಮ್ಮಗಳ ಕೈಲಿ  "ಭಲೇ" ಎಂದು ಶಿಫಾರಸ್ಸು ಆ ಕೂಡಲೇ ಬಂದೇ ಬಂದಿತು.

ಇವಿಷ್ಟೂ ಕೆಲ್ಸ ಆಯ್ತಲ್ಲ,  ಮಾವ ಹಿರಣ್ಯ ಗಣಪತಿ ಭಟ್, ಊರಿಗೇ ದೊಡ್ಡ ಜಮೀನ್ದಾರರು ಮಾತ್ರವಲ್ಲ ಗ್ರಾಮದ ಏಳಿಗೆಗಾಗಿ ಶ್ರಮಿಸಿದವರೂ ಹೌದು,  ಕೊಡುಗೈದಾನಿಗಳೂ ಆದ ಅವರು  " ದೇಹಿ " ಎಂದು ಬಂದವರಿಗೆ ಇಲ್ಲವೆಂದವರಲ್ಲ.  'ಈ ಕೈಯಲ್ಲಿ ಕೊಟ್ಟಿದ್ದು ಆ ಕೈಗೆ ತಿಳಿಯಬಾರದು' ಇಂತಹ ನೀತಿಯಲ್ಲಿ ಬದುಕಿದವರು.  

ಬಾಯಾರು ಗ್ರಾಮದ ಮುಳಿಗದ್ದೆಯಲ್ಲಿರುವ ಹೆದ್ದಾರಿ ಶಾಲೆ,  ಈ ಶಾಲೆ ಶತಮಾನೋತ್ಸವವನ್ನೂ ಕಂಡಿದೆ.  ಶಾಲೆಯ ಹಳೆವಿದ್ಯಾರ್ಥಿಗಳ ಕೂಟದಿಂದ ಸ್ಥಾಪಿತವಾದದ್ದು  " ಹೆದ್ದಾರಿ ಶಾಲಾ ಮಿತ್ರಮಂಡಳಿ ಗ್ರಂಥಾಲಯ ಹಾಗೂ ವಾಚನಾಲಯ "

ವಾಚನಾಲಯ ಅಂದ್ರೇ ಲೈಬ್ರರಿ ಸ್ಥಾಪಿತವಾದ ಅರುವತ್ತು ವರ್ಷಗಳ ನೆನಪಿಗಾಗಿ ಒಂದು ಕಾರ್ಯಕ್ರಮವನ್ನೂ ಹಮ್ಮಿಕೊಂಡು,  ಹಿರಿಯರ ನೆನಪನ್ನು ಲೈಬ್ರರಿಯಲ್ಲಿ ಶಾಶ್ವತವಾಗಿರಿಸುವ ಯೋಜನೆಗಾಗಿ ಭಾವಚಿತ್ರದ ಅನಾವರಣವೂ ಸೇರಿದೆ.   ವಿಷಯ ಏನಪ್ಪಾಂದ್ರೆ,  ಪುಸ್ತಕಪ್ರೇಮಿಗಳಾದ ಹಿರಣ್ಯ ಗಣಪತಿ ಭಟ್,  ತಮ್ಮಲ್ಲಿದ್ದ ಅಮೂಲ್ಯ ಪುಸ್ತಕ ಸಂಗ್ರಹ,  ಅದೂ ಸುಮಾರು ಐದು ಸಾವಿರಕ್ಕೂ ಮೇಲ್ಪಟ್ಟು ಪುಸ್ತಕಗಳು ಇದ್ದುವಂತೆ,  ಲೈಬ್ರರಿಗೆ ಉದಾರವಾಗಿ ದೇಣಿಗೆ ಕೊಟ್ಟಿರುತ್ತಾರೆ.
ಐವತ್ತರ ದಶಕದಲ್ಲಿ ಕುಗ್ರಾಮವಾಗಿದ್ದ ನಮ್ಮ ಬಾಯಾರು ಮುಳಿಗದ್ದೆ,  ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಹೋಗುವುದಿರಲಿ,  ಅರೆಹೊಟ್ಟೆ ಉಣ್ಣುತ್ತಿದ್ದ ರೈತಮಕ್ಕಳಿಗೂ,  ಸರ್ಕಾರೀ ಅಧಿಕಾರಿಗಳಿಗೂ,  ಕಲಾಸೇವೆಗೈಯುತ್ತಿದ್ದ ಯಕ್ಷಗಾನ ಮೇಳಗಳಿಗೂ ಹಿರಣ್ಯ ಗಣಪತಿ ಭಟ್ಟರ ಮನೆಯೇ ಆಶ್ರಯತಾಣವಾಗಿತ್ತು.   ಹಿರಣ್ಯಮನೆಯಲ್ಲಿ ಏನೇ ವಿಶೇಷ ಹಬ್ಬ ಹರಿದಿನ ಬಂದರೂ ಆ ದಿನ ಹೆದ್ದಾರಿ ಶಾಲೆಗೆ ಅಘೋಷಿತ ರಜೆ !

ಭಾನುವಾರ  ಬಂದಿತು,  ಎಂದಿನಂತೆ ಮನೆಕೆಲಸಗಳಲ್ಲೇ ತೊಡಗಿಸಿಕೊಂಡಿದ್ದ ನನ್ನನ್ನು  " ಹತ್ತು ಗಂಟೆಯ ಚಹಾ ಲೈಬ್ರರಿಯಲ್ಲೇ ಕುಡಿಯೋಣ " ಅಂದು ಅಡುಗೆಮನೆಯಿಂದ ಹೊರಗೆಳೆದಳು ಮಗಳು.  " ಹೌದಲ್ವೇ,  ಭಾವಚಿತ್ರ ಅನಾವರಣ ಕಂಡ ಹಾಗೂ ಆಯ್ತು "  ಹೊರಟು ಸಭೆಯಲ್ಲಿ ಲಕ್ಷಣವಾಗಿ ಕೂತಿದ್ದೂ ಆಯಿತು.
ನಾನು ಒಳ ಬಂದ ಹೊತ್ತಿಗೆ ಡಾ. ತಾಳ್ತಜೆ ವಸಂತಕುಮಾರ ಉದ್ಘಾಟನಾ ಭಾಷಣ ಆರಂಭಿಸಿದ್ದರು.   ನಮ್ಮ ಕುಟುಂಬದವರಾದ ತಾಳ್ತಜೆ ವಸಂತಕುಮಾರ,  ಬಾಯಾರು ಗ್ರಾಮದ ಇದೇ ಹೆದ್ದಾರಿ ಶಾಲೆಯಲ್ಲಿ ಕಲಿತ ತಮ್ಮ ನೆನಪಿನ ಬುತ್ತಿಗಳನ್ನು ಬಿಚ್ಚಿಟ್ಟರು.

ಹೆದ್ದಾರಿ ಶಾಲೆಯ ವಿದ್ಯಾಭ್ಯಾಸದಿಂದ ತೊಡಗಿ, ಯಕ್ಷಗಾನ ನಾಟಕಗಳ ಕಲಿಯುವಿಕೆಯ ವಿಸ್ತಾರ ನಮ್ಮ ಹಳ್ಳಿ ಶಾಲೆಯದ್ದು,  ಇದಕ್ಕೆಲ್ಲ ಸಾಥ್ ಕೊಟ್ಟಿದ್ದು ಹೆದ್ದಾರಿ ಶಾಲಾ ಮಿತ್ರಮಂಡಳಿ.

ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ. ಬಿ. ಎಸ್.ರಾವ್,  ಕಾಸರಗೋಡಿನ ಖ್ಯಾತ ಹೃದಯತಜ್ಞ ವೈದ್ಯರೂ ಆಗಿರುವ ಇವರು ಕೂಡಾ ಶಾಲಾ ವ್ಯಾಸಂಗ ಮಾಡಿದ್ದು ಇದೇ ಹಳ್ಳಿ ಶಾಲೆಯಲ್ಲಿ.  ಲೈಬ್ರರಿಯ ಬಗ್ಗೆ ಮಾತನಾಡುವಾಗ ತುಸು ವಿಷಾದದ ಛಾಯೆಯೂ ಅವರಲ್ಲಿತ್ತು,  ಡಿಜಿಟಲ್ ಲೈಬ್ರರಿಯ ಕನಸು ಅವರ ಕಂಗಳಲ್ಲಿತ್ತು.

ಊರಿನ ಹಿರಿಕಿರಿಯರನೇಕರಿಗೆ ಸನ್ಮಾನವೂ ದೊರೆಯಿತು,  ಪುಸ್ತಕಪ್ರೇಮಿಗಳಿಂದ ಲೈಬ್ರರಿಗೆ ಉದಾರವಾಗಿ ಪುಸ್ತಕಗಳೂ ಬಂದವು.  ಮದ್ಯಾಹ್ನದ ಹೊತ್ತು,  ಭೋಜನ ವಿರಾಮ.   ಅಂತೂ ಚಹಾ ಕುಡಿಯ ಬಂದವಳಿಗೆ ಭೂರಿಭೋಜನವೂ ಸಿಕ್ಕಿತೆಂದು ಬೇರೆ ಹೇಳಬೇಕಿಲ್ಲ ತಾನೇ...   ಅನ್ನ, ಸಾರು, ಪಲ್ಯ, ಗಸಿ, ಸಾಂಬಾರ್, ಮಜ್ಜಿಗೆ,  ಉಪ್ಪಿನಕಾೖ,  ಕಡಲೆಬೇಳೆ+ಸಬ್ಬಕ್ಕಿ ಪಾಯಸ, ಲಡ್ಡೂ !   ನನ್ನನ್ನು ಚಹಾ ಕುಡಿದು ಬರಲು ಕಳುಹಿಸಿದ ಮಗಳು ಊಟದ ಸಮಯದಲ್ಲಿ ಬಂದು ಕೂತಿದ್ದಳು !   ಅವಳೂ ಕಲಿತದ್ದು ಇದೇ ಶಾಲೆಯಲ್ಲಿ ಅಲ್ವೇ. 

"ಹೌದೂ, ನೀನು ಬಂದಿದ್ದೀ...  ಚೆನ್ನಪ್ಪನಿಗೆ ಊಟ ಕೊಟ್ಟು ಬಂದಿದ್ದೋ ಹೇಗೇ ?"
" ಅವನಿಗೂ ಇಲ್ಲಿಗೆ ಬರಲು ಹೇಳಿದ್ದೇನೆ " ಎಂದಳು ನಮ್ಮ ಜಾಣೆ.

ಊಟದ ತರುವಾಯ ಸಾಂಸ್ಕತಿಕ ಕಾರ್ಯಕ್ರಮ,  ಶಾಲಾ ಮಕ್ಕಳ ಯಕ್ಷಗಾನ - ಗಧಾಯುದ್ಧ.ಟಿಪ್ಪಣಿ: 29/8/2015ರಂದು ಸೇರಿಸಿದ ಉದಯವಾಣಿ ದಿನಪತ್ರಿಕೆಯ ವರದಿ.