Pages

Ads 468x60px

Friday, 27 January 2012

ಬೀಂಬುಳಿ.......ಬಹಳ ಹುಳಿ ಹುಳಿ


" ಅದ್ಯಾವ ಹಣ್ಣು ಸ್ವಾಮೀ, ಅಲ್ಲಿ ಕಾಣಿಸ್ತಿರೋದು " ಮನೆಗೆ ಬಂದ ಅತಿಥಿಯ ಪ್ರಶ್ನೆ.

ಮನೆಯಂಗಳದಲ್ಲಿ ಪೊಗದಸ್ತಾಗಿ ಬೆಳೆದು ನಂತಿದ್ದ ಮರದಲ್ಲಿ ಅಡಿಯಿಂದ ಮುಡಿಯವರೆಗೆ ಹಣ್ಣುಗಳ ಅಲಂಕರಣ.

" ಓ, ಅದಾ, ಬೀಂಬುಳಿ ಹಣ್ಣು. ಬರೇ ಹುಳಿ ಹುಳಿ "

" ನಾನು ನೋಡಿಯೇ ಇಲ್ಲ " ಎನ್ನುತ್ತಾ ಆ ಆಸಾಮಿ ಮರದಿಂದ ಹೀಚುಕಾಯಿಗಳನ್ನು ಕಿತ್ತು ತಂದರು. " ಚಿಕ್ಕ ಸೌತೆಕಾಯಿಯಂತಿದೆ, ಉಪ್ಪು ಹಾಕಿ ತಿನ್ನೋಣ " ತಿಂದಿದ್ದೂ ತಿಂದಿದ್ದೇ. ಮರದಿಂದ ಉದುರಿ ಹಾಳಾದರೂ ಕೇಳುವವರಿಲ್ಲದ ಈ ಹಣ್ಣನ್ನು ಆ ಪ್ಯಾಟೇ ಮಂದಿ ಆಸೆಯಿಂದ ತಿಂದು, ಚೀಲ ತುಂಬ ಕೊಂಡೂ ಹೋದರು.

" ನಾವ್ಯಾಕೆ ಇದನ್ನು ಉಪಯೋಗಿಸ್ತಾ ಇಲ್ಲ ?"

" ಉಪ್ಪಿನಕಾಯಿ ಸ್ವಲ್ಪ ಹಾಕೋಣ "
ಹದವಾಗಿ ಬಲಿತ ಬೀಂಬ್ಳಿಗಳನ್ನು ಉದ್ದವಾಗಿ ನಾಲ್ಕು ತುಂಡು ಮಾಡಿ, ಒಂದು ಪಿಂಗಾಣಿ ಪಾತ್ರೆಯಲ್ಲಿ ಹಾಕಿಡಿ. ಸ್ಟೀಲು, ಅಲ್ಯುಮೀನಿಯಂ ಬೇಡ. ವಿಟಮಿನ್ ಸಿ ಅತ್ಯಧಿಕವಿರುವುದರಿಂದ ಪಾತ್ರೆ ಕಪ್ಪಗಾದೀತು. ಅಂದಾಜು 3 ಕಪ್ ಹೋಳುಗಳು ಸಾಕು.

3 ದೊಡ್ಡ ಚಮಚ ಸಾಸಿವೆ
1 ದೊಡ್ಡ ಚಮಚ ಕೊತ್ತಂಬರಿ ಕಾಳು
1 ಸಣ್ಣ ಚಮಚ ಜೀರಿಗೆ

ಇಷ್ಟನ್ನು ಸ್ವಲ್ಪ ಎಣ್ಣೆ ಪಸೆ ಮಾಡಿ ಹುರಿಯಿರಿ. ಸಾಸಿವೆ ಚಟಪಟ ಹೇಳುವಾಗ ಇಳಿಸಿ.

ಸ್ವಲ್ಪ ಇಂಗು
1 ಚಿಕ್ಕ ಚಮಚ ಅರಸಿನಹುಡಿ ಹಾಕಿ ಚೆನ್ನಾಗಿ ಮಗುಚಿ.
3 ದೊಡ್ಡ ಚಮಚ ಪುಡಿ ಉಪ್ಪು ಸೇರಿಸಿ.
ಇನ್ನೊಮ್ಮೆ ಒಲೆಯ ಮೇಲಿಟ್ಟು ತೆಗೆಯಿರಿ.

ಈ ಮಸಾಲೆ ಆರಿದ ನಂತರ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಈಗ ತಯಾರಾದ ಹುಡಿಗೆ ನಾವು ಮೆಣಸು ಹಾಕಿಲ್ಲ. ತರಾವರಿಯ ಉಪ್ಪಿನಕಾಯಿ ಮಿಕ್ಸ್ ಸಿಗುತ್ತವೆ. ಒಂದು ಪ್ಯಾಕ್ ತನ್ನಿ. ಅದರಲ್ಲಿ 4 ದೊಡ್ಡ ಚಮಚ ಅಳೆದು ಈಗ ತಯಾರಾದ ಹುಡಿಗೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿಮ್ಮದೇ ಕೈ ರುಚಿಯ ಈ ಸ್ಪೆಶಲ್ ಮಸಾಲೆಯನ್ನು ಬೀಂಬ್ಳಿ ಹೋಳುಗಳಿಗೆ ಬೆರೆಸಿ ಗಾಜಿನ ಭರಣಿಯಲ್ಲಿ ತುಂಬಿಸಿ ಮುಚ್ಚಿ ಇಡಿ. ಬೇಕಿದ್ದರೆ ಎಳ್ಳೆಣ್ಣೆಯಲ್ಲಿ ಬೆಳ್ಳುಳ್ಳಿ ಹುರಿದು ಹಾಕಬಹುದು. ಅರ್ಧ ಗಂಟೆ ಬಿಟ್ಟು ಉಪಯೋಗಿಸಿ. ಕುಚ್ಚಿಲಕ್ಕಿ ಗಂಜಿಯೂಟಕ್ಕೆ ಈ ಉಪ್ಪಿನಕಾಯಿ ಸವಿದು ನೋಡಿ. " ವಾರೆವ್ಹಾ...... ನನ್ನಮ್ಮನಿಗಿಂತಲೂ ಚೆನ್ನಾಗಿ ನಾನು ಮಾಡಬಲ್ಲೆ " ಎಂದು ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳುತ್ತೀರ. ನನಗಂತೂ ನನ್ನಮ್ಮ ಹೇಳಿಕೊಟ್ಟಿದ್ದು. ಅವರು ನೆರೆಮನೆಯ ಗೌಡಸಾರಸ್ವತ ಸ್ನೇಹಿತೆಯಿಂದ ಕಲಿತದ್ದು.

ನಮ್ಮ ಕರಾವಳಿಯ ಕೊಂಕಣಿಗರು ಬೀಂಬ್ಳಿಯ ವೈವಿಧ್ಯಮಯ ಅಡುಗೆ ಬಲ್ಲವರು. ಅವರ ಮನೆಹಿತ್ತಿಲುಗಳಲ್ಲಿ ಬೀಂಬ್ಳಿಮರ ಇದ್ದೇ ಇರುತ್ತದೆ. ನೀರಿನಾಶ್ರಯವಿದ್ದಲ್ಲಿ ಯಾವಾಗಲೂ ಫಲ ಕೊಡುತ್ತಿರುತ್ತದೆ. ಒಂದು ಬೇಳೆಸಾರು, ತೊವ್ವೆ ಮಾಡಬೇಕಾದರೂ ಮರದಿಂದ ನಾಲ್ಕು ಬೀಂಬ್ಳಿ ಕಿತ್ತು ತಂದರಾಯಿತು. ಹೇಗೆ ಅಂತೀರಾ ?

4 ಬೀಂಬ್ಳಿಗಳನ್ನು ಹೋಳು ಮಾಡಿ ನೀರಿನಲ್ಲಿ ಹಾಕಿಡಿ, ಇದು ಹುಳಿ ಕಡಿಮೆ ಮಾಡಲು.
ಅವಶ್ಯವಿದ್ದಷ್ಟು ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ.
2 ನೀರುಳ್ಳಿ, ತುಂಡು ಶುಂಠಿ ಸಣ್ಣದಾಗಿ ಹಚ್ಚಿಕೊಳ್ಳಿ.
2ಹಸಿಮೆಣಸು ಉದ್ದವಾಗಿ ಸಿಗಿಯಿರಿ.
ಬೆಳ್ಳುಳ್ಳಿ ಬೇಕಿದ್ದರೆ ಸಿಪ್ಪೆ ತಗೆದಿಟ್ಟುಕೊಳ್ಳಿ.

ಇಷ್ಟು ಸಾಮಗ್ರಿಗಳನ್ನು ಬೆಂದ ಬೇಳೆಗೆ ಹಾಕಿ ಪುನಃ ಬೇಯಲಿಡಿ.
ಅವಶ್ಯವಿದ್ದಷ್ಟು ನೀರು ಉಪ್ಪು ಹಾಕಿ.
ನೀರಿನಲ್ಲಿಟ್ಟ ಬೀಂಬ್ಳಿ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ.
ಇಂಗು, ಬೇವಿನಸೊಪ್ಪಿನ ಒಗ್ಗರಣೆ ತಯಾರಿಸಿ, ಸಾಸಿವೆ ಚಟಚಟ ಸಿಡಿಯುತ್ತಿದ್ದಂತೆ
1 ಚಿಟಿಕೆ ಅರಸಿನ ಹುಡಿ, 1 ಚಮಚ ಮೆಣಸಿನಹುಡಿ ಹಾಕಿ ಕೂಡಲೇ ತೊವ್ವೆಗೆ ಸುರಿಯಿರಿ.
ಇಷ್ಟು ರುಚಿಕರ ತೊವ್ವೆ ಇನ್ನೆಲ್ಲಾದರೂ ಕಂಡೀರಾ ಮತ್ತೆ !

ಹದವಾಗಿ ಬಲಿತ ಬೀಂಬುಳಿಗಳನ್ನು ತುಂಡು ಮಾಡಿ ಬಿಸಿಲಿನಲ್ಲಿ ಒಣಗಿಸಿ. ಡಬ್ಬದಲ್ಲಿ ತುಂಬಿಸಿ ಇಡಿ. ಮಳೆಗಾಲದಲ್ಲಿ ಕೆಸುವಿನ ಪತ್ರೊಡೆಗೆ ಧಾರಾಳ ಹುಳಿ ಬೇಕಾಗುತ್ತಲ್ಲ, ಆಗ ಉಪಯೋಗಿಸಿ.

ಹಣ್ಣಾದ ಬೀಂಬ್ಳಿಗಳನ್ನು ಉಪ್ಪಿನೊಂದಿಗೆ ಗಿವುಚಿಟ್ಟುಕೊಂಡು ದೇವರಮನೆಯ ಹಿತ್ತಾಳೆ, ಕಂಚಿನ ಸಾಮಗ್ರಿಗಳನ್ನು ತೊಳೆಯಬಹುದಾಗಿದೆ.

ಹೇಗೂ ಹುಳಿ ಹುಳಿ ಹಣ್ಣು, ತಂಪು ಪಾನೀಯವನ್ನೂ ತಯಾರಿಸಿ. ಹಣ್ಣುಗಳ ರಸ ಹಿಂಡಿ ತೆಗೆಯಿರಿ, ಬೇಕಾದಷ್ಟು ಸಕ್ಕರೆ, ನೀರು ಸೇರಿಸಿ, ಸುವಾಸನೆಗೆ ಏಲಕ್ಕಿಯನ್ನೂ ಹಾಕಿ ಫ್ರಿಜ್ ನಲ್ಲಿ ಇಡಿ. ಕುಡಿದು ನೋಡಿ.

ನಾನ್ ವೆಜ್, ಮೀನಿನ ಅಡುಗೆಯಲ್ಲೂ ಇದನ್ನು ಬಳಸುತ್ತಾರೆ. ಹೇಗೆಂದು ತಿಳಿದವರನ್ನು ಕೇಳಿ ಕಲಿಯಿರಿ.

15ರಿಂದ 30 ಅಡಿಗಳಷ್ಟು ಬೆಳೆಯುವ ಈ ಮರ ಇಂಡೋನೇಷಿಯಾದ್ದು. ದಾರೆಹುಳಿ ಜಾತಿಗೆ ಸೇರಿದ ಒಂದು ಸಸ್ಯ ಪ್ರಭೇದ. ಸಸ್ಯವಿಜ್ಞಾನಿಗಳ ಪ್ರಕಾರ ಇದು averrhoa bilimbi. ಇದರ ಬೀಜಗಳಿಂದ ಹೊಸ ಸಸ್ಯವನ್ನು ಪಡೆಯಬಹುದು. ಚೆನ್ನಾಗಿ ಆರೈಕೆ ಮಾಡಿದಲ್ಲಿ ನೆಟ್ಟ ನಾಲ್ಕೇ ವರ್ಷಗಳಲ್ಲಿ ಫಲ ಸಿಗುವುದು.

ಟಿಪ್ಪಣಿ:  24/1/2016 ರಂದು ಮುಂದುವರಿದಿದೆ.

                                                                        ಬೀಂಬುಳಿ ಸಲಾಡ್
 

  " ಪೇಟೆಯಲ್ಲಿ ತರಕಾರಿ ಸಂತೆ ಇತ್ತು "  ಅನ್ನುತ್ತಾ ನಮ್ಮೆಜಮಾನ್ರು ಚೀಲ ತುಂಬ ತರಾ್ಕರಿ ತಂದು ಅಡುಗೆಮನೆಯಲ್ಲಿ ಸುರುವಿದರು.   

ಇತ್ತು,  ಟೊಮೇಟೋ,  ನೀರುಳ್ಳಿ,  ಹಸಿಮೆಣಸು,  ಹರಿವೇ ಸೊಪ್ಪು,  ಕೊತ್ತಂಬ್ರಿ ಸೊಪ್ಪು.... ಮತ್ತೊಂದೇನಪಾ,  ಚಿಂತಿಸಬೇಕಾಯ್ತು.  ಹ್ಞಾ,  ನೆನಪಾಯ್ತು... ನವಿಲುಕೋಸು.  ಸಂಜೆಯಾಗುತ್ತಲೂ ಇನ್ನೊಂದಾವರ್ತಿ ತರಕಾರಿ ಬಂದಿತು.  " ತರಾ್ಕರಿ ಸಂತೆ ಖಾಲಿ ಮಾಡ್ತಾ ಇದ್ರೂ,  ಸಿಕ್ಕಿದ ರೇಟಿಗೆ ಮಾರಾ್ತರೇಂತ ಗೊತ್ತಾಯ್ತು.  ಹತ್ರೂಪಾಯಿಗೆ ಇಷ್ಟೂ ಸಿಕ್ತು "

" ಅಯ್ಯೋ ಹೌದಾ!  ಇದ್ಯಾವ ತರಾ್ಕರೀ?  "
" ಯಾರಿಗ್ಗೊತ್ತೂ..."  ನಮ್ಮವರು ತಂದಿದ್ದ ಗೆಡ್ಡೆ ತರಕಾರಿಯನ್ನು ಕತ್ತರಿಸಿ ತಿಂದೂ ನೋಡಿದ್ರು.   " ಏನೂಂತ ಗೊತ್ತಾಗ್ತಾ ಇಲ್ಲ,  ಮೆಣಸಿನ ಹಾಗೆ ಖಾರ ಉಂಟಲ್ಲ! "

ಕೂವೆಗೆಡ್ಡೆ ಇರಬಹುದು ಅಂದ್ಕೊಂಡಿದ್ದೆ,  ಖಾರ ಇರೂದಾದ್ರೆ ಯಾವುದಿದು ?  " ಮೂಲಂಗಿ ಅಂತಾರಲ್ಲ,  ಅದಾಗಿರಬಹುದು "
" ಏನೋ ಒಂದು ಮಾಡು,  ಕೆಲಸದಾಳುಗಳಿಗೂ ಆಗ್ಬೇಕಲ್ಲ "
ನಮ್ಮೆಜಮಾನ್ರು ತಂದು ಹಾಕಿದ್ದನ್ನು ಏನೋ ಒಂದು ಅಡುಗೆ ಮಾಡಲು ಹೊರಟಾಗ ಸುಲಭದಲ್ಲಿ ನೆನಪಾದದ್ದು ಬೇಯಿಸದೇ ಮಾಡಬಹುದಾದ ವೆಜಿಟೆಬಲ್ ಸಲಾಡ್.   

ಹಸಿಹಸಿಯಾಗಿ ತಿನ್ನುವಂತಹ ತರಕಾರಿಗಳನ್ನು ಚೆನ್ನಾಗಿ ತೊಳೆದು ಇಟ್ಟಾಯ್ತು,  ಎಷ್ಟಾದರೂ ರಸ್ತೆಪಕ್ಕದ ಮಾಲುಗಳಲ್ವೇ,  ತೊಳೆದಷ್ಟೂ ಒಳ್ಳೆಯದು.  ಚಿಕ್ಕದಾಗಿ ಹಚ್ಚಿದ್ದೂ ಆಯಿತು.

ನಿತ್ಯಕಟ್ಟಳೆಯ ಕೊದ್ದೆಲ್ ಗೆ ತೆಂಗಿನಕಾಯಿ ತುರಿಯೊಂದಿಗೆ ಇನ್ನಿತರ ಮಸಾಲೆಗಳನ್ನು ಅರೆಯುವಾಗ ನಾಲ್ಕಾರು ಬೀಂಬುಳಿಗಳನ್ನೂ ಕೂಡಿಕೊಂಡು ಅರೆಯುವುದು ನನ್ನ ಪದ್ಧತಿ.   ಅದಕ್ಕಾಗಿ ಹತ್ತಾರು ಬೀಂಬುಳಿಗಳನ್ನೂ ಕೊಯ್ದು ಇಟ್ಕೊಂಡಿದ್ದೆ.   ಹುಣಸೇಹುಳಿ ಗಿವುಚಿ ಹಾಕುವ ಪ್ರಸಂಗ ಇಲ್ಲಿಲ್ಲ.

ಹಸಿ ತರಕಾರಿಗಳನ್ನು ಹಚ್ಚುತ್ತಿದ್ದ ಹಾಗೆ ಆಗ ತಾನೇ ಮರದಿಂದ ಕೊಯ್ದು ತಂದಿದ್ದ ತಾಜಾ ಬೀಂಬುಳಿ ಕಣ್ಣಿಗೆ ಬಿತ್ತು.   ಸರಿ,  ಬೀಬುಳಿಯೂ ಕತ್ತರಿಸಲ್ಪಟ್ಟಿತು,  ಸಲಾಡ್ ಜತೆ ಸೇರಿ ತಾಜಾ ನಗು ಬೀರಿತು.   


                                                  

Monday, 23 January 2012

ಹೊಲಿಗೆ ಯಂತ್ರಇದು ಜರ್ಮನಿಯಲ್ಲಿ ತಯಾರಾದ 1890 - 1900 ರ ಮಾಡೆಲ್ Winselmann, Titan ಹೊಲಿಗೆಯ ಯಂತ್ರ. ಸುಮಾರು 110 ವರ್ಷ ಹಿಂದಿನ ಈ ಯಂತ್ರ ಈಗಲೂ ಸುಸ್ಥಿತಿಯಲ್ಲಿದೆ. ಕೈಯಲ್ಲಿ ತಿರುಗಿಸಬಹುದಾದ ಒಂದು ಹ್ಯಾಂಡಲ್ ಬಲಭಾಗದಲ್ಲಿ ಇದೆ. ಎಲ್ಲಿ ಬೇಕಾದರೂ ಇಟ್ಟು ಹೊಲಿಗೆ ಕೆಲಸ ಮಾಡಬಹುದಾಗಿದೆ. ಉಪಯೋಗವಿಲ್ಲದಿದ್ದಾಗ ಕಪಾಟಿನಲ್ಲಿ ಇಡಬಹುದು. ಮೂರು ತಲೆಮಾರುಗಳನ್ನು ಕಂಡಿರುವ ಈ ಯಂತ್ರ ಈಗ ನನ್ನ ಬಳಿಯಿದೆ.

by Subhashini Hiranyaಟಿಪ್ಪಣಿ : ಇಲ್ಲಿನ ಬರಹದಲ್ಲಿ ದಿನಾಂಕ 11, ಮಾರ್ಚ್, 2013 ರಂದು ಸಣ್ಣ ತಿದ್ದುಪಡಿ ಮಾಡಲಾಗಿದೆ.

Sunday, 22 January 2012

ಮೈಕ್ರೋ ವೇವ್ ಕುಕ್ಕಿಂಗ್


ಮೈಕ್ರೋ ವೇವ್ ಓವೆನ್ ನನ್ನ ಅಡುಗೆ ಮನೆಗೆ ಬಂದೇ ಬಿಟ್ಟಿತು . ಈಗಲ್ಲ , 8 ವರ್ಷಗಳ ಹಿಂದೆ. ಇನ್ನಿತರ ಅಡುಗೆ ಉಪಕರಣಗಳ ಮುಂದೆ ಭೂಷಣಪ್ರಾಯವಾಗಿ ಕುಳಿತೇ ಬಿಟ್ಟಿತು .

ಮುಂದಿನ ಕೆಲಸ , ಅಡುಗೆ ತಯಾರಿ ? ಹೇಗೆ , ಏನು , ಎತ್ತ ಯಾವ ಮಾಹಿತಿಯೂ ಅದರ ಕ್ಯಾಟಲಾಗ್ ನಲ್ಲಿ ಇಲ್ಲ .

"ಗೊತ್ತಾಗದಿದ್ರೆ ಇಂಟರ್ನೆಟ್ ನೋಡಿ ಕಲಿ " ಎಂದರು ಮನೆ ಯಜಮಾನ್ರು .

ಸರಿ , ನೆಟ್ ಜಾಲಾಟ ಪ್ರಾರಂಭಿಸಿಯೇ ಬಿಟ್ಟೆ . ಏನೇನೋ ಮಾಹಿತಿಗಳು ಸಿಕ್ಕವು , ಉಪಯೋಗದ ಮಾಹಿತಿ ಬಿಟ್ಟು . ಆರೋಗ್ಯಕ್ಕೆ ಹಾನಿಕರ ಎಂಬ ಮಾಹಿತಿಯಂತೂ ನನ್ನ ತಲೆ ಚಿಟ್ಟು ಹಿಡಿಸಿ ಬಿಟ್ಟಿತು.

"ಇಲೆಕ್ಟ್ರಾನಿಕ್ ಸಾಮಗ್ರಿಗಳ ಆಯುಸ್ಸು ಒಂದರಿಂದ ಎರಡು ವರ್ಷದ ವರೆಗೆ , ಅದನ್ನು ನೆನಪಿಟ್ಟುಕೋ " ಎಂಬ ಹಿತೊಪದೇಶವೂ ನಮ್ಮವರಿಂದ ದೊರೆಯಿತು .

ಅಕ್ಕ ಪಕ್ಕದ ಮನೆಯವರಲ್ಲಿ ನೆಟ್ಟಗೆ ಅನ್ನ, ಪಲ್ಯ ಮಾಡುವುದು ಹೇಗೆ ಎಂದು ಕೇಳೋಣ ಎಂದರೆ ಅವರಾರೂ ಇಂತಹ ಪೆಟ್ಟಿಗೆಯನ್ನು ಕಂಡವರೇ ಅಲ್ಲ .

ಸರಿ, ನನ್ನ ಪಾಡಿಗೆ ಪ್ರಯೋಗ ಆರಂಭಿಸಿದೆ . ನೀರು ಕ್ಷಣದಲ್ಲಿ ಕುದಿಯಿತು. ಚಹಾ ಪುಡಿ ಹಾಕಿ ಟೀ ತಯಾರಿ ಆಯಿತು . ಈ ಚಹಾ ಕುಡಿಯಲು ನಮ್ಮ ಕೆಲಸದವನೂ ಒಪ್ಪಲಿಲ್ಲ . "ಎನ್ನ ಚಾಯ ಈರು ಗ್ಯಾಸುಟೆ ಮನ್ಪುಲೇ " ಎಂದ !

ಮುಂದಿನ ಪ್ರಯೋಗದಲ್ಲಿ ಅನ್ನ ಬೇಯಲಿಲ್ಲ ! ಬೇಳೆ ಇಟ್ಟದ್ದು ಹಾಗೇ ಇತ್ತು ! ತರಕಾರಿಗಳೂ ಸುಮ್ಮನಿದ್ದುವು ! ಹಾಗಾಗಿ ನನ್ನ ಪೆಟ್ಟಿಗೆ ಸುಮ್ಮನೆ ಬಿದ್ದುಕೊಂಡಿತ್ತು . ಒಂದು ದಿನ ನನ್ನ ಅತ್ತಿಗೆ ಬಂದವರು , "ನನ್ನ ತಮ್ಮ ತಂದು ಕೊಟ್ಟಿದ್ದನ್ನು ಉಪಯೋಗಿಸದೇ ಹಾಗೇ ಇಟ್ಟಿದ್ದಿಯಲ್ಲ " ಎಂದು ಮೂದಲಿಸಿ ಹೋದರು .

ನನ್ನ ತಂಗಿ ಬಂದಳು . ಬರುವಾಗ ಒಂದಷ್ಟು ಲಡ್ಡುಗಳನ್ನೂ ತಂದಿದ್ದಳು . ಲಡ್ಡುಗಳನ್ನು ಡಬ್ಬಿಗೆ ತುಂಬಿಸಿ ಆ ಪ್ಲಾಸ್ಟಿಕ್ ಕ್ಯಾರೀ ಬ್ಯಾಗನ್ನು ಆಚೆ ಎತ್ತಿಟ್ಟೆ . ಹಾಗೇ ಸುಮ್ಮನೆ ಅದರಲ್ಲಿ ಬರೆದಿದ್ದರ ಕಡೆ ಕಣ್ಣು ಹಾಯಿಸಿದೆ . ಬಾಸುಮತಿ ಅಕ್ಕಿಯ ಬ್ಯಾಗ್ ಅದಾಗಿತ್ತು . ಬಾಸುಮತಿ ಅನ್ನ ಒಲೆಯಲ್ಲಿ, ಕುಕ್ಕರಿನಲ್ಲಿ , ಮೈಕ್ರೋ ವೇವ್ ನಲ್ಲಿ ಮಾಡುವುದನ್ನು ಅದರಲ್ಲಿ ಬರೆದಿತ್ತು !

ಅಡುಗೆಯ ಗುಟ್ಟು ತಿಳಿದೇ ಬಿಟ್ಟಿತು . 1 ಲೋಟ ಅಕ್ಕಿಯನ್ನು 10 ನಿಮಿಷ ನೆನೆಸಿ ಓವೆನ್ ನಲ್ಲಿ 7 ನಿಮಿಷಗಳ ಕಾಲ ಮುಚ್ಚಿ 100 ಡಿಗ್ರಿ ಉಷ್ಣತೆಯಲ್ಲಿ ಅಕ್ಕಿಯ ಎರಡರಷ್ಟು ನೀರು ಹಾಕಿ ಇಟ್ಟರಾಯಿತು . ಆದ ಕೂಡಲೇ ತೆರೆಯುವಂತಿಲ್ಲ . 10 ನಿಮಿಷ ಬಿಟ್ಟೇ ತೆಗೆಯಬೇಕೆಂಬ ಸೂಚನೆಯನ್ನು ಪಾಲಿಸಿ ಅನ್ನ ತಯಾರಿಸಿಯೇ ಬಿಟ್ಟೆ ! ಅಲ್ಲಿಂದ ಮತ್ತೆ ನಾನು ಓವೆನ್ ಅಡುಗೆಯಲ್ಲಿ ಸೋತದ್ದೇ ಇಲ್ಲ .


ಪೂಜನೀಯ ಅಶೋಕ ವೃಕ್ಷಅಶೋಕ ವೃಕ್ಷ ಒಂದು ಅದ್ಭುತ ಸಸ್ಯ. ಮಹಾಕಾವ್ಯಗಳಲ್ಲಿ ಅಶೋಕ ವೃಕ್ಷವಿದೆ. ರಾಮಾಯಣವೇ ಇದೆಯಲ್ಲ ! ಕಾಳಿದಾಸನೂ ಈ ವೃಕ್ಷವನ್ನು ಬಿಟ್ಟಿಲ್ಲ. ಬೌದ್ಧರಿಗೆ ಹಾಗೂ ಹಿಂದೂಗಳಿಗೆ ಇದು ಪೂಜನೀಯ ವೃಕ್ಷ.

ಎಲ್ಲ ಭಾರತೀಯ ಭಾಷೆಗಳಲ್ಲೂ ಒಂದೊಂದು ಹೆಸರನ್ನು ಹೊಂದಿದೆ ಈ ವೃಕ್ಷ. ದಕ್ಷಿಣ ಭಾರತೀಯ ಭಾಷೆಗಳಲ್ಲಿ ಅಶೋಕವೆಂದೇ ಗುರುತಿಸಿಕೊಂಡಿದೆ. ಇದರ ವೈಜ್ಞಾನಿಕ ಹೆಸರು saraca asoca . ಭಾರತ, ಶ್ರೀಲಂಕಾ, ಮ್ಯಾನ್ಮಾರ್ ಇದರ ತವರು. ಹಿಮಾಲಯದ ತಪ್ಪಲು ಪ್ರದೇಶ, ಪಶ್ಚಿಮ ಘಟ್ಟ ಅರಣ್ಯಗಳಲ್ಲಿ ಅಧಿಕವಾಗಿವೆ.

ಇದು ನಿತ್ಯ ಹರಿದ್ವರ್ಣದ ಸಸ್ಯವಾಗಿದ್ದು ಕಡು ವರ್ಣದ ಕಾಂಡದಿಂದ, ಅನೇಕ ರೆಂಬೆ ಕೊಂಬೆಗಳನ್ನು ಹೊಂದಿ, ಆಕರ್ಷಕ ಕಿತ್ತಳೆ ವರ್ಣದ ಹೂಗೊಂಚಲುಗಳನ್ನು ಸೆಪ್ಟೆಂಬರ್ ಆರಂಭವಾಗುತ್ತಿದ್ದಂತೆ ಬಿಡಲು ಆರಂಭಿಸುತ್ತದೆ. ಸುವಾಸನಾಭರಿತ ಹೂಗಳು ಕ್ರಮೇಣ ಕಡುವರ್ಣಕ್ಕೆ ತಿರುಗುವುದೇ ಒಂದು ವಿಸ್ಮಯ.

ಹೂಗಳು ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗವಾಗುತ್ತವೆ. ಆದರೂ ಔಷಧವಾಗಿ ಹೆಚ್ಚು ಬಳಕೆಯಲ್ಲಿದೆ. ಇದರ ಹೂಗಳನ್ನು ಒಣಗಿಸಿ ಹುಡಿ ಮಾಡಿ ದಿನನಿತ್ಯ ಹಾಲಿನೊಂದಿಗೆ ಸೇವಿಸುತ್ತ ಬಂದಲ್ಲಿ ಸ್ತ್ರೀಯರ ಮಾಸಿಕ ಋತು ಸ್ರಾವದ ಏರುಪೇರುಗಳು ಮಾಯವಾಗುವುವು. ಉದರಶೂಲೆ, ತಲೆನೋವು ಕೂಡಾ ಮಾಯ.

ಚೆನ್ನಾಗಿ ಬಲಿತ ಕಾಂಡದ ತೊಗಟೆಯನ್ನು ಆಯುರ್ವೇದ ಪದ್ಧತಿಯಲ್ಲಿ ಕಷಾಯ ತಯಾರಿಸುವ ಕ್ರಮವೂ ಇದೆ. ಅತಿಸಾರ, ಆಂತರಿಕ ಗೆಡ್ಡೆಗಳು, ಹುಣ್ಣುಗಳು, ಮೂತ್ರನಾಳ ಸಂಬಂಧೀ ಖಾಯಿಲೆಗಳು, ಸಿಫಿಲಿಸ್ , ಲೈಂಗಿಕ ರೋಗಗಳಿಗೆ ಇದು ರಾಮಬಾಣವಾಗಿದೆ.

2 ತೊಲದಷ್ಟು ಇದರ ತೊಗಟೆಯನ್ನು 1 ಕುಡ್ತೆ ನೀರು, 1 ಕುಡ್ತೆ ಹಾಲು ಸೇರಿಸಿ ಕುದಿಸಿ ತಯಾರಿಸಿದ ಕಷಾಯ ದೇಹ ಯಥಾಸ್ಥಿತಿಗೆ ಮರಳಲು ಸಹಾಯಕ. ಜೀರಿಗೆ ಸೇರಿಸಿ ಇದರ ಎಲೆಗಳಿಂದ ಕಷಾಯ ತಯಾರಿಸಿದರೂ ರಕ್ತ ಶುದ್ಧೀಕರಣ ಆಗುತ್ತದೆ. ಅಶೋಕಾರಿಷ್ಟದ ನಿಯಮಿತ ಸೇವನೆಯನ್ನು ಆಯುರ್ವೇದ ವೈದ್ಯರು ಶಿಫಾರಸು ಮಾಡುತ್ತಾರೆ. ಅದರ ತಯಾರಿಯೂ ಇದೇ ಅಶೋಕ ವೃಕ್ಷದಿಂದ.

ಅಶೋಕ ಎಂದರೆ ಶೋಕವಿಲ್ಲದ್ದು ಎಂದರ್ಥ ! ವಸಂತ ಮಾಸದಲ್ಲಿ ಅರಳುವ ಈ ವೃಕ್ಷದ ಹೂಗಳ ಸೊಬಗಿಗೆ ಸಾಟಿಯಿಲ್ಲ ! ಇದರ ಔಷಧ ಸೇವನೆ ಮಾಡಿದ ಸ್ತ್ರೀಯರು ಆರೋಗ್ಯದಿಂದ, ಶೋಕರಹಿತರಾಗುವರು.ಟಿಪ್ಪಣಿ: ಈ ಬರಹವನ್ನು ದಿನಾಂಕ 15 , ಮಾರ್ಚ್, 2013 ರಂದು ಇನ್ನಷ್ಟು ವಿಸ್ತರಿಸಿ ಬರೆಯಲಾಗಿದೆ.ಇದು ಅಂತರ್ಜಾಲ ಮಾಧ್ಯಮದಲ್ಲಿ ನನ್ನ ಪ್ರಥಮ ಬರಹ. ಅಂತರ್ಜಾಲ ಪತ್ರಿಕೆಯೊಂದರಲ್ಲಿ ಪ್ರಕಟವೂ ಆಯಿತು. ಅಶೋಕವೃಕ್ಷದ ಬಗ್ಗೆ ಬರೆಯಲೂ ಕಾರಣವಿದೆ. ನಮ್ಮ ನೆರೆಯ ಹದಿಹರೆಯದ ಯುವತಿಯೊಬ್ಬಳು ವಿಪರೀತ ಋತುಸ್ರಾವದಿಂದ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟದಲ್ಲಿದ್ದಳು. ಆಕೆ ಮಾತು ಬಾರದ ಹುಡುಗಿ. ಅವಳ ತಾಯಿ ನನ್ನೊಡನೆ ಗೋಳಾಡಿಕೊಂಡಿದ್ದರು.

" ಗರ್ಭಕೋಶವನ್ನೇ ತೆಗೆಸಬೇಕೆಂದು ಹೇಳ್ತಿದ್ದಾರೆ ಅಕ್ಕ, ಕಿವಿ ಕೇಳದವಳಿಗೆ ಇಂಥಾ ಆಪರೇಷನ್ ಮಾಡಿದ್ರೆ ನಾಳೆ ಅವಳನ್ನು ಯಾರು ಮದುವೆಯಾಗುತ್ತಾರೆ ? ನಾವು ಬೇಡಾ ಅಂದ್ಬಿಟ್ಟು ಮಂಗಳೂರಿನ ಆ ಆಸ್ಪತ್ರೆಯಿಂದ ಕಾಸರಗೋಡಿನ ಈ ಆಸ್ಪತ್ರೆಗೆ ತಂದಿದೇವೆ, ಇಲ್ಲಿ ಏನು ಹೇಳ್ತಾರೇಂತ ನೋಡ್ಬೇಕಷ್ಟೆ "

ನಮ್ಮ ಮಾತುಗಳಿಗೆ ಸಾಕ್ಷಿಯಾಗಿ ನಮ್ಮವರೂ ಅಲ್ಲೇ ಇದ್ದರು. " ಹೌದೂ, ನಮ್ಮ ಅಶೋಕದ ಮರ ಇದೆಯಲ್ಲ, ಅದು ಹೆಂಗಸ್ರ ಈ ರೋಗಕ್ಕೇ ಇರೂದು ಅಂತ ಕಾಣಿಸ್ತದೆ, ಅಬ್ಬು, ಕಮಲ, ಚೋಮು ಎಲ್ಲಾರೂ ಅದರ ಕೆತ್ತೆ ತೆಗೆದುಕೊಂಡು ಹೋಗೋರು, ಯಾಕೇಂತ ಹೇಳಿದ್ರಲ್ವೇ ನಮ್ಗೂ ಗೊತ್ತಾಗೂದು " ಅಂದರು.

" ನೀನು ಇಂಟರ್ನೆಟ್ ನೋಡಿ ತಿಳ್ಕೋ " ಉಪದೇಶ ಸಿಕ್ಕಿತು.

" ಮೊದಲು ಅಮ್ಮನ ಹತ್ರ ಕೇಳ್ತೇನೆ "

ಅಮ್ಮನ ಬಳಿಗೆ ಫೋನ್ ಕಾಲ್ ಹೋಯಿತು. ಮಹಿಳೆಯರ ರಕ್ತಸ್ರಾವದ ಖಾಯಿಲೆಗೇ ಇದನ್ನು ಉಪಯೋಗಿಸ್ತಾರೆ ಎಂದು ಅವರೂ ಹೂಂಗುಟ್ಟಿದರು.

" ಆದ್ರೆ ಈಗ ಆ ಹಳೇ ಮದ್ದಿನ ಕ್ರಮ ಯಾರಿಗೆ ಗೊತ್ತಿರ್ತದೆ, ಸುಮ್ಮನೇ ಏನೇನೋ ಮಾಡುವುದಕ್ಕಿಂತ ಆಸ್ಪತ್ರೆಗೇ ಹೋಗಲಿ " ಎಂದೂ ಹೇಳಿದರು.

ಇಷ್ಟೆಲ್ಲಾ ಪಂಚಾಯಿತಿಕೆ ನಡೆದ ಮೇಲೆ ಅಂತರ್ಜಾಲದಿಂದ ಮಾಹಿತಿಗಳ ಸಂಗ್ರಹ ಮೊದಲ್ಗೊಂಡು ಬರಹ ರೂಪಕ್ಕೂ ಇಳಿಸಿಯಾಯಿತು. ಬರಹ ಪ್ರಕಟಿತವಾದ ಮೇಲೆ ನಮ್ಮವರ ಅಕ್ಕ ಮನೆಗೆ ಬಂದಿದ್ದಾಗ ಇನ್ನಷ್ಟು ಹಳೆಯ ನೆನಪುಗಳನ್ನು ಹೊರ ಹಾಕಿದರು.

ಮನೆಯ ಹಸುಗಳಿಗೆ ಗರ್ಭಧಾರಣೆಯಾಗದಿದ್ದಲ್ಲಿ ಇದರ ಕೆತ್ತೆಯ ಕಷಾಯ ಮಾಡಿ ಕಲಗಚ್ಚಿನೊಂದಿಗೆ ಕುಡಿಸಲಾಗುತ್ತಿತ್ತಂತೆ.

" ಹೌದೇ, ಹಸುಗಳಿಗೆ ಅಶೋಕದ ಸೊಪ್ಪು ಸವರಿ ಹಾಕಿದರೂ ಆದೀತೇನೋ "

" ಆದೀತೂಂತ ಕಾಣ್ತದೆ, ಮತ್ತೆ ಯಾರಿಗ್ಗೊತ್ತು "

" ಕೆಲಸದಾಳುಗಳು ಮರವನ್ನು ಕೆತ್ತಿ ಕೆತ್ತಿ ಸಾಯ್ಸಿಬಿಡ್ತಾರೆ " ಎಂದು ನನ್ನ ಮಾವನವರೂ ಪೇಚಾಡುತ್ತಿದ್ದುದನ್ನು ನಾನೂ ಕಂಡಿದ್ದೇನೆ.

ಅಂತೂ ನಮ್ಮ ನೆರೆಮನೆಯ ಯುವತಿ ಆಪರೇಷನ್ ಇಲ್ಲದೇ ಗುಣಮುಖಳಾಗಿದ್ದಾಳೆ. ಈಗ ವಿವಾಹಿತೆಯೂ ಆಗಿ ನೆಮ್ಮದಿಯ ಬದುಕು ನಡೆಸುತ್ತಿದ್ದಾಳೆ. ಇತ್ತೀಚೆಗೆ ಅವಳ ತಾಯಿಯ ಭೇಟಿ ಆದಾಗ ಆಕೆಯ ಆರೋಗ್ಯ ಈಗ ಹೇಗಿದೆಯೆಂದು ಕೇಳದಿದ್ದರಾಗುತ್ತದೆಯೇ, " ಅಶೋಕ ಕೆತ್ತೆ ಏನಾದ್ರೂ ಪ್ರಯೋಜನ ಕೊಟ್ಟಿತ್ತಾ "

ಅವರೂ ಹೂಂಗುಟ್ಟಿದರು, " ಕಷಾಯ ಕುಡಿದು ಉಪಕಾರ ತತ್ಕಾಲಕ್ಕೆ ಸಿಕ್ತದೆ, ಮತ್ತೆ ಯಾರಿಗ್ಗೊತ್ತದೆ ಸರಿಯಾದ ಕ್ರಮದ ಈ ಹಳ್ಳೀ ಮದ್ದು, ಆಸ್ಪತ್ರೆ ಮದ್ದೂ ತಂದಿದೆ...."

ಹೀಗೆ ನಾನು ಬರೆಯುತ್ತಾ ಇರಬೇಕಾದರೆ ನಮ್ಮ ಖಾದರ್ ಬಂದ.

" ಏನು ಬರೀತಾ ಇದ್ದೀರಿ ಅಕ್ಕಾ "

" ಅದೇ ಅಶೋಕೆ ಮರ ಇದ್ಯಲ್ಲ " ಪುನಃ ಬರೆದಿದ್ದನ್ನು ಓದಿ ಹೇಳಿಯಾಯ್ತು.

" ಹಂಗಿದ್ರೆ ಇದನ್ನೂ ಸೇರಿಸ್ಕೊಳ್ಳೀ, ಮೂತ್ರದಕಲ್ಲಿಗೆ ಅಶೋಕ ಕೆತ್ತೆ ಕಷಾಯ ಕುಡಿದು ಖಾದರ್ ಗುಣಮುಖನಾಗಿದ್ದಾನೇ ಅಂತ "

ಎಲ ಇವನ, ಯಾರಿಗೂ ಹೇಳದೇ ಸ್ವಯಂ ಔಷಧಿ ಮಾಡಿಕೊಂಡಿದ್ದನ್ನು ಈಗ ಬಾಯ್ಬಿಟ್ಟ. ಮೂತ್ರದೊಂದಿಗೆ ರಕ್ತಸ್ರಾವ ಆಗುತ್ತಿದ್ದಲ್ಲಿ ಏನೂ ಭಯ ಪಡಬೇಕಾಗಿಲ್ಲ, ಮೂತ್ರದಲ್ಲಿನ ಕಲ್ಲನ್ನು ಕರಗಿಸಿ ಬಿಡುತ್ತೇಂತ ಅವನ ಅಂಬೋಣ.
ಆರೋಗ್ಯದ ಗಣಿ..........ಈ ಚಕ್ರಮುನಿ


"ಹೋಗಿ ಚಕ್ರಮಾಂಙ ಸೊಪ್ಪು ತಾ" ಅಮ್ಮ ಮಗಳಿಗಂದಳು. ಜಗಲಿಯಲ್ಲಿ ಕುಳಿತು ಗಜ್ಜುಗದ ಆಟ ಆಡುತ್ತಿದ್ದ ಮಗಳು ಮನೆಹಿತ್ತಿಲಿಗೆ ಓಡಿದಳು. ಒಂದಾಳೆತ್ತರದ ಗಿಡದ ಗೆಲ್ಲು ಬಗ್ಗಿಸಿ ಕುಡಿ ಚಿಗುರುಗಳನ್ನು ಚಿವುಟಿ ಕೈ ಬೊಗಸೆಯಲ್ಲಿ ಹಿಡಿವಷ್ಟು ತಂದಳು. ಅಮ್ಮ ತಯಾರಿಸುವ ಈ ಸೊಪ್ಪಿನ ತಂಬುಳಿ ಅವಳಿಗೆ ಪ್ರಿಯವಾಗಿತ್ತು. ಆಟ ಬಿಟ್ಟು ಅಡುಗೆ ತಯಾರಿಯನ್ನು ವೀಕ್ಷಿಸಿದಳು.
ಬಾಣಲೆಗೆ ತುಪ್ಪ ಹಾಕಿ ಚಿಗುರೆಲೆಗಳನ್ನು ಬಾಡಿಸಿ ಒಲೆಯಿಂದ ಇಳಿಸಿದಳು ಅಮ್ಮ. ಒಂದು ಹಿಡಿ ಕಾಯಿತುರಿ, ಉಪ್ಪು, ನಾಲ್ಕು ಜೀರಿಗೆಕಾಳು ಎಲ್ಲವನ್ನೂ ಅರೆಯುವ ಕಲ್ಲಿಗೆ ಹಾಕಿ ಕಡೆಯುತ್ತಿದ್ದಂತೆ ಹಸಿರು ಹಸಿರಾದ ರಸ ಸಿದ್ದವಾಗಿಬಿಟ್ಟಿತು. ಮಜ್ಜಿಗೆ ಭರಣಿಯಿಂದ ಒಂದು ಲೋಟ ಮಜ್ಜಿಗೆ ಸೇರಿಸಿ ಒಂದು ಒಗ್ಗರಣೆ ಸಿಡಿಸುವಷ್ಟರಲ್ಲಿ ತಂಬುಳಿ ತಯಾರಾಯಿತು.

ಅನ್ನದೊಂದಿಗೆ ಈ ಹಸಿರು ತಂಬುಳಿ ಸವಿಯುತ್ತಿದ್ದ ನೆನಪು ಈಗಲೂ ನನ್ನ ಮನದಲ್ಲಿ ಹಸಿರಾಗಿಯೇ ಇದೆ. ಹಾಗಾಗಿ ಈಗಲೂ ನೆನಪಾದಾಗ ಮಾಡುತ್ತಿರುತ್ತೇನೆ.

ಈ ಚಕ್ರಮಾಂಙ ಅಥವಾ ಚಕ್ರಮುನಿ ಸಸ್ಯ ಸೊಪ್ಪು ತರಕಾರಿಗಳಲ್ಲೇ ವಿಶೇಷವಾದದ್ದು. ಪಲ್ಯ, ತೊವ್ವೆ, ಸಾಂಬಾರ್, ಮಜ್ಜಿಗೆಹುಳಿ, ಸಲಾಡ್, ರೊಟ್ಟಿ, ಬೋಂಡಾ, ಪತ್ರೊಡೆ, ಯಾವುದಕ್ಕೂ ಇದು ಸೈ. ಹಾಗಾಗಿ ಇದು ಸರ್ವಸಾಂಬಾರು ಸೊಪ್ಪು ಎನಿಸಿಕೊಂಡಿದೆ.

ಚಕ್ರಮಾಂಙ ಎಳೆಯ ಸೊಪ್ಪನ್ನು ಸಣ್ಣಗೆ ಹೆಚ್ಚಿಟ್ಟು ಬೇಯಿಸಿ. ಬೇಯಿಸಿದ ನೀರು, ಸೊಪ್ಪು ಸಹಿತವಾಗಿ ಚಪಾತಿ ಹಿಟ್ಟಿನೊಂದಿಗೆ ಕಲಸಿ ವಿಟಮಿನ್ ಚಪಾತೀ ತಯಾರಿಸಿ.

ಪರೋಟಾ ಮಾಡುವಾಗಲೂ ಒಳಗೆ ತುಂಬಿಸುವ ಹೂರಣದೊಂದಿಗೆ ಚಕ್ರಮುನಿ ಸೊಪ್ಪನ್ನೂ ಸೇರಿಸಿ.


ಸಾಂಬಾರು ಮಾಡೋದು ಹೀಗೆ :
ತೋಟದಲ್ಲಿ ಅಡ್ಡಾಡಿ ಬರುವಾಗ ಕೈಯಲ್ಲಿ ಹಿಡಿಸುವಷ್ಟು ಚಿಗರೆಲೆಗಳ್ನು ಚಿವುಟಿ ತಂದು ತುಂಡರಿಸಿ, ಅರ್ಧ ಸೌತೆಕಾಯಿ ಹೋಳು ಹಾಗೂ ತೂಗರಿಬೇಳೆ ಜೊತೆ ಕುಕ್ಕರಿನಲ್ಲಿ ಬೇಯಿಸಿ, ಎಂದಿನಂತೆ ಮಸಾಲೆ ಹುರಿದು ತೆಂಗಿನತುರಿಯೊಂದಿಗೆ ಮಿಕ್ಸಿಯಲ್ಲಿ ನೀರು ಹಾಕದೆ ತಿರುಗಿಸಿ. ರುಚಿಗೆ ಬೇಕಾದ ಉಪ್ಪು ಹುಳಿ ಬೆಲ್ಲ ಗಳನ್ನು ಕೂಡಿಸಿ, ಅವಶ್ಯವಿದ್ದಷ್ಟು ನೀರು ಸೇರಿಸಿ ಕುದಿಸುವಾಗ ಒಂದು ನೀರುಳ್ಳಿ ಸಣ್ಣಗೆ ಕೊಚ್ಚಿ ಹಾಕಿ, 10 ಎಸಳು ಬೆಳ್ಳುಳ್ಳಿ ಒಗ್ಗರಣೆ .....

ನನ್ನ ಚಿಕ್ಕಫ್ಫ ಮದ್ರಾಸಿನಲ್ಲಿ ಕಲಿಯುತ್ತಿದ್ದಾಗ ಅಲ್ಲಿಂದ ಇದರ ಗಿಡ ಅಂದರೆ ಕಡಿದ ಗೆಲ್ಲು ತಂದು ಮನೆಯಲ್ಲಿ ನೆಟ್ಟಿದ್ದಂತೆ. ಹಾಗಂತ ಅಮ್ಮ ಹೇಳಿದ ನೆನಪು. ಮೂಲತಃ ಇದು ಮಲೇಷ್ಯಾದ್ದು. ಭಾರತಕ್ಕೆ ಸುಮಾರು 1950ರಲ್ಲಿ ಬಂದಿದೆ. ಸಸ್ಯಶಾಸ್ತ್ರೀಯವಾಗಿ sauropus androgynus ಎಂಬ ಹೆಸರನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಇದು ಸಮೃದ್ಧವಾಗಿ ಕಾಣಿಸುವ ಸಸ್ಯ ಆಗಿ ಬಿಟ್ಟಿದೆ. ತೋಟಗಳಲ್ಲಿ ತಡೆಬೇಲಿಯಾಗಿ ಗಿಡಗಳನ್ನು ಬೆಳೆಸುತ್ತೀರಷ್ಟೆ ? ಅಂಥಲ್ಲಿ ಇದನ್ನೂ ನೆಟ್ಟು ಬಿಟ್ಟರೆ ಬೇಲಿಯೂ ಆಯಿತು, ಬೇಕಾದಾಗ ಚಿವುಟಿ ತೆಗೆಯಲು ಸೊಪ್ಪು ತರಕಾರಿಯೂ ಆಯಿತು, ಗೆಲ್ಲುಗಳನ್ನು ಆಗಾಗ ಸವರುತ್ತಿದ್ದರೆ ಜಾನುವಾರುಗಳಿಗೆ ಉ್ತಮ ಮೇವೂ ಆಯಿತು. ಕತ್ತರಿಸಿದಲ್ಲಿ ಬಹು ಬೇಗನೆ ಹೊಸ ಚಿಗುರುಗಳು ಮೂಡುತ್ತವೆ. ' cut and come again ' ಸೂತ್ರ ಈ ಸಸ್ಯದ್ದು.

ವಿಟಮಿನ್ ಎ, ಬಿ, ಸಿ ಹೇರಳವಾಗಿರುವ ಸಸ್ಯ. ವಿರಳವಾದ ವಿಟಮಿನ್ k ಕೂಡಾ ಇದರಲ್ಲಿದೆ. ಪ್ರೂಟೀನ್, ಕ್ಯಾಲ್ಸಿಯಂ, ಖನಿಜಾಂಶಗಳು ಇರುವುದರಿಂದ ಇದಕ್ಕೆ ವಿಟಮಿನ್ ಸೊಪ್ಪು ಎಂಬ ಹೆಸರೂ ವಾಡಿಕೆಯಲ್ಲಿದೆ. ಬಾಣಂತಿಯರಿಗೆ ಎದೆಹಾಲು ವೃದ್ಧಿಯಾಗುವುದು. ಪುರುಷರಿಗೆ ವೀರ್ಯವರ್ಧಕ. ಜ್ವರದಿಂದ ಬಳಲಿ ನಿಃಶಕ್ತರಾದವರು ನವಚೈತನ್ಯವನ್ನು ಪಡೆಯುವರು. ಒಳ್ಳೆಯದೆಂದು ಅತಿಯಾಗಿ ಸೇವಿಸದಿರಿ. ಅತಿಯಾದರೆ ಅಮೃತವೂ ವಿಷವೆಂದು ಮರೆಯದಿರಿ.