Pages

Ads 468x60px

Friday, 21 February 2014

ಚಿಕ್ಕಮಗಳೂರಿನ ಬೆಣ್ಣೆದೋಸೆಚುಮುಚುಮು ಬೆಳಗಾಗುತ್ತಿದ್ದಂತೆ ನಾವು ಚಿಕ್ಕಮಗಳೂರಿನಲ್ಲಿದ್ದೆವು.  ಆರು ಗಂಟೆ ಆಗಿತ್ತೋ ಇಲ್ವೋ,   ನಮ್ಮ ಪ್ರಾತರ್ವಿಧಿಗಳಿಗೂ ಒಂದು ಜಾಗ ಬೇಕಿತ್ತಲ್ಲ,   ಸುಸಜ್ಜಿತ ಉಪಾಹಾರ ಗೃಹ ಎದುರಾಯಿತು.   ದಾವಣಗೆರೆ ಬೆಣ್ಣೆದೋಸೆಯಲ್ಲದಿದ್ದರೂ ಚಿಕ್ಕಮಗಳೂರಿನ ಬೆಣ್ಣೆದೋಸೆ,  ಸೆಟ್ ದೋಸೆ,  ಉದ್ದಿನ ವಡೇ ಟೇಬಲ್ ಮೇಲೆ ಬಂದು ಕುಳಿತಾಗ ಬಾಯಿಚಪಲ ಉಕ್ಕಿ ಹರಿಯಿತು.   ದೋಸೆ ಒಳಗಡೆ ಒಂದ ಮುದ್ದೆ ಬೆಣ್ಣೆಯಿದ್ದಿತು,  ಉಳಿದಂತೆ ಕಡ್ಲೇಕಾಯಿ ಚಟ್ನಿ.  ಚಳಿಯಿನ್ನೂ ಬಿಟ್ಟಿರದಿದ್ದರೂ ಬಿಸಿಬಿಸಿಯಾದ ಕಾಫಿ ಉದರ ಸೇರಿತು.   ತಿಂಡಿತೀರ್ಥ ಪೂರೈಸಿಕೊಂಡು ನೇರವಾಗಿ ಶೀಲಾ ಸ್ನೇಹಿತೆ ಮನೆ ತಲಪಿದೆವು.   ಅಲ್ಲಿಯೂ ಒಂದು ಗಂಟೆಗೂ ಹೆಚ್ಚು ಕಾಲ ಕಳೆದೆವು.   ಗಿರೀಶ್ ಕಾರನ್ನು ತಿಕ್ಕೀ ತಿಕ್ಕೀ ತೊಳೆದ.   ಇಲ್ಲಿ ನೆಟ್ ಕನೆಕ್ಷನ್ ಸರಿಯಾಗಿ ದೊರೆಯಿತು.  ನಾನೂ ಗಿರೀಶನ ಐ ಪಾಡಿನಲ್ಲಿ ಬರೆದಿದ್ದ ಪ್ರವಾಸ ಕಥನದ ಮೊದಲ ಕಂತನ್ನು ನನ್ನ ಮೇಲ್ ಗೆ ಕಳುಹಿಸಿ ಸಮಾಧಾನ ಹೊಂದಿದೆ.


ಊರಿಗೆ ಬಂದ ಮೇಲೆ ಮನೆಗೆ ಬಂದ ಆಪ್ತೇಷ್ಟರೊಂದಿಗೆ ಪ್ರವಾಸದ ಅನುಭವಗಳನ್ನು ಹಂಚೆಕೊಂಡಾಗ ಈ ಬೆಣ್ಣೆದೋಸೆಯೂ ಸುದ್ದಿಯ ವಿಷಯವಾಗಿತ್ತು. 

 " ದೋಸೆ ಒಳ್ಗಡೆ ಬೆಣ್ಣೆ ಇತ್ತು,  ಇಷ್ಟೇನಾ ಬೆಣ್ಣೆದೋಸೆ ಅಂದ್ರೆ..." 

"  ಅತ್ತಿಗೆ,  ದಾವಣಗೆರೆ ಬೆಣ್ಣೆದೋಸೆ ಅಂದ್ರೆ ಹಾಗಲ್ಲ,  ದೋಸೆಯ ಎರಡೂ ಬದಿಗೆ ಬೆಣ್ಣೆ ಹಾಕಿ ಬೇಯಿಸಿ ಕೊಡ್ತಾರೆ "  ಅಂದ ಶ್ರೀಪಾದ.

" ಓ, ಹಾಗೆಯಾ,  ಇನ್ನೊಂದ್ಸಾರಿ ನೋಡೋಣ "

ಪ್ರವಾಸದ ಕೊನೆ ಹಂತದಲ್ಲಿ ಹೊಟ್ಟೆ ಕೆಟ್ಟಿದ್ದು,   ಆ ಊರಿನ ಯಾವ ಔಷಧಾಲಯಗಳಲ್ಲೂ ಕುಟಜಾರಿಷ್ಟ ಲಭಿಸದೇ ಉಪವಾಸ ವ್ರತಧಾರಿಯಾಗಿದ್ದು ಎಲ್ಲವನ್ನೂ ಕೇಳಿಸ್ಕೊಂಡ ಶ್ರೀಪಾದ.

" ಏನೇ ಆದ್ರೂ ನಮ್ಮ ಮನೆಯಲ್ಲಿ ಗಂಜಿ ಕುಡಿದ ಸುಖ ಆ ಹೋಟೆಲ್ ಊಟದಲ್ಲಿ  ಹೇಗೆ ಬಂದೀತು?"  ಅಂದ. " ಕುಚ್ಚುಲಕ್ಕಿ ಅನ್ನ ಆ ಕಡೆ ಇಲ್ವೇ ಇಲ್ಲ,  ಏನು ತಿಂದ್ರೂ ಬೆಳ್ತಿಗೆ ಅನ್ನದ ಬಾತು "


ಬೆಣ್ಣೆದೋಸೆ ತಿಂದಾಯ್ತು,   ಮನೆಗೆ ಹೋದ್ಮೇಲೆ ನನ್ನ ಪರೀಕ್ಷಾರ್ಥ ಪ್ರಯೋಗ ನಡೆಯಿತು.   ಸಾಮಾನ್ಯವಾಗಿ ಮನೆಯಲ್ಲಿರುವವರು ನಾವಿಬ್ಬರೇ ಆಗಿದ್ದುದರಿಂದ ಒಂದೂವರೆ ಕಪ್ ಬೆಳ್ತಿಗೆ ಅಕ್ಕಿ ಸಾಕಾಯಿತು.  ಇನ್ನುಳಿದಂತೆ ಐದಾರು ಬಾಳೆಹಣ್ಣು,  ಒಂದು ಕ್ಯಾರೆಟ್ ಕೂಡಾ ದೋಸೆಹಿಟ್ಟಿಗೆ ಸೇರಿತು.   ಉದ್ದು ತುಂಬಾ ಹಾಕಿದ್ರೆ ದಿನವಿಡೀ ತೇಗು ಬರುತ್ತಿರುತ್ತೆ,  ಹಾಗಾಗಿ ನನ್ನ ಉದ್ದು ಕನಿಷ್ಠ ಪ್ರಮಾಣದಲ್ಲಿರುತ್ತದೆ.  ಉದ್ದು, ಕಡ್ಲೇ ಬೇಳೆ, ಮೆಂತೆ ಇವಿಷ್ಟು ಧಾನ್ಯಗಳು ಒಟ್ಟಿಗೆ ಅರ್ಧ ಕಪ್.  ಎಲ್ಲವನ್ನೂ ನೆನೆಸಿಟ್ಟು,  ಚೆನ್ನಾಗಿ ತೊಳೆದಿಟ್ಟು,  ನುಣ್ಣಗೆ ಅರೆದಿಟ್ಟು,  ಹಿಟ್ಟನ್ನು ಕಲಸಿಟ್ಟು,  ಉಪ್ಪು ಹಾಕಿಟ್ಟು,  ಹುದುಗು ಬರಲು ಏಳೆಂಟು ಗಂಟೆಗಳಷ್ಟು ಮುಚ್ಚಿಟ್ಟು,  ದೋಸೆ ಎರೆದಿಟ್ಟು,  ಒಳಗೆ ಬೆಣ್ಣೆಮುದ್ದೆಯನಿಟ್ಟು ತಿನ್ನಲಾಗಿ ಇದುವೇ ಬೆಣ್ಣೆದೋಸೆ ಕೇಳಿರೇ ಗೆಳತಿಯರೇ....

" ಇಲ್ಲಿಯೂ ಒಂದು ಗುಡಿಯಿದೆ.  ಅದನ್ನು ನೋಡ್ಬಿಟ್ಟು ಬೇಲೂರಿಗೆ "  ಗಿರೀಶ್ ಹೀಗಂದಾಗ ಪ್ರವಾಸ ಹೊರಟಿದ್ದು ಸಾರ್ಥಕವಾಯಿತು ಅಂತನ್ನಿಸದಿದ್ದೀತೇ.   ಪುನಃ ಉತ್ಸಾಹದ ರೆಕ್ಕೆಪುಕ್ಕಗಳು ಮೂಡಿದುವು.   ನಾವು ಭೇಟಿ ನೀಡಿದ್ದು ಹಿರೇಮಗಳೂರಿನ ಕೋದಂಡರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ.     ಈ ದೇವಾಲಯ ಸಂಪೂರ್ಣ ಕನ್ನಡಮಯ.    ಗೋಡೆಬರಹಗಳೆಲ್ಲ ಕನ್ನಡದಲ್ಲಿವೆ.   ಕನ್ನಡದಲ್ಲೇ ಪೂಜಾವಿಧಿಗಳನ್ನು ನೆರವೇರಿಸುವ ಹಿರಿಮೆ ಹಿರೇಮಗಳೂರಿನ ಖ್ಯಾತನಾಮ ಅರ್ಚಕರಾದ  ಹಿರೇಮಗಳೂರು ಕಣ್ಣನ್ ಅವರದು.   ಈ ಕಡೆ ನಾವು ಸಂದರ್ಶಿಸಿದ ಎಲ್ಲ ದೇಗುಲಗಳಲ್ಲೂ ಪ್ರಸಾದರೂಪವಾಗಿ ದೊರೆತಿದ್ದು ಕಲ್ಲುಸಕ್ಕರೆ.    ಇಲ್ಲಿ ಕನ್ನಡದ ಕಂಪಿನ ಕಲ್ಲುಸಕ್ಕರೆ ತಿಂದು ಕೃತಾರ್ಥರಾದೆವು.  ಬನ್ನಿ,  ದೇವಾಲಯದ ಒಳ ಹೊರ ಸುತ್ತಾಡಿ ಬರೋಣ. 


- ಮುಂದುವರಿಯಲಿದೆ.


Posted via DraftCraft app

Saturday, 15 February 2014

ಜೇನುಕಲ್ ಗಿರೀಶ

ಹಾಸನದಲ್ಲಿ ಹೋಟಲ್ ಊಟ.  ಕಾರು ಮುಂದುವರಿಯಿತು.   ಜೇನುಕಲ್ ಬೆಟ್ಟ ಗಿರೀಶನ ಮುಂದಿನ ಗುರಿ.   ನನಗಂತೂ ಇದೆಲ್ಲ ಹೊಸತು.   ಇದೂ ಒಂದು ಗಿರಿಧಾಮ.   ಇಲ್ಲಿಯೂ ಒಂದು ಗುಡಿ ಇದೆ.   ಸಿದ್ಧೇಶ್ವರ ಮುನಿಗಳ ತಪಸ್ಸಿಗೆ ಶಿವನೊಲಿದ ಕ್ಷೇತ್ರವಿದೆಂದು ಖ್ಯಾತಿ.   ಜೇನುಕಲ್ ಸಿದ್ಧೇಶ್ವರ ಬೆಟ್ಟವೆಂದೇ ಹೆಸರು ಪಡೆದಿದೆ.   ಹುಣ್ಣಿಮೆಯಂದು ಇಲ್ಲಿ ಜಾತ್ರೆ,  ಭಕ್ತಸಾಗರವೇ ಆ ದಿನ ಹರಿದು ಬರುತ್ತದೆ.   ಭಕ್ತಿಯಿಂದ ಪ್ರಾರ್ಥಿಸಿದವರಿಗೆ ಇಷ್ಟಾರ್ಥ ಸಿದ್ಧಿಯಾಗುವಂತಹ ವಿಶೇಷ ಕ್ಷೇತ್ರ.   ನಾವು ಇಲ್ಲಿ ತಲಪಿದಾಗ ಸಂಜೆಯಾಗಿತ್ತು.   ಅರಸೀಕೆರೆ  ರಸ್ತೆಯಲ್ಲಿ ಹೋಗುತ್ತಿರಬೇಕಾದರೆ ನಮ್ಮೆಜಮಾನ್ರಿಗೆ ನನ್ನ ಫೇಸ್ ಬುಕ್ ಸ್ನೇಹಿತರು,  ಈ ಊರಿನಲ್ಲಿರುವವರನ್ನು ನೆನಪಾಯಿತು.   ಮೊದಲೇ ಗೊತ್ತಿರುತ್ತಿದ್ರೆ ಫೋನ್ ಮಾಡಿ ಅಥವಾ ಮೆಸೇಜ್ ಕೊಟ್ಟು ಹೇಳಬಹುದಾಗಿತ್ತು ಎಂದು ಪೇಚಾಡಿಕೊಂಡರು.   

ದಾರಿಯುದ್ದಕ್ಕೂ ಗದ್ದೆಗಳು.   ಕಣ್ತುಂಬ ಹಸಿರು,   ಕೆಲವೆಡೆ ಕಟಾವ್ ಆಗಿತ್ತು.   ಒಣ ಹುಲ್ಲನ್ನು ಪೇರಿಸಿಟ್ಟಿದ್ದೂ ಕಂಡಿತು.   ಈ ಪರಿಸರ ಕೃಷಿಭೂಮಿ ಹೌದು,  ನಮ್ಮೂರಿನಂತಲ್ಲ ಎಂದು ಖುಷಿ ಪಟ್ಟೆ.   ರಾಗಿಯ ಗದ್ದೆ ಕಂಡಲ್ಲಿ ಒಂದು ಫೋಟೋ ಕ್ಲಿಕ್ಕಿಸಿ ಅಂತ ನಮ್ಮಜಮಾನ್ರಿಗೆ ಹೇಳ್ಬಿಟ್ಟು ಕಾರು ಮುಂದಕ್ಕೋಡುತ್ತಿದ್ದಂತೆ ಹೊಲ ಗದ್ದೆಗಳನ್ನು ಗಮನಿಸತೊಡಗಿದೆ.

" ಯಾಕೇ ..." ಕೇಳಿದ್ದು ಶೀಲಾ.

" ರಾಗೀ ಮೇಲೆ ಬರೆದಿದ್ದೇನಲ್ಲ,  ಆ ಬ್ಲಾಗ್ ಪೋಸ್ಟ್ ಗೆ ಹಳೇ ಫೋಟೋ ತೆಗೆದ್ಬಿಟ್ಟು ಹೊಸ ಚಿತ್ರ ಹಾಕೋಣಾಂತ "   ಹಾಗಂದ  ತರುವಾಯ ಶೀಲಾ ಗದ್ದೆಗಳ ಕಡೆ ದೃಷ್ಟಿ ಇಟ್ಟಳು.  ನನಗಂತೂ ತೂಕಡಿಕೆ ಶುರುವಾಯಿತು,  " ಜೇನುಕಲ್ ಬೆಟ್ಟ ಬಂತು..." ಅಂದಾಗಲೇ ಕಣ್ಣು ಬಿಟ್ಟಿದ್ದು.

ನಾವು ಬೆಟ್ಟದ ಬುಡದಲ್ಲಿದ್ದೆವು,   ಅದಾಗಲೇ ಅಲ್ಲಿ ಜನಸಂದಣಿ ನೆರೆದಿತ್ತು.   ಎತ್ತರದ ಬೆಟ್ಟ ನೋಡುತ್ತಲೇ  " ಇದನ್ನು ಏರಲು ನನ್ನಿಂದಾದೀತೇ..." ಕೇಳಿಯೇ ಬಿಟ್ಟೆ.   ಗುಡ್ಡ ಏರಲು ಎರಡೂ ಬದಿಯಿಂದಾಗಿ ಮೆಟ್ಟಿಲುಗಳಿದ್ದುವು.   ಒಟ್ಟು ಸಾವಿರದಿನ್ನೂರು ಮೆಟ್ಟಿಲುಗಳಿವೆಯಂತೆ,  ಶೀಲಾ ಹೇಳಿದ್ದು.   ಇಲ್ಲಿ ದೈವದರ್ಶನಕ್ಕೆ ಹುಣ್ಣಿಮೆಯಂದೇ ಪ್ರಾಶಸ್ತ್ಯ.   ಕಾಕತಾಳೀಯವೋ ಎಂಬಂತೆ ಆ ದಿನ ಹುಣ್ಣಿಮೆಯಾಗಿತ್ತು.   ಇಲ್ಲಿನ ಆಚರಣೆಗೆ ಸಂಬಂಧಿಸಿದ ಸ್ಥಳಪುರಾಣಗಳು ಸಾಕಷ್ಟಿವೆ,   ಅವನ್ನೆಲ್ಲ ಮೊದಲೇ ಸಂಗ್ರಹಿಸಿಟ್ಟುಕೊಳ್ಳಬೇಕಾಗಿತ್ತು,   ಈಗ ಊರಿಗೆ ವಾಪಸ್ ಆದ ಮೇಲೆ ಕೇಳುವುದು ಯಾರನ್ನು ?   

" ನೀವು ಕಾರಿನೊಳಗೇ ಕೂತಿರಿ ಹಾಗಿದ್ರೆ,  ಐ ಪ್ಯಾಡ್ ನಲ್ಲಿ ಅರಸೀಕೆರೆಯ ಸ್ನೇಹಿತರನ್ನು ಕಾಂಟ್ಯಾಕ್ಟ್ ಮಾಡ್ಲಿಕ್ಕಾಗುತ್ತಾ ನೋಡಿ "  ಅಂದ ಗಿರೀಶ.  ನನ್ನ ಕೈಯಲ್ಲಿ ಐ ಪಾಡನ್ನು ಹಿಡಿಸಿ ಬಿಟ್ಟು ಮೂವರೂ ಬೀಸು ನಡಿಗೆಯಲ್ಲಿ ಮುಂದೆ ಹೋದರು.   ಐ ಪಾಡು ಕೈ ತಪ್ಪಿ ದಿನ ಎಷ್ಟಾಯ್ತು ಅಂತ ಲೆಕ್ಕ ಹಾಕುತ್ತಾ ನನ್ನ ಫೇಸ್ ಬುಕ್ ಖಾತೆ ತೆರೆಯಲು ಯತ್ನಿಸಿದೆ.   ಬಾಗಿಲು ತೆರೆಯೇ ಪುಟ್ಟಕ್ಕ ಎಂದು ಹೇಗೆ ಪುಸಲಾಯಿಸಿದರೂ ನನ್ ಪುಟ್ಟಕ್ಕ ಒಪ್ಪಲಿಲ್ಲ. ಇದಾಗದ ಕೆಲಸವೆಂದು ಸುಮ್ಮನಿದ್ದು ಮಾಡುವುದಾದರೂ ಏನು?   ಬೆಟ್ಟ ಹತ್ತಿದವರು ವಾಪಸ್ ಬರಬೇಕಾದ್ರೇ ಗಂಟೆಯಾದೀತು.   ನಿದ್ರಿಸಲು ಯತ್ನಿಸಿದೆ.  ಅದೂ ಬರಲಿಲ್ಲ.   ಪುನಃ ಗಿರೀಶನ   ಐ ಪ್ಯಾಡ್ ಒಳಗೆ ಯಾವ apps ಗಳೆಲ್ಲಾ ಇವೆ ಅಂತ ಪರಿಶೀಲಿಸಲಾಗಿ ನನ್ನ ಕನ್ನಡ ಕೀ ಬೋರ್ಡ್ ಇದೆ !    ಇನ್ನೇತರ ಚಿಂತೆ, ಕನ್ನಡ  ಕೀಲಿಮಣೆಯಲ್ಲಿ ಒಂದೊಂದೇ ಅಕ್ಷರ ಛಾಪಿಸುತ್ತಾ ನನ್ನ ಪ್ರವಾಸದ ಆರಂಭದ ಮೊದಲ ಕಂತನ್ನು ಸರಸರನೆ ಬರೆದು ಮುಗಿಸಿ,  ನೋಟ್ ಪ್ಯಾಡ್ ಒಳಗೆ ಪೇಸ್ಟ್ ಮಾಡಿಟ್ಕೊಂಡಿದ್ದೂ ಆಯ್ತು.

ಮೂವರೂ ಬಂದರು.   " ಗುಡ್ಡದ ಮೇಲೆ ಏನ್ ದುಡ್ಡಿನ ರಾಶಿ ಗೊತ್ತಾ,  ಕಾಣಿಕೆ ಹಾಕೂದೆಲ್ಲಾ ನೋಟಿನ ಅಟ್ಟಿ ಅಟ್ಟಿ ಕಟ್ಟು.. " ಅಂದರು ಎಚ್.ಟಿ. ಭಟ್.  " ಜೇನುಗೂಡು ಹೇಳುವಷ್ಟೇನೂ ಕಾಣಿಸ್ಲಿಲ್ಲ "

" ಎಲ್ಲಿದೆ ಕೆಮರಾ?"  ಫೋಟೋ ನೋಡಿ ಆನಂದಿಸುವ ಹಂಬಲದಿಂದ ಕೇಳಿದ್ದು.

" ದುಡ್ಡಿನ ಫೋಟೋ ತೆಗೆಯಲು ಮನಸ್ಸು ಬರಲಿಲ್ಲ,  ಬೇರೆ ಫೋಟೋ ಇದೆ ನೋಡಿಕೋ "  ಐ ಫೋನ್ ಕೈಗಿತ್ತರು.

" ಬರೆದ್ರಾ ..." ಕೇಳುತ್ತಾ ಬಂದ ಗಿರೀಶ.  " ನೆಟ್ ಕನೆಕ್ಷನ್ ಸಿಕ್ತಾ ...."

" ಇಂಥಾ ಗ್ರಾಮದಲ್ಲಿ ನೆಟ್ಟೂ ಇಲ್ಲ..."

" ಅರಸೀಕೆರೆಯಲ್ಲಿ ನೆಟ್ ವರ್ಕ್ ಸಿಗಬಹುದು,  ಅಲ್ಲಿ ನೋಡುವಾ..." 

ಇಲ್ಲಿ ಅನ್ನ ದಾಸೋಹ ಅಂತ ಊಟದ ವ್ಯವಸ್ಥೆ ಇದೆ.   ನಮ್ಮ ಸಂಜೆಯ ಚಹಾ ಆಗಿರಲಿಲ್ಲ.   ಒಂದು ಛತ್ರದಂತಹ ಕಟ್ಟಡ.   ಭಕ್ತಾದಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳೂ ಇದರೊಳಗಿವೆ.  ಸ್ನಾನ,  ಶೌಚಗೃಹಗಳು ಚೆನ್ನಾಗಿವೆ.   ದಾಸೋಹದ ಅನ್ನ, ರಸಂಗಳನ್ನೇ ನಮಗೆ ಬೇಕಿದ್ದಷ್ಟೇ ಹಾಕಿಸಿಕೊಂಡು ತಿಂದು ಉಲ್ಲಸಿತರಾದ ನಂತರ ಅರಸೀಕೆರೆಯತ್ತ ಮುಂದುವರಿಯಿತು ನಮ್ಮ ವಾಹನ.   ಅರಸೀಕೆರೆ ಪಟ್ಟಣ ತಲಪುವಾಗ ರಾತ್ರಿ ಏಳೂವರೆಯಾಗಿತ್ತು.     " ಹೊತ್ತಲ್ಲದ ಹೊತ್ತಿಗೆ ಸ್ನೇಹಿತರನ್ನು ಹುಡುಕಿಕೊಂಡೂ ಹೋಗಿ ಅವರಿಗೆ ತೊಂದರೆ ಕೊಡುವುದು ಸರಿಯಲ್ಲ " ಎಂದರು ನಮ್ಮೆಜಮಾನ್ರು.   " ಸರಿ.  ಕಾರು ಮುಂದೆ ಮುಂದೆ ಹೋಗಲೀ "  ಅಂದ ಗಿರೀಶ್. 

ಜೇನುಕಲ್ ಬೆಟ್ಟದಿಂದ ಹಿಂತಿರುಗುವಾಗ ಶೀಲಾ ಮತ್ತೊಂದು ತೀರ್ಥಕ್ಷೇತ್ರ,  ಬೆಳಗೂರು ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿ ಸನ್ನಿಧಿಗೆ ಅವಳ ಸ್ನೇಹಿತೆಯ ಹುಕುಂ ಪ್ರಕಾರ ಹೋಗಲಿಕ್ಕಿದೆ ಎಂಬ ಹೊಸ ಸುದ್ದಿಯನ್ನು ಹೊರ ಹಾಕಿದಳು.   ಇದುವರೆಗೂ ತೆಪ್ಪಗಿದ್ದ ನಾನು ಮತ್ತೂ ತೆಪ್ಪಗಿರಬೇಕಾಯಿತು.   ಅಲ್ಲಿ ರಾತ್ರಿ ಉಳಕೊಳ್ಳುವ ವ್ಯವಸ್ಥೆಯೂ ಇದೆ ಎಂದೂ ತಿಳಿಯಿತು.   ಪುಟ್ಟ ಮಗೂ ಥರ  " ಅಲ್ಲಿ ಈ ದಿನ ಜಾತ್ರೆ ಇದೆ "  ಅಂದಳು.   ನನಗೂ ನಗು ಬಂದಿತು.   ಮುಖ್ಯ ರಸ್ತೆಯಿಂದ ಕವಲೊಡೆಯುವ ಮಾರ್ಗ ಬಂದಾಗ ಕಾರು ನಿಲ್ಲಿಸಿ, ನಾವು ಹೋಗುತ್ತಿರುವ ರಸ್ತೆ  ಬೆಳಗೂರು ಆಂಜನೇಯ ಸ್ವಾಮಿ ಇರುವಲ್ಲಿಗೆ ಎಂದೇ ಖಚಿತ ಪಡಿಸಿಕೊಂಡೇ ಮುಂದುವರಿದರೂ ದಾರಿ ತಪ್ಪಿತು.   ರಸ್ತೆಯಂತೂ ಬಹಳ ಕೆಟ್ಟದು,  ಡಾಮರೀಕರಣ ಇನ್ನೂ ಆಗಬೇಕಾಗಿದೆ,  ದಪ್ಪ ದಪ್ಪ ಜಲ್ಲಿಕಲ್ಲುಗಳನ್ನು ಹಾಕಿ ಬಿಟ್ಟಂತಹ ರಸ್ತೆ,  ನಮ್ಮ ಅತ್ಯಾಧುನಿಕ ವಾಹನ ಗುಡುಗುಡು ಗುಮ್ಮಟ ದೇವರಂತೆ ತೆವಳುತ್ತಾ ಮುಂದುವರಿಯಿತು.    ಸುತ್ತುಬಳಸಿನ ದಾರಿಯಿಂದಲಾದರೂ ಸನ್ನಿಧಿ ತಲಪಿದೆವು.   ಕಾರಿನ ಬಾಗಿಲು ತೆರೆಯುತ್ತಿದ್ದ ಹಾಗೇ ಹೊರಗಿನ ಚಳಿ ಅನುಭವಕ್ಕೆ ಬಂದು ಬೇಗ ಬೇಗ ದಪ್ಪ ಕೋಟುಗಳನ್ನು ಧರಿಸಿಯೇ ಹೊರಗಿಳಿಯುವಂತಾಯಿತು.   

" ಕೋಟು ತೆಕ್ಕೊಂಡಿದ್ದು ಸಾರ್ಥಕವಾಯಿತು "  ಅಂದರು ನಮ್ಮೆಜಮಾನ್ರು.

ಶೀಲಾ ಅಂದಂತೆ ಆ ಪರಿಸರದಲ್ಲಿ ಜಾತ್ರೆಯ ವಾತಾವರಣ.   ನಮಗೇನೂ ಜಾತ್ರೆ ಬೇಕಾಗಿರಲಿಲ್ಲ,  ಸಂತೆಗದ್ದಲವೂ ಬೇಡ.   ನಮಗಾಗಿ ಕಾದಿರಿಸಿದ್ದ ಅತಿಥಿಗೃಹದ ಕಡೆ ಹಜ್ಜೆ ಹಾಕಿದೆವು.  ಎರಡನೇ ಮಹಡಿ ಮೇಲಿತ್ತು ಆ ಕೋಣೆ.   ವಿಶಾಲವಾದ ಹಾಲ್,   ಅದನ್ನೇ ಹಲವು ರೂಮುಗಳಾಗಿ ವಿಭಾಗಿಸಿದ್ದರು.  ನಾವು ಹೊಕ್ಕ ರೂಮ್ ಒಳಗಡೆ ದೊಡ್ಡದಾದ ಒಂದು ಜಮಖಾನ,  ಐದಾರು ಮಂದಿ ಮಲಗಬಹುದಾದಷ್ಟು ದೊಡ್ಡದಿತ್ತು,  ಒಂದು ಚಾಪೆಯೂ ಇದ್ದಿತು.  

  " ಈ ಜಮಖಾನ ಒಮ್ಮೆ ಕೊಡವಿದ್ರೆ ಚೆನ್ನಾಗಿತ್ತು,  ತುಂಬಾ ಧೂಳು ಇದ್ದ ಹಾಗಿದೆ..."

" ಧೂಳು ಇದೇಂತ ಮುಟ್ಟೀ ತಟ್ಟೀ ಮಾಡಿದ್ರೆ ಅಲರ್ಜೀ ಕೆಮ್ಮು ಶುರು ಆಗಿ ಬಿಟ್ರೆ ದೇವ್ರೇ ಗತಿ....ಸುಮ್ಮನಿರಿ "

 ನಮ್ಮವರು  " ಒಂದು ಚಾಪೆ ಇದೆ,  ಚಳಿಗೆ ಸಾಕು "  ಎಂದು ಸಮಾಧಾನ ಪಟ್ಟರು.   " ಈ ಚಾಪೆ ಅಡ್ಡಲಾಗಿ ಬಿಡಿಸಿದರೆ ನಾಲ್ವರಿಗೂ ಮಲಗಬಹುದು "

" ಹೇಗೆ ಬೇಕಾದ್ರೂ ಬಿಡಿಸ್ಕೊಳ್ಳಿ,  ನಾನಂತೂ ಈಗ್ಲೇ ಮಲಗೂದು "

ಗಿರೀಶ್ ಹಾಗೂ ಶೀಲಾ ಕಾರಿನಲ್ಲಿದ್ದ ನಮ್ಮ ಲಗ್ಗೇಜ್ ಈ ಮೂರನೇ ಮಹಡಿಗೆ ಹೊತ್ತು ತರಲು ಹೋಗಿದ್ದರು.    ನಮಗಿಬ್ಬರಿಗೂ ಸುಸ್ತಾಗಿತ್ತು.   " ಮನೆ ಕಡೆ ಏನೂ ಚಿಂತೆ ಮಾಡ್ಬೇಡಿ,  ಸಾವಕಾಶವಾಗಿ ಬನ್ನಿ "  ಹೀಗೆ ಮನೆ ಉಸ್ತುವಾರಿ ಹೊಣೆ ತೆಗೆದುಕೊಂಡಿದ್ದ ಚಿದಾನಂದ್ ಇವತ್ತು ಕೂಡಾ ಹೇಳಿದ್ದರು.  ಆರಂಭದ ಮೂರು ದಿನಗಳಲ್ಲಿ ಸಂಬಂಧಿಕರ ಮನೆಯಿದ್ದಿತು.   ಊಟ ಉಪಾಹಾರಗಳಿಗೂ ತೊಂದರೆಯಿರಲಿಲ್ಲ.  ಗುರುತು ಪರಿಚಯದವರು ಯಾರೂ ಇಲ್ಲದ ಸ್ಥಳದಲ್ಲಿ ಸಿಕ್ಕ ಸೌಲಭ್ಯಕ್ಕೆ ತೃಪ್ತಿ ಪಡಬೇಕಾಯಿತು.  " ಗಿರೀಶ ಇಲ್ಲಿ ಹ್ಯಾಗೆ ಬೆಳಗಾಗೋ ತನಕ ಮಲಗಿರ್ತಾನೆ, ನೋಡ್ಬೇಕೀವಾಗ " ಎಂದರು ನಮ್ಮವರು.   

ಗಿರೀಶ್ ದಂಪತಿ ನಮ್ಮ ಬ್ಯಾಗುಗಳನ್ನು ಹೊತ್ತು ತಂದರು.   ಅವನ ಬ್ಯಾಗಿನಿಂದ ಬೆಡ್ ಶೀಟುಗಳು ಹೊರ ಬಂದವು.  ಹಾಕಿಕೊಂಡ ಕೋಟು, ಹೊದೆಯಲೊಂದು ಹೊದಿಕೆ,  ಚಳಿ ಎದುರಿಸಲು ಸಾಕು ಎಂದಿತು ಮನಸ್ಸು.   ಆ ಹೊತ್ತಿಗೆ ನಮ್ಮ ಕೊಠಡಿಯ ಬಾಗಿಲು ತಟ್ಟಿದ ಸದ್ದು.  ಗಿರೀಶ್ ಬಾಗಿಲು ತೆರೆದ.   ಹೊರಗಿದ್ದ ನಾಲ್ಕು ಜನರ ಗುಂಪು ತಮ್ಮದೊಂದು ಚಾಪೆ ಈ ರೂಮಿನಲ್ಲಿರುವುದಾಗಿ ಹೇಳಿಕೊಂಡಿತು.  ಚಾಪೆ ಹೊರ ಹೋಯಿತು.   

ರಾತ್ರಿಯೂಟಕ್ಕೆ ಪುನಃ ಎರಡು ಮಹಡಿ ಮೆಟ್ಟಿಲಿಳಿದು ಕೆಳ ಹೋಗಬೇಕಾಯಿತು.   ಬಾತ್ ರೂಂ ಹಾಗೂ ಟಾಯ್ಲೆಟ್ ಮೇಲ್ಗಡೇನೇ ಇದ್ದರೂ ತೀರಾ ಶೋಚನೀಯ ಸ್ಥಿತಿಯಲ್ಲಿದ್ದವು.   ಕೊರೆಯುವ ಚಳಿ ಹಾಗೂ ತಣ್ಣಗಿನ ನೀರು ನೋಡಿಯೇ ನಾನು ಹೌಹಾರಿದೆ.  " ಶೀಲಾ,  ಈ ಸ್ನಾನದ ಮನೆಯ ಒಳಗೆ ಕಾಲಿಡಲು ಸಾಧ್ಯವಿಲ್ಲ,  ನನ್ನ ಸ್ನಾನ ಏನಿದ್ರೂ ಇನ್ನು ಮನೆಗೆ ಹೋದ್ಮೇಲೆ "

" ನಾಳೆ ಚಿಕ್ಕಮಗಳೂರಿನಲ್ಲಿ ನನ್ ಫ್ರೆಂಡು ಮನೆಗೆ ಹೋಗ್ತೀವಲ್ಲ,  ಅಲ್ಲಿ ಮಿಂದರಾಯಿತು "  ಅಂದಳು ಶೀಲಾ.

ಊಟವೇನೂ ಬೇಕಾಗಿರಲಿಲ್ಲ,  ಆದರೂ ದೈವಸನ್ನಿಧಿಯ ಪ್ರಸಾದವೆಂದು ಊಟದ ಹಾಲ್ ಹುಡುಕಿಕೊಂಡು ಹೋದೆವು.   ದೊಡ್ಡದಾದ ಅಂಗಣ,  ಒಂದೇ ಬಾರಿ ಇನ್ನೂರು - ಮುನ್ನೂರು ಮಂದಿ ಕುಳಿತುಕೊಳ್ಳಬಹುದು.   ಅದಾಗಲೇ ಊಟಕ್ಕೆ ಕುಳಿತವರೊಂದಿಗೆ ನಾವೂ ಕುಳಿತೆವು.    ವೃತ್ತಾಕಾರದ ಎಲೆ,  ಹಲವು ಎಲೆಗಳನ್ನು ಕಡ್ಡಿಯಿಂದ ಜೋಡಿಸಿ ಮಾಡಿರುವಂಥದು.   " ಓ,  ಇದು ಮುತ್ತುಗದೆಲೆ... ಒಂದು ಫೋಟೋ ತಗೆದಿಡಿ "  ಅಂದೆ.  ನಮ್ಮ ನೆಚ್ಚಿನ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪ ,  ' ಗೃಹಭಂಗ '  ಕಾದಂಬರಿಯಲ್ಲಿ ಮುತ್ತುಗದೆಲೆಯ ತಟ್ಟೆಯನ್ನು ತಂದಿದ್ದಾರೆ.  ಅವರೂ ಇದೇ ಅರಸೀಕೆರೆಯವರು ತಾನೇ.    
ಊಟದ ಶಾಸ್ತ್ರ ಮುಗಿಸಿ,  ಜನಜಂಗುಳಿಯ ಎಡೆಯಲ್ಲಿ ಪ್ರಯಾಸಪಟ್ಟು ಕೈತೊಳೆದು ಪುನಃ ಮೇಲೆ ಹತ್ತಿ ಮಲಗುವ ಸಿದ್ಧತೆ ನಡೆಸಿದೆವು.   ಗಿರೀಶ್ ಹಾಗೂ ಶೀಲಾ ದೇವರ ದರ್ಶನ ಮತ್ತು ಅರ್ಚನೆ ಮಾಡಿಸಲಿಕ್ಕಿದೆಯೆಂದು ಕೆಳಗಿಳಿದು ಹೋದರು.

" ಇನ್ನು ಪ್ರಯಾಣ ಮುಂದುವರಿಸಲು ಬಿಡಬಾರದು "  ಇಷ್ಟು ದಿನಾ ಮನೆ ಊಟ, ವಸತಿ ದೊರೆತಿತ್ತು.    " ಅಂತಹ ಸೌಕರ್ಯ ಇನ್ನು ಸಿಗುವಂಹುದಲ್ಲ "

" ಹೌದೂ,  ಬಾಣಾವರದಿಂದ ಬಳ್ಳಾರಿಗೆ ಹೋಗ್ಬಹುದು ಅಂತಿದ್ನಲ್ಲ "

" ಎಲ್ಲಿಗೂ ಬೇಡ,  ಏನಿದೇ ಬಳ್ಳಾರಿಯಲ್ಲಿ ?    ನಾಳೆ ಉಪಾಯದಿಂದ ಮನೆ ಕಡೆ ತಿರುಗಿಸುವಾ,  ಬೀಗದಕೈ ಸಿಕ್ತಾ "

" ನಾನು ಎಲ್ಲೀಂತ ಹುಡುಕಲಿ,  ಅದೊಂದು ಕರ್ಮ..."  ಬಳ್ಳಾರಿಗೆ ಹಿಂದೆ ಸರ್ಕಾರಿ ನೌಕರರಿಗೆ ವರ್ಗಾವಣೆ ಅಯ್ತೂಂದ್ರೆ ಮೇಲಧಿಕಾರಿಗಳ ಕೋಪಕ್ಕೆ ಗುರಿಯಾದವನೆಂದೇ ಲೆಕ್ಕ,   ಎಲ್ಲೋ ಓದಿದ ನೆನಪಾಯಿತು.   ಪುನಃ ನನ್ನ ಮೂಡ್ ಕೆಟ್ಟಿತು.   ಜಮಖಾನದ ಮೇಲೆ,  ತಲೆದಿಂಬು ಕೂಡಾ ಇಲ್ಲದೆ ನೆಟ್ಟಗೆ ಸೂರು ದಿಟ್ಟಿಸುತ್ತ,  ಕೆಳಗಡೆಯಿಂದ ಕೇಳಿಬರುತ್ತಿದ್ದ ವಿಧವಿಧವಾದ ನಾದನಿನಾದಗಳನ್ನು ಆಲಿಸುತ್ತಾ ಮಲಗಿದ್ದಂತೆ...

ಗಿರೀಶ್ ಹಾಗೂ ಶೀಲಾ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳನ್ನೆಲ್ಲ ವೀಕ್ಷಿಸಿ ಮೇಲೆ ಹತ್ತಿ ಬಂದರು.   ಇವರು ಹ್ಯಾಗೆ ಮಲಗಲಿದ್ದಾರೆ ಎಂದೂ ನೋಡ್ಬೇಡವೇ,   ಗಿರೀಶ್ ಹಾಸಿಗೆ,  ಅಲ್ಲಲ್ಲ,  ಜಮಖಾನದ ಮೇಲೆ ಕುಳಿತು ಬ್ಯಾಗುಗಳನ್ನು ಬಿಡಿಸಿದ.   ಒಂದೊಂದಾಗಿ ನನ್ನ ಸೀರೆಗಳು ಹೊರ ಬಂದವು.   ಒಂದರ ಮೇಲೊಂದರಂತೆ ದಪ್ಪ ದಪ್ಪ ಸೀರೆಗಳನ್ನು ಪೇರಿಸಿಟ್ಟು ತಲೆದಿಂಬಾಗಿಸಿ ಗಿರೀಶ್ ಮಲಗಿಯೇ ಬಿಟ್ಟ.    ನಾವೂ ಅವನು ಖಾಲಿ ಮಾಡಿದ ಬ್ಯಾಗುಗಳನ್ನು ತಲೆಯಡಿಗೆ ಇರಿಸಿಕೊಳ್ಳುವಷ್ಟು ಬುದ್ಧಿವಂತರಾದೆವು.   
ಗದ್ದಲಗಳೆಲ್ಲ ನಿಲ್ಲುತ್ತಿದ್ದ ಹಾಗೇ ಇನ್ನೇನು ನಿದ್ರೆ ಬರಲಿದೆ ಅಂದುಕೊಂಡಿದ್ದ ಹಾಗೆ ಕರ್ಕಶ ಧ್ವನಿಯೊಂದಿಗೆ ಹಾರ್ಮೋನಿಯಂ ವಾದ್ಯಗೋಷ್ಠಿ ಆರಂಭವಾಯಿತು.   ನಾವು ಮೇಲೆ ಹತ್ತಿ ಬರುತ್ತಿರಬೇಕಾದರೇ ಈ ವಾದ್ಯಗಾರರನ್ನು ಗಮನಿಸಿದ್ದವು.   ಕರಿ ಕಂಬಳಿ ಹೊದ್ದುಕೊಂಡು ಮೂಲೆಯಲ್ಲಿ ತೆಪ್ಪಗಿದ್ದ ಈ ಮಂದಿ ಈಗೇಕೆ ಹಾಡುಗಾರಿಕೆ ಪ್ರಾರಂಭಿಸಿದರೆಂಬುದೇ ನಮಗೆ ಅರ್ಥವಾಗಲಿಲ್ಲ.    ಅದೇನು ಹಾಡುತ್ತಿದ್ದರೋ ಅವರಿಗೇ ಗೊತ್ತು.   ಜೊತೆಗೆ ಒಂದು ಚರ್ಮವಾದ್ಯದಿಂದ ಡಕ್ ಡಕ್... ಶಬ್ದ ಬೇರೆ.   ಈ ಸಂಗೀತದಲ್ಲಿ ಶ್ರುತಿ ತಾಳಗಳೇನೂ ಇದ್ದಂತಿರಲಿಲ್ಲ.   ನಿದ್ದೆ ಬಂತೋ ಇಲ್ವೋ ಮಲಗಿದೆವು.   

ನಮ್ಮ ರಥಸಾರಥಿ ದಢಕ್ಕೆಂದು ಎದ್ದ.  

 " ಏನಾಯ್ತು ಗಿರೀ..."

" ಆಯ್ತು ಗಂಟೆ ನಾಲ್ಕೂವರೆ,  ಹೊರಡುವಾ...."

" ಇಷ್ಟು ಬೇಗ,  ಈ ಕತ್ತಲಲ್ಲಿ ಎಲ್ಲಿಗೆ ?"

" ಇಲ್ಲಿಂದ ಗುಡು ಗುಡೂಂತ ಹೋಗುವಾಗ ಬೆಳಗಾಗ್ತದೆ ..."

ಮಲಗಿದಲ್ಲಿಂದ ಎದ್ದೆವು.   ಹೊದಿಕೆ ವಸ್ತ್ರಗಳು,  ತಲೆದಿಂಬಾಗಿದ್ದ ಸೀರೆಗಳು ಯಥಾಸ್ಥಾನ ಸೇರಿದಂತೆ ನಾವು ಉಪ್ಪರಿಗೆ ಮೆಟ್ಟಿಲಿಳಿದು ಕತ್ತಲಲ್ಲಿ ಮುಂದುವರಿದೆವು.   ಸಂಗೀತಗಾರರು ಈಗಲೂ ಹಾಡುತ್ತಲೇ ಇದ್ದರು....- ಮುಂದುವರಿಯಲಿದೆ.  Posted via DraftCraft app

Saturday, 8 February 2014

ಯಶಸ್ವೀ ಮಹಿಳೆಯ ಹಿಂದೆ ....ನಾವು ಎರಡೂ ದಿನ ಉಳಕೊಂಡಿದ್ದು ತಂಗಿಯ ಮನೆಯಲ್ಲಿ.   ಮಾರನೇ ದಿನ ಬೆಳಗೆದ್ದು ಪುಳಿಯೋಗರೆ ಹಾಗೂ ಕಾಯಿಹೋಳಿಗೆಯ ಆತಿಥ್ಯದೊಂದಿಗೆ ಮುಂದಿನ ಪ್ರಯಾಣಕ್ಕೆ ಸಜ್ಜಾದೆವು.   ಪುಳಿಯೋಗರೆ ತಿನ್ನುತ್ತಿರಬೇಕಾದರೆ  ಮೇಲುಕೋಟೆಯಲ್ಲಿ ತಿಂದ ಖಾರದ ಕೊಳ್ಳಿಯಂತಹ ಪುಳಿಯೋಗರೆ ನೆನಪಿಗೆ ಬರದಿದ್ದೀತೇ...   " ಈ ಪುಳಿಯೋಗರೆ ಇಷ್ಟು ರುಚಿಕಟ್ಟಾಗಿದೆ...ಹ್ಯಾಗೆ ಮಾಡಿದ್ದೂ "  ವಿಚಾರಿಸಿ ತಿಳ್ಕೊಂಡಿದ್ದೂ ಆಯಿತು.   ಪ್ರವಾಸದ ಆರಂಭದ ದಿನ ಚಿತ್ತುಪುಳಿ ಹಣ್ಣು ರಸ್ತೆ ಬದಿಯಿಂದ ಖರೀದಿಸಿದ್ದೆವು.   ಅದನ್ನು ಸಿಪ್ಪೆ ಸುಲಿದು ತಿನ್ಬೇಕಿದ್ರೂ ಉಪ್ಪು, ಮೆಣಸಿನ ಹುಡಿಯೂ ಬಂದಿತ್ತು.   ಚಾಮುಂಡಿ ಬೆಟ್ಟದ ರಾಜನೆಲ್ಲಿಕಾಯಿಗೂ ಅಷ್ಟೇ, ಉಪ್ಪು ಮೆಣಸು ಹಾಕಿಯೇ ಮಾರ್ತಿದ್ರು.   ಹೀಗೆ ಪ್ರವಾಸ ಹೋದಲ್ಲೆಲ್ಲಾ ಮೆಣಸು ತಿನ್ನುತ್ತಾ ಬಂದ್ರೆ ಮನೆ ತಲಪುವಾಗ ನಮ್ಮ ಜಠರದ ಗತಿಯೇನಾದೀತು ಅಂತ ಮನದೊಳಗೇ ಅಂದುಕೊಂಡಿದ್ದನ್ನು ಬಾಯಿ ಬಿಟ್ಟು ತಂಗಿಯ ಬಳಿ ಹೇಳಲಿಲ್ಲ.

  ತಂಗಿ ವರಲಕ್ಷ್ಮಿಯ ಪತಿ ಯು.ಕೆ. ಭಟ್ ಉದ್ಯಮಿ,  ಸುಮಾರು ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲಿದ್ದಾರೆ.   ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಯು. ಕೇಶವ ಭಟ್ ಲ್ಯಾಬ್ ಉಪಕರಣಗಳ ತಯಾರಿಕಾ ಘಟಕವನ್ನು ಪ್ರಾರಂಭಿಸಿ ಯಶಸ್ವೀ ಆದರು.    ಆ ವೇಳೆಗೆ ನನ್ನ ತಂಗಿ ವರಲಕ್ಷ್ಮಿ ಜೊತೆ ವಿವಾಹಿತರಾದ ಕೇಶವ ಭಟ್,  ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಹೊರ ಬಂದ ವಿದ್ಯಾರ್ಥಿನಿಯಾದ ವರಲಕ್ಷ್ಮಿಗೆ ಬೆಂಗಳೂರಿನಲ್ಲೇ ಪಿ. ಎಚ್ ಡಿ ಪದವಿ ವ್ಯಾಸಂಗಕ್ಕೆ ಬೇಕಾದ ಅನುಕೂಲತೆಗಳನ್ನು ಒದಗಿಸಿ ಕೊಟ್ಟು,  ಒಬ್ಬ ಯಶಸ್ವೀ ಮಹಿಳೆಯ ಹಿಂದೆ ಕಾಳಜಿ ವಹಿಸುವ ಪತಿಯಿರುತ್ತಾನೆ ಎಂಬುದನ್ನೂ ತೋರಿಸಿಕೊಟ್ಟರು.    ವಿಟ್ಲದ ಸಮೀಪ ಉಕ್ಕುಡ ಎಂಬಲ್ಲಿ ಹಿರಿಯರಿಂದ ಬಂದ ಗದ್ದೆ, ತೋಟಗಳ ಉಸ್ತುವಾರಿ ಮಾಡುತ್ತಾ ಇದ್ದ ಸಹೋದರ ಸತ್ಯನಾರಾಯಣನನ್ನೂ ಗ್ರಾಮೀಣ ಪ್ರದೇಶದ ಸಂಪನ್ಮೂಲಗಳನ್ನು ಬಳಸಿ ಉದ್ಯಮಿಯಾಗಿ ನೆಲೆ ನಿಲ್ಲಿಸಿದ್ದೂ ಇವರ ಸಾಧನೆ.   ಉಕ್ಕುಡದಲ್ಲಿರುವ ಇವರ ತಮ್ಮನ ಗೇರುಬೀಜದ ಫ್ಯಾಕ್ಟರಿ ನೂರಾರು ಕಾರ್ಮಿಕರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿದೆ.

ಮೊದಲು ಯು. ಕೆ. ಭಟ್ ಜೊತೆ ಅವರದ್ದೇ ಆದ Sharadatronic Instruments ಫ್ಯಾಕ್ಟರಿಯನ್ನು ನೋಡಿಕೊಂಡು ಮುಂದುವರಿಯೋಣ.

ದಾವಣಗೆರೆ ಬೆಣ್ಣೆ ದೋಸೆ ಇಲ್ಲಿ ಸಿಗುತ್ತದೆ -  ಎಂಬ ಫಲಕ ದೊಡ್ಡದಾಗಿ ಹಾಕಿದ್ದ ಹೋಟಲ್ ಎದುರಾಯಿತು.  " ಅಹ್ಹಾ... ಹೋಗೋಣ ಒಳಗೆ... ತಿಂದ್ಬಿಟ್ಟು ಬ್ಲಾಗ್ ಬರೆಯೋಣ ಅಕ್ಕಾ  "  ಗಿರೀಶ್ ರಾಗ ಶುರುವಾಯ್ತು.    ಹೋಟಲ್ ಒಳ ಹೊಕ್ಕಿದ್ದಾಯ್ತು,   ನೋಡಿದ್ರೆ ಸಂಜೆ ಮೂರು ಗಂಟೆಯ ನಂತರ ಈ ದೋಸೆ ಲಭ್ಯವಂತೆ.   ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗುವಂತಾಯಿತು.

ಮೈಸೂರಾಯ್ತು,  ಬೆಂಗಳೂರೂ ಸಾಕಾಯ್ತು ಎಂಬಂತೆ ನಾವಿಬ್ಬರಿದ್ದೆವು.   ಆದರೆ ಗಿರೀಶ್ ಕೇಳಬೇಕಲ್ಲ.  " ಇಸ್ಕಾನ್.... " ಅನ್ನುತ್ತಿದ್ದಂತೆ ನಾನೇ ಬೇಡ ಅಂದೆ.  ಅಲ್ಲಿಗೆ ಈ ಮೊದಲು ಕೇಶವ್ ಹಾಗೂ ತಂಗಿ ಜೊತೆ ಎರಡು ಮೂರು ಬಾರಿ ಹೋಗಿಯಾಗಿತ್ತು.   " ಕಬ್ಬನ್ ಪಾರ್ಕೂ ಬೇಡ " ಮನೆಗೆ ಹಿಂತಿರುಗುವ ಹಂಬಲ ನಮ್ಮದು.  ಇಲೆಕ್ಟ್ರಾನಿಕ್ಸ್ ಉಪಕರಣಗಳ ಶೋರೂಂ ಒಂದನ್ನು ಪ್ರವೇಶಿಸಿದ ಸ್ನೇಹಿತರು ಅಲ್ಲಿದ್ದ ಟೀವಿ,  ಅವುಗಳ ಸೌಂಡ್ ಸಿಸ್ಟಂ,  ವೀಡಿಯೋ ಕ್ವಾಲಿಟಿಗಳನ್ನು ತಪಾಸಿಸಿ ಏನನ್ನೂ ಕೊಳ್ಳದೆ ಹೊರಟರು.   ನಮ್ಮ ಮನೆಯಲ್ಲಿರುವ ಟೀವಿ ಎದುರು ಇವೆಲ್ಲ ಸಪ್ಪೆ ಎಂದು ನನಗೂ ಆನ್ನಿಸಿತ್ತು. 

 " ನಾವಿನ್ನು ಹಾಸನ ರಸ್ತೆಯಲ್ಲಿ ಮುಂದುವರಿಯಲಿದ್ದೇವೆ " ಎಂದ ಗಿರೀಶ್.   ಬೆಂಗಳೂರು ನಗರದಿಂದ ಹೊರ ಬರ ಬೇಕಾದರೇ ಸಾಕುಬೇಕಾಯಿತು.   - ಮುಂದುವರಿಯಲಿದೆ.

Posted via DraftCraft app

Saturday, 1 February 2014

ಪಟ್ಟಣಕ್ಕೆ ಬಂದ ಪುಟ್ಟಕ್ಕಕಾರು ಪಾರ್ಕಿಂಗ್ ಮಾಡ್ಬಿಟ್ಟು ನಾವು ಶಾಪಿಂಗ್ ಮಾಲ್ ಸಂದರ್ಶಿಸಲು ಸಿದ್ಧರಾದೆವು.    ಎಲ್ಲಿ ಹೋದರೂ ಹತ್ತಲು ಮೆಟ್ಟಿಲು.   ಮೆಟ್ಟಿಲ ಮೇಲೆ ಸುಮ್ನೆ ನಿಲ್ಲೂದು,   ಸುಂಯ್ ಅಂತ ಮೇಲೇರುವ ಹಾಗೂ ಕೆಳಗಿಳಿಯುವ ಈ ಉಪ್ಪರಿಗೆ ಹತ್ತುವ ಇಳಿಯುವ ಕೆಲಸ ತೀರಾ ಪೇಚಾಟದಂತಾಯಿತು.   ಆದರೂ ವಿಧಿಯಿಲ್ಲ,  ಶೀಲಾ ಹಾಗೂ ಮಧು ನನಗೆ ಸಹಕಾರಿಗಳಾದರು.

ಮೇಲೆ ಬಂದಿದ್ದರಲ್ಲಿ ಕಣ್ಣಿಗೆ ಚೇತೋಹಾರಿ ದೃಶ್ಯ.   ಈ ಕಾಂಕ್ರೀಟ್ ಲೋಕದೊಳಗೂ ಸರೋವರ,   ಅದರೊಳಗೆ ಬೃಹತ್ ವೃಕ್ಷ,  ಥೇಟ್ ನಮ್ಮೂರಿನ ಪೈವಳಿಕೆಯಲ್ಲಿನ ಪಳ್ಳದ ಹಾಗೆ.   ಸುಮಾರು ಎರಡು ಎಕ್ರೆಗಿಂತಲೂ ಹೆಚ್ಚು ಸ್ಥಳವನ್ನಾಕ್ರಮಿಸಿರುವ ನಮ್ಮೂರಿನ ನೀರಿನ ಹಳ್ಳ ಮುಳಿಗದ್ದೆಯಿಂದ ಉಪ್ಪಳಕ್ಕೆ ಹೋಗುವ ರಸ್ತೆಯಲ್ಲಿ ಕಾಣ ಸಿಗುತ್ತದೆ.   ಪಳ್ಳದಲ್ಲಿ ಒಂದು ದೊಡ್ಡ ಮರವೂ,  ತುಸು ದೂರದಲ್ಲಿ ಒಂದು ಸೊಗಸಾದ ಬಾವಿಯೂ ಇದೆ.  ಬಾಯಿಕಟ್ಟೆ ಪಳ್ಳ  ಎಂದೇ ಈ ಸ್ಥಳಕ್ಕೆ ಹೆಸರು.   ಈ ನೈಸರ್ಗಿಕ ಕೆರೆ,  ಛೆ, ಕೆರೆ ಅಂದರೆ ತಪ್ಪಾದೀತು, ನೈಸರ್ಗಿಕ ಸರೋವರ,   ಪೈವಳಿಕೆ ಗ್ರಾಮದ ನೀರಿನ ಸೆಲೆ.   ನೀರಿನ ಆಗತ್ಯದ ಹೆಚ್ಚಿನೆಲ್ಲಾ ಕೆಲಸಗಳೂ ಇಲ್ಲೇ ನಡೆಯುತ್ತಿರುತ್ತವೆ.   ಬಟ್ಟೆ ತೊಳೆಯುವುದೂ,  ಒಣ ಹಾಕಿರುವುದೂ ಇಲ್ಲಿನ ಪಾರೆ ಕಲ್ಲುಗಳ ಮೇಲೇನೇ,    ವಾಹನಗಳನ್ನು ನಿರ್ಮಲವಾಗಿ ತೊಳೆಯಲೂ ಇದೇ ಸೂಕ್ತ ಜಾಗ.   ಘನ ವಾಹನಗಳಾದ ಬಸ್ಸು ಲಾರಿಗಳು ಮಿಂದು ಶುಚಿರ್ಭೂತವಾಗಿ ತೆರಳುವುದು ಇಲ್ಲಿಂದಲೇ.

ಈ ಸ್ಥಳವನ್ನು ನಮ್ಮ ಸರ್ಕಾರೀ ಯಂತ್ರ ಮನಸ್ಸು ಮಾಡಿದ್ದಿದ್ದರೆ ಉತ್ತಮ ಪ್ರವಾಸೀ ತಾಣವಾಗಿ ಕೇರಳದ ನಕ್ಷೆಯಲ್ಲಿ ಗುರುತಿಸಬಹುದಿತ್ತು.   ಅದು ಆಗದ ಕೆಲಸವಾಗಿದ್ದರೆ ಬೇಡ, ಬಿಟ್ಟು ಬಿಡೋಣ.   ಹಕ್ಕಿಗಳೂ ಹಾರಾಡುವ ಒಂದು ವಿಹಾರಯೋಗ್ಯ ಪ್ರದೇಶ.   ಮಳೆನೀರಿನಾಶ್ರಯದ ಹಳ್ಳವಾಗಿರುವುದರಿಂದ ಮಳೆಗಾಲದಲ್ಲಿ ಮಾತ್ರ ಇಲ್ಲಿ ಜಲವೈಭವ.   ಮಳೆಗಾಲ ಹೊರತುಪಡಿಸಿ,  ನೀರಿಲ್ಲದೆ ಒಣಗಿಯೇ ಹೋಗುವ ಈ ಪರಿಸರವನ್ನು ಕಂಡಾಗ ನಿಸರ್ಗಪ್ರಿಯರ ಕರುಳು ಕತ್ತರಿಸಿದಂತಾಗದಿರದು.     ಆ ಕಾರಣದಿಂದಲೇ ಬೆಂಗಳೂರಿನ ಈ ಕೃತಕ ಸರೋವರವನ್ನು ಕಂಡಾಗ ಮನಸ್ಸಿಗೆ ಹಾಯೆನಿಸಿದ್ದು.

ಪ್ರವಾಸಯೋಗ್ಯ ತಾಣಗಳು ನಮ್ಮೂರಿನಲ್ಲೇ ಬೇಕಾದಷ್ಟಿವೆ.   ನಮ್ಮ ಬಾಯಾರು ಗ್ರಾಮದ ನೆರೆಯಲ್ಲಿಯೇ ಇರುವ ಪೊಸಡಿಗುಂಪೆಯೂ ಇಂತಹ ಒಂದು ನಿಸರ್ಗರಮ್ಯ ತಾಣ.   ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಇಲ್ಲಿ ಅಂತಹ ಅಭಿವೃದ್ಧಿಯೇನೂ ಮಾಡಿಲ್ಲ.   ಕಿತ್ತು ಹೋಗಿರುವ ಡಾಮರು ರಸ್ತೆ,  ಪ್ರವಾಸಿಗಳಿಗೆ ಬೇಕಾದ ಮೂಲಭೂತ ಸೌಕರ್ಯ ಏನೂ ಇಲ್ಲಿಲ್ಲ.

- ಮುಂದುವರಿಯಲಿದೆ.

Posted via DraftCraft app