Pages

Ads 468x60px

Saturday, 25 June 2016

ಬನ್ನಂಗಾಯಿ ದೋಸೆ
                                           ಚೆನ್ನಪ್ಪ ಕೆಲಸಕ್ಕೆ ಬಾರದೇ ವಾರವಾಗಿತ್ತು.   ತೋಟದಿಂದ ಅವನೇ ಹೆಕ್ಕಿ ತಂದ ತೆಂಗಿನಕಾಯಿಗಳು ದಿನನಿತ್ಯದ ಅಡುಗೆಗೆ ಬಳಸಿ ಮುಗಿದಿವೆ.   ನೀರಾಡದ ಗೋಟುಕಾಯಿಗಳಿಂದ ಏನೂ ಉಪಯೋಗವಿಲ್ಲ.  ಹೌದೂ,  ನಮ್ಮೆಜಮಾನ್ರು ದಿನಾ ತೋಟ ಸುತ್ತುತ್ತಿರುತ್ತಾರೆ.

" ಅಡಿಕೆ ಹೆಕ್ಕೂದೂಂತ ತೋಟಕ್ಕೆ ದಿನ ಬೆಳಗಾದ್ರೆ ಹೋಗ್ತೀರಲ್ಲ,  ಬಿದ್ದಿರೋ ತೆಂಗಿನಕಾಯಿ ಕಾಣಿಸಲ್ವ? "
" ನಾಳೆ ಚೆನ್ನಪ್ಪ ಬರ್ತಾನಲ್ಲ,  ಅವನ್ಹತ್ರ ಹೇಳೂ ಕಾಯಿ ಕೊಯ್ಯಲಿಕ್ಕೆ.   ಎಲ್ಲವನ್ನೂ ನಾನೇ ನೆನಪಿಟ್ಟುಕೊಳ್ಳಲಿಕ್ಕೂ,  ಆರ್ಡರು ಮಾಡಲಿಕ್ಕೂ ಆಗುತ್ತ..? "  ಸಿಡಿಗುಟ್ಟಿದ್ರು.

ಅಂತೂ ಚೆನ್ನಪ್ಪ ಬಂದ,  ತೆಂಗಿನಕಾೖ ತೆಗೆದೂ ಕೊಟ್ಟ,  ಅವನೇ ತೋಟದಿಂದ ಹೊತ್ತೂ ತಂದ.   ನನಗೆಂದು ಬೊಂಡ ಕೆತ್ತಿಯೂ ಇಟ್ಟ.   ನಮ್ಮೆಜಮಾನ್ರು ಶೀತ ಆಗುತ್ತೇಂತ ಎಳನೀರು ಕುಡಿಯುವವರಲ್ಲ,  ಮಕ್ಕಳಿಬ್ಬರೂ ಮನೆಯಲ್ಲಿಲ್ಲ.

ಎಳನೀರು ಕುಡಿಯುತ್ತಿದ್ದಂತೆ ನಾಳೆ ಬೊಂಡ ದೋಸೆ ಮಾಡೋದು ಎಂದು ತೀರ್ಮಾನಕ್ಕೆ ಬಂದಾಯಿತು.   " ನೀವು ಕುಡಿದದ್ರಲ್ಲಿ ಬೊಂಡದ ತಿರುಳು ಏನೂ ಇಲ್ಲ ಅಕ್ಕ,  ಇಲ್ಲಿ ಬನ್ನಂಗಾಯಿ ಇದೇ.. " ಎಂದ ಚೆನ್ನಪ್ಪ ತೆಂಗಿನಕಾಯಿ ರಾಶಿಯಿಂದ ಬನ್ನಂಗಾಯಿ ಆರಿಸಿ ತೆಗೆದು ಸುಲಿದಿಟ್ಟ.


     


 ಬನ್ನಂಗಾಯಿ ಅಂದ್ರೇನೂ?
ಬನ್ನಂಗಾಯಿ ಎಂದರೆ ಅದು ಎಳನೀರೂ ಆಗಿರುವುದಿಲ್ಲ,   ತೆಂಗಿನಕಾಯಿ ಎಂದು ಹೆಸರಿಸಲೂ ಸಾಧ್ಯವಾಗದು.   ಎಳನೀರಿನಲ್ಲಿ ತಿರುಳು ಏನೂ ಇಲ್ಲವೆಂದು ಚೆನ್ನಪ್ಪ ಆಗಲೇ ಹೇಳಿದನಲ್ಲ,  ಒಂದು ಪಕ್ಷ ತಿರುಳು ಇದ್ದರೂ ಚಮಚಾದಲ್ಲಿ ತೆಗೆದು ತಿನ್ನಬಹುದಾಗಿದೆ.  ತೆಂಗಿನಕಾಯಿ ಆಗುವ ಮೊದಲ ಹಂತದ ಅರೆ ಬಲಿತ ತೆಂಗಿನಕಾಯಿ ಎಂದೂ ಅರ್ಥೈಸಬಹುದಾದ ಈ ಬನ್ನಂಗಾಯಿಯಿಂದ ಸೊಗಸಾದ ದೋಸೆ ಮಾಡೋಣ.   ಬನ್ನಂಗಾಯಿ ತುರಿಯನ್ನು ಅಕ್ಕಿಯೊಂದಿಗೆ ಅರೆದು ನೀರುದೋಸೆಯಂತೆ ಎರೆದರಾಯಿತು.

ದೋಸೆ ಮಾಡುವುದೆಂತು?
ತೆಂಗಿನತುರಿಯಂತೆ ಕಂಡರೂ ಚಟ್ಣಿಗಾಗಲೀ,  ಸಾಂಬಾರಿನ ಮಸಾಲೆ ಅರೆದರೂ ಚೆನ್ನಾಗಿರುವುದಿಲ್ಲ,  ಏನೋ ಒಂಥರಾ ಹಸಿ ವಾಸನೆ ಬಂದೀತು.  ಇದೇ ತುರಿಯಿಂದ ದೋಸೆ ಮಾಡಿದ್ರಾ,  ತೆಂಗಿನ ತಾಜಾ ಸುಗಂಧ ಹೊಂದಿದ ದೋಸೆ ನಿಮ್ಮದು.   ಅಪ್ಪಟ ತೆಂಗಿನ ಸುವಾಸನೆಯ ಈ ದೋಸೆಗೆ ಉದ್ದು, ಮೆಂತೆ ಇತ್ಯಾದಿಯಾಗಿ ಏನೂ ಹಾಕಬೇಕಾಗಿಲ್ಲ.

ಒಂದು ಬನ್ನಂಗಾಯಿಯ ತುರಿ + 2 ಪಾವು ಬೆಳ್ತಿಗೆ ಅಕ್ಕಿ,  ಇದು ಅಳತೆ.   
ಅಕ್ಕಿಯನ್ನು ಚೆನ್ನಾಗಿ ತೊಳೆದು ನೆನೆಸಿಡಿ.   ಮುಂಜಾನೆಯ ದೋಸೆಗಾಗಿ ರಾತ್ರಿ ಮಲಗುವ ಮುನ್ನ ಅರೆಯಿರಿ,  ಹುದುಗು ಬರಬೇಕೆಂದೇನೂ ಇಲ್ಲ.

ದಪ್ಪ ಹಿಟ್ಟನ್ನು ಕಾವಲಿಯಲ್ಲಿ ತೆಳ್ಳಗಾಗಿ ಹಚ್ಚುವ ಚಾಕಚಕ್ಯತೆ ಇದ್ದಲ್ಲಿ ಆ ಥರ ದೋಸೆ ಹಚ್ಚಿರಿ.
ತುಸು ನೀರುನೀರಾದ ಹಿಟ್ಟನ್ನು ನೀರುದೋಸೆಯಂತೆ ಹಾರಿಸಿ ಎರೆಯಿರಿ.
ನಮ್ಮ ಮನೆಯ ಸದಸ್ಯರು ನೀರು ದೋಸೆಯ ಹಾಗೆ ಎರೆದದ್ದನ್ನೇ ಇಷ್ಟಪಟ್ಟು ತಿನ್ನುವವರು.   ಕಾಯಿಚಟ್ಣಿ,  ಬೆಲ್ಲದ ಜೇನುಪಾಕ ಹಾಗೂ ಗಟ್ಟಿ ಮೊಸರು ಕೂಡಿ ತಿನ್ನಲು ಸ್ವರ್ಗಸುಖ!


                                      ಪಾಲಪ್ಪಂ
ನಾವು ಕರಾವಳಿಯವರಲ್ವೇ,  ಇಲ್ಲಿ ಅಡುಗೆಗೂ ತೆಂಗಿನಕಾಯಿಯೇ ಮೂಲಾಧಾರವಾಗಿದೆ.   ಬನ್ನಂಗಾಯಿ ದೋಸೆ ತಿಂದೆವಲ್ಲ,  ಇದೇ ಮಾದರಿಯ ಪಾಲಪ್ಪಂ ಎಂಬ ದೋಸೆ ಕೇರಳೀಯರ ಮುಂಜಾನೆಯ ತಿನಿಸು.  ಪಾಲಪ್ಪಂ ಕೇರಳದ ವಿಶೇಷ ಖಾದ್ಯಗಳಲ್ಲಿ ಒಂದಾಗಿದೆ.   ಇಲ್ಲಿ ಬನ್ನಂಗಾಯಿ ಬೇಕಾಗಿಲ್ಲ,  ಹಸಿ ತೆಂಗಿನಕಾಯಿ ಹಾಗೂ ಬೆಳ್ತಿಗೆ ಅಕ್ಕಿಯಿಂದ ಪಾಲಪ್ಪಂ ತಯಾರಿಸೋಣ.

2 ಪಾವು ಅಕ್ಕಿಯನ್ನು ಅಳೆದು,  ನೀರೆರೆದು ಚೆನ್ನಾಗಿ ತೊಳೆಯಿರಿ,  ಇದು ಮೊದಲ ಸಿದ್ಧತೆ.
ಸಂಜೆಯ ಹೊತ್ತು,  ತೆಂಗಿನ ತುರಿ ಮಾಡಿದ್ರಾ,  ನೀರು ಕೂಡಿಕೊಂಡು ಅರೆದು ಕಾಯಿಹಾಲು ತೆಗೆಯಿರಿ.

ಕಾಯಿಹಾಲು ತೆಗೆಯುವುದು ಹೇಗೆ?
ಭರ್ತಿ ಒಂದು ತೆಂಗಿನಕಾಯಿ ಅರೆದಿದ್ದೀರಲ್ಲ,   ಇದನ್ನು ಶುದ್ಧವಾದ ಒಣ ಬಟ್ಟೆಯಲ್ಲಿ ಜಾಲಿಸಿ,  ಚೆನ್ನಾಗಿ ಹಿಂಡಿದಾಗ ದಪ್ಪ ಕಾಯಿಹಾಲು ಲಭ್ಯ.

ಒಂದು ಸೌಟು ಗೋಧಿಹಿಟ್ಟು ಯಾ ಮೈದಾ ಯಾ ಚಿರೋಟಿರವೆ ಅಥವಾ ಅಕ್ಕಿಹುಡಿಯನ್ನು ನೀರಿನಲ್ಲಿ ಕಲಸಿಕೊಂಡು ಬಾಣಲೆಗೆರೆದು ದಪ್ಪವಾಗುವಂತೆ ಬೇಯಿಸಿ ಇಡಬೇಕಾದ್ದು ಎರಡನೇ ಸಿದ್ಧತೆ.  ಈಗ ಬೆಂದ ಹಿಟ್ಟು ದೊರೆಯಿತು.   ನಾನು ಉಪಯೋಗಿಸಿದ್ದು ಗೋಧಿಹಿಟ್ಟು.

ಇನ್ನು ತೊಳೆದಿಟ್ಟ ಅಕ್ಕಿಯನ್ನು ಅರೆಯುವುದು,  ಅರೆಯುವಾಗ ಬೆಂದ ಹಿಟ್ಟನ್ನೂ ಕೂಡಿಸಿ ಅರೆಯಿರಿ.  ರುಚಿಗೆ ಉಪ್ಪು ಹಾಗೂ ಕಾಯಿಹಾಲನ್ನೂ ಎರೆದು ರಾತ್ರಿ ಬೆಳಗಾಗುವ ತನಕ ಮುಚ್ಚಿ ಇಡಬೇಕಾಗಿದೆ.

ಹುದುಗು ಬರಬೇಕಾಗಿರುವ ಈ ದೋಸೆಯನ್ನು ದಿಢೀರನೆ ಎರೆಯಲು ಕೇರಳ ಕ್ರಿಶ್ಚಿಯನ್ನರು ಯೀಸ್ಟ್ ಬಳಸುತ್ತಾರೆ.   ನಾವು ಈಗ ಯೀಸ್ಟ್ ಹಾಕೋದೇನೂ ಬೇಡ.  

ಯೀಸ್ಟ್ ಬಳಕೆ ಹೇಗೆ?
ಏಳೆಂಟು ಯೀಸ್ಟ್ ಕಾಳುಗಳನ್ನು ಉಗುರುಬೆಚ್ಚಗಿನ ನೀರು ಅಥವಾ ಹಾಲಿನಲ್ಲಿ ಒಂದು ಚಮಚ ಸಕ್ಕರೆಯೊಂದಿಗೆ ನೆನೆಸಿಟ್ಟು,  ಕಾಳುಗಳು ಕರಗಿದಾಗ ಹಿಟ್ಟಿಗೆ ಸೇರಿಸಿದರಾಯಿತು.

ಮುಂಜಾನೆಯ ಹೊತ್ತು ದೋಸೆ ಎರೆಯಿರಿ,  ಬೇಕಾದಂತೆ ಚಟ್ಣಿ ಅಥವಾ ಕೂಟು ತಯಾರಿಸಿ ಸವಿಯಿರಿ. ಇದು ಕೇರಳೀಯರ ಪಾಲ್+ಅಪ್ಪಂ,  ತೆಂಗಿನಕಾಯಿ ಹಾಲು ಇಲ್ಲಿ  'ಪಾಲ್' ಆಗಿದೆ.  ದೋಸೆಯ ವೈವಿಧ್ಯಗಳು ಆಪ್ಪಂ ಎಂದು ವಾಡಿಕೆಯಲ್ಲಿ ಕರೆಯಲ್ಪಡುತ್ತವೆ,  ಊತಪ್ಪಂ,  ಉಣ್ಣಿಯಪ್ಪಂ.... ಈ ಥರ.

ದೋಸೆಗಾಗಿ,  ಪಾಯಸಕ್ಕಾಗಿ  ತೆಂಗಿನಕಾಯಿ ಹಾಲು ಬಳಸಿ ಆರೋಗ್ಯ ಲಾಭ ಪಡೆಯಿರಿ.    ತೆಂಗಿನಕಾಯಿ ಹಾಲು ಹಾಗೂ ಎಳನೀರು ಒಂದೇ ಎಂದು ತಿಳಿಯಬೇಡಿ,  ಎಳನೀರು ಎಳೆಯ ತೆಂಗಿನ ನೀರು.   ಬಲಿತ ತೆಂಗಿನಕಾಯಿಯನ್ನು ತುರಿದು,  ಅರೆದು,  ರಸ ಹಿಂಡಿ ತೆಗೆದಿದ್ದು ತೆಂಗಿನಕಾಯಿ ಹಾಲು.   ತಾಜಾ ತೆಂಗಿನಕಾಯಿ ಹಾಲು ಹಸುವಿನ ಹಾಲಿನಂತೆ ದಪ್ಪವೂ,  ಸಿಹಿಯೂ ಆಗಿದ್ದು 17% ಕೊಬ್ಬಿನಂಶವನ್ನೂ ಹೊಂದಿರುತ್ತದೆ.   ಆಯುರ್ವೇದವು ತೆಂಗಿನಕಾಯಿ ಹಾಲನ್ನು ಪರಿಪೂರ್ಣ ಹಾಗೂ ಆರೋಗ್ಯದಾಯಕ ಪೇಯವಾಗಿ ಪರಿಗಣಿಸಿದೆ.  ಪ್ರೊಟೀನ್,  ಕ್ಯಾಲ್ಸಿಯಂ,  ಖನಿಜಾಂಶಗಳೂ,  ವಿಟಾಮಿನ್ ಸಿ ಇತ್ಯಾದಿಗಳಿಂದ ಸಮೃದ್ಧವಾಗಿದೆ ತೆಂಗಿನಕಾಯಿ ಹಾಲು.


ಟಿಪ್ಪಣಿ:  ಇದು ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತ ಬರಹ,  ಮೇ, 2016

Friday, 17 June 2016

ಸೊಳೆ ಹುಳಿಬೆಂದಿ

ಹಲಸಿನ ಹಣ್ಣಿನ ಕೊಟ್ಟಿಗೆ ನಮ್ಮ ಇಂದಿನ ಮುಂಜಾನೆಯ ತಿನಿಸು,   ಚಟ್ಣಿ,  ಉಪ್ಪಿನಕಾಯಿ,  ತುಪ್ಪ ಹಾಗೂ ಕೊಟ್ಟಿಗೆ ಸಹಿತವಾದ ಅಟ್ಟಿನಳಗೆ ಟೇಬಲ್ ಮೇಲಿಟ್ಟು  " ತಿಂಡಿಗೆ ಬನ್ರೀ.. " ಕಾಲ್ ಕೊಟ್ಟಿದ್ದೂ ಆಯ್ತು.   ನಮ್ಮೆಜಮಾನ್ರು ಮುಜಾನೆಯ ದಿನಪತ್ರಿಕೆ ಉದಯವಾಣಿ ಓದುತ್ತಿದ್ದ ಐಪ್ಯಾಡ್ ಪಕ್ಕಕ್ಕಿಟ್ಟು  " ಇವತ್ತು ಕರೆಂಟ್ ಇಡೀ ದಿನ ಇಲ್ವಂತೆ,  ಈಗ್ಲೇ ತಯಾರಾಗಿರು... " ಅಂದ್ರು.

ಯಾವತ್ತೂ ಮಳೆಗಾಲ ಬಂದ್ರೆ ಕರೆಂಟಿನ ಗೋಳು ಇದ್ದಿದ್ದೇ.  " ಅಷ್ಟೇ ತಾನೇ,  ಈಗ ಕೊಟ್ಟಿಗೆ ತಿಂದ್ಬಿಟ್ಟು ಹೋಗಿ. "   ಹಲಸಿನ ಕೊಟ್ಟಿಗೆ ತಿಂದವರಿಗೆ ಹಸಿವಿನ ಬಾಧೆ ಇಲ್ಲ,  ಮಧ್ಯಾಹ್ನದೂಟ ಹಗುರಾಗಿದ್ದರೇ ಚೆನ್ನ,  ಸಿಂಪಲ್ಲಾಗಿ ಹಲಸಿನಕಾಯಿ ಬೋಳುಹುಳಿ ಮಾಡೋಣ,  ಈ ವ್ಯಂಜನವನ್ನು ನಮ್ಮ ಕಡೆ ಸೊಳೆ ಹುಳಿಬೆಂದಿ ಅನ್ನುವ ರೂಢಿ.

ಕೊಟ್ಟಿಗೆ ತಿಂದಾಯ್ತು,   " ಇದು ಕೊಟ್ಟಿಗೆಗೆ ಹೇಳಿದಂತಹ ಹಲಸಿನಕಾಯಿ ಅಂತ ನೆನಪಿಟ್ಕೋ..."  ಘನಗಾತ್ರದ ಈ ಹಲಸಿನ ಮೊದಲ ಫಲ ಮನೆಗೆ ಬಂದಾಗ,  ಹಣ್ಣು ಸಿಹಿಯಾಗಿದೆ ಹಾಗೂ ಇದು ಬಕ್ಕೆ ಹಲಸು ಎಂದು ಸಂಭ್ರಮಪಟ್ಟಿದ್ದೂ ಆಗಿತ್ತು.   ಮೊದಲ ಫಲದ ಪಾಯಸವನ್ನೂ ಸವಿದಾಗ  " ಪಾಯಸಕ್ಕೆ ಹೇಳಿದ ಹಣ್ಣು " ಎಂಬ ಶಿಫಾರಸು ಈ ಹಣ್ಣಿನದು.   

ಪಾಯಸಕ್ಕೆ ಸೊಗಸಾದ ಹಣ್ಣು ಕೊಟ್ಟಿಗೆಗೂ ಚೆನ್ನಾಗಿದ್ದೀತು ಅಂದ್ಬಿಟ್ಟು ಮಾಡಿದ್ದು,  ಇದು ಮೂರನೇ ಬಾರಿ.    ಇಂತಿಪ್ಪ ಹಲಸಿನ ಮರವನ್ನು ನಾನು ನೋಡದಿದ್ದರೆ ಹೇಗಾದೀತು?

 "  ಹಲಸಿನ ಮರ ಕೊಳಕೆ ತೋಟದ ಆ ಮೂಲೆಯಲ್ಲಿದೇ... "  ಎಂದು ಗುಡುಗಿದ್ದೂ ಅಲ್ಲದೆ  "ಹೋಗಿ ನೋಡಿ ಗುರುತಿಟ್ಕೊಂಡು ಬಾ... " ನಮ್ಮೆಜಮಾನ್ರ ಹುಕುಂ ಆಯಿತು.

ಚೆನ್ನಪ್ಪ ಗಂಟೆ ಒಂಭತ್ತು ಆಗುತ್ತಿದ್ದಂತೆ ಬಂದ,   " ತೋಟಕ್ಕೆ ಹೋಗ್ತೀಯಾ...  ನಾನೂ ಬಂದೆ. " ಅನ್ನುತ್ತ ತೋಟದೆಡೆಗೆ ನನ್ನ ಪಯಣ ಸಾಗಿತು.   ಅವನೊಂದಿಗೆ ಹಲಸಿನ ಮರಗಳ ಸರ್ವೇ ಮಾಡುತ್ತಿದ್ದಾಗ ನೆನಪಾಗಿ,  " ಕೆರೆಯ ಆ ಬದಿಯ ರಾಗಿಮಜಲು ತೋಟದಲ್ಲಿ ಹಲಸಿನ ಮರ ಉಂಟಲ್ಲ,  ಅಲ್ಲೊಂದು ಉಂಡೆ ಹಲಸಿನ ಕಾಯಿ ಮರ... " ಅನ್ನುತ್ತಿದ್ದ ಹಾಗೆ ಚೆನ್ನಪ್ಪ ಅಂದ,  " ಅದರಲ್ಲಿ ಮೇಲಿಂದ ಕೆಳಗಿನವರೇಗೆ ಹಲಸಿನಕಾಯಿ ಉಂಟು. "
" ಅದೂ ಬೋಳು ಕಜಿಪ್ಪು ಮಾಡ್ತೀವಲ್ಲ,  ಅದಕ್ಕೆ ಫಸ್ಟಾಗ್ತದೆ,  ನೀನು ಬರುವಾಗ ಒಂದು ಕಾಯಿ ಕೊಯ್ದು ತಾ. " ಅಂದ್ಬಿಟ್ಟು ಮನೆಯ ಕಡೆ ಹೊರಟೆ.   ಅವನೂ ಬಿದ್ದ ತೆಂಗಿನಕಾಯಿಗಳನ್ನು ಹೆಕ್ಕಿ ತರಲು ಗೋಣಿಯೊಂದಿಗೆ ಮೇಲಿನ ತೋಟಕ್ಕೆ ಹತ್ತಿದ.


    


ಇವತ್ತು ಕರೆಂಟಿಲ್ಲದ ಬಾಬ್ತು ಹಲಸಿನ ಬೋಳು ಬೆಂದಿ ಯಾ ಹುಳಿ ಬೆಂದಿ ಮಾಡೋಣ.   ಚೆನ್ನಪ್ಪ ತಂದ ಉಂಡೆಹಲಸು ಮೆಟ್ಟುಗತ್ತಿಯಲ್ಲಿ ಪ್ರಹರಿಸಲ್ಪಟ್ಟು ಹೋಳು ಹೋಳಾಯಿತು,  ಹಲಸಿನ ಸೊಳೆಗಳನ್ನು ಬಿಡಿಸಿದ್ದೂ ಆಯ್ತು.   ಈ ಹಲಸಿನಲ್ಲಿ ಮಯಣವೂ ಕಡಿಮೆ,  ಗಾತ್ರದಲ್ಲೂ ಪುಟ್ಟದು,  ಬೇಳೆಯೂ ಪುಟ್ಟದಾಗಿ ಆಕರ್ಷಕವಾಗಿದ್ದಿತು.  ಆಷಾಢಮಾಸದ ಅಡುಗೆಗೆ ಬೇಕಾದೀತು ಅಂದ್ಕೊಂಡು ಬೇಳೆಗಳನ್ನೂ ಆಯ್ದು ಇಟ್ಟಾಯ್ತು.

ಹುಳಿ ಬೆಂದಿ ಮಾಡುವುದು ಹೇಗೆ?
ಬೇಳೆ, ಸಾರೆ, ಪೊದುಂಕುಳುಗಳಿಂದ ಮುಕ್ತವಾದ ಹಲಸಿನ ಸೊಳೆಗಳು,  ಅಡುಗೆಯ ತಪಲೆಯಲ್ಲಿ ಹಿಡಿಸುವಷ್ಟು.
ಹಲಸಿನ ಸೊಳೆಗಳು ಉಪ್ಪು ಕೂಡಿ ಬೇಯಲಿ.  ಕುಕರ್ ಬೇಕಾಗಿಲ್ಲ,  ಒಂದೆರಡು ಕುದಿ ಬಂದೊಡನೆ ಬೆಂದಿದೆ ಎಂದು ತಿಳಿಯಿರಿ.   
ಲಿಂಬೆ ಗಾತ್ರದ ಹುಣಸೇ ಹಣ್ಣು,  ಗಿವುಚಿ ಇಟ್ಕೊಳ್ಳಿ.
ಹತ್ತಾರು ಬೆಳ್ಳುಳ್ಳಿ ಗುದ್ದಿ ಸಿಪ್ಪೆ ತೆಗೆಯಿರಿ.
ಎರಡು ಕಣೆ ಕರಿಬೇವು ಇರಲಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು,  ತೆಂಗಿನೆಣ್ಣೆ ತುಸು ಜಾಸ್ತಿ ಇರಲಿ,  ಬೆಳ್ಳುಳ್ಳಿ ಘಂ ಸುವಾಸನೆ ಬಂತೇ,  ಸಾಸಿವೆ ಚಟಪಟ ಅಂದಾಗ,  ಚಿಟಿಕೆ ಅರಸಿಣ,  ಕರಿಬೇವು ಬೀಳಲಿ.  ಖಾರ ಮಾಡಲಿಕ್ಕಿಲ್ಲ,  ಒಗ್ಗರಣೆಯ ಮೆಣಸು ಮಾತ್ರ ಖಾರದ ಅಂಶವಾಗಿದೆ.

ಹಲಸಿನ ಸೊಳೆಗಳು ಬೆಂದಿವೆ,  ಹುಣಸೆ ಹಣ್ಣಿನ ರಸ ಎರೆಯಿರಿ.
ಅವಶ್ಯಕತೆ ಇದ್ದಲ್ಲಿ ನೀರು ಕೂಡಿಸಿ.  ರುಚಿಗೆ ಉಪ್ಪು ಹಾಗೂ ಬೆಲ್ಲ (ಬೇಕಿದ್ದಲ್ಲಿ ಮಾತ್ರ).
ಕುದಿಸಿ, ಒಗ್ಗರಣೆ ಹಾಕುವಲ್ಲಿಗೆ ಸೊಳೆ ಹುಳಿಬೆಂದಿ ತಯಾರಾಗಿ ಬಿಟ್ಟಿತು!

ಸೊಳೆ ಹುಳಿಬೆಂದಿ ಸವಿಯುತ್ತ ಗೌರತ್ತೆಯ ಲಹರಿ ಹಿಂದಿನಕಾಲದ ಅಡುಗೆಯತ್ತ ಸರಿಯಿತು.   " ನನ್ನಮ್ಮ ಹಲಸಿನ ಹಣ್ಣಿನ ಸಾರು ಮಾಡ್ತಿದ್ರೂ.."

ನನ್ನ ಬಾಯಲ್ಲೂ ನೀರು,  "ಹೌದಾ.. ಹೀಗೆ ಹುಳಿಬೆಂದಿ ಥರಾ... ? "

" ಹಲಸಿನ  ಹಣ್ಣು ತೀರ ಸಪ್ಪೆಯಾಗಿದ್ದರೆ ಮತ್ತು ಮಳೆ ಬರುವಾಗ ಹಸಿ ಹಸಿ ಹಣ್ಣು ಬೇಡಾ ಅಂತಿದ್ರೆ ಹಣ್ಣಿನ ಸಾರು ಮಾಡೋರು ಆವಾಗ,   ನೀರು ಹಾಕಿ ಬೇಯ್ಸೋದು,  ಹುಳಿ ಗಿಳಿ ಬೇಡ,  ಬೆಲ್ಲ ಗಿಲ್ಲ ಬೇಡ,  ರುಚಿಗೆ ಉಪ್ಪು ಹಾಕ್ಬಿಟ್ಟು ಒಗ್ಗರಣೆ ಹಾಕಿದ್ರೆ ಮುಗೀತು,  ಬೆಳ್ಳುಳ್ಳಿ ಗಿಳ್ಳುಳ್ಳಿ ಏನೂ ಬೇಡಾ ತಿಳೀತಾ... "

ಅಂತೂ ಹಳೇಕಾಲದ ಹೊಸರುಚಿ ಸಿಕ್ಕಿತು.  ನಾವೂ ಮಾಡಿ ಸವಿದೂ ಆಯಿತು.  ಸಪ್ಪೆಯಾದ ಹಲಸಿನ ಸೊಳೆಗಳಿಗೂ ಸಿಹಿರುಚಿ ಬಂದಿತಲ್ಲ!

                     
   
Friday, 10 June 2016

ಮಾವಿನ ಹಣ್ಣು - ರಸಾಯಣ

                   
    

ಕಾರ್ಯನಿಮಿತ್ತ ನಮ್ಮೆಜಮಾನ್ರು ಮೈಸೂರಿಗೆ ಹೋಗಿದ್ರು.   ನಾನೂ ಹೋಗಬಹುದಿತ್ತು,   ಬೆಳ್ಳಂಬೆಳಗ್ಗೇ 4 ಗಂಟೆಗೆ ಎದ್ದು,  ಹೊರಟು,  ಕತ್ತಲಾಗುವ ಮುಂಚೆ ಮನೆ ತಲಪುವ ಸಾಹಸಕ್ಕಿಂತ ನನ್ನ ಪಾಡಿಗೆ ಮನೆಯಳಗಿರುವುದೇ ಜಾಣತನ ಅಂದ್ಬಿಟ್ಟು ಹೊರಡಲಿಲ್ಲ ಕಣ್ರೀ...

ಆಯ್ತು,  ಇವರು ಹೋದವರು ಮನೆಗೆ ವಾಪಸ್ ಆಗುವಾಗ ರಾತ್ರಿಯಾಗಿತ್ತು,   ಹೋಗಿದ್ದು ಅಕ್ಕನ ಮನೆಗೆ,  ಅಲ್ಲೇನೋ ಪೂಜೆ ಇಟ್ಕೊಂಡಿದ್ದರು.   ಪೂಜೆಯ ಪ್ರಸಾದ,   ಭೋಜನದ ಸಿಹಿ ತಿನಿಸುಗಳು ಬಂದುವು,  ಜೊತೆಗೆ ಒಂದು ಚೀಲ ತುಂಬ ಕಸಿಮಾವಿನ ಹಣ್ಣುಗಳು!

" ಇದೆಲ್ಲಿಂದ ಮಾವಿನ ಹಣ್ಣು? "
" ಅದೂ ಮೈಸೂರಿಂದ ವಾಪಸ್ ಬರೂದಕ್ಕಿಂತ ಮೊದಲು ಮಡಿಕೇರಿ ರಸ್ತೆ ಪಕ್ಕ ಗಾಡಿಗಳ ಸಾಲು ಸಾಲು...  ಗಾಡಿ ತುಂಬ ಮಾವಿನ ಹಣ್ಣು ರಾಶಿ ರಾಶಿ... "

" ಓ,  ಸರಿ..."  ಅನ್ನುತ್ತ ಮಾವಿನ ಹಣ್ಣುಗಳನ್ನು ಎತ್ತಿಟ್ಟು ,   ಎರಡ್ಮೂರು  ಹಣ್ಣುಗಳನ್ನು ಊಟದೊಂದಿಗೆ ತಿನ್ನಲು ಸಿಪ್ಪೆ ತೆಗೆದು ಹಚ್ಚಿಡಲು ಮುಂದಾಗಿದ್ದೂ ಆಯ್ತು.

ಮಾರನೇ ದಿನವೂ  ಮಾವುಗಳ ಭೋಜನ.   ನಮ್ಮವರು ಯಾವತ್ತೂ ಕಸಿಮಾವುಗಳ ಗೊಡವೆಗೇ ಹೋದವರಲ್ಲ,   ಕಾಟ್ ಮಾವಿನ ರುಚಿ ಅದಕ್ಕಿಲ್ಲ ಎಂದು ಅವರ ಅಂಬೋಣ.   ಏನು ಮಾಡೋಣಾ,  ಈ ವರ್ಷ ನಮ್ಮ ತೋಟದ ಕಾಟ್ ಹಣ್ಣುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿವೆ.  ಮರದಲ್ಲಿರುವ ಹಣ್ಣುಗಳು ತೋಟದ ಕಾಡು ಪ್ರಾಣಿಪಕ್ಷಿಗಳಿಗೆ ಬೇಡವೇ...  

ಮೂರನೇ ದಿನ,  " ಹೌದೂ,  ಹಾಗೇ ಸುಮ್ಮನೆ ತಿನ್ನುವುದಕ್ಕಿಂತ ರಸಾಯನ ಮಾಡಿದ್ರೆ ಹೇಗೆ? "  ಅನ್ನಿಸದಿರಲಿಲ್ಲ.   ಹೇಗೂ ಒಂದು ದೊಡ್ಡ ತೆಂಗಿನಕಾೖ ಸುಲಿದಿಟ್ಟಿದ್ದು ಇದೆ.   ಅದನ್ನು ಒಡೆದೇ ಸೈ.    ಸಾಂಬಾರು ಪಲ್ಯಗಳಿಗೆ ಹೆಚ್ಚೇನೂ ಕಾಯಿತುರಿ ಬೇಕಾಗುವುದಿಲ್ಲ,  ಮಿಕ್ಕುಳಿದ ಕಾಯಿತುರಿಯಿಂದ ಹಾಲು ತೆಗೆದಿಟ್ಟು ಆಯಿತು.   ಮಾವಿನ ಹಣ್ಣು ಸಿಪ್ಪೆ ತೆಗೆದು ಚಿಕ್ಕದಾಗಿ ಹಚ್ಚಿದ್ದೂ ಆಯ್ತು.  

 ರಸಾಯನಕ್ಕಾಗಿ ಮಾವಿನ ಹಣ್ಣಿನ ತುರಿ ಮಾಡೋದೂ ಒಂದು ಕಲೆ ಕಣ್ರೀ...   ಇನ್ನಿತರ ತರಕಾರಿ ಹಣ್ಣುಗಳಂತೆ ತುರಿಮಣೆಯಲ್ಲಿ ತುರಿಯಲು ಸಾಧ್ಯವಾಗದು.  ಕೈಯಲ್ಲಿ ಗಿವುಚಿ ಹಾಕೋದೂ ಕಸಿ ಮಾವಿಗೆ ಬೆಲೆ ಕೊಟ್ಟಂತಾಗದು.   ತೆಳ್ಳಗೆ ಸಿಪ್ಪೆ ಹೆರೆದು ಹರಿತವಾದ ಚಾಕುವಿನಲ್ಲಿ ಗೊರಟಿನ ಮೇಲೆ ಅಡ್ಡಡ್ಡಲಾಗಿ ,  ಉದ್ದುದ್ದವಾಗಿ ಗೆರೆ ಹಾಕಿಟ್ಟು ತುಂಡು ಮಾಡುವ ಪ್ರಾವೀಣ್ಯತೆ ಎಲ್ಲರಿಗೂ ಇರುವುದಿಲ್ಲ.  ಅಂತೂ ಮಾವಿನ ಹಣ್ಣು ಕಟ್ ಕಟ್ ಆಯ್ತು ಅನ್ನಿ,  ಕೈ ಗಾಯ ಮಾಡಿಕೊಳ್ಳದಿದ್ದರಾಯಿತು.

ಎರಡು ಚಮಚ ಎಳ್ಳು ಹುರಿದು,  ತುಸು ಗುದ್ದಿ ಹುಡಿ ಮಾಡಿದ್ರೆ ಘಂ ಪರಿಮಳ,   ಮಾವಿನ ಹಣ್ಣಿನ ತುರಿ ಕಾಯಿಹಾಲುಗಳಿಗೆ ಕೂಡಿಸಿದ್ದಾಯ್ತು.

" ಇನ್ನೇನು ಕುಡಿಯೋದಾ...? "
" ಛೆ ಎಲ್ಬಂತು,  ಸಕ್ರೆ ಹಾಕಿಲ್ಲ,   ಸಿಹಿಯಾಗುವಷ್ಟು ಸಕ್ಕರೆ ಬೀಳಲಿ ಹಾಗೂ ಕರಗಲಿ.  ಹ್ಞಾಂ,  ನೆನಪಿರಲಿ... ಕುದಿಸುವಂತಿಲ್ಲ.   ತಣ್ಣಗಾದಷ್ಟೂ ಚೆನ್ನ.   ರೆಫ್ರಿಜರೇಟರ್ ಒಳ ಗಿಟ್ಟು ಊಟದ ನಂತರ ಹಾಯಾಗಿ ಕುಡಿಯಿರಿ.

" ಹ್ಞು,  ಈ ಕಸಿಮಾವು ರಸಾಯನಕ್ಕೇ ಲಾಯಕ್ಕು. "  ಅನ್ನುತ್ತ ನಮ್ಮೆಜಮಾನ್ರು ಎರಡು ಗ್ಲಾಸ್ ತಣ್ಣನೆಯ ರಸಾಯನ ಕುಡಿದು ಮದ್ಯಾಹ್ನದ ಸವಿನಿದ್ದೆಗೆ ಅಡ್ಡಾದರು.

ತೆಂಗಿನಕಾಯಿ ಹಾಲು ಆರೋಗ್ಯಕ್ಕೆ ಉತ್ತಮ ಅಂದ್ಬಿಟ್ಟು ಹಾಗೇ ಸುಮ್ಮನೆ ಕುಡಿಯಲಾಗುವುದಿಲ್ಲ.   ಈ ಥರ ಹಣ್ಣುಗಳ ರಸಾಯನವೇ ಕಾಯಿಹಾಲಿನ ಪಾನೀಯವಾಗಿದೆ ಎಂದು ತಿಳಿದಿರಲಿ.