Pages

Ads 468x60px

Saturday, 31 January 2015

ಉಪ್ಪಿಟ್ಟು ಚಹಾತೋಟದ ತೆಂಗಿನಕಾಯಿ ತೆಗೆಸದೇ ತಿಂಗಳು ಆರಾಗಿತ್ತು. ಪತ್ತನಾಜೆಗೂ ಮೊದಲು ತೆಗೆಸಿದ್ದು, ಈಗ ಮಳೆಗಾಲ ಮುಗಿಯುತ್ತಾ ಬಂದಾಗ, ದಿನನಿತ್ಯದ ಚಟ್ಣಿ, ಕೊದ್ದೆಲ್ ಮಾಡಲು ತೆಂಗಿನಕಾಯಿ ಇಲ್ವಲ್ಲ ಎಂಬ ಪೇಚಾಟಕ್ಕೂ ಮೊದಲಾಗಿ ಮರ ಹತ್ತುವ ಕೆಲಸಗಾರರು ಬರುತ್ತಾರೆಂದು ತಿಳಿಯಿತು.

" ತೆಂಗಿನಕಾಯಿ ಕೀಳಲು ಜನ ಬರ್ತಾರಂತೆ "
" ಹ್ಞಾ, ಹೌದಾ, ಕಾಯಿ ಹೆಕ್ಕಿ ತರಲು ಯಾರೂ ?"
" ಒಟ್ಟಾಗಿ ಮೂರು ಜನ ಇದಾರೇ, ಎಲ್ಲರಿಗೂ ಚಹಾ ತಿಂಡಿ ಮಾಡಿಟ್ಟಿರು " ಅನ್ನುತ್ತಾ ನಮ್ಮಜಮಾನ್ರು ತೋಟದ ಕಡೆ ಪಯಣ ಬೆಳೆಸಿದರು.

ನಮ್ಮ ಮುಂಜಾನೆಯ ತಿಂಡಿ ಚಪಾತಿಯಾಗಿತ್ತು. ಇಬ್ಬರಿಗೆ ಬೇಕಾದಷ್ಟೇ ಮಾಡಿಟ್ಕೊಂಡಿದ್ದೆ. ತೋಟದ ಕೆಲಸದಾಳುಗಳಿಗೆ ಪುಟ್ಟ ಚಪಾತಿಗಳು ಎಲ್ಲಿಗೂ ಸಾಲದು. ಅವಲಕ್ಕಿ ಉಪ್ಕರಿ ಮಾಡಿದ್ರೂ ಆಗದು, ಅವಲಕ್ಕಿಯೂ ಸಾಕಷ್ಟು ಇದ್ದಂತಿಲ್ಲ. ತೋಟದ ತೆಂಗಿನಕಾಯಿಗಳು ಮನೆಯಂಗಳಕ್ಕೆ ಬರುವುದೇ ಒಂದು ಸಂಭ್ರಮ, ಹೀಗಿರುವಾಗ ಅಡುಗೆಮನೆಯ ಡಬ್ಬಗಳು ಬಾಯ್ದೆರೆದುವು. ಓಹೋ ಹೌದಲ್ಲ, ದೋಸೆ ಇಡ್ಲಿಗಳಿಗಾಗಿ ತಂದಿರಿಸಿದ ಕಡಿಯಕ್ಕಿ ಇದೇ, ಐಡಿಯಾ ಬಂದೇ ಬಿಟ್ಟಿತು.

4 ಹಸಿಮೆಣಸು, ಸಿಗಿದು ಇರಿಸತಕ್ಕದ್ದು.
2 ನೀರುಳ್ಳಿ, ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳತಕ್ಕದ್ದು.
ತೆಂಗಿನ ತುರಿ.
ತೆಂಗಿನ ಎಣ್ಣೆ, ಸಾಸಿವೆ, ಕಡ್ಲೇ ಬೇಳೆ, ಒಣಮೆಣಸು... ಇತ್ಯಾದಿ ಒಗ್ಗರಣೆ ಸಾಹಿತ್ಯ.
ಒಂದು ಪಾವು ಕಡಿಯಕ್ಕಿ, ಚೆನ್ನಾಗಿ ತೊಳೆದು ಇಡಬೇಕಾದ್ದು.
ಇಷ್ಟೆಲ್ಲ ತಯಾರಿಯೊಂದಿಗೆ ಬಾಣಲೆ ಒಲೆಗೇರಿತು.

ಒಂದು ಅಳತೆಯ ಕಡಿಯಕ್ಕಿಗೆ ಅಂದಾಜು 3 ಅಳತೆಯ ನೀರು ಕುದಿದಿದೆ.
ಬಾಣಲೆಯ ಒಗ್ಗರಣೆ ಸಿಡಿದಿದೆ.
ಕರಿಬೇವಿನಸೊಪ್ಪು, ನೀರುಳ್ಳಿ ಇತ್ಯಾದಿ ಬಾಣಲೆಗೆ ಬಿದ್ದು ತಟಪಟನೆ ಸೌಟಿನಲ್ಲಿ ಅತ್ತ ಇತ್ತ ಓಡಿಯಾಡಿವೆ, ಇನ್ನೀಗ ತೊಳೆದಿಟ್ಟ ಕಡಿಯಕ್ಕಿಯ ಸರದಿ, ಕುದಿನೀರೂ ಬಿದ್ದಿದೆ, ರುಚಿಗೆ ಉಪ್ಪು ಹಾಕಲಾಗಿದೆ.
ಮುಚ್ಚಿಟ್ಟು ಚಿಕ್ಕ ಉರಿಯಲ್ಲಿ 5-6 ನಿಮಿಷದಲ್ಲಿ ಬೆಂದಿದೆ.
ಮುಚ್ಚಳ ತೆಗೆದು ನೋಡಿ, ಕಾಯಿತುರಿಯನ್ನು ಹಾಕಿ, ಇನ್ನೊಮ್ಮೆ ಮಗುಚಿ ಹಾಕಿ ಬೆಚ್ಚಗೆ ಇರಲು ಮುಚ್ಚಿ ಇಟ್ಟು ಕೆಲಸದಾಳುಗಳನ್ನು ಕಾಯುವ ಸರದಿ.
ಘಂಟೆ ಹನ್ನೊಂದು ಹೊಡೆಯಿತು.
" ನಾವು ಬಂದೇವ ಚಾಯ ಕುಡಿಯಲಿಕ್ಕ ಽಽಽ "
ಬಾಳೆಲೆ ಸಹಿತವಾಗಿ ಬಂದ ಮೂವರೂ ಕುಳಿತುಕೊಳ್ಳಲು ಸ್ಥಳ ಹೊಂದಿಸುತ್ತಿದ್ದಂತೆ ನನ್ನ ಉಪ್ಪಿಟ್ಟು - ಚಹಾ ಹೊರ ಬಂದಿತು.
ಪರಿಚಿತನೇ ಆಗಿದ್ದುದರಿಂದ ಚಹಾದೊಂದಿಗೆ ಬಿಸಿ ಬಿಸಿ ಉಪ್ಪಿಟ್ಟು ನೋಡುತ್ತ ನಾರಾಯಣ ಆನಂದಿತನಾದ.

ನಮ್ಮ ಪಟ್ಟಾಂಗ ಮುಂದೆ ತುಳು ಭಾಷೆಯಲ್ಲಿ ಮುಂದುವರಿಯಿತು.
" ಅಕ್ಕ, ಬಿರ್ಯಾನೀ ರೈಸ್ ಮಾಡಿದ್ದೋ?"
" ಇದು ಬಿರ್ಯಾನೀ ರೈಸಾ.... ನಂಗೊತ್ತಿಲ್ವಲ್ಲ, ದೋಸೆಗೆ ಕಡೆಯಲಿಕ್ಕೆ ಅಕ್ಕಿ ಅಂತ ಹೇಳಿದ್ರೆ ಇದೇ ಅಕ್ಕಿ ... ಅಂಗ್ಡಿಯೋನೂ ಕೊಡೂದೂ ಇದನ್ನೇ.. "
" ಹೆಹೆ... ಎಲ್ರಿಗೂ ಅಡಿಗೆ ಸುಲಭದಲ್ಲಿ ಆಗ್ತದೆ...."

ಪುಲಾವ್, ಘೀ ರೖಸ್, ವೆಜಿಟೆಬಲ್ ಬಾತ್, ವಾಂಗೀಬಾತ್, ಪುಳಿಯೋಗರೆ, ಚತ್ರಾನ್ನ ಇತ್ಯಾದಿಗಳ ಒಳಗುಟ್ಟು ಈ ಉಪ್ಪಿಟ್ಟಿನಲ್ಲಿದೆ. ಏನೇ ಹೊಸರುಚಿ ಕಲಿಯುವ ಮೊದಲು ಅಚ್ಚುಕಟ್ಟಾಗಿ ಉಪ್ಪಿಟ್ಟು ಮಾಡಲು ತಿಳಿದಿರಲೇ ಬೇಕು. ಉಪ್ಪು+ಹಿಟ್ಟು ಅಂದ್ರೆ ಉಪ್ಪಿಟ್ಟು, ಹಿಟ್ಟು ಅಕ್ಕಿಯದೂ ಆದೀತು, ಗೋಧಿಯದೂ ಆದೀತು. ಗೋಧಿಯ ಕಡಿಹಿಟ್ಟನ್ನು ಸಜ್ಜಿಗೆ ಅನ್ನುವ ವಾಡಿಕೆ ನಮ್ಮ ದಕ್ಷಿಣ ಕನ್ನಡಿಗರಲ್ಲಿದೆ. ಅಕ್ಕಿ ಕಡಿಯ ಉಪ್ಪಿಟ್ಟು ಇಲ್ಲಿ ಅಷ್ಟಾಗಿ ಚಾಲ್ತಿಯಲ್ಲಿಲ್ಲ. ಏನೇ ಗಡಿಬಿಡಿಯ ತಿಂಡಿ ಆಗಬೇಕಿದ್ದರೆ ಸಜ್ಜಿಗೆ ಒಗ್ಗರಿಸುವುದು ರೂಢಿ. ಅದರ ಜೊತೆಗೆ ಮಸಾಲೆ ಅವಲಕ್ಕಿಯೂ, ಕದಳೀ ಬಾಳೆಹಣ್ಣೂ ಕೂಡಿಕೊಳ್ಳಲು ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು. ನಮ್ಮ ತುಳು ಭಾಷಿಕರು ಇದನ್ನೇ ಸಜ್ಜಿಗೆ-ಬಜಿಲ್ ಅಂದಿದ್ದಾರೆ.


Posted via DraftCraft app

Saturday, 17 January 2015

ತೆರೆದಿದೆ ಮನೆ, ಬಾ ಅತಿಥೀ....


ತೋಟದೊಳಗೆ ತಿರುಗಾಟ ಮುಗಿಸಿ ಒಳ ಬಂದು ಕೂತಿದ್ದೆ. ಅಡುಗೆಮನೆಯ ಕೆಲಸಕಾರ್ಯಗಳು ಇನ್ನೂ ಆರಂಭ ಆಗಬೇಕಿದೆ. ಮೊದಲು ಒಂದು ಚಹಾ.... ಅಂದುಕೊಳ್ಳುತ್ತಿದ್ದ ಹಾಗೇ,
" ಚಿಕ್ಕಮ್ಮಾ, ಏನು ಮಾಡ್ತಾ ಇದ್ದೀ.... ಬ್ಲಾಗ್ ನಲ್ಲಿರುವ ತಿಂಡಿ ಏನಾದ್ರೂ ಇದ್ಯಾ " ಅನ್ನುತ್ತಾ ಶ್ಯಾಮ ಒಳ ಬಂದ.
" ಅರೆ, ನೀನ್ಯಾವಾಗ ಬಂದಿದ್ದು ?"
" ನಾನು ಹಾಗೇ ರಬ್ಬರು ತೋಟ ಸುತ್ತಾಡಿ ಬಂದೆ "
" ಓ, ಹೆಂಡ್ತೀನೂ ಬಂದಿದ್ದಾಳೋ.... ಈಗ ಆಸರಿಗೆ ಏನು ?"
" ಅಯ್ಯೊ ಏನೂ ಬೇಡಾ, ತಣ್ಣಗೆ ನೀರು ಸಾಕು "
ಅವನು ನೀರು ಸಾಕೂ ಅಂದ್ರೆ ನೀರನ್ನೇ ಕೊಟ್ರೆ ಹೇಗಾದೀತು, ನಿನ್ನೆ ಸಂಜೆ ಮಾಡಿದ್ದ ಗೋಳಿಬಜೆ ಇದ್ದಿತು, ಮಗಳ ಅಪ್ಪಣೆಯಂತೆ ಮಾಡಿದ್ದು. ಹೇಗೂ ಬ್ಲಾಗ್ ತಿಂಡಿ ಅನ್ನುತ್ತಾ ಬಂದಿದ್ದಾನೆ, ಬೇಗ ಬೇಗ ಚಹಾ ಎಲ್ಲರಿಗೂ ತಯಾರಾಯಿತು. ಅದೂ ಇದೂ ಮಾತಾಡುತ್ತ ಎಲ್ಲರೂ ಟೀ, ಗೋಳಿಬಜೆ ಖಾಲಿ ಮಾಡಿ ಎದ್ದರು.

" ಗೋಳಿಬಜೆ ಹೊಸ ಕ್ರಮದಲ್ಲಿ ಮಾಡಿದ್ದೂ " ಅನ್ನುತ್ತಾ ಮಾಡೋ ವಿಧಾನ ಅವನ ಮುಂದೆ ಗೋರ್ಕಲ್ಲ ಮೇಲೆ ನೀರು ಸುರಿದ ಹಾಗೆ ಒದರಿದ್ದೂ ಆಯಿತು. ಮನೆಯಲ್ಲಿ ಏನೋ ಪೂಜಾ ಕಾರ್ಯಕ್ರಮಕ್ಕೆ ಆಮಂತ್ರಣವನ್ನೂ ಕೊಟ್ಟು ಶ್ಯಾಮಸೂರ್ಯ ಹೊರಟ." ಗೋಳಿಬಜೆ ಮಾಡಮ್ಮಾ " ಅಂದಿದ್ದು ಮಗಳು. ಅವಳು ಹೇಳಿಯೇ ಹೇಳ್ತಾಳೆ ಅಂತ ಕಡ್ಲೆಹುಡಿ, ಮೈದಾಹುಡಿ ತರಿಸಿ ಇಟ್ಕೊಂಡಿದ್ದೆ. ಮೈದಾ ಏನೋ ಹೇಗೋ ಮುಗಿಯುತ್ತಾ ಬಂದಿತ್ತು. ಕಡ್ಲೆಹಿಟ್ಟಿಗೆ ಜೊತೆಯಾಗುವಷ್ಟು ಇಲ್ಲವಲ್ಲ ಅಂದ್ಕೊಳ್ಳುತ್ತಇದ್ದ ಹಾಗೇ ಗೋಧಿಹುಡಿ ಹಾಕಿದ್ರಾದೀತು ಎಂಬ ಐಡಿಯಾ ಬಂದಿತು.
ಸರಿ, ಇದ್ಧಷ್ಟು ಮೈದಾ, ಗೋಧಿಹುಡಿ, ಕಡ್ಲೆಹುಡಿಗಳು ಅಳೆಯಲ್ಪಟ್ಟು ತಪಲೆಗೆ ಇಳಿದುವು.
ಒಂದು ಕಳಿತ ಬಾಳೆಹಣ್ಣೂ ನುರಿನುರಿದು ಹಿಟ್ಟುಗಳೊಡನಾಡಿತು.
ಉಪ್ಪು, ಸಕ್ರೆ, ಮಸಾಲಾಪುಡಿ, ಎಳ್ಳು, ಜೀರಿಗೆ..... ಓಮದ ಡಬ್ಬ ಸಿಗಲಿಲ್ಲ, ಎಲ್ಹೋಯ್ತೋ...
ನೀರು ಕೂಡಿಸಿ ಕಲಸಿಟ್ಟಾಯ್ತು. ಹ್ಞಾಂ, ಸೋಡಪುಡಿ ಪುಟ್ಟ ಚಮಚಾದಲ್ಲಿ ಅರ್ಧ ಕೂಡಿಕೊಳ್ಳುವಲ್ಲಿಗೆ ಮಿಶ್ರಣ ತಯಾರಾಯಿತು.
ಎಣ್ಣೆಯೂ ಬಿಸಿಯಾಗುತ್ತಲಿತ್ತು. ಹಿಟ್ಟಿನ ಮಿಶ್ರಣ ತೀರ ಗಟ್ಟಿ ಉಂಡೆಯಾಗಕೂಡದು. ದೋಸೆಹಿಟ್ಟಿನಂತಲೂ ಆಗಿರಬಾರದು, ಕೈಯಲ್ಲಿ ಮುದ್ದೆಯಾಗಿ ತೆಗೆದು ಎಣ್ಣೆಗೆ ಹಾಕುವಂತಿರಬೇಕು.

ಗೋಳಿಬಜೆಯನ್ನು ಅಳಿದುಳಿದ ಹುಡಿಗಳಿಂದಲೂ ಮಾಡಬಹುದೆಂದು ತಿಳಿಯಿತಲ್ಲ. ತರಕಾರಿಗಳ ಪೋಡಿ ಅಥವಾ ಬಜೆ ಯಾ ಬಜ್ಜಿ ಮಾಡ ಹೊರಟಾಗಲೂ ತಪಲೆಯಲ್ಲಿ ತುಸು ಕಡ್ಲೇಹಿಟ್ಟು ಉಳಿದಿರುತ್ತದೆ. ಬೇಕಿದ್ದರೆ ಈ ಸಂದರ್ಭದಲ್ಲೂ ಮೈದಾ ಬೆರೆಸಿ ಗೋಳಿಬಜೆ ಮಾಡಿಕೊಳ್ಳಬಹುದು. 

ಟಿಪ್ಪಣಿ:  10 /9 /2016 ರಂದು ಮುಂದುವರಿದಿದೆ.


                                                                 ಕಾವೇರಿ ರಜೆ ಹಾಗೂ ಗೋಳಿಬಜೆ

ಮಗಳು ಮನೆಗೆ ಬರಲಿರುವ ಸೂಚನೆ ಕೊಟ್ಟಳು,   ಮುಂಜಾನೆ ಹಾಜರಿರುತ್ತಾಳೆ,   ಅವಳಿಗೆ ಪ್ರಿಯವಾದ ಉದ್ದಿನದೋಸೆ ಹಿಟ್ಟು ಸಿದ್ಧವಾಯಿತು.

ಮುಂಜಾನೆ ಬಂದವಳೇ ಬಿಸಿನೀರ ಸ್ನಾನ ಮುಗಿಸಿ,  ಟೀವಿ ನೋಡುತ್ತ ತಿಂಡಿ ತಿಂದು,  ಅದೂ ಇದೂ ಮಾತನ್ನಾಡಿ ತಲೆದಿಂಬು ಹಿಡಿದು ಅಡ್ಡಾದವಳು ಎದ್ದಿದ್ದು ಮಧ್ಯಾಹ್ನದ ಊಟಕ್ಕೆ.

ಅವಳಿಗಿಷ್ಟವಾದ ಸೌತೆಕಾಯಿ ಸಾಂಬಾರ್,  ಉದ್ದಿನ ಹಪ್ಪಳ,  ತರಕಾರಿಗಳ ಉಪ್ಪಿನಕಾಯಿ ಟೇಬಲ್ ಮೇಲಿಟ್ಟಾಗ,   " ಅಮ್ಮ,  ಸಾರು ಮಾಡಿಲ್ವಾ? "  ಅಂದ್ಳು.
 
" ಟೊಮ್ಯಾಟೋ,  ಕೊತ್ತಂಬ್ರಿ ಸೊಪ್ಪು,  ನೀರುಳ್ಳಿ,  ಹಸಿಮೆಣಸು,  ಶುಂಠಿ ತರೂದಿಕ್ಕೆ ಹೇಳು ಅಪ್ಪನ ಹತ್ತಿರ.. "

ಸಂಜೆಯಾಗುತ್ತಲೂ  " ಟೀ ಕುಡಿಯೋ ಹೊತ್ತಾಯ್ತು,  ಗೋಳಿಬಜೆ ಮಾಡಮ್ಮ.. " ಅನ್ನೋದೇ!
ಯಾವಾಗ ನೋಡಿದ್ರೂ ಇದೇ ಗೋಳಾಯ್ತು,  ಉದ್ದಿನ ದೋಸೆ ಹಿಟ್ಟು ಉಂಟಲ್ಲ,  ದೋಸೆ ಎರೆದು... "

" ದೋಸೆ ಆಗ ತಿಂದಾಯ್ತಲ್ಲ,  ಈಗ ಗೋಳಿಬಜೆ... "

" ಹ್ಞೂ,  ಮೈದಾ ಇದೆ,  ಪತಂಜಲಿ ಸ್ಟೋರಿನಿಂದ ತಂದ ಸಬ್ಜೀ ಮಸಾಲಾ ಇದೆ,  ಸೋಡ ಹುಡಿ ಇದೆ...  ಎಲ್ಲ ಇದೆ,  ಆದ್ರೆ ಈ ದೋಸೆಹಿಟ್ಟು ದಂಡ ಆಗುತ್ತಲ್ಲ. "

" ಅದೆಲ್ಲ ನನಗ್ಗೊತ್ತಿಲ್ಲ... "

ಅವಳಪ್ಪಣೆ ಮೀರಲಿಕ್ಕುಂಟೇ,   ದೋಸೆಹಿಟ್ಟಿನ ತಪಲೆಯನ್ನು ದಿಟ್ಟಿಸುತ್ತಿದ್ದ ಹಾಗೆ,  ನಾಲ್ಕು ಚಮಚ ಪತಂಜಲಿ ಸಬ್ಜೀ ಮಸಾಲಾ,  ರುಚಿಗೆ ಉಪ್ಪು,  ಚಿಟಿಕೆ ಸೋಡ ಹುಡಿ,  ನಾಲ್ಕಾರು ಚಮಚ ಸಕ್ಕರೆ,  ಒಂದು ಪಾವು ಮೈದಾ ದೋಸೆ ಹಿಟ್ಟಿಗೆ ಇಳಿಯಲಾಗಿ....

ಗೋಳಿಬಜೆ ಮಿಶ್ರಣ ಸಿದ್ಧವಾಯಿತು.   ಚಿಂತೆಯಿಲ್ಲದೆ ಎಣ್ಣೆ ಒಲೆಗೇರಿತು.   ಭಲೇ ಚೆನ್ನಾಗಿತ್ತು ಎಂದು ಬೇರೆ ಹೇಳಬೇಕಾಗಿಲ್ಲ ಅಲ್ವೇ?  

ಒಂದು ಫೋಟೋ ಹಾಕ್ಬೇಕಾಗಿತ್ತು,  ಆದ್ರೇನ್ಮಾಡ್ಲೀ,  ಗೋಳಿಬಜೆ ಖಾಲಿಯಾಗ್ಹೋಯ್ತಲ್ಲ....  ಗೋಳಿಬಜೆಯ ಇನ್ನೊಂದು ಅವತರಣಿಕೆ ಓದಲು  

ಮಿಂಚು: ಸಂಜೆಗೊಂದು ತಿನಿಸು Friday, 16 January 2015

ಮುಂಡಿಯ ಅಡುಗೆಬಚ್ಚಲುಮನೆಯ ಹಿಂದೆ ಸ್ನಾನಗೃಹದ ನೀರು ಹರಿದು ಬರುವಲ್ಲಿ ಮುಂಡಿಗೆಡ್ಡೆ ಬೆಳೆದು ನಿಂತಿದೆ.   ದಿನವೂ ಅದರ ಬೆಳವಣಿಗೆಯತ್ತ ಒಂದು ನೋಟ ಇದ್ದೇ ಇದೆ.  ಕಾಡುಹಂದಿಯ ಕಣ್ಣನೋಟ ತಗಲದಿರಲಿ ಎಂದು ವರಾಹರೂಪಿ ಭಗವಂತನಲ್ಲಿ ಬೇಡಿಕೊಳ್ಳುತ್ತಾ ಇದ್ದಂತೆ ಆ ದಿನ ಬಂದೇ ಬಿಟ್ಟಿತು.

ನಮ್ಮ ಮಾವನವರು ಇದ್ದಾಗ ತೋಟ ತುಂಬಾ ಇದ್ದಂತಹ ಮುಂಡಿಗೆಡ್ಡೆಯ ಬೆಳೆ ಕಾಡುಹಂದಿಗಳ ಹಾವಳಿಯಿಂದಾಗಿ ನಿರ್ನಾಮವಾಗುವ ಹಂತ ತಲಪುತ್ತಿದ್ದಂತೆ ಜಾಗೃತನಾದ ಚೆನ್ನಪ್ಪ ಈಗ ಇರುವಲ್ಲಿ ನೆಟ್ಟ.  ನೀರೂ ಹರಿದು ಬರುವ ಜಾಗ,  ಬಿಸಿಲೂ ಇದೆ,  ರಾತ್ತಿವೇಳೆ ವಿದ್ಯುತ್ ಬೆಳಕೂ ಇದೆ,  ಕಣ್ಗಾವಲಿಗೂ ಉತ್ತಮ ಸ್ಥಳ.

ಹಿರಿಯರ ಕಾಲದಲ್ಲಿ ಮನೆಯಲ್ಲಿ ಯಾವತ್ತೂ ಹಬ್ಬಹರಿದಿನಗಳು,  ವಿಜೃಂಭಣೆಯಿಂದ ಆಚರಿಸುವ ಪದ್ಧತಿ.   ವರ್ಷದಲ್ಲಿ ನಾಲ್ಕಾರು ಬಾರಿ ಹೋಳಿಗೆಯ ಔತಣದೂಟ ಇದ್ದೇ ಇರುತ್ತಿತ್ತು.   ಹೋಳಿಗೆಯ ಊಟ ಎಂದೊಡನೆ  ಊಟದೊಂದಿಗೆ ಹತ್ತುಹಲವು ವ್ಯಂಜನಗಳು ಇದ್ದೇ ತೀರಬೇಕು.    ಪಲ್ಯಗಳು, ಹುಳಿ,  ಮೆಣಸ್ಕಾಯಿ,  ಚಿತ್ರಾನ್ನ,  ಗೊಜ್ಜು,  ಕೋಸಂಬ್ರಿ,  ಉಪ್ಪಿನಕಾೖ,  ಘಮಘಮಿಸುವ ತುಪ್ಪ,  ಗಂಧಸಾಲೆ ಅನ್ನದೊಂದಿಗೆ ಪಾಯಸಗಳು...

ಇಂತಹ ಅಡುಗೆಯಲ್ಲಿ ಮುಖ್ಯವಾದ ಪ್ರಾಶಸ್ತ್ಯ ಮುಂಡಿಗೆಡ್ಡೆಗೆ ನೀಡಲಾಗುತ್ತಿತ್ತು.  ತೋಟದೊಳಗೆ ಹೆಜ್ಜೆಗೊಂದರಂತೆ ಸಿಗುವ ಮುಂಡಿ ಬೆಳೆ ಸಹಜವಾಗಿಯೇ ತರಕಾರಿಯಾಗಿ ಸಿಗುವ ವಸ್ತು.  ಮುಂಡಿ ಪಲ್ಯ,  ಮಜ್ಜಿಗೆ ಹುಳಿ,  ಅಗತ್ಯ ಬಿದ್ದರೆ ಉಪ್ಪಿನಕಾಯಿಗೂ ಮುಂಡಿ ರೆಡಿ.  ಉಪ್ಪಿನಕಾಯಿ ಎಂದಾಗ,  ಒಂದಾನೊಂದು ಕಾಲದಲ್ಲಿ ನಾನೂ ಚಿಕ್ಕವಳಾಗಿದ್ದೆ.  ನಮ್ಮ ತೋಟದಮನೆಯಲ್ಲೂ ಹುಲುಸು ಈ ಮುಂಡಿ ಬೆಳೆ.   ಅಪ್ಪನೂ ಮುಂಡಿಗೆಡ್ಡೆಯ ಉಪಯೋಗದಲ್ಲಿ ನಿಷ್ಣಾತರು.  ತೋಟದಲ್ಲಿ ಕಡಿದು ತರಬಹುದಾದ ಮುಂಡಿಯನ್ನು ನೋಡಿಟ್ಟು,  ಕೆಲಸದಾಳುಗಳ  ಮೂಲಕ ಕಾಸರಗೋಡಿನ ಮನೆಗೂ ತರಿಸಿಟ್ಟುಕೊಳ್ಳುತ್ತಿದ್ದರು.   ಒಮ್ಮೆ ಏನಾಯಿತಂದ್ರೆ ತೋಟದ ಕೆಲಸಕ್ಕಾಗಿ ಹತ್ತು ಹದಿನೖದು ಕಾರ್ಮಿಕರು ಬಂದಿದ್ದ ಹಾಗೇ ಕಾರ್ಮಿಕರ ಅಡುಗೆ  ವ್ಯವಸ್ಥೆಯೂ ಇದೆಯಲ್ಲ, ಅವರ ಅಡುಗೆ ಏರ್ಪಾಡು ತೋಟದೊಳಗೇ ಕಲ್ಲು ಹೊಂದಿಸಿ ಒಲೆಯೂ ಕ್ಷಣಮಾತ್ರದಲ್ಲಿ ಸಿದ್ಧವಾಗ್ತಾ ಇತ್ತು.  ಏನೇ ಆದರೂ ಮಜ್ಜಿಗೆ ಉಪ್ಪಿನಕಾಯಿಗಳನ್ನು ಅಮ್ಮನೇ ಕೊಡಬೇಕಾಗಿತ್ತು.  ಮಜ್ಜಿಗೆ ಕೊಡುತ್ತಾ  " ಉಪ್ಪಿನಕಾೖ ಇಲ್ವಲ್ಲಾ.. " ಅಂದರು ಅಮ್ಮ.   " ಅಕ್ಕ,  ಮುಂಡಿ ಉಪ್ಪಾಡೂ ಆದೀತು " ಎಂದ ಆ ಭೂಪ ತೋಟದಲ್ಲಿದ್ದ ದೈತ್ಯ ಗಾತ್ರದ ಮುಂಡಿ ಸಸ್ಯ ಸಂಕುಲದೆಡೆ ಕಣ್ಣು ಹಾಯಿಸುತ್ತಾ.   ಅವನನ್ನು ಹೇಗೋ ಸಾಗ ಹಾಕಿದ ನನ್ನಮ್ಮ " ಮುಂಡಿ ಉಪ್ಪಿನಕಾಯಿ ಮನೆಯೊಳಗಿದೆ ಅಂತ ಇವನಿಗ್ಯಾರು ಹೇಳಿದ್ದಂತೇ.." ಎಂದು ಅಚ್ಚರಿ ಪಟ್ಟಿದ್ದಿದೆ.

ಮುಂಡಿ ಸಸ್ಯ ವರ್ಗದಲ್ಲಿಯೂ ಎರಡು ಜಾತಿಗಳಿವೆ,  ತುರಿಕೆಯಿರುವುದೂ ಹಾಗೂ ತುರಿಸದೇ ಇರುವಂತದ್ದು.  ತುರಿಸುವ ಮುಂಡಿಗೆಡ್ಡೆಯ ಸುದ್ದಿಗೆ ಕಾಡುಹಂದಿಯೂ ಬರುವುದಿಲ್ಲ.  ಅತಿ ವೇಗವಾಗಿ ನಗರೀಕರಣ ಆಗುತ್ತಿರುವ ಈ ಹೊತ್ತಿನಲ್ಲಿ ಕಾಡುಪ್ರಾಣಿಗಳೂ ಊರೊಳಗೆ ಬಂದಿವೆ.  ಹಗಲು ಎಲ್ಲೋ ಪೊದೆಯಲ್ಲಿ ಅವಿತಿದ್ದು ಕತ್ತಲಾಗುತ್ತಲೇ ಆಹಾರವನ್ನರಸುತ್ತಾ ನೆಟ್ಟು ಬೆಳೆಸಿದ  ಗೆಡ್ಡೆಗೆಣಸುಗಳನ್ನು ಸ್ವಾಹಾ ಮಾಡ್ಬಿಟ್ಟು ಪರಾರಿಯಾಗುತ್ತವೆ.  ಹಿಂದೆಲ್ಲಾ ತೋಟದೊಳಗೆ ರಾತ್ರಿಪಾಳಿಯ ಕೆಲಸಗಾರರು ಇರುತ್ತಿದ್ದರಿಂದ,  ಸಂಜೆಯಾಗುತ್ತಲೇ ಚಳಿ ಕಾಯಿಸುತ್ತ,  ತೋಟದೊಳಗೆ ಅಲ್ಲಲ್ಲಿ ಬೆಂಕಿಯ ಅಗ್ಗಿಸ್ಟಿಕೆಗಳನ್ನು ಮಾಡಿದಾಗ ಬೆಳಕಿನ ವೈಭವ ನಿರ್ಮಾಣವಾಗುತ್ತಿತ್ತು.  ತೆಂಗಿನ ಮಡಲಿನ ಸೂಟೆ ಬೀಸುತ್ತಾ ತೋಟದೊಳಗೆ ತಿರುಗಾಡುತ್ತಿದ್ದರೆ  ಕೊಳ್ಳಿ ದೆವ್ವವೋ ಎಂಬಂತೆ ಭಾಸವಾಗುವವ ಕಾಲ ಅಂದಿನದು.  ಈ ತೆರನಾದ ಸರಳ ಉಪಾಯಗಳಿಂದ ಕಾಡು ಪ್ರಾಣಿಗಳ ಉಪಟಳ ಇಲ್ಲದ ಕಾಲ ಅದಾಗಿತ್ತು.  ಈಗ ಕಾಲ ಬದಲಾಗಿದೆ,  ಅಂದಿನ ನಿಷ್ಠಾವಂತ ಕಾರ್ಮಿಕ ವರ್ಗ ಇಂದಿಲ್ಲ,  ತೋಟದ ಕೆಲಸಗಳಿಗೆ ಜನರ ಅಭಾವ ಬಂದಿದೆ.   ದೊಡ್ಡ ಪ್ರಮಾಣದ ಕೃಷಿಕರು ಹೇಗೋ ಸುಧರಿಸಿಕೊಂಡು ಹೋಗುತ್ತಿದ್ದಾರೆ.   ಸಣ್ಣಪುಟ್ಟ ಬೆಳೆಗಾರರಿಗೆ ಕೃಷಿಕೆಲಸ ಒಂದು ಸವಾಲಾಗಿ ಪರಿಣಮಿಸಿದೆ,  ಉಪ ಉದ್ಯೋಗ ಇದ್ದಲ್ಲಿ ಮಾತ್ರ ಬದುಕಲು ಸಾಧ್ಯ ಎಂಬಂತಹ ವಾತಾವರಣ ಈಗ ಇದೆ.

ಈಗ ನಾವು ಮುಂಡಿಯನ್ನು ಕಡಿದು,  ಅಡುಗೆಗೆ ಸಿದ್ಧಪಡಿಸುವ ಸಾಹಸೀ ಚಿತ್ರಣಗಳನ್ನು ನೋಡಿಕೊಳ್ಳೋಣ.  ನಮ್ಮ ಕಣ್ಣಿಗೆ ಗೆಡ್ಡೆಯಂತೆ ಕಂಡರೂ ಅಡುಗೆಗೆ ಬಳಕೆಯಾಗುವ ಭಾಗ ಕಾಂಡವಾಗಿರುತ್ತದೆ.   ಈ ಗೆಡ್ಡೆಯ ಹೊರ ಪದರ ಕಪ್ಪಾಗಿ ಕಣ್ಣಿಗೆ ಅನಾಕರ್ಷಕವಾಗಿರುವುದು ಹಾಗೂ ಕ್ಯಾಲ್ಸಿಯಂ ಓಕ್ಸಲೇಟ್ ಎಂಬ ರಸದ್ರವ್ಯದ ಇರುವಿಕೆಯಿಂದಾಗಿ ತುರಿಸುವ ತೊಂದರೆ ಇದೆ.  ನುರಿತ ಕೆಲಸಗಾರರು ತುರಿಕೆಯ ಭಾಗವನ್ನು ಸ್ಪರ್ಶಿಸದೆ ಕಡಿಯಬಲ್ಲರು.   ಇದರ ಎಲೆ ಕೂಡಾ ಭೀಮಗಾತ್ರದ್ದು,  ಸಂಡಿಗೆ ಎರೆಯಲು ಚಾಪೆಯಂತೆ ಬಳಕೆ,   ಜೋರಾಗಿ ಮಳೆ ಬರುತ್ತಿದೆಯಾದಲ್ಲಿ ತೋಟದೊಳಗಿರುವವರಿಗೆ ಎಲೆಯೇ ಕೊಡೆಯಾಗಿ ಬಿಡುವುದು,  ಉದ್ದನೆಯ ಕೈ ಕೂಡಾ ಇರುವುದರಿಂದ ನಿರಾತಂಕದಿಂದ ಮಳೆಯನ್ನು ಎದುರಿಸಬಹುದಾಗಿದೆ.   ನಾವೆಲ್ಲ ಮುಂಡೀ ಕೊಡೆ ಉಪಯೋಗಿಸಿದವರೇ.  ಮುಂಡಿ ಎಲೆಯ ಉದ್ದನೆಯ ದಂಟು ಕೂಡಾ ದೋಸೆ ಕಾವಲಿಗೆ ತುಪ್ಪ ಯಾ ಎಣ್ಣೆ ಪಸೆ ಮಾಡಲೂ ಬಳಕೆಯಾಗುವಂಥದು   ಸಸ್ಯವಿಜ್ಞಾನದಲ್ಲಿ ಇದಕ್ಕೆ ಸಾಟಿಯಾದ ಎಲೆ ಇನ್ನೊಂದಿಲ್ಲ.  alocasia macrorrhiza ಎಂಬ ನಾಮಧಾರಿಯಾಗಿ ಸಸ್ಯಶಾಸ್ತ್ರಜ್ಞರ ಅಧ್ಯಯನಕ್ಕೆ ವಸ್ತುವಾಗಿರುವ ಮುಂಡಿಗೆಡ್ಡೆ,   elephent ear yam ಅಂತಲೂ, giant taro ಎಂದೂ ಹೆಸರುವಾಸಿಯಾಗಿದೆ.  ನಮ್ಮ ಭರತಭೂಮಿಯೇ ಇದರ ನೆಲೆವೀಡು.  ಕಾರ್ಬೋಹೈಡ್ರೇಟ್ ಸಮೃದ್ಧವಾಗಿರುವ ಈ ಗೆಡ್ಡೆಯ ಉಪಯುಕ್ತತೆಯನ್ನು ನಮ್ಮ ಜನ ಅನಾದಿಯಿಂದಲೇ ಅರಿತಿದ್ದರು ಎಂದರೂ ತಪ್ಪಾಗಲಾರದು.  ಹಾಗಾಗಿ ಇದು ಕಾಡುಬೆಳೆಯಲ್ಲ,  ಜನರಿದ್ದ ಕಡೆ ಇರುವಂಥದು.  ವಿಟಮಿನ್ ಸಿ, ಐರನ್,  ಫಾಸ್ಫರಸ್ ಗಳ ಆಗರ ಈ ಮುಂಡೀಗೆಡ್ಡೆ.

ಮುಂಡೀಗೆಡ್ಡೆಯೇನೂ ನೆಲದಾಳದಿಂದ ಬಗೆದು ತೆಗೆಯುವ ಶ್ರಮವನ್ನು ನೀಡುವುದಿಲ್ಲ.  ಸಸ್ಯ ಬೆಳೆದಂತೆ ಗೆಡ್ಡೆಯೂ ಮೇಲ್ಪದರದಲ್ಲಿ ಕಾಣುವಂತೆ ಬೆಳೆಯುತ್ತಿರುತ್ತದೆ.  ಬೆಳವಣಿಗೆಯ ಒಂದು ಹಂತದಲ್ಲಿ ಕತ್ತಿಯೇಟಿನಿಂದ ಕತ್ತರಿಸಿ ತೆಗೆದು,  ಕರ್ರಗಿನ ಹೊರಸಿಪ್ಪೆಯನ್ನು ತೆಗೆದು,  ಬೆಳ್ಳಗೆ ಹಾಲಿನಷ್ಟು ಬಿಳುಪಾದ ಗೆಡ್ಡೆ ಖಾದ್ಯಯೋಗ್ಯವಾಗಿ ದೊರೆಯುವಂಥದು.  ನಿಧಾನ ಗತಿಯಲ್ಲಿ ಬೇಯುವ ಈ ಗೆಡ್ಡೆಯನ್ನು ಬೇಯಿಸಲು ಪ್ರೆಶರ್ ಕುಕ್ಕರ್ ಸೂಕ್ತ.

ಮುಂಡಿಯನ್ನು ನಾಟಿ ಮಾಡುವುದು ಹೇಗೆ?

ಕಡಿದಾಯಿತಲ್ಲ,  ಕಾಂಡದ ತುದಿಯಲ್ಲಿ ಸಸ್ಯಭಾಗ ಇರುವಂತೆ ಒಂದು ಗೇಣುದ್ದದಷ್ಟು ಗೆಡ್ಡೆ ಇರುವ ಹಾಗೆ ಕತ್ತರಿಸಿದಲ್ಲಿ ನೆಡಲು ಸಿದ್ಧವಾದ ಮುಂಡಿ ದೊರೆಯಿತು.  ಸೂಕ್ತವಾದ ಚಿತ್ರಗಳನ್ನೂ ಹಾಕಿರುವುದರಿಂದ ಹೆಚ್ಚು ವಿವರಣೆಯ ಅವಶ್ಯವಿಲ್ಲ.

ಇಷ್ಟೆಲ್ಲ ಬರೆದು ಒಂದು ಅಡುಗೆಯ ಮಾದರಿ ಹಾಕದಿದ್ದರೆ ಹೇಗಾದೀತು,  ಪಲ್ಯ ಮಾಡೋಣ.

ಸುಮಾರಾಗಿ 30ರಿಂದ 40 ಕಿಲೋ ಭಾರದ ಮುಂಡಿಗೆಡ್ಡೆಯ ಹೋಳು ಮಾಡಿಕೊಳ್ಳಲು ತ್ರಾಣ ಇದ್ದವರ ಸಹಾಯವೂ ಬೇಕಾದೀತು.  ವರ್ಷಗಳ ಹಿಂದೆ ಕೆಲಸದಾಕೆಯೇ ಇಂತಹ ಘನಕಾರ್ಯಗಳ ನಿರ್ವಹಣೆ ಮಾಡುತ್ತಿದ್ದಳು.  ಈಗ ಆ ನನ್ನ ಕೆಲಸದಾಕೆ ಕಲ್ಯಾಣಿ ಕೇರಳ ಸರ್ಕಾರದ ಗ್ರಾಮೀಣ ರೋಜ್ಗಾರ್ ಯೋಜನೆಯ ಫಲಾನುಭವಿಯಾಗಿರುವುದರಿಂದ ಅವಳಿಗೆ ಮುಂಡಿಗೆಡ್ಡೆಯ ಕೊದ್ದೆಲ್ ತಿನ್ನುವ ಭಾಗ್ಯವಿಲ್ಲ ಅಂದುಕೊಳ್ಳುತ್ತ ನಾನೇ ಪಲ್ಯಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕಾಯಿತು.

ಚಿಕ್ಕಗಾತ್ರದ ಹೋಳುಗಳು ಉತ್ತಮ.  ಹೋಳು ಮಾಡಿಕೊಳ್ಳುವಾಗ ಕೈ ಒದ್ದೆಯಾಗಿರಕೂಡದು.  ಗೆಡ್ಡೆಗೂ ನೀರ ಹನಿ ಬೀಳಕೂಡದು. ಹೋಳುಗಳನ್ನು ತೂತಿನ ಜಾಲರಿ ತಟ್ಟೆಯಲ್ಲಿ ಹಾಕಿಟ್ಟು ನೀರಿನಲ್ಲಿ ತೊಳೆಯಿರಿ.  ಇವಿಷ್ಟೂ ಕೈ ತುರಿಸದಂತಿರಲು ಮಾಡಬೇಕಾದ ವಿಧಿವಿಧಾನಗಳು.
ರುಚಿಗೆ ತಕ್ಕ ಉಪ್ಪು ಬೆರೆಸಿ ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿ.  ಚೆನ್ನಾಗಿ ಬೆಂದ ಮುಂಡಿ ತುರಿಸುವುದಿಲ್ಲ.
ಒಗ್ಗರಣೆ ಸಿದ್ಧಪಡಿಸಿ.
ಬೇಯಿಸಿದ ಅನಾವಶ್ಯಕ ನೀರು ಚೆಲ್ಲಿ, ಒಗ್ಗರಣೆ ಸಿಡಿದಾಗ ಹೋಳುಗಳನ್ನು ಹಾಕಿ.  ತೆಂಗಿನತುರಿಯಿಂದ ಅಲಂಕರಿಸಿ.
Sunday, 4 January 2015

ಬಾಳೆಹಣ್ಣಿನ ರೊಟ್ಟಿಬಾಳೆಗೊನೆ ಹಣ್ಣಾಯಿತು. ಅದರಲ್ಲೇನೂ ವಿಶೇಷವಿಲ್ಲ ಬಿಡಿ, ಹಣ್ಣನ್ನು ತಿಂದು ಮುಗಿಸಲು ನಮ್ಮಿಬ್ಬರಿಗೆ ಸಾಧ್ಯವಿಲ್ಲ. ತುಪ್ಪ ಸಕ್ಕರೆ ಹಾಕಿ ಹಲ್ವಾ ಮಾಡಲೂ ಮನಸ್ಸಿಲ್ಲ. ದಿನವಿಡೀ ತೋಟದ ಕೆಲಸಕಾರ್ಯಗಳಲ್ಲೇ ಮಗ್ನರಾಗಿರುವ ನಮಗೆ ಹಲ್ವ ಮಾಡಿಟ್ಟುಕೊಳ್ಳಲೂ ಪುರುಸೊತ್ತಿಲ್ಲ ಅಂದರೂ ನಡೆದೀತು. ಸಂಜೆಯ ಲಘು ಉಪಹಾರಕ್ಕಾಗಿ ಬಾಳೆಹಣ್ಣುಗಳಿಂದಲೇ ಏನಾದರೂ ಸಿದ್ಧಪಡಿಸಬೇಕಾಗಿದೆ.

8-10 ಬಾಳೆಹಣ್ಣುಗಳು, ಸಿಪ್ಪೆ ಸುಲಿದು ಚೆನ್ನಾಗಿ ನುರಿದು ಬಾಣಲೆಗೆ ಹಾಕಿ ಕಾಯಿಸಿ, ತುಪ್ಪ ಸಕ್ಕರೆ ಹಾಕಬೇಕಾಗಿಲ್ಲ. ರುಚಿಗೆ ಉಪ್ಪು ಇರಲಿ. ಬಾಳೆಹಣ್ಣಿನ ದ್ರಾವಣ ಬಿಸಿಯೇರಿ ಕುದಿಯಲಾರಂಭಿಸಿತೇ, ಈಗ ಒಂದು ಲೋಟ ಅಕ್ಕಿಹುಡಿ ಯಾ ಚಿರೋಟಿ ರವೆ ಸುರಿಯಿರಿ. ಉರಿ ನಂದಿಸಿ. ಮರದ ಸಟ್ಟುಗದಲ್ಲಿ ಹಿಟ್ಟನ್ನು ಕೂಡಿಸಿ ಮುದ್ದೆಗಟ್ಟಿಸಿ ತುಸು ಆರಲು ಬಿಡಿ,

ಸರಸರನೆ ತೋಟದಿಂದ ಬಾಳೆಲೆಗಳನ್ನು ತಂದಿರಾ,
ಹಿಟ್ಟಿನ ಉಂಡೆ ಮಾಡಿಟ್ಕೊಂಡಿರಾ,
ಬಾಳೆಲೆಯನ್ನು ಚೆನ್ನಾಗಿ ಒರೆಸಿ ಒಂದು ಬದಿಗೆ ತುಪ್ಪ ಸವರಿ ಇಟ್ಕೊಂಡಿರಾ,ರೊಟ್ಟಿ ಮಣೆ ಇದೆಯಾ, ಇಲ್ವೇ, ಲಟ್ಟಣಿಗೆಯೂ ಆದೀತು.
ಉಂಡೆಯನ್ನು ಒತ್ತಿ ಇಟ್ಟಾಯಿತು.
ಕಾವಲಿಗೆ ಒಲೆಯ ಮೇಲೇರಿತು.
ಎರಡೂ ಬದಿ ತುಪ್ಪದ ಪಸೆಯಲ್ಲಿ ಬೆಂದಿತು.
ದಿನದ ಆಯಾಸವೆಲ್ಲ ಬಾಳೆಹಣ್ಣಿನ ರೊಟ್ಟಿಯ ಘಮಘಮಿಸುವ ಸ್ವಾದದ ಮುಂದೆ ತೊಲಗಿಯೇ ಹೋಯಿತು.

Saturday, 3 January 2015

ಬಾಳೆಕಾೖ ಕೊದ್ದೆಲ್ಮುಂಜಾನೆಯ ತಿಂಡಿತೀರ್ಥ ಮುಗಿಸಿ, ಹಾಗೇ ಸುಮ್ಮನೆ ಫೇಸ್ ಬುಕ್ ತೆರೆದು, " ಮುಂಜಾನೆಯ ಶುಭಾಶಯಗಳು " ಎಂದು ಸುಂದರ ಚಿತ್ರಗಳಿಗೆ ಕಮೆಂಟ್ ಹಾಕಿ ಎದ್ದೆ. ತೋಟಕ್ಕೆ ಹೋಗಬೇಕಾಗಿದೆ, ಮನೆಯೊಳಗಿನ ಕೆಲಸ ಯಾವಾಗಲೂ ಇದ್ದಿದ್ದೇ, ಚಪ್ಪಲಿ ಮೆಟ್ಟಿ, ಕೈಯಲ್ಲಿ ಕತ್ತಿ ಹಿಡಿದು, ಬಿದ್ದ ಹಣ್ಣಡಿಕೆಗಳನ್ನು ತುಂಬಿಸಿ ತರಲು ಬುಟ್ಟಿಧಾರಿಣಿಯಾಗಿ ತೋಟದ ಕಡೆ ಪ್ರಯಾಣ ಸಾಗಿತು. ಅಡಿಕೆ ಹೆಕ್ಕುತ್ತ, ಕಳೆಹುಲ್ಲುಗಳನ್ನು ಕತ್ತಿಯಿಂದ ಸವರುತ್ತ, ಬುಟ್ಟಿ ತುಂಬಿ ಬಂದಿತೇ, ಇನ್ನು ವಾಪಸ್ ಮನೆಗೆ ಅಂದ್ಕೊಂಡಿದ್ದ ಹಾಗೇ ಬೆಳೆದ ಬಾಳೆಗೊನೆ ಕಣ್ಣಿಗೆ ಬಿದ್ದಿತು. ಸಿಪ್ಪೆ ಬಿರಿದು ಹೊರಗಿಣುಕುತ್ತಿರುವ ಬಾಳೆಕಾಯಿಯ ಕಾರ್ಬೋಹೈಡ್ರೇಟ್, ಬಿ ಕಾಂಪ್ಲೆಕ್ಸ್ ಗಳು.... ಅಂತೂ ಇದನ್ನು ಹಣ್ಣಾಗಿಸಿ ತಿನ್ನುವಂತಿಲ್ಲ. ಅಡುಗೆಯ ಪದಾರ್ಥಕ್ಕೇ ಲಾಯಕ್ಕು. ಬಾಳೆಗೊನೆಯನ್ನೂ ಕಡಿದು ತಂದಾಯಿತು.
" ಏನು ಮಾಡಲೀ ...." ಎಂಬ ಚಿಂತೆ. ಕುಂಬಳೆಯಲ್ಲಿರುವ ತಂಗಿ ಗಾಯತ್ರಿಗೆ ಫೋನ್ ಕರೆ ಹೋಯಿತು. ಅದೂ ಇದೂ ಮಾತಾಡಿ, " ಬಾಳೆಗೊನೆ ಇದೇ, ಮುಳಿಗದ್ದೆಗೆ ಬರುವ ಅಂದಾಜು ಏನಾದ್ರೂ ಇದೆಯಾ " ಎಂದೂ ವಿಚಾರಿಸಲಾಗಿ ಅವಳೂ ಉಚಿತ ಸಲಹೆ ನೀಡಿದಳು. " ಇವತ್ತು ಕೊದಿಲು ಮಾಡಕ್ಕಾ ... ಬಿಸಿಲಿಗೆ ಒಣಗಿಸಿ ಶಾವಿಗೆ ಆಗುತ್ತಂತೆ, ಅದು ರಗಳೆಯ ಕೆಲಸ, ಚಿಪ್ಸ್ ಮಾಡಿಟ್ಕೋ ... ಎಣ್ಣೆಯಲ್ಲಿ ಹುರಿಯುವಾಗ ಉಪ್ಪು, ಮಸಾಲೆ ಹಾಕಿ ಹುರಿದಿಡು..."

 ತೋಟಕ್ಕೆ ಹೋಗಿದ್ರಲ್ಲಿ ಅಡುಗೆಗೆ ಯಥೇಚ್ಛ ತರಕಾರಿ ದೊರೆಯಿತು.   ಇಂದಿನ ದಿನದ ಮಟ್ಟಿಗೆ ಬಾಳೆಕಾಯಿ ಕೊದ್ದೆಲ್ ( ಕೊದಿಲು ) ಮಾಡಿಯೇ ಸಿದ್ಧ.

ಹೇಗೇ ಬಾಳೆಕಾಯಿ ಕೊದ್ದೆಲ್ ?
ಬಾಳೆಕಾಯಿಗಳು 4 ಸಾಕು. ಸಮಗಾತ್ರದ ಹೋಳು ಮಾಡಿ ಇಟ್ಕೊಳ್ಳಿ, ಸಿಪ್ಪೆ ತೆಗೆಯುವುದೇನೂ ಬೇಡ, ನಾರಿನಂಶ ಅಧಿಕವಾಗಿರುವ ಸಿಪ್ಪೆಯೂ ರುಚಿಕರ. ಉಪ್ಪು, ಹುಳಿಯೊಂದಿಗೆ ಬಾಳೆಕಾಯಿ ಹೋಳುಗಳನ್ನು ಬೇಯಿಸಿ. ಸಿಹಿ ಬೇಕಿದ್ದರೆ ಬೆಲ್ಲ ಹಾಕಿದರಾದೀತು.

ಮಸಾಲೆಗೆ ಏನೇನು ಬೇಕು ?
2-3 ಒಣಮೆಣಸು
2 ಚಮಚ ಕೊತ್ತಂಬರಿ
1 ಚಮಚ ಉದ್ದಿನಬೇಳೆ
ಜೀರಿಗೆ ಹಾಗೂ ಮೆಂತೆ ತಲಾ ಅರ್ಧ ಚಮಚ
ಸುವಾಸನೆಗೆ ಇಂಗು
ಅರ್ಧ ಕಡಿ ತೆಂಗಿನತುರಿ
ತುಸು ಎಣ್ಣೆಯಲ್ಲಿ ಹುರಿದು, ತೆಂಗಿನತುರಿಯೊಂದಿಗೆ ಅರೆಯಿರಿ.

ಅರೆದ ತೆಂಗಿನಕಾಯಿ ಅರಪ್ಪನ್ನು ಬೆಂದ ಹೋಳುಗಳಿಗೆ ಕೂಡಿಸಿ. ಸೌಟಿನಲ್ಲಿ ಕೆದಕಿ, ನೀರು ಬೇಕಿದ್ದರೆ ಎರೆದು ಕುದಿಸಿ. ಒಗ್ಗರಣೆ
ಕೊಡುವಲ್ಲಿಗೆ ಕೊದ್ದೆಲ್ ಸಿದ್ಧ. ಬೆಳ್ಳುಳ್ಳಿ ಪ್ರಿಯರು ಬೆಳ್ಳುಳ್ಳಿಯನ್ನೂ ಒಗ್ಗರಣೆಗೆ ಸೇರಿಸಿ.
ಬೇಳೆಕಾಳುಗಳನ್ನೂ ಇಂತಹ ಕೊದ್ದೆಲ್ ಗೆ ಹಾಕಬಹುದಾಗಿದೆ. ಧಾರಾಳವಾಗಿ ತೆಂಗಿನತುರಿ ಇದ್ದಲ್ಲಿ ಬೇಳೆಗಳನ್ನು ಹಾಕುವ ಅಗತ್ಯವಿಲ್ಲ.

ಬಾಳೆಕಾಯಿ ಗೊಜ್ಜು:

ಮಾರನೇ ದಿನದ ಬಾಳೆಕಾಯಿಯ ಸರದಿ ಏನಾದೀತು? ಹಸಿರು ಸಿಪ್ಪೆ ಬಣ್ಣ ಬದಲಾಗುತ್ತಲಿದೆ. ಇವತ್ತು ಗೊಜ್ಜು ಮಾಡಿತಿನ್ನೋಣ, 8 ಬಾಳೆಕಾಯಿಗಳು ಕುಕ್ಕರೊಳಗೆ ಎರಡು ಶೀಟಿ ಕೇಳುವ ತನಕ ಕೂತಿದ್ದು ಹೊರಬಂದುವು. ಆರಿದ ನಂತರ ಸಿಪ್ಪೆ ಸುಲಿದು ಬಟಾಟೆಯ ಥರ ಪುಡಿ ಪುಡಿ ಆಗ್ಹೋಯ್ತೇ, 2 ಹಸಿಮೆಣಸು, ರುಚಿಗೆ ತಕ್ಕಂತೆ ಉಪ್ಪು, 4 ಸೌಟು ಮೊಸರು ಬೆರೆತಂತೆ, ಬೇವಿನೆಸಳು, ಜೀರಿಗೆಯೂ ಸೇರಿದ ಒಗ್ಗರಣೆ ಬಿದ್ದಿತು. ಊಟದೊಂದಿಗೆ ಸಹವ್ಯಂಜನ ಆಗ್ಹೋಯ್ತು.
ಒಟ್ಟಾರೆಯಾಗಿ 8 ಬಾಳೆಕಾಯಿ ಬೇಯಿಸಿದ್ದರಲ್ಲಿ ಕೇವಲ ನಾಲ್ಕು ಕಾಯಿಗಳ ಗೊಜ್ಜು ಆಗಿತ್ತು. ಇನ್ನೂ ನಾಲ್ಕು ಇವೆ, ಸಂಜೆಯ ಸ್ಪೆಶಲ್ ಉಸುಳಿ ಮಾಡೋಣ, ನಾಲ್ಕು ಕಾಯಿಗಳು ಸಾಲದು, ಪುನಃ ಬೇಯಿಸುವ ಉಸಾಬರಿ ಬೇಡ, ಎರಡು ಹಿಡಿ ಅವಲಕ್ಕಿ ಸೇರಿಸೋಣ, ಅವಲಕ್ಕಿ ಆಪತ್ಬಾಂಧವನಲ್ಲವೇ...

ಬಾಳೆಕಾಯಿ ಉಸುಳಿ:

ಬೇಯಿಸಿಟ್ಟ ಬಾಳೆಕಾಯಿಗಳ ಸಿಪ್ಪೆ ತೆಗೆದು ಪುಡಿ ಮಾಡಿದ್ರಾ,
ಎರಡು ಹಿಡಿ ಅವಲಕ್ಕಿ ನೆನೆಸಿಟ್ಕೊಂಡಿರಾ,
ಆಯ್ತು.ಲಿಂಬೆರಸ, ಉಪ್ಪು, ಸಕ್ರೆ ಕೂಡಿಸಿ ಒಂದು ತಟ್ಟೆಯಲ್ಲಿಟ್ಕೊಳ್ಳಿ.
ಒಂದು ಹಿಡಿ ಕಾಯಿತುರಿ ಅವಶ್ಯವಿದೆ.

ಒಗ್ಗರಣೆ ಸಾಹಿತ್ಯ ಏನೇನು ?
3 ಚಮಚ ತೆಂಗಿನೆಣ್ಣೆ
1 ಚಮಚ ಸಾಸಿವೆ
1 ಚಮಚ ಉದ್ದಿನಬೇಳೆ
1 ಚಮಚ ಕಡ್ಲೇ ಬೇಳೆ
ಒಣಮೆಣಸು, ಹಸಿಮೆಣಸು, ಬೇವಿನೆಸಳು ಇತ್ಯಾದಿಗಳ ಸಿದ್ಧತೆ ಆಯ್ತೇ, ಬಾಣಲೆ ಒಲೆಗೇರಿಸಿ ಎಣ್ಣೆ ಎರೆದು ಒಗ್ಗರಣೆ ಸಿಡಿಯಲಿ. ಹಸಿಮೆಣಸು, ಬೇವಿನೆಸಳು ಬೀಳಲಿ, ಲಿಂಬೆರಸ, ಉಪ್ಪು, ಸಕ್ರೆ ಎರೆಯಿರಿ. ಪುಡಿ ಮಾಡಿದ ಬಾಳೆಕಾಯಿ, ನೆನೆಸಿದ ಅವಲಕ್ಕಿ, ಕಾಯಿತುರಿ ಹಾಕಿ ಸೌಟಿನಲ್ಲಿ ಬೆರೆಸಿ, ಕ್ಷಣಕಾಲ ಮುಚ್ಚಿಟ್ಟು ಉರಿ ಆರಿಸಿ. ಬಿಸಿ ಬಿಸಿಯಾಗಿ ಚಹಾ ಅಥವಾ ಕಾಫಿಯೊಂದಿಗೆ ತಿನ್ನಿ.ಸಂಜೆಯಾಗುತ್ತಲೇ ಗಾಯತ್ರಿಯ ಫೋನ್ ಕಾಲ್ ಬಂದಿತು. " ಚಿಪ್ಸೂ ಮಾಡಿಟ್ಟಾಯ್ತಕ್ಕಾ ...?"
" ಇನ್ನೂ ಇಲ್ಲ " ಅನ್ನುತ್ತ ಮಾಡಿದ ಅಡುಗೆಯ ವರದಿ ಒಪ್ಪಿಸಿದೆ.
" ಹಾಂ, ಇದೂ ಆಗುತ್ತೆ ನೋಡು, ಬಾಳೆಕ್ಕಾಯಿ ಸಿಪ್ಪೆದು ಪಚ್ಚಡಿ..." ಎಂದಳು.
" ನಾಳೆ ಮಾಡಿದ್ರಾಯ್ತು "
ಬಾಳೆಕಾಯಿ ಸಿಪ್ಪೆಯ ಪಚ್ಚಡಿ ಮಾಡದಿದ್ದರಾದೀತೇ, ಇವೆಯಲ್ಲ ಬಾಳೆಕಾಯಿಗಳು. ಆದರೆ ಇವತ್ತು ಬಾಳೆಯ ಹಸಿರು ಬಣ್ಣ ಹೋಗಿ ಬಂಗಾರವರ್ಣ ಬಂದಿತ್ತು, ತೊಂದರೆಯಿಲ್ಲ, ಹಣ್ಣು ಎಂದು ತಿನ್ನುವ ಹಂತ ಬಂದಿಲ್ಲ. ನಾಲ್ಕು ಬಾಳೆಕಾಯಿಗಳನ್ನು ಬೇಯಿಸಿದ್ದಾಯಿತು. ಬೇಕಿದ್ದ ಸಿಪ್ಪೆ ತೆಗೆದಿಟ್ಟು, ಕಾಯಿಗಳ ಪಲ್ಯ ಮಾಡಿಟ್ಟೂ ಆಯ್ತು.

ಪಚ್ಚಡಿ ಹೇಗೇಂತ ನೋಡೋಣ,
ಒಂದು ಹಿಡಿ ಕಾಯಿತುರಿ.
ಒಂದು ಹಸಿಮೆಣಸು.
ರುಚಿಗೆ ಉಪ್ಪು, ಹುಳಿ ( ಬೀಂಬುಳಿ ಇದ್ರೆ ಅದನ್ನೇ ಹಾಕಿ ).ಬೇಯಿಸಿಟ್ಟ ಸಿಪ್ಪೆಯನ್ನು ಕತ್ತರಿಸಿ, ಮಿಕ್ಕ ಸಾಮಗ್ರಿಗಳೊಂದಿಗೆ ಅರೆಯಿರಿ,ಅಗತ್ಯವಿದ್ದಷ್ಟೇ ನೀರೆರೆಯಿರಿ.
ಬೇವಿನೆಸಳು ಹಾಗೂ ಜೀರಿಗೆಯ ಒಗ್ಗರಣೆ ಕೊಡಿ.

ನಮ್ಮೆಜಮಾನ್ರೂ ಎರಡೆರಡು ಬಾರಿ ಹಾಕಿಸಿಕೊಂಡು ಈ ಹೊಸರುಚಿಯನ್ನು ಹೊಗಳಿದ್ದೇ ಹೊಗಳಿದ್ದು. ಸಂಜೆಯ ಹೊತ್ತು, ಗಾಯತ್ರಿಯೊಂದಿಗೆ ಮಾತುಕತೆ ಮುಂದುವರಿಯಿತು. ಪಚ್ಚಡಿ ಮಾಡಿದ ಕಥೆ ಹೇಳಿದ್ದೂ ಆಯ್ತು. ಅವಳಂದಳು, " ಅಕ್ಕ, ಒಗ್ಗರಣೆಗೆ ಬೆಳ್ಳುಳ್ಳಿ ಹಾಕ್ಬೇಕಾಗಿತ್ತು, ಜೀರಿಗೆಯಲ್ಲ..."
" ಹೌದಾ, ಇನ್ನೊಮ್ಮೆ ಮಾಡಿದ್ರಾಯ್ತು.."Posted via DraftCraft app