Pages

Ads 468x60px

Monday, 25 March 2013

ಮಾರ್ಜಾಲ ಪುರಾಣಂ


ನಮ್ಮ ಮನೆಯ ಮುದ್ದು ಪುಚ್ಚೆ
ಬಣ್ಣವೋ ಕಪ್ಪು ಸ್ಲೇಟು
ನಮಗೆಲ್ಲ ಅಚ್ಚುಮೆಚ್ಚು
ಮನೆಗೊಂದು ದೃಷ್ಟಿ ಬೊಟ್ಟು

ಊರೆಲ್ಲ ಸುತ್ತಾಡಿ
ಆಚೆಮನೆ ಈಚೆಮನೆ ಕೊಂಡಿ
- ಯಾಗಿ ಓಡಿ ಬರುವುದು
ಮಟಮಟ ಮದ್ಯಾಹ್ನವಾಗಿರುತ
" ಮ್ಯಾಂ...ಮ್ಯಾಂ..." ಅನುತ
ಕಾಲ ಬಳಿ ಸುಳಿವುದು

ಬಟ್ಟಲಲ್ಲಿ ತಂಗಳನ್ನ 
ಅದಕೆ ಆಗದು
ತೊಳೆದ ತಟ್ಟೆ ಚೆನ್ನ
ಮೇಲೆ ಶುದ್ಧ ಅನ್ನ
ಮೊಸರು ಎರೆದರೇನೇ
ಅದಕೆ ನೆಮ್ಮದಿ

ಇದು ನಮ್ಮ ಮುದ್ದು ಪುಚ್ಚೆ
ನಮಗೆಲ್ಲ ಅಚ್ಚುಮೆಚ್ಚುಬೆಕ್ಕಿನ ಆಯುಸ್ಸು ಎಷ್ಟೆಂದು ಅಂತರ್ಜಾಲ ಹುಡುಕಾಟದಲ್ಲಿ,  ಎಲ್ಲಿಯೋ ಒಂದು ಬೆಕ್ಕು 30 ವರ್ಷ ಬದುಕಿದ ದಾಖಲೆ ಸಿಕ್ಕಿತು.  ನಮ್ಮ ಬೆಕ್ಕು ಯಾವಾಗ ಹುಟ್ಟಿತೆಂಬ ಖಚಿತ ವಿವರ ನನ್ನ ಬಳಿ ಇಲ್ಲ.  ಇಲ್ಲಿಯೇ ಹುಟ್ಟಿದ ಬೆಕ್ಕಿನ ಮರಿ,  ನನ್ನ ಮಕ್ಕಳಿಗಿಂತಲೂ ಪ್ರಾಯದಲ್ಲಿ ದೊಡ್ಡದು.  ನನ್ನ ಮಗ ಕಾಲೇಜು ವ್ಯಾಸಂಗ ಮಾಡುವಾಗಲೂ ಇತ್ತು.   ಮುದಿಯಜ್ಜಿಯಾದ ಬೆಕ್ಕು ಬಚ್ಚಲೊಲೆಯ ಬಳಿ ಕೆಲವು ದಿನ ಸುಮ್ಮನೇ ನಿರಾಹಾರಿಯಾಗಿ ಮಲಗಿ ಜೀವ ಬಿಟ್ಟಿತು. ಮನೆಮಂದಿಯೆಲ್ಲ ಸೇರಿ ಗುದ್ಧಲಿಯಲ್ಲಿ ನೆಲ ಅಗೆದು,  ಹೊಂಡ ತೋಡಿ,  ಬೆಕ್ಕನ್ನು ಅಲ್ಲಿ ಮಲಗಿಸಿ ಮೇಲೆ ಮಣ್ಣು ಮುಚ್ಚಿ ಸಮಾಧಿ ಮಾಡಿದರು.   ನಮ್ಮ ಮುದ್ದು ಬೆಕ್ಕಿಗೊಂದು ಅಶ್ರುತರ್ಪಣ.....

ಪ್ರಾಣಿಶಾಸ್ತ್ರ ಪ್ರಕಾರ ಬೆಕ್ಕು ಹುಲಿಯ ಕುಟುಂಬದ್ದು,  ಹುಲಿಯ ತಮ್ಮನೆಂದೇ ಪರಿಗಣಿತವಾಗಿದೆ. ಆದರೂ ಬೆಕ್ಕು ಸಮಾಜಜೀವಿ,  ಮನುಷ್ಯನ ಒಡನಾಡಿ.  ಮಕ್ಕಳಿಗಂತೂ ಬಲು ಮುದ್ದು.  ಹಾಗಾಗಿಯೇ ಆಂಗ್ಲ ಸಾಹಿತ್ಯದ ಜನಪ್ರಿಯ ಶಿಶುಗೀತೆ  " pussy cat pussy cat where have you been " ಕನ್ನಡಕ್ಕೂ  " ಬೆಕ್ಕೇ ಬೆಕ್ಕೇ,  ಮುದ್ದಿನ ಸೊಕ್ಕೇ ..."  ಆಗಿ ರೂಪಾಂತರಗೊಂಡಿದೆ.   ಈಗಿನ ಮಕ್ಕಳಿಗೆ ಈ ಹಾಡು ಗೊತ್ತಿದೆಯೋ ಇಲ್ಲವೋ,  ನಾವಂತೂ ಕಲಿತಿದ್ದೆವು.ಬೆಕ್ಕಿನ ಚಿತ್ರದ ಮೇಲೆ ಈ ಕವನದ ಸಾಲುಗಳನ್ನು ಸಂಕಲಿಸುತ್ತಾ ಇರಬೇಕಾದರೆ ನನಗೊಂದು ಜಿಜ್ಞಾಸೆ ಹುಟ್ಟಿತು. ಹೌದೂ,  ಯಾರು ಈ ಕವನ ಹೊಸೆದವರು ?  ಯಥಾಪ್ರಕಾರ ಅಂರ್ಜಾಲದ ಪುಟ....  ಮೊದಲು ಇಂಗ್ಲೀಷ್ ಕವಿತೆ,   ಅದು ಹದಿನೆಂಟನೇ ಶತಮಾನದ ಶಿಶುಗೀತೆ,  ಎಲಿಝಬೆತ್ ರಾಣಿಯ ಹಿನ್ನಲೆಯೂ ಈ ಗೀತೆಗಿದೆ.   ಅದಿರಲಿ,  ಕನ್ನಡದ ಮಕ್ಕಳಿಗಾಗಿ ಬಂದ ಈ ಶಿಶುಗೀತೆಯ ಜನಕ ಯಾರೆಂದು ತಿಳಿಯದೇ ಹೋಯಿತು.

ಬೆಂಗಳೂರಿನಲ್ಲಿರುವ ತಂಗಿ ವರಲಕ್ಷ್ಮಿಗೆ ಫೋನ್ ಹೋಯಿತು.   ಅವಳೋ ಕಾಲೇಜು ಪ್ರಾಧ್ಯಾಪಕಿ,  ಪ್ರಾಣಿಶಾಸ್ತ್ರದ  ಯಾವುದೋ ಒಂದು ವಿಭಾಗದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದವಳು,   ನನ್ನ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿದಳು.  " ನಿನ್ನ ಫೇಸ್ ಬುಕ್ ಮಿತ್ರರನ್ನೂ ಕೇಳಿ ನೋಡು "  ಸಲಹೆಯನ್ನೂ ಕೊಟ್ಟಳು.   ವಾರಕ್ಕೊಮ್ಮೆ ತಂಗಿಗೆ ಫೋನಾಯಿಸುವುದೂ,  ಅವಳು ತಿಳಿದು ಹೇಳುತ್ತೇನೆ ಅನ್ನುವುದೂ ನಡೆದೇ ಇತ್ತು.

ಫೇಸ್ ಬುಕ್ ನೊಳಗೆ ಇಣುಕಿದಾಗ ಜಯದೇವ ಪ್ರಸಾದ್ ಮೊಳೆಯಾರರು ಆನ್ ಲೈನಲ್ಲಿ ಇರೂದು ಕಾಣಿಸ್ತು.   ಪ್ರಶ್ನೆ ಹೋಯಿತು.  
 "ನಾನಲ್ಲ ಮಾರಾಯ್ತೀ "

  " ಹತ್ತು ನಿಮಿಷದಲ್ಲಿ ಹೇಳ್ತೇನೆ "  

 " ಯಾವ್ದೋ ಸೈಟು ದಿನಕರ ದೇಸಾಯಿ ಅನ್ನುತ್ತಾ ಇದೆ "

  ಅದರ ಜೊತೆಜೊತಗೇ ಇನ್ನಷ್ಟು ಶಿಶುಗೀತೆಗಳನ್ನು ಬರೆದಂತಹ ಕವಿಶ್ರೇಷ್ಠರ ನಾಮಧೇಯಗಳೆಲ್ಲವೂ ತೇಲಿ ಬಂದವು.   ಪಂಜೆ,  ರಾಜರತ್ನಂ.....

ಮಾತಿಗಿಳಿದ ಪತ್ರಕರ್ತ ಸ್ನೇಹಿತ ಕುಮಾರರೈತರೂ  " ರಾಜರತ್ನಂ ಅನ್ಸುತ್ತೆ " ಅಂದರು.

ನಾ. ಕಸ್ತೂರಿ ಬರೆದಿರೂದು ಅಂತ ತಂಗಿಯ ಫೋನ್ ಒಂದು ದಿನ ಬಂದಿತು.   ಸಾಹಿತ್ಯ ಸಂಪರ್ಕ ಉಳ್ಳವರೊಡನೆ ಕೇಳಿ ತಿಳಿದದ್ದು ಅಂತಾನೂ ಅಂದಳು.

ಕನ್ನಡದ ಘಟಾನುಘಟಿ ಕವಿಗಳೆಲ್ಲರೂ ಸೇರಿ  " ಬೆಕ್ಕಿನ ಕೊರಳಿಗೆ ಗಂಟೆಯ ಕಟ್ಟಿದವರ್ಯಾರೇ ಹೇಳೇ ಅಕ್ಕಾ ..." ಎಂದು ಅಣಕಿಸಿದ ಹಾಗೇ ಆಯ್ತು ಈವಾಗ.

ಇದನ್ನೇ ಚಿಂತಿಸುತ್ತಾ ಇರಬೇಕಾದರೆ ಪಕ್ಕದ ಮನೆಯ ಪ್ರೇಮಕ್ಕ,  ತಮ್ಮ ರಬ್ಬರು ತೋಟದ ಉಸ್ತುವಾರಿ ಮಾಡಿ ವಾಪಸ್ಸಾಗುತ್ತಿದ್ದಂತೆ ನಮ್ಮಿಬ್ಬರ ಭೇಟಿ ನಮ್ಮ ಮನೆಯಂಗಳದಲ್ಲೇ ಆಯಿತು.  ಆಕೆ ಪ್ರೈಮರಿ ಶಾಲಾ ಮುಖ್ಯೋಪ್ಯಾಧ್ಯಾಯಿನಿ,  ಗೊತ್ತಿಲ್ಲದಿದ್ದೀತೇ ?  ಕೇಳಿಯೇ ಬಿಟ್ಟೆ.

  " ನನ್ಗೇನು ಗೊತ್ತಿಲ್ಲಪ್ಪ " ಅಂದರು. 

 " ಶಾಲೆಯ ಬೇರೆ ಟೀಚರ್ಸ್ ಗೆ  ಗೊತ್ತಿರಬೌದಾ "

" ಗೊತ್ತಿರುತ್ತೆ  ಅವರಪ್ಪನ ತಲೆ,  ಈಗಿನ ಕಾಲದ ಹುಡುಗ್ರು "

ಅಂತೂ ಪ್ರಶ್ನೆ ಹಾಗೇ ಉಳಿಯಿತು.

ಅಂತರ್ಜಾಲದ ಅಪೂರ್ಣ ಮಾಹಿತಿಗಳು ಏನೇನೂ ತೃಪ್ತಿದಾಯಕವಲ್ಲ ಎಂದು ಹೊಳೆದಂತೆ ನೆಟ್ಟಗೆ ಲೈಬ್ರರಿಗೇ ಹೋಗಿ ತಪಾಸಣೆ ಮಾಡುವ ನಿರ್ಧಾರಕ್ಕೆ ಬರಬೇಕಾಯಿತು.   ಹೇಗೂ ಲೈಬ್ರರಿಗೆ ಹೋಗದೇ ತುಂಬಾ ದಿನಗಳಾಗಿತ್ತು.   ಹಳೆಯ ಪುಸ್ತಕಗಳ ದೊಡ್ಡ ಸರಕೇ  ' ಹೆದ್ದಾರಿ ಶಾಲಾ ಮಿತ್ರಮಂಡಳಿ ' ಲೈಬ್ರರಿಯಲ್ಲಿದೆ.   ಒಂದು ಸಂಜೆ ಹೊರಟೆ.   ಲೈಬ್ರರಿಯಲ್ಲಿದ್ದ ಯುವತಿ  " ನೀವು ಬಾರದೇ ಒಂದ್ವರ್ಷ ಆಯ್ತು,  ಫೈನ್ ಕಟ್ಬೇಕಾಗ್ತದೆ " ಅಂದಳು.  

" ಹೌದೇ,   ಫೈನ್ ಕಟ್ಟುವಾ,  ಈಗ ಒಂದು ಪದ್ಯ ಹುಡುಕುವುದಿದೆ....    ಮಕ್ಕಳ ಪದ್ಯ ಪುಸ್ತಕ ಯಾವ ಕಪಾಟಿನಲ್ಲಿದೆ ? ಹೇಳಿ ಬಿಡು "

ಅವಳೂ  " ಇಲ್ಲಿ ನೋಡಿ.." ಅನ್ನುತ್ತಾ ನೆರವಾದಳು.   

ಹೆಚ್ಚು ಶ್ರಮವಿಲ್ಲದೆ ದಿನಕರ ದೇಸಾಯಿ ಸಿಕ್ಕಿಯೇ ಬಿಟ್ಟರು. ನೋಡಿದ್ರೆ ಅವರು  "ಬೆಕ್ಕೇ ಬೆಕ್ಕೇ...." ಸಾಲಿನಿಂದ ಪ್ರಾರಂಭವಾಗುವ ಹಲವು ಶಿಶುಗೀತೆಗಳನ್ನು ಬರೆದಿದ್ದಾರೆ.   ನಾನು ಹುಡುಕಾಡಿದ ಅತಿ ಪ್ರಸಿದ್ಧ ಶಿಶುಗೀತೆ ಅವರದೇ.  ದಿನಕರ ದೇಸಾಯಿ ಪುಸ್ತಕದೆಡೆಯಿಂದ  ಗೊಳ್ ಎಂದು ನಕ್ಕು ನಕ್ಕು ಸುಸ್ತಾದರು.....    ಹೊಚ್ಚಹೊಸತಾದ ಈ ಪುಸ್ತಕ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆ.    ' ದಿನಕರ ದೇಸಾಯಿ ಆಯ್ದ ಕವಿತೆಗಳು '  ಹೆಸರಿನ ಈ ಕೃತಿ 2010ರಲ್ಲಿ ಪ್ರಕಟವಾಗಿದೆ.     ಆ ಕವನದ ಸಾಲುಗಳು ಹೀಗಿವೆ,

ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ,
ಎಲ್ಲಿಗೆ ಹೋಗಿದ್ದೆ ?
ಕರೆದರು ಇಲ್ಲಾ ಹಾಲೂ ಬೆಲ್ಲಾ,
ಕಾಯಿಸಿ ಇಟ್ಟಿದ್ದೆ.

ಕೇಳೋ ಕಳ್ಳಾ,  ಮುದ್ದಿನ ಮಳ್ಳಾ,
ಮೈಸೂರರಮನೆಗೆ;
ರಾಜನ ಸಂಗಡ ರಾಣಿಯು ಇದ್ದಳು
ಅಂತಃಪುರದೊಳಗೆ.

ಬೆಕ್ಕೇ ಬೆಕ್ಕೇ,  ಬೇಗನೆ ಹೇಳೇ,
ನೋಡಿದ ಆನಂದ
ರಾಣಿಯ ಮಂಚದ ಕೆಳಗಡೆ ಕಂಡೆನು
ಚಿಲಿಪಿಲಿ ಇಲಿಯೊಂದ.


Posted via DraftCraft app

Wednesday, 13 March 2013

ಕಾಫೀ ಡೇಮುಂಜಾನೆಯ ಚುಮು ಚುಮು ಚಳಿಗು 
ಅಡಿಕೆ ತೋಟದಲ್ಲಿ ಬರಿಗಾಲ ವಾಕಿಂಗು 
ತೋಟ ತುಂಬಿದ ಹೊಸ ಬೆಳಗು |

ಬಿರಿದಿಹ ಕಾಫೀ ಹೂಗಳ ತೋರಣ
ಮದುವಣಗಿತ್ತಿಯ ಅಲಂಕರಣ
ದುಂಬಿಗಳ ಕಲರವದ ನರ್ತನ |

ಕಾಫೀ ಹೂಗಳ ಮಾದಕ ಸುಗಂಧ
ತೇಲಿ ತೇಲಿ  ಬರುತಿದೇ
ಭ್ರಮರಗಳ ಝೇಂಕಾರದೆ
 ಜೇನ್ನೊಣಗಳ ಸಂಗೀತ ಸುಧೆ|

 ಅಂತಿಂಥ ಹೂವು ನೀನಲ್ಲ
ನಿನ್ನಂಥ ಹೂವು ಬೇರಿಲ್ಲ 
ಅರಳಿರುವ ಹೂವು
ನಾಳೆ ಕಾಯಾಗಿ
ಮಾಗಿ ಕೆಂಪು ಹಣ್ಣಾಗಿ
ಹಕ್ಕಿಪಕ್ಕಿಗಳ ಮುದ್ದು ತಿನಿಸಾಗಿ |

ಅಂತಿಂಥ ಹೂವು ನೀನಲ್ಲ
ನಿನ್ನಂಥ ಹೂವು ಬೇರಿಲ್ಲ  |

ಕಾಫೀ ಉಷ್ಣವಲಯದ ಬೆಳೆ.  ಕರ್ನಾಟಕದ ಕೊಡಗು ಜಿಲ್ಲೆ ಕಾಫೀ ಬೆಳೆಗೆ ಪ್ರಸಿದ್ಧವಾಗಿದೆ.   ಜಾಗತಿಕ ಮಟ್ಟದ ಪೇಯವಾಗಿರುವ ಇದರ ಬೆಳೆಯಿಂದ ಉತ್ತಮ ಆದಾಯವೂ ಇದೆ.   ರಪ್ತು ವಿಭಾಗದಿಂದ ಸರ್ಕಾರದ ಬೊಕ್ಕಸವನ್ನೂ ತುಂಬಿಸುವ ಈ ಕಾಫಿ,  ಕೇವಲ ಮಲೆನಾಡು ಮಾತ್ರವಲ್ಲದೆ ನಮ್ಮ ಕರಾವಳಿಯ ಅಡಿಕೆ ತೋಟದಲ್ಲೂ ಬೆಳೆಯುವಂತಹುದು.   ಇಲ್ಲಿನ ಚಿತ್ರದಲ್ಲಿ ಇರುವುದು ರೋಬಸ್ಟಾ ತಳಿ.   ಇದು Rubiaceae ಕುಟುಂಬಕ್ಕೆ ಸೇರಿದೆ.  ಒಂದು ಗಿಡ ನೆಟ್ಟ 3 -4  ವರ್ಷಗಳಲ್ಲಿ ಫಲ ಕೊಡಲು ಪ್ರಾರಂಭ.   ಅಂತಹ ರೋಗಬಾಧೆಯೇನೂ ಈ ಸಸ್ಯಕ್ಕಿಲ್ಲ.   ಬಲು ಗಟ್ಟಿಯಾದ ರೆಂಬೆಗಳು,  ಸದಾ ಹಸಿರಾದ ಎಲೆಗಳು.   ವರ್ಷವಿಡೀ ಫಲ ಕೊಡುತ್ತಿರುತ್ತದೆ. 

 ಆದರೆ ನಮ್ಮ ಕಾಸರಗೋಡಿನ ಪರಿಸರದಲ್ಲಿ ಅದಕ್ಕೆಂದೇ ಮಾರುಕಟ್ಟೆಯಿಲ್ಲದಿರುವುದರಿಂದ ತೋಟದೊಳಗೆ ಅಲಂಕಾರಿಕ ಸಸ್ಯವಾಗಿ ಮೆರೆಯುತ್ತಿದೆ.

Posted via DraftCraft app

Tuesday, 5 March 2013

ಬಿಸಿಲಿನ ಝಳ, ತಂಪಿನ ಗುಳ.....
    ಬಿಸಿಲಿನ ಝಳ,  ತಂಪಿನ ಗುಳ             
  ಅತಿಯಾದ ಸೆಕೆ,  ಪಾನಕದ ಸುಖ
   ಬೇಸಿಗೆಯ ಬಿಸಿ,   ಪಾನೀಯ ತಯಾರಿಸಿ

ಇದೇನು ಕವನವೇ  ಅಂತೀರಾ.   ತರಹೇವಾರಿ ತಂಪು ಪಾನೀಯಗಳನ್ನು ಮನೆಯಲ್ಲಿಯೇ ತಯಾರಿಸೋಣ,  ಬನ್ನಿ.

ದೊಡ್ಡಗಾತ್ರದ ಗಜಲಿಂಬೆಯ ರಸ ಹಿಂಡಿ ತಗೆದಿಡಿ.  1 ಕಪ್ ರಸಕ್ಕೆ 3 ಕಪ್ ಸಕ್ಕರೆ.
ಸಕ್ಕರೆ ಮುಳುಗುವಷ್ಟು ನೀರೆರೆದು ಕುದಿಸಿ.
ಸಕ್ಕರೆ ಕರಗಿತೇ,  ಕುದಿದ ಸಕ್ಕರೆ ದಪ್ಪಗಾಗಿ ಜೇನಿನಂತಾಯಿತೇ,  ಈಗ ಕೆಳಗಿಳಿಸಿ,
ಲಿಂಬೇ ರಸ ಎರೆದು ತಣಿಯಲು ಬಿಡಿ.
ಚೆನ್ನಾಗಿ ಆರಿದ ನಂತರ ಶುದ್ಧವಾದ  ಬಾಟಲಿಯಲ್ಲಿ ಹಾಕಿಡಿ.
ದಿನವೂ ಸಂಜೆ ಬೇಕಾದ ಪ್ರಮಾಣದಲ್ಲಿ ತಂಪು ನೀರು ಸೇರಿಸಿ ಕುಡಿಯಿರಿ.  ಬಿಸಿಲಿನ ಝಳ ನಿವಾರಿಸಿ.
ಗಜಲಿಂಬೇರಸ ಕಫ ನಿವಾರಕ.   ಕೆಮ್ಮು, ದಮ್ಮು ಇದ್ದರೂ ನಿರಾತಂಕದಿಂದ ಕುಡಿಯಬಹುದಾಗಿದೆ.

ಕಿತ್ತಳೆ ಹಣ್ಣಿನಿಂದಲೂ ಹೀಗೆ ಮಾಡಬಹುದು.  ಒಟ್ಟಿನಲ್ಲಿ ಹಣ್ಣು ರಸಭರಿತವೂ ಹುಳಿಯಾಗಿಯೂ ಇದ್ದರಾಯಿತು.
ಬೀಂಬುಳೀ ಹಣ್ಣು ಮನೆಯಂಗಳದಲ್ಲೇ ಇದೆ.   ಅದನ್ನೂ ಮೇಲಿನ ಮಾದರಿಯಲ್ಲೇ ಪಾನೀಯ ತಯಾರಿಸಿದರಾಯಿತು.   ಈ ಹಣ್ಣಿಗೆ ಪ್ರತ್ಯೇಕ ಸುವಾಸನೆಯಿಲ್ಲ,  ಒಂದು ಲಿಂಬೇರಸ ಹಾಗೂ ಯಾಲಕ್ಕಿ ಪುಡಿ ಸೇರಿಸಿ.

 ಬೀಂಬುಳೀ ಕೊಲೆಸ್ಟರಾಲ್ ನಿಯಂತ್ರಕ ಗುಣವುಳ್ಳದ್ದು,  ನಿಯಮಿತ ಉಪಯೋಗದಿಂದ ಆರೋಗ್ಯ ಭಾಗ್ಯ ಉಳಿಸಿಕೊಳ್ಳಿ.

ಇದೇ ಜಾತಿಗೆ ಸೇರಿದ ದಾರೆಹುಳಿ ಹಣ್ಣನ್ನೂ ಉಪಯೋಗಿಸಬಹುದು.  ಇದು ಆಯುರ್ವೇದ ಶಾಸ್ತ್ರ ರೀತ್ಯಾ ಔಷಧೀಯ ಗುಣಗಳುಳ್ಳದ್ದು.

ಅಡುಗೆಮನೆಯ ಡಬ್ಬಾದಲ್ಲಿ  ಹುಣಸೇಹುಳಿ ಇದ್ದೇ ಇದೆ.  ಈಗ ಹೊಸ ಹುಣಸೇಹುಳಿ ತೆಗೆದಿರಿಸುವ ಸಮಯ.  ಹಳೆಯದು ಕಪ್ಪಗಾಗಿರುತ್ತದೆ.  ಅದನ್ನು ಮೂಲೆಗೆಸೆಯಬೇಕಾಗಿಲ್ಲ.

ಲಿಂಬೇ ಗಾತ್ರದ ಹುಣಸೇಹುಳಿ,  ನೀರೆರೆದು ಗಿವುಚಿ ರಸ ತಗೆದಿಡಿ.
3 ಅಚ್ಚು ಬೆಲ್ಲ,  ಪುಡಿ ಮಾಡಿ.
ಹುಣಸೇ ರಸ ಹಾಗೂ ಬೆಲ್ಲ ಸೇರಿಸಿ ಒಲೆಯ ಮೇಲಿಡಿ.
ಒಂದು ತುಂಡು ಶುಂಠಿ ಜಜ್ಜಿ ಹಾಕಿ.
ಚಿಕ್ಕ ಚಮಚ ಕಾಳು ಮೆಣಸಿನ ಹುಡಿಯನ್ನೂ ಹಾಕಿ.
ದಪ್ಪ ಜೇನುಪಾಕ ಬಂದ ಮೇಲೆ ಕೆಳಗಿಳಿಸಿ.
ಈ ದ್ರವವನ್ನು ಪಾನಕ ಮಾತ್ರವಲ್ಲದೆ ಇನ್ನಿತರ ನಳಪಾಕಗಳಿಗೂ ಉಪಯೋಗಿಸಬಹುದು.
ಅಡುಗೆಮನೆಯಲ್ಲಿ ಇರುವ ಇನ್ನೊಂದು ಖಾದ್ಯ ವಸ್ತು ಪುನರ್ಪುಳಿ ಹಣ್ಣು.  ಒಣಗಿಸಿಟ್ಟ ಸಿಪ್ಪೆ ಇದೆಯಲ್ಲ,  ಒಂದು ಕಪ್ ತುಂಬಾ ತೆಗೆದು  3 ಕಪ್ ನೀರು ಹಾಕಿ ನೆನೆಯಲು ಬಿಡಿ.   ಸಿಪ್ಪೆ ಮೆತ್ತಗಾಗಲು ಕುದಿಸಿ, ಏಲಕ್ಕಿ ಬೇಕಿದ್ದರೆ ಸೇರಿಸಬಹುದು. ಆರಲು ಬಿಡಿ.  ಚೆನ್ನಾಗಿ ಆರಿದ ನಂತರ ಬೇಯಿಸಲು ಉಪಯೋಗಿಸಿದ ನೀರಿನೊಂದಿಗೆ ನುಣ್ಣಗೆ ಕಡೆಯಿರಿ.   ಜಾಲರಿಯಲ್ಲಿ ಶೋಧಿಸಿ ರಸವನ್ನು ತಗೆದಿಡಿ.

3 ಕಪ್ ಸಕ್ಕರೆಗೆ  ಈ ರಸವನ್ನು ಸೇರಿಸಿ ಕುದಿಸಿ.
ಆರಿದ ಮೇಲೆ ಬಾಟಲಿಗೆ ತುಂಬಿಸಿ.
ಬೇಕಾದಾಗ 3 : 1 ರಂತೆ ನೀರಿನೊಂದಿಗೆ ಬೆರಸಿ,  ಪುನಃ ಜಾಲರಿಯಲ್ಲಿ ಶೋಧಿಸಿ,  ಐಸ್ ತುಂಡು ಹಾಕಿಟ್ಟು ಕುಡಿದರಾಯಿತು.

ನೆನಪಿಡಿ,  ಈ ಮೇಲಿನ ಯಾವ ಪಾನೀಯಗಳಿಗೂ ನಾವು ಕೃತಕ ರಸದ್ರವ್ಯಗಳನ್ನು ಸೇರಿಸಿಲ್ಲ.   ಬಣ್ಣಗಳನ್ನೂ ಕೊಟ್ಟಿಲ್ಲ.  ಕೃತಕ ಸುವಾಸನೆಯನ್ನೂ ನೀಡಿಲ್ಲ.   ನಿಸರ್ಗದತ್ತ ಈ ಪಾನೀಯಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳುಂಟಾಗುವಂತಿಲ್ಲ.
ಇನ್ನು ನಿಮ್ಮ ಮನೆ ಹಿತ್ತಿಲಿನ ಇನ್ನಾವುದೇ ಹಣ್ಣುಗಳ ಮೇಲೆ ಪ್ರಯೋಗ ನಡೆಸಿಯೇ ಬಿಡಿ. 

Posted via DraftCraft app