Pages

Ads 468x60px

Saturday 12 June 2021

ಅಂಬಟೆಯ ಸೂಪ್


 


ಮಧೂ ಈಗ ಅಂಬಟೆ ಕೊಯ್ದು ಉಪ್ಪಿನಕಾಯಿ ಹಾಕಬಹುದಿತ್ತು...  ಕೆಲಸದವರು ಅಂತ ಹೇಳಿಕೊಳ್ಳಲಿಕ್ಕೆ ಯಾರೂ ಇಲ್ಲ ಹೇಗೆ ಕೊಯ್ಯುವುದು? "  ನನ್ನ ಪೇಚಾಟ.


ನಾನೇ ಇದೀನಲ್ಲ ಕೊಯ್ಯಲಿಕ್ಕೆ  ಅಂದವನೇ ಪಕ್ಕದ ದೊಡ್ಡಮ್ಮನ ಮನೆಯಿಂದ ಉದ್ದ ದೋಟಿ ಇಸ್ಕೊಂಡು ಬಂದ ಕೊಯ್ಯಲಿಕ್ಕೆ ಗೈಡ್ ಆಗಿ ಅವನಪ್ಪನೇ ನಿಂತರು.   ಅಂಬಟೆಯ ಮರ ಎಷ್ಟೇ ದೊಡ್ಡದಾಗಿದ್ದರೂಯಾರೂ ಮರ ಹತ್ತುವಂತಿಲ್ಲ ಮರ ತುಂಬ ಮೆದು ಈಗ ಮಳೆಯೂ ಬೇರೆ.   ಅಪ್ಪ ಹೇಳಿದಂತೆ ಮಧು ದೋಟಿಯಿಂದ ಪುಟ್ಟ ಪುಟ್ಟ ಗೆಲ್ಲುಗಳನ್ನು ಮುರಿದು ಬೀಳಿಸುವಲ್ಲಿಗೆ ಸಾಕಷ್ಟು ಅಂಬಟೆಗಳು ಲಭ್ಯವಾದುವು.


ಅಮ್ಮ ಆಯ್ತಲ್ಲ ಅಂಬಟೆಉಪ್ಪಿನಕಾಯಿ ಹಾಕು ನಾನು ಲಾಕ್ ಡೌನ್ ಅಂತ ಮನೆಗೆ ಬಂದಿದ್ದಕ್ಕಾಯ್ತು ಪಪ್ಪಾಯಿಯೂ, ಮಾವಿನಕಾಯಿಯೂ ಅಂಬಟೆಯೂ ಹಲಸಿನಕಾಯಿಯೂ...  ಹ್ಹಹ್ಹ..."


ಉಪ್ಪಿನಕಾಯಿ ಹಾಕೋಣ ಈಗ ಮೊದಲು ಎರಡು ಅಂಬಟೆ ತಿನ್ನು ಮೈತ್ರಿಯೂ ಶ್ರೀದೇವಿಯೂ ಇರಬೇಕಾಗಿತ್ತು ತಿನ್ನಲಿಕ್ಕೆ ಕಟ್ಕಟ್ ಮಾಡಿ ಉಪ್ಪು ಮೆಣಸು ಹಾಕಿ ತಿಂತಿದ್ರು. "


ಮೈತ್ರಿ ನಾಳೆ ಮಂಜೇಶ್ವರದಿಂದ ಬರ್ತಾಳೆ..  ತಿಂತಾಳೆ ಬಿಡು. "


ಉಪ್ಪಿನಕಾಯಿ ಹಾಕುವ ಮೊದಲು ಏನೋ ಒಂದು ಅಡುಗೆಯೂ ಮಾಡೋಣ.  ಚಟ್ಣಿ ಮುಂಜಾನೆಯ ತಿಂಡಿಗೂ ಊಟಕ್ಕೂ ಆಗುತ್ತೆ ಮಾಡುವ ಕ್ರಮ ಹಿಂದೆ ಬರೆದಿದ್ದೇನೆ.   ಹುಡುಕಿ ಓದಿರಿ.


 ಮಾವಿನಕಾಯಿಯಂತೇ ಹುಳಿ ಇರುವುದರಿಂದ ಸಾರು 

ಯಾ ಅಪ್ಪೆ ಸಾರು ಮಾಡಿದ್ರಾದೀತು ಮೊದಲಾಗಿ ಅಂಬಟೆ ಹಾಗೂ ನಮ್ಮ ಆಯ್ಕೆಯ ಮಸಾಲೆಗಳನ್ನು ಬೇಯಿಸಬೇಕಾಗಿದೆನಂತರ ರುಚಿಗೆ ಉಪ್ಪು ಹಾಗೂ ಬೆಲ್ಲ ಹಾಕಿ ನೀರನ್ನೂ ಎರೆದು ಕುದಿಸಿ ಒಗ್ಗರಣೆ ಕೊಟ್ಟರಾಯಿತು.


ಮೂರು ಯಾ ನಾಲ್ಕು ಅಂಬಟೆ ಮಿಡಿ ಹೋಳುಗಳು

ನಾಲ್ಕಾರು ಕಾಳುಮೆಣಸು ಸೂಪ್ ಅಂದ್ರೆ ಕಾಳುಮೆಣಸು ಇರಲೇಬೇಕು.

ಶುಂಠಿ ಹಾಗೂ ಬೆಳ್ಳುಳ್ಳಿ,

ಹಸಿಮೆಣಸು,

ಎಲ್ಲವನ್ನೂ ನೀರೆರೆದು ಬೇಯಿಸಿ.

ಆರಿದ ನಂತರ ನೀರು ಬಸಿದು ಅರೆಯಿರಿ.

ನಂತರ ಬೇಯಿಸಿದ ನೀರನ್ನು ಕೂಡಿಸಿ ಉಪ್ಪು ಹಾಗೂ ಅವಶ್ಯಕತೆಗನುಸಾರ ನೀರೆರೆದು ಕುದಿಸಿ ಕುದಿದಾಗ ನೆಲ್ಲಿಕಾಯಿ ಗಾತ್ರದ ಬೆಣ್ಣೆ ಹಾಕಿ ತುಪ್ಪವೂ ಆದೀತು.

ಬಿಸಿ ಬಿಸಿ ಸೂಪ್ ಸವಿಯುತ್ತ ಅನ್ನ ಉಣ್ಣಿರಿ.



Thursday 3 June 2021

ಬಸ್ಸಾರು

 


ಮಧೂ ಹಾಲು ತರುವಾಗ ಹಾಗೇ ತರಕಾರೀನೂ ತಾ.. "

ಅಮ್ಮ ಇವತ್ತು ಸಂಡೇನಾಳೆ ಬಳಿಗ್ಗೇನೇ ತರಕಾರಿ ತಂದು ಕೊಟ್ಟರಾಯಿತಲ್ಲ. "


ನಾಳೆ ಎಂಬ ಮಂಡೇ ಬಂದಿತು ಮನೆಯೇ ಕಾರ್ಯಾಲಯ ಆಗಿರುವಾಗ ಬಿಡುವಿಲ್ಲದ ಸೂಚನೆಯೂ ದೊರೆಯಿತು.

ಮನೆ ಹಿತ್ತಲ ಸೊಪ್ಪೇ ಗತಿ.  


ತಪಾಸಣೆಗೆ ಹೊರಟೆ ತಪಾಸಿಸುವುದೇನು ಎಲ್ಲೆಲ್ಲೂ ಹಸಿರು.    ನೆಲಬಸಳೆ ಕುಡಿ ಪಕ್ಕದಲ್ಲೇ ಕುಡಿಯೊಡೆದ ಅಂಬಟೆಯ ಚಿಗರುಗಳು ಎಳೆಯ ಕರಿಬೇವಿನೆಸಳುಗಳು ನೆಲದಿಂದ ತಲೆಯೆತ್ತುತ್ತಿರುವ ಕಾಡು ಕೆಸುವಿನೆಲೆ ಚಕ್ರಮುನಿಯ ಚಿಗುರು ನುಗ್ಗೇಸೊಪ್ಪು ಸುವಾಸನೆಯ ನೆರುಗಳ ಸೊಪ್ಪು ಎಲ್ಲವೂ ಕೂಡಿದಾಗ ಬಟ್ಟಲು ತುಂಬಿತು.


ಮಾಡೂದೇನು?


ಬೆಂಗಳೂರು ಸೇರಿರುವ ಮಗಳು ರಾಗಿ ಮುದ್ದೆಯೂ ಬಸ್ಸಾರೂ ಚೆನ್ನಾಗಿರುತ್ತೆ "  ಅಂದಿದ್ದು ನೆನಪಾಗಿ ಇಷ್ಟು ಸೊಪ್ಪುಸದೆ ಕೊಯ್ಯುವಂತಾಯಿತು.   "ಎಲ್ಲವನ್ನೂ ಬೇಯಿಸಿ ಅರೆಯಬೇಕು. "  ಎಂದು ಮಾಡುವ ವಿಧಾನವನ್ನೂ ತಿಳಿಸಿಕೊಟ್ಟಿದ್ದಳು.  


ಈಗ ಸೊಸೆಯೂ ಮನೆಯಲ್ಲಿದ್ದಾಳೆ,   ಬೆಂಗಳೂರೇ ಅವಳ ತವರು ಮನೆ ಹೇಗೂ ಬಸ್ಸಾರು ತಿಳಿದಿದ್ದೀತು.


ಮೈತ್ರೀ ತರಕಾರಿ ಏನೂ ಇಲ್ಲ  ಸೊಪ್ಪಿನ ಬಸ್ಸಾರು ಮಾಡುವ ಕ್ರಮ... "

ಅಯ್ಯೋಅದಕ್ಕೇನಂತೆ..  ಯೂಟ್ಯೂಬು ನೋಡಿದ್ರಾಯ್ತು.. "


ಸೊಪ್ಪುಗಳನ್ನು ಹೆಚ್ಚಿಟ್ಟು ಅವಶ್ಯವಿದ್ದಷ್ಟು ತೊಗರಿಬೇಳೆ ಬೇಯಿಸುವುದು ಅತಿಯಾಗಿ ಬೇಯಿಸಬೇಕಿಲ್ಲ ಅರೆಯುವುದಿದೆ ಬೇಯಿಸಿದ ನೀರು ಬಸಿದು ಇಡುವುದು ಬೇಳೆ ಆರಲಿ.


ಬೇಳೆ ಬೇಯಿಸಿದ ನೀರಿನಲ್ಲಿ ಸೊಪ್ಪು ಬೇಯಿಸಿ ಬೇಳೆ ಸೊಪ್ಪು ಒಟ್ಟಿಗೆ ಬೇಯಿಸುವಂತಿಲ್ಲ ಸೊಪ್ಪು ತುಂಬ ಇದ್ದರೆ ಜೊತೆಗೊಂದು ಪಲ್ಯವನ್ನೂ ಮಾಡಬಹುದು.


ಸೊಪ್ಪು ಬೇಗನೆ ಬೆಂದಿತು ಬೇಯುವಾಗ ಉಪ್ಪು ಹುಣಸೆಯ ಹುಳಿ ಹಾಕತಕ್ಕದ್ದು.   ಇದ್ದವರು ಒಂದು ಟೊಮ್ಯಾಟೋಹಸಿಮೆಣಸು ಕೂಡಾ ಹಾಕುವುದುನನ್ನದು ಒಂದೇ ಮೆಣಸು.


ಒಂದು ಹಿಡಿ ತೆಂಗಿನ ತುರಿ ಇರಲೇಬೇಕು.

ನೀರುಳ್ಳಿ ಕತ್ತರಿಸಿ,

ಬೆಳ್ಳುಳ್ಳಿ ಗೆಡ್ಡೆ ಬಿಡಿಸಿ,

ಅರ್ಧ ಇಂಚು ಶುಂಠಿ ಸಿಪ್ಪೆ ಹೆರೆಯಿರಿ.

ಇಷ್ಟೇನಾ ಅಂದ್ಬಿಟ್ಟು ಶಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕದಿರಿ.

ಏಳೆಂಟು ಕಾಳುಮೆಣಸು ಗುಂಡುಕಲ್ಲಿನಲ್ಲಿ ಜಜ್ಜಿ,

ಬೆಂದ ಸೊಪ್ಪಿನ ನೀರು ಪ್ರತ್ಯೇಕಿಸಿ,

ತೆಂಗಿನ ತುರಿನೀರುಳ್ಳಿ ಬೆಳ್ಳುಳ್ಳಿ ಶುಂಠಿ ಕಾಳುಮೆಣಸು ಕೂಡಿ ಸೊಪ್ಪು ಹಾಗೂ ಬೇಳೆ ನುಣ್ಣಗೆ ಅರೆಯಿರಿ.


ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಸಾಸಿವೆ ಸಿಡಿಸಿ ಕರಿಬೇವು ಹಾಕಿರಿ.

ಅರೆದಂತಹ ಸೊಪ್ಪಿನ ಮಸಾಲೆ ಸುರಿಯಿರಿ.

ಬೇಳೆ ಬೇಯಿಸಿದ ನೀರು ಸೊಪ್ಪಿನ ನೀರು ಎರೆಯಿರಿ.

ಈಗ ನನಗೆ ಮೈತ್ರಿಯ ನೆರವು ಬೇಕಾಯಿತು.

ಮೈತ್ರೀ ಇದಕ್ಕೆ ನೀರು ಸಾಕೋ ಬೇಕೋ? "

ಇದು ಸಾಂಬಾರ್ ತರಹ ಇರಬೇಕುಚಟ್ನಿಯ ಹಾಗೆ ಗಟ್ಟ ಮುದ್ದೆ ಆಗಬಾರದು. "


ಸ್ವಲ್ಪ ರಸಂಪುಡಿ ಅರಸಿನ ಹುಡಿ ಬೀಳ್ಬೇಕು..  ಎಂದು ಅವಳೇ ವಿವಿಧ ಹುಡಿಗಳನ್ನು ಹಾಕಿನೀರನ್ನೂ ಎರೆದು ತುಸು ಉಪ್ಪು ಬೀಳಿಸಿ ಕುದಿಯಲಿಟ್ಟಳು.

ಬೆಲ್ಲ ಬೇಡ. "

ಸರಿ ಉಪ್ಪು ಹುಳಿ ಮೆಣಸು ಇದ್ದರಾಯಿತು. "


ನನಗಂತೂ  ಹೊಸ ವ್ಯಂಜನ ಇಷ್ಟವಾಯಿತು.   ರಾತ್ರಿಯ ಚಪಾತಿಗೂ ಹಿತ ಬೇಳೆಕಾಳುಗಳ ಪ್ರೊಟೀನ್ ಸೊಪ್ಪುಗಳ ಖನಿಜಾಂಶಗಳೂ ಕೂಡಿ ಸಂಯುಕ್ತ ಆಹಾರ ಪದಾರ್ಥ  ಬಸ್ಸಾರು.   ತಂಬುಳಿಗಿಂತ ಒಂದು ಕೈ ಮೇಲೆ ಅನ್ನಿ ಬಸ್ಸಾರು


ಯಾವುದೇ ಬೇಳೆಕಾಳುಗಳೂ ಆದೀತು ಸೊಪ್ಪುಗಳೂ ಅಷ್ಟೇ,   ಹಿತ್ತಲ ಕಾಡುಬೆಳೆಗಳನ್ನೇ ಆಯ್ದು ಕೊಳ್ಳುವ ಜಾಣತನ ನಮ್ಮಲ್ಲಿದ್ದರಾಯಿತು.   ಇನ್ನೊಮ್ಮೆ ಹಲಸಿನ ಬೇಳೆಯ ಬಸ್ಸಾರು ಮಾಡಬೇಕೆಂದಿದೆ ಈಗ ದಿನವೂ ಹಲಸು ತಿನ್ನುವ ಯೋಗ ಬೇಳೆಗಳನ್ನು ಸಂಗ್ರಹಿಸಿ ಇಡುವ ಕಾಲ.