Pages

Ads 468x60px

Saturday, 26 July 2014

ಹಲಸಿನ ಹಣ್ಣಿನ ಪೋಡಿ - Pazham Poriಇಬ್ಬರು ಕಟ್ಟಾಳುಗಳೊಂದಿಗೆ ನಮ್ಮೆಜಮಾನ್ರು ತೋಟಕ್ಕೆ ಹೋಗಿದ್ದರು.   ಹಳೆಯದಾದ ಒಂದು ಮಾವಿನ ಮರ ಸತ್ತಿದೆ,   ಅದರ ವಿಲೇವಾರಿ ವಹಿವಾಟು ಆಗ್ಬೇಕಾಗಿತ್ತು ಅಷ್ಟೇ.   ಆ ಹೊತ್ತಿಗೇ ಮಗನ ಫೋನ್ ಕಾಲ್,    " ಅಪ್ಪ ಎಲ್ಲೀ ?"
" ತೋಟದಲ್ಲಿ...  ಅದೇನೂಂದ್ರೆ ಉದ್ದ ಮಾವಿನಮರ ಹೋಗಿಬಿಟ್ಟಿತು..  ಕಡಿದು ಕೊಡುವುದಂತೆ ಇನ್ನು "
" ಹ್ಞ..  ಉದ್ದ ಮಾವಿನಹಣ್ಣು ಇನ್ನು ಇಲ್ವಾ ...  ಎಂಥ ಪರಿಮಳದ ಹಣ್ಣೂ "

ಅಡ್ಡಬೊಡ್ಡನಂತಿದ್ದ ಮಾವಿನಮರದ ಹಣ್ಣು ತೋತಾಪುರಿ ಮಾವಿನಂತೆ ಉದ್ದವಾಗಿದ್ದಿತು ಹೊರತು ಮರವೇನೂ ತಾಳೆಮರದಂತಿದ್ದಿರಲಿಲ್ಲ,   ಹಣ್ಣು ಕೂಡಾ ಸಿಹಿಯಾಗಿ ಜೀರಿಗೆ ಪರಿಮಳ ಇದ್ದಿತು.   ಇನ್ನಿತರ ಕಾಟ್ಟು ಮಾವಿನ ಹಣ್ಣುಗಳ ಮುಂದೆ ಈ ಹಣ್ಣು ರಾಜನಂತಿತ್ತು.

" ಏನು ಮಾಡೂದು,   ಅದರ ಅಕ್ಕಪಕ್ಕ ಅಂಥದ್ದೇ ಮಾವಿನ ಸಸಿ ಉಂಟಲ್ಲ,  ಅದರ ಗೊರಟು ಬಿದ್ದು ಹುಟ್ಟಿದ್ದು.. ಯಾವಾಗ್ಲಾದ್ರೂ ಫಲ ಕೊಟ್ಟೀತು,  ನೀ ಚಿಂತೆ ಮಾಡ್ಬೇಡ "

ಮಾತು ಮುಗಿಸಿ ಇನ್ನಿತರ ಕೆಲಸಕಾರ್ಯಗಳಲ್ಲಿ ತೊಡಗಿದ್ದಂತೆ ಮದ್ಯಾಹ್ನವೂ ಆಯಿತು.   ನಮ್ಮವರೂ ತೋಟದಿಂದ ಬಂದರು.   ಕೆಲಸದಾಳುಗಳೂ ಬಂದರು.   ತಲೆಯಲ್ಲಿ ಹಲಸಿನಹಣ್ಣುಗಳ ಹೊರೆ.   ನಮ್ಮ ಖರ್ಚಿಗೆಂದು ಅರ್ಧ ಹಣ್ಣು ಇರಿಸಿಕೊಂಡು ಉಳಿದ ಹಲಸುಗಳನ್ನು ತೋಟದಿಂದ ಹೊತ್ತು ತಂದ ಮಲ್ಲರಿಗೇ ಕೊಡೋಣವಾಯ್ತು.

" ಹಲಸಿನ ಹಣ್ಣು ಬಂದಿದೆ,  ಏನಾದ್ರೂ ಮಾಡು "
" ಇದು ನಾಳೆ ಚೆನ್ನಾಗಿ ಹಣ್ಣಾದೀತು,  ನಾಳೆ ನೋಡುವಾ.."
" ಇದೇ ಕೊನೆಯದು,   ಇನ್ನು ಮುಂದಿನ ವರ್ಷಕ್ಕೆ ಆಯ್ತಷ್ಟೆ,  ತಿಳೀತಾ..."
" ಹ್ಞೂಂ... ತಿಳೀತು "  ಅಂತೂ ಕೊನೆಯ ಹಣ್ಣನ್ನು ತಿನ್ನದೇ ಬಿಸಾಡುವಂತಿಲ್ಲ.

ಸಂಜೆ ಹೊತ್ತಿಗೆ ನಾಡಿದ್ದು ಮಗಳು ಬರಲಿದ್ದಾಳೆಂದು ತಿಳಿಯಿತು.   ಅವಳಿಗೂ ಹಲಸಿನ ಹಣ್ಣು ಈ ವರ್ಷ ಇನ್ನೂ ತಿನ್ನಲು ಸಿಕ್ಕಿಲ್ಲ.   ಆದರೆ ಇದು ಮಳೆಗಾಲದ ಹಣ್ಣು,  ಎಷ್ಟು ಚೆನ್ನಾಗಿದ್ದೀತು ?  ಹಣ್ಣಿನ ಕೊಟ್ಟಿಗೆ ಮಾಡಿದ್ರೆ ಮುಂಜಾನೆಗೊಂದು ತಿಂಡಿಯೂ ಆಯಿತು.  ಹೀಗೆಲ್ಲ ಲೆಕ್ಕಾಚಾರದಲ್ಲಿ ದಿನ ಹೋಯಿತು,  ಅವಳೂ ಬಂದಳು.  ಮದ್ಯಾಹ್ನದೂಟವೂ ಆಯ್ತು.

ವಿರಾಮವಾಗಿ ಕುಳಿತು ಹಣ್ಣು ಬಿಡಿಸಲ್ಪಟ್ಟು ತಟ್ಟೆಯಲ್ಲಿ ತುಂಬಿ ಒಳಗೆ ಬಂದಿತು.   ಹೊರಗೆ ಜಡಿಮಳೆ ಬರುತ್ತಿದೆ,   ಚಳಿಯೆನ್ನಿಸುವ ಗಾಳಿ ಬೇರೆ.  ಆ ಕ್ಷಣದಲ್ಲಿ ನೆನಪಾಯಿತು ಹಲಸಿನ ಹಣ್ಣಿನ ಪೋಡಿ ,  ಹಿಂದೆ ನನ್ನ ತಂಗಿ ಗಾಯತ್ರಿ ಹೇಳ್ಕೊಟ್ಟಿದ್ದು.    ಸಿವಿಲ್ ಇಂಜಿನಿಯರ್ ಆಗಿದ್ದುಕೊಂಡು ದಿನವಿಡೀ ಸುತ್ತಾಟ.   ಕಣ್ಣಾನ್ನೂರಿಗೆ ಹೋಗಿದ್ದಾಗ ಅಲ್ಲೊಂದು ಮನೆಯಲ್ಲಿ ಗಾಯತ್ರಿಗೆ ಇಂತಹುದೊಂದು ಖಾದ್ಯ ಸಿಕ್ಕಿದೆ.   " ತುಂಬಾ ಚೆನ್ನಾಗಿತ್ತಕ್ಕ,  ನೀನೂ ಮಾಡಿ ನೋಡು " ಅಂದಿದ್ದಳು.

ಮಳೆಬರುತ್ತಿರುವಾಗ,  ಚಳಿಚಳಿ ಎನ್ನಿಸುವಾಗ ಬಿಸಿಬಿಸಿಯಾಗಿ ಎಣ್ಣೆಯಲ್ಲಿ ಕರಿದ ಹಣ್ಣಿನ ತಿಂಡಿ ಮಾಡೋಣ.
ಗಾಯತ್ರಿ ಹೇಳಿದ್ದು ಹೀಗೆ,   " ನಾವು ಕಡ್ಲೇಹಿಟ್ಟಿನಲ್ಲಿ ಕರಿದು ಮಾಡ್ತೀವಲ್ಲ, ಪೋಡಿ ಅದೇ ಥರ,  ಮೈದಾ ಹಿಟ್ಟಿನಲ್ಲಿ ಕರಿದ ಹಾಗಿತ್ತು..."   ಮೈದಾ ಇರಲಿಲ್ಲ,  ಮಗಳಿಗೂ ಮೈದಾ ಹಾಕಿದ ತಿಂಡಿ ಆಗದು.  

ಕಡ್ಲೇಹಿಟ್ಟು,  ಅಕ್ಕಿಹಿಟ್ಟು ಸಮ ಪ್ರಮಾಣದಲ್ಲಿ ಅಳೆದು,  ರುಚಿಗೆ ಉಪ್ಪು,  ನೀರು ಕೂಡಿಸಿ ಇಡ್ಲಿ ಹಿಟ್ಟಿನ ಹದ ಬರಲಿ.
ಗ್ಯಾಸ್ ಉರಿಯ ಮೇಲೆ ಎಣ್ಣೆ ಬಿಸಿಯೇರಲಿ.
ಹಲಸಿನ ಹಣ್ಣಿನ ಸೊಳೆಗಳನ್ನು ಹಿಟ್ಟಿಗಿಳಿಸಿ,  ಎಣ್ಣೆಗಿಳಿಯಲಿ.
ಎರಡು ಬದಿಯೂ ಕಾಯಲಿ.
ಹೊಂಬಣ್ಣ ಬಂದಾಗ ಸಟ್ಟುಗದಲ್ಲಿ ಮೇಲೆ ಬರಲಿ.

" ಚಹಾ ಮಾಡಿಯಾಗಲಿ,
ತಿನ್ನೋಣ ಜೊತೆಯಲಿ "
ಅನ್ನುವ ಮೊದಲೇ ತಟ್ಟೆ ಖಾಲಿ ಖಾಲಿ...

ಹಣ್ಣುಗಳನ್ನು ಕರಿದ ತಿಂಡಿಗಳು ಕೇರಳದ ವಿಶೇಷ,   ನೇಂದ್ರ ಬಾಳೆಹಣ್ಣನ್ನು ಈ ಥರ ಕರಿಯುವ ವಾಡಿಕೆ.   ಮಲಯಾಳಂ ಉಚ್ಛಾರಣೆಯಲ್ಲಿ Pazham Pori ಎಂದು ಓದಿಕೊಳ್ಳಬೇಕಾಗುತ್ತದೆ.   ಪೊರಿ = ಎಣ್ಣೆಯಲ್ಲಿ ಕರಿದದ್ದು ಎಂದರ್ಥವಾಗಿದೆ.   ಇನ್ನು Pazham =  ಫಲ,  ಹಣ್ಣು ಹೀಗೆ ಅರ್ಥೈಸಬಹುದು.

ಮಾರನೇ ದಿನವೂ ನನ್ಮಗಳು  " ಇವತ್ತೂ ಪೋಡಿ ಮಾಡಮ್ಮ " ಅನ್ನೋದೇ.
" ಹಲಸಿನಹಣ್ಣು ಎಲ್ಲಿದೇ... ತಾ,  ಮಾಡೋಣ "
" ಬಾಳೆಹಣ್ಣು ಉಂಟಲ್ಲ,  ಅದೇ ಆದೀತು..." ಎಂದಳು ಜಾಣೆ.
ಚೆನ್ನಾಗಿ ಬೆಳೆದ ಕದಳಿ ಬಾಳೆಹಣ್ಣು ಇದ್ದಿತು.  ಬೂದಿ ಬಾಳೆಹಣ್ಣು ಕೂಡಾ ಆದೀತು.
ಅಂತೂ ಪೋಡಿ ಮಾಡಿ ತಿಂದಾಯ್ತು.Posted via DraftCraft app

Thursday, 17 July 2014

ಹಲಸಿನ ಹಣ್ಣಿನ ಜಾಮ್

ಹಲಸಿನ ಹಣ್ಣಿನ ಬೆರಟಿ ವಿಷಯ ತಿಳಿದಾಯ್ತು.   ಈಗ ಸರಳವಾದ ಒಂದು ಜಾಮ್ ಹಲಸಿನ ಹಣ್ಣಿನಿಂದ ತಯಾರಿಸೋಣ.   ಇದಕ್ಕೆ ಬೇಕಾಗಿರುವುದೇನೇನು ?

ಸಿಹಿಯಾದ ಹಲಸಿನ ಹಣ್ಣಿನ ಸೊಳೆಗಳು 15ರಿಂದ 20 ಇದ್ದರೆ ಸಾಕು.   ಬೇಳೆ ಬಿಡಿಸಿ ಸೊಳೆಗಳನ್ನು ಮಿಕ್ಸಿಯಲ್ಲಿ ತಿರುಗಿಸಿ ತೆಗೆಯಿರಿ.
2 ಅಚ್ಚು ಬೆಲ್ಲ
3 -4 ಚಮಚ ತುಪ್ಪ
ಬಾಣಲೆ ಒಲೆಗೇರಿಸಿ ಹಣ್ಣುಗಳು ಬೇಯಲಿ.
ಆಗಾಗ ಸೌಟಾಡಿಸಿ.
ಬೆಂದ ಪರಿಮಳ ಬಂತೇ,  ಬೆಲ್ಲ ಹಾಕಿ ಬಿಡಿ.
ಬೆಲ್ಲ ಕರಗಿತೇ,  ತಳ ಹತ್ತದಂತೆ ಕೆದಕುತ್ತಿರಿ.
ಜಾಮ್ ಪಾಕ ಬಂತೇ,  ತುಪ್ಪ ಇಟ್ಕೊಂಡಿದ್ದೀರಲ್ಲ,  ಎರೆಯಿರಿ.
ತುಪ್ಪ ಹಣ್ಣಿನ ಪಾಕದೊಂದಿಗೆ ಸೇರಿತೇ,  ಕೆಳಗಿಳಿಸಿ.
ಚೆನ್ನಾಗಿ ತಣಿಯಿತೇ,   ಸ್ಟೀಲ್ ಡಬ್ಬದಲ್ಲಿ ತುಂಬಿಸಿ.
ದೋಸೆ,  ಚಪಾತಿಗಳೊಂದಿಗೆ ಸವಿಯಿರಿ.
ಬೆರಟಿಯಂತೆ ದೀರ್ಘಕಾಲ ಉಳಿಯುವಂತದ್ದಲ್ಲ,  ನಾಲ್ಕು ದಿನದೊಳಗೆ ತಿಂದು ಡಬ್ಬ ಖಾಲಿಯಾಗಿಸಿ.
ಇದನ್ನು ಪಾಯಸ ಬೇಕಿದ್ದರೆ ಮಾಡಿಕೊಳ್ಳಲಡ್ಡಿಯಿಲ್ಲ.   ಪಾಯಸ ಮಾತ್ರ ಸಾಕು,  ಜಾಮ್ ಬೇಡ ಅಂತಿದ್ರೆ ತುಪ್ಪ ಸೇರಿಸಬೇಕಾಗಿಲ್ಲ.  ವಿಧಾನ ಹೇಗೆ?
ಇನ್ನಿತರ ಪಾಯಸಗಳಂತೆ ಮಾಡಿದರಾಯಿತು.    

ಅರ್ಧ ಕಪ್ ಅಕ್ಕಿ ಹಿಟ್ಟು 
ತೆಂಗಿನಕಾಯಿ ಹಾಲು
ಬೆಲ್ಲ ಅಥವಾ ಸಕ್ಕರೆ
ಏಲಕ್ಕಿ ಹುಡಿ
ಅಕ್ಕಿ ಹಿಟ್ಟನ್ನು ನೀರು ಕಾಯಿಹಾಲು ಎರೆದು ಕುದಿಸಿ,  ಸೌಟಾಡಿಸುತ್ತ ಇದ್ದರೆ ಗಂಟು ಕಟ್ಟುವುದಿಲ್ಲ.
ಕುದಿಯಿತೇ,  ಅಕ್ಕಿ ಹಿಟ್ಟು ಬೆಂದಿದೆ.
ಬೆಲ್ಲ ಹಾಕಿ,  ಕರಗಿತೇ,  ಕಾಯಿಹಾಲು ಇನ್ನೊಮ್ಮೆ ಎರೆಯಿರಿ.
ಹಲಸಿನ ಜಾಮ್ ಪಾಕದ ಮುದ್ದೆಯನ್ನು ಹಾಕಿ ಸೌಟಾಡಿಸಿ.
ದಪ್ಪ ಕಾಯಿಹಾಲು ಎರೆಯಿರಿ, ಇದು ಕೊನೆಯ ಹಂತ.
ಕುದಿ ಬಂದಾಗ ಏಲಕ್ಕಿ ಹುಡಿ ಹಾಕಿ ಕೆಳಗಿಳಿಸಿ.
ಬಿಸಿ ಬಿಸಿಯಾಗಿರುವಾಗಲೇ ಕುಡಿಯಿರಿ,   ಊಟದೊಂದಿಗೂ ಸವಿಯಿರಿ.

Posted via DraftCraft app

Saturday, 12 July 2014

ಹಲಸಿನ ಬೆರಟಿ, ಚಕ್ಕ ವರಟ್ಟಿ


ಗೌರತ್ತೆ ಊರಿಗೆ ಹೋದವರು ವಾಪಸ್ಸಾದರು.   ಬಂದವರೇ ಮೊದಲು ಕೇಳಿದ್ದು  " ಹಲಸಿನ ಹಣ್ಣು ಉಂಟಲ್ವ ..."
" ಎಲ್ಲಿಂದ ಇರ್ತದೆ... ಅದೂ ಮುಗೀತು,   ಹದಿನೈದು ದಿನ ಮೊದಲೇ ಬಂದಿದ್ದಿದ್ರೆ ತಿನ್ಬಹುದಾಗಿತ್ತು "
" ಬರ್ಬೇಕೂಂತ ಇದ್ದೆ,  ಆಗ್ಲಿಲ್ಲ,  ಬೆರಟಿ ಏನಾದ್ರೂ ಮಾಡಿ ಇಟ್ಟಿದ್ದಿಯಾ ?"
" ಹ್ಞಾ,   ಹೌದಲ್ಲ,  ಮಾಡದೇ ಇರ್ತೀನಾ,  ಆದ್ರೆ ಅದನ್ನು ಕಾಸೀ ಕಾಸೀ ಕೈಬೇನೆ ಬಂತು.  ಮೈಕ್ರೋವೇವ್ ಒಳಗಿಟ್ಟೆ,  ಅದೇನಾಯ್ತೂಂದ್ರೆ ಬೆರಟಿ ಹೋಗಿ ಹಲ್ವ ಆಯ್ತು.   ತುಂಡು ಮಾಡಿ ಡಬ್ಬಿಯಲ್ಲಿ ...." ಅನ್ನುತ್ತಿದ್ದಂತೆ ಹಲಸಿನ ಹಣ್ಣಿನ ಹಲ್ವ ಡಬ್ಬದಿಂದ ಎದ್ದು ಬಂದು ಗೌರತ್ತೆ ಮುಂದೆ ಕುಳಿತಿತು.
" ಈಗ ಹೊಟ್ಟೆ ತಂಪಾಯಿತು... ಹಲಸಿನಹಣ್ಣು ತಿನ್ನದೆ ಹೇಗ್ಹೇಗೋ ಆಗ್ತಾ ಇತ್ತು "
" ಮಾವಿನಹಣ್ಣು ಇತ್ತಾ ಪುತ್ತೂರಿನಲ್ಲಿ ?"
" ಇತ್ತೂ,  ಹೊಳೆಮಾವಿನಹಣ್ಣು,   ಮಾಂಬಳ ಮಾಡಿದ್ದೂ ಮಾಡಿದ್ದೇ.   ನಿಂಗೂ ತಂದಿದೇನೆ "
" ಬೆರಟಿ ಕಾಯಿಸುವಾಗ ನೀವೂ ಬೇಕಾಗಿತ್ತು,  ಬೆರಟಿ ಪಾಯಸ ಮಾಡಲಿಕ್ಕೆ ಈ ಹಲ್ವ ಆಗ್ಲಿಕ್ಕಿಲ್ಲ,   ಸುಮ್ಮನೆ ತಿನ್ನಲಿಕ್ಕಾದೀತಷ್ಟೆ "
" ಹಲ್ವ ಮಾಡ್ತಾರೇಂತ ನಂಗೆ ಗೊತ್ತೇ ಇಲ್ಲ "
" ಕಾಸರಗೋಡಿನಲ್ಲಿದ್ದಾಗ ನೆರೆಕರೆ ಕೊಂಕಣಿಗರ ಮನೆ ಇತ್ತು.  ಅವ್ರು ನಮ್ಮ ಬೆರಟಿ ಮಾಡ್ಲಿಕ್ಕಿಲ್ಲ,  ಹಲ್ವ ಮಾಡಿ ಇಡ್ತಿದ್ರು,  ಆಗ ನಾವೂ ಮಕ್ಕಳಲ್ವ,  ಹಲಸಿನ ಹಲ್ವ ತಿನ್ನಲಿಕ್ಕೆ ಸಿಕ್ತಾ ಇತ್ತು...  ಅಮ್ಮ ಮಾಡಿ ಇಡ್ತಿದ್ಳು ಬೆರಟಿ... "
" ಬೆರಟಿ ಅಂದ್ರೇನು ?"  ಕೇಳಿಯೇ ಕೇಳ್ತೀರಾ.. 
ಹಲಸಿನ ಸೀಸನ್ ಮುಗಿದ ನಂತರವೂ ಹಲಸು ಪ್ರಿಯರಿಗಾಗಿ ಕೆಡದಂತೆ ಹಣ್ಣಿನ ಪಾಕ ಮಾಡಿ ಇಟ್ಟುಕೊಳ್ಳುವ ವಿಧಾನ ಒಂದಿದೆ.  ಇದನ್ನೇ ಬೆರಟಿ ಅಂತೀವಿ.   ಮಾಡುವ ವಿಧಾನ ಈಗ ತಿಳಿಯೋಣ.
ಚೆನ್ನಾಗಿ ಪಕ್ವವಾಗಿ ಹಣ್ಣಾದ ಸಿಹಿಯಾದ ಬಕ್ಕೆ ಹಲಸಿನ ಹಣ್ಣು.   ಬಿಡಿ ಸೊಳೆಗಳನ್ನು ಬೇಳೆ ಬಿಡಿಸಿ ಆಯ್ದು ಇಟ್ಟುಕೊಳ್ಳತಕ್ಕದ್ದು.
ಹಣ್ಣಿನ ಸೊಳೆಗಳನ್ನು ಚಿಕ್ಕದಾಗಿ ಕತ್ತರಿಸಿ,  ಮಿಕ್ಸೀ ಇದೆಯಲ್ಲ.
ಮಿಕ್ಸಿಯಲ್ಲಿ ಪುಡಿಯಾದ,  ಮುದ್ದೆಯಾದ ಹಣ್ಣನ್ನು ದಪ್ಪ ತಳದ ಬಾಣಲೆಗೆ ಸುರುವಿ ಒಲೆಗೇರಿಸಿ.  
ಮಂದಾಗ್ನಿಯಲ್ಲಿ ಬೇಯಲಿ,   ನೀರು ಹಾಕುವಂತಿಲ್ಲ.
ತಳ ಹತ್ತದಂತೆ ಮರದ ಸೌಟಿನಲ್ಲಿ ಕೈಯಾಡಿಸುತ್ತಿರಿ.
ಬೆಂದಿತೇ,   ಬೆಲ್ಲ ಹಾಕಲಡ್ಡಿಯಿಲ್ಲ.   ಬೆಲ್ಲದ ಪ್ರಮಾಣ ಇಷ್ಟೇ ಎಂಬ ಲೆಕ್ಕಾಚಾರ ಇದಕ್ಕಿಲ್ಲ.  ಸಿಹಿಯಾದಷ್ಟೂ ಚೆನ್ನ.
ಬೆಲ್ಲ ಕರಗಿ ಹಣ್ಣಿನೊಂದಿಗೆ ಬೆರೆತು,  ಒಂದು ಮುದ್ದೆಯಂತಹ ಘನ ಆಗುವಲ್ಲಿಗೆ ಬೆರಟಿ ಕಾಯಿಸುವ ಕೆಲಸ ಮುಗಿಯಿತು.
ಚೆನ್ನಾಗಿ ಆರಿದ ನಂತರ ಬೆರಟಿಯನ್ನು ನೀರಪಸೆ ಇಲ್ಲದ ಸ್ಟೀಲ್ ಡಬ್ಬದಲ್ಲಿ ತುಂಬಿಸಿಟ್ಟು ಬೇಕಾದಾಗ ತಟ್ಟೆಗೆ ಹಾಕಿಕೊಂಡು ತಿನ್ನಿ.   ನೆಂಟರಿಷ್ಟರು ಬಂದ್ರಾ,  ದಢೀರೆಂದು ಪಾಯಸ ಮಾಡಿ ಅತಿಥಿಗಳ ಆನಂದದಲ್ಲಿ ಭಾಗಿಯಾಗಿ.

" ಪಾಯಸ ಹೇಗೆ ಮಾಡ್ತೀರಾ ?"
 ಬೆರಟಿ ಪಾಯಸ ಹೀಗೆ ಮಾಡೋಣ.
ತೆಂಗಿನಕಾಯಿ ಹಾಲು,   ಇದರ ದಪ್ಪಹಾಲನ್ನು ಪಾಯಸದ ಕೊನೆಯ ಹಂತದಲ್ಲಿ ಎರೆಯಬೇಕು.
ಕಿತ್ತಳೆ ಗಾತ್ರದ ಬೆರಟಿಯನ್ನು ನೀರು ಕಾಯಿಹಾಲಿನಲ್ಲಿ ನೆನೆಸಿ ಹಿಟ್ಟು ಮಾಡಿಕೊಳ್ಳಿ.
ಬೆರಟಿ, ಕಾಯಿಹಾಲು ಬೆರೆತ ದ್ರವವನ್ನು ಒಲೆಯ ಮೇಲೆ ದಪ್ಪ ತಳದ ಪಾತ್ರೆಯಲ್ಲಿ ಬಿಸಿಯಾಗಲು ಇಡಿ.
ಸಿಹಿಗೆ ಬೇಕಾದ ಸಕ್ಕರೆ ಅಥವಾ ಬೆಲ್ಲ ಬೀಳಲಿ,  ಈಗಾಗಲೇ ಬೆಲ್ಲದ ಸಿಹಿ ಬೆರಟಿಯಲ್ಲಿರುವುದರಿಂದ ಜಾಸ್ತಿ ಹಾಕಬೇಕಾಗಿಲ್ಲ.
ಬೆಲ್ಲ ಕರಗಿ ಕುದಿಯಿತೇ,  ದಪ್ಪ ಕಾಯಿಹಾಲು ಎರೆಯಿರಿ.  ಒಂದು ಕುದಿ ಬಂದಾಗ ಕೆಳಗಿಳಿಸಿ. 
ಹುರಿದ ಎಳ್ಳು ಈ ಪಾಯಸಕ್ಕೆ ಅಲಂಕರಣವಾಗಲಿ.  
ಒಣ ಕೊಬ್ಬರಿಯನ್ನು ತೆಳ್ಳಗೆ ತುರಿದು,  ಘಂ ಎಂದು ಹುರಿದು ಹಾಕುವುದೂ ಇದೆ.   
ಬಾಳ್ವಿಕೆ ಬರುವಂತಹ ಹಲಸಿನ ಬೆರಟಿಯನ್ನು ಮಾಡುವಾಗ ಅಲ್ಪಸ್ವಲ್ಪ ಮಾಡಿಟ್ಟರೆ ವ್ಯರ್ಥ ಶ್ರಮವೆನಿಸೀತು.  ಮನೆಯ ಸದಸ್ಯರ ಸಹಕಾರವೂ ಅವಶ್ಯಕ.  ಹಳ್ಳಿಯ ಮನೆಗಳಲ್ಲಿ ಕಟ್ಟಿಗೆಯ ಒಲೆ ಇದ್ದೇ ಇರುತ್ತದೆ,  ಕಟ್ಟಿಗೆ ಇಲ್ಲವೆಂದು ಆಗುವ ಮಾತೇ ಇಲ್ಲ.   ಪೂರ್ವಿಭಾವೀ ಸಿದ್ಧತೆಗಳೊಂದಿಗೆ ಬೆರಟಿ ತಯಾರಿಸಲು ಮಜಬೂತಾದ ಕಂಚಿನ ಉರುಳಿಯೂ,  ಅಂತಹುದೇ ಕಂಚಿನ ಸಟ್ಟುಗವೂ ಬೇಕೇ ಬೇಕು.    ಮರದ ಸೌಟು ಅತ್ಯುತ್ತಮ,   ಕೈ ಬಿಸಿಯೇರುವುದಿಲ್ಲ.   ಹಲಸಿನ ಹಣ್ಣು ಈ ಕ್ರಮದಲ್ಲಿ ಸುಮಾರು ನಾಲ್ಕಾರು ತಿಂಗಳು ಸುರಕ್ಷಿತವಾಗಿರುತ್ತದೆ.   ಹಲಸು ದಕ್ಷಿಣ ಭಾರತದ ಎಲ್ಲ ಕಡೆಯೂ ಇರುವಂತಹ ಹಣ್ಣಾದರೂ ಈ ವಿಧವಾದ ಸಂರಕ್ಷಣೆ ಹಾಗೂ ಬೆರಟಿ ಎಂಬ ವಿಶಿಷ್ಟ ಶಬ್ದದ ಬಳಕೆ ನಮ್ಮ ದಕ್ಷಿಣ ಕನ್ನಡಿಗರಲ್ಲಿ ಹಾಗೂ ಕೇರಳದಲ್ಲಿ ಮಾತ್ರ ಇದೆ.  ಹಲಸನ್ನು ಮಲಯಾಳಂನಲ್ಲಿ ಚಕ್ಕ ಎನ್ನುತ್ತಾರೆ,  ಈ ತಿನಿಸು ಕೇರಳೀಯರಿಂದ ಚಕ್ಕ ವರಟ್ಟಿ ಎಂದು ಕರೆಯಲ್ಪಡುತ್ತದೆ.   ಪಾಯಸ ಮಾತ್ರವಲ್ಲದೆ ಬೆರಟಿಯಿಂದ ಎಣ್ಣೆಮುಳ್ಕ,  ಕಡುಬು ಇತ್ಯಾದಿಗಳನ್ನೂ ಮಾಡಬಹುದು.   ತಾಜಾ ಹಲಸಿನಹಣ್ಣಿನ ಖಾದ್ಯಗಳೇನೇನಿವೆಯೋ ಅವೆಲ್ಲವನ್ನೂ ಬೆರಟಿ ಒಂದಿದ್ದರೆ ಸಾಕು,  ಬೇಕೆನಿಸಿದಾಗ ಮಾಡಬಹುದು.    ಮಳೆಗಾಲದ ಹವೆಗೆ ಬಿಸಿ ಬಿಸಿಯಾದ ಬೆರಟಿ ಪಾಯಸವನ್ನೇ ಹಲಸುಪ್ರಿಯರು ಇಷ್ಟಪಡುತ್ತಾರೆ.
ಟಿಪ್ಪಣಿ:  ಮುಂದುವರಿದ ಬರಹ,  13 /12 /2016


ಇವತ್ತು ಮಧೂದು ಬರ್ತ್ ಡೇ,  ಬೆಳಗ್ಗೇನೇ  " ಹ್ಯಾಪೀ ಬರ್ತ್ ಡೇ ... " ಎಂದು ಮೆಸೆಂಜರ್ ಮೂಲಕ ಒರಲಿದ್ದೂ ಆಯ್ತು.


" ಅಮ್ಮ,  ಯಾವ ಪಾಯಸ ಮಾಡ್ತೀಯಾ ...? "

" ಮಾಡ್ತೇನೆ,  ಬರ್ತ್ ಡೇ ನಾವೂ ಇಲ್ಲಿ ಸೆಲಬ್ರೇಟ್ ಮಾಡ್ಬೇಡ್ವೇ... "


ಹಲಸಿನಹಣ್ಣು ಎಂದ್ರೆ ಪಂಚಪ್ರಾಣವಾಗಿರುವ ನಮ್ಮ ಮಕ್ಕಳಿಗೆ ರಜಾದಲ್ಲಿ ಬಂದಿರುವಾಗ ತಿನ್ನಬೇಕಾದರೆ ಇರಲಿ ಎಂದು ಬೆರಟಿ ಮಾಡಿಟ್ಕೊಂಡಿದ್ದು ಇತ್ತು.  ಅದಕ್ಕೂ ಆರು ತಿಂಗಳಾಯ್ತು,  ಹೇಗಿದೆಯೋ ಎಂದು ಜಾಡಿ ಬಿಡಿಸಿ ನೋಡಿದಾಗ ತಾಜಾತನದಿಂದ ಇದ್ದ ಬೆರಟಿಯನ್ನು ಕಂಡಾಗ ಹಿಗ್ಗೋ ಹಿಗ್ಗು.


" ಚೆನ್ನಪ್ಪ,  ಇವತ್ತು ಪಾಯಸ ಮಾಡೋದಿದೆ,  ಹಸಿ ತೆಂಗಿನಕಾಯಿ ಆಗ್ಬೇಕಲ್ಲ. "

" ಕೊಯ್ದು ತರುತ್ತೇನೆ.. " ಚೆನ್ನಪ್ಪ ಎರಡು ತೆಂಗಿನಕಾಯಿ ತಂದು ಸುಲಿದೂ ಇಟ್ಟ.


ಇನ್ನೇಕೆ ತಡ,  ಡಬ್ಬದಲ್ಲಿ ಬೆಲ್ಲ ಇದೆ,  ಕರಡಿಗೆಯಲ್ಲಿ ಎಳ್ಳು ಇದೆ,  ಪಾಯಸ ಆಗಿಯೇ ಹೋಯ್ತು.   " ಬೆರಟಿ ಪಾಯಸ ತಿನ್ನಬೇಕಾದ್ರೇ ಹಲಸಿನ ಸೀಸನ್ ಮುಗಿದಿರಬೇಕು . "  ಎಂದು ನಮ್ಮೆಜಮಾನ್ರ ಒಕ್ಕಣೆ ಬಂದಿತು.

Friday, 4 July 2014

ಹಲಸಿನ ಹಣ್ಣಿನ ಇಡ್ಲಿ
ಬಕ್ಕೆ ಹಲಸಿನ ಹಣ್ಣಿನ ಕಡುಬು ಮಾಡುವ ವಿಧಾನವನ್ನು ಹಿಂದಿನ ವರ್ಷವೇ ಬರೆದಿದ್ದೇನೆ.   ಹಲಸಿನಲ್ಲಿ ತುಳುವ ಎಂಬ ಇನ್ನೊಂದು ಜಾತಿಯಿದೆ.  ಇದು ಮೆತ್ತನೆ ಹಾಗೂ ಪಿಚಿಪಿಚಿ ಹಣ್ಣು,  ನಾರು ಅಧಿಕವಾಗಿರುವ ಈ ಹಣ್ಣಿಗೆ ಆಕರ್ಷಣೆ ಇಲ್ಲ.   " ತುಳುವನ ಹಣ್ಣೇ...  ನಂಗೆ ಬೇಡ "  ಇಂತಹ ಉತ್ತರವೇ ದೊರೆತೀತು.   ಆದರೆ ಇದರಿಂದಲೂ ಅಚ್ಚುಕಟ್ಟಾಗಿ ಇಡ್ಲಿ,  ಪಾಯಸಗಳನ್ನು ಮಾಡಲು ಸಾಧ್ಯವಿದೆ.   ಹೇಗೆಂದು ನೋಡೋಣ.

ದೊಡ್ಡ ಬಟ್ಟಲು ತುಂಬ ಹಣ್ಣು ಇಟ್ಕೊಳ್ಳಿ.   ನಾವು ಈಗ ಹಣ್ಣಿನ ರಸ ಸಂಗ್ರಹಿಸಬೇಕಾಗಿದೆ.  ಹೇಗೆ?
ಜಾಲರಿ ರಂಧ್ರಗಳಿರುವ ತಟ್ಟೆ ಅಥವಾ ಬಟ್ಟಲು.
ತಟ್ಟೆಯಿಂದ ರಸ ಸಂಗ್ರಹಿಸಲು ಒಂದು ತಪಲೆ.
ತಪಲೆಯ ಮೇಲೆ ಜಾಲರಿ ತಟ್ಟೆ ಇಟ್ಟುಕೊಳ್ಳುವಂತಿರಬೇಕು.
ಹಣ್ಣಿನ ಬೇಳೆ ಬಿಡಿಸುವುದೇನೂ ಬೇಡ,  ಹಾಗೇನೇ ಜಾಲರಿ ತಟ್ಟೆಯಲ್ಲಿಟ್ಟು ಉಜ್ಜುತ್ತಾ ಬನ್ನಿ.  ಹೀಗೆ ಉಜ್ಜಿದಂತೆ ಯಾ ತಿಕ್ಕಿದಂತೆ ಹಣ್ಣಿನ ರಸ ರಂಧ್ರಗಳಿಂದ ಕೆಳಗಿಳಿದು ತಳದಲ್ಲಿರುವ ತಪಲೆಯಲ್ಲಿ ಸಂಗ್ರಹವಾಗುತ್ತಿರುತ್ತದೆ,  ತಿಳಿಯಿತಲ್ಲ....

ಐದು ಕಪ್ ಹಣ್ಣಿನ ರಸ + ಮೂರು ಕಪ್ ಅಕ್ಕಿ ತರಿ + ರುಚಿಗೆ ಹುಡಿಯುಪ್ಪು.
 ಬೆರೆಸಿದ ಸಾಂದ್ರತೆ ಮಾಮೂಲು ಇಡ್ಲಿ ಹಿಟ್ಟಿನಂತಿರಬೇಕು.
ಬಾಳೆಲೆ ಬಾಡಿಸಿ ಇಟ್ಟಿದೀರಿ,
ಅಟ್ಟಿನಳಗೆಯಲ್ಲಿ ನೀರು ಕುದೀತಾ ಇದೆ,  ಇನ್ಯಾಕೆ ತಡ ಮಾಡ್ತೀರಿ?
ಬಾಳೆಯೊಳಗೆ ಒಂದು ಸೌಟು ಹಿಟ್ಟು ತುಂಬಿಸಿ,  ಲಕ್ಷಣವಾಗಿ ಮಡಚಿಟ್ಟು ಒಳಗಿಡುತ್ತಾ ಬನ್ನಿ.
ಎಲ್ಲವನ್ನೂ ಇಟ್ಟಾಯ್ತೇ,  ಅಟ್ಟಿನಳಗೆ ಮುಚ್ಚಿ ಹದಿನೈದು ನಿಮಿಷ ಬೇಯಿಸಿ.

ಅಕ್ಕಿ ತರಿಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದು,  ಪ್ಯಾಕೆಟ್ ಖರೀದಿಗಿಂತ ಮನೆಯಲ್ಲೇ ಮಾಡಿಕೊಂಡರೆ ಮಿತವ್ಯಯ.   ಹೇಗೆ ?
ಅವಶ್ಯವಿರುವಷ್ಟು ಬೆಳ್ತಿಗೆ ಅಕ್ಕಿ ಅಳೆದು ತೊಳೆಯಿರಿ.
ನೀರು ಬಸಿಯಿರಿ.
ಜಾಲರಿ ತಟ್ಟೆಗೆ ಹಾಕಿ ಅರ್ಧ ಗಂಟೆಯ ಕಾಲ ನೀರಪಸೆ ಆರಲು ಬಿಡಿ,  ಆಗಾಗ ಕೈಯಾಡಿಸಿ.
ಒದ್ದೆಯಾರಿದ ಕೂಡಲೆ ಮಿಕ್ಸಿಯಲ್ಲಿ ಎರಡು ಸುತ್ತು ತಿರುಗಿಸಿ.
ಆಯಿತಲ್ಲ ಅಕ್ಕಿ ತರಿ.
ಇಡ್ಲಿ ಎಂದಾಕ್ಷಣ ಈ ಹಿಟ್ಟನ್ನು ತಟ್ಟೆಯಲ್ಲಿ ಅಥವಾ ಇಡ್ಲಿ ಸ್ಟ್ಯಾಂಡ್ ನಲ್ಲಿ ಎರೆಯಲು ಸಾಧ್ಯವಾಗದು.  ಬಾಡಿಸಿದ ಬಾಳೆಲೆಯಲ್ಲೇ ಎರೆದಿಟ್ಟು ಆವಿಯಲ್ಲಿ ಬೇಯಿಸುವುದೊಂದೇ ದಾರಿ.   ಬಾಳೆಲೆ ಸಿಗದವರು ಸಾಗುವಾನಿ ಎಲೆ,  ಉಪ್ಪಳಿಕ ಮರದ ಎಲೆ ಉಪಯೋಗಿಸಬಹುದು.   ಈ ಎಲೆಗಳನ್ನು ಬಾಡಿಸುವ ಅಗತ್ಯವಿಲ್ಲ.

ಈ ಕಡುಬಿನ ವಿಶೇಷ ಏನಪ್ಪಾಂದ್ರೆ ಇದಕ್ಕೆ ಬೆಲ್ಲ,  ತೆಂಗಿನತುರಿ ಏನೂ ಹಾಕಿಲ್ಲ.   ಬೆಂದ ಕಡುಬು ತಿನ್ನಲು ಚಟ್ಣಿಯೂ ಬೇಡ, ಹಾಗೇ ಸುಮ್ಮನೆ ತಿಂದೇಳಬಹುದು.  ಹೊಟ್ಟೆಗೂ ಗಟ್ಟಿ ತಿನಿಸು. ನನ್ನ ಮಕ್ಕಳಿಬ್ಬರೂ ಈ ಕಡುಬು ಮಾಡಿದ ಕ್ಷಣದಿಂದಲೇ ತಿನ್ನಲು ಹಾಜರು.   ರಾತ್ರಿಯೂಟಕ್ಕೂ ಹಲಸಿನ ಹಣ್ಣಿನ ಇಡ್ಲಿ,  ಬೆಳಗೆದ್ದೂ ಇಡ್ಲಿ,  ಸಂಜೆ ಶಾಲೆಯಿಂದ ಬಂದು ಅಟ್ಟಿನಳಗೆಯಲ್ಲಿ ಇನ್ನೆಷ್ಟು ಇಡ್ಲಿಗಳಿವೆ ಎಂದು ಇಣುಕಿ ನೋಡಿ,   " ಇನ್ನೂ ಇದೇ " ಅಂದು ತಟ್ಟೆ ತಂದು ತಿಂದು ಎದ್ದು ಆಟವಾಡಿಕೊಳ್ಳಲು ಹೋಗುತ್ತಿದ್ದರು. ಈ ಬ್ಲಾಗ್ ಬರಹವನ್ನು ಹಲಸಿನ ಋತುವಿನಲ್ಲೇ ಸಿದ್ಧಪಡಿಸಿದ್ದರೂ ಓದುಗರ ನೋಟಕ್ಕೆ ನಿಲುಕುವಾಗ   " ಹಲಸಿನ ಹಣ್ಣು ಎಲ್ಲಿದೇ ?" ಎಂಬ ಪ್ರಶ್ನೆ ನಾನೂ ಕೇಳಬೇಕಾದೀತು.   ಚಿಂತೆಯಿಲ್ಲ ಓದಿಟ್ಕೊಳ್ಳಿ,  ಮುಂದೆ ಸಂದರ್ಭ ಸಿಕ್ಕಾಗ ಮಾಡುವಿರಂತೆ.....   

<><><><><><>

ನಮ್ಮಜಮಾನ್ರು ಪ್ರತಿದಿನವೂ ಗಂಟೆಗಟ್ಟಲೆ ಸ್ನೇಹಿತ ಗಿರೀಶ್ ಜೊತೆ ಮೆಸೆಂಜರ್ ಮೂಲಕ ಹರಟೆ ಹೊಡೆಯುವುದಿದೆ.   ಅವರ ಪಟ್ಟಾಂಗ ನನ್ನ ಕಿವಿಗೂ ಬೀಳುತ್ತಿರುತ್ತದೆ.   ಇವರು ಹೇಳ್ತಿದ್ರು,  " KTM ಬೈಕ್ ರಾಲಿಗೆ ಹೋಗುವಾಗ ಹಲಸಿನ ಕೊಟ್ಟಿಗೆ ತಿಂದು ಹೋಗಿದ್ದು,  ದಾರಿಯಲ್ಲಿ ಬಿಡು,  ಮನೆ ತಲಪುವವರೆಗೆ ಹಸಿವು ಅಂತ ಆಗ್ಲೇ ಇಲ್ಲ "

ನಿನ್ನೆ ಇದೇ ಹಣ್ಣಿನ ಇಡ್ಲಿ ತಿಂದು ಬೆಳ್ಳಂಬೆಳಗ್ಗೆ ಏಳು ಗಂಟೆ ಆಗ್ಬೇಕಾದ್ರೇ ಮಂಗಳೂರಿಂದ ಕುದುರೆಮುಖದ ತನಕ ಬೈಕ್ ಸವಾರಿಯಲ್ಲಿ ಭಾಗವಹಿಸಲು ಮಂಗಳೂರಿಗೆ ಹೋಗಿದ್ರು.   ಬೈಕು ಏರಿ ಹೋದವ್ರು ಅದೆಷ್ಟು ಫೋಟೊ ತಂದಿದ್ರೂ,  ಎಲ್ಲ ಬೈಕು ಸವಾರಿ ವೀರರ ಫೋಟೋಗಳು.   ಒಂದೆರಡು ಸುಂದರ ಪ್ರಕೃತಿ ದೃಶ್ಯಗಳೂ ಸಿಕ್ಕವು.  ನಿಸರ್ಗರಮ್ಯ ದೃಶ್ಯಗಳನ್ನು ನೋಡುತ್ತಿದ್ದಂತೆ   " ಛೆ,  ನಾನೂ ಹೋಗಬಹುದಾಗಿದ್ದರೆ...." ಅಂತನ್ನಿಸಿದ್ದು ಮಾತ್ರ ಸುಳ್ಳಲ್ಲ.  

 


Posted via DraftCraft app

ಟಿಪ್ಪಣಿ: 22/8/2015 ರಂದು ಸೇರಿಸಿದ ಚಿತ್ರ-ಬರಹ.....  ತುಳುವ ಹಲಸಿನ ಬೆರಟಿ
ಉಪ್ಪುಸೊಳೆಯ ಪದಾರ್ಥ ಉಣ್ಣುತ್ತಿದ್ದ ಹಾಗೆ ಚೆನ್ನಪ್ಪ ಅಂದ,  " ಅಕ್ಕ,  ತೋಟದಲ್ಲಿ ತುಳುವೆ ಹಲಸಿನಕಾೖ ಇನ್ನೂ ಉಂಟಲ್ಲ !"
" ಇದೆಯಾದರೆ ತಂದಿಡು,  ಇನ್ನಂದಾವರ್ತಿ ಉಪ್ಪುಸೊಳೆ ಹಾಕಿಡೋಣ,  ಹಣ್ಣಾದರೆ ಬೆರಟಿ ಮಾಡಿಟ್ಕೊಳ್ಳುವ..."  ನನ್ನ ಮಾರುತ್ತರ.
ಸಂಜೆ ವೇಳೆಗೆ ಹಲಸಿನಕಾೖ ಬಂದಿತ್ತು,  ದೊಡ್ಡ ಗಾತ್ರದ್ದು.  ನನ್ನ ಬಿಡುವಿನ ವೇಳೆ ಬಂದಾಗ ಹಣ್ಣಾಗಿ ಕಮ್ಮನೆ ಬರಲು ಶುರುವಾಗಿತ್ತು.
ತುಳುವ ಹಣ್ಣನ್ನು ಬಿಡಿಸಲು ಏನೂ ಕಷ್ಟವಿಲ್ಲ,  ಕತ್ತಿಗಿತ್ತಿ ಒಂದೂ ಬೇಡ,  ಒಂದ್ಹತ್ತು ಸೊಳೆ ಬಿಡಿಸಿ  " ಏಯ್,  ಮಗಳೇ...  ತಿಂದು ನೋಡೇ " ಕರೆದೆ.

ಅವಳೂ ಓಡೋಡಿ ಬಂದಳು.  " ಹ್ಞು,  ತುಂಬ ಸಿಹಿ ಇದೇ..."  ಮಗಳ ಒಪ್ಪಿಗೆ ಸಿಕ್ಕಿದ ನಂತರ ಒಂದು ತಪಲೆ ತುಂಬ ಸೊಳೆ ಒಳ ಬಂದಿತು.  ಹಣ್ಣಿನ  ರಸ ತೆಗೆಯುವ ಕಾಯಕದಲ್ಲಿ ತತ್ಪರಳಾಗಿದ್ದಾಗ ನಮ್ಮೆಜಮಾನ್ರು ಅಲ್ಲಿಗೆ ಬಂದರು.

" ಓ,  ತುಳುವನಾ,  ಎಲ್ಲಿತ್ತಂತೇ... ಆ ಕೆರೆ ಪಕ್ಕದ ಮರ ಆಗಿರ್ಬೇಕು " ಎನ್ನುತ್ತಾ ಒಂದು ಸೊಳೆ ತಿಂದರು.  ನನಗೆ ಸಿಟ್ಟು ಬರತೊಡಗಿತು,  " ಅಲ್ಲಿ ಹೊರಗೆ ಇನ್ನೂ ಅರ್ಧ ಹಣ್ಣು ಹಾಗೇ ಇದೆ,  ಎಲ್ಲ ಬಿಡಿಸಿ ತಂದ್ಕೊಟ್ಟರೆ ಹಲ್ವಾ ಮಾಡ್ಬಹುದು "
"ಹಂಗಿದ್ರೆ ಒಂದು ಪಾತ್ರೆ ಕೊಡು "  ಅನ್ನುತ್ತ ದೊಡ್ಡ ಡಬರಿ ತೆಗೆದುಕೊಂಡು ಹೊರ ಹೋಗಿ ಎಲ್ಲ ಸೊಳೆಗಳನ್ನೂ ಬಿಡಿಸಿ ತಂದ್ಕೊಟ್ರು.

ರಸ ಬಿಡಿಸುವ ನನ್ನ ಪ್ರಯಾಸವನ್ನು ಗಮನಿಸಿ,  ಇದಕ್ಕಾಗಿ ಸೂಕ್ತವಾದ ಯಂತ್ರ ಮನೆಯೊಳಗೆ ಬೇರೇನು ಇದೆ ಎಂಬ ತಪಾಸಣೆಯೂ ನಡೆದು,  " ಚಕ್ಕುಲಿ ಮಟ್ಟಿನಲ್ಲಿ ಆಗುತ್ತಾ ನೋಡ್ತೇನೆ " ಅಂದು ಚಕ್ಕುಲಿ ಒರಲಿಗೂ ಹಲಸನ್ನು ಹಿಡಿಸಿ ಹೋದರು ನಮ್ಮೆಜಮಾನ್ರು.

ಅಂತೂ ಅಂದಾಜು ಒಂದು ಲೀಟರು ರಸ ದೊರೆಯಿತು.  ಅಷ್ಟೇ ತೂಕದ ಬೆಲ್ಲವನ್ನೂ ಕೂಡಿಸಿ,  ದಪ್ಪ ಬಾಂಡ್ಲಿ ಗ್ಯಾಸ್ ಒಲೆಗೇರಿತು.   ಕುದಿದೂ ಕುದಿದೂ ಬೆಲ್ಲವೂ ಕರಗಿದ ನಂತರ ನಾನ್ ಸ್ಟಿಕ್ ಬಾಣಲೆಗೆ ವರ್ಗಾಯಿಸಲ್ಪಟ್ಟು,  ಇಂಡಕ್ಷನ್ ಒಲೆಗೇರಿತು ಹಲಸಿನ ಹಣ್ಣಿನ ರಸಪಾಕ!

ಉಷ್ಣತೆಯನ್ನು ನಿಯಂತ್ರಣದಲ್ಲಿರಿಸಿ,  ಒಂದು ಸಮಯವನ್ನೂ ಹೊಂದಿಸಿ,  ಮರದ ಸಟ್ಟುಗದಲ್ಲಿ ಆಗಾಗ ಕೈಯಾಡಿಸುತ್ತ ಇದ್ದ ಹಾಗೆ ಒಂದು ವಿಧವಾದ ಪಾಕಕ್ಕೆ ಬಂದಿತು.  ಎರಡು ಚಮಚ ತುಪ್ಪ ಹಾಕಿದ್ದೂ ಆಗಿತ್ತು,  ಅಂತೂ ಬಹು ಬೇಗ ಆಯ್ತು,   " ವಿಜ್ಞಾನಯುಗ ನಮ್ಮ ಕೆಲಸವನ್ನು ಹಗುರಾಗಿಸಿದೆ " ಅನ್ನೋದು ಸುಳ್ಳಲ್ಲ.

ಜಿಟಿಜಿಟಿ ಮಳೆ ಬೇರೆ ಬರ್ತಾ ಇತ್ತು.  ಒಂದು ಲೋಟ ಬಿಸಿ ಹಾಲು ಹಾಗೂ ಎರಡು ಚಮಚ ಹಲಸಿನ ಜಾಮ್ ( ಬೆರಟಿ ) ಹಾಕಿ ಕದಡಿದಾಗ ಸೊಗಸಾದ ಮಿಲ್ಕ್ ಶೇಕ್ ನಮ್ಮ ಕೈಲಿತ್ತು!  ತೆಂಗಿನ ಕಾಯಿ ಹಾಲು ಹಾಕಿದ್ರೆ ಪಾಯಸವೂ ರೆಡಿ.

ಅಂದ ಹಾಗೆ ನನ್ಮಗಳು ನಾಳೆ ಬೆಂಗಳೂರಿಗೆ ಹೋಗುವವಳಿದ್ದಾಳೆ,  ಮಗನಿಗೂ,  ನನ್ನ ತಂಗಿಗೂ ತುಳುವನ ಹಣ್ಣಿನ ಬೆರಟಿ ಕಳುಹಿಸುವ ಮಾಸ್ಟರ್ ಪ್ಲಾನ್ ಕೂಡಾ ತಯಾರಾಯ್ತು,  ಏನಂತೀರ ?