Pages

Ads 468x60px

Saturday 28 August 2021

ಬಣ್ಣದ ಜಾಮ್





  

ತಿಂಗಳ ಹಿಂದೆ ಮನೆಹಿತ್ತಲು ಸ್ವಚ್ಛತಾ ಅಭಿಯಾನದಲ್ಲಿ ಎರಡು ಅನಾನಸ್ ಸಿಕ್ಕಿತ್ತು.   ಕೊನೆಯ ಹಣ್ಣುಗಳು ನನ್ನ ನಿರ್ಲಕ್ಷ್ಯದಿಂದ ಹಾಗೇ ಬಿದ್ದುಕೊಂಡಿವೆ ಇವತ್ತು ಅಡುಗೆ ವ್ಯವಹಾರ ಬೇಗನೆ  ಮುಗಿಯಿತು ಅನ್ನದಾಲ್ಪಲ್ಯ ಇಷ್ಟೇ ಮಾಡಿದ್ದು.    ಪೈನಾಪಲ್ ಯೋಗ್ಯತೆ ಹೇಗಿದೆಯೆಂದು ನೋಡೋಣ.


ಮೊದಲಾಗಿ ಅದರ ಕಿರೀಟ ತೆಗೆದಾಯ್ತು ಚೆನ್ನಾಗಿಯೇ ಇದೆಯೆಂಬ ಸೂಚನೆ ದೊರೆಯಿತು.   ಮೆಟ್ಟುಕತ್ತಿಯಲ್ಲಿ ಕತ್ತರಿಸಿ ಹೋಳು ಮಾಡಿದ್ದೂ ಆಯ್ತು ಥಟ್ ಎಂದು ಹೊಸ ಐಡಿಯಾ ಬಂದಿತು.   ಪಲ್ಯಕ್ಕಾಗಿ ಕತ್ತರಿಸಿದ ಬೀಟ್ರೂಟು ಸ್ವಲ್ಪ ಉಳಿದಿದೆ ಅದನ್ನೂ ಇದನ್ನೂ ಸೇರಿಸಿ ಜಾಮ್ ಮಾಡಬಹುದಲ್ಲ...


ಇನ್ನು ತಡ ಮಾಡುವುದಕ್ಕಿಲ್ಲ ಪೈನಾಪಲ್ ಹೋಳುಗಳೊಂದಿಗೆ ನಾಲ್ಕಾರು ಚಮಚದಷ್ಟು ಬೀಟ್ರೂಟು ಮಿಕ್ಸಿಯಲ್ಲಿ ರೊಂಯ್ರೊಂಯ್ ಎಂದು ತಿರುಗಲಾಗಿ ಕೆಂಪು ವರ್ಣದ ದ್ರಾವಣವಾಗಿ...


ಸೋಸಿದರೆ ಉತ್ತಮ ಜಾಲರಿ ತಟ್ಟೆಗಳಲ್ಲಿ ರಸ ಕೆಳಗಿಳಿಯಲಾರದು.   ನಾನು ತೆಂಗಿನ ಹಾಲು ಸೋಸುವುದು ಅಡುಗೆ ಗಣಪಣ್ಣ ಹೇಳಿಕೊಟ್ಟ ವಿಧಾನದಲ್ಲಿ ಇಲ್ಲಿಯೂ ಅದೇ ತಂತ್ರ ಉತ್ತಮ.


ಸೊಳ್ಳೆ ಪರದೆಯಂತಹ ನೈಲಾನ್ ಚೀಲ ಕಾಯಿಹಾಲು ಹಿಂಡಲೂ ಸುಲಭ ತೊಳೆದು ಒಣಗಿಸಲೂ ರಗಳೆಯಿಲ್ಲ. " ಅಂದಿದ್ದ ಗಣಪಣ್ಣ.   ದೊಡ್ಡ ರಂಧ್ರಗಳಿರುವ ಕಾಟನ್ ಬಟ್ಟೆಯೂ ಆದೀತು.   ಒಟ್ಟಿನಲ್ಲಿ ರಸ ಸುಸೂತ್ರವಾಗಿ ಸಂಗ್ರಹಿಸಲು ಬಂದರಾಯಿತು.


ರಸ ತೆಗೆದಿರಿಸಿ ಚರಟ ಬೇರ್ಪಡಿಸಿ ಆಯಿತು ಚರಟ ಹೆಚ್ಚೇನಿಲ್ಲ ಪುಟ್ಟ ಲಿಂಬೇ ಗಾತ್ರದಷ್ಟೇ ಸಿಕ್ಕಿದ್ದು.

ಇನ್ನು ಅಳೆಯುವುದು ಎರಡು ಲೋಟ ರಸ ದಕ್ಕಿದೆ.  

ಎರಡು ಲೋಟ ಸಕ್ಕರೆ ಅಳೆಯಿರಿ.  

ದಪ್ಪ ತಳದ ಪಾತ್ರೆಗೆ ಹಾಕಿಟ್ಟು ಗ್ಯಾಸ್ ಉರಿಯ ಮೇಲಿರಿಸುವುದು ಮರದ ಸಟ್ಟುಗದಲ್ಲಿ ಕೈಯಾಡಿಸಿ,

ಊಟದ ಸಮಯ ಮಂದಾಗ್ನಿಯಲ್ಲಿರಲಿ.

ಊಟ ಮುಗಿಸಿ ಪಾತ್ರೆಪರಡಿಗಳನ್ನು ತೊಳೆದಿರಿಸಿ ಟೇಬಲ್ ಒರೆಸಿ..


ಇನ್ನೇನು ಮಲಗುವ ಸಮಯ ನನ್ನ ಜಾಮ್ ಏನಾಯಿತು ಎಂದು ನೋಡುವುದಕ್ಕಿಲ್ಲವೇ ಆಹ... ಜೇನಿನಂತಹ ದ್ರಾವಣ ಸ್ಟವ್ ಆರಿಸುವುದು ಸೂಕ್ತ ಆರಿದ ನಂತರ ಜಾಡಿಯಲ್ಲಿ ತುಂಬಿಸೋಣ.


ಮನೆಯಲ್ಲಿ ಮಕ್ಕಳ ಪರಿವಾರ ಇರುತ್ತಿದ್ದರೆ ಎರಡೇ ದಿನದಲ್ಲಿ ಖಾಲಿ ಮಾಡ್ತಿದ್ರು.   ಏನು ಮಾಡೋಣ ಎಲ್ಲರಿಗೂ ಫೋಟೊ ಕಳಿಸಿದ್ದಾಯಿತು.


ಇನ್ನೇನು ಕೃಷ್ಣಜನ್ಮಾಷ್ಟಮಿ ಬರಲಿದೆ,   ಬ್ಲಾಗ್ ಓದುಗರಿಗೆ ಬಣ್ಣದ ಜಾಮ್ ವತಿಯಿಂದ ಶುಭಾಶಯಗಳು.






Saturday 21 August 2021

ಓಣಂ ಪಾಯಸ

 



ಶ್ರಾವಣದ ಮೊದಲ ಹಬ್ಬ ನಾಗಪಂಚಮಿ ಹಬ್ಬದ ದಿನದಂದು ಪಾಯಸ ಇರಲೇಬೇಕು ಮಗನೂ ಮನೆಯಲ್ಲಿರುವಾಗ ಓಣಂಹಬ್ಬಕ್ಕಾಗಿ ರೇಷನ್ ಕಿಟ್ ಕೂಡಾ ತಂದು ಕೊಟ್ಟಿದ್ದಾನೆಹಬ್ಬದ ಸಲುವಾಗಿ ರೇಷನ್ ಸಾಮಗ್ರಿಗಳು ಏನೇನಿವೆ?

ಸಕ್ಕರೆ ಒಂದು ಕಿಲೊ ಬಂದಿದೆ ನಾವು ಪಾಯಸಕ್ಕೆ ಬೆಲ್ಲ ಬಳಸುವವರು.

ಒಂದು ಕಿಲೋ ಪಾಯಸಕ್ಕೆಂದೇ ಕೆಂಪು ಸಣ್ಣಕ್ಕಿ ಬಂದಿದೆ ಇದನ್ನೇ ಪಾಯಸ ಮಾಡಿ ನೋಡಿದ್ರಾದೀತು.

ಗೇರುಬೀಜ ಒಂದು ಪ್ಯಾಕೆಟ್ಟು,

ಏಲಕ್ಕಿ ಒಂದು ಪ್ಯಾಕ್  ಏಲಕ್ಕಿಯನ್ನು ಮುಗಿಸಲಿಕ್ಕೆ ದಿನಾ ಬಿಸಿನೀರನ್ನೇ ಕುಡಿಯುವವರಿದ್ದರೆ ಜಜ್ಜಿ ಹಾಕಬಹುದಿತ್ತು ನಾವು ಸುರಂಗದ ನೀರನ್ನು ಹಾಗೇನೇ ಕುಡಿಯುವವರಾಗಿದ್ದೇವೆ.

ಮತ್ತೇನಪಾ ಅಂದರೆ ಶರ್ಕರವರಟಿ ಇದ್ದಿತು ಅದೂ ಒಂದು ಪ್ಯಾಕ್ ನಂಗೆ ತುಂಬ ಇಷ್ಟ.. " ಮಧು ಅತ್ತ ಇತ್ತ ಹೋಗುತ್ತ ಬರುತ್ತ ತಿಂದು ಮುಗಿಸಿದ ಶರ್ಕರವರಟಿ ಅಂದರೆ ನೇಂದ್ರ ಬಾಳೆಕಾಯಿಯ ಸಿಹಿ ಚಿಪ್ಸ್ ಎಂದು ತಿಳಿಯಿರಿ.

ಒಂದು ಪುಟ್ಟ ಜಾಡಿ ತುಪ್ಪವೂ ಬಂದಿದೆ ನಾಲ್ಕು ದಿನಕ್ಕೊಂದಾವರ್ತಿ ಬೆಣ್ಣೆ ಕಾಯಿಸಿ ತುಪ್ಪ ಮಾಡಿಕೊಳ್ಳುವವರು ನಾವಾದರೂಪಾಯಸದ ಗೋಡಂಬಿ ದ್ರಾಕ್ಷಿಗಳನ್ನು ಇದೇ ತುಪ್ಪದಲ್ಲಿ ಹುರಿಯೋಣ.


ಈಗ ಪಾಯಸದ ಸಂಗತಿ ಹೇಗೆಂದು ತಿಳಿಯೋಣ.

ರೇಷನ್ ಏಲಕ್ಕಿ ಪ್ಯಾಕ್ ಬಿಡಿಸಬೇಕೆಂದಿಲ್ಲ ಅಡುಗೆಮನೆಯ ಡಬ್ಬದಲ್ಲಿ ಏಲಕ್ಕಿ ಇರುವಾಗ ನಾವು ಅಡಿಕೆ ಬೆಳೆಗಾರರೂ ಆಗಿರುವಾಗ ತೋಟದ ಮಿಶ್ರಬೆಳೆಯಾಗಿ ಸಾಕಷ್ಟು ಏಲಕ್ಕಿಯೂ ಸಿಗುತ್ತದೆ.   ಈಗ ಕೊರೋನಾ ಕಾರಣದಿಂದ ತೋಟದಲ್ಲಿ ಕಾರ್ಮಿಕರಿಲ್ಲ.   ಏಲಕ್ಕಿ ತೋಟದಲ್ಲಿ ಇದ್ದರೂ ತರಲು ಜನವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ಹಸಿ ತೆಂಗಿನಕಾಯಿ ತುರಿದುಅರೆದು ಅರೆಯುವಾಗಲೇ ಸುವಾಸನೆ ಬರುವಷ್ಟು ಏಲಕ್ಕಿ ಹಾಕಿದರೆ ಉತ್ತಮ.   ದಪ್ಪ ಕಾಯಿಹಾಲನ್ನು ತೆಗೆದು ಇರಿಸುವುದು.   ಇದನ್ನು ಕೊನೆಯ ಹಂತದಲ್ಲಿ ಪಾಯಸಕ್ಕೆ ಎರೆಯುವುದಾಗಿದೆ.

ಕಾಯಿ ಚರಟಕ್ಕೆ ಪುನಃ ನೀರೆರೆದು ಹಾಲು ತೆಗೆಯಿರಿ ಇದು ತೆಳ್ಳಗಿನ ಕಾಯಿಹಾಲು.


ಪಾಯಸದ ಕೆಂಪಕ್ಕಿ ತೊಳೆಯಿರಿ ಒಂದು ಲೋಟ ಅಕ್ಕಿಗೆ ಅಂದಾಜು ನಾಲ್ಕು ಲೋಟ ನೀರೆರೆದು ಕುಕ್ಕರಿನಲ್ಲಿ ಬೇಯಿಸಿ ಮೂರುಸೀಟಿ ಹಾಕಲಿ.   ಅಕ್ಕಿ ಮೃದುವಾಗಿ ಬೆಂದರಾಯಿತು.

ಒತ್ತಡ ಇಳಿದ ನಂತರ ಮುಚ್ಚಳ ತೆರೆದು ಒಂದು ಅಚ್ಚು ಬೆಲ್ಲ ಹಾಕಿರಿ ಪುಡಿ ಮಾಡಿ ಹಾಕಿದ್ರೆ ಉತ್ತಮ ಎರಡು ಉಪ್ಪಿನ ಕಲ್ಲೂಬೀಳಲಿ ಬೆಲ್ಲ ನಿಧಾನ ಗತಿಯಲ್ಲಿ ಕರಗುತ್ತಿರಲಿ ತೆಳ್ಳಗಿನ ಕಾಯಿಹಾಲು ಈಗ ಎರೆಯಿರಿ.

ತುಪ್ಪದಲ್ಲಿ ಗೇರುಬೀಜ ಹೊಂಬಣ್ಣ ಬರುವ ತನಕ ಹುರಿಯಿರಿ ಮೇಲಿನಿಂದ ಒಣದ್ರಾಕ್ಷಿ ಉದುರಿಸಿ.

ಏಲಕ್ಕಿ ದ್ರಾಕ್ಷಿ ಗೇರುಬೀಜಗಳನ್ನು ಇಷ್ಟೇ ಹಾಕಬೇಕು ಎಂಬ ಲೆಕ್ಕಾಚಾರ ನಡೆಯದು.   ಇದ್ದಂತೆ ಬಳಸಿದರಾಯಿತು.

  ಹಿತ್ತಲಲ್ಲಿ ಅರಸಿನದ ಗಿಡ ಇದೆಯಾದರೆ ಒಂದು ಎಲೆ ಚಿವುಟಿ ತನ್ನಿ ಕುದಿಯುವ ಪಾಯಸಕ್ಕೆ ಹಾಕಿದರೆ ಅದೂ ಒಂದು ಸೊಗಸಾದ ಸುವಾಸನೆಯನ್ನು ಪಾಯಸಕ್ಕೆ ಕೊಡಬಲ್ಲುದು.   ಅಕ್ಕಿ ಪಾಯಸಕ್ಕೆ ಮಾತ್ರ ಅರಸಿನ ಎಲೆ ಹಾಕುವ ವಾಡಿಕೆ.


ಬೆಲ್ಲ ಕರಗಿ ಪಾಯಸದೊಂದಿಗೆ ಬೆರೆತಾಗ ಬೆಲ್ಲವೂ ಪರಿಮಳ ಬೀರಿತೇ ದಪ್ಪ ಕಾಯಿ ಹಾಲು ಎರೆಯುವ ಸಮಯ ಎರೆಯಿರಿ.  

ಅರೆಯುವಾಗ ಏಲಕ್ಕಿ ಹಾಕಲಿಲ್ಲವೇ ಈಗ ಹುಡಿ ಮಾಡಿ ಉದುರಿಸಿ.

ದ್ರಾಕ್ಷಿ ಗೋಡಂಬಿಗಳು ತುಪ್ಪ ಸಹಿತವಾಗಿ ಬೀಳಲಿ.

ಸಣ್ಣ ಕುದಿ ಬಂದಾಗ ಇಳಿಸಿ ಪಾಯಸಕ್ಕೆ ಬೆಲ್ಲದ ಸಿಹಿ ಸಾಕಾಗಲಿಲ್ಲವೇ ಸಕ್ಕರೆ ಹಾಕುವುದು.

ನಮ್ಮ ಓಣಂ ಪಾಯಸ ಆಯ್ತು.

ನಾಗಪಂಚಮಿ ಹಾಗೂ ಸಂಕ್ರಾಂತಿಯ ಲೆಕ್ಕಾಚಾರದಲ್ಲಿ ನಾನಂತೂ ಎರಡು ಬಾರಿ ಪಾಯಸ ಸವಿದಾಯ್ತು

ಇನ್ನೊಮ್ಮೆ ಪಾಯಸ ಮಾಡಬಹುದಾದಷ್ಟು ಕೆಂಪು ಸಣ್ಣಕ್ಕಿ ಉಳಿದಿದೆ.




Monday 9 August 2021

ರಾತ್ರಿಯ ರೊಟ್ಟಿ

 


ಮನೆಯಲ್ಲಿ ನಮ್ಮ ಒಡನಾಡಿಯಾಗಿರುವ ತುಂಟಿ ನಾಯಿ ಅನ್ನ ತಿನ್ನಲೊಪ್ಪದು ಎಂದು ಹಿಂದೆಯೇ ಬರೆದಿದ್ದೇನೆ.   ತುಂಟಿ ಚಪಾತಿ ಇಷ್ಟಪಟ್ಟು ತಿನ್ನುತ್ತಾಳೆಂಬುದು ತಿಳಿಯಿತು.

ಕೊನೆಗೂ ನಾಯಿಗಾಗಿ ಚಪಾತಿ ದಿನವೂ ತಯಾರಿಸುವ ಹೊಣೆ ನನ್ನದಾಯಿತು ಮಧು ಮನೆಗೆ ಬಂದನೆಂದರೆ ಅವನಿಗೂ ಚಪಾತಿ ಇರಲೇಬೇಕು ಅವನೂ ನನ್ನ ಜೊತೆ ಸೇರಿಕೊಂಡು ಹಿಟ್ಟು ಕಲಸುವುದೂನಾದುವುದೂಲಟ್ಟಿಸಿ ಬೇಯಿಸುವುದೂ ಕಲಿತೇ ಬಿಟ್ಟ ಅಂತೂ ರಾತ್ರಿ ಎಲ್ಲರೂ ಚಪಾತಿ ತಿನ್ನುವವರಾದೆವು.   ಚಪಾತಿಗಾಗಿ ಕೂಟು ಮಧ್ಯಾಹ್ನದ ಹೊತ್ತೇ ಮಾಡಿ ಇಡುವ ರೂಢಿ ಆಯಿತು.

ಕೂಟು ಮಾಡಲು ಪ್ರತ್ಯೇಕ ಸಿದ್ಧತೆಯೇನೂ ಬೇಡ ಕೊದ್ದೆಲ್ ಯಾ ಸಾಂಬಾರು ಸ್ವಲ್ಪ ವಿಶಿಷ್ಟವಾಗಿದ್ದರಾಯಿತು.

ಒಂದೇ ತರಕಾರಿ ಸಾಲದು,   ಇರುವ ತರಕಾರಿಗಳಲ್ಲಿ ಎಲ್ಲವನ್ನೂ ಅಷ್ಟಿಷ್ಟು ಸೇರಿಸಿ ಹೆಚ್ಚಿ ಇಡುವುದು ಬಟಾಟೆ ಇರಲೇ ಬೇಕು ತೊಗರಿಬೇಳೆ ಯಾ ಒಂದು ಬಗೆಯ ಧಾನ್ಯ ಇರಲಿ.

ತೆಂಗಿನ ಮಸಾಲೆ ಕಡ್ಡಾಯ ಬೇಕಿದ್ದರೆ ದಪ್ಪ ಗಸಿಯ ಹಾಗೆ ರಸಭರಿತವಾಗಿ ಸಾರು ಅನ್ನುವ ಹಾಗೂ  ಪದಾರ್ಥವನ್ನು ಹೊಂದಿಸಿಕೊಳ್ಳಬಹುದಾಗಿದೆ ಇರಲಿ ನಾನಂತೂ ಚಪಾತಿ ಪರೋಟಾಪುಲ್ಕಾ ಎಲ್ಲವ್ನೂ ಒಂದೇ ಹಿಟ್ಟಿನಿಂದ ತಯಾರಿಸುವ ಪ್ರಾವೀಣ್ಯತೆ ಪಡೆದು ಕೊಂಡಿದ್ದೇನೆ.  


ಈಗ ಹಿಟ್ಟು ಕಲಸೋಣ ಅಂದ ಹಾಗೆ ನಮ್ಮ ರೇಷನ್ ಸಾಮಗ್ರಿಯಲ್ಲಿ 4 ಕೇಜಿ ಗೋಧಿ ಹಿಟ್ಟು ಸಿಗುತ್ತೆ ನಾವು ಕೊರೋನಾ ಸಂತ್ರಸ್ತರಲ್ಲವೇ ತಿಂಗಳಿಗೊಮ್ಮೆ ಸಿಗುವ ಉಚಿತ ರೇಷನ್ ಕಿಟ್ ಅಡುಗೆಯ ಸಾಮಗ್ರಿಗಳೂ ಸಾಬೂನು ಇತ್ಯಾದಿಗಳೂ ಇವೆ.   ನಮ್ಮ ಮನೆ ಯಜಮಾನರು ಇದನ್ನೆಲ್ಲ ತರುವವರೇ ಅಲ್ಲ.   ಏನೂ ಬಿಡಿಗಾಸು ಇಲ್ಲದವರಿಗೆ ಸರ್ಕಾರ ಕೊಡುತ್ತದೆ ನಮಗ್ಯಾಕೆ..."   ಹಾಗಾಗಿ ಮಧು ಊರಿಗೆ ಬಂದಿರುವಾಗ ಆಗ ರೇಷನ್ ಸಾಮಗ್ರಿ ವಿತರಣೆ ಆಗುತ್ತಿದ್ದರೆ ನನಗೂ ಉಚಿತ ಕಿಟ್ ಬರುತ್ತೆ ತಿಂಗಳಿಗೊಮ್ಮೆ ನಮ್ಮನ್ನು ವಿಚಾರಿಸಿ ಕೊಳ್ಳಲು ಹಾಗೂ ಹಿರಣ್ಯ ದುರ್ಗಾಪರಮೇಶ್ವರಿ ದೇಗುಲದ ಸಂಕ್ರಾಂತಿಯ ಕಾರ್ಯಕ್ರಮಗಳಲ್ಲಿಪಾಲ್ಗೊಳ್ಳಲು ಬರುತ್ತಿರುತ್ತಾನೆ ಅಂತೂ ಉಚಿತ ರೇಷನ್ ಕಿಟ್ ನನಗೆ ಒಮ್ಮೆಯೂ ತಪ್ಪಲಿಲ್ಲ ಅನ್ನಿ  ಬಾರಿ ಸಂಕ್ರಾಂತಿಯೊಂದಿಗೆ ನಾಗರಪಂಚಮಿಯೂ ಬಂದಿದೆ.   ನಾಗಬನದಲ್ಲಿ ಭಕ್ತಗಡಣ ಸೇರಲಿದೆ.


ಗೋಧಿ ಹಿಟ್ಟು 3 ಲೋಟ ಅಳೆಯಿರಿ.

ಅರ್ಧ ಲೋಟ ಜೋಳದ ಹಿಟ್ಟು.   ಜೋಳದ ಹಿಟ್ಟು ಮಧು ಬೆಂಗಳೂರಿನಿಂದ ತಂದದ್ದು.   ಅದನ್ನು ವಿವಿಧ ಅಡುಗೆಗಳಲ್ಲಿ  ಬಳಸಬಹುದೆಂದು ನನ್ನ ಪ್ರಯೋಗಶೀಲತೆ ತಿಳಿಸಿಕೊಟ್ಟಿತು.   ಅದರಲ್ಲಿ ಚಪಾತಿಯೂ ಒಂದು ಉಳಿದ ವೈವಿಧ್ಯಗಳನ್ನು ಇನ್ನೊಮ್ಮೆ ಬರೆಯುತ್ತೇನೆ ಜೋಳದ ಹಿಟ್ಟು ನಮ್ಮ ಜಗ್ಗಣ್ಣನ ಅಂಗಡಿಯಲ್ಲೂ ಸಿಗುತ್ತೆ ಚಿಂತೆಯಿಲ್ಲ.


ಉಪ್ಪು ಸೇರಿಸಿದ ಒಂದು ಲೋಟ ಬಿಸಿ ನೀರಿನಲ್ಲಿ ಹಿಟ್ಟು ಕಲಸಿ.   ಎಣ್ಣೆ ಬೆಣ್ಣೆ ಏನೂ ಹಾಕುವುದಕ್ಕಿಲ್ಲ.

ಮೃದುವಾಗಿ ನಾದಿರಿಅರ್ಧ ಗಂಟೆ ಮುಚ್ಚಿ ಇರಿಸುವುದು.


ನಂತರ ಉಂಡೆಗಳನ್ನು ಮಾಡಿ ಚಪಾತಿ ಲಟ್ಟಿಸಿ.

ಬೇಯಿಸಲಿಕ್ಕೆ ಕೈ ಹಿಡಿ ಇರುವ ತವಾ ಉತ್ತಮ ಉಪಯೋಗವಿಲ್ಲದ ನಾನ್ ಸ್ಟಿಕ್ ತವಾ ಕೂಡಾ ಆದೀತು.

ತವಾ ಬಿಸಿಯಾದೊಡನೆ ತುಸು ತುಪ್ಪ ಸವರುವುದು.  

ನಂತರ ಲಟ್ಟಿಸಿದ ಹಿಟ್ಟನ್ನು ಹಾಕಿರಿ.

ಬೇಯುವಾಗ ಹಿಟ್ಟು ಅಲ್ಲಲ್ಲಿ ಗುಳ್ಳೆಗಳಂತೆ ಉಬ್ಬಿ ಉಬ್ಬಿ ಬಂದಾಗ ಕವುಚಿ ಹಾಕಿರಿ ಪದೇ ಪದೇ ಕವುಚಿ ಮಗುಚಿ ಮಾಡಬಾರದು.

ಕವುಚಿದ ನಂತರ ಇಕ್ಕುಳದಲ್ಲಿ ಹಿಡಿದು ಗ್ಯಾಸ್ ಉರಿಯ ಮೇಲಿರಿಸಿ ಬಲೂನ್ ತರ ಉಬ್ಬಿಯೇ ಬಿಟ್ಟಿತು ಇದೀಗ ಪುಲ್ಕಾ ಆಯ್ತು.

ತವಾದಲ್ಲಿಯೂ ಬಲೂನ್ ನಂತೆ ಉಬ್ಬಿಸಲಿಕ್ಕೂ ಬರುತ್ತದೆ.

ಎಲ್ಲದಕ್ಕೂ ಕೈ ಚಳಕ ಇದ್ದರಾಯಿತು.


ಅವಶ್ಯವಿದ್ದಷ್ಟು ಪುಲ್ಕಾ ರೊಟ್ಟಿಗಳಾದ ನಂತರ ಉಳಿದ ಹಿಟ್ಟನ್ನು ಗಾಳಿಯಾಡದ ಜಾಡಿಯಲ್ಲಿ ಮುಚ್ಚಿಟ್ಟು ಫ್ರಿಜ್ ಒಳಗಿರಿಸುವುದು.   ನಾಳೆಯ ಹಿಟ್ಟು ಕಲಸುವಾಗ ನಿನ್ನೆಯ ಹಿಟ್ಟನ್ನೂ ಸೇರಿಸಿ ಕೊಳ್ಳಲು ಮರೆಯದಿರಿ.