Pages

Ads 468x60px

Wednesday, 28 September 2016

ಮೈತ್ರಿಯ ಮ್ಯಾಗಿ
    


 
ಸೊಸೆ ಮನೆಗೆ ಬಂದಳು,  ಇದ್ದಿದ್ದೇ ಬಿಡಿ,  ಮಗನ ಮದುವೆಯ ನಂತರ ಸೊಸೆ ಮನೆಗೆ ಬರುವುದಿದ್ದೇ ಇದೆ.   ಅತ್ತೇ ಪಟ್ಟಕ್ಕೇರಿದ ನಂತರ ಸೊಸೆಯೊಂದಿಗೆ ವ್ಯವಹರಿಸುವ ವಿಧಾನ ಹೇಗಪ್ಪಾ ಎಂದೂ ತಲೆ ಕೆಡಿಸಿಕೊಂಡಿದ್ದೂ ಇದೆ.  

" ಈಗಿನ್ಕಾಲದ ಹುಡ್ಗೀರು...  ನೀನು ಏನೂ ಹೇಳೋದು ಕೇಳೋದೂ ಮಾಡ್ಬೇಡಾ. "  ಹೀಗೆಲ್ಲ ಸಲಹೆಗಳೂ,

" ಅಮ್ಮ ನೀನು ಈ ಥರ ದೊಡ್ಡ ಸ್ವರ ಏರಿಸಿ ಮಾತಾಡಿದ್ರೆ ಮೈತ್ರಿಗೆ ಹೆದರಿಕೆ ಆದೀತು "  ಅನ್ನುವ ಮಗಳು.

ಹೌದೂ... ನಾವೂ ಒಂದಾನೊಂದು ಕಾಲದಲ್ಲಿ ಈಗಿನ್ಕಾಲದ ಹುಡ್ಗೀರಾಗಿಯೇ ಅತ್ತೆ ಮನೆಗೆ ಬಂದೋರಲ್ವೇ... ನನ್ನ ಚಿಂತನೆ.

ಏನೇ ಇರಲಿ,   ' ವಧೂಗೃಹಪ್ರವೇಶ ' ದ ಸಭಾ ಕಾರ್ಯಕ್ರಮಗಳೆಲ್ಲ  ಮುಗಿದ ನಂತರ,  ಸಂಜೆವೇಳೆಗೆ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಬಾಯಾರು ಪಂಚಲಿಂಗೇಶ್ವರ ದೇವಳದ ಸಭಾಭವನದಿಂದ ಹಿರಣ್ಯಕ್ಕೆ ವಾಪಸ್ಸಾದೆವು.

ಸುಸ್ತೋ ಸುಸ್ತು,  ನಾಳೆ ಪುನಃ ಇನ್ನೊಂದು ಔತಣಕೂಟ ಮೈತ್ರಿಯ ಅಪ್ಪನಮನೆ ಮರಕ್ಕಿಣಿಯಲ್ಲಿ ಇದ್ದಿತು.   ಅದಕ್ಕೂ ಹೊರಡುವ ಸಿದ್ಧತೆ ಆಗಬೇಕಿದೆ.   ಸೀರೆ ಉಡಲು ತಿಳಿಯದ ಈಗಿನ್ಕಾಲದ ಹುಡ್ಗೀರಾದ ಮಗಳಿಗೂ ಸೊಸೆಗೂ ಸೀರೆ ಉಡಿಸಲು ನಮ್ಮೂರ ಬ್ಯೂಟಿ ಪಾರ್ಲರು ಲೇಡಿ,  ಯೋಗೀಶನ ಹೆಂಡ್ತಿಗೆ ಫೋನ್ ಮಾಡಿ ಮುಂಜಾನೆ ಒಂಭತ್ತು ಗಂಟೆಗೆ ಬರಲು ತಿಳಿಸಿದ್ದೂ ಆಯ್ತು.   ಮದುವೆಯ ನಂತರ ತವರುಮನೆಗೆ ಮೊದಲ ಬಾರಿ ಹೋಗುವಾಗ ಅಪ್ಪ ಕೊಟ್ಟಂತಹ ಭರ್ಜರಿ ಜರತಾರಿ ಸೀರೆಯಲ್ಲೇ ಹೋಗಬೇಕಾದ ರೂಢಿ.  ಅಂತೂ ಈ ಮಕ್ಕಳ ಸೀರೆ ಉಡುವ ಆಟದಿಂದಾಗಿ ನಾನೂ ನೆಟ್ಟಗೆ ಸೀರೆ ಉಡಲು ಕಲಿತ ಹಾಗೂ ಆಯ್ತು.

ಈ ದಿನ ನಮಗೆ ಅಂತಹ ಧಾವಂತದ ಕೆಲಸವೇನೂ ಇದ್ದಿರಲಿಲ್ಲವಾದ್ದರಿಂದ ಮರಕ್ಕಿಣಿ ಮನೆಯಲ್ಲಿ ಔತಣಕೂಟದೊಂದಿಗೆ,  ಸಂಜೆಯ ತನಕ ಗಡದ್ದು ನಿದ್ದೆ ತೆಗೆದು ಹಿರಣ್ಯಕ್ಕೆ ಹಿಂತಿರುಗಿದೆವು.   ದೂರವೇನಿಲ್ಲ,  ಅರ್ಧ ಗಂಟೆಯ ದಾರಿ.

ತುಂಬ ಹಳೆಯ ಮನೆ,  ಮನೆ ತುಂಬ ಮರದ ಕೆತ್ತನೆ ಕೆಲಸದ ಶೃಂಗಾರ,  ಕಾಂಕ್ರೀಟು ಕಟ್ಟಡಗಳ ಎಡೆಯಲ್ಲಿ ವಿಭಿನ್ನವಾಗಿ ಎದ್ದು ತೋರುವ ಮನೆಯ ಒಳಾಂಗಣದ ದೃಶ್ಯಚಿತ್ರಣ ನನ್ನ ಐಫೋನ್ ಒಳಗೆ ತುಂಬಿಸಿದ್ದಾಯ್ತು.

ಮನೆಯ ಕಟ್ಟಡದ ಒಳಗೆ ಕೂಡಿದಂತಿರುವ ಸಿಹಿನೀರ ಬಾವಿ,  ಮೇಲ್ನೋಟಕ್ಕೆ ಗಿಳಿಬಾಗಿಲು... ಹ್ಞಾ,  ನಮ್ಮೂರ ಹವ್ಯಕ ಭಾಷಿಕರು ಕಿಟಿಕಿಯನ್ನು ಗಿಳಿಬಾಗಿಲು ಅಂತಲೇ ಅನ್ನುವುದಾಗಿದೆ.  ನನಗಂತೂ ಇಷ್ಟವಾಯಿತು.

ಈ ಹಿಂದೆ  " ಕಣ್ಣೆದುರಲ್ಲಿ ಕಾಷ್ಠಕಲೆ " ಎಂಬ ಬರಹವನ್ನು ನನ್ನ ಅಪ್ಪನ ಮನೆಯ ಕಲಾಸೊಗಸನ್ನು ಆಧರಿಸಿ ಬರೆದಿದ್ದೆ.    ಈ ಮನೆಯ ಬಾಜಾರ ಕಂಭಗಳು ಇನ್ನೂ ವೈಭವೋಪೇತವಾಗಿವೆ." ಸಂಜೆ ಆಯ್ತಲ್ಲ,  ಹಾಲು ಬೇಡ್ವೇನಮ್ಮಾ.. "  ಅಂದ ಮಧು.
" ತಂದಿಟ್ಟಿರು,  ನಾಳೆ ಮೊಸರು ಆಗ್ಬೇಡ್ವೇ.. "
" ಮಿಲ್ಮಾ ಡೈರಿ ಹಾಲಿನ ರುಚಿ ಮೈತ್ರಿ ನೋಡ್ಬೇಡ್ವೇ.. "
" ಹೌದಲ್ಲ,  ಅರ್ಧ ಲೀಟರು ಜಾಸ್ತಿ ತಾ... "

ಹಾಲು ಉತ್ಪಾದಕರು ಡಿಪೋಗೆ ಹಾಲು ತಂದಪ್ಪಿಸುವ ಹೊತ್ತು,  ಆ ಹೊತ್ತಿನಲ್ಲಿ ತಾಜಾ ಹಾಲನ್ನು ಡಿಪೋದಿಂದಲೇ ಕೊಂಡೊಯ್ಯಲವಕಾಶವಿದೆ.   ಹ್ಞಾ,  ಸಂಜೆಯ ಹಾಲು ದಪ್ಪ ಜಾಸ್ತಿ,  ಕೆನೆಭರಿತ ಈ ಹಾಲಿನಿಂದ ಅಧಿಕ ಬೆಣ್ಣೆ ಹಾಗೂ ತುಪ್ಪ ಲಭ್ಯ.

ಬೆಂಗಳೂರಿನ ಬೆಡಗಿ ಕೇರಳದ ಡಿಪೋ ಹಾಲು ತಂದಳು,  ಬೇಕರಿಯಿಂದ ಕುರುಕಲು ತಿಂಡಿಗಳೂ....   ಮನೆಯಲ್ಲೇ ಮಾಡಿದ ತಾಜಾತನ ನಮ್ಮೂರ ಗಾಯತ್ರಿ ಬೇಕರಿಯದ್ದು.   

" ಅಮ್ಮ,  ಇನ್ನು ಟೀ ... ಮೈತ್ರಿ ಮ್ಯಾಗಿ ಮಾಡ್ತಾಳಂತೆ. "

ಔತಣದೂಟ ತಿಂದು ತಿಂದೂ ಹಸಿವಿದ್ದಂತಿಲ್ಲ,  ಆದರೂ ಸೊಸೆ ತಿಂಡಿ ಮಾಡ್ತಾಳೆಂದರೆ...  ತಿನ್ನದಿದ್ದರಾದೀತೇ?

2 ಮಿನಿಟ್ ನೂಡಲ್ಸ್ ಕ್ಷಣಮಾತ್ರದಲ್ಲಿ ಟೇಬಲ್ ಮೇಲೇರಿತು.   " ಅಯ್ಯೋ!  ಅಲ್ಲಿ ಬೇಕಾದಷ್ಟು ತರ್ಕಾರಿ ಇತ್ತಲ್ಲ... ಹಾಕ್ಬೋದಿತ್ತು.. "  ತುಟಿ ಮೀರಿ ಬಂದಿತು.

" ಈವಾಗ ಹೀಗೇ ತಿನ್ನೋಣ... "  ತಟ್ಟೆ ಚಮಚಾ ಆಟದೊಂದಿಗೆ ಮ್ಯಾಗಿ ತಿಂದು,  ಚಹಾ ಕುಡಿದು ಎದ್ದೆವು.

" ರಾತ್ರಿಯೂಟಕ್ಕೆ ಗಂಜಿ,  ಉಪ್ಪಿನ್ಕಾಯಿ ಸಾಕಲ್ವ... "
" ಸಾಕೂ,  ನಮಗ್ಯಾರಿಗೂ ಹಸಿವಿಲ್ಲ... "

ಮಾರನೇ ದಿನ ಮಧು ಮೈತ್ರಿ ಬೆಂಗಳೂರಿಗೆ ಹೊರಟು ನಿಂತೂ ಆಯ್ತು,  ಮಗಳಂತೂ ಎರಡು ದಿನ ಮೊದಲೇ ಹೋಗಿದ್ದಳು.

ಮನೆಯೊಳಗಿನ ತೆಗೆದಿರಿಸುವ,  ಹೊರಗೆ ಬಿಸಾಡುವ,  ತೊಳೆದಿರಿಸುವ ವಸ್ತು ಸಾಮಗ್ರಿಗಳ ಒಪ್ಪಓರಣದಲ್ಲೇ ದಿನಗಳೆರಡು ಕಳೆಯಿತು.   ಅದ್ಯಾವುದೋ ಹೊತ್ತಿನಲ್ಲಿ ಸೊಸೆಯ ಮ್ಯಾಗಿ ಪ್ಯಾಕು ಸಿಕ್ಕಿತು,  ನೋಡಿದ್ರೆ ಇನ್ನೂ ಒಂದು ಬಂಡಲ್ ನೂಡಲ್ಸ್ ಹಾಗೂ ಮಸಾಲಾ ಇದೆ!

ಸರಿ,  ಇವತ್ತು ಸಂಜೆಗೆ ನನ್ನದೂ ಮ್ಯಾಗಿ....   ಅಡುಗೆಗೆ ತರಕಾರಿ ಹಚ್ಚಿಡುವಾಗ ಮ್ಯಾಗಿಗೆ ಬೇಕಾದಂತಹ ಕ್ಯಾರೆಟ್,  ಟೊಮ್ಯಾಟೋ,  ಬಟಾಟೆ,  ಕ್ಯಾಪ್ಸಿಕಂ,  ಈರುಳ್ಳಿ,  ಹಸಿಮೆಣಸು ತೆಗೆದಿಟ್ಟು,  ಹಚ್ಚಬೇಕಾದ್ದನ್ನು ಹಚ್ಚಿಟ್ಟು,   ತುರಿಯಬೇಕಾದ್ದನ್ನು ತುರಿದಿಟ್ಟು,  ಎರಡು ಹಸಿಮೆಣಸು ಸಿಗಿದಿಟ್ಟು ಆಯ್ತು.

 ಮ್ಯಾಗಿ ಈ ತನಕ ಮಾಡಿದ್ದೂಂತ ಇಲ್ಲ,  ಯಾವಾಗ್ಲೋ ತಂಗಿ ಮನೆಗೆ ಹೋಗಿದ್ದಾಗ ಅವಳ ಮ್ಯಾಗಿ ತಿಂದಿದ್ದೆ.  ಬಾಣಲೆಗೆ ತುಸು ತುಪ್ಪ ಸವರಿದ್ದಾಯಿತು.  ತರಕಾರಿಗಳನ್ನು ಬಾಡಿಸಿ,   ಮ್ಯಾಗಿಯ ಅಳತೆಗೆ ತಕ್ಕಷ್ಟು ಒಂದ್ಲೋಟ ನೀರು ಸುರಿದು,   ಮ್ಯಾಗಿ ಮಸಾಲೆಯನ್ನು ಸುರಿದಿದ್ದಾಯ್ತು.   ತರಕಾರಿಗಳೊಡನೆ ನೀರು ಕುದಿ ಕುದಿದಾಗ ಇದ್ದಬದ್ದ ಮ್ಯಾಗಿ ಗಂಟು ನೀರಿಗೆ ಬಿತ್ತು,  2 ಮಿನಿಟ್ ಅಲ್ವೇ,  ಇಂಡಕ್ಷನ್ ಸ್ಟವ್ ಎರಡು ನಿಮಿಷಗಳಲ್ಲಿ ಆಫ್ ಆಗುವಂತೆ ಸೆಟ್ ಮಾಡಿ ಮುಚ್ಚಿಟ್ಟು...

ಚಹಾ ತಯಾರಾಯ್ತು,  ಮ್ಯಾಗಿ   "ರೆಡಿ ಟು ಈಟ್... " ಅಂದಿತು.Wednesday, 7 September 2016

ಹಬ್ಬದ ಪಾಯಸ
               
 
ಹಬ್ಬಗಳು ಸಾಲು ಸಾಲಾಗಿ ಬರುತ್ತಲಿವೆ.   ಒಂದೊಂದು ಹಬ್ಬಕ್ಕೂ ಅದಕ್ಕೆಂದೇ ವಿಶೇಷ ಹಬ್ಬದಡುಗೆ ಆಗಲೇಬೇಕು,  ಹಬ್ಬದೂಟ ಉಣಲೇಬೇಕು,  ಏನಿಲ್ಲಾಂದ್ರೂ ಒಂದು ಪಾಯಸ ಮಾಡಿ ಸವಿಯಲೇ ಬೇಕು.  

ದವಸಧಾನ್ಯಗಳ ಬೆಲೆ ಗಗನಕ್ಕೇರಿದೆ.   ಬೇಳೆಕಾಳುಗಳ ಧಾರಣೆ ಕೇಳಿದ್ರೆ ಬೆಚ್ಚಿ ಬೀಳುವಂತಾಗಿದೆ.    ಚೌತಿ ಹಬ್ಬಕ್ಕೆ ನಮ್ಮ ಹಿರಿಯರ ಕಾಲದಲ್ಲಿ ಹೆಸ್ರುಬೇಳೆ ಪಾಯಸವನ್ನೇ ಮಾಡುವ ರೂಢಿ ಇಟ್ಟುಕೊಂಡಿದ್ದೆವು.   ನಮ್ಮತ್ತೆ ಹೆಸ್ರುಬೇಳೆ ತರಿಸಿ,    ಕೆಂಪಾಗಿ ಘಮ್ಮನೆ ಹುರಿದು ಡಬ್ಬದಲ್ಲಿ ಶೇಖರಿಸಿ ಇಡುತ್ತಿದ್ದರು.   ಹಾಳಾಗದಂತೆ ಕಾಪಿಡುವ ಉದ್ಧೇಶವೂ ಆಯ್ತು,  ಯಾರೇ ನೆಂಟರು ಬರಲಿ,  ಮನೆ ಅಳಿಯಂದಿರೇ ಹಾಜರಾಗಲಿ,  ಹೆಸ್ರುಬೇಳೆ ಪಾಯಸ ದಿಢೀರನೆ ಸಿದ್ಧಪಡಿಸುವುದಕ್ಕೂ ಆಯ್ತು.  ಇದೆಲ್ಲ ವರ್ಷಗಳ ಹಿಂದಿನ ಮಾತಾಯ್ತು.

ಈಗಲೂ ಪಾಯಸ ತಿನ್ನದಿದ್ದರಾದೀತೇ,   ಹಗುರಾಗಿ ಮಿತವ್ಯಯದ ಪಾಯಸ ಮಾಡುವುದು ಹೇಗೆ?
ಮೊದಲಾಗಿ ಅಡುಗೆಮನೆಯಲ್ಲಿ ಏನೇನಿದೆ ಎಂದು ನೋಡಿಟ್ಟುಕೊಳ್ಳುವುದು.

ತೆಂಗಿನಕಾಯಿ ಇದೆ.
ಬೆಲ್ಲ ಒಂದೆರಡು ಅಚ್ಚು ಇದ್ದರೆ ಸಾಕು.
ನಾಲ್ಕಾರು ಬಾಳೆಹಣ್ಣುಗಳೂ,
ಯಾರೂ ಕೇಳುವವರಿಲ್ಲದ ಕ್ಯಾರೆಟ್ಟೂ...
ಅಹಹಾ... ಪಾಯಸ ಮಾಡೇ ಬಿಡೋಣ.

ಬಾಳೆಹಣ್ಣುಗಳನ್ನು ಚೆನ್ನಾಗಿ ನುರಿದು,  ಬೆಲ್ಲ ಕೂಡಿ ಬೇಯಿಸಿ.
ತೆಂಗಿನಕಾಯಿ ಸುಲಿದು,  ಒಡೆದು,  ಕಾಯಿ ತುರಿಯಿರಿ,  ಅರೆದು ಹಾಲು ತೆಗೆದಿರಾ,
ನೀರು ಕಾಯಿಹಾಲನ್ನು ಬಾಳೆಹಣ್ಣಿನ ಪಾಕಕ್ಕೆ ಎರೆಯಿರಿ.
ಕ್ಯಾರೆಟ್ ತುರಿಯಿರಿ,  ಕ್ಯಾರೆಟ್ ತುರಿಯೂ ಕೂಡಿದ ಬಾಳೆಹಣ್ಣಿನ ರಸಪಾಕ ಬೇಯಲಿ.
ಕುಕ್ಕರ್ ಉತ್ತಮ,  ಒಂದು  ವಿಸಿಲ್ ಸಾಕು.

ಬೆಂದ ಮಿಶ್ರಣಕ್ಕೆ ರುಚಿಗೆ ಹೊಂದುವಷ್ಟು ಬೆಲ್ಲ ಪುಡಿ ಮಾಡಿ ಹಾಕಿದ್ರಾ,  ದಪ್ಪ ಕಾಯಿಹಾಲು ಎರೆದು ಕುದಿಸಿ.  ಚಿಟಿಕೆ ಏಲಕ್ಕಿ ಉದುರಿಸಿ,  ಘಮಘಮಿಸುವ ತುಪ್ಪ ಎರೆದರೂ ನಡೆದೀತು.
ದ್ರಾಕ್ಷಿ ಗೇರುಬೀಜ ಯಥಾನುಶಕ್ತಿ ಹಾಕುವುದು.