Pages

Ads 468x60px

Saturday, 26 September 2015

ತೆಳ್ಳವು ಪಾಯಸವೂ, ಓಡುಪ್ಪಳೆಯೂ....ನಾವು ನೀರುದೋಸೆ ಪ್ರಿಯರು,   ಮಕ್ಕಳಿಗೂ ಬೆಲ್ಲಸುಳಿ ಬೆರೆಸಿ ದೋಸೆ ತಿನ್ನುವ ಹಂಬಲ.   ಆದರೂ ಮೂರೋ ನಾಲ್ಕೋ ದೋಸೆ ಉಳಿಯಿತು.   ಹೇಗೂ ಮಕ್ಕಳಿಬ್ಬರೂ ಮನೇಲಿದಾರೇ,  ಉಳಿದ ದೋಸೆಗಳನ್ನೇ ಪಾಯಸವನ್ನಾಗಿ ಪರಿವರ್ತಿಸೋಣ.

ಒಂದು ಹಸಿ ತೆಂಗಿನಕಾಯಿ,  ಕಾಯಿ ಅರೆದು ದಪ್ಪ ಹಾಲು ತೆಗೆದಿರಿಸಿ.  ಕಾಯಿ ಚರಟಕ್ಕೆ ಇನ್ನೂ ಎರಡು ಬಾರಿ ನೀರೆರೆದಾಗ ನೀರುಕಾಯಿಹಾಲು ಲಭ್ಯ.

2 ಅಚ್ಚು ಬೆಲ್ಲ,  ನೀರು ಕಾಯಿಹಾಲಿನಲ್ಲಿ ಕರಗಿ ಕುದಿಯಲಿ.
ಕುದಿಯುತ್ತಿರುವ ಬೆಲ್ಲದ ದ್ರಾವಣಕ್ಕೆ ದೋಸೆಗಳನ್ನು ಹಾಕಿರಿ.   ದೋಸೆಸಹಿತವಾಗಿ ಕುದಿಯುತ್ತಿರುವ ಹಾಗೇನೇ ದಪ್ಪ ಕಾಯಿಹಾಲು ಎರೆಯಿರಿ.  ಚಿಟಿಕೆ ಏಲಕ್ಕಿಪುಡಿ ಉದುರಿಸಿ.  ಇನ್ನೊಂದು ಕುದಿ ಬಂದಾಗ ಕೆಳಗಿಳಿಸಿ,  ಪಾಯಸ ಸಿದ್ಧ.  ಅನಾವಶ್ಯಕವಾಗಿ ಸೌಟಿನಲ್ಲಿ ಕಲಕದಿರಿ,  ದೋಸೆಗಳನ್ನು ಬಟ್ಟಲಿಗೆ ಹಾಕಿಕೊಳ್ಳುವಾಗಲೂ ಹರಿಯದಂತೆ ಜಾಗ್ರತೆ ವಹಿಸುವ ಅಗತ್ಯವಿದೆ.

ಈ ಪಾಯಸವನ್ನು ಮಕ್ಕಳೊಂದಿಗೆ ಸವಿಯುತ್ತಿದ್ದಂತೆ   ' ಓಡುಪ್ಪಳೆ '  ಎಂಬ ಸಿಹಿತಿನಿಸು ನೆನಪಾಯಿತು.  ಓಡುಪ್ಪಳೆಯನ್ನು ನಾನು ಬಾಲ್ಯದಲ್ಲಿ ತಿಂದಿದ್ದೇ ಇಲ್ಲ.   ಹೀಗೊಂದು ತಿಂಡಿ ಇದೆ ಅಂತಾ ಗೊತ್ತೂ ಇರಲಿಲ್ಲ ಅನ್ನಿ.   ನಮ್ಮಮ್ಮ ಮಾಡಿದ್ರೆ ತಾನೇ ಗೊತ್ತಾಗಿರೋದು!   ಮದುವೆ ಆದ ನಂತರವೂ ನಮ್ಮ ಮನೆಯಲ್ಲಿ ಓಡುಪ್ಪಳೆ ಮಾಡಿದ್ದನ್ನು ಕಂಡಿಲ್ಲ.

ಯಾವಾಗ ನನ್ನ ಕೆಲಸಗಾರ್ತಿಯರೆಲ್ಲ ಸರ್ಕಾರೀ ರೋಜ್ಗಾರ್ ಯೋಜನೆಯಲ್ಲಿ ತೊಡಗಿಸಿಕೊಂಡರೋ ಅವಾಗ ನಮ್ಮ ಅಡಿಕೆತೋಟದೊಳಗೆ ಕಾರ್ಮಿಕರ ಅಭಾವ ಕಾಡಲು ತೊಡಗಿತು.

" ಸರ್ಕಾರೀ ಸಂಬಳ ನಾವೂ ಕೊಟ್ಟು ಕೆಲ್ಸ ಮಾಡ್ಸೋಣ "  ಅಂತ ನಮ್ಮೆಜಮಾನ್ರು ಅಂದ್ಬಿಟ್ಟು ನಾಲ್ಕಾರು ಹೆಣ್ಣಾಳುಗಳು ಬರುವ ಏರ್ಪಾಡಾಯಿತು. 

"ನೋಡೂ... ಹೇಗೂ ಗವರ್ಮೆಂಟ್ ಸಂಬಳಾನೇ ಕೊಡ್ಬೇಕು,  ಊಟ ಚಹಾ ಕೊಡಲಿಕ್ಕಿಲ್ಲ ತಿಳೀತಾ...  ಅವ್ರೇ ತರ್ತಾರೆ "  ಅಂದಿದ್ದು ನಮ್ಮವರು.

" ಆಗ್ಲೀ,  ಇದೂ ಒಳ್ಳೆಯದೇ "

ಹಾಳೆ ಮುಟ್ಟಾಳೆ ಧರಿಸಿ ಬಂದ ಕೆಲಸಗಾತಿಯರು ನನಗೆ ಪರಿಚಿತರೇ ಆಗಿದ್ದುದರಿಂದ  " ಚಹ ಜೊತೆ ಏನು ತಿಂಡಿ ತಂದಿದ್ದೀರಾ..." ತುಳುವಿನಲ್ಲಿ ವಿಚಾರಣೆ ನನ್ನದು.

" ಓಡುಪ್ಪಳೆ ಅಕ್ಕಾ.. " ಈಗ ಓಡುಪ್ಪಳೆ ನನ್ನ ಕಿವಿಗೆ ಬಿತ್ತು.

" ಹೌದಾ,  ಹ್ಯಾಗಿರುತ್ತೇ ಓಡುಪ್ಪಳೇ ?"  ಅವಳೋ ಟಿಫಿನ್ ಬಾಕ್ಸ್ ಬಿಡಿಸಿ ತೋರಿಸಿದ್ಥೂ ಆಯಿತು.    ಅದು ಮಾಮೂಲಿ ದೋಸೆ ಥರಾನೇ ಇದ್ದಿತು.   

" ಹೇಗೇ ಮಾಡಿದ್ದೂ ? "

" ಬೆಳ್ತಿಗೆ ಅಕ್ಕಿ ನುಣ್ಣಗೆ ಅರೆದು,  ಅದಕ್ಕೆ ಅನ್ನ ಹಾಕಿ ಪುನಃ ಅರೆಯುವುದು,  ಮಣ್ಣಿನ ಓಡು ಉಂಟಲ್ಲ, ಅದರಲ್ಲಿ ಎರೆದು..."

" ಓ, ಹಾಗೆಯಾ...." ಇದೂ ಅನ್ನದ ದೋಸೆ ಅನ್ನದೆ ವಿಧಿಯಿಲ್ಲ.  ಮಣ್ಣಿನ ಕಾವಲಿ ಬೇರೆ ಆಗಬೇಕು, ನನ್ನಂತವರಿಗಲ್ಲ ಅಂತ ಸುಮ್ಮನಾಗಬೇಕಾಯಿತು.   ಆದರೂ ನಮ್ಮ ಪಾಕತಜ್ಞೆ ಕಡಂಬಿಲ ಸರಸ್ವತಿ ಏನು ಬರೆದಿದ್ದಾರೇಂತ ಓದಿಕೊಂಡೆ.   ಬೆಳ್ತಿಗೆ ಅಕ್ಕಿ ಹಾಗೂ ಕುಚ್ಚಿಲು ಅಕ್ಕಿ ಸಮ ಪ್ರಮಾಣದಲ್ಲಿ ನುಣ್ಣಗೆ ಅರೆದು,  ಬಾಣಲೆಯಲ್ಲಿ ಎರೆದು... ಅಂತ.   ಅನ್ನ ಹಾಕುವ ಪ್ರಸ್ತಾವ ಇಲ್ಲಿಲ್ಲ.  ನೀರು ದೋಸೆ  ಥರಾನೇ ಇದು ಅಂತಾಯ್ತು.  ಮಾಮೂಲಿ ಕಾವಲಿಯಲ್ಲಿ ತೆಳ್ಳಗೆ ಎರೆಯುವ ಬದಲು ದಪ್ಪನಾಗಿ ಬೇಯಿಸುವಲ್ಲಿಗೆ ಇದು ಓಡುಪ್ಪಳೆ.  ಅದರಲ್ಲೂ ಮಣ್ಣಿನ ಬಾಣಲೆಯಾದರೆ ಒಂದು ತೆರನಾದ ಮಣ್ಣಿನ ಸುವಾಸನೆ.

ಈ ಥರ ದೋಸೆಗಳನ್ನು ಮಾಡಿಟ್ಟು ಬೆಲ್ವ ಹಾಕಿದ ತೆಂಗಿನಕಾಯಿಹಾಲಿನಲ್ಲಿ ನೆನೆಸಿಟ್ಟು ಸಿಹಿ ಓಡುಪ್ಪಳೆಗಳನ್ನು ತಿನ್ನಲು ರುಚಿಕರ.  ಸಿಹಿ ಬೇಕಿಲ್ಲದವರು ರಸಂ, ಕೂಟು, ಸಾರು,  ಕೊದ್ದೆಲ್ ಇತ್ಯಾದಿ ವ್ಯಂಜನಗಳನ್ನು ಬಳಸಬಹುದಾಗಿದೆ.

ಒಂದು ನಾಲಕ್ಕು ದಿನ ಕಳೆದಾಗ ನಮ್ಮತ್ತಿಗೆ ಊರಿಗೆ ಬಂದರು.  ಅವರೋ ಹಳೇ ಕ್ರಮದ ಅಡುಗೆಗಳನ್ನು ಬಲ್ಲವರು.

" ಅಯ್ಯೋ, ಓಡುಪ್ಪಳೆ ಗೊತ್ತಿಲ್ವಾ ನಿಂಗೆ ?  ಮುಂಚೆ ಅಪ್ಪಂಗೆ ದಿನಾ ಸಂಜೆ ಕಾಫಿಗೆ ಓಡುಪ್ಪಳೆಯೇ ಆಗ್ಬೇಕಿತ್ತು ಗೊತ್ತಾ ...."

" ಹೌದಾ,  ನಂಗೊತ್ತೇ ಇಲ್ಲ.. "  ಯಾವುದಕ್ಕೂ ನಮ್ಮತ್ತೆ ಮಣ್ಣಿನ ಪಾತ್ರೆಪರಡಿಗಳನ್ನು ನನ್ಕೈಲಿ ಮುಟ್ಟೋದಿಕ್ಕೆ ಬಿಟ್ರೆ ತಾನೇ...

"ಬೆಲ್ಲದ ಕಾಯಿಹಾಲು ಹಾಕಿ ಓಡುಪ್ಪಳೆ ತಿನ್ನುವ ಗೌಜಿ.... ಅತ್ತಿಗೆ ಭಾವುಕರಾದರು.   ನಾನು ಬಂದಾಗಲೇ ಮಾವ ಷುಗರ್ ಪೇಶೆಂಟ್ ಅಂತ ಹಾರಾಡ್ತಿದ್ರು.   ಯಾಕಾದ್ರೂ ನಾನು ಬೆಲ್ಲ ಹಾಕಿದ ಸಿಹಿತಿಂಡಿಗಳನ್ನು ಮಾಡಿ ಅವರ ಎದುರಿಗಿಡಲಿ?   ಮಾಡಲಿಕ್ಕೆ ಕಲಿಯದಿದ್ದುದೇ ಒಳ್ಳೆಯದಾಯಿತು.

ಹೊಸದಾಗಿ ಓಡುಪ್ಪಳೆ ಮಾಡಬಯಸುವವರಿಗೆ ಪುಕ್ಕಟೆ ಸಲಹೆ ಇಲ್ಲಿದೆ.

ಹೊಸದಾದ ಮಣ್ಣಿನ ಬಾಣಲೆ ಖರೀದಿಸಿದ್ದೀರಾ,  ಅಟ್ಟದಿಂದ ಕೆಳಗಿಳಿಸಿದ್ದೀರಾ,  ಏನೇ ಆಗಿರಲಿ,  ಚೆನ್ನಾಗಿ ತೊಳೆಯಿರಿ.  ಅಡುಗೆ ಎಣ್ಣೆ ಸವರಿ ಒಲೆಯ ಮೇಲೇರಿಸಿ ನೀರು ಕುದಿಸಿ.   ಇದು  ಸ್ವಚ್ಛಗೊಳಿಸುವ ಕ್ರಿಯೆ.   ಒಂದೆರಡು  ಬಾರಿ ಈ ಥರ ಮಾಡಿದಿರಾದರೆ ಈ ಮಣ್ಣಿನ ಕಾವಲಿ ಉಪಯೋಗಿಸಲು ಸಿದ್ಧ.

ಹಿಟ್ಟನ್ನು ಅರ್ಧ ಸೌಟು ಎರೆದು,  ಮುಚ್ಚಿ ಬೇಯಿಸಿ.  ಬೆಂದಾಗ ಬದಿಯಿಂದ ಏಳುತ್ತಾ ಬರುತ್ತದೆ.  ಇದನ್ನು ಕವುಚಿ ಮಗುಚಿ ಹಾಕಲಿಕ್ಕಿಲ್ಲ,  ಎಣ್ಣೆ ಯಾ ತುಪ್ಪ ಎರೆಯಲಿಕ್ಕೂ ಇಲ್ಲ.  ಬೆಂದ ಓಡುಪ್ಪಳೆಯನ್ನು ಬೆಲ್ಲ ಹಾಕಿದ ತೆಂಗಿನಕಾಯಿಹಾಲಿಗೆ ಹಾಕಿ ಬಿಡಬೇಕು. ಅರ್ಧ ಘಂಟೆ ಬಿಟ್ಟು ತಿನ್ನಬೇಕು.   Friday, 18 September 2015

ಚಿನ್ನ ಚಿನ್ನ ಹೂವೇ...
ಮುಂಜಾನೆಯ ದಿನಪತ್ರಿಕೆ ಓದುತ್ತಿದ್ದಾಗ,  ಈಗ ಏನಿದ್ರೂ ಇಂಟರ್ನೆಟ್ ಓದು ತಾನೇ...  ಒಂದು ಸುದ್ದಿ ಗಮನ ಸೆಳೆಯಿತು.   " ಅಡಿಕೆ ತೋಟಕ್ಕೆ ಮಾರಕ ಈ ಕಳೆ ಸಸ್ಯ " ಎಂಬ ಶೀರ್ಷಿಕೆಯಲ್ಲಿ ಸುದ್ದಿ ಇದ್ದಿತು.  ಪತ್ರಿಕಾವರದಿ ಓದಿ ಆಯ್ತು,  ಆದ್ರೇ ಅಡಿಕೆ ಮರಗಳೇ ಇರುವ ನಮ್ಮ ತೋಟದಲ್ಲಿ ಈ ಕಳೆ ಇಲ್ಲ!   ಪತ್ರಿಕೆ ಹಾಕಿರುವ ಚಿತ್ರದಲ್ಲಿ ಸಸ್ಯದ ಸೂಕ್ಷ್ಮ ವಿವರಗಳು ಗೊತ್ತಾಗುವಂತಿಲ್ಲ.  ಯಾವುದಕ್ಕೂ ತಿಳಿಯುವುದು ಸೂಕ್ತ ಎಂಬ ಅನಿಸಿಕೆಯಿಂದ ಸುದ್ದಿಯನ್ನು ಕತ್ತರಿಸಿ ಫೇಸ್ ಬುಕ್ ಅಂಗಣದ ಕೃಷಿಕರ ಗುಂಪು ಇರುವ ತಾಣ ( agriculturist ) ದಲ್ಲಿ ನನ್ನ ಸುದ್ದಿ ಬಂದಿಳಿಯಿತು,  ಆಸಕ್ತರ ಗಮನವನ್ನೂ ಸೆಳೆಯಿತು.   ಅಡಿಕೆ ಬೆಳೆಗಾರರಿಂದ ಪ್ರತಿಕ್ರಿಯೆಗಳೂ,  ಹೂವಿನ ವಿಧವಿಧವಾದ ಚಿತ್ರಗಳೂ ಬಂದುವು.  ಈ ಗಿಡದ ವೈಜ್ಞಾನಿಕ ವಿವರಗಳೂ ತಿಳಿದೇ ಹೋಯಿತು.  ಸಸ್ಯಶಾಸ್ತ್ರೀಯವಾಗಿ ಇದು Sphagneticola trilobata ಎಂಬ ಹೆಸರನ್ನೂ ಹೊಂದಿದೆ,  asteraceae ಕುಟುಂಬವಾಸಿ.

ಅಂತೂ ನಮ್ಮ ತೋಟದಲ್ಲಿ ಈ ಕಳೆ ಸಸ್ಯ ಇಲ್ಲವೆಂದು ಸುಮ್ಮನಾಗಬೇಕಿತ್ತು.   ಆದರೂ ಸಂಜೆಯ ವಾಕಿಂಗ್ ವೇಳೆ,  ಎದುರುಗಡೆ ಹೇಮಕ್ಕನ ಮನೆಯ ರಸ್ತೆ ಪಕ್ಕದಲ್ಲೇ ಇದೇ ಹಳದಿ ಹೂಗಳು ಚಾಪೆ ಹಾಸಿದಂತೆ ಸ್ವಾಗತಿಸಬೇಕೇ...  ಛೆ, ಕೈಯಲ್ಲಿ ಫೊಟೋ ತೆಗೆಯಲು ಬೇಕಾದ ಸಲಕರಣೆ ಇರಲಿಲ್ವೇ,  ಗೇಣುದ್ದದ ಹೂ ಬಳ್ಳಿಯೇ ಅಂಗಳದ ಮೂಲೆಯಲ್ಲಿ ವಿರಾಜಮಾನವಾಯಿತು.

ನನ್ನ ಚಟುವಟಿಕೆಗಳನ್ನು ಗಮನಿಸಿದ್ದ ನಮ್ಮೆಜಮಾನ್ರು  " ಯಾಕೇ ತಂದು ನೆಟ್ಟಿದ್ದೂ,  ತೋಟ ತುಂಬಾ ಹೂ ಆಗ್ಲೀ ಅಂತಾನಾ...?" 
" ಹಾಗೇನಾಗ್ತದೇ... ಇರಲಿ "

ಸೇವಂತಿಗೆ ಹೂವಿನಂತೆ ಕಂಡರೂ ಸುವಾಸನೆ ಇಲ್ಲ,  ಕೇವಲ ನಿರ್ಗಂಧ ಕುಸುಮ.  ಝೀನಿಯಾ ಹೂಗಳಂತೆ ಬೀಜದಿಂದ ಹಬ್ಬುವ ಜಾತಿಯೂ ಅಲ್ಲ,  ತುಂಡರಿಲ್ಪಟ್ಟ ಕಾಂಡಗಳೇ ತೇವಾಂಶಭರಿತ ಮಣ್ಣಿನಲ್ಲಿ ಅತಿವೇಗದಲ್ಲಿ ವೃದ್ಧಿಸುತ್ತವೆ,  ಬಿಸಿಲೂ ಇರುವಲ್ಲಿ ಹೂಗಳ ದಟ್ಟಣೆ ಜಾಸ್ತಿ.

ದ. ಅಮೆರಿಕಾ ಮೂಲದ ಸಸ್ಯ,  ಇದು ವಿದೇಶೀಯ ಹೂವು ಆಗಿರುವುದರಿಂದ ನಮ್ಮ ಆಯುರ್ವೇದ ಶಾಸ್ತ್ರ ರೀತ್ಯಾ ಯಾವುದೇ ಔಷಧೀಯ ಗುಣಗಣಗಳನ್ನು ಹೇಳುವಂತಿಲ್ಲ,  ಆದರೂ ಸೊಪ್ಪುಗಳನ್ನು ಅರೆದು ಗಾಯವಾದಲ್ಲಿ ಲೇಪ ಹಾಕಬಹುದೆಂದು ಆಫ್ರಿಕಾ ಬುಡಕಟ್ಟು ಜನರ ಸಂಶೋಧನೆ.    " ಅಕ್ಕಾ, ಕಮ್ಯೂನಿಷ್ಟ್ ಸೊಪ್ಪು (ಪಾರ್ಥೇನಿಯಂ ಕಳೆ ) ರಸ ತೆಗೆದು ಗಾಯಕ್ಕೆ ಹಾಕಿದ್ರಾಗ್ತದೆ " ಅಂದಿದ್ದಳು ಕಲ್ಯಾಣಿ!

ಮನೆಯಂಗಳದ ಅಲಂಕಾರಿಕ ಸಸ್ಯವಾಗಿ ಬೆಳೆಸುವ ಈ singapore daisy ಕ್ರಮೇಣ ಹೊರಗೆಸೆಯಲ್ಪಡುವ ಒಂದು ಕಳೆ ಸಸ್ಯ.   ಹೇಮಕ್ಕ ಮನೆಯಂಗಳದಿಂದ ಹೊರ ಬಿಸುಟಿದ್ದೂ, ರಸ್ತೆ ಪಕ್ಕ ಹಳದಿ ಹೂಗಳ ತೋಟ ನನಗೆ ಗೋಚರವಾಗಲೂ, ಕಾರಣ ಈಗ ತಿಳಿಯಿತಲ್ಲ!

ಚೌತಿ ಹಬ್ಬ ಮುಗಿಯುತ್ತಿದ್ದ ಹಾಗೆ, ನಮ್ಮ ಮನೆಯಂಗಳ ಸ್ವಚ್ಛಗೊಳಿಸುವ ಕ್ರಿಯೆ ಆರಂಭ.  ತೋಟದ ಅಡಿಕೆ ಒಣ ಹಾಕಲು ಅಂಗಳದ ಕಳೆ,  ಕಸಕಡ್ಡಿ  ಎಲ್ಲವೂ ಗೊಬ್ಬರದ ಗುಂಡಿಗೆ ಸೇರುವ ಕಾಲ ಬಂದಿದೆ,  ನಾನೂ ಪುಟ್ಟ ಪುಟ್ಟ ಹಳದಿ  ಹೂಗಳ ಫೊಟೋ ತೆಗೆದು ಇಟ್ಟೆ.


Friday, 11 September 2015

ಉಪ್ಪು ಸೊಳೆ ರೊಟ್ಟಿಮಳೆಗಾಲದ ಮುಂಜಾನೆಗೊಂದು ತಿಂಡಿಯ ಸೊಗಸು ಉಪ್ಪು ಸೊಳೆ ರೊಟ್ಟಿ.   ನಮ್ಮ ಮನೆ ಮಕ್ಕಳು ದಿನಾ ಮಾಡಿ ಕೊಟ್ರೂ ತಿನ್ತಿದ್ರು,  ರೊಟ್ಟಿ ಮೇಲೆ ಬೆಣ್ಣೆ,  ಜೊತೆಗಿಷ್ಟು ಹುಡಿಬೆಲ್ಲ ಇದ್ದರೆ ಸ್ವರ್ಗವೇ ಧರೆಗಿಳಿದು ಬಂದಂತೆ !

ರೊಟ್ಟಿ ಮಾಡಲು ಉಪ್ಪು ಸೊಳೆ ಹಾಕಿಟ್ಟಾಗಿದೆ,  ಎರಡು ಅಥವಾ ಮೂರು ಹಿಡಿ ಸೊಳೆಗಳನ್ನು ಉಪ್ಪಿನಿಂದ ತೆಗೆದು ನೀರಿನಲ್ಲಿ ಹಾಕಿರಿಸಲೇ ಬೇಕು,  ಮನೆಯ ಹಿಂಭಾಗದಲ್ಲಿ ಹರಿದು ಬರುತ್ತಿರುವ ನೀರಿನ ಕಾಲುವೆಯಲ್ಲಿ ಒಂದು ಬಟ್ಟೆಯಲ್ಲಿ ಗಂಟು ಕಟ್ಟಿ ನೀರಿನಲ್ಲಿ ಮುಳುಗಿಸಿಟ್ಟರೂ ನಡೆಯುತ್ತದೆ,  ಉಪ್ಪೆಲ್ಲವೂ ನೀರಿಗೆ ಬಿಟ್ಟುಕೊಳ್ಳಲೇ ಬೇಕು.
ಸೊಳೆಯಲ್ಲಿನ ಉಪ್ಪಿನ ಸಾಂದ್ರತೆಯೆಲ್ಲವೂ ತೊಳೆದು ಹೋಯಿತು,  ನೀರಿನಿಂದ ತೆಗೆದು ಬಸಿದು ಇಟ್ಟಾಯ್ತು.

ಅರ್ಧ ಕಡಿ ತೆಂಗಿನ ತುರಿ.
ಎರಡು ಲೋಟ ಅಕ್ಕಿ ಹುಡಿ.
ತುಸು ಜೀರಿಗೆ.
ರುಚಿಗೆ ಉಪ್ಪು ಬೇಡ, ತಿಳಿಯಿತಲ್ಲ.
ಮೊದಲು ಸೊಳೆಗಳನ್ನು ಅರೆಯುವುದು,  ಕಾಯಿತುರಿ, ಜೀರಿಗೆ ಕೂಡಿಕೊಂಡು ಪುನಃ ತಿರುಗಿಸಿ ತೆಗೆಯುವುದು.
ಅಕ್ಕಿ ಹುಡಿ ಹಾಕಿಕೊಳ್ಳುವುದು.
ಮುದ್ದೆಯಾದ ಹಿಟ್ಟಿನಿಂದ ಉಂಡೆಗಳನ್ನು ಮಾಡಿಕೊಳ್ಳುವುದು.
ಬಾಳೆ ಎಲೆಗೆ ಎಣ್ಣೆ ಸವರಿ,  ಉಂಡೆಯನ್ನು ಇಟ್ಟು ರೊಟ್ಟಿಮಣೆಯ ಸಹಾಯದಿಂದ ರೊಟ್ಟಿ ತಟ್ಟುವುದು.  ( ಕೈಯಲ್ಲೇ ತಟ್ಟಿಕೊಳ್ಳಲೂ ಬರುತ್ತದೆ )

ಉಪ್ಪು ಸೊಳೆ ಧಾರಾಳ ಇರುವುದಾದರೆ ಅಕ್ಕಿಹುಡಿ ಇಲ್ಲದೆಯೂ ರೊಟ್ಟಿ ಮಾಡಬಹುದಾಗಿದೆ.
ನೀರುಳ್ಳಿ,  ಹಸಿಮೆಣಸು,  ಕರಿಬೇವು,  ಶುಂಠಿ, ಕೊತ್ತಂಬರಿ ಸೊಪ್ಪು ಇತ್ಯಾದಿ ಹಾಕಲಡ್ಡಿಯಿಲ್ಲ.Wednesday, 2 September 2015

ಸಜ್ಜಿಗೆ ಇಡ್ಲಿ
ಪ್ರತಿದಿನವೂ ಅಕ್ಕಿಯಿಂದಲೇ ತಿಂಡಿಗಳನ್ನು ಮಾಡುತ್ತಿರಬಾರದು,   ವೈವಿಧ್ಯತೆ ಇರಬೇಕು,  ತಿನ್ನುವವರು  " ದಿನಾ ಮಾಡಿದ್ದನ್ನೇ ಮಾಡ್ತೀಯ "  ಎಂದು ಹೇಳುವಂತಿರಬಾರದು.  ಅದಕ್ನುಗುಣವಾಗಿಯೋ ಎಂಬಂತೆ ನಮ್ಮ ಹಿರಿಯರು ತಮ್ಮ ಧಾರ್ಮಿಕ ವಿಧಿವಿಧಾನಗಳಲ್ಲಿ ಹಲವಾರು ಕಟ್ಟುಪಾಡುಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ..  ವ್ರತ,  ಉಪವಾಸ ಇತ್ಯಾದಿಗಳ ಆಚರಣೆಯಲ್ಲಿ ಮುಂಜಾನೆ ಅಕ್ಕಿಯನ್ನು ಬಳಸಿ ತಿಂಡಿತಿನಿಸು ತಯಾರಿಸುವಂತಿಲ್ಲ.   ಆ ಹೊತ್ತು ಗೋಧಿಗೆ ಪ್ರಾಶಸ್ತ್ಯ.  ಗೋಧಿಯ ಯಾವುದೇ ರೂಪಾಂತರವೂ ಆದೀತು.  ಗೋಧಿಕಾಳುಗಳ ದೋಸೆ,  ಗೋಧಿ ಕಡಿಯ ಪಾಯಸ,  ಗೋಧಿ ರವೆಯ ಉಪ್ಪಿಟ್ಟು ಅಥವಾ ಇಡ್ಲಿ,  ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು.

ಇಡ್ಲಿಗಳಲ್ಲಿ ನೂರಾರು ವಿಧ.   ಈ ದಿನ ಸಜ್ಜಿಗೆ ಇಡ್ಲಿ ಮಾಡೋಣ.    ಸಜ್ಜಿಗೆಯಲ್ಲೂ ಬೇರೆ ಬೇರೆ ನಮೂನೆಗಳು,   ಮಾಮೂಲಿ ಸಜ್ಜಿಗೆ ಉಪ್ಪಿಟ್ಟು ಮಾಡಲಿಕ್ಕೆ ನಾನು ಕೊಳ್ಳುವುದು ಮೀಡಿಯಂ ರವಾ ಅಂತ ಬರೆದಿರುವ ಪ್ಯಾಕೆಟ್ಟು.

" ಸಜ್ಜಿಗೆ ಅಂದ್ರೇನ್ರೀ... ?"
ಅಕ್ಕಿ ರವೆಯಿಂದ ಉಪ್ಪಿಟ್ಟೂ,  ಇಡ್ಲಿ ಮಾಡ್ತೀವಲ್ಲ,  ಅದೇ ಥರ ಗೋಧಿ ರವೆ ಕೂಡಾ ಮಾರುಕಟ್ಟೆಯಲ್ಲಿ ಸಿಗುತ್ತದೆ,  ಇದನ್ನೇ ನಮ್ಮ ಕರಾವಳಿ ಕನ್ನಡಿಗರು ಸಜ್ಜಿಗೆ ಅನ್ನೂದು.  ಸಜ್ಜಿಗೆಯಲ್ಲೂ ದೊಡ್ಡ ಸಜ್ಜಿಗೆ,  ಬಾಂಬೇ ಸಜ್ಜಿಗೆ,  ಗೋಧಿನುಚ್ಚು ಅಥವಾ ಗೋಧಿಕಡಿ ಹೀಗೆಲ್ಲ ವೈವಿಧ್ಯಗಳಿವೆ.   ಈಗ ನಾವು ಮಧ್ಯಮ ಗಾತ್ರದ ಸಜ್ಜಿಗೆಯನ್ನು ಆಯ್ದುಕೊಂಡಿದ್ದೇವೆ.

ಈ ಇಡ್ಲಿಗೆ ಏನೇನು ಬೇಕು ?
ಒಂದು ಕುಡ್ತೆ ಉದ್ದು,  
ಎರಡೂವರೆ ಕುಡ್ತೆ ಸಜ್ಜಿಗೆ.

" ಕುಡ್ತೆ ಅಂದ್ರೇನ್ರೀ...?"
ಕುಡ್ತೆ ಅಂದ್ರೆ ಒಂದು ಅಳತೆಯ ಪ್ರಮಾಣ,  ಪಾವು,  ಸೇರು, ಕಳಸಿಗೆ, ಮುಡಿ...  ಈ ಥರ ಕುಡ್ತೆಯ ಅಳತೆ ಪುಟ್ಟ ಗಾತ್ರದ ಒಂದು ಲೋಟ ಅಂತಿಟ್ಕೊಳ್ಳಿ.  ಮಾಮೂಲಿಯಾಗಿ ಒಂದು ಕಪ್ಪು ಸಜ್ಜಿಗೆ,  ಇನ್ನೊಂದು ಕಪ್ಪು ಉದ್ದೂ ಅಂತ ಬರೆಯೋ ಬದಲು ಅಚ್ಚಗನ್ನಡದಲ್ಲಿ ಬರೆದಿದ್ದೇನೆ ಅಷ್ಟೇ.

ಆಯ್ತಾ,  ಈಗ ಉದ್ದು ನೆನೆ ಹಾಕಿಟ್ಟಿರಿ.   ಅರ್ಧ ಘಂಟೆ ಬಿಟ್ಟು ತೊಳೆದು ಅರೆಯಿರಿ.  ಅರೆದ ಹಿಟ್ಟನ್ನು  ತಪಲೆಗೆ ವರ್ಗಾಯಿಸಿ.  ಸಜ್ಜಿಗೆಯನ್ನೂ ನೀರು ಕೂಡಿಸಿ, ( ಹುರಿಯುವ ಅಗತ್ಯವಿಲ್ಲ )  ಉದ್ದಿನ ಹಿಟ್ಟಿನೊಂದಿಗೆ ಬೆರೆಸುವುದು.  ರುಚಿಕಟ್ಟಲು ಉಪ್ಪುಹಾಕಿ ಮುಚ್ಚಿಟ್ಟು, ಹುದುಗು ಬರಲು ಎಂಟು ಘಂಟೆಗಳ ಕಾಲ ಬಿಡಬೇಕಾದ್ದು ಕಡ್ಡಾಯ.

 ಚೆನ್ನಾಗಿ ಹುದುಗಿದಂಥ ಹಿಟ್ಟು  ದೊರೆಯಿತೇ,  ಇಡ್ಲಿ ಪಾತ್ರೆ ಯಾ ಅಟ್ಟಿನಳಗೆ ಒಲೆಗೇರಲಿ.   ನೀರು ಕುದಿಯಲಿ,   ಒಂದೊಂದೇ ಸೌಟು ಹಿಟ್ಟನ್ನು ಇಡ್ಲಿ ಬಟ್ಟಲುಗಳೊಳಗೆ ತುಂಬಿಸಿ,  ಹತ್ತರಿಂದ ಹನ್ನೆರಡು ನಿಮಿಷಗಳ ಕಾಲ  ಬೇಯಿಸಿ,  ಬೇಗನೇ ಮಾಡಬಹುದಾದ ತಿನಿಸು ಇದಾಗಿದೆ.  ತೆಂಗಿನ ಚಟ್ಣಿಯೊಂದಿಗೆ ಸವಿಯಿರಿ.


ಸಜ್ಜಿಗೆ ಇಡ್ಲಿಗೆ ಸೂಕ್ತವಾದ ಚಟ್ಣಿ ಯಾವುದು?
ಚಟ್ಣಿಯಲ್ಲಿ ನೀರುಳ್ಳಿ,  ಬೆಳ್ಳುಳ್ಳಿಗಳ ಬಳಕೆ ಸಾಮಾನ್ಯ.   ಆದರೆ ವ್ರತ ಪೂಜಾದಿಗಳ ಎಡೆಯಲ್ಲಿ ನೀರುಳ್ಳಿ,  ಬೆಳ್ಳುಳ್ಳಿಗಳನ್ನು ಯಾವುದೇ ಅಡುಗೆಯಲ್ಲಿ  ಬಳಸುವಂತಿಲ್ಲ.  ಸಾಂಬಾರ್ ಮಾಡುವುದಿದ್ದರೂ ನೀರುಳ್ಳಿ ಯಾ ಬೆಳ್ಳುಳ್ಳಿ ಹಾಕುವಂತಿಲ್ಲ.

ಶುಂಠಿ,  ಮಾವಿನಕಾೖ ಯಾ ಮಾವಿನಶುಂಠಿ,  ಹಸಿಮೆಣಸು ಯಾ ಒಣಮೆಣಸಿನೊಂದಿಗೆ ತೆಂಗಿನತುರಿ ಅರೆದು ತಯಾರಿಸಿದ ಚಟ್ಣಿ ಶ್ರೇಷ್ಠ.  ಅರೆಯುವಾಗ ಕೊತ್ತಂಬ್ರಿ ಸೊಪ್ಪು ಧಾರಾಳವಾಗಿ ಹಾಕಿದಲ್ಲಿ ಚಟ್ಣಿಯ ರುಚಿ ಹಾಗೂ ಪರಿಮಳ ಇಮ್ಮಡಿಸುವುದು,  ಕೊನೆಯದಾಗಿ ಒಗ್ಗರಣೆ ಮರೆಯುವಂತಿಲ್ಲ,  ಕರಿಬೇವು ಬಿಡುವಂತಿಲ್ಲ. 
ಟಿಪ್ಪಣಿ:  ಸದಭಿರುಚಿಯ ಮಾಸಪತ್ರಿಕೆ  'ಉತ್ಥಾನ'ದ ಆಗಸ್ಟ್ , 2015 ರ ಸಂಚಿಕೆಯಲ್ಲಿ ಪ್ರಕಟಿತ.