Pages

Ads 468x60px

Friday, 31 August 2012

ಬೆಂಡೆಯ ಸರಸ , ಕಾಯಿರಸ


ಫೋಟೋ ಕೃಪೆ : ಶಂಕರನಾರಾಯಣ ಭಟ್


ಮಳೆಗಾಲದ ಅಂಗಳ ತರಕಾರೀ ಬೇಸಾಯಕ್ಕೆ ಮೀಸಲು . ಇದು ನಮ್ಮ ಕೃಷಿಕರ ಸಾಮಾನ್ಯ ಪದ್ಧತಿ . ಅದರಲ್ಲಿ ಪ್ರಮುಖವಾದದ್ದು ಬೆಂಡೆ . ಇದನ್ನು ವರ್ಷಪೂರ್ತಿ ಬೆಳೆಯಬಹುದಾಗಿದ್ದರೂ ಮಳೆಗಾಲದ ಬೆಳೆಗೆ ಪ್ರಾಮುಖ್ಯತೆ . ಆಗ ನೀರು ಹಾಕಬೇಕಾಗಿಲ್ಲ . ಇನ್ನಿತರ ಕೃಷಿ ಚಟುವಟಿಕೆಗಳೂ ಸ್ಥಗಿತವಾಗಿರುತ್ತವೆ . ಹಿಂದಿನ ವರ್ಷದ ಬೆಳೆಯಲ್ಲಿ ತೆಗೆದಿರಿಸಿದ ಬೀಜಗಳನ್ನು ಮಣ್ಣಿನಲ್ಲಿ ಹದವಾಗಿ ಮಿಶ್ರಗೊಳಿಸಿ , ಮೇಲಿನಿಂದ ತರಗೆಲೆ , ಕಸಕಡ್ಡಿ , ಅಡಿಕೆಯ ಕೊಳೆತ ಸೋಗೆ ಇತ್ಯಾದಿಗಳನ್ನು ಮುಚ್ಚಿ ನಾಟಿ ಸಿದ್ಧತೆ ಮಾಡಲು ಸುಲಭ . ಬಿತ್ತಿದ ನಾಲ್ಕೇ ದಿನಗಳಲ್ಲಿ ಮೊಳಕೆ ಬರುವ ಸಸಿಗಳು ಬಹು ಶೀಘ್ರವಾಗಿ ಬೆಳೆಯುತ್ತವೆ . ಹಸಿರೆಲೆ ಗೊಬ್ಬರ , ಬೂದಿ ಅಥವಾ ಸುಡುಮಣ್ಣು ಹಾಕಿ ಮೇಲಿನಿಂದ ಮಣ್ಣು ಮುಚ್ಚಿದರೆ ಮುಗಿಯಿತು , ಗಿಡವು ತಾನೇ ತಾನಾಗಿ ಸೊಕ್ಕಿ ಬೆಳೆಯುತ್ತದೆ . ವಾರಕ್ಕೊಮ್ಮೆ ಸೆಗಣಿ ನೀರು ಹಾಕುತ್ತಿದ್ದರೆ ಇನ್ನೂ ಉತ್ತಮ . ಇಷ್ಟೆಲ್ಲಾ ಕೆಲಸ ಮಾಡಿದಿರೋ , ಗಣೇಶನ ಹಬ್ಬ ಬರುವಾಗ , ಬೆಂಡೆಕಾಯಿ ಅಡುಗೆಮನೆಯಲ್ಲಿ ದರ್ಬಾರು ಪ್ರಾರಂಭಿಸುತ್ತದೆ .

ಪಲ್ಯ , ಸಾರು , ಸಾಂಬಾರು , ಬೋಳುಹುಳಿ , ಮಜ್ಜಿಗೆಹುಳಿ , ಇನ್ನೂ ಏನೇನೋ ಹೊಸ ಹೊಸ ರುಚಿಗಳನ್ನು ಕಂಡುಹಿಡಿದಿದ್ದಾರೆಂದು ಲೆಕ್ಕವಿಲ್ಲ . ಎಲ್ಲದಕ್ಕೂ ಸೈ ಅನ್ನುತ್ತದೆ ಈ lady's fingers . ಎಲ್ಲ ಅಡುಗೆ ವೈವಿಧ್ಯಗಳಲ್ಲಿ ನನಗ ಬಹಳ ಇಷ್ಟವಾಗಿರುವುದು ಕಾಯಿರಸ . ಇದನ್ನು ಮಾಡಲು ಹೆಚ್ಚಿನ ಶ್ರಮವಿಲ್ಲ . ನನ್ನಜ್ಜಿ ಬಹಳ ಚೆನ್ನಾಗಿ ಮಾಡ್ತಿದ್ರು , ಯಾಕಂದ್ರೆ ನಮ್ಮಜ್ಜನಿಗೆ ಬೆಂಡೆಕಾಯಿ ರಸ ತುಂಬಾ ಇಷ್ಟವಾಗಿತ್ತು .

ಹೀಗೆ ಮಾಡಿ :
ಧಾರಾಳವಾಗಿ ಬೆಂಡೆ ಹೋಳು ಮಾಡಿ ಇಡಿ .
ಒಂದು ತೆಂಗಿನಕಾಯಿ ಡಬಡಬನೆ ಒಡೆದು ತುರಿ ಮಾಡಿ ಇಡಿ .
ನಾಲ್ಕು ಒಣ ಮೆಣಸು , ಒಂದು ದೊಡ್ಡ ಚಮಚ ಉದ್ದಿನಬೇಳೆ ಘಂ ಎಂದು ಹುರಿದು ಕಾಯಿತುರಿಯೊಂದಿಗೆ ರುಬ್ಬಿ ಇಡಿ .
ಉಪ್ಪು , ಹುಳಿ , ಬೆಲ್ಲ ಹಾಕಿ ನೀರು ಕುದಿಯಲಿಡಿ .
ಹ್ಞಾ , ನೆನಪಿಡಿ , ಕುದಿಯುತ್ತಿರುವಾಗಲೇ ಬೆಂಡೆ ಹೋಳುಗಳನ್ನು ಹಾಕಿ , ಇಲ್ಲಾಂದ್ರೆ ಲೋಳೆ ಲೋಳೆಯಾದೀತು .
ಬಹು ಬೇಗನೆ ಬೇಯುವ ತರಕಾರಿ , ತೊಗರೀಬೇಳೆ ಹಾಕಬೇಕಾಗಿಲ್ಲ .
ಬೆಂದ ನಂತರ ರುಬ್ಬಿದ ಮಸಾಲೆ ಹಾಕಿ ಕುದಿಸಿ .
ಕುದಿ ಬಂದೊಡನೆ ಕೆಳಗಿಳಿಸಿ .
ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಕೊಡಿ , ಕಾಯಿರಸ ರೆಡಿ .

ಇಷ್ಟೆಲ್ಲಾ ಬೆಂಡೆ ಬಗ್ಗೆ ಹೇಳಿ ಆಯ್ತು . ಇದು ಆಫ್ರಿಕಾ ಮೂಲದಿಂದ ಬಂದಿದೆಯಂತೆ . ಸಸ್ಯಶಾಸ್ತ್ರೀಯವಾಗಿ Abelmoschus esculentus ಹೆಸರನ್ನು ಪಡೆದಿದೆ .
ಅತ್ಯಧಿಕ ನಾರಿನಂಶ ಹೊಂದಿರುವ ತರಕಾರಿ . ಇದೇ ಇದರ ವಿಶೇಷತೆ . ವಯಸ್ಸಾದವರು , ಮಲಬದ್ಧತೆಯ ಖಾಯಿಲೆಯಿಂದ ಬಳಲುತ್ತಿರುವವರು ದಿನಾ ತಿನ್ನುವುದು ಉತ್ತಮ . ವ್ಯದ್ಯರ ಬಳಿ ಹೋಗಬೇಕಾಗಿಲ್ಲ , ಮಾತ್ರೆ ನುಂಗುವ ಅಗತ್ಯವಿಲ್ಲ .
ತಂಪು ತರಕಾರಿ , ಹಸಿಯಾಗಿಯೇ ತಿನ್ನುವವರಿದ್ದಾರೆ .
ಉತ್ತಮ ಹೇರ್ ಕಂಡೀಶನರ್ , ತಲೆಸ್ನಾನ ಮಾಡುವಾಗ ಲೋಳೆ ಬರುವ ಸೊಪ್ಪುಗಳನ್ನು ಬಳಸುವ ಪದ್ಧತಿ ನಮ್ಮಲ್ಲಿ ಹಿಂದಿನಿಂದಲೇ ಇದೆ . ಅವೆಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಇರುವವರಿಗೆ ಮಾತ್ರ ಲಭ್ಯ . ಬೆಂಡೆಕಾಯಿಗಳನ್ನು ಚೆನ್ನಾಗಿ ಹಿಸುಕಿ ತಣ್ಣೀರಿನಲ್ಲಿ ಹಾಕಿ ಲೋಳೆ ತಯಾರಿಸಿ , ತಲೆಸ್ನಾನದ ನೀರಾಗಿ ಉಪಯೋಗಿಸಿ .
ವಿಟಾಮಿನ್ ಎ , ಬಿ ಕಾಂಪ್ಲೆಕ್ಸ್ ಗಳ ಗಣಿ . ಬೀಜಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ .
ಮಹಿಳೆಯರಿಗೆ ಋತು ಬಂಧದ ವಯಸ್ಸಿನಲ್ಲಿ , 45 ವರ್ಷ ದಾಟಿದವರಿಗೆ ನಿಯಮಿತವಾಗಿ ತಿನ್ನುವುದು ಉತ್ತಮ . ಅಧಿಕ ರಕ್ತಸ್ರಾವವನ್ನು ನಿಲ್ಲಿಸುವುದು , ಆಂತರಿಕ ಖಿನ್ನತೆಯನ್ನು ಹೋಗಲಾಡಿಸುವುದು .
2 ಬೆಂಡೆಕಾಯಿಗಳನ್ನು ತೊಟ್ಟು ಹಾಗೂ ತುದಿ ಕತ್ತರಿಸಿ , ನಡುವಿನಲ್ಲೂ ಕೊಂಚ ಸೀಳಿ , ಒಂದು ಲೋಟ ನೀರಿನಲ್ಲಿ ಹಾಕಿ , ರಾತ್ರಿ ಬೆಳಗಾಗುವವರೆಗೆ ಮುಚ್ಚಿಡಿ .ಮುಂಜಾನೆ ಲೋಟದೊಳಗಿನ ಬೆಂಡೆಕಾಯಿಗಳನ್ನು ತೆಗೆದಿರಿಸಿ ಆ ತಣ್ಣನೆಯ ನೀರನ್ನು ಕುಡಿಯಿರಿ . ಪ್ರತಿದಿನವೂ ಹೀಗೇ ಮಾಡುತ್ತಾ ಬನ್ನಿ . ಮಧುಮೇಹಿಗಳು " ಎಲ್ಹೊಯ್ತು ನನ್ನ ರಕ್ತದಲ್ಲಿನ ಸಕ್ಕರೆ " ಎಂದು ಚಕಿತಚಿತ್ತರಾಗದಿದ್ದರೆ ಮತ್ತೇನು ಕಮ್ಮಿ !ಮನುಕುಲದ ಒಳಿತಿಗಾಗಿ ಶ್ರಮಿಸುವ ಜೀವರಾಶಿಗಳಲ್ಲಿ ಒಂದಾದ ಬೆಂಡೆಗೂ ಕಾಯಿಲೆ ಕಸಾಲೆಗಳು ಬರುವುದಿದೆ . ಅಂಥಹ ಸಂದರ್ಭಗಳಲ್ಲಿ ಕೀಟನಾಶಕ ಸಿಂಪಡಿಸಿ ವಾತಾವರಣವನ್ನೇ ಕಲುಷಿತಗೊಳಿಸುವುದು ಸಲ್ಲದು . " ಬಿತ್ತಿದ ಬೆಂಡೆ ಮೊಳಕೆ ಬಂದೇ ಇಲ್ಲ , ಏನು ಮಾಡೋಣ " ಅಂತೀರಾ , ಅಡುಗೆಮನೆ ಡಬ್ಬದ ಅರಸಿನಹುಡಿ ಹೊರ ತನ್ನಿ . ಬೀಜ ಬಿತ್ತುವಾಗಲೇ ಮಣ್ಣಿನಲ್ಲಿ ಅರಸಿನಹುಡಿಯನ್ನು ಪದರವಾಗಿ ಹರಡಬೇಕು . ಆಗ ಇರುವೆಗಳು ಸಾಲಾಗಿ ಬಂದು ಬೀಜಗಳನ್ನು ಹೊತ್ತೊಯ್ಯುವುದನ್ನು ತಪ್ಪಿಸಬಹುದು . ಬೀಜಗಳನ್ನು ನೀರಿನಲ್ಲಿ ನೆನೆಸಿ , ಬಟ್ಟೆಯಲ್ಲಿ ಕಟ್ಟಿ , ಮೊಳಕೆ ಬರಿಸಿ ನಾಟಿ ಮಾಡುವುದು ಮತ್ತೊಂದು ವಿಧಾನ .

ಸಸಿಗಳು ದೊಡ್ಡದಾದಂತೆ ದಿನವೂ ತಪಾಸಣೆ ಮಾಡುತ್ತಿರಬೇಕು . ಕೀಟಗಳು ಹಾರಾಡುತ್ತಿವೆಯೇ ಎಂದು ಪರೀಕ್ಷಿಸಿ ನೋಡಿ , ಸಂಜೆಯ ಹೊತ್ತು ಬೂದಿಯನ್ನು ಗಿಡಗಳ ಮೇಲಿನಿಂದ ಹಾರಿಸುವುದು ಒಂದು ಉಪಾಯ . ಕೈಯಲ್ಲಿ ಹಿಡಿಯಲು ಸಿಗುವ ಕೀಟ , ಮಿಡತೆಗಳನ್ನು ಹುಡುಕಿ ತೆಗೆದು ಕೊಳ್ಳಬೇಕಾಗುತ್ತದೆ . ಎರಡು ದಿನಕ್ಕೊಮ್ಮೆ ಕಹಿಬೇವಿನ ಎಣ್ಣೆ ಹಾಗೂ ಬೆಳ್ಳುಳ್ಳಿ ಜಜ್ಜಿದ ರಸವನ್ನು ನೀರಿನೊಂದಿಗೆ ಗಿಡಗಳ ಮೇಲೆ ಚಿಮುಕಿಸುವುದು ಉತ್ತಮ . ಕೀಟಗಳು ಗಿಡದ ಹತ್ತಿರ ಬರುವುದೇ ಇಲ್ಲ .
ಹಚ್ಚಹಸಿರಾಗಿರಬೇಕಾದ ಎಲೆಗಳು ಹಳದಿ ವರ್ಣಕ್ಕೆ ತಿರುಗುತ್ತವೆ , ಇದೂ ಒಂದು ರೋಗ . ಇದನ್ನು ಪಾಂಡು ರೋಗ ಎಂದು ಹೆಸರಿಸುತ್ತಾರೆ ನಮ್ಮ ಕೃಷಿಕರು . ಒಂದು ಜಾತಿಯ ವೈರಸ್ ಖಾಯಿಲೆ . ಇಂತಹ ಗಿಡಗಳನ್ನು ಕಡಿದು ಹಾಕುವುದು ಸೂಕ್ತ . ಧಾರಾಳವಾಗಿ ಹಸಿರೆಲೆ ಗೊಬ್ಬರ ಹಾಕುತ್ತಿದ್ದರೆ ಈ ರೋಗ ಬಾರದಂತೆ ತಡೆಯಬಹುದು . ಸೆಗಣಿ ನೀರು ಗಿಡಗಳ ಬುಡಕ್ಕೆ ಎರೆಯುತ್ತಾ ಇದ್ದರೆ ಗಿಡಗಳು ಆರೋಗ್ಯದಿಂದ ಕಂಗೊಳಿಸುತ್ತವೆ . ಮನೆ ಉಪಯೋಗಕ್ಕಿಂತ ಹೆಚ್ಚು ಬೆಳೆಸುವ ಸಾಮರ್ಥ್ಯ ನಿಮ್ಮಲ್ಲಿದೆಯಾದರೆ ಮಾರಾಟ ಮಾಡಿಯೂ ಕೈತುಂಬಾ ಕಾಸು ಗಳಿಸಬಹುದು . ತರಹೇವಾರಿ ಜಾತಿಗಳಿದ್ದರೂ ಊರ ಬೆಂಡೆಗೆ ಒಳ್ಳೆಯ ಬೇಡಿಕೆಯಿದೆ .ಟಿಪ್ಪಣಿ: ದಿನಾಂಕ 13, ಆಗಸ್ಟ್ 2013 ರಂದು ವಿಜಯಕರ್ನಾಟಕ ಕನ್ನಡ ದಿನಪತ್ರಿಕೆಯ ' ಬ್ಲಾಗಿಲು ' ಅಂಕಣದಲ್ಲಿ ಬಂದಿರುವಂತಹ ಮಿಂಚುಬ್ಲಾಗ್ ಬಗೆಗಿನ ಒಂದು ಇಣುಕುನೋಟ ಇಲ್ಲಿದೆ.


Saturday, 25 August 2012

ದೀವಿ ಹಲಸು , ಬಲು ಸೊಗಸುಮಳೆಗಾಲ ಆರಂಭವಾದೊಡನೆ ಮನೆಯಂಗಳ ತರಕಾರೀ ಬೇಸಾಯಕ್ಕೆ ಮೀಸಲು. ಅಂಗಳದ ಅಡಿಕೆಯೆಲ್ಲ ಅಟ್ಟ ಸೇರಿದ ಮೇಲೆ, ತೋಟದ ಕೃಷಿ ಚಟುವಟಿಕೆಗಳು ಬಹುತೇಕ ಸ್ಥಗಿತ. ಒಂದು ಹದ ಮಳೆ ಬಂದು ಬಿದ್ದರೆ ಸಾಕು, ದಾಸ್ತಾನು ಕೊಠಡಿಯಿಂದ ತರಕಾರಿ ಬೀಜಗಳು ಹೊರಗೆ ಬರುತ್ತವೆ, ಮಣ್ಣಿನೊಂದಿಗೆ ಬೆರೆತು, ಮೊಳೆತು, ಬೆಂಡೆಕಾಯಿ, ಪಡುವಲ, ದಾರಲೆ, ಅಲಸಂದೆ ಎಲ್ಲವೂ " ನಾನಿದ್ದೇನೆ " ಎಂದು ಮನೆಯೊಡತಿಯನ್ನು ಕೈ ಬೀಸಿ ಕರೆಯುತ್ತವೆ. ಆದರೂ ಅದೇ ಕಾಲಕ್ಕೆ ಸಿದ್ದವಾಗುವ ಇನ್ನೊಂದು ತಾಜಾ ತರಕಾರಿ ಇದೆ. ಅದೇ ದೇವಿ ಹಲಸು. ಹೆಮ್ಮೆಯಿಂದ ಬೀಗುತ್ತ ಮರದಿಂದ ಇಳಿದು ಬರುವಾಗ ಯಾವ ಗೃಹಿಣಿಯಾದರೂ ಮೊದಲ ಆದ್ಯತೆ ನೀಡುವುದು ಈ ದೀವಿ ಹಲಸಿಗೆ . " ಯಾಕೆ ಅಂತೀರಾ, " ದೀವಿ ಹಲಸಿನ ಖಾದ್ಯಗಳ ಪಟ್ಟಿ ಬಹಳ ದೊಡ್ಡದಿದೆ.

ಅಷ್ಟಕ್ಕೂ ಇದು ದಕ್ಷಿಣ ಕನ್ನಡದ ಕರಾವಳಿಗರಿಗೆ ಬಲು ಅಚ್ಚುಮೆಚ್ಚಿನದು. ಶ್ರಾವಣ ಮಾಸ ಬಂದೊಡನೆ ಹಬ್ಬಗಳ ಸಾಲು ಸಾಲು. ಅದೇ ಸಮಯಕ್ಕೆ ಇದೂ ಮಾರುಕಟ್ಟೆಗೆ ಬರುತ್ತದೆ. ನಾನು ಚಿಕ್ಕವಳಿದ್ದಾಗಲೇ ಗಮನಿಸಿದ್ದೇನೆ, ನನ್ನಪ್ಪ ತೋಟದ ಒಂದು ದೀವಿಹಲಸನ್ನೂ ವ್ಯರ್ಥ ಮಾಡುತ್ತಿರಲಿಲ್ಲ. ಎಲ್ಲವನ್ನೂ ಬಲಿತ ಹಾಗೆ ಕೊಯ್ಲು ಮಾಡಿಸಿ ಪಕ್ಕದ ಮನೆಯ ಮಲ್ಯರ ತರಕಾರಿ ಅಂಗಡಿಗೆ ಕಳಿಸುತ್ತಿದ್ದರು. ಆ ಕಾಲದಲ್ಲೇ ಅದಕ್ಕೆ ಒಳ್ಳೆಯ ಕ್ರಯ ಸಿಗುತ್ತಿತ್ತು. ಊರಿಂದ ದೀವಿಹಲಸು ಗೋಣಿಗಳಲ್ಲಿ ಬಂದೊಡನೆ ನನ್ನಮ್ಮ ಮನೆ ಖರ್ಚಿಗೆ ತೆಗೆದಿರಿಸುತ್ತಿದ್ದಳು. ಊಟದ ಹೊತ್ತಿಗೆ ಹತ್ತರಿಂದ ಹದಿನೈದು ಮಂದಿಯಾದರೂ ಇರುತ್ತಿದ್ದರು. ಎರಡು ದೀವಿಹಲಸು ಇದ್ದರೆ ಸಾಕು, ಅಷ್ಟು ಜನಕ್ಕೂ ಭೂರಿ ಭೋಜನ ! ಮದುವೆ, ಮುಂಜಿ ಶುಭ ಸಮಾರಂಭಗಳಲ್ಲಿ ಇದರ ಸಾಂಬಾರಿಗೆ ಪ್ರಾಶಸ್ತ್ಯ. ಇದು ನಮಗೆ ಎಷ್ಟು ಒಗ್ಗಿ ಹೋಗಿದೆಯೆಂದರೆ ಇರುವವರು ಆಪ್ತರಿಗೆ ಹಂಚುವುದರಲ್ಲಿ ಆನಂದಿಸುವಷ್ಟು.

ಮೋರೆಸಿ ಕುಟುಂಬಕ್ಕೆ ಸೇರಿದ ದೀವಿ ಹಲಸಿನ ವೈಜ್ಞಾನಿಕ ಹೆಸರು ಆರ್ಟೋಕಾರ್ಪಸ್ ಇನ್ಸೈಸ್. ಹಲಸಿನ ಮರದ ವರ್ಗಕ್ಕೆ ಸೇರಿದೆ. ಆದರೆ ಗುಣಧರ್ಮದಲ್ಲಿ ವೈರುಧ್ಯಗಳಿವೆ. ದೀವಿಹಲಸಿನಲ್ಲಿ ಬೀಜಗಳಿಲ್ಲ, ಮೇಣವೂ ಕಡಿಮೆ ಎಂದೇ ಹೇಳಬೇಕು. ಬೇರಿನಿಂದ ಪುನರುತ್ಪಾದನೆ. ಎಲೆಗಳು ಅಲಂಕಾರಿಕ ಸೊಗಸನ್ನು ಹೊಂದಿವೆ. ಗಿಡ ನೆಟ್ಟು ಮೂರೇ ವರ್ಷದಲ್ಲಿ ಫಲ ಕೊಡಲು ಪ್ರಾರಂಭ. ಹೂ ಬಿಡಲು ಆರಂಭವಾದೊಡನೆ ಗೊಬ್ಬರ ಹಾಕಿ ನೀರುಣಿಸುತ್ತಿದ್ದಲ್ಲಿ ಭಾರೀ ಗಾತ್ರದ ಫಲಗಳನ್ನು ಪಡೆಯಬಹುದು. ಹಲಸಿನ ಮರದ ದಿಮ್ಮಿ ಬಹು ಬೆಲೆಯುಳ್ಳದ್ದು, ಸಾಗುವಾನಿ, ಬೀಟಿಗಳಂತೆ. ಆ ನಿಟ್ಟಿನಲ್ಲಿ ದೀವಿಹಲಸಿನ ಕಟ್ಟಿಗೆಯೂ ವ್ಯರ್ಥ.
ಕೆಸುವಿನೆಲೆ , ಹಲಸಿನ ಬೀಜ ಸೇರಿಸಿ ಮಾಡುವ ' ಜೀಗುಜ್ಜೆ ಬೆಂದಿ ' ಚೆನ್ನಾಗಿರುತ್ತದೆ. ತೊಗರಿಬೇಳೆ ಹಾಕಬೇಕಾಗಿಲ್ಲ. ತೆಂಗಿನಕಾಯಿಯೊಂದಿಗೆ ಖಾರಕ್ಕೆ ಬೇಕಷ್ಟು ಮೆಣಸು ಹುರಿದು, ಚೆನ್ನಾಗಿ ಅರೆದು, ಬೇಯಿಸಿಟ್ಟ ಮೇಲಿನ ಸಾಮಗ್ರಿ ಸೇರಿಸಿ, ರುಚಿಗೆ ಉಪ್ಪು, ಹುಳಿ, ಬೆಲ್ಲ ಹಾಕಿ, ಅವಶ್ಯವಿದ್ದಷ್ಟು ನೀರು ಎರೆದು ಕುದಿಸಿ, ಬೆಳ್ಳುಳ್ಳಿ ಒಗ್ಗರಣೆ ಕೊಡಿ.

ತುಸು ಎಳೆಯ ಕಾಯಿಗಳನ್ನು ಪಲ್ಯ ಮಾಡಿ.
ಕಡ್ಲೆ ಹಿಟ್ಟಿನಲ್ಲಿ ಮುಳುಗಿಸಿ ತಯಾರಿಸಿ ಪೋಡಿ.
ತೆಳ್ಳಗೆ ಹಚ್ಚಿ ಚಿಪ್ಸ್ ಮಾಡಿ ನೋಡಿ.
ಮಜ್ಜಿಗೆ ಹುಳಿಯನ್ನೂ ಮಾಡಿ.
ಇನ್ನೂ ಮುಗಿದಿಲ್ಲವೇ, ಹಪ್ಪಳ ತಯಾರಿಸಿ ಇಟ್ಟುಕೊಳ್ಳಿ. " ಚಳಿ ಚಳಿ " ಅನ್ನಿಸುವಾಗ ಕರಿದು ತಿನ್ನಿ. ಹಲಸಿನ ಹಪ್ಪಳದಂತೆ ಸೊಗಸಾಗಿರುತ್ತದೆ.


ಸಾಂಬಾರ್ ಹೀಗೆ ಮಾಡಿ ,

ಅವಶ್ಯವಿದ್ದಷ್ಟು ತೊಗರಿಬೇಳೆ ಬೇಯಿಸಿಡಿ. ದೀವಿಹಲಸಿನ ದೊಡ್ಡ ಗಾತ್ರದ ತುಂಡುಗಳನ್ನು ಮಾಡಿಟ್ಟುಕೊಳ್ಳಿ. ಚೆನ್ನಾಗಿ ಬಲಿತ ಕಾಯಿ ಬಹು ಬೇಗನೆ ಬೇಯುತ್ತದೆ. ಚಿಕ್ಕ ತುಂಡುಗಳು ಕದಡಿ ಮುದ್ದೆಯಾಗುವ ಸಾಧ್ಯತೆ ಇದೆ. ಉಪ್ಪು, ಹುಳಿ ಹಾಕಿ. ತೆಂಗಿನತುರಿಯೊಂದಿಗೆ ಹುರಿದ ಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆ, ಉದ್ದಿನಬೇಳೆ, ಇಂಗು, ಒಂದು ಎಸಳು ಕರಿಬೇವು ಸೇರಿಸಿ ಅರೆಯಿರಿ. ಈ ತರಕಾರಿ ವಾತಕಾರಕವಾದ್ದರಿಂದ ಕೊತ್ತಂಬರಿ ಜೀರಿಗೆ ಹಾಗೂ ಇಂಗನ್ನು ಸ್ವಲ್ಪ ಹೆಚ್ಚೇ ಹಾಕುವುದು ಉತ್ತಮ. ಅರೆದ ಮಸಾಲೆಗೆ ಬೇಯಿಸಿಟ್ಟ ತರಕಾರಿ, ತೊಗರಿಬೇಳೆ ಸೇರಿಸಿ, ಬೇಕಿದ್ದಲ್ಲಿ ರುಚಿಗೆ ಬೆಲ್ಲ ಸೇರಿಸಿ, ಅವಶ್ಯವಿದ್ದಷ್ಟು ನೀರು ಹಾಕಿ ಕುದಿಸಿ, ತೆಂಗಿನೆಣ್ಣೆಯಲ್ಲಿ ಬೇವಿನಸೊಪ್ಪಿನ ಒಗ್ಗರಣೆ ಕೊಡಿ.

ದೊಡ್ಡ ಗಾತ್ರದ ತುಂಡುಗಳಿಗೆ ಎರಡೂ ಬದಿ ಎಣ್ಣೆ ಸವರಿ, ಉಪ್ಪು ಹಾಗೂ ಮಸಾಲೆಹುಡಿ ಉದುರಿಸಿ ಕಾವಲಿಯ ಮೇಲಿಟ್ಟು ರೋಸ್ಟ್ ಮಾಡಿ, ಬ್ರೆಡ್ ಥರ ತಿನ್ನಬಹುದು. ಹಾಗಾಗಿಯೇ ಇದು ನಮ್ಮೂರಿನ ಆಡು ಭಾಷೆಯ 'ಜೀಗುಜ್ಜೆ ' , ಇಂಗ್ಲಿಷ್ ನಲ್ಲಿ ಬ್ರೆಡ್ ಫ್ರುಟ್ ಎಂದು ಖ್ಯಾತಿ ಪಡೆದಿದೆ.


ಟಿಪ್ಪಣಿ : ಈ ಬರಹವನ್ನು ದಿನಾಂಕ 17, ಮೇ, 2013ರಂದು ಪುನಃ ಪರಿಶೀಲಿಸಿ, ಪೂರಕ ಮಾಹಿತಿಗಳನ್ನು ಈ ಕೆಳಗೆ ಬರೆದಿದ್ದೇನೆ.

ಒಂದು ಸ್ಪಷ್ಟೀಕರಣ :

ಕಳೆದ ವರ್ಷ ಬರೆದ ಈ ಬರಹಕ್ಕೆ ಬಹಳಷ್ಟು ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದಿವೆ. ಅದರಲ್ಲಿ ಆಶ್ಚರ್ಯ ಮೂಡಿಸಿದ ಒಂದು ಪ್ರತಿಕ್ರಿಯೆಯನ್ನು ಇಲ್ಲಿ ಹೇಳ ಬಯಸುತ್ತೇನೆ. ದೀವಿಹಲಸಿನ ಸ್ವೀಟ್ಸ್, ಅಂದರೆ ಪಾಯಸ ವಗೈರೆ ಮಾಡುವ ವಿಧಾನವನ್ನು ತಿಳಿಸಿಕೊಡಿ - ಎಂಬುದಾಗಿತ್ತು.

ಜೀಗುಜ್ಜೆ ಚಿಪ್್ಸ ಫೋಟೋ ಒಂದನ್ನು ಫೇಸ್ ಬುಕ್ ಮಾಧ್ಯಮದಲ್ಲಿ ಪ್ರದರ್ಶಿಸಿದಾಗ, ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಯುವ ಪೀಳಿಗೆಯ ಮಂದಿ ಈ ತರಕಾರಿಯ ಬಗ್ಗೆ ಅದೆಷ್ಟು ಅಜ್ಞಾನಿಗಳೆಂಬುದು ಅರಿವಿಗೆ ಬಂತು. ಆಗ ಸಿದ್ಧವಾದದ್ದು ಈ ಬರಹ.

ನಾವೆಲ್ಲರೂ ಬಾಲ್ಯದಿಂದಲೇ ತಿನ್ನುತ್ತಾ ಬಂದಿರುವ ಈ ದೀವಿಹಲಸಿನ ಸಿಹಿ ಖಾದ್ಯಗಳನ್ನು ನಾನು ಇದುವರೆಗೂ ತಿಂದೇ ಇಲ್ಲ. ನನ್ನಮ್ಮ, ಅಜ್ಜಿಯಂದಿರೂ ಹುಳಿ, ಪಲ್ಯ, ಪೋಡಿ, ಚಿಪ್ಸ್, ಹಪ್ಪಳ ... ಇಂತಹ ವೆರೈಟೀ ಅಡುಗೆಗಳನ್ನು ಮಾತ್ರ ಮಾಡುತ್ತಿದ್ದರು, ಈಗಲೂ ಅಷ್ಟೇ. ಬ್ರೆಡ್ ಫ್ರುಟ್ ಎಂಬ ಈ ತರಕಾರಿ, ಫ್ರುಟ್ ಎಂದು ಹೆಸರಿಸಿಕೊಳ್ಳಲು ಎಳ್ಳಷ್ಟೂ ಯೋಗ್ಯವಲ್ಲ. ಹಣ್ಣಾದ ಜೀಗುಜ್ಜೆಯನ್ನು ಎಸೆಯುತ್ತಾರೆಯೇ ವಿನಃ ಯಾರೂ ತಿನ್ನುವುದಿಲ್ಲ. ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ದೀವಿಹಲಸು ಪಕ್ವವಾಗುವ ಮೊದಲೇ ಬಾಡಿ ಬೀಳುವುದಿದೆ, ಅದೂ ತಿನ್ನಲು ಯೋಗ್ಯವಲ್ಲ. ಸದಾಕಾಲ ನೀರು ಹರಿಯುತ್ತಿರುವ ಹಳ್ಳಗಳ ಬದಿ, ತೋಟದ ತಂಪು ವಾತಾವರಣ ಈ ತರಕಾರಿ ಬೆಳೆಗೆ ಅವಶ್ಯವಾಗಿದೆ.

Wednesday, 22 August 2012

ಲಹರಿಬೇಂದ್ರೆ ಹಾಡಿದ್ದರು ಅಂದು 
" ಇಳಿದು ಬಾ ತಾಯೆ ಇಳಿದು ಬಾ "   ಎಂದು 
ಆಗಿತ್ತು ಸಿನಿಮಾ ಹಾಡು ಈ ಕವನ 
ಕಾವ್ಯಪ್ರಿಯರಿಗೆ ತಂದಿತ್ತು ಹೊಸ ಸಂವೇದನ 
 
ಹರಿಯುತ್ತಿದ್ದಾಳೆ ,
ಮೆರೆಯುತ್ತಿದ್ದಾಳೆ ,
ಎಂದೆಂದಿಗೂ ಬತ್ತಲಾರದ ಕಾವ್ಯಗಂಗಾ 
ಶಿವ ಸೌಂದರ್ಯ ಲಹರೀ ಪಾವನಗಂಗಾ 

Tuesday, 21 August 2012

ಶುಭಾಶಯ ಪತ್ರ


ಟಿಪ್ಪಣಿ: ದಿನಾಂಕ 11, ಜುಲೈ 2013 ರಂದು ಸೇರಿಸಿದ್ದು.

ಸ್ನೇಹಿತರ ಹುಟ್ಟು ಹಬ್ಬಗಳಿಗೆ ಶುಭಾಶಯ ಪತ್ರಗಳನ್ನು ಬರೆದು ಕಳುಹಿಸುವ ಕ್ರಮ ಹಿಂದಿನ ಕಾಲದಿಂದಲೇ ಇದೆ. ಆಕರ್ಷಕ ಗ್ರೀಟಿಂಗ್ಸ್ ಕಾರ್ಡುಗಳನ್ನು ಖರೀದಿಸಿ, ಸ್ವತಃ ರಚಿಸಿಯೂ ರವಾನಿಸಬಹುದು. ಇದು ಅಂತರ್ಜಾಲದ ಯುಗ, photo apps ಗಳ ಸಹಾಯದಿಂದ ಶುಭಾಶಯ ಪತ್ರಗಳನ್ನು ಸೊಗಸಾಗಿ ನಿರ್ಮಿಸಬಹುದಾಗಿದೆ. ನನಗೆ ಇಷ್ಟವಾದ ಹೊಸ ಹೊಸ ಚಿತ್ರಗಳ ಸೇರ್ಪಡೆ ಇಲ್ಲಿ ಮಾಡುತ್ತಾ ಬಂದಿದ್ದೇನೆ, ಇಂದು ಮತ್ತೊಂದು ವಿನ್ಯಾಸ ಇಲ್ಲಿ ಬಂದಿದೆ.


ಟಿಪ್ಪಣಿ: ದಿನಾಂಕ 1, ಎಪ್ರಿಲ್ 2014 ರಂದು ಸೇರಿಸಿದ್ದು...
ಬಸಳೆಯ ಲಾಸ್ಯಚಪ್ಪರದ ಮನೆಯಿಲ್ಲ
ಗೊಬ್ಬರದ ಹಂಗಿಲ್ಲ
ನನ್ನ ಪಾಡಿಗೆ ನಾನಿರುವೆನಲ್ಲ
ಸಾಕೆನಗೆ ಬಾನ ಕರಿಮುಗಿಲ ಮಳೆ
ಅನ್ನುತಿರುವಳೆ ಈ ಬಸಳೆ

ಪಕ್ಕದ ಮನೆಯಂಗಳ ಏರಿ
ಒಂದಾಳೆತ್ತರದ ಗೋಡೆಯ ಹಾರಿ
ಇಣುಕುತಿರುವಳೀ ಬಸಳೇ
ಬರಲೇ ಇನ್ನೂ ಮುಂದೆ ಬರಲೇ
ಅನುಮತಿ ಕೇಳುತಿರುವಳೇ

ಬೇಕಿದ್ದರೆ ಕತ್ತರಿಸಿಕೋ ನನ್ನ
ಕತ್ತರಿಸಿದಷ್ಟೂ ಚೆನ್ನ
ಒಂದು ಕುಡಿ ಎರಡಾಗಲು ಹಾದಿ
ಮಾಡಿ ಬಿಡು ಬಸಳೇ ಹುರುಳೀ - ಬಪ್ಪಂಗಾಯಿ ಬೆಂದಿ
ಕೊಟ್ಟು ಬಿಡು ವಗ್ಗರಣೇ ಬೆಳ್ಳುಳ್ಳೀ
     
ಟಿಪ್ಪಣಿ:  6/12/2015 ರಂದು ಮುಂದುವರಿದಿದೆ ಈ ಬಸಳೆಯ ಕವನ


ಬಸಳೆಯ ಬಿನ್ನಾಣ

ಇವತ್ತು ಏನು ಪದಾರ್ಥ
ಇದೆ ಕೈಯಲ್ಲಿ ಕತ್ತಿ
 ಚಪ್ಪರದ ಬಸಳೆ ಸಾಗುತಿದೆ ಅತ್ತಿತ್ತ
ಚಕಚಕನೆ ಕತ್ತರಿಯಾಟ
ಬೇಯಲು ಬೇಕು ಒಂದೂ ಗಂಟೆ
ತಿಳಿದಿದೆ ಏನೋ ಅಷ್ಟಿಷ್ಟು
ಅಂತೂ ನಾನೂ ಬಸಳೆ ಆರ್ಟಿಸ್ಟು
ಇದು ಯಾವ ಕಾವ್ಯ ಪ್ರಕಾರ
ಗೊತ್ತಿಲ್ಲರೀ
ಹಾಕಿರುವೆ ಚಿತ್ರಕ್ಕೆ ಪ್ರಾಕಾರ

Sunday, 19 August 2012

ಜಲಕನ್ನಿಕೆ


ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ಬಳಿಗೆ ತಿರುಗಲೇನು
ಇವಳು ಏತಕೇ ಹೀಗೆ ನೀರಿಗಿಳಿದಳೂ |

ಜಳಕ ಮಾಡಲಿಳಿದಳಂತೆ
ಜಲದ ಆಳ ತಿಳಿಯಲಂತೆ
ಮೆಲ್ಲ ಹೂವ ಕೊಯ್ಯಲಂತೆ
ಎಲ್ಲ ನಮ್ಮ ಊಹೆಯಂತೆ |

ಚಿತ್ರಪಟಗಳು ದೊರೆತುವಂತೆ
ಒಂದಕೊಂದು ಹೊಂದಿಕೊಂಡಂತೆ
ಬೆಸುಗೆ ಹಾಕಿದರೇನಂತೆ
super-impose ಕಲೆ ಆಯಿತಂತೆ |


ಟಿಪ್ಪಣಿ : ಈ ಕವನವನ್ನು ದಿನಾಂಕ 25, ಮಾರ್ಚ್, 2013ರಂದು ವಿಸ್ತರಿಸಿ ಬರೆಯಲಾಗಿದೆ.

ಅನಾವರಣ


ಹಸಿರು ವನಸಿರಿಯ ವಸುಂಧರೆ
ನಡುವೆ ಮೆರೆಯುತಿಹ ಈ ನೀರೆ
ವಾಹ್.... ಇದೇನಚ್ಚರಿ , ಅರಿಯಲಾರೆ
ಎಲ್ಲಿಂದ ಧರೆಗಿಳಿದು ಬಂದಿಹಳು ಈ ಅಪ್ಸರೆ
ಕಾವ್ಯಕನ್ನಿಕೆ
ಜಯದೇವನ ರಾಧಿಕೆ
ತಂದಿಹಳು " ಶುಭಹಾರೈಕೆ "
ಮತ್ತೆ ಬರುವಳು ಮುಂದಿನ ವರ್ಷಕೆ .....
ಟಿಪ್ಪಣಿ: ದಿನಾಂಕ 25, ಆಗಸ್ಟ್, 2013ರಂದು ಹೊಸತಾಗಿ ಸೇರಿಸಿದ್ದು.


ಬಂದಳು
ಚಿರಕನ್ನಿಕೆಯಿವಳು
ಶುಭ ಹಾರೈಕೆ ತಂದಿಹಳು


ಟಿಪ್ಪಣಿ:  ದಿನಾಂಕ,  30, ಜೂನ್,  2014ರಂದು ಸೇರಿಸಿದ್ದು.