Pages

Ads 468x60px

Saturday, 28 June 2014

ಅಡುಗೆಗೊಂದು ಕಳೆ
ಬಂದ ಮಳೆ
ಕೊಳೆಯ ತೊಳೆ
ಹಸಿರು ಹೊಳೆ
ಉಚಿತ ಬೆಳೆ
ಅಡುಗೆಗೊಂದು ಕಳೆ
ಬೇಸಿಗೆಯ ಬಿರು ಬಿಸಿಲು,  ಎಲ್ಲೆಲ್ಲೂ ತೀರದ ದಾಹ.   ಬಾಯಾರಿಕೆ ತಣಿಸಿಕೊಳ್ಳಿ ಎಂಬಂತೆ ಮಳೆ ಸುರಿದು ಹೋಯಿತು.   ಸುರಿದ ಮಳೆಯಿಂದ ನೆಲದಿಂದ ಮೇಲೆದ್ದ ಸಸ್ಯ ಸಂಕುಲ,  ಎಲ್ಲೋ ನೆಲದಡಿಯಲ್ಲಿ ಹುದುಗಿದ ಈ ಹಸಿರು ಮೇಲೆದ್ದು ಬರಲು ಒಂದು ಪುಟ್ಟ ಮಳೆ ಹನಿ ಸಾಕಾಯಿತು.   

ಬಾಲ್ಯದಿಂದಲೇ ಪರಿಚಿತ ಈ ಕಳೆಸಸ್ಯ.    ನಮ್ಮ ಬಾಲ್ಯದಲ್ಲಿ ಈವತ್ತಿನ ಟೀವಿ ಜಾಲ,   ಮೊಬೈಲ್,  ಇಂಟರ್ನೆಟ್ ಇತ್ಯಾದಿ ಇರಲಿಲ್ಲ ಕಣ್ರೀ,   ಶಾಲೆಯ ಆಟಪಾಟಗಳ ಜೊತೆಜೊತೆಗೆ ಗಿಡಗಳ ಒಡನಾಟದಲ್ಲೇ ಬೆಳೆದವರು ನಾವು.    ನಮ್ಮ ಮನೆಯಂಗಳಕ್ಕೆ ರಸ್ತೆಯ ದೊಡ್ಡ ಆಲದಮರ ನೆರಳು.    ಅಪ್ಪ ಮನೆಯಂಗಳದಲ್ಲಿ ಸಾಲಾಗಿ ಕ್ರೋಟನ್ ಗಿಡಗಳನ್ನು ನೆಡಿಸಿದ್ದರು.   ಅಮ್ಮನಿಗೆ ಬೇಕಾದ ಮಲ್ಲಿಗೆ,  ಸೇವಂತಿಗೆ,  ಗುಲಾಬಿಗಳು ಮರದ ನೆರಳಿನಿಂದಾಗಿ ಆಗ್ತಾನೇ ಇರಲಿಲ್ಲ.   ಆದರೂ ಮನೆಯಂಗಳ ಎಂದ ಮೇಲೆ ಪುಟ್ಟ ಗಾರ್ಡನ್ ಇರಲೇಬೇಕು.   ದಾಸವಾಳ,  ನಂದಿಬಟ್ಟಲು ಮಾತ್ರವಲ್ಲದೆ ಕ್ರೋಟನ್ ಗಿಡಗಳೂ ಹೂದೋಟಕ್ಕೆ ಭೂಷಣ.   ಕ್ರೋಟನ್ ಗಿಡಗಳಿಗೆ ಹೆಚ್ಚಿನ ಆರೈಕೆಯೇನೂ ಬೇಡ,   ಮಳೆಗಾಲದಲ್ಲಿ ಒಮ್ಮೆ ಸೊಪ್ಪು ಸವರಿ,  ಗೆಲ್ಲುಗಳನ್ನು ಕತ್ತರಿಸಿ ಬಿಡಬೇಕು.   ಎಲೆಗಳ ವಿನ್ಯಾಸವೂ,  ವರ್ಣಗಳೂ ಇದರ ಆಕರ್ಷಣೆ.   ಇದೇ ಥರ ಕ್ರೋಟನ್ ಅಂತ ಹೇಳಬಹುದಾದ ಒಂದು ಕಳೆ ಸಸ್ಯ ಇದು.

ಅದೇನೇ ಹೊಸ ವಿನ್ಯಾಸದ ವಸ್ತು ಕಣ್ಣೆದುರು ಬರಲಿ, ಬಾಂಬೇ ಎಂಬ ಅಡ್ಡ ನಾಮ ಇಡುವ ವಾಡಿಕೆ ನಮ್ಮದು.  ನೆಲಬಸಳೆಯನ್ನು ಬಾಂಬೇ ಬಸಳೆ ಅನ್ನುವುದಿದೆ.   ಚಿರೋಟಿ ರವೆಗೆ ಬಾಂಬೇ ಸಜ್ಜಿಗೆ ಅನ್ನುವವರು ನಾವು.   ಹಾಗೆ ಈ ಸೊಪ್ಪು ನಮ್ಮ ಬಾಯಿಯಲ್ಲಿ ಬೊಂಬಾಯಿ ಹರಿವೆ ಆಗಿತ್ತು.   ಕ್ರೋಟನ್ ಗಿಡಗಳಂತೆ ಬೇಕಾದ ವಿನ್ಯಾಸದಲ್ಲಿ ಕತ್ತರಿಸಿ ಹೂತೋಟಕ್ಕೆ ಹೊಸ ಕಳೆಯನ್ನೂ ನೀಡಬಲ್ಲ ಈ ಕಳೆಸಸ್ಯ ಕ್ರೋಟನ್ ಹರಿವೆಯೂ ಹೌದಾಗಿತ್ತು.   ಯಾವಾಗಲೂ ತೇವಾಂಶ ಇರುವಲ್ಲಿ ಹಸಿರುಹಸಿರಾಗಿ,  ಪ್ರಖರ ಬಿಸಿಲು ಬೀಳುವಲ್ಲಿ ಹಳದಿ ವರ್ಣದಲ್ಲಿ,   ನೀರೇನೂ ದೊರೆಯದ ಬಂಜರು ಜಾಗದಲ್ಲಿ ಮಾಸಲು ಕೆಂಪು ಬಣ್ಣ ತಳೆಯುವ ಈ ವಿಚಿತ್ರ ಸಸ್ಯ ರಂಗಿನ ಹರಿವೆಯೂ ಆಗಿತ್ತು.   ನನ್ನಮ್ಮ ಹಾಗೂ ಪಕ್ಕದ ಮನೆಯಾಕೆ ಇದರ ಎಳೆಯ ಕುಡಿಗಳನ್ನು ಅಡುಗೆಯಲ್ಲಿ ಬಳಸುತ್ತಿದ್ದುದನ್ನು ಬಾಲ್ಯದಿಂದಲೇ ನೋಡುತ್ತಾ ಬಂದಿದ್ದೇನೆ.

ಪಕ್ಕದಮನೆಯ ಶೋಭಾ ತರಹೇವಾರಿ ಗಿಡಗಳನ್ನು ನೆಡುವವಳು,  ಶೋಭಾ ಈ ಕಳೆಸಸ್ಯವನ್ನು ಅದೆಲ್ಲಿಂದಲೋ ಸಂಪಾದಿಸಿ ಮನೆಯಂಗಳದಲ್ಲಿ ಸಾಲು ಮಾಡಿ ನೆಟ್ಟು ಪೋಷಿಸಿದವಳು.    ಬೆಳೆದಂತೆಲ್ಲಾ ಆಗಾಗ ಕತ್ತರಿಯಾಡಿಸುತ್ತಿದ್ದಳು.   ಅವಳು ಕತ್ತರಿಯಾಡಿಸಿ ಚೆಲ್ಲಾಡಿದ ಎಲೆಗಳನ್ನು ಅವಳಮ್ಮ ಅಡುಗೆಮನೆಗೆ ಒಯ್ದಿರಬೇಕು,   ನನ್ನಮ್ಮನಿಗೂ ಶೋಭಾ ಅಮ್ಮನೂ ಏನೇನೋ ಅಡುಗೆ ಹೇಳ್ಕೊಡೋರು,  ಅಂತೂ ನಮ್ಮ ಮನೆಯೊಳಗೂ ಈ ಸೊಪ್ಪು ಬಂತು.    ಇದೆಲ್ಲ ಹಳೇ ವಿಷಯ.   ಈಗ ನಾವು ಪ್ರಸ್ತುತಕ್ಕೆ ಬರೋಣ.

ಬಾಲ್ಯದಲ್ಲಿ ಚಿರಪರಿಚಿತವಿದ್ದ ಈ ಸಸ್ಯವನ್ನು ನಾನು ಮತ್ತೆ ಕಂಡಿದ್ದಿಲ್ಲ.   ಮದುವೆಯಾದ ನಂತರ ಮರೆತೇ ಹೋಗಿತ್ತು.   ಇದು ಪುನಃ ನನ್ನೆದುರು ಪ್ರತ್ಯಕ್ಷವಾಯಿತು.   ತೋಟದಲ್ಲಿಯೂ ಅಲ್ಲ,  ಗೇರುಮರಗಳ ಆಸುಪಾಸಿನಲ್ಲಿಯೂ ಅಲ್ಲ,   ಗದ್ದೆಹುಣಿಯಲ್ಲಂತೂ ಅಲ್ಲವೇ ಅಲ್ಲ.   ಹೀಗೇ ಸುಮ್ಮನೆ ಸಂಜೆಯ ವೇಳೆ ನೆರೆಮನೆಯ ಪ್ರೇಮಕ್ಕನ ಮನೆಗೆ ಹೋಗಿದ್ದೆ.   ಏನೇನೋ ಲೊಟ್ಟೆಪಟ್ಟಾಂಗ ಆಯ್ತು,  ಹಿಂತಿರುಗಿ ಬರುವಾಗ ಗೇಟಿನ ಪಕ್ಕ ಸಾಲು ಮಾಡಿ ನೆಟ್ಟಿದ್ದ ಇದೇ ಕ್ರೋಟನ್ ಹರಿವೆ ಕಣ್ಣಿಗೆ ಬಿತ್ತು.

   " ಈ ಗಿಡ ಎಲ್ಲಿಂದ ಸಿಕ್ಕಿತೂ ?  ನಂಗೂ ಎರಡು ಕಡ್ಡಿ ಕೊಟ್ಟಿರು... ನೆಟ್ಟುಕೊಳ್ಳುತ್ತೇನೆ " 
" ಧಾರಾಳವಾಗಿ ನೆಟ್ಟುಕೊ..." ಅಂದಳು ಪ್ರೇಮಾ.

ಮನೆಗೆ ತಂದೆನಾ,   ಚೆನ್ನಪ್ಪನೂ ಈ ಕೋಲುಕಡ್ಡಿಗಳಂತಿದ್ದ ದಂಟುಗಳನ್ನು ಕಂಡು ಗೊಣಗಿದ   " ಇಂಥದ್ದೆಲ್ಲ ಯಾಕೆ ತರೂದು,  ನಾಳೆ ತೋಟದಲ್ಲಿ ಇರ್ತದೆ "   ಚೆನ್ನಪ್ಪನ ಭವಿಷ್ಯವಾಣಿ ನಿಜವಾಯಿತು.

ಸಸ್ಯವಿಜ್ಞಾನದಲ್ಲಿ Amaranthaceae ಕುಟುಂಬ ಬಹಳ ದೊಡ್ಡದು.   ಅದರಲ್ಲೂ 180ಕ್ಕೂ ಮೇಲ್ಪಟ್ಟು ವರ್ಗೀಕರಣವೂ ಇದೆ.   ನಾವು ಸಾಮಾನ್ಯವಾಗಿ ಬಳಸುವ ಹರಿವೆಯನ್ನೇ ನೂರಾರು ಬಣ್ಣದಲ್ಲಿ ಕಾಣಬಹುದು.   2,500ಕ್ಕೂ ಹೆಚ್ಚು ಜಾತಿಗಳಿವೆಯಂತೆ.  ಹೂತೋಟದಲ್ಲಿ ಅಲಂಕಾರಿಕ ಸಸ್ಯವಾಗಿ ಬೆಳೆಸಲ್ಪಡುವ ಹರಿವೆ ಜಾತಿಯ ಕಳೆಸಸ್ಯಗಳು ಒಟ್ಟಾರೆಯಾಗಿ Wild Spinach ಎಂದು ಕರೆಯಲ್ಪಡುತ್ತವೆ ಹಾಗೂ ತಿನ್ನಲು ಯೋಗ್ಯವಾಗಿವೆ,  ರುಚಿಕರವೂ ಆಗಿರುತ್ತವೆ ಎಂದು ಗೂಗಲ್ ಹುಡುಕಾಟದಲ್ಲಿ ತಿಳಿಯಿತು.   

ಇದರ ಎಲೆ ಹಾಗೂ ದಂಟು ಕೂಡುವಲ್ಲಿ ಪುಟ್ಟ ಬಿಳಿ ಹೂಗಳೂ ಅರಳುತ್ತವೆ.   ಬಹುತೇಕ ಇದು ಹೊನಗೊನೆ ಸೊಪ್ಪು ( Alternanthera  sessilis ) ಸಮೀಪವರ್ತಿ ಸಸ್ಯ ಆಗಿರಲೂ ಬಹುದು
.
ಮಧು ಬೆಂಗಳೂರಿನಿಂದ ಬಂದಿದ್ದ,  ಅವನ ವಿಮರ್ಶೆ ತಿಳಿಯಬೇಡವೇ,  ಇದೇ ಸೊಪ್ಪಿನ ಸಾಸಿವೆ ತಯಾರಾಯಿತು.

  " ತಿಂದು ನೋಡು,  ಹೇಗಿದೆ ?"
" ಆಹ,  ಏನು ರುಚಿ,   ಇಷ್ಟು ಒಳ್ಳೆಯ ಸೊಪ್ಪು ಬೆಂಗಳೂರಿನ ಪೇಟೆಯಲ್ಲಿ ಸಿಕ್ಕಲಿಕ್ಕಿಲ್ಲ..."

ಸುಮ್ಮನೇ ನನ್ನ ಸಂದೇಹ ಪರಿಹಾರಕ್ಕಾಗಿ ನಮ್ಮ ನೆರೆಯ ತರಕಾರೀ ಕೃಷಿ ನಿಪುಣನಾದ ಮಲೆಯಾಳಿಯನ್ನು ಮಾತಿಗೆಳೆದೆ. 
   "ಇದು ಹರಿವೆಯೇ ಅಕ್ಕ... "  ಅಂದ್ಬಿಟ್ಟು  " ಮಣ್ಣಿನ ಚಟ್ಟಿಯಲ್ಲಿ ನೆಟ್ರೆ ಚಂದ ಕಾಣ್ತದೆ "  ಎಂಬ ಸಲಹೆಯನ್ನೂ ಕೊಟ್ಟ ರವೀಂದ್ರನ್.

ಹೌದೂ,  ಈ ಕಳೆಸಸ್ಯಗಳನ್ನು ತಿನ್ನುವ ಅಗತ್ಯವಾದರೂ ಏನಿದೆ ?   ಕೇಳಿಯೇ ಕೇಳ್ತೀರಾ.  ಅದಕ್ಕೂ ಉತ್ತರ ಇದೆ.
ನಿಸರ್ಗದಲ್ಲಿ ಉಚಿತವಾಗಿ ಲಭ್ಯ.   ನೆಟ್ಟು ಬೆಳೆಸಲು ಕಾಸು ಖರ್ಚಿಲ್ಲ,  ಆರೈಕೆಯೇನೂ ಬೇಕಾಗಿಲ್ಲ.
ರಸಗೊಬ್ಬರಗಳ ಹಂಗಿಲ್ಲ,  ಕೀಟನಾಶಕಗಳನ್ನು ಸಿಂಪಡಿಸಬೇಕಾಗಿಲ್ಲ.
ನೀರೇನೂ ಲಭಿಸದಿದ್ದರೂ ಇದರ ಕಳೆಗೆ ಸಾಟಿಯಿಲ್ಲ.
ಇಂತಹ ವನಸ್ಪತಿ ಸಸ್ಯಗಳಿಂದ ಶರೀರಕ್ಕೆ ಅಡ್ಡ ಪರಿಣಾಮಗಳೇನೂ ಇಲ್ಲ.
ಬಸಳೆ ಹರಿವೆಗಳಿಗಿಂತಲೂ ರುಚಿಕರ,   ಅಹಿತಕರ ಘಾಟು,  ಕಹಿ ಇಲ್ಲವೇ ಇಲ್ಲ.
ಪರಿಸರಸ್ನೇಹೀ ಸಸ್ಯ.
ಸೊಪ್ಪು ತರಕಾರಿಗಳ ಸಂತುಲಿತ ಪೋಷಕಾಂಶಗಳಾದ ಖನಿಜಾಂಶಗಳು,  ಬಿ ಜೀವಸತ್ವ, ರಿಬೊಫ್ಲೊವಿನ್,  ವಿಟಮಿನ್ ಎ,  ವಿಟಮಿನ್ ಸಿ,  ಫೈಬರ್ ಇತ್ಯಾದಿಗಳಿಂದ ಸಮೃದ್ಧವಾಗಿದೆ.

ಸೊಪ್ಪುಗಳನ್ನು ಉಪ್ಪು ಕೂಡಿಸಿ ಬೇಯಿಸಿದ್ರಾ,   ತೆಂಗಿನತುರಿ,  ಒಣಮೆಣಸು ಅರೆದು ಹಾಕಿದ್ರಾ,  ದಪ್ಪ ಮಜ್ಜಿಗೆ ಎರೆದ್ರಾ,  ಇದನ್ನು ಪಚ್ಚಡಿ ಅನ್ನಿ.  
ತೆಂಗಿನ ತುರಿ,  ಸಾಸಿವೆ ಅರೆದು,  ಮಜ್ಜಿಗೆ ಕೂಡಿಸಿದ್ದು ಸಾಸಮೆ.
ತೆಂಗಿನ ತುರಿ,  ಜೀರಿಗೆ ಅರೆದು ಮಜ್ಜಿಗೆ ಕೂಡಿಸಿದ್ದು ಜೀರಿಗೆ ಬೆಂದಿ,  ಇದಕ್ಕೆ ಬೇಳೆಕಾಳುಗಳನ್ನೂ ಹಾಕಬಹುದು,  ಹಲಸಿನ ಬೇಳೆಯೂ ಆದೀತು.
ಬೆಲ್ಲ ಇವೆಲ್ಲದಕ್ಕೂ ಹಾಕಬಹುದು,  ಅದು ನಿಮ್ಮ ಆಯ್ಕೆ.
ಇವೆಲ್ಲ ಊಟದ ಸಹವ್ಯಂಜನಗಳಾಗಿರುವುದರಿಂದ ನಾಳೆಗೆ ಅಥವಾ ರಾತ್ರಿಗೆ ಉಳಿಯುವಷ್ಟು ಮಾಡಲಿಕ್ಕಿಲ್ಲ.   ರಾತ್ರಿಯೂಟಕ್ಕೂ ಬೇಕಿದ್ದರೆ ಕುದಿಸಿ ಇಡಬೇಕು.


Posted via DraftCraft app

Saturday, 21 June 2014

ಪಜೆಮಡಿಕೆ ..... ಪ್ರಾತ್ಯಕ್ಷಿಕೆ
ಫೇಸ್ ಬುಕ್ ದಿನವೂ ಓದುವುದಿದೆ.   ಅದರಲ್ಲೂ ತಿಂಡಿತೀರ್ಥಗಳ ವಿಲೇವಾರಿ ಅತಿ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಸಾಗುತ್ತಿರುತ್ತದೆ.   ಇಂತಹ ಒಂದು ತಿಂಡಿ ನನಗೆ ದೊರೆಯಿತು.   ಅಂದ್ರೆ ತಿಂಡಿಗೊಂದು ಫೋಟೊ ಇರ್ಲಿಲ್ಲ,   ಮಾಡುವ ವಿಧಾನವೂ ಗೊತ್ತಿಲ್ಲ.   ಪಜೆಮಡಿಕೆ ಎಂಬಂತಹ ತಿಂಡಿಯ ಬಗ್ಗೆ ಗೊತ್ತಿದ್ದವರು ತಿಳಿಸಿ - ಒಂದು ಸರಳಪ್ರಶ್ನೆ ಬಂದಿತ್ತು.   ಪಜೆಮಡಿಕೆ ತುಳು ಶಬ್ದ,   ಅರ್ಥವೇನೋ ತಿಳಿಯಿತು.   ಆದರೆ ಈ ತಿಂಡಿಯನ್ನು  ನಾನೂ ಕೇಳಿದ್ದಿಲ್ಲ. 

  ಪಜೆ = ಹಸೆ = ಚಾಪೆ.   ಮಡಿಕೆ = ಮಡಿಸಿಟ್ಟದ್ದು.   

ಬಹುಶಃ ಬಾಳೆಲೆಯನ್ನು ಚಾಪೆಯಂತೆ ಸುತ್ತಿ ಅದರೊಳಗೇನಾದರೂ ಹಿಟ್ಟು ತುಂಬಿಸಿ ಅಟ್ಟಿನಳಗೆಯೆಂಬ ಉಗಿಪಾತ್ರೆಯಲ್ಲಿ ಬೇಯಿಸುವುದಾಗಿರಬೇಕು ಎಂಬ ಉತ್ತರ ನನ್ನಿಂದ ಹೋಯಿತು.    ಬಾಳೆಲೆಯಿಂದ ಪತ್ರೊಡೆ,  ಕಡುಬು,   ಹಲಸಿನ ಹಣ್ಣಿನ ಗೆಣಸೆಲೆ ಇವೆಲ್ಲ ನನಗೂ ಗೊತ್ತಿರುವಂತದೇ,   ತುಳುವರೇ ಅಧಿಕ ಸಂಖ್ಯಾತರು ನಮ್ಮ ಬಾಯಾರು ಗ್ರಾಮದಲ್ಲಿ.    ಈ ತಿಂಡಿ ನನಗೆ ಗೊತ್ತಿಲ್ಲದೇ ಹೋಯಿತೇಕೆ ಎಂಬ ಚಿಂತೆಯೂ ಬಾರದಿದ್ದೀತೇ....

                                            <><><><><><>

ಮಳೆಮುಗಿಲು ಹಾಕುತ್ತ ಇದೆ,  ತೋಟಕ್ಕೆ ಹೋಗಿ ಸುಮ್ಮನೇ ನುಸಿ ಕಚ್ಚಿಸಿಕೊಂಡು ಬರಲೇಕೆ,  ಹೀಗೆಲ್ಲ ಯೋಚಿಸುತ್ತ ಇದ್ದಾಗ ನೆರೆಮನೆಯ ಹೇಮಕ್ಕ ಬೇವಿನಸೊಪ್ಪು ಕೊಯ್ದು ತರಲು ಬಂದರು.   ತೋಟದಿಂದ ವಾಪಸ್ ಬರುವಾಗ ಕೈಯಲ್ಲಿ ಒಂದಿಷ್ಟು ಬಾಳೆಲೆಯೂ ಬಂದಿತು.   ಪತ್ರೊಡೆಗೆ ಬೇಕಾದಂತಹ  ಕಾಟ್ ಕೆಸುವಿನ ಸೊಪ್ಪು ಇನ್ನೂ ನೆಲದಿಂದ ಮೇಲೆದ್ದಿಲ್ಲ,   ಹೀಗಿರುವಾಗ....  

 " ಬಾಳೆಯಲ್ಲಿ ನಾಳೆ ಏನು ತಿಂಡಿ ?"
" ಪಜೆಮಡಿಕೆ ಮಾಡೋಣಾಂತ..."
" ಪಜೆಮಡಿಕೆಯಾ,  ಅದನ್ನು ಹೇಗೆ ಮಾಡ್ತೀರಾ ?"
" ಅಯ್ಯೋ,  ಗೊತ್ತಿಲ್ವಾ...ಅಕ್ಕಿ ಸಣ್ಣಕೆ ಕಡೀಬೇಕು,  ಹೀಗೆ ಬಾಳೆ ಮೇಲೆ ತೆಳ್ಳಗೆ ಹರಡಬೇಕು...."
" ಯಾವ ಅಕ್ಕೀ..."
" ಕುಚ್ಚುಲಕ್ಕಿ,  ಅದೇ ಚೆನ್ನಾಗಿರ್ತದೆ "
" ಹೌದಾ,  ನಾನೂ ನಾಳೆ ಸಂಜೆ ತಿಂಡಿಗೆ ಮಾಡಿ ನೋಡ್ತೇನೆ "
" ಮತ್ತೇ,  ಅದಕ್ಕೆ ತೆಂಗಿನತುರಿ,  ಬೆಲ್ಲ ಹಾಕಿ ತಿನ್ಬೇಕೂ.."
" ಓ,  ನಾವು ತೆಳ್ಳವು ತಿನ್ನೂದೂ ಹಾಗೇನೇ..  ಗೊತ್ತಾಯ್ತು ಬಿಡಿ "  ಅಂದಿದ್ದರಲ್ಲಿ ಹೇಮಕ್ಕನೂ ಸಮಾಧಾನ ಪಟ್ಟುಕೊಂಡು ಮನೆಗೆ ಹೋದರು.

ನಾಳೆ ಬೆಳಗಾದ ಮೇಲೆ ಅವರ ಮನೆಗೆ ಹೋಗಿ ಪಜೆಮಡಿಕೆಯ ಸೊಬಗನ್ನು ಕೆಮರಾದಲ್ಲಿ ಸೆರೆ ಹಿಡಿದು ತರುವ ಪ್ಲಾನ್ ಹಾಕುತ್ತ ಮನೆಯೊಳಗೆ ನಡೆದೆ.   ಬೆಳಗಾದೊಡನೆ ಲಗುಬಗೆಯಿಂದ ನನ್ನ ತಿಂಡಿತೀರ್ಥಗಳ ವ್ಯವಸ್ಥೆ ಮುಗಿಸಿ,  ಇನ್ನೂ ಏಳದ ಮಗಳಿಗಾಗಿ ಟೇಬಲ್ ಮೇಲೆ ಮುಚ್ಚಿಟ್ಟು,  ನಮ್ಮವರ ಅನುಮತಿಯನ್ನೂ ಪಡೆದು ಹೇಮಾ ಚಿದಾನಂದ್ ಮನೆಗೆ ಹೋದೆ.   ನಾನು ಬರಬಹುದೆಂಬ ನಿರೀಕ್ಷೆಯೇನೂ ಇಟ್ಟುಕೊಂಡಿರದಿದ್ದ ಹೇಮಾ ಹಾಗೂ ಅವರ ಪತಿ ಉಲ್ಲಸಿತರಾಗಿ ಸ್ವಾಗತಿಸಿದರು. 

" ಆಯ್ತಾ ತಿಂಡಿ ತಿಂದು ?'
" ಇವ್ರದ್ದಾಯ್ತು,  ನಂದು ಇನ್ನು ಆಗ್ಬೇಕಷ್ಟೆ "
" ನೀವು ಕಾಫಿ ಕುಡೀರಿ,  ಪಜೆಮಡಿಕೆ ಫೋಟೋ ತೆಗೆದ್ಬಿಟ್ಟು ಹೋಗ್ತೇನೆ..."

ಹೇಮಕ್ಕ ಲಗುಬಗೆಯಿಂದ ಒಳಹೋಗಿ ಪಜೆಮಡಿಕೆಗಳನ್ನು ತಂದು ಬಿಡಿಸಿಟ್ಟರು.  " ಇದನ್ನು ಹೀಗೆ ಬಾಳೆಯಲ್ಲೇ ಬೆಲ್ಲಸುಳಿ ಕೂಡಿಕೊಂಡು ತಿನ್ನಲಿಕ್ಕೆ ಫಸ್ಟಾಗ್ತದೆ,  ಇವ್ರಿಗೆ ಶುಗರ್ ಉಂಟಲ್ಲ,  ಚಟ್ನಿ ಮಾಡಿದ್ದು,  ಗಸಿ ಇದ್ರೂ ಸಾಕಾಗ್ತದೆ..."  ಹೇಳುತ್ತಾ ಹೋದಂತೆ ಫೋಟೋ ಐ-ಫೋನ್ ಒಳಗೆ ಬಂದಾಗಿತ್ತು.
ಇಂತಿಪ್ಪ ಪಜೆಮಡಿಕೆ ನಮ್ಮ ಅಡುಗೆ ತಜ್ಞೆ ಕಡಂಬಿಲ ಸರಸ್ವತಿ ಬರೆದ  ' ಅಡಿಗೆ '  ಪುಸ್ತಕದಲ್ಲಿ ಇಲ್ಲವಾಯಿತೇಕೆ ಎಂಬ ಚೋದ್ಯದಿಂದ ಪಾಕಪುಸ್ತಕ ಬಿಡಿಸಿ ಪುಟ ತಿರುವಿ ಹಾಕಲಾಗಿ  " ಒಹೊಹೋ...  ಇದೆ ಇದೆ "    ಅಕ್ಕಿ ಸುರುಳೆ ಎಂಬ ನಾಮಾಂಕಿತಧಾರಿಯಾಗಿ ಇದೆ.   

ಅಕ್ಕಿ ಸುರುಳೆ ಮಾಡಲು ಬೆಳ್ತಿಗೆ ಅಕ್ಕಿ ಇದರಲ್ಲಿದೆ.
 ನುಣ್ಣಗೆ ಅಕ್ಕಿ ಅರೆದು,  ಹಿಟ್ಟು ದೋಸೆ ಹಿಟ್ಟಿನಂತೆ ದಪ್ಪವಾಗಿರಬೇಕು.  
ರುಚಿಗೆ ಉಪ್ಪು ಇರಬೇಕು.
ಬಾಳೆಲೆಯೂ ಊಟದ ಬಾಳೆಲೆಯಷ್ಟು ಉದ್ದ ಇರಲಿ.   
ಬಾಳೆಯನ್ನು ಚೆನ್ನಾಗಿ ಬಾಡಿಸಿ ಇಡಬೇಕು.
ಒಂದು ಸೌಟು ಹಿಟ್ಟನ್ನು ಬಾಡಿಸಿದ ಬಾಳೆಲೆ ಮೇಲೆ ತೆಳ್ಳಗೆ ಹರಡುತ್ತಾ ಬನ್ನಿ.   ಹಿಟ್ಟು ತೆಳ್ಳಗೆ ಹಚ್ಚಿದಂತೆ ರುಚಿಯೂ ಜಾಸ್ತಿ.
ಬಾಳೆಯ ಆ ತುದಿಯಿಂದ ಈ ತುದಿ ತನಕ ಹಿಟ್ಟು ಸವರಿ ಆಯ್ತೇ,  ಚಾಪೆ ಸುತ್ತಿದಂತೆ ಸುರುಳಿ ಮಾಡಿದ್ರಾ,   ಇನ್ನು ಅಟ್ಟಿನಳಗೆಯ ಒಳಗೆ ಇಡುತ್ತಾ ಬನ್ನಿ.
ನೆನಪಿರಲಿ,  ಹೀಗೆ ಸುರುಳಿಗಳನ್ನು ಇಡುವಾಗ ಅಟ್ಟಿನಳಗೆಯಲ್ಲಿ ನೀರು ಗಳಗಳನೆ ಕುದಿಯುತ್ತಿರಬೇಕು.
ಬೆಳ್ತಿಗೆ ಅಕ್ಕಿಯಲ್ವೇ,  ಹತ್ತೇ ನಿಮಿಷದಲ್ಲಿ ಬೇಯುವಂತದ್ದು.

ಆಯ್ತು, ತಿನ್ನೂದು ಹೇಗೆ ?
ಸುರುಳೆಗಳನ್ನು ಅಥವಾ ಪಜೆಮಡಿಕೆಗಳನ್ನು ಬಿಡಿಸಿಟ್ಟು ಸುರುಳಿಗಳನ್ನು ತೆಗೆದಿಡಿ,  ಹೇಗೂ ತುಂಡು ಮಾಡಬೇಕಲ್ಲ,  ಹುಡಿ ಹುಡಿಯಾದರೂ ಚಿಂತಿಲ್ಲ,  ಇದನ್ನು ಬಾಣಲೆಯ ಒಗ್ಗರಣೆಗೆ ಹಾಕೂದು ಮುಂದಿನ ಸಿದ್ಧತೆ.
ಕಾಯಿತುರಿ,  ಹುಡಿಬೆಲ್ಲ ಹಾಕಬೇಕು.
ಸೌಟಿನಲ್ಲಿ ತಿರುವಿ, ಬಿಸಿ ಬಿಸಿಯಾಗಿ ಕೆಳಗಿಳಿಸಿ ಬಿಸಿ ಇರುವಾಗಲೇ ತಿನ್ನಿ.

ಇದ್ಯಾವುದೂ ಬೇಡಾ...
ಚಟ್ಣಿ ಅಥವಾ ಗಸಿ ಮಾಡಿ ತಿನ್ನಿ ಆಯ್ತೇ.

ಬಾಳೆಯ ಬದಲು ಅರಸಿಣ ಎಲೆಯಿಂದಲೂ ಮಾಡಬಹುದು,   ಒಳಗೆ ಬೆಲ್ಲ ಕಾಯಿತುರಿ ತುಂಬಿಸಿಟ್ಟು ಬೇಯಿಸಿ,  ತುಂಬಾ ಪರಿಮಳ ಹಾಗೂ ಸ್ವಾದಿಷ್ಟ.   ಆದರೆ ಆಗ ಪಜೆಮಡಿಕೆ ಬದಲಾಗಿ ಗೆಣಸೆಲೆ ಅಥವಾ ಸಿಹಿಕಡುಬು ಆಗುತ್ತದೆ.   ನಾಗರಪಂಚಮಿಯಂದು ಅರಸಿಣ ಎಲೆಯಿಂದ ಈ ತಿಂಡಿಯನ್ನು ಮಾಡುವ ವಾಡಿಕೆ ಇದೆ.

ಅರಸಿಣ ಎಲೆಯ ಗೆಣಸೆಲೆಯನ್ನು ಬರೆಯ ೊರಟಾಗ ಇಂತಹುದೇ ಇನ್ನೊಂದು ತಿಂಡಿ ಜ್ಞಾಪಕಕ್ಕೆ ಬಂದಿತು.   ಇದು ಬಾಲ್ಯದ ನೆನಪು,   ರಜಾ ದಿನಗಳಲ್ಲಿ ಕಾಸರಗೋಡಿನಿಂದ ಊರಿನ ತೋಟದ ಮನೆಗೂ ಹೋಗ್ತಿದ್ದೆವು.   ಕೆಲವೊಮ್ಮೆ ನಾನೂ ಹಾಗೂ ನನ್ನ ತಮ್ಮ ವೆಂಕಟೇಶ್ ಜೊತೆಯಾಗಿ ಹೋಗ್ತಾ ಇದ್ದಿದ್ದೂ ಇತ್ತು.   ಕುಂಬ್ಳೆಯಲ್ಲಿ ಬಸ್ ಬದಲಿಸಿ ಬದಿಯಡ್ಕ ದಾರಿಯ ಇನ್ನೊಂದು ಬಸ್ ಹತ್ತಿ ಮುಗು ಸ್ಟ್ಯಾಂಡ್ ಬಂದಾಗ ಇಳಿದು ಬೀಸ ಬೀಸ ನಡೆದರೆ ಹಳ್ಳಿಮನೆ ತಲಪಬಹುದಾಗಿತ್ತು.  ಕುಂಬ್ಳೆಯಲ್ಲಿ ಇಳಿದ ಕೂಡಲೇ ನನ್ ತಮ್ಮ  " ಹೋಟಲ್ ಗೆ ಹೋಗುವಾ "  ಅಂತಿದ್ದ.    ಹೇಗೂ ನಡೆಯೋದಿದೆ ಹೊಟ್ಟೆ ಗಟ್ಟಿ ಮಾಡಿಕೊಂಡೇ ಮುಂದಿನ ಹೆಜ್ಜೆ ಅಲ್ವಾ?

' ಹೋಟಲ್ ಸತ್ಯನಾರಾಯಣ ' ದಲ್ಲಿ ಕೂತ್ಕೊಂಡು ನಾವು ತಿನ್ನುತ್ತ ಇದ್ದಿದ್ದು ಮಸಾಲೆ ದೋಸೆಯೂ ಅಲ್ಲ,  ಗೋಳಿಬಜೆಯೂ ಅಲ್ಲ.   ಎಲೆ ಅಡೆ ಎಂಬ ಗೆಣಸೆಲೆ ತಿಂಡಿ ತಿಂದು ಸಂತೃಪ್ತರಾಗಿ ಹೊರಡುತ್ತಿದ್ದೆವು.   ಇದು ಕೂಡಾ ಪಜೆಮಡಿಕೆಯ ಇನ್ನೊಂದು ರೂಪಾಂತರ.   ಇದರಲ್ಲಿ ಕುಚ್ಚುಲಕ್ಕಿಯನ್ನು ನುಣ್ಣಗೆ ಅರೆದ ಹಿಟ್ಟನ್ನು ಬಾಳೆಯಲ್ಲಿ ಹರಡಿಟ್ಟು,  ಒಳಗೆ ಬೆಲ್ಲ ಕಾಯಿತುರಿ ಸೇರಿಸಿದ ಅವಲಕ್ಕಿಯನ್ನು ತುಂಬಿಟ್ಟು ಹಬೆಯಲ್ಲಿ ಬೇಯಿಸಿದರಾಯಿತು.  ಮನೆ ತಿಂಡಿಯಷ್ಟೇ ಹಿತವಾದ ಇಂತಹ ತಿಂಡಿಗಳು ಇಂದಿನ ಫೈವ್ ಸ್ಟಾರ್ ಹೋಟಲುಗಳಲ್ಲಿ ಸಿಕ್ಕೀತೇ ?

ಬಾಳೆ ಎಲೆಯನ್ನು ಬಳಸಿ ಮಾಡುವಂತಹ ಈ ಸಾಂಪ್ರದಾಯಿಕ ಖಾದ್ಯಗಳನ್ನು ಬೇಯಿಸಲು ಉಪಯೋಗಿಸುವ ಪಾತ್ರೆಗೆ ದಕ್ಷಿಣ ಕನ್ನಡಿಗರು ಅಟ್ಟಿನಳಗೆ ಅನ್ನುವ ವಾಡಿಕೆ.   ತುಳುಭಾಷಿಕರ ಪಾಲಿಗೆ ಇದು ಅಟ್ಟಿಕರ.   ' ಅಟಿಲ್ ' ಶಬ್ದವು ಅಡುಗೆ - ಗೆ ಪರ್ಯಾಯ ಪದವಾಗಿರುತ್ತದೆ.   ಹೊಸಗನ್ನಡದಿಂದ ಇದು ಮರೆಯಾಗಿದೆ.   ಆದರೂ ಹಿಂದಿನ ಶೈಲಿಯ ಮಾತುಗಾರಿಕೆ ನಮ್ಮಲ್ಲಿ ಇನ್ನೂ ಉಳಕೊಂಡಿದೆ.   ಅಡುಗೆಮನೆಯನ್ನು ' ಅಟ್ಟುಂಬೊಳ '  ಎಂದೇ ಹೇಳುವವರು ನಾವು.  

 ಅಟ್ಟು + ಉಂಬ + ಒಳ =  ಅಡುಗೆ ಮಾಡಿ ಉಣ್ಣುವ ಒಳ ಕೋಣೆ.   ಹೀಗೆ ಅರ್ಥ ವಿವರಣೆ ಬಂದೀತು.

ಭಾಷಾ ಶೈಲಿ ಒಂದೊಂದು ಪ್ರದೇಶದಲ್ಲಿ ಭಿನ್ನ ರೂಪ ತಳೆಯುವುದಕ್ಕೆ ಅಟ್ಟಿನಳಗೆಯೇ ನಿದರ್ಶನ.   ಹವ್ಯಕರ ಕನ್ನಡದಲ್ಲಿಯೇ ಪುತ್ತೂರು,  ಸುಳ್ಯ ಕಡೆ ಇದೇ ಅಟ್ಟಿನಳಗೆ ಕಡುಬಿನ ಕಳಸಿಗೆ ಅನ್ನಿಸಿಕೊಂಡಿದೆ. ಮನೆಯ ಸದಸ್ಯರ ಸಂಖ್ಯೆಗನುಗುಣವಾಗಿ ಅಟ್ಟಿನಳಗೆಯ ಗಾತ್ರ,   ಸಿರಿವಂತರ ಮನೆಯಲ್ಲಿ ತಾಮ್ರದ ಅಟ್ಟಿನಳಗೆಗಳು,  ಬಹುಶಃ ಪುರಾತನ ಕಾಲದಲ್ಲಿ ಮಣ್ಣಿನ ಅಟ್ಟಿನಳಗೆಗಳೂ ಇದ್ದಿರಬಹುದು,   ನಾವು ಕಂಡಿಲ್ಲ.

  ಮನೆಮಾತು ಮತ್ತೇನೋ ಆಗಿರುವ ಮುರಳೀ ಮೇಸ್ಟ್ರು ಬಂದಿದ್ದರು.
  " ನೀವೇನಂತೀರಾ ಈ ಪಾತ್ರೆಗೆ ?"
" ಇಡ್ಲಿ ಪಾತ್ರೆ "  ಎಂದು ಉತ್ತರಿಸಿದ ಮೇಸ್ಟ್ರು  " ಒಂದು ಫೋಟೊ ಹಾಕಿ ತೋರಿಸಿದರೆ ಒಳ್ಳೆದು "  ಎಂಬ ಸಲಹೆಯನ್ನೂ ಕೊಟ್ಟರು.   ಆಧುನಿಕ ಶೈಲಿಯಲ್ಲಿ ಸ್ಟೀಮ್ ಕುಕ್ಕರ್ ಎನ್ನದೆ ವಿಧಿಯಿಲ್ಲ. ಭಾರತೀಯರ ಪಾಕ ಶಾಸ್ತ್ರ ವೈಜ್ಞಾನಿಕ ತಳಹದಿಯನ್ನೂ ಹೊಂದಿದೆ.   ಅಟ್ಟಿನಳಗೆಯಲ್ಲಿ ಬಾಳೆಲೆ ಸುತ್ತಿ ಬೇಯಿಸಿಟ್ಟ ಇಂತಹ ಕಡುಬುಗಳು ಹಲವಾರು ದಿನ ಹಾಳಾಗದೆ ಉಳಿಯುವಂತಹವು.   ದಿನಕ್ಕೊಮ್ಮೆ ಅಟ್ಟಿನಳಗೆಯನ್ನು ಒಲೆಗೇರಿಸಿದರಾಯಿತು.    ಈಗ ನಾವು ಪ್ರತಿದಿನವೂ ಉಪಯೋಗಿಸುವ ಪ್ರೆಶರ್ ಕುಕ್ಕರ್ ,   ಇದೇ ಅಟ್ಟಿನಳಗೆಯ ಆಧುನಿಕ ಆವಿಷ್ಕಾರ.Posted via DraftCraft app

ಟಿಪ್ಪಣಿ: ದಿನಾಂಕ 18  ಫೆಬ್ರವರಿಯಂದು ಸೇರಿಸಿದ್ದು.   ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತವಾಗಿರುವ ಪಜೆಮಡಿಕೆ ಲೇಖನ


Saturday, 14 June 2014

ಕಾಟ್ ಗಿಡದ ಗಿಜಿಗಿಜಿ ಸದ್ದು...
" ಆ ಕಾಲ ಎಷ್ಟು ಚೆನ್ನಾಗಿತ್ತು,  ಮನೆಯ ವಠಾರದೊಳಗೇ ತಗತೇ ಸೊಪ್ಪು,   ರಸ್ತೆ ಅಕ್ಕಪಕ್ಕದಲ್ಲೂ ಅದೇ,  ಶಾಲೆ ಕಂಪೌಂಡ್ ಒಳಗೂ ಬೆಳೀತಾ ಇತ್ತು,  ಈಗ ಒಂದು ತಂಬ್ಳಿ ಮಾಡ್ಬೇಕಾದ್ರೂ ....."
ಗೌರತ್ತೆ ನನ್ನ ಮಾತನ್ನು ಮೌನವಾಗಿ ಆಲಿಸ್ತಾ ಕೂತಿದ್ರು.
" ಸ್ಲೇಟು ಒರೆಸ್ಬೇಕಾದ್ರೂ ನಾವು ತಗತೆ ಸಾಲು ಇದ್ದಲ್ಲಿ ಹೋಗಿ ಎಲೆಗಳ ಮೇಲೆ ಸ್ಲೇಟ್ ಆಡಿಸಿ ಬರ್ತಿದ್ದೆವು,  ಎಲೆಗಳ ಮೇಲಿದ್ದ ಮಳೆಹನಿ ಸಾಕಾಗ್ತಿತ್ತು "
" ಅದ್ಯಾಕೆ ಹಂಗೆ ಬೇಜಾರು ಮಾಡ್ಕೋತೀಯ,   ಎದುರ್ಗಡೆ ಅಂಗಳದಲ್ಲಿ ಇರೂದನ್ನು ನೀನು ನೋಡಿಲ್ಲಾಂತಾಯ್ತು "
" ಹ್ಞ,  ಅದೆಂತ ಕಾಟ್ ಗಿಡವೋ,  ಯಾರಿಗ್ಗೊತ್ತು.."
" ಅದೂ ಕೂಡಾ ತಗತೆಯೇ,  ನಾನೇ ಸೊಪ್ಪು ತಂದು ತಂಬ್ಳಿ ಮಾಡ್ತೇನೆ, ನೋಡ್ತಾ ಇರು "

ತಂಬುಳಿಯೇನೋ ಸಿದ್ಧವಾಯಿತು.   ಊಟದೊಂದಿಗೆ ಸುರಿದು ತಿಂದೂ ಆಯಿತು.   
ಮನೆಯಂಗಳದಲ್ಲಿ ಇದ್ದಿದ್ದು ಒಂದೆರಡು ಗಿಡಗಳು,     ಗೌರತ್ತೆ ಈ ಗಿಡವನ್ನು ದೊಡ್ಡ ತಗತೆ ಅಂದು ಬಿಟ್ಟಿದ್ದರು.   ಚಿಗುರೆಲೆಗಳು ದೊರೆತಂತೆ ರಸಂ,  ಪಲ್ಯ,  ಸಾರುಗಳಿಗೆ ಆಗಾಗ ಹಾಕುವ ರೂಢಿಯನ್ನೂ ಇಟ್ಟುಕೊಂಡಿದ್ದಾಯಿತು.   ದಿನವೂ ಗಮನಿಸುತ್ತಿದ್ದಂತೆ ಸುಕೋಮಲ ಬಂಗಾರವರ್ಣದ ಹೂಗಳೂ ಬಿರಿದುವು.   ಹೂಗಳು ಕಾಯಾಗಿ,   ಬಲಿತ ಕೋಡುಗಳು ಒಣಗಿ ಗಿಡ ಗಾಳಿಗೆ ತೊನೆದಾಡುವಾಗ ಗೆಜ್ಜೆಯ ನಾದದಂತೆ ಗಿಜಿಗಿಜಿ ಸದ್ದು ಮಾಡುವ ಸೊಗಸೇನು,   ಅಂತೂ ನನ್ನ ಬೇಸರ ತೊಲಗಿಯೇ ಹೋಯ್ತು ಅನ್ನಿ.   ಮತ್ತೂ ಒಂದು ವಿಶೇಷ ಏನಪ್ಪಾಂದ್ರೆ ಇದು ಮಳೆಗಾಲದಲ್ಲಿ ಮಾತ್ರ ಲಭ್ಯ ಅಂದ್ಕೊಂಡ್ಬಿಡಬೇಡಿ,  ವರ್ಷವಿಡೀ ಸಿಗುವ ಹಸಿರು ಸೊಪ್ಪು ಮಾತ್ರವಲ್ಲ,  ಸೊಗಸಾದ ಹೂಗಳಿಂದ ಕೈದೋಟದ ಶೋಭೆಯನ್ನೂ ಹೆಚ್ಚಿಸುವಂಥದು.  ನೀರಾವರಿಯನ್ನೂ ಈ ಗಿಡ ಬಯಸದು.

ಗೌರತ್ತೆಯ ಈ ದೊಡ್ಡ ತಗತೆ ಗಿಡ ಸಸ್ಯವಿಜ್ಞಾನಿಗಳ ಹೇಳಿಕೆಯಂತೆ Crotalaria pallida,  ಒಂದು  ಔಷಧೀಯ ಸಸ್ಯ.   ಯಾವ ಆತಂಕವೂ ಇಲ್ಲದೆ ಅಡುಗೆಯಲ್ಲಿ ಚಿಗುರೆಲೆಗಳನ್ನು ಬಳಸಬಹುದು.    ಎಳೆಯ ಚಿಗುರುಗಳನ್ನು ತುಪ್ಪದಲ್ಲಿ ಬಾಡಿಸಿ,  ಜೀರಿಗೆ,  ತೆಂಗಿನತುರಿಯೊಂದಿಗೆ ಅರೆದು ಮಜ್ಜಿಗೆ ಎರೆದು ತಂಬ್ಳಿ ಮಾಡ್ಕೊಳ್ಳಿ.   ಇನ್ನಿತರ ಸೊಪ್ಪು ತರಕಾರಿಗಳ ಹಾಗೆ ರಸಂ ಮಾಡ್ಕೊಳ್ಳಿ,  ಪಲ್ಯದೊಂದಿಗೆ ಸೇರಿಸಿಕೊಳ್ಳಿ....

ಇದೇ Crotalaria ಪ್ರವರ್ಗಕ್ಕೆ ಸೇರಿದ ಸುಮಾರು ಐನೂರಕ್ಕೂ ಮೇಲ್ಪಟ್ಟ ಸಸ್ಯಗಳನ್ನು ಸಸ್ಯಶಾಸ್ತ್ರಜ್ಞರು ಗುರುತಿಸಿದ್ದಾರೆ.   ಮೂಲತಃ ಆಫ್ರಿಕಾ ದೇಶದ್ದಾದರೂ ಭಾರತದ ಎಲ್ಲಾ ಪ್ರದೇಶಗಳಲ್ಲಿ ರಸ್ತೆ ಪಕ್ಕಗಳಲ್ಲಿ,  ಪಾಳು ಬಿದ್ದಿರುವ ಭೂಮಿಯಲ್ಲಿ ಈ ಸಸ್ಯ ಕಾಣಸಿಗುತ್ತದೆ.  ಸದಾ ಕಾಲ ಹೂ ತುಂಬಿ ನಿಂತಿರುವ ಈ ಜಾತಿಯ ಸಸ್ಯಗಳು ಹೂದೋಟಗಳಲ್ಲೂ ನೆಟ್ಟು ಬೆಳೆಸುವಂಥವು.   

Fabaceae ಕುಟುಂಬವಾಸಿ,  ತಗತೆ ಗಿಡ (Cassia tora ) ಕೂಡಾ ಇದೇ ಕುಟುಂಬದಿಂದ ಬಂದಿದೆ.  ಇಲ್ಲಿಗೆ ನಮ್ಮ ಗೌರತ್ತೆಯ ಫಾರ್ಮುಲಾ ಗೆದ್ದಿತು.

ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಹಸಿರೆಲೆ ಗೊಬ್ಬರವಾಗಿ ತೆಂಗಿನಮರಗಳಿಗೆ ಹಾಕಬಹುದು.   ಮಣ್ಣಿನ ಸವಕಳಿಯನ್ನು ತಡೆಯುವ ಸಸ್ಯ,  ಭೂಮಿಯ ನೈರ್ಮಲ್ಯವನ್ನೂ ಕಾಪಾಡುವಂತಹದು.   ಕೆಲವು ವರ್ಗದ ಸಸ್ಯಗಳನ್ನು ಮಣ್ಣಿಗೆ ಬೇಕಾದ ಸಾರಜನಕವನ್ನು ಒದಗಿಸುವಂಥವುಗಳೆಂದು ಸಸ್ಯವಿಜ್ಞಾನಿಗಳು ಗುರುತಿಸುತ್ತಾರೆ.   ಇದು ಕೂಡಾ ನಿಸ್ಸಂಶಯವಾಗಿ ಅಂತಹ ಒಂದು ಸಸ್ಯವಾಗಿರುತ್ತದೆ.

ಹೂಗಳನ್ನೂ ಅಡುಗೆಯಲ್ಲಿ ಬಳಕೆಯಿದೆ.   ಒಣಗಿದ ಬೀಜಗಳನ್ನು ಹುರಿದು,  ಕಾಫಿಯಂತೆ ಕುಡಿಯುವ ವಾಡಿಕೆಯೂ ಇದೆ.   ಬೇರು ಕೂಡಾ ಎಲೆ ಅಡಿಕೆ ಜೊತೆ ಅಗಿಯುವಂಥದ್ದು.

 ಬೇರುಗಳನ್ನು ಅರೆದ ಲೇಪ ಗಂಟುನೋವು ನಿವಾರಕ.    ಹಸಿ ಎಲೆಗಳ ರಸ ಸೇವನೆಯಿಂದ ಜಂತುಹುಳಗಳ ಬಾಧೆಯಿಂದ ಮುಕ್ತಿ.   ಮೂತ್ರಸಂಬಂಧೀ ಸಮಸ್ಯೆಗಳಿಗೂ,  ಜ್ವರದ ತಾಪವನ್ನು ಇಳಿಸಲೂ ಈ ಗಿಡದ ಬಳಕೆ.    ಇವೆಲ್ಲ ಪರಂಪರೆಯಿಂದ ಆಯಾ ದೇಶಕಾಲಗಳಲ್ಲಿ ನಡೆದು ಬಂದ ಚಿಕಿತ್ಸಾ ಕ್ರಮಗಳು.
Posted via DraftCraft app

Friday, 6 June 2014

ಮಾಂಙನ್ನಾರೀ, ಬೆಡಗಿನ ವೈಯ್ಯಾರಿ
ವರ್ಷಗಳ ಹಿಂದೆ ತಂಗಿಯ ನೂತನ ಗೃಹಪ್ರವೇಶ ಸಮಾರಂಭಕ್ಕೆ ಹೋಗಬೇಕಾಗಿ ಬಂತು,   ಹೋಗದಿದ್ದರಾಗುತ್ಯೇ,  ತಂಗಿಯಲ್ಲವೇ,   ಅವಳೇ ಊರಿನಲ್ಲಿದ್ದ ಕುಟುಂಬ ವರ್ಗವನ್ನು ಕರೆಸಿ ಕೊಂಡಳು ಅನ್ನಿ.   ಸುಮಾರು 50 - 60 ಮಂದಿ,   ಪುರೋಹಿತರಿಂದ ಹಿಡಿದು ಪರಿಕರ್ಮಿ ಸಹಿತವಾಗಿ ಒಂದು ಬಸ್ಸು ಹಿಡಿಸುವಷ್ಟು ಜನ ಬೆಂಗಳೂರಿಗೆ ಉಲ್ಲಾಸಕರ ಪ್ರಯಾಣ ಬೆಳೆಸಿದೆವು.

ಊರಿನ ಔತಣಕೂಟಗಳಲ್ಲಿ ಸಮಾರಂಭದ ಎಲ್ಲ ಕೆಲಸಕಾರ್ಯಗಳಲ್ಲಿ ಬಂದ ನೆಂಟರಿಷ್ಟರು ತೊಡಗಿಸಿಕೊಳ್ಳುತ್ತಾರೆ ಹಾಗೂ ಸಭಾ ವ್ಯವಸ್ಥೆಯನ್ನೂ ನಿರ್ವಹಿಸುತ್ತಾರೆ,  ಇಂತಹ ತಜ್ಞರಿಗೆ  ' ಸುಧರಿಕೆಯವರು ' ಎಂದು ರೂಢನಾಮವೂ ಇದೆ.   ಈಗ ನಾವು ಹೋಗಿರೋದು ಬೆಂಗಳೂರಿಗೆ,   ಇದು ಬೆಂಗಳೂರಿನ ಔತಣ,   ಒಂದು ಬದಲಾವಣೆ ಏನಪ್ಪಾ ಅಂದ್ರೆ ಸುಧರಿಕೆಯ ಪಂಚಾಯ್ತಿ ಬಿಡಿ,  ನಾವು ನೆಂಟರಿಷ್ಟರು ನಾಲ್ಕು ಹೊತ್ತೂ ತಿಂದೂ ಕುಡಿದೂ,  ಮಲಗಿದ್ದೂ ಎದ್ದೂ ಮಾಡೋದು ಬಿಟ್ರೆ ಬೇರೆ ಕೆಲಸ ಇಲ್ಲ.     ಈಗೀಗ ನಗರಗಳ ಸಂಪ್ರದಾಯ ಹಳ್ಳಿಗಳಿಗೂ ಬಂದ್ಬಿಟ್ಟಿದೆ,   ಏನು ಮಾಡೋಣಾ,  ಸುಧರಿಕೆ ಮಾಡ ಬೇಕಾಗಿರುವ ನೆಂಟರಿಷ್ಟರು ಕಾಣ್ತಾನೇ ಇಲ್ಲ,  ಹೊಸ ತಲೆಮಾರಿನ ಯುವಕರಿಗೆ ಇದೆಲ್ಲ ಗೊತ್ತೇ ಇಲ್ಲ,  ಇದೆಲ್ಲ ಇದ್ದಿದ್ದೇ,  ಹೋಗಲಿ ಬಿಡಿ,  ಕಾಲಾಯ ತಸ್ಮೈ ನಮಃ.

ನಾಲ್ಕು ಹೊತ್ತೂ ತಿನ್ನುವ ಸುಧರಿಕೆ ಮಾಡ್ತಾ ಇದ್ದಾಗ ಊಟದೊಂದಿಗೆ ಉಪ್ಪಿನಕಾಯಿ ಬರ್ತಾ ಇತ್ತು, ಬರದೇ ಇದ್ದರೆ ಆಗುತ್ಯೇ,   ಎಲ್ಲಿ ಔತಣಕ್ಕೆ ಹೋದರೂ ಉಪ್ಪಿನಕಾಯಿಗೆ ಪ್ರಾಶಸ್ತ್ಯ ಕೊಡೋವ್ರು ನಾವು.   ಉಪ್ಪಿನಕಾಯಿಗೆ ಮಾವಿನ ಪರಿಮಳ,  ಆದ್ರೆ ಮಾವಿನ ಹೋಳು ಅಥವಾ ಮಾವಿನ ಮಿಡಿ ಸಿಗ್ತಾ ಇರಲಿಲ್ಲ.   ನಂಗಂತೂ ಆಲೋಚಿಸಿ ಸಾಕಾಯ್ತು.   ಪಕ್ಕದಲ್ಲೇ ಕೂತಿದ್ದ ಗೌರತ್ತೆ ಬಳಿ ಕೇಳಬೇಕಾಯ್ತು.

   " ಇದೆಂಥ ಉಪ್ಪಿನ್ಕಾಯೀ,  ಒಂದೂ ಮಾವಿನ ಹೋಳು ಸಿಕ್ತಾ ಇಲ್ಲ,  ಈಗ ಮಾವಿನ ಸೀಸನ್ ಕೂಡಾ ಅಲ್ಲ " 

" ಅದೂ ಮಾಂಙನ್ನಾರೀದು,  ಅಷ್ಟೂ ಗೊತ್ತಾಗಿಲ್ವಾ ". ಅಂದ್ರು ಗೌರತ್ತೆ.

" ಓ, ಹೌದಲ್ಲ..." ನೆನಪಾಯಿತು.   ನನ್ನಮ್ಮ ಮಾಡ್ತಿದ್ದ ಮಾವಿನ ಶುಂಠಿಯ ನಳಪಾಕಗಳು ನೆನಪಾದುವು
ಬಾಲ್ಯದ ನೆನಪೂ ಆಯಿತು.   ಅಮ್ಮನ ತರಕಾರಿ ಬುಟ್ಟಿಯಲ್ಲಿ ಮಾಂಙನ್ನಾರಿಗೆ ಯಾವಾಗಲೂ ಸ್ಥಾನ ಇತ್ತು.   ಅಷ್ಟೇ ಏಕೆ,   ಊರಿನ ತೋಟದ ಮನೆಗೆ ಶಾಲೆಯ ರಜಾದಿನಗಳಲ್ಲಿ ಹೋಗಿ ಬರುತ್ತಿದ್ದೆವು.   ಮಾಂಙನ್ನಾರಿಯ ಒಂದು ಗೆಡ್ಡೆಯನ್ನು ತೋಟದ ಕೆರೆಯ ಪಕ್ಕ ಮಣ್ಣಿನಲ್ಲಿ ಹೂತಿಟ್ಟು,  ನಂತರ ಮುಂದಿನ ರಜಾಸಮಯದಲ್ಲಿ ಬಂದಾಗ ಗಿಡ ಸೊಗಸಾಗಿ ಅರಶಿನದ ಗಿಡದ ಹಾಗೇ ಬೆಳೆದು ನಂತಿರುತ್ತಿತ್ತು.   ನಾನೇ ಗುದ್ದಲಿಯಲ್ಲಿ ನೆಲ ಬಗೆದು ಮಾಂಙನ್ನಾರಿ ಗೆಡ್ಡೆಗಳನ್ನು ಬುಟ್ಟಿ ತುಂಬ ಸಂಗ್ರಹಿಸಿದ್ದೂ ನೆನಪಾಯಿತು.   ಆಗ ಗೆಡ್ಡೆ ಗೆಣಸುಗಳಿಗೆ ಇಂದಿನಂತೆ ಕಾಡು ಪ್ರಾಣಿಗಳ ಕಾಟ ಇರಲಿಲ್ಲ.   ತೋಟದೊಳಗೆ ವಿಧವಿಧವಾದ ಗೆಡ್ಡೆ ತರಕಾರಿಗಳು ಯಥೇಚ್ಛವಾಗಿ ಲಭ್ಯ.   ಮುಂಡಿ ಕೆಸು,  ಸುವರ್ಣ ಗೆಡ್ಡೆ,  ಕೂವೆ ಇವೆಲ್ಲ ಅಡಿಕೆ ತೋಟದೊಳಗೆ ಮಾಮೂಲು.   ಈಗ ಮನೆಯಂಗಳದಲ್ಲಿ ನೆಟ್ಟ ಗೆಣಸು ಕೂಡಾ ಸಿಗುವುದು ಕಷ್ಟ..

ಬೆಂಗಳೂರಿನಿಂದ ವಾಪಸ್ಸಾಗುತ್ತಲೇ ನಮ್ಮ ಚೆನ್ನಪ್ಪನ ಬಳಿ ಬೆಂಗಳೂರು ಸುದ್ದಿ ಹೇಳುತ್ತಾ  " ಮಾಂಙನ್ನಾರಿ ಎಲ್ಲಿಂದಾದ್ರೂ ತರಿಸ್ಬೇಕಲ್ಲ "  ಅಂದೆ.
" ಅದಕ್ಕೇನಂತೆ,  ತರುವಾ...."  ಅವನ ಮನೆ ಹಿತ್ತಿಲಿಂದ ತಂದೂ ಕೊಟ್ಟ.   ಬೀಂಬುಳಿ ಉಪ್ಪಿನಕಾಯಿಗೆ ಮಾವಿನ ಶುಂಠಿಯನ್ನೂ ಕತ್ತರಿಸಿ ಹಾಕಿ,  ಎಲ್ಲ ಗೆಡ್ಡೆ ತರಕಾರಿಗಳು ಹಂದಿ ಕಾಟದಿಂದ ತೋಟದಿಂದ ಕಣ್ಮರೆಯಾಗಿರುವಾಗ ಇದನ್ನು ಮನೆಯಂಗಳದ ಹೂಗಿಡಗಳೆಡೆಯಲ್ಲಿ ನೆಟ್ಟು ಜೋಪಾನ ಮಾಡಬೇಕಾಯಿತು.    ಬೀಂಬುಳಿಯೊಂದಿಗೆ ಕತ್ತರಿಸಿ ಹಾಕಿದ ಮಾವಿನ ಶುಂಠಿ ಉಪ್ಪಿನಕಾಯಿಗೆ ಬೆಂಗಳೂರಿನಲ್ಲಿ ಸವಿದ ಉಪ್ಪಿನ್ಕಾಯಿ ಸ್ವಾದ ಬರಲಿಲ್ಲ.   ಇದರೊಳಗಿನ ಸುವಾಸನೆ ಎಲ್ಲಿಗೆ ಹೋಯಿತೋ ತಿಳಿಯಲಿಲ್ಲ.   " ನೆಟ್ಟ  ಗೆಡ್ಡೆ ಫಲ ಕೊಡಲಿ,  ಆಗ ನೋಡಿಕೊಳ್ಳೋಣ "  ಎಂದು ಸುಮ್ಮನಾಗಬೇಕಾಯಿತು.

ಕಣ್ಣಿನ ನೋಟಕ್ಕೆ ಅರಸಿನದ ಗಿಡದಂತೆ,  ಬೇರಿನ ಗೆಡ್ಡೆ ಶುಂಠಿಯಂತೆ,  ಕತ್ತರಿಸಿದಾಗ ತಾಜಾ ಮಾವಿನಕಾಯಿಯ ಸುಗಂಧ ಬಂದಿತೇ,  ಇದೇ ನಮ್ಮ ದಕ್ಷಿಣ ಕನ್ನಡಿಗರ ಮಾಂಙನ್ನಾರಿ.  ಅಚ್ಚಗನ್ನಡದಲ್ಲಿ ಮಾವಿನ ಶುಂಠಿ,  ನೆಲಮಾವು,  ಅಂಬೆಅರಶಿಣ, ಅಂಬೆಕೊಂಬು,  ತುಳುವರ ಕುಕ್ಕುಶುಂಠಿ,  ತಮಿಳು ಹಾಗೂ ಮಲಯಾಳಂನಲ್ಲಿ ಮಾಂಙಯಿಂಜಿ.   ಆಂಗ್ಲ ಭಾಷಿಕರು ಬೇರೇನೂ ತೋಚದೆ mango ginger ಅಂದಿದ್ದಾರೆ.   ಸಸ್ಯವಿಜ್ಞಾನಿಗಳ ಪ್ರಕಾರ ಇದು curcuma amada.    ಸಸ್ಯವಿಜ್ಞಾನವು ಮಾವಿನಶುಂಠಿಯನ್ನು Zingiberaceae ಕುಟುಂಬವಾಸಿಯೆಂದು ಪರಿಗಣಿಸಿದರೂ ಇದು ಅರಸಿನದ ಸಮೀಪವರ್ತಿ ಸಸ್ಯವೆಂದೂ ಹೇಳುತ್ತದೆ.   ಬೃಹತ್ ವೃಕ್ಷವಾದ ಮಾವು ಹಾಗೂ ನೆಲದೊಳಗೆ ಹುದುಗಿರುವ ನೆಲಮಾವು ಬೇರೆ ಬೇರೆ ಕುಟುಂಬದಲ್ಲಿವೆ.

ಎಪ್ರಿಲ್, ಮೇ ತಿಂಗಳು ಬಂದಾಗ ಒಂದೆರಡು ಮಳೆ ಬರುವುದು ಸಾಮಾನ್ಯ.   ಆಗಲೇ ಇದರ ಗೆಡ್ಡೆಯನ್ನು ನಾಟಿ ಮಾಡಲು ಸಕಾಲ.    ತರಗೆಲೆ,  ಸುಡುಮಣ್ಣು ಗೊಬ್ಬರ ಸಾಕು.   ಹೆಚ್ಚಿನ ಆರೈಕೆಯೇನೂ ಇದಕ್ಕೆ ಬೇಡ,  ರೋಗಬಾಧೆಯೇನೂ ಇಲ್ಲ,   ಆರು ತಿಂಗಳಲ್ಲಿ ಇಳುವರಿ ಪಡೆಯಬಹುದಾಗಿದೆ.  ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯೂ ಇದೆ.

ಅಂಬಟೆಯ ಸಾರು ಒಲೆಯ ಮೇಲೆ ಕೂತಿತ್ತು.   ಇದಕ್ಕೆ ಮಾವಿನ ಶುಂಠಿ ಕತ್ತರಿಸಿ ಹಾಕಿದ್ರೆ ಮಾವಿನ ಸಾರು ಆಗಬಹುದು ಅಂದುಕೊಳ್ಳುತ್ತ  ಮಾವಿನ ಶುಂಠಿಯ ಪ್ರಯೋಗ ಮೊದಲು ಅಂಬಟೆಯ ಮೇಲಾಯಿತು.   ಮಾವಿನ ಶುಂಠಿಯ ಚೂರುಗಳು ಅನ್ನದೊಂದಿಗೆ ಅಗಿಯುತ್ತಿದ್ದಂತೆ ತಾಜಾ ಮಾವಿನಕಾಯಿ ತಿಂದಂತಹ ಅನುಭವ ದೊರೆಯಿತು.   ಏನೇ ನಳಪಾಕ ಮಾಡಬೇಕಿದ್ದರೂ ಬೇಯಿಸಿದ ಗೆಡ್ಡೆಯನ್ನೇ ಉಪಯೋಗಿಸಬೇಕೆಂಬ ಸತ್ಯದರ್ಶನವಾಯಿತು.    ಇನ್ನೇಕೆ ತಡ, ಮಾವಿನ ಶುಂಠಿಯ ರಸರುಚಿಗಳನ್ನು ಮಾಡೋಣ.

ಊಟದೊಂದಿಗೆ ಹಸಿ ತರಕಾರಿ ಇರಬೇಕು.   ಸೌತೆಯೊಂದಿಗೆ ಮಾಂಙನ್ನಾರಿ ತುರಿದು ಹಾಕಿ.  ಮಾಂಙನ್ನಾರಿಯನ್ನು ಬೇಯಿಸಿ ತುರಿದುಕೊಳ್ಳಿ.   ಘಮ್ ಘಮ್ ಪರಿಮಳ...

ಚಟ್ನಿ ಹೀಗೆ ಮಾಡೋಣ:
ಒಂದು ಕಪ್ ಕಾಯಿತುರಿ
ಒಂದು ತುಂಡು ಬೇಯಿಸಿದ ಮಾವಿನಶುಂಠಿ 
ಎರಡು ಬೀಂಬುಳಿ 
ರುಚಿಗೆ ಉಪ್ಪು
ಎಲ್ಲವನ್ನೂ ಅರೆಯಿರಿ.   ಬೀಂಬುಳಿ ರಸಭರಿತ ಹುಳಿಯಾಗಿರುವುದರಿಂದ ಅರೆಯುವಾಗ ಬೇರೆ ನೀರು ಹಾಕುವ ಅಗತ್ಯವೇ ಇಲ್ಲ.   ಖಾರ ಬೇಕಿದ್ದವರು ಹಸಿಮೆಣಸು ಸೇರಿಸ್ಕೊಳ್ಳಿ.

ಇದೇ ಮಾದರಿಯಲ್ಲಿ ಸಿಹಿಮಜ್ಜಿಗೆ ಎರೆದು ನುಣ್ಣಗೆ ಅರೆದುಕೊಂಡರೆ ತಂಬುಳಿ ಆಯ್ತು,  ಇಲ್ಲಿ ಬೀಂಬುಳಿ ಹಾಕೋದು ಬೇಡ.

ಶೀತ, ಕಫ ಪ್ರಕೃತಿಯ ಮಂದಿ ಮಜ್ಜಿಗೆ ಕುಡಿಯಲು ಇಷ್ಟ ಪಡುವುದಿಲ್ಲ.   ಮಜ್ಜಿಗೆಹುಳಿಯಿಂದಲೂ ಮಾರು ದೂರವಿರುತ್ತಾರೆ.   ಅಂಥವರಿಗೂ ಮಾವಿನಶುಂಠಿ ಹಾಕಿದ ಮಜ್ಜಿಗೆ ಏನೂ ತೊಂದರೆ ಕೊಡದು.   ಮಜ್ಜಿಗೆಹುಳಿಗೆ ತೆಂಗಿನಕಾಯಿ ಅರೆಯುವಾಗ ಒಂದು ತುಂಡು ಮಾವಿನಶುಂಠಿಯೊಂದಿಗೆ ಅರೆಯಿರಿ.   

ನಮ್ಮ ಸನಾತನ ವೈದ್ಯಕೀಯ ಪದ್ಧತಿಯಂತೆ ಮಾವಿನ ಶುಂಠಿಯ ಗೆಡ್ಡೆಗಳು ಅತಿ ಶ್ರೇಷ್ಠವಾದ ಔಷಧೀಯ ಗುಣಗಳನ್ನು ಹೊಂದಿವೆ.    ಹೆಚ್ಚಾಗಿ ಜ್ವರದ ತಾಪದಿಂದಲೇ ಬಾಯಿರುಚಿ ಕೆಡುವುದು ಸಾಮಾನ್ಯ,   ಜಡ್ಡುಗಟ್ಟಿದ ನಾಲಿಗೆಗೆ ಬಾಯಿರುಚಿ ಹೆಚ್ಚಿಸುವ ಶಕ್ತಿ ನೀಡುವುದು ಈ ಮಾಂಙನ್ನಾರಿ.    ಜ್ವರದ ತಾಪವನ್ನು ಕಡಿತಗೊಳಿಸುವ ಸಾಮರ್ಥ್ಯ ಮಾವಿನಶುಂಠಿಯಲ್ಲಿದೆ.   ಜೀರ್ಣಾಂಗಗಳ ಕಾರ್ಯಕ್ಷಮತೆ ವೃದ್ಧಿಸಿ,  ಕರುಳು ಹಗುರಾಗುವುದು.    ಉಲ್ಲಾಸಕರ ಸುವಾಸಿತ ಆಹಾರವೂ ಆಗಿರುವುದರಿಂದ ಕಾಮವರ್ಧಕವೂ ಹೌದು.   ಪಿತ್ತಸಂಕಟದಿಂದ ತಲೆಸುತ್ತು ಬರುವುದಿದೆ,  ಇದನ್ನು ಮನೆಮದ್ದಾಗಿ ನಿಂಬೆರಸದೊಂದಿಗೆ ಸೇವಿಸುವುದು ಅತ್ಯುತ್ತಮ.    ಗಂಟಲಿನ ಕಿರಕಿರಿ,  ದಮ್ಮು,  ತೀವ್ರಸ್ವರೂಪದ ಕೆಮ್ಮುಗಳಿಗೆ ಇದರ ಸೇವನೆಯಿಂದ ಸುಖ.    ಎಷ್ಟಾದರೂ ಅರಸಿನದ ಜಾತಿಗೆ ಸೇರಿದ್ದಲ್ಲವೇ, ಹಸಿ ಅರಸಿನದಂತೆ ಅರೆದು ಮೈ ಚರ್ಮಕ್ಕೆ ಲೇಪಿಸಿದರಾಯಿತು,   ಚರ್ಮದ ತುರಿಕೆ,  ಚರ್ಮರೋಗ,   ಚರ್ಮದ ಮೇಲಿನ ಗಾಯಗಳಿಗೆ ಪರಿಣಾಮಕಾರೀ ಉಪಶಮನ.


ಸಂಜೆಯ ಲಘು ಉಪಹಾರವಾಗಿ ಚಿತ್ರಾನ್ನ ಮಾಡೋಣ:

ಒಂದು ಬಟ್ಟಲು ಉದುರುದುರಾದ ಅನ್ನ
ಒಂದು ಚಮಚ ಬೇಯಿಸಿ ತುರಿದ ಮಾವಿನ ಶುಂಠಿ 
ತೆಂಗಿನ ತುರಿ,  ಸಾಸಿವೆ,  ಸ್ವಲ್ಪ
ಚಿಟಿಕೆ ಅರಸಿನ
ರುಚಿಗೆ ಉಪ್ಪು,  ನಿ೦ಬೆ ರಸ
ತೆಂಗಿನ ತುರಿಯೊಂದಿಗೆ ಎಲ್ಲ ಸಾಮಗ್ರಿ ಹಾಕಿಕೊಂಡು ಅರೆದಿಡಿ.
ಬಾಣಲೆಗೆ ಎಣ್ಣೆ ಎರೆದು ಸಾಸಿವೆ,  ಉದ್ದಿನಬೇಳೆ, ಕರಿಬೇವು ಒಗ್ಗರಣೆ ತಯಾರಾಯ್ತೇ,  ಅರೆದ ಮಸಾಲೆ ಹಾಕಿಕೊಳ್ಳಿ.  ಅನ್ನ ಉದುರಿಸಿ.   ಎರಡು ತೊಟ್ಟು ಲಿಂಬೆ ರಸ ಬೆರೆಸಿ,  ಚೆನ್ನಾಗಿ ಮಗುಚಿ ಮುಚ್ಚಿಡಿ.  ಸ್ಟವ್ ಆರಿಸಿ.

ಹಲ್ವಾ:
ಪಪ್ಪಾಯ ಹಣ್ಣಾಗಿತ್ತು,  ಕತ್ತರಿಸಿದ ಹೋಳುಗಳು ನಾವಿಬ್ಬರು ತಿಂದರೆ ಎಷ್ಟು ತಿನ್ನಲಿಕ್ಕಾದೀತು?   ಸಂಜೆ ಟೀ ಜೊತೆ ಏನೊ ಒಂದು ಇರಲೇಬೇಕಲ್ಲ,  ಹಲ್ವಾ ಬೇಗ ಮಾಡಿಕೊಳ್ಳಬಹುದು,  ಉಳಿದರೆ ನಾಳೆಯೂ ತಿನ್ನೋಣ ಅಂದ್ಕೊಂಡು ಸಕ್ಕರೆ,ತುಪ್ಪ ಬೆರೆಸಿ ಹಲ್ವಾ ಸಿದ್ಧವಾಯಿತು.   ಒಂದು ತುಂಡು ಮಾವಿನಶುಂಠಿ ತುರಿ ಹಲ್ವ ಪಾಕದೊಂದಿಗೆ ಸೇರಿತು.  ಆಹ್.. ಆ ರುಚಿ .. ನೀವೂ ಮಾಡಿ ಸವಿಯಿರಿ !

ಮಾವಿನ ಶುಂಠಿ ಅಡುಗೆ ಪ್ರಯೋಗ ನಮ್ಮ ಭೂರಿಭೋಜನಗಳಲ್ಲಿ ಇರಲೇಬೇಕಾದ ಮೆಣಸ್ಕಾಯಿ ಕಡೆ ತಿರುಗಿತು.   ನಾವು ದಕ್ಷಿಣ ಕನ್ನಡಿಗರು ಮೆಣಸ್ಕಾಯಿ ಪದದ ಬಳಕೆ ಮಾಡುವಲ್ಲಿ ಉತ್ತರ ಕನ್ನಡಿಗರು ಕಾಯಿರಸ ಅನ್ನುತ್ತಾರೆ.   ಕರ್ನಾಟಕ ವಿಶಾಲ ವಾ್ಯಪ್ತಿಯ ಪ್ರದೇಶ,   ಅಡುಗೆಯಲ್ಲಿ ತೆಂಗಿನಕಾಯಿ ಇಲ್ಲದೆ ಶೇಂಗಾಪುಡಿ,  ಹುರಿಗಡಲೆಪುಡಿಗಳಿಂದಲೂ ಕರಿ ಅಥವಾ ರಸಂಗಳನ್ನು ದಪ್ಪಗೊಳಿಸಲು ಬಳಸುವುದೂ ಒಂದು ಪದ್ಧತಿ.   ಇಂತಹ  ವೈವಿಧ್ಯಗಳನ್ನು ನಾವು ಹೊಂದಿರುವಾಗ ಮೆಣಸ್ಕಾಯಿ ಬದಲಾಗಿ ಗೊಜ್ಜು ಕೂಡಾ ಆದೀತು.

ಈಗ ಮೆಣಸ್ಕಾಯಿ ಮಾಡೋಣ.
ಒಂದು ಕಪ್ ತೆಂಗಿನ ತುರಿ  
ಮಾವಿನ ಶುಂಠಿ, ಎರಡಿಂಚು ತುಂಡು,  ತುರಿಯಿರಿ.
ರುಚಿಗೆ ಉಪ್ಪು,  ಬೆಲ್ಲ,  ಹುಳಿ
ಒಗ್ಗರಣೆ ಸಾಹಿತ್ಯ
3 ಒಣಮೆಣಸು
1 ಚಮಚ ಉದ್ದಿನಬೇಳೆ
2 ಚಮಚ ಕೊತ್ತಂಬರಿ
2 - 3 ಚಮಚ ಎಳ್ಳು
ಮಸಾಲೆಗಳನ್ನು ಘಮ್ ಎಂಬಂತೆ ಹುರಿಯಿರಿ.   ತೆಂಗಿನತುರಿಗೆ ಮಾವಿನ ಶುಂಠಿ,  ಹುರಿದ ಮಸಾಲೆ ಸೇರಿಸಿಕೊಂಡು ಅರೆಯಿರಿ.   ಉಪ್ಪು,  ಬೆಲ್ಲ,  ಹುಳಿ ಕೂಡಿಸಿ,  ಅವಶ್ಯವಿರುವ ನೀರು ಎರೆದು ಕುದಿಸಿ. ಸಾರಿನಷ್ಟು ತೆಳ್ಳಗೆ ಮಾಡಬಾರದು, ದಪ್ಪವಾಗಿರಲಿ.   ಒಗ್ಗರಣೆ ಕೊಡಿ.    ತೆಂಗಿನತುರಿ ಇಲ್ವೇ,  2 ಚಮಚ ಹುರಿಗಡಲೆಯನ್ನು ಮೇಲೆ ಹೇಳಿದ ಮಸಾಲೆಯೊಂದಿಗೆ ಅರೆದುಕೊಳ್ಳಿ,   ಮಾಂಙನ್ನಾರೀ ಗೊಜ್ಜು ಅನ್ನಿ.

ಮಾಂಙನ್ನಾರೀ ಸಾಸ್:
4 ಟೊಮ್ಯಾಟೋ,  ದೊಡ್ಡ ಗಾತ್ರದ್ದು
ಒಂದು ತುಂಡು ಮಾವಿನ ಶುಂಠಿ
ರುಚಿಗೆ ಉಪ್ಪು,  ಸಕ್ಕರೆ
1-2 ಚಮಚ ತುಪ್ಪ ಅಥವಾ ಎಣ್ಣೆ

ಟೊಮ್ಯಾಟೋ ಹಾಗೂ ಮಾವಿನ ಶುಂಠಿಯನ್ನು ಇಡಿಯಾಗಿ ಬೇಯಿಸಿ.   ತಣಿದ ಮೇಲೆ ಸಿಪ್ಪೆ ತೆಗೆದು ಅರೆದುಕೊಳ್ಳಿ,  ನೀರು ಬೇಡ.   ತಣ್ಣೀರಿನಲ್ಲಿ ಹಾಕಿಟ್ಟರೆ ಬೇಗನೆ ಸಿಪ್ಪೆ ತೆಗೆಯಬಹುದು.

ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪ ಹಾಕಿಕೊಳ್ಳಿ.   ಅರೆದ ಮಿಶ್ರಣವನ್ನು ಎರೆಯಿರಿ.   ಕುದಿಯುತ್ತಿದ್ದ ಹಾಗೆ ಉಪ್ಪು,  ಸಕ್ಕರೆ ಹಾಕಿ ದಪ್ಪಗಟ್ಟುತ್ತಿದ್ದ ಹಾಗೇ ಸೌಟಿನಲ್ಲಿ ಕೈಯಾಡಿಸಿ,  ಕೆಳಗಿಳಿಸಿ.
ಅತಿ ಶೀಘ್ರವಾಗಿ ತಯಾರಿಸಬಹುದು,  ಮಕ್ಕಳ ಮೆಚ್ಚುಗೆಗೆ ಪಾತ್ರರಾಗಿ.   ಬ್ರೆಡ್,  ಚಪಾತಿ,  ಪೂರಿ,  ನಾನ್,  ತೆಳ್ಳವು ಜೊತೆ ಸವಿಯಿರಿ.  ಒಂದೆರಡು ದಿನ ಇಟ್ಟುಕೊಳ್ಳಬಹುದು.


ಆರಂಭದಲ್ಲೇ ಬರೆದಂತೆ ಮಾವಿನಶುಂಠಿ ಉಪ್ಪಿನಕಾಯಿಯ ಸ್ವಾದವೇ ಊಟದ ರುಚಿ ಇನ್ನೂ ಹೆಚ್ಚಿಸುವಂತಹದು.   ಲಿಂಬೇ ಉಪ್ಪಿನಕಾಯಿ,  ತರಕಾರೀ ಮಿಶ್ರಣದ ಉಪ್ಪಿನಕಾಯಿ,  ಯಾವುದೇ ವಿಧಾನದ ಉಪ್ಪಿನಕಾಯಿ ಆಗಿರಲಿ,  ಮಾವಿನಶುಂಠಿ ಧಾರಾಳವಾಗಿ ಹಾಕಬಹುದಾಗಿದೆ.   ಬೇಯಿಸಿಕೊಂಡು ಬಿಲ್ಲೆಗಳಂತೆ ಕತ್ತರಿಸಿ ಉಪ್ಪಿನಕಾಯಿ ಮಿಶ್ರಣದೊಂದಿಗೆ ಸೇರಿಸಿ.   ಬೇಯಿಸಿದ ಮಾವಿನಶುಂಠಿ ಮೆತ್ತಗಾಗುವುದೇ ಇಲ್ಲ.

ಮಿಶ್ರ ತರಕಾರಿ ಉಪ್ಪಿನಕಾಯಿ ಹೇಗೆ ಮಾಡೋಣ?
ಲಿಂಬೇ ಹೋಳುಗಳು,  2 ಲಿಂಬೆ ಹಣ್ಣು ಸಾಕು
ಬೇಯಿಸಿ ಬಿಲ್ಲೆಗಳಂತೆ ಕತ್ತರಿಸಿದ ಮಾವಿನಶುಂಠಿ,  ಒಂದು ಕಪ್
ಕತ್ತರಿಸಿದ ಸೌತೆಕಾಯಿ ಹೋಳುಗಳು, 3 ಕಪ್
ಉಪ್ಪು,  2 ಕಪ್
ಉಪ್ಪಿನಕಾಯಿ ಮಸಾಲೆ ಹುಡಿ ,  2 ಕಪ್
ಸಾಸಿವೆ ಹುಡಿ,  ಒಂದು ಕಪ್

ಉಪ್ಪಿನಕಾಯಿ ಮಸಾಲೆ ಹುಡಿ ಮಾರ್ಕೆಟ್ ನಲ್ಲಿ ತರಹೇವಾರಿ ಸಿಗುತ್ತವೆ.   ಸಾಸಿವೆ ಹುಡಿ ಮಾತ್ರ ಮಾಡಿಕೊಂಡರೆ ಉತ್ತಮ.   ಸಾಸಿವೆಯನ್ನು ನಾನ್ ಸ್ಟಿಕ್ ತವಾದಲ್ಲಿ ತುಸು ಬೆಚ್ಚಗೆ ಮಾಡಿಕೊಳ್ಳಿ,  ಹುರಿಯುವುದೇನೂ ಬೇಡ.   ನುಣ್ಣಗಿನ ಹುಡಿ ಮಿಕ್ಸೀಯಲ್ಲಿ ಮಾಡಿಕೊಳ್ಳಿ.  ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ ಜಾಡಿಯಲ್ಲಿ ತುಂಬಿ.   ಅರ್ಧಗಂಟೆಯೊಳಗೆ ತರಕಾರಿ ಹೋಳುಗಳು ಉಪ್ಪು ಎಳೆದು ರಸಭರಿತ ಹಾಗೂ ಸ್ವಾದಿಷ್ಟ ಉಪ್ಪಿನಕಾಯಿ ನಿಮ್ಮದಾಗುವುದು.Posted via DraftCraft app