Pages

Ads 468x60px

Saturday, 28 December 2013

ಮಗನ ಮನೆಗೆ, ಬೆಂಗಳೂರಿಗೆ ಹೊರಟ ಘಳಿಗೆ...." ಅಮ್ಮ, ಅಪ್ಪನೂ ಗಿರೀಶ್ ಮಾವನೂ ಬೆಂಗಳೂರಿಗೆ ಹೋಗೋ ಪ್ಲಾನ್ ಹಾಕ್ತಾ ಇದಾರೆ, ನೀನೂ ಈ ಚಾನ್ಸ್ ಬಿಡ ಬೇಡ, ಹೊರಟು ಬಾ " ಅಂದ ಮಗ.

ನೋಡುವಾ, ಅಪ್ಪ ಇನ್ನೂ ಹೇಳಿಲ್ಲ "

" ಹೇಳೂದೆಂಥದು, ನೀನು ಬಾ, ನನ್ನ ಆಫೀಸ್, ಮನೆ ನೋಡ್ಬೇಡ್ವಾ, ಚಿಕ್ಕಮ್ಮನ ಮನೆಗೆ ಹೋಗದೇ ವರ್ಷ ಎಷ್ಟಾಯ್ತು? ಲೆಕ್ಕ ಹಾಕೂ....."

ಹೌದು, ಅವನಂದಂತೆ ನಾನು ತಂಗಿ ಮನೆಗೆ ಹೋಗದೇ ಕೆಲವು ವರ್ಷಗಳೇ ಆಯ್ತು. ನಾಗರಬಾವಿಯಲ್ಲಿ ಹೊಸ ಮನೆ ಆದಾಗ ಹೋಗಿದ್ದು.

ಗಿರೀಶ್ ಜೊತೆ ಸಂಪರ್ಕಿಸಿದಾಗ ಅವನೂ ಪ್ರವಾಸದ ದೃಢೀಕರಣ ನೀಡಿದ. ಶೀಲಾ ಕೂಡಾ ಬರುತ್ತಿದ್ದಾಳೆ ಎಂಬ ಸುಳಿವನ್ನೂ ಬಿಟ್ಟು ಕೊಟ್ಟ.

ನಿಮ್ಮ ಜೊತೆ ನಾನೂ ಬರಲಿದ್ದೇನೆ ಎಂಬ ಬಾಂಬ್ ಸಿಡಿಸದಿದ್ದರಾಗುತ್ತಾ, " ಸರಿ, ನೀನೂ ಹೊರಡು "
ಹೊರಡುವ ಸಿದ್ಧತೆ ನಡೆಯಿತು. " ನೋಡೂ, ಇಲ್ಲಿಂದ ಮಂಗಳೂರು ತನಕ ನಮ್ಮ ಬೈಕು ಗೊತ್ತಾಯ್ತಾ..."

ನಮ್ದು ಹೊಸ ಬೈಕು ಬಂದಿತ್ತು, ಇವರಿಗೋ ಬೈಕಿನಲ್ಲೇ ಲೋಕಸಂಚಾರದ ಹುಮ್ಮಸ್ಸು. " ಓ, ಹಾಗೋ, ಸಂಗ್ತಿ..." ನಮ್ಮ ಲಗ್ಗೇಜ್, ಅದೂ ಇದೂ ಹ್ಯಾಗೆ ಬೈಕ್ ನಲ್ಲಿ....!!

ಬೈಕಿನಲ್ಲೇ ಮಂಗಳೂರು ವರೆಗೆ ಹೋಗೂದಂದ್ರೇನು ಹುಡುಗಾಟವೇ, ಮನೆಯಿಂದ ಪೈವಳಿಕೆ ತನಕ ಹೋಗಬಹುದು, ಕೆಟ್ಟು ಹೊಂಡ ಬಿದ್ದಿರುವ ರಸ್ತೆಯಲ್ಲಿ ಉಪ್ಪಳದ ವರೆಗೆ ಹೇಗೋ ಸುಧರಿಸಿಕೊಂಡು ಹೋಗಬಹುದು. ಈ ಸುದ್ದಿ ಮಗನ ಕಿವಿಗೆ ಬಿತ್ತು.

" ಅಷ್ಟೇ ತಾನೇ, ನೀನು ಬೈಕಿನಲ್ಲೇ ಕೂತಿರು, ಲಗ್ಗೇಜ್ ಯಾವ್ದೂ ನೀನು ಹಿಡ್ಕೋ ಬೇಡ ತಿಳೀತಾ "

ನನಗೋ ಉಪ್ಪಿನಕಾಯಿ, ತುಪ್ಪ, ಕರಿದ ತಿಂಡಿಗಳನ್ನು ಒಯ್ಯಬೇಕೆಂದಿತ್ತು. ಈಗ ಆ ಉತ್ಸಾಹವನ್ನು ಅದುಮಿಟ್ಟುಕೊಂಡು ಕೇವಲ ನನ್ನ ಬಟ್ಟೆಬರೆಗಳನ್ನು ಜೋಡಿಸಲು ತೊಡಗಿದೆ. ಗಿರೀಶನ ವೈಬರ್ ಫೋನ್ ಕರೆ ಹೆಚ್ಚಾಗಿ, ಆಗಾಗ ಗಂಟೆ ಬಾರಿಸಿದಂತೆ ಕಿವಿಗೆ ಬಡಿಯುತ್ತಿರುತ್ತದೆ. ಆ ಹೊತ್ತಿಗೆ " ಸೀರೆ ಎಷ್ಟು ಹಿಡ್ಕೊಳ್ಳಲೀ ಗಿರೀಶಾ..." ಕೇಳದಿದ್ರಾಗುತ್ತಾ.

" ತಗೊಳ್ಳಿ ಒಂದೈದಾರು " ಅಂದ್ಬಿಟ್ಟ. ಅಲ್ಲಿಗೆ ಇದು ದೀರ್ಘ ಪ್ರಯಾಣವೆಂದು ಖಾತ್ರಿ.

" ಈಗ ಚಳಿ ಶುರುವಾಗಿದೆ, ಸ್ವೆಟ್ಟರು, ಕೋಟು ಇರಲೀ " ಫೋನು ತಂಗಿಯದ್ದು. ಮಧು ಡೆಲ್ಲಿಯಿಂದ ತಂದಿದ್ದ ತರಹೇವಾರಿ ಕೋಟುಗಳು ಹೊರ ಬಂದವು.

" ಮುಗ್ಗುಲು ವಾಸನೆ ಬರ್ತಿದೆ, ತೊಳೆಯುವುದೊಳ್ಳೆದು "

ವಾರದ ಹಿಂದೆ ಬಂದಿದ್ದ ಅಟೋಮ್ಯಾಟಿಕ್ ವಾಶಿಂಗ್ ಮೆಶೀನ್ ತೊಳೆದು, ಒಣಗಿಸಿಯೇ ಕೊಟ್ಟಿತು. ನಮ್ಮ ಸಿದ್ಧತೆಯ ಸುದ್ದಿ ಆಗ್ಗಿಂದಾಗ್ಗೆ ಗಿರೀಶನನ್ನೂ ತಲಪುತಿತ್ತು. " ಹಾಗಿದ್ರೆ ನಂಗೂ ಕೋಟು ತೆಕ್ಕೊಳ್ಳಿ " ಅಂದ.

" ಇನ್ನೂ ಒಂದು ಕೋಟು ಆಗ್ಬೇಕಲ್ಲ "

" ಇದ್ದೀತು ಕಪಾಟಿನಲ್ಲಿ " ಅನ್ನುತ್ತಾ ಹುಡುಕಿದಾಗ ಭರ್ಜರಿ ಕೋಟು ಸಿಕ್ಕಿತು.

" ಇದನ್ನೂ ತೊಳೆಯುವುದುತ್ತಮ, ಇಷ್ಟು ಚೆನ್ನಾಗಿ ಹಳೇ ಮೆಶೀನು ತೊಳೆದದ್ದು ನಾನು ಕಂಡಿಲ್ಲ " ಅಂದರು ನಮ್ಮವರು.

" ನಾಳೆ ಬೆಳ್ಳಂಬೆಳಗ್ಗೆ ಹೊರಡೂದಂತೆ, ಈ ರಾತ್ರಿ ತೊಳೆಯುವ ಕೆಲಸವೇ ಆಯ್ತು " ಗೊಣಗುಟ್ಟುತ್ತಾ ವಾಶಿಂಗ್ ಮೆಶೀನ್ ಒಳಗೆ ಹಾಕಿ, ತೆಗೆದು ಮಾಡಿದ್ದೂ ಆಯಿತು.

ಶಿರಾಡಿಘಾಟ್ ರಸ್ತೆ ಏನೂ ಚೆನ್ನಾಗಿಲ್ಲ, ನಾವು ಮಡಿಕೇರಿ, ಮೈಸೂರು ರಸ್ತೆಯಲ್ಲಿ ಪ್ರಯಾಣಿಸುವುದುತ್ತಮ ಎಂಬ ಸಲಹೆ ಬಂದಿತು. ಮೈಸೂರಿನಲ್ಲಿ ನಮ್ಮತ್ತಿಗೆ ಮನೆಯೂ ಇದೆ. ನಮ್ಮವರು ಅವರಕ್ಕನಿಗೂಂದು ಫೋನಾಯಿಸಿ ಬರುವ ಸೂಚನೆ ಕೊಟ್ಟೂ ಆಯಿತು.

" ಹಾಗಿದ್ರೆ ನಾವು ಹಿರಣ್ಯಕ್ಕೆ ಬರ್ತೇವೆ.." ಇಲ್ಲಿಂದಾನೇ ಪುತ್ತೂರು ರಸ್ತೆಯಿಂದ ಹೋಗುವ ತೀರ್ಮಾನಕ್ಕೆ ಬಂದ ಗೆಳೆಯರ ವ್ಯವಹಾರದಿಂದ ನನ್ನ ಬೈಕ್ ಪ್ರಯಾಣ ಉಳಿಯಿತು, ಆದರೆ ಮಗನಿಗಾಗಿ, ತಂಗಿಗಾಗಿ ಇನ್ನು ಏನನ್ನೂ ಅಡುಗೆಮನೆಯ ಪ್ರಯೋಗಶಾಲೆಯಲ್ಲಿ ತಯಾರಿಸಿ ಒಯ್ಯಲು ಸಮಯವಿಲ್ಲ. ಚಕೋತಾ ಕಿತ್ತದ್ದು ಇದ್ದಿತು. ಅದನ್ನೇ ಚೀಲಕ್ಕೇರಿಸಿದ್ದು ನನ್ನ ತೃಪ್ತಿ ....

ಸುದೀರ್ಘ ಪ್ರಯಾಣದ ಇನ್ನಷ್ಟು ವಿವರ ಹಾಗೂ ಪ್ರೇಕ್ಷಣೀಯ ತಾಣಗಳ ಚಿತ್ರಣ ಬರಲಿದೆ.... ನಿರೀಕ್ಷಿಸಿ!Posted via DraftCraft app

Wednesday, 18 December 2013

ಪುಷ್ಪ ಸಾಂಗತ್ಯಬೆಳಕಿನ ಬೆಳಗಾಯಿತು
ಹಸಿರಿನ ಉಸಿರು ಹೊರ ಹೊಮ್ಮಿತು
ಪ್ರಭಾತ ಕಿರಣ ತೂರಿ ಬಂದಿತು
ಹೂವು ಬಿರಿದು ಅರಳಿತು
ಗಿಡದಲಡಗಿದ ಮೊಗ್ಗೆ ಏನೆಂದಿತು
ಮುಸ್ಸಂಜೆಯೊಂದು ಬರಲಿದೆ
ಚಿಂತಿಸದಿರು ಅಕ್ಕಾ,  
ಇದೇ ಮೊಗ್ಗೆ ನಾಳೆ ಬಿರಿಯಲಿದೆ
ಮುಗಿಯದ ವರ್ತಮಾನ ಇಲ್ಲಿದೆ |

ಹೂವಿನೊಳಗೆ ಕುಸುಮವೂ
ಕುಸುಮದೊಳಗೆ ಗಂಧವೂ
ತುಂಬಿದದವರಾರೇ ಅಕ್ಕಾ,  
ಹೂವಿನಿಂದ ಚೆಲುವು ಬಂದಿತೇ
ಈ ಚೆಲುವು ಮೊದಲೇನಾಗಿತ್ತೇ
ಕೇಳಿದರೆ ಉತ್ತರಿಸುವವರಿಲ್ಲ
ತಿಳಿದವರು ಇಲ್ಲವೇ ಇಲ್ಲ |

Posted via DraftCraft app

Saturday, 7 December 2013

ಬಸಳೇ ಹುರುಳೀ ಬೆಂದಿ
ನಮ್ಮ ಪ್ರಾದೇಶಿಕ ವೈವಿಧ್ಯತೆಗನುಸಾರವಾಗಿ ಈ ವ್ಯಂಜನ ಬಸಳೇ ಕೂಟು, ಗಸಿ, ಬೆಂದಿ ಇತ್ಯಾದಿ ಹೆಸರುಗಳನ್ನು ಹೊಂದಿದೆ.   ಹುರುಳೀಕಾಳು,  ಪಪ್ಪಾಯಿ ಹಾಗೂ ಬಸಳೆಗಳ ಸಮರಸದ ಮಿಶ್ರಣ,  ಅನ್ನದೊಂದಿಗೆ, ಚಪಾತೀ,  ಅಕ್ಕಿ ರೊಟ್ಟಿ ಅಥವಾ ಇನ್ಯಾವುದೇ ರೊಟ್ಟಿಯಿರಲಿ, ಸವಿಯಬಹುದಾದ ಗ್ರಾಮೀಣ ಜನಜೀವನದ ಒಂದು ನಳಪಾಕ.  ಬಸಳೆ ಶೀತಗುಣ ಹೊಂದಿರುವ ಸೊಪ್ಪು ತರಕಾರಿಯಾಗಿದ್ದು,  ಪಪ್ಪಾಯಿ ಉಷ್ಣಗುಣವುಳ್ಳದ್ದು.   ಹಾಗಾಗಿಯೇ ಇವೆರಡನ್ನೂ ಜತೆಯಾಗಿ ತಿಂದರೆ ಸಮಶೀತೋಷ್ಣದಿಂದ ಕೂಡಿ ಶರೀರಕ್ಕೆ ಹಿತ.   ಇದು ಹಿರಿಯರ ಅಭಿಮತ.   ಶಕ್ತಿವರ್ಧಕವಾಗಿರುವ ಹುರುಳಿ ಸೇರಿದ ಬಸಳೆ ಬೆಂದಿಯ ರುಚಿಯನ್ನು ಸವಿದವರೇ ಬಲ್ಲರು.   ಬಸಳೆ ಚಪ್ಪರ,  ಪಪ್ಪಾಯದ ಮರ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿ ಇದ್ದೇ ಇರುವಂತಹದು.

ದಿನವಿಡೀ ಹೊಲಗದ್ದೆಗಳಲ್ಲಿ ದುಡಿಯುವ ರೈತಾಪಿ ಮಂದಿ ತಮ್ಮ ಶರೀರದ ಕಸುವನ್ನು ಸಮತೋಲನದಲ್ಲಿರಿಸಿಕೊಳ್ಳಲು ಹುರುಳಿಯಿಂದಲೇ ವಿಧವಿಧವಾದ ವ್ಯಂಜನಗಳನ್ನು ತಯಾರಿಸಿ ಉಣ್ಣುವ ವಾಡಿಕೆ.   ಹುರುಳೀ ಸಾರು,  ಹುರುಳಿ ಚಟ್ನಿ,  ಗಸಿ ಇತ್ಯಾದಿಗಳು ಗ್ರಾಮೀಣ ಜನತೆಯ ದೈನಂದಿನ ಖಾದ್ಯಗಳಲ್ಲಿ ಹಾಸುಹೊಕ್ಕಾಗಿವೆ.   ಇವನ್ನೆಲ್ಲ ಅಂಗಡಿಯಿಂದ ಕೊಂಡು ತರುವ ಪ್ರಮೇಯವೇ ಇರಲಿಲ್ಲ.     ಅಧಿಕ ಕಬ್ಬಿಣಾಂಶ ಹೊಂದಿರುವ ಹುರುಳಿ,  ಒಣಭೂಮಿ ಬೆಳೆಯಾಗಿದ್ದು,  ಹಿಂದಿನಕಾಲದಿಂದಲೇ ರೈತರು ಗದ್ದೆ ಕಟಾವು ಆದ ಬೆನ್ನಿಗೇ ಹುರುಳಿ ಬಿತ್ತನೆ ಮಾಡುವ ವಾಡಿಕೆ.  ಕೇವಲ ಹುರುಳಿ ಮಾತ್ರವಲ್ಲ,  ಉದ್ದು,  ಹಸರು,  ತೊಗರಿಗಳೂ ಹೀಗೆ ಒಣಭೂಮಿ ಬೆಳೆಗಳಾಗಿವೆ.    ಹಿಂದೆ ಈಗಿನಂತೆ ಪಶು ಆಹಾರ ಎಂಬ ಸಿದ್ಧ ವಸ್ತು ಇರಲಿಲ್ಲ.   ಗದ್ದೆ ಉಳಲು ಯಂತ್ರಗಳೂ ಇಲ್ಲವಾಗಿದ್ದುದರಿಂದ ಕೃಷಿಕರು ತಮ್ಮ ಜಾನುವಾರುಗಳನ್ನೇ ಗಟ್ಟಿಮುಟ್ಟಾಗಿ ಸಾಕಿಕೊಳ್ಳುತ್ತಿದ್ದರು.   ಹುರುಳಿ ಅಂದಿಗೂ ಇಂದಿಗೂ ಅತ್ಯುತ್ತಮ ಪಶು ಆಹಾರವಾಗಿದೆ,   ಆಂಗ್ಲ ಭಾಷೆಯಲ್ಲಿ ಈ ಕಾರಣದಿಂದಲೇ horse gram ಎಂಬ ಹೆಸರು ಬಂದಿದೆ.

  Basella alba ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿರುವ ಬಸಳೆಯಲ್ಲಿರುವ ಶರೀರ ಪೋಷಕ ಗುಣಗಳು ಈ ರೀತಿಯಾಗಿವೆ.   ಆಂಂಟಿ ಓಕ್ಸಿಡೆಂಟ್ ಗುಣದ ಬಸಳೆ ನಾರು ಪದಾರ್ಥವಾಗಿದ್ದು ಕ್ಯಾಲ್ಸಿಯಂ,  ಕಾರ್ಬೋಹೈಡ್ರೇಟ್ ಗಳಿಂದ ಸಮೃದ್ಧವಾಗಿದೆ.   ವಿಟಮಿನ್ ಎ, ಸಿ,  ಖನಿಜಾಂಶಗಳೂ ಅಡಕವಾಗಿರುವ ಬಳ್ಳಿ ಸಸ್ಯ. ದಕ್ಷಿಣ ಕನ್ನಡಿಗರ ಆಡುನುಡಿಯಲ್ಲಿ ಬಪ್ಪಂಗಾಯಿ ಎಂದು ಕರೆಯಲ್ಪಡುವ ಪಪ್ಪಾಯಿ,  Carica papaya ಎಂಬ ಸಸ್ಯಶಾಸ್ತ್ರೀಯ ಹೆಸರೂ ಇದಕ್ಕಿದೆ,  ಪೌಷ್ಟಿಕ ಆಹಾರವೂ ಹೌದು.
ಬಸಳೇ ಬೆಂದಿ ಮಾಡುವ ವಿಧಾನ:

ಒಂದು ಕಪ್ ಹುರುಳೀ ಕಾಳು,  ನೆನೆಸಿಡಿ.
ಅವಶ್ಯವಿರುವಷ್ಟು ಬಸಳೆ ಕತ್ತರಿಸಿಡಿ.
ಪಪ್ಪಾಯ ಹೋಳುಗಳು.
ರುಚಿಗೆ ಉಪ್ಪು ಹಾಕಿ ಬೇಯಿಸಿ.

ಒಂದು ಕಪ್ ಕಾಯಿತುರಿ
ಒಂದು ಚಮಚ ಉದ್ದಿನಬೇಳೆ
3 ಚಮಚ ಕೊತ್ತಂಬರಿ
ಚಿಕ್ಕ ಚಮಚ ಜೀರಿಗೆ
ಚಿಕ್ಕ ಚಮಚ ಮೆಂತೆ
ಸ್ವಲ್ಪ ಇಂಗು
ಎಣ್ಣೆ ಪಸೆಯಲ್ಲಿ ಹುರಿದುಕೊಳ್ಳಿ.
ಕಾಯಿತುರಿಯೊಂದಿಗೆ ಅರೆಯಿರಿ.

ಅರೆದ ಮಸಾಲೆಗೆ ನೆಲ್ಲಿಗಾತ್ರದ ಹುಣಸೇಹಣ್ಣಿನ ರಸ,  ಬೇಕಿದ್ದರೆ ಬೆಲ್ಲವನ್ನೂ ಹಾಕಿಕೊಳ್ಳಿ.   ಬೇಯಿಸಿಟ್ಟ ಬಸಳೆ ಮಿಶ್ರಣಕ್ಕೆ ಎರೆದು,  ರುಚಿಗೆ ಉಪ್ಪು ,  ಅವಶ್ಯವಾದ ನೀರು ಎರೆದು ಕುದಿಸಿ.   ತಂಗಿನೆಣ್ಣೆಯಲ್ಲಿ  ಬೆಳ್ಳುಳ್ಳಿ ಹುರಿದು ಒಗ್ಗರಣೆ ಕೊಡುವಲ್ಲಿಗೆ ಬಸಳೆ ಬೆಂದಿ ಆದಂತೆ.


ಅಕ್ಕಿ  3 ಕಪ್
ಉದ್ದು 1 ಕಪ್
ಮಂತೆ  1 ಚಮಚ
ಹುರುಳಿ ಕಾಳು  ಅರ್ಧ ಕಪ್
ಎಲ್ಲವನ್ನೂ ನೆನೆಸಿಡಿ.
ಬೇಳೆಕಾಳುಗಳನ್ನು ನುಣ್ಣಗೆ ಅರೆದು ತೆಗೆಯಿರಿ.   ಅಕ್ಕಿಯನ್ನೂ ಅರೆದು,  ಹಿಟ್ಟುಗಳನ್ನು ಕೂಡಿಸಿ,  ಉಪ್ಪು ಬೆರೆಸಿ ಎಂಟು ಗಂಟೆಗಳ ಕಾಲ ಹುದುಗು ಬರಲು ಮುಚ್ಚಿಡಿ.   
ಮುಂಜಾನೆ ದೋಸೆ ಎರೆದು ತೆಂಗಿನ ಚಟ್ನಿಯೊಂದಿಗೆ ತಿನ್ನಿ.
ನೀರು ದೋಸೆ:

2 ಕಪ್ ಅಕ್ಕಿ
ಅರ್ಧ ಕಪ್ ಹುರುಳಿ
ನೆನೆಸಿಟ್ಟು,  ನುಣ್ಣಗೆ ಅರೆದು,  ರುಚಿಗೆ ಉಪ್ಪು ಬೆರೆಸಿ,  ಸಾಕಷ್ಟು ತೆಳ್ಳಗೆ ಮಾಡಿಕೊಂಡು ನೀರುದೋಸೆ ಎರೆದುಕೊಳ್ಳಿ.  ಹುರುಳೀ ಚಟ್ನಿ :

ಒಂದು ಕಡಿ ತೆಂಗಿನ ತುರಿ
3 ಚಮಚ ಹುರುಳಿ ಕಾಳು
2 ಒಣಮೆಣಸು,  ಹಸಿಮೆಣಸೂ ಆದೀತು,  ಗಾಂಧಾರಿ ಮೆಣಸು ಇನ್ನೂ ಚೆನ್ನ.
ರುಚಿಗೆ ಉಪ್ಪು,  ಹುಳಿ

ಹುರುಳಿಯನ್ನು ಸುವಾಸನೆ ಬರುವಂತೆ ಎಣ್ಣೆ ಪಸೆ ಮಾಡಿಕೊಂಡು ಹುರಿದು,  ಇನ್ನಿತರ ಸಾಮಗ್ರಿಗಳೊಂದಿಗೆ ಅರೆದುಕೊಳ್ಳಿ.  ಕರಿಬೇವಿನೆಸಳಿನೊಂದಿಗೆ ಒಗ್ಗರಣೆ ಕೊಟ್ಟು ಬಿಡಿ.   

ಇನ್ನಿತರ ಬೇಳೆಕಾಳುಗಳ ಕೋಸಂಬರಿ ತಯಾರಿಸುವಂತೆ ಹುರುಳಿ ಕಾಳನ್ನೂ ಮೊಳಕೆ ಬರಿಸಿ ಕೋಸಂಬರಿ ತಯಾರಿಸಿ.

ಪುಷ್ಟಿದಾಯಕವಾದ ಇಂತಹ ಧಾನ್ಯಗಳನ್ನು ದಿನನಿತ್ಯದ ಅಡುಗೆಯಲ್ಲಿ ಬಳಸುತ್ತಾ ಇದ್ದಲ್ಲಿ ಮಕ್ಕಳೂ ಆರೋಗ್ಯವಂತರಾಗಿ,  ದೃಢಕಾಯರಾಗಿರುವುದರಲ್ಲಿ ಸಂಶಯವಿಲ್ಲ.   " ಮಗು ಏಕೋ ನಿತ್ರಾಣಿಯಾಗಿದೆ "   ಎಂದು ವೈದ್ಯರಲ್ಲಿಗೆ ಹೋಗುವ ಅವಶ್ಯಕತೆಯೇ ಬರಲಾರದು.

Posted via DraftCraft app

Saturday, 30 November 2013

ಅಂಬಟೆ, ಸಿಹಿಯುಂಟೇ....ನಮ್ಮತ್ತಿಗೆ ಬಂದಿದ್ರು,   ಊಟದ ಹೊತ್ತಿಗೇ ಬಂದಿಳಿದರು.   ನನ್ನ ಅಡುಗೆಯಲ್ಲಿ ವಿಶೇಷವೇನೂ ಇರಲಿಲ್ಲವಾಗಿ,   ಬೇಗನೆ ಹಿತ್ತಿಲಿಗೆ ಹೋಗಿ ಅಂಬಟೆಮರದ ಅಕ್ಕಪಕ್ಕ ಹುಡುಕಿ,  ಚೆನ್ನಾಗಿಯೇ ಇದ್ದ ನಾಲ್ಕು ಹಣ್ಣಾದ ಅಂಬಟೆಗಳನ್ನು ಹೆಕ್ಕಿ ತಂದು ದಿಢೀರನೆ ಅಂಬಟೆ ಗೊಜ್ಜು + ಸಾರು ತಯಾರಿಸಿಯೇ ಬಿಟ್ಟೆ.   ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ,  ಅಂಬಟೆಯ ಆತಿಥ್ಯದಿಂದ ಸುಪ್ರೀತರಾದ ನಮ್ಮತ್ತಿಗೆ   " ಅಂಬಟೆ ಉಪ್ಪಿನಕಾಯಿ ಹಾಕಿಲ್ಲವೇ "  ಕೇಳಿದ್ರು.

" ಇನ್ನೂ ಹಾಕಿಲ್ಲ,  ಇದು ಈಗ ಹಣ್ಣಾಯ್ತಲ್ಲ,  ಮೊದಲೇ ಹಾಕಬೇಕಿತ್ತು,  ಮರದಿಂದ ಕೊಯ್ದು ಕೊಡಲು ಯಾರಾದ್ರೂ ಬೇಕಲ್ಲ "  ಗೊಣಗಿದೆ.

" ಅಂಬಟೆಮರ ಹತ್ತಲು ಯಾರೂ ಒಪ್ಪುವುದಿಲ್ಲ,  ತುಂಬಾ ಮೆತ್ತಗಿನ ಮರ ಅದು "  ಅಂದರು ಅತ್ತಿಗೆ.  " ಹೌದೂ,  ತೋಟದಲ್ಲಿ ಇನ್ನೂ ಇದೆಯಲ್ಲ ಅಂಬಟೆಮರಗಳು..... ಅಲ್ಲಿ ಹೋಗಿ ನೋಡಿದ್ದೀಯಾ "  ತನಿಖೆ ಸುರು ಆಯ್ತು.

" ಇಲ್ಲಾಪ್ಪ,  ಅಲ್ಲಿ ಇಲ್ಲಿ ಹೋಗಿ ನಾನ್ಯಾಕೆ ನೋಡಲಿ,  ಮನೆ ಬಾಗಿಲಲ್ಲೇ ಇರೂವಾಗ "

" ಹಾಗಿದ್ರೆ ತೋಟದಲ್ಲಿ ಇದ್ಯಾ ಅಂತ ನಾನೇ ನೋಡ್ಕಂಡ್ಬರ್ತೇನೆ .... ದೋಟಿ,  ಕೊಕ್ಕೆ ಎಲ್ಲಿದೆ ? "  ಕೇಳುತ್ತಾ ಅತ್ತಿಗೆ ಉದ್ದನೆಯ ಕೋಲು ಸಂಪಾದಿಸಿ,  ಕೈಲೊಂದು ಪ್ಲಾಸ್ಟಿಕ್ ಚೀಲದೊಂದಿಗೆ ತೋಟಕ್ಕೆ ಹೋದರು.

ಬರುತ್ತಾ ಚೀಲ ತುಂಬಾ ಅಂಬಟೆಕಾಯಿಗಳು ಬಂದುವು.   " ಇದು ನಿಂಗೆ ಹೇಗೂ ಬೇಡ ತಾನೇ,  ನಾನೇ ಉಪ್ಪಿನಕಾಯಿ ಹಾಕಿಕೊಳ್ಳುತ್ತೇನೆ "  ಮಾರನೇದಿನ ಪುತ್ತೂರಿಗೆ ಹೋಗುವ ಏಳು ಗಂಟೆಯ ಬಸ್ಸಿನಲ್ಲಿ ಅಂಬಟೆಗಳೂ ಹೋದುವು.

ಇನ್ನೊಮ್ಮೆ ಭೇಟಿ ಆದಾಗ,   " ಅದೆಂಥ ಕರ್ಮದ ಅಂಬಟೆಕಾಯಿ.... ಎಲ್ಲ ಕೈಪ್ಪೆ ( ಕಹಿ ) ಆಯ್ತಲ್ಲ,   ಅಷ್ಟೂ ಸಾಸಿವೆ,  ಮೆಣಸು ಅರೆದು ಮಾಡಿದ ಉಪ್ಪಿನಕಾಯಿ ದಂಡ ಆಯ್ತು,   ತೆಂಗಿನಮರದ ಬುಡಕ್ಕೆ ಚೆಲ್ಲಿದ್ದು ಗೊತ್ತಾ "  ಅನ್ನೋದೇ ನಮ್ಮತ್ತಿಗೆ.

" ಮೆಂತ್ಯ ಹಾಕಿದ್ದು ಜಾಸ್ತಿ ಆಯ್ತೋ ಏನೋ "  ಅಂದೆ ಮೆಲ್ಲಗೆ.

" ಏನೂ ಅಲ್ಲ,  ಮಾಮೂಲಿಯಾಗಿ ಮಾಡಿದ್ದು,   ಆ ಅಂಬಟೆಯೇ ಕಹಿ,  ಬರೀ ಸಿಪ್ಪೆ ಗೊರಟು "

" ಹೌದೇ,  ಅಂಬಟೆಯಲ್ಲೂ ಕಹಿ ಜಾತಿ ಇದೆಯಾ ? " ಆವಾಗ ನನಗೂ ಗೊತ್ತಿರಲಿಲ್ಲ.

                                               
      <><><>   <><><>


‘Spondias pinnata’   (spondias mangifera)  ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಅಂಬಟೆ, ತಮಿಳಿನಲ್ಲಿ ಪುಳಿಚ್ಚ ಕ್ಕಾಯ್ ಅನಿಸಿಕೊಂಡಿದೆ ಹಾಗೂ Anacardiaceae ಕುಟುಂಬಕ್ಕೆ ಸೇರಿದೆ.   ಇದರಲ್ಲಿ ಸಿಹಿ ವರ್ಗವೂ ಇದೆ,  ಜನಸಾಮಾನ್ಯರ ಬಾಯಿಯಲ್ಲಿ ಕಸಿ ಅಂಬಟೆಯಾಗಿರುವ ಈ ಪ್ರಬೇಧ ವೈಜ್ಞಾನಿಕವಾಗಿ spondias dulcis’ ಆಗಿರುತ್ತದೆ.    ಹಿಂದೂ ಪಂಚಾಂಗ ರೀತ್ಯಾ 27 ನಕ್ಷತ್ರಗಳಿವೆಯಷ್ಟೆ,   ನಕ್ಷತ್ರ ಪ್ರಕರಣದಲ್ಲಿ ಒಂದೊಂದು ವೃಕ್ಷವನ್ನು ಒಂದೊಂದು ನಕ್ಷತ್ರದೊಂದಿಗೆ ಸಮೀಕರಿಸಿರುವುದನ್ನು ಕಾಣಬಹುದು.   ಇಂತಹ ವೃಕ್ಷಗಳ ಪಟ್ಟಿಯಲ್ಲಿ ಅಂಬಟೆಯೂ ಇದೆ.   ಸಿಹಿ ಅಂಬಟೆಯನ್ನು ಸಂಸ್ಕೃತದಲ್ಲಿ ಮಧುರಾಮ್ಲಕ, ಅಂಬಸ್ಟ,  ಆಮ್ರೋಥಕ  ಎಂದು ವರ್ಣಿಸಲಾಗಿದೆ,     ಅಲ್ಲಿಗೆ ಅಂಬಟೆ ಮರವೂ ಭಾರತ ಮೂಲದ ಸಸ್ಯವರ್ಗಗಳಲ್ಲೊಂದು ಎಂದಾಯಿತು.   ಆಂಗ್ಲ ಭಾಷೆಯಲ್ಲಿ Indian hog plum ಎಂದೇ ಇದಕ್ಕೆ ಹೆಸರು.

ಎಲೆ ಹಾಗೂ ಕಾಂಡದ ತೊಗಟೆ ಸುವಾಸನಾಭರಿತವಾಗಿದ್ದು ಇದರ ರಸಸಾರವು ಕನರು ( ಚೊಗರು ) ಗುಣ ಹೊಂದಿದೆ ಹಾಗೂ ತೊಗಟೆಯ ಕಷಾಯ ಅತಿಸಾರ ವ್ಯಾಧಿಯಲ್ಲಿ ಬಳಕೆಯಲ್ಲಿದೆ.  ಸ್ತ್ರೀಯರಲ್ಲಿ ಸಾಮಾನ್ಯವಾಗಿರುವ ಬಿಳಿಸೆರಗಿನ ದೋಷಕ್ಕೆ ಎಲೆಗಳ ಕಷಾಯ ಔಷಧಿ.  ಸಂಧಿವಾತದಿಂದ ಬಳಲುತ್ತಿರುವವರಿಗೆ ಎಳೆಯ ಅಂಬಟೆಕಾಯಿಗಳ ಸೇವನೆ ಗುಣಕಾರಿ ಹಾಗೂ ರಕ್ತಗುಣಾಭಿವೃದ್ಧಿಕಾರಕ.   ಆಯುರ್ವೇದದಲ್ಲಿ ಇದರ ಎಲೆ, ಬೇರು, ತೊಗಟೆಗಳನ್ನು ವ್ಯಾಧಿ ನಿವಾರಕವಾಗಿ ಇನ್ನಿತರ ನಾರುಬೇರುಗಳ ಸಂಯೋಜನೆಯೊಂದಿಗೆ ಬಳಸಲಾಗುತ್ತಿದೆ.

ಪ್ರತಿ 100ಗ್ರಾಂ ಖಾದ್ಯಯೋಗ್ಯವಾದ ಅಂಬಟೆಯ ತಿರುಳಿನಲ್ಲಿ ಪ್ರತಿಶತ 46.0 k ಕ್ಯಾಲೋರಿಗಳಷ್ಟು ಶಕ್ತಿ,   ಪ್ರೊಟೀನ್ .2 ಗ್ರಾಂ,  ಕೊಬ್ಬು .1 ಗ್ರಾಂ,   ಕಾರ್ಬೋಹೈಡ್ರೇಟ್ಸ್ 12.4 ಗ್ರಾಂ,  ಕ್ಯಾಲ್ಸಿಯಂ 56.0 ಮಿ.ಗ್ರಾಂ,   ಫಾಸ್ಫರಸ್ 67.0 ಮಿ.ಗ್ರಾಂ,   ಕಬ್ಬಿಣ .3 ಮಿ.ಗ್ರಾಂ,  ವಿಟಮಿನ್ ಸಿ  36.0 ಮಿ.ಗ್ರಾಂ ಹಾಗೂ ಅಲ್ಪ ಪ್ರಮಾಣದಲ್ಲಿ ಕೆರೋಟಿನ್,  ಥಯಾಮಿನ್,  ರಿಬೋಫ್ಲವಿನ್ ಗಳು ಅಡಕವಾಗಿವೆ.

ಶರತ್ಕಾಲದಲ್ಲಿ ಎಲೆಗಳನ್ನೆಲ್ಲ ಉದುರಿಸಿ ಬೋಳಾಗಿ ನಿಲ್ಲುವ ಈ ಮರ,  ವಸಂತ ಮಾಸ ಬಂದೊಡನೆ ಹೂಗೊಂಚಲುಗಳಿಂದ ತುಂಬಿ ಬಿಡುತ್ತದೆ.   ಹೂವರಳಿದ ಬೆನ್ನಿಗೇ ಎಲೆಗಳೂ ತಾನಾಗಿಯೇ ಮೂಡಿ ಹಚ್ಚಹಸಿರಿನಲ್ಲಿ ಕಂಗೊಳಿಸುವ ಹೊತ್ತಿಗೆ ಹೂಗಳು ಮಿಡಿಕಾಯಿಗಳಾಗಿರುತ್ತವೆ.   ಇನ್ನೂ ಗೊರಟು ಕಟ್ಟಿಲ್ಲದ ನೆಲ್ಲಿಕಾಯಿ ಗಾತ್ರದ ಮಿಡಿಗಳನ್ನು ಮಾವಿನಮಿಡಿಯ ತರಹ ಉಪ್ಪಿನಕಾಯಿ ಹಾಕಬಹುದು.

ಅಂಬಟೆ ಮಿಡಿ ಎಂದೊಡನೆ ಒಂದು ಹಳೆಯ ಸಂಗತಿ ನೆನಪಿಗೆ ಬಂದಿತು.   ಅದೇನಾಯ್ತೂಂದ್ರೆ ಮಾವಿನಮಿಡಿ ಉಪ್ಪಿನಕಾಯಿ ಹಾಕಿ ಆಗಿತ್ತು.   ಯಥಾಪ್ರಕಾರ ಅಂಬಟೆ ಹೂ ಬಿಟ್ಟಿತು,   ಎಲೆಗಳೂ ತುಂಬಿದ ಮರದ ಒಂದು ಗೆಲ್ಲು ಮಳೆಗಾಲದ ಆರಂಭದ ದಿನಗಳಲ್ಲಿ ಗಾಳಿಯ ಹೊಡೆತಕ್ಕೆ ಬಿತ್ತು.   ಆಗ ಜಾನುವಾರುಗಳೂ ಇದ್ದಿದ್ದರಿಂದ  " ಈ ಸೊಪ್ಪು ಕತ್ತರಿಸಿ ಹಟ್ಟಿಗೆ ಹಾಕು "  ಎಂದು ಕೆಲಸದಾಕೆ ಕಲ್ಯಾಣಿಗೆ ಹೇಳಿ ಬಿಟ್ಟು ಮನೆಯೊಳಗಿನ ಕೆಲಸಕಾರ್ಯಗಳಿಗೆ ಹೋದೆ.   ಅವಳೂ ಪರಮಾನಂದದಿಂದ ಸೊಪ್ಪು ಕತ್ತರಿಸಲಾರಂಭಿಸಿದಳು.   ಯಾಕೋ ನನ್ನ ಬಿಡುವಾದಾಗ ಬಂದು ನೊಡಿದ್ರೆ ಅಂಬಟೆ ಮಿಡಿಗಳನ್ನು ಸಂಗ್ರಹಿಸುವ ಕಾಯಕದಲ್ಲಿ ಅವಳು ನಿರತಳಾಗಿದ್ದಳು.   " ಹಟ್ಟಿಗೆ ಸೊಪ್ಪು ಹಾಕಿ ಆಯ್ತೇ "  ಕೇಳುತ್ತಾ ಬಂದಾಗ ಅವಳು   " ಈ ಅಂಬಟೆಕಾಯಿ ನಿಮಗೆ ಬೇಡ ಅಲ್ವೇ ಅಕ್ಕಾ,   ಮಾವಿನಮಿಡಿ ಹಾಕಾಗಿದೆ,   ಇದು ಕಂಡಾಬಟ್ಟೆ ಉಷ್ಣ... ನಾನು ಕೊಂಡ್ಹೋಗ್ಲಾ "  ಅಂದಳು.

" ಸ್ವಲ್ಪ ನಂಗೂ ಇರಲಿ,  ಈ ಮಿಡಿ ಹೇಗೇಂತ ನೋಡಿದ ಹಾಗೂ ಆಯ್ತು "  ಅಂತಂದು ಅವಳ ಮಿಡಿ ಸಂಗ್ರಹವನ್ನು ಅಡುಗೆಮನೆಗೆ ಸಾಗಿಸಿದೆ.   ಹೇಗೂ ಮಾವಿನ ಮಿಡಿಗೆ ಮಾಡಿದ್ದ ಮಸಾಲೆ ಮಿಕ್ಕಿದ್ದು ಇತ್ತು.  ಅದನ್ನೇ ಬೆರೆಸಿ ಅಂಬಟೆ ಉಪ್ಪಿನಕಾಯಿ ತಯಾರಾಯಿತು.   

ಗಾಜಿನ ಭರಣಿಯಲ್ಲಿ 100 ಅಂಬಟೆಮಿಡಿಗಳನ್ನು 3 ಕಪ್ ಹರಳುಪ್ಪು ಬೆರೆಸಿ ಇಟ್ಟು 2 -3 ದಿನ ಆಗುತ್ತಲೇ ಒಣ ಸೌಟಿನಲ್ಲಿ ಕೈಯಾಡಿಸಿ.
ವಾರದೊಳಗೆ ಈ ಮಿಡಿಯೂ ಮಾವಿನ ಮಿಡಿಯಂತೆ ಉಪ್ಪೆಳೆದು ಹಸಿರು ಬಣ್ಣದಿಂದ ಮಾಸಲು ವರ್ಣಕ್ಕೆ ತಿರುಗಿತೇ,  ಈ ಹಂತದಲ್ಲಿ ಮಸಾಲೆ ಅರೆದು ಹಾಕಿರಿ.

3 ಕಪ್ ಸಾಸಿವೆ ಹುಡಿ
1 ಕಪ್ ಮೆಣಸಿನ ಹುಡಿ
2 ಟೀ ಸ್ಪೂನ್ ಅರಸಿನ
ಇಂಗು ಸುವಾಸನೆಗೆ ತಕ್ಕಷ್ಟು
1 ಕಪ್ ಪುಡಿಯುಪ್ಪು

ಮಿಡಿಗಳನ್ನು ಉಪ್ಪಿನಿಂದ ತೆಗೆದು ಬಟ್ಟೆಯಲ್ಲಿ ಅಥವಾ ಬುಟ್ಟಿಯಲ್ಲಿ ಹರಡಿ ಇಡಿ.
ಭರಣಿಯ ಉಪ್ಪುನೀರನ್ನು ಜಾಲರಿಯಲ್ಲಿ ಸೋಸಿ ಇಟ್ಟುಕೊಳ್ಳಿ.   
ಸಾಸಿವೆ ಹುಡಿಯನ್ನು ಈ ಉಪ್ಪುನೀರಿನಲ್ಲಿ ಮಿಕ್ಸೀ ಉಪಯೋಗಿಸಿ ಅರೆಯಿರಿ.
ಜಾರ್ ಶುಭ್ರವಾಗಿಯೂ,  ತೇವರಹಿತವೂ ಆಗಿರಬೇಕು.  ನುಣ್ಣಗಾದ ಸಾಸಿವೆಗೆ ಮೆಣಸಿನ ಹುಡಿ,  ಅರಶಿನ ಸೇರಿಸಿ ಇನ್ನೊಮ್ಮೆ ಅರೆದಾಗ ಉಪ್ಪಿನಕಾಯಿ ಮಸಾಲೆ ಸಿದ್ಧ.

ಬಟ್ಟೆಯಲ್ಲಿ ಹರಡಿದ ಅಂಬಟೆಮಿಡಿಗಳನ್ನು ಪರಿಶೀಲಿಸಿ, ( ಕೆಟ್ಟು ಹೋದ ಮಿಡಿಗಳು ಬೇಡ,  ತುಂಬಾ ಮೆತ್ತಗಾಗಿದ್ದೂ ಬೇಡ ) ಭರಣಿಗೆ ಹಾಕಿ ಮೇಲಿನಿಂದ ಮಾಡಿಟ್ಟ ಮಸಾಲೆಯನ್ನು ಸೌಟಿನಲ್ಲಿ ಎರೆಯುತ್ತಾ ಬನ್ನಿ.  ಮಸಾಲೆ ಇಡ್ಲಿ ಹಿಟ್ಟಿನ ದಪ್ಪ ಇರಬೇಕು.  ಮರದ ಸೌಟಿನಲ್ಲಿ ಒತ್ತಿ ಒತ್ತಿ ತುಂಬಿಸಿ.  ಮೇಲೆ ಒಂದು ಸೌಟು ಪುಡಿಯುಪ್ಪು ಹರಡಿ,  ತೆಳ್ಳಗಿನ ಪ್ಲಾಸ್ಟಿಕ್ ಹಾಳೆ ಮುಚ್ಚಿ  ( ಪ್ಲಾಸ್ಟಿಕ್ ಇಲ್ಲದ ಕಾಲದಲ್ಲಿ ತೆಳ್ಳಗಿನ ಬಟ್ಟೆ ಮುಚ್ಚುವ ಪದ್ಧತಿ ಇತ್ತು ) ಭರಣಿಯ ಬಾಯಿ ಬಿಗಿದು ಇಟ್ಟುಕೊಳ್ಳಿ.   ಇದನ್ನು ಕೂಡಲೇ ಉಪಯೋಗಿಸಬಹುದು.  ಮಿಡಿಯನ್ನು ಎರಡು ಅಥವಾ ಮೂರು ತುಂಡು ಮಾಡಿಕೊಂಡರಾಯಿತು.   ಮಾವಿನ ಮಿಡಿಗೂ ಇದೇ ವಿಧಾನ.   ಆದರೆ ಇದನ್ನು ಮಾವಿನ ಮಿಡಿಯಂತೆ ಧೀರ್ಘಕಾಲ ಇಟ್ಟುಕೊಳ್ಳಲು ಬರುವುದಿಲ್ಲ,  ಹೆಚ್ಚೆಂದರೆ ಒಂದು ತಿಂಗಳಿಗೆ ಚೆನ್ನಾಗಿರುತ್ತದೆ.
ಬಲಿತ ಅಂಬಟೆ ನಾರು ಹಾಗೂ ಗೊರಟು ಕಟ್ಟಿರುತ್ತದೆ, ಇದನ್ನೂ ಉಪ್ಪಿನಕಾಯಿ ಹಾಕಲು ಸಾಧ್ಯವಿದೆ.   ಅಂಬಟೆಯ ಮಾಂಸಲ ಭಾಗವನ್ನು ನಾರಿರುವ ಗೊರಟಿನ ಅಂಶವೂ ಬರುವಂತೆ ಕತ್ತಿಯಲ್ಲಿ ಕತ್ತರಿಸಿ.   ಪುಡಿಯುಪ್ಪು ಬೆರೆಸಿ. ಹಿಂದೆ ಹೇಳಿದ ವಿಧಾನದಲ್ಲಿ ಮಸಾಲೆ ಹಾಕಿದರಾಯಿತು.

ಮಸಾಲೆ ಅರೆಯಲು ಉಪ್ಪು ನೀರು ಮಾಡುವ ವಿಧಾನ:
1 ಕಪ್ ಹರಳುಪ್ಪು
3 ಕಪ್ ನೀರು
ಚೆನ್ನಾಗಿ ಕುದಿಸಿ,  ತಣಿದ ನಂತರ ಉಪಯೋಗಿಸಿ.

ಅಂಬಟೆಯನ್ನು ಗುಂಡುಕಲ್ಲಿನಲ್ಲಿ ಜಜ್ಜಿಕೊಂಡು ಗೊರಟು ಬೇರ್ಪಡಿಸಬಹುದು.   ಉಪ್ಪು ಬೆರೆಸಿಟ್ಟು ಹಬೆಯಲ್ಲಿ ಕುದಿಸಿ,  ಹುರಿದ ಮಸಾಲೆ ಉಪ್ಪಿನಕಾಯಿ ಹುಡಿ ಹಾಕುವ ರೂಢಿಯೂ ಇದೆ.   ಮಾರ್ಕೆಟ್ ನಲ್ಲಿ ತರಹೇವಾರಿ ಹುಡಿಗಳು ಸಿಗುತ್ತವೆ,  ಬೇಕಿದ್ದರೆ ಸಾಸಿವೆ ಹುರಿದು ಹುಡಿ ಮಾಡಿ ಸೇರಿಸಿದರಾಯಿತು.

ಜೂನ್ ತಿಂಗಳಲ್ಲಿ ಆರಂಭವಾಗುವ ಅಂಬಟೆ ಬೆಳೆ,  ಡಿಸೆಂಬರ್ ಅಂತ್ಯದವರೆಗೆ ವಿಧ ವಿಧವಾದ ಹಂತಗಳಲ್ಲಿ ಲಭ್ಯ. ಅಡುಗೆಯಲ್ಲಿ ವೈವಿಧ್ಯವನ್ನು ತರಲು ಸಹಕಾರಿ.

ಅಂಬಟೆ ಚಟ್ನಿ: 
ಕತ್ತರಿಸಿದ ಅಂಬಟೆ ಚೂರುಗಳು
ಒಂದೆಲಗದ ಎಲೆಗಳು
ತೆಂಗಿನತುರಿ,  ಹಸಿಮೆಣಸು
ರುಚೆಗೆ ಉಪ್ಪು
ಎಲ್ಲವನ್ನೂ ಅರೆದು ಒಗ್ಗರಣೆ ಕೊಟ್ಟರಾಯಿತು.

ಅಂಬಟೆ ತೊಕ್ಕು:
1 ಕಪ್ ಅಂಬಟೆ ಚೂರುಗಳು
2 ಚಮಚ ಸಾಸಿವೆ,  4-5 ಒಣಮೆಣಸು,  ಇಂಗು ಸ್ವಲ್ಪ ಹುರಿಯಿರಿ,  ಹುಡಿ ಮಾಡಿ.
ಅಂಬಟೆ ಚೂರುಗಳನ್ನೂ ಅರೆದು ಇಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿಗಿಟ್ಟು,  ಅರೆದ ಅಂಬಟೆ,  ಮಸಾಲೆ ಹಾಗೂ 3 ಚಮಚ ಪುಡಿಯುಪ್ಪು ಹಾಕಿ ಸೌಟಿನಲ್ಲಿ ಮಿಶ್ರಗೊಳಿಸಿ,  ಎರಡು ನಿಮಿಷ ಬಿಟ್ಟು ಕೆಳಗಿಳಿಸಿ.  ಆರಿದ ನಂತರ ಜಾಡಿಯಲ್ಲಿ ತುಂಬಿಸಿಟ್ಟು ಉಪಯೋಗಿಸಿ.

ಹಣ್ಣಂಬಟೆಯ ಸಾರು:
ಬೇಕಿದ್ದಷ್ಟು ಹಣ್ಣಂಬಟೆಗಳು
ಬೆಲ್ಲ,  ಉಪ್ಪು ಹಾಗೂ ಒಗ್ಗರಣೆ ಸಾಮಗ್ರಿಗಳು
ಅಂಬಟೆಗಳನ್ನು ಚೆನ್ನಾಗಿ ತೊಳೆದು,  ತೊಟ್ಟು ಹಾಗೂ ತುದಿ ಕತ್ತರಿಸಿ.   
ಅವಶ್ಯಕತೆಯಿದ್ದಷ್ಟು ನೀರೆರೆದು,  ಉಪ್ಪು ಬೆಲ್ಲದೊಂದಿಗೆ ಕುದಿಸಿ.
ಇಂಗು ಹಾಗೂ ಬೇವಿನ ಒಗ್ಗರಣೆ ಕೊಡಿ


.

Posted via DraftCraft app


ಟಿಪ್ಪಣಿ: 30/11/2015 ರಂದು ಮುಂದುವರಿಸಿ ಬರೆದದ್ದು.


ಯಥಾಪ್ರಕಾರ ಅಂಬಟೆ ಬಲಿತು ಬೀಳಲು ಪ್ರಾರಂಭವಾಗಿದೆ.  ಚೆನ್ನಪ್ಪನೇನೋ ಕೊಯ್ದು ಕೊಡಲು ಸಿದ್ಧನಿದ್ದಾನೆ.  ನಾನು ಹೂಂಗುಟ್ಟಿಲ್ಲ ಅಷ್ಟೇ. ದಿನಾ ಬಿದ್ದು ಸಿಗುವಾಗ,  ಒಂದೇ ಬಾರಿ ಕೊಯ್ದು ಹಾಕಿದ್ದರಲ್ಲಿ ಲಾಭವೇನು?  ಅಡುಗೆಯ ಆನಂದವನ್ನು ಹೆಚ್ಚಿಸುವ ಅಂಬಟೆಯನ್ನು ಕಳೆದುಕೊಳ್ಳಲು ನಾನು ಸಿದ್ಧಳಿಲ್ಲ. 
ಅಂಗಳದಲ್ಲಿ ಬದನೆಯ ಸಾಲು,  ಹಿತ್ತಲಲ್ಲಿ ಹರಿವೆ ದಂಟು ಇರಲು, ಮರದಿಂದ ಅಂಬಟೆ ಉದುರುತ್ತಿರಲು,  ಏನು ಈ ದಿನದ ಕೊದ್ದೆಲು ಎಂಬ ಚಿಂತೆಯಿಲ್ಲದಿರಲು.... ಬಂದಿದೆ ನೋಡಿ ಅಂಬಟೆ ಕೊದ್ದೆಲ್

" ಹೌದಾ, ಅಂಬಟೆ ಕೊದ್ದೆಲ್ ಹೇಗೆ ಮಾಡಿದ್ದೂ ?"
ಬದನೇಕಾಯಿಯನ್ನು ಸಮಗಾತ್ರದಲ್ಲಿ ಕತ್ತರಿಸಿ ನೀರಿನಲ್ಲಿ ಹಾಕಿಡುವುದು.
ಹರಿವೇ ದಂಟನ್ನು ಕತ್ತರಿಸಿ,  ಸೊಪ್ಪು ಚೆನ್ನಾಗಿದ್ದರೆ ಮಾತ್ರ ಉಪಯೋಗಿಸಿ.
2-3 ಅಂಬಟೆಗಳನ್ನು ಚೆನ್ನಾಗಿ ತೊಳೆದು ಚೂರಿಯಲ್ಲಿ ಗೀರು ಹಾಕಿಡುವುದು,  ಸಾಧ್ಯವಿದ್ದರೆ ತುಂಡು ಮಾಡಬಹುದು.

ಒಂದು ಹಿಡಿ ತೊಗರಿಬೇಳೆ ಬೇಯಿಸುವುದು.
ತರಕಾರಿಗಳಿಗೆ ಉಪ್ಪು ಕೂಡಿ ಬೇಯಿಸುವುದು.

ಒಂದು ಕಡಿ ಅಥವಾ ಇದ್ದ ಹಾಗೆ, ತೆಂಗಿನತುರಿ.
4-6 ಒಣಮೆಣಸು,  ಖಾರ ಬೇಕಿದ್ದರೆ ಜಾಸ್ತಿ ಹಾಕಿಕೊಳ್ಳುವುದು.
2 ದೊಡ್ಡ ಚಮಚ ಕೊತ್ತಂಬ್ರಿ
1 ಚಮಚ ಉದ್ದಿನಬೇಳೆ
ತಲಾ ಒಂದು ಚಿಕ್ಕ ಚಮಚ ಜೀರಿಗೆ, ಮೆಂತೆ
ಕಡ್ಲೆಕಾಳಿನಷ್ಟು ಇಂಗು
ಮಸಾಲಾ ಸಾಮಗ್ರಿಗಳನ್ನು ಎಣ್ಣೆಪಸೆಯಲ್ಲಿ ಹುರಿಯುವುದು,  ಒಂದೆಸಳು ಕರಿಬೇವು ಬೀಳಲಿ.

ಆಯ್ತೇ,  ಈಗ ಕಾಯಿತುರಿಯೊಂದಿಗೆ ಅರೆಯಿರಿ,  ಅರೆಯುವಾಗ ಅಗತ್ಯವೆನಿಸಿದರೆ ಹುಣಸೇಹುಳಿ ಹಾಕಬಹುದು,   ಬೆಂದಾಗ ಅಂಬಟೆಯೂ ಹುಳಿಯಾಗುತ್ತದೆ,  ಹಾಗಾಗಿ ಈ ಹೊತ್ತು ಹುಣಸೇಹುಳಿ ಬೇಡ.

 ಬೆಂದ ಬೇಳೆ, ತರಕಾರಿಗಳಿಗೆ ತೆಂಗಿನಕಾಯಿ ಅರಪ್ಪು ಕೂಡಿಸಿ,  ರುಚಿಗೆ ಉಪ್ಪು, ಬೆಲ್ಲದೊಂದಿಗೆ ಕುದಿಸುವುದು,  ಒಗ್ಗರಣೆ ಮರೆಯಲಿಕ್ಕುಂಟೇ....Sunday, 17 November 2013

ಗುಹಾ ಭವನವಿದೋ.... ಕಲ್ಲಿನ ಗುಹೆಯಿದೋ....
ನಮ್ಮ ನೆರೆಯಲ್ಲಿಯೇ ಇರುವ ತಲೆಂಗಳದ ಅತ್ತಿಗೆ ಮನೆಗೆ ಹೋಗಿದ್ದೆವು.   ನಾವೂ ಹೋಗುತ್ತಿರುತ್ತೇವೆ,  ಅವರೂ ಬರುತ್ತಿರುತ್ತಾರೆ,   ಇದರಲ್ಲೇನೂ ಹೊಸತಿಲ್ಲ ಬಿಡಿ.   ಮನೆಗೆ ಹೋಗಿದ್ವಲ್ಲ,   ಆಸರಿಗೆ ಕುಡಿದಾಯ್ತು,   ದೇವರಕೋಣೆಯೊಳಗೆ ಶ್ರಾದ್ಧಾದಿ ಕ್ರಿಯೆಗಳು ಆಗುತ್ತಾ ಇದ್ದಂತೆ,  ಸುಧರಿಕೆ ಮಾಡುವುದಿದೆಯೋ ಎಂದು ಒಮ್ಮೆ ಅವಲೋಕಿಸಿ,  ಮನೆಯ ಹೊರ ಅಂಗಳಕ್ಕೆ ಇಳಿದಾಯ್ತು.  
 
ಅಂಗಳದ ಕಾಟಂಗೋಟಿ ಹುಲ್ಲುಸಸ್ಯಗಳನ್ನೆಲ್ಲ ಕಿತ್ತು ಅಡಿಕೆ ಒಣಗಲು ಹರಡುವ ಅಂಗಳ ಸಿದ್ಧವಾಗಿದೆ.   ಒಂದು ಮೂಲೆಯಲ್ಲಿ ಹರಿವೇ ಕಳ,  ಬಣ್ಣಬಣ್ಣದ ಹರಿವೆಗಳಿಂದ ಕಂಗೊಳಿಸುತ್ತಿದೆ.   ಮನೆಯ ಒಂದು ಪಕ್ಕ ಮೇಲ್ನೋಟಕ್ಕೆ ಗೋಡೆಯಂತೆ ಕಾಣಿಸುವ ಪ್ರಾಕೃತಿಕ ಮುರಕಲ್ಲಿನ ದರೆ,   ವೀಳ್ಯದೆಲೆಯ ಬಳ್ಳಿ ಈ ಗೋಡೆಯೇರಿ ಆಕಾಶವೇರಲು ಸಿದ್ಧವಾಗಿದೆ.   ಅದರ ಪಕ್ಕದಲ್ಲೇ ನೆಟ್ಟು ನಾಲ್ಕು ದಿನವಾಗಿರಬಹುದಾದ ಬಸಳೇ ಬಳ್ಳಿ,   ಅದರಾಚೆಗೆ ತೊಂಡೆ ಬಳ್ಳಿ ಮೇಲೆ ಹೋಗಿ ಹಬ್ಬಿದೆ.   ಓಹ್,  ಇಲ್ಲೊಂದು ಕಲ್ಲಿನ ಗೂಡು ಇದೆ.... ಮೊದಲೇ ಇದೆ,  ನಾನೇನೂ ಹೊಸತಾಗಿ ಕಂಡಿದ್ದಲ್ಲ.   ಆದರೆ  ಕಂಡದ್ದು ಕ್ಯಾಮರಾ ಕಣ್ಣು .....


ಇದೇನು ಆದಿಮಾನವನ ಗುಹೆಯೇ,   ಅರೇಬಿಯನ್ ನೈಟ್ಸ್ ಕಥೆಯ ಆಲೀಬಾಬಾ ನಲ್ವತ್ತು ಕಳ್ಳರ  ಗುಹೆಯೇ ಎಂದು ಹುಬ್ಬೇರಿಸಬೇಕಾಗಿಲ್ಲ.   ನಮ್ಮ ಪೂರ್ವಿಕರು ನಿರ್ಮಿಸಿಕೊಂಡಂತಹ ಒಂದು ದಾಸ್ತಾನು ಉಗ್ರಾಣ ಎಂದೇ ಹೇಳಬಹುದು.   ಮನೆಯ ಹೊರಾಂಗಣದಲ್ಲೇ ಇಡಬೇಕಾಗಿರುವ ನಿತ್ಯೂಪಯೋಗಿ ವಸ್ತುಗಳಿರುತ್ತವೆ.  ಉಪ್ಪು ಅವುಗಳಲ್ಲಿ ಒಂದು.   ಆ ಕಾಲದಲ್ಲಿ ಅಯೋಡೈಸ್ಡ್ ಉಪ್ಪು,  ಟೇಬಲ್ ಸಾಲ್ಟ್ ಇತ್ಯಾದಿ ವರ್ಗೀಕರಣ ಇರಲಿಲ್ಲ ಕಣ್ರೀ,  ಏಕಮೇವ ಕಲ್ಲುಪ್ಪು ಅಥವಾ ಹರಳುಪ್ಪು,  ಇದ್ಯಾವುದೂ ಬೇಡ ಬಿಡಿ,  ಗಾಂಧೀತಾತನ ಉಪ್ಪು ಅಂದ್ರೆ ಎಲ್ಲರಿಗೂ ಅರ್ಥವಾದೀತು.  ದಿನನಿತ್ಯ ಶಾಪಿಂಗ್ ಮಾಡುವ  ಕಾಲ ಅದಲ್ಲ.   ಎಲ್ಲಿಗೇ ಹೋಗಬೇಕಾಗಿದ್ದರೂ ಕಾಲುನಡಿಗೆಯ ಪಯಣ,  ತಲೆಹೊರೆಯ ಸಾಗಾಟ.    ಎತ್ತಿನಗಾಡಿ ಇದ್ದಂತಹ ಮನೆಗಳೂ ಇದ್ದವು,  ಅಂತಹ ಮನೆಯೊಡೆಯ ಬಹು ಧನಿಕನೆಂದೇ ಲೆಕ್ಕ.  ಒಮ್ಮೆ ತಂದ ಮಾಲು ಕನಿಷ್ಠ ಆರು ತಿಂಗಳಾದರೂ ಇಟ್ಟುಕೊಳ್ಳುವ ವ್ಯವಸ್ಥೆ ಇರಬೇಕು.   ಮಳೆಗಾಲದಲ್ಲಿ ತಿರುಗಾಟ ಹೇಗೂ ಸಾಧ್ಯವಾಗುವುದಿಲ್ಲ.

ಉಪ್ಪು ಮನೆಯ ಅಡುಗೆಕಾರ್ಯಗಳಿಗೆ ಮಾತ್ರವಲ್ಲ,  ಜಾನುವಾರುಗಳ ಕಲಗಚ್ಚು ಸಿದ್ಧಪಡಿಸಲೂ ಬೇಕಾಗುವಂತಹುದು.   ನೆಂಟರು ಹೀಗೆ ಬಂದು ಹಾಗೆ ಹೋಗೋ ಕಾಲವಲ್ಲ,  ಬಂದೋರು ಕಾಲ್ನಡೆಯಲ್ಲೇ ಬಂದಿರುತ್ತಾರೆ,   ಮರು ಪ್ರಯಾಣ ಮಾಡಬೇಕಾದರೂ ಒಂದೆರಡು ತಿಂಗಳು ಇದ್ದೇ ಹೋಗುವವರು.   ಬಂಧುಬಳಗದ,  ತೋಟ, ಗದ್ದೆಯ ಕಾರ್ಮಿಕ ವರ್ಗದವರಿಗೂ ಊಟೋಪಚಾರದ ವ್ಯವಸ್ಥೆ,   ಕೆಲಸದಾಳುಗಳು ನೀರುಮಜ್ಜಿಗೆ ಕುಡಿಯಬೇಕಾದರೂ ಉಪ್ಪು,   ತೆಂಗಿನಮರಗಳಿಗೂ ವರ್ಷಕ್ಕೂಮ್ಮೆ ಉಪ್ಪು ಹಾಕುವದಿರುತ್ತದೆ.   ದೊಡ್ಡ ಪ್ರಮಾಣದ ಉಪ್ಪಿನ ದಾಸ್ತಾನು ಇಡಲು ಅಷ್ಟೇ ಗಾತ್ರದ ಮಣ್ಣಿನ ಪೀಪಾಯಿಗಳೂ,  ಭರಣಿಗಳೂ ಇರುತ್ತವೆ.   ಮಳೆಗಾಲದ ಅಡುಗೆಗೆಂದೇ ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೊಳೆ,  ನಮ್ಮ ತುಳುವರ ಉಪ್ಪಡ್ ಪಚ್ಚಿಲ್,   ಉಪ್ಪಿನಲ್ಲಿ ಹಾಕಿಟ್ಟ ಕಾಟ್ ಮಾವಿನಕಾಯಿ,  ನೀರ್ ಕುಕ್ಕು  ಇಂಥವುಗಳನ್ನು ಮಣ್ಣಿನ ಮಂಡಗೆಯಲ್ಲಿ ಹಾಕಿಡುವ ಪದ್ಧತಿ.   ಈ ದಾಸ್ತಾನು ಸಾಮಗ್ರಿಗಳಿಗೆ ಒಂದು ಪ್ರತ್ಯೇಕ ಜಾಗ ಇರಲೇಬೇಕು.    ಈ ಗುಹಾಭವನದೊಳಗೆ ಗಾಳಿ, ಬಿಸಿಲು ಹೋಗುವಂತಿಲ್ಲ,  ದಾಸ್ತಾನು ಸಾಮಗ್ರಿಗಳು ಹಾಳಾಗುವ ಪ್ರಮೇಯವೇ ಇಲ್ಲ.   ಮಣ್ಣಿನ ಪೀಪಾಯಿಗಳನ್ನು ದಕ್ಷಿಣ ಕನ್ನಡಿಗರ ಆಡುನುಡಿಯಲ್ಲಿ  ಮಣ್ಣಿನ ಮಂಡಗೆ ಎಂದೇ ಹೇಳುವ ವಾಡಿಕೆ.   ಉಪ್ಪಿನ ಸೊಳೆ ಹಾಕಿಟ್ಟಲ್ಲಿ ಅದು ಸೊಳೆ ಮಂಡಗೆ ಆಯಿತು.   ಇಂತಹ ಉಪ್ಪು ಸೊಳೆ ಮಂಡಗೆ,  ನೀರು ಮಾವಿನಕಾಯಿ ಮಂಡಗೆಗಳು ಈ ಕಲ್ಲಿನ ಗುಹೆಯೊಳಗೆ ಭದ್ರ.

ಇಷ್ಟೆಲ್ಲಾ ವಿವರಣೆ ಕೊಡ್ತಾ ಇದೀನಲ್ಲ,   ಅಂದ ಹಾಗೆ ಈ ಕಲ್ಲಿನ ಗುಹೆ ಇರುವುದು ಕಾಸರಗೋಡಿನ ಬಾಯಾರು ಗ್ರಾಮದಲ್ಲಿರುವ ತಲೆಂಗಳ ರಾಮಕೃಷ್ಣ ಭಟ್ಟರ ಮನೆಯಲ್ಲಿ.   ರಾಮಕೃಷ್ಣ ಭಟ್ಟರ ಪೂರ್ವಿಕರೇ ಇದರ ನಿರ್ಮಾತೃಗಳು.   ಅಂದಿನ ಹಿರಿಯರ ವಾಸ್ತು ತಾಂತ್ರಿಕತೆಗೆ ಇದೊಂದು ಸ್ಮಾರಕದಂತಿದೆ.   ಈಗ ಈ ಮನೆಯಲ್ಲಿ ರಾಮಕೃಷ್ಣ ಭಟ್ಟರ ಪುತ್ರ ಅನಂತಕೃಷ್ಣ ತನ್ನ ಪುಟ್ಟ ಸಂಸಾರದೊಂದಿಗೆ ವಾಸವಾಗಿದ್ದಾನೆ.

Posted via DraftCraft app

Wednesday, 13 November 2013

ಮಗುವಿನ ಮನಸು


ಮುದ್ದು ಮುದ್ದು ಬಾಲೆ
ಹಲ್ಲು ಬಂತೇ ತೋರೆಲೆ |

ಅಆಇಈ.....
ಕನ್ನಡದ ಅಕ್ಷರಮಾಲೆ
ಅಪ್ಪ ಅಮ್ಮ ಅಜ್ಜ ಅಜ್ಜಿ...
ಮೊದಲ ಶಾಲೆ |

ನೀ ಹೇಗೆ ನಕ್ಕರೂ ಚೆನ್ನ
ಮಗುವೇ ನೀ ಅಪ್ಪಟ ಚಿನ್ನ
ಇರುವೆ ನೀ ಬಹು ದೂರ
ಬಂದಿಹೆ ಇಲ್ಲಿ ಬಲು ಹತ್ತಿರ |


ಫೋಟೋ ಕೃಪೆ:  ಉಮಾ ಅರವಿಂದ್

Posted via DraftCraft app

Saturday, 2 November 2013

ತರಕಾರಿ ತನ್ನಿ, ಕ್ಯಾರೆಟ್ ತಿನ್ನಿ....

" ತರಕಾರಿ ತನ್ನಿ "

ಚೀಲ ತುಂಬಾ ಕ್ಯಾರೆಟ್ ಬಂದಿತು.

" ಇಷ್ಟು ಕ್ಯಾರೆಟ್ ಏನ್ಮಾಡ್ಲೀ...  ಬೇರೇನೂ ಸಿಗ್ಲಿಲ್ವೇ ?"

" ಅಲ್ಲಿ ಇದ್ದಿದ್ದು ಇದೊಂದೇ,  ಬೇರೆಲ್ಲಾ ಒಣಗಿದ ಹಾಗಿತ್ತು,  ತಂದಿದ್ದನ್ನು ಏನಾದ್ರೂ ಮಾಡು "

" ಸರಿ ಹೋಯ್ತು,    ನಾಳೆ ಮುಂಜಾನೆಗೊಂದು ದೋಸೆ ಇದ್ರಿಂದಾನೇ ಮಾಡೋಣ,   ಅದಕ್ಕೇನಂತೆ.."

2 ಕಪ್ ಅಕ್ಕಿ
ಅರ್ಧ ಕಪ್ ಉದ್ದು
2 ಚಮಚ ಮೆಂತೆ
2 ಕಪ್ ಕ್ಯಾರೆಟ್ ತುರಿ

ನೆನೆ ಹಾಕಿದ ಬೇಳೆಗಳನ್ನು ಮೊದಲು ನುಣ್ಣಗೆ ಅರೆದು ತೆಗೆಯಿರಿ.
ಅಕ್ಕಿಯನ್ನೂ ಅರೆದು,  ಕ್ಯಾರೆಟ್ ತುರಿ ಸೇರಿಸಿ ಪುನಃ ಅರೆದು ಹಿಟ್ಟುಗಳನ್ನು ಒಟ್ಟಿಗೆ ಕಲಸಿ,  ರುಚಿಗೆ ಉಪ್ಪು ಹಾಕಿ ಮುಚ್ಚಿ ಇಡಿ.
ಎಂಟು ಗಂಟೆಗಳ ಕಾಲ ಹುದುಗು ಬಂದ ಮೇಲೆ ದೋಸೆ ಎರೆಯಿರಿ,  ತೆಂಗಿನಕಾಯಿ ಚಟ್ನಿ ಇರಲಿ.

ಬೇಳೆಕಾಳುಗಳನ್ನು ಹಾಕದೆ ಹೀಗೆ ದೋಸೆ ಮಾಡೋಣ.

2 ಕಪ್ ಅಕ್ಕಿ
2 ಕಪ್ ಕ್ಯಾರೆಟ್ ತುರಿ,  ರುಚಿಗೆ ಉಪ್ಪು
ನುಣ್ಣಗೆ ಅರೆದು ನೀರುದೋಸೆ ಎರೆಯಿರಿ.
ಬೇಕಿದ್ದರೆ ಕೊತ್ತಂಬ್ರಿ ಸೊಪ್ಪು,  ಈರುಳ್ಳಿ,  ಹಸಿಮೆಣಸು,  ಶುಂಠಿ,  ಕಾಯಿತುರಿ ಹಾಕಿಕೊಳ್ಳಿ,  ಚೆನ್ನಾಗಿರುತ್ತದೆ.

ಹೆಚ್ಚಾಗಿ ತಯಾರಿಸುವ ತೆಳ್ಳವು ಹೀಗೂ ಮಾಡಿ,  ಬಣ್ಣ ಬಣ್ಣವಾಗಿ ಮಕ್ಕಳ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ.   ಅಕ್ಕಿ ಹಿಟ್ಟಿಗೆ ಒಂದು ಕಪ್ ಕ್ಯಾರೆಟ್ ತುರಿ,  ಕೊತ್ತಂಬ್ರಿ ಸೊಪ್ಪು ಕತ್ತರಿಸಿ ಹಾಕಿದರೆ ಸಾಕು.   ಬೆಲ್ಲ ಬೆರೆಸಿದ ಕಾಯಿತುರಿಯೊಂದಿಗೆ ಸವಿಯಿರಿ.

ಕ್ಯಾರೆಟ್ ಪಾಯಸ

ಕ್ಯಾರೆಟ್ ತುರಿ 1 ಕಪ್
ಅಕ್ಕಿ ಹುಡಿ 2 ಚಮಚ
ಸಕ್ಕರೆ 1 ಕಪ್
ಏಲಕ್ಕಿ,  ದ್ರಾಕ್ಷಿ,  ಗೋಡಂಬಿ ಅವಶ್ಯಕತೆಗೆ ತಕ್ಕಷ್ಟು
 1 ತೆಂಗಿನಕಾಯಿ 

ಮೊದಲಿಗೆ ಕಾಯಿಹಾಲು ಮಾಡಿಕೊಳ್ಳಿ.   ದಪ್ಪ ಕಾಯಿಹಾಲು ಪ್ರತ್ಯೇಕ ತೆಗೆದಿರಿಸಿ.
ಇನ್ನೂ ಎರಡು ಬಾರಿ ನೀರು  ಕಾಯಿಹಾಲು ತೆಗೆಯಿರಿ.

ಒಂದನೇ ನೀರು ಕಾಯಿಹಾಲಿನಲ್ಲಿ ಕ್ಯಾರೆಟ್ ತುರಿ ಬೇಯಿಸಿ.
ಅಕ್ಕಿ ಹುಡಿಯನ್ನು ನೀರು ಕಾಯಿಹಾಲಿನಲ್ಲಿ ಕಲಸಿಕೊಂಡು ಬೆಂದ ಕ್ಯಾರೆಟ್ ಜೊತೆ ಪುನಃ ಕುದಿಸಿ.  ಅಕ್ಕಿಹಿಟ್ಟು ಕುದಿದು,  ಮಿಶ್ರಣ ದಪ್ಪವಾಯಿತೇ,  ಈಗ ಸಕ್ಕರೆ ಸುರಿಯಿರಿ.   ಸಕ್ಕರೆ ಕರಗಿದ ಹಂತದಲ್ಲಿ ಗೋಡಂಬಿ, ದ್ರಾಕ್ಷಿಗಳನ್ನು ತುಪ್ಪದಲ್ಲಿ ಹುರಿದು ಹಾಕಿ.
ಕೊನೆಯದಾಗಿ ದಪ್ಪ ಕಾಯಿಹಾಲು ಎರೆದು,  ಕುದಿದು ಮೇಲೆ ಬರುತ್ತಿದ್ದ ಹಾಗೆ ಏಲಕ್ಕಿ ಹುಡಿ ಉದುರಿಸಿ,  ಕೆಳಗಿಳಿಸಿ.   ಪಾಯಸ ಸಿದ್ಧ.
ಕ್ಯಾರೆಟ್ ಹಲ್ವಾ

ಕ್ಯಾರೆಟ್ ತುರಿ ಒಂದು ಬಟ್ಟಲು
ಸಕ್ಕರೆ ಒಂದು ಕಪ್ 
ಹಾಲು ಒಂದು ಕಪ್
ಗೋಡಂಬಿ,  ದ್ರಾಕ್ಷೀ,  ಏಲಕ್ಕಿ ಇತ್ಯಾದಿ 
ತುಪ್ಪ 4 ಚಮಚ

ಕ್ಯಾರೆಟ್ ತುರಿಯನ್ನು ಅವಶ್ಯವಿದ್ದಷ್ಟೇ ಹಾಲು ಎರೆದು ಮೆತ್ತಗೆ ಬೇಯಿಸಿಕೊಳ್ಳಿ.
ದಪ್ಪ ತಳದ ಬಾಣಲೆಗೆ ತುಪ್ಪ ಸವರಿ ಬೆಂದ ಕ್ಯಾರೆಟ್ ತುರಿಯನ್ನು ಹಾಕಿ,  ಒಲೆಯ ಮೇಲೆ ಇಡಿ.
ಸಕ್ಕರೆ ಹಾಕಿ,  ಸಕ್ಕರೆ ಕರಗಿ ಪಾಕ ಬರುವ ತನಕ ಮಂದಾಗ್ನಿಯಲ್ಲಿ ಸೌಟಿನಲ್ಲಿ ಕೈಯಾಡಿಸುತ್ತಿರಿ.
ದ್ರಾಕ್ಷಿ,  ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ಹಾಕಿ,  ಒಂದೇ ಮುದ್ದೆಗೆ ಬಂದಾಗ ಏಲಕ್ಕಿಪುಡಿಯನ್ನೂ ಹಾಕಿ ಕೆಳಗಿಳಿಸಿ.
ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ,  ಬಿಸಿ ಬಿಸಿಯಾಗಿ ತಿನ್ನಿ.
ಕ್ಯಾರೆಟ್ ಹಲ್ವಾ,  ಇನ್ನೊಂದು ವಿಧಾನ:

ಮೇಲೆ ಉಪಯೋಗಿಸಿದ ವಸ್ತುಗಳೊಂದಿಗೆ ಒಂದು ಕಪ್ ಚಿರೋಟಿ ರವೆಯನ್ನೂ ಸೇರಿಸುವ ಅಗತ್ಯವಿದೆ.   ಒಂದು ಕಪ್ ಸಕ್ಕರೆಯೂ ಹೆಚ್ಚು ಬೇಕಾಗುತ್ತದೆ.
ಚಿರೋಟಿ ರವೆಯನ್ನು ಪರಿಮಳ ಬರುವಷ್ಟು ಹುರಿದು,  ಒಂದೂವರೆ ಕಪ್ ಕುದಿಯುವ ನೀರು ಎರೆದು ಮೆತ್ತಗೆ ಬೇಯಿಸಿ.   ಬೆಂದ ನಂತರ ಸಕ್ಕರೆ,  ಬೇಯಿಸಿಟ್ಟ ಕ್ಯಾರೆಟ್ ಇತ್ಯಾದಿಗಳನ್ನು ಸೇರಿಸಿ ಹಿಂದಿನ ವಿಧಾನದಲ್ಲಿ ತಿಳಿಸಿರುವಂತೆ ಮಾಡಿದರಾಯಿತು.ಕ್ಯಾರೆಟ್ ಪಲ್ಯ

ಚಿಕ್ಕದಾಗಿ ಕತ್ತರಿಸಿದ ಕ್ಯಾರೆಟ್ 2 ಕಪ್
ಕಾಯಿ ತುರಿ ಸ್ವಲ್ಪ
ಚಿಟಿಕೆ ಅರಸಿನ
ರುಚಿಗೆ ಉಪ್ಪು
ಒಗ್ಗರಣೆ ಸಾಮಗ್ರಿಗಳು
2 ಚಮಚ ಎಣ್ಣೆ
ಒಂದೆಸಳು ಕರಿಬೇವು

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,  ಸಾಸಿವೆ ಸಿಡಿದಾಗ ಬೇವಿನೆಲೆ ಹಾಕಿ,  ಚಿಟಿಕೆ ಅರಸಿನವೂ ಬೀಳಲಿ.  ಕ್ಯಾರೆಟ್ ತುಂಡುಗಳನ್ನು ಹಾಕಿ.   ಉಪ್ಪಿನೊಂದಿಗೆ ನೀರು ಚಿಮುಕಿಸಿ ಮಂದಾಗ್ನಿಯಲ್ಲಿ ಮುಚ್ಚಿ ಬೇಯಿಸಿ.  ಬೆಂದ ನಂತರ ಕಾಯಿ ತುರಿ ಸೇರಿಸಿ.  ಇನ್ನೊಮ್ಮೆ ಸೌಟಾಡಿಸಿ ಕೆಳಗಿಳಿಸಿ.  ಬಹು ಬೇಗನೆ ಮಾಡಿಕೊಳ್ಳಬಹುದಾದ ಈ ಪಲ್ಯ ಸರಳ  ವಿಧಾನದಲ್ಲಿದೆ.  

 


ತಾಜಾ ಕ್ಯಾರೆಟ್ ಹಸಿಯಾಗಿಯೇ ಸೇವಿಸುವುದು ಬಹಳ ಉತ್ತಮ.   ಸಕ್ಕರೆಯ ಮೂಲವಾಗಿರುವ ಕ್ಯಾರೆಟ್ ಸೇವನೆಯಿಂದ ದೇಹಕ್ಕೆ ಅಧಿಕ ಕ್ಯಾಲೊರಿ ಲಭ್ಯ.   ಕ್ಯಾರೆಟ್ ಪೋಷಕಾಂಶಗಳು ಈ ರೀತಿಯಾಗಿವೆ.   88% ನೀರು,  7% ಸಕ್ಕರೆ,   1% ಪ್ರೊಟೀನ್,  1% ನಾರು,  0.2% ಕೊಬ್ಬು ಇರುತ್ತವೆ.  ಕೊಬ್ಬು ಬಹಳ ಕಡಿಮೆ ಇರುವ ತರಕಾರಿ,  ನಾರು, ವಿಟಮಿನ್ ಎ, ಸಿ, ಕೆ, ಬಿ6, ಪೊಟ್ಯಾಷಿಯಂ,  ಮೆಗ್ನೇಶಿಯಂ,  ಥಯಾಮಿನ್,  ನಿಯಾಸಿನ್ ಗಳಿಂದ ಕೂಡಿರುವ ಈ ಕ್ಯಾರೆಟ್ ಸೇವನೆಯಿಂದ ಉರಿಯೂತದಿಂದ ರಕ್ಷಣೆ,  ರಕ್ತನಾಳಗಳ ಹಿಗ್ಗುವಿಕೆಗೆ ಸಹಕಾರಿಯಾಗಿ ಹೃದಯಸಂಬಂಧೀ ಖಾಯಿಲೆಗಳ ಅಪಾಯವನ್ನು ತಡೆಗಟ್ಟುತ್ತದೆ.    ಇತ್ತೀಚೆಗೆ ನಡೆದ ಅಧ್ಯಯನದ ವರದಿಯಂತೆ ನಿಯಮಿತವಾದ ಕ್ಯಾರೆಟ್ ಸೇವನೆ ಕೊಲೆಸ್ಟರಾಲ್ ನಿಯಂತ್ರಕವೂ ಆಗಿದೆ.   ಆದುದರಿಂದಲೇ ತರಕಾರಿ ತನ್ನಿ,  ಕ್ಯಾರೆಟ್ ತಿನ್ನಿ,  ಆರೋಗ್ಯವೆನ್ನಿ.   ಅಲ್ಲವೇ ?


ಟಿಪ್ಪಣಿ: ಸದಭಿರುಚಿಯ ಮಾಸಪತ್ರಿಕೆ ಉತ್ಥಾನದಲ್ಲಿ ಪ್ರಕಟಿತ.  ದಿನಾಂಕ 30. ಮಾರ್ಚ್ 2015Posted via DraftCraft app

Thursday, 24 October 2013

" ಆದದ್ದೆಲ್ಲಾ ಒಳಿತೇ ಆಯಿತು..."
" ಮಧು ಬರ್ತಿದಾನಂತೆ "

" ಯಾಕಂತೆ, ಮೊನ್ನೆ ಬಂದು ಹೋಗಿದ್ದಲ್ಲವೇ, ಈಗೆಂತ ಅರ್ಜೆಂಟು ?"

" ಅದೇ ಕೆಮ್ಮು, ಶೀತ, ತಲೆನೋವು ಅಂತಿದ್ನಲ್ಲ ನಿನ್ನೆ, ನೀನು ಕೇಳಿಲ್ವಾ "

" ಸರಿ ಹೋಯ್ತು, ಒಂದು ಕಫ್ ಸಿರಪ್ ಬಾಟಲ್ ತಂದಿಟ್ಕೊಳ್ಳಲು ಹೇಳ್ಬೇಕಾಗಿತ್ತು "

ಆ ಹೊತ್ತಿಗೆ Viber apps ಫೋನ್ ಮೊಳಗಿತು. " ನಾನು ಹೊರಟಾಯ್ತು, ಬಸ್ ಹತ್ತಿ ಆಯ್ತು... ಮಲಗೂದಿಕ್ಕೆ ರೆಡೀ ಮಾಡಿಡು. ಕಹಿಬೇವಿನಸೊಪ್ಪು ಹಾಸಿಗೆ ಮೇಲೆ ಹಾಕಿಟ್ಟಿರು "

" ಓ, ನಿನ್ನ ಫ್ರೆಂಡ್ ಗೆ ಬಂದಿದ್ದು ನಿಂಗೂ ಬಂತಾ, ಏನ್ ಕರ್ಮ, ಎಲ್ಲಾ ವ್ಯಾಕ್ಸೀನ್, ಡ್ರಾಪ್ಸ್ ಚಿಕ್ಕೋನಿದ್ದಾಗ ಕೊಡ್ಸಿದ್ದು ವ್ಯರ್ಥ ಆದಂಗಾಯ್ತು..... ಬರುವಾಗ ಬೇಕಾಗಿರುವ ಔಷಧಿಗಳನ್ನೂ ಹಿಡ್ಕೊಂಡೇ ಬಾ "

" ಅದೆಲ್ಲ ಇದೇ, ನೀನು ಕಹಿಬೇವಿನಸೊಪ್ಪು ರೆಡೀ ಮಾಡಿಡು "

" ಇಲ್ಲಿರೋ ಕಹಿಬೇವಿನ ಮರ ಸತ್ಹೋಗಿದೆ, ನೀನು ಬೆಂಗ್ಳೂರಿಂದ ಬರ್ತಾ ಇದೀಯಲ್ಲ, ಅದನ್ನೂ ಹಿಡ್ಕೋ "

" ನಂಗೆ ಜ್ವರ ಬರ್ತಾ ಇದೆ.... ಎಲ್ಲೀಂತ ಹುಡುಕಲೀ, ಅದೆಲ್ಲ ನೀನೇ ನೋಡ್ಕೋ "

ನಮ್ಮವರ ಬಳಿ ಕಹಿಬೇವಿನ ವಿಚಾರ ತೆಗೆದ ಕೂಡಲೇ " ಅದ್ಯಾಕೆ ಅಷ್ಟು ಚಿಂತೆ ಮಾಡ್ತೀಯ, ತೋಟದಲ್ಲಿ ಬೇಕಾದಷ್ಟು ಬೇವಿನಸೊಪ್ಪು ಇದೆಯಲ್ಲ "

" ಇಲ್ಲಿರೂದು ಕರಿಬೇವು, ಈಗ ಬೇಕಾಗಿರೂದು ಕಹಿಬೇವು "

" ಅದೆಲ್ಲ ನಂಗೊತ್ತಿಲ್ಲ " ಅಂತಂದು ಇವರು ಅಲ್ಲಿಂದೆದ್ದು ಹೋದರು.

ರಾತ್ರಿಯಾಗ್ಬೇಕಾದ್ರೇ ಮಗ ಮನೆಗೆ ಬಂದ. ಇವರೇ ಪುತ್ತೂರುವರೆಗೆ ಬೈಕು ಓಡಿಸಿ ಕರಕೊಂಡು ಬಂದರು.

" ಈಗ ಊಟ ಮಾಡಿ ಮಲಗೂದು, ಕಹಿಬೇವು ಎಲ್ಲಿದೆ ?"

" ನಾಳೆ ತರಿಸುವಾ, ಈಗ ನೀನು ತಂದಿರೋ ಕ್ರೀಮು ಹಚ್ಚೋಣ " ಅವನಿಗೆ ಪ್ರಿಯವಾದ ಕುಚ್ಚುಲಕ್ಕಿ ಗಂಜಿಯೂಟ ದೊರೆಯಿತು.

ಮಾರನೇ ದಿನ ಖಾದರ್ ಬಂದ, " ಕಹಿಬೇವಿನ ಸೊಪ್ಪು ಓಽಽಽಽ ಅಲ್ಲಿದೆ, ನಾನೇ ತಂದ್ಕೊಡ್ತೇನೆ ಅಕ್ಕಾ " ಅಂದ.

ಇನ್ನೂ ಹಲವಾರು ಕಡೆ ಫೋನಾಯಿಸಿದಾಗ ನಮ್ಮ ಉಷಕ್ಕನ ಮನೆಯಲ್ಲಿದೆ ಎಂದು ಖಾತ್ರಿ ಪಡಿಸಿಕೊಂಡಾಯ್ತು, ಬೈಕು ಅಲ್ಲಿಗೆ ಓಡಿತು. ಉಷಕ್ಕ ಮಾಡಬೇಕಾದ ಪಥ್ಯಗಳನ್ನೆಲ್ಲ ಹೇಳಿಕೊಟ್ಟು, ವಾರಕ್ಕಾಗುವಷ್ಟು ಕಹಿಬೇವಿನೆಲೆಗಳೊಂದಿಗೆ ನಮ್ಮವರು ಅರ್ಧ ಘಂಟೆಯೊಳಗೆ ಮನೆ ತಲಪಿದರು.

ಚಿಕನ್ ಪಾಕ್ಸ್ ಆದಾಗ ಏನೇನು ಪಥ್ಯ ಮಾಡಬೇಕು ?
ಉದ್ದು ಹಾಕಿದ ತಿಂಡಿ ಬೇಡ.
ಎಣ್ಣೆಯಲ್ಲಿ ಕರಿದದ್ದು ವರ್ಜ್ಯ.
ಅನ್ನದೊಂದಿಗೆ ಬೋಳುಹುಳಿ, ಬದನೆಯಂತಹ ನಂಜು ತರಕಾರಿ ಬೇಡ, ಪುನರ್ಪುಳಿ ಸಾರು ಬಹಳ ಒಳ್ಳೆಯದು. ಒಗ್ಗರಣೆ ಹಾಕುವಂತಿಲ್ಲ.
ಪಚ್ಚೆಹಸ್ರು ತಂಪು, ಮೊಳಕೆ ಬರಿಸಿ, ಬೇಯಿಸಿ ತಿನ್ನಬಹುದು.
ಕಹಿಬೇವಿನ ಕಷಾಯ ಚೆನ್ನಾಗಿ ಆರಿದ ನಂತರ ಕುಡಿಯತಕ್ಕದ್ದು.
ಎಳನೀರು ದಿನವೂ ಕುಡಿಯಬೇಕು.
ಕಹಿಬೇವಿನೊಂದಿಗೆ ಪಲ್ಲಿಸೊಪ್ಪು, ಹಸಿಅರಸಿನ ಅರೆದು ಮೈಗೆ ಲೇಪಿಸಬೇಕು, ಅರ್ಧಘಂಟೆ ಬಿಟ್ಟು ಸ್ನಾನ, ಸಾಬೂನು ಹಾಕಲೇಬಾರದು.
ಮಲಗುವಾಗ ಹಾಸಿಗೆ ಮೇಲೆ ಕಹಿಬೇವಿನೆಲೆಗಳನ್ನು ಹರಡಿ ಮಲಗತಕ್ಕದ್ದು.

ಪಲ್ಲಿ ಸೊಪ್ಪು ಅಂದ್ರೆ ಗೊತ್ತಿತ್ತು, ನಾವೂ ಚಿಕ್ಕವರಿದ್ದಾಗ ಈ ಔಷಧೀ ಪ್ರಯೋಗಕ್ಕೆ ಒಳಗಾದವರೇ ಅಲ್ಲವೇ, ಆದರೆ ಎಲ್ಲೀಂತ ಹುಡುಕಲೀ ಎಂಬ ಸಮಸ್ಯೆ ಎದುರಾಯಿತು. ಪಲ್ಲಿ ಸೊಪ್ಪು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಇರುತ್ತದೆ. ಗಿಡದ ಪರಿಚಯ ಇದ್ದರಾಯಿತು.
ನಮ್ಮವರಂತೂ ನನ್ಗೊತ್ತಿಲ್ಲ ಅಂದ್ಬಿಟ್ಟು ಟೀವಿ ರಾಜಕಾರಣದಲ್ಲಿ ಮಗ್ನರಾದರು. ನೋಡಿಯೇ ಬಿಡೋಣ ಅಂದ್ಕೊಂಡು ಕತ್ತಿಯೊಂದಿಗೆ ತಪಾಸಣೆ ಪ್ರಾರಂಭಿಸಿದೆ. ಯಾವುದೋ ಒಂದು ಉರುಟುರುಟು ಎಲೆಗಳ ಗಿಡ ಕಣ್ಣಿಗೆ ಬಿತ್ತು. " ಇದೇ ಆಗಿರಬಹುದು " ಅಂದುಕೊಳ್ಳುತ್ತ ಕೈಯಲ್ಲಿ ಹಿಡಿಸುವಷ್ಟು ಕತ್ತರಿಸಿ ತಂದೆ.

" ಈ ಸೊಪ್ಪು ಹೌದೇ "

" ನಂಗೇನು ಗೊತ್ತು? ಫೇಸ್ ಬುಕ್ ಗೆ ಒಂದು ಫೋಟೋ ಹಾಕಿ ಕೇಳು, ಹೇಳ್ತಾರೆ "

ಫೋಟೋ ತೆಗೆದು, ಗಿಡ ಗುರುತಿಸಿ ಅಂತ ಕಾಯ್ತಾ ಕೂತ್ಕೊಳ್ಳುವ ಹೊತ್ತು ಇದಲ್ಲ. ನೇರವಾಗಿ ಖಾದರ್ ತಾಯಿಗೆ ಫೊನ್ ಹೋಯಿತು. ಅವರೂ ನಾನೇ ಬರ್ತೇನೆ ಅಂದ್ಬಿಟ್ಟು ಐದೇ ನಿಮಿಷದಲ್ಲಿ ಪಲ್ಲಿ ಸೊಪ್ಪಿನ ಗೆಲ್ಲು ಹಿಡಿದೇ ಬಂದರು. ತೋಟದಿಂದ ತಂದ ಸೊಪ್ಪನ್ನು ಆಚೆ ಎಸೆದೆ.

" ಇದು ಪಲ್ಲಿಸೊಪ್ಪು, ನಮ್ಮ ಮನೆ ಬಾಗಿಲಲ್ಲೇ ಇದೆ ಈ ಗಿಡ " ಅಂದರು ಖಾದರ್ ತಾಯಿ ಮರಿಯಮ್ಮ.

" ಇದನ್ನು ಅರೆದು ರಸ ಕುಡಿಯಲೂ ಕೊಡಿ, ಒಳಗೆ ಕೂಡಾ ಬೊಕ್ಕೆ ಬಿದ್ದಿರ್ತದೆ. ಹಸೀ ಅರಸಿನ ಉಂಟಾ?"

" ಅಲ್ಲೊಂದು ಗಿಡ ಇದೇ, ಅದನ್ನು ಮಣ್ಣಿನಿಂದ ಮೇಲೆ ತೆಗೀ ಬೇಕಲ್ಲ "

" ಹಂಗಿದ್ರೆ ಅರಸಿನ ನಾನೇ ತಂದು ಕೊಡ್ತೇನೆ "

ಮಾರನೆ ದಿನ ವರ್ತನೆ ಹಾಲಿನೊಂದಿಗೆ ಮರಿಯಮ್ಮ ಇನ್ನಷ್ಟು ಪಲ್ಲಿಸೊಪ್ಪು ಹಾಗೂ ಹಸೀ ಅರಸಿನ ಕಳಿಸಿದ್ರು.

ಅಂತೂ ಎಲ್ಲ ಸಾಮಗ್ರಿಗಳು ಲಭ್ಯವಾದವು. ಇನ್ನೇನಿದ್ದರೂ ದಿನಕ್ಕೆರಡು ಬಾರಿ ಅರೆದು, ಮೈಗೆ ಲೇಪಿಸಿ, ಇದೇ ರಸವನ್ನು ಗುಳ್ಕ್ ಎಂದು ಕುಡಿಯಲು ಮಗ ಸನ್ನದ್ಧನಾದ. ಬಚ್ಚಲುಮನೆಯಲ್ಲಿ ಬೆನ್ನಿಗೆ ಲೇಪಿಸುತ್ತಿದ್ದಂತೆ " ಆಹಾ, ಏನು ತಂಪೂ ..." ಅನ್ನಲಾರಂಭಿಸಿದವನಿಗೆ " ಹಂಗಿದ್ರೆ ತಲೆಗೂ ಹಾಕ್ತೇನೆ, ತಲೆಯಲ್ಲಿ ಎಷ್ಟು ಬೊಕ್ಕೆ ಬಿದ್ದಿದೇಂತ ಯಾರಿಗೆ ಕಾಣ್ಸುತ್ತೆ..." ಅನ್ನುತ್ತಾ ತಲೆಗೂ ಅರೆದ ಸೊಪ್ಪಿನ ಮುದ್ದೆ ಎರೆದೆ.

" ಅಮ್ಮ, ತಲೆಗೆ ನಾನೇ ಹಾಕಿಕೊಳ್ಳುತ್ತೇನೆ "

" ಸರಿ ಹಾಗಿದ್ರೆ, ಚೆನ್ನಾಗಿ ಹಾಕಿಕೋ, ಅರ್ಧ ಘಂಟೆ ಬಿಟ್ಟು ಸ್ನಾನ ಮಾಡು. ಬಿಸಿ ನೀರು ಬೇಡ, ಸಾಬೂನು ಹಾಕಲೇ ಬೇಡ "

ಹೀಗೆ ಸ್ನಾನ ಮಾಡುವ ಕ್ರಿಯೆ ನಿರಂತರ 7 - 8 ದಿನ ನಡೆಯಿತು. ಮೊದಲ ದಿನ ತಲೆಗೆ ಸೊಪ್ಪಿನ ರಸ ಹಾಕಿದ್ದರಲ್ಲಿ " ತಲೆವೇದನೆ ಹೋಯ್ತಮ್ಮಾ " ಅಂದ. " ಹೌದ! ಅಷ್ಟು ಪವರ್ ಇದೆಯಾ ಈ ಪಲ್ಲಿಸೊಪ್ಪಿಗೆ..." ನಂಗೂ ಆಶ್ಚರ್ಯ. ಸಾಮಾನ್ಯವಾಗಿ ಚಿಕ್ಕಮಕ್ಕಳಿಗೆ ಬರುವ ಚಿಕನ್ ಪಾಕ್ಸ್ ನ ವೇದನೆ, ಸಂಕಟಗಳನ್ನು ಪುಟಾಣಿಗಳು ಹೇಳಲು ತಿಳಿದಿರುವುದಿಲ್ಲ. ಅಳು ಹಾಗೂ ಮೊಂಡುತನ ಮಾತ್ರ ಪ್ರದರ್ಶಿಸಬಲ್ಲವರಾಗಿರುತ್ತಾರೆ. ಯವಕನಾದ ಮಗ ಕಹಿಬೇವು ಹಾಗೂ ಪಲ್ಲಿಸೊಪ್ಪುಗಳ ಕಾರ್ಯಕ್ಷಮತೆಯನ್ನು ಅರ್ಥೈಸಿಕೊಂಡು ವ್ಯವಹರಿಸಿದ, ಹಾಗೂ ವಾರದೊಳಗೆ ರೋಗಮುಕ್ತನಾಗಿ ಬೆಂಗಳೂರಿಗೆ ಹೋದ.

ಇಲ್ಲಿ ಬರೆಯಬೇಕಾಗಿರುವ ಮತ್ತೊಂದು ವಿಚಾರವಿದೆ. ತಲೆಕೂದಲು ಉದುರುವ ಸಮಸ್ಯೆಯನ್ನು ಈ ಹಿಂದೆ ನನ್ನ ಬಳಿ ಹೇಳಿಕೊಂಡಿದ್ದವನು ಈಗ ಆ ಸಮಸ್ಯೆಯಿಂದಲೂ ಮುಕ್ತಿ ಪಡೆದಿದ್ದಾನೆ. ವಾರವಿಡೀ ಹರ್ಬಲ್ ಶಾಂಪೂ ಥರ ಮಿಂದಿದ್ದೂ ಕಾರಣವಿರಬಹುದು. ಈ ಮಾತು ಅವನಿಂದಲೇ ಬಂತು, " ಚಿಕನ್ ಪಾಕ್ಸ್ ಬಂದಿದ್ದು ಒಳ್ಳೇದೇ ಆಯಿತು "

ಪಲ್ಲಿ ಸೊಪ್ಪು Breynia vitis, Indian snowberry, Mountain Coffee Bush

ಮಲಯಾಳಂ Kattuniruri, Chuvannaniruri, Pavalapulla, Pavilapoola
ತಮಿಳು Sithuruvum, Manipullaanthi, SeppulaaPosted via DraftCraft app

Monday, 14 October 2013

" ಒಂದು ಚಹಾ ಕುಡಿಯೋಣ ಬನ್ನಿ...."
" ಅಮ್ಮ,  ನಾಳೆ ಬರ್ತಾ ಇದೇನೆ,  ನಿಂಗೇನು ತರ್ಲಿ "

"ಏನೂ ಆದೀತು,  ಏನಾದ್ರೂ ತಾ "

ಇದು ಅಮ್ಮ ಮಗನ Skype ಸಂಭಾಷಣೆ.

ಬೆಳ್ಳಂಬೆಳಗ್ಗೆ ಏಳು ಗಂಟೆಯಾಗ್ಬೇಕಿದ್ರೆ ಬೆಂಗಳೂರಿನಿಂದ ಮಗನ ಆಗಮನವಾಯಿತು.   ಅವನಿಗಿಷ್ಟವಾದ ಅವಲಕ್ಕಿ ಸಜ್ಜಿಗೆ ಮಾಡ್ತಾ ಇರಬೇಕಾದ್ರೇ ಬಂದ್ಬಿಟ್ಟ.

" ಈಗ ಸುಸ್ತಾಗಿದೆ,  ತಿಂಡಿ ಹತ್ತು ಗಂಟೆಗೆ ಸಾಕು "  ಅಂದವನೇ ರೂಮಿಗೆ ಹೋದ.

ಮದ್ಯಾಹ್ನದ ಊಟವಾಗುತ್ತಲೇ  " ಅಮ್ಮ,  ನಿಂಗೆ ಅಂತಾನೇ ತಂದಿದ್ದು ನೋಡಿಲ್ಲಿ,  ಇದು ಹರ್ಬಲ್ ಟೀ ಗೊತ್ತಾಯ್ತಾ,  ಹಾಲು ಹಾಕೂದೇನೂ ಬೇಡ "

"ಹಾಲಿಲ್ಲದೆ ಟೀ ಕುಡಿಯೂದು ಹೇಗೇ ?"

" ಕುಡ್ದು ನೋಡು,  ಆವಾಗ ಗೊತ್ತಾಗುತ್ತೆ,   ಇದು ಲೈಮ್ ಟೀ,  ಸಕ್ರೆ ಹಾಕ್ಬೇಕು.   ಇದು ನೋಡು,  ಗ್ರೀನ್ ಟೀ,   ಇದಕ್ಕೆ ಸಕ್ರೆ ಬೇಡ "  ಅನ್ನುತ್ತಿದ್ದಂತೆ ಪುಟ್ಟ ಪುಟ್ಟ ಚಹಾ ಪೊಟ್ಟಣಗಳು ನನ್ನೆದುರು ಗಿರಗಿರನೆ ಬಿದ್ದವು.
 
ಮಾರನೇ ದಿನ ಅವನಿಗಾಗಿ ಪ್ಯಾಕ್ ಮಾಡಿಟ್ಟ ತುಪ್ಪ,  ಸೌತೆ ಉಪ್ಪಿನಕಾಯಿ,  ಕರಿಬೇವಿನ ಚಟ್ನಿಹುಡಿ ಬ್ಯಾಗಿಗೇರಿಸಿ ಹೊರಟೂ ಬಿಟ್ಟ.

ಬೆಂಗಳೂರು ತಲಪಿದ ಮೇಲೆ ಎಂದಿನಂತೆ ನೆಟ್ ಸಂಭಾಷಣೆ ಮುಂದುವರಿಯದಿರುತ್ತದೆಯೇ,    " ಟೀ ಮಾಡಿ ಕುಡಿದ್ಯಾ "

" ಹೂಂ,  ಕುಡಿದಾಯ್ತು,  ಸಕ್ರೆ ಹಾಕದೇ ಹಾಗೇ ಕುಡಿದ್ವಿ,   ಒಂಥರಾ ಲಿಂಬೆ ಪರಿಮಳ ಬರ್ತಿತ್ತು ನೋಡು "

" ಲೈಮ್ ಟೀಗೆ  ಸಕ್ರೆ ಹಾಕದೇ ಕುಡಿದ್ಯಾ,  ನನ್ ಕರ್ಮ,  ಅಪ್ಪಾನೂ ಕುಡಿದ್ರಾ ...  ಎಷ್ಟು ಸರ್ತಿ ಹೇಳೂದು,  " ಲೈಮ್ ಟೀಗೆ ಸಕ್ರೆ ಹಾಕೂ,  ಗ್ರೀನ್ ಟೀಗೆ ಬೇಡಾಂತ... ಹಾಲು ಹಾಕ್ಬೇಡ ಆಯ್ತಾ "

" ಹ್ಞಾಂ,  ಸರಿ.   ನಾಳೆ ಹಾಗೆ ಮಾಡಿದ್ರಾಯ್ತು "

ಅಂತೂ ಲೈಮ್ ಟೀ ಪ್ಯಾಕೆಟ್ಟುಗಳು ಮುಗಿದಾಗ ಜ್ಞಾನೋದಯವಾಯಿತು.   ಲಿಂಬೆ ಸುವಾಸನೆ ಬರಲು ಈ ಚಹಾಪುಡಿಗೆ ಏನು ಹಾಕಿರ್ತಾರೋ ಗೊತ್ತಿಲ್ಲ,  ಪ್ರಯೋಗ ನಡೆಯಿತು,   ಒಂದಿನ ತುಳಸಿ,  ಮಾರನೇ ದಿನ ಸಾಂಬ್ರಾಣಿ,  ಮನೆಯಂಗಳದಲ್ಲೇ ಸುಗಂಧಭರಿತ ಸಸ್ಯಗಳು ಇರಬೇಕಾದರೆ.....  ಆಹ! ಅದ್ಭುತ ರುಚಿಯ ಚಹಾ. 

ಚಹಾ ಮಾಮೂಲು ಹುಡಿಯಲ್ಲಿ ಕುದಿಸಿ ಇಟ್ಟಾಯ್ತೇ,  ಸಕ್ಕರೆ ಹಾಕಿ ಲಿಂಬೆರಸ ಎರೆದು ಕುಡಿದು ನೋಡಿ.   ಬಿಸಿ ಬಿಸಿಯಾಗಿಯೂ ಚೆನ್ನ,   ತಣ್ಣಗಾದರೂ ಚೆನ್ನ.   ಹಾಲು ಬೇಡ.

ಕೆಮ್ಮು, ಶೀತ ಕಾಡುವಾಗ ಶುಂಠಿ,  ಕಾಳುಮೆಣಸಿನ ಚಹಾ ಕುಡಿಯುವ ವಾಡಿಕೆ ಇದೆ.  ಜೀರಿಗೆ ಹಾಕಿದ್ರೆ ಜೀರಾ ಟೀ ಆಯ್ತು.   ಯಾಲಕ್ಕಿ ಹಾಕಿದ ಚಹಾ ರುಚಿ ಕುಡಿದವರಿಗೆ ಗೊತ್ತು.    ಈ ಚಹಾಗಳಿಗೆ ಹಾಲು, ಸಕ್ಕರೆ ಬೆರೆಸಿಯೇ ಕುಡಿದರೆ ಚೆನ್ನಾಗಿರುತ್ತದೆ.   ಯಾವುದೇ ಚಹಾ ಮಾಡುವುದಿದ್ದರೂ ಚಹಾಪುಡಿ ಹಾಕ್ಬಿಟ್ಟು ಗಳಗಳನೆ ಕುದಿಸಬಾರದು.  ಅದರಲ್ಲಿರುವ ಆಂಟಿಓಕ್ಸಿಡೆಂಟ್ ಗುಣಗಳು ನಾಶವಾಗುವುದಲ್ಲದೆ ಕೆಟ್ಟ ವಾಸನೆಯ ಚಹಾ ನಿರರ್ಥಕ ಪೇಯವಾದೀತು.

ವರ್ಷಗಳ ಹಿಂದೆ ವೆನಿಲ್ಲಾ ಬೆಳೆ ನಮ್ಮ ಊರಿನ ಅಡಿಕೆ ತೋಟಗಳಲ್ಲಿ ಸಾಮಾನ್ಯವಾಗಿತ್ತು.   ಈಗ ಯಾರೂ ಅದನ್ನು ಕೇಳೋರಿಲ್ಲ.   ನನ್ನ ಬಳಿಯೂ ಯಾರೋ ಉಚಿತವಾಗಿ ಕೊಟ್ಟಿದ್ದ ವೆನಿಲ್ಲಾ ಕೋಡುಗಳು ಸಾಕಷ್ಟಿವೆ.   ನಾಳೆ ವೆನಿಲ್ಲಾ ಚಹಾ ಕುಡಿಯೋಣ ಬನ್ನಿ...


.

Posted via DraftCraft app

Saturday, 5 October 2013

ವಿಷಕನ್ನಿಕೆ! ...... ಇವಳು ಅಗ್ನಿಶಿಖೆ!ಮಳೆಗಾಲದ ಆರಂಭದ ದಿನಗಳು,   ಅಂಗಳದ ಮಲ್ಲಿಗೆ ಸಿಕ್ಕಸಿಕ್ಕಲ್ಲಿಗೆ ಪಯಣ ಬೆಳೆಸುವ ಅಂದಾಜಿನಲ್ಲಿದ್ದಳು.   ಒಂದು ಕತ್ತರಿಯಾಡಿಸೋಣವೆಂದು ಪುಟ್ಟ ಕತ್ತಿಯೊಂದಿಗೆ ತಯಾರಾಗುತ್ತಿದ್ದಂತೆ ತೋಟದಿಂದ ಹುಲ್ಲಿನ ಹೊರೆ ಹೊತ್ತು ಚೆನ್ನಪ್ಪ ಬಂದ.   " ನಾಳೆ ಈ ಮಲ್ಲಿಗೆ ಸುತ್ತಮುತ್ತ ಚಂದ ಮಾಡು ಆಯ್ತಾ "  ಅಂದೆ.
" ತೋಟದ ಹುಲ್ಲು ತೆಗೀಲೋ ....  ಈ ಮಲ್ಲಿಗೆ ಬುಡ ನೀವೇ ಚಂದ ಮಾಡಿ ಅಕ್ಕ "  ಅಂದ.
" ಆಯ್ತು,  ನೋಡಿಲ್ಲಿ,  ಈ ಹೊಸಾ ಬಳ್ಳಿ ಎಂಥದು ?"
" ಅಯ್,  ಅದೆಂತದೋ ಕಾಟ್ ಬಳ್ಳಿ..."  ಅನ್ನುತ್ತಾ ಕಿತ್ತೆಸೆದ.
" ಛೆ,  ನೋಡಬಹುದಾಗಿತ್ತು .... ತೆಗೆದೂ ಆಯ್ತಲ್ಲ..."  ಅವನಿಗೊಂದು ಚಹಾ ಕೊಟ್ಟು ಮನೆಗೆ ಕಳಿಸಬೇಕಲ್ಲ,   ಗೊಣಗುತ್ತಾ ಒಳಗೆ ಹೋಗಬೇಕಾಯಿತು.

ಕೋಮಲವಾದ ಉದ್ದನೆಯ ತಿಳಿ ಹಸಿರು ಬಣ್ಣದ ಎಲೆಗಳು,  ಕಾಣಲೂ ಆಕರ್ಷಕವಾಗಿತ್ತು.   ಅದಕ್ಕೊಂದು ಗೂಟ ಕೊಟ್ಟು ನಿಲ್ಲಿಸೋಣ ಅಂದ್ಕೊಂಡಿದ್ದ ಹಾಗೇ ಈ ಸುಕೋಮಲ ಲತೆಯನ್ನು ಕಿತ್ತೆಸೆದನಲ್ಲ ಎಂಬ ವ್ಯಥೆ ಬಹಳ ದಿನಗಳವರೆಗೆ ಬಾಧಿಸಿದ್ದು ಸುಳ್ಳಲ್ಲ.

ಆಷಾಢ ಕಳೆದು ಶ್ರಾವಣ ಬಂದಿತು.   ವಿಧವಿಧವಾದ ವನಸುಮಗಳು ಅರಳುವ ಸಮಯ.  ಮನೆಯ ಎದುರುಗಡೆ  ಗೇರುಮರಗಳ ತೋಪಿನಲ್ಲಿ ಅಡ್ಡಾಡುತ್ತಿರಬೇಕಾದರೆ ಪುನಃ ಇದೇ ಬಳ್ಳಿ ಎದುರಾಯಿತು.   ಆಕರ್ಷಕ ಹೂಗಳೂ ಅರಳಿದ್ದವು.   ಬಿರುಬಿಸಿಲಿಗೆ ಜ್ವಾಜಲ್ಯಮಾನವಾಗಿ ಹೊಳೆಯುತ್ತಿದ್ದ ಹೂಗಳು!   " ನೂರು ಕಣ್ಣು ಸಾಲದು ನಿನ್ನ ನೋಡಲು,  ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು ...."  ಚಲನಚಿತ್ರ ಗೀತೆ ಗುಣುಗುಣಿಸುತ್ತ  ಹೂವಿನ ಚೆಲುವನ್ನು ಕಣ್ತುಂಬ ತುಂಬಿಕೊಂಡರೂ ಈ ಹೂವು ಯಾವುದೆಂದು ಆಗ ತಿಳಿಯದೆ ಹೋಯಿತು.

                                        
                                                   <><><>       <><><>


ಅಂತರ್ಜಾಲ ಮಾಧ್ಯಮದ ಪ್ರವೇಶದೊಂದಿಗೆ ಓದುವಿಕೆಯ ವ್ಯಾಪ್ತಿಯೂ ಹಿಗ್ಗಿದೆ.   ತಾನಾಗಿಯೇ ಈ ಹೂ ತನ್ನ ಇರವನ್ನು ಅಂತರ್ಜಾಲದ ಪುಟಗಳಲ್ಲಿ ತೋರಿಸಿಕೊಟ್ಟಿತು.   ವಿವರವಿವರವಾಗಿ ಹೂ ವರ್ಣಪದರಗಳನ್ನು ಬಿಡಿಸುತ್ತ ತನ್ನ ವೈಖರಿಯೇನೆಂಬುದನ್ನು ಹೇಳಿತು.

ಆಯುರ್ವೇದದಲ್ಲಿ ಔಷಧೀಯ ಸಸ್ಯವಾಗಿ ಇದು ಪುರಾತನ ಕಾಲದಿಂದಲೇ ಗುರುತಿಸಿಕೊಂಡಿದೆ.   ಸಂಸ್ಕೃತದಲ್ಲಿ ಲಾಂಗಲೀ,  ತಾಮ್ರಚೂಡ ಎಂದೆನಿಸಿಕೊಂಡಿರುವ ಈ ಮೂಲಿಕಾ ಸಸ್ಯ ಕನ್ನಡದಲ್ಲಿ ಅಗ್ನಿಶಿಖೆ,  ಗೌರಿಹೂ,  ಕೋಳಿಜುಟ್ಟಿನ ಹೂ,  ಕೋಳಿಕುಟುಮ ಹೀಗೆ ಹಲವಾರು ಹೆಸರುಗಳು.   ರಕ್ತಸಿಕ್ತ ಹುಲಿಯುಗುರಿನಂತೆಯೂ ತೋರುವುದರಿಂದ ವ್ಯಾಘ್ರನಖ ಅಂತಲೂ ಹೇಳುತ್ತಾರೆ.   ಕೂಡಗರು ಈ ಹೂವಿಗೆ ಧಾರ್ಮಿಕ ಆಚರಣೆಗಳಲ್ಲಿ ಮಹತ್ವದ ಸ್ಥಾನ ನೀಡಿರುತ್ತಾರೆ.  ದೇವರಿಗೆ ಅತಿಪ್ರಿಯವಾದ ಹೂವಾಗಿರುವ ಅಗ್ನಿಶಿಖೆಯನ್ನು ಗೌರಿ-ಗಣೇಶನ ಹಬ್ಬದಂದು ಎಲ್ಲಿಂದಲಾದರೂ ಹುಡುಕಿ ತಂದು  ಅರ್ಪಿಸಿ,   ಗೌರಿ ಹೂ ಎಂದು ಗೌರವಿಸುವ ಸಂಪ್ರದಾಯ ನಮ್ಮ ಭಾರತೀಯರದ್ದು.    ತಾಮ್ರಚೂಡ ಎಂಬ ಸಂಸ್ಕೃತ ಶಬ್ದಕ್ಕೆ ಕೋಳಿಜುಟ್ಟು ಎಂದೇ ಅರ್ಥ.   ಭರತನಾಟ್ಯದಲ್ಲಿ ಒಂದು ಪ್ರಕಾರದ ಹಸ್ತಭಂಗಿಗೂ ತಾಮ್ರಚೂಡ ಎಂದೇ ಹೆಸರು.   ಹಿಂದಿಯಲ್ಲಿ ಕಾಲಿಹರಿ,  ತೆಲುಗಿನಲ್ಲಿ ಕೋಡಿ ಜುಟ್ಟು ಚೆಟ್ಟು,   ತಮಿಳಿನಲ್ಲಿ ಅಗ್ನಿಶಿಖಾ,  ಕಿಳಂಗು ಎಂದಾದರೆ ನಮ್ಮ ತುಳುಜನರು ಕೊರಗ ಪೂ ಅನ್ನುತ್ತಾರೆ.

ಸಸ್ಯಶಾಸ್ತ್ರೀಯ ವರ್ಗೀಕರಣದಲ್ಲಿ Gloriosa superba ಆಗಿರುವ ಈ ಮೂಲಿಕಾ ಸಸ್ಯ Colchicaceae ಕುಟುಂಬವಾಸಿ. ಇಂಗ್ಲೀಷ್ ಭಾಷೆಯಲ್ಲಿಯೂ ಸೌಂದರ್ಯದ ಖನಿಯಾಗಿರುವ ಅಗ್ನಿಶಿಖೆಯನ್ನು ಗ್ಲೋರಿ ಲಿಲ್ಲಿ,  ಕ್ರೀಪಿಂಗ್ ಲಿಲ್ಲಿ,  ಫ್ಲೇಮ್ ಲಿಲ್ಲಿ,  ಗ್ಲೋರಿಯೋಸಾ ಲಿಲ್ಲಿ ವರ್ಣಿಸಲಾಗಿದೆ.   ಮೂಲತಃ ಆಫ್ರಿಕಾ ಹಾಗೂ ಏಷ್ಯಾ ನೆಲೆಯಾಗಿರುವ ಈ ಸಸ್ಯ ತನ್ನ ಔಷಧೀಯ ಗುಣಗಳಿಂದಾಗಿ ವಿಶ್ವ ಪ್ರಸಿದ್ಧಿ ಪಡೆದಿದೆ.   ಬೆಲೆಬಾಳುವ ಬೇರುಗೆಡ್ಡೆ ಹಾಗೂ ಬೀಜಗಳಿಗೆ ಜಾಗತಿಕ ಮಾರುಕಟ್ಟೆಯಿದೆ.   ಹೂವರಳಿದ ನಂತರ ಈ ಲತೆ ನಾಶವಾಗುವುದಾದರೂ ಇದರ ಬೇರುಗೆಡ್ಡೆ ನೆಲದೊಳಗೆ ಭದ್ರವಾಗಿರುತ್ತದೆ.   ಬೇರುಗಡ್ಡೆಯ ಕಂದುಗಳು ಹಾಗೂ ಹೂವಿನ ಬೀಜಗಳು ಹೊಸ ಸಸ್ಯದ ಉತ್ಪತ್ತಿಗೆ ನೆಲೆಯಾಗಿವೆ.

ಅಗ್ನಿಶಿಖೆಯ ಬಗ್ಗೆ ಅಮೂಲ್ಯ ಮಾಹಿತಿಗಳನ್ನು ತಿಳಿಯಬೇಕಿದ್ದರೆ ಆಯುರ್ವೇದ ತಜ್ಞರನ್ನು ಸಂಪರ್ಕಿಸುವುದು ಉತ್ತಮ.  ಭಾನುಮಿತ್ರನ  ' ಭಾವಪ್ರಕಾಶ ' ಆಯುರ್ವೇದ ವಿಜ್ಞಾನ ಇದರ ವಸ್ತುವಿಷಯಗಳ ಕಣಜವಾಗಿದೆ.

ಈಗ ನಿಧಾನವಾಗಿ ಮನಸ್ಸಿಗೆ ಭಾಸವಾಗುತ್ತಿದೆ,   ವಿಷಜಂತುಗಳ ವಿಷವನ್ನೇ ಕರಗಿಸಬಲ್ಲ,  ವಿನಾಶದಂಚಿನಲ್ಲಿರುವ ಅಮೂಲ್ಯವಾದ ಈ ಔಷಧೀಯ ಸಸ್ಯವನ್ನು  ಅಂದು ಚೆನ್ನಪ್ಪ ಕಾಟ್ ಬಳ್ಳಿ ಎಂದು ಕಿತ್ತೆಸೆದದ್ದು ಸುಮ್ಮನೆ ಅಲ್ಲ,  ಗಿರಿಜನ ಬುಡಕಟ್ಟು ಜನಾಂಗದವನಾಗಿದ್ದ ಅವನಿಗೆ ತಿಳಿದಿತ್ತು.    ವಿಷಯುಕ್ತ ಸಸ್ಯ ಮನೆಯಂಗಳದಲ್ಲಿ ಬೇಡ ಎಂಬ ಭಾವದಿಂದಲೇ ಕಿತ್ತೆಸೆದ. 


ಅಗ್ನಿಶಿಖೆಯ ಎಲ್ಲಾ ಅಂಗಗಳೂ ತೀವ್ರ ವಿಷಯುಕ್ತ,  ಸರ್ಪದ ವಿಷವನ್ನು ಮನುಷ್ಯ ಶರೀರದಿಂದ ತೆಗೆಯಬಲ್ಲ ಪ್ರತಿವಿಷವಾಗಿ ಇದನ್ನು ಬಳಸಲು ಅನಾದಿಯಿಂದಲೇ ನಮ್ಮ ಆಯುರ್ವೇದ ವಿಜ್ಞಾನಿಗಳು ತಿಳಿದಿದ್ದಾರೆ.    ಚೇಳಿನ ಕಡಿತದ ನಂಜು ನಿವಾರಕವೂ ಹೌದು.

ಬಸುರಿ ಸ್ತ್ರೀಯರಿಗೆ ಸುಸೂತ್ರ ಪ್ರಸವ ಮಾಡಿಸಲು ಹೆರಿಗೆ ಕೋಣೆಯಲ್ಲಿ ಸೊಲಗಿತ್ತಿಯರು ಅಗ್ನಿಶಿಖೆಯ ಬೇರುಗೆಡ್ಡೆಯನ್ನು ಇಟ್ಟುಕೊಳ್ಳುತ್ತಿದ್ದರಂತೆ.   ಬೇಡವಾದ ಬಸಿರನ್ನು ತೆಗೆಸಲೂ ಇದನ್ನೇ ಉಪಯೋಗ,  ತನ್ಮೂಲಕ ಸಂತಾನ ನಿಯಂತ್ರಣ.    ಇದೆಲ್ಲ ಹಿಂದಿನ ಕಾಲದ ಮಾತಾಯಿತು.

ತೀವ್ರ ಸ್ವರೂಪದ ಸಂಧಿವಾತ ರೋಗದಲ್ಲಿ ಇದು ಪರಿಣಾಮಕಾರೀ ಚಿಕಿತ್ಸೆ ನೀಡಬಲ್ಲುದು.   ಚರ್ಮರೋಗಗಳು,  ಧೀರ್ಘಕಾಲದಿಂದ ಗುಣವಾಗದಿರುವ ಹುಣ್ಣು ( ಕುರು ) ನಿವಾರಕ.   ಸಂತಾನಹೀನತೆಗೂ ಔಷಧಿ,   ಪುರುಷತ್ವವೃದ್ಧಿ.

ಇಷ್ಟೆಲ್ಲ ಗುಣವಿಶೇಷಗಳನ್ನು ಅಗ್ನಿಶಿಖೆ ಹೊಂದಿರಲು ಇದರಲ್ಲಿರುವ ಕೋಲ್ಶಿಸಿನ್ ( colchicine ) ಎಂಬ ಆಲ್ಕಲಾಯಿಡ್ ಕಾರಣವಾಗಿದೆ.   ಕೋಲ್ಶಿಸಿನ್ ಔಷಧಿ ತಯಾರಿಗೆ ಬೇಕಾಗುವ ರಾಸಾಯನಿಕವಾಗಿರುತ್ತದೆ.   ಈ ರಾಸಾಯನಿಕವು ನೈಸರ್ಗಿಕ ರೂಪದಲ್ಲಿ ಲಭಿಸುವುದರಿಂದ ಇದರ ಗೆಡ್ಡೆ ಹಾಗೂ ಬೀಜಗಳಿಗೆ ಬಹು ಬೇಡಿಕೆ ಬಂದಿದೆ.  ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯುತ್ತಿವೆ.    ಆಧುನಿಕ ಜಗತ್ತಿನ ಮಾರಕ ರೋಗವಾಗಿರುವ ಕ್ಯಾನ್ಸರ್ ಚಿಕಿತ್ಸೆಯಲ್ಲೂ ಈ ಸಸ್ಯ ಭಾಗಿಯಾಗಿದೆ.   ದೇಶವಿದೇಶಗಳಲ್ಲಿ ಬಹು ಬೇಡಿಕೆ ಪಡೆದಿರುವ ಸಸ್ಯ ಸಂಪತ್ತು ಇದಾಗಿದೆ.


ಔಷಧೀಯ ಗಿಡಮೂಲಿಕೆಗಳ ಈ ಕಿರು ಹೊತ್ತಗೆಯ ಮುಖಪುಟದಲ್ಲೇ ಅಗ್ನಿಶಿಖೆಯಿದೆ.   1996ರಲ್ಲಿ ಪ್ರಕಟಿತವಾದ ಈ ಪುಸ್ತಕವನ್ನು ವೈದ್ಯರೇ ಆದ ಎ. ಆರ್. ಎಂ. ಸಾಹೇಬ್ ಬರೆದಿರುತ್ತಾರೆ.   ಎಂದೋ ಮಂಗಳೂರಿನ ಅತ್ರಿ ಬುಕ್ ಸೆಂಟರ್ ನಿಂದ ಖರೀದಿಸಿದ ಪುಸ್ತಕ.....


Posted via DraftCraft app

Saturday, 28 September 2013

ಬಾಂಬೇ ಟೋಸ್ಟ್ಬ್ರೆಡ್ ಇದೆ,  ಹಾಲು ಇದೆ,  ಸಕ್ಕರೆ ಇದೆ.
ಕಾವಲಿಗೆ ತುಪ್ಪ ಸವರಿ ಒಲೆ ಮೇಲೆ ಇಟ್ಟಾಯ್ತೇ,
ಒಂದು ಲೋಟ ಹಾಲಿಗೆ ಎರಡು ಚಮಚಾ ಸಕ್ಕರೆ ಕರಗಿಸಿ ಒಂದು ತಪಲೆಗೆರೆದು ಇಟ್ಟು ಕೊಳ್ಳಿ.
ಕಾವಲಿ ಬಿಸಿಯಾಗಿದೆ,  ಒಂದೊಂದೇ ಬ್ರೆಡ್ ಸ್ಲೈಸನ್ನು ಹಾಲಿಗೆ ಇಳಿಸಿ ಕೂಡಲೇ ತೆಗೆದು ಕಾದ ತವಾ ಮೇಲೆ ಹಾಕಿ.  ಒಂದೇ ಬಾರಿ 3-4 ಬ್ರೆಡ್ ತುಂಡುಗಳನ್ನು ಹಾಕಬಹುದು.  ಕವುಚಿ ಹಾಕಿ ತೆಗೆಯಿರಿ.
ಬಿಸಿ ಬಿಸಿಯಾಗಿ ತಿನ್ನಿ,   ಬಾಂಬೇ ಟೋಸ್ಟ್ ಅನ್ನಿ.

ಚಿಕ್ಕಮಕ್ಕಳು ಅನ್ನ, ತಿಂಡಿ ತಿನ್ನಲು ರಂಪಾಟ ಮಾಡುವುದು ಸಹಜ,   ಬಿಸಿ ಬಿಸಿಯಾದ ಈ ಬಾಂಬೇ ಟೋಸ್ಟ್ ಮಕ್ಕಳ ಮನ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ.
ಹಾಲು ಹಾಗೇನೇ ಕುಡಿಯಲು ಇಷ್ಟಪಡದ ಮಕ್ಕಳಿಗೆ ಹೀಗಾದರೂ ಹಾಲು ದಕ್ಕೀತು.
ಮನೆಯಲ್ಲಿ ದೋಸೆ, ಇಡ್ಲಿ ಮಾಡಿಕೊಡಲು ಯಾರೂ ಇಲ್ಲದಿದ್ದಾಗ ಹೀಗೆ ಬ್ರೇಕ್ ಫಾಸ್ಟ್ ಮಾಡಿಕೊಳ್ಳಬಹುದು,  ಹೋಟಲ್ ಖರ್ಚು ಉಳಿತಾಯ.
ಸಂಜೆಯ ವೇಳೆ ಟೀ ಜತೆ ಇನ್ನೂ ಚೆನ್ನಾಗಿರುತ್ತದೆ.

Posted via DraftCraft app

Saturday, 21 September 2013

ಅಡುಗೆ ~~~ ಒಗ್ಗರಣೆ
ಮನೆಯ ಮುಂದೆ ತುಳಸೀ ಇರಬೇಕು, ಹಿತ್ತಿಲಲ್ಲಿ ಕರಿಬೇವು ಇರಬೇಕು, ಹೌದು ತಾನೇ. ಅಡುಗೆ ಆಗಿ ಒಗ್ಗರಣೆ ಕೊಡುವ ಹೊತ್ತಿಗೆ ಕರಿಬೇವಿನೆಲೆ ನೆನಪಾಗಿ, ಹಿತ್ತಿಲಿಗೆ ಹೋಗಿ ಎರಡೆಸಳು ಕೊಯ್ದು, ಮಾಡಿಟ್ಟ ಅಡುಗೆ ಘಮಘಮಾ ಮಾಡುತ್ತಲ್ಲ, ಅದು ಕರಿಬೇವು.

ನಮ್ಮ ಪಕ್ಕದ ಮನೆಯಾಕೆ ದಿನ ಬಿಟ್ಟು ದಿನ ಬೇವಿನೆಲೆಗಾಗಿ ನಮ್ಮ ಮನೆಗೇ ಬರೋರು. ಗಿಡವೇನೋ ಅವರಲ್ಲೂ ಇದೆ, ಅದರ ಎಸಳು ಕೀಳಲು ಏನೋ ಆಸೆ. ನಾನೂ ಒಂದಿನಾ ಹೋಗಿ ನೋಡ್ದೆ. ಎಲೆಗಳನ್ನು ಚಿವುಟದೇ ಇಟ್ಟಿದ್ರಿಂದಾಂತ ಕಾಣ್ಸುತ್ತೆ, ಎಲೆಗಳು ನಮ್ಮನ್ಯಾರೂ ಕೇಳೋರಿಲ್ಲ ಅನ್ನುವಂತೆ ಕಳಾವಿಹೀನವಾಗಿದ್ದುವು.

" ನೀವು ಹೀಗೆ ಮಾಡಿ ಹೇಮಕ್ಕ, ಈ ಗಿಡದ ಎಲೆ ಎಲ್ಲಾ ಚಿವುಟುತ್ತಾ ಬನ್ನಿ, ಹೇಗೂ ಮಳೆ ಬರ್ತಾ ಇದೆ, ಚಿಗುರು ಬಂದು ಪೊದೆ ಥರ ಆಗಲು ಏನೂ ತೊಂದರೆಯಿಲ್ಲ " ಅಂದೆ.

" ಹೌದೇ, ಹಾಗೇ ಮಾಡ್ತೇನೆ " ಅಂದ ಹೇಮಕ್ಕ ಏನು ಮಾಡಿದ್ರು ಅಂತ ಪುನಃ ತನಿಖೆಗೆ ನಾನು ಹೋಗಿಲ್ಲ.

ಬೇವಿನೆಲೆಯಲ್ಲಿ ದೊಡ್ಡ ಎಲೇದು, ಪುಟ್ಟ ಎಲೇದು ಅಂತ ವೈವಿಧ್ಯಗಳೇನೋ ಇವೆ. ಆದರೂ ಸಸ್ಯಶಾಸ್ತ್ರೀಯ ವರ್ಗೀಕರಣವೇನೂ ಇಲ್ಲ. ಆಂಗ್ಲ ಭಾಷೆಯಲ್ಲಿ curry leaf plant ಅನ್ನಿಸಿಕೊಂಡಿರುವ ಈ ಸಸ್ಯ Rutaceae ಕುಟುಂಬದಲ್ಲಿದೆ. ಭಾರತ ಹಾಗೂ ಶ್ರೀಲಂಕಾಗಳಲ್ಲಿ ಒಂದು ಸಾಮಾನ್ಯ ಸಸ್ಯವಾಗಿರುವ ಕರಿಬೇವಿನ ಗಿಡವನ್ನು ಸಸ್ಯವಿಜ್ಞಾನಿಗಳು Murraya koenigii ಎಂದು ಹೆಸರಿಸಿದ್ದಾರೆ. ಪುಟ್ಟ ಎಲೆಯ ಕರಿಬೇವು ತುಂಬಾ ಪರಿಮಳ ಎಂದು ನನ್ನಮ್ಮ ಹೇಳೋರು. ಅಮ್ಮ ಸಾಕಿದ ಪುಟ್ಟ ಎಲೆಯ ಕರಿಬೇವಿನ ಗಿಡ ಮರವಾಗಿ ಬೆಳೆದಿದೆ. ಊರಿನ ಹತ್ತೂ ಮಂದಿ ಕೀಳಲು ಬರುತ್ತಿರುತ್ತಾರೆ. ನಮ್ಮ ತೋಟದಲ್ಲಿ ಹೆಜ್ಜೆಗೊಂದರಂತೆ ಕರಿಬೇವಿನ ಗಿಡಗಳಿದ್ದರೂ ಅಮ್ಮನ ಮನೆಯ ಕರಿಬೇವಿನ ಮರದ ಬೇರಿನಿಂದ ಮೇಲೆದ್ದು ಬಂದ ಸಸಿಯನ್ನು ಕಿತ್ತು ತಂದು ನಮ್ಮ ಹಿರಣ್ಯದಲ್ಲೂ ನೆಟ್ಟು ಬೆಳೆಸುವ ಪ್ರಯತ್ನ ಮಾಡಿದ್ದೇನೆ.

ಬೇವಿನಸೊಪ್ಪಿನ ಚಟ್ನಿಹುಡಿ ಮಾಡಿಯೇ ಬಿಡೋಣ. ಇದನ್ನು ಈ ಆಧುನಿಕ ಯುಗದಲ್ಲಿ ಪರಿಶ್ರಮವಿಲ್ಲದೆ ಮಾಡಿಕೊಳ್ಳಬಹುದು. ಯಾಕೆ ಹೀಗೆ ಅನ್ನುತ್ತಿದ್ದೇನೆಂದರೆ ನನ್ನಜ್ಜಿ ಹಾಗೂ ನನ್ನಮ್ಮ ಮಕ್ಕಳಿಗಾಗಿ ಶ್ರಮ ಪಟ್ಟು ಮಾಡುತ್ತಿದ್ದ ಖಾದ್ಯಗಳಲ್ಲಿ ಚಟ್ನೀಪುಡಿಯೂ ಒಂದಾಗಿತ್ತು. ಒರಳು ಕಲ್ಲನ್ನು ಸ್ವಚ್ಛಗೊಳಿಸಿ, ಒಣಗಿಸಿ, ಹುರಿದ ಮಸಾಲೆಗಳನ್ನು ಹುಡಿ ಮಾಡಿಕೊಡಲು ಕೆಲಸಗಿತ್ತಿಯ ಸಹಕಾರವೂ ಅನಿವಾರ್ಯವಾಗಿತ್ತು.

ಒಂದು ತೆಂಗಿನಕಾಯಿ, ನೀರು ಆರಿದ ಗೋಟುಕಾಯಿಯಾಗಿರಬೇಕು. ತುರಿದು ಇಟ್ಟುಕೊಳ್ಳಿ.
ಬೇವಿನ ಸೊಪ್ಪು, 25 ಎಸಳು
ಕೊತ್ತಂಬರಿ, 3 ಚಮಚ
ಜೀರಿಗೆ, ಒಂದು ಚಮಚ
ಇಂಗು, ಕಡ್ಲೇ ಕಾಳಿನಷ್ಟು
ರುಚಿಗೆ ಉಪ್ಪು, ಹುಳಿ, ಬೆಲ್ಲ

ತೆಂಗಿನಕಾಯಿ ತುರಿಯನ್ನು ಬಾಣಲೆಯಲ್ಲಿ ಪರಿಮಳ ಬರುವತೆ ಹುರಿಯಿರಿ, ತಣಿಯಲು ತೆಗೆದಿರಿಸಿ.
ಅದೇ ಬಾಣಲೆಯಲ್ಲಿ ಉಳಿದ ಮಸಾಲಾ ಸಾಮಗ್ರಿಗಳನ್ನು ಘಮ್ ಘಮಾ ಎಂಬಂತೆ ಹುರಿದು ಕೆಳಗಿಳಿಸಿ.
ಬೇವಿನಸೊಪ್ಪನ್ನೂ ಬಾಣಲೆಗೆ ಹಾಕಿ ಕೈಯಲ್ಲಿ ಮುಟ್ಟುವಾಗ ಪುಡಿಯಾಗುವಷ್ಟು ಬಾಡಿಸಿ.
ಈ ಹುರಿಯುವ ಕ್ರಿಯೆಗಳನ್ನು ಮೈಕ್ರೋವೇವ್ ಒವನ್ ನಲ್ಲೂ ಮಾಡಿಕೊಳ್ಳಬಹುದು, ಎಣ್ಣೆ ಪಸೆ ಮಾಡುವ ಅವಶ್ಯಕತೆಯಿಲ್ಲ, ಸೊಪ್ಪು ತನ್ನ ತಾಜಾ ಹಸಿರು ಬಣ್ಣವನ್ನು ಸ್ವಲ್ಪವೂ ಕಳೆದುಕೊಳ್ಳುವುದಿಲ್ಲ.
ಇಷ್ಟೂ ಸಿದ್ಧತೆ ಆಯಿತೇ, ಮಿಕ್ಸಿಯ ಜಾರ್ ಸ್ವಚ್ಛಗೊಳಿಸಿ, ನೀರಪಸೆ ಇದ್ದಲ್ಲಿ ಒಣಗಿಸಿ.
ಒಂದೊಂದಾಗಿ ಹುಡಿ ಮಾಡಿ. ಕೊನೆಗೆ ಎಲ್ಲವನ್ನೂ ಜತೆಯಾಗಿ ಉಪ್ಪು, ಹುಳಿ, ಬೆಲ್ಲ ಸೇರಿಸಿ ಎರಡು ಸುತ್ತು ತಿರುಡಿಸಿ ತೆಗೆಯುವಲ್ಲಿಗೆ ಚಟ್ನಿಪುಡಿ ಸಿದ್ಧ.

ಎಲ್ಲರಿಗೂ ತಾಜಾ ಬೇವಿನೆಲೆ ಸಿಗುವುದಿಲ್ಲ. ಸಿಕ್ಕ ಮೇಲೆ ಕೆಲವು ದಿನ ಇಟ್ಟುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಬರುತ್ತದೆ. ಎಲೆಗಳನ್ನು ಇದ್ದ ಹಾಗೆ ಜಾಡಿಯಲ್ಲಿ ತುಂಬಿಡುವುದಕ್ಕಿಂತ ಸ್ವಲ್ಪ ಹುರಿದು ಜಾಡಿಯಲ್ಲಿ ತುಂಬಿಟ್ಟುಕೊಂಡಲ್ಲಿ ಉಪಯೋಗಕ್ಕೆ ಅನುಕೂಲ, ಹೆಚ್ಚು ದಿನ ಉಪಯೋಗಿಸಬಹುದು.

" ಮನೆಯ ಹಿಂದೆ ಹಿತ್ತಿಲೇ ಇಲ್ಲ, ನೆಡೋದೆಲ್ಲಿಂದ " ಎಂದು ಪೇಚಾಡಬೇಕಾಗಿಲ್ಲ. ಕುಂಡದಲ್ಲಿ ನೆಟ್ಟು ಬೆಳೆಸಿ, ಬಾಲ್ಕನಿಯ ಸೊಬಗನ್ನು ಹೆಚ್ಚಿಸಿ, ಶುದ್ಧವಾದ ಗಾಳಿಯನ್ನು ಪಡೆಯಿರಿ.


ಬೇವಿನೆಲೆಯ ಹಸಿ ಚಟ್ನಿ:

ಒಂದು ಕಡಿ ತೆಂಗಿನ ತುರಿ
2 ಹಸಿ ಮೆಣಸು
4 ಎಳೆಯ ಬೇವಿನೆಸಳು
ಉಪ್ಪು
ಎಲ್ಲವನ್ನೂ ರುಬ್ಬಿಕೊಂಡು ಒಗ್ಗರಣೆ ಕೊಟ್ಟರಾಯಿತು.
ಈ ಚಟ್ನಿಗೆ ಎರಡು ಸೌಟು ಮೊಸರು ಅಥವಾ ದಪ್ಪ ಮಜ್ಜಿಗೆ ಎರೆದು ಗೊಜ್ಜು ಅನ್ನಿ.


ಬೇವಿನ ಹೂ ಗೊಜ್ಜು:

ಬೇವಿನ ಹೂಗಳನ್ನು ತುಪ್ಪದಲ್ಲಿ ಹುರಿದು ಕೊಳ್ಳಿ.
ಉಪ್ಪು, ಹುಳಿ, ಬೆಲ್ಲ ಹಾಗೂ ನೀರು ಕುದಿಸಿ.
ಬೇವಿನ ಹೂ ಹಾಕಿಕೊಳ್ಳಿ, ಬೇಕಿದ್ದರೆ ಈರುಳ್ಳಿ ಚಿಕ್ಕದಾಗಿ ಹಚ್ಚಿ ಹಾಕಿ.
ಬೆಳ್ಳುಳ್ಳಿ ಒಗ್ಗರಣೆ ಕೊಡಿ.

ಮಹಾನಗರಗಳಲ್ಲಿ ವಾಸಿಸುವ ಮಂದಿಗೆ ತಲೆಕೂದಲನ್ನು ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆ ಆಗ್ಬಿಟ್ಟಿದೆ. ಅದಕ್ಕೆ ಕಾರಣಗಳೇನೇ ಇರಲಿ, ನಿಯಮಿತವಾಗಿ ಕರಿಬೇವಿನೆಲೆಯ ಖಾದ್ಯಗಳನ್ನು ತಿನ್ನಿ, ಕೂದಲನ್ನು ಉಳಿಸಿಕೊಳ್ಳಿ. ಒಗ್ಗರಣೆಯ ಕರಿಬೇವನ್ನೂ ಪಕ್ಕಕ್ಕೆ ತಳ್ಳಬೇಡಿ.

ಕರಿಬೇವಿನ ಚಟ್ನಿಹುಡಿ ಮಾಡಿಕೊಳ್ಳಲು ಔದಾಸೀನ್ಯವೇ, ಹೀಗೆ ಮಾಡಿ. ಮೈಕ್ರೋವೇವ್ ಒವನ್ ನಲ್ಲಿ ಬೇವಿನೆಲೆಗಳನ್ನು ಪರಪರ ಆಗುವಷ್ಟು ಬಾಡಿಸಿ. ಉಪ್ಪು ಹಾಕಿಕೊಂಡು ಕೈಯಲ್ಲೇ ಪುಡಿಪುಡಿ ಮಾಡಿಟ್ಟು ಜಾಡಿಯಲ್ಲಿ ತುಂಬಿಸಿ. ಅನ್ನದೊಂದಿಗೆ ಕಲಸಿ ತಿನ್ನಿ. ಮೊಸರಿನೊಂದಿಗೂ ಆದೀತು.

ವಸಂತಕಾಲದಲ್ಲಿ ಕರಿಬೇವಿನ ಮರವೂ ಬಿಳಿ ಹೂಗೊಂಚಲುಗಳಿಂದ ಶೋಭಿಸುವುದು. ಈ ಹೂಗಳನ್ನು ಸಲಾಡ್, ಕೋಸಂಬರಿಗಳಿಗೆ ಅಲಂಕಾರಿಕವಾಗಿ ಬಳಸಬಹುದು. ಹೂಗಳನ್ನು ತಂಬುಳಿ ಕೂಡಾ ಮಾಡಬಹುದು. ಹೂಗಳು ಕೊನೆಗೆ ಕಪ್ಪನೆಯ ಹಣ್ಣಾಗಿ ಪರಿವರ್ತಿತವಾಗುತ್ತವೆ. ಈ ಹಣ್ಣುಗಳಿಂದ ಹೊಸ ಗಿಡಗಳನ್ನು ಪಡೆಯಬಹುದಾಗಿದೆ.

ಬೇವು ಎಂದು ಖ್ಯಾತಿ ಪಡೆದಿರುವುದು ಔಷಧೀಯ ವೃಕ್ಷವಾಗಿರುವ ಕಹಿಬೇವು. ಕರಿ ಎಂಬ ಶಬ್ದವು ಸಾಮಾನ್ಯವಾಗಿ ಅಡುಗೆಯ ಯಾವುದೇ ರಸಭರಿತ ವ್ಯಂಜನಕ್ಕೆ ಅನ್ವಯವಾಗುವಂತಹುದು. ಅಡುಗೆಯಲ್ಲಿ ಒಗ್ಗರಣೆಗೆ ಬಳಕೆಯಾಗುವ ಇದರ ಎಲೆಗಳಿಂದಾಗಿ ಇದು ಕರಿಬೇವು. ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಇದು ಕರಿವೆಪ್ಪಿಲೈ ಆಗಿದೆ, ಇಲೈ ಎಂದರೆ ಎಲೆ. ಅಡುಗೆಯಲ್ಲಿ ಉಪಯೋಗಿಸಲ್ಪಡುವ ಸಿಹಿಬೇವು ಎಂದೇ ಹೇಳಬೇಕಾಗುತ್ತದೆ.

ಕರಿಬೇವಿನೆಲೆ ಒಗ್ಗರಣೆಯೊಂದಿಗೆ " ಅಡುಗೆ ಆಯ್ತು " ಎಂಬ ಸಂದೇಶ. ಆಹ್ಲಾದಕರ ಸುವಾಸನೆಯೊಂದಿಗೆ ಊಟದ ಮನೆಗೆ ಸ್ವಾಗತ ನೀಡುವ ಈ ಎಲೆಯ ಜೀವದ್ರವ್ಯಗಳೇನೇನಿವೆ ಎಂಬುದನ್ನೂ ತಿಳಿಯೋಣ. ವಿಟಮಿನ್ ಎ ಹಾಗೂ ಖನಿಜಾಂಶಗಳು ಹೇರಳವಾಗಿವೆ, ಕ್ಯಾಲ್ಸಿಯಂ ಹಾಗೂ ವಿಟಮಿನ್ ಸಿ ಕೂಡಾ ಎಲೆಗಳಲ್ಲಿವೆ. ನೈಸರ್ಗಿಕವಾಗಿ ಲಭಿಸುವ ಈ ಸಂಪತ್ತನ್ನು ತುತ್ತು ಅನ್ನದೊಂದಿಗೆ ಕಲಸಿ ತಿನ್ನುವ ಭಾಗ್ಯ ನಮ್ಮದಾಗಿದೆ.

Posted via DraftCraft app

Saturday, 14 September 2013

ಪುಳಿಂಜಿಯ ರಸಪಾಕ!
ಪ್ರತಿವರ್ಷವೂ ಓಣಂ ಬರುತ್ತದೆ.  ಹಾಗೇ ಆ ವರ್ಷವೂ ಬಂದಿತು.   ಶಾಲೆ ಹಾಗೂ ಸರಕಾರೀ ಸಂಸ್ಥೆಗಳಿಗೆ ಫುಲ್ ರಜೆ,   ಕರ್ನಾಟಕದ ದಸರಾ ಇದ್ದ ಹಾಗೆ.   ನನ್ನಮ್ಮ ಚಿಕ್ಕಮಕ್ಕಳೊಂದಿಗೆ ಕಾಸರಗೋಡಿನಿಂದ ವಿಟ್ಲದ ಸಮೀಪವಿರುವ ಕುಕ್ಕಿಲದ ತಾಯಿಮನೆಗೆ ಹೋದರು.   ಮನೆಯಲ್ಲಿದ್ದ ಬಾಣಸಿಗನೂ ರಜಾ ತೆಗೆದುಕೊಂಡು ಅವನೂರಿಗೆ ಹೋದ.  ಅಪ್ಪನ ಕೋರ್ಟುಕಛೇರಿಗಳಿಗೆ ರಜಾ ಇರಲಿಲ್ಲ,  ತಿರುವೋಣಂ ದಿನ ಮಾತ್ರ ಒಂದು ದಿನದ ರಜೆ.  ನಾನು ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದುದರಿಂದ,  ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬೇಕಾಗಿದ್ದುದರಿಂದ,  ಅಪ್ಪನ ಊಟತಿಂಡಿಗಳ ಮೇಲ್ವಿಚಾರಕಿಯಾಗಿ ಮನೆಯಲ್ಲಿ ಇರಬೇಕಾಗಿತ್ತು.   ಆಗ ಇಂದಿನಂತೆ ಗ್ಯಾಸ್,  ಓವನ್,  ಹೀಟರ್,  ಗ್ರೈಂಡರ್ ಯಾವುದೂ ಇರಲಿಲ್ಲ ಕಣ್ರೀ,  ಒಂದು ಚಿಮಿಣೀ ಸ್ಟವ್ ಇತ್ತು.

ನೀರು ಸೇದಲು ಬಾವಿಕಟ್ಟೆಗೆ ಬಂದಾಗ ಅಕ್ಕಪಕ್ಕದ ಹೆಂಗಳೆಯರಿಗೆ ನನ್ನಮ್ಮ ಊರಿಗೆ ಹೋಗಿದ್ದಾರೆಂಬ ವಾಸ್ತವ ಅರಿವಿಗೆ ಬಂದು,  ನನಗೆ ತಮ್ಮ ಕೈಲಾದ ಅಡುಗೆಕೋಣೆ ವ್ಯವಹಾರಗಳನ್ನು ಹೇಳಿ ಕೊಡಲು ಮುಂದಾದರು.   ಆದರೆ ನನಗೆ ಆಸಕ್ತಿ ಇದ್ದರಲ್ಲವೇ?  ತಕ್ಕಮಟ್ಟಿಗೆ ಅಡುಗೆಯ ಒಳಗುಟ್ಟುಗಳನ್ನು ನನ್ನಪ್ಪ ತಿಳಿದಿದ್ದರು.   ಕಟ್ಟಿಗೆಯ ಒಲೆ ಹೊತ್ತಿಸುವ ವಿಧಾನ ಅಪ್ಪನೇ ಹೇಳಿಕೊಟ್ಟರು.   ತೆಂಗಿನ ಗೆರಟೆಗೆ ಹಿಡಿಬೂದಿ ತುಂಬಿಸಿ,  ಅದಕ್ಕೆ ಚಿಮಿಣಿ ಎಣ್ಣೆ ಎರೆದು ಒಲೆಯೊಳಗಿಟ್ಟು,  ಬೆಂಕಿಕಡ್ಡಿ ಗೀರಿ ಹೊತ್ತಿಸಿ,  ಮೇಲಿನಿಂದ ಸೌದೆ ತುಂಡುಗಳನ್ನು ಒಂದರಮೇಲೊಂದರಂತೆ ಇಟ್ಟುಬಿಟ್ಟರೆ ಮುಗೀತು.   ಅನ್ನದ ತಪಲೆಗೆ ನೀರು ತುಂಬಿಸಿ ಒಲೆ ಮೇಲೆ ಇಟ್ಟರಾಯಿತು.   

ನೀರು ಕುದಿಯಬೇಕಾದರೆ ಕುಚ್ಚುಲಕ್ಕಿ ತೊಳೆದು ಹಾಕಿ,  ನಿಧಾನಗತಿಯಲ್ಲಿ ಬೇಯುವ ಈ ಅಕ್ಕಿ ಕುದಿಯುತ್ತಾ ಇರಬೇಕು,  ಊಟದ ಹೊತ್ತಿಗೆ ಬೆಂದಿರುತ್ತದೆ.   ನಂತರ ಗಂಜಿನೀರು ಬಸಿಯಲು ಅದಕ್ಕಾಗಿಯೇ ಮೀಸಲಾದ ಮರದ ತಟ್ಟೆ ಮುಚ್ಚಿ ಬಗ್ಗಿಸುವುದು,  ಗಂಜಿನೀರು ಶೇಖರಿಸಲು ಇನ್ನೊಂದು ಅಗಲ ಬಾಯಿಯ ಪಾತ್ರೆ.  ಈ ಪಾತ್ರೆ ಕೇವಲ ಗಂಜಿನೀರು ಶೇಖರಣೆಗೆ ಮೀಸಲು,  ಅಡಿಮಂಡಗೆ ಅಥವಾ ಓಡಮರಿಗೆ ಎಂದು ಆಡುನುಡಿಯಲ್ಲಿ ಹೇಳುವ ವಾಡಿಕೆ.  ಹಾಗೇನೇ ಮರದ ತಟ್ಟೆಗೆ ಚರ್ಂಬುತ್ತಿ ಅಥವಾ ಎಸಿಮುಚ್ಚಲು ಅಂತಾನೂ ಹೆಸರಿದೆ,  ಇರಲಿ.   ಅನ್ನ ಆಯಿತು,  ಅನ್ನದೊಂದಿಗೆ ಯಾವ ವ್ಯಂಜನ?   ತೆಂಗಿನಕಾಯಿ ತುರಿದು,  ಅರೆದು,  ಮಸಾಲೆ ಹುರಿದು ಕೊಡಲು ನನಗೆಲ್ಲಿ ತಿಳಿದಿತ್ತು?   " ಪುಳಿಂಜಿ ಮಾಡುವಾ "  ಅಂದರು ಅಪ್ಪ.   ಉಪ್ಪು,  ಹುಳಿ,  ಬೆಲ್ಲಗಳನ್ನು ಒಂದು ತಪಲೆಯಲ್ಲಿ ಹಾಕಿಟ್ಟು,  ನೀರು ಎರೆದು ಗಿವುಚಿ,  ಎರಡು ನೀರುಳ್ಳಿ ಚಿಕ್ಕದಾಗಿ ಕತ್ತರಿಸಿ ಹಾಕಿದ್ರೆ ನಮ್ಮ ಪುಳಿಂಜಿ ಆಯ್ತು,  ಹಸಿಮೆಣಸೂ ಹಾಕ್ತಿದ್ದರು ನಮ್ಮಪ್ಪ.

                                               <><><>    <><><>

ಮದುವೆಯಾದ ಮೇಲೆ,  ಎರಡು ಮಕ್ಕಳೂ ಆದ ಮೇಲೆ ನನ್ನಮ್ಮ ಹಿರಣ್ಯಕ್ಕೆ ಬಿಡುವು ಮಾಡಿಕೊಂಡು ಆಗಾಗ್ಗೆ ಬರುವ ರೂಢಿ,  ಅಪ್ಪನೇ ಕಳಿಸ್ತಾ ಇದ್ದರು.   ದೂರವೇನಿಲ್ಲ,  ಜೀಪಿನಲ್ಲಿ ಬರಬೇಕಾದರೆ ಇಪ್ಪತ್ತು ನಿಮಿಷದ ಹಾದಿ.   " ಪೊಸಡಿಗುಂಪೆ ಗುಡ್ಡದಿಂದಾಗಿ ತುಸು ದೂರ ಹೆಚ್ಚು ನೋಡು...ನೇರ ಹಾದಿ ಇರುತ್ತಿದ್ದರೆ ಕೇವಲ ಏಳು ಮೈಲು ದೂರದೊಳಗೆ ಹೋಗಿ ಬಂದು ಮಾಡ ಬಹುದಾಗಿತ್ತು "  ಇದು ಅಪ್ಪನ ಲೆಕ್ಕಾಚಾರ.

ಅಮ್ಮ ಬಂದಿದ್ದಾಗ  " ನೀನು ಏನೇ ಹೇಳು ಅಮ್ಮಾ,  ನಂಗೆ ಅಡುಗೆ ಕಲಿಸಿದ್ದು ಅಪ್ಪನೇ .."

" ಹೌದು,  ಹೇಳಿ ಕೊಟ್ಟಿರ್ತಾರೆ ಪುಳಿಂಜಿ....ನಾನು ಟೀವಿ ನೋಡಿ ಬರೆದಿಟ್ಟಿರೂದು ಈ ಡೈರಿಯಲ್ಲಿದೆ,  ಒಂದು ಹೊಸಾ ಐಟಂ ಮಾಡೋಣ " ಅಂದರು ಹೊಸರುಚಿಗೆ ಸಿದ್ಧತೆ ನಡೆಸುತ್ತಾ.

ಟೀವಿ ನೋಡಿ ಹೊಸರುಚಿಗಳನ್ನು ಬರೆದಿಟ್ಟುಕೊಳ್ಳುವ ಅಮ್ಮನ ಚಾಳಿ ನನಗೂ ಅಂಟಿತು.  ಸಿಕ್ಕಾಪಟ್ಟೆ ಚಾನಲ್ಲುಗಳು ಲಭ್ಯವಿದ್ದುದರಿಂದ ಎಲ್ಲಾ ಭಾಷೆಯ ಅಡುಗೆ ನೋಡುವ ಗೀಳು ಹಿಡಿಯಿತು.   ಆಗ ಕನ್ನಡದಲ್ಲಿ ಟೀವಿ ಮಾಧ್ಯಮ ಪ್ರಾರಂಭಿಕ ಹಂತದಲ್ಲಿತ್ತು.  ಮಲಯಾಳಂನಲ್ಲಿ ಏಷಿಯಾನಟ್ ಪ್ರಭಾವಶಾಲೀ ಮಾಧ್ಯಮವಾಗಿ ಗುರುತಿಸಿಕೊಂಡಿತ್ತು.   ವೈವಿಧ್ಯಮಯ ಕಾರ್ಯಕ್ರಮಗಳೂ,   ಓಣಂ ಸಂದರ್ಭದಲ್ಲಿ ಬರುತ್ತಿದ್ದ ವಿಶೇಷ ಅಡುಗೆಗಳೂ.....ನೋಡುತ್ತಿದ್ದ ಹಾಗೆ ಒಬ್ಬ ಬಾಣಸಿಗ,  ಗೆರೆಗೆರೆಯ ಲುಂಗಿ ಉಟ್ಟಿದ್ದ,  ತಲೆಗೊಂದು ಅಂತಹುದೇ ಬೈರಾಸು ಸುತ್ತಿಕೊಂಡು ಸಾಮಾನ್ಯ ಮಲಯಾಳೀ ಉಡುಪಿನಲ್ಲಿ ಬಂದ,  ದೊಡ್ಡ ಕಟ್ಟಿಗೆಯ ಒಲೆ ಮೇಲೆ ಮತ್ತೂ ದೊಡ್ಡದಾದ ಕಂಚಿನ ಕಡಾಯಿ (ಉರುಳಿ) ಇಟ್ಟು ಮೇಲಿಂದ ಕೇಜಿಗಟ್ಲೆ ಉಪ್ಪು,  ಹುಳಿ,  ಬೆಲ್ಲಗಳನ್ನು ಸುರುವಿ,  ಧಾರಾಳವಾಗಿ ನೀರು ಎರೆದು ಕುದಿಸಿ,  ಪಾಕ ಬಂದ ದ್ರಾವಣಕ್ಕೆ ಡಬರಿಯಲ್ಲಿ ಕತ್ತರಿಸಿಟ್ಟುಕೊಂಡಿದ್ದ ಶುಂಠಿಯನ್ನೂ ಹಾಕಿದ.    ಪುನಃ ಗಳಗಳನೆ ಕುದಿಯಲಾರಂಭಿಸಿದ ಈ ರಸಪಾಕಕ್ಕೆ ಒಂದು ಒಗ್ಗರಣೆಯೂ ಬಿದ್ದಿತು,  ಅದೂ ಎಳ್ಳೆಣ್ಣೆಯೇ ಆಗಬೇಕು.   ಮರದ ಸೌಟಿನಲ್ಲಿ ಗೊಟಾಯಿಸುತ್ತಾ,  ಪಾಕವನ್ನು ಪರಿಶೀಲಿಸುತ್ತಾ  " ಇದಾಣ್ ಪುಳಿಂಜಿ..." ಅನ್ನುತ್ತಾ ಸೌಟಿನಿಂದ ತನ್ನ ಅಂಗೈಗೆ ಸುರಿದು ನೆಕ್ಕಿ ಬಾಯಿ ಚಪ್ಪರಿಸಿಯೇ ಬಿಟ್ಟ ಭೂಪ!   

" ಓ,  ನನ್ನಪ್ಪನ ಪುಳಿಂಜಿ ಇದು...."  ಟ್ಯೂಬ್ ಲೈಟ್ ಹೊತ್ತಿತು.

ಭರಣಿಯಲ್ಲಿ ಶೇಖರಿಸಿಟ್ಟು ಬೇಕಾದ ಹಾಗೆ ಉಪಯೋಗಿಸಿಕೊಳ್ಳಿ.   
ತಿಂಗಳುಗಟ್ಳೆ ಇಟ್ಟುಕೊಳ್ಳಿ,   ಏನೂ ಕೆಡುವುದಿಲ್ಲ.
ಒಗ್ಗರಣೆಗೆ ನಿಮಗಿಷ್ಟವಾದ ಉಪ್ಪಿನಕಾಯಿ ಮಸಾಲೆ ಹಾಕಿದ್ರೆ ಇನ್ನೂ ಚೆನ್ನಾಗಿರುತ್ತದೆ. 
ಪುಳಿಯೊಗರೆ ಥರ ದಿಢೀರ್ ರೈಸ್ ಬಾತ್ ಮಾಡಿಕೊಳ್ಳಬಹುದು.  
ಇನ್ನೂ ಏನೇನೋ ಮಾಡಬಹುದು,  ಎಲ್ಲವೂ ನಿಮ್ಮ ಕಲ್ಪನೆಯ ವ್ಯಾಪ್ತಿಗೆ ಬಿಟ್ಟಿದ್ದು.
Posted via DraftCraft app

Tuesday, 10 September 2013

ವೃಕ್ಷ ಸಲ್ಲಾಪ

ನೆನಪಿನ ಭಿತ್ತಿಯಳಗೆ
ಮಲಗಿದ್ದ, ಮೆಲ್ಲಗೆದ್ದ ವೃಕ್ಷ
ವಟವೃಕ್ಷವಲ್ಲ
ಬೋಧಿವೃಕ್ಷವೂ ಅಲ್ಲ
ಕಾಸರಗೋಡಿನ ಮಹಾತ್ಮಾ ಗಾಂಧಿ ರಸ್ತೆ ಪಕ್ಕ
ನೆರಳು ನೀಡುತ್ತಿತ್ತೇನು
ವರ್ಷಕ್ಕೊಂದಾವರ್ತಿ ಭಾರೀ ಗಾತ್ರದ ಫಲ
ನೀಡುತ್ತಿತ್ತೇನು ಈ ಹಲಸು
ಆದರೇನು
ರಸ್ತೆಪಕ್ಕದ ಮರ
ವಿದ್ಯುತ್ ವಯರು, ರಸ್ತೆ ಅಗಲೀಕರಣ
ಏನೇನೋ ಕುಂಟು ನೆವನ
ಮಹಾನಗರಪಾಲಿಕೆ
ಕಡಿದು ಕೆಳಗುರುಳಿಸಿತೇನು
ಹೋಗಲಿ ಬಿಡು,
ಇರುವೆಯಲ್ಲ ಮನದಾಳದೊಳಗೆ
ಸದಾ ಹಸಿರು ಹಸಿರಾಗಿ |


ಯಾರಿಗಾಗಿ ಈ ಅರಣ್ಯರೋದನ
ಸಹಚರ ವಟವೃಕ್ಷ
ಮೊನ್ನೆ ಮೊನ್ನೆಯವರೆಗೆ
ಇದ್ದನಲ್ಲ
ಏನೇನೋ ವ್ಯಾಪಾರ ವಹಿವಾಟು
ಆಸರೆಯಾಗಿದ್ದನಲ್ಲ |

ಪತ್ರಿಕೆಗಳಲ್ಲಿ ದೀರ್ಘಲೇಖನ
ಬಂದಿತ್ತೇನು ಏನು ಕತೆ
ತಲೆಯೆತ್ತಿವೆಯಲ್ಲ ಗಗನಚುಂಬಿಗಳು
ನಾಗರೀಕ ಜಗತ್ತಿನ ಸೋಪಾನಗಳು
ಪರಿಸರ ರಕ್ಷಣೆಯ ಪ್ರಲಾಪ
ನಗರ ಸೌಂದರ್ಯದ ಆಲಾಪ
ಓ ಹಲಸೇ
ವಟವೃಕ್ಷವೇ ಬೇಡವಾಗಿರುವಲ್ಲಿ
ನೀನ್ಯಾವ ಲೆಕ್ಕ ಹೇಳು
ಮಾರ್ಜಾಲ ಹಿಡಿತದಲ್ಲಿ ನರಳಿದ
ಇಲಿಯಂತೆ
ಇರಬೇಕು ಇಲ್ಲದಿರಬೇಕು
ಆಟವಾಡಿಸಿದವರಾರ್
ನೆಲೆ - ಬೆಲೆಯಿಲ್ಲದಾಯಿತೇ ಪಶುಪಕ್ಷಿಗಳಿಗೆ
ಹೋಗಲಿ ಬಿಡು
ಇಂದು ಇದ್ದದ್ದು ನಾಳೆ ಇಲ್ಲಿಲ್ಲ
ಅದೋ ಅಲ್ಲಿ ನಮ್ಮನೆ
ಇತ್ತ ಹಾಗಿತ್ತಲ್ಲ
ಎಲ್ಲವೂ ಸುಮ್ಮನೆ |

ಟಿಪ್ಪಣಿ: ಇದು ಹೈಸ್ಕೂಲ್ ವಿದ್ಯಾಭ್ಯಾಸದ ದಿನಗಳಲ್ಲಿ ಕಾಸರಗೋಡಿನ ಮನೆಯ ಹಿತ್ತಿಲಲ್ಲಿ ಕುಳಿತು ರಸ್ತೆಪಕ್ಕದ ಮರವನ್ನು ಜಲವರ್ಣದಲ್ಲಿ ಬಿಡಿಸಿದ್ದಾಗಿದೆ. ಇಸವಿ 1972 - 73.

Posted via DraftCraft app

Saturday, 31 August 2013

ಬಿಸಿನೀರು ಕಡುಬು
ರಾತ್ರಿಯ ಅಡುಗೆಯ ಸಿದ್ಧತೆ ಆಗಬೇಕಾಗಿತ್ತು.   ಎಂದಿನಂತೆ ಕುಕ್ಕರಿನಲ್ಲಿ ನೀರು ತುಂಬಿ ಇಂಡಕ್ಷನ್ ಸ್ಟವ್ ಮೇಲೆ ಇಟ್ಟು,   ರಾತ್ರಿಯ ಸ್ನಾನ ಮಾಡುವ ಮನೆಮಂದಿಗೆ ನೀರು ಕಾಯಿಸಲು ಬಚ್ಚಲೊಲೆಯ ಬಳಿ ಸ್ವಲ್ಪ ಹೊತ್ತು ಗುದ್ದಾಡಿ ಒಳ ಬಂದು,  ಒಂದೂವರೆ ಪಾವು ಅಕ್ಕಿ ಅಳೆದು,  ತೊಳೆದು ಕುಕ್ಕರಿನಲ್ಲಿ ಕುದಿಯುತ್ತಿದ್ದ ನೀರಿಗೆ ಹಾಕಿದೆ.   ಕುಕ್ಕರ್ ಮುಚ್ಚಲು ಅಣಿಯಾಗುತ್ತಿದ್ದಂತೆ ವಿದ್ಯುತ್ ಹೋಯಿತು.

" ಗ್ಯಾಸ್ ಒಲೆಯೇ ಗತಿ "  ಕುದಿನೀರಿನೊಳಗಿದ್ದ ಅಕ್ಕಿ ಅಣಕಿಸಿತು.

" ಕರೆಂಟ್ ಹೋಯ್ತಲ್ಲಾ..... ಈ ಕುಚ್ಚುಲಕ್ಕಿ ಹಾಕಿ ದಂಡ ಆಯ್ತು "

" ಬೆಳ್ತಿಗೆ ಅನ್ನ ಮಾಡಮ್ಮಾ "  

" ಸರಿ ಹೋಯ್ತು,  ನಿಂಗೆ ಅಂತಾನೇ ಕುಚ್ಚುಲಕ್ಕಿ ಹಾಕಿದ್ದು "

" ಕರೆಂಟ್ ಬಂದೀತು ಈಗ "

ಅದೇ ಸರಿ ಅನ್ನಿಸಿ ಕುಕ್ಕರನ್ನು ಕೆಳಗಿಳಿಸಿ,   ಆರದ ಹಾಗೆ ತಟ್ಟೆ ಮುಚ್ಚಿ,  ಕತ್ತಲಲ್ಲಿ ತಡಕಾಡುತ್ತಾ ಈಚೆ ಬಂದು,  ಐ ಪ್ಯಾಡ್ ಕೈಗೆತ್ತಿಕೊಂಡು ನನ್ನ ಬರವಣಿಗೆಯನ್ನು ಮುಂದುವರಿಸಿದೆ.   ಕಾಲು ಘಂಟೆ ಕಳೆದ್ರೂ ವಿದ್ಯುತ್ ಸುಳಿವಿಲ್ಲ.  ಈಗಲೇ ಘಂಟೆ ಎಂಟೂವರೆ ಆಗಿದೆ,   ಇನ್ನು ಬೆಳ್ತಿಗೆ ಅನ್ನ ಮಾಡುವುದೇ ಸರಿ ಅಂದ್ಕೊಂಡು ಪುನಃ ಹೊಸ ಅಡುಗೆ ಸಿದ್ದತೆಗೆ ತೊಡಗಿದೆ.

ಅಯ್ಯೋ ರಾಮಾ,   ಈಗಾಗಲೇ ಅಕ್ಕಿ ಹಾಕಿರೋದನ್ನು ಬಿಟ್ಟು ಹೊಸ ಅಡುಗೆಗೆ ಯಾಕೆ ಹೊರಟಿದ್ದು ಅಂತ ಕೇಳಿಯೇ ಕೇಳ್ತೀರಾ,   ಅದೇ ವಿಷ್ಯ ಈಗ ಇರೂದು.   ಕುಚ್ಚುಲಕ್ಕಿ ಅನ್ನ ಆಗ್ಬೇಕಿದ್ರೆ ಅಕ್ಕಿ ಕುದಿದು ಸಣ್ಣ ಉರಿಯಲ್ಲಿ ಅರ್ಧ ಘಂಟೆ ಇಟ್ರೇನೇ ಅನ್ನ ಬೆಂದಿದೆ ಅನ್ನಬಹುದು.   ಪಾತ್ರೆಯಿಂದ ಹೊರ ಚೆಲ್ಲುವಂತೆ ಗಳಗಳ ಕುದಿಯಲೂಬಾರದು.   ಅದಕ್ಕಾಗಿ ಇಂಡಕ್ಷನ್ ಸ್ಟವ್ ಮೇಲೆ ಇಟ್ಟರೆ ಆರಾಮವಾಗಿ ಕುದಿಯುವಿಕೆಯನ್ನು ನಿಯಂತ್ರಣದಲ್ಲಿ ಇರಿಸಬಹುದು.   ಅದೂ ಅಲ್ಲದೆ ಗ್ಯಾಸ್ ಮುಗಿಯುತ್ತಾ ಬಂದಿತ್ತು.   ಗ್ಯಾಸ್ ಏಜೆನ್ಸಿಯವರು ಈ ಕಡೆ ತಲೆ ಹಾಕ್ದೇ ಒಂದೂವರೆ ತಿಂಗಳಾಯ್ತು,   ಬರೋ ತನಕ ಸುಧರಿಸ ಬೇಡ್ವೇ,  ಹೀಗೆಲ್ಲಾ ದೂರಾಲೋಚನೆ ನನ್ನದು.....

ಹೊಸತಾಗಿ ಬೆಳ್ತಿಗೆ ಅಕ್ಕಿ ಅಳೆದು,  ತೊಳೆದು,  ನೀರನ್ನೂ ಅಳೆದು,   ಕುಕ್ಕರಿನಲ್ಲಿದ್ದ ಕುಚ್ಚುಲಕ್ಕಿಯನ್ನು ಬೇರೆ ಪಾತ್ರೆಗೆ ವರ್ಗಾಯಿಸಿ,  ಅನ್ನ ಬೇಯಲು ಗ್ಯಾಸ್ ಒಲೆ ಹೊತ್ತಿಸಿದೆನಾ,  ಕರೆಂಟ್ ಬಂದೇ ಬಿಟ್ಟಿತು!   
ಮಳೆಗಾಲ ಬೇರೆ, ಕರೆಂಟ್ ಕೈ ಕೊಡುವುದು ಯಾವಾಗಲೂ ಇದ್ದಿದ್ದೇ,  ಈಗ ಬಂದ ವಿದ್ಯುತ್ ಹೋಗುವ ಮೊದಲು ಬೆಳ್ತಿಗೆ ಅನ್ನವೇ ಶೀಘ್ರದಲ್ಲಿ ಆಗುವಂತಾದ್ದಾದುರಿಂದ ಬೆಳ್ತಿಗೆ ಅಕ್ಕಿ ಇಂಡಕ್ಷನ್ ಸ್ಟವ್ ಮೇಲೇರಿತು.

" ಕರೆಂಟ್ ಬಂತಲ್ಲಾ,  ಏನ್ಮಾಡ್ತಾ ಇದ್ದೀ ಅಮ್ಮಾ ? "

" ನೋಡು ಇಷ್ಟಾಯ್ತು,   ಈ ಕುಚ್ಚುಲಕ್ಕಿ ಏನು ಮಾಡೂದು ಅಂತ.....ಹ್ಞಾ...ನಾಳೆ ಕಾಫೀಗೆ ಉಂಡೆ ಮಾಡಿದ್ರಾಯ್ತು "

ಢೆಲ್ಲಿ ಬೆಂಗಳೂರುಗಳಲ್ಲಿ ಪರೋಠಾ,  ರೈಸ್ ಬಾತ್ ತಿಂದು ಸಾಕಾಗಿದ್ದ ಮಗನಿಗೂ ಖುಷಿ,   " ಉಂಡೆ ತಿನ್ನೋ ಭಾಗ್ಯ ಸಿಕ್ತು "  ಅಂದ ತಂಗಿಯ ಬಳಿ.

ಎಲ್ಲರದೂ ಊಟವಾದ ನಂತರ ಕುದಿನೀರಿನಲ್ಲಿ ನೆನೆದ ಕುಚ್ಚುಲಕ್ಕಿ ಹೊರ ಬಂದಿತು.   ನೀರು ಬಸಿದು ಮಿಕ್ಸಿಯ ಜಾರೊಳಗೆ ಮಿತವಾಗಿ ಅಕ್ಕಿ ಹಾಕಿ ತಿರುಗಿಸಿ ತೆಗೆದೆ,  ಬೇರೆ ನೀರು ಹಾಕಲೇ ಬಾರದು.  ಹೀಗೆ ಮೂರು ಬಾರಿ ಹಾಕಿ ತೆಗೆದು ಮಾಡಿದ್ದರಲ್ಲಿ ಮುದ್ದೆಯಾದ ಮಿಶ್ರಣ ದೊರೆಯಿತು.  ರುಚಿಗೆ ಬೇಕಾದ ಉಪ್ಪನ್ನೂ ಸೇರಿಸಿದ್ದೆ ಅನ್ನಿ.   ಒಂದೇ ಸೈಜಿನ ಉಂಡೆಗಳನ್ನು ತಯಾರಿಸಿ ಮುಚ್ಚಿಟ್ಟು.....

ಬೆಳಗೆದ್ದು ಹಬೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸುವಷ್ಟರಲ್ಲಿ ಮುದ್ದಾದ ಉಂಡೆಗಳು ತಯಾರಾದುವು.   ಧೋರೆಂದು ಮಳೆ ಬರುತ್ತಿರುವ ಈ ಸಮಯದಲ್ಲಿ ಒಂದು ಕಾಯಿ ಚಟ್ನಿ ಅರೆದು,  ಗಟ್ಟಿ ಮೊಸರಿನೊಂದಿಗೆ ತಿನ್ನುತ್ತಿರಬೇಕಾದರೆ.... ಹಾಯೆನಿಸಿಬಿಟ್ಟಿತು.

ಅಕ್ಕಿ ಹಿಟ್ಟಿಗೆ ಸ್ವಲ್ಪ ಕಾಯಿತುರಿ ಸೇರಿಸಿ,  ಉಂಡೆಯ ಸ್ವಾದ ಇನ್ನೂ ಹೆಚ್ಚು.
ಚಟ್ನಿಯೊಂದಿಗೆ ಸಿಹಿ ಕಾಯಿಹಾಲು ಹಾಕಿಯೂ ತಿನ್ನಿ.
ಕಡಲೆ ಗಸಿಯೊಂದಿಗೂ ಚೆನ್ನಾಗಿರುತ್ತದೆ.
ತಿಂದುಳಿದ ಉಂಡೆಗಳನ್ನು ಸಂಜೆ ವೇಳೆ ಉಸುಳಿ ಮಾಡಿ ತಿನ್ನಿ.

ಕುಚ್ಚುಲಕ್ಕಿ:
ಗದ್ದೆಯಲ್ಲಿ ಬೆಳೆದ ಭತ್ತದ ಪೈರಿನಿಂದ ಭತ್ತವನ್ನು ಬೇರ್ಪಡಿಸಿ,  ಕಾಳುಗಳ ಜಳ್ಳು ತೆಗೆದು,  ಒಣಗಿಸಿ ಶೇಖರಿಸಿದ ಭತ್ತವನ್ನು ಹದವಾಗಿ ಬೇಯಿಸಿ,  ಪುನಃ ಒಣಗಿಸಿದ ಈ ಬೆಂದ ಭತ್ತದಿಂದ ಅಕ್ಕಿಯನ್ನು ಬೇರ್ಪಡಿಸಿ ತೆಗೆದ ಅಕ್ಕಿಯೇ ಕುಚ್ಚುಲಕ್ಕಿ ಅಥವಾ ಕುಸುಬುಲಕ್ಕಿ.   ಇದು ದಕ್ಷಿಣ ಕನ್ನಡಿಗರು ಹಾಗೂ ಕೇರಳೀಯರು ಊಟಕ್ಕೆ ಉಪಯೋಗಿಸುವ ಅಕ್ಕಿ.  ಭತ್ತದ ಪೋಷಕಾಂಶಗಳು ನಷ್ಟವಾಗದೇ ಈ ಅಕ್ಕಿಯಲ್ಲಿ ಉಳಿಯುತ್ತವೆ.  ಆಂಗ್ಲ ಭಾಷೆಯಲ್ಲಿ boiled rice ಅಂದರೆ ಬೇಗ ಅರ್ಥವಾದೀತು.Posted via DraftCraft app

Saturday, 24 August 2013

ಕುರು ಕುರು ತುಕ್ಕುಡಿ3 ಕಪ್ ಮೈದಾ
1 ಕಪ್ ನೀರು
ರುಚಿಗೆ ಉಪ್ಪು, 
3 ಚಮಚಾ ಸಕ್ಕರೆ,
5 ಚಮಚಾ ಮಸಾಲೆ ಹುಡಿ, 
1 ಚಮಚಾ ಎಳ್ಳು
ಕರಿಯಲು ತೆಂಗಿನೆಣ್ಣೆ

ನೀರಿಗೆ ಉಪ್ಪು ಸಕ್ಕರೆ  ಹಾಕಿ ಕರಗಿಸಿ.   ರುಚಿ ನೋಡಿಕೊಳ್ಳಿ,  ಉಪ್ಪು ಹೆಚ್ಚಾಗಬಾರದು.  
ಮಸಾಲಾ ಸಾಮಗ್ರಿ ಹಾಗೂ ಮೈದಾ ಸೇರಿಸಿ ಗಟ್ಟಿಯಾಗಿ ಕಲಸಿ.
ಅರ್ಧ ಗಂಟೆ ಬಿಟ್ಟು ಚಪಾತಿ ಲಟ್ಟಿಸಿ.
ತುಕ್ಕುಡಿ ಚಕ್ರದಲ್ಲಿ ಗೆರೆ ಎಳೆಯಿರಿ.
ಕಾದ ಎಣ್ಣೆಗೆ ಗೆರ ಹಾಕಿದ ಚಪಾತಿಗಳನ್ನು ಒಂದೊಂದಾಗಿ ಇಳಿಸಿ.
ಹೊಂಬಣ್ಣ ಬಂದಾಗ ತೆಗೆದು ಎಣ್ಣೆ ಬಸಿದು ಹೋಗಲು ತೂತಿನ ಪಾತ್ರೆಗೆ ಹಾಕಿಕೊಳ್ಳಿ.
ತಣಿದ ನಂತರ ಕೈಯಲ್ಲಿ ತುಕ್ಕುಡಿಗಳನ್ನು ಬಿಡಿಬಿಡಿಯಾಗಿಸಿ ಡಬ್ಬದಲ್ಲಿ ತುಂಬಿಸಿ.

ಮಕ್ಕಳು ರಜಾದಿನದಂದು ತಿಂಡಿಗಳ ಅಪೇಕ್ಷೆಯನ್ನು ಮುಂದಿಡುತ್ತಾರೆ. " ಅದು ಮಾಡು,  ಇದು ಮಾಡು "  ಎಂದು ಹಟ ಹಿಡಿಯುವ ಹೊತ್ತಿನಲ್ಲಿ ಇಂತಹ ತಿಂಡಿಗಳು ಮಾಡಲೂ ಸುಲಭ,  ಮನೆಯಲ್ಲೇ ತಯಾರಿಸಿದ್ದು ಆರೋಗ್ಯಕ್ಕೂ ಹಿತ.  ನಾನಂತೂ ಮಾಡಿ ಆಯ್ತು,  ಸಂಜೆ ಹೊತ್ತಿಗೆ ಮನೆಯ ನೆನಪಿನೊಂದಿಗೆ ತಿನ್ನಲು ಮಗಳು ಮೂಡಬಿದ್ರಿಗೆ ಕೊಂಡು ಹೋಗಿಯೂ ಆಯ್ತು. 

Posted via DraftCraft app

Monday, 12 August 2013

ತೆಂಗಿನ ಕಾಯಿ ಹಾಲು
ಮನೆಯ ಹಿತ್ತಿಲಲ್ಲಿ ಅಂಗೈ ಅಗಲ ಜಾಗ ಇದ್ದರೂ ಸಾಕು,  ಒಂದು ತೆಂಗಿನಸಸಿ ನೆಟ್ಟುಕೊಳ್ಳದವರಿಲ್ಲ.   ಅಗತ್ಯ ಬಿದ್ದಾಗ ಎಳನೀರು ಕುಡಿಯುವುದಕ್ಕಾದರೂ ಇರಲಿ ಎಂಬ ಭಾವ,  ವಾಸ್ತವವಾಗಿ ತೆಂಗಿನ ಪ್ರತಿಯೊಂದು ಭಾಗವೂ ಮನೆಬಳಕೆಗೆ ಉಪಯುಕ್ತ.   ಗರಿಗಳಿಂದ ಮಡಲ ತಟ್ಟಿ ಮಾಡಿಕೊಂಡು ಬೇಸಿಗೆಗೆ ನೆರಳಿನ ಚಪ್ಪರ ಹಾಕಿಕೊಳ್ಳಲೂ,  ಗರಿಗಳ ಕಡ್ಡಿ ಎಳೆದು ಕಸಪೊರಕೆ ಮಾಡಿಕೊಳ್ಳಲೂ,  ಕಾಯಿಸಿಪ್ಪೆ, ಗೆರಟೆ,  ಕೊತ್ತಳಿಗೆ,  ಮಡಲುಗಳನ್ನು ನೀರು ಕಾಯಿಸಲು ಉರುವಲಾಗಿಯೂ ಬಳಕೆ ಸಾಮಾನ್ಯ.   ಧೀರ್ಘಕಾಲ ಬದುಕುವ ತೆಂಗಿನಮರ,  ಸತ್ತ ನಂತರವೂ ಬೆಲೆಬಾಳುವಂತಹುದು.  ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ತೆಂಗಿನ ಕಾಂಡ ಗೃಹನಿರ್ಮಾಣಕ್ಕೆ ಉಪಯುಕ್ತ ಸಾಧನ.   ತೆಂಗಿನಮರದ ಅಂಗೋಪಾಂಗಗಳಿಗೆ ನಿಶ್ಚಿತವಾದ ಹೆಸರುಗಳಿವೆ.  ಅದೇ ಭಾರತೀಯ ಭಾಷೆಗಳ ಹಿರಿಮೆ.   ಇದನ್ನೇ ಆಂಗ್ಲ ಭಾಷೆಗೆ ಅನುವಾದಿಸಿ ಅಂದಿರಾ,  ಸಮರ್ಪಕ ಶಬ್ದಗಳೇ ಸಿಗದು.   ಎಳೆಯ ಹೀಚುಕಾಯಿಗೆ ಚೆಂಡುಪುಲ್ಲೆ ಅಂತೀವಿ.   ತುಸು ಬಲಿಯಲಾರಂಭಿಸಿದಾಗ  ಎಳನೀರು,  ಬೊಂಡ.   ಅದಕ್ಕಿಂತಲೂ ಬಲಿತದ್ದು ಬನ್ನಂಗಾಯಿ,  ಕೆಲವು ಕಾಯಿಗಳನ್ನು ಸುಲಿದಾಗ ಸಿಪ್ಪೆ ಹಾಗೂ ಖಾಲಿ ಕರಟ ಇರುವುದೂ ಇದೆ,  ಅಂಥಾದ್ದು ಬೋಡುಗಾಯಿ.   ಮುಂದಿನದು ಹಸಿ ತೆಂಗಿನಕಾಯಿ.   ಒಣಗಿತೋ ಗೋಟುಕಾಯಿ.   ಒಳಗಿನ ತಿರುಳು ಈಗ ಕೊಬ್ಬರಿ ಆಗಿ ಬಿಡುತ್ತದೆ.  ಇದೇ ಕೊಬ್ಬರಿಯಿಂದ ತೆಂಗಿನೆಣ್ಣೆ ತೆಗೆಯಿರಿ,  ಉಳಿದದ್ದು ತೆಂಗಿನ ಹಿಂಡಿ,  ಉತ್ತಮ ಪಶು ಆಹಾರ.   ಕರೆಯುವ ಹಸುಗಳಿಗೆ ದಿನವೂ ತೆಂಗಿನ ಹಿಂಡಿ ಹಾಕಿದ್ದೇ ಆದಲ್ಲಿ ಅಧಿಕ ಹಾಲು,  ಹಾಲಿನ ಗುಣಮಟ್ಟವೂ ಶ್ರೇಷ್ಠ,  ಮುದ್ದೆ ಮುದ್ದೆ ಬೆಣ್ಣೆ ದೊರಕೀತು.

ಹಸಿ ತೆಂಗಿನಕಾಯಿ ಒಡೆದು,  ಕಾಯಿ ತುರಿದು,  ಅವಶ್ಯವಿದ್ದಷ್ಟು ನೀರು ಸೇರಿಸಿ ಅರೆದು,  ಶುಭ್ರವಾದ ಜಾಲರಿಯಂತಹ ಬಟ್ಟೆಯಲ್ಲಿ ಶೋಧಿಸಿದಾಗ ಸಿಗುವ ಹಾಲಿನಂತಹ ದ್ರವವೇ ಕಾಯಿಹಾಲು.   ಬಟ್ಟೆಯಲ್ಲಿ ಹಿಂಡಿ ಉಳಿದ ಕಾಯಿ ಚರಟ ಜಾನುವಾರುಗಳಿಗೆ ಉತ್ತಮ ಆಹಾರ.

" ಜಾನುವಾರುಗಳಿಲ್ಲ ಏನು ಮಾಡೋಣ ? "

ಒಣಗಿಸಿಟ್ಟುಕೊಳ್ಳಿ,  ಮೈಕ್ರೋವೇವ್ ಸಹಾಯ ಪಡೆಯಿರಿ.  ಕೆಡುವುದಿಲ್ಲ.   ಪಲ್ಯ,  ಸಲಾಡ್,  ಕೊಸಂಬರಿ ಇತ್ಯಾದಿಗಳಿಗೆ ಬಳಸಿ.

ಕಾಯಿಹಾಲು ಹಿಂಡಿದ ಬಟ್ಟೆಯನ್ನು ಚೆನ್ನಾಗಿ ತೊಳೆದು ಬಿಸಿಲಿಗೆ ಒಣಗಿಸಿ ಇಟ್ಟುಕೊಳ್ಳಬೇಕಾಗುತ್ತದೆ.    ಈಗ ಉಪಯೋಗಿಸಿ ಎಸೆಯುವಂಥ ಬಟ್ಟೆಗಳೂ ಬಂದಿವೆ,  ಚಿಂತೆಯಿಲ್ಲ ಬಿಡಿ.

ತೆಂಗಿನಕಾಯಿ ಹಾಲಿನ ಉಪಯುಕತ್ತೆಯ ಬಗ್ಗೆ ಮೊದಲು ತಿಳಿದುಕೊಳ್ಳೋಣ.   ತೆಂಗಿನಕಾಯಿ ತುರಿ ವಿಶೇಷವಾಗಿ ನಾರು ಪದಾರ್ಥವನ್ನು ಹೊಂದಿರುವಂಥದ್ದು.   ಜೀರ್ಣಾಂಗಗಳಿಂದ ತ್ಯಾಜ್ಯವನ್ನು ಹೊರ ತಳ್ಳಲು ನಾರು ಅತ್ಯಾವಶ್ಯಕ.

ತೆಂಗಿನಕಾಯಿ ಹಾಲು ಖನಿಜಾಂಶಗಳಾದ ಕಾಪರ್, ಪೊಟ್ಯಾಷಿಯಂ,  ಫಾಸ್ಫರಸ್,  ಕ್ಯಾಲ್ಸಿಯಂ,  ಕಬ್ಬಿಣ,  ಸೆಲೆನಿಯಂ,  ಝಿಂಕ್,  ಮ್ಯಾಂಗನೀಸ್ ಮತ್ತು ಮೆಗ್ನೇಷಿಯಂಗಳ ಅತ್ಯುತ್ತಮ ಮೂಲವಾಗಿದೆ.   ಇದಲ್ಲದೆ ವಿಟಮಿನ್ ಸಿ ಹಾಗೂ ನಾರುಪದಾರ್ಥವೂ ಸೇರಿವೆ.

ದೇಹಕ್ಕೆ  ಹಿತವಾದ ಕಲ್ಪವೃಕ್ಷವೆನಿಸಿದ ತೆಂಗಿನಮರ ಸಸ್ಯಶಾಸ್ತ್ರೀಯವಾಗಿ Cocos nucifera ಎನಿಸಿಕೊಂಡಿದೆ.

ರಕ್ತದಲ್ಲಿನ ಸಕ್ಕರೆಯ ನಿಯಂತ್ರಣ  -  ಮ್ಯಾಂಗನೀಸ್
ರಕ್ತನಾಳಗಳಿಗೆ ಸ್ಥಿತಿಸ್ಥಾಪಕತ್ವ ಗುಣ ನೀಡುವುದಲ್ಲದೆ ಚರ್ಮದ ಕಾಂತಿವರ್ಧಕ  -  ಕಾಪರ್
ಎಲುಬುಗಳಿಗೆ ದೃಢತ್ವ  -  ಫಾಸ್ಫರಸ್
ರಕ್ತಹೀನತೆಗೆ ತಡೆ  -  ಕಬ್ಬಿಣ
ಮಾಂಸಖಂಡ ಹಾಗೂ ನರನಾಡಿಗಳಿಗೆ ಸಡಿಲಿಕೆಯ ಸುಖ  -  ಮೆಗ್ನೇಷಿಯಂ
ತೂಕ ನಿಯಂತ್ರಣ  -  ನಾರು
ಗಂಟುಗಳ ಉರಿಯೂತಕ್ಕೆ ನಿಯಂತ್ರಣ  -  ಸೆಲೆನಿಯಂ
ಹೆಚ್ಚಿದ ರಕ್ತದೊತ್ತಡವನ್ನು ಕಡಿಮೆಗೊಳಿಸುವ ಶಕ್ತಿ ಪೊಟ್ಯಾಷಿಯಂನಲ್ಲಿದೆ.
ರೋಗ ನಿರೋಧಕ ಶಕ್ತಿಗೆ ವಿಟಮಿನ್ ಸಿಯ ಬೆಂಬಲ.   ವಿಟಮಿನ್ ಸಿ ರಕ್ತನಾಳಗಳನ್ನು ಒತ್ತಡಮುಕ್ತಗೊಳಿಸುವಲ್ಲಿ ಸಹಕಾರಿ.
ಪುರುಷರಲ್ಲಿ ಜನನೇಂದ್ರಿಯಕ್ಕೆ ಸಂಬಂಧಪಟ್ಟ ಗ್ರಂಥಿಯ ಆರೋಗ್ಯ ರಕ್ಷಕ  -  ಝಿಂಕ್

ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ತೆಂಗಿನಕಾಯಿಹಾಲನ್ನು ಬಳಸಿ ಮಾಡಬಹುದಾದ  ತಿನಿಸುಗಳು ಬೇಕಾದಷ್ಟಿವೆ.   ಹಬ್ಬ ಹರಿದಿನಗಳಂದು ಮಾಡುವಂತಹ ಹೆಸರು ಬೇಳೆ ಪಾಯಸ ಮಾಡಿಕೊಳ್ಳೋಣ.
ಒಂದು ಕಪ್ ಹೆಸರು ಬೇಳೆ
ಅರ್ಧ ಕಪ್ ಸಬ್ಬಕ್ಕಿ
ಮೂರು ಅಚ್ಚು ಬೆಲ್ಲ

ಹೆಸರು ಬೇಳೆ ಕೆಂಪಗೆ ಹುರಿಯಿರಿ.   ಇದನ್ನು ಶುಕ್ರವಾರ ಹಾಗೂ ಮಂಗಳವಾರಗಳಂದು ಹುರಿಯುವಂತಿಲ್ಲ.   ಯಾಕೆಂದು ನಾನೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ.   ತಂದಿಟ್ಟ ಬೇಳೆಯನ್ನು ಹುರಿದು ಡಬ್ಬದಲ್ಲಿ ತುಂಬಿಸಿ ಇಟ್ಟಲ್ಲಿ ಹಾಳಾಗುವುದಿಲ್ಲ,  ಬೇಕಿದ್ದಾಗ ಬೇಕಾದಷ್ಟೇ ತೆಗೆದು ಬಳಸಿದರಾಯಿತು.   ಸಬ್ಬಕ್ಕಿಯನ್ನೂ ಹುರಿಯಿರಿ.

ಕಾಯಿಹಾಲು ಮಾಡಿಟ್ಟಾಯ್ತೇ,  ದಪ್ಪ ಹಾಲು ಪ್ರತ್ಯೇಕ ತೆಗೆದಿರಿಸಿ.   ನೀರು ಕಾಯಿಹಾಲಿನಲ್ಲಿ ಹೆಸರು ಬೇಳೆ ಹಾಗೂ ಸಬ್ಬಕ್ಕಿಗಳನ್ನು ಮೆತ್ತಗೆ ಬೇಯಿಸಿ.
ಬೆಂದ ನಂತರ ಬೆಲ್ಲ ಹುಡಿ ಮಾಡಿ ಹಾಕಿ,  ಕರಗಲು ಬಿಡಿ.  ತಳ ಹಿಡಿಯದಂತೆ ಜಾಗ್ರತೆ ವಹಿಸುವ ಅವಶ್ಯಕತೆ ಇದೆ.    ಬೆಲ್ಲ ಕರಗಿ ಕುದಿಯಲಾರಂಭಿಸಿದಾಗ ದಪ್ಪ ಕಾಯಿಹಾಲು ಎರೆದು ಇನ್ನೊಂದು ಕುದಿ ಬರುವ ತನಕ ಒಲೆಯ ಮೇಲಿಟ್ಟು ಇಳಿಸಿ.
 ಹುರಿದ ಹೆಸರುಬೇಳೆ ಸುವಾಸನಾಯುಕ್ತವಾಗಿರುವುದರಿಂದ ಏಲಕ್ಕಿ ಹಾಕಬೇಕೆಂದೇನೂ ಇಲ್ಲ. 


ಗಸಗಸೆ ಪಾಯಸ

ಅರ್ಧ ಕಪ್ ಚಿರೋಟಿ ರವೆ
ಮೂರು ಟೀ ಸ್ಪೂನ್ ಗಸಗಸೆ
ಮೂರು ಚಮಚ ಕಾಯಿತುರಿ
ಮೂರು ಕಪ್ ಸಕ್ಕರೆ

ಚಿರೋಟಿ ರವೆಯನ್ನು ಹುರಿಯಿರಿ.
ಗಸಗಸೆಯನ್ನೂ ಪ್ರತ್ಯೇಕವಾಗಿ ಹುರಿಯಿರಿ.

ಹುರಿದ ಗಸಗಸೆಯನ್ನು ಮೂರು ಚಮಚ ಕಾಯಿತುರಿಯೊಂದಿಗೆ ಅರೆಯಿರಿ.
ನೀರು ಕಾಯಿಹಾಲು ಎರೆದು ಚಿರೋಟಿ ರವೆ ಹಾಗೂ ಅರೆದ ಗಸಗಸೆಯನ್ನು ಬೇಯಿಸಿ.
ಬೆಂದು ಮೆತ್ತಗಾಯಿತೇ,  ಸಕ್ಕರೆ ಹಾಕಿ.
ಸಕ್ಕರೆ ಕರಗಿ ಕುದಿಯಿತೇ,  ದಪ್ಪ ಕಾಯಿಹಾಲು ಎರೆದು ಇನ್ನೊಂದು ಕುದಿ ಬರುವ ತನಕ ಒಲೆಯ ಮೇಲಿಟ್ಟು ಇಳಿಸಿ.
ಇದಕ್ಕೂ ಏಲಕ್ಕಿ ಬೇಡ.   ಗಸಗಸೆಗೆ ತನ್ನದೇ ವಿಶಿಷ್ಟ ಸುವಾಸನೆ ಇದೆ.

ಸಿಹಿ ಮಾಡುವುದನ್ನು ನೋಡಿಕೊಂಡಾಯ್ತು,  ಈಗ ಅನ್ನದೊಂದಿಗೆ ಕೂಟು ಮಾಡಿಕೊಳ್ಳೋಣ.
ಕೇರಳದ ಸಾಂಪ್ರದಾಯಿಕ ವ್ಯಂಜನ ವೋಳನ್,  ಅನ್ನದೊಂದಿಗೆ ಮಾತ್ರವಲ್ಲದೆ ಚಪಾತೀ, ಪೂರೀ, ನಾನ್ ಇತ್ಯಾದಿಗಳೊಂದಿಗೆ ಬಳಸಬಹುದು.

ಒಂದು ಕಪ್ ಅಲಸಂಡೆ ಕಾಳು
ಅವಶ್ಯವಿದ್ದಷ್ಟು ಕುಂಬಳಕಾಯಿ ಹೋಳು
2 - 3 ಸಿಗಿದ ಹಸಿಮೆಣಸು
ರುಚಿಗೆ ಉಪ್ಪು
2 ಕಪ್ ದಪ್ಪ ಕಾಯಿಹಾಲು

ಒಗ್ಗರಣೆ ಸಾಮಗ್ರಿಗಳು:  
4 ಚಮಚ ತೆಂಗಿನೆಣ್ಣೆ,  ಅರ್ಧ ಚಮಚ ಸಾಸಿವೆ, ಜೀರಿಗೆ,  ಕರಿಬೇವು,  ಇಂಗು.

ಯಾವುದೇ ಬೇಳೆ ಆಗಿರಲಿ, ಮುನ್ನಾದಿನವೇ ನೆನೆ ಹಾಕಿರಬೇಕು.  ಬೇಳೆ ಹಾಗೂ ತರಕಾರಿ ಉಪ್ಪು ಹಾಕಿ ಬೇಯಿಸಿ.   ಬೆಂದ ನಂತರ ಹಸಿಮೆಣಸು ಹಾಕಿಕೊಳ್ಳಿ.  ಬೇಕಿದ್ದರೆ ಎರಡು ನೀರುಳ್ಳಿ ಚಿಕ್ಕದಾಗಿ ಕತ್ತರಿಸಿ ಹಾಕಿ.  ಕಾಯಿಹಾಲು ಎರೆದು ಕುದಿಸಿ.   ತೆಂಗಿನೆಣ್ಣೆಯಲ್ಲಿ ಒಗ್ಗರಣೆ ಕೊಡಿ.


ಬರೆಯುತ್ತಾ,   ಫೋಟೋ ಎಡಿಟಿಂಗ್ ಹಾಗೂ ಬರೆದದ್ದನ್ನು ಪುನರ್ಪರಿಶೀಲಿಸುತ್ತಿರಬೇಕಾದರೆ ಮಗಳ ಬರ್ತ್ ಡೇ ಬಂದಿತು.   " ಅಮ್ಮ,  ನನ್ ಬರ್ತ್ ಡೇಗೆ ಖರ್ಜೂರ ಪಾಯಸವೇ ಆಗಬೇಕು "  ಅಂದಿದ್ದಳು ಮಗಳು.  " ಸರಿ, ಮಾಡೋಣ "  ಅಂದ್ಬಿಟ್ಟು ಮಾಡಿದ್ದೂ ಆಯಿತು,  ಚೆನ್ನಾಗಿದೆ ಎಂದು ಬಟ್ಟಲಿಗೆ ಸುರಿದು ತಿಂದಿದ್ದೂ ಆಯಿತು.  ಈಗ ಖರ್ಜೂರ ಪಾಯಸ ಮಾಡುವ ವಿಧಾನ ನೋಡಿಕೊಳ್ಳೋಣ.

ಖರ್ಜೂರ ಅಂದಾಜು 200 ಗ್ರಾಂ
ಬೆಲ್ಲ 3 ದೊಡ್ಡ ಸ್ಪೂನ್
ಕಾಯಿಹಾಲು

ಖರ್ಜೂರ ಬೀಜ ತೆಗೆದು ನೀರು ಕಾಯಿಹಾಲು ಎರೆದು ಕುದಿಸಿ.   ತಣಿಯಲು ಬಿಡಿ.   ತಣಿದ ನಂತರ ಮಿಕ್ಸಿಯಲ್ಲಿ ಎರಡು ಸುತ್ತು ತಿರುಗಿಸಿ.   ಹೆಚ್ಚು ನುಣ್ಣಗಾಗಬಾರದು.
ಇದಕ್ಕೆ ಬೆಲ್ಲ ಸೇರಿಸಿ ಒಲೆಯ ಮೇಲಿಟ್ಟು ಬೆಲ್ಲ ಕರಗಿಸಿಕೊಳ್ಳಿ.
ಬೆಲ್ಲ ಕರಗಿತೇ,  ದಪ್ಪ ಕಾಯಿಹಾಲು ಎರೆದು ಕುದಿಸಿ ಕೆಳಗಿಳಿಸಿ.   ಏಲಕ್ಕಿ ಪುಡಿ ಇದ್ದರೆ ಹಾಕಬಹುದು.
ಇಷ್ಟಕ್ಕೇ ಮುಗಿಯಲಿಲ್ಲ,   ಈ ಕಾಯಿಹಾಲಿಗೆ ಬೆಲ್ಲದ ಪಾಕ ಎರೆದು ದೋಸೆ, ಇಡ್ಲಿಗಳನ್ನು ತಿನ್ನಿ.   ಹಬ್ಬದ ಸಂಭ್ರಮದ ವಾತಾವರಣ ಮನೆ ಮನಗಳನ್ನು ವ್ಯಾಪಿಸುವುದು.   ದೋಸೆ, ಇಡ್ಲಿ ಅಲ್ಲದೆ  ಸಾದಾ ಅವಲಕ್ಕಿಯೊಂದಿಗೂ ಚೆನ್ನಾಗಿರುತ್ತದೆ.
ಭೂರಿ ಭೋಜನ,  ಔತಣಕೂಟಗಳಲ್ಲಿ ಕಡ್ಲೇಬೇಳೆ ಹೋಳಿಗೆ ಇರಲೇಬೇಕು.   ಅದರೊಂದಿಗೆ ತುಪ್ಪ, ಕಾಯಿಹಾಲು ಕಡ್ಡಾಯ.   ಕಾಯಿಹಾಲು ಹಾಕಿಸಿಕೊಂಡು 7 - 8  ಹೋಳಿಗೆಗಳನ್ನು ಹೊಡೆಯುವವರಿದ್ದಾರೆ.   Posted via DraftCraft app

Sunday, 4 August 2013

ನೆಲ್ಲಿಕಾಯಿಯ ರಾಜವೈಭವ !

ಶಾಲೆಗೆ ಹೋಗುತ್ತಿದ್ದ ಆ ದಿನಗಳಲ್ಲಿ ಕಂಪಾಸ್ ಬಾಕ್ಸ್ ಒಳಗೆ ಅಡಗಿಸಿಟ್ಟು ತಿನ್ನುತ್ತಿದ್ದ ಕಾಟಂಗೋಟಿ ಹಣ್ಣುಗಳಲ್ಲಿ ರಾಜನೆಲ್ಲಿಕಾಯಿ ಕೂಡಾ ಇತ್ತಲ್ಲವೇ ?   ಮನೆಹಿತ್ತಲಲ್ಲಿ ಮರ ಇದ್ದ ಹುಡುಗಿಯರು ತರಲಿಕ್ಕೆ,  ಉಳಿದವರು  " ಏ,  ನಂಗೊಂದು ಕೊಡೇ..." ಎಂದು ಅಂಗಲಾಚಿ ತಿನ್ನಲಿಕ್ಕೆ.   ತಂದವಳಿಗೆ ಸ್ನೇಹಿತರು ಏನಾದರೂ ಉಪಕಾರ ಮಾಡಿಯೇ ಮಾಡುತ್ತಿದ್ದರು,  ನೋಟ್ಸ್ ಕೊಟ್ಟು,  ಲೆಕ್ಕದ ಪಾಠ ಬಿಡಿಸಿ ಕೊಟ್ಟು.

ನನ್ನ ಮಗಳು,  ಚಿಕ್ಕಮ್ಮನ ಮನೆಗೆ ಹೋಗಿ ಬಂದವಳು   " ನೋಡಮ್ಮಾ,  ಚಿಕ್ಕಮ್ಮನ ಪೇಟೆ ಮನೆಯಲ್ಲಿ ರಾಜನೆಲ್ಲಿ ಮರ ಇದೆ,  ಉಪ್ಪಿನಕಾಯಿ ಎಷ್ಟು ಚೆನ್ನಾಗಿತ್ತು ಅಂತೀಯ,   ಇಲ್ಲಿ ಇರೂದು ಬರೇ ಬೀಂಬುಳಿ "

" ಹಾಗಂತೀಯ,  ರಾಜನೆಲ್ಲಿಕಾಯಿ ಗಿಡ ನೆಡೋಣ "

ಮುಂದಿನ ಪ್ರಯಾಣದಲ್ಲಿ ನನ್ನ ತಂಗಿಯೇ ನೆಲ್ಲಿಕಾಯಿ ಗಿಡ ಹೊತ್ತು ತಂದಳು.

" ತೋಟದಲ್ಲಿ ಇದೆ ಓಬೀರಾಯನ ಕಾಲದಲ್ಲಿ ನೆಟ್ಟಿದ್ದು,  ಆದ್ರೆ ನೆಲ್ಲಿಕಾಯಿ ಆಗಿದ್ದು ನಾ ನೋಡೇ ಇಲ್ಲ "  ಅಂದೆ.

" ತೋಟದೊಳಗೆ ನೆರಳು ಅಲ್ವೇ,  ಚೆನ್ನಾಗಿ ಬಿಸಿಲು ಬೀಳೋ ಜಾಗದಲ್ಲಿ ನೆಟ್ಟರೆ ಆದೀತು "  ತಂಗಿ ಅಂದಳು.

                                                    <><><>       <><><>


" ಅಂತೂ ಈಗ ನೆಲ್ಲಿಕಾಯಿ ಆಯ್ತು "  ಮಗಳಿಗೆ ಫೋನ್ ಮಾಡುತ್ತಿರಬೇಕಾದರೆ ಅಂದಿದ್ದು.

" ನಾನು ಬರದೇ ಒಂದನ್ನೂ ಕೊಯ್ಯಬಾರದು "

ವಾರದ ಕೊನೆಗೆ ಬರುತ್ತಿರುತ್ತಾಳೆ,  ಬಂದಳು.

ನೆಲ್ಲಿಕಾಯಿ ಗಿಡವನ್ನು ದೋಟಿಯಲ್ಲಿ ಕುಟ್ಟೀ ಕುಟ್ಟೀ,   ಕೆಳಗೆ ಬಿದ್ದ ಕಾಯಿಗಳನ್ನು ಹೆಕ್ಕೀ ಹೆಕ್ಕೀ,  ನಲ್ಲೀ ನೀರಿನಲ್ಲಿ ತೊಳೆದೂ ತೊಳೆದೂ,  ಉಪ್ಪು ಹಾಕಿ ತಿಂದಿದ್ದೂ ತಿಂದಿದ್ದೇ.

ಮದ್ಯಾಹ್ನ ಆಗೋ ಹೊತ್ತಿಗೆ  " ಹೊಟ್ಟೆ ನೋಯುತ್ತೆ "  ಅಂದಳು.

" ಹಾಗೆ ಯಾಕೆ ತಿಂತೀಯ,  ಉಪ್ಪಿನಕಾಯಿ ಹಾಕಿ ಇಟ್ಟುಕೊಳ್ಳೋಣ "


ಅಡುಗೆ ಪುಸ್ತಕಗಳ ಸಂಗ್ರಹ ಹೊರ ಬಂದಿತು.   ಶಾಂತಾದೇವಿ ಮಾಳವಾಡ ಬರೆದಿರುವ  ' ರಸಪಾಕ '  ಪುಸ್ತಕದಲ್ಲಿ ಉಪ್ಪಿನಕಾಯಿ ಹಾಗೂ ಚಟ್ನಿ ಪಾಕವಿಧಾನ ಸಿಕ್ಕಿತು.   ಅವರು ಈ ನೆಲ್ಲಿಯನ್ನು ರಾಯನೆಲ್ಲಿಕಾಯಿ ಎಂದು ಹೆಸರಿಸಿದ್ದಾರೆ.

ಚಟ್ನಿ  ಮಾಡೋಣ, 
ಒಂದು ಕಡಿ ತೆಂಗಿನತುರಿ
7 - 8  ರಾಜನೆಲ್ಲಿಕಾಯಿ ಬೀಜ ತೆಗೆದದ್ದು
2 ಹಸಿ ಮೆಣಸು
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆ ಸಾಮಗ್ರಿಗಳು

ಮಿಕ್ಸೀಗೆ ಹಾಕಿ ತಿರುಗಿಸಿ,  ಬೇರೆ ನೀರು ಹಾಕುವ ಅಗತ್ಯವೇ ಇಲ್ಲ.   ಒಗ್ಗರಣೆ ಕೊಡಿ.   ಈ ಗಟ್ಟಿ ಚಟ್ನಿಯನ್ನು ಅನ್ನದೊಂದಿಗೆ,  ಚಪಾತಿ,  ಪೂರಿಗಳೊಂದಿಗೆ ಸವಿಯಿರಿ.   ನಾನಂತೂ ಗಿಡದಲ್ಲಿದ್ದ ನೆಲ್ಲಿಕಾಯಿಗಳು ಮುಗಿಯುವ ತನಕ ದಿನವೂ ಚಟ್ನಿ ಮಾಡಿ ಆಯ್ತು.

ಉಪ್ಪಿನಕಾಯಿ ಹಾಕೋಣ,
ಇದಕ್ಕೂ ಹೆಚ್ಚಿನ ಶ್ರಮವೇನೂ ಇಲ್ಲ.   ಈಗ ದಿಢೀರ್ ಉಪ್ಪಿನಕಾಯಿ ಹುಡಿಗಳು ಸಿಗುತ್ತವೆ.  ಸಾಲದೂಂತ ನಾನೂ ಸಾಸಿವೆ,  ಜೀರಿಗೆ,  ಇಂಗು ಹುರಿದು ಹುಡಿ ಮಾಡಿ ಹಾಕಿ ಬೆರೆಸುವಷ್ಟರಲ್ಲಿ  " ಆಯ್ತಾ ಅಮ್ಮ, ಉಪ್ಪಿನ್ಕಾಯಿ ? "  ಕೇಳುತ್ತಾ ಮಗಳು ಆಗಮಿಸಿದಳು.

" ಈಗ್ಲೇ ತಿನ್ಬೇಡ್ವೇ,  ಇದು ಉಪ್ಪು ಮೆಣಸು ಎಳೆದು,  ನೆಲ್ಲಿಕಾಯಿಯ ಹುಳಿ ಬಿಟ್ಟು ಒಂದು ಹದಕ್ಕೆ ಬರಬೇಕಾದರೆ ನಾಲ್ಕು ದಿನ ಬೇಕಾದೀತು.  ಸ್ವಲ್ಪ ಜಜ್ಜಿಕೊಂಡರೆ ಉತ್ತಮ ಅಂತ ಆ ಪುಸ್ತಕದಲ್ಲಿ ಬರ್ದಿದಾರೆ ನೋಡು "   ಅಂದೆ ಚಮಚಾದಲ್ಲಿ ಜಜ್ಜುತ್ತಾ.

ನೆಲ್ಲಿಕಾಯಿ ಕೊಯ್ಯುತ್ತಿರಬೇಕಾದರೆ ಪಕ್ಕದಲ್ಲೇ ಕಾಟ್ ಕಿಸ್ಕಾರದ ಹೂಗಳು ಅರಳಿ ನಗುತ್ತಿರಬೇಕೆ,   ಅದನ್ನೇಕೆ ಬಿಡಲಿ,  ನೆಲ್ಲಿಯೊಂದಿಗೆ ಕಿಸ್ಕಾರ ಹೂಗಳೂ ಅಡುಗೆಮನೆಯೊಳಗೆ ಬಂದವು.   ಕಿಸ್ಕಾರದ ತಂಬುಳಿ,  ನೆಲ್ಲಿ ಚಟ್ನಿ ಹೀಗೆ ಎರಡು ಐಟಂ ಬೇಡ,  ಒಟ್ಟಿಗೆ ಹಾಕಿ ಒಂದು ಹೊಸ ಬಗೆಯ ಚಟ್ನಿ ಸಿದ್ಧವಾಯಿತು.   ಮಜ್ಜಿಗೆ ಎರೆಯಲಿಲ್ಲ.   ಎರಡು ಗಾಂಧಾರಿ ಮೆಣಸು ರುಬ್ಬುವಾಗ ಹಾಕಿದ್ದು ಅಷ್ಟೇ.    ಮಳೆ ಬರುವಾಗ ಬಿಸಿ ಬಿಸಿಯಾದ ಕುಚ್ಚುಲಕ್ಕಿ ಅನ್ನದೊಂದಿಗೆ ಈ ಚಟ್ನಿ ಸವಿದೇ ತಿಳಿಯಿರಿ.

ಜಾಮ್ ಕೂಡಾ ಮಾಡಬಹುದು,  ಸಕ್ಕರೆಪಾಕದಲ್ಲಿ ಹಾಕಿ ಕುದಿಸಿ ಸವಿಯಬಹುದು,  ಇಟ್ಟುಕೊಳ್ಳಲೂ ಬಹುದು.  ಚಿಗುರೆಲೆಗಳಿಂದ ತಂಬುಳಿ ತಯಾರಿಸಿ. ಹಣ್ಣುಗಳ ಜ್ಯೂಸ್ ಮಾಡಬಹುದು,  ಬೀಜಗಳನ್ನು ತೆಗೆಯುವ ಕೆಲಸ ಮಾತ್ರ ಇಲ್ಲಿ ಇದೆ.


ಈ ರಾಜನೆಲ್ಲಿಕಾಯಿಯ ಮೂಲನೆಲೆ ಭಾರತವೇ ಆಗಿದೆ.   ಆಮ್ಲೀಯ ಮಣ್ಣಿನಲ್ಲಿ ಬಹು ಬೇಗನೆ ಫಲ ನೀಡುವಂತಹ ಮಧ್ಯಮ ಗಾತ್ರದ ಸಸ್ಯ.   ಚೆನ್ನಾಗಿ ಹಣ್ಣಾದ ನೆಲ್ಲಿಯ ಬೀಜಗಳಿಂದ ಹೊಸ ಗಿಡಗಳನ್ನು ಪಡೆಯಬಹುದಾಗಿದೆ.   ವರ್ಷಕ್ಕೆರಡು ಬಾರಿ ಫಲ ನೀಡುವ ಈ ಮರ,  ಒಮ್ಮೆ ಮಳೆಗಾಲದ ಆರಂಭದ ಮೊದಲು,  ಮಗದೊಮ್ಮೆ ಮಳೆ ಕಡಿಮೆಯಾಗುವ ಹಂತದಲ್ಲಿ,  ಸೆಪ್ಟೆಂಬರ - ಅಕ್ಟೋಬರದಲ್ಲಿ.   ಸಸ್ಯಶಾಸ್ತ್ರೀಯವಾಗಿ Phyllanthus acidus ಅನ್ನಿಸಿಕೊಂಡಿದೆ,   Phyllanthaceae ಕುಟುಂಬದಿಂದ ಬಂದಿದೆ.   ಅಸಲು ನೆಲ್ಲಿಕಾಯಿಯೊಂದಿಗೆ ಯಾವುದೇ ಹೋಲಿಕೆಯಿಲ್ಲದ ಈ ಹಣ್ಣು ಬೀಂಬುಳಿ,  ದಾರೆಹುಳಿಗಳಂತೆ ಒಂದು ಹುಳಿ ಹಣ್ಣು.  ನೆಲ್ಲಿಕಾಯಿಯಲ್ಲಿ ಅಧಿಕ ವಿಟಮಿನ್ ಸಿ ಇರುವುದಾದರೆ ಇದರಲ್ಲಿ ವಿಟಮಿನ್ ಸಿ ಕನಿಷ್ಠವಾಗಿರುವುದು. ಕತ್ತರಿಸಿದಾಗ ನೆಲ್ಲಿಕಾಯಿಯಂತಹುದೇ ಗಟ್ಟಿಯಾದ ಬೀಜವೂ,  ಕತ್ತರಿಸಿದ ಭಾಗ ನಕ್ಷತ್ರಾಕೃತಿಯಿರುವುದರಿಂದ ಆಂಗ್ಲ ಭಾಷೆಯಲ್ಲಿ ಸ್ಟಾರ್ ಗೂಸ್ ಬೆರಿ ಎಂದಾಗಿದೆ.    ಶೇಕಡಾ 91 ಪಾಲು ನೀರು ಉಳಿದಂತೆ ಕ್ಯಾಲ್ಸಿಯಂ,  ಪ್ರೊಟೀನ್,  ಫಾಸ್ಫರಸ್ ಹಾಗೂ ಕಬ್ಬಿಣಾಂಶವನ್ನೂ ಒಳಗೊಂಡಿರುವ ರಾಜನೆಲ್ಲಿಕಾಯಿ ಪುಷ್ಟಿದಾಯಕ ಹಣ್ಣು,   ರಕ್ತಶುದ್ಧಿಕಾರಕ ಹಾಗೂ ಹಸಿವನ್ನು ಪ್ರಚೋದಿಸುವಂಥದ್ದು. ರಾಜನೆಲ್ಲಿಕಾಯಿ ಯಾವುದೇ ಕೀಟನಾಶಕಗಳ ಬಳಕೆಯಿಲ್ಲದೆ,  ರಸಗೊಬ್ಬರಗಳ ಹಂಗಿಲ್ಲದೆ ಆಗುವಂತಹದು.   ಎಲೆ,  ಬೀಜ,  ಕಾಂಡದ ತೊಗಟೆ ಕೂಡಾ ಔಷಧೀಯ ಗುಣವುಳ್ಳದ್ದಾಗಿದೆ,  ಆಂಟಿ ಓಕ್ಸಿಡೆಂಟ್ ಎಂದೇ ಹೇಳಬಹುದಾಗಿದೆ.

Posted via DraftCraft app

Saturday, 20 July 2013

ಪಕ್ಷಿ ನೋಟಹೊತ್ತ ಕಳೆಯುವ ಉದ್ಯೋಗವಾಗಿ,   ಅಂತರ್ಜಾಲ ಮಾಧ್ಯಮದ ತಿಳುವಳಿಕೆಯ ಸಲುವಾಗಿ,   ನನ್ನ ಪಾಡಿಗೆ ನಾನು ಬರೆಯಲು ಹಾಗೂ ಫೋಟೋ ಎಡಿಟಿಂಗ್ ಕಲಿಯಲು ಸಾಧ್ಯವಾಗಿದ್ದು iPad ಹಾಗೂ iPhone ಸಾಧನಗಳಿಂದ.   ಫೇಸ್ ಬುಕ್ ಮಾಧ್ಯಮ ಸ್ನೇಹಿತರ ಬಳಗವೇ ನನ್ನ ಸ್ಪೂರ್ತಿಚೇತನ.   ಹತ್ತು ಹಲವಾರು ಗ್ರೂಪುಗಳಲ್ಲಿ ಕ್ರಿಯಾಶೀಲ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದ ಸ್ನೇಹಿತರ ಬಳಗ ದೊಡ್ಡದಿದೆ.

ಮಿಂಚುಬ್ಲಾಗ್ ಪುಟ ವೀಕ್ಷಣೆ 20,000 ದಾಟಿ ಮುನ್ನಡೆಯುತ್ತಿದೆ.   ಅಂತರ್ಜಾಲದ ಕನ್ನಡ ಓದುಗರಿಗೆ ಹೃತ್ಪೂರ್ವಕ ಕೃತಜ್ಞತೆಗಳು.   

Posted via DraftCraft app

Monday, 15 July 2013

ಚಿಗುರೆಲೆಗಳ ತಂಬುಳಿಮಳೆ ಬಿಟ್ಟಿತ್ತು,   ಬಿಸಿಲು ಬಂದಿತ್ತು.    ಅಡುಗೆಮನೆಯಿಂದ ಹೊರಗಿಣುಕದಿದ್ದರೆ ಹೇಗೆ ?    ಹಾಗೇ ತೋಟದೆಡೆಗೆ ನನ್ನ ಪಯಣ.   ತೋಟವೆಲ್ಲ ಹಚ್ಚ ಹಸಿರು,   ಎಲ್ಲಿ ಅಡಗಿದ್ದವು ಈ ಸಸ್ಯರಾಶಿ ?    ಚಿಗುರೊಡೆದ ಸಸ್ಯಗಳು,  ಅಂಬಟೆ ಮರದ ಅಕ್ಕಪಕ್ಕ ಹಲವು ಅಂಬಟೆ ಸಸಿಗಳು ಮೇಲೆದ್ದಿವೆ.   ಓ,  ಅಲ್ಲೋಂದು ಗೇರು ಸಸಿಯೂ ನಗುನಗುತ್ತಿದೆಯಲ್ಲ !  ನೆಟ್ಟು ನಾಲ್ಕಾರು ವರ್ಷವಾದರೂ ಫಲ ಕೊಡದ ರಾಜನೆಲ್ಲಿಕಾಯಿ ಗಿಡ ತುಂಬಾ ಗೆಜ್ಜೆ ಕಟ್ಟಿದಂತೆ ನೆಲ್ಲಿಕಾಯಿಗಳೂ...    ನೋಡುತ್ತ,  ನೋಡುತ್ತ ಕೈ ತಾನಾಗಿಯೇ ಗಿಡಗಳ ಚಿಗುರುಗಳನ್ನು ಚಿವುಟಿ ಮುಷ್ಠಿ ತುಂಬಾ ಹಿಡಿದುಕೊಂಡು,  ರಾಜನೆಲ್ಲಿಕಾಯಿ ಉಪ್ಪಿನಕಾಯಿ ಹಾಕುವ ಪಾಕವಿಧಾನ ಯಾವ ಅಡುಗೆ ಪುಸ್ತಕದಲ್ಲಿರಬಹುದೆಂಬ ಚಿಂತನೆಯೊಂದಿಗೆ ಮನೆಯೊಳಗೆ ಬಂದೆ. 


ಈ ಕುಡಿ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿ,  ಒಂದು ಮೆಣಸು ಹಾಗೂ ಜೀರಿಗೆಯೊಂದಿಗೆ ಮೆತ್ತಗೆ ಬೇಯಿಸಿ ಆಯಿತು.   ಒಂದು ಕಡಿ ತೆಂಗಿನ ತುರಿಯೊಂದಿಗೆ ನುಣ್ಣಗೆ ಅರೆದು, ಸಿಹಿ ಮಜ್ಜಿಗೆ ಎರೆದು,  ಬೇಯಿಸಲು ಉಪಯೋಗಿಸಿದ ನೀರನ್ನೂ  ಎರೆದು ಒಗ್ಗರಣೆ ಕೊಡುವಲ್ಲಿಗೆ ತಂಬುಳಿ ಸಿದ್ಧವಾಯಿತು.   ಸಿಹಿ ಬೇಕಿದ್ದರೆ ಬೆಲ್ಲವನ್ನೂ ಹಾಕಿದರಾಯಿತು.   ಇದು ಒಂದು ಹೊತ್ತು ಮಾತ್ರ ಉಪಯೋಗಿಸಿ ಉಳಿದದ್ದನ್ನು ಚೆಲ್ಲುವಂತಹ ತಂಬುಳಿಯಲ್ಲ.   ಕುದಿಸಿಟ್ಟುಕೊಂಡು 2 -3  ದಿನ ಉಪಯೋಗಿಸುವಂತಹುದು.

ಹಲವು ಕುಡಿಗಳಿಂದ ತಯಾರಿಸಲ್ಪಡುವ ಈ ತಂಬುಳಿ ನಮ್ಮ ಆಡುನುಡಿಯಲ್ಲಿ ಹೊಲಕ್ಕೊಡಿ ತಂಬುಳಿ ಎಂದೇ ಹೆಸರಿಸಿಕೊಂಡಿದೆ. 


ಹೂಲಗದ್ದೆ,  ಗುಡ್ಡಗಾಡುಗಳು ಅಧಿಕವಾಗಿದ್ದಲ್ಲಿ ಇಂತಹ ಚಿಗುರೆಲೆಗಳನ್ನು ಸಂಗ್ರಹಿಸುವುದು ಸುಲಭ.   ಹಟ್ಟಿಯಲ್ಲಿ ಜಾನುವಾರುಗಳು ಇರುವಲ್ಲಿ,   ' ದನ ಮೇಯ್ದು ಬರಲೀ '  ಎಂದು ಮುಂಜಾನೆಯೇ ಹಾಲು ಕರೆದು,  ಅಕ್ಕಚ್ಚು ಕೊಟ್ಟು,   ' ಸಂಜೆ ಮನೆಗೆ ಬಾರಮ್ಮ ' ಎಂದು ಹೊರ ಬಿಟ್ಟರಾಯಿತು.   ಹಸುಗಳು ಮೇಯ್ದು ಬರುವಂತಹ ಗುಡ್ಡದ ಸಸ್ಯಗಳು ಔಷಧದ ಗಣಿಗಳಾಗಿರುತ್ತವೆ.   ಇಂತಹ ಹಸುವಿನ ಹಾಲು ಕೂಡಾ ಶ್ರೇಷ್ಠ ಗುಣವುಳ್ಳದ್ದಾಗಿದೆ ಎಂದೇ ತಿಳಿಯಿರಿ.    ' ಆಡು ಮುಟ್ಟದ ಸೊಪ್ಪಿಲ್ಲ '   ಎಂಬ ಮಾತು ಈಗ ಸಹಜವಾಗಿ ನೆನಪಿಗೆ  ಬಂದೀತು.   ಗಾಂಧೀ ತಾತ ಆಡಿನ ಹಾಲನ್ನೇ ಬಳಸುತ್ತಿದ್ದರೆಂಬುದನ್ನು ಮರೆಯದಿರೋಣ.    ಕೃತಕವಾಗಿ ಮೊಳಕೆ ಬರಿಸಿ ದವಸಧಾನ್ಯಗಳನ್ನು ಅಡುಗೆಯಲ್ಲಿ ಬಳಸುವುದಿಲ್ಲವೇ,  ಹಾಗೇನೇ ನೆಲದಲ್ಲಿ ಸಹಜವಾಗಿ ಚಿಗುರೊಡೆದ ಸಸ್ಯಗಳ ಕುಡಿ ಆರೋಗ್ಯಕ್ಕೆ ಅತ್ಯುತ್ತಮ ಸಂಜೀವಿನಿ.

ಪೇರಳೆ,  ಸೀತಾಫಲ,  ಮಾವು,  ಬೇವು,  ಗೇರು,  ಹಲಸು, ನೇರಳೆ,  ಪುನರ್ಪುಳಿ,  ದಾರೆಹುಳಿ, ಕುಂಟಲ, ಕುಟಜ, ಅಂಟುವಾಳ, ಶೀಗೆ   ದಡ್ಡಾಲ,  ನೆಕ್ಕರಿಕ,  ಚೇರೆ,  ತಗ್ಗಿ,  ಎಂಜಿರ  ಹೀಗೆ ಪರಿಚಿತ ಸಸ್ಯಗಳ ಪಟ್ಟಿ ಮಾಡಿಟ್ಟುಕೊಂಡಲ್ಲಿ ಸಂಗ್ರಹಣೆ ಸಾಧ್ಯ.
ಕಾಟ್ ಕಿಸ್ಕಾರ,  ತಗತೆ, ಚಕ್ರಮುನಿ,  ತುಳಸಿ,  ಲಿಂಬೆ ಜಾತಿಯ ಗಿಡಗಳು.
ಸಾಂಬ್ರಾಣಿ,  ಭೃಂಗರಾಜ,  ನೆಲನೆಲ್ಲಿಯಂತಹ ಚಿಕ್ಕಪುಟ್ಟ ಸಸ್ಯಗಳು.

ನನ್ನ ಪರಿಸರದಲ್ಲಿ ಲಭ್ಯವಿರುವ, ತಿಳಿದಿರುವ ಕೆಲವೊಂದು ಸಸ್ಯಗಳ ಹೆಸರುಗಳನ್ನು ಬರೆದಿರುತ್ತೇನೆ.    ಇನ್ನಷ್ಟು ಸಸ್ಯಪ್ರಕಾರಗಳನ್ನು ತಿಳಿದವರಿಂದ ಕೇಳಿ ತಿಳಿದುಕೊಳ್ಳುವುದು ಉತ್ತಮ. ಪ್ರಕೃತಿಯಲ್ಲಿ ಸಸ್ಯವೈವಿಧ್ಯಕ್ಕೆ ಕೊರತೆಯಿಲ್ಲ.   ನಮಗೆ ಚಿರಪರಿಚಿತವಿರುವ ಸಸ್ಯಗಳ ಕುಡಿಗಳನ್ನು ಆಯ್ದು ತರುವುದಷ್ಟೇ ಕೆಲಸ.  ನಾಲ್ಕು ಅಥವಾ ಐದು ಸಸ್ಯಗಳ ಕುಡಿಗಳಿದ್ದರೂ ಸಾಕು,   ತಂಬುಳಿ ಮಾಡುವ ರೂಢಿ ಇಟ್ಟುಕೊಳ್ಳೋಣ.

ಮರೆತ ಮಾತು:  ಒಂದೆಲಗವನ್ನು ಈ ತಂಬುಳಿಯಲ್ಲಿ ಸೇರಿಸುವಂತಿಲ್ಲ,   ಸೊಪ್ಪುಗಳನ್ನು ಬೇಯಿಸುವ ವರ್ಗದಲ್ಲಿ ಒಂದೆಲಗ ಇಲ್ಲ.

ಸಸ್ಯವರ್ಗಗಳ ಸಚಿತ್ರ ಮಾಹಿತಿಗಿಂತ ಸಸ್ಯಶಾಸ್ತ್ರೀಯ ಹೆಸರುಗಳನ್ನು ಬರೆಯುವುದೇ ಓದುಗರಿಗೆ ಉಪಯುಕ್ತವಾದೀತು ಎಂಬ ಅನಿಸಿಕೆಯಿಂದ ಒಂದು ಕಿರುಪಟ್ಟಿ ಇಲ್ಲಿ  ಬರೆದಿದ್ದೇನೆ.

ಅಂಬಟೆ,  ಅಮಟೆ    Indian Hog plum     Spondias pinnatam
ಅತ್ತಿ,  Ficus glomerata,  Ficus racemosa  ಔದುಂಬರ ವೃಕ್ಷ  ( ಸಂಸ್ಕೃತ )
ಅಂಟುವಾಳ,  Sapindus Trifoliatus
ಕಿಸ್ಕಾರ,  Ixora coccinea
ಕುಟಜ,   Hollarhena antidysenterica
ಭೃಂಗರಾಜ,   Eclipta alba
ಗೇರು,  cashew plant,   Anacardium occidentale
ಪೇರಳೆ,   Psidium guava
ತಗತೆ,   Cassia tora
ತಗ್ಗಿ,   cleodendrum viscosum/c infortunatum.
ದಡ್ಡಾಲ,   Careya arborea
 ದಾರೆಹುಳಿ,   Averrhoa carambola
ನೆಲನೆಲ್ಲಿ,   Phyllanthus Niruri 
ತುಳಸಿ,   Ocimum tenuiflorum
ಮಾವು,   Mangifera indica
ಶೀಗೆ,   Acacia concinna
ಪುನರ್ಪುಳಿ,   Garcinia indica
ಸಾಂಬ್ರಾಣಿ,    Plectranthus amboinicus
ಹೊನಗೊನ ಸೊಪ್ಪು,  Alternanthera sessilis
ಕಾಚಿಸೊಪ್ಪು,   Solanum nigrum
ಚಕ್ರಮುನಿ,    sauropus androgynus
ಆಡುಸೋಗೆ,   Adhatoda Vasica
ಸೀತಾಫಲ,  sugar apple,    Annona squamosa

Posted via DraftCraft app

Monday, 8 July 2013

ರಾಗೀ ಚಪಾತಿಯೂ, ಸಾಂಬಾರ್ ಚಟ್ನಿಯೂಅಡುಗೆಮನೆಯ ಪ್ರಯೋಗಶಾಲೆಯಲ್ಲಿ ರಾಗಿ ಒಂದು ಸಿದ್ಧ ವಸ್ತು,   ಯಾವುದೇ ಹೊಸರುಚಿಗೆ ಸವಾಲ್ ಎಸೆಯುವಂತೆ ಓಡಿ ಓಡಿ ಬರುವಂತಹದು.   ಮೊನ್ನೆ ಏನಾಯ್ತು,  ಚಪಾತಿಗೆ ಹಿಟ್ಟು ಕಲಸೋಣ ಅಂದ್ಕೊಂಡು ಸಿದ್ಧತೆಗೆ ತೊಡಗಿದೆ.   ಒಂದು ಕಪ್ ನೀರು,  ರುಚಿಗೆ ಉಪ್ಪು, ಎರಡು ಕಪ್ ಗೋಧಿ ಹುಡಿ.   ಇನ್ನು ಕಲಸುವುದೊಂದೇ ಬಾಕಿ,   " ಹಾಕೋಣ ರಾಗಿ " ಅನ್ನಿಸ್ತು.   ಅಳೆದೂ ಸುರಿದೂ  ನಾಲ್ಕು ಚಮಚಾ ರಾಗಿ ಹುಡಿ ಸೇರಿಸಿ ಹಿಟ್ಟು ಕಲಸಿಟ್ಟು,  ಮತ್ತೊಂದರ್ಧ ಗಂಟೆ ಬಿಟ್ಟು ಚಪಾತಿ ಲಟ್ಟಿಸಿ ಆಯ್ತು.   

 ಚಪಾತಿಗೊಂದು ಕೂಟು ಆಗ್ಬೇಡ್ವೇ,   ಅತಿ ವೇಗವಾಗಿ ಮಾಡಬಹುದಾದ ಈ ರಸಂ ನನ್ನಮ್ಮ ಹೇಳಿಕೊಟ್ಟಿದ್ದು.   ಅಮ್ಮಂಗೆ ಹೇಳಿಕೊಟ್ಟಿದ್ದು ಪಕ್ಕದ ಮನೆಯಾಕೆ,  ಆಕೆ ಗೌಡ ಸಾರಸ್ವತ ಮಹಿಳೆ.    ಹಾಗಾಗಿ ಇದನ್ನು ಗೋವಾ ಕೊಂಕಣಿಗರ ಸ್ಪೆಶಲ್ ಎಂದು ಕರೆಯಲಡ್ಡಿಯಿಲ್ಲ.

ಕತ್ತರಿಸಿದ ಟೊಮ್ಯಾಟೋ,  ಈರುಳ್ಳಿ.   ಎರಡೆರಡು ಸಾಕು,  ಚಿಕ್ಕದಾಗಿ ಕತ್ತರಿಸಿ.
2 -3 ಚಮಚಾ ಕಡ್ಲೇ ಹುಡಿ.
2  ಚಮಚಾ ಸಾಂಬಾರು ಹುಡಿ. 
2  ಚಮಚಾ ಸಕ್ಕರೆ.
ರುಚಿಗೆ ಉಪ್ಪು.
ಒಗ್ಗರಣೆ ಸಾಮಗ್ರಿಗಳು:   ಸಾಸಿವೆ,  ಉದ್ದಿನಬೇಳೆ,  ಕಡ್ಲೆ ಬೇಳೆ,  ಒಣಮೆಣಸು,  ಕರಿಬೇವು.
2 ಚಮಚ ಎಣ್ಣೆ ಅಥವಾ ತುಪ್ಪ.

ಮೊದಲು ಕಡ್ಲೆಹಿಟ್ಟನ್ನು ಒಂದು ಕಪ್ ನೀರಿನಲ್ಲಿ ಗಂಟುಕಟ್ಟದಂತೆ ಕಲಸಿ ಇಡಬೇಕು.
ಬಾಣಲೆಯಲ್ಲಿ ಒಗ್ಗರಣೆ ಸಿಡಿಯುತ್ತಿದ್ದಂತೆ,  ಕರಿಬೇವು,  ಈರುಳ್ಳಿ,  ಟೊಮ್ಯಾಟೋ ಸೇರಿಸಿ,  ಬಾಡಿಸಿಕೊಳ್ಳಿ.  ಉಪ್ಪು ಹಾಕಿದ್ರೆ ಬೇಗನೆ ಬೆಂದೀತು. 
ಬೆಂದ ನಂತರ ಕಡ್ಲೆಹಿಟ್ಟಿನ ನೀರನ್ನು ಎರೆದು ಬಿಡಿ.

ಕುದಿಯುತ್ತಿದ್ದಂತೆ ಹಿಟ್ಟು ದಪ್ಪಗಾಯಿತೇ... ವಿಪರೀತ ದಪ್ಪ ಆಗಬಾರದು,   ಅನ್ನದ ಗಂಜಿಯ ಸಾಂದ್ರತೆ ಇದ್ದರೆ ಸಾಕು.   ನೀರು ಬೇಕಿದ್ದರೆ ಎರೆದು,   ಸಾಂಬಾರು ಹುಡಿ,  ಸಕ್ಕರೆ ಹಾಕಿ,  ಕುದಿಸಿ.  ನಮ್ಮ ಸಾಂಬಾರ್ ಚಟ್ನಿ ಸಿದ್ಧ.   ಬೇಕಿದ್ದರೆ ಕೊತ್ತಂಬರಿ ಸೊಪ್ಪು ಉದುರಿಸಿ.

ಇದನ್ನು ಚಪಾತಿಗೆ ಮಾತ್ರವಲ್ಲದೆ ದೋಸೆ,  ಇಡ್ಲಿ,  ಅನ್ನದೊಂದಿಗೂ ಬಳಸಬಹುದು.

ಈ ರಾಗಿ ಚಪಾತಿ ಹಿಟ್ಟು ಕಲಸುವಾಗ ನಾನು ಎಣ್ಣೆ ಅಥವಾ ತುಪ್ಪ,  ಬಾಳೆಹಣ್ಣು ಅಥವಾ ಇನ್ಯಾವುದೇ ಮೃದುತ್ವ ಕೊಡುವಂತಹ ಸಾಮಗ್ರಿಗಳನ್ನು ಹಾಕಿಲ್ಲ,  ರಾತ್ರಿಯೇ ಕಲಸಿ ಇಡಲೂ ಇಲ್ಲ.   ಆದರೂ ಚಪಾತಿ ಮೃದುವಾಗಿ ಬಂದಿದೆ.   ಚೆನ್ನಾಗಿದೆ ಅಂದ್ಕೂಂಡ್ಬಿಟ್ಟು ಹೆಚ್ಚು ರಾಗಿ ಹಾಕಬೇಡಿ,  ಚಪಾತಿ ಕಪ್ಪಗಾದೀತು.Posted via DraftCraft app

Monday, 1 July 2013

ಅಜ್ಜನ ಮೇಲೆ ಶಾಯಿಯ ಕಲೆ...ಛೆ, ಛೆ, ಏನಾಗ್ಹೋಯ್ತು...
ನಾವು ಮಕ್ಕಳೆಲ್ಲ ಮನೆಯ ಗೇಟಿನೆದುರು ಕಾದು ನಿಂತಿದ್ದೆವು. ಬಲಗಡೆಯ ರಸ್ತೆಯತ್ತಲೇ ನೋಟ. ಮನೆಯ ಎದುರು ಗಜದೂರದಲ್ಲಿ ಸರ್ಕಾರೀ ಆಸ್ಪತ್ರೆ. ಅದರ ಮುಂದುಗಡೆ ಎಲ್ಲಾ ಬಸ್ಸುಗಳೂ ನಿಲ್ಲೂದು. ಇನ್ನೇನು ಶಂಕರವಿಠ್ಠಲ್ ಬಸ್ಸು ವಿಟ್ಲದಿಂದ ಕಾಸರಗೋಡು ತಲಪಲಿದೆ, ನಮ್ಮಜ್ಜ ಬಸ್ಸಿನಿಂದ ಇಳಿಯಲಿದ್ದಾರೆ. ಶಾಲೆಯಿಂದ ಬಂದು, ಕಾಫೀ ತಿಂಡಿ ಮುಗಿಸ್ಕೊಂಡು ಶಿಸ್ತಿನ ಸಿಪಾಯಿಗಳಂತೆ, ದ್ವಾರಪಾಲಕರಂತೆ ನಿಂತ ನಮ್ಮ ನಿರೀಕ್ಷೆಯಂತೆ ಬಸ್ಸು ಬಂದಿತು. ಆಸ್ಪತ್ರೆ ಎದುರುಗಡೆ ನಿಂತಿತು. ಅಜ್ಜ ಇಳಿದರು. " ಹೋ.... ಅಜ್ಜ ಬಂದ್ರು " ಕಿರಿಯ ತಮ್ಮ ರಂಗನಾಥ್ ಒಳಗೋಡಿದ, ಸುದ್ದಿವಾಹಕನಾಗಿ ಅಮ್ಮನ ಬಳಿಗೆ.

ನಾಲ್ಕು ದಿನಗಳ ಹಿಂದೆ ಬಂದಿದ್ದ ಪೋಸ್ಟ್ ಕಾರ್ಡ್, ಅದನ್ನು ಅಪ್ಪನೇ ಓದಬೇಕಾಗಿತ್ತು. ಕುಕ್ಕಿಲ ಕೃಷ್ಣ ಭಟ್ಟರ ಮೋಡಿ ಅಕ್ಷರಗಳನ್ನು ಓದುತ್ತಿದ್ದದ್ದು ಅಪ್ಪನೇ. ಅಮ್ಮನೂ ಸಂಭ್ರಮದಿಂದ ಓಡಾಡಿಕೊಂಡಿದ್ದಳು. ಪತ್ರದಲ್ಲಿ ಬರೆದಿದ್ದೂ ಅಷ್ಟೇ, ' ಇಂಥಾ ದಿನ, ಇಂತಹುದೇ ಬಸ್ಸಿನಲ್ಲಿ ಬರಲಿದ್ದೇನೆ '......ಆಗ ಇದ್ದಿದ್ದು ಒಂದೇ ಬಸ್ಸು.

ಶ್ವೇತ ವಸನಧಾರಿ, ತಲೆಯಲ್ಲಿ ಗಾಂಧೀ ಟೋಪಿ, ಹೆಗಲಲ್ಲಿ ಚೀಲ, ತುಂಡುತೋಳಿನ ಕರಿಕೋಟು ಧರಿಸಿದ ಅಜ್ಜ ಬಸ್ಸಿನಿಂದಿಳಿಯುತ್ತಿದ್ದ ಹಾಗೆ ಮನೆ ಗೇಟಿನೆದುರು ಮಕ್ಕಳ ಸಂತೆ ನೆರೆದಿದ್ದು ಕಂಡು ಹಸನ್ಮುಖರಾಗಿ ಹೆಜ್ಜೆ ಹಾಕಿದರು.

ಅಜ್ಜನ ಕೈಚೀಲವೂ ಸಾಕಷ್ಟು ತೂಕಭರಿತವಾಗಿದ್ದನ್ನು ಕಂಡು ನಮಗೂ ಆನಂದ, ಏನಿರಬಹುದೆಂದು ಮನದಲ್ಲೇ ಲೆಕ್ಕಾಚಾರ ಹಾಕುತ್ತಾ, ಮೌನವಾಗಿಯೇ ಹಿಂಬಾಲಿಸಿ ಎಲ್ಲರೂ ಮನೆಯೊಳಗೆ ಬಂದೆವು. ಚೀಲದಿಂದ ನೀಲಂ ಮಾವಿನಹಣ್ಣಗಳು ಹೊರಬಿದ್ದವು.

" ನಾನೇ ತುಂಡು ಮಾಡಿ ಕೊಡ್ತೇನೆ, ಅಲ್ಲಿರ್ಲಿ " ಅಜ್ಜನ ಅರ್ಡ.

" ಈಗಲೇ ಅಜ್ಜಂಗೆ ಉಪದ್ರ ಕೊಡ್ಬೇಡಿ, ಕಾಫೀ ತಿಂಡಿ ಆಗ್ಲೀ " ಅಮ್ಮನ ಮಿಂಚುವಾಣಿ ಅಡುಗೆಮನೆಯಿಂದ ತೇಲಿ ಬಂದಿತು.

" ಮಿಂಚೂ, ರಾತ್ರೀಗೆ ಏನಡಿಗೆ ಮಾಡ್ತೀಯ " ಅಜ್ಜನ ಧ್ವನಿ.

ಕುಕ್ಕಿಲದ ಮನೆಸುದ್ದಿ, ಅತ್ತೆಸೊಸೆಯರ ತಾಕಲಾಟ, ನೆರೆಕರೆಯವರ ಹಕೀಕತ್ತು, ಗೇಣಿಗಿದ್ದವರ ಡೌಲು, ಇತ್ಯಾದಿ ಸಮಾಚಾರಗಳೆಲ್ಲ ಅಮ್ಮನ ಮುಂದೆ.

ಅಜ್ಜ ಕುಕ್ಕಿಲ ಕೃಷ್ಣ ಭಟ್ಟರು ಬಹು ಶ್ರುತ ವಿದ್ವಾಂಸರು ಮಾತ್ರವಲ್ಲದೆ ದೊಡ್ಡ ಜಮೀನ್ದಾರರಾಗಿದ್ದುಕೊಂಡು, ಸ್ವತಃ ಕೃಷಿ ಪಂಡಿತರು. ಅವರೇ ನೆಟ್ಟ ಮಾವಿನ ಮರದ ಹಣ್ಣುಗಳನ್ನು ನಾವೆಲ್ಲ ತಿನ್ನದಿದ್ದರೆ ಹೇಗೆ ?

ಕತ್ತಲಾಗುತ್ತಿದ್ದಂತೆ ಅಜ್ಜ " ಚೆಸ್ ಬೋರ್ಡ್ ತಾ " ಎಂದರು. ರಂಗನಾಥ ಅದಕ್ಕಾಗಿಯೇ ಕಾದಿದ್ದವನಂತೆ ಬೋರ್ಡ್ ಬಿಡಿಸಿ, ಕಾಯಿಗಳನ್ನು ಜೋಡಿಸಿ ಅಜ್ಜನ ಮುಂದೆ ಕುಳಿತ. ಆಯ್ತು, ಇನ್ನು ಇಹಲೋಕದ ಪರಿವೆಯೇ ಇಲ್ಲದೆ ಅಜ್ಜ ಮೊಮ್ಮಗ ಆಡುತ್ತಿರುತ್ತಾರೆ. ನಾನೂ ಮೆಲ್ಲನೆದ್ದು ಬಂದು ಡ್ರಾಯಿಂಗ್ ಶೀಟ್ ಹರಿದು ತಂದು ಪೆನ್ಸಿಲ್ ಹಿಡಿದು ಅಲ್ಲೇ ಒಂದು ಕುರ್ಚಿ ಎಳೆದು ಕುಳಿತೆ. ಅಜ್ಜನೂ ಗಮನಿಸಿದರು. ನನ್ನ ಪಾಡಿಗೆ ಸುಮ್ಮನೆ ಗೆರೆಗಳನ್ನು ಎಳೆಯುತ್ತಾ ಬಂದೆ. ಸೊಳ್ಳೆ ಕಚ್ಚುತ್ತೇಂತ ಅಜ್ಜ ಒಂದು ಬೈರಾಸನ್ನು ತಲೆಗೆ ಎಳೆದು ಮುಸುಕು ಹಾಕಿಕೊಂಡಿದ್ದರು. ಒಂದೇ ಭಂಗಿಯಲ್ಲಿ ಚೆಸ್ ಬೋರ್ಡ್ ಕಡೆ ದೃಷ್ಟಿ ನೆಟ್ಟಿದ್ದ ಚಿತ್ರಣ ನನ್ನ ಪೆನ್ಸಿಲ್ ಸ್ಕೆಚ್ ನಲ್ಲಿ ದಾಖಲಾಯಿತು. ಇವೆಲ್ಲ ನಡೆದು ಸುಮಾರು ನಲ್ವತ್ತು ವರ್ಷಗಳೇ ಕಳೆದಿವೆ. ಆ ಚಿತ್ರ ಬಿಡಿಸಿದ ಕಾಗದದ ತುಂಡು ಈಗಲೂ ಇದೆ.


<><><> <><><> <><><>


ಕಂಪ್ಯೂಟರ್ ಹಾಗೂ ಟೀವಿ ತಾಂತ್ರಿಕತೆಯಲ್ಲಿ ಏನೇ ಹೊಸ ಆವಿಷ್ಕಾರ ಬಂದರೂ ನಮ್ಮ ಮನೆಗೆ ಬಂದೇ ಬರುತ್ತದೆ ಎಂದು ಈ ಹಿಂದೆಯೇ ಬರೆದಿದ್ದೇನೆ. ಹಾಗೇನೇ ಐಫೋನ್ ಕೂಡಾ ಬಂದಿತು. ಆ ನಂತರದ್ದು ಆಪಲ್ ಟಿವಿ. ಇದೂಂದು ಪುಟ್ಟ ಪೆಟ್ಟಿಗೆ. ಆ್ಯಪಲ್ ಟಿವಿಯ ವಿಶೇಷತೆಯೆಂದರೆ ಐಫೋನ್, ಐಪ್ಯಾಡ್ ನಿಂದ ವಿಡಿಯೋವನ್ನು ಟಿವಿಯಲ್ಲಿ ಕಾಣುವಂತೆ ಮಾಡಬಹುದು. ಕಂಪ್ಯೂಟರ್ ಇದ್ದರೆ ಅದರಲ್ಲಿ ಪ್ಲೇ ಮಾಡಿದ ವಿಡಿಯೋ ಅಥವಾ ಚಲನಚಿತ್ರವನ್ನು ಟಿವಿಯಲ್ಲಿ ನೋಡಬಹುದು. ಇದು ಕೂಡಾ ಭಾರತೀಯ ಮಾರುಕಟ್ಟೆಗೆ ಬರುವ ಮೊದಲೇ ನಮ್ಮ ಹಿರಣ್ಯಕ್ಕೆ ಬಂದಾಗಿದೆ. ಆ ಸಮಯದಲ್ಲಿ ನಮ್ಮ ಸೋದರಳಿಯ ಕೃಷ್ಣಕುಮಾರ್ ಕೆನಡಾದಲ್ಲಿದ್ದ, ಅವನು ಊರಿಗೆ ಬರಬೇಕಾದರೆ ಈ ಬಾಕ್ಸ್ ಕೂಡಾ ನಮ್ಮವರ ಅಣತಿಯಂತೆ ಬಂದಿದೆ.

ಐಫೋನ್ ಯಾವಾಗ ಮನೆಗೆ ಬಂದಿತೋ, ಆಗಲೇ ನಮ್ಮವರು ಹೇಳಿದ್ದು,

" ನೋಡು, ನಿನ್ನ ಹಳೇ ಚಿತ್ರ ಎಲ್ಲ ತಂದ್ಕೊಡು, ಫೋಟೋ ತಗೆದಿಟ್ಕೊಂಡ್ರೆ ಯಾವತ್ತಿಗೂ ಉಳಿಯುತ್ತೆ, ಇಲ್ಲಾಂದ್ರೆ ಹಾಳಾಗೋದೇ..."

ಇರಬಹುದೇನೋ, ಚಿತ್ರಗಳ ಫೈಲ್ ಬಿಡಿಸಿ, ಒಂದೊಂದಾಗಿ ಇವರೆದುರು ಇಡುತ್ತಾ ಬಂದೆ. ಇವರೂ ಕ್ಲಿಕ್ಕಿಸುತ್ತಾ ಹೋದರು....

" ಅರೆ, ಇದೇನಿದು ನನ್ನಜ್ಜನ ಚಿತ್ರ, ಯಾರು ಶಾಯಿ ಚೆಲ್ಲಿದ್ದು.." ಬೇಜಾರಾಗಿ ಬಿಟ್ಟಿತು.

ಇದನ್ನು ಅಳಿಸಲು ಸಾಧ್ಯವೇ, ಅದೂ ಈ ಹರುಕುಮುರುಕು ಕಾಗದದಿಂದ.

" ಛಿ, ಏನಾಗ್ಹೋಯ್ತು....ಎಲ್ಲ ಮಕ್ಕಳ ಕೆಲಸ, ಆಗಾಗ ತೆಗ್ದು ನೋಡೂದು, ಹಾಳು ಮಾಡೂದು ..."

" ಅದು ಇರ್ಲಿ ಹಾಗೇ, ಅದನ್ನೆಲ್ಲ ಸರಿ ಮಾಡೂದು ಸುಲಭ. Picture apps ಬೇಕಾದಷ್ಟು ಇವೆ. ನಿಧಾನವಾಗಿ ಕಲಿ. ಈ ಫೋಟೋ ಎಲ್ಲಾನೂ Dropbox ನಲ್ಲಿ ಹಾಕಿಡೂದು. ಬೇಕಾದಾಗ ನೋಡಿದ್ರಾಯ್ತು...ಎಲ್ಲಾನೂ ಕಲೀ..."ಅಜ್ಜ ಕುಕ್ಕಿಲ ಕೃಷ್ಣ ಭಟ್ಟರ ಮಡಿಲಲ್ಲೇ ಆಡಿ ದೊಡ್ಡವಳಾದವಳಾದರೂ ಅವರ ಬಗ್ಗೆ ಬರೆಯುವ ಶಕ್ತಿ ನನಗೆ ಇಲ್ಲ. ಆದರೂ ಇಲ್ಲಿ ಸ್ವಲ್ಪವಾದರೂ ಬರೆಯಲೇ ಬೇಕಾಗಿದೆ. ಬಹು ಭಾಷಾ ಪಂಡಿತರಾದ ಅವರ ಕೊನೆಯ ಪ್ರಕಟಿತ ಕೃತಿ - ದ್ರಾವಿಡ ಛಂದಸ್ಸು, ಇದು ಅವರ ಮರಣಾನಂತರ ಶತಾವಧಾನಿ ಡಾ.ಅರ್. ಗಣೇಶರ ಸಂಪಾದಕತ್ವದಲ್ಲಿ ಪ್ರಕಟಿತವಾಯಿತು. ಸಂಗೀತ ಹಾಗೂ ನೃತ್ಯ ಶಾಸ್ತ್ರಗಳ ಆಳವಾದ ಅಧ್ಯಯನ ಹಾಗೂ ಜ್ಞಾನದಿಂದ ಯಕ್ಷಗಾನದ ಶಾಸ್ತ್ರೀಯತೆಯನ್ನು ಪ್ರಕಟಪಡಿಸಿದವರೂ, ಪಾರ್ತಿಸುಬ್ಬನ ಯಕ್ಷಗಾನಗಳು - ಕೃತಿಯ ಸಂಪಾದನೆ ಕುಕ್ಕಿಲರ ಸಂಶೋಧನಾ ಪ್ರವೃತ್ತಿಗೆ ಸಾಕ್ಷಿಯಾಗಿವೆ. ಇದಲ್ಲದೆ ಭಾರತೀಯ ಸಂಗೀತ ಶಾಸ್ತ್ರ, ಶಿಲಪ್ಪದಿಕಾರಂ ( ತಮಿಳು ಕಾವ್ಯದ ಅನುವಾದ ), ನಾಗವರ್ಮನ ಛಂದೋಂಬುಧಿ ( ಸಂಪಾದಿತ ). 1975ರಲ್ಲೇ ಅವರು ಬರವಣಿಗೆಯನ್ನು ನಿಲ್ಲಿಸಿದ್ದರು, ವಿಟ್ಲದ ಸಮೀಪವಿರುವ ಕುಕ್ಕಿಲದ ಸ್ವಗೃಹದಲ್ಲಿ ವಿಶ್ರಾಂತ ಜೀವನ ನಡೆಸಿದವರು. 1960 -70ರ ದಶಕದಲ್ಲಿ ಮೈಸೂರಿನಲ್ಲಿ ವಾಸವಾಗಿದ್ದ ಕುಕ್ಕಿಲ ಕೃಷ್ಣಭಟ್ಟರು ಮಾನಸಗಂಗೋತ್ರಿಯ ಸಂಶೋಧಕ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಾಗಿದ್ದರು. ಪಂಡಿತಶ್ರೇಷ್ಠರಾದ ಸೇಡಿಯಾಪು ಕೃಷ್ಣ ಭಟ್ಟರು ಹಾಗೂ ನನ್ನಜ್ಜ ಬಾಲ್ಯ ಸ್ನೇಹಿತರು. ಇವರಿಬ್ಬರ ಅಜ್ಜನಮನೆ ಬಡೆಕ್ಕಿಲ ಆಗಿದ್ದುದರಿಂದ ಸಂಬಂಧಿಕರೂ ಆಗಿದ್ದರು.

ಶಾಯಿಕಲೆಯನ್ನು ಅಳಿಸಿದಾಗ, ಇಷ್ಟು ದಿನವೂ photo apps ಗಳೊಂದಿಗೆ ಏನೇನೋ ಬೆರಳ ತುದಿಯ ಕೈಚಳಕಗಳ ಪ್ರಯೋಗಗಳನ್ನು ಮಾಡುತ್ತಾ ಇದ್ದಿದ್ದು ಸಾರ್ಥಕವಾಯ್ತು ಅಂತ ಅನ್ನಿಸದಿರಲಿಲ್ಲ.Posted via DraftCraft app