Pages

Ads 468x60px

Monday, 15 May 2017

ಮಾವಿನಹಣ್ಣಿನ ದಾಲ್
   
ನೆರೆಮನೆಯ ಆಯುರ್ವೇದ ವೈದ್ಯರಾದ ವೆಂಕಟ್ರಮಣರು ಊರಿಗೆ ಹೋದಾಗ ತಂದ ಮಾವಿನಹಣ್ಣುಗಳನ್ನು ಕೊಟ್ಟರು.   ಈಗ ಮಾವಿನಹಣ್ಣುಗಳ ಕಾಲ ಅಲ್ವೇ,  ಆದ್ರೂ ಈ ವರ್ಷ ಮಾವಿನ ಬೆಳೆ ತುಸು ಕಮ್ಮಿಯೇ.   ಪುಟ್ಟ ಗಾತ್ರದ ಈ ಮಾವಿನಹಣ್ಣುಗಳಲ್ಲಿ ಸಿಪ್ಪೆ ಗೊರಟು ಬಿಟ್ರೆ ಮತ್ತೇನಿಲ್ಲವಾದರೂ ಹಣ್ಣಿನ ರಸದೊಂದಿಗೆ ವಿಶೇಷವಾದ ಸುವಾಸನೆ.    ಈ ಪರಿಮಳವು ಒಂದು ಮರದಿಂದ ಇನ್ನೊಂದು ಮರಕ್ಕೆ ಭಿನ್ನ,  ಹೋಲಿಕೆ ಮಾಡಲು ಸಾಧ್ಯವೇ ಇಲ್ಲ.   ಇದುವೇ ಕಾಟ್ ಮಾವುಗಳ ವಿಶೇಷತೆ.   ಇಂತಹ ಹಣ್ಣನ್ನು ಒಂದು ಗೊಜ್ಜು ಮಾಡಿ ಉಂಡಾಯಿತು.


" ಗೊಜ್ಜು ಹೇಗೆ ಮಾಡಿದ್ದು? "

ಐದಾರು ಹಣ್ಣುಗಳನ್ನು ತೊಳೆದು,  ತೊಟ್ಟು ತೆಗೆದು,  ಸಿಪ್ಪೆ ಬಿಡಿಸಿ.    ಸಿಪ್ಪೆಗಳನ್ನು ನೀರೆರೆದು ಗಿವುಚಿ ರಸ ತೆಗೆದು ಮಾವಿನಹಣ್ಣುಗಳೊಂದಿಗೆ ಬೇಯಿಸಿ.   ರುಚಿಗೆ ಉಪ್ಪು ಹಾಗೂ ಸಿಹಿಗೆ ಸಾಕಷ್ಟು ಬೆಲ್ಲದೊಂದಿಗೆ ಕುದಿಸಿ.  ಹಸಿಮೆಣಸು ಇದ್ದರೆ ಹಾಕಬಹುದು.   ಸಾಸಿವೆ, ಒಣಮೆಣಸು,  ಇಂಗು ಹಾಗೂ ಕರಿಬೇವು ಒಗ್ಗರಣೆ ಕೊಡುವಲ್ಲಿಗೆ ಗೊಜ್ಜು ಆಯ್ತು.   ಇದು ಮಧ್ಯಾಹ್ನದೂಟಕ್ಕೆ ಹಬ್ಬದುಣಿಸು.


ನಾಳ ಮುಂಜಾನೆಯ ತಿಂಡಿ ಚಪಾತಿ,   ಅದಕ್ಕೊಂದು ದಾಲ್ ಆಗಲೇಬೇಕು,  ಸೆಕೆಯ ವಾತಾವರಣ ಇರುವ ಹೊತ್ತಿನಲ್ಲಿ ಹೆಸ್ರುಬೇಳೆಯ ದಾಲ್ ದೇಹಕ್ಕೆ ತಂಪು.   ಅವಶ್ಯಕತೆಗೆ ತಕ್ಕಷ್ಟು ಹೆಸ್ರುಬೇಳೆಯನ್ನು ಬೇಯಿಸುವುದು,   ಕುಕರ್ ಒಂದು ವಿಸಿಲ್ ಕೂಗಿದಾಗ ಬೇಳೆ ಬೆಂದಾಯ್ತು.


ಒಂದು ಮಾವಿನಹಣ್ಣು ಗಿವುಚಿಟ್ಟುಕೊಳ್ಳುವುದು,   ಮಾವಿನ ಹಣ್ಣಿನ ರಸವನ್ನು ಬೇಯಿಸಿಟ್ಟ ಹೆಸ್ರುಬೇಳೆಗೆ ಎರೆದು,   ರುಚಿಕರವಾಗಲು ಬೇಕಾದಂತಹ ಉಪ್ಪು ಹಾಗೂ ಸಕ್ಕರೆ ಕೂಡಿ ತುಪ್ಪದಲ್ಲಿ ಒಗ್ಗರಣೆ ಕೊಡುವಲ್ಲಿಗೆ ಮಾವಿನಹಣ್ಣಿನ ದಾಲ್ ಸಿದ್ಧವಾಗಿದೆ.   Saturday, 6 May 2017

ಮಸಾಲಾ ಮಾವಿನಕಾಯಿ
                 ನಮ್ಮ ಅಡಿಕೆ ತೋಟದ ಆವರಣದಲ್ಲಿ ಮಾವಿನ ಋತು ಇನ್ನೂ ಆರಂಭವಾಗಿಲ್ಲ,  ಆದರೇನಂತೆ,  ತರಕಾರಿ ಸಂತೆಯಿಂದ ಇನ್ನಿತರ ಮಾಲುಗಳೊಂದಿಗೆ ಒಂದು ತೋತಾಪುರಿ ಮಾವಿನಕಾಯಿ ಬಂದಿತು.   " ಒಂದೇ ಮಾವಿನಕಾಯಿ ಯಾಕೆ ತಂದಿದ್ದು?   ಏಳೆಂಟಾದರೂ ಬೇಕಾಗಿತ್ತು,  ಬೆಂಗಳೂರಿನಲ್ಲಿರುವ ಮಕ್ಕಳಿಗೆ ಉಪ್ಪಿನಕಾಯಿ ಹಾಕಿ ಕೊಡಬಹುದಾಗಿತ್ತು... "


ಇವರು ಉತ್ತರ ಕೊಡಲಿಲ್ಲ.   ನಾನೂ ಮಾವಿನಕಾಯಿಯ ಗೋಜಿಗೇ ಹೋಗಲಿಲ್ಲ.   ತರಕಾರಿಗಳು ಮುಗಿಯುತ್ತಿದ್ದಂತೆ,   ಅಡುಗೆಮನೆಯಲ್ಲಿ ಬಿಡುವು ದೊರೆತಾಗ ಈ ಮಾವಿನಕಾಯಿ ಕತ್ತರಿಸಲ್ಪಟ್ಟಿತು.  ಹೋಳುಗಳನ್ನು ಜಾಡಿಯಲ್ಲಿ ತುಂಬಿಸಿ ಎರಡು ದೊಡ್ಡ ಚಮಚ ಪುಡಿಯುಪ್ಪು ಬೆರೆಸಿದ್ದೂ ಆಯ್ತು.  ಒಂದು ಚಿಟಿಕೆ ಅರಸಿಣವೂ ಬಿದ್ದಿತು.


ನನ್ನ ಬಳಿ ಇದ್ದಂತಹ ಉಪ್ಪಿನಕಾಯಿ ಮಸಾಲೆ,  ವಾರದ ಹಿಂದೆ ಬೀಂಬುಳಿ ಉಪ್ಪಿನಕಾಯಿ ಹಾಕಿದ್ದಾಗ ಮುಗಿದಿತ್ತು,   ಮಾತ್ರವಲ್ಲದೆ ಮಕ್ಕಳೊಂದಿಗೆ ಬೆಂಗಳೂರು ಸೇರಿತ್ತು.  ನಮ್ಮ ದಿನನಿತ್ಯದ ಊಟಕ್ಕೆ ಉಪ್ಪಿನಕಾಯಿ ಇಲ್ಲದಂತಾಗುವ ಮೊದಲೇ ಈ ಮಾವಿನಕಾಯಿಗೆ ಹೇಗಾದರೂ ಮಾಡಿ ಉಪ್ಪಿನಕಾಯಿ ರೂಪ ಕೊಡೋಣಾ ಅಂತಿದ್ರೆ...  ಈಗ ಏನು ಮಾಡೋಣ?


ಒಂದು ಮಾವಿನಕಾಯಿ ಅಲ್ವೇ,  ನಾವೇ ಮಸಾಲೆ ಸಿದ್ಧಪಡಿಸೋಣ.


" ಹೇಗೇ? "


ಏಳೆಂಟು ಒಣಮೆಣಸಿನಕಾಯಿಗಳು 

ಒಂದು ಹಿಡಿ ಸಾಸಿವೆ 

ಕಡ್ಲೆ ಗಾತ್ರದ ಇಂಗು 

ಅರ್ಧ ಚಮಚ ಜೀರಿಗೆ

ನಾಲ್ಕಾರು ಕಾಳುಮೆಣಸು


ಎಣ್ಣೆ ಬಯಸದ ನಾನ್ ಸ್ಟಿಕ್ ಬಾಣಲೆಯಲ್ಲಿ ಬಿಸಿ ಮಾಡಿಕೊಳ್ಳಿ,  ಹುರಿಯುವುದೇನೂ ಬೇಡ.  ಮಿಕ್ಸಿಯಲ್ಲಿ ಬೀಸಬಹುದಾದಷ್ಟು ಬೆಚ್ಚಗಾದರೆ ಸಾಕು.  ಬಿಸಿಯಾರಿದ ನಂತರ ನಾಲ್ಕು ಸುತ್ತು ತಿರುಗಿಸಿದಾಗ ನುಣುಪಾದ ಹುಡಿ ಆಯ್ತು.


ಇದನ್ನು ಈಗಾಗಲೇ ಉಪ್ಪು ಬೆರೆಸಿಟ್ಟ ಮಾವಿನ ಹೋಳುಗಳಿಗೆ ಬೆರೆಸುವುದು.  ಬೇಕಿದ್ದರೆ ಎಳ್ಳೆಣ್ಣೆಯ ಒಗ್ಗರಣೆ ಮೇಲಿಂದ ಹಾಕಬಹುದು,   ನಾನು ಹಾಕಿಲ್ಲ,  ಮನೆಯಲ್ಲಿ ಎಲ್ಲರಿಗೂ ಎಣ್ಣೆ ಹಾಕಿದ ಉಪ್ಪಿನಕಾಯಿ ಹಿಡಿಸುವುದಿಲ್ಲ.   ಏನೇ ನಳಪಾಕ ಮಾಡುವುದಿದ್ದರೂ ಮನೆಮಂದಿಯ ಅಭಿರುಚಿಯನ್ನೂ ಗಮನದಲ್ಲಿಟ್ಟುಕೊಂಡರೆ ಕ್ಷೇಮ.


ಇನ್ನೂ ಒಂದು ಚಮಚ ಉಪ್ಪು ಕೂಡಿಸಿ ಜಾಡಿಯ ಬಾಯಿ ಬಿಗಿಯಿರಿ.  ಎರಡು ಗಂಟೆಗೊಮ್ಮೆ ಜಾಡಿಯನ್ನು ಕುಲುಕಿಸುತ್ತಿರಿ,  ಉಪ್ಪು ಖಾರ ಹೋಳುಗಳಿಗೆ ತಲುಪಬೇಡವೇ...


ರಸ ಒಸರುತ್ತಿರುವ ಮಾವಿನ ಹೋಳುಗಳನ್ನು ಕಂಡಾಗಲಂತೂ ತಟ್ಟೆಗೆ ಬಡಿಸಿ ಊಟಕ್ಕೆ ಸಿದ್ಧರಾಗಿ.   ಉಪ್ಪಿನಕಾಯಿಗಾಗಿ ಅಮ್ಮನ ಮನೆಗೆ ಹೋಗಬೇಕಾಗಿಲ್ಲ ಎಂದು ತಿಳಿದಿರಲ್ಲ.   ಹ್ಞಾ, ಇನ್ನಷ್ಟು ರುಚಿಕರವಾಗಲು ಶುಂಠಿ, ಹಸಿಮೆಣಸು,  ಲಿಂಬೆಹಣ್ಣು ಹಾಕಿರಿ,   


ಹೇಗೇ,  ಶುಂಠಿ ಪೇಸ್ಟ್  ಹಾಕಿದ್ರಾಯ್ತು ಅಂತೀರಾ ?

ಅದೆಲ್ಲ ಚೆನ್ನಾಗಿರದು,  ಒಂದು ಇಂಚು ಉದ್ದದ ಶುಂಠಿಯ ಸಿಪ್ಪೆ ಹೆರೆದು ತೆಳ್ಳಗೆ ಕತ್ತರಿಸಿದರಾಯಿತು.

ಹಸಿಮೆಣಸು ಕೂಡಾ ಉದ್ದುದ್ದ ಕತ್ತರಿಸಿದರೆ ಸಾಕು.

ಲಿಂಬೆ ಹಣ್ಣಿನ ರಸ ಹಿಂಡಿ ಹಾಕುವುದೂ ಇದೆ,  ನಾವು ಚಿಕ್ಕ ಚಿಕ್ಕ ಹೋಳು ಮಾಡ್ಬಿಟ್ಟು ಸೇರಿಸೋಣ,  ಆ್ಯಂಟಿ ಓಕ್ಸಿಡೆಂಟ್ ಗುಣಧರ್ಮದ ಲಿಂಬೆಯಸಿಪ್ಪೆಯನ್ನು ಬಿಸಾಡದಿರೋಣ.


ಈ ಉಪ್ಪಿನಕಾಯಿ  ಸಿದ್ಧಪಡಿಸಿ ಎರಡು ದಿನ ಆಗಿತ್ತಷ್ಟೇ,  ಮಂಗಳೂರಿನಿಂದ ಗಿರೀಶ್ ಬಂದಿದ್ದ,  ಊಟಕ್ಕೆ ಬಡಿಸಿದಾಗ ಸುಮ್ಮನಿದ್ದವನು ಸಂಜೆಯ ಉಪ್ಪಿಟ್ಟು ಚಹಾ ಸ್ವೀಕರಿಸುತ್ತ,   " ಎಲ್ಲಿ ಉಪ್ಪಿನ್ಕಾಯಿ? ಬರಲೀ..  " ಅನ್ನೋದೇ!   
ಟಿಪ್ಪಣಿ:   ಉತ್ಥಾನ ಮಾಸಪತ್ರಿಕೆಯ ಎಪ್ರಿಲ್,  2017ರ ಸಂಚಿಕೆಯಲ್ಲಿ ಪ್ರಕಟಿತ ಬರಹ.

 

Tuesday, 2 May 2017

ಕರಂಡೆಕಾಯಿ ಕಡಿ
                   
ಮಾವಿನ ಉಪ್ಪಿನಕಾಯಿಗೆ ಮಾಡಿದಂತಹ ಮಸಾಲೆ ತುಸು ಉಳಿಯಿತು.   ಇನ್ನೊಮ್ಮೆ ಮಾವಿನಕಾಯಿಗಳು ಬಂದಾಗ ಇರಲಿ ಎಂದು ತೆಗೆದಿರಿಸಿದಂತಹ ಮಸಾಲೆಗೆ ಗತಿ ಕಾಣದಿರಲು...


ಊಟ ಮಾಡುತ್ತ ಇದ್ದಾಗ,   " ಉಪ್ಪಿನಕಾಯಿ ಹೊರಡಿ (ಮಸಾಲೆ ) ಇದೆ,  ಕರಂಡೆಕಾಯಿ ಪೇಟೆಯಲ್ಲಿ ಸಿಗುತ್ತೇಂತ ಚೆನ್ನಪ್ಪ ಹೇಳಿದ... "


" ಹೌದಾ,  ಯಾವ ಅಂಗಡಿಯಲ್ಲಿ ?  ನಾನು ಕಾಣಲಿಲ್ಲ. "

" ಅವನ ಹತ್ರಾನೇ ಕೇಳಿ...  ನಂಗೇನು ಗೊತ್ತು ?   ಹೆಚ್ಚು ತರೂದೇನೂ ಬೇಡ,  ಒಂದು ಸೇರು ಆಗುವಷ್ಟು ಸಾಕು. "


ಸಂಜೆ ಹಾಲು ಬರುವಾಗ ಕರಂಡೆಯೂ ಬಂದಿತು.   ಅದನ್ನು ತೊಳೆದು ನೀರ ಪಸೆ ಆರಲು ಗೋಣಿತಾಟಿನಲ್ಲಿ ಬಿಡಿಸಿ ಹಾಕಿದ್ದೂ ಆಯ್ತು.   ರಸ್ತೆ ಪಕ್ಕದ ಮಾಲು,  ಮಣ್ಣು,  ಕಸಕಡ್ಡಿ,  ಕೊಳೆತ ಕಾಯಿಗಳಿಂದ ಮುಕ್ತವಾದ ಕರಂಡೆಕಾಯಿಗಳು ಶುಭ್ರವಾದ ಜಾಡಿಯೊಳಗೆ ಸೇರಿದುವು.   ಮೇಲಿನಿಂದ ಒಂದು ಪಾವು ಉಪ್ಪು ತುಂಬಿಸಿ ಮುಚ್ಚಿ ಆಯಿತು.


ಮುಂಜಾನೆ ಎಂದಿನಂತೆ ದೋಸೆ,   ಅದಕ್ಕೊಂದು ಚಟ್ಣಿ,   ಈ ದಿನ ಕರಂಡೆಕಾಯಿ ಹಾಕೋಣ.   ಹುಳಿ ಹಣ್ಣಲ್ವೇ,  ಎರಡು ಕರಂಡೆಕಾಯಿ ಹಾಗೂ ಒಂದು ಹಸಿಮೆಣಸು ಕೂಡಿ ತೆಂಗಿನಕಾಯಿ ಅರೆದಾಗ ಚಟ್ಣಿ ಆಯ್ತು,  ಭಲೇ ರುಚಿ ಕಣ್ರೀ...


ಆಯಾ ಕಾಲದಲ್ಲಿ ಸಿಗುವ ಫಲವಸ್ತುಗಳನ್ನು ಸಂದರ್ಭಾನುಸಾರ ಅಡುಗೆಯಲ್ಲಿ ಬಳಸುವುದೇ ಜಾಣತನ.   ನನ್ನ ಹೊಸ ಪ್ರಯೋಗ ನಮ್ಮವರಿಗೂ ಹಿಡಿಸಿತೂ ಅಂತ ಕಾಣುತ್ತೆ,   ಸಂಜೆ ಪುನಃ ಕರಂಡೆಕಾಯಿಗಳು ಬಂದುವು.


" ಇದನ್ನೂ ಉಪ್ಪಿನಲ್ಲಿ ಹಾಕಿಡು,  ಉಪ್ಪಿನಕಾಯಿ ಎಷ್ಟಿದ್ರೂ ಮಕ್ಕಳಿಗೆ ಕೊಡಲಿಕ್ಕೂ ಬೇಕಲ್ಲ,  ಮುಗೀತದೆ... " ಅಂದರು.


ಸರಿ,  ಈ ಕರಂಡೆಕಾಯಿಗಳೂ ತೊಳೆಯಲ್ಪಟ್ಟು ಇನ್ನೊಂದು ಜಾಡಿಯಲ್ಲಿ ಉಪ್ಪು ತುಂಬಿ ಕುಳಿತುವು,  ನನ್ನ ಅಡುಗೆ ಪ್ರಯೋಗಗಳಿಗೆ ಒಂದು ಕುಡ್ತೆ ಕರಂಡೆಕಾಯಿಗಳನ್ನು ಬೇರೆ ತೆಗೆದಿಟ್ಕೊಂಡಿದ್ದೂ ಆಯ್ತು.


" ಹೌದಾ,  ಇದೂ ಚಟ್ಣಿಯಾ.. "

" ನಾಳೆ ಚಪಾತಿ ಮಾಡೋಣಾಂತಿದೆ,   ಚಪಾತಿಗೆ ಚಟ್ಣಿ ಒಗ್ಗುವಂತಿಲ್ಲ...  ಅದಕ್ಕೊಂದು ಕೂಟು ಆಗ್ಬೇಕಲ್ಲ,  ನಾಳೆ ಮುಂಜಾನೆ ನೋಡೋಣ,  ಈಗ ಚಪಾತಿಗೆ ಹಿಟ್ಟು ಕಲಸಿ ಇಡೂದು.


2 ಲೋಟ ಗೋಧಿಹುಡಿ

ಒಂದು ಲೋಟ ಬಿಸಿನೀರು

ರುಚಿಗೆ ಉಪ್ಪು


ಒಂದು ತಪಲೆಗೆ ಎಲ್ಲವನ್ನೂ ಸುರುವಿ ಕಲಸಿ, ನಾದಿದಷ್ಟೂ ಉತ್ತಮ,  ಮುಚ್ಚಿ ಇಡುವುದು.  ರಾತ್ರಿ ಕಲಸಿದ ಹಿಟ್ಟಿನಿಂದಾಗಿ  ಮುಂಜಾನೆಯ ಚಪಾತಿ ಮೃದುವಾಗಿ ಬರುವುದು.


   ಕರಂಡೆಕಾಯಿ ಕಡಿ:


ಒಂದು ದೊಡ್ಡ ಗಾತ್ರದ ಬಟಾಟೆಯ ಸಿಪ್ಪೆ ಹೆರೆದು ತೆಗೆಯಿರಿ,   ಚೂರಿಯಿಂದ ಅಲ್ಲಲ್ಲಿ ಗೀರು ಹಾಕಿ ಬೇಯಿಸಿ,  ಬೇಗನೇ ಬೇಯುತ್ತದೆ ಹಾಗೂ ಬೆಂದ ನಂತರ ಸೌಟು ಆಡಿಸಿದಾಗ ತಾನಾಗಿಯೇ ಹೋಳುಗಳಾಗುತ್ತವೆ.


ರುಚಿಗೆ ತಕ್ಕಷ್ಟು ಉಪ್ಪು,  ಹುಳಿ...  ಹ್ಞಾ,  ಈಗ ಕರಂಡೆಗಳನ್ನು ಹಾಕುವ ಸಮಯ,  ಏಳೆಂಟು ಕರಂಡೆಗಳನ್ನು ಹಾಕಿರಿ.


2 ಚಮಚ ಕಡಲೆ ಹಿಟ್ಟನ್ನು  ನೀರೆರೆದು ಗಂಟುಕಟ್ಟದಂತೆ ಕಲಸಿ ದ್ರವರೂಪಕ್ಕೆ ತನ್ನಿ.  ಈಗಾಗಲೇ ಬೆಂದು ಕುದಿಯುತ್ತಿರುವ ಮಿಶ್ರಣಕ್ಕೆ ಎರೆಯಿರಿ.


2 ಚಮಚಾ ಸಾಂಬಾರು ಹುಡಿ,  3 ಚಮಚಾ ಸಕ್ಕರೆ ಬೀಳಲಿ.   ಕರಿಬೇವು ,  ಇಂಗು ಇತ್ಯಾದಿಗಳ ಒಗ್ಗರಣೆಯೊಂದಿಗೆ ಚಪಾತಿಗೊಂದು ಕೂಟು ಸಿದ್ಧವಾಗಿದೆ.   ಕರಂಡೆಕಾಯಿಯ ಈ ಕೂಟು ವಿಶೇಷವಾದ ಪರಿಮಳವನ್ನೂ ರುಚಿಯನ್ನೂ ಕೊಟ್ಟಿತು ಎಂದು ಬೇರೆ ಹೇಳಬೇಕಾಗಿಲ್ಲ.


ತೆಂಗಿನಕಾಯಿ ಹಾಕದೆ ನಮ್ಮ ಯಾವುದೇ ಅಡುಗೆ ಆಗುವುದೇ ಇಲ್ಲ.   ಕಡಲೇ ಹಿಟ್ಟಿನ ಈ ವ್ಯಂಜನವು ಮಹಾರಾಷ್ಟ್ರ ಕಡೆಯಿಂದ ಬಂದಿದೆ.   ಸಾಮಾನ್ಯವಾಗಿ  ' ಕಡಿ '  ಎಂದು ಕರೆಯಲ್ಪಡುವ ಈ ಪದಾರ್ಥವನ್ನು ಬೇರೆ ಬೇರೆ ತರಕಾರಿಗಳ ಸಂಯುಕ್ತ ಮಿಶ್ರಣದಿಂದ ಮಾಡಬಹುದಾಗಿದೆ,  ತೊಗರಿಬೇಳೆ ಹಾಕುವ ಅಗತ್ಯ ಇಲ್ಲಿಲ್ಲ.  ಮುಂಜಾನೆಯ ತಿಂಡಿಗೂ ಮಧ್ಯಾಹ್ನದ ಊಟಕ್ಕೂ ಈ ಕಡಿ ಉಪಯುಕ್ತ.   ವಿದ್ಯುತ್ ಕೈ ಕೊಟ್ಟಾಗ ಅಡುಗೆಯೂ ನಿರಾಯಾಸವಾಗಿ ಆಯ್ತೂ ಅನ್ನಿ.                    
ಅಂದಾಜು  ಎಂಟು-ಹತ್ತು ಹಸಿರು ಬಣ್ಣದ ಎಳೆಯಕಾಯಿ ಬೇಯಿಸಿ ಗಿವುಚಿ,  ರುಚಿಗೆ ತಕ್ಕ ಹಾಗೆ ಉಪ್ಪು ಬೆಲ್ಲ ಹಾಕಿ ಕುದಿಸಿ.  ಜಜ್ಜಿದ ಬೆಳ್ಳುಳ್ಳಿ,  ಕರಿಬೇವು ಒಗ್ಗರಣೆ ಕೊಡಿ. ಗೊಜ್ಜು/ಸಾರು ಆಯ್ತು.   ಬೆಳೆದ ಕರಂಡೆಕಾಯಿಯಲ್ಲಿ ಬೀಜ ಇರುತ್ತದೆ,   ಅಡುಗೆಗೆ ಎಳೆಯದೇ ಉತ್ತಮ.   


Carissa Carandas ಎಂಬ ಸಸ್ಯಶಾಸ್ತ್ರ ನಾಮಧೇಯದ ಕರಂಡೆಕಾಯಿ ಮುಳ್ಳುಗಳಿಂದ ಕೂಡಿದ ಒಂದು ಪೊದರು ಸಸ್ಯವಾಗಿದೆ.   ಭಾರತದ ಸಸ್ಯ ಸಂಕುಲಕ್ಕೆ ಸೇರಿದ ಕರಂಡೆಯನ್ನು ಅಡುಗೆಯಲ್ಲಿ,  ಮುಖ್ಯವಾಗಿ ಉಪ್ಪಿನಕಾಯಿ ರೂಪದಲ್ಲಿ ಬಳಸುವವರೂ ನಾವೇ ಆಗಿದ್ದೇವೆ.   ಮಾವಿನಮಿಡಿ ಸಿಗದಿದ್ದರೆ ವರ್ಷದ ಬಳಕೆಗೆ ಕರಂಡೆ ಉಪ್ಪಿನಕಾಯಿ ಮಾಡಿ ಇಟ್ಟುಕೊಳ್ಳುವಂತಹುದು,  ಇದು ಕೂಡಾ ದೀರ್ಘಕಾಲ ಬಾಳ್ವಿಕೆ ಬರುತ್ತದೆ.


ಮುಳ್ಳಿನ ಗಿಡವಾದುದರಿಂದ ಬೇಲಿಯಂಚಿನಲ್ಲಿ ಸಾಲಾಗಿ ನೆಟ್ಟರೂ ಚೆನ್ನಾಗಿರುತ್ತದೆ,   ಹಣ್ಣುಗಳು ತುಂಬಿರುವ ಕಾಲಕ್ಕೆ ಬೇಲಿಯ ನೋಟ ಅತ್ಯಾಕರ್ಷಕ.  ಗುಡ್ಡಗಾಡು ಬೆಳೆಯಾದಂತಹ ಕರಂಡೆ ಆರೈಕೆಯನ್ನು ಬಯಸದು.   ಹಣ್ಣುಗಳು ಕೂಡಾ ಹಾಗೇನೇ ಕಿತ್ತು ತಿನ್ನಲು ಯೋಗ್ಯವಲ್ಲ,  ಹಲಸಿನಲ್ಲಿ ಮಯಣ ಇರುವಂತೆ ಇದರಲ್ಲಿಯೂ ಒಂದು ವಿಧವಾದ ಜಿಗುಟು ದ್ರವ ಇರುತ್ತದೆ.   ತಿನ್ನ ಬಯಸುವವರು ಉಪ್ಪಿನಲ್ಲಿ ಹಾಕಿಟ್ಟು,  ನಾಲ್ಕಾರು ದಿನಗಳಲ್ಲಿ ಉಪ್ಪುಪ್ಪಾಗಿರುವ  ಕರಂಡೆಯನ್ನು   " ಆಹ ಏನು ರುಚಿ! "  ಅನ್ನುತ್ತ ಸವಿಯಿರಿ.


ಹಲಸಿನ ಸೊಳೆ,  ಮಾವಿನಕಾಯಿ,  ಅಂಬಟೆ ಇತ್ಯಾದಿಗಳನ್ನು ಉಪ್ಪಿನಲ್ಲಿ ಶೇಖರಿಸಿ ಮಳೆಗಾಲ ಮುಗಿಯುವ ತನಕ ಖಾದ್ಯಗಳನ್ನು ತಯಾರಿಸುವಂತೆ ಕರಂಡೆಯನ್ನೂ ಇಟ್ಟುಕೊಳ್ಳಬಹುದಾಗಿದೆ.   ಹುಣಸೆಹುಳಿಯ ಬದಲು ಅಡುಗೆಯ ರುಚಿ ಹೆಚ್ಚಿಸಲು ಕರಂಡೆ ಉತ್ತಮವಾಗಿದೆ.


ಅಂದ ಹಾಗೆ ಕರಂಡೆಯಲ್ಲಿ ಕಬ್ಬಿಣಾಂಶ ಹೆಚ್ಚಿನ ಪ್ರಮಾಣದಲ್ಲಿರುವುದು.   ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಕರಂಡೆಕಾಯಿ ಉತ್ತಮ ಮನೆಮದ್ದು,  ಇದಕ್ಕೆ ಸಂಶಯ ಬೇಡ.   


ಮಳೆಗಾಲದಲ್ಲಿ ಚಿಗುರೆಲೆಗಳ ತಂಬುಳಿ ಮಾಡಿ ತಿನ್ನುವ ವಾಡಿಕೆ.   ಬೇಲಿ ಬದಿಯಿಂದ ಕರಂಡೆಯ ಕುಡಿ ಎಲೆಗಳನ್ನು ಚಿವುಟಿ ತಂದು,  ತುಪ್ಪದಲ್ಲಿ ಬಾಡಿಸಿ,  ಜೀರಿಗೆ, ತೆಂಗಿನತುರಿಯೊಂದಿಗೆ ಅರೆದು,  ಮಜ್ಜಿಗೆ ಎರೆದು,  ರುಚಿಗೆ ಉಪ್ಪು ಬಿದ್ದು,  ತಂಬುಳಿ ಸಿದ್ಧವಾಯಿತಲ್ಲ!