Pages

Ads 468x60px

Featured Posts

.

Monday, 17 February 2020

ತೊಂಡೆಯ ಹುಳಿಮೆಣಸು
ಅನ್ನದೊಂದಿಗೆ ಉಣ್ಣುವ ಹುಳಿಮೆಣಸು ಎಂಬ ಪದಾರ್ಥ ನಮ್ಮ ದಕ್ಷಿಣ ಕನ್ನಡಿಗರ ಮನೆಯಲ್ಲಿ ಒಂದು ಮಾಮೂಲಿ ಅಡುಗೆ. ಮನೆಯೊಳಗೆ ಮಾತ್ರವಲ್ಲ, ಹತ್ತೂ ಜನ ಸೇರಿದ ಸಮಾರಂಭಗಳಲ್ಲೂ ಇದನ್ನು ಮಾಡುವುದಿದೆ. ಈ ವರ್ಷ ಮೂರು ಔತಣಕುಟಗಳಲ್ಲಿ ತೊಂಡೆಕಾಯಿಯ ಹುಳಿಮೆಣಸು ಸವಿದುಣ್ಣುವ ಭಾಗ್ಯ ನನ್ನದಾಗಿತ್ತು. ಹಣ್ಣುಸೌತೆಯಿಂದ ಹುಳಿಮೆಣಸು ಮಾಡಿದಿರಾದರೆ ಅದಕ್ಕೆ ನೆರುಗಳ ಸೊಪ್ಪು ಹಾಕಿದ್ರೇನೇ ಸೊಗಸು. ತೊಂಡೆಯ ಹುಳಿಮೆಣಸು ಬೆಳ್ಳುಳ್ಳಿಯ ಒಗ್ಗರಣೆ ಬಯಸುವುದಾದರೂ ಔತಣಕೂಟದ ಅಡುಗೆಯಲ್ಲಿ ಬೆಳ್ಳುಳ್ಳಿ ನುಸುಳುವಂತಿಲ್ಲ. ಕರಿಬೇವಿನ ಒಗ್ಗರಣೆ ಬಿದ್ದರಾಯಿತು. ಮಸಾಲಾ ಸಾಮಗ್ರಿಗಳನ್ನು ಬಯಸದ ಹುಳಿಮೆಣಸು, ಮೆಣಸು, ಉಪ್ಪು, ಹುಳಿ ಇದರ ಮೂಲದ್ರವ್ಯಗಳು.

ಇಂತಹ ಹುಳಿಮೆಣಸು , ನನ್ನ ಅಡುಗೆಮನೆಯಲ್ಲಿ ಹೊಸರೂಪ ಪಡೆಯಿತು, ಎಲ್ಲರ ಮೆಚ್ಚುಗೆಗೂ, ಮುಖ್ಯವಾಗಿ ಗೌರತ್ತೆಯ ಶಹಭಾಷ್ ಗಿರಿ ದಕ್ಕಿತು. ಹಾಗೇನೇ ಬ್ಲಾಗ್ ಬರಹವಾಗಿ ನಿಮ್ಮ ಮುಂದಿದೆ.

20 - 25 ತೊಂಡೆಕಾಯಿಗಳು, ಹಣ್ಣುಹಣ್ಣಾದ್ದು ಬೇಡ.
ಅರ್ಧ ಕಡಿ ತೆಂಗಿನ ತುರಿ,
4 ಒಣಮೆಣಸು, ಹುರಿಯಬೇಕಿಲ್ಲ, ಮೆತ್ತಗಾಗಲು ನೀರಿನಲ್ಲಿ ಹಾಕಿಟ್ಟಿರಿ.
ರುಚಿಗೆ ತಕ್ಕಷ್ಟು ಹುಳಿ, ಈಗ ಹೊಸ ಹುಳಿಯ ಕಾಲ...
ಕಾಲು ಚಮಚ ಅರಸಿಣ ಹುಡಿ, ಹಸಿ ಅರಸಿಣ ಇದ್ದರೆ ಉತ್ತಮ.
ರುಚಿಗೆ ಬೇಕಿದ್ದರೆ ಬೆಲ್ಲ.

ತೊಂಡೆಕಾಯಿಗಳನ್ನು ತೊಳೆದು ಗುಂಡುಕಲ್ಲಿನಲ್ಲಿ ಜಜ್ಜಿಕೊಳ್ಳಿ, ಬೀಜಗಳು ಹಾರುವಂತೆ ಗುದ್ದಬಾರದು.
ಕುಕ್ಕರಿನಲ್ಲಿ ಉಪ್ಪು ಸಹಿತವಾಗಿ ಬೇಯಿಸಿ, ಒಂದು ಸೀಟಿ ಸಾಕು, ಪಿಚಿಪಿಚಿಯಾಗುವಷ್ಟು ಬೇಯಬಾರದು.

ತೆಂಗಿನತುರಿ, ಅರಸಿಣ, ಮೆತ್ತಗಾದ ಒಣಮೆಣಸು, ಹುಳಿ ಕೂಡಿ ಅರೆಯಿರಿ.

ಅರೆ! ಇದರಲ್ಲೇನು ಹೊಸತನ ಬಂತು?

ನೋಡ್ತಾ ಇರಿ, ಕೊತ್ತಂಬರಿ ಸೊಪ್ಪು ತುಂಬಾನೇ ಇತ್ತು ಕಣ್ರೀ.. ಅದಕ್ಕೊಂದು ದಾರಿ ತೋರಿಸೋಣ.
ಒಂದು ಕಟ್ಟು ಕೊತ್ತಂಬರಿ ಸೊಪ್ಪು ತೊಳೆದು ಕಟ್ ಕಟ್ ಮಾಡಿ ತೆಂಗಿನತುರಿ ಇತ್ಯಾದಿಗಳೊಂದಿಗೆ ಅರೆಯಿರಿ.

ಬೇಯಿಸಿಟ್ಟ ತೊಂಡೆಕಾಯಿಗೆ ಈ ತೆಂಗಿನ ಅರಪ್ಪನ್ನು ಕೂಡಿ., ಅವಶ್ಯವಾದ ನೀರು ಎರೆದು ಕುದಿಸಿ.
ಹುಳಿಮೆಣಸಿನ ಕೊದ್ದೆಲ್ ಸಾರಿನಂತೆ ತೆಳ್ಳಗಾಗಬಾರದು, ಗಸಿಯಂತೆ ಮುದ್ದೆಯೂ ಆಗುವಂತಿಲ್ಲ. ಮಧ್ಯಮ ಸಾಂದ್ರತೆ ಬರುವಂತೆ ನೀರು ಎರೆದು ಹದ ಮಾಡಿಕೊಳ್ಳಿ.
ಸಿಹಿ ಇಷ್ಟಪಡುವವರು ಒಂದು ತುಂಡು ಬೆಲ್ಲ ಕುದಿಸುವಾಗ ಹಾಕತಕ್ಕದ್ದು.

ಬೆಳ್ಳುಳ್ಳಿ ಸುಲಿದು, ಜಜ್ಜಿ ಒಗ್ಗರಣೆಯಲ್ಲಿ ಹುರಿದು ಹಾಕಿರಿ. ಕರಿಬೇವು ಕೂಡಾ ಹಾಕಿ, ಅಂದ ಹಾಗೆ ತೆಂಗಿನಕಾಯಿ ಪದಾರ್ಥಕ್ಕೆ ತೆಂಗಿನೆಣ್ಣೆಯಲ್ಲೇ ಒಗ್ಗರಣೆ ಕೊಡಬೇಕು,
ಇದೀಗ ನಮ್ಮ ನವನವೀನ ವಿಧಾನದ ಹುಳಿಮೆಣಸು ಸಿದ್ಧ.

Tuesday, 11 February 2020

ಚಕ್ಕರ್ಪೆ ದೋಸೆಚಕ್ಕರ್ಪೆ ಪಾನಕ ಸವಿದಾಯ್ತು, ಈಗ ದೋಸೆ ಮಾಡೋಣ.

2 ಲೋಟ ಅಕ್ಕಿ ತೊಳೆದು, ನೆನೆಯಲು ಬಿಡಿ.
ಒಂದು ಹದ ಗಾತ್ರದ ಮುಳ್ಳುಸೌತೆಯನ್ನು ತೊಳೆದು, ಒರೆಸಿಟ್ಟು ಸಿಪ್ಪೆ ಸಹಿತವಾಗಿ ತುರಿಯಿರಿ.
ಒಂದು ಲೋಟ ಮೊಸರು.
ಅರ್ಧ ಕಡಿ ತೆಂಗಿನತುರಿ.
ರುಚಿಗೆ ತಕ್ಕಷ್ಟು ಉಪ್ಪು.

ಸಂಜೆಯ ವೇಳೆ ಎಲ್ಲವನ್ನೂ ಕೂಡಿ ನುಣ್ಣಗೆ ಅರೆಯಿರಿ.
ಮುಂಜಾನೆ ದೋಸೆ ಎರೆಯಿರಿ.

ನೀರುಳ್ಳಿ ಚಟ್ಣಿ, ಬೆಲ್ಲದ ಪಾಕ, ಮೊಸರು ಇರಬೇಕು, ಫಿಲ್ಟರ್ ಕಾಫಿ ಇಲ್ಲದಿದ್ದರಾದೀತೇ..

ಚಕ್ಕರ್ಪೆ ಗೊಜ್ಜು

ಮುಳ್ಳುಸೌತೆಯನ್ನು ತೊಳೆದು ತುರಿಯಿರಿ.
ಅರ್ಧ ಕಡಿ ತೆಂಗಿನತುರಿ, ನೀರು ಹಾಕದೆ ಅರೆಯಿರಿ.
ಒಂದು ಲೋಟ ದಪ್ಪ ಮೊಸರು.
ರುಚಿಗೆ ತಕ್ಕಷ್ಟು ಉಪ್ಪು.

ಎಲ್ಲವನ್ನೂ ಬೆರೆಸಿ , ಒಗ್ಗರಣೆ ಕೊಡಿ.
ಊಟದ ರುಚಿ ಹೆಚ್ಚಿಸುವ ಸಹವ್ಯಂಜನ ಇದಾಗಿದೆ.
ಬೇಸಿಗೆಗೆ ಸೂಕ್ತ, ದೇಹಕ್ಕೂ ತಂಪು.
ಬೇಯಿಸುವ ರಗಳೆ ಇಲ್ಲದ ಅಡುಗೆ.

Saturday, 1 February 2020

ಚಕ್ಕರ್ಪೆ ಪಾನಕ
" ಔತಣಕೂಟಕ್ಕೆ ಹೋಗುವುದಿದೆ, ನಿನ್ನ ಬ್ಲಾಗ್ ಓದುಗರಿಗೆ ರಸದೌತಣ ದೊರೆಯಲಿದೆ.. " ಗೌರತ್ತೆ ಚಟಾಕಿ ಹಾರಿಸಿದರು.

" ಹೌದೂ ಮತ್ತೇ, ದಿನಾ ನಮ್ಮ ಅಡುಗೆ ತಿಂದು ಅದನ್ನೇ ಎಷ್ಟೂಂತ ಬರೆಯೋದು.. "

ಅಂತೂ ಎಲ್ಲರೂ ಭರ್ಜರಿಯಾಗಿ ಹೊರಟೆವು. ಮುಂಜಾನೆಯ ತಿಂಡಿ ತಪ್ಪದಂತೆ ಬೇಗನೆ ತಲಪಿದೆವೂ ಅನ್ನಿ.

ಇಡ್ಲಿ ಚಟ್ಣಿ, ಕಾಯಿಹಾಲು, ಉಪ್ಪಿನಕಾಯಿ ಮೊಸರಿನೊಂದಿಗೆ ಒಂದು ಬಗೆಯ ಹಲ್ವ ಇದ್ದಿತು. ಯಾವುದೀ ಹಲ್ವ ಎಂದು ತಿಳಿಯದೆ ಬಡಿಸುತ್ತಿದ್ದವರನ್ನೇ ಕೇಳಬೇಕಾಗಿ ಬಂದಿತು.
" ಬಟಾಟೀದು.. " ಉತ್ತರ ಸಿಕ್ಕಿತು.

" ಬಟಾಟೆಯ ಹಲ್ವ ಮಾಡ್ತಾರೇಂತ ಕೇಳಿದ್ದೆ, ಇದೀಗ ತಿಂದ್ಹಂಗಾಯ್ತು. " ಗೌರತ್ತೆ ಅಂದರು.
ಬಟಾಟೆ ಹಲ್ವ ಇಷ್ಟು ರುಚಿಯಾಗಿರುತ್ತೆ ಅಂತ ನಾನೂ ಅಂದ್ಕೊಂಡಿರಲಿಲ್ಲ. " ಮಾಡಿ ನೋಡ್ಬೇಕು.."
" ಸಕ್ರೆ ತುಪ್ಪ ಇದ್ದರಾಯಿತು, ಬಾಳೆದಿಂಡಿನ ಹಲ್ವ ಕೂಡಾ ಮಾಡ್ಬಹುದು.. " ಗೌರತ್ತೆಯ ಹುಸಿನಗು, " ದ್ರಾಕ್ಷಿ ಗೇರುಬೀಜ ಏಲಕ್ಕಿ..."
" ಬಾಳೆದಿಂಡಿನ ಹಲ್ವ ನೀವೇ ಮಾಡ್ಕೊಳಿ... "

ಕೈ ತೊಳೆದು ಬರುವಷ್ಟರಲ್ಲಿ ಮಜ್ಜಿಗೆ ನೀರು ಎದುರಾಯಿತು. ಆಗಲೇ ಗಂಟೆ ಹನ್ನೊಂದಾಗಿತ್ತು, ಊಟಕ್ಕೆ ಮುಂಚಿತವಾಗಿ ಮಜ್ಜಿಗೆ ನೀರು ಕುಡಿಯುವುದುತ್ತಮ ಅಂದ್ಬಿಟ್ಟು ಮಜ್ಜಿಗೆ ಕುಡಿದು ಲೋಟ ಕೆಳಗಿಡುತ್ತಿರಬೇಕಾದರೆ ಸ್ಟೀಲ್ ಬಕೆಟ್ ತುಂಬ ಇದ್ದಂತಹ ಇನ್ನೊಂದು ಪಾನಕ ಕಂಡಿತು.

" ಇದೇನಿದು? "
" ಚಕ್ಕರ್ಪೆ ಜ್ಯೂಸ್... "
" ಹೌದಾ! ಜ್ಯೂಸ್ ಹೇಗಂತೆ ಮಾಡಿದ್ದೂ? "
"ಅದೇನಿಲ್ಲ, ಮುಳ್ಳುಸೌತೆ ಸಿಪ್ಪೆ ತೆಗೆದು, ಕಟ್ ಕಟ್ ಮಾಡಿ ಗ್ರೈಂಡರ್ ಗೆ ಹಾಕೂದು ಅಷ್ಟೇಯ.."
" ಕಾಳುಮೆಣಸು ಹಾಕಿದಂತಿದೆಯಲ್ಲ.."
" ಗುದ್ದಿ ಹಾಕೂದು, ಸಕ್ಕರೆ ಹಾಕ್ಬೇಕು. ಬೆಲ್ಲ ಹಾಕಿ ಮಾಡಿದ್ದು ಆಗಲೇ ಮುಗಿದಿದೆ.. "
ಇಂತಹ ತರಕಾರಿಗಳ ಶರಬತ್ ಮಾಡುವಾಗ ರುಚಿಗೆ ತಕ್ಕಷ್ಟು ಅಂತ ಉಪ್ಪು ಹಾಕಲೇಬೇಕು. " ಗೌರತ್ತೆಯ ಸೂಚನೆ.
ಅಂತೂ ವಿಧಾನ ತಿಳಿಯಿತು.

ನೀರು ಗೀರು ಕೂಡಿಸಲಿಕ್ಕಿಲ್ಲ, ಒಂದು ಮುಳ್ಳುಸೌತೆಯಲ್ಲಿ 95 ಶೇಕಡಾ ನೀರು ಇರುತ್ತದೆ, ತಿಳಿಯಿತಲ್ಲ.
ರಣಬೇಸಿಗೆಯ ತಾಪದಲ್ಲಿ ಬೇಯುತ್ತಿರುವಾಗ, ಜ್ಯೂಸ್ ಪಾರ್ಲರ್ ಹುಡುಕುತ್ತ ಹೋಗಬೇಕಾಗಿಲ್ಲ, ಮನೆಯಲ್ಲೇ ಆರಾಮವಾಗಿ ಮಾಡಿಕೊಳ್ಳಬಹುದಾದ ಪಾನಕ ಇದಾಗಿದೆ.

ಹಾಲು ಬೆರೆಸಿ, ಏಲಕ್ಕಿ ಉದುರಿಸಿ, ಮಿಲ್ಕ್ ಶೇಕ್ ಕುಡಿಯಿರಿ.
ಮಜ್ಜಿಗೆ ಎರೆದು, ಶುಂಠಿ ಗುದ್ದಿ ಹಾಕಿ, ರುಚಿಗೆ ಉಪ್ಪು ಹಾಕಿ ವೆಜಿಟಬಲ್ ಲಸ್ಸೀ ಸವಿಯಿರಿ.
ಸಿಹಿ ತಿನ್ನಲಾಗದವರು ಹಾಗೇನೇ ಕುಡಿದು ಆರಾಮವಾಗಿರಿ.
ಮುಳ್ಳುಸೌತೆಯೊಂದಿಗೆ ಬೇಸಿಗೆಯ ತಾಪವನ್ನು ಎದುರಿಸಲು ಸಿದ್ಧರಾಗಿರಿ.
Monday, 20 January 2020

ಹಣ್ಣುಗಳ ತಿನಿಸು
"ಅತ್ತೇ, ನಾಳೆ ಬಾಳೆಹಣ್ಣು ದೋಸೆ ಆಗದೇ.. " ಕೇಳಿದ್ದು ಮೈತ್ರ್ರಿ.

" ಅದಕ್ಕೇನಂತೆ, ಬಾಳೆಹಣ್ಣು ಉಂಟು, ತೆಂಗಿನಕಾಯಿ ಉಂಟು, ಮಾಡೋಣ. "

3 ಲೋಟ ಅಕ್ಕಿ ತೊಳೆದು, ನೀರೆರೆದು ಇಟ್ಟಾಯ್ತು. ಮೈತ್ರಿ ಹೇಳಿದಂತಹ ಈ ಮಾದರಿಯ ಬಾಳೆಹಣ್ಣು ದೋಸೆಗೆ ಉದ್ದು ಮೆಂತೆ ಇತ್ಯಾದಿ ಬೇಳೆಕಾಳುಗಳನ್ನು ಹಾಕುವುದಕ್ಕಿಲ್ಲ.

ಸಂಜೆಯಾಗುತ್ತಲೂ ಡೈರಿಯಿಂದ ಹಾಲು ತರುವುದಿದೆ, ಮೊದಲು ನಾವೇ ಡೈರಿಗೆ ಹಾಲು ಕೊಡುವವರಾಗಿದ್ದೆವು, ಈಗ ನಮ್ಮ ಅಗತ್ಯಕ್ಕನುಸಾರ ತರುವುದು, ಅಷ್ಟೇ ವ್ಯತ್ಯಾಸ. ಹಾಲು ತರುವಾಗ ತರಕಾರಿ ಸಂತೆಯಿಂದ ದೊಡ್ಡ ಬಚ್ಚಂಗಾಯಿ ತಂದ ಮಧು.

"ಇಷ್ಟು ದೊಡ್ಡದು ಯಾಕೆ ತಂದಿದ್ದು? ತಿಂದು ಮುಗಿಸುವುದಾದರೂ ಹೇಗೆ? "

" ನೋಡ್ತಾ ಇರು ನಾನು ಕಟ್ ಮಾಡೋ ಸ್ಟೈಲು.. "
" ನೀನೇ ಕಟ್ ಮಾಡ್ತೀಯಾ.. ಒಳ್ಳೇದಾಯ್ತು ಬಿಡು.. "
" ನಿನ್ನ ಮೆಟ್ಟುಕತ್ತಿ ಏನೂ ಬೇಡ... "
ಯೂ ಟ್ಯೂಬ್ ನೋಡಿ ಕಲಿತಿದ್ದೂಂತ ಕಾಣುತ್ತೆ, ಬಟ್ಟಲು ತುಂಬ ಹೋಳು ಮಾಡಿಟ್ಟ.

ಅತ್ತ ಇತ್ತ ಹೋಗುತ್ತ ಬರುತ್ತ ತಿಂದರೂ ಮುಗಿಯುವಾಸೆಯಿಲ್ಲ.

" ಫ್ರಿಜ್ ಒಳಗಿಟ್ಟು ನಾಳೆ ಜ್ಯೂಸ್ ಅಂತ ಕುಡಿದ್ರಾಯ್ತು.. " ಗೌರತ್ತೆಯ ಪರಿಹಾರೋಪಾಯ.

" ಹೌದು, ಕೆಮ್ಮುತ್ತ ಕೂತಿರಿ ಮತ್ತೆ..."

ಎಂಟು ಗಂಟೆಯಾಗುತ್ತಲೂ ಎಲ್ಲರ ಊಟೋಪಚಾರಗಳು ಮುಗಿದುವು, ಇದೀಗ ದೋಸೆಗಾಗಿ ಅರೆಯುವ ಕಾಲ.

ಎಂಟೂ ಹತ್ತು ಬಾಳೆಹಣ್ಣು ಸುಲಿದು ನುರಿದು ಇಟ್ಟಾಯ್ತು.
ಅರ್ಧ ಕಡಿ ತೆಂಗಿನ ತುರಿ,
ಅಕ್ಕಿಯ ನೀರು ಬಸಿಯಿರಿ,
ಇದೀಗ ಅರೆಯುವ ಸಮಯ.
ಥಟ್ ಎಂದು ಹೊಳೆದೇ ಬಿಟ್ಟಿತು!
ದೋಸೆ ಅರೆಯಲು ನೀರು ಬೇಡ, ಬಚ್ಚಂಗಾಯಿ ಹೋಳುಗಳನ್ನೇ ಹಾಕೋಣ.

ರಾತ್ರಿ ಕಳೆದು ಬೆಳಗಾಯಿತು.
ಎಂದಿನಂತೆ ಚಟ್ಣಿ, ಬೆಲ್ಲದ ಪಾಕ ( ರವೆ ), ದಪ್ಪ ಮೊಸರು, ಫಿಲ್ಟರ್ ಕಾಫಿಯೊಂದಿಗೆ ದೋಸೆ ತಿಂದೆವು.

ಯಾರಿಗೂ ದೋಸೆಯ ಹೊಸ ಅವತಾರದ ಬಗ್ಗೆ ನಾನು ಹೇಳಿಲ್ಲ.

" ಮೈತ್ರೀ, ದೋಸೆ ಹೇಗಾಯ್ತು? "
" ದೋಸೆಗೆ ಈ ಕಲರ್ ಹೇಗ್ಬಂತೂ? ... ವಾ.. ಗೊತ್ತಾಯ್ತು ಬಿಡಿ. " ಮೈತ್ರಿಯ ನಗೆಚಟಾಕಿ. " ಹೆಲ್ತೀ.. ನ್ಯೂಟ್ರೀಷಿಯಸ್ ಫುಡ್.. "
ಪೋಷಕಾಂಶಗಳಿಂದ ಕೂಡಿದ ಸರಳವಾದ ದೋಸೆ ಮೈತ್ರಿಯ ಮೆಚ್ಚುಗೆಗೆ ಪಾತ್ರವಾಯಿತು.

" ಅತ್ತೇ, ಈ ಥರ ದೋಸೆ ಮಾಡೋದನ್ನು ಬ್ಲಾಗ್ ನಲ್ಲಿ ಬರೆಯಿರಿ.. "


ಬಚ್ಚಂಗಾಯಿ ಇಡ್ಲಿ


ತಂಪು ಪೆಟ್ಟಿಗೆ ಸೇರಿದ್ದ ಬಚ್ಚಂಗಾಯಿ ಹೋಳುಗಳನ್ನು ಇದೇ ತಂತ್ರದಲ್ಲಿ ಇಡ್ಲಿಗಾಗಿ ಬಳಸಲಾಯಿತು.

ಒಂದು ಲೋಟ ಉದ್ದು
ಎರಡು ಲೋಟ ಅಕ್ಕಿ
ಅರೆಯಲು ಅಗತ್ಯವಿರುವ ಬಚ್ಚಂಗಾಯಿ ಹೋಳುಗಳು
ರುಚಿಗೆ ಉಪ್ಪು

ಅರೆಯಿರಿ, ಹುದುಗು ಬಂದ ನಂತರ ಇಡ್ಲಿ ಎರೆಯಿರಿ.
ನೀರು ಕುದಿದ ನಂತರ ಹತ್ತು ನಿಮಿಷದಲ್ಲಿ ಇಡ್ಲಿ ಆಯ್ತೂ ಅನ್ನಿ.


Tuesday, 7 January 2020

ತಿಮರೆ ಪಚ್ಚಡಿತೋಟದ ಕಳೆಹುಲ್ಲು ತೆಗೆಯುತ್ತಿದೆ. " ಅಕ್ಕ, ಏತ್ ಎಡ್ಡೆ ತಿಮರೆ ಬಳತ್ತ್ಂಡ್, ಒಂಜಿ ಚಟ್ಣಿ ಮನ್ಪುಗೊ.. " ಎನ್ನುತ್ತ ಬೇರುಗಡ್ಡೆ ಸಹಿತವಾಗಿ ತಿಮರೆ ಸೊಪ್ಪಿನ ರಾಶಿಯೇ ಬಂದಿತು, ನಾನೂ ಇದ್ದೇನೆ ಎಂಬಂತೆ ಗಾಂಧಾರಿ ಮೆಣಸುಗಳೂ...

ಇದುವರೆಗೂ ನಾನು ಇಷ್ಟೂ ತಿಮರೆ ಸೊಪ್ಪಿನ ಚಟ್ಣಿ ಮಾಡಿದ್ದಿಲ್ಲ. ಹೇಗೂ ಬಂದಿದೆ, ಹಾಳು ಮಾಡುವುದೆಂತಕೆ ಎಂಬ ಸೂತ್ರದಲ್ಲಿ ಚಟ್ಣಿ ತಯಾರಾಯ್ತು.

ತಿಮರೆ ಸೊಪ್ಪು ಮುಂಜಾನೆ ತಿಂದರೆ ಒಳ್ಳೆಯದು ಎಂಬ ಗೌರತ್ತೆಯ ಹಿತವಚನದಂತೆ ಮುಂಜಾನೆಯ ದೋಸೆಗೆ ಚಟ್ಣಿ ಮಾಡಲಾಯ್ತು.

ದೋಸೆಯೊಳಗೆ ಹೂರಣದಂತೆ ಈ ಚಟ್ಣಿ ಸವರಿಟ್ಟು ತಿಂದೆವು. ಆರೋಗ್ಯಕ್ಕೂ ಮಿದುಳಿನ ಕಾರ್ಯಚಟುವಟಿಕೆಗಳಿಗೂ ಈ ಸೊಪ್ಪು ಓಳ್ಳೆಯದೆಂದು ತಿಳಿದು ಮೈತ್ರಿಗೂ ಖುಷಿ ಆಯ್ತೂ ಅನ್ನಿ. ಆಲೂ ಬಾಜಿ ದೋಸೆ ತಿನ್ನುವ ಬದಲು ಈ ಥರ ಪ್ರಾಕೃತಿಕ ವೈವಿಧ್ಯಗಳ ಬಳಕೆ ಬಹಳ ಉತ್ತಮ ಎಂಬ ಶಿಫಾರಸನ್ನು ಮೈತ್ರಿ ತಿಮರೆ ಚಟ್ಣಿಗೆ ಲಗತ್ತಿಸಿದಳು.

ಈಗ ತಿಮರೆ ಪಚ್ಚಡಿ ಹೇಗೆ ಮಾಡಿದ್ದೆಂದು ನೋಡೋಣ.

ಚಿತ್ರದಲ್ಲಿ ಇರುವಷ್ಟೂ ತಿಮರೆ ಸೊಪ್ಪು ಗೆಡ್ಡೆ ಸಹಿತವಾಗಿ ಚೂರಿಯಲ್ಲಿ ಕೊಚ್ಚುವುದು.
ಒಂದು ಹಿಡಿ ಕಾಯಿತುರಿ,
4 - 6 ಗಾಂಧಾರಿ ಮೆಣಸು,
ರುಚಿಗೆ ತಕ್ಕಷ್ಟು ಉಪ್ಪು,
ಹಿತವೆನಿಸುವಷ್ಟು ಹುಣಸೆಯ ಹುಳಿ,
ನೀರು ಬೇಕಾಗಿಲ್ಲ.
ಮಿಕ್ಸಿ ಪಚ್ಚಡಿ ಮಾಡಿ ಕೊಟ್ಟಿತು. ಹಸಿರಿನ ಮುದ್ದೆಯಂತಹ ಪಚ್ಚಡಿಯನ್ನು ಮುಂಜಾನೆಯ ದೋಸೆಯ ತರುವಾಯ ಮಧ್ಯಾಹ್ನದ ಊಟದಲ್ಲಿ ಬಳಸಲಾಯ್ತು. ಉಳಿದದ್ದನ್ನು ಎಸೆಯದೆ ನಾಳೆ ಮುಂಜಾನೆ ತಿನ್ನುವವರಿಗಾಗಿ ತಂಪು ಪೆಟ್ಟಿಗೆಯಲ್ಲಿ ಇಡಲಾಯಿತು.

Centella asiatica, ಬ್ರಾಹ್ಮೀ, ಸರಸ್ವತೀ, ಉರಗೆ, ಒಂದೆಲಗ... ಹತ್ಚುಹಲವು ಹೆಸರುಗಳಿಂದ ಶೋಭಿತವಾಗಿರುವ ಪುಟ್ಟ ಸಸ್ಯ ತುಳುವಿವಲ್ಲಿ ತಿಮರೆ ಎಂದು ಕರೆಯಲ್ಪಡುತ್ತದೆ.

ಇದನ್ನೇ ಹೋಲುವ ದೊಡ್ಡ ಎಲೆಗಳೂ ಹೊವುಗಳೂ ಇರುವಂತಹ ಇನ್ನೊಂದು ಸಸ್ಯವರ್ಗ ಇದೆ, ನಾನೂ ಎಲ್ಲಿಂದಲೋ ತಂದು ಸಾಕುತ್ತ ಇದ್ದೇ ಅನ್ನಿ. ಉರಗೆಯಲ್ಲಿ ದೊಡ್ಡ ಜಾತಿಯದು, ತಂಬ್ಳಿ ಚಟ್ಣಿಗೆ ಆಗುತ್ತೆ ಅಂತ ಕೊಟ್ಟವರು ಅಂದಿದ್ದರು.

" ಈ ಹೈಬ್ರೀಡು ಎಲೆಗಳಿಗೆ ನಮ್ಮ ತೋಟದ ಉರಗೆಯ ರುಚಿಯೂ ಇಲ್ಲ, ಪರಿಮಳದ ಸಂತಾನವಿಲ್ಲ.." ಎಂದು ಗೌರತ್ತೆ ತೀರ್ಮಾನ ಕೊಟ್ಟಾಗಿನಿಂದ ನಾನೂ ಅದರ ಸುದ್ದಿಗೆ ಹೋಗಿಲ್ಲ.

ಇತ್ತೀಚೆಗೆ ಅಂತರ್ಜಾಲದಲ್ಲಿ ಅಲೆದಾಡುತ್ತಿದ್ದಾಗ ಹೈಬ್ರಿಡ್ ಒಂದೆಲಗ ಸಿಕ್ಕಿತು, Dollarweeds, Hydrocotyle app, Pennywort ಎಂದಿರುವ ಇದು ವಿದೇಶೀ ಕಳೆ ಸಸ್ಯ. ಒಳ್ಳೆಯ ನೀರಿನಾಸರೆಯಲ್ಲಿ ತಾವರೆಯ ಎಲೆಯಂತೆ ಸೊಕ್ಕಿ ಬೆಳೆಯುವ ಈ ಸಸ್ಯವು ನಮ್ಮ ಒಂದೆಲಗದ ಔಷಧೀಯ ಗುಣಧರ್ಮಗಳನ್ನು ಒದಗಿಸಲಾರದು. ಆದರೂ ಇನ್ನಿತರ ಸೊಪ್ಪು ಸದೆಗಳಂತೆ ಅಡುಗೆಯಲ್ಲಿ ಬಳಸಬಹುದು.


Thursday, 2 January 2020

ಬೀಟ್ರೂಟ್ ಸಾಸಮೆ
" ಅದ್ಯಾಕೆ ಬೀಟ್ರೂಟು ಹಾಗೇ ಇಟ್ಕೊಂಡಿದೀಯ? ತರೂದೇ ಸುಮ್ಮನೆ... " ಮನೆ ಯಜಮಾನರ ಗೊಣಗಾಟ.

" ಸಾಸಮೆ ಆದರೂ ಮಾಡಬಹುದಿತ್ತು.. " ಗೌರತ್ತೆಯ ತಿರುಗೇಟು.

ಗೌರತ್ತೆ ಸಾಸಮೆಯ ಜ್ಞಾಪಕ ಮಾಡಿದಾಗ,
" ಹೌದಲ್ವೇ.. " ಅನ್ನದೆ ಬೇರೆ ದಾರಿಯಿಲ್ಲ.
ಮೊನ್ನೆ ಬೀಟ್ರೂಟು ಪಚ್ಚಡಿ ಮಾಡಿದ್ದು ಯಾರಿಗೂ ನೆನಪಿಲ್ಲಾಂತ ಕಾಣ್ಸುತ್ತೆ, ಹೋಗ್ಲಿ ಬಿಡಿ, ಈವಾಗ ಹಾಳಾಗ್ತಾ ಇರೋ ಬೀಟ್ರೂಟು ಸಾಸಮೆ ಆಗಲಿದೆ.

ಇದಕ್ಕೆ ಮಾವಿನ ಹಣ್ಣಿನ ಸಾಸಮೆಯ ರುಚಿ ಬಾರದು, ಕೆಂಪು ಕೆಂಪಾಗಿ ಆಕರ್ಷಕ ಆಗಿರುತ್ತೆ.

ಈಗ ಬೀಟ್ರೂಟು ಸಿಪ್ಪೆ ಹೆರೆದು ತುರಿಯಿರಿ.
ಬಾಡಿ ಹೋದ ಬೀಟ್ರೂಟು ತುರಿಯಲು ಬರದಿದ್ದರೆ ಏನು ಮಾಡೋಣ?
ಹೋಳು ಮಾಡಿ ಮಿಕ್ಸಿಯಲ್ಲಿ ತಿರುಗಿಸೋಣ, ತುರಿ ಆಯ್ತು.

ಕುಕ್ಕರಿನಲ್ಲಿ ತುಂಬಿ,
ಅವಶ್ಯವಿರುವಷ್ಟೇ ನೀರೆರೆದು,
ಉಪ್ಪು ಬೆರೆಸಿ,
ಒಂದೆರಡು ಸೀಟಿ ಕೂಗಿಸಿ.

ಮಸಾಲೆ ಏನೇನು?
ಸಾಸಿವೆ ಇದರ ಮಸಾಲಾ ಸಾಮಗ್ರಿ ಆಗಿರುವುದರಿಂದ ಇದು ಸಾಸಮೆ ಆಗಿದೆ, ಕೊಂಕಣಿಯಲ್ಲಿ ಸಾಸಮ, ತುಳುವಿವಲ್ಲಿ ದಾಸೆಮಿ ಅಂದರಾಯಿತು.

ಅರ್ಧ ಕಡಿ ತೆಂಗಿನತುರಿ
ಅರ್ಧ ಚಮಚ ಸಾಸಿವೆ
ಒಂದು ಹಸಿಮೆಣಸು ಯಾ ಒಣಮೆಣಸು
ಮಜ್ಜಿಗೆ ಕೂಡಿ ಅರೆಯಿರಿ.
ಮಜ್ಜಿಗೆ 2ಲೋಟ ಇದ್ದರೆ ಉತ್ತಮ.
ಬೆಲ್ಲ ಹಾಕುವ ಅವಶ್ಯಕತೆಯಿಲ್ಲ, ಬೀಟ್ರೂಟು ಸಿಹಿ ಇರುವಂತದು.

ಅರೆದಾಯ್ತು, ಬೇಯಿಸಿಟ್ಟ ಬೀಟ್ರೂಟು ತುರಿಗೆ ತೆಂಗಿನಕಾಯಿ ಅರಪ್ಪು ಬೆರೆಸಿ, ಮಜ್ಜಿಗೆಯನ್ನೂ ಎರೆಯುವಲ್ಲಿಗೆ ಬೀಟ್ರೂಟು ಸಾಸಮೆ ಆಯ್ತೂ ಅನ್ನಿ.
ತೆಂಗಿನೆಣ್ಣಿಯಲ್ಲಿ ಕರಿಬೇವು ಕೂಡಿದ ಒಗ್ಗರಣೆ ಚಟಾಯಿಸುವಲ್ಲಿಗೆ ಅಲಂಕರಣವೂ ಆಯಿತು.

ಕುದಿಸುವುದಕ್ಕಿಲ್ಲ, ಮುದ್ದೆಯಂತಾಗಬಾರದು, ರಸಭರಿತವಾಗಲು ನೀರು ಎರೆದರಾಯಿತು.
ಮಂಜಾನೆಯೇ ಮಾಡಿ ಇಡಬಾರದು, ಊಟದ ಹೊತ್ತಿಗೆ ಹಳಸಲು ಪರಿಮಳ ಬಂದೀತು. ಇಂತಹ ಹಸಿ ಅಡುಗೆಯನ್ನು ಊಟಕ್ಕಾಯ್ತು ಅನ್ನುವ ಸಮಯಕ್ಕೆ ಮಾಡಿದರೆ ಉತ್ತಮ. ಉಂಡ ನಂತರ ಉಳಿದ ಸಾಸಮೆಯನ್ನು ತಂಪು ಪೆಟ್ಟಿಗೆಯಲ್ಲಿಟ್ಟು ರಾತ್ರಿಗೆ ಬಳಸಬಹುದು.

ಅತಿ ಕನಿಷ್ಠ ಸಮಯದಲ್ಲಿ, ಅತಿ ಕಡಿಮೆ ಮಸಾಲಾ ಸಾಮಗ್ರಿಗಳಿಂದ ತಯಾರಿಸಲಾಗುವ ಬೀಟ್ರೂಟು ಸಾಸಮೆ ಅಡುಗೆ ಕಲಿಯುವ ಆಸಕ್ತರಿಗೆ ಸುಲಭದ ಅಡುಗೆ.


Wednesday, 25 December 2019

ಗೇರುಬೀಜದ ಪಲ್ಯ


ಮದುವೆಯೂಟಕ್ಕೆ ಹೋಗಿದ್ದೆವು, ಮನೆಯಿಂದ ಹೊರಡುವಾಗಲೇ ಗಂಟೆ ಹನ್ನೊಂದಾಗಿತ್ತು. ಮದುವೆ ಮಂಟಪದ ಕಡೆ ತಿರುಗಿಯೂ ನೋಡದೆ ನಾನು ದೌಡಾಯಿಸಿದ್ದು ಊಟದ ಹಾಲ್ ಕಡೆಗೆ, ಅಲ್ಲಿ ಜನಜಂಗುಳಿ ಈಗಾಗಲೇ ನೆರೆದಿತ್ತು. ಸೀಟುಗಳು ಈಗಾಗಲೇ ಭರ್ತಿ ಆದಂತಿದೆ, ನನ್ನ ಪುಣ್ಯ, ಒಂದು ಕಡೆ ಟವೆಲ್ ಇಟ್ಟು ಕಾದಿರಿಸಲ್ಪಟ್ಟ ಕುರ್ಚಿ ದೊರೆಯಿತು. ಟವಲ್ ಅತ್ತ ಎತ್ತಿಟ್ಟು ಕುಳಿತಿದ್ದಾಯ್ತು.

ಬಾಳೆಲೆ ಒರೆಸಿ, ನೀರು ಸಿಡಿಸಿ ತೊಳೆಯುವಷ್ಟರಲ್ಲಿ ಬಡಿಸುವ ಸುಧರಿಕೆಯವರು ಒಬ್ಬೊಬ್ಬರಾಗಿ ಬರಲಾರಂಭಿಸಿದರು. ಬಾಳೆಯ ಒಂದು ತುದಿಗೆ ಉಪ್ಪು, ಉಪ್ಪಿನಕಾಯಿ.. ಅದೂ ಮಾವಿನ ಮಿಡಿ ಉಪ್ಪಿನಕಾಯಿ. ಕೆಳ ತುದಿಗೆ ಚಿತ್ರಾನ್ನ, ಮತ್ತೊಂದು ಬದಿಗೆ ಪಾಯಸ, ಪಲ್ಯ ಬಂದಿತು, ಬೊಗಸೆ ತುಂಬ ಬಡಿಸುತ್ತ ಹೋದ ಪಲ್ಯ ಗೇರುಬೀಜದ್ದು ಮಾರಾಯ್ರೇ! ಗೇರುಬೀಜ ಹಾಗೂ ತೊಂಡೆಕಾಯಿ ಮಿಶ್ರಣದ ಈ ಪಲ್ಯ ನಾನೂ ತಿನ್ನದೆ ತುಂಬ ಸಮಯವಾಗಿತ್ತೂ ಅನ್ನಿ,

ಯುಗಾದಿ ಬಂತೆಂದರೆ ಸಾಕು, ಗೇರುತೋಪುಗಳಲ್ಲಿ ಬೀಜ ಕೊಯ್ಯುವ ಕಾರುಭಾರು. ಒಣ ಬೀಜಗಳು ಮಾರಾಟಕ್ಕಾಗಿ, ಹಣ್ಣುಗಳು ಮಕ್ಕಳ ಪಾಲು, ಹಟ್ಟಿಯ ಹಸುಗಳಿಗೂ ಯಥೇಚ್ಛ ಭೋಜನ. ನಮ್ಮ ಊರ ಕಡೆ ಕ್ವಿಂಟಲ್ ಗಟ್ಟಲೆ ಗೇರು ಬೆಳೆಯುವವರಿದ್ದಾರೆ. ಮನೆ ಉಪಯೋಗಕ್ಕೂ ನಮ್ಮದೇ ಗೇರುಬೀಜಗಳು, ಗೇರುಬೀಜಗಳನ್ನು ಬಿಡಿಸಿ ಕೊಡಲು ಕೆಲಸಗಿತ್ತಿಯರಿದ್ದರು. ಹಿತ್ತಲಲ್ಲಿ ತೊಂಡೆ ಚಪ್ಪರವೂ ಇರುವಾಗ ಗೇರುಬೀಜದ ಪಲ್ಯ ಒಂದು ಮಾಮೂಲಿ ಅಡುಗೆ. ಅಮ್ಮ ಬಾಣಲೆ ತುಂಬಾ ಮಾಡಿ ಇರಿಸುತ್ತಿದ್ದ ಗೇರುಬೀಜದ ಪಲ್ಯ ತಿನ್ನಲು ನಾವು ಮಕ್ಕಳು ನಾ ಮುಂದು ತಾ ಮುಂದು ಎಂದು ತಟ್ಟೆಯ ಎದುರು ಕುಳಿತು ಬಡಿಸಿದ ಅನ್ನ ಪಲ್ಯ ಸಾರು ಉಂಡು ಏಳುತ್ತಿದ್ದ ಕಾಲವೊಂದಿತ್ತು. ಹೋದ ಕಾಲ ಮತ್ತೆ ಬರುವಂತಿಲ್ಲ. ಆದರೂ ಗೇರುಹಣ್ಣಿನ ಸೀಸನ್ ಅಲ್ಲದ ಸಮಯದಲ್ಲಿ ಗೇರುಬೀಜದ ಪಲ್ಯ ತಿನ್ನುವ ಯೋಗ ಬಂದಿದೆ.

ಮನೆಗೆ ಬಂದೊಡನೆ ನನಗೂ ಗೇರುಬೀಜದ ಪಲ್ಯ ಮಾಡುವ ಹಂಬಲ ಮೂಡಿತು. ಡಬ್ಬ ತುಂಬಾ ಪಾಯಸಕ್ಕಾಗಿ ತಂದಿರಿಸಿದ ಗೇರುಬೀಜಗಳಿವೆ, ತೊಂಡೆಕಾಯಿ ಇಲ್ಲ, ಕ್ಯಾಪ್ಸಿಕಂ ಇದೆ, ಆದೀತು.

ಒಂದು ಕ್ಯಾಪ್ಸಿಕಂ, ತೊಳೆದು ಹೆಚ್ಚಿಡುವುದು.
10 - 12 ಗೇರುಬೀಜಗಳು, ಹೋಳು ಮಾಡಿ ಕುದಿಯುವ ನೀರೆರೆದು ಮುಚ್ಚಿಡುವುದು.

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,
ಸಾಸಿವೆ ಸಿಡಿದಾಗ,
ಕರಿಬೇವು ಉದುರಿಸಿ,
ಹೆಚ್ಚಿಟ್ಟ ಕ್ಯಾಪ್ಸಿಕಂ ಹಾಕಿ ಸೌಟಾಡಿಸಿ,
ಉಪ್ಪು ಉದುರಿಸಿ.
ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಮುಚ್ಚಿರಿಸಿ,
ನೀರು ಬಸಿದು ನೆನೆದ ಗೇರುಬೀಜಗಳನ್ನು ಹಾಕಿ,
ಕಾಯಿತುರಿ ಉದುರಿಸಿ,
ಸೌಟಿನಲ್ಲಿ ಎಲ್ಲವನ್ನೂ ಬೆರೆಸಿ,
ಊಟದ ಟೇಬಲ್ ಮೇಲೆ ಇರಿಸಿ,
ಅನ್ನದೊಂದಿಗೆ ಸವಿಯಿರಿ.

ಎಳೆಯ ತೊಂಡೆಕಾಯಿಗಳು ಬಂದಿವೆ.
10 - 15 ತೊಂಡೆಕಾಯಿಗಳನ್ನು ತೊಳೆದು ಪಲ್ಯಕ್ಕೆ ಸೂಕ್ತವಾಗುವಂತೆ ಕತ್ತರಿಸಿ,
ಉಪ್ಪು ಬೆರೆಸಿ ಕುಕ್ಕರಿನಲ್ಲಿ ಒಂದು ಸೀಟಿ ಕೂಗಿಸಿ,
ನಿಧಾನಗತಿಯಲ್ಲಿ ಒತ್ತಡ ಇಳಿಸಿ ಮುಚ್ಚಳ ತೆಗೆಯಿಯಿರಿ.
ತೊಂಡೆಕಾಯಿ ಬೆಂದಿರುತ್ತದೆ.

ಬಾಣಲೆಯಲ್ಲಿ ಒಗ್ಗರಣೆಗಿರಿಸಿ, ಈ ಮೊದಲು ಕ್ಯಾಪ್ಸಿಕಂ ಪಲ್ಯ ಮಾಡಿದ ವಿದಾನವನ್ನೇ ಅನುಸರಿಸಿ ಗೇರುಬೀಜದ ಪಲ್ಯ ಸಿದ್ಧಪಡಿಸಿ.

ಈ ಪಲ್ಯಕ್ಕೆ ಬೇರೆ ಯಾವುದೇ ಮಸಾಲಾ ಸಾಮಗ್ರಿ ಹಾಕುವುದಕ್ಕಿಲ್ಲ, ಗೇರುಬೀಜವೇ ಇದರ ಪ್ರಧಾನ ಆಕರ್ಷಣೆ ಎಂದು ತಿಳಿಯಿರಿ.

ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕೊಬ್ಬು, ಖನಿಜಾಂಶಗಳಿಂದ ಸಮೃದ್ಧವಾಗಿರುವ ಗೇರುಬೀಜವು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ.

ಸಸ್ಯವಿಜ್ಞಾನದಲ್ಲಿ Anacardium occidentale ಎಂದಾಗಿರುವ ನಿತ್ಯ ಹರಿದ್ವರ್ಣದ ಗೇರುಮರದ ಮೂಲ ನೆಲೆ ದಕ್ಷಿಣ ಅಮೇರಿಕಾದ ಬ್ರೆಜಿಲ್ ಆದರೂ ಭಾರತ ಹಾಗೂ ಆಫ್ರಿಕಾ ಅತಿ ಹೆಚ್ಚು ಗೇರುಬೀಜ ಉತ್ಪಾದಕ ದೇಶಗಳಾಗಿವೆ.