Pages

Ads 468x60px

Saturday, 31 August 2013

ಬಿಸಿನೀರು ಕಡುಬು
ರಾತ್ರಿಯ ಅಡುಗೆಯ ಸಿದ್ಧತೆ ಆಗಬೇಕಾಗಿತ್ತು.   ಎಂದಿನಂತೆ ಕುಕ್ಕರಿನಲ್ಲಿ ನೀರು ತುಂಬಿ ಇಂಡಕ್ಷನ್ ಸ್ಟವ್ ಮೇಲೆ ಇಟ್ಟು,   ರಾತ್ರಿಯ ಸ್ನಾನ ಮಾಡುವ ಮನೆಮಂದಿಗೆ ನೀರು ಕಾಯಿಸಲು ಬಚ್ಚಲೊಲೆಯ ಬಳಿ ಸ್ವಲ್ಪ ಹೊತ್ತು ಗುದ್ದಾಡಿ ಒಳ ಬಂದು,  ಒಂದೂವರೆ ಪಾವು ಅಕ್ಕಿ ಅಳೆದು,  ತೊಳೆದು ಕುಕ್ಕರಿನಲ್ಲಿ ಕುದಿಯುತ್ತಿದ್ದ ನೀರಿಗೆ ಹಾಕಿದೆ.   ಕುಕ್ಕರ್ ಮುಚ್ಚಲು ಅಣಿಯಾಗುತ್ತಿದ್ದಂತೆ ವಿದ್ಯುತ್ ಹೋಯಿತು.

" ಗ್ಯಾಸ್ ಒಲೆಯೇ ಗತಿ "  ಕುದಿನೀರಿನೊಳಗಿದ್ದ ಅಕ್ಕಿ ಅಣಕಿಸಿತು.

" ಕರೆಂಟ್ ಹೋಯ್ತಲ್ಲಾ..... ಈ ಕುಚ್ಚುಲಕ್ಕಿ ಹಾಕಿ ದಂಡ ಆಯ್ತು "

" ಬೆಳ್ತಿಗೆ ಅನ್ನ ಮಾಡಮ್ಮಾ "  

" ಸರಿ ಹೋಯ್ತು,  ನಿಂಗೆ ಅಂತಾನೇ ಕುಚ್ಚುಲಕ್ಕಿ ಹಾಕಿದ್ದು "

" ಕರೆಂಟ್ ಬಂದೀತು ಈಗ "

ಅದೇ ಸರಿ ಅನ್ನಿಸಿ ಕುಕ್ಕರನ್ನು ಕೆಳಗಿಳಿಸಿ,   ಆರದ ಹಾಗೆ ತಟ್ಟೆ ಮುಚ್ಚಿ,  ಕತ್ತಲಲ್ಲಿ ತಡಕಾಡುತ್ತಾ ಈಚೆ ಬಂದು,  ಐ ಪ್ಯಾಡ್ ಕೈಗೆತ್ತಿಕೊಂಡು ನನ್ನ ಬರವಣಿಗೆಯನ್ನು ಮುಂದುವರಿಸಿದೆ.   ಕಾಲು ಘಂಟೆ ಕಳೆದ್ರೂ ವಿದ್ಯುತ್ ಸುಳಿವಿಲ್ಲ.  ಈಗಲೇ ಘಂಟೆ ಎಂಟೂವರೆ ಆಗಿದೆ,   ಇನ್ನು ಬೆಳ್ತಿಗೆ ಅನ್ನ ಮಾಡುವುದೇ ಸರಿ ಅಂದ್ಕೊಂಡು ಪುನಃ ಹೊಸ ಅಡುಗೆ ಸಿದ್ದತೆಗೆ ತೊಡಗಿದೆ.

ಅಯ್ಯೋ ರಾಮಾ,   ಈಗಾಗಲೇ ಅಕ್ಕಿ ಹಾಕಿರೋದನ್ನು ಬಿಟ್ಟು ಹೊಸ ಅಡುಗೆಗೆ ಯಾಕೆ ಹೊರಟಿದ್ದು ಅಂತ ಕೇಳಿಯೇ ಕೇಳ್ತೀರಾ,   ಅದೇ ವಿಷ್ಯ ಈಗ ಇರೂದು.   ಕುಚ್ಚುಲಕ್ಕಿ ಅನ್ನ ಆಗ್ಬೇಕಿದ್ರೆ ಅಕ್ಕಿ ಕುದಿದು ಸಣ್ಣ ಉರಿಯಲ್ಲಿ ಅರ್ಧ ಘಂಟೆ ಇಟ್ರೇನೇ ಅನ್ನ ಬೆಂದಿದೆ ಅನ್ನಬಹುದು.   ಪಾತ್ರೆಯಿಂದ ಹೊರ ಚೆಲ್ಲುವಂತೆ ಗಳಗಳ ಕುದಿಯಲೂಬಾರದು.   ಅದಕ್ಕಾಗಿ ಇಂಡಕ್ಷನ್ ಸ್ಟವ್ ಮೇಲೆ ಇಟ್ಟರೆ ಆರಾಮವಾಗಿ ಕುದಿಯುವಿಕೆಯನ್ನು ನಿಯಂತ್ರಣದಲ್ಲಿ ಇರಿಸಬಹುದು.   ಅದೂ ಅಲ್ಲದೆ ಗ್ಯಾಸ್ ಮುಗಿಯುತ್ತಾ ಬಂದಿತ್ತು.   ಗ್ಯಾಸ್ ಏಜೆನ್ಸಿಯವರು ಈ ಕಡೆ ತಲೆ ಹಾಕ್ದೇ ಒಂದೂವರೆ ತಿಂಗಳಾಯ್ತು,   ಬರೋ ತನಕ ಸುಧರಿಸ ಬೇಡ್ವೇ,  ಹೀಗೆಲ್ಲಾ ದೂರಾಲೋಚನೆ ನನ್ನದು.....

ಹೊಸತಾಗಿ ಬೆಳ್ತಿಗೆ ಅಕ್ಕಿ ಅಳೆದು,  ತೊಳೆದು,  ನೀರನ್ನೂ ಅಳೆದು,   ಕುಕ್ಕರಿನಲ್ಲಿದ್ದ ಕುಚ್ಚುಲಕ್ಕಿಯನ್ನು ಬೇರೆ ಪಾತ್ರೆಗೆ ವರ್ಗಾಯಿಸಿ,  ಅನ್ನ ಬೇಯಲು ಗ್ಯಾಸ್ ಒಲೆ ಹೊತ್ತಿಸಿದೆನಾ,  ಕರೆಂಟ್ ಬಂದೇ ಬಿಟ್ಟಿತು!   
ಮಳೆಗಾಲ ಬೇರೆ, ಕರೆಂಟ್ ಕೈ ಕೊಡುವುದು ಯಾವಾಗಲೂ ಇದ್ದಿದ್ದೇ,  ಈಗ ಬಂದ ವಿದ್ಯುತ್ ಹೋಗುವ ಮೊದಲು ಬೆಳ್ತಿಗೆ ಅನ್ನವೇ ಶೀಘ್ರದಲ್ಲಿ ಆಗುವಂತಾದ್ದಾದುರಿಂದ ಬೆಳ್ತಿಗೆ ಅಕ್ಕಿ ಇಂಡಕ್ಷನ್ ಸ್ಟವ್ ಮೇಲೇರಿತು.

" ಕರೆಂಟ್ ಬಂತಲ್ಲಾ,  ಏನ್ಮಾಡ್ತಾ ಇದ್ದೀ ಅಮ್ಮಾ ? "

" ನೋಡು ಇಷ್ಟಾಯ್ತು,   ಈ ಕುಚ್ಚುಲಕ್ಕಿ ಏನು ಮಾಡೂದು ಅಂತ.....ಹ್ಞಾ...ನಾಳೆ ಕಾಫೀಗೆ ಉಂಡೆ ಮಾಡಿದ್ರಾಯ್ತು "

ಢೆಲ್ಲಿ ಬೆಂಗಳೂರುಗಳಲ್ಲಿ ಪರೋಠಾ,  ರೈಸ್ ಬಾತ್ ತಿಂದು ಸಾಕಾಗಿದ್ದ ಮಗನಿಗೂ ಖುಷಿ,   " ಉಂಡೆ ತಿನ್ನೋ ಭಾಗ್ಯ ಸಿಕ್ತು "  ಅಂದ ತಂಗಿಯ ಬಳಿ.

ಎಲ್ಲರದೂ ಊಟವಾದ ನಂತರ ಕುದಿನೀರಿನಲ್ಲಿ ನೆನೆದ ಕುಚ್ಚುಲಕ್ಕಿ ಹೊರ ಬಂದಿತು.   ನೀರು ಬಸಿದು ಮಿಕ್ಸಿಯ ಜಾರೊಳಗೆ ಮಿತವಾಗಿ ಅಕ್ಕಿ ಹಾಕಿ ತಿರುಗಿಸಿ ತೆಗೆದೆ,  ಬೇರೆ ನೀರು ಹಾಕಲೇ ಬಾರದು.  ಹೀಗೆ ಮೂರು ಬಾರಿ ಹಾಕಿ ತೆಗೆದು ಮಾಡಿದ್ದರಲ್ಲಿ ಮುದ್ದೆಯಾದ ಮಿಶ್ರಣ ದೊರೆಯಿತು.  ರುಚಿಗೆ ಬೇಕಾದ ಉಪ್ಪನ್ನೂ ಸೇರಿಸಿದ್ದೆ ಅನ್ನಿ.   ಒಂದೇ ಸೈಜಿನ ಉಂಡೆಗಳನ್ನು ತಯಾರಿಸಿ ಮುಚ್ಚಿಟ್ಟು.....

ಬೆಳಗೆದ್ದು ಹಬೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸುವಷ್ಟರಲ್ಲಿ ಮುದ್ದಾದ ಉಂಡೆಗಳು ತಯಾರಾದುವು.   ಧೋರೆಂದು ಮಳೆ ಬರುತ್ತಿರುವ ಈ ಸಮಯದಲ್ಲಿ ಒಂದು ಕಾಯಿ ಚಟ್ನಿ ಅರೆದು,  ಗಟ್ಟಿ ಮೊಸರಿನೊಂದಿಗೆ ತಿನ್ನುತ್ತಿರಬೇಕಾದರೆ.... ಹಾಯೆನಿಸಿಬಿಟ್ಟಿತು.

ಅಕ್ಕಿ ಹಿಟ್ಟಿಗೆ ಸ್ವಲ್ಪ ಕಾಯಿತುರಿ ಸೇರಿಸಿ,  ಉಂಡೆಯ ಸ್ವಾದ ಇನ್ನೂ ಹೆಚ್ಚು.
ಚಟ್ನಿಯೊಂದಿಗೆ ಸಿಹಿ ಕಾಯಿಹಾಲು ಹಾಕಿಯೂ ತಿನ್ನಿ.
ಕಡಲೆ ಗಸಿಯೊಂದಿಗೂ ಚೆನ್ನಾಗಿರುತ್ತದೆ.
ತಿಂದುಳಿದ ಉಂಡೆಗಳನ್ನು ಸಂಜೆ ವೇಳೆ ಉಸುಳಿ ಮಾಡಿ ತಿನ್ನಿ.

ಕುಚ್ಚುಲಕ್ಕಿ:
ಗದ್ದೆಯಲ್ಲಿ ಬೆಳೆದ ಭತ್ತದ ಪೈರಿನಿಂದ ಭತ್ತವನ್ನು ಬೇರ್ಪಡಿಸಿ,  ಕಾಳುಗಳ ಜಳ್ಳು ತೆಗೆದು,  ಒಣಗಿಸಿ ಶೇಖರಿಸಿದ ಭತ್ತವನ್ನು ಹದವಾಗಿ ಬೇಯಿಸಿ,  ಪುನಃ ಒಣಗಿಸಿದ ಈ ಬೆಂದ ಭತ್ತದಿಂದ ಅಕ್ಕಿಯನ್ನು ಬೇರ್ಪಡಿಸಿ ತೆಗೆದ ಅಕ್ಕಿಯೇ ಕುಚ್ಚುಲಕ್ಕಿ ಅಥವಾ ಕುಸುಬುಲಕ್ಕಿ.   ಇದು ದಕ್ಷಿಣ ಕನ್ನಡಿಗರು ಹಾಗೂ ಕೇರಳೀಯರು ಊಟಕ್ಕೆ ಉಪಯೋಗಿಸುವ ಅಕ್ಕಿ.  ಭತ್ತದ ಪೋಷಕಾಂಶಗಳು ನಷ್ಟವಾಗದೇ ಈ ಅಕ್ಕಿಯಲ್ಲಿ ಉಳಿಯುತ್ತವೆ.  ಆಂಗ್ಲ ಭಾಷೆಯಲ್ಲಿ boiled rice ಅಂದರೆ ಬೇಗ ಅರ್ಥವಾದೀತು.Posted via DraftCraft app

Saturday, 24 August 2013

ಕುರು ಕುರು ತುಕ್ಕುಡಿ3 ಕಪ್ ಮೈದಾ
1 ಕಪ್ ನೀರು
ರುಚಿಗೆ ಉಪ್ಪು, 
3 ಚಮಚಾ ಸಕ್ಕರೆ,
5 ಚಮಚಾ ಮಸಾಲೆ ಹುಡಿ, 
1 ಚಮಚಾ ಎಳ್ಳು
ಕರಿಯಲು ತೆಂಗಿನೆಣ್ಣೆ

ನೀರಿಗೆ ಉಪ್ಪು ಸಕ್ಕರೆ  ಹಾಕಿ ಕರಗಿಸಿ.   ರುಚಿ ನೋಡಿಕೊಳ್ಳಿ,  ಉಪ್ಪು ಹೆಚ್ಚಾಗಬಾರದು.  
ಮಸಾಲಾ ಸಾಮಗ್ರಿ ಹಾಗೂ ಮೈದಾ ಸೇರಿಸಿ ಗಟ್ಟಿಯಾಗಿ ಕಲಸಿ.
ಅರ್ಧ ಗಂಟೆ ಬಿಟ್ಟು ಚಪಾತಿ ಲಟ್ಟಿಸಿ.
ತುಕ್ಕುಡಿ ಚಕ್ರದಲ್ಲಿ ಗೆರೆ ಎಳೆಯಿರಿ.
ಕಾದ ಎಣ್ಣೆಗೆ ಗೆರ ಹಾಕಿದ ಚಪಾತಿಗಳನ್ನು ಒಂದೊಂದಾಗಿ ಇಳಿಸಿ.
ಹೊಂಬಣ್ಣ ಬಂದಾಗ ತೆಗೆದು ಎಣ್ಣೆ ಬಸಿದು ಹೋಗಲು ತೂತಿನ ಪಾತ್ರೆಗೆ ಹಾಕಿಕೊಳ್ಳಿ.
ತಣಿದ ನಂತರ ಕೈಯಲ್ಲಿ ತುಕ್ಕುಡಿಗಳನ್ನು ಬಿಡಿಬಿಡಿಯಾಗಿಸಿ ಡಬ್ಬದಲ್ಲಿ ತುಂಬಿಸಿ.

ಮಕ್ಕಳು ರಜಾದಿನದಂದು ತಿಂಡಿಗಳ ಅಪೇಕ್ಷೆಯನ್ನು ಮುಂದಿಡುತ್ತಾರೆ. " ಅದು ಮಾಡು,  ಇದು ಮಾಡು "  ಎಂದು ಹಟ ಹಿಡಿಯುವ ಹೊತ್ತಿನಲ್ಲಿ ಇಂತಹ ತಿಂಡಿಗಳು ಮಾಡಲೂ ಸುಲಭ,  ಮನೆಯಲ್ಲೇ ತಯಾರಿಸಿದ್ದು ಆರೋಗ್ಯಕ್ಕೂ ಹಿತ.  ನಾನಂತೂ ಮಾಡಿ ಆಯ್ತು,  ಸಂಜೆ ಹೊತ್ತಿಗೆ ಮನೆಯ ನೆನಪಿನೊಂದಿಗೆ ತಿನ್ನಲು ಮಗಳು ಮೂಡಬಿದ್ರಿಗೆ ಕೊಂಡು ಹೋಗಿಯೂ ಆಯ್ತು. 

Posted via DraftCraft app

Monday, 12 August 2013

ತೆಂಗಿನ ಕಾಯಿ ಹಾಲು
ಮನೆಯ ಹಿತ್ತಿಲಲ್ಲಿ ಅಂಗೈ ಅಗಲ ಜಾಗ ಇದ್ದರೂ ಸಾಕು,  ಒಂದು ತೆಂಗಿನಸಸಿ ನೆಟ್ಟುಕೊಳ್ಳದವರಿಲ್ಲ.   ಅಗತ್ಯ ಬಿದ್ದಾಗ ಎಳನೀರು ಕುಡಿಯುವುದಕ್ಕಾದರೂ ಇರಲಿ ಎಂಬ ಭಾವ,  ವಾಸ್ತವವಾಗಿ ತೆಂಗಿನ ಪ್ರತಿಯೊಂದು ಭಾಗವೂ ಮನೆಬಳಕೆಗೆ ಉಪಯುಕ್ತ.   ಗರಿಗಳಿಂದ ಮಡಲ ತಟ್ಟಿ ಮಾಡಿಕೊಂಡು ಬೇಸಿಗೆಗೆ ನೆರಳಿನ ಚಪ್ಪರ ಹಾಕಿಕೊಳ್ಳಲೂ,  ಗರಿಗಳ ಕಡ್ಡಿ ಎಳೆದು ಕಸಪೊರಕೆ ಮಾಡಿಕೊಳ್ಳಲೂ,  ಕಾಯಿಸಿಪ್ಪೆ, ಗೆರಟೆ,  ಕೊತ್ತಳಿಗೆ,  ಮಡಲುಗಳನ್ನು ನೀರು ಕಾಯಿಸಲು ಉರುವಲಾಗಿಯೂ ಬಳಕೆ ಸಾಮಾನ್ಯ.   ಧೀರ್ಘಕಾಲ ಬದುಕುವ ತೆಂಗಿನಮರ,  ಸತ್ತ ನಂತರವೂ ಬೆಲೆಬಾಳುವಂತಹುದು.  ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ತೆಂಗಿನ ಕಾಂಡ ಗೃಹನಿರ್ಮಾಣಕ್ಕೆ ಉಪಯುಕ್ತ ಸಾಧನ.   ತೆಂಗಿನಮರದ ಅಂಗೋಪಾಂಗಗಳಿಗೆ ನಿಶ್ಚಿತವಾದ ಹೆಸರುಗಳಿವೆ.  ಅದೇ ಭಾರತೀಯ ಭಾಷೆಗಳ ಹಿರಿಮೆ.   ಇದನ್ನೇ ಆಂಗ್ಲ ಭಾಷೆಗೆ ಅನುವಾದಿಸಿ ಅಂದಿರಾ,  ಸಮರ್ಪಕ ಶಬ್ದಗಳೇ ಸಿಗದು.   ಎಳೆಯ ಹೀಚುಕಾಯಿಗೆ ಚೆಂಡುಪುಲ್ಲೆ ಅಂತೀವಿ.   ತುಸು ಬಲಿಯಲಾರಂಭಿಸಿದಾಗ  ಎಳನೀರು,  ಬೊಂಡ.   ಅದಕ್ಕಿಂತಲೂ ಬಲಿತದ್ದು ಬನ್ನಂಗಾಯಿ,  ಕೆಲವು ಕಾಯಿಗಳನ್ನು ಸುಲಿದಾಗ ಸಿಪ್ಪೆ ಹಾಗೂ ಖಾಲಿ ಕರಟ ಇರುವುದೂ ಇದೆ,  ಅಂಥಾದ್ದು ಬೋಡುಗಾಯಿ.   ಮುಂದಿನದು ಹಸಿ ತೆಂಗಿನಕಾಯಿ.   ಒಣಗಿತೋ ಗೋಟುಕಾಯಿ.   ಒಳಗಿನ ತಿರುಳು ಈಗ ಕೊಬ್ಬರಿ ಆಗಿ ಬಿಡುತ್ತದೆ.  ಇದೇ ಕೊಬ್ಬರಿಯಿಂದ ತೆಂಗಿನೆಣ್ಣೆ ತೆಗೆಯಿರಿ,  ಉಳಿದದ್ದು ತೆಂಗಿನ ಹಿಂಡಿ,  ಉತ್ತಮ ಪಶು ಆಹಾರ.   ಕರೆಯುವ ಹಸುಗಳಿಗೆ ದಿನವೂ ತೆಂಗಿನ ಹಿಂಡಿ ಹಾಕಿದ್ದೇ ಆದಲ್ಲಿ ಅಧಿಕ ಹಾಲು,  ಹಾಲಿನ ಗುಣಮಟ್ಟವೂ ಶ್ರೇಷ್ಠ,  ಮುದ್ದೆ ಮುದ್ದೆ ಬೆಣ್ಣೆ ದೊರಕೀತು.

ಹಸಿ ತೆಂಗಿನಕಾಯಿ ಒಡೆದು,  ಕಾಯಿ ತುರಿದು,  ಅವಶ್ಯವಿದ್ದಷ್ಟು ನೀರು ಸೇರಿಸಿ ಅರೆದು,  ಶುಭ್ರವಾದ ಜಾಲರಿಯಂತಹ ಬಟ್ಟೆಯಲ್ಲಿ ಶೋಧಿಸಿದಾಗ ಸಿಗುವ ಹಾಲಿನಂತಹ ದ್ರವವೇ ಕಾಯಿಹಾಲು.   ಬಟ್ಟೆಯಲ್ಲಿ ಹಿಂಡಿ ಉಳಿದ ಕಾಯಿ ಚರಟ ಜಾನುವಾರುಗಳಿಗೆ ಉತ್ತಮ ಆಹಾರ.

" ಜಾನುವಾರುಗಳಿಲ್ಲ ಏನು ಮಾಡೋಣ ? "

ಒಣಗಿಸಿಟ್ಟುಕೊಳ್ಳಿ,  ಮೈಕ್ರೋವೇವ್ ಸಹಾಯ ಪಡೆಯಿರಿ.  ಕೆಡುವುದಿಲ್ಲ.   ಪಲ್ಯ,  ಸಲಾಡ್,  ಕೊಸಂಬರಿ ಇತ್ಯಾದಿಗಳಿಗೆ ಬಳಸಿ.

ಕಾಯಿಹಾಲು ಹಿಂಡಿದ ಬಟ್ಟೆಯನ್ನು ಚೆನ್ನಾಗಿ ತೊಳೆದು ಬಿಸಿಲಿಗೆ ಒಣಗಿಸಿ ಇಟ್ಟುಕೊಳ್ಳಬೇಕಾಗುತ್ತದೆ.    ಈಗ ಉಪಯೋಗಿಸಿ ಎಸೆಯುವಂಥ ಬಟ್ಟೆಗಳೂ ಬಂದಿವೆ,  ಚಿಂತೆಯಿಲ್ಲ ಬಿಡಿ.

ತೆಂಗಿನಕಾಯಿ ಹಾಲಿನ ಉಪಯುಕತ್ತೆಯ ಬಗ್ಗೆ ಮೊದಲು ತಿಳಿದುಕೊಳ್ಳೋಣ.   ತೆಂಗಿನಕಾಯಿ ತುರಿ ವಿಶೇಷವಾಗಿ ನಾರು ಪದಾರ್ಥವನ್ನು ಹೊಂದಿರುವಂಥದ್ದು.   ಜೀರ್ಣಾಂಗಗಳಿಂದ ತ್ಯಾಜ್ಯವನ್ನು ಹೊರ ತಳ್ಳಲು ನಾರು ಅತ್ಯಾವಶ್ಯಕ.

ತೆಂಗಿನಕಾಯಿ ಹಾಲು ಖನಿಜಾಂಶಗಳಾದ ಕಾಪರ್, ಪೊಟ್ಯಾಷಿಯಂ,  ಫಾಸ್ಫರಸ್,  ಕ್ಯಾಲ್ಸಿಯಂ,  ಕಬ್ಬಿಣ,  ಸೆಲೆನಿಯಂ,  ಝಿಂಕ್,  ಮ್ಯಾಂಗನೀಸ್ ಮತ್ತು ಮೆಗ್ನೇಷಿಯಂಗಳ ಅತ್ಯುತ್ತಮ ಮೂಲವಾಗಿದೆ.   ಇದಲ್ಲದೆ ವಿಟಮಿನ್ ಸಿ ಹಾಗೂ ನಾರುಪದಾರ್ಥವೂ ಸೇರಿವೆ.

ದೇಹಕ್ಕೆ  ಹಿತವಾದ ಕಲ್ಪವೃಕ್ಷವೆನಿಸಿದ ತೆಂಗಿನಮರ ಸಸ್ಯಶಾಸ್ತ್ರೀಯವಾಗಿ Cocos nucifera ಎನಿಸಿಕೊಂಡಿದೆ.

ರಕ್ತದಲ್ಲಿನ ಸಕ್ಕರೆಯ ನಿಯಂತ್ರಣ  -  ಮ್ಯಾಂಗನೀಸ್
ರಕ್ತನಾಳಗಳಿಗೆ ಸ್ಥಿತಿಸ್ಥಾಪಕತ್ವ ಗುಣ ನೀಡುವುದಲ್ಲದೆ ಚರ್ಮದ ಕಾಂತಿವರ್ಧಕ  -  ಕಾಪರ್
ಎಲುಬುಗಳಿಗೆ ದೃಢತ್ವ  -  ಫಾಸ್ಫರಸ್
ರಕ್ತಹೀನತೆಗೆ ತಡೆ  -  ಕಬ್ಬಿಣ
ಮಾಂಸಖಂಡ ಹಾಗೂ ನರನಾಡಿಗಳಿಗೆ ಸಡಿಲಿಕೆಯ ಸುಖ  -  ಮೆಗ್ನೇಷಿಯಂ
ತೂಕ ನಿಯಂತ್ರಣ  -  ನಾರು
ಗಂಟುಗಳ ಉರಿಯೂತಕ್ಕೆ ನಿಯಂತ್ರಣ  -  ಸೆಲೆನಿಯಂ
ಹೆಚ್ಚಿದ ರಕ್ತದೊತ್ತಡವನ್ನು ಕಡಿಮೆಗೊಳಿಸುವ ಶಕ್ತಿ ಪೊಟ್ಯಾಷಿಯಂನಲ್ಲಿದೆ.
ರೋಗ ನಿರೋಧಕ ಶಕ್ತಿಗೆ ವಿಟಮಿನ್ ಸಿಯ ಬೆಂಬಲ.   ವಿಟಮಿನ್ ಸಿ ರಕ್ತನಾಳಗಳನ್ನು ಒತ್ತಡಮುಕ್ತಗೊಳಿಸುವಲ್ಲಿ ಸಹಕಾರಿ.
ಪುರುಷರಲ್ಲಿ ಜನನೇಂದ್ರಿಯಕ್ಕೆ ಸಂಬಂಧಪಟ್ಟ ಗ್ರಂಥಿಯ ಆರೋಗ್ಯ ರಕ್ಷಕ  -  ಝಿಂಕ್

ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ತೆಂಗಿನಕಾಯಿಹಾಲನ್ನು ಬಳಸಿ ಮಾಡಬಹುದಾದ  ತಿನಿಸುಗಳು ಬೇಕಾದಷ್ಟಿವೆ.   ಹಬ್ಬ ಹರಿದಿನಗಳಂದು ಮಾಡುವಂತಹ ಹೆಸರು ಬೇಳೆ ಪಾಯಸ ಮಾಡಿಕೊಳ್ಳೋಣ.
ಒಂದು ಕಪ್ ಹೆಸರು ಬೇಳೆ
ಅರ್ಧ ಕಪ್ ಸಬ್ಬಕ್ಕಿ
ಮೂರು ಅಚ್ಚು ಬೆಲ್ಲ

ಹೆಸರು ಬೇಳೆ ಕೆಂಪಗೆ ಹುರಿಯಿರಿ.   ಇದನ್ನು ಶುಕ್ರವಾರ ಹಾಗೂ ಮಂಗಳವಾರಗಳಂದು ಹುರಿಯುವಂತಿಲ್ಲ.   ಯಾಕೆಂದು ನಾನೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ.   ತಂದಿಟ್ಟ ಬೇಳೆಯನ್ನು ಹುರಿದು ಡಬ್ಬದಲ್ಲಿ ತುಂಬಿಸಿ ಇಟ್ಟಲ್ಲಿ ಹಾಳಾಗುವುದಿಲ್ಲ,  ಬೇಕಿದ್ದಾಗ ಬೇಕಾದಷ್ಟೇ ತೆಗೆದು ಬಳಸಿದರಾಯಿತು.   ಸಬ್ಬಕ್ಕಿಯನ್ನೂ ಹುರಿಯಿರಿ.

ಕಾಯಿಹಾಲು ಮಾಡಿಟ್ಟಾಯ್ತೇ,  ದಪ್ಪ ಹಾಲು ಪ್ರತ್ಯೇಕ ತೆಗೆದಿರಿಸಿ.   ನೀರು ಕಾಯಿಹಾಲಿನಲ್ಲಿ ಹೆಸರು ಬೇಳೆ ಹಾಗೂ ಸಬ್ಬಕ್ಕಿಗಳನ್ನು ಮೆತ್ತಗೆ ಬೇಯಿಸಿ.
ಬೆಂದ ನಂತರ ಬೆಲ್ಲ ಹುಡಿ ಮಾಡಿ ಹಾಕಿ,  ಕರಗಲು ಬಿಡಿ.  ತಳ ಹಿಡಿಯದಂತೆ ಜಾಗ್ರತೆ ವಹಿಸುವ ಅವಶ್ಯಕತೆ ಇದೆ.    ಬೆಲ್ಲ ಕರಗಿ ಕುದಿಯಲಾರಂಭಿಸಿದಾಗ ದಪ್ಪ ಕಾಯಿಹಾಲು ಎರೆದು ಇನ್ನೊಂದು ಕುದಿ ಬರುವ ತನಕ ಒಲೆಯ ಮೇಲಿಟ್ಟು ಇಳಿಸಿ.
 ಹುರಿದ ಹೆಸರುಬೇಳೆ ಸುವಾಸನಾಯುಕ್ತವಾಗಿರುವುದರಿಂದ ಏಲಕ್ಕಿ ಹಾಕಬೇಕೆಂದೇನೂ ಇಲ್ಲ. 


ಗಸಗಸೆ ಪಾಯಸ

ಅರ್ಧ ಕಪ್ ಚಿರೋಟಿ ರವೆ
ಮೂರು ಟೀ ಸ್ಪೂನ್ ಗಸಗಸೆ
ಮೂರು ಚಮಚ ಕಾಯಿತುರಿ
ಮೂರು ಕಪ್ ಸಕ್ಕರೆ

ಚಿರೋಟಿ ರವೆಯನ್ನು ಹುರಿಯಿರಿ.
ಗಸಗಸೆಯನ್ನೂ ಪ್ರತ್ಯೇಕವಾಗಿ ಹುರಿಯಿರಿ.

ಹುರಿದ ಗಸಗಸೆಯನ್ನು ಮೂರು ಚಮಚ ಕಾಯಿತುರಿಯೊಂದಿಗೆ ಅರೆಯಿರಿ.
ನೀರು ಕಾಯಿಹಾಲು ಎರೆದು ಚಿರೋಟಿ ರವೆ ಹಾಗೂ ಅರೆದ ಗಸಗಸೆಯನ್ನು ಬೇಯಿಸಿ.
ಬೆಂದು ಮೆತ್ತಗಾಯಿತೇ,  ಸಕ್ಕರೆ ಹಾಕಿ.
ಸಕ್ಕರೆ ಕರಗಿ ಕುದಿಯಿತೇ,  ದಪ್ಪ ಕಾಯಿಹಾಲು ಎರೆದು ಇನ್ನೊಂದು ಕುದಿ ಬರುವ ತನಕ ಒಲೆಯ ಮೇಲಿಟ್ಟು ಇಳಿಸಿ.
ಇದಕ್ಕೂ ಏಲಕ್ಕಿ ಬೇಡ.   ಗಸಗಸೆಗೆ ತನ್ನದೇ ವಿಶಿಷ್ಟ ಸುವಾಸನೆ ಇದೆ.

ಸಿಹಿ ಮಾಡುವುದನ್ನು ನೋಡಿಕೊಂಡಾಯ್ತು,  ಈಗ ಅನ್ನದೊಂದಿಗೆ ಕೂಟು ಮಾಡಿಕೊಳ್ಳೋಣ.
ಕೇರಳದ ಸಾಂಪ್ರದಾಯಿಕ ವ್ಯಂಜನ ವೋಳನ್,  ಅನ್ನದೊಂದಿಗೆ ಮಾತ್ರವಲ್ಲದೆ ಚಪಾತೀ, ಪೂರೀ, ನಾನ್ ಇತ್ಯಾದಿಗಳೊಂದಿಗೆ ಬಳಸಬಹುದು.

ಒಂದು ಕಪ್ ಅಲಸಂಡೆ ಕಾಳು
ಅವಶ್ಯವಿದ್ದಷ್ಟು ಕುಂಬಳಕಾಯಿ ಹೋಳು
2 - 3 ಸಿಗಿದ ಹಸಿಮೆಣಸು
ರುಚಿಗೆ ಉಪ್ಪು
2 ಕಪ್ ದಪ್ಪ ಕಾಯಿಹಾಲು

ಒಗ್ಗರಣೆ ಸಾಮಗ್ರಿಗಳು:  
4 ಚಮಚ ತೆಂಗಿನೆಣ್ಣೆ,  ಅರ್ಧ ಚಮಚ ಸಾಸಿವೆ, ಜೀರಿಗೆ,  ಕರಿಬೇವು,  ಇಂಗು.

ಯಾವುದೇ ಬೇಳೆ ಆಗಿರಲಿ, ಮುನ್ನಾದಿನವೇ ನೆನೆ ಹಾಕಿರಬೇಕು.  ಬೇಳೆ ಹಾಗೂ ತರಕಾರಿ ಉಪ್ಪು ಹಾಕಿ ಬೇಯಿಸಿ.   ಬೆಂದ ನಂತರ ಹಸಿಮೆಣಸು ಹಾಕಿಕೊಳ್ಳಿ.  ಬೇಕಿದ್ದರೆ ಎರಡು ನೀರುಳ್ಳಿ ಚಿಕ್ಕದಾಗಿ ಕತ್ತರಿಸಿ ಹಾಕಿ.  ಕಾಯಿಹಾಲು ಎರೆದು ಕುದಿಸಿ.   ತೆಂಗಿನೆಣ್ಣೆಯಲ್ಲಿ ಒಗ್ಗರಣೆ ಕೊಡಿ.


ಬರೆಯುತ್ತಾ,   ಫೋಟೋ ಎಡಿಟಿಂಗ್ ಹಾಗೂ ಬರೆದದ್ದನ್ನು ಪುನರ್ಪರಿಶೀಲಿಸುತ್ತಿರಬೇಕಾದರೆ ಮಗಳ ಬರ್ತ್ ಡೇ ಬಂದಿತು.   " ಅಮ್ಮ,  ನನ್ ಬರ್ತ್ ಡೇಗೆ ಖರ್ಜೂರ ಪಾಯಸವೇ ಆಗಬೇಕು "  ಅಂದಿದ್ದಳು ಮಗಳು.  " ಸರಿ, ಮಾಡೋಣ "  ಅಂದ್ಬಿಟ್ಟು ಮಾಡಿದ್ದೂ ಆಯಿತು,  ಚೆನ್ನಾಗಿದೆ ಎಂದು ಬಟ್ಟಲಿಗೆ ಸುರಿದು ತಿಂದಿದ್ದೂ ಆಯಿತು.  ಈಗ ಖರ್ಜೂರ ಪಾಯಸ ಮಾಡುವ ವಿಧಾನ ನೋಡಿಕೊಳ್ಳೋಣ.

ಖರ್ಜೂರ ಅಂದಾಜು 200 ಗ್ರಾಂ
ಬೆಲ್ಲ 3 ದೊಡ್ಡ ಸ್ಪೂನ್
ಕಾಯಿಹಾಲು

ಖರ್ಜೂರ ಬೀಜ ತೆಗೆದು ನೀರು ಕಾಯಿಹಾಲು ಎರೆದು ಕುದಿಸಿ.   ತಣಿಯಲು ಬಿಡಿ.   ತಣಿದ ನಂತರ ಮಿಕ್ಸಿಯಲ್ಲಿ ಎರಡು ಸುತ್ತು ತಿರುಗಿಸಿ.   ಹೆಚ್ಚು ನುಣ್ಣಗಾಗಬಾರದು.
ಇದಕ್ಕೆ ಬೆಲ್ಲ ಸೇರಿಸಿ ಒಲೆಯ ಮೇಲಿಟ್ಟು ಬೆಲ್ಲ ಕರಗಿಸಿಕೊಳ್ಳಿ.
ಬೆಲ್ಲ ಕರಗಿತೇ,  ದಪ್ಪ ಕಾಯಿಹಾಲು ಎರೆದು ಕುದಿಸಿ ಕೆಳಗಿಳಿಸಿ.   ಏಲಕ್ಕಿ ಪುಡಿ ಇದ್ದರೆ ಹಾಕಬಹುದು.
ಇಷ್ಟಕ್ಕೇ ಮುಗಿಯಲಿಲ್ಲ,   ಈ ಕಾಯಿಹಾಲಿಗೆ ಬೆಲ್ಲದ ಪಾಕ ಎರೆದು ದೋಸೆ, ಇಡ್ಲಿಗಳನ್ನು ತಿನ್ನಿ.   ಹಬ್ಬದ ಸಂಭ್ರಮದ ವಾತಾವರಣ ಮನೆ ಮನಗಳನ್ನು ವ್ಯಾಪಿಸುವುದು.   ದೋಸೆ, ಇಡ್ಲಿ ಅಲ್ಲದೆ  ಸಾದಾ ಅವಲಕ್ಕಿಯೊಂದಿಗೂ ಚೆನ್ನಾಗಿರುತ್ತದೆ.
ಭೂರಿ ಭೋಜನ,  ಔತಣಕೂಟಗಳಲ್ಲಿ ಕಡ್ಲೇಬೇಳೆ ಹೋಳಿಗೆ ಇರಲೇಬೇಕು.   ಅದರೊಂದಿಗೆ ತುಪ್ಪ, ಕಾಯಿಹಾಲು ಕಡ್ಡಾಯ.   ಕಾಯಿಹಾಲು ಹಾಕಿಸಿಕೊಂಡು 7 - 8  ಹೋಳಿಗೆಗಳನ್ನು ಹೊಡೆಯುವವರಿದ್ದಾರೆ.   Posted via DraftCraft app

Sunday, 4 August 2013

ನೆಲ್ಲಿಕಾಯಿಯ ರಾಜವೈಭವ !

ಶಾಲೆಗೆ ಹೋಗುತ್ತಿದ್ದ ಆ ದಿನಗಳಲ್ಲಿ ಕಂಪಾಸ್ ಬಾಕ್ಸ್ ಒಳಗೆ ಅಡಗಿಸಿಟ್ಟು ತಿನ್ನುತ್ತಿದ್ದ ಕಾಟಂಗೋಟಿ ಹಣ್ಣುಗಳಲ್ಲಿ ರಾಜನೆಲ್ಲಿಕಾಯಿ ಕೂಡಾ ಇತ್ತಲ್ಲವೇ ?   ಮನೆಹಿತ್ತಲಲ್ಲಿ ಮರ ಇದ್ದ ಹುಡುಗಿಯರು ತರಲಿಕ್ಕೆ,  ಉಳಿದವರು  " ಏ,  ನಂಗೊಂದು ಕೊಡೇ..." ಎಂದು ಅಂಗಲಾಚಿ ತಿನ್ನಲಿಕ್ಕೆ.   ತಂದವಳಿಗೆ ಸ್ನೇಹಿತರು ಏನಾದರೂ ಉಪಕಾರ ಮಾಡಿಯೇ ಮಾಡುತ್ತಿದ್ದರು,  ನೋಟ್ಸ್ ಕೊಟ್ಟು,  ಲೆಕ್ಕದ ಪಾಠ ಬಿಡಿಸಿ ಕೊಟ್ಟು.

ನನ್ನ ಮಗಳು,  ಚಿಕ್ಕಮ್ಮನ ಮನೆಗೆ ಹೋಗಿ ಬಂದವಳು   " ನೋಡಮ್ಮಾ,  ಚಿಕ್ಕಮ್ಮನ ಪೇಟೆ ಮನೆಯಲ್ಲಿ ರಾಜನೆಲ್ಲಿ ಮರ ಇದೆ,  ಉಪ್ಪಿನಕಾಯಿ ಎಷ್ಟು ಚೆನ್ನಾಗಿತ್ತು ಅಂತೀಯ,   ಇಲ್ಲಿ ಇರೂದು ಬರೇ ಬೀಂಬುಳಿ "

" ಹಾಗಂತೀಯ,  ರಾಜನೆಲ್ಲಿಕಾಯಿ ಗಿಡ ನೆಡೋಣ "

ಮುಂದಿನ ಪ್ರಯಾಣದಲ್ಲಿ ನನ್ನ ತಂಗಿಯೇ ನೆಲ್ಲಿಕಾಯಿ ಗಿಡ ಹೊತ್ತು ತಂದಳು.

" ತೋಟದಲ್ಲಿ ಇದೆ ಓಬೀರಾಯನ ಕಾಲದಲ್ಲಿ ನೆಟ್ಟಿದ್ದು,  ಆದ್ರೆ ನೆಲ್ಲಿಕಾಯಿ ಆಗಿದ್ದು ನಾ ನೋಡೇ ಇಲ್ಲ "  ಅಂದೆ.

" ತೋಟದೊಳಗೆ ನೆರಳು ಅಲ್ವೇ,  ಚೆನ್ನಾಗಿ ಬಿಸಿಲು ಬೀಳೋ ಜಾಗದಲ್ಲಿ ನೆಟ್ಟರೆ ಆದೀತು "  ತಂಗಿ ಅಂದಳು.

                                                    <><><>       <><><>


" ಅಂತೂ ಈಗ ನೆಲ್ಲಿಕಾಯಿ ಆಯ್ತು "  ಮಗಳಿಗೆ ಫೋನ್ ಮಾಡುತ್ತಿರಬೇಕಾದರೆ ಅಂದಿದ್ದು.

" ನಾನು ಬರದೇ ಒಂದನ್ನೂ ಕೊಯ್ಯಬಾರದು "

ವಾರದ ಕೊನೆಗೆ ಬರುತ್ತಿರುತ್ತಾಳೆ,  ಬಂದಳು.

ನೆಲ್ಲಿಕಾಯಿ ಗಿಡವನ್ನು ದೋಟಿಯಲ್ಲಿ ಕುಟ್ಟೀ ಕುಟ್ಟೀ,   ಕೆಳಗೆ ಬಿದ್ದ ಕಾಯಿಗಳನ್ನು ಹೆಕ್ಕೀ ಹೆಕ್ಕೀ,  ನಲ್ಲೀ ನೀರಿನಲ್ಲಿ ತೊಳೆದೂ ತೊಳೆದೂ,  ಉಪ್ಪು ಹಾಕಿ ತಿಂದಿದ್ದೂ ತಿಂದಿದ್ದೇ.

ಮದ್ಯಾಹ್ನ ಆಗೋ ಹೊತ್ತಿಗೆ  " ಹೊಟ್ಟೆ ನೋಯುತ್ತೆ "  ಅಂದಳು.

" ಹಾಗೆ ಯಾಕೆ ತಿಂತೀಯ,  ಉಪ್ಪಿನಕಾಯಿ ಹಾಕಿ ಇಟ್ಟುಕೊಳ್ಳೋಣ "


ಅಡುಗೆ ಪುಸ್ತಕಗಳ ಸಂಗ್ರಹ ಹೊರ ಬಂದಿತು.   ಶಾಂತಾದೇವಿ ಮಾಳವಾಡ ಬರೆದಿರುವ  ' ರಸಪಾಕ '  ಪುಸ್ತಕದಲ್ಲಿ ಉಪ್ಪಿನಕಾಯಿ ಹಾಗೂ ಚಟ್ನಿ ಪಾಕವಿಧಾನ ಸಿಕ್ಕಿತು.   ಅವರು ಈ ನೆಲ್ಲಿಯನ್ನು ರಾಯನೆಲ್ಲಿಕಾಯಿ ಎಂದು ಹೆಸರಿಸಿದ್ದಾರೆ.

ಚಟ್ನಿ  ಮಾಡೋಣ, 
ಒಂದು ಕಡಿ ತೆಂಗಿನತುರಿ
7 - 8  ರಾಜನೆಲ್ಲಿಕಾಯಿ ಬೀಜ ತೆಗೆದದ್ದು
2 ಹಸಿ ಮೆಣಸು
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆ ಸಾಮಗ್ರಿಗಳು

ಮಿಕ್ಸೀಗೆ ಹಾಕಿ ತಿರುಗಿಸಿ,  ಬೇರೆ ನೀರು ಹಾಕುವ ಅಗತ್ಯವೇ ಇಲ್ಲ.   ಒಗ್ಗರಣೆ ಕೊಡಿ.   ಈ ಗಟ್ಟಿ ಚಟ್ನಿಯನ್ನು ಅನ್ನದೊಂದಿಗೆ,  ಚಪಾತಿ,  ಪೂರಿಗಳೊಂದಿಗೆ ಸವಿಯಿರಿ.   ನಾನಂತೂ ಗಿಡದಲ್ಲಿದ್ದ ನೆಲ್ಲಿಕಾಯಿಗಳು ಮುಗಿಯುವ ತನಕ ದಿನವೂ ಚಟ್ನಿ ಮಾಡಿ ಆಯ್ತು.

ಉಪ್ಪಿನಕಾಯಿ ಹಾಕೋಣ,
ಇದಕ್ಕೂ ಹೆಚ್ಚಿನ ಶ್ರಮವೇನೂ ಇಲ್ಲ.   ಈಗ ದಿಢೀರ್ ಉಪ್ಪಿನಕಾಯಿ ಹುಡಿಗಳು ಸಿಗುತ್ತವೆ.  ಸಾಲದೂಂತ ನಾನೂ ಸಾಸಿವೆ,  ಜೀರಿಗೆ,  ಇಂಗು ಹುರಿದು ಹುಡಿ ಮಾಡಿ ಹಾಕಿ ಬೆರೆಸುವಷ್ಟರಲ್ಲಿ  " ಆಯ್ತಾ ಅಮ್ಮ, ಉಪ್ಪಿನ್ಕಾಯಿ ? "  ಕೇಳುತ್ತಾ ಮಗಳು ಆಗಮಿಸಿದಳು.

" ಈಗ್ಲೇ ತಿನ್ಬೇಡ್ವೇ,  ಇದು ಉಪ್ಪು ಮೆಣಸು ಎಳೆದು,  ನೆಲ್ಲಿಕಾಯಿಯ ಹುಳಿ ಬಿಟ್ಟು ಒಂದು ಹದಕ್ಕೆ ಬರಬೇಕಾದರೆ ನಾಲ್ಕು ದಿನ ಬೇಕಾದೀತು.  ಸ್ವಲ್ಪ ಜಜ್ಜಿಕೊಂಡರೆ ಉತ್ತಮ ಅಂತ ಆ ಪುಸ್ತಕದಲ್ಲಿ ಬರ್ದಿದಾರೆ ನೋಡು "   ಅಂದೆ ಚಮಚಾದಲ್ಲಿ ಜಜ್ಜುತ್ತಾ.

ನೆಲ್ಲಿಕಾಯಿ ಕೊಯ್ಯುತ್ತಿರಬೇಕಾದರೆ ಪಕ್ಕದಲ್ಲೇ ಕಾಟ್ ಕಿಸ್ಕಾರದ ಹೂಗಳು ಅರಳಿ ನಗುತ್ತಿರಬೇಕೆ,   ಅದನ್ನೇಕೆ ಬಿಡಲಿ,  ನೆಲ್ಲಿಯೊಂದಿಗೆ ಕಿಸ್ಕಾರ ಹೂಗಳೂ ಅಡುಗೆಮನೆಯೊಳಗೆ ಬಂದವು.   ಕಿಸ್ಕಾರದ ತಂಬುಳಿ,  ನೆಲ್ಲಿ ಚಟ್ನಿ ಹೀಗೆ ಎರಡು ಐಟಂ ಬೇಡ,  ಒಟ್ಟಿಗೆ ಹಾಕಿ ಒಂದು ಹೊಸ ಬಗೆಯ ಚಟ್ನಿ ಸಿದ್ಧವಾಯಿತು.   ಮಜ್ಜಿಗೆ ಎರೆಯಲಿಲ್ಲ.   ಎರಡು ಗಾಂಧಾರಿ ಮೆಣಸು ರುಬ್ಬುವಾಗ ಹಾಕಿದ್ದು ಅಷ್ಟೇ.    ಮಳೆ ಬರುವಾಗ ಬಿಸಿ ಬಿಸಿಯಾದ ಕುಚ್ಚುಲಕ್ಕಿ ಅನ್ನದೊಂದಿಗೆ ಈ ಚಟ್ನಿ ಸವಿದೇ ತಿಳಿಯಿರಿ.

ಜಾಮ್ ಕೂಡಾ ಮಾಡಬಹುದು,  ಸಕ್ಕರೆಪಾಕದಲ್ಲಿ ಹಾಕಿ ಕುದಿಸಿ ಸವಿಯಬಹುದು,  ಇಟ್ಟುಕೊಳ್ಳಲೂ ಬಹುದು.  ಚಿಗುರೆಲೆಗಳಿಂದ ತಂಬುಳಿ ತಯಾರಿಸಿ. ಹಣ್ಣುಗಳ ಜ್ಯೂಸ್ ಮಾಡಬಹುದು,  ಬೀಜಗಳನ್ನು ತೆಗೆಯುವ ಕೆಲಸ ಮಾತ್ರ ಇಲ್ಲಿ ಇದೆ.


ಈ ರಾಜನೆಲ್ಲಿಕಾಯಿಯ ಮೂಲನೆಲೆ ಭಾರತವೇ ಆಗಿದೆ.   ಆಮ್ಲೀಯ ಮಣ್ಣಿನಲ್ಲಿ ಬಹು ಬೇಗನೆ ಫಲ ನೀಡುವಂತಹ ಮಧ್ಯಮ ಗಾತ್ರದ ಸಸ್ಯ.   ಚೆನ್ನಾಗಿ ಹಣ್ಣಾದ ನೆಲ್ಲಿಯ ಬೀಜಗಳಿಂದ ಹೊಸ ಗಿಡಗಳನ್ನು ಪಡೆಯಬಹುದಾಗಿದೆ.   ವರ್ಷಕ್ಕೆರಡು ಬಾರಿ ಫಲ ನೀಡುವ ಈ ಮರ,  ಒಮ್ಮೆ ಮಳೆಗಾಲದ ಆರಂಭದ ಮೊದಲು,  ಮಗದೊಮ್ಮೆ ಮಳೆ ಕಡಿಮೆಯಾಗುವ ಹಂತದಲ್ಲಿ,  ಸೆಪ್ಟೆಂಬರ - ಅಕ್ಟೋಬರದಲ್ಲಿ.   ಸಸ್ಯಶಾಸ್ತ್ರೀಯವಾಗಿ Phyllanthus acidus ಅನ್ನಿಸಿಕೊಂಡಿದೆ,   Phyllanthaceae ಕುಟುಂಬದಿಂದ ಬಂದಿದೆ.   ಅಸಲು ನೆಲ್ಲಿಕಾಯಿಯೊಂದಿಗೆ ಯಾವುದೇ ಹೋಲಿಕೆಯಿಲ್ಲದ ಈ ಹಣ್ಣು ಬೀಂಬುಳಿ,  ದಾರೆಹುಳಿಗಳಂತೆ ಒಂದು ಹುಳಿ ಹಣ್ಣು.  ನೆಲ್ಲಿಕಾಯಿಯಲ್ಲಿ ಅಧಿಕ ವಿಟಮಿನ್ ಸಿ ಇರುವುದಾದರೆ ಇದರಲ್ಲಿ ವಿಟಮಿನ್ ಸಿ ಕನಿಷ್ಠವಾಗಿರುವುದು. ಕತ್ತರಿಸಿದಾಗ ನೆಲ್ಲಿಕಾಯಿಯಂತಹುದೇ ಗಟ್ಟಿಯಾದ ಬೀಜವೂ,  ಕತ್ತರಿಸಿದ ಭಾಗ ನಕ್ಷತ್ರಾಕೃತಿಯಿರುವುದರಿಂದ ಆಂಗ್ಲ ಭಾಷೆಯಲ್ಲಿ ಸ್ಟಾರ್ ಗೂಸ್ ಬೆರಿ ಎಂದಾಗಿದೆ.    ಶೇಕಡಾ 91 ಪಾಲು ನೀರು ಉಳಿದಂತೆ ಕ್ಯಾಲ್ಸಿಯಂ,  ಪ್ರೊಟೀನ್,  ಫಾಸ್ಫರಸ್ ಹಾಗೂ ಕಬ್ಬಿಣಾಂಶವನ್ನೂ ಒಳಗೊಂಡಿರುವ ರಾಜನೆಲ್ಲಿಕಾಯಿ ಪುಷ್ಟಿದಾಯಕ ಹಣ್ಣು,   ರಕ್ತಶುದ್ಧಿಕಾರಕ ಹಾಗೂ ಹಸಿವನ್ನು ಪ್ರಚೋದಿಸುವಂಥದ್ದು. ರಾಜನೆಲ್ಲಿಕಾಯಿ ಯಾವುದೇ ಕೀಟನಾಶಕಗಳ ಬಳಕೆಯಿಲ್ಲದೆ,  ರಸಗೊಬ್ಬರಗಳ ಹಂಗಿಲ್ಲದೆ ಆಗುವಂತಹದು.   ಎಲೆ,  ಬೀಜ,  ಕಾಂಡದ ತೊಗಟೆ ಕೂಡಾ ಔಷಧೀಯ ಗುಣವುಳ್ಳದ್ದಾಗಿದೆ,  ಆಂಟಿ ಓಕ್ಸಿಡೆಂಟ್ ಎಂದೇ ಹೇಳಬಹುದಾಗಿದೆ.

Posted via DraftCraft app