Pages

Ads 468x60px

Tuesday 27 April 2021

ತೊಕ್ಕು

 



ಮಗಳು ಸುಬ್ರಹ್ಮಣ್ಯಕ್ಕೆ ಹೋಗಿ ಬಂದಳು,    "ಅಮ್ಮ,  ವೆಂಕ್ಟೇಶ ಭಾವನ ತೋಟದ ಕಸಿ ಮಾವಿನಕಾಯಿ ತಂದಿದ್ದೇನೆ,  ಚಟ್ಣಿಮಾಡೂ.."


"ಚಟ್ಣಿಯಾ,   ಚಟ್ಣಿ ಮಾಡಿ ಇಡೂದಾ..  ತಿಂದು ಮುಗಿಯಲಿಕ್ಕಿಲ್ಲ ಸಣ್ಣ ಮಾವಿನಕಾಯಿ ಚಟ್ಣಿಗಿರಲಿ,   ದೊಡ್ಡದನ್ನು ತೊಕ್ಕು ಮಾಡಿತಿನ್ನೋಣ. "

ಚಟ್ಣಿ  ರಾತ್ರಿಯೂಟಕ್ಕೆ ಮಾಡಿ ತಿಂದೆವು.   "ಅತ್ತೇಉಳಿದ ಚಟ್ಣಿ ಪ್ರಿಜ್ ಒಳಗಿಡಿ ಬೆಳಗ್ಗಿನ ತಿಂಡಿಗಾದೀತು. "  ಎಂದ ಅಳಿಯ.

ಸರಿ ಹಾಗೇ ಮಾಡೋಣ. "


ಚಟ್ಣಿ ಮಾಡುವ ವಿಧಾನ ಬರೆಯುವುದಕ್ಕಿಲ್ಲ ಹಿಂದೆ ಬರೆದಿದ್ದೇನೆಂದು ಜ್ಞಾಪಕ ಹುಡುಕಿ ಓದಿರಿ.


ನಿನ್ನೆ ತಾನೇ ಮಾವಿನಕಾಯಿ ತೊಕ್ಕು ಮಾಡುವ ವೀಡಿಯೋ ಯೂ ಟ್ಯೂಬಲ್ಲಿ ನೋಡಿದ ನೆನಪು ಪುನರಪಿ ಹುಡುಕಿ ನೋಡಿದ್ದಾಯ್ತು.


ಎರಡು ಮಾವಿನಕಾಯಿ ಸಿಪ್ಪೆ ತೆಗೆದು ತುರಿಯಿರಿ.   ತೋತಾಪುರಿ ಆದರೆ ಒಳ್ಳೆಯದು ಮಾರುಕಟ್ಟೆಯಲ್ಲಿ ಯಾವಾಗಲೂ ಸಿಗುವಂತದು.


ಬಾಣಲೆಯಲ್ಲಿ ತುಸು ತೆಂಗಿನೆಣ್ಣೆ ಯಾ ಎಳ್ಳೆಣ್ಣೆ ಎರೆದು ಸಾಸಿವೆ ಸಿಡಿಸಿರಿ ತುರಿದ ಮಾವಿನಕಾಯಿಗಳನ್ನು ಹಾಕುವುದು.   ನನ್ನ ಮಾವಿನಕಾಯಿಗಳು ಬಾಡಿಯೇ ಹೋಗಿದ್ದುವು ಒಂದಂತೂ ಅರೆಹಣ್ಣಿನಂತಾಗಿತ್ತು ಅಂತೂ ಹೇಗೋ ತುರಿದಾಯ್ತು ಅನ್ನಿ.


ಮಾವಿನಕಾಯಿ ತುರಿ ಚೆನ್ನಾಗಿ ಬಾಡಲಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸಿಹಿಯ ಬಾಬ್ತು ಬೆಲ್ಲ ಹಾಕುವುದು ಬೆಲ್ಲ ತುಸು ಜಾಸ್ತಿ ಹಾಕಿದರೆ ರುಚಿಯಾಗಿರುತ್ತದೆ ಸಿಹಿ ಆಗದವರು ಹಾಕಲೇಬೇಡಿ

ಬೆಲ್ಲ ಕರಗುತ್ತಿರಲಿ.


 ನಡುವೆ ನಾವು ತೊಕ್ಕಿನ ಮಸಾಲೆ ಮಾಡಬೇಕಾಗಿದೆ.

ಬಾಣಲೆಗೆ ಎಣ್ಣೆಪಸೆ ಮಾಡಿ ಕಡಲೆ ಗಾತ್ರದ ಇಂಗುಮೂರು ಚಮಚ ಮೆಂತೆ ಹುರಿದು ತೆಗೆಯಿರಿ.


ಆರಿದ ನಂತರ ನೀರ ಪಸೆ ಇಲ್ಲದ ಮಿಕ್ಸಿ ಜಾರಿಗೆ ಹಾಕಿಕೊಳ್ಳಿ.

ಜೊತೆಗೇ ಮೂರು ಚಮಚ ಮೆಣಸಿನಹುಡಿಮೂರು ಚಮಚ ಉಪ್ಪು ಚಿಟಿಕೆ ಅರಸಿಣ ಕೂಡಿ ಅರೆಯಿರಿ ಮೆಂತೆ ನುಣ್ಣಗಾಯ್ತು,  

ಅರೆಯುವಾಗ ಬೇಕಿದ್ದರೆ ಕಾಳುಮೆಣಸಿನಹುಡಿಹುರಿದ ಜೀರಿಗೆ ಹಾಕಿಕೊಳ್ಳಬಹುದಾಗಿದೆ ಇದೆಲ್ಲ ನಮ್ಮ ಆಯ್ಕೆ.


ಮಸಾಲೆ ಹುಡಿಯನ್ನು ಬೆರೆಸಿ ನೀರು ಆರುವ ತನಕ ಮಂದಾಗ್ನಿಯಲ್ಲಿ ಸೌಟಾಡಿಸಿ.

ಬೇಗನೇ ಆಗಿ ಬಿಟ್ಟಿತು ಬಾಡಿ ಹೋದ ಮಾವಿನಕಾಯಿಗಳ ತೊಕ್ಕು.

ಊಟದ ಹೊತ್ತಿನಲ್ಲಿ ಬಡಿಸಿದಾಗ,   "ಅಬ್ಬಬ್ಬ...ಏನು ಖಾರಾ.."  ಅನ್ನುವುದೇ ನಮ್ಮೆಜಮಾನ್ರು.





ಅಯ್ಯೋ.. ಮೆಣಸಿನಹುಡಿ ಒಂದೇ ಚಮಚ ಹಾಕಬೇಕಾಗಿತ್ತು. “  ಇನ್ನು ರಿಪೇರಿ ಮಾಡುವಂತಿಲ್ಲ.

ಅಮ್ಮನೀನು ಮಾಡಿದ್ದು ನಂಗೆ ಚೆನ್ನಾಗಿದೆ.. " ಮಗಳು ಪಟಾಕಿ ಸಿಡಿಸಿದಳು.

ಹಂಗಿದ್ರೆ  ತೊಕ್ಕು ನೀನು ಬೆಂಗಳೂರಿಗೆ ಹೋಗುವಾಗ ಹೋಗಲಿ. "

ಹೋ.. ಆಯ್ತು. "

ಇದೇ ತರ ಪೈನಾಪಲ್ ತೊಕ್ಕು ಮಾಡ್ಬಹುದು ಮೆಂತೆ ಹಾಕಿದ ತೊಕ್ಕು ಆರೋಗ್ಯಕ್ಕೂ ಒಳ್ಳೆಯದು ಗೊತ್ತಾ.."

ಮಾಡಿ ಇಡು.. "


ಅಂಬಟೆ ,  ನಿಂಬೆಹುಳಿಬೇಕಿದ್ರೆ ಬೀಂಬುಳಿಯೂ ತೊಕ್ಕು ಆದೀತು ನೆಲ್ಲಿಕಾಯಿಯ ತೊಕ್ಕು ಆರೋಗಕ್ಕೆ ಉತ್ತಮಏನೂ ಸಿಗದಿದ್ರೆ ಟೊಮ್ಯಾಟೋ ತೊಕ್ಕು ಮಾಡಿ ತಿನ್ನಿ ಚಪಾತಿಯೊಂದಿಗೆ ತಿನ್ನಿ.

ಹುಣಸೆ ಹಣ್ಣಿನ ಕಾಲದಲ್ಲಿ ಹುಣಸೆಯ ತೊಕ್ಕು  ತರ ಆಯಾ ಋತುಮಾನಗಳಲ್ಲಿ ದೊರೆಯುವ ಹಣ್ಣುಗಳ ಸದುಪಯೋಗ ಮಾಡುತ್ತ ಆರೋಗ್ಯಲಾಭ ಗಳಿಸೋಣ.


 ಬರಹ ಸಿದ್ಧವಾಗುತ್ತಿದ್ದ ಹಾಗೇ ಕರ್ನಾಟಕದಲ್ಲಿ ಲಾಕ್ ಡೌನ್ ಎಂದು ಮಧು ಊರಿಗೆ ಬಂದಿದ್ದಾನೆನಾಲ್ಕು ದಿನ ಮೊದಲುಬೆಂಗಳೂರಿಗೆ ತೆರಳಿದವನು ಪುನಃ ಬರುವಂತಾಯ್ತು ತೋಟದ ಕಾರುಭಾರು ಎಲ್ಲ ಅವನದೇ ತೋಟದಿಂದ ಮಾವಿನಕಾಯಿಗಳ ಫೋಟೊ ನನ್ನ ಬರಹಕ್ಕಾಗಿ ಬಂದಿದೆ.



Sunday 11 April 2021

ಬಾಳೆಹಣ್ಣಿನ ಬಜ್ಜಿ

 


ಬಾಳೆಗೊನೆ ಹಣ್ಣಾಗಿದೆ.   ನಾಲ್ಕು ಹೊತ್ತೂ ಸುಲಿದು ತಿನ್ನಲು ಬೇರೆ ಕೆಲಸ ಇಲ್ವೇ..  ಎಲ್ಲರೂ ಮನೆಯೇ ಕಾರ್ಯಾಲಯ ಎಂಬಂತೆ ಕಂಪ್ಯೂಟರ್ ಎದುರು ಕುಳಿತು ಏನೋ ಮಾತಾಡಿಕೊಳ್ತಿದಾರೆ,   ಮತ್ತೇನಿಲ್ಲ ಸಂಜೆಯ ಹೊತ್ತು ಪೊಸಡಿಗುಂಪೆಯ ಸೂರ್ಯಾಸ್ತಮಾನ ವೀಕ್ಷಣೆಗೆ ಹೋಗುವುದಿದೆ ಅಷ್ಟೇ ವಿಷಯ.


ಸರಿ ಹೋಗುವಾಗ ಹೊಟ್ಟೆ ಗಟ್ಟಿ ಮಾಡಿಕೊಳ್ಳದಿದ್ದರೆ ಹೇಗೆ  ಬಾಳೆಹಣ್ಣಿನ ಪೋಡಿ ಮಾಡಿದ್ರಾದೀತಾ.."


“ ಪೋಡಿ ನಂಗೆ ತುಂಬ ಇಷ್ಟ.."  ಅಂದ ಮಗಳು.

 ನನ್ನ ಫೇವರಿಟ್ಟು.. " ಎಂದ ಸೊಸೆ.

 ಅಂದ ಹಾಗೆ ನಮ್ಮ ಕನ್ನಡದಲ್ಲಿ ಇದನ್ನು ಬಜ್ಜಿ ಅಂದ್ರಾದೀತು ಅಲ್ವೇ...

ಅಮ್ಮಹೆಸರೇನೇ ಇಟ್ಕೋ ನಮಗೆ ಪೋಡಿ ಮಾಡ್ತೀಯಾ.. "  ಅಂದ ಮಗ.   ಏನೇನು ಸಾಮಾನು ಬೇಕೂಂತ ಹೇಳು ತಂದ್ಕೊಡ್ತೇನೆ. "

ಈಗ ಏನೂ ತರೂದು ಬೇಡಕಡ್ಲೆಹಿಟ್ಟು ಅಕ್ಕಿಹಿಟ್ಟುಎಣ್ಣೆ ರುಚಿಗೆ ತಕ್ಕ ಉಪ್ಪು ಇದ್ದರಾಯಿತು ಮಸಾಲೆ ಗಿಸಾಲೆ ಏನೂ ಬೇಡ ಗೊತ್ತಾಯ್ತಲ್ಲ. "

ಅಮ್ಮಅಡುಗೆ ಪಾಠ ಈಗ ಬೇಡ ನಾವು ಕೆಲಸದಲ್ಲಿದ್ದೇವೆ.. " ಮಗಳ ಧ್ವನಿ ಎದ್ದು ಬಂದಿತು.


“ ಆಯ್ತೂ, "  ಬಾಳೆಗೊನೆ ಅಡುಗೆಮನೆಗೆ ಬಂದಿತು.

ಒಂದು ಬಾಳೆಹಣ್ಣು ನಾಲ್ಕು ಸೀಳುಗಳಾಯಿತು.

ತಪಲೆ ತುಂಬಿತು.

ಕಡ್ಲೆ ಹಿಟ್ಟು ಹಾಗೂ ಅಕ್ಕಿಹಿಟ್ಟು ಸಾಕಷ್ಟು ನೀರಿನೊಂದಿಗೆ ಬೆರೆಸುವುದು.   ಕೇವಲ ಕಡ್ಲೆ ಹಿಟ್ಟು ಬಾಳೆಹಣ್ಣಿಗೆ ಹೊಂದಿ ಬರುವುದಿಲ್ಲ ಒಂದು ಲೋಟ ಕಡ್ಲೆ ಹಿಟ್ಟಿಗೆ ಅರ್ಧ ಲೋಟ ಅಕ್ಕಿ ಹಿಟ್ಟು ಬೆರೆಸುವುದು ಸೂಕ್ತ ಈಗ ಏನೇನೋ ಮಿಲ್ಲೆಟ್ಸ್ ಹುಡಿಗಳೂ ಮಾರುಕಟ್ಟೆಯಲ್ಲಿವೆ ಮಿತ ಪ್ರಮಾಣದಲ್ಲಿ ಅವುಗಳನ್ನೂ ಸೇರಿಸಿಕೊಳ್ಳಬಹುದಾಗಿದೆ.   ಏನೋ ಒಂದು ಹೊಸರುಚಿ ಮಾಡಿದ್ದೇನೆ. "  ಎಂದು ಬೆನ್ನು ತಟ್ಟಿಕೊಳ್ಳಲಡ್ಡಿಯಿಲ್ಲ ಇರಲಿ.


ರುಚಿಗೆ ತಕ್ಕಷ್ಟು ಉಪ್ಪು ಹಾಕಿಟ್ಟು ಇಡ್ಲಿ ಹಿಟ್ಟಿನ ಸಾಂದ್ರತೆಯಲ್ಲಿರುವ ಹಡ್ಲೆ ಹಿಟ್ಟನ್ನು ಬಾಳೆ ಹಣ್ಣಿನ ಹೋಳುಗಳಿಗೆ ಬೆರೆಸಿ.


ಬಾಣಲೆಯಲ್ಲಿ ಎಣ್ಣೆ ಬಿಸಿಯಾದೊಡನೆ ಕಡ್ಲೆ ಹಿಟ್ಟು ಸವರಿದ ಬಾಳೆಹಣ್ಣುಗಳ ಹೋಳುಗಳನ್ನು ಬಿಡಿ ಬಿಡಿಯಾಗಿ ಎಣ್ಣೆಗಿಳಿಸಿ ಎರಡೂ ಬದಿ ಹೊಂಬಣ್ಣ ಬರುವ ತನಕ ಕರಿದು ತೆಗೆಯಿರಿ.

ಬಿಸಿ ಬಿಸಿಯಾಗಿ ಇರುವಾಗಲೇ ಸವಿಯಿರಿ ಚಹಾ ಜೊತೆಗಿರಲಿ.

ನನ್ನ ಬಾಳೆಗೊನೆಯೇ ಖಾಲಿ ಆಗ್ಹೋಯ್ತು.






Sunday 4 April 2021

ಪಪ್ಪಾಯಿ ಕಲಸು


ದಿನವೂ ಅಂಗಡಿಯಿಂದ ತಂದ ತರಕಾರಿಗಳದ್ದೇ ದರ್ಬಾರು ಹಲಸಿನಕಾಯಿ ಇನ್ನೂ ಅಡುಗೆಮನೆಗೆ ಬಂದಿಲ್ಲ.   ಮಾವಿನಕಾಯಿಯ ಸುದ್ದಿಯೇ ಇಲ್ಲ.   ಹೊರಚಾವಡಿಯಲ್ಲಿ ದಾಸಪ್ಪ ನಮ್ಮವರೊಂದಿಗೆ ಸಲ್ಲಾಪ ನಿರತನಾಗಿದ್ದಾನೆ.    ಬಿಡಬಾರದು,   ದಾಸಪ್ಪಾ ಒಂದು ಬಪ್ಪಂಗಾಯಿ ಕೊಯ್ದು ಕೊಡು.. "


ಅವನು ಕೊಯ್ದು ತಂದಿಟ್ಟ.   ಇವತ್ತು ಬಪ್ಪಂಗಾಯಿ ಕಜಿಪ್ಪು,

ಸೆಕೆಯಲ್ಲಿ ಮೈಯೆಲ್ಲ ಉರೀತಿದೆ.   ಖಾರ ಖಾರದ ಬೆಂದಿ ಬೇಡ ಸರಳವಾಗಿ ಒಂದು ಬೇಳೆಸಾರು ಕೂಡಾ ಇರಲಿ.


ಪಪ್ಪಾಯಿ ಅಡುಗೆ ಹೇಗಿದ್ದರಾದೀತು ಇದನ್ನೂ ಆದಷ್ಟು ಮಸಾಲೆ ಕಡಿಮೆ ಹಾಕಿಯೇ ಮಾಡೋಣ.


ಪಪ್ಪಾಯಿ ಇಬ್ಭಾಗವಾಯ್ತು ನಾಳೆಗೆ ಹಣ್ಣಾಗುವಂತದ್ದನ್ನು ಕೊಯ್ದು ಇಟ್ಟಿದಾನೆ ನನ್ನ ಕರ್ಮ.

ಚಿಂತಿಸುತ್ತಲೇ ಪಪ್ಪಾಯಿ ಹೋಳುಗಳು ತಪಲೆ ತುಂಬಿತು.

ಕಾಣಲಿಕ್ಕೆ ಥೇಟ್ ಚೀನೀಕಾಯಿ ಥರ,   ಹೌದಲ್ವೇ..  ಕಲಸು ಮಾಡೋಣ.    ಹಿಂದೆ ಚೀನೀಕಾಯಿಯ ಕಲಸು ಮಾಡುವ ವಿಧಾನ ಬರೆದಿದ್ದೇನೆ ಇದೀಗ ಪಪ್ಪಾಯಿ ಕಲಸು ಅನ್ನಿ.

ಮೆತ್ತಗಿರುವ ಪಪ್ಪಾಯಿ ಬೇಗನೆ ಬೆಂದಿತು ರುಚಿಗೆ ಉಪ್ಪು ಬೇಯುವಾಗಲೇ ಹಾಕುವುದು ಸೂಕ್ತ.

ಅರ್ಧ ತೆಂಗಿನ ತುರಿತುಸು ಜೀರಿಗೆ ಒಂದು ಹಸಿಮೆಣಸು ಚಿಟಿಕೆ ಅರಸಿಣ ಕೂಡಿ ಅರೆಯಿರಿ ಬೆಣ್ಣೆಯಂತೆ ನುಣ್ಣಗೆ ಆಗಬೇಕಿಲ್ಲ.

ಬೇಯಿಸಿದ ತರಕಾರಿಯೊಂದಿಗೆ ಕೂಡಿ ಒಂದು ಸೌಟು ಸಿಹಿಮೊಸರು ಎರೆಯಿರಿ.

ಕರಿಬೇವು ಸಹಿತ ಒಗ್ಗರಣೆ ಬೀಳಲಿ.

ಪಪ್ಪಾಯಿ ಸಿಹಿ ಆಗಿರೋದ್ರಿಂದ ಬೆಲ್ಲ ಹಾಕಿಲ್ಲ.

ಕುದಿಸಬೇಕಿಲ್ಲ ಒಂದು ತರಹದ ಸಲಾಡ್ ಅಂದರೂ ಆದೀತು ರಾಯಿತ ಅಂದರೂ ನಡೆದೀತು ಎಂದು ನನ್ನ ಅಂದಾಜು.   ಹೆಸರೇನೇ ಇಟ್ಟರೂ ರುಚಿಕರವಾಗಿದ್ದರೆ ಸಾಕು.

ಬೇಸಿಗೆಯ ಹವಾಮಾನಕ್ಕೆ ಅತಿ ಸರಳ  ಅಡುಗೆ ಉಣ್ಣಲೂ ರುಚಿಕರ.


ಉಳಿದ ಪದಾರ್ಥವನ್ನು ರಾತ್ರಿ ಉಣಬೇಕಿದ್ದರೆ ಕುದಿಸಿ ಇಡಬೇಕು.

ರಾತ್ರಿ ನನ್ನದು ಚಪಾತಿಯ ಭೋಜನ,  ಚಪಾತಿಗೂ ಕೂಡಿ ತಿನ್ನಲು ಹಿತವಾಗಿದ್ದಿತು.