Pages

Ads 468x60px

Friday, 21 August 2015

ಭಾವಚಿತ್ರ - ಅನಾವರಣ" ಅಪ್ಪನ ಫೊಟೋ ಬೇಕಂತಲ್ಲ ಲೈಬ್ರರಿಗೇ..."
" ಯಾಕೇ... ?" ಪ್ರಶ್ನೆ ಎಸೆದೆ.
" ಲೈಬ್ರರಿ ಸ್ಥಾಪನೆ ಆಗಿ 60 ವರ್ಷ ಆದ ಲೆಕ್ಕದಲ್ಲಿ ....."
" ಓ,  ಹಾಗೋ.... ಹಳೇ ಆಲ್ಬಂ ಹುಡುಕಿದರಾಯ್ತು ",  ಅನ್ನುತ್ತಿದ್ದಂತೆ ನೆನಪಾಯಿತು,  " ಮಾವ ಪುಸ್ತಕ ಹಿಡಿದು ಓದುತ್ತಾ ಇರೋ ಚಿತ್ರ ಇದೇ..."
" ಹೌದ,  ಲೈಬ್ರರಿಗೆ ಅದೇ ಚೆನ್ನ " ಅಂದ್ರು ನಮ್ಮೆಜಮಾನ್ರು.

ಆಲ್ಬಂಗಳನ್ನು ತಪಾಸಣೆಗೊಳಪಡಿಸಿದಾಗ ಉದ್ದೇಶಿತ ಭಾವಚಿತ್ರ ಸಿಕ್ಕಿತಾದರೂ,  ಯಾರೋ ಅಜ್ಜನ ಮೊಮ್ಮಕ್ಕಳು ಅಜ್ಜನ ಬೆಳ್ಳಗಿನ ಅಂಗಿ ಮೇಲೆ ಏನೋ ಕಲೆ ಮಾಡ್ಬಿಟ್ಟಿದ್ದಾರೇ,  ಅದೂ ಅಲ್ಲದೆ ಚಿತ್ರವೂ ಕಪ್ಪು ಬಿಳುಪಿನದು.
" ಫೊಟೋ ಚೆನ್ನಾಗಿದೆ,  ಕಲೆ ತೆಗೆಯಬಹುದಲ್ಲ "
" ಹ್ಞೂ, ತೆಗೆಯಬಹುದು " ಫೊಟೋ ಎಡಿಟಿಂಗ್ ಆ್ಯಪ್ ಮೂಲಕ, ಹಿಂದೊಮ್ಮೆ ನನ್ನಜ್ಜ ಕುಕ್ಕಿಲ ಕೃಷ್ಣ ಭಟ್ಟರ ಮೇಲೆ ಆಗಿದ್ದ ಶಾಯಿಕಲೆಯನ್ನು ಅಳಿಸಲು ಸಾದ್ಯವಾಗಿತ್ತು.

ಈ ಪಟ್ಟಾಂಗ ಆಗಿ ಕೆಲವೇ ದಿನಗಳಲ್ಲಿ ನಮ್ಮ ಕುಟುಂಬವರ್ಗ ಒಂದೆಡೆ ಅಂದ್ರೆ ನಮ್ಮನೆಯಲ್ಲಿ ಕಲೆಯುವ ಸಂದರ್ಭ ಒದಗಿ ಬಂತು.  ಯಥಾಪ್ರಕಾರ ಅಪ್ಪನ ಫೊಟೋ ಮಾತಿಗೆ ವಸ್ತುವಾಯಿತು.
" ಫೊಟೋ ಕಟ್ಟು ಹಾಕಿದ್ದೇ ಇದೆ, ಅದೂ ಮಾವ ಮಲಗುತ್ತಿದ್ದ ಉಗ್ರಾಣ*ದಲ್ಲೇ ನೇತಾಡುತ್ತಿದೆಯಲ್ಲ " ಎಂದಳು ನಮ್ಮನೆ ಹಿರಿಯಕ್ಕ.  " ಅದೂ ಹಾಳಾಗುವ ಸ್ಥಿತಿಗೆ ಬಂದಿದೆ "
*ಉಗ್ರಾಣ  =  ಕೋಣೆ, room.

ಸಂಜೆಯಾಗುತ್ತಲೂ ಚಿತ್ರಪಟ ಹಿಡಿದುಕೊಂಡು ನಮ್ಮಕ್ಕ ಬಂದಳು.
" ನೋಡೇ ನಮ್ಮಪ್ಪನ ಪಟ ಬಂತು, ಒಂದು ಇಮೇಜ್ ತೆಗೆದಿಡು..." ನಮ್ಮೆಜಮಾನ್ರ ಹುಕುಂ.
ಕೈಯಲ್ಲಿದ್ದ iPad Air 2  ಫೊಟೋ ಕ್ಲಿಕ್ಕಿಸಿ ಕೊಟ್ಟಿತು.  ಅಕ್ಕ ಅಂದಂತೆ ಚಿತ್ರದ ಹಿನ್ನಲೆ ತೀರಾ ಕೆಟ್ಟು ಹೋಗಿತ್ತು.   ಪೂರಕವಾಗಿ ಇನ್ನೊಂದು ಹಿನ್ನಲೆ ಚಿತ್ರ ಇದ್ದರೆ super imposing ಮಾಡಬಹುದು,  ಇದು ನನ್ನ ತರ್ಕ.

" ಇನ್ನೊಂದು ಬ್ಯಾಗ್ರೌಂಡ್ ಫೊಟೋ ಸಿಲೆಕ್ಟ್ ಮಾಡು..."
" ಆಯ್ತು,  ಈ ಟೇಬಲ್ ಮೇಲಿರೋ ಲ್ಯಾಪ್ಟಾಪ್ ಆದೀತು.." ಮಿರಮಿರನೆ ಮಿಂಚುತ್ತ ಇದ್ದಿತು ಆ ಆ್ಯಪಲ್ MacBook !
ಫೊಟೋ ಎಡಿಟಿಂಗ್ ಆ ಕೂಡಲೇ ಶುರು ಮಾಡಿದ್ದೂ ಆಯಿತು.  2 ನಿಮಿಷದಲ್ಲಿ ನಮ್ಮ ಮಾವನವರು ಹೊಸ ಗೆಟಪ್ ನಲ್ಲಿ ಪ್ರತ್ಯಕ್ಷ ಆಗ್ಬಿಟ್ರು.

ಅಂತೂ ನನ್ನ ಕೆಲಸ ಮುಗಿಯಿತೇ,  ಛೇ ... ಇಲ್ಲಾಪ್ಪ.  ಜಾಣಾತಿಜಾಣರಾದ ಮೊಮ್ಮಕ್ಕಳಿಗೆ ಅವರಜ್ಜನನ್ನು ತೋರಿಸದಿದ್ದರೆ ಹೇಗಾದೀತು?  ಮಂಗಳೂರು, ಬೆಂಗಳೂರು ನಗರಗಳಲ್ಲಿ ಸ್ವತಂತ್ರ ಉದ್ಯೋಗಿಗಳೂ, ಸಾಪ್ಟ್ ವೇರ್ ತಂತ್ರಜ್ಞರೂ ಆಗಿರುವ ಅಜ್ಜನ ಮುದ್ದಿನ ಕಂದಮ್ಮಗಳ ಕೈಲಿ  "ಭಲೇ" ಎಂದು ಶಿಫಾರಸ್ಸು ಆ ಕೂಡಲೇ ಬಂದೇ ಬಂದಿತು.

ಇವಿಷ್ಟೂ ಕೆಲ್ಸ ಆಯ್ತಲ್ಲ,  ಮಾವ ಹಿರಣ್ಯ ಗಣಪತಿ ಭಟ್, ಊರಿಗೇ ದೊಡ್ಡ ಜಮೀನ್ದಾರರು ಮಾತ್ರವಲ್ಲ ಗ್ರಾಮದ ಏಳಿಗೆಗಾಗಿ ಶ್ರಮಿಸಿದವರೂ ಹೌದು,  ಕೊಡುಗೈದಾನಿಗಳೂ ಆದ ಅವರು  " ದೇಹಿ " ಎಂದು ಬಂದವರಿಗೆ ಇಲ್ಲವೆಂದವರಲ್ಲ.  'ಈ ಕೈಯಲ್ಲಿ ಕೊಟ್ಟಿದ್ದು ಆ ಕೈಗೆ ತಿಳಿಯಬಾರದು' ಇಂತಹ ನೀತಿಯಲ್ಲಿ ಬದುಕಿದವರು.  

ಬಾಯಾರು ಗ್ರಾಮದ ಮುಳಿಗದ್ದೆಯಲ್ಲಿರುವ ಹೆದ್ದಾರಿ ಶಾಲೆ,  ಈ ಶಾಲೆ ಶತಮಾನೋತ್ಸವವನ್ನೂ ಕಂಡಿದೆ.  ಶಾಲೆಯ ಹಳೆವಿದ್ಯಾರ್ಥಿಗಳ ಕೂಟದಿಂದ ಸ್ಥಾಪಿತವಾದದ್ದು  " ಹೆದ್ದಾರಿ ಶಾಲಾ ಮಿತ್ರಮಂಡಳಿ ಗ್ರಂಥಾಲಯ ಹಾಗೂ ವಾಚನಾಲಯ "

ವಾಚನಾಲಯ ಅಂದ್ರೇ ಲೈಬ್ರರಿ ಸ್ಥಾಪಿತವಾದ ಅರುವತ್ತು ವರ್ಷಗಳ ನೆನಪಿಗಾಗಿ ಒಂದು ಕಾರ್ಯಕ್ರಮವನ್ನೂ ಹಮ್ಮಿಕೊಂಡು,  ಹಿರಿಯರ ನೆನಪನ್ನು ಲೈಬ್ರರಿಯಲ್ಲಿ ಶಾಶ್ವತವಾಗಿರಿಸುವ ಯೋಜನೆಗಾಗಿ ಭಾವಚಿತ್ರದ ಅನಾವರಣವೂ ಸೇರಿದೆ.   ವಿಷಯ ಏನಪ್ಪಾಂದ್ರೆ,  ಪುಸ್ತಕಪ್ರೇಮಿಗಳಾದ ಹಿರಣ್ಯ ಗಣಪತಿ ಭಟ್,  ತಮ್ಮಲ್ಲಿದ್ದ ಅಮೂಲ್ಯ ಪುಸ್ತಕ ಸಂಗ್ರಹ,  ಅದೂ ಸುಮಾರು ಐದು ಸಾವಿರಕ್ಕೂ ಮೇಲ್ಪಟ್ಟು ಪುಸ್ತಕಗಳು ಇದ್ದುವಂತೆ,  ಲೈಬ್ರರಿಗೆ ಉದಾರವಾಗಿ ದೇಣಿಗೆ ಕೊಟ್ಟಿರುತ್ತಾರೆ.
ಐವತ್ತರ ದಶಕದಲ್ಲಿ ಕುಗ್ರಾಮವಾಗಿದ್ದ ನಮ್ಮ ಬಾಯಾರು ಮುಳಿಗದ್ದೆ,  ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಹೋಗುವುದಿರಲಿ,  ಅರೆಹೊಟ್ಟೆ ಉಣ್ಣುತ್ತಿದ್ದ ರೈತಮಕ್ಕಳಿಗೂ,  ಸರ್ಕಾರೀ ಅಧಿಕಾರಿಗಳಿಗೂ,  ಕಲಾಸೇವೆಗೈಯುತ್ತಿದ್ದ ಯಕ್ಷಗಾನ ಮೇಳಗಳಿಗೂ ಹಿರಣ್ಯ ಗಣಪತಿ ಭಟ್ಟರ ಮನೆಯೇ ಆಶ್ರಯತಾಣವಾಗಿತ್ತು.   ಹಿರಣ್ಯಮನೆಯಲ್ಲಿ ಏನೇ ವಿಶೇಷ ಹಬ್ಬ ಹರಿದಿನ ಬಂದರೂ ಆ ದಿನ ಹೆದ್ದಾರಿ ಶಾಲೆಗೆ ಅಘೋಷಿತ ರಜೆ !

ಭಾನುವಾರ  ಬಂದಿತು,  ಎಂದಿನಂತೆ ಮನೆಕೆಲಸಗಳಲ್ಲೇ ತೊಡಗಿಸಿಕೊಂಡಿದ್ದ ನನ್ನನ್ನು  " ಹತ್ತು ಗಂಟೆಯ ಚಹಾ ಲೈಬ್ರರಿಯಲ್ಲೇ ಕುಡಿಯೋಣ " ಅಂದು ಅಡುಗೆಮನೆಯಿಂದ ಹೊರಗೆಳೆದಳು ಮಗಳು.  " ಹೌದಲ್ವೇ,  ಭಾವಚಿತ್ರ ಅನಾವರಣ ಕಂಡ ಹಾಗೂ ಆಯ್ತು "  ಹೊರಟು ಸಭೆಯಲ್ಲಿ ಲಕ್ಷಣವಾಗಿ ಕೂತಿದ್ದೂ ಆಯಿತು.
ನಾನು ಒಳ ಬಂದ ಹೊತ್ತಿಗೆ ಡಾ. ತಾಳ್ತಜೆ ವಸಂತಕುಮಾರ ಉದ್ಘಾಟನಾ ಭಾಷಣ ಆರಂಭಿಸಿದ್ದರು.   ನಮ್ಮ ಕುಟುಂಬದವರಾದ ತಾಳ್ತಜೆ ವಸಂತಕುಮಾರ,  ಬಾಯಾರು ಗ್ರಾಮದ ಇದೇ ಹೆದ್ದಾರಿ ಶಾಲೆಯಲ್ಲಿ ಕಲಿತ ತಮ್ಮ ನೆನಪಿನ ಬುತ್ತಿಗಳನ್ನು ಬಿಚ್ಚಿಟ್ಟರು.

ಹೆದ್ದಾರಿ ಶಾಲೆಯ ವಿದ್ಯಾಭ್ಯಾಸದಿಂದ ತೊಡಗಿ, ಯಕ್ಷಗಾನ ನಾಟಕಗಳ ಕಲಿಯುವಿಕೆಯ ವಿಸ್ತಾರ ನಮ್ಮ ಹಳ್ಳಿ ಶಾಲೆಯದ್ದು,  ಇದಕ್ಕೆಲ್ಲ ಸಾಥ್ ಕೊಟ್ಟಿದ್ದು ಹೆದ್ದಾರಿ ಶಾಲಾ ಮಿತ್ರಮಂಡಳಿ.

ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ. ಬಿ. ಎಸ್.ರಾವ್,  ಕಾಸರಗೋಡಿನ ಖ್ಯಾತ ಹೃದಯತಜ್ಞ ವೈದ್ಯರೂ ಆಗಿರುವ ಇವರು ಕೂಡಾ ಶಾಲಾ ವ್ಯಾಸಂಗ ಮಾಡಿದ್ದು ಇದೇ ಹಳ್ಳಿ ಶಾಲೆಯಲ್ಲಿ.  ಲೈಬ್ರರಿಯ ಬಗ್ಗೆ ಮಾತನಾಡುವಾಗ ತುಸು ವಿಷಾದದ ಛಾಯೆಯೂ ಅವರಲ್ಲಿತ್ತು,  ಡಿಜಿಟಲ್ ಲೈಬ್ರರಿಯ ಕನಸು ಅವರ ಕಂಗಳಲ್ಲಿತ್ತು.

ಊರಿನ ಹಿರಿಕಿರಿಯರನೇಕರಿಗೆ ಸನ್ಮಾನವೂ ದೊರೆಯಿತು,  ಪುಸ್ತಕಪ್ರೇಮಿಗಳಿಂದ ಲೈಬ್ರರಿಗೆ ಉದಾರವಾಗಿ ಪುಸ್ತಕಗಳೂ ಬಂದವು.  ಮದ್ಯಾಹ್ನದ ಹೊತ್ತು,  ಭೋಜನ ವಿರಾಮ.   ಅಂತೂ ಚಹಾ ಕುಡಿಯ ಬಂದವಳಿಗೆ ಭೂರಿಭೋಜನವೂ ಸಿಕ್ಕಿತೆಂದು ಬೇರೆ ಹೇಳಬೇಕಿಲ್ಲ ತಾನೇ...   ಅನ್ನ, ಸಾರು, ಪಲ್ಯ, ಗಸಿ, ಸಾಂಬಾರ್, ಮಜ್ಜಿಗೆ,  ಉಪ್ಪಿನಕಾೖ,  ಕಡಲೆಬೇಳೆ+ಸಬ್ಬಕ್ಕಿ ಪಾಯಸ, ಲಡ್ಡೂ !   ನನ್ನನ್ನು ಚಹಾ ಕುಡಿದು ಬರಲು ಕಳುಹಿಸಿದ ಮಗಳು ಊಟದ ಸಮಯದಲ್ಲಿ ಬಂದು ಕೂತಿದ್ದಳು !   ಅವಳೂ ಕಲಿತದ್ದು ಇದೇ ಶಾಲೆಯಲ್ಲಿ ಅಲ್ವೇ. 

"ಹೌದೂ, ನೀನು ಬಂದಿದ್ದೀ...  ಚೆನ್ನಪ್ಪನಿಗೆ ಊಟ ಕೊಟ್ಟು ಬಂದಿದ್ದೋ ಹೇಗೇ ?"
" ಅವನಿಗೂ ಇಲ್ಲಿಗೆ ಬರಲು ಹೇಳಿದ್ದೇನೆ " ಎಂದಳು ನಮ್ಮ ಜಾಣೆ.

ಊಟದ ತರುವಾಯ ಸಾಂಸ್ಕತಿಕ ಕಾರ್ಯಕ್ರಮ,  ಶಾಲಾ ಮಕ್ಕಳ ಯಕ್ಷಗಾನ - ಗಧಾಯುದ್ಧ.ಟಿಪ್ಪಣಿ: 29/8/2015ರಂದು ಸೇರಿಸಿದ ಉದಯವಾಣಿ ದಿನಪತ್ರಿಕೆಯ ವರದಿ.Friday, 14 August 2015

ಉಪ್ಪಡ್ ಪಚ್ಚಿಲ್ - ಉಪ್ಪು ಸೊಳೆಉಪ್ಪು ಸೊಳೆ ಹಾಕಲು ಹೊರಟಿದ್ದು ನೆನಪಿದೆ ತಾನೆ,  ಹಲಸಿನ ಸೊಳೆಗಳನ್ನು ಆಯ್ದು ಇಟ್ಟಾಗಿದೆ.   ಉಪ್ಪು ಸೊಳೆ ಎಂಬ ಹೆಸರಿಗೆ ತಕ್ಕ ಹಾಗೆ ಉಪ್ಪು ಬೇಕಲ್ವೇ,  ಭರ್ತಿ 2 ಕಿಲೋ ಉಪ್ಪು,  ಅದೂ ಹರಳುಪ್ಪು ತರಿಸಿದ್ದೂ ಆಗಿದೆ.   ಈಗಿನ ಕಾಲಕ್ಕೆ ತಕ್ಕ ಹಾಗೆ ಪ್ಲಾಸ್ಟಿಕ್ ಜಾಡಿಗಳಲ್ಲಿ (ಡ್ರಮ್ಮು) ಹಾಕಿಡಬಹುದಾಗಿತ್ತು.  ಹಿಂದಿನವರ ಪಿಂಗಾಣಿ ಭರಣಿಗಳು ಇರುವಾಗ,  ಅದ್ರಲ್ಲೇ ಹಾಕೋದು ಎಂದು ನಿಶ್ಚೈಸಿ,  ಭರಣಿ ತೊಳೆದು,  ಒಣಗಿಸಿದ್ದೂ ಆಗಿದೆ.

ಸರಿ,  ಭರಣಿಯ ತಳದಲ್ಲಿ ಒಂದು ಹಿಡಿ ಉಪ್ಪು ಮೊದಲಾಗಿ ಹಾಕುವುದು.  ಮೇಲಿನಿಂದ ಹಲಸಿನ ಸೊಳೆಗಳು,  ಅದರ ಮೇಲೆ ಪುನಃ ಉಪ್ಪು.... ಹೀಗೆ ಪೇರಿಸುತ್ತಾ ಬಂದಾಗ,   ಭರಣಿ ತುಂಬಿ ಸೊಳೆಗಳೂ ಹೊರಗಿಣುಕುವಲ್ಲಿಗೆ ಚೆನ್ನಪ್ಪ ಉದ್ಗರಿಸಿದ  " ಉಪ್ಪು ಸಾಲದು, ಮೇಲಿಂದ ಮುಚ್ಚಲಿಕ್ಕೆ ಉಪ್ಪು ಆಗಬೇಕಲ್ಲ "

ಈಗಾಗಲೇ ಸಂಜೆಯಾಗಿದೆ,  " ನಾಳೆ ಹಾಕಿದರಾಯಿತು..."

" ನಾಳೆ ನಾನು ಬೇರೆ ಹೋಗಲಿಕ್ಕಿದೆ,  ಏನು ಮಾಡುವುದು ?"  ಚೆನ್ನಪ್ಪನಿಗೂ ಚಿಂತೆ.

" ಅಷ್ಟೇ ಅಲ್ವ,  ಮೇಲಿಂದ ಉಪ್ಪು ನಾನೇ ಹಾಕ್ತೇನೆ ಬಿಡು,  ಈಗ ಭರಣಿ ಮುಚ್ಚಳ ಹಾಕಿ ಬಾಯಿ ಬಿಗಿದು ಬಿಡು... "
ಭರಣಿಗೆ ಭದ್ರವಾದ ಮರದ ಮುಚ್ಚಳವೂ ಇತ್ತಾಗಿ,  ಅದರ ಮೇಲೆ ಪ್ಲಾಸ್ಟಿಕ್ ಹಾಳೆಯನ್ನೂ ಹೊದಿಸಿ, ಬಾಯಿ ಬಿಗಿದೂ ಆಯ್ತು.

ಭರಣಿ ಯಾ ಮಣ್ಣಿನ ಮಂಡಗೆಯೇ ಆಗಬೇಕೆಂದೇನೂ ಇಲ್ಲ.  ಮನೆಯ ಸದಸ್ಯರೂ ಈಗ ಸೀಮಿತ ಸಂಖ್ಯೆಯಲ್ಲಿರುವುದರಿಂದ ಅಗತ್ಯ ಗಾತ್ರದ ಜಾಡಿಯಲ್ಲಿ ಹಾಕಿಟ್ಟರೂ ನಡೆಯುತ್ತದೆ.  ಭದ್ರವಾದ ಗಾಳಿಯಾಡದ ಪ್ಲಾಸ್ಟಿಕ್ ಜಾಡಿಗಳು ಅತ್ಯುತ್ತಮ,  ಉಪ್ಪು ಕಡಿಮೆಯಾದರೂ ಹಾಳಾಗುವ ಭಯವಿಲ್ಲ.

ಎರಡು ದಿನ ಬಿಟ್ಟು ಉಪ್ಪು ಸೊಳೆ ಹೇಗಿದೆ ಎಂದು ತಪಾಸಣೆ ಮಾಡಿದಾಗ ಭರಣಿಯಿಂದ ಹೊರ ಬರಲು ತವಕಿಸುತ್ತಿದ್ದ ಸೊಳೆಗಳನ್ನು ಉಪ್ಪು ಕೆಳಗಿಳಿಸಿಯೇ ಬಿಟ್ಟಿತ್ತು.  ಬೇಕಿದ್ದರೆ ಈ ಹಂತದಲ್ಲಿ ಇನ್ನೊಮ್ಮೆ ಹಲಸಿನ ಸೊಳೆಗಳನ್ನು ಆಯ್ದು ಪುನಃ ತುಂಬಿಸಿಕೊಳ್ಳಬಹುದಾಗಿದೆ.

ಉಪ್ಪು ಸೊಳೆ ಹಾಕಿ ಹತ್ತು ಹದಿನೈದು ದಿನಗಳ ನಂತರ ಅಡುಗೆಗೆ ಉಪಯೋಗಿಸಲು ಪ್ರಾರಂಭಿಸಬಹುದಾಗಿದ,  ಸೊಳೆ ಮುಗಿಯಬೇಡವೇ !  ಪಲ್ಯ,  ಬೋಳುಹುಳಿ,  ರೊಟ್ಟಿ,  ಉಂಡ್ಳಕಾಳು,  ವಡೆ, ಮುದ್ದೆಹುಳಿ,  ಸೋಂಟೆ,  ಹಪ್ಪಳ ಇತ್ಯಾದಿಯಾಗಿ ಇನ್ನೂ ಏನೇನೋ ಮಾಡಬಹುದು ಈ ಉಪ್ಪು ಸೊಳೆಯಲ್ಲಿ !  ಹೊಸ ಹಲಸಿನ ಋತು ಪ್ರಾರಂಭವಾದಾಗ ಭರಣಿಯಲ್ಲಿ ಉಳಿದದ್ದು ತೆಂಗಿನಮರದ ಬುಡಕ್ಕೆ ಹೋಗಲಿ,  ಉತ್ತಮ ಗೊಬ್ಬರ ಎಂದು ತಿಳಿಯಿರಿ !

Sunday, 9 August 2015

ಹಲಸು - ಪಲ್ಯ
ಮೇ 24ನೇ ತಾರೀಕು,  ಎಂದಿನಂತೆ ಪತ್ತನಾಜೆ ಬಂದಿದೆ.  ಕೃಷಿಕರು ಮಳೆಗಾಲದ ಸಿದ್ಧತೆಗೆ ತೊಡಗುವ ಸಮಯ.  ಯಕ್ಷಗಾನ ಕಲಾವಿದರು ಕಾಲಿನ ಗೆಜ್ಜೆ ಬಿಡಿಸಿ ಇಡುವ ದಿನ... ಪತ್ತನಾಜೆ ಅಂದರೆ ಇನ್ನೂ ಏನೇನೋ ವಿಶೇಷದ ದಿನ.  ಆದಿನ ವರ್ಷಂಪ್ರತಿ ನಮ್ಮ ಹಿರಣ್ಯಮನೆಯ ವತಿಯಿಂದ ಊರಿನ ಬಾಯಾರು ಪಂಚಲಿಂಗೇಶ್ವರ ದೇವಳದಲ್ಲಿ ಸಮಾರಾಧನೆ ಇದೆ,  ಹಿಂದಿನಿಂದಲೇ ನಡೆದುಕೊಂಡು ಬಂದಿದೆ,  ನಾವೂ ಮುಂದುವರಿಸುತ್ತಾ ಬಂದಿದ್ದೇವೆ. 

ಸಮಾರಾಧನೆ ಅಂದ್ರೇ ಭೂರಿಭೋಜನದ ವ್ಯವಸ್ಥೆ ಆಗಲೇಬೇಕಲ್ಲ,  ಸಣ್ಣಕ್ಕಿ ಅನ್ನ,  ಸಾರು,  ಪಲ್ಯ,  ಸಾಂಬಾರು,  ಪರಮಾನ್ನ ಇವೆಲ್ಲ ಆಗ್ಬೇಕಾಗಿದೆ.  ಅದಕ್ಕಾಗಿ ನಿಯೋಜಿಸಲ್ಪಟ್ಟ ಅಡುಗೆಯವರೇ ಮಾಡ್ತಾರೇ ಬಿಡಿ,  ನಮಗೇನೂ ಚಿಂತೆಯಿಲ್ಲ.  ಮಜ್ಜಿಗೆ,  ಉಪ್ಪಿನಕಾೖ,  ಘಮಘಮಿಸುವ ತುಪ್ಪ ಇವಿಷ್ಟು ಮನೆಯೊಳಗಿಂದ ಕಟ್ಟಿ ತಂದರಾಯಿತು.

ಹೇಳಿಕೇಳಿ ಈ ಋತು ಹಲಸಿನಕಾೖ ಸುಗ್ಗಿ ಆಗಿರೋದ್ರಿಂದ ಹಲಸಿನ ಪಲ್ಯ ಖಾಯಂ.  ನಮ್ಮ ಮಾವನವರ ಆಳ್ವಿಕೆಯಲ್ಲಿ ಊರಿಂದೂರೇ ಪತ್ತನಾಜೆ ಊಟಕ್ಕೆ ಹಾಜರಾಗುತ್ತಿತ್ತಂತೆ,  ಅರೆಹೊಟ್ಟೆ ಉಣ್ಣುತ್ತಿದ್ದ ರೈತಮಕ್ಕಳು ಈ ಒಂದು ದಿನ ಸಮೃದ್ಧಿಯನ್ನು ಕಾಣುತ್ತಿದ್ದರಂತೆ.  ಒಮ್ಮೆ ಏನಾಗಿತ್ತೆಂದರೆ,  ಎಂದಿನಂತೆ ಹಿರಣ್ಯಮನೆಯಿಂದ ದೇವಳಕ್ಕೆ ಹಲಸಿನಕಾಯಿಗಳು ಬಂದುವು.  ದೇವಸ್ಥಾನದ ಕೆಲಸಗಿತ್ತಿಯರು ಹಲಸಿನಸೊಳೆ ಬಿಡಿಸುವ ಧಾವಂತದಲ್ಲಿ ಹಲಸಿನ ಬೇಳೆಗಾಗಿ ಹೊಡೆದಾಡಿಕೊಂಡರಂತೆ.   ಈ ಪ್ರಕರಣದ ತರುವಾಯ ನಮ್ಮ ಮಾವ ಹಲಸಿನಕಾಯಿ ಸೊಳೆಗಳನ್ನು ಮನೆಯಿಂದಲೇ ಆಯ್ದು ಕಳುಹಿಸಲು ಪ್ರಾರಂಭಿಸಿದರಂತೆ.  ಇದನ್ನೆಲ್ಲ ನಮ್ಮತ್ತಿಗೆ ಹೇಳಿದುದರಿಂದ ನನಗೂ ತಿಳಿದಿದೆ.

ಈ ವರ್ಷವೂ ಪತ್ತನಾಜೆ ಬಂದಿದೆ.  ಹಲಸಿನಕಾಯಿಗಳನ್ನು ಚೆನ್ನಪ್ಪ ಕೊಯ್ದು ಇಟ್ಟ.  ಪಲ್ಯ ಮಾಡಬೇಕಾಗಿರುವ ಸೊಳೆಗಳನ್ನು ದಿನಮುಂಚಿತವಾಗಿ ಬಿಡಿಸಿಟ್ಟರೆ ಚೆನ್ನಾಗಿರುವುದಿಲ್ಲ.  ಬೆಳ್ಳಂಬೆಳಗ್ಗೆ ನಾವಿಬ್ಬರೂ ಎದ್ದು ಹಲಸಿನಸೊಳೆಗಳನ್ನು ಆಯ್ದು ಇಡಬೇಕೆಂಬ ತೀರ್ಮಾನಕ್ಕೆ ಬರಲಾಯಿತು.  ನಮ್ಮ ಕಾರ್ಯ ಸುಲಭವಾಗಲು ಚೆನ್ನಪ್ಪ ಹಲಸಿನಕಾಯಿಗಳನ್ನು ಕೈಮಡು ( ಕೊಡಲಿ ) ವಿನಲ್ಲಿ ನಾಲ್ಕು ಭಾಗಗಳಾಗಿಸಿ ಇಟ್ಟು ಹೋದ.

ಅಂತೂ ನಾವು ದೇವಸ್ಥಾನದ ಪೂಜಾವಿಧಿಗಳನ್ನೂ ಮುಗಿಸಿ,  ಸಮಾರಾಧನೆ ಊಟದಲ್ಲಿ ಪಾಲ್ಗೊಂಡು ಮನೆಗೆ ಮರಳಿದೆವು.   ಹಲಸಿನಕಾಯಿ ಪಲ್ಯವಂತೂ ಬಹಳ ಚೆನ್ನಾಗಿತ್ತು.

ಹಲಸಿನಕಾಯಿ ಪಲ್ಯ ಮಾಡೋದು ಹೇಗೆ ?

ಹಲಸಿನಕಾಯಿಯನ್ನು ಅದರ ಬೆಳವಣಿಗೆಯ ಎಲ್ಲ ಹಂತಗಳಲ್ಲೂ ಅಡುಗೆಯಲ್ಲಿ ಬಳಸಬಹುದಾಗಿದೆ.   ಹಲಸಿನ ಗುಜ್ಜೆ,  ಬೇಳೆ ಯಾ ತಿರುಳು ಇನ್ನೂ ಮೂಡಿರದ ಹಂತದಲ್ಲಿಯೂ ಅಡುಗೆಗೆ ಸೊಗಸು,  ಆದರೆ ಬೇಯುವುದು ತುಸು ನಿಧಾನ ಅಷ್ಟೇ.  ಪ್ರೆಶರ್ ಕುಕ್ಕರ್ ಬೇಕಾಗುತ್ತದೆ. 

ಎಳೆಯ ಬೇಳೆ ಮೂಡಿದಂತಹ ಹಲಸು, ಬೇಳೆಚಕ್ಕೆ ಎಂಬ ಹೆಸರಿನಿಂದ ಜನಪ್ರಿಯತೆ ಗಳಿಸಿದೆ,  ಇದನ್ನೂ  ಪಲ್ಯ,  ಕೂಟು ಇತ್ಯಾದಿ ಮಾಡಿ ಸವಿಯುವವರು ನಾವು.  ಈಗ ನಾವು ಚೆನ್ನಾಗಿ ಬೆಳೆದ  ಹಲಸನ್ನು ಪಲ್ಯಕ್ಕಾಗಿ ಆಯ್ದು ಇಟ್ಟಿದ್ದೇವೆ.

ಹಲಸಿನ ಸೊಳೆಗಳನ್ನು ಆಯ್ದು ತುಂಡರಿಸಿ ಇಟ್ಟುಕೊಳ್ಳಿ.   ಚಿಕ್ಕದಾಗಿರಬೇಕೆಂದೇನೂ ಇಲ್ಲ.
ಬಾಣಲೆಗೆ ಎಣ್ಣೆ ಎರೆಯಿರಿ,  ದೊಡ್ಡ ಚಮಚದಲ್ಲಿ ನಾಲ್ಕೈದು ಚಮಚ ಎಣ್ಣೆ ಬೇಕಾದೀತು,  ಮಯಣ ನಿವಾರಕವಾದ ತೆಂಗಿನೆಣ್ಣೆ ಅತ್ಯುತ್ತಮ.


ಬಾಣಲೆ ಒಲೆಗೇರಿಸಿ,  
ಸಾಸಿವೆ,  ಉದ್ದಿನಬೇಳೆ,  ಕಡ್ಲೆಬೇಳೆ,  2 ಒಣಮೆಣಸು ಹಾಕಿದ್ರಾ,  
ಸಾಸಿವೆಯ ಚಟಪಟಗುಟ್ಟುವಿಕೆ ನಿಂತಾಗ ಬೇವಿನೆಸಳು ಹಾಕಿದ್ರಾ, 
 ಚಿಟಿಕೆ ಅರಸಿನ ಬಿದ್ದಿತೇ,  
ಈಗ ಹಲಸಿನ ಸೊಳೆಗಳನ್ನು ಹಾಕಿರಿ.  
ರುಚಿಕರವಾಗಲು ಬೇಕಾದ ಉಪ್ಪು ಹಾಕಿದ್ರಾ, 
 ಖಾರವಾಗಲು ಮೆಣಸಿನಹುಡಿ ಹಾಕ್ಕೊಳ್ಳಿ. 

 ಬಲಿತ ಹಲಸಿನ ಸೊಳೆಗಳು ಬೇಗನೇ ಬೇಯುವುದರಿಂದ ಅಗತ್ಯವಿರುವಷ್ಟೇ ನೀರು ಕೂಡಿಸಿ ಮುಚ್ಚಿಟ್ಟು ಬೇಯಿಸಿರಿ.  ತಳ ಹಿಡಿಯದಂತೆ ಆಗಾಗ ಸೌಟಿನಲ್ಲಿ ಕೈಯಾಡಿಸಿ.  ಅನ್ನದೊಂದಿಗೆ ಉಣಲೂ ಚೆನ್ನ,  ಚಹಾದೊಂದಿಗೆ ಸವಿಯಲೂ ಬಹುದು.Saturday, 1 August 2015

ಕಾಯಿಸೊಳೆ ದೋಸೆ
ಹಲಸಿನ ಸೋಂಟೆ ಮಾಡಿದ್ದೂ ಆಯ್ತು,  ಡಬ್ಬದಲ್ಲಿ ಭದ್ರವಾಗಿ ಮುಚ್ಚಿಟ್ಟೂ ಆಯಿತು.  ಇನ್ನಷ್ಟು ಹಲಸಿನ ಸೊಳೆಗಳು ನಮ್ಮನ್ಯಾರೂ ಕೇಳೋರಿಲ್ವೇ ಅಂತಿದ್ದ ಹಾಗೇ ಮುಂಜಾನೆಯ ದೋಸೆಹಿಟ್ಟು ಹಲಸಿನ ಸೊಳೆಗಳಿಂದಲೇ ತಯಾರಾಯಿತು.

ಕೇವಲ ಹಲಸಿನ ಸೊಳೆಗಳನ್ನಷ್ಟೇ ಅರೆದು ದೋಸೆ ತಯಾರಿಸಬಹುದಾದ ಗುಣಮಟ್ಟದ ಹಲಸಿನ ಜಾತಿಗಳೂ ಇವೆ.   ನಿಸರ್ಗವನ್ನು ಇಂಚಿಂಚಾಗಿ ಕಳೆದುಕೊಳ್ಳುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹಲಸಿನಲ್ಲಿರುವ ಜಾತಿ ವೈವಿಧ್ಯಗಳನ್ನು ಉಳಿಸುವ ಪ್ರಯತ್ನ ಆಗಬೇಕಾಗಿದೆ.

ಈಗ ಮೂರು ಪಾವು ಬೆಳ್ತಿಗೆ ಅಕ್ಕಿ ನೆನೆ ಹಾಕಿಟ್ಟಿರಿ.
ಹಲಸಿನ ಸೊಳೆಗಳನ್ನು ಆಯ್ದು ಇಟ್ಟಿದ್ದೀರಾ,   ಮಿಕ್ಸಿಯಲ್ಲಿ ಹಿಡಿಸುವಷ್ಟು ಸೊಳೆಗಳನ್ನು ತುರುಕಿ ಅರೆಯಿರಿ,  ಹುಡಿಹುಡಿ ಆಯ್ತೇ,  
ಮೂರು ಕಪ್ ಅಕ್ಕಿಗೆ ಈ ಥರ ಮೂರು ಬಾರಿ ಹುಡಿ ಮಾಡಿಟ್ಟ ಹಲಸಿನ ಸೊಳೆಗಳು - ಇದು ಅಳತೆ.
ರುಚಿಗೆ ತಕ್ಕಷ್ಟು ಉಪ್ಪು.

 ಅಕ್ಕಿಯನ್ನು ಚೆನ್ನಾಗಿ ತೊಳೆದು ಅವಶ್ಯವಾದ ನೀರಿನೊಂದಿಗೆ ನುಣ್ಣಗೆ ಅರೆದು,  ಹಲಸಿನ ಹಿಟ್ಟನ್ನೂ ಹಾಕಿಕೊಂಡು ಇನ್ನೊಮ್ಮೆ ಅರೆದು ತೆಗೆಯಿರಿ.  ಮಿಕ್ಸೀಯಲ್ಲಿ ಒಂದೇ ಬಾರಿ ಹಾಕಿ ಅರೆಯಲು ಸಾಧ್ಯವಾಗದು.  ನೀರು ಸಿಕ್ಕಾಪಟ್ಟೆ  ಕೂಡಿಸದಿರಿ,  ಹಿಟ್ಟು ದಪ್ಪಗಾಗಿ ಇಡ್ಲಿ ಹಿಟ್ಟಿನ ಸಾಂದ್ರತೆ ಬಂದಿರಬೇಕು.

ಈ ಹಿಟ್ಟು ಹುಳಿ ಬರುವಂತಿಲ್ಲ,  ತಣ್ಣಗಿನ ಜಾಗದಲ್ಲಿ ಇಟ್ಟುಕೊಳ್ಳಿ.   ಸಂಜೆ ಅರೆದಿಟ್ಟೀರಾದರೆ ರಾತ್ರಿ ದೋಸೆ ತಿನ್ನಬಹುದು,   
ಕಾಯಿಸೊಳೆ ದೋಸೆಗೆ ಜೇನು ಕೂಡಿ ತಿನ್ನಲು ಸೊಗಸು.  ಜೇನು ಇಲ್ಲವಾದರೆ ಬೆಲ್ಲದ ದ್ರಾವಣವೂ ಆದೀತು.  ಬೆಲ್ಲದ ದ್ರಾವಣವನ್ನು ನಮ್ಮೂರ ಕಡೆ  'ರವೇ' ಅನ್ನೋ ವಾಡಿಕೆಯಿದೆ.  ನನ್ನ ಮಗಳಂತೂ ಅದೇನೇ ತಿಂಡಿಯಿರಲಿ,  ಈ ರವೆ ಇಲ್ಲದೆ ತಿನ್ನುವವಳಲ್ಲ.   

" ಆಯ್ತೂ,  ಬೆಲ್ಲದ ದ್ರಾವಣ ( ರವೆ ) ಮಾಡೋದು ಹೇಗೇ ?"
 ಬೆಲ್ಲದ ಹುಡಿ ಒಂದು ಲೋಟ ಇದೆ, ಅರ್ಧ ಲೋಟ ನೀರು ಕೂಡಿ, ಕುದಿಸಿ.  ಬೆಲ್ಲ ಕರಗಿ ಕುದಿದು ಜೇನಿನಂತಹ ದ್ರವ ಆಗುವ ತನಕ ಒಲೆಯಲ್ಲಿಟ್ಟಿರಿ.  ಆರಿದ ನಂತರ ಜಾಡಿಯಲ್ಲಿ ತುಂಬಿಸಿ ಬೇಕಿದ್ದಾಗ ತಿಂಡಿಯ ತಟ್ಟೆಗೆ ಎರೆದುಕೊಂಡು ತಿನ್ನುವುದು.  ಜೇನಿನಂತೆ ದೀರ್ಘ ಬಾಳ್ವಿಕೆ ಇದಕ್ಕಿಲ್ಲ, ಒಂದೆರಡು ದಿನ ಉಪಯೋಗಿಸಬಹುದಷ್ಟೇ, ನಿಯಮಿತವಾದ ಉಪಯೋಗ ಇದ್ದಲ್ಲಿ ಮಾತ್ರ ಮಾಡಿಟ್ಕೊಳ್ಳಬಹುದು,  ಇಲ್ಲಾಂದ್ರೆ ದಂಡವಾದೀತು.

ಹಲಸಿನ ಕಾಯಿ ದೋಸೆಯನ್ನು  'ಕಾಯಿಸೊಳೆ ದೋಸೆ'  ಎಂದೇ ಹೇಳುವ ವಾಡಿಕೆ ನಮ್ಮದು. ಉದ್ದಿನ ದೋಸೆಯನ್ನು ತೆಳ್ಳಗೆ ಕಾಗದದ ಹಾಗೆ ಎರೆದು ತಿನ್ನಲಾಗುವಂತೆ ಇದನ್ನೂ ಎರೆದರೆ ರುಚಿಕರವಾಗಿರುತ್ತದೆ.  ತವಾ ಅಥವಾ ಕಾವಲಿ ಬೆಚ್ಚಗಾಯಿತೇ,  ಎಣ್ಣೆ ಸವರೋದು ಬೇಡ,  ಹಾಗೇನೇ ಎರೆದು ಹರಡಿದರಾಯಿತು.   ಗರಿಗರಿಯಾದಾಗ ತಾನಾಗಿಯೇ ಎದ್ದು ಬರುವ ಕಾಯಿಸೊಳೆ ದೋಸೆಯನ್ನು ತಿನ್ನಲು ಚಟ್ಣಿ ಕೂಡಾ ಇರಲಿ.   ಬಿಸಿ ಬಿಸಿ ಫಿಲ್ಟರ್ ಕಾಫಿ ಹೀರುತ್ತಾ,  ತೆಂಗಿನ ಚಟ್ಣಿಯೊಂದಿಗೆ, ಜೇನುತುಪ್ಪ, ಮೊಸರು ಇತ್ಯಾದಿಗಳನ್ನೂ ಕೂಡಿ ಸವಿಯಿರಿ.

ಗಮನಿಸಿ,  ಹಲಸಿನ ಸೊಳೆಗಳು ಜಾಸ್ತಿ ಹಾಕಿದ್ದೀರಾ,  ದೋಸೆ ಮೆತ್ತಗಾದೀತು,  ಕಾವಲಿಯಿಂದ ಎಬ್ಬಿಸಲೂ ಕಷ್ಟವಾದೀತು.  ಅಕ್ಕಿ ಹೆಚ್ಚಾದ್ರೂ ದೋಸೆ ಒಣಕಲಿನಂತಾದೀತು.  ಸಾಧ್ಯವಿದ್ದಷ್ಟು ಸಮಾನ ಅಳತೆಯಲ್ಲಿ ದೋಸೆಹಿಟ್ಟು ತಯಾರಾದರೆ ಉತ್ತಮ.