Pages

Ads 468x60px

Tuesday, 29 January 2013

ಘಟ್ಟದ ರೊಟ್ಟೀ....ರಾಗೀ ಸ್ಪೆಶಲ್ !ರಾಗಿಮುದ್ದೆ ಮಾಡಲು ನಾನು ಇದುವರೆಗೂ ಪ್ರಯತ್ನಿಸಿಯೇ ಇಲ್ಲ.  ಏನಿದ್ದರೂ ದೋಸೆ, ಇಡ್ಲೀ.   ತೆಂಗಿನಕಾಯಿ ಚಟ್ನೀ,  ಬಿಸಿ ತುಪ್ಪ,  ದಪ್ಪ ಮೊಸರು,  ಸಿಹಿ ಬೇಕಿದ್ದವರಿಗೆ ಜೇನು  ಇಲ್ಲಾಂದ್ರೆ ಬೆಲ್ಲದ ರವೆ.  ಮುಂಜಾನೆಯ ತಿನಿಸು ಇಷ್ಟರಲ್ಲಿ ಬೇಕಾದಷ್ಟಾಯಿತು.  

ಬನ್ನಿ,  ಇದು ತಿಂಡಿ ತಿನ್ನುವ ಸಮಯ...

ತೆಳ್ಳವು ಯಾರಿಗಿಷ್ಟವಿಲ್ಲ ಹೇಳಿ,  ಬೆಲ್ಲಕಾಯಿಸುಳಿಯೊಂದಿಗೆ ಮುಂಜಾನೆಗೆ ಪ್ರತಿದಿನವೂ ಮಾಡಿ ತಿನ್ನುವವರಿದ್ದಾರೆ.  ಎಂದಿನಂತೆ 2 ಕಪ್ ಅಕ್ಕಿ ಅರೆದು,  ರಾಗೀಹುಡಿ 2 -3 ಚಮಚಾ ಸೇರಿಸಿ ರಾಗೀ ತೆಳ್ಳವು ಮಾಡಿ ನೋಡಿ.

ಅಕ್ಕೀ ಉಂಡೆ : 
2 ಕಪ್ ಅಕ್ಕಿಯನ್ನು ಚೆನ್ನಾಗಿ ತೊಳೆದು,  ನೀರನ್ನೆಲ್ಲ ಬಸಿದು ಒಣಗಲು ಹರವಿ ಬಿಡಿ.  ಅರ್ಧ ಗಂಟೆ ಸಾಕು.
ಮಿಕ್ಸೀಯಲ್ಲಿ ತರಿ ತರಿ ಮಾಡಿಕೊಳ್ಳಿ.
ಬಾಣಲೆಗೆ ತುಪ್ಪ ಸವರಿ 4 ಕಪ್ ನೀರು ಅಳೆದು ಎರೆಯಿರಿ.
ಕುದಿಯಲು ಇಡಿ.
ರುಚಿಗೆ ಉಪ್ಪು ಹಾಕೋದನ್ನು ಮರೆಯಬೇಡಿ.
ನೀರು ಬಿಸಿಯಾಗುತ್ತಾ ಬಂತೇ,  ಕೆಳಗಿಳಿಸಿ ಅಕ್ಕೀ ತರಿಯನ್ನು ಹಾಕಿ.
ಸೌಟಿನಲ್ಲಿ ತಿರುಗಿಸಿ ಮುದ್ದೆಗಟ್ಟದಂತೆ ನೋಡಿಕೊಳ್ಳಿ.
ಒಂದು ಹಿಡಿ ಕಾಯಿ ತುರಿ ಸೇರಿಸಿ ಪುನಃ ಒಲೆಯ ಮೇಲಿಟ್ಟು ಒಂದೇ ಮುದ್ದೆ ಆಗುವ ತನಕ ಸಣ್ಣ ಉರಿಯಲ್ಲಿ ಕಾಯಿಸಿ.
 ಬೆಂದ ಹಿಟ್ಟು ಕೈಗೆ ಅಂಟುವುದಿಲ್ಲ, ಕೈಯನ್ನು ಒದ್ದೆ ಮಾಡಿಕೊಂಡು ನೋಡಿ.
ಕೆಳಗಿಳಿಸಿ ತಣಿಯಲು ಬಿಡಿ.  ಬೇಕಾದ ಹಾಗೆ ಉಂಡೆ ಕಟ್ಟಿ ಹಬೆಯಲ್ಲಿ ಬೇಯಿಸಿ.  ಕುಡುಂಬಟ್ಎಂದೂ ಇದಕ್ಕೆ ಹೆಸರಿದೆ.
ಜೊತೆಗೆ 2 -3 ಚಮಚ ರಾಗೀಹುಡಿ ಹಾಕಿದ್ರೆ ರಾಗೀ ಉಂಡೆ ಆಯ್ತು.
ಹಿಟ್ಟಿಗೆ ಒಗ್ಗರಣೆ, ಈರುಳ್ಳಿ,  ಕೊತ್ತಂಬರೀ ಸೊಪ್ಪು ಅಥವಾ ಬೇವಿನಸೊಪ್ಪು ಸೇರಿದ್ರೆ ಮಸಾಲಾ ಉಂಡೆ ಹೇಳಿದ್ರಾಯ್ತು.
ತಿಂಡಿ  ತಿಂದಾಯ್ತೇ,  ಉಳಿದ ಉಂಡೆಗಳನ್ನು ಸಂಜೆಯ ಟೀ ಜತೆ ಉಸುಳಿ ಮಾಡೋಣ.
ಉಸುಳಿ ಮಾಡುವಷ್ಟಿಲ್ಲವೇ,  ಮದ್ಯಾಹ್ನದ ಅಡುಗೆಗೆ ಉಂಡೆ ಹುಳಿ ಮಾಡಿಕೊಳ್ಳಿ.
ನೀವು ತಯಾರಿಸುವ ಸಾಂಬಾರಿಗೆ ಉಳಿದಿರುವ ಉಂಡೆಗಳನ್ನು ಬಟಾಟೆಯಂತೆ ಹೋಳು ಮಾಡಿ ಹಾಕಿದ್ರಾಯ್ತು.  ಸಾಂಬಾರಿಗೆ ಹಾಕಿರುವ ತರಕಾರಿ ಯಾವುದೆಂದು ಯಾರಿಗೂ ಹೇಳುವ ಗೋಜಿಗೇ ಹೋಗಬೇಡಿ.

ಅಕ್ಕಿ ಹಾಗೂ ರಾಗೀಯನ್ನು  ಸಮ ಪ್ರಮಾಣದಲ್ಲಿ ನುಣ್ಣಗೆ ಅರೆದು ಕಾಯಿಸಿ,  ಉಂಡೆ ಕಟ್ಟಿ ಹಬೆಯಲ್ಲಿ ಬೇಯಿಸಿ ರಾಗೀ ಶಾವಿಗೆಯನ್ನೂ ಮಾಡಬಹುದಾಗಿದೆ.  ತಿಂದು ಮಿಕ್ಕುಳಿದ ಶಾವಿಗೆಯನ್ನು ವ್ಯರ್ಥ ಮಾಡದೆ ಬಿಸಿಲಿಗೆ ಒಣಗಿಸಿ ಸಂಡಿಗೆಯಂತೆ ಕರಿದು ತಿನ್ನಬಹುದು.

ಒತ್ತು ಶಾವಿಗೆಯೊಂದಿಗೆ ಬಾಳೇಹಣ್ಣಿನ ರಸಾಯನ ಇರಲೇ ಬೇಕು.
ದಪ್ಪ ತೆಂಗಿನಕಾಯಿ ಹಾಲು ಮಾಡಿ.
ಬಾಳೇಹಣ್ಣು ಚಿಕ್ಕದಾಗಿ ಕತ್ತರಿಸಿಡಿ.
ಬೆಲ್ಲ ಪುಡಿ ಮಾಡಿ ಸ್ವಲ್ಪ ನೀರುಕಾಯಿಹಾಲನ್ನೇ ಎರೆದು ಉರಿಯ ಮೇಲಿಡಿ.
ಬೆಲ್ಲ ಕರಗಿ ಕುದಿಯಲಾರಂಭಿಸಿತೇ,  ಕೆಳಗಿಳಿಸಿ.
ಬಾಳೇಹಣ್ಣು ಚೂರುಗಳನ್ನು ಹಾಕಿ.
ದಪ್ಪ ಕಾಯಿಹಾಲು ಎರೆಯಿರಿ.
ಎಳ್ಳು ಹುರಿದು ಹಾಕಿ,  ರಸಾಯನ ಆಯ್ತು.
ಆಯಾ ಋತುಗಳಲ್ಲಿ ಲಭ್ಯವಿದ್ದಂತೆ ರಸಾಯನದಲ್ಲಿ ಮಾವಿನ ಹಣ್ಣು, ಚಿಕ್ಕೂ, ದಾಳಿಂಬೆ ಇತ್ಯಾದಿಗಳ ಬಳಕೆ ಮಾಡಿದರೆ ಚೆನ್ನ.
ಉಸುಳಿ ಮಾಡುವ ವಿಧಾನ:

ಮೇಲೆ ಹೇಳಿದ ಉಂಡೆ,  ಶಾವಿಗೆ,  ಇಡ್ಲಿಯೇ ಇರಲಿ,  ಸಂಜೆಯ ಹೊತ್ತಿಗೆ ಉಸುಳಿ ಮಾಡೋಣ.   ಚೆನ್ನಾಗಿ ಪುಡಿ ಪುಡಿ ಮಾಡುವುದು ಅವಶ್ಯ.   ರುಚಿಗೆ ಬೇಕಾದ ಉಪ್ಪು, ಹುಳಿ, ಬೆಲ್ಲಗಳನ್ನು ಒಂದು ಚಿಕ್ಕ ತಟ್ಟೆಯಲ್ಲಿ ನೀರಿನಲ್ಲಿ ಕರಗಿಸಿ ಇಡಿ.   ಬಾಣಲೆಯಲ್ಲಿ ಒಗ್ಗರಣೆ ಇಡಿ.  ಸಾಸಿವೆ ಸದ್ದು ನಿಲ್ಲುತ್ತಿದ್ದಂತೆ ಬೇವಿನೆಸಳು,  ಕತ್ತರಿಸಿದ ಈರುಳ್ಳಿ,  ಹಸಿಮೆಣಸು,  ಶುಂಠಿ ಇತ್ಯಾದಿಗಳನ್ನು ಹಾಕಿ.  ಮಾಡಿಟ್ಟುಕೊಂಡ ಉಪ್ಪುನೀರು ಎರೆದು,  ಪುಡಿ ಮಾಡಿದ ಶಾವಿಗೆಯನ್ನು ಹಾಕಿ, ಕಾಯಿತುರಿ,  ಕೊತ್ತಂಬ್ರಿ ಸೊಪ್ಪು ಇರಲಿ.   ಸೌಟಿನಲ್ಲಿ ಕೆದಕಿ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಿ.  ಕ್ಷಣಕಾಲ ಬಿಟ್ಟು ತಗೆಯಿರಿ.  
 

   


 ಘಟ್ಟದ ರೊಟ್ಟೀ....ರಾಗೀ ಸ್ಪೆಶಲ್ !


         ಘಟ್ಟದ ರೊಟ್ಟೀ :  ಬೆಳ್ತಿಗೆ ಅಕ್ಕಿ ಹಾಗೂ ಕುಸುಬುಲಕ್ಕಿಯನ್ನು ಸಮ ಪ್ರಮಾಣದಲ್ಲಿ ನುಣ್ಣಗೆ ಅರೆದು,  ಕೊತ್ತಂಬರಿ, ಜೀರಿಗೆ,  ಮೆಣಸು, ಈರುಳ್ಳಿ, ಶುಂಠಿ, ಹಸಿಮೆಣಸು,  ಕಾಯಿತುರಿ ಇತ್ಯಾದಿಗಳನ್ನೂ ಅರೆಯುವಾಗ ಸೇರಿಸಿ.  ಹಿಟ್ಟನ್ನು ಸಾಕಷ್ಟು ತೆಳ್ಳಗೆ ಮಾಡಿ ನೀರು ದೋಸೆ ಎರೆಯುವುದು ನಮ್ಮ ರೂಢಿಯ ಕ್ರಮ.
ಈಗ ನಾವು ಕುಸುಬುಲಕ್ಕಿಯನ್ನು  ಬಿಟ್ಟು ಬಿಡೋಣ.  ಬದಲಾಗಿ ಅರೆಯುವಾಗ ರಾಗೀ ಸೇರಿಸಿ.  ರಾಗೀ ಹುಡಿಯೂ ಆದೀತು.   ಘಟ್ಟದ ರೊಟ್ಟೀ, ರಾಗೀ ಸ್ಪೆಶಲ್....ಅಂದು ಬಿಡಿ. 


I
.


ಈ ಘಟ್ಟದ ರೊಟ್ಟಿಗೆ ಪ್ರತ್ಯೇಕವಾಗಿ ಚಟ್ನಿ ಮಾಡಬೇಕಾಗಿಲ್ಲ.  ಸಕ್ಕರೆ ಹಾಗೂ ಬೆಣ್ಣೇ ಮುದ್ದೆಯೊಂದಿಗೆ ಸವಿಯಿರಿ.

ಏನಿದ್ದರೂ ಸ್ವಲ್ಪ ಹಿಟ್ಟು ಮಿಕ್ಕಿದೆ,  ಮಸಾಲೆ ಧಾರಾಳವಾಗಿ ಹಾಕಿರುವ ಈ ಹಿಟ್ಟನ್ನು ಸಂಡಿಗೆ ಅಥವಾ ಹಪ್ಪಳ ಮಾಡೋಣ.

ಉಳಿದ ಹಿಟ್ಟನ್ನು ಬಾಣಲೆಗೆ ಸುರುವಿ ಕುದಿಸಿ,  ದಪ್ಪಗಾದೊಡನೆ ಕೆಳಗಿಳಿಸಿ.  ಚಿಕ್ಕ ಚಮಚಾದಲ್ಲಿ ಸಂಡಿಗೆ ಇಟ್ಟು ಬಿಸಿಲಿಗೆ ಒಣಗಿಸಿ.  ಬೇಕಾದಾಗ ಎಣ್ಣೆಯಲ್ಲಿ ಕರಿಯಿರಿ.

ಹಪ್ಪಳ ಮಾಡಬೇಕಾಗಿದ್ದಲ್ಲಿ ಒಲೆಯ ಮೇಲಿಟ್ಟು  ಉಂಡೆ ಕಟ್ಟುವ ಹದಕ್ಕೆ ತನ್ನಿ.    ಒಂದು ಹಿಡಿ ಅವಲಕ್ಕಿಯನ್ನು ಕಾದ ಕಾವಲಿಯಲ್ಲಿ ಹುರಿದು ಹುಡಿ ಮಾಡಿ ಸೇರಿಸ್ಕೊಳ್ಳಿ.   ಬಟಾಟೆ ಬೇಯಿಸಿ, ಚೆನ್ನಾಗಿ ಹಿಸುಕಿ ಸೇರಿಸಿದರೂ ಆದೀತು.   ಲಿಂಬೇಗಾತ್ರದ ಉಂಡೆ ಮಾಡಿಕೊಂಡು ಪೊಲಿಥೀನ್ ಶೀಟುಗಳಿಗೆ  ಎಣ್ಣೆ ಸವರಿ,  ಒಂದೊಂದೇ ಉಂಡೆಯನ್ನು ಇಟ್ಟು,  ಹಗುರಾಗಿ ಮಣೆಯಲ್ಲಿ ಒತ್ತಿ ಒಣಗಿಸಿ

.

Posted via DraftCraft app

Tuesday, 22 January 2013

ಧರೆ ಹೊತ್ತಿ ಉರಿದಾಗ.....ಸಂಜೆಯ ಟೀ ಕುಡಿದು ನಮ್ಮವರು ಎಂದಿನಂತೆ ಕೈಯ್ಯಲೊಂದು ಬೀಸುಗತ್ತಿ ಹಿಡಿದು ಅಡಿಕೆ ತೋಟಕ್ಕೆ ಹೋದರು.  ನಾನು ಯಥಾಪ್ರಕಾರ ನನ್ನ ಬ್ಲಾಗು ಪ್ರಪಂಚದಲ್ಲಿ ವಿಹರಿಸುತ್ತಾ,  ಐ ಪ್ಯಾಡ್ ಧಾರಿಣಿಯಾಗಿ ಹೊತ್ತಿನ ಪರಿವೆಯೇ ಇಲ್ಲದೆ ಕುಳಿತಿದ್ದಂತೆ ಮನೆಯ ಮುಂದೆ ಸ್ಕೂಟರು ನಿಂತ ಸದ್ದಾಯಿತು.   ಈ ಹೊತ್ತಿಗೆ ಬಂದವರ್ಯಾರು ಎಂದು ಕುಳಿತಲ್ಲಿಂದ ಎದ್ದು ವಿಚಾರಿಸುವ ಮೊದಲೇ  ಖಾದರ್ ಒಳ ನುಗ್ಗಿದ.  

" ಅಕ್ಕಾ,  ನೀವು ಒಳಗೆ ಕೂತುಕೊಂಡು ಮಾಡುವುದು ಎಂಥದು ?  ....ಅಲ್ಲಿ ತೋಟಕ್ಕೆ ಬೆಂಕಿ ಬಿದ್ದಿದೆ, ಬನ್ನಿ ಹೊರಗೆ "

ಹ್ಞಾ,  ಏನ್ ಹೇಳ್ತಿದಾನೆ... ನನಗಂತೂ ತಲೆಬಾಲ ಒಂದೂ ಅರ್ಥವಾಗದೆ ಹೋಯಿತು.

" ನಾನು ಪೈವಳಿಕೆಯಲ್ಲಿದ್ದೆ,  ಅಣ್ಣೇರ ಫೋನ್ ಬರುವಾಗ...ಕೂಡ್ಲೇ ಬಂದದ್ದು,  ಅಲ್ಲ ಹೀಗೆ ಮಾಡ್ಬೌದಾ,  ಯಾರೂ ಇಲ್ಲದಿರೂವಾಗ ತೋಟಕ್ಕೆ ಹೋಗೂದಂತೆ,  ಕಿಚ್ಚು ಕೊಡೂದಂತೆ,  ನಾವ್ಯಾರೂ ಇಲ್ವಾ .. ಯಾಕೆ ಒಬ್ರೇ ಹೋಗಿ ಕಾರ್ಬಾರು ಮಾಡೂದು...." 

ಅವನ ವಾಕ್ ಪ್ರವಾಹ ಮುಂದುವರಿಯುತ್ತಿದ್ದಂತೆ ನಾನು ಥಟ್ಟನೆದ್ದು ಸೀದಾ ಅಡುಗೆಮನೆಗೆ ಹೋದೆ.  ಅಗತ್ಯ ಬಿದ್ದರೆ ಇರಲಿ ಎಂದು ಇಟ್ಟಿದ್ದ ಬೆಂಕಿಪೆಟ್ಟಿಗೆ ಜಾಗದಲ್ಲಿ ಇಲ್ಲ !   ಯಾವುದೇ ವಸ್ತು ಬೇಕಾಗಿದ್ದರೂ ನನ್ನ ಬಳಿ ಕೇಳಿ ಇಸ್ಕೊಳ್ಳುತ್ತಿದ್ದವರು ಇವತ್ತು ತಾವೇ ತೆಗೆದುಕೊಂಡು ಹೋಗಿದ್ದಾರೆ.

  " ಇವರೆಲ್ಲಿದ್ದಾರೆ ?"

"  ಅವರು ತೋಟದಲ್ಲಿದ್ದಾರೆ...ನಾನೂ ಅಲ್ಲಿಗೇ ಹೋಗೂದು.  ನೀವು ಮನೆಯಲ್ಲೇ ಕೂತ್ಕೊಳ್ಳೀ...." ಹೇಳುತ್ತಾ ಖಾದರ್ ತೋಟಕ್ಕೆ ದೌಡಾಯಿಸಿದ.

ನನ್ನ ಮನೋಸ್ಥಿತಿಯೇ ಕೆಟ್ಟು ಹೋಗಿರಬೇಕಾದರೆ  ಒಳಗೆ  ಕುಳಿತಿರುವುದೇ,  ಅಂಗಳಕ್ಕಿಳಿದೆ.   ಎದುರುಗಡೆಯ ರಸ್ತೆಯಲ್ಲಿ ಜನ ನರೆದಿದ್ದರು.  ಪಕ್ಕದಮನೆಯ ಗೋಡೆ ಹಾರಿ ಇನ್ನೂ ಹಲವರು ತೋಟದ ಕಡೆ ಓಟ.  ಮನೆಯಂಗಳದಿಂದ ತೋಟದ ಹಿಂದೆ ಇದ್ದ ಎತ್ತರದ ಬೋಳುಗುಡ್ಡದ ರಬ್ಬರು ತೋಟ ಕಾಣಲೊಲ್ಲದು.  ರಸ್ತೆಗೆ ಹೋದರೆ ಕಾಣಬಹುದಿತ್ತು.  

ಆಗಲೇ ಸಂಜೆ ಐದೂವರೆಯಾಗಿತ್ತು.  ಈಗ ಬೆಂಕಿಯ ಕೆನ್ನಾಲಿಗೆ ನನಗೂ ಕಾಣಲಾರಂಭಿಸಿತು.  ಊರಿನ ಜನಸಂದಣಿ ತೋಟದ ಕಡೆ ಹೋಗುತ್ತಿರಬೇಕಾದರೆ ಒಬ್ಬೊಬ್ಬರಾಗಿ ತಮ್ಮ ತಮ್ಮ ಹೆಲ್ಮೆಟ್,  ಕೀ ಇತ್ಯಾದಿಗಳನ್ನು ನನ್ನ ಸುಪರ್ದಿಗೆ ಒಪ್ಪಿಸಿ ಕತ್ತಲಲ್ಲಿ ಮರೆಯಾದರು.  ಅಂತೂ ಏಳೂವರೆ ಗಂಟೆ ಹೊತ್ತಿಗೆ ಬೆಂಕಿ ಆರಿತು,  ಇವರೂ ಮನೆಗೆ ಬಂದರು.

ಅಷ್ಟಕ್ಕೂ ಆಗಿದ್ದೇನು ?  

ಅಡಿಕೆ ತೋಟದ ಹಿಂಬಾಗದ ಬೋಳುಗುಡ್ಡದಲ್ಲಿ ನಮ್ಮ ಶ್ಯಾಮಸೂರ್ಯಂದು ರಬ್ಬರು ತೋಟ.  ನೆಟ್ಟು 3 - 4 ವರ್ಷಗಳಾಗಿವೆ.   ಗಿಡಗಳ ರಕ್ಷಣೆಗೆಂದು ನೆಟ್ಟ ಒಂದು ಬಳ್ಳಿ ಸಸ್ಯ ರಬ್ಬರ್ ಗಿಡಗಳಿಗೆ ಹಸಿರು ಹೊದಿಕೆ ನೀಡಿದ್ದಷ್ಟೇ ಅಲ್ಲದೆ ನೆರೆಯ ಅಡಿಕೆ ತೋಟಕ್ಕೂ ವ್ಯಾಪಿಸಿ ತೋಟವೇ ಮುಚ್ಚಿಹೋದಂತೆ...   ಇದಕ್ಕಾಗಿಯೇ ನಮ್ಮವರು ಕತ್ತೀ ಪ್ರಯೋಗ ಮಾಡುತ್ತಿದ್ದದ್ದು,   ಕಡಿದ ಬಳ್ಳೀರಾಶಿಗೆ  ಕಿಚ್ಚು ಕೊಡುವ ಹೊತ್ತಿಗೆ  ಬೀಡಾಡಿ ದನಗಳು ತೋಟದೊಳಗೆ ಬಂದಿವೆ,  ದನಗಳನ್ನು ಅಟ್ಟಿ ಈಚೆ ಬಂದಾಗ ಕಿಚ್ಚು ತಾನೇ ತಾನಾಗಿ ಮುಂದುವರಿದಿದೆ,   ' ತನ್ನ ಕೈ ಮೀರಿತು '  ಎಂದಾಕ್ಷಣ ಜೇಬಿನಲ್ಲಿದ್ದ ಮೊಬೈಲು ಹೊರ ಬಂದಿದೆ,  ನೆರೆಯ ಖಾದರನಿಗೆ ಮೊದಲ ಕರೆ ಹೋಗಿದೆ.  ಪೋಲಿಸ್ ವ್ಯಾನ್, ಅಗ್ನಿಶಾಮಕ ದಳವೂ ಬಂದಿದೆ.   ಖಾದರ್ ಹಾಗೂ ಊರ ಮಂದಿ ಶ್ರಮಿಸಿ ಬೆಂಕಿಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.Mucuna Bracteata ಎಂಬ ಹೆಸರಿನ ಈ ನೆಲ ಮುಚ್ಚಲ ಬಳ್ಳಿಯ ಬೆಳವಣಿಗೆಗೆ ನೀರು ಬೇಕಿಲ್ಲ, ಗೊಬ್ಬರವೂ ಬೇಡ.  ಎಂತಹ ಕಠಿಣ ಬರಗಾಲವನ್ನೂ ಎದುರಿಸುವ ಶಕ್ತಿ ಇದಕ್ಕಿದೆ.  ಜಾನುವಾರುಗಳೂ ಇದನ್ನು ಮೂಸಿ ಕೂಡಾ ನೋಡುವುದಿಲ್ಲ. ರೋಗ ಬಾಧೆಯೂ ಇದಕ್ಕಿಲ್ಲ,  ಕ್ರಿಮಿಕೀಟಗಳ ತೊಂದರೆಯೂ ಇಲ್ಲ.    ನೆಟ್ಟು ಬೆಳೆಸಲು ಯಾವ ಶ್ರಮವೂ ಇಲ್ಲ,  ಕಾರ್ಮಿಕರ ಅವಶ್ಯಕತೆ ಬೇಕಾಗುವುದೇ ಇಲ್ಲ.   ಹಾಗಾಗಿಯೇ ರಬ್ಬರ್ ಕೃಷಿಕರು ಇದನ್ನು ನೆಚ್ಚಿಕೊಂಡಿದ್ದಾರೆ.   ಸುತ್ತಮುತ್ತಲಿನ ಪರಿಸರವನ್ನು ಆಕ್ರಮಿಸಿ,  ಇನ್ನಿತರ ಸಸ್ಯವರ್ಗಗಳ ಬೆಳವಣಿಗೆಗಳನ್ನು ಕುಂಠಿತಗೊಳಿಸಿ ಮೆರೆಯುವ ಈ ಬಳ್ಳಿಯ ಒಣಗಿದ ಎಲೆಗಳು ನೆಲದಲ್ಲಿ ದಪ್ಪ ಪದರವಾಗಿ ಉಳಿದು ಸಣ್ಣಪುಟ್ಟ ಗಿಡಗಂಟಿಗಳನ್ನು ನೆಲದಿಂದ ಮೇಲೇಳಲು ಬಿಡುವುದೇ ಇಲ್ಲ.  

Posted via DraftCraft app

Tuesday, 15 January 2013

ವರ್ಣಗಾನ


ಇದು ಯಕ್ಷಗಾನದ ವೇಷಭೂಷಣ
ಈ ನೋಟವೋ ರುದ್ರ ವಿಲಕ್ಷಣ
ಯಾರದೋ ಛಾಯಾಗ್ರಹಣ 
ಯಾವುದೋ ಹಳೆಯ ಪತ್ರಿಕೆಯ ವಿಶೇಷಾಂಕಣ 
ತಿಳಿಯದಿದೆ ಯಾರದೀ ಪಾತ್ರಧಾರಣ |

ಕುಂಚದಲ್ಲಿ ಬಣ್ಣಗಳ ಮಿಶ್ರಣ
ಮೂಡಿಹುದು ಜಲವರ್ಣ ಚಿತ್ರಣ
ಯಕ್ಷನರ್ತನ ತಧಿಂಗಿಣ
ಬಂದಿಹುದು ಕಲೆಗೆ ಬೆರಗಿನ ಕಿರಣ
ತಳೆದಿಹುದು ಈಗ ಹೊಸ ಮುದ್ರಣ |

Posted via DraftCraft app

Tuesday, 8 January 2013

ಪಪ್ಪಾಯ ಹಲ್ವಾ

ಮರದಲ್ಲಿರುವ ಹಣ್ಣುಗಳನ್ನು ತಿನ್ನುವ ಉಪಾಯ ತಿಳಿದಾಯಿತು.   ಎಲ್ಲವನ್ನೂ ಹಣ್ಣು ಮಾಡಿ ತಿನ್ನಬೇಕಾಗಿಲ್ಲ.   ರುಚಿಕರವಾದ ಇನ್ನಷ್ಟು ಖಾದ್ಯಗಳನ್ನು ಮಾಡೋಣ.  ಸುಲಭವಾಗಿ, ವೇಗವಾಗಿ ಮಾಡಬಹುದಾದ ಹಲ್ವಾ ತಯಾರಿಸೋಣ.

ಚೆನ್ನಾಗಿ ಬಲಿತ,  ಇನ್ನೂ ಹಣ್ಣಾಗಿರದ ಪಪ್ಪಾಯವನ್ನು ಆಯ್ಕೆ ಮಾಡಿ ಕತ್ತರಿಸಿಡಿ.
ಮಿಕ್ಸೀ ಇದೆಯಲ್ಲ, ಹೀಗೆ ತುರಿ ಮಾಡಿಕೊಳ್ಳಿ.
ಬೇಯಿಸಿ.   ದಪ್ಪ ತಳದ ಬಾಣಲೆಗೆ ಹಾಕಿ,  ಸಿಹಿಗೆ ಬೇಕಾದಷ್ಟೇ ಸಕ್ಕರೆ ಸಾಕು.
ಸಕ್ಕರೆ ಕರಗಿತೇ,  ಎರಡು ಚಮಚಾ ತುಪ್ಪ ಎರೆದು ಮುದ್ದೆ ಆಗುವ ತನಕ ಸೌಟಿನಲ್ಲಿ ಕೈಯಾಡಿಸಿ.
ಏಲಕ್ಕಿ,  ದ್ರಾಕ್ಷೀ,  ಗೋಡಂಬಿ ಬೇಕಿದ್ರೆ ಹಾಕಿ ಬಿಡಿ.

.


ಸಂಜೆಯ ಟೀ ಜೊತೆ ಬಿಸಿ ಬಿಸಿಯಾಗಿರುವಾಗಲೇ ತಿಂದು ಮುಗಿಸಿ ಬಿಡಿ.

Posted via DraftCraft app

Tuesday, 1 January 2013

ಎತ್ತಣ ಮಾಮರ ಎತ್ತಣ ಗಜಲಿಂಬೇ....ಆಗ ಸಂಜೆಯಾಗಿತ್ತು. ಅನಿರೀಕ್ಷಿತವಾಗಿ ಮಾಣಿಪ್ಪಾಡಿಯಿಂದ ನಾರಾಯಣ ಮಾವ ಬಂದರು. ಅವರ ಟೀವಿ ಕೆಟ್ಹೋಗಿತ್ತು. ಕೆಲಸದವನ ಜೊತೆ ಹೊರಿಸಿಕೊಂಡೇ ಬಂದರು.

" ಆಸರಿಗೆ ಏನು ತರಲೀ "

" ತಣ್ಣಗೆ ಜ್ಯೂಸ್ ಕೊಟ್ಬಿಡು, ಅಬ್ಬ, ಏನು ಖಾರ ಈ ಬಿಸಿಲು "

ಒಳಗೆ ಹೋದೆ. ತೋಟದಿಂದ ಚೆನ್ನಪ್ಪ ತಂದ್ಕೊಟ್ಟಿದ್ದ ಗಜಲಿಂಬೆ ಇತ್ತು. ಅದನ್ನೇ ರಸ ಹಿಂಡಿ ಶರಬತ್ತು ಮಾಡಿ, ಬಂದೋರ ಜೊತೆ ಮನೆಮಂದಿಯೆಲ್ಲ ಕುಡಿದೂ ಆಯ್ತು.

ಕೆಲಸದವನಿಗೂ ಒಂದು ಲೋಟ ಕೊಟ್ಟು, " ಇನ್ನೂ ಇದೆಯಾ ಗಜಲಿಂಬೆ ಗಿಡದಲ್ಲಿ ? " ಕೇಳದಿದ್ದರಾಗುತ್ತದೆಯ,

" ಎಲ್ಲಿಂದ, ಒಂದೇ ಇದ್ದಿದ್ದು "

ಚೆನ್ನಪ್ಪ ಹಾಗೆ ಹೇಳ್ತಿರೂದು ಹೊರ ಚಾವಡಿಗೂ ಪ್ರತಿಧ್ವನಿಸಿ, ಮಾವ ಅಲ್ಲಿಂದಾನೇ ಪ್ರತ್ಯುತ್ತರ ಕೊಟ್ಟರು

" ನಮ್ಮ ಮನೆಯಲ್ಲಿದೆ, ಎಷ್ಟು ಬೇಕಾದ್ರೂ ನಿಂಬೆಹಣ್ಣು ಆಗ್ತದೆ. ನಾನೇ ಗಿಡ ತಂದ್ಕೊಡ್ತೇನೆ. ಅದೂ ತೋಟದೊಳಗೆ ಎಲ್ಲಿಯೋ ಮೂಲೆಯಲ್ಲಿ ಇದ್ದರಾಗದು. ಮನೆಯ ಹಿಂದೆ ಬಚ್ಚಲುಮನೆಯ ನೀರು ಹೋಗುವಲ್ಲಿ ನೆಟ್ಟಿರು ಆಯ್ತಾ, ಚೆನ್ನಾಗಿ ಬಿಸಿಲೂ ಬೀಳಬೇಕು "

" ಹಂಗಿದ್ರೆ ಹೀಗೆ ಮಾಡುವಾ...ನಮ್ಮದೇ ಗಿಡದ ಬುಡದಲ್ಲಿ ಬೇರಿನಿಂದಾನೇ ಎರಡ್ಮೂರು ಸಸಿ ಮೇಲೆ ಬಂದಿದೆ, ಅದನ್ನೇ ಕಿತ್ತು ನೆಡುವಾ..." ಚೆನ್ನಪ್ಪನ ಮಾರುತ್ತರ ಹೋಯಿತು.

ಮಾರನೇ ದಿನವೇ ಚೆನ್ನಪ್ಪ ತೋಟದೊಳಗಿದ್ದ ಪುಟ್ಟ ಸಸಿಯನ್ನು ಬೇರುಸಮೇತವಾಗಿ ಕಿತ್ತು ಮನೆಯ ಹಿಂದೆ ಆಯಕಟ್ಟಿನ ಜಾಗ ಆಯ್ಕೆ ಮಾಡಿ ನೆಟ್ಟ.

ಗಿಡವೇನೋ ದೊಡ್ಡದಾಯಿತು. ಗೆಲ್ಲುಗಳೂ ಬೇಕಾದಷ್ಟು ಬಂದವು. ಆದರೆ ಫಲವೇನೂ ಕಾಣದೆ ಹೋಯಿತು.

" ನೆಟ್ಟು ವರ್ಷ ಎರಡಾದರೂ ಹಾಗೇ ಸುಮ್ಮನಿದೆ, ಏನು ಕರ್ಮವೋ..." ಗೊಣಗುಟ್ಟುವಿಕೆಗೆ ಗೌರತ್ತೆ ಪುಕ್ಕಟೆ ಸಲಹೆ ನೀಡಿದರು,

" ದಿನಾ ಮಜ್ಜಿಗೆ ಎರೆದು ನೋಡು ಗಿಡದ ಬುಡಕ್ಕೆ " ಸದಾ ಏನಾದರೊಂದು ಪುಸ್ತಕ ಕೈಲಿ ಹಿಡಿದು ಓದುತ್ತಲೇ ಇರುವ ಗೌರತ್ತೆ ತಾವು ಎಲ್ಲೋ ಓದಿಕೊಂಡಿದ್ದನ್ನು ಹೇಳಿಯೇ ಬಿಟ್ಟರು.

" ಮಜ್ಜಿಗೆ ಹಾಗೆಲ್ಲ ಚೆಲ್ಲೋದಿಕ್ಕಾಗುತ್ಯೇ "
ಮಾವಿನ ಹಣ್ಣಿನ ಕಾಲವೂ ಆರಂಭವಾಯಿತು. ದಿನಾ ಕಾಟ್ ಮಾವು ಹೆಕ್ಕಿ ತರೂದು, ಗೊಜ್ಜು, ಸಾಸಿವೆ ಇತ್ಯಾದಿ ಮಾಡೂದು, ಊಟದ ತಟ್ಟೆ ತುಂಬಾ ಗೊರಟುಗಳೂ, ಸಿಪ್ಪೆಗಳೂ....

" ಇದನ್ನೆಲ್ಲ ಎಲ್ಲಿ ಎಸಿಯೋದು..." ಗೌರತ್ತೆ ಕೇಳಿದ್ದು,

ಐಡಿಯಾ... ಸಿಕ್ಕೇಬಿಡ್ತು.

" ಹಾಕೋಣ ಗಜಲಿಂಬೆ ಬುಡಕ್ಕೆ "

ಅಂತೂ ಮಾವಿನ ಋತು ಮುಗಿಯುವಷ್ಟರಲ್ಲಿ ಲಿಂಬೇ ಬುಡದಲ್ಲಿ ಗೊರಟುಗಳ ರಾಶಿಯೇ ಬಿದ್ದಿತು. ಕಸಿ ಕಟ್ಟುವ ತಜ್ಞರು ಮನೆಗೆ ಬಂದವರೇ ಈ ಗೊರಟುಗಳ ರಾಶಿ ನೋಡಿ " ಮಳೆಗಾಲದಲ್ಲಿ ಈ ಕಾಟ್ ಮಾವಿನ ಸಸಿ ಹುಟ್ಟಲಿ, ಆಗ ಬರ್ತೇನೆ " ಅಂದರು. ಕಾಟ್ ಮಾವಿನ ಸಸಿಯಿಂದಲೇ ಹೊಸ ಕಸಿಮಾವಿನ ಗಿಡ ಮಾಡುವುದು ಹೇಗೆಂಬುದನ್ನು ಅವರೂ ಒಂದಷ್ಟು ಹೊತ್ತು ಕೊರೆದು, ಚಹಾ ಕುಡಿದು ಹೋದರು.

ವರ್ಷಋತು ಪ್ರಾರಂಭ ಆಯ್ತು. ಇನ್ನೇನು ಈ ಮಾವಿನ ಗೊರಟುಗಳು ಹುಟ್ಟುತ್ತವೋ ಎಂದು ತಪಾಸಣೆ ಮಾಡುವ ವೇಳೆಗೆ ಗಜಲಿಂಬೇ ಗಿಡ ಹೂವರಳಿಸಿ ನಗುತಲಿದೆ !

ಸಿಟ್ರಸ್ ಜಾತಿಯ ಲೆಮೆನ್ ಎಂದು ವರ್ಗೀಕೃತವಾಗಿರುವ ಸಸ್ಯಪ್ರಭೇದಗಳು ನಿಸರ್ಗದಲ್ಲಿ ಧಾರಾಳವಾಗಿ ಇವೆ. ಲೈಮ್ ಹಾಗೂ ಲೆಮೆನ್ ಶಬ್ದಗಳೂ ನಮ್ಮ ಸಂಸ್ಕೃತದ ' ಲಿಂಬಾ ' ದಿಂದಲೇ ಉಗಮವಾಗಿವೆ ಎಂಬುದೂ ಗಮನಾರ್ಹ. ಸಸ್ಯಶಾಸ್ತ್ರೀಯವಾಗಿ Rutaceae ಕುಟುಂಬಕ್ಕೆ ಸೇರಿದ ಗಿಡ. ಆಂಗ್ಲ ಭಾಷೆಯಲ್ಲಿ ಲೆಮೆನ್ ಎಂದಾಗಿರುವ ಇದು ಸಸ್ಯಶಾಸ್ತ್ರಜ್ಞರ ಪ್ರಕಾರ citrus limon.

ಲಿಂಬೇಹಣ್ಣಿಗಿಂತ ತುಸುವೇ ದೊಡ್ಡದಾದ ಮತ್ತು ದಪ್ಪ ಸಿಪ್ಪೆಯ ಈ ಹಣ್ಣು ' ಗಜ ' ಯಾಕಾಗಿದೆಯೆಂಬುದೇ ನನಗೆ ಅರ್ಥವಾಗಿಲ್ಲ. ಅರ್ಥ ಹೇಗೇ ಇರಲಿ, ನಾವು ಅಡುಗೆ ಉಪಯೋಗ ನೋಡಿಕೊಳ್ಳೋಣ.

ಜ್ಯೂಸ್ : ಇದನ್ನೇನು ಬರಿಯೋದು ಅಂತೀರಾ, ತಿಳಿಯದವರೂ ಇರುತ್ತಾರೆ. ಜ್ಯೂಸ್ ತಯಾರಿಯಲ್ಲಿ, ನೀರಿನಲ್ಲಿ ಸಕ್ಕರೆ ಕರಗಿಸಿ ಇಡಬೇಕಾದ್ದು ಮೊದಲನೇ ಸಿದ್ಧತೆ. ಒಂದು ಲೋಟದಲ್ಲಿ ನಿಂಬೇರಸ ಹಿಂಡುವುದು, ಬೀಜಗಳನ್ನು ಆರಿಸಿ ತಗೆದು ಸಕ್ಕರೆ ಕರಗಿದ ನೀರಿಗೆ ಎರೆದು, ರುಚಿ ನೋಡಿ ಬೇಕಿದ್ದರೆ ಇನ್ನಷ್ಟು ನಿಂಬೇರಸ ಎರೆಯಿರಿ. ತಣ್ಣಗೆ ಕುಡಿಯಿರಿ.

ಲಿಂಬೇ ಸಾರು : ಎರಡು ಲೋಟಾ ನೀರನ್ನು ಉಪ್ಪು, ಬೆಲ್ಲ ಹಾಕಿ ಕುದಿಸಿ ಕೆಳಗಿಳಿಸಿ ಲಿಂಬೇರಸ ಹಿಂಡಿ, ಒಗ್ಗರಣೆ ಕೊಡಿ. ಬೆಳ್ಳುಳ್ಳಿ ಜಜ್ಜಿ ಹಾಕಿ, ಕೊತ್ತಂಬರೀ ಸೊಪ್ಪು ಸೇರಿಸಿ, ಇಲ್ಲಾಂದ್ರೆ ಬೇವಿನೆಸಳು ಸಾಕು. ಚಿಟಿಕೆ ಅರಸಿನ ಇರಲಿ. ತೊಗರೀಬೇಳೆ ಸಾರು, ತೊವ್ವೆಗಳಿಗೂ ಲಿಂಬೇರಸ ಎರೆದು ಆಹ್ಲಾದಕರ ಸ್ವಾದ ಪಡೆಯಿರಿ.

ಲಿಂಬೇ ತೊಕ್ಕು : ಶರಬತ್ತು ತಯಾರಿಸಿ ಉಳಿದ ಸಿಪ್ಪೆಗಳನ್ನು ಉಪ್ಪು ಬೆರೆಸಿ ಜಾಡಿಯಲ್ಲಿ ತುಂಬಿಸಿಟ್ಟುಕೊಳ್ಳಿ. ಜಾಡಿ ಭರ್ತಿ ಆಗೋ ತನಕ ತುಂಬಿಸುತ್ತಾ ಬನ್ನಿ. ಸಿಪ್ಪೆಗಳೆಲ್ಲಾ ಮೆತ್ತಗಾಯ್ತೇ, ಮಿಕ್ಸೀಗೆ ಹಾಕಿ, ಲಿಂಬೇಗಾತ್ರದ ಹುಣಸೇಹಣ್ಣು, ಬೇಕಿದ್ದರೆ ಇನ್ನಷ್ಟು ಉಪ್ಪು ಸೇರಿಸಿ ನಾಲ್ಕು ಸುತ್ತು ತಿರುಗಿಸಿ. ನೀರು ಹಾಕಬಾರದು. ಮುದ್ದೆಯಾದ ಮಿಶ್ರಣವನ್ನು ತಗೆದಿಡಿ. ಉಪ್ಪಿನಕಾಯಿ ಹುರಿದ ಮಸಾಲೆ ಹುಡಿ ಕೊಂಡು ತನ್ನಿ. ಅದನ್ನು ಈ ಮಿಶ್ರಣಕ್ಕೆ ಅವಶ್ಯವಿದ್ದಷ್ಟು ಅಂದರೆ ಖಾರ ಹಾಗೂ ಪರಿಮಳಕ್ಕೆ ತಕ್ಕಂತೆ ಹಾಕಿಕೊಳ್ಳಿ. ಎಳ್ಳೆಣ್ಣೆಯಲ್ಲಿ ಸಾಸಿವೆ ಹಾಗೂ ಇಂಗು ಹಾಕಿದ ಒಗ್ಗರಣೆ ಕೊಟ್ಟು ಬಿಡಿ. ಲಿಂಬೇ ತೊಕ್ಕು ರೆಡಿ. ಜಾಡಿಯಲ್ಲಿ ತುಂಬಿಸಿ ಇಡಿ.


ಚಿತ್ರಾನ್ನ : ಅವಶ್ಯವಿದ್ದಷ್ಟು ಅನ್ನ ಉದುರುದುರಾಗಿ ಮಾಡಿಕೊಳ್ಳಿ.
ಗಜಲಿಂಬೇರಸ ಒಂದು ಕಪ್ ನಲ್ಲಿ ಹಿಂಡಿ ಇಟ್ಟುಕೊಳ್ಳಿ.
ಒಂದು ಕಪ್ ತೆಂಗಿನ ತುರಿ, ಚಿಟಿಕೆ ಅರಸಿನ, 2 - 3 ಒಣಮೆಣಸು, ಅರ್ಧ ಚಮಚ ಸಾಸಿವೆ, ಉಪ್ಪು, ಬೆಲ್ಲ ಇವಿಷ್ಟನ್ನು ನೀರು ಹಾಕದೆ ತರಿತರಿಯಾಗಿ ರುಬ್ಬಿ ತೆಗೆಯಿರಿ.
ಬಾಣಲೆಯಲ್ಲಿ ಒಗ್ಗರಣೇಗಿಟ್ಟಾಯಿತೇ , ನೆಲಕಡಲೇ ಬೀಜ ಬೀಳಲಿ. ಒಗ್ಗರಣೆ ಚಟಪಟ ಕೇಳಲಿ. ಕರಿಬೇವಿನೆಸಳು ಮರೆಯದಿರಲಿ. ಹಾಗೂ ರುಬ್ಬಿದ ಮಸಾಲೆ, ಲಿಂಬೇರಸ ಹಾಕಿ, ಸೌಟಿನಲ್ಲಿ ಕೈಯಾಡಿಸುತ್ತಾ ಮಾಡಿಟ್ಟ ಅನ್ನ ಸೇರಿಸಿ ಕ್ಷಣಕಾಲ ಮುಚ್ಚಿಟ್ಟು ಕೆಳಗಿಳಿಸಿ. ಚಿತ್ರಾನ್ನ ನಾನಾ ವಿಧವಾಗಿ ಮಾಡಬಹುದಾದ ಪಾಕಶಾಸ್ತ್ರೀಯ ಕಲೆ. ಇದು ನಮ್ಮೂರಿನ ಸಾಂಪ್ರದಾಯಿಕ ಕ್ರಮದ ಚಿತ್ರಾನ್ನ, ಔತಣಕೂಟಗಳಲ್ಲಿ ಕಡ್ಡಾಯವಾಗಿ ಇರಲೇಬೇಕಾದ ಸಹವ್ಯಂಜನ.

ಲಿಂಬೇ ಉಪ್ಪಿನಕಾಯಿ : ಗಜಲಿಂಬೆಯನ್ನು ಕತ್ತರಿಸಿ ಹೋಳು ಮಾಡಿಕೊಳ್ಳಿ. ಒಂದು ಗಜಲಿಂಬೆಯಲ್ಲಿ 8 -10 ತುಂಡುಗಳು ಲಭ್ಯ. ಶುಂಠಿ, ಹಸಿಮೆಣಸು, ಮಾಂಙನಾರಿ ( ಮಾವಿನಶುಂಠಿ ) ಇದ್ದರೆ ಹಾಕಬಹುದು. ಉಪ್ಪು ಬೆರೆಸಿ ಜಾಡಿಗೆ ತಂಬಿಸಿ. ಎರಡು ದಿನಕ್ಕೊಮ್ಮೆ ಒಣ ಸೌಟಿನಲ್ಲಿ ತಿರುಗಿಸಿ. ವಾರವಾಗುತ್ತಲೇ ಉಪ್ಪು ಹೀರಿದ ಲಿಂಬೇ ಹೋಳುಗಳು ಮೆತ್ತಗಾಗಿ ಉಪಯೋಗಕ್ಕೆ ಸಿದ್ಧ. ಬೇಕಿದ್ದಲ್ಲಿ ಹುರಿದ ಉಪ್ಪಿನಕಾಯಿ ಹುಡಿ ಸೇರಿಸಿ ಇನ್ನಷ್ಟು ಘರಂ ಮಾಡಿಕೊಳ್ಳಿ. ಬಾಯಿರುಚಿ ಕೆಟ್ಟಿರುವಾಗ, ಜಡ್ಡಾದಾಗ ಇಂತಹ ಉಪ್ಪಿನಕಾಯಿಗಳು ಹಿತವಾಗಿರುತ್ತವೆ.

ಮೆಣಸ್ಕಾಯಿ : ಇದರ ಸಿಪ್ಪೆ ಸ್ವಲ್ಪ ಕಹಿ. ರುಚಿಕರವಾದ ವ್ಯಂಜನ ತಯಾರಿಸಬಹುದು. ನಾಲ್ಕನೇ ಒಂದರಷ್ಟು ಸಿಪ್ಪೆ ಸಾಕು. ಮೆತ್ತಗೆ ಬೇಯಿಸಿ, ನೀರು ಚೆಲ್ಲಿ.
ಒಂದು ಕಪ್ ಕಾಯಿತುರಿ,
3 - 4 ಒಣಮೆಣಸು, ಒಂದು ಚಮಚ ಉದ್ದಿನಬೇಳೆ, 3 ಚಮಚ ಕೊತ್ತಂಬರಿ, 6 ಚಮಚ ಎಳ್ಳು, ಇಂಗು ಸ್ವಲ್ಪ, ಹುರಿಯಿರಿ.
ಕಾಯಿತುರಿ, ಹುರಿದ ಮಸಾಲೆಯನ್ನು ಬೇಯಿಸಿದ ಸಿಪ್ಪೆಯೊಂದಿಗೆ ಅರೆದಿಡಿ.
ಹುಣಸೇರಸ, ಬೆಲ್ಲ, ಉಪ್ಪು, ಅರೆದ ಮಸಾಲೆಗೆ ಅವಶ್ಯವಾದ ನೀರು ಸೇರಿಸಿ ಕುದಿಸಿ. ತೆಳ್ಳಗಾಗಕೂಡದು. ಒಗ್ಗರಣೆ ಕೊಡಿ.
ಕಿತ್ತಳೆ ಸಿಪ್ಪೆಯಿಂದಲೂ ಹೀಗೇ ಮೆಣಸ್ಕಾಯಿ ತಯಾರಿಸಬಹುದು.

ದುಡ್ಲ ಹುಳಿ, ಕಂಚು ಹುಳಿಗಳಿಂದಲೂ ಇದೇ ತೆರನಾದ ಪಾಕ ವೈವಿಧ್ಯಗಳನ್ನು ಮಾಡಬಹುದು.

ಅಜೀರ್ಣದಿಂದ ಹೊಟ್ಟೆನೋವೇ, ಹಾಗಿದ್ದಲ್ಲಿ ಉಪ್ಪಿನಲ್ಲಿ ಹಾಕಿಟ್ಟ ಮೆತ್ತಗಾದ ಲಿಂಬೇಸಿಪ್ಪೆಯನ್ನು ಮಜ್ಜಿಗೆಯಲ್ಲಿ ಚೆನ್ನಾಗಿ ಗಿವುಚಿ ಕುಡಿಯಿರಿ.

ಬೆಳಗೆದ್ದಂತೇ ತಲೆಸುತ್ತು ಬಂದಂತಾಗುತ್ತಿದೆಯೇ, ಲಿಂಬೇರಸಕ್ಕೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಿರಿ.

ಹಲವರಿಗೆ ಬಸ್ ಪ್ರಯಾಣವೆಂದರೆ ವಾಂತಿ ಮಾಡುವ ಹವ್ಯಾಸ, ತಪ್ಪದೇ ಲಿಂಬೇಹಣ್ಣು ಅಥವಾ ಲಿಂಬೇ ಸೊಪ್ಪು ಕೈಯಲ್ಲಿ ಇಟ್ಟುಕೊಳ್ಳಿ. ಆಗಾಗ ಆಘ್ರಾಣಿಸುತ್ತಾ ಇದ್ದಲ್ಲಿ ಸುಖಪ್ರಯಾಣ ಮಾಡಬಹುದು.

ಮನೆ ಹಿತ್ತಲಿನಲ್ಲಿ ಒಂದು ಗಿಡವಿದ್ದರೆ ಸಾಕು, ವರ್ಷಪೂರ್ತಿ ಲಿಂಬೆಗೆ ಕೊರತೆಯಿಲ್ಲ. ನಿರ್ವಹಣೆಗೆ ಏನೂ ಖರ್ಚಿಲ್ಲ. ರೋಗರುಜಿನಗಳ ಬಾಧೆಯೂ ಈ ಸಸ್ಯಕ್ಕಿಲ್ಲ. ಲಿಂಬೇಹಣ್ಣನ್ನು ಸಿಪ್ಪೆಯ ಬಣ್ಣ ಹಸಿರಿನಿಂದ ಹಳದೀ ವರ್ಣಕ್ಕೆ ತಿರುಗುವುದನ್ನು ಗಮನಿಸಿ ಕೀಳಬೇಕು. ಕಿತ್ತ ಕೂಡಲೇ ಗಜಲಿಂಬೆಯನ್ನು ಕತ್ತರಿಸುವುದು ಸರಿಯಲ್ಲ. ಶೀತಲ ಪೆಟ್ಟಿಗೆಯಲ್ಲಿ ಇಡುವ ಅವಶ್ಯಕತೆಯೇನೂ ಇಲ್ಲ.

ವಿಟಾಮಿನ್ Cಯಿಂದ ಸಂಪದ್ಭರಿತವಾಗಿದೆ ನಿಂಬೇರಸ, ಸಿಪ್ಪೆ ನೈಸರ್ಗಿಕ ಆಂಟಿಆಕ್ಸಿಡಾಂಟ್. ಶರೀರದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಕ್ಯಾನ್ಸರ್ ಕಾಯಿಲೆಯನ್ನು ಪ್ರತಿಬಂಧಿಸುವ ವಿಶೇಷ ಗುಣ ಲಿಂಬೇಸಿಪ್ಪೆಯಲ್ಲಿದೆಯೆಂದು ವೈದ್ಯಕೀಯ ಲೇಖನಗಳೂ ಬಂದಿವೆ. ದಿನನಿತ್ಯದ ಊಟ ಉಪಾಹಾರಗಳಲ್ಲಿ ಹಿತವಾಗಿ ಬಳಸಿ ಪ್ರಕೃತಿ ನೀಡಿದ ಸಸ್ಯಸಂಪತ್ತಿನಿಂದ ಆರೋಗ್ಯಭಾಗ್ಯವನ್ನು ಉಳಿಸಿಕೊಳ್ಳೋಣ.

.

Posted via DraftCraft app