Pages

Ads 468x60px

Monday, 24 June 2013

ಹುಳಿಮೆಣಸು

ಗದ್ದೆ ಬೇಸಾಯ ಆಯಿತು ಅನ್ನುತ್ತಿದ್ದ ಹಾಗೇನೇ ರೈತಾಪಿ ವರ್ಗದ ಮಂದಿ ಗದ್ದೆಯನ್ನು ಪಾಳು ಬಿಡದೆ ಸೌತೆ,  ಸಿಹಿಗೆಣಸು ಬೆಳೆಸುವ ಪದ್ಧತಿ ಬಹಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ.   ಈ ಸೌತೆ ಬೆಳೆ ಮಾಡುವ ಸಂದರ್ಭದಲ್ಲಿ ಆಳು, ಯಜಮಾನ ಎಂಬ ತಾರತಮ್ಯವಿಲ್ಲದೆ ಎಲ್ಲರೂ ಸಾಮೂಹಿಕವಾಗಿ  ಪಾಲ್ಗೊಳ್ಳುವುದೂ,   ಅವರವರ ಶಕ್ತ್ಯಾನುಸಾರ ನೀರಿನ ಲಭ್ಯತೆಯನ್ನನುಸರಿಸಿ ಹರಿವೆ,  ಮೆಣಸು, ಅಲಸಂದೆ ಇತ್ಯಾದಿಗಳನ್ನು ಬೆಳೆಯುವ ಪದ್ಧತಿ.    ಹೆಚ್ಚಾಗಿ ಮಳೆಗಾಲದ ಉಪಯೋಗಕ್ಕಾಗಿ ಸೌತೆಯ ಬಳಕೆ ಸಾಮಾನ್ಯ.   ಬೆಳೆದ ಸೌತೆಕಾಯಿಗಳನ್ನು ಬಾಳೇಹಗ್ಗದಲ್ಲಿ ಅಲಂಕಾರಿಕವಾಗಿ ಕಟ್ಟಿ,  ಹಂಚಿನ ಮಾಡಿನ ಕೆಳಗೆ ಜಾಲರಿಯಂತೆ ನೇತಾಡಿಸುವುದೂ ಒಂದು ಕಲೆ.   ದಾಸ್ತಾನು ಉಗ್ರಾಣದಲ್ಲಿ ಮರದ ಹಲಗೆಯ ಜೆಂಙದಲ್ಲಿ ಸಾಲಾಗಿ ಇಟ್ಟುಕೊಂಡರೂ ಆಯಿತು.   ಇಂತಹ ಹಣ್ಣುಸೌತೆಯಿಂದ ಗೃಹಿಣಿಯರು ಮಾಡುವಂತಹ ಒಂದು ವ್ಯಂಜನ ಹುಳಿಮೆಣಸು. 

ಹಣ್ಣುಸೌತೆಯ ಹುಳಿಮೆಣಸು ಮಾಡುವ ವಿಧಾನ ತಿಳಿಯೋಣ:

ಅರ್ಧ ಕಡಿ ತೆಂಗಿನ ತುರಿ,  ನೆಲ್ಲಿ ಗಾತ್ರದ ಹುಣಸೇ ಹುಳಿ,  ನಾಲ್ಕು ಒಣಮೆಣಸು  (ಹುರಿಯುವುದು ಬೇಡ ),  ಚಿಟಿಕೆ ಅರಸಿನದೊಂದಿಗೆ  ನುಣ್ಣಗೆ ಅರೆಯಬೇಕಾದ್ದು ಮೊದಲನೇ ಸಿದ್ಧತೆ.

ಸೌತೆಯ ಸಿಪ್ಪೆ ತೆಗೆಯುವ ಅಗತ್ಯವಿಲ್ಲ.   ಅಗಲವಾದ ತುಂಡುಗಳನ್ನು ಮಾಡಿ ರುಚಿಗೆ ಉಪ್ಪು ಸೇರಿಸಿ ಬೇಯಿಸಿಡಬೇಕಾದ್ದು ಎರಡನೇ ಸಿದ್ಧತೆ. 

ಇಷ್ಟೇನಾ,  ಇದೇನು ಮಹಾ ಅನ್ನೋ ಹಾಗಿಲ್ಲ.   ಇದಕ್ಕೆ ಮನೆಹಿತ್ತಿಲಿನ ನೆರುಗಳ ಗಿಡದ ಎಲೆಗಳನ್ನು ಸೇರಿಸಿ ಕುದಿಸಿದರೇನೇ ಕ್ರಮಪ್ರಕಾರದ ಹುಳಿಮೆಣಸು ಆದ ಹಾಗೇ.

ನೆರುಗಳ ಸೊಪ್ಪಿನ ಗಿಡದ ಬಗ್ಗೆ ನಮ್ಮಿಂದ ಸಾಧ್ಯವಿರುವ ಮಾಹಿತಿ ಕಲೆ ಹಾಕೋಣ:

ನನ್ನ ಬಾಲ್ಯದಲ್ಲಿಯೇ ಚಿರಪರಿಚಿತವಾದ ಈ ಸಸ್ಯವನ್ನು ನಮ್ಮ ಕಾಸರಗೋಡಿನ ಮನೆಯಲ್ಲಿಯೂ ನನ್ನಮ್ಮ ಸಾಕಿಕೊಂಡಿದ್ದರು,   ಹಳ್ಳಿಯ ಮನೆಯಲ್ಲಿಯೂ ಇತ್ತು.   ಮದುವೆಯಾಗಿ ಬಂದ ಮನೆಯಲ್ಲಿ ನಾನೇ ತಲೆಂಗಳದ ಅತ್ತಿಗೆ ಮನೆಯಿಂದ ತಂದು,  ನೆಟ್ಟು,  ಬೆಳೆಸಿದ್ದೇನೆ.   ಸಮಾರು ಏಳು ಅಡಿ ಎತ್ತರ ಬೆಳೆಯುವ ಒಂದು ಪೊದರು ಸಸ್ಯ ಇದಾಗಿದೆ,   ಸಮೀಪ ಸುಳಿದರೆ ಸಾಕು,  ಆಕರ್ಷಕ ಸುವಾಸನೆ.   ಹೀಗಿರುವಾಗ ಅಡುಗೆಯ ಸಾಂಬಾರವಾಗಿ ಇದನ್ನು ಕುದಿಯುತ್ತಿರುವ ಹುಳಿಗೆ ಹಾಕಿದಲ್ಲಿ ಸೌತೆಕಾಯಿ ಹುಳಿಮೆಣಸು ಘಮಘಮ....

ತರಕಾರಿ ಯಾವುದೂ ಇಲ್ಲದಿದ್ಯಾಗ್ಯೂ ಧಾರಾಳವಾಗಿ ಈ ಸೊಪ್ಪು ಮಾತ್ರ ಹಾಕಿ ಅಡುಗೆ ಮಾಡಬಹುದಾಗಿದೆ.

ಬೇವಿನೆಲೆಯ ಚಟ್ನೀಪುಡಿ ತಯಾರಿಸುವಂತೆ ನೆರುಗಳ ಸೊಪ್ಪಿನಿಂದಲೂ ಚಟ್ನೀಪುಡಿ ಮಾಡಬಹುದು.

ಎಲೆಗಳನ್ನು ತುಪ್ಪದಲ್ಲಿ ಹುರಿದು,  ತೆಂಗಿನತುರಿಯೊಂದಿಗೆ ಅರೆದು,  ಸಿಹಿಮಜ್ಜಿಗೆ ಎರೆದು,  ಅಲ್ಲಿಗೆ ತಂಬುಳಿಯೂ ಸಿದ್ಧ. 

ಇದು ಒಂದು ಅಪ್ಪಟ ಭಾರತೀಯ ಸಸ್ಯ.   ಪ್ರಾದೇಶಿಕ  ಹಾಗೂ ಭಾಷಾ ವೈವಿಧ್ಯಗಳಿಂದ ಕೂಡಿರುವ ಭಾರತದಲ್ಲಿ ಇದಕ್ಕೆ ನಿಶ್ಚಿತವಾದ ಒಂದೇ ಹೆಸರನ್ನು ಕೊಡಲು ಅಸಾಧ್ಯ.   ಆದರೂ ನಮ್ಮ ದಕ್ಷಿಣ ಕನ್ನಡಿಗರ ಆಡುನುಡಿಯಲ್ಲಿ ನೆರುಗಳ ಸೊಪ್ಪು ಎಂಬ ಹೆಸರೇ ಬಳಕೆಯಲ್ಲಿದೆ.   ಈ ನೆರುಗಳ ಸಸ್ಯದ ಬೇರಿನಿಂದ ಹಿಡಿದು ಕುಡಿ ಎಲೆಗಳೂ ಆಯುರ್ವೇದೀಯ ಪದ್ಧತಿಯಲ್ಲಿ ಚಿಕಿತ್ಸಕ ಗುಣವುಳ್ಳದ್ದಾಗಿದೆ,    Verbenaceae ಕುಟುಂಬಕ್ಕೆ ಸೇರಿದೆ,   Premna integrifolia  ಎಂಬ ಹೆಸರನ್ನು ಸಸ್ಯಶಾಸ್ತ್ರಜ್ಞರು ನೀಡಿದ್ದಾರೆ.   ಇದರ ವೈದ್ಯಕೀಯ ಗುಣವಿಶೇಷಗಳನ್ನು ತಿಳಿದಂತಹ ಪಂಡಿತೋತ್ತಮರಿಂದ ಅರಿತುಕೊಳ್ಳುವುದೇ ಉತ್ತಮವೆಂದು ನನ್ನ ಅನಿಸಿಕೆ.

ಆಯಿತು,  ಈ ಸೊಪ್ಪು ಇಲ್ಲದೇ ಹುಳಿಮೆಣಸು ಮಾಡೋಣ,  ಚಿಂತೆ ಬೇಡ.  ಬೆಂದ ತರಕಾರಿ ಹಾಗೂ ರುಬ್ಬಿದ ಮಿಶ್ರಣವನ್ನು ಕುದಿಯಲಿಟ್ಟು,   ಹತ್ತು ಬೆಳ್ಳುಳ್ಳೀ ಎಸಳು ಹಾಗೂ ಕರಿಬೇವಿನ ಒಗ್ಗರಣೆ ಕೊಟ್ಟು ಬಿಡಿ.   ಸಿಹಿ ಬೇಕಿದ್ದರೆ ಬೆಲ್ಲ ಹಾಕಿದರಾಯಿತು. ಬೇಳೆಕಾಳುಗಳ ನೆರವಿಲ್ಲದೆ ಮಾಡಬಹುದಾದ,  ಹೆಚ್ಚಿನ ಮಸಾಲಾ ಸಾಮಗ್ರಿಗಳನ್ನೂ ಬಯಸದ ಸುಲಭ ವ್ಯಂಜನ ಇದಾಗಿದೆ.

ಇದೇ ಮಾದರಿಯ ಹುಳಿಮೆಣಸು ತೊಂಡೆಕಾಯಿಯಿಂದಲೂ ಮಾಡಬಹುದಾಗಿದೆ.  ಹಣ್ಣಾದ ಮುಳ್ಳುಸೌತೆಯನ್ನೂ ಬಳಸಬಹುದು. ಚಪ್ಪರದಲ್ಲಿ ಬೆಳೆದು ಹಣ್ಣಾದ ತೊಂಡೆಕಾಯಿಗಳನ್ನು ಹೀಗೆ ಹುಳಿಮೆಣಸು ಮಾಡುವ ವಾಡಿಕೆ.   ತೊಂಡೆಯನ್ನು ತುಂಡು ಮಾಡುವ ಅವಶ್ಯಕತೆಯಿಲ್ಲ.   ಗುಂಡುಕಲ್ಲಿನಲ್ಲಿ ಜಜ್ಜಿಕೊಂಡರೆ ಸಾಕು.   

ತೊಗರೀಬೇಳೆ ಸಾರು ಯಾ ಇನ್ಯಾವುದೇ ವಿಧದ ಸಾರು ಘಮಘಮಿಸುವಂತೆ ಮಾಡಲು ನೆರುಗಳದ ಎಲೆಗಳನ್ನು ಕುದಿಯುತ್ತಿರುವಾಗ ಹಾಕಿ ಬಿಟ್ಟರೆ ಸರಿ,  ಕೊತ್ತಂಬ್ರೀ ಸೊಪ್ಪು,  ಬೇವಿನೆಲೆ ಹಾಕಬೇಕಾಗಿಯೇ ಇಲ್ಲ.

ಆಧುನಿಕತೆಯ ಭರಾಟೆಯಲ್ಲಿ ನಾವು  ಔಷಧೀಯ ಗುಣಗಳುಳ್ಳ ವನಸ್ಪತೀ ಸಸ್ಯಗಳನ್ನು ಮರೆಯುತ್ತಿದ್ದೇವೆ.   ಕಾಸರಗೋಡಿನ ಮನೆಯಲ್ಲಿಯೂ ಇತ್ತು ಎಂಬುದಾಗಿ ಈ ಬರಹದ ಆರಂಭದಲ್ಲೇ ಬರೆದಿದ್ದೇನಲ್ಲ,  ನಮ್ಮ ಮನೆಯ ಅಕ್ಕಪಕ್ಕ ಗೌಡಸಾರಸ್ವತರ ಮನೆಗಳು,   ಆಗೆಲ್ಲ ಅವಿಭಕ್ತ ಕುಟುಂಬಗಳು.  ಒಬ್ಬಾಕೆಗೆ ಮಕ್ಕಳಾಗಿರಲಿಲ್ಲ.   ಆಕೆಗೆ ಔಷಧಿಯಾಗಿ ಈ ನೆರುಗಳದ ಎಲೆಗಳನ್ನು ಚಿವುಟಿಕೊಂಡು ಹೋಗುತ್ತಿದ್ದರಂತೆ.   ಋತುಸ್ನಾನಾನಂತರ ಒಂದು ಅಳತೆಯ ಎಲೆಗಳನ್ನು ಮಜ್ಜಿಗೆಯಲ್ಲಿ ಅರೆದು ಕುಡಿಯುವ ಕ್ರಮ,  ಮುಂಜಾನೆ ಆಹಾರದ ಮೊದಲು,  ಮೂರು ದಿನಗಳ ಕಾಲ ಸೇವನೆ.  ವೈದ್ಯರು ಹೇಳಿದಂತೆ ಮಾಡಿ ಆಕೆ ತಾಯಿಯಾದದ್ದು. ಇದು ನನ್ನಮ್ಮ ಕೊಟ್ಟ ಮಾಹಿತಿ.   ಅಂದಿನ ದಿನಗಳಲ್ಲಿ ಮದುವೆಯಾದ ವರ್ಷದೊಳಗೆ ಮಗುವನ್ನು ಹೆರದವಳು ಬಂಜೆ ಎಂದೇ ಎಲ್ಲರಿಂದ ಹೇಳಿಸಿಕೊಳ್ಳುವ ವಾಡಿಕೆ ಇದ್ದಿತು.   ಆಕೆಯ ಬಂಜೆತನದ ನಿವಾರಣೆಗೆ ಈ ನೆರುಗಳ ಸೊಪ್ಪು....


ಈ ಸೊಪ್ಪು ತರಕಾರಿಯ ಉಪಯುಕ್ತತೆಯ ಬಗ್ಗೆ ಇನ್ನಷ್ಟು ತಿಳಿಯಲು ಹಿರಿಯರಾದ ನಮ್ಮತ್ತಿಗೆಯನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಇಷ್ಟೇ.   " ನಮ್ಮ ಮನೆಯಲ್ಲಿರುವ ಗಿಡದಿಂದಲೂ ಸೊಪ್ಪು ಚಿವುಟಿಕೊಂಡು ಹೋಗ್ತಿದ್ರು,  ಮದ್ದಿಗೇಂತ.   ಯಾವ ಪ್ರಕಾರದ ಔಷಧಿ ಮಾಡ್ತಿದ್ರು ಅಂತಾ ನಾನು ಕೇಳಿಲ್ಲವಲ್ಲ "  ಅಂದರು.  

Posted via DraftCraft app

Sunday, 16 June 2013

ಉದ್ದಿನ ವಡೇ

ಒಂದು ಕಪ್ ಉದ್ದು ನೆನೆ ಹಾಕಿ.  ಅರ್ಧ ಗಂಟೆ ಬಿಟ್ಟು ನೀರು ಬಸಿದು ಮಿಕ್ಸೀಯಲ್ಲಿ ಅರೆಯಿರಿ.  ನುಣ್ಣಗಾಗಲು 2 -3 ಚಮಚಾ ನೀರು ಹಾಕಿ.  ರುಚಿಗೆ ಉಪ್ಪು ಸೇರಿಸಿ ತೆಗೆಯಿರಿ.
ಬೇವಿನೆಸಳು,  ಶುಂಠಿ,  ಹಸಿಮೆಣಸು ಚಿಕ್ಕದಾಗಿ ಕತ್ತರಿಸಿ ಹಿಟ್ಟಿಗೆ ಹಾಕಿ.
2 ಚಮಚಾ ಅಕ್ಕೀ ತರಿ ಹಾಕಿಕೊಂಡು ಚೆನ್ನಾಗಿ ಕಲಸಿ ಅರ್ಧ ಗಂಟೆ ಮುಚ್ಚಿ ಇಡಿ.

ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾಯಲಿಡಿ.
ಎಣ್ಣೆ ಬಿಸಿಯಾಯಿತೇ,  ಅಂಗೈಯನ್ನು ಒದ್ದೆ ಮಾಡಿಕೊಂಡು ಲಿಂಬೇ ಗಾತ್ರದಷ್ಟು ಹಿಟ್ಟನ್ನು ತೆಗೆದು ಕೈ ಬೆರಳಿನಲ್ಲಿ ತೂತು ಕೊರೆದು ಎಣ್ಣೆಗೆ ಬಿಡಿ.   ತೂತಿನ ವಡೆಗೆ ಸ್ವಲ್ಪ ಅಭ್ಯಾಸವೂ ಬೇಕಾಗುತ್ತದೆ.    ಮಗುಚಿ  ಹಾಕಿ ಎರಡೂ ಬದಿ ಬೇಯಿಸುವುದು ಅವಶ್ಯ.   ಹೊಂಬಣ್ಣ ಬಂದಾಗ ತೆಗೆಯಿರಿ.   


ಒಂದು ಬಟ್ಟಲು ಸಿಹಿ ಮೂಸರು.
ರುಚಿಗೆ ಉಪ್ಪು,  ಸಕ್ಕರೆ.
ಸುವಾಸನೆಗೆ ಜೀರಿಗೆ,  ಓಮ,  ಹಸಿ ಮೆಣಸು.
ಇವನ್ನೆಲ್ಲ ಸಿದ್ಧ ಪಡಿಸಿ ಇಂಗು ಹಾಕಿ ಒಗ್ಗರಣೆ ಕೊಡಿ.
ಮಸಾಲಾ ಮೊಸರಿನಲ್ಲಿ ಮಾಡಿಟ್ಟ ವಡೆಗಳನ್ನು  ಹಾಕಿಡಿ.  
ಅರ್ಧ ಗಂಟೆ ಬಿಟ್ಟು  ಈ ತೈರೊಡೆ ತಿನ್ನಿ.
 
ತೊಗರೀಬೇಳೆ ರಸಂ ಹೇಗೂ ಊಟಕ್ಕಾಗಿ ಮಾಡಿಯೇ ಇರುತ್ತೀರಿ.
 ರಸಂ ಎರೆದು ಇಟ್ಟುಕೊಳ್ಳಿ.
ಸಂಜೆಯ ಟೀ ಜೊತೆ ಸವಿಯಿರಿ.

ಉಳಿದದ್ದನ್ನು ತೆಗೆದಿಡಿ.  
ನಾಳೆ ತಿಂದರಾಯಿತು.
Posted via DraftCraft app

Monday, 10 June 2013

ಹೇಳೇ ಗೆಳತೀ..
" ಎಲ್ಲಿದ್ದೆವು ನಾವು ನೆನಪಿದೆಯ..."

" ಹೇಗಿದ್ದೆವು ನಾವು ತಿಳಿದಿದೆಯ..."

 " ಹ್ಞೂಂ,  ಇಲಸ್ಟ್ರೇಟೆಡ್ ವೀಕ್ಲೀ ಆಫ್ ಇಂಡಿಯಾ ಪತ್ರಿಕೆಯ ಪುಟದೊಳಗೆ ಮೆರೆಯುತ್ತಿದ್ದೆವಲ್ಲವೇನೇ..."

" ಹೌದೂ,   ಈಗ ನೆನಪಾಯಿತು,  ರೇಖಾ- ಚಿತ್ರ  ಮೂಡಿಸಿದ ಕಲಾಕಾರ ಯಾರು ಹೇಳೇ ಸಖೀ..."

" ಮರೆತೇ ಹೋಗಿದೆ,  ಐವತ್ತು ವರ್ಷಗಳಾಗಿ ಹೋದವು,  ಈ  ಪತ್ರಿಕೆ ಈಗ ಇಲ್ಲವಂತೆ ಗೊತ್ತಾ ... "

" ಹೀಗೂ ಕಿತಾಪತಿ ಮಾಡ್ಬೌದಾ,  ನಮ್ಮ ಪಾಡಿಗೆ ನಾವು ಇದ್ದೆವಲ್ಲ,  ಎಳೆ ಎಳೆದು ತಂದು ಕಸೂತಿ ಕಲೆ ಮಾಡಿದ್ದು ಸರಿಯಾ..."

" ಅದಕ್ಕೆ ಚೌಕಟ್ಟು ಹಾಕಿಸಿ ಗೋಡೆಯಲ್ಲಿ ನೇತಾಡಿಸಿದ್ದು ಸರಿಯಾ "

" ತಾಯ್ಮನೆಗೆ ಬಂದು  ' ಓಹ್ಹೋ,  ನನ್ನ ಕಲೆಗಾರಿಕೆ ಇಲ್ಲಿದೇ '  ಎಂದು ಬೆನ್ನು ತಟ್ಟಿಕೊಳ್ಳಬಹುದೇ ಹೇಳಕ್ಕಾ "

" ಕೆಮರಾದಲ್ಲಿ ಸೆರೆ ಹಿಡಿದು ಸಾಧಿಸಿದ್ದೇನಂತೆ ಕೇಳೇ "

" ಅದು ಹೋಗಲಿ ಬಿಡೇ,  ಈಗ ನಮ್ಮನ್ನು ಹೂದೋಟದಲ್ಲಿ,  ನೀರು ಹರಿವ ಝರಿ ಪಕ್ಕದಲ್ಲಿ ನಿಲ್ಲಿಸಿ ಚೆಂದ ನೋಡುವ ವೈಖರಿ ಗಮನಿಸಿದ್ದಿಯೇನೇ "

" ಬರ್ತೀವಿ.."

" ಎಲ್ಲಿಗೆ ಹೋಗ್ತೀರಾ ಅಂತಿದಾಳೆ ಈ ಅಕ್ಕ "

" ಇನ್ನು ಇಲ್ಲೇ ಖಾಯಂ ನೆಲೆ,  ಎಲ್ಲಿಗೂ ಹೋಗೂದು ಬೇಡವಂತೆ "

" ಹೌದ್ಹೌದು,  ಹಳೆಯ ಕಲೆಗೊಂದು ಹೊಸ ನೆಲೆ ಸಿಕ್ಕಿಯೇ ಬಿಡ್ತು ಅನ್ನೋಣ "

" ಹ...ಹಹ..."Posted via DraftCraft app

Monday, 3 June 2013

ಕುಟಜಾ ತಂಬುಳಿ

ಮೈಸೂರು ಪ್ರವಾಸ ಮುಗಿಸ್ಕೊಂಡು ಬಂದಿದ್ದೇ ಬಂದಿದ್ದು,   ಶೀತ,  ಹಾ..ಕ್ಷೀಗಳೂ ಜೊತೆಯಲ್ಲಿ ಬಂದವು. ರಾತ್ರಿಯ ಹೊತ್ತಿಗೆ,   ಮೈ ಬಿಸಿಯೇರುತ್ತಿದೆ...  ಜ್ವರ ಬೇರೆ ಶುರುವಾಯ್ತೇ ಅನ್ನಿಸತೊಡಗಿತು. 

" ಈ ಮಾತ್ರೆ ತಿಂದು ಮಲಗು,  ಬೆಳಗ್ಗೆ ಏಳುವಾಗ ಸರಿ ಹೋದೀತು "

ಇವರು ಕೊಟ್ಟ ಮಾತ್ರೆ ಕಣ್ಮುಚ್ಚಿ ನುಂಗಿ ಆಯ್ತು,  ಹೊಟ್ಟೆಯಲ್ಲೂ ಏನೋ ಸಂಕಟ.   ಒಂದು ತುಂಡು ಕಂಚು ಸಟ್ಟು ಮಜ್ಜಿಗೆಯಲ್ಲಿ ಹಿಸುಕಿ,  ಇನ್ನೂ ಒಂದಿಷ್ಟು ಮಜ್ಜಿಗೆ ಎರೆದು ಕುಡಿದಾಯ್ತು.   ದೂರ ಪ್ರಯಾಣ ಇನ್ಮುಂದೆ ಹೋಗಲೇ ಬಾರದು ಎಂದು ಮನಸ್ಸಿನಲ್ಲೇ ದೃಢ ಶಪಥ ಮಾಡಿಯೂ ಆಯ್ತು.   ಇನ್ನು ಒಂದು ವಾರದ ಮಟ್ಟಿಗೆ ಕಡು ಪಥ್ಯದ ಊಟ ಮಾಡಲೇಬೇಕು ಎಂಬ ನಿಶ್ಚಯ ಮಾಡಿ ನಿದ್ರೆಗೆ ಇಳಿದೆ.

ಬೆಳಗ್ಗೆದ್ದು ಎಂದಿನಂತೆ ಮನೆಯಂಗಳದಲ್ಲಿ ಅಡ್ಡಾಡುತ್ತಿದ್ದಾಗ, ಎದುರಿನ ಮನೆಯ ಬೇಲಿಯ ಪಕ್ಕದಲ್ಲಿ ಬೆಳ್ಳಗಿನ ನಂದಿಬಟ್ಲು ಹೂವಿನಂತೆ ಅರಳಿದ ಕೊಡಸಿಗೆ ಹೂ ಗೊಂಚಲು ಕಾಣಿಸಬೇಕೆ,  ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದ ಹಾಗೆ....   ಇವರನ್ನು ಕರೆದೆ,


  " ಇಲ್ಲಿ ಬನ್ನೀ...  ಆ ಬೇಲಿ ಪಕ್ಕದಲ್ಲಿ ಹೂ ಅರಳಿದ್ದು ಕಾಣಿಸುತ್ತಾ .."

" ಯಾಕೇ,  ಆ ಹೂ ಬೇಲಿ ಒಳಗಿದೆಯಾ,  ಹೊರಗಿದೆಯಾ "

" ಬೇಲಿ ಹೊರಗೇ ಇರೂದು ಗಿಡ,  ಆ ಹೂಗೊಂಚಲು ಕೊಯ್ದು ತನ್ನಿ "

ಇವರೂ ಅರೆಮನಸ್ಸಿನಿಂದ ಎದ್ದು ಹೋಗಿ ಹೂ ಕೊಯ್ದು ತಂದರು.

ಸಂಜೆ ಪೇಟೆ ಕಡೆ ಹೋಗೂದಿದೆಯಲ್ಲ,  ಆಗ ರಸ್ತೆ ಬದಿಯ ನಮ್ಮ ಗದ್ದೆಯಲ್ಲೂ ಈ ಮರ ಇದೆ,  ತನ್ನೀ "

ಆ ಮರವೇ ?   ರಸ್ತೆ ಅಗಲ ಮಾಡೋರು ಕಡಿದು ಹಾಕಿದ್ದಾರಲ್ಲ " 

" ಮರ ಕಡಿದ್ರೇನಂತೆ,   ಚಿಗುರಿ ಮೇಲೆ ಬಂದಿರ್ತದೆ,  ನೋಡಿ ತರಬಾರದೇ,  ಗೌರತ್ತೆ  ಈಗ ಇಲ್ಲಿದ್ದಿದ್ರೆ ತಂದ್ಕೊಡ್ತಿದ್ರು "

ಸಂಜೆ ಹಾಲು ಪ್ಯಾಕೇಟು,  ಉದಯವಾಣಿ ಪೇಪರೊಳಗೆ ಕಳ್ಳೇಪುರಿ ತುಂಬಿಸಿದಂತೆ ಕುಟಜ ಹೂ ಗೊಂಚಲುಗಳೂ ಬಂದವು.

" ಇದು ಬೇಕಾದಷ್ಟಾಯ್ತು,  ಇದನ್ನು ಒಣಗಿಸಿ ಇಟ್ಕೋಬಹುದು,   ಬೇಕಾದಾಗ ತಂಬುಳಿ ಮಾಡಲೂಬಹುದು "

" ಸ್ವಲ್ಪ ಉಪ್ಪು ಬೆರೆಸಿ ಒಣಗಿಸ್ಕೊಂಡ್ರೆ ಬಾಳಕ ಆಯ್ತು,   ಸಂಡಿಗೆ ಥರ ಹುರಿದು ತಿನ್ನಲೂಬಹುದು "   ಗೌರತ್ತೆ ಅಂದಿದ್ದು ನೆನಪಾಯ್ತು.

ಅಂದು ಗೌರತ್ತೆ ಹೇಳಿದಂತೆ,  ಚೆನ್ನಪ್ಪನ ಬಳಿ ಹೇಳಿ ಹೂಗಳನ್ನು ತರಿಸ್ಕೊಂಡಿದ್ದೆ.   ಅವನೂ ಒಂದು ಬುಟ್ಟಿ ತುಂಬಾ ಹೂ ಕಿತ್ತು ತಂದಿದ್ದ.   ಆಗ ಮಕ್ಕಳೂ ಚಿಕ್ಕವರಿದ್ದರು,  ಅನ್ನದೊಂದಿಗೆ ಸಾರು ಕಲೆಸಿ ತಿನ್ನುವಾಗ ಈ ಹೂವನ್ನೇ ಸಂಡಿಗೆಯಂತೆ ತುಪ್ಪದಲ್ಲಿ ಹುರಿದು ಕೊಡ್ತಾ ಇದ್ದೆ.


ನನ್ನಮ್ಮನೂ ಬಂದಿದ್ದಾಗ,    " ಇಷ್ಟು ಹೂ ಇಟ್ಕೊಂಡು ಏನ್ಮಾಡ್ತೀಯ,  ಸ್ವಲ್ಪ ನನಗೂ ಕೊಟ್ಟಿರು "  ಅಂದಿದ್ದರು.   ಹೌದೂ,  ಈಗ್ಲೂ ಇರಬೇಕು ಅಂದು ಒಣಗಿಸಿಟ್ಟ ಹೂ,   ಯಾವ ಮೂಲೆಯಲ್ಲಿ ಇದೇಂತ ನೆನಪಿಗೆ ಬರ್ತಾ ಇಲ್ವೇ..   ಹೋಗ್ಲಿ,  ಈಗ ಹೊಸದೇ ಬಂದಿದೆ,   ತಂಬುಳಿ ಮಾಡಿಯೇ ಬಿಡೋಣ.

ಒಂದು ಹಿಡಿ ಕುಟಜಾ ಹೂಗಳನ್ನು ತುಪ್ಪದಲ್ಲಿ ಹುರಿಯಿರಿ.
ಒಂದು ಹಿಡಿ  ತೆಂಗಿನ ತುರಿ.
ಒಂದು ಲೋಟ ಸಿಹಿ ಮಜ್ಜಿಗೆ.
ಎಂಟ್ಹತ್ತು ಜೀರಿಗೆ ಕಾಳು.
ರುಚಿಗೆ ಉಪ್ಪು.
ಇಷ್ಟೂ ಸಾಮಗ್ರಿಗಳನ್ನು ನುಣ್ಣಗೆ ಅರೆದು,  ಸಾಕಷ್ಟು ತೆಳ್ಳಗೆ ಮಾಡಿ ಕುದಿಸಿ,  ಒಗ್ಗರಣೆ ಕೊಡಿ.     

ಭಾರತೀಯ ಸಸ್ಯವಾಗಿರುವ ಕೊಡಸಿಗೆ ಮರ ಸಂಸ್ಕೃತದಲ್ಲಿ ಕುಟಜಾ ಎಂದೇ ಪ್ರಸಿದ್ಧವಾಗಿದೆ.   ಆಯುರ್ವೇದದಲ್ಲಿ ಔಷಧೀಯ ವೃಕ್ಷವಾಗಿರುವ ಈ ಮರದ ತೊಗಟೆ, ಎಲೆ ಎಲ್ಲವೂ ಅತಿಸಾರ ವ್ಯಾಧಿಯಲ್ಲಿ ಉಪಯುಕ್ತ.  ವೈಜ್ಞಾನಿಕವಾಗಿ Hollarhena antidysenterica ಎನಿಸಿಕೊಂಡಿದೆ.   ಕುಟಜಾರಿಷ್ಟವನ್ನು ಮನೆಯಲ್ಲಿ  ಸಾಮಾನ್ಯವಾಗಿ ತಂದಿರಿಸಿಕೊಳ್ಳದವರಿಲ್ಲ. ಎಪ್ರಿಲ್, ಮೇ ತಿಂಗಳಲ್ಲಿ ಕುಟಜ ವೃಕ್ಷ  ಹೂಗೊಂಚಲುಗಳಿಂದ ತುಂಬಿ, ಉದ್ಯಾನವನಗಳ ಸೌಂದರ್ಯವನ್ನೂ ಇಮ್ಮಡಿಸುವಂತಹದು,   ವಸಂತಮಾಸದ ಆಕರ್ಷಕ ನೋಟಗಳಲ್ಲಿ ಒಂದಾಗಿರುವುದು ಈ ವೃಕ್ಷ.

Posted via DraftCraft app