Pages

Ads 468x60px

Thursday, 21 September 2017

ಬೆರಟಿ ಹಲ್ವಾನವರಾತ್ರಿ ಬಂದಿದೆ, ಹಬ್ಬದೂಟ ಎಂದು ಪಾಯಸ ಆಗಬೇಕಿದೆ. ಆಗಬೇಕು ಆದರೆ ಪಾಯಸವನ್ನು ಉಣ್ಣಲು ಮನೆಯೊಳಗೆ ಏಳೆಂಟು ಜನರ ಉಪಸ್ಥಿತಿ ಇರಬೇಕು, ಮಾಡಿದ್ದು ಮುಗಿದೀತು. ಸಕ್ಕರೆ ಬೆಲ್ಲ ಕಾಯಿಹಾಲು ಎರೆದು ವ್ಯರ್ಥ ಮಾಡಲೇಕೆ... ಹೀಗೆಲ್ಲ ಚಿಂತನಮಂಥನ ಆಗುತ್ತಿದ್ದಂತೆ ಹಲಸಿನಹಣ್ಣಿನ ಬೆರಟಿಯ ಜಾಡಿ ಕೆಳಗಿಳಿಯಿತು.
ಒಂದು ಒಣ ಸೌಟಿನಲ್ಲಿ ಮೂರು ಮುದ್ದೆ ಬೆರಟಿ ತೆಗೆದು ಪಾತ್ರೆಗೆ ಹಾಕಲಾಗಿ, “ ಬೆರಟಿ ಪಾಯಸವೇನೋ ಆದೀತು, ತಿಂದು ಮುಗಿದೀತೇ... “ ಚಿಂತೆಗಿಟ್ಟುಕೊಂಡಿತು.
ಬೆರಟಿಗೆ ತುಸು ನೀರೆರೆದು ಕೈಯಲ್ಲಿ ಹಿಸುಕಿ ದ್ರವರೂಪಕ್ಕೆ ತರುವ ಸಾಹಸ, ಹಲಸಿನಹಣ್ಣಿನ ನಾರು ಎಳೆ ಎಳೆಯಾಗಿ ಎದ್ದು ಬಂದಾಗ, ಅದನ್ನೂ ತಿಕ್ಕಿ ತಿಕ್ಕಿ ತೆಗೆದಾಯಿತು.
“ ನಾರು ಬಂದಿದ್ದು ಹೇಗೆ? “

“ ತುಳುವೆ ಹಲಸಿನ ಹಣ್ಣಿನಲ್ಲಿ ನಾರು ಜಾಸ್ತಿ, ಎಲ್ಲೋ ಈ ಬೆರಟಿ ತುಳುವ ಹಣ್ಣಿನದ್ದು. “

“ ನಾರು ತೆಗೆಯದಿದ್ದರೆ ಏನಾಗುತ್ತದೆ? “

“ ಪಾಯಸ ಕುಡಿಯುವಾಗ ಗಂಟಲಲ್ಲಿ ನೂಲಿನೆಳೆ ಅಥವಾ ಕಸ ಸಿಕ್ಕಂತೆ ಆದೀತು ಅಷ್ಟೇ. “
ಒಂದು ಅಚ್ಚು ಬೆಲ್ಲ ಹಾಕಿ, ಒಲೆಯ ಮೇಲಿಟ್ಟು ಸೌಟು ಆಡಿಸುತ್ತ ಇದ್ದಾಗ, “ ತುಪ್ಪ ಹಾಕಿದ್ರೆ ಹಲ್ವಾ ಆಯ್ತು ಅಲ್ವ... “ ಐಡಿಯಾ ಬಂದಿತು.
ಹೊರಚಾವಡಿಯಲ್ಲಿ ಇಂಟರ್ ನೆಟ್ ವ್ಯಾಸಂಗದಲ್ಲಿ ತೊಡಗಿರುವ ನಮ್ಮೆಜಮಾನ್ರ ಬಳಿ ಒಂದು ಮಾತು ಕೇಳದಿದ್ದರೆ ಹೇಗಾದೀತು?
“ ನೋಡ್ರೀ... ಬೆರಟಿ ಪಾಯಸ ಮಾಡಲೋ, ಹಲ್ವಾ ಆದೀತೊ? “

ನಮ್ಮವರು ಒಳ ಬಂದಾಗ ಬೆರಟಿಯೊಂದಿಗೆ ಬೆಲ್ಲ ಕರಗಿ ಮಿಳಿತವಾಗಿ ಹಲ್ವದ ಹದಕ್ಕೆ ಬಂದಿತ್ತು.

“ ಹಲ್ವವೇ ಚೆನ್ನ... “ ಉತ್ತರ ದೊರೆಯಿತು.

“ ಸರಿ ಹಾಗಿದ್ದರೆ. “ ಎರಡು ದೊಡ್ಡ ಚಮಚ ತುಪ್ಪ ಎರೆದು ಕಾಯಿಸುತ್ತ ಇದ್ದ ಹಾಗೆ ಗೋಡಂಬಿಯೂ ತುಪ್ಪದಲ್ಲಿ ಹುರಿಯಲ್ಪಟ್ಟು ಬಿದ್ದಿತು.

ಗೋಡಂಬಿ ಹುರಿದ ತುಪ್ಪದಲ್ಲಿ ಎರಡು ಚಮಚ ಗೋಧಿಹುಡಿಯನ್ನು ಘಮಘಮಿಸುವಂತೆ ಹುರಿದು ಹಾಕುವಲ್ಲಿಗೆ ಹಲ್ವದ ಸಾಂದ್ರತೆ ಇನ್ನಷ್ಟು ಗಾಢವಾಗಿ ಬೆರಟಿ ಹಲ್ವಾ, ನಮ್ಮ ನವರಾತ್ರಿಯ ಸಿಹಿತಿನಿಸು ಆಗಿಹೋಯಿತು.


          

Sunday, 17 September 2017

ಕಾಲಿಫ್ಲವರ್ ಪತ್ರೊಡೆ
" ಅತ್ತೇ,  ರಾತ್ರಿಯೂಟಕ್ಕೆ ಪರೋಟಾ... "

" ಮಾಡ್ತೀಯಾ...  ಗೋಧಿಹಿಟ್ಟು ಇಲ್ಲಿದೆ,  ಬಟಾಟೆ ಅಲ್ಲಿದೆ... "  ಸಾಮಗ್ರಿಗಳನ್ನು ತೋರಿಸಿಕೊಟ್ಟು ನಾನು ಫೇಸ್ ಬುಕ್ಕು ಬಿಡಿಸಿದೆ.


ನನಗಂತೂ ಪರೋಟಾ ಬಗ್ಗೆ ಏನೂ ತಿಳಿಯದು,   ಮೈತ್ರಿಯ ಪರೋಟಾ ತಯಾರಿಯನ್ನೂ ಗಮನಿಸುತ್ತ ಇದ್ದಂತೆ ಬಿಸಿಬಿಸಿಯಾದ ಪರೋಟಾ ತಟ್ಟೆಗೆ ಬಂದು ಬಿತ್ತು,  ಪುದಿನಾ ಚಟ್ನಿಯೂ ಬಂದಿತು.   ಅದೂ ಅಂತಿಂಥ ಪುದಿನ ಅಲ್ಲ,   ಇಟಾಲಿಯನ್ ಮಿಂಟ್ ಎಂಬಂತಹ ಹೆಸರಿನ ಈ ಕುರುಚಲು ಗಿಡವನ್ನು ಮೈತ್ರಿಯೇ ನೆಟ್ಟು ಸಲಹಿ ಈಗ ಚಟ್ಣಿಯಾಗಿ ಬಂದಿದೆ.


" ಅತ್ತೇ,  ಈ ಕಾಲಿಫ್ಲವರ್ ಇಷ್ಟು ಉಳಿದಿದೆ,  ನಾಳೆಯ ಅಡುಗೆಗೆ ಸಾಕಾದೀತು. "  ಬಟಾಟೆಯ ಹೂರಣಕ್ಕೆ ತುರಿದ ಕಾಲಿಫ್ಲವರ್ ಕೂಡಾ ಬಿದ್ದಿತ್ತು.


ಬೇಗನೇ ಬೆಂಗಳೂರು ತಲಪಬೇಕಾಗಿದ್ದ ಒತ್ತಡದಿಂದ ಮುಂಜಾನೆ ನಾಲ್ಕಕ್ಕೇ ಎದ್ದು ಹೊರಟು ನಿಂತ ಮಕ್ಕಳು. 

  " ಕಾಲಿಫ್ಲವರ್ ಪತ್ರೊಡೆ ಮಾಡಿಟ್ಟಿದ್ದೇನೆ,   ಬೆಂಗಳೂರಿನಲ್ಲಿ ತಿನ್ನಿ... "


" ಬ್ಯಾಡಾ ಅಮ್ಮ,  ಕಾರಿನಲ್ಲಿ ಪತ್ರೊಡೆಗೆ ಜಾಗಾ ಇಲ್ಲ. "                             ಕಾಲಿಫ್ಲವರ್ ಪತ್ರೊಡೆಯಾ?  ಹೇಗೆ ಮಾಡಿದ್ದೂ? 


ಕೇಳಿಯೇ ಕೇಳ್ತೀರಾ,  ನಾನೂ ವಿವರವಾಗಿ ಹೇಳದಿದ್ದರೆ ಹೇಗೆ?


ಹಿತ್ತಲ ಕಡೆ ತೋಟಕ್ಕಿಳಿದಾಗ ಪುಟ್ಟಪುಟ್ಟ ಕೆಸುವಿನೆಲೆಗಳ ಸ್ವಾಗತ ದೊರೆಯಿತು.   ಮಳೆಗಾಲದ ಆರಂಭ ಆಗುತ್ತಾ ಇದೆ...  ಇನ್ನೂ ಹತ್ತು ದಿನ ಹೋದರೆ ಸಾಕಷ್ಟು ಎಲೆ ಕೀಳಬಹುದು.   ಈಗ ಹತ್ತಿಪ್ಪತ್ತು ಎಳಸು ಕೆಸುವಿನೆಲೆಗಳು ಸಿಕ್ಕವು.   ಬಾಳೆ ಎಲೆ ಮನೆಯೊಳಗೆ ಇದೆ,  ಕೊಯ್ಯಬೇಕಾಗಿಲ್ಲ.   ಆದರೆ ಇಷ್ಟು ಸ್ವಲ್ಪ ಎಲೆಗಳ ಪತ್ರೊಡೆ ಮಾಡಲೆಂತು ಎಂದು ಚಿಂತೆಗಿಟ್ಟುಕೊಂಡಿತು.


ಕೆಸುವಿನೆಲೆಗಳೊಂದಿಗೆ ಒಳ ಬಂದಾಗ ತರಕಾರಿ ಬುಟ್ಟಿಯಲ್ಲಿದ್ದ ಕಾಲಿಫ್ಲವರ್ ಮಿಸುಕಾಡಿತು.   ಹೌದಲ್ಲವೇ,  ಕಾಲಿಫ್ಲವರ್ ಹೇಗೂ ಸೊಪ್ಪು ತರಕಾರಿ,  ಕೆಸುವಿನೊಂದಿಗೆ ಹೊಂದಿಕೆಯಾದೀತು,   ಹುಳಿಯೂ ಜಾಸ್ತಿ ಬೇಕಾಗದು,  ನಾಲ್ಕು ಅಂಬಟೆಮಿಡಿ ಹಿಟ್ಟು ರುಬ್ಬುವಾಗ ಹಾಕಿದರೆ ಸಾಕು.   


ಮುಂದಿನ ಸಿದ್ಧತೆ  ಏನೇನು?


ಕಾಲಿಫ್ಲವರ್ ತುರಿಯುವುದು

ಕೆಸುವಿನೆಲೆ ಚಿಕ್ಕದಾಗಿ ಕತ್ತರಿಸುವುದು

2 ಪಾವು ಬೆಳ್ತಿಗೆ (ಇಡ್ಲಿ ಅಕ್ಕಿ ) ತೊಳೆದಿರಿಸುವುದು

ಒಂದು ಕಡಿ ತೆಂಗಿನಕಾಯಿ ತುರಿಯುವುದು


 ಸೊಸೆಗೆ ಖಾರ ಆಗದು,  ಹಿತ್ತಲ ಗಿಡದಿಂದ ನಾಲ್ಕು ಬಜ್ಜಿ ಮೆಣಸು ಕೊಯ್ದು ತರುವುದು

2 ಚಮಚ ಕೊತ್ತಂಬರಿ

ಒಂದು ಚಮಚ ಜೀರಿಗೆ

ಕಡ್ಲೇ ಕಾಳಿನಷ್ಟು ಇಂಗು

3 ಅಂಬಟೆಮಿಡಿಗಳು

ರುಚಿಗೆ ಉಪ್ಪು

ಸಿಹಿಗೆ ಬೆಲ್ಲ 


ಕಾಯಿತುರಿ ಹಾಗೂ ಮಸಾಲಾ ಸಾಮಗ್ರಿಗಳನ್ನು ಮೊದಲು ಅರೆಯಿರಿ,   ತೊಳೆದ ಅಕ್ಕಿಯನ್ನೂ ಹಾಕಿ ಇನ್ನೊಂದಾವರ್ತಿ ಅರೆದು,  ತರಿತರಿಯಾಗಿ ಅರೆದಿರಾ,  ಸಾಕು.


ಈ ಹಿಟ್ಟಿಗೆ ಕೆಸುವಿನೆಲೆ ಹಾಗೂ ತುರಿದ ಕಾಲಿಫ್ಲವರನ್ನೂ ಬೆರೆಸಿ,

ಬಾಡಿಸಿರುವ ಬಾಳೆ ಎಲೆಯೊಳಗಿಟ್ಟು,

ಅಚ್ಚುಕಟ್ಟಾಗಿ ಮಡಚಿ,

ಅಟ್ಟಿನಳಗೆ ( ಇಡ್ಲಿಪಾತ್ರೆ ) ಒಳಗಿಟ್ಟು,

ಉಗಿಯ ಶಾಖದಲ್ಲಿ ಅರ್ಧ ಗಂಟೆ ಬೆಂದಾಗ ಪತ್ರೊಡೆ ಆಗಿ ಹೋಯಿತು.


ಬಿಸಿಬಿಸಿಯಾದ ಪತ್ರೊಡೆ,  ಹಾಗೇನೇ ತುಪ್ಪ ಸವರಿ ತಿನ್ನಲು ರುಚಿ. 


Wednesday, 13 September 2017

ಮಸಾಲಾ ಅವಲಕ್ಕಿ
           ತೆಂಗಿನಕಾಯಿ ತುರಿದದ್ದು ಹೆಚ್ಚಾಗಿದೆ,  ಈ ಮಿಕ್ಕಿದ ಕಾಯಿತುರಿಯನ್ನು ನಾಳೆಯ ಅವಲಕ್ಕಿ ಮಸಾಲೆಗಾಗಿ ಈಗಲೇ ಸಿದ್ಧಪಡಿಸಿಟ್ಟರೆ ಹೇಗೆ?


ಐಡಿಯಾ ಚೆನ್ನಾಗಿದೆ,  ಕೆಲವೊಮ್ಮೆ ಬೆಳಗ್ಗೆ ಏಳುತ್ತಲೂ ವಿದ್ಯುತ್ ಇರುವುದೂ ಇಲ್ಲ.   ನಾನ್ ಸ್ಟಿಕ್ ಬಾಣಲೆಯಲ್ಲಿ ಮೂರು ಒಣಮೆಣಸು,   ಎರಡು ಚಮಚ ಕೊತ್ತಂಬ್ರಿ,  ಒಂದು ಚಮಚ ಜೀರಿಗೆ ಹುರಿದು ತೆಂಗಿನ ತುರಿಯನ್ನು ಹಾಕಿ ಬಾಡಿಸಿದ್ದೂ ಆಯಿತು.


ಆರಿದ ನಂತರ ಮಿಕ್ಸಿಯಲ್ಲಿ ತಿರುಗಿಸಿ ಪುಡಿ ಮಾಡಿದ್ದೂ ಆಯ್ತು.  ಮಸಾಲೆ ಪುಡಿಯನ್ನು ಭದ್ರವಾಗಿ ತೆಗೆದಿರಿಸಿ,  ಹಿಂದಿನಂತೆ ಈಗ ತೆಂಗಿನಕಾಯಿ ಖರ್ಚು ಆಗುವುದೇ ಇಲ್ಲ,  ಎಷ್ಟೇ ಚಿಕ್ಕ ಕಾಯಿ ಸುಲಿದರೂ ಉಳಿಕೆಯಾಗುವ ಕಾಯಿತುರಿಗೆ ಇನ್ನು ಇದೇ ಮಾದರಿಯ ಗತಿಗಾಣಿಸಬೇಕೆಂದು ನಿರ್ಧಾರ ಮಾಡಿದ್ದೂ ಆಯಿತು.


ಮಸಾಲಾ ಅವಲಕ್ಕಿ ಮಾಡಿದ್ದು ಹೇಗೆ?


ನಮ್ಮ ಅಗತ್ಯಕ್ಕೆ ಬೇಕಾಗಿರುವುದು ಮೂರು ಯಾ ನಾಲ್ಕು ಹಿಡಿ ಅವಲಕ್ಕಿ.  ( ತೆಳ್ಳಗಿನ ಪೇಪರ್ ಅವಲಕ್ಕಿ )

ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಇಟ್ಟು,  

10 - 12 ನೆಲಕಡಲೆ ಬೀಜ, 

ಸಾಸಿವೆ,  ಒಂದು ಒಣಮೆಣಸನ್ನು ನಾಲ್ಕು ಚೂರು ಮಾಡಿ ಹಾಕಿ ಹುರಿದು,  

ಕೊನೆಗೆ ಕರಿಬೇವಿನೆಸಳು ಹಾಕಿ ಸ್ಟವ್ ನಂದಿಸಿ.


ಮಾಡಿಟ್ಟ ಮಸಾಲೆ ಹೊರ ಬಂತು.   ರುಚಿಗೆ ತಕ್ಕಷ್ಟು ಉಪ್ಪು,  ಸಿಹಿಗೆ ಸಕ್ಕರೆ ಕೂಡಿಕೊಂಡು ಒಗ್ಗರಣೆಯ ಬಾಣಲೆಗೆ ಎಲ್ಲವನ್ನೂ ಹಾಕಿ ಬೆರೆಸಿ,  ಅವಲಕ್ಕಿಯನ್ನೂ ಹಾಕಿ ಬೆರೆಸಿದಾಗ ಮಸಾಲಾ ಅವಲಕ್ಕಿ ಸಿದ್ಧ.   ಗರಿಗರಿಯಾದ ಈ ಅವಲಕ್ಕಿ ನಾಲ್ಕಾರು ದಿನ ಇಟ್ಟರೂ ಕೆಡದು.   ಸಂಜೆಯ ಚಹಾ ಸಮಯದಲ್ಲಿ ಸ್ನೇಹಿತರು ಬಂದರೇ,  ಚಹಾ - ಅವಲಕ್ಕಿಯ ಸತ್ಕಾರ ನೀಡಿ.   ಬೇಕರಿಯ ಹಾಳುಮೂಳು ತಿನಿಸುಗಳಿಗಿಂತ ಇದೇ ಉತ್ತಮ ಎಂದು ತಿಳಿಯಿರಿ.
Sunday, 10 September 2017

ಬುಟ್ಟಿ ತುಂಬ ಬದನೆ
ಬುಟ್ಟಿ ತುಂಬ ಬದನೆ ಇದೆ.   ಬದನೆಯ ಖಾದ್ಯಗಳಲ್ಲಿ ಪಲ್ಯ ಹುಳಿ ಗೊಜ್ಜು ಬಜ್ಜಿ ಎಂದು ಪಟ್ಟಿ ಮಾಡಿದಷ್ಟೂ ಮುಗಿಯದು.   ಭೋಜನಕೂಟಗಳಲ್ಲಿ ಹುಳಿ ಎಂಬ ವ್ಯಂಜನವನ್ನು ಬಡಿಸುತ್ತಾರಲ್ಲ,  ಅದೂ ಬದನೆಕಾಯಿಗಳದ್ದು,  ಇದರ ತಯಾರಿ ಬಹು ಸುಲಭ ಹಾಗೂ ಸರಳ,  ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಿಟ್ಟು   " ಅಡುಗೆ ಆಯ್ತು "  ಅನ್ನಬಹುದು.


ಹೇಗೂ ಬೆಂಗಳೂರಿನಿಂದ ಮಕ್ಕಳು  " ಆ ಅಡುಗೆ ಹೇಗಮ್ಮ... ಈ ಅಡುಗೆ ಹೇಗಮ್ಮ? "  ಎಂದು ವಿಚಾರಿಸುತ್ತಿರುತ್ತಾರೆ,  ನಾನೂ ಹೇಳಿಕೊಡುವುದು ಇದ್ದೇ ಇದೆ.   ಮನೆಯಿಂದ ದೂರ ಇರುವ ಉದ್ಯೋಗಸ್ಥ ಮಕ್ಕಳಿಗೆ ಈ ಅಡುಗೆ ಉಪಯೋಗವಾದೀತು.


ತೊಗರಿಬೇಳೆ ಧಾರಣೆ ತುಂಬ ಇಳಿದಿದೆ.   ತೊಗರಿಬೇಳೆಯನ್ನು ಅರ್ಧ ಲೋಟ ಅಳೆದು ತೊಳೆಯಿರಿ,  ಕುಕ್ಕರಿನಲ್ಲಿ ಬೇಯಲಿ.


ಎರಡು ಬದನೆಗಳನ್ನು ತೊಟ್ಟು ತೆಗೆದು,  ದೊಡ್ಡ ಗಾತ್ರದ ಹೋಳುಗಳನ್ನು ಮಾಡಿ ನೀರಿನಲ್ಲಿ ಹಾಕಿರಿಸಿ.   ಬದನೆ ಬಲಿತದ್ದಾಗಿದ್ದರೆ ಬೀಜಗಳು ಎದ್ದು ಕಾಣಿಸುತ್ತವೆ,  ಒಗರು ಹಾಗೂ ಕಹಿ ಇದ್ದೀತು.  ಹಾಗಾಗಿ ನೀರಿನಲ್ಲಿ ತೇಲುತ್ತಿರುವ ಬದನೆ ಹೋಳುಗಳಿಗೆ ಒಂದು ಚಿಟಿಕೆ ಸುಣ್ಣ  ( ವೀಳ್ಯದೆಲೆ ತಿನ್ನಲು ಬಳಸುವ ಸುಣ್ಣ ) ಹಾಕಬೇಕು ಹಾಗೂ ಸೌಟಿನಲ್ಲಿ ಕಲಕಿದಾಗ ಬದನೆಕಾಯಿ ಬೇಯಿಸಲು ಯೋಗ್ಯತೆ ಪಡೆದಿದೆ.   ಪೇಟೆಯಿಂದ ತಂದ ಬದನೆ ಬಾಡಿದ್ದರೂ ಇದೇ ವಿಧಾನ ಅನುಸರಿಸಿ.


ಕುಕ್ಕರಿನಲ್ಲಿ ಬೆಂದಿರುವ ತೊಗರಿಬೇಳೆಗೆ ಬದನೆ ಹೋಳುಗಳ ನೀರು ಬಸಿದು ಹಾಕಿ,  ಎರಡು ಅಥವಾ ಮೂರು ಹಸಿಮೆಣಸು ಸಿಗಿದು ಹಾಕಿ ಬೇಯಿಸಿ.    " ಕುಕ್ಕರ್ ಇನ್ನೇನು ವಿಸಿಲ್ ಹಾಕಲಿದೆ... " ಅನ್ನುವಾಗ ಸ್ಟವ್ ನಂದಿಸಿ.


ಹ್ಞಾ,  ಬದನೆಗೆ ಬೇಯುವಾಗಲೇ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.  ಹುಣಸೆಹಣ್ಣೇ ಆಗಬೇಕೆಂದಿಲ್ಲ,  ಬದನೆ ಬೇಯಿಸುವಾಗಲೇ ಎರಡು ಕಾಯಿ ಟೊಮ್ಯಾಟೋ ಚಿಕ್ಕದಾಗಿ ಹೆಚ್ಚಿ ಹಾಕಬಹುದಾಗಿದೆ.   ಸಿಹಿ ಬೇಕಿದ್ದವರು ಬೆಲ್ಲ ಹಾಕಿರಿ.


ಚಿಟಿಕೆ ಅರಸಿಣ,  ಕಡ್ಲೆಗಾತ್ರದ ಇಂಗು,  ಕರಿಬೇವಿನೆಸಳು ಕೂಡಿದ ಒಗ್ಗರಣೆ ಹಾಕುವಲ್ಲಿಗೆ ಬದನೇ ಹುಳಿಯ ಸಿಂಗಾರ ಆಯಿತು.


Sunday, 3 September 2017

ಉಪ್ಪುಸೊಳೆಯ ಸೋಂಟೆ

 
              


ಜಾಡಿಯಲ್ಲಿರುವ ಹಿಂದಿನ ವರ್ಷದ ಉಪ್ಪುಸೊಳೆಯನ್ನು ಪಲ್ಯ,  ಹುಳಿಬೆಂದಿ,  ಮೇಲಾರ ಇತ್ಯಾದಿಗಳನ್ನು ಮಾಡಿ ತಿಂದರೂ ಮುಗಿಯದಾಯಿತು.   ಅಷ್ಟಕ್ಕೂ ಜಾಡಿಯಲ್ಲಿ ತುಂಬಿಸಿದ ಸೊಳೆಗಳು ಕೇವಲ ಒಂದೇ ಹಲಸಿನಕಾಯಿಯದ್ದು!   ಉಂಡ್ಳಕಾಳು,  ಸೊಳೆರೊಟ್ಟಿಗಳನ್ನು ತಿನ್ನಲು ಮಕ್ಕಳ ಸೈನ್ಯ ಮನೆಯಲ್ಲಿದ್ದರಾಗುತ್ತಿತ್ತು.


ಸೋಂಟೆ ಮಾಡಿದರೆ ಹೇಗೆ?  ಈಗ ಜಿಟಿಜಿಟಿ ಮಳೆ ಬೇರೆ,  ಕುರುಕುರು ತಿನ್ನಲು ಸೋಂಟೆ ಉತ್ತಮ ಎಂದು ಅಭಿಪ್ರಾಯ ಮೂಡಿತು.   ಜಾಡಿಯಲ್ಲಿ ಬೆಚ್ಚಗೆ ಕೂತಿದ್ದ ಸೊಳೆಗಳು ಹೊರ ಬಂದಾಗ ತಣ್ಣಗೆ ನೀರಿನಲ್ಲಿ ಹಾಕಿಟ್ಟು ಜಾಡಿಯನ್ನು ತೊಳೆದಿರಿಸಲು ಚೆನ್ನಪ್ಪನ ಸುಪರ್ದಿಗೆ ಬಿಟ್ಟೂ ಆಯಿತು.


ನೀರಿನಿಂದ ಹೊರ ತೆಗೆದ ಸೊಳೆಗಳು ಉಪ್ಪು ಬಿಟ್ಕೊಂಡಿವೆ,   ಒಂದೇ ಗಾತ್ರದಲ್ಲಿ ಸಿಗಿದಿಡುವುದು.   ಶುದ್ಧವಾದ ಹತ್ತಿಯ ಬಟ್ಟೆ ಮೇಲೆ ಹರಡಿದರೆ ಉತ್ತಮ,  ಸೊಳೆಯ ನೀರಿನಂಶವನ್ನು ಬಟ್ಟೆ ಹೀರಿಕೊಂಡು ಕರಿಯುವ ಕೆಲಸ ಬೇಗನೆ ಆದೀತು.


ಬಾಣಲೆಯಲ್ಲಿ ಎಣ್ಣೆಯಿಟ್ಟು,  ಬಿಸಿಯೇರಿದಾಗ ಎಣ್ಣೆಯಲ್ಲಿ ಹಿಡಿಸುವಷ್ಟು ಸೊಳೆಗಳನ್ನು ಹಾಕಿ ಕರಿಯಿರಿ.   ಹೊಂಬಣ್ಣ ಬಂದಾಗ,  ಎಣ್ಣೆಯ ಸದ್ದು ನಿಂತಾಗ ತೆಗೆದು ರಂಧ್ರದ ತಟ್ಟೆಗೆ ಹಾಕಿ,  ಬಿಸಿಯಾರಿದ ನಂತರ ತಿನ್ನಿ,  ಹಾಗೂ ಡಬ್ಬದಲ್ಲಿ ತುಂಬಿಸಿಟ್ಟು ಆಗಾಗ ತಿನ್ನುತ್ತ ಮಳೆಗಾಲದ ಮಜಾ ಅನುಭವಿಸಿ.  ಹ್ಞಾ,  ರುಚಿಗೆ ಉಪ್ಪು ಹಾಕುವ ಕೆಲಸ ಇಲ್ಲಿಲ್ಲ,   ಬೇಕಿದ್ದರೆ ನಿಮ್ಮ ಆಯ್ಕೆಯ ಮಸಾಲಾ ಹುಡಿಗಳನ್ನು ಉದುರಿಸಿ.ಅಂತೂ ಇಂತೂ ಉಪ್ಪುಸೊಳೆ ಖಾಲಿ ಮಾಡಿದ್ದಾಯ್ತು.   ಈ ವರ್ಷ ನಾಲ್ಕು ಹಲಸಿನಕಾಯಿಗಳ ಉಪ್ಪುಸೊಳೆ ಹಾಕಿರಿಸಲಾಗಿದೆ! 
Saturday, 19 August 2017

ಹಲಸಿನ ಹಣ್ಣಿನ ಪಲ್ಯ" ನಾಗಬನಕ್ಕೆ ಹೋಗುವ ದಾರಿಯಲ್ಲಿ ಒಂದು ಹಲಸಿನ ಮರ ಉಂಟಲ್ಲ... "

" ಯಾವುದೂ?  ಮೂರು ನಾಲಕ್ಕು ಮರ ಉಂಟಲ್ಲ. "

" ಅದೇ..  ಅದರಲ್ಲಿ ಒಂದೇ ಹಲಸಿನಕಾಯಿ... "

" ಓ, ಅದಾ.. ಬೆಳೆದಿದ್ದರೆ ತರುತ್ತೇನೆ. "


ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಕೈಗೆಟುಕುವಂತೆ ಬೆಳೆದಿದ್ದ ಹಲಸಿನಕಾಯಿಯನ್ನು ಚೆನ್ನಪ್ಪ ನಿರಾಯಾಸವಾಗಿ ತಂದಿಟ್ಟ.


" ಇದು ಆ ಹಲಸಿನ ಮರದ ಮೊದಲ ಫಲ. "

" ಹಾಗಿದ್ರೆ ತುಳುವನೋ ಬಕ್ಕೆಯೋ ಅಂತ ನೋಡ್ಬೇಕಲ್ಲ. " ನಮ್ಮವರ ಚಿಂತನೆ.

" ಕಾಯಿಸೊಳೆ ದೋಸೆ ಮಾಡೋಣಾ ಅಂತ ಕೊಯ್ಯಲು ಹೇಳಿದ್ದು ನಾನು... "

" ದೋಸೆಯೇನೂ ಬೇಡ,  ಮೊದಲು ಹಣ್ಣಾಗಲಿ,  ಆಗ ತಿಳೀತದೆ ಅದರ ಜಾತಿಗುಣ... "

ಅದೂ ಸರಿಯೇ ಎಂದು ನಾನು ಸುಮ್ಮನಾಗಬೇಕಾಯಿತು.


ದಿನವೆರಡು ಕಳೆದಾಗ,  ಹಲಸು ಸುವಾಸನೆ ಬೀರತೊಡಗಿದಾಗ,  ಚೆನ್ನಪ್ಪನೂ ಬಾರದಿದ್ದಾಗ,  ಮನೆ ಯಜಮಾನರೇ ಹಲಸನ್ನು ಬಿಡಿಸಿ ಸೊಳೆಗಳನ್ನು ಆಯ್ದು ಕೊಟ್ಟರು.   " ಇನ್ನೇನು ಬೇಕಿದ್ರೂ ಮಾಡಿಕೋ... ಇದು ಬಕ್ಕೆ ಹಲಸು,  ತುಳುವ ಅಲ್ಲ. "


ಫುಟ್ ಬಾಲ್ ಚೆಂಡಿನ ಗಾತ್ರದ ಹಲಸು,  ಒಂದು ಪುಟ್ಟ ತಪಲೆ ತುಂಬಿತು.   ಸೊಳೆಗಳಿಂದ ಬೇಳೆ ಬೇರ್ಪಡಿಸುವಾಗ ಎಲ್ಲಿಂದ ಈ ಪರಿಮಳ ಹೊಮ್ಮುವುದೆಂದೇ ತಿಳಿಯದ ಹಾಗೆ ಮಧುರ ಸುವಾಸನೆ...

ಎರಡು ಬಾರಿ ಎದ್ದು ಗ್ಯಾಸ್ ಒಲೆಯಲ್ಲಿಟ್ಟಿದ್ದ ಬೆರಟಿಯ ಪರಿಮಳವೇ ಯಾ ಈ ಹಲಸಿನಹಣ್ಣೇ ಎಂದೂ ಮೂಸಿ ನೋಡಿದರೂ ತಿಳಿಯದಾಯಿತು.   ಅಂತೂ ಇದು ಪರಿಮಳದ ಹಲಸು.   ಹೌದಲ್ಲವೇ,  ಅಪ್ಪನಮನೆಯಲ್ಲಿ ಸಂಪಿಗೆ ಬಕ್ಕೆ ಎಂಬ ಹೆಸರಿನ ಹಲಸು ಇದೇ...  ನನ್ನ ಅಪ್ಪ ಪ್ರತಿ ವರ್ಷವೂ ಸಂಪಿಗೆ ಬಕ್ಕೆ ಹಲಸನ್ನು ಪೊಸಡಿಗುಂಪೆಯ ದಾರಿಯಾಗಿ ಮಹೀಂದ್ರಾ ಜೀಪಿನಲ್ಲಿ ತಂದು ಕೊಡ್ತಿದ್ರು.   ಇದು ಅದರ ಬೀಜದಿಂದಲೇ ಹುಟ್ಟಿದ ಹೊಸ ಫಲ ಎಂದು ತೀರ್ಮಾನಿಸಿ ಊರಿನ ಮನೆಯಲ್ಲಿರುವ ತಮ್ಮನಿಗೂ,  ಕುಂಬ್ಳೆಯಲ್ಲಿರುವ ತಂಗಿಗೂ ತಿಳಿಸಿ ವಾಟ್ಸಪ್ ಮುಖೇನ ಹಲಸಿನ ಹಣ್ಣಿನ ಚಿತ್ರಗಳನ್ನು ಕಳಿಸಿ ಸಂಭ್ರಮ ಪಟ್ಟಿದ್ದೂ ಆಯಿತು.


" ಹಣ್ಣಿನ ಬಣ್ಣ ಕಾಣುವಾಗ ಅದೇ ಹಣ್ಣು ಅನ್ನಿಸ್ತದೆ..."  ಹಳದಿ ವರ್ಣದ ಈ ಹಣ್ಣನ್ನು ನಾವು ಅರಸಿನ ಬಕ್ಕೆ ಅಂತಲೂ,  ಕೆಲಸದಾಳುಗಳು ಮಂಜಾಲ್ ಬಕ್ಕೆ ಎಂದೂ ಹೇಳುವ ರೂಢಿ.


ಕುಂಬ್ಳೆಯಲ್ಲಿರುವ ತಂಗಿಗೂ ತಿಳಿಯಿತು.   " ಅಕ್ಕ,  ಹಲಸಿನಕಾಯಿ ದೊಡ್ಡದೋ ಸಣ್ಣದೋ... "

" ದೊಡ್ಡ ಚೆಂಡು ಇರುತ್ತದಲ್ಲ,  ಅಷ್ಟೇ... "

" ಸಿಹಿಯೊಟ್ಟಿಗೆ ಹುಳಿ ರುಚಿಯೂ ಉಂಟಾ? "

" ಹ್ಞಾ, ಹೌದು.   ಸೊಳೆ ಉಂಟಲ್ಲ,   ಈ ಮಳೆಗೆ ಸ್ವಲ್ಪವೂ ನೀರು ಕುಡಿದ ಹಾಗಿಲ್ಲ... ಡ್ರೈ ಸೊಳೆ. "

" ಹೌದಾ... ಹಂಗಿದ್ರೆ ಅದು ಗ್ಯಾರಂಟಿ ಅರಸಿನ ಬಕ್ಕೆ.   ಕೆಲಸದಾಳುಗಳು ಈ ಹಣ್ಣಿನ ಪಲ್ಯ ಮಾಡಿ ಸಂಜೆಯ ಚಹಾದೊಂದಿಗೆ ತಿನ್ತಿದ್ರು. "

" ಹಣ್ಣನ್ನೇ? "

" ಹೌದು,  ನೀನೂ ಪಲ್ಯ ಮಾಡು,  ಬೇಯಲಿಕ್ಕೆ ನೀರು ಹಾಕಲೇ ಬೇಡ... "

" ಸರಿ,  ತಿಳಿಯಿತು. "


ಈಗ ಪಲ್ಯ ಮಾಡೋಣ.


ಹಲಸಿನ ಹಣ್ಣಿನ ಸೊಳೆಗಳನ್ನು ಪಲ್ಯಕ್ಕಾಗಿ ಹಚ್ಚಿಟ್ಟುಕೊಳ್ಳುವುದು.

ಇದನ್ನು ಬೇಯಿಸಲು ಕುಕ್ಕರ್ ಬೇಡ,   ನೇರವಾಗಿ ಬಾಣಲೆಯಲ್ಲೇ ಮಾಡಬಹುದಾಗಿದೆ.

4 ಚಮಚ ತೆಂಗಿನೆಣ್ಣೆಯಲ್ಲಿ ಒಗ್ಗರಣೆ ಸಾಹಿತ್ಯಗಳನ್ನು ಉದುರಿಸಿ.

ಸಾಸಿವೆ ಸಿಡಿದಾಗ ಚಿಟಿಕೆ ಅರಸಿಣ,  ಒಂದು ಚಮಚ ಮೆಣಸಿನ ಹುಡಿ,  ರುಚಿಗೆ ಉಪ್ಪು ಹಾಗೂ ಹಲಸಿನ ಹಣ್ಣನ್ನು ಹಾಕಿ.   ಮಂದ ಉರಿಯಲ್ಲಿ ಆಗಾಗ ಕೈಯಾಡಿಸುತ್ತ ಮುಚ್ಚಿ ಬೇಯಿಸಿದಾಗ...


ನಿಮಿಷಗಳಲ್ಲಿ ಹಲಸಿನಹಣ್ಣು ಬೆಂದಿದೆ.  ಕಾಯಿತುರಿ ಹಾಕಿ ಚೆನ್ನಾಗಿ ಮಗುಚಿ,  ಮುಚ್ಚಿಟ್ಟು ಉರಿ ನಂದಿಸುವುದು.   ಊಟದೊಂದಿಗೂ ಚಹಾಕೂಟದೊಂದಿಗೂ ಈ ಪಲ್ಯ ಬಲು ಚೆನ್ನ.


ಹಲಸಿನ ಹಣ್ಣಿನ ಬೋಳುಹುಳಿ


ಸ್ವಲ್ಪವೇ ಹಣ್ಣು ಮಿಕ್ಕಿದ್ದಾಗ ಈ ಮಾದರಿಯ ಸಾರು ನನ್ನ ಅಡುಗೆಮನೆಯಲ್ಲಿ ಎದ್ದು ಬಂದಿತು.


ನಾಲ್ಕೈದು ಹಲಸಿನ ಹಣ್ಣಿನ ಸೊಳೆಗಳು,  ಹದ ಗಾತ್ರದಲ್ಲಿ ತುಂಡುಗಳಾಯಿತು.

ಒಂದು ಕ್ಯಾಪ್ಸಿಕಂ ಇತ್ತು,  ಅದನ್ನೂ ಹೋಳು ಮಾಡಿದ್ದಾಯಿತು,  ಹಲಸಿನ ಹಣ್ಣಿನ ಜೊತೆಗೂಡಿತು.

ಬೇಯಲು ನೀರು,  ರುಚಿಗೆ ಉಪ್ಪು ಕೂಡಿ ಬೆಂದಿತು.

ಕರಿಬೇವು, ಇಂಗು ಒಗ್ಗರಣೆಯೊಂದಿಗೆ ಬೋಳುಹುಳಿ ಆದೆನೆಂದಿತು.


ರುಚಿಕರವೂ ಸುವಾಸನಾಭರಿತವೂ ಆದ ಈ ಬೋಳುಹುಳಿಗೆ ಬೆಲ್ಲವೂ ಬೇಡ,  ಹುಣಸೆಹುಳಿಯೂ ಬೇಡ,  ಅಗತ್ಯವೇ ಇಲ್ಲ.

Wednesday, 16 August 2017

ಬೇಳೆಚಕ್ಕೆ ಬೆಂದಿನೀರುಳ್ಳಿ ಸಾರು,  ಹರಿವೆ ಪಲ್ಯ ಊಟದ ಟೇಬಲ್ ಮೇಲೆ ಇಟ್ಟು ನಮ್ಮವರ ಆಗಮನಕ್ಕಾಗಿ ಕಾಯುತ್ತಾ ಫೇಸ್ ಬುಕ್ ಓದು ಮುಂದುವರಿದಿತ್ತು.


ಊಟಕ್ಕೆ ಕುಳಿತವರೇ  " ಹಾಗಿದ್ರೆ ತೋಟದಲ್ಲಿ ಹಲಸಿನ ಗುಜ್ಜೆ ಉಂಟೂಂತ ಗೊತ್ತಿಲ್ವಾ.. "

" ಗುಜ್ಜೆ ಎಷ್ಟು ಬೇಕಾದರೂ ಇರಲಿ,  ತಂದು ಕೊಟ್ಟರಾಗುತ್ತಿತ್ತು.. "

" ಚೆನ್ನಪ್ಪ ಇರೂವಾಗ ಹೇಳೂದಲ್ವ.. "

" ಅವನು ಬಾರದೇ ದಿನ ಎರಡಾಯ್ತು,  ನಾಳೆ ಹೇಗೂ ಭಾನುವಾರ,  ಬಂದ ಹಾಗೇ..  ನೀವೇ ಕೊಯ್ದು ತನ್ನಿ. "


ಎರಡು ಹಲಸಿನ ಗುಜ್ಜೆಗಳು ಬಂದುವು.   ಎಳೆಯ ಕಾಯಿ ಆದರೂ ಘನ ಗಾತ್ರದ ಗುಜ್ಜೆಯನ್ನು ಎರಡು ಹೋಳು ಮಾಡಲು ಪೂರ್ವ ಸಿದ್ಧತೆಯೂ ಇರಬೇಕು.  ಮಯಣ ಒಸರುವ ಈ ಫಲಕ್ಕೆ ಇನ್ನಿತರ ತರಕಾರಿಗಳಂತೆ ಅಡುಗೆಮನೆಯೊಳಗೆ  ಬರಲವಕಾಶವಿಲ್ಲ.  ಇದರ ಕಾರ್ಯಕ್ಷೇತ್ರವೇನಿದ್ದರೂ ಮನೆಯ ಹಿತ್ತಲಿನ ಅಂಗಳ.  ನಿರುಪಯುಕ್ತ ಗೋಣಿತಾಟು ಇಲ್ಲವೇ ಪ್ಲಾಸ್ಟಿಕ್ ಚೀಲಗಳನ್ನು ನೆಲದಲ್ಲಿ ಹಾಕಿಕೊಂಡಲ್ಲಿ ಅಂಗಳದ ಕಸಕಡ್ಡಿಗಳನ್ನು ನಿವಾರಿಸಿಕೊಳ್ಳಲು ಸಾಧ್ಯ .   ಹರಿತವಾದ ಆಯುಧದಿಂದ ಹೋಳು ಆಯ್ತು.   ಒಂದು ಹೋಳು ಇಂದಿನ ಪಲ್ಯಕ್ಕಿರಲಿ,  ಇನ್ನೊಂದು ತುಂಡು ನಾಳೆಗೆ ಗುಜ್ಜೆ ಬೆಂದಿ ಆಗಲಿದೆ.


ಹೋಳಾದ ಗುಜ್ಜೆಯಿಂದ ಮಯಣ ಸುರಿಯುತ್ತಿದೆಯಲ್ಲ!   ಮಯಣವನ್ನು ಬಿದಿರಿನ ಪುಟ್ಟ ಕೋಲಿನಲ್ಲಿ ಒರೆಸಿ ತೆಗೆಯುವುದು,   ಹರಿಯುವ ನೀರಿನಲ್ಲಿ ತೊಳೆದೂ ಮಯಣ ತೆಗೆಯಬಹುದಾಗಿದೆ.  ನಾವು ಹಳ್ಳಿಯ ನಿವಾಸಿಗಳು ಹಲಸಿನ ಮಯಣವನ್ನೂ ಸಂಗ್ರಹಿಸಿ ಇಡುವ ರೂಢಿ ಇಟ್ಟುಕೊಂಡಿದ್ದೇವೆ.   ಹೇಗೇ?  


ಮಯಣವನ್ನು ಕೋಲಿನಲ್ಲಿ ಒರೆಸಿ ತೆಗೆದಾಯ್ತಲ್ಲ,  ಅದನ್ನು ಕಸದ ತೊಟ್ಟಿಗೆ ಬಿಸಾಡುವುದಲ್ಲ,  ' ಹಲಸಿನ ಕಾಯಿ ಕಾಳಗ ' ವೆಂದು ಮೆಟ್ಟುಕತ್ತಿ ಬುಡದಲ್ಲಿ ಕುಳ್ಳಿರುವಾಗ ಅದೇ ಕೋಲಿನಿಂದ ಮಯಣ ತೆಗೆದು ಮಯಣದ ಕೋಲನ್ನು ಜಾಗ್ರತೆಯಿಂದ ತೆಗೆದಿರಿಸುವುದು.   ಇದರ ಉಪಯೋಗ ಏನು?


ತೂತು ಬಿದ್ದ ಹಿತ್ತಾಳೆಯ ಕೊಡ ಇತ್ಯಾದಿ ದಿನಬಳಕೆಯ ಪಾತ್ರೆಪರಡಿಗಳ ತೂತನ್ನು ಈ ಮಯಣ ಸಮರ್ಥವಾಗಿ ಮುಚ್ಚಿ ಬಿಡುತ್ತದೆ.   ಮಯಣದ ಮುದ್ದೆಯನ್ನು ಕಟ್ಟಿಗೆಯ ಒಲೆಯ ಬಿಸಿ ತಾಗುವಂತೆ ಇಟ್ಟಾಗ ಮಯಣ ಕರಗಿ ಜಿನುಗಲು ಪ್ರಾರಂಭವಾದಾಗ ತೂತಿನ ಜಾಗಕ್ಕೆ ಲೇಪಿಸಿದರಾಯಿತು,  ಬಹಳ ಸುಲಭವಾದ ಈ ಕಾಯಕವನ್ನು ನನ್ನ ಕೆಲಸಗಿತ್ತಿ ಮಾಡಿ ಕೊಡುತ್ತಿದ್ದಳು.    ಆದರೆ ಒಲೆಯಲ್ಲಿ ಇಡುವ ತಪಲೆಗಳನ್ನು ಈ ಥರ ರಿಪೇರಿ ಮಾಡಿಯೂ ಪ್ರಯೋಜನವಿಲ್ಲ,  ಬಿಸಿ ತಾಕಿದಾಗ ಮಯಣ ಕರಗುವುದಿದೆಯಲ್ಲ!   ಇವೆಲ್ಲ ಹಳೆಯ ನೆನಪುಗಳು,  ಈಗಿನ ಕಾಲಕ್ಕೆ ಹೇಳಿದ್ದಲ್ಲ ಬಿಡಿ.


  ಗುಜ್ಜೆಯ ನಿರುಪಯುಕ್ತ ಭಾಗ ಅಂದ್ರೆ ಸಿಪ್ಪೆ,  ಮಯಣ ಒಸರುವ ಗೂಂಜುಗಳನ್ನು ಕತ್ತರಿಸಿ ಗೊಬ್ಬರದ ಗುಂಡಿಗೆ ಎಸೆಯಿರಿ.   ಉಳಿದ ತುಂಡುಗಳನ್ನು ತರಕಾರಿಯಂತೆ ಚಿಕ್ಕದಾಗಿ ಹಚ್ಚಿಕೊಳ್ಳಿ.  ಹ್ಞಾ,  ಕೈಗಳಿಗೆ ತೆಂಗಿನೆಣ್ಣೆ ಸವರಿಕೊಂಡಿದ್ದೀರಾ ತಾನೇ?  ನೀರು ತುಬಿದ ತಪಲೆಯೊಳಗೆ ತುಂಬಿಸಿ ಮನೆಯೊಳಗೆ ನಡೆಯಿರಿ.   ಇಷ್ಟೂ ವಿಧಿವಿಧಾನಗಳನ್ನು ನಾವು ಮನೆಯ ಹೊರಾಂಗಣದಲ್ಲಿ ಮಾಡಿರುತ್ತೇವೆ ಎಂದು ನೆನಪಿರಲಿ.


ಒಲೆಯಲ್ಲಿ ಗುಜ್ಜೆ ಬೇಯುವುದು ನಿಧಾನಗತಿಯಲ್ಲಿ,   ಪ್ರೆಶರ್ ಕುಕ್ಕರ್ ಯೋಗ್ಯ.   ರುಚಿಗೆ ಉಪ್ಪು ಹಾಗೂ ಬೇಯಲು ಅವಶ್ಯವಿರುವ ನೀರು ಕೂಡಿಕೊಂಡು ಬೇಯಲಿ.  ಬೇಯುವಾಗ ಎರಡು ಚಮಚ ತೆಂಗಿನೆಣ್ಣೆ ಎರೆದಿರಾದರೆ ಕುಕ್ಕರಿನ ಒಳಭಾಗಕ್ಕೆ ಮಯಣದ ಅಂಟು ಹಿಡಿಯುವುದಿಲ್ಲ.   ಎರಡು ಸೀಟಿ ಹಾಕಿದಾಗ ಒಲೆಯಿಂದ ಇಳಿಸಿ.


ಬೆಂದಿದೆ,  ಬಾಣಲೆಯಲ್ಲಿ ಒಗ್ಗರಣೆಗಿಡಿ.  ಏನೇನು?

ತೆಂಗಿನೆಣ್ಣೆ,  ಸಾಸಿವೆ,  ಉದ್ದಿನಬೇಳೆ,  ಒಣಮೆಣಸು,  ಚಿಟಿಕೆ ಅರಸಿಣ,  ಕರಿಬೇವಿನೆಸಳು.


 ಬೆಂದಿರುವ ಗುಜ್ಜೆಯ ನೀರು ಬಸಿದು ಸಾಸಿವೆ ಸಿಡಿದಾಗ ಹಾಕುವುದು,  ಖಾರ ಇಷ್ಟಪಡುವವರು ಮೆಣಸಿನ ಹುಡಿಯನ್ನು ಹಾಕಿಕೊಳ್ಳಿ.   ನೀರಿನಂಶವೆಲ್ಲ ಬತ್ತುವಷ್ಟು ಹೊತ್ತು ಒಲೆಯ ಮೇಲಿರಲಿ.  ಕಾಯಿತುರಿಯ ಅಲಂಕರಣವನ್ನು ಗುಜ್ಜೆ ಬಯಸದು,  ಕಾಯಿತುರಿ ಇದ್ದರೆ ಹಾಕಲಡ್ಡಿಯಿಲ್ಲ.   ಸಂಬಾರ ಮಸಾಲೆಗಳಿಂದ ಕೂಡಿದ ತೆಂಗಿನಕಾಯಿ ಅರಪ್ಪು ಮಾಡಿಕೊಂಡು ರುಚಿಯಲ್ಲಿ ವೈವಿಧ್ಯತೆಯನ್ನು ತರಲೂ ಇಲ್ಲಿ ಸಾಕಷ್ಟು ಅವಕಾಶಗಳಿವೆ.   ಊಟದೊಂದಿಗೂ ಸಂಜೆಯ ಚಹಾದೊಂದಿಗೂ ಸೇವಿಸಲು ಗುಜ್ಜೆ ಪಲ್ಯ ಯೋಗ್ಯವಾಗಿದೆ.  ನಾರುಯುಕ್ತವಾದ ಗುಜ್ಜೆಪಲ್ಯ ಎಲ್ಲ ವಯೋಮಾನದವರಿಗೂ ಸೂಕ್ತ ಆಹಾರ.   ಹಸಿವಿನ ಬಾಧೆ ಗೋಚರಿಸದು,  ಪ್ರಾಯಸ್ಥರಿಗೆ ಮಲಬದ್ಧತೆಯ ಸಮಸ್ಯೆಯೂ ಇಲ್ಲವಾಗುವುದು.


ಗುಜ್ಜೆ ಮುದ್ದೆಹುಳಿ


ಹೋಳು ಮಾಡಿದ್ದಾಯಿತು,   ಚಿಕ್ಕ ಗಾತ್ರವೇನೂ ಬೇಡ,  ದೊಡ್ಡ ಹೋಳುಗಳು ಚೆನ್ನಾಗಿರುತ್ತವೆ.  ಉಪ್ಪು ಸಹಿತವಾಗಿ ಕುಕ್ಕರಿನಲ್ಲಿ ಬೇಯಿಸುವುದು.   ಹಲಸಿನ ಗುಜ್ಜೆಯ ಪದಾರ್ಥವು ತೊಗರಿಬೇಳೆ ಯಾ ಇನ್ನಿತರ ಬೇಳೆಗಳನ್ನು ಮತ್ತು ಮಸಾಲಾ ಸಾಮಗ್ರಿಗಳನ್ನು ಬಯಸದು,  ಅದೇ ಇದರ ಹೆಗ್ಗಳಿಕೆ.


ಹಾಗಿದ್ದರೆ ತೆಂಗಿನಕಾಯಿ ಅರಪ್ಪು ಹೇಗೆ?

ಅರ್ಧ ಕಡಿ ತೆಂಗಿನತುರಿ

ನಾಲ್ಕಾರು ಒಣಮೆಣಸು,  ಹುರಿಯಿರಿ.

ನೆಲ್ಲಿಕಾಯಿ ಗಾತ್ರದ ಹುಣಸೇ ಹಣ್ಣು

ತೆಂಗಿನತುರಿಯೊಂದಿಗೆ ಹುರಿದ ಒಣಮೆಣಸಿನಕಾಯಿಗಳನ್ನು ಅರೆಯಿರಿ.  ರುಚಿಕಟ್ಟಾಗಲು ಬೇಕಾದ ಹುಳಿ ಇದೆಯಲ್ಲ,  ಅರೆಯುವಾಗಲೇ ಹುಣಸೇ ಹಣ್ಣನ್ನು ಹಾಕಿಕೊಳ್ಳಬಹುದಾಗಿದೆ.   ಅರೆಯುವಾಗ ಸ್ವಲ್ಪ ನೀರು ಕೂಡಿಕೊಳ್ಳುವುದು ಉತ್ತಮ.   ಅರಪ್ಪು ಸಿದ್ಧವಾಯಿತು.   ಬೆಂದಂತಹ ಗುಜ್ಜೆಯ ಹೋಳುಗಳಿಗೆ ತೆಂಗಿನ ಅರಪ್ಪನ್ನು ಕೂಡಿ,  ಕುದಿಸುವುದು.  ರುಚಿಕರವಾಗಲು ಬೆಲ್ಲ ಕೂಡಾ ಹಾಕಬಹುದು.  ಜಜ್ಜಿದ ಬೆಳ್ಳುಳ್ಳಿ,  ಕರಿಬೇವು ಕೂಡಿದ ಒಗ್ಗರಣೆ ಬಿದ್ದೊಡನೆ ಗುಜ್ಜೆ ಮುದ್ದೆಹುಳಿ ಎಂಬ ಪದಾರ್ಥವು ತಯಾರಾಗಿದೆ.


ಇಂದು ಬೇಳೆಚಕ್ಕೆಯ ಬೆಂದಿ

ನಿನ್ನೆ ಗುಜ್ಜೆಯ ಮುದ್ದೆಹುಳಿ

ಮೊನ್ನೆ ಗುಜ್ಜೆಯ ಪಲ್ಯ

ಅಂತೂ ಇಂತೂ ದಿನವೂ

ಹಲಸಿನ ಭೋಜನ!


" ಅದೇನ್ರೀ ಬೇಳೆಚಕ್ಕ ಅಂದ್ರೆ? "


ನಮ್ಮೂರ ಪರಿಭಾಷೆಯಲ್ಲಿ ಚಕ್ಕ ಅಂದ್ರೆ ಹಲಸು ಎಂದರ್ಥ.  ವಿದೇಶೀಯರ ಆಗಮನವಾಗಿದ್ದು ನಮ್ಮ ಕರಾವಳಿಯ ಸಮುದ್ರಮಾರ್ಗದಲ್ಲಿ ಎಂಬುದು ಗೊತ್ತು ತಾನೇ,  ಇಲ್ಲಿನ ಜನರ ಬಾಯಲ್ಲಿ ನಲಿದಾಡುತ್ತಿದ್ದ  ' ಚಕ್ಕ ' ಪದವು ಅವರ ನಾಲಗೆಯಲ್ಲಿ ಜ್ಯಾಕ್ ಎಂದಾಗಿದೆ,  ಈಗಂತೂ ಜ್ಯಾಕ್ ಫ್ರುಟ್ ಸಾರ್ವತ್ರಿಕ ಪದವಾಗಿ ಬಿಟ್ಟಿದೆ!


ಇರಲಿ,  ಹಲಸಿನ ಬೇಳೆಗಳು ಪುಟ್ಟದಾಗಿ ಮೂಡಿದಂತಹ ಗುಜ್ಜೆಯು ಬೇಳೆಚಕ್ಕೆ ಯಾ ಬೇಳೆಚಕ್ಕ ಎಂದು ಹೆಸರಿಸಿಕೊಂಡಿದೆ ಹಾಗೂ ಸಾಂಬಾರು, ಗಸಿ, ಹುಳಿ,  ಪಲ್ಯ ಅಥವಾ ಇನ್ಯಾವುದೇ ಮಾದರಿಯ ಅಡುಗೆಗೂ ಸೈ ಎನ್ನಿಸಿಕೊಂಡಿದೆ.


ತೋಟದಲ್ಲಿ ಹಲಸಿನಕಾಯಿಗಳು ಇರುವಾಗ  " ಇವತ್ತೇನು ಬೆಂದಿ ಮಾಡಲೀ.. " ಎಂದು ಪರದಾಡುವ ಪ್ರಶ್ನೆಯೇ ಇಲ್ಲ.   " ಹಲಸಿನಕಾಯಿ ಉಂಟಲ್ಲ. "  ಎಂಬ ಉತ್ತರದೊಂದಿಗೆ ಹಲಸಿನ ಗುಜ್ಜೆ ಬಂದೇ ಬರುತ್ತದೆ.   ಒಂದೇ ಒಂದು ಗುಜ್ಜೆ ನಾಲ್ಕು ದಿನಗಳ ಅಡುಗೆಗೆ ಸಾಕು,  ಇನ್ನಿತರ ತರಕಾರಿಗಳಂತೆ ಶೀತಲಪೆಟ್ಟಿಗೆ ಯಾ ಫ್ರಿಜ್ ಇದಕ್ಕೆ ಬೇಕಾಗುವುದಿಲ್ಲ.  ಈ ದಿನ ಬೇಳೆಚಕ್ಕೆಯಾದಂತಹ ಹಲಸು ಬಂದಿತು.  ಹೇಗೂ ಬೇಳೆ ಮೂಡಿರುವಂತಹುದು,  ತೊಗರಿಬೇಳೆ ಬೇಯಿಸಬೇಕಾದ ಪ್ರಶ್ನೆಯೇ ಇಲ್ಲ.  ಹಲಸನ್ನು ಹೋಳು ಮಾಡಿಕೊಳ್ಳುವ ಕೌಶಲ್ಯವೊಂದು ತಿಳಿದಿದ್ದರೆ ಸಾಕು,  ನಿಮ್ಮಂತಹ ಜಾಣರು ಇನ್ನೊಬ್ಬರಿಲ್ಲ ಎಂದೇ ತಿಳಿಯಿರಿ.


ಈಗ ನಾವು ಈ ಮೊದಲೇ ತಿಳಿಸಿದಂತೆ ತಪಲೆ ತುಂಬ ಹೋಳು ಮಾಡಿಟ್ಕೊಳ್ಳೋಣ.   ಬೇಳೆಚಕ್ಕೆ ಹಲಸು ಬೇಗನೆ ಬೇಯುವಂತಹುದು,  ಹೋಳು ಮುಳುಗುವಷ್ಟು  ನೀರೆರೆದು,  ಉಪ್ಪು ಕೂಡಿಸಿ,  ಒಂದೆರಡು ಚಮಚ ತೆಂಗಿನೆಣ್ಣೆ ಎರೆದು ಬೇಯಿಸಿ.   ಅತಿಯಾಗಿ ಖಾರ ಇಷ್ಟಪಡುವವರು ಬೇಕಿದ್ದ ಹಾಗೆ ಮೆಣಸಿನಹುಡಿ ಹಾಗೂ ಚಿಟಿಕೆ ಅರಸಿಣವನ್ನು ತರಕಾರಿ ಬೇಯುವಾಗಲೇ ಹಾಕಿಕೊಳ್ಳತಕ್ಕದ್ದು. ಒಂದು ಕಡಿ ತೆಂಗಿನಕಾಯಿ ತುರಿಯಿರಿ.   ಮಸಾಲೆ ಏನೇನು?


ನಾಲ್ಕಾರು ಒಣಮೆಣಸು

ಎರಡು ಚಮಚ ಕೊತ್ತಂಬ್ರಿ

ಅರ್ಧ ಚಮಚ ಜೀರಿಗೆ

ಕಡ್ಲೆ ಗಾತ್ರದ ಇಂಗು

ಒಂದೆಸಳು ಕರಿಬೇವು


ತುಸು ಎಣ್ಣೆಪಸೆಯಲ್ಲಿ ಮೇಲಿನ ಸಾಮಗ್ರಿಗಳನ್ನು ಹುರಿಯಿರಿ,   ತೆಂಗಿನತುರಿಯೊಂದಿಗೆ ಅರೆಯಿರಿ.   ಅರೆಯುವಾಗ ದೊಡ್ಡ ನೆಲ್ಲಿಕಾಯಿ ಗಾತ್ರದ ಹುಣಸೆಹುಳಿಯನ್ನೂ ಕೂಡಿ ಅರೆಯಿರಿ.  ತೆಂಗಿನಕಾಯಿ ಅರಪ್ಪು ಸಿದ್ಧವಾಗಿದೆ.  ಬೆಂದಿರುವ ತರಕಾರಿಗೆ ಅರಪ್ಪು ಕೂಡಿ,  ಅಗತ್ಯದ ನೀರು,  ರುಚಿಯ ಉಪ್ಪು,  ಸಿಹಿಯ ಬೆಲ್ಲ ( ಬೇಕಿದ್ದರೆ ಮಾತ್ರ ) ಕೂಡಿಸಿ ಕುದಿಸಿರಿ.  ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ಬೇಳೆಚಕ್ಕೆ ಬೆಂದಿ ಊಟಕ್ಕೆ ಬಡಿಸಲು ತಯಾರಾಗಿದೆ.ಟಿಪ್ಪಣಿ:  ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತ ಬರಹ,  ಜೂನ್, 2017.  


Thursday, 3 August 2017

ಪಪ್ಪಾಯ ಪಾಯಸ

" ಪಪ್ಪಾಯ ಹಣ್ಣಾದರೂ ಚೆನ್ನಪ್ಪ ಯಾಕೆ ಕೊಯ್ದು ಇಡಲಿಲ್ಲ... " ಒಂದು ಕೋಲಿನಿಂದ ಹಣ್ಣಿಗೆ ಕುಟ್ಟಿದಾಗ ಪಪ್ಪಾಯ ಕೆಳಗೆ ಬಿತ್ತು.   ನೆಲಕ್ಕೆ ಬಿದ್ದ ಹಣ್ಣು ಅಪ್ಪಚ್ಚಿ ಆಯ್ತು.   ವಿಪರೀತ ಹಣ್ಣಾಗಿದ್ದುದನ್ನು ನಾನು ಕೊಯ್ಯಲೇ ಬಾರದಿತ್ತು,  ಹಕ್ಕಿಪಕ್ಕಿಗಳಾದರೂ ತಿನ್ನುತ್ತಿದ್ದುವು....


ಬಿದ್ದು ಮೆತ್ತಗಾದ ಹಣ್ಣನ್ನು ಅತಿ ಜಾಗ್ರತೆಯಿಂದ ಎತ್ತಿ ಮನೆಯೊಳಗೆ ತರಲಾಯಿತು.   ಬಟ್ಟಲಲ್ಲಿ ಇಟ್ಟು ಚೂರಿ ಚಮಚ ಹಿಡಿದು ಅಪರೇಷನ್ ಕ್ರಿಯೆ ನಡೆಸಲಾಗಿ ಬಟ್ಟಲು ತುಂಬ ಹಣ್ಣಿನ ರಸಭರಿತ ತಿರುಳು ತುಂಬಿತು.


ಮನೆ ತುಂಬ ಮಕ್ಕಳಿದ್ದಿದ್ರೆ ತಣ್ಣಗೆ ಹಾಲು ಬೆರೆಸಿ,  " ಮಿಲ್ಕ್ ಶೇಕ್ ಕುಡಿಯಿರಿ. "  ಅನ್ನಬಹುದಾಗಿತ್ತು!


"ಈಗೇನ್ಮಾಡ್ತೀರಾ? "


ತುಪ್ಪ ಇದೆ,  ಸಕ್ಕರೆ ಇದೆ,  ಸಿಹಿಸಿಹಿ ಪಪ್ಪಾಯ ಹಣ್ಣಿಗೆ ಹೆಚ್ಚು ಸಕ್ಕರೆಯೇನೂ ಬೇಡ.   ಒಂದು ಸೌಟು ಸಕ್ಕರೆ ಹಾಗೂ 2 ಚಮಚ ತುಪ್ಪದೊಂದಿಗೆ ಗೊಟಾಯಿಸಲ್ಪಟ್ಟು ಪಪ್ಪಾಯ ಹಲ್ವಾ ಎಂದು ನಾಮಕರಣ ನೀಡಲಾಯಿತು.


ಈ ಪಪ್ಪಾಯ ಹಲ್ವಾ ನಮ್ಮ ಇಬ್ಬರ ಪಾಳಯದಲ್ಲಿ ಮುಗಿಯುವ ಲಕ್ಷಣ ಕಾಣಿಸಲಿಲ್ಲ.   ಈಗೇನೋ ಚೆನ್ನಾಗಿದೆ,  ಹೀಗೇ ನಾಲ್ಕಾರು ದಿನ ಕಳೆದರೆ ಹಾಳಾಗುವುದು ಖಚಿತ ಎಂದು ತೀರ್ಮಾನಕ್ಕೆ ಬರಲಾಗಿ...


" ಪಾಯಸ ಮಾಡಿದರೆ ಹೇಗೆ? "


ನಿತ್ಯಕಟ್ಟಳೆಯ ಅಡುಗೆಗಾಗಿ ತೆಂಗಿನಕಾಯಿ ತುರಿಯುತ್ತಿದ್ದಂತೆ ಸಾಂಬಾರು ಪಲ್ಯಗಳಿಗಾಗಿ ಕಾಯಿತುರಿ ತೆಗೆದಿಟ್ಟು ಉಳಿದ ಕಾಯಿತುರಿಯೆಲ್ಲವನ್ನೂ ಅರೆದು ದಪ್ಪ ಕಾಯಿಹಾಲು,  ನೀರು ಕಾಯಿಹಾಲುಗಳನ್ನು ಬೇರೆ ಬೇರೆಯಾಗಿ ತೆಗೆದಿರಿಸುವುದು.


3 ಚಮಚ ಅಕ್ಕಿಹಿಟ್ಟನ್ನು ನೀರುಕಾಯಿಹಾಲು ಎರೆದು ಕುದಿಸುವುದು,  ಹಿಟ್ಟು ಕುದಿಯುವಾಗ ದಪ್ಪವಾಗಿ ಬಂದಂತೆ 3 ಸೌಟು ಪಪ್ಪಾಯ ಹಲ್ವ ಹಾಕಿಕೊಳ್ಳಿ.

ಸಿಹಿಗೆ ಸಕ್ಕರೆಯ ಅಗತ್ಯ ನೋಡಿಕೊಂಡು ಒಂದು ಸೌಟು ಯಾ ಒಂದೂವರೆ ಸೌಟು ಸಕ್ಕರೆ ಹಾಕಬೇಕಾದೀತು.

ಪುನಃ ಕುದಿಸಿರಿ,  ತಳ ಹತ್ತದಂತೆ ಸೌಟಾಡಿಸುತ್ತಿರಬೇಕು.

ದಪ್ಪ ಕಾಯಿಹಾಲು ಎರೆದು ಒಂದು ಕುದಿ ಬಂದಾಗ ಇಳಿಸಿ.

ಏಲಕ್ಕಿಪುಡಿ,  ದ್ರಾಕ್ಷಿ,  ಗೋಡಂಬಿ ಹಾಕಿದಾಗ ಇನ್ನೂ ಸ್ವಾದಿಷ್ಟ ಪಾಯಸ ನಮ್ಮದಾಯಿತು.


ನಮ್ಮೆಜಮಾನ್ರಂತೂ ಈ ಪಾಯಸದೂಟಕ್ಕೆ ಮಾರು ಹೋದರು,   " ಬಪ್ಪಂಗಾಯೀದು ಅಂತ ತಿಳಿಯುವುದೇ ಇಲ್ಲ! " ಅಂದಿದ್ದಂತೂ ಹೌದು.


" ಹೌದೂ,  ನಮ್ಮ ಜನ ಈ ಬಪ್ಪಂಗಾಯಿ ಪಾಯಸವನ್ನು ಔತಣಕೂಟಗಳಲ್ಲಿ ಮಾಡಿದ್ದನ್ನು ನಾನು ಕಂಡಿಲ್ಲ...  ಯಾಕೆ ಮಾಡಬಾರದು? " ನಮ್ಮವರ ಘನಪ್ರಶ್ನೆ.


" ಮಡಿಹುಡಿಯೆಂದು ಹಾರಾಟ, ಹೋರಾಟಗಳಲ್ಲಿ ತೊಡಗುವ ನಮ್ಮ ಜನ ಬಪ್ಪಂಗಾಯಿ, ಬಸಳೆ,  ನೀರುಳ್ಳಿ ಬೆಳ್ಳುಳ್ಳಿ ಇವುಗಳನ್ನು ಬಳಸಿ ಭೂರಿಭೋಜನಕೂಟದ ನಳಪಾಕ ವ್ಯವಸ್ಥೆ ಮಾಡುವ ಹಾಗಿಲ್ಲ. "  ವಿವರಿಸಿ ಹೇಳಲಿಕ್ಕೆ ನನ್ನಿಂದಾಗದ ಮಾತು ಎಂದು ಸುಮ್ಮನಿರಬೇಕಾಯಿತು.


ರೈಸ್ ಫುಡ್ಡಿಂಗ್ ಮಾದರಿಯ ಈ ಪಾಯಸವು ಎಳೆಯ ಮಕ್ಕಳಿಗೂ,  ವೃದ್ಧರಿಗೂ ಹಿತವಾಗುವಂತದ್ದಾಗಿದೆ.  ದ್ರಾಕ್ಷಿ ಗೋಡಂಬಿಗಳನ್ನು ಯದ್ವಾತದ್ವಾ ಹಾಕದಿದ್ದರೇ ಉತ್ತಮ.  ಮಕ್ಕಳಿಗೆ ಪಪ್ಪಾಯ ಹಣ್ಣು ತಿನ್ನಿಸಬೇಕೆಂದು ಆರೋಗ್ಯ ತಜ್ಞರು ಹೇಳುತ್ತಲೇ ಇರುತ್ತಾರೆ,  ಮುದ್ದುಮಗುವಿಗೂ ಪಪ್ಪಾಯ ಪಾಯಸವನ್ನು ಚಮಚಾದಲ್ಲಿ ತಿನ್ನಿಸಬಹುದು.


ಸತ್ವಭರಿತ ಹಣ್ಣು ಎಂದರೆ ಪಪ್ಪಾಯ,  ಇದರಲ್ಲಿ ವಿಟಮಿನ್ ಸಿ ಹಾಗೂ ಎ ಅನ್ನಾಂಗಗಳೂ,  ಖನಿಜಾಂಶಗಳು ಅಧಿಕವಾಗಿವೆ.  ನಾರುಯುಕ್ತವೂ ಆಗಿರುವ ಬಪ್ಪಂಗಾಯಿ ಹಣ್ಣನ್ನು ಕಡೆಗಣಿಸದಿರಿ.

Friday, 21 July 2017

ಸೊಳೆ ಮೇಲಾರ


                
ಭೋಜನಕೂಟದ ಕೊನೆಯ ವ್ಯಂಜನವಾದ ಮಜ್ಜಿಗೆಹುಳಿ ಬಂದಿತು.   ಮಜ್ಜಿಗೆಹುಳಿಗೆ ತರಕಾರಿಯಾಗಿ ಸುವರ್ಣಗೆಡ್ಡೆ ಯಾ ಮುಂಡಿಗೆಡ್ಡೆಯನ್ನು ಬಳಸುವ ವಾಡಿಕೆ,   ಯಾವುದೋ ಗೆಡ್ಡೆ ತರಕಾರಿಯಿರಬೇಕು ಅಂದ್ಕೊಂಡು ಬಾಯಿಗಿಟ್ಟಾಗ ಬಟಾಟೆಯೇನೋ ಅನ್ನಿಸಿತು.   " ಇದೇನು ಬಟಾಟೆ ಮೇಲಾರವೇ? "

" ಅಲ್ಲ,  ಸೊಳೇದು... "

 ಹಲಸಿನಸೊಳೆಯಿಂದ ಮಜ್ಜಿಗೆಹುಳಿಯ ಕಲ್ಪನೆ ಕೂಡಾ ಮಾಡಿರಲಿಲ್ಲ ಕಣ್ರೀ...   ಇದೂ ಒಂದು ಹೊಸರುಚಿಯೇ ಸರಿ,   ಹಲಸುಪ್ರಿಯರಿಗೆ ಇಷ್ಟವಾಗುವಂತಾದ್ದು.


ಹಲಸು ಪಲ್ಯ,  ಹಲಸಿನಹಣ್ಣಿನ ಪಾಯಸಗಳು ಭೋಜನಕೂಟಗಳಲ್ಲಿ ವಾಡಿಕೆಯ ಸವಿರುಚಿಗಳು.   ಮಜ್ಜಿಗೆಹುಳಿಯನ್ನೂ ಮಾಡಿ ಬಡಿಸಿದವರನ್ನು ನಾನು ಕಂಡಿದ್ದಿಲ್ಲ.   ತೋಟದಲ್ಲಿ ಕೇಳುವವರಿಲ್ಲದೆ ವ್ಯರ್ಥವಾಗಿ ಬಿದ್ದು ಹೋಗಬೇಕಾಗಿದ್ದ ಹಲಸನ್ನು ಸದುಪಯೋಗ ಪಡಿಸಿದ್ದನ್ನು ಮೆಚ್ಚಲೇಬೇಕು.


ಮನೆಗೆ ಹಿಂದುರಿಗಿದ ನಂತರ ನಾನೂ ಸೊಳೆ ಮೇಲಾರ ಮಾಡುವ ನಿರ್ಧಾರ ಮಾಡಿ ಆಯ್ತು.   ಆದರೆ ನಮ್ಮ ತೋಟದ ಹಲಸಿನಕಾಯಿಗಳು ಧಾರಾಕಾರ ವರ್ಷಧಾರೆಗೆ ಬಿದ್ದು ಕೊಳೆತು ಮುಗಿದಿವೆ,  ಹಿಂದಿನ ವರ್ಷದ ಉಪ್ಪುಸೊಳೆಯೇ ಇರುವಾಗ ಚಿಂತೆ ಯಾಕಾದರೂ ಮಾಡಬೇಕು ಅಲ್ಲವೇ?   ಉಪ್ಪುಸೊಳೆಯಿಂದಲೇ ಮಜ್ಜಿಗೆಹುಳಿ ಮಾಡೋಣ.


ಹೇಗೆ?

2 ಹಿಡಿ ಹಲಸಿನ ಸೊಳೆಗಳು.   ಉಪ್ಪು ಬಿಡಿಸಲು ನೀರಿನಲ್ಲಿ ಹಾಕಿಡುವುದು.

ನಂತರ ಸಮಗಾತ್ರದ ಹೋಳು ಮಾಡಿ ಇಡುವುದು.

ಅರ್ಧ ಕಡಿ ತೆಂಗಿನತುರಿಯನ್ನು ಒಂದು ಲೋಟ ಸಿಹಿ ಮಜ್ಜಿಗೆ ಎರೆದು ಸಾಧ್ಯವಾದಷ್ಟು ನುಣ್ಣಗೆ ಅರೆಯುವುದು.

ಬೇಕಿದ್ದರೆ ಒಂದು ಹಸಿಮೆಣಸು ಅರೆಯುವಾಗ ಹಾಕಬಹುದು.


ಕುಕ್ಕರಿನಲ್ಲಿ ಸೊಳೆಗಳನ್ನು ಬೇಯಿಸಿ,  ತೆಂಗಿನಕಾಯಿ ಅರಪ್ಪು ಕೂಡಿಸಿ,  ಬೇಕಿದ್ದರೆ ಚಿಕ್ಕ ತುಂಡು ಬೆಲ್ಲ ಕೂಡಿಸಿ ಕುದಿಸುವುದು.   ತೆಂಗಿನಕಾಯಿ ಹಾಗೂ ಮಜ್ಜಿಗೆಯ ಈ ಪದಾರ್ಥ ಕುದಿಯುವಾಗ ಹಾಲು ಉಕ್ಕಿ ಬಂದಂತೆ ಮೇಲೆದ್ದು ಬಂದರೆ ಮಜ್ಜಿಗೆಹುಳಿ ಸರಿಯಾಗಿದೆ ಎಂದು ತಿಳಿಯಿರಿ.   ಕರಿಬೇವಿನ ಒಗ್ಗರಣೆ ಕಡ್ಡಾಯ,   ರುಚಿಗೆ ಉಪ್ಪು ಹಾಕುವ ಅಗತ್ಯ ಇಲ್ಲ.   Wednesday, 12 July 2017

ಅಂಬಟೆಯ ಸವಿರುಚಿ
                                   ಅತ್ತೇ,  ಮುಂದಿನ ಆದಿತ್ಯವಾರ,  ನೆನಪಿದೆ ತಾನೇ... "  ಸುಬ್ರಹ್ಮಣ್ಯದಿಂದ ವೆಂಕಟೇಶ್ ಕರೆ ಬಂದಿತು.


ಸೋದರಳಿಯ  " ಬನ್ನೀ... "  ಅನ್ನುತ್ತಿರುವಾಗ ಹೊರಡದಿದ್ದರೆ ಹೇಗೆ?   ಭಾನುವಾರ ಮುಂಜಾನೆ ಹಲಸಿನಹಣ್ಣಿನ ಕೊಟ್ಟಿಗೆ ತಿಂದು ಸುಬ್ರಹ್ಮಣ್ಯಕ್ಕೆ ಹೊರಟೆವು.   ಈಗ ರಸ್ತೆ ಚೆನ್ನಾಗಿದೆಯಾದರೂ ಮುಳಿಗದ್ದೆಯಿಂದ ಸುಬ್ರಹ್ಮಣ್ಯಕ್ಕೆ ಸರಿಸುಮಾರು ಮೂರು ಗಂಟೆಯ ಪ್ರಯಾಣ.


ಜೊತೆಗೆ ಬಂದಿದ್ದ ಉಷಕ್ಕನ ಫ್ಯಾಮಿಲಿ ದೇವಸ್ಥಾನಕ್ಕೆ ಹೋಗ್ಬಿಟ್ಟೇ ಮನೆಗೆ ಹೋಗೋಣ ಅಂದರು.   ದೇಗುಲದರ್ಶನ ಮಾಡಿಕೊಂಡು ಮನೆ ತಲಪುವಾಗ ಗಂಟೆ ಹನ್ನೆರಡಾಗಿತ್ತು.


ನೆಂಟರಿಷ್ಟರು ಆಗಲೇ ಜಮಾಯಿಸಿದ್ದರು.   ಚಹಾ ಸ್ವೀಕರಿಸಿ,  ಗುರುತು ಪರಿಚಯದವರೊಡನೆ ಮಾತನಾಡಿ,   ವಾರಪತ್ರಿಕೆಯೊಂದರ ಪುಟ ಬಿಡಿಸಿ,  ಮನೆಯ ಸುತ್ತಮುತ್ತಲಿನ ಹೂಗಿಡಗಳ ಅಲಂಕರಣವನ್ನು ನೋಡುತ್ತ,  ರಂಬುಟಾನ್ ಹಣ್ಣಿನ ಮರದ ಹಣ್ಣುಗಳೇನಾದುವು ಎಂದು ವಿಚಾರಿಸಿದಾಗ,  "ಎಲ್ಲವೂ ಮಂಗಗಳ ಪಾಲಾಯ್ತು. " ಎಂದಳು ಮನೆಯೊಡತಿ ಸ್ವಪ್ನ.


ಊಟದ ವೇಳೆ,  ಭೋಜನಕೂಟವೆಂದರೆ ಕೇಳಬೇಕೇ,  ಬಾಳೆಲೆಯ ಮೇಲೆ ಖಾದ್ಯಗಳು ಬಂದಿಳಿದುವು.   ದಿನವೂ ನಾನೇ ಮಾಡಿದಂತಹ ಅಡುಗೆಯನ್ನು ತಿಂದು ಜಡ್ಡುಗಟ್ಟಿದಂತಹ ನಾಲಿಗೆಗೆ ಇಂತಹ ಭೋಜನಕೂಟಗಳು ಬಾಯಿ ಚಪಲವನ್ನೂ ಎದ್ದೇಳಿಸುವಂತಹವುಗಳು,  ಹೊಸರುಚಿಗಳನ್ನು ಸವಿಯುವ ಹಾಗೂ ಕಲಿಯುವ ಸೌಭಾಗ್ಯ.


" ಮೆಣಸ್ಕಾಯೀ... "  ಅನ್ನುತ್ತ ಪ್ರಸಾದ್ ಬಂದ,  ಕಣ್ಣು ಹಾಯಿಸಿದಾಗಲೇ ತಿಳಿಯಿತು,  ಅಂಬಟೆ ಮೆಣಸ್ಕಾಯಿ.  ಈಗ ಅಂಬಟೆಯ ಕಾಲ.


ನಿನ್ನೆ ತಾನೇ ಚೆನ್ನಪ್ಪ ಅಂದಿದ್ದ,   " ಅಕ್ಕ,  ಪೇಟೆಯ ಅಂಬಟೆ ಮಿಡಿ ಕೇಜೀಗೆ ಎಂಭತ್ತು ರುಪಾಯಿ... "

" ಹೌದ,  ನಾವೂ ಸ್ವಲ್ಪ ಅಂಬಟೆ ಮಿಡಿ ಕೊಯ್ದು ಉಪ್ಪಿನಲ್ಲಿ ಹಾಕಿಟ್ಟುಕೊಳ್ಳೋಣ. "


ಮೆಣಸ್ಕಾಯಿ ಉಣ್ಣುತ್ತ ಇದೇ ಮಾದರಿಯ ಮೆಣಸ್ಕಾಯಿ ಮನೆಗೆ ಹೋಗ್ಬಿಟ್ಟು ಮಾಡಬೇಕು ಎಂದೂ ಅಂದ್ಕೊಂಡಿದ್ದಾಯ್ತು.   ಅದೇ ವೇಳೆಗೆ ವೆಂಕಟೇಶ್ ಬಂದ,  " ನೋಡೂ,  ಈ ಅಂಬಟೆಯ ಮೆಣಸ್ಕಾಯಿ ಫಸ್ಟಾಗಿದೆ,  ಒಂದು ಫೋಟೋ ತೆಗೆದಿಟ್ಟಿರು...  ನಾನು ಬ್ಲಾಗಿನಲ್ಲಿ ಹಾಕ್ತೇನೆ. "


" ಸರಿ ಅತ್ತೇ,  ವಾಟ್ಸಾಪಿನಲ್ಲಿ ಕಳಿಸ್ತೇನೆ. "  ವೆಂಕಟೇಶನ ಐಫೋನ್ ಕೆಮರಾ ಅಡುಗೆಶಾಲೆಗೆ ಹೋಯಿತು.

ಊಟದ ತರುವಾಯ,  " ಅತ್ತೇ,  ಮೆಣಸ್ಕಾಯಿ  ಮಾಡುವ ವಿಧಾನ ಕೇಳಿದ್ರಾ... "

" ಅದನ್ನೇ ಕೇಳಬೇಕೀಗ,  ನಾವು ಎಷ್ಟೇ ಚೆನ್ನಾಗಿ ಮಸಾಲೆ ಹುರಿದ್ರೂ ಈ ಪಾಕ ಬರೂದಿಲ್ಲ. "


ಅಡುಗೆ ಗಣಪಣ್ಣ ಖುಷ್ ಖುಷಿಯಿಂದ ಹೇಳಿದ್ದು ಹೀಗೆ,


" ಉದ್ದಿನಬೇಳೆ ಜಾಸ್ತಿ ಹಾಕ್ಬೇಕು...  ತೆಂಗಿನಕಾಯಿ ತುಂಬ ಹಾಕಬಾರದು...  ಕೊತ್ತಂಬರಿ ಬೇಡ... ಜೀರಿಗೆ ಇರಲಿ...  ಎಳ್ಳು ಜಾಸ್ತಿ ಹಾಕಿ...  ಉಪ್ಪು ಹುಳಿ ಬೆಲ್ಲ ಸ್ಟ್ರಾಂಗ್ ಆಗಿರಬೇಕು... "  ಹೇಳುತ್ತ ಗಣಪಣ್ಣ ನನಗಾಗಿ ಜಾಡಿ ತುಂಬ ಮೆಣಸ್ಕಾಯಿ ತುಂಬಿಸಿಯೂ ಕೊಟ್ಟ!


" ಇಷ್ಟೂ ಮೆಣಸ್ಕಾಯಿ ಯಾಕೆ?  ಮನೆಯಲ್ಲಿ ನಾವಿಬ್ಬರೇ ಇರೂದಲ್ವ... "

" ಇರಲಿ,  ವಾರವಾದರೂ ಹಾಳಾಗುವುದಿಲ್ಲ. "


ಈಗ ಮಾಡೋಣ.


ಹತ್ತು ಹನ್ನೆರಡು ಅಂಬಟೆಗಳನ್ನು ಬೇಯಿಸಿ,  ಉಪ್ಪು ಹಾಗೂ ಬೆಲ್ಲ ಹಾಕಿರಿ.   ಬೆಲ್ಲವೂ ಕರಗಿ ಬೆಂದಂತಹ ಅಂಬಟೆಯೊಳಗೆ ಬೆಲ್ಲದ ಸಿಹಿ ಮಿಳಿತವಾಗಬೇಕು ಹಾಗೂ ಅಂಬಟೆಯ ಹುಳಿ ಬೆಲ್ಲದೊಂದಿಗೆ ಸೇರಬೇಕು.


ಮಸಾಲೆ ಏನೇನು?


7 - 8  ಒಣಮೆಣಸಿನಕಾಯಿಗಳು 

3 ಚಮಚ ಉದ್ದಿನಬೇಳೆ

ಒಂದು ಚಮಚ ಜೀರಿಗೆ

5 ಚಮಚ ಎಳ್ಳು 

ಹುರಿಯಿರಿ,  ಕೊನೆಯಲ್ಲಿ ಒಂದು ಹಿಡಿ ಕಾಯಿತುರಿ ಹಾಕಿ ಬಾಡಿಸಿಕೊಳ್ಳಿ.

ಅರೆಯಿರಿ,  ಗಂಧದಂತೆ ನಯವಾಗಿ ಬಂದಷ್ಟೂ ಚೆನ್ನ.

ಅರೆದ ಮಿಶ್ರಣವನ್ನು ಅಂಬಟೆಯ ರಸಪಾಕಕ್ಕೆ ಕೂಡಿಸಿ,  ಕುದಿಸಿರಿ.

ಸಾಂಪ್ರದಾಯಿಕ ಖಾದ್ಯವಾದ ಮೆಣಸ್ಕಾಯಿಗೆ ಕೊತ್ತಂಬರಿ ಸೊಪ್ಪಿನ ಅಲಂಕರಣವೇನೂ ಬೇಕಿಲ್ಲ,   ಕರಿಬೇವಿನ ಒಗ್ಗರಣೆ ನೀಡುವಲ್ಲಿಗೆ ಮೆಣಸ್ಕಾಯಿ ಆಯಿತೆಂದು ತಿಳಿಯಿರಿ.


ಅಂಬಟೆಯ ಪುಳಿಯೋಗರೆ


ಕುದಿಸಿ ಜಾಡಿಯಲ್ಲಿ ತುಂಬಿಸಿಟ್ಟಿದ್ದ ಅಂಬಟೆಯ ಮೆಣಸ್ಕಾಯಿ ದಿನ ಮೂರಾದರೂ ಮುಗಿಯದಿದ್ದಾಗ ಚಿಂತೆಗಿಟ್ಟುಕೊಂಡಿತು.  ಇಂದು ಸಂಜೆ ಹೊತ್ತಿಗೆ ಚಹಾ ಜೊತೆ ಅಂಬಟೆಯ ಪುಳಿಯೋಗರೆ ಮಾಡೋಣ.


ಹೇಗೆ?


ಮಧ್ಯಾಹ್ನದೂಟಕ್ಕೆ ಮಾಡಿದಂತಹ ಅನ್ನ 2 ಸೌಟು

ಹತ್ತಾರು ನೆಲಕಡಲೆ ಬೀಜಗಳು

2 ಕರಿಬೇವಿನೆಸಳು

ಅಡುಗೆಯ ಎಣ್ಣೆ ಯಾ ತುಪ್ಪ 2 ಚಮಚ ಹಾಗೂ ಒಗ್ಗರಣೆ ಸಾಹಿತ್ಯ


ಬಾಣಲೆಯಲ್ಲಿ ಎಣ್ಣೆ ಇಟ್ಟು ನೆಲಕಡಲೆ ಹುರಿಯಿರಿ ಹಾಗೂ ಇನ್ನಿತರ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಸಾಸಿವೆ ಸಿಡಿದಾಗ ಕರಿಬೇವು ಬೀಳಲಿ.   ತೆಗೆದಿಟ್ಟ ಅನ್ನ ಹಾಗೂ ಅಂಬಟೆಯ ಮೆಣಸ್ಕಾಯಿ ರಸ ಎರೆದು ಚೆನ್ನಾಗಿ ಮಿಶ್ರಗೊಳಿಸಿ,   ಒಂದರೆಗಳಿಗೆ ಮುಚ್ಚಿ ಇಟ್ಟು ಸ್ಟವ್ ನಂದಿಸಿ.


ಸಂಜೆಯ ಚಹಾದೊಂದಿಗೆ ಪುಳಿಯೋಗರೆ ತಟ್ಟೆಗೆ ಹಾಕಿಕೊಂಡು ತಿನ್ನಿರಿ.   ಮೂಲತಃ ಪುಳಿಯೋಗರೆ ಹಾಗೂ ಮೆಣಸ್ಕಾಯಿ ಮಸಾಲೆಗಳು ಒಂದೇ ಆಗಿರುವುದರಿಂದ ಅಂಬಟೆಯ ಈ ರಸಪಾಕವನ್ನು ಜಾಡಿಯಲ್ಲಿ ತುಂಬಿಸಿಟ್ಟು ಹದಿನೈದು ದಿನ ಉಪಯೋಗಿಸುವುದಕ್ಕೂ ಅಡ್ಡಿಯಿಲ್ಲ ಎಂದೂ ತಿಳಿದಿರಲಿ.