Pages

Ads 468x60px

Saturday, 26 April 2014

ಮೊಳಕೆ ಕಾಳು, ಏನಾಯ್ತು ಹೇಳು....


ಪ್ರೊಟೀನ್,  ಫೈಬರ್ ಹಾಗೂ ಬಿ ಕಾಂಪ್ಲೆಕ್ಸ್ ವಿಟಮಿನ್ ಸಮೃದ್ಧವಾಗಿರುವ ಬೇಳೆಕಾಳುಗಳನ್ನು ಮೊಳಕೆ ಬರಿಸಿ ತಿನ್ನುವುದು ಬಹಳ ಉತ್ತಮವೆಂದು ಆಹಾರ ತಜ್ಞರ ಹಾಗೂ ವೈದ್ಯರ ನಿರ್ಣಯ.   ಮೊಳಕೆಕಾಳುಗಳನ್ನು ಹಾಗೇನೇ ಎಷ್ಟು ತಿನ್ನಬಹುದು ?   ಒಂದ್ ಹತ್ತು ಕಾಳು ತಿಂದು  " ಸಾಕು,  ಇನ್ನು ನೀನೇ ತಿನ್ನು "  ಅನ್ನುವವರೇ ಎಲ್ಲರೂ.

ಮೊಳಕೆಕಾಳುಗಳ ಉಪ್ಕರಿ ಮಾಡಿಟ್ಟು ನೋಡಿ,   ತಟ್ಟೆ ಎಲ್ಲ ಖಾಲಿ,   " ಇನ್ನೂ ಸ್ವಲ್ಪ ಇದ್ರೆ ಹಾಕು "  ಎಂಬ ಕೇಳಿಕೆಯೂ ಬಂದೀತು.   ಯಾವುದೇ ಧಾನ್ಯವನ್ನೂ ಮೊಳಕೆ ಬರಿಸಬಹುದು,  ಅದರಲ್ಲೂ ಪಚ್ಚೆಹಸರನ್ನು ಮೊಳಕೆ ಬರಿಸಲು ಬಹಳ ಸುಲಭ.

2 ಕಪ್ ಪಚ್ಚೆಹಸರು,  ಮುಂಜಾನೆಯೇ ನೀರಿನಲ್ಲಿ ನೆನೆ ಹಾಕಿ.
ಸಂಜೆ ನೀರು ಬಸಿಯಿರಿ,  ಹತ್ತಿಯ ಬಟ್ಟೆಯಲ್ಲಿ ಗಂಟು ಕಟ್ಟಿ ನೇತಾಡಿಸಿ.
ಮಾರನೇ ದಿನ ಬೆಳಗ್ಗೆ ಮೊಳಕೆಕಾಳುಗಳು ಲಭ್ಯ.
ಊಟದ ಹೊತ್ತಿಗೆ ಕೋಸಂಬರಿ ಮಾಡಿಕೊಳ್ಳಿ.  ರುಚಿಗೆ ಉಪ್ಪು,  ತುಸು ನಿಂಬೇರಸ ಎರೆಯುವಲ್ಲಿಗೆ ಕೋಸಂಬರಿ ಸಿದ್ಧ.

ಉಪ್ಕರಿ:
ತುಸು ನೀರು ಹಾಗೂ ರುಚಿಗೆ ಉಪ್ಪು ಹಾಕಿ ಬೇಯಿಸಿ,  ಹೆಚ್ಚು ಬೇಯಿಸುವ ಅಗತ್ಯವಿಲ್ಲ,   ಒಂದು ಕುದಿ ಬಂದರೆ ಸಾಕು.  ಹೆಚ್ಚು ಬೆಂದಿದ್ದು ಮಕ್ಕಳಿಗೆ ಕೊಡುವಂತಹ ಮಣ್ಣಿಯಂತಾದೀತು.
ಒಗ್ಗರಣೆ ಮಾಡಿಕೊಳ್ಳಿ,   ನೀರುಳ್ಳಿ,  ಹಸಿಮೆಣಸು,  ಕರಿಬೇವು ಇರಲಿ,  ಸಾಸಿವೆ ಚಟಪಟ ಅನ್ನುವಾಗ ಎಲ್ಲವನ್ನೂ ಹಾಕಿ ಬಾಡಿಸಿ,  ಚಿಟಿಕೆ ಅರಸಿನ ಹುಡಿ ಇರಲಿ.
ಈಗ ಬೆಂದ ಪಚ್ಚೆಹಸರನ್ನು ಹಾಕಿ.  ನೀರಿನಂಶ ಆರಲು ಸ್ವಲ್ಪ ಹೊತ್ತು ಚಿಕ್ಕ ಉರಿಯಲ್ಲಿರಲಿ.   ಕೊನೆಗೆ ಒಂದು ಹಿಡಿ ಕಾಯಿತುರಿ ಹಾಕಿ ಕೈಯಾಡಿಸಿ.   ತಟ್ಟೆಯಲ್ಲಿರಿಸಿ ಮಕ್ಕಳನ್ನು ಸಂಜೆಯ ತಿಂಡಿಗೆ ಕರೆಯಿರಿ.

<><><><><><>


ಸೆಕೆ ಸಮಯ,  ಪಚ್ಚೆಹಸರು ತಂಪು ಅಂದ್ಬಿಟ್ಟು ಅಕ್ಕಿಯೊಂದಿಗೆ ಅರೆದು ಮುಂಜಾನೆಗೊಂದು ತಿಂಡಿ ಮಾಡಿಕೊಳ್ಳೋಣಾಂತ ನೀರಿನಲ್ಲಿ ನೆನೆ ಹಾಕಿಟ್ಟು ಆಯ್ತು.  ಅಕ್ಕಿ ಹಾಗೂ ಪಚ್ಚೆಹಸರು ಒಂದೇ ತಪಲೆಯಲ್ಲಿ ನೆನೆ ನೆನೆದು ಹಿಗ್ಗಿದುವು.   ಅದೇನಾಯಿತೋ,  ರಾತ್ರಿ ನಾಲ್ಕು ಹನಿ ಮಳೆ ಬಿದ್ದಿತು,  ವಿದ್ಯುತ್ ಹೋಯಿತು.  

" ಬೆಳಗಾದಾಗ ಅರೆದರಾಯಿತು, "    ಇಲ್ಲ,  ರಾತ್ರಿ ಹೋದ ಕರೆಂಟು ಮಟಮಟ ಮದ್ಯಾಹ್ನ ಬಂತು.

ಅಂತೂ ಕರೆಂಟು ಬಂದಿತು,   ಸಂಜೆಯಾದಾಗ ನೆನೆದ ಕಾಳು ಅಕ್ಕಿಯೊಂದಿಗೆ ಬೆರೆತು ಚೆನ್ನಾಗಿ ಮೊಳಕೆ ಬಂದಿತ್ತು.   ಛೇ, ಛೇ... ಇದನ್ನೇನು ಮಾಡಲೀ ಎಂದು ಚಿಂತಿಸುತ್ತಾ ಪುನಃ ನೀರೆರೆದು ತೊಳೆದು  ಅರೆಯುವ ಯಂತ್ರದೊಳಗೆ ತಳ್ಳಿಯಾಯ್ತು.   

ಈ ಹಿಟ್ಟು ನಾಳೆ ಹುಳಿ ಬಂದೀತು,   ತೆಳ್ಳವು ಎರೆಯಲು ಸಾಧ್ಯವಿಲ್ಲ ಅಂದುಕೊಳ್ಳುತ್ತಾ ಒಂದು ಕಪ್ ರಾಗಿ ಹುಡಿಯನ್ನೂ ಸೇರಿಸಿ ಹಿಟ್ಟು ತೆಗೆದು,  ಉಪ್ಪು ಕೂಡಿಸಿ ಮುಚ್ಚಿಟ್ಟಾಯ್ತು.   ರಾಗಿಯನ್ನೂ ಸೇರಿಸಿದ್ದರಲ್ಲಿ ಎಲ್ಲ ಧಾನ್ಯಗಳೂ ಸೇರಿ ಒಟ್ಟಿಗೆ 3 ಕಪ್ ಆಯ್ತು,   ನೋಡಿ,  ದೋಸೆ ಹೇಗಾಯ್ತು...

ಮೂಂಗ್ ದಾಲ್ ಯಾ ಮೂಂಙ್ ದಾಲ್ ಎಂಬ ಈ ಧಾನ್ಯ ಭಾರತ ಮೂಲದ್ದು ಎಂಬುದು ನಮಗೆ ತಿಳಿದಿರಲಿ.   ಶತಶತಮಾನಗಳಿಂದ ಈ ಧಾನ್ಯವನ್ನು ನಮ್ಮ ಕೃಷಿಕರು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.    ಇಂಗ್ಲೀಷಿನ ಮೂಂಗ್ ಎಂಬ ಶಬ್ದವು ದಕ್ಷಿಣ ಭಾರತದ ಪ್ರಾಚೀನ ಭಾಷೆಯಾದ ತುಳುವಿನಿಂದ ಬಂದುದಾಗಿರಬೇಕು.   ದವಸಧಾನ್ಯಗಳ ಮೊಳಕೆಯನ್ನು ಮುಂಙೆ ಎಂದೇ ಹೇಳುವ ರೂಢಿ.  ದಕ್ಷಿಣ ಕನ್ನಡಿಗರು,  ಕೇರಳೀಯರು ಪಚ್ಚೆಹಸರನ್ನು ಜಾಸ್ತಿ ಉಪಯೋಗಿಸುತ್ತಾರೆ.   ಕೇರಳದಲ್ಲಿ ಶಾಲಾಮಕ್ಕಳಿಗೆ ಗಂಜಿಯೂಟದೊಂದಿಗೆ ಪಚ್ಚೆಹಸರನ್ನೂ ಬೇಯಿಸಿ ಕೊಡುತ್ತಾರೆ.   ನನ್ನ ಮಕ್ಕಳೂ ಶಾಲೆಗೆ ಹೋಗುತ್ತಿದ್ದಾಗ ಶಾಲೆಯ ಗಂಜಿಯೂಟವನ್ನು ತಪ್ಪದೇ ಉಂಡು ಮನೆಗೆ ಬರುತ್ತಿದ್ದರು.   ರಜಾದಿನಗಳಲ್ಲೂ   " ಶಾಲೆ ಗಂಜಿ ಮಾಡಮ್ಮಾ"  ಎಂಬ ಡಿಮ್ಯಾಂಡೂ ಇರ್ತಾ ಇತ್ತು.    ರೇಷನ್ ಶಾಪ್ ನಲ್ಲಿ ಮಾತ್ರ ಸಿಗುತ್ತಿದ್ದ ಬೆಳ್ಳಗಿನ ಕುಚ್ಚುಲಕ್ಕಿಯನ್ನು,  ಎರಡು ಬೆಳೆ ಗದ್ದೆ ಬೇಸಾಯ ಇದ್ದರೂ ತರುವಂತಾಗಿತ್ತು. 


ದೋಸೆ ಚೆನ್ನಾಗಿ ಬಂದಿತ್ತಲ್ಲ,  ಇನ್ನೊಮ್ಮೆ ಮಾಡೋಣ ಅಂದ್ಬಿಟ್ಟು ಅಕ್ಕಿ ಹಾಗೂ ಪಚ್ಚೆಹಸರನ್ನು ಬೆಳಗ್ಗೇನೇ ನೆನೆ ಹಾಕಿಟ್ಟು ಸಂಜೆ ಅರೆಯಬೇಕಾದರೆ ಇನ್ನೊಂದು ಐಡಿಯಾ ತಲೆಗೇರಿತು.

  " ಈ ಬಾರಿ ರಾಗಿ ಸೇರಿಸಲಿಕ್ಕಿಲ್ಲ "
" ಬೇರೇನು ಹಾಕ್ತೀರಾ ..."
" ಸ್ವಲ್ಪ ಉದ್ದು,  ಮೆಂತೆ ಸೇರ್ಸೋಣ "

ಕಾಲು ಕಪ್ ಉದ್ದು,  ಒಂದು ಚಮಚ ಮೆಂತೆ ನೀರೆರೆದು ಇಟ್ಟಾಯ್ತೇ,  ಅರ್ಧ ಗಂಟೆ ಬಿಟ್ಟು ಅರೆಯುವ ತಯಾರಿ ನಡೆಯಿತು.
ಬೆಳಗಿನಿಂದ ನೀರಿನಲ್ಲಿದ್ದ 2 ಕಪ್ ಬೆಳ್ತಿಗೆ ಅಕ್ಕಿ + 1 ಕಪ್ ಪಚ್ಚೆ ಹಸರನ್ನು ತೊಳೆದಿಟ್ಟಾಯ್ತು.   ಉದ್ದು ಮೆಂತೆಯೂ ನೀರಿನಿಂದ ಎದ್ದು ಮಿಕ್ಸೀಯೊಳಗೆ ಬಿದ್ದು... ಅರೆದು ಆಯಿತು.
ಎಲ್ಲ ಹಿಟ್ಟುಗಳನ್ನೂ ಒಟ್ಟುಗೂಡಿಸಿ,  ರುಚಿಗೆ ಉಪ್ಪು ಸೇರಿಸಿ,  ತಪಲೆಯನ್ನು ಮುಚ್ಚಿಟ್ಟು ಮಾರನೇ ದಿನ ಎರೆದ ದೋಸೆ,   ವಾಹ್..... ಉದ್ದಿನ ದೋಸೆಯಾ ನಿನ್ನ ಹೆಸರು ?Posted via DraftCraft app

Saturday, 19 April 2014

ಏನೆಂದುಕೊಂಡ್ರೀ, ಇದು ಬಾಳೇ ದಂಡು....


ಸಾಬೂನು ಹುಡಿ ಹಾಕಿ ನೆನೆಸಿಟ್ಟ ಬಟ್ಟೆಗಳನ್ನು ಒಗೆಯುವ ಯಂತ್ರದೊಳಗೆ ತಳ್ಳಿ,  ನೀರನ್ನು ಹರಿಯಬಿಟ್ಟು,  ಸಮಯದ ಹೊಂದಾಣಿಕೆ ಮಾಡಿಕೊಟ್ಟು ಸೀದಾ ಅಡುಗೆಮನೆಗೆ ಬಂದಾಗ ಅನ್ನಕ್ಕೆಂದು ಇಟ್ಟಿದ್ದ ನೀರು ಕುದಿಯುತ್ತಿದೆ.   ಕುಚ್ಚುಲಕ್ಕಿ ತೊಳೆದು ಕುದಿಯುವ ನೀರೊಳಗೆ ಅಕ್ಕಿ ಹಾಕಿ,  ಕುಕ್ಕರ್ ಮುಚ್ಚಿ,  ಇದಕ್ಕೂ ಟೈಮ್ ನೋಡಿಟ್ಟು,   ಇನ್ನು ತರಕಾರಿ ಹಚ್ಚೋಣಾಂತಿದ್ರೆ ಬಟಾಟೆ ಬಿಟ್ರೆ ಬೇರೇನೂ ಇಲ್ಲ.

ಬಟಾಟೆಯ ರಸಂ ಮಾಡಲು ಮನಸ್ಸಿಲ್ಲ,  ಈಗ ಸೆಕೆ ಬೇರೆ,   ತಂಪಾಗಿ ಒಂದು ಸಾರು,  ತಂಬುಳಿ ಮಾಡಿದ್ರೂ ಸಮ,  ಈ ಬಟಾಟೆ ಬೇಡ ಅಂದ್ಬಿಟ್ಟು ಪುನರ್ಪುಳಿ ಸಿಪ್ಪೆ ನೀರಿನಲ್ಲಿ ಹಾಕಿಟ್ಟು,  ತಂಬುಳಿಗೆ ಏನಾದ್ರೂ ಕಾಟಂಗೋಟಿ ಸೊಪ್ಪು ತೋಟದಿಂದ ತರಲು ಚಿಕ್ಕ ಕತ್ತಿಯೊಂದಿಗೆ ತೋಟಕ್ಕೆ ಇಳಿದಾಯ್ತು.   ತೋಟದಲ್ಲಿ ಅತ್ತ ಇತ್ತ ನೋಡುತ್ತಿದ್ದ ಹಾಗೆ ಬಾಳೆಗೊನೆ ಕಣ್ಣಿಗೆ ಬಿತ್ತು.   ಚೆನ್ನಾಗಿ ಬೆಳೆದಿವೆ ಕಾಯಿಗಳು,  ಒಂದು ವಾರದಲ್ಲಿ ಹಣ್ಣಾದೀತು.   ವಾಪಸ್ ಮನೆಗೆ ಬರೋಣವಾಯ್ತು.   ನಮ್ಮೆಜಮಾನ್ರು ಕಂಪ್ಯೂಟರ್ ಮುಂದೆ ಕುಳಿತು ಗಹನವಾದ ಚಿಂತನೆಯಲ್ಲಿದ್ದವರನ್ನು ಎಬ್ಬಿಸಿ ಬಾಳೆಗೊನೆಯ ವಿಚಾರ ಹೇಳಲಾಯಿತು.  " ಗೊನೆ ಕಡಿದು ತಂದರಷ್ಟೇ ಸಾಲದು,  ಬಾಳೆಯ ದಂಡನ್ನೂ ತನ್ನೀ "
" ದಂಡು ಯಾಕೇ ?"
" ತನ್ನೀ,  ಅಡುಗೆಗೆ ಬೇಕಾಗ್ತದೆ "

ಬಾಳೆದಂಡು ತೋಟದಿಂದ ಬರುವಷ್ಟರಲ್ಲಿ ರಸಂ ಮಾಡಬೇಕಾದರೆ ಅಗತ್ಯದ ಸಿದ್ಧತೆ ಮಾಡಿಕೊಳ್ಳಲಾಯಿತು.  
 ಒಂದಿಷ್ಟು ತೊಗರೀಬೇಳೆ ಕುಕ್ಕರ್ ಒಳಗಿರಿಸಲಾಗಿ ಬೆಂದೆನೆಂದು ಕೂಗಿಕೊಂಡಿತು.
ತೆಂಗಿನಕಡಿ ಇದೆಯಾ ಎಂದು ನೋಡಲಾಗಿ ಕಾಯಿತುರಿ ಸಿದ್ಧವಾಯಿತು.
4 ಒಣಮೆಣಸು,  2 ಚಮಚ ಕೊತ್ತಂಬ್ರಿ,  ಒಂದು ಚಮಚ ಕಡ್ಲೆಬೇಳೆ,   ಇಂಗು,  ಜೀರಿಗೆ  ಹುರಿಯಲಾಗಿ,  ಕಾಯಿತುರಿ ಸಹಿತವಾಗಿ ಮಿಕ್ಸೀ ಯಂತ್ರ ತಿರುಗಲಾಗಿ ಮಸಾಲೆ ಸಿದ್ಧವಾದೆನೆಂದಿತು.
ಇಷ್ಟೆಲ್ಲ ಆಗುವಾಗ ಬಾಳೆದಂಡು ಬಂದಿತು.
ಬರೋಬ್ಬರಿ 4 ಅಡಿ ಉದ್ದವಿದ್ದಿತು.
ಇರಲಿ, ಇರಲಿ.
 ದಿನಕ್ಕೊಂದು ಹೊಸರುಚಿಯ ಖಾದ್ಯ ಮಾಡಬೇಡವೇ....

ಬಾಳೆಯ ದಂಡು ಬಂದಿತಲ್ಲ,  ರಸಂ ಸಿದ್ಧತೆಯೂ ಆಗಿತ್ತಲ್ಲ,  ಈ ದಂಡಿನಿಂದ ಅವಶ್ಯವಿದ್ದಷ್ಟು ಉದ್ದದ ತುಂಡನ್ನು ಕತ್ತರಿಸಿ ತೆಗೆಯಲಾಯಿತು.   ಮೆಟ್ಟುಕತ್ತಿಯಲ್ಲಿ ಕುಳಿತು ತುಂಡರಿಸಿ ನೀರಿಗೆ ಹಾಕಿ ಹುಳಿಯೊಂದಿಗೆ,  ಹ್ಞಾ,  ಬೀಂಬುಳಿಗಳನ್ನೂ ಕಟ್ ಮಾಡಿ ಸೇರಿಸಿ,  ರುಚಿಗೆ ಬೇಕಾದ ಉಪ್ಪನ್ನೂ ತರಕಾರಿ ಬೇಯುವಾಗಲೇ ಹಾಕಲಾಗಿ,   ಒಗ್ಗರಣೆ ಕೊಡುವಲ್ಲಿಗೆ ದಂಡು ರಸಂ ರೆಡಿಯಾಯಿತು.

" ಬಾಳೆ ದಂಡು ಅಂದ್ರೇನು ?"

 ಗೊನೆ ಹಾಕಿದ ಬಾಳೆ,  ಬೆಳೆದ ಗೊನೆ ಕಡಿದ ನಂತರ ನಿರುಪಯುಕ್ತ.   ಇದನ್ನು ಹೆಚ್ಚಾಗಿ ಕೃಷಿಕರು ತುಂಡರಿಸಿ ಅಡಿಕೆ ಮರದ ಬುಡಕ್ಕೆ ಅಥವಾ ಬಾಳೆ ಬುಡಕ್ಕೆ ಹಾಕುತ್ತಾರೆ.   ನಾರುಯುಕ್ತವಾಗಿರುವ ಇದು ನೀರನ್ನೂ ಹೀರಿಕೊಂಡು ಅಡಿಕೆ ಮರದ ಬುಡಕ್ಕೆ ನೀರಿಂಗಿಸುವ ಕೆಲಸವನ್ನೂ ಮಾಡುತ್ತದೆ.   ಬಿಸಿಲಿನ ತಾಪದಿಂದ ಬಳಲುವ ಜಾನುವಾರುಗಳಿಗೂ ಇದನ್ನು ಪೂರಕ ಆಹಾರವಾಗಿ ತುಂಬ ಚಿಕ್ಕದಾಗಿ ಕತ್ತರಿಸಿ ಹಾಕುವ ವಾಡಿಕೆಯೂ ಇದೆ.   ಬಾಳೆಯ ಈ ಕಾಂಡದ ನಾರನ್ನು ಬಿಡಿಸಿ ನಾಲ್ಕು ದಿನ ಬಸಿಲಿಗೆ ಒಣಗಿಸಿದಿರೋ,  ಸೊಗಸಾದ ಬಾಳೇ ಹಗ್ಗ ತಯಾರಾಗಿ ಬಿಡುತ್ತದೆ.   ಈ ನಾಜೂಕಿನ ಬಾಳೆ ಬಳ್ಳಿಯಿಂದಲೇ ಮಲ್ಲಿಗೆಯ ಮಾಲೆ ಕಟ್ಟುವವರು ನಾವು.   ಹ್ಞಾಂ,  ಹಲಸಿನ ಹಪ್ಪಳ ಕಟ್ಟಿಡಲೂ ಇದೇ ಬಾಳೇ ಬಳ್ಳಿ ಅವಶ್ಯ.

ಅಡುಗೆಯಲ್ಲಿ ಬಳಸುವ ಬಾಳೆಯ ದಂಡು ಇದೆಯಲ್ಲ,   ಈ ಒಳತಿರುಳು ಸಿಗಬೇಕಾದರೆ ಕಾಂಡದ ಹೊರ ಆವರಣದ ನಾರುಗಳನ್ನು ಎಬ್ಬಿಸಿ ತೆಗೆಯಬೇಕಾಗುತ್ತದೆ.  ಟ್ಯೂಬ್ ಲೈಟ್ ಆಕಾರದಲ್ಲಿ ಹೊಳೆಯುವ ತಿರುಳನ್ನು ಹಲವು ದಿನ ಇಟ್ಟುಕೊಳ್ಳಬಹುದು. ಜೀರ್ಣಾಂಗ ವ್ಯೂಹದ ಅಂಗಗಳು ವ್ಯವಸ್ಥಿತವಾಗಿ ಕಾರ್ಯವೆಸಗುವಲ್ಲಿ ನಾರು ಪದಾರ್ಥಗಳು ಮುಖ್ಯ ಪಾತ್ರ ವಹಿಸುತ್ತವೆ.    ಕರುಳಿನಲ್ಲಿ ಇರಬಹುದಾದ ವಿಸರ್ಜಿತವಾಗಿರದ ತ್ಯಾಜ್ಯಗಳನ್ನು ಹೊರ ಹಾಕುವಲ್ಲಿ ಬಾಳೆದಂಡು ಉಪಯುಕ್ತ.   ಜ್ಯೂಸ್ ಮಾಡಿ ಸೇವಿಸುವುದಕ್ಕಿಂತ ನಾರುಸಹಿತವಾಗಿ ತಿನ್ನುವುದು ಬಹಳ ಒಳ್ಳೆಯದು.  ನಿಯಮಿತವಾದ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲುಗಳ ಬಾಧೆ ಹೋದೀತು.

ಬಾಳೆಹಣ್ಣಿನಂತೆ ಬಾಳೆದಂಡು ಕೂಡಾ ಪೊಟ್ಯಾಷಿಯಂ ಹಾಗೂ ವಿಟಮಿನ್ ಬಿ ಕಾಂಪ್ಲೆಕ್ಸ್ ಗಳಿಂದ ಸಮೃದ್ಧವಾಗಿದೆ.   ವಿಟಮಿನ್ ಬಿ ಕಾಂಪ್ಲೆಕ್ಸ್ ಶರೀರದ ಹಿಮೊಗ್ಲೊಬಿನ್ ಹಾಗೂ ಇನ್ಸುಲಿನ್ ಉತ್ಪಾದಕ ಶಕ್ತಿಯನ್ನು ಹೆಚ್ಚಿಸಿ,  ಸೋಂಕು ನಿರೋಧ ಶಕ್ತಿ ವರ್ಧನೆ.   ಪೊಟ್ಯಾಷಿಯಂ ಸ್ನಾಯುಗಳ ಬಲವರ್ಧನೆಗೆ, ರಕ್ತದೊತ್ತಡ ಸ್ಥಿರವಾಗಿರಿಸಲು ಸಹಕಾರಿ,  ಶರೀರದ ಜಲಾಂಶ ರಕ್ಷಕ.   ಬಾಳೆಯ ದಂಡಿನಲ್ಲಿ ಇಂತಹ ಸಂತುಲಿತ ಪೋಷಣೆ ಉಚಿತವಾಗಿ ಲಭ್ಯ.
ಹೌದಲ್ಲ,  ಈ ಬಾಳೆದಂಡಿನಿಂದ ಇನ್ನೂ ಏನೇನು ಮಾಡಬಹುದು ?

ಕೋಮಲವೂ ಮೃದುವೂ ಆಗಿರುವ ಈ ಒಳ ತಿರುಳನ್ನು ತುರಿದು ಅಥವಾ ಚಿಕ್ಕದಾಗಿ ಕತ್ತರಿಸಿ ಸಲಾಡ್,  ಗೊಜ್ಜು ಮಾಡಬಹುದು.  ಟೊಮ್ಯಾಟೋ,  ಶುಂಠಿ,  ಈರುಳ್ಳಿ ಕೂಡಾ ಸೇರಿಸಿದರಾದರೆ ಮನೆ ಮಂದಿಗೆ ಬಾಳೇ ದಂಡು ಇದೆಯೆಂದು ಗೊತ್ತೇ ಆಗಲಾರದು.   ಬೇಯಿಸಿ ಪಲ್ಯ ಮಾಡಿದರೂ ಚೆನ್ನಾಗಿರುತ್ತದೆ.

ಮುಂಜಾನೆಗೊಂದು ತಿಂಡಿ ಅಂತ ಹೊರಡ್ತೀವಲ್ಲ,  2 ಕಪ್ ಅಕ್ಕಿ ನುಣ್ಣಗೆ ಅರೆದು ತೆಳ್ಳವು ಮಾಡ್ತೀವಲ್ಲ,   ಒಂದು ಕಪ್ ಬಾಳೆದಂಡಿನ ಚೂರುಗಳನ್ನೂ ಸೇರಿಸಿ ಅರೆಯಿರಿ,  ಸೊಗಸಾದ ದೋಸೆ ಬಂದಿತು ನೋಡಿ.   ಇಡ್ಲಿ ಮಾಡುತ್ತೀರಾದರೆ ಒಂದು ಕಪ್ ಉದ್ದು + 2 ಕಪ್ ಅಕ್ಕಿ ಜೊತೆಗೆ ಅರ್ಧ ಕಪ್ ಬಾಳೆದಂಡಿನ ಚೂರುಗಳನ್ನು ಕೂಡಿಸಿ ಅರೆಯಿರಿ,  ಮಲ್ಲಿಗೆಯಷ್ಟು ಮೃದುವಾದ ಇಡ್ಲಿಗಳನ್ನು ಪಡೆಯಿರಿ.   ಮಾಡುತ್ತಾ ಮಾಡುತ್ತಾ ಹೊಸ ಹೊಸ ರೆಸಿಪಿಗಳನ್ನು ಕಂಡು ಹಿಡಿಯಿರಿ.   ಹಿತಮಿತವಾಗಿ ಬಳಸಿ ಆರೋಗ್ಯ ಉಳಿಸಿ,  ಒಳ್ಳೆಯದೆಂದು ಅತಿ ಸೇವನೆ ಮಾಡದಿರಿ.

Posted via DraftCraft app

Saturday, 12 April 2014

ಪಮೆಲೋ ಪರಿಮಳ !

" ತೋಟದಲ್ಲಿ ನೀರ ಕಣಿ ಪಕ್ಕ ಕಿತ್ತಳೆ, ಮುಸಂಬಿ ಗಿಡ ಇರೂದು ನೋಡಿದ್ದೀಯಾ " ಕೇಳಿದ್ರು ನಮ್ಮತ್ತಿಗೆ.

" ಹ್ಞೂಂ,  ಅದ್ರಲ್ಲಿ ಒಂದ್ ಗಿಡ ಸತ್ತಿದೆ,   ಯಾವ್ದೂಂತ ನಂಗೇನ್ಗೊತ್ತು?  ನೆಟ್ಟಿದ್ದು ನೀವಲ್ವೇ "

" ಅದನ್ನು ನಾನೇ ಬೀಜ ಹಾಕಿ ಸಸಿ ಮಾಡಿದ್ದು..."

" ಅಂದ್ರೆ ಒಂದಿಪ್ಪತ್ತು ವರ್ಷ ಆಯ್ತೂನ್ನಿ,  ಹಾಗೆಲ್ಲ ಬೀಜ ಬಿತ್ತಿ ಸಸಿ ಮಾಡೋ ಬದಲು ಕಸಿ ಗಿಡ ತರಿಸಿ ನೆಟ್ಟಿದ್ದರೆ ಈಗ ಹಣ್ಣು ಕೊಯ್ಬಹುದಾಗಿತ್ತು "

" ಏನೊ ಶಾಲೆಗೆ ಹೋಗೋ ಪ್ರಾಯದಲ್ಲಿ ಅಷ್ಟೆಲ್ಲಾ ವಿಚಾರ ಯಾರಿಗೆ ಗೊತ್ತಿರ್ತದೆ.... ಅಂದ್ಹಾಗೆ ಚಕೋತ ಕೂಡಾ ನೆಟ್ಬಿಟ್ಟಿದ್ದೇನೆ " ಅಂದ್ರು ಅತ್ತಿಗೆ.

" ಚಕೋತ ಅಂದ್ರೆ ಸಿಹಿ ಕಂಚಿ ಅಲ್ವಾ,   ಅದೂ ನಮ್ಮಪ್ಪನ ಮನೇಲೂ ಇದೆ,  ಭಾರೀ ಗಾತ್ರದ ಹಣ್ಣು,  ತುಂಬಾನೇ ಸಿಹಿ " ಅಂದೆ,   ಈ ಫಲವಿಹೀನ ಗಿಡಗಳ ಬಗ್ಗೆ ಅಷ್ಟೇನೂ ಆಸಕ್ತಿ ಆಗ ವಹಿಸಲಿಲ್ಲ.    ಇಬ್ಬರು ಮಕ್ಕಳಾದ ಮೇಲೆ ಈ ಗಿಡಗಳು ಯಾಕೆ ಹೀಗಿವೆ ಎಂಬ ಕಾಳಜಿ ತಾನಾಗಿಯೇ ಹುಟ್ಟಿತು.   

ಮಾವ ಹಿರಣ್ಯ ಗಣಪತಿ ಭಟ್ಟರು ಎಲ್ಲಾ ಕನ್ನಡ ಪತ್ರಿಕೆಗಳನ್ನು ತರಿಸುತ್ತಿದ್ದರು,  ಅಂಚೆ ಮೂಲಕವೂ ಕೆಲವು ಪತ್ರಿಕೆಗಳು....  ದೊಡ್ಡ ಗ್ರಂಥ ಭಂಡಾರವೂ ಇದ್ದಿತು.  ಅವೆಲ್ಲ ಈಗ ನಮ್ಮ ಊರಿನ ಹೆದ್ದಾರಿ ಶಾಲಾ ಮಿತ್ರಮಂಡಳಿಯ ಲೈಬ್ರರಿಯಲ್ಲಿವೆ.   ಅಂಚೆ ಮೂಲಕ ಬರುತ್ತಿದ್ದ ಅಡಿಕೆ ಪತ್ರಿಕೆ ಎಂಬ ಕೃಷಿ ಸಂಬಂಧಿತ ಮ್ಯಾಗಜೀನ್ ಒಳಗೆ ಒಂದು ಲೇಖನದಲ್ಲಿ   ನೆಟ್ಟು ಸಾಕಷ್ಟು ವರ್ಷಗಳಾದರೂ ಫಲ ಕೊಡದ ಸಸ್ಯಗಳ  ಕಾಂಡದ ಸಿಪ್ಪೆ ಎರಡಿಂಚಿನಷ್ಟು  ಅಗಲವಾಗಿ ಕೆತ್ತಿ ತೆಗೆಯಬೇಕು,  ಅದೂ ಸಪ್ಟಂಬರ -  ಒಕ್ಟೋಬರದಲ್ಲೇ ಆಗಬೇಕು ಎಂಬಂತಹ ಮಾಹಿತಿಯನ್ನು ಯಾರೋ ಬರೆದಿದ್ದರು.   ಗೌರತ್ತೆಯೂ ಈ ಅಭಿಪ್ರಾಯವನ್ನು ಅನುಮೋದಿಸಿದರು.   " ಮೊದಲೆಲ್ಲ ಏನು ಮಾಡ್ತಿದ್ರು ಗೊತ್ತಾ,  ಚಿಕ್ಕ ಮಕ್ಕಳ ಕೈಲಿ ಕತ್ತಿ ಕೊಟ್ಟು ಮರದ ಚಕ್ಕೆ ಏಳ್ಸೋದು... ಮರು ವರ್ಷಾನೇ ಮರ ತುಂಬಾ ಹಣ್ಣು ..."

" ನಮ್ದು ಹುಣಸೇ ಮರಕ್ಕೆ ಇದೇ ಪ್ರಯೋಗ ಮಾಡಿ ಮರ ಸತ್ಹೋಯ್ತು " ಅಂದರು ದೊಡ್ಡತ್ತಿಗೆ.

" ಹೌದೇ,  ಮರದ ಕಾಂಡಕ್ಕೆ ಹೆಚ್ಚು ಪೆಟ್ಟು ಬಿದ್ದಿತೇನೋ...  ಈಗ ಚೆನ್ನಪ್ಪನ ಹತ್ರ ಕೇಳಿ ನೋಡೋಣ "

ಚೆನ್ನಪ್ಪನ ಜೊತೆ ನಮ್ಮೆಜಮಾನ್ರೂ ಸೇರಿ ಚಕೋತಾ ಮರಕ್ಕೆ ಅಂಟಿದ್ದ ಗ್ರಹಚಾರ ಬಿಡಿಸಿದ್ದಾಯ್ತು.


ಎಪ್ರೀಲ್ - ಮೇ ತಿಂಗಳಲ್ಲಿ ಗೊಂಚಲು ಗೊಂಚಲಾಗಿ ಅರಳುವ ಚಕೋತಾ ಹೂಗಳು ಕಡು ಸುವಾಸನೆಯನ್ನೂ ಹೊಂದಿ ದುಂಬಿಗಳನ್ನು ಆಕರ್ಷಿಸುತ್ತವೆ.   ಹೂಗಳು ಸುಗಂಧ ದ್ರವ್ಯ ತಯಾರಿಕೆಯಲ್ಲಿಯೂ ಬಳಸಲ್ಪಡುತ್ತವೆ.   ಹಸಿರು ಬಣ್ಣದ ಕಾಯಿಗಳು ಬಲಿತು ಅರಸಿನ ವರ್ಣಕ್ಕೆ ತಿರುಗಲು ಸುಮಾರು ಏಳೆಂಟು ತಿಂಗಳು ಕಾಯಬೇಕು.   ದೀರ್ಘಕಾಲ ಬದುಕುವಂತಹ ಮರ Rutaceae ಕುಟುಂಬವಾಸಿ,  ಸಿಟ್ರಸ್ ಜಾತಿಯ ಹಣ್ಣುಗಳಲ್ಲೇ ಭಾರೀ ಗಾತ್ರದ ಚಕೋತಾ ವೈಜ್ಞಾನಿಕವಾಗಿ Citrus maxima  (Citrus grandis) ಎನಿಸಿಕೊಂಡಿದೆ.   ಈ ಮರಕ್ಕೆ ರೋಗಬಾಧೆಯೇನೂ ಇಲ್ಲ.  ನಾವು ಅಡಿಕೆ ತೋಟದಲ್ಲಿ ಯಾವುದೇ ಕೀಟನಾಶಕಗಳ ಸ್ಪ್ರೇ ಮಾಡುವವರೂ ಅಲ್ಲ.  ದಪ್ಪ ಸಿಪ್ಪೆಯ ಕವಚವೂ ಈ ಹಣ್ಣಿಗಿದೆ.   ಹಣ್ಣಾಗಿ ಕೆಳ ಬಿದ್ದ ಚಕೋತಾ ಪಕ್ವವಾಗಿರುವುದು.   ದಪ್ಪನೆಯ ಸಿಪ್ಪೆ ತೆಗೆಯಲೂ ಚೆನ್ನಾಗಿ ಮಾಗಿದ ಹಣ್ಣಾಗಿದ್ದರೇನೇ ಸುಲಭ.   

ಅಡಿಕೆ ತೋಟದೊಳಗಿರುವ ನಮ್ಮ ಚಕೋತಾ ಮರದ ಪಕ್ಕದಲ್ಲೇ ಒಂದು ತೆಂಗಿನ ಮರವೂ ಇದೆ.   ಒಂದು ಮಳೆಗಾಲದಲ್ಲಿ ತೆಂಗಿನ ಮಡಲು ಮರದ ಮೇಲೆ ಬಿದ್ದು ಕೆಲವು ಚಕೋತದ ಹೀಚುಗಾಯಿಗಳು ಮಡಲಿನೊಂದಿಗೆ ಧರಾಶಾಯಿಯಾದುವು.   " ಛೆ,  ಹಣ್ಣಾಗಬೇಕಿದ್ದ ಕಾಯಿಗಳಿಗೆ ಈ ಗತಿ ಬಂತಲ್ಲ "  ಎಂದು ಮಡಲಿಗೆ ಹಿಡಿಶಾಪ ಹಾಕಿ,  ಕಾಯಿಗಳನ್ನು ಹೆಕ್ಕಿ ಮನೆಗೆ ತಂದೆ.

ಕ್ರಿಕೆಟ್ ಬಾಲ್ ನಷ್ಟೇ ದೊಡ್ಡಗಿದ್ದ ಈ ಕಾಯಿಯೊಳಗೇನಿದ್ದೀತು ಎಂಬ ಕುತೂಹಲದಿಂದ ಕತ್ತರಿಸಿ ನೋಡಲಾಗಿ,   ಅಬ್ಬಾ,  ಒಳಗಿನ ಪರಿಮಳ!  ಥೇಟ್ ಕಂಚು ಹುಳಿಯ ಕಮ್ಮನೆ ಬಂದಿತು.  " ಸುಮ್ಮನೆ ಅಲ್ಲ ಇದನ್ನು ಸೀ ಕಂಚಿ  (ಸಿಹಿ ಕಂಚಿ ) ಅಂದಿರೋದು "  ಅಂದ್ಕೊಳ್ಳುತ್ತ  ಹಣ್ಣಿನ ತಿರುಳು ಇನ್ನೂ ಮೂಡಿರದ ಕಾಯಿಗಳನ್ನು ಹೋಳುಗಳನ್ನಾಗಿಸಿ ಉಪ್ಪು ಬೆರೆಸಿ ಜಾಡಿಯಲ್ಲಿ ತುಂಬಿಸಿಟ್ಟಾಯಿತು.    ಅಜೀರ್ಣ ಸಮಸ್ಯೆ ಬಂದಾಗ ಕಂಚು ಹುಳಿಯ ಸಿಪ್ಪೆ ಉಪ್ಪಿನಲ್ಲಿ ಹಾಕಿಟ್ಟಿದ್ದನ್ನು ತಂಬ್ಳಿ ಮಾಡಿ ಉಣ್ತೀವಲ್ಲ,  ಇದನ್ನೂ ಅದೇ ಥರ ಮಾಡಿಕೊಳ್ಳಲಡ್ಡಿಯಿಲ್ಲ ಎಂದಿತು ಮನಸ್ಸು.

ಹುಣಸೇಬೀಜದಷ್ಟು ದೊಡ್ಡದಾದ ಬೀಜಗಳೂ ಈ ಹಣ್ಣಿನೊಳಗಿವೆ.  ಬೀಜಗಳೇ ಹೊಸ ಸಸ್ಯೋತ್ಪತ್ತಿಗೆ ಆಧಾರ.   ಬೀಜದ ಎಣ್ಣೆಯು ಆಂಟಿ ಓಕ್ಸಿಡೆಂಟ್ ಗುಣವುಳ್ಳದ್ದು ಹಾಗೂ  ಪರಿಸರಸ್ನೇಹಿಯಾದ ಈ ಎಣ್ಣೆ ಕೀಟನಾಶಕ.   ಕೈತೋಟದ ಸಸ್ಯಗಳು ಕೀಟಬಾಧೆಯಿಂದ ರೋಗಗ್ರಸ್ತವಾಗಿವೆಯೇ,  ಚಕೋತಾ ಬೀಜದೆಣ್ಣೆಯನ್ನು ಸಿಂಪಡಿಸಿ.   ಎಣ್ಣೆಯನ್ನು ಗಾಯಗಳಿಗೆ ಹಚ್ಚುವುದೂ ಗುಣಕಾರಿ,   ಗಾಯದ ಕಲೆಗಳನ್ನೂ ಇನ್ನಿಲ್ಲದಂತೆ ನಿವಾರಿಸುವುದು.   ಅಡುಗೆಮನೆಯನ್ನು ಶುಚಿಗೊಳಿಸಲೂ  ಉಪಯುಕ್ತ,  ಚಕೋತಾ ಬೀಜದ ಎಣ್ಣೆ ಬಳಸಿ ಫಂಗಸ್,  ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಿ ಸುಗಂಧಪೂರಿತ ಅಡುಗೆ ಕೋಣೆ ನಿಮ್ಮದಾಗಿಸಿ.   ಜಜ್ಜಿದ ಎಲೆಗಳನ್ನು ಸ್ನಾನಗೃಹದ ಬಿಸಿನೀರಿಗೆ ಹಾಕಿ,  ಪರಿಮಳದ ನೀರಿನಲ್ಲಿ ಮಿಂದು ಬನ್ನಿ.

ಹಣ್ಣುಗಳನ್ನು ಹಲವು ತಿಂಗಳು ಕಾಪಾಡಿಕೊಳ್ಳಬಹುದು.  ಒಮ್ಮೆ ಏನಾಯ್ತೂಂದ್ರೆ ಚಕೋತಾ ಹಣ್ಣುಗಳಾದವು.  ಹಣ್ಣು ತಿನ್ಬೇಕಾಗಿದ್ದ ಮಗ ದೂರ ದೆಹಲಿಯಲ್ಲಿದ್ದ.  ಅವನು ಬರದೇ ನಾನು ಕೀಳಲಿಲ್ಲ,  ಮರದಿಂದ ಬೀಳಲೂ ಇಲ್ಲ.  ಜನವರಿಯಲ್ಲಿ ಕೀಳಬೇಕಾಗಿದ್ದ ಹಣ್ಣುಗಳು ಮಾರ್ಚ್ ತಿಂಗಳು ಬಂದಾಗ ಮಗ ಮನೆಗೆ ಬಂದ ಹೊತ್ತಿನಲ್ಲಿ ಒಳಗೆ ಬಂದವು.  ಮರದಲ್ಲೇ ಹಣ್ಣಾಗಿದ್ದು ತುಂಬ ಸ್ವಾದಿಷ್ಟವಾಗಿರುತ್ತವೆ ಅನ್ನೂದನ್ನು ಈ ಸಂದರ್ಭದಲ್ಲಿ ತಿಳಿಯುವಂತಾಯಿತು.   ಸಿಪ್ಪೆ ಸುಲಿಯುವಾಗಲೂ ಅಷ್ಟೇ,  ಕೈಗಳಿಗೆ ಅಹಿತಕರವಾಗಿರುವುದಿಲ್ಲ,    ಪಪ್ಪಾಯಿ,  ಅನಾನಸ್ ನಂತಹ ಕೆಲವು ಹಣ್ಣುಗಳ ಸಿಪ್ಪೆ ತೆಗೆಯುತ್ತಿದ್ದ ಹಾಗೆ ಕಿರಕಿರಿಯೆನಿಸುವಷ್ಟು ರಸ ಜಿನುಗಲಾರಂಭಿಸುವುದು ಸಾಮಾನ್ಯ.

ಸಂಧಿವಾತದಿಂದ ಬಳಲುತ್ತಿರುವವರಿಗೆ ಚಕೋತಾ ಹಣ್ಣಿನ ರಸ ಸೇವನೆ ಗಂಟುಗಳನ್ನು ಸಡಿಲಿಸಿ ಹಿತವನ್ನುಂಟು ಮಾಡುವುದು.   ಚಕೋತಾ ಹಣ್ಣಿನ  ಸಿಪ್ಪೆ ಹಾಗೂ ಶುಂಠಿ ಅರೆದ ಮಿಶ್ರಣದ ಲೇಪವನ್ನು ಗಂಟುನೋವಿಗೆ ಹಚ್ಚುವುದು ಸಂಧಿವಾತಕ್ಕೆ ಪರಿಣಾಮಕಾರೀ ಚಿಕಿತ್ಸೆಯೆನಿಸಿದೆ.   ಕ್ಯಾಲ್ಸಿಯಂ ಹಾಗೂ ವಿಟಮಿನ್ ಸಿ ಪ್ರಬಲವಾಗಿರುವ ಹಣ್ಣು,  ಚರ್ಮ ನೆರಿ ಕಟ್ಟದಂತೆ,  ವಯಸ್ಸಾಗುತ್ತಿರುವುದನ್ನೂ ತಡೆಯುವ ಬಲಾಢ್ಯ ಶಕ್ತಿ ಇದರದ್ದು.

ಹಣ್ಣುಗಳನ್ನು ಹಾಗೇನೇ ತಿನ್ನುವುದೇ ಉತ್ತಮ.  ದೊಡ್ಡ ಹಣ್ಣು,  ಸಿಪ್ಪೆ ಸುಲಿದಿಟ್ಟು,  ತೊಳೆ ತೆಗೆದಿಟ್ಟು ತಟ್ಟೆಯಲ್ಲಿಟ್ಟಿದ್ದು ಮುಗಿದಿಲ್ಲ.   ಚಿಂತೆ ಮಾಡಬೇಕೆಂದಿಲ್ಲ.   ಹಣ್ಣು ಹಾಳಾಗುವುದಿಲ್ಲ,  ರೆಫ್ರಿಜರೇಟರ್ ಏನೂ ಬೇಡ,  ಹಾಗೇ ಮುಚ್ಚಿಡಿ,  ನಾಳೆ ತಿನ್ನಬಹುದು.   ಇನ್ನಿತರ ಹಣ್ಣುಗಳೊಂದಿಗೆ ಸೇರಿಸಿ ಫ್ರುಟ್ ಸಲಾಡ್ ಬೇಕಿದ್ದರೂ ಮಾಡಬಹುದು.    ಬಿಡಿ ಎಸಳುಗಳನ್ನು ಸ್ವಚ್ಛಗೊಳಿಸುವ ಕೆಲಸವೊಂದೇ ಇರೂದು ಇಲ್ಲಿ.  ಸಕ್ರೆ ಕಂಚೀಕಾಯಿ ಎಂದೂ ಹೆಸರಿರುವ ಈ ಹಣ್ಣನ್ನು ಸಕ್ಕರೆ ಬೆರೆಸಿಯೂ ತಿನ್ನಿ.   ಸಕ್ಕರೆ ಹಾಕಿ ಜಾಮ್ ಮಾಡಬಹುದು.   ಮುರಬ್ಬ ಪಾಕ ಮಾಡಿ ಕೆಲವು ತಿಂಗಳು ಜೋಪಾನ ಮಾಡಬಹುದು,  ಈ ಪ್ರಯೋಗಗಳನ್ನು ಇನ್ನೂ ಮಾಡಿಲ್ಲ.    ಏನಿದ್ದರೂ ಹಲಸಿನ ಹಣ್ಣು ಬಿಡಿಸುವ ಶ್ರಮದ ಮುಂದೆ ಇದನ್ನು ಸುಲಿದು ತಿನ್ನುವುದು ಶ್ರಮವೇ ಅಲ್ಲ.

ವಿದೇಶೀಯರು pomelo,  pummelo ಇತ್ಯಾದಿ ಹೆಸರಿರಿಸಿರುವ ಈ ಸಸ್ಯ ಏಷಿಯಾ ಮೂಲದ್ದಾಗಿರುತ್ತದೆ.   ಗುಲಾಬಿ ವರ್ಣವಲ್ಲದೆ ಬಿಳಿ ಬಣ್ಣದ ಹಣ್ಣುಗಳೆಂದು ಎರಡು ಜಾತಿಯಾಗಿ ಚಕೋತಾ ಹಣ್ಣುಗಳು ಕಾಣ ಸಿಗುತ್ತವೆ. ಅಡಿಕೆ ತೋಟದೊಳಗೆ ಸ್ಥಳಾವಕಾಶ ಇರುವಲ್ಲಿ ಹಲವಾರು ಗಿಡಗಳನ್ನು ನೆಟ್ಟು ಸಾಕಿದರೆ ಉಪ ಆದಾಯವನ್ನೂ ಗಳಿಸಬಹುದು.   ಮಾರುಕಟ್ಟೆಯಲ್ಲಿ ಒಳ್ಳೆಯ ಧಾರಣೆಯೂ ಇದೆ.   ನೆಂಟರಿಷ್ಟರಿಗೆ,  ಸ್ನೇಹಿತರಿಗೆ ಉಚಿತವಾಗಿ ಹಂಚಲೂ ಬಹುದು.  ಮೊದಲ ಬಾರಿ  " ಚಕೋತಾ ಹಣ್ಣಾಯ್ತು "  ಎಂಬ ಸುದ್ದಿ ತಿಳಿದಾಕ್ಷಣ ನನ್ನತ್ತಿಗೆ ಧಾವಿಸಿ ಬಂದಿದ್ದರು.   ನೆಟ್ಟ ಗಿಡ ಫಲ ಕೊಟ್ಟಿತು ಎಂಬ ಸಂತಸದ ಅನುಭೂತಿಯೇ ಬೇರೆ.   ಅತ್ತಿಗೆ ತಾವೇ ಹಣ್ಣು ಸುಲಿದು ಸಂಭ್ರಮದಿಂದ ಎಲ್ಲರಿಗೂ ಹಂಚಿ,  ಊರಿಗೆ ತೆರಳುವಾಗ ಮನೆಯಲ್ಲಿ ತಿನ್ನಲು ಹಣ್ಣುಗಳನ್ನು ಕೊಂಡೂ ಹೋದರು.ಈ ಬರಹವನ್ನು ಸಿದ್ಧಪಡಿಸಿ ಮೂರು ತಿಂಗಳ ಮೇಲಾಯಿತು.   ನಿನ್ನೆ ಯಾಕೋ ಮರದ ಬಳಿ ಬಂದು ಇನ್ನೆಷ್ಟು ಹಣ್ಣುಗಳು ಬಾಕಿಯಿವೆ ಎಂದು ಪಕ್ಷಿನೋಟ ಬೀರಿದಾಗ ಮರ ತುಂಬಾ ಗೆಜ್ಜೆ ಕಟ್ಟಿದಂತೆ ಹೂ ಗೊಂಚಲುಗಳು,  ನೆಲದಲ್ಲೂ ಉದುರಿದ ಬಿಳಿ ಬಿಳೀ ಹೂ ಪಕಳೆಗಳು,    ಓಹೋ,  ಹೌದಲ್ಲ,  ವಸಂತ ಕಾಲ ಬಂದಿದೆಯಲ್ಲ.   ಸೌರಮಾನ ಯುಗಾದಿ ವಿಷು ಬಂದಿದೆ.   ಸಸ್ಯಸಂಕುಲವೆಲ್ಲ ಹೊಸ ಸೃಷ್ಟಿಯತ್ತ ಹೊರಟಿವೆ.   ನಾವೂ ಪ್ರಕೃತಿಯ ಈ ಆನಂದದಲ್ಲಿ ಭಾಗಿಯಾಗೋಣ.     ಸೂರ್ಯನ ಪಥ ಎಂದಿಗೂ ಬದಲಾಗುವುದಿಲ್ಲ,   ಮೇಷರಾಶಿಗೆ ಸೂರ್ಯನ ಪ್ರವೇಶದ ಘಳಿಗೆ ಎಂದಿಗೂ ಎಪ್ರಿಲ್ 14ರಂದೇ ಆಗುವಂಥದ್ದು,  ಈ ಸಂಕ್ರಮಣ ಕಾಲವೇ ನಮ್ಮ ಪಂಚಾಂಗದಲ್ಲಿ ಸೌರಮಾನ ಯುಗಾದಿ ವಿಷು ಎಂದೇ ಗುರುತಿಸಿಕೊಂಡಿದೆ.  ಸುಖ ಸಮೃದ್ಧಿಯ ಬದುಕು ನಮ್ಮೆಲ್ಲರದಾಗಲಿ.  ಬ್ಲಾಗ್ ಓದುಗರಿಗೆಲ್ಲರಿಗೂ ಸೌರಮಾನ ಯುಗಾದಿಯ ಶುಭಾಶಯಗಳು.


Posted via DraftCraft app