Pages

Ads 468x60px

Friday, 29 January 2016

ಬಿಸಿ ಬಿಸಿ ಬನ್ಸು

" ಅಮ್ಮಾ ನಂದು ರಿಸಲ್ಟ್ ಬಂತು,  ಡಿಸ್ಟಿಂಕ್ಷನ್ ಬಂದಿದೇ..."  ಅಂದ್ಬಿಟ್ಟು ಕಂಪ್ಯೂಟರಲ್ಲಿ ಮುಖ ಹುದುಗಿಸಿದ ಮಗಳು.
" ಹಂಗಿದ್ರೆ ಫೇಸ್ ಬುಕ್ಕಲ್ಲಿ ಹಾಕ್ಬಿಡೂ,  ನಾನು ಲೈಕ್ ಕುಟ್ತೇನೇ.."
" ನಿನ್ನ ಫೇಸ್ ಬುಕ್ಕೂ ಏನೂ ಬ್ಯಾಡ,  ಸುಮ್ನಿರು "
" ಆಯ್ತೂ,  ಪಾಯಸ ಮಾಡಿ ಕುಡಿಯೋಣ "  ಅನ್ನುತ್ತಾ ಅಡುಗೆಮನೆಗೆ ನನ್ನ ಪಾದ ಎಳೆಯಿತು.   ಪಾಯಸ ಮಾಡಲು ಬೇಕಾದ ಶಾವಿಗೆ,  ಗೋಡಂಬಿ,  ದ್ರಾಕ್ಷಿ ಎಲ್ಲ ಇದ್ದರೂ ಮುಖ್ಯವಾಗಿ ಅವಿ್ಳಗೇ ಪಾಯಸ ಇಷ್ಟವಿಲ್ಲ.   ಒಂದು ಚಿಕ್ಕ ತಟ್ಟೆಯಲ್ಲಿ ತಿನ್ನೋ ಸಂಭ್ರಮಕ್ಕೆ ನಾನ್ಯಾಕೆ ಒದ್ದಾಡಲಿ....  ನಾಳೆ ಮುಂಜಾನೆಯ  ತಿಂಡಿಯನ್ನೇ ವಿಶೇಷವಾಗಿಸೋಣ.

" ಎಣ್ಣೆತಿಂಡಿ,  ಅದೂ ಮುಂಜಾನೆ ಹೊತ್ತು...  ನಿನ್ನಪ್ಪ ತಿಂತಾರೇನೇ ?"
" ಕೇಳಿ ನೋಡು,  ಅಪ್ಪಂಗೆ ಆಗೋದಾದ್ರೆ ಆದೀತು..."

ಅವರೂ ಕಂಪ್ಯೂಟರು್ರ ಹಿಡಿದು ಕೂತಿರುವಾಗ ನಾವೂ ಮತಾಡ್ಸೋ ಹಾಗಿಲ್ಲ.  " ಏನೋ ಒಂದು ಮಾಡು "  ಎಂಬ ಉತ್ತರ ಗ್ಯಾರಂಟಿ.

ಎಣ್ಣೆ ಇದೆ,  ಅದೂ ನಮ್ಮ ತೋಟದ್ದೇ ತೆಂಗಿನಕಾಯಿಗಳದ್ದು,  ಶುದ್ಧವಾದ ತೆಂಗಿನೆಣ್ಣೆ ಮಾಡ್ಸಿ ಇಟ್ಕೊಂಡಿದ್ದೆವು.   ಈ ಬಾರಿ ಮಳೆಗಾಲ ಒಂದು ತಿಂಗಳು ಮೊದಲೇ ಶುರುವಾದದ್ದೂ ನಮ್ಮ ಲೆಕ್ಕಾಚಾರವೆಲ್ಲ ತಾರುಮಾರಾಗಿ ಹಲಸಿನ ಹಪ್ಪಳಗಿಪ್ಪಳ ಏನೂ ಇಲ್ಲವಾದುದರಿಂದ ತೆಂಗಿನೆಣ್ಣೆ  " ಯಾರೂ ಕೇಳೋರಿಲ್ಲ "  ಅನ್ನುತ್ತಿತ್ತು.

" ಬಾಳೆಹಣ್ಣು ಉಂಟಲ್ಲ..."
" ಬಾಳೆಹಣ್ಣು ಹಾಕದೇ ಯಾವ ತಿಂಡಿಯೂ ಆಗಲ್ವ..?" ಮಗಳ ಕೋಕಿಲವಾಣಿ.
"ಹ್ಞು, ಆಯ್ತು "

2 ಲೋಟ ಗೋಧಿಹುಡಿ ಅಳೆದಿಟ್ಟಾಯಿತು,  ಮೈದಾ ನನ್ಮಗಳಿಗೆ ಆಗದು. ಆಗದಿದ್ದರೆ ಒಳ್ಳೆಯದೆನ್ನಿ !  ಆಲ್ ಪರ್ಪಸ್ ಫ್ಲೋರ್  ಎಂದು ಖ್ಯಾತಿ ಪಡೆದಿರುವ ಮೈದಾಹಿಟ್ಟಿನಲ್ಲಿ ಯಾವುದೇ ಜೀವ ಪೋಷಕ ಸತ್ವಗಳಿಲ್ಲ.

ಅರ್ಧ ಲೋಟ ಸಿಹಿ ಮೊಸರು + ಅರ್ಧ ಲೋಟ ನೀರು.
ರುಚಿಗೆ ಉಪ್ಪು.
ಸಿಹಿಗೆ ಸಕ್ಕರೆ.
ಖಾರಕ್ಕೆ ಮೆಣಸಿನಹುಡಿ ಯಾ ಮಸಾಲೆಯುಕ್ತ ಮೆಣಸಿನಹುಡಿ.
ಸುವಾಸನೆಗೆ ಎಳ್ಳು,  ಜೀರಿಗೆ.

ಎಲ್ಲವನ್ನೂ ತಪಲೆಗೆ ಸುರಿದು,  ಗೋಧಿಹುಡಿಯನ್ನೂ ಬೆರೆಸಿ ಕಲಸಿಟ್ಟು,  ಚಪಾತಿಗೆ ನಾದುವಂತೆ ನಾದಿಟ್ಟು,  ಮುಚ್ಚಿಟ್ಟು...  ಇನ್ನೇನಿದ್ದರೂ ನಾಳೆ ಮುಂಜಾನೆಗೇ.

ಕೂಡಲಿಕ್ಕೆ ಒಂದು ಕೂಟು ಆಗಲೇಬೇಕಲ್ಲ,  ಡಬ್ಬದಲ್ಲಿದ್ದ ಯಾವುದೋ ಒಂದು ಬಗೆಯ ಕಾಳುಗಳನ್ನು ನೆನೆ ಹಾಕಿದ್ದೂ ಆಯ್ತು.  ಇನ್ನೀಗ ವಿಶ್ರಾಂತಿಯ ಸಮಯ.

ಬೆಳಗಾಗೆದ್ದು ಕುಕ್ಕರಿನಲ್ಲಿ ಕಾಳುಗಳನ್ನು ಬೇಯಿಸಿದ್ದಾಯಿತು.

" ಹೌದೂ,  ಬಾಳೆಹಣ್ಣು ಹಾಕ್ದೇ ಬನ್ಸ್ ಚೆನ್ನಾಗಿರುತ್ತ ?"

ನಾವು ಮನೆಯಲ್ಲಿ ಮಾಡುವ ಬನ್ಸ್ ಬಾಳೆಹಣ್ಣು ಹಾಕಿಯೇ ಮಾಡ್ತೀವಿ.  ಇದೀಗ ಹೋಟಲ್ ತಿಂಡಿತಿನಿಸು ತಯಾರಕರು  ಬಾಳೆಹಣ್ಣು ಹಾಕ್ತಾರೇಂತ ತಿಳ್ಕೊಂಡಿದ್ದೀರಾ ?  ಏನೂ ಇಲ್ಲ,  ಸುಮ್ನೇ ಹಿಟ್ಟು ಕಲಸಿಟ್ಟು ಬೇಕಿಂಗ್ ಪೌಡರೋ,  ಸೋಡಾ ಹುಡಿಯೋ,  ಯೀಸ್ಟೋ ಅಥವಾ ಅಜಿನೋಮೋಟೋ ಅಂತಾರಲ್ಲ,  ಹೀಗೇನೋ ಹಾಕ್ತಾರಷ್ಟೇ.

" ಹಾಗಿದ್ರೆ ಇದಕ್ಕೂ ಬೇಕಿಂಗ್ ಪೌಡರು ಬಿತ್ತಾ ?"
" ಛೇ ಇಲ್ಲಾಪ್ಪ,  ಅದನ್ನೆಲ್ಲ ನಾನು ತರಿಸೂದಕ್ಕಿಲ್ಲ,  ಒಂದು ಸೌಟು ಮೊಸರು ಹಾಕಿದ್ದೇನಲ್ಲ,  ಅದೇ ಸಾಕು.. "

ಒಮ್ಮೆ ಏನಾಗಿತ್ತೂಂದ್ರೆ,  ಟೀವಿ ಅಡುಗೆ ಕಾರ್ಯಕ್ರಮಗಳಲ್ಲಿ ಯೀಸ್ಟ್ ಬಳಸುವುದನ್ನು ನೋಡೀ ನೋಡೀ ನಾನೂ ಯೀಸ್ಟ್ ತರಿಸಿಟ್ಕೊಂಡಿದ್ದೆ.   ಕುಂಬ್ಳೆಯಿಂದ ತಂಗಿ ಅಂದಳು,  " ಯಾಕೇ ಸುಮ್ಮನೆ,  ಹಾಳಾಗುತ್ತೆ.."

ಹಾಗೇ ಆಯ್ತು,    ಏಳೆಂಟು ಕಾಳುಗಳನ್ನು ಒಂದು ಬಾರಿ ಉಪಯೋಗಿಸಿ ತೆಗೆದಿರಿಸಿದ್ದೆ.  ಇನ್ನೊಂದ್ಸಾರಿ ಯಾವಾಗಲೋ ತೆಗೆದು ನೋಡಿದಾಗ ಏನೋ ಕೆಟ್ಟ ವಾಸನೆ...

ಆದರೂ ಚಪಲ ಬಿಡಬೇಕಲ್ಲ,  ಅಂಗಡಿ ಸಾಮಾನು ಪಟ್ಟಿ ಬರೆಯುವಾಗ ಯೀಸ್ಟ್ ಎಂದೂ ಬರೆದಿದ್ದೆ.  ಬಂದ ಪ್ಯಾಕ್ ಬಿಡಿಸಿ ನೋಡಿದಾಗ ಉಪ್ಪಿನ ಹರಳಿನಂತಹ ಹುಡಿ ಕಾಣಿಸಿತು.   ಕನ್ನಡಕ ಏರಿಸಿ ಪ್ಯಾಕ್ ಮೇಲೆ ಬರೆದಿದ್ದನ್ನು ಓದಿದಾಗ  ' ಅಜಿನೋಮೋಟೋ ' ಎಂದಿತ್ತು.  ಆಗ ಗೂಗಲ್ ಸರ್ಚ್ ಮಾಡಿ ನೋಡಲಿಕ್ಕೆ ಅಂತರ್ಜಾಲದ ಗಂಧಗಾಳಿ ಕೂಡಾ ಇರಲಿಲ್ಲ ಕಣ್ರೀ,   ಯಥಾಪ್ರಕಾರ ತಂಗಿಯ ಮರೆ ಹೋಗಬೇಕಾಯಿತು.  " ಅಯ್ಯೋ, ಅದನ್ನೆಲ್ಲ ಹಾಕಿ ಅಡಿಗೆ ಮಾಡ್ಬೇಡಾ,  ಚೈನೀಸ್ ತಿಂಡಿಗಳಿಗೆ ಹಾಕ್ತಾರಂತೆ...  ಬಿಸಾಡು ಅದನ್ನು !" ಅಂತಂದು ಬಿಟ್ಟಳು.

ಆಯ್ತು,  ಅವಳಂದ ಹಾಗೆ ಮೂಲೆಗೆ ಒತ್ತರಿಸಲ್ಪಟ್ಟ ಅಜಿನೋಮೋಟೋ ಒಂದು ದಿನ ಹೊರಹೋಯಿತು.

" ನಾನು ಬರೆದಿದ್ದು ಯೀಸ್ಟ್ ಅಂತ,  ಅಂಗ್ಡಿಯೋನು ಕೊಟ್ಟಿದ್ದು ಅಜಿನೋಮೋಟೋ...  ಯಾಕೇಂತ ಕೇಳ್ರೀ..."
ನಮ್ಮೆಜಮಾನ್ರು ಜೀನಸಿನ ಜಗ್ಗಣ್ಣನನ್ನು ವಿಚಾರಿಸಿದಾಗ,  ಅವ್ನು  " ಎಲ್ರೂ ತೆಕ್ಕೊಂಡು ಹೋಗ್ತಾರೇ... ನಂಗೇನು ಗೊತ್ತು !" ಅಂದ್ಬಿಟ್ಟ.

ಈಗ ನಾವು ಬಾಳೆಹಣ್ಣೂ ಹಾಕದ,  ಬೇಕಿಂಗ್ ಪೌಡರೂ್ರ ಇಲ್ಲದ ಬನ್ಸ್ ಮಾಡಲಿದ್ದೇವೆ.    ಕಾಳುಗಳನ್ನೂ ಬೇಯಿಸಿದ್ದೂ ಆಗಿದೆ,  ತೆಂಗಿನತುರಿ ಇಲ್ಲದೆ ನಮ್ಮ ಮಸಾಲೆ ಆಗುವುದೇ ಇಲ್ಲ,  ತೆಂಗಿನತುರಿಯೊಂದಿಗೆ  ಹುರಿದ ಒಣಮೆಣಸು,  ಕಾಳುಮೆಣಸು,  ಜೀರಿಗೆ, ಕೊತ್ತಂಬ್ರಿ,  ಇಂಗು, ಕರಿಬೇವು ಇತ್ಯಾದಿಗಳನ್ನೂ ಅರೆಯಿರಿ,  ಆಸಕ್ತರು ಹುರಿದ ನೀರುಳ್ಳಿ ಬೆಳ್ಳುಳ್ಳಿ ಕೂಡಿಸಿ ಅರೆಯಿರಿ.  ಬೇಯಿಸಿದ ಕಾಳುಗಳಿಗೆ ಕೂಡಿಸಿ, ಕುದಿಸಿ, ಒಗ್ಗರಣೆ ಆಯ್ತೇ,  ರುಚಿಗೆ ಉಪ್ಪು, ಹುಳಿ, ಬೆಲ್ಲ ಹಾಕ್ರೀ..., ಮತ್ತೆ ಮರೆಯದಿರಿ. 

ಈಗ ಬಾಣಲೆಯಲ್ಲಿ ತೆಂಗಿನೆಣ್ಣೆ ಎರೆದು ಬಿಸಿಯಾಗಲು ಬಿಡಿ.
ಹಿಟ್ಟಿನಿಂದ ಲಿಂಬೆ ಗಾತ್ರದ ಉಂಡೆ ಮಾಡಿ, ಗೋಧಿ ಹುಡಿಯಲ್ಲಿ ಹೊರಳಿಸಿ, ತುಸು ಲಟ್ಟಿಸಿ.  ತೆಳ್ಳಗೆ ಲಟ್ಟಿಸುವ ಅಗತ್ಯವಿಲ್ಲ.  
ಒಂದೊಂದಾಗಿ ಎಣ್ಣೆಗೆ ಇಳಿಸಿ ಕರಿಯಿರಿ.

ಬಲೂನ್ ಥರ ಉಬ್ಬಿದ ಬನ್ಸು ತಟ್ಟೆಯಲ್ಲಿಟ್ಟು ತಿನ್ನಲು ಮಗಳು ಓಡುನಡಿಗೆಯಲ್ಲಿ ಬಂದಳು.

ಟಿಪ್ಪಣಿ:  ಸದಬಿರುಚಿಯ ಮಾಸಪತ್ರಿಕೆ ಉತ್ಥಾನ,  ಡಿಸೆಂಬರ್ 2015 ರ ಸಂಚಿಕೆಯಲ್ಲಿ ಪ್ರಕಟಿತ.

Thursday, 21 January 2016

ಈ ಸಂಭಾಷಣೇ.....
ಮನೆಕೆಲ್ಸ ಆಗ್ಹೋಯ್ತು,  ಊಟವೂ ಆಯ್ತು.   ಅಪ್ಪ ಮಗ ಜತೆಯಲ್ಲಿ ಎಲ್ಲಿಗೋ ಹೊರಟಿದ್ರು.   ಇನ್ನೇನು ಆರಾಮವಾಗಿ ಮಲಗೋದು ಅಂತ ಸಿದ್ಧತೆಯಲ್ಲಿದ್ದಾಗ ಬಾಗಿಲಿನ ಶಬ್ದ ಆಯಿತು.   ಈ ಮಟ ಮಟ ಮದ್ಯಾಹ್ನ ... " ಯಾರಪ್ಪಾ ....?" ಅನ್ನುತ್ತಾ ಹೊರ ಬಂದಾಗ ಕೈಲೊಂದು ದೊಡ್ಡ ಬ್ಯಾಗ್ ಹಿಡಿದ ಸೂಟು ಬೂಟುಧಾರಿ ಎದುರಾದ.

" ಯಾರೂ ಇಲ್ಲದ ಹೊತ್ತಿಗೆ ಯಾಕೇ ಬರ್ತೀರಾ... ಹೋಗ್ಬಹುದು "
ಅವನೋ ಶುದ್ಧ ಮಲಯಾಳ ಭಾಷೆಯಲ್ಲಿ ಬಡಬಡಿಸಲು ಪ್ರಾರಂಭಿಸಿದ.
" ನೋಡೂ... ನಂಗೆ ಮಲಯಾಳ ಬರೂದಿಲ್ಲ,  ಹೋಗು "
ಅವನು ಬಿಡಬೇಕಲ್ಲ,  " ಕೈರಳಿ ಟೀವಿ ನೋಡ್ತೀರಾ .." ಪ್ರಶ್ನೆ ಎಸೆದ.
" ಇಲ್ಲವಲ್ಲ.."
" ಅದ್ರಲ್ಲಿ ಅಡುಗೆ ಕಾರ್ಯಕ್ರಮ ನೋಡ್ತೀರಾ...." 
" ಅದನ್ನೆಲ್ಲ ನೋಡುವುದಕ್ಕಿಲ್ಲ "
" ಹ್ಞಾ,  ಅವರ ಅಡುಗೆ ಕಾರ್ಯಕ್ರಮದಲ್ಲಿ ಇಂತದ್ದೇ ಪಾತ್ರೆಯಲ್ಲಿ ಮಾಡೂದು,  ನೋಡಿ..." ಅನ್ನುತ್ತಾ ಬ್ಯಾಗು ಬಿಡಿಸಿ ನಾಲ್ಕು ಕಪ್ಪುಕಪ್ಪಗಿನ ಬೋಗುಣಿಗಳಂತಹ ಪಾತ್ರೆಗಳನ್ನು ಎದುರಿಗಿಟ್ಟ.
" ಕೈರಳಿ ಟೀವಿಯ ಲಕ್ಷ್ಮೀ ಗೋಪಾಲನ್ ಇದರಲ್ಲೇ ಅಡುಗೆ ಮಾಡ್ತಾರೆ " ಅಂತ ಹೇಳ್ಬಿಟ್ಟು ಯಾವುದೋ ಪ್ರಸಿದ್ಧ ಕಂಪೆನಿಯ ರಟ್ಟಿನ ಪೆಟ್ಟಿಗೆ ತೋರಿಸಿದ.
"ಇರಲೀ,  ನನಗೇನೂ ಇದು ಬೇಡ.... ನೀನು ಹೋಗು "
" ಇಲ್ಲಮ್ಮ,  ಒಂದು ಚಿಕ್ಕ ಪ್ರಶ್ನೆ... ಉತ್ತರ ಹೇಳಿದ್ರೆ ಈ ಎಲ್ಲ ಪಾತ್ರೆಯೂ ನಿಮಗೇ ಕೊಡ್ತೀನಿ "
" ಪ್ರಶ್ನೆಯೂ ಬೇಡ,  ನಿನ್ನ ಪಾತ್ರೆಯೂ ಬೇಡ "
" ನೀರಿನಲ್ಲಿ ಹುಟ್ಟಿ ನೀರಿನಲ್ಲಿ ಸಾಯುವಂಥದು ಯಾವ್ದೂಂತ ಹೇಳಿದ್ರೆ ಸಾಕು "
ಅವನು ಕೇಳಿದ್ದು ಒಂದು ಒಗಟು ತಾನೇ...  ಉತ್ತರಿಸುವುದರಿಂದ ತೊಂದರೆಯಿಲ್ಲ ಅಂದ್ಕೊಂಡು  " ಇನ್ನೊಮ್ಮೆ ಹೇಳು ನಿನ್ನ ಪ್ರಶ್ನೆ " 
ಅವನೂ ಮರು ಉಚ್ಚರಿಸಿದ.
" ಉಪ್ಪು "
" ಕರೆಕ್ಟ್!  ಈ ಪಾತ್ರೆ ಎಲ್ಲ ತೆಕ್ಕೊಳ್ಳಿ... ಇದು ನಿಮ್ಮದೇ "
ಅಯ್ಯೋ  ನಂಗೇನೂ ಬೇಡಾ ಅಂದಿದ್ದೇನಲ್ಲ,  ನೀನೇ ಇಟ್ಕೋ "
" ಇಲ್ಲಮ್ಮ,  ಇದು ನಿಮ್ಮದೇ.. ನೀವು ಗೆದ್ದಿದ್ದೀರಿ...  ಅಮ್ಮ ಎಷ್ಟು ಕಲ್ತಿದ್ದೀರಿ ನೀವು... ಟೀಚರಾ ?"
" ಏನೂ ಅಲ್ಲ,  ಒಮ್ಮೆ ಇಲ್ಲಿಂದ ಪೆಟ್ಟಿಗೆ ಕಟ್ತೀಯಾ "
" ನಿಮ್ಮ ಹೆಸ್ರು,  ಮೊಬೈಲ್ ನಂಬ್ರ ಕೊಡಿ "
" ಯಾಕೇ ?"
ಅವನು ಒಂದು ರಸೀದಿ ಪುಸ್ತಕ ಹೊರ ತೆಗೆದ. 
ನೋಡೂ...  ಮೊಬೈಲ್ ಗಿಬೈಲ್ ಇಲ್ಲ "
" ಲ್ಯಾಂಡ್ ಫೋನ್ ನಂಬ್ರ ಕೊಡಿ "
ಬರೆದುಕೋ.....
ನಿಮಗೆ ಈ ನಾಲ್ಕು ಪಾತ್ರೆಯೂ ಸಿಕ್ಕಿತು,  ಇಟ್ಕೊಳ್ಳಿ.  ಒಂದು ಪಾತ್ರೆಯ ಕ್ರಯ ಕೊಟ್ಬಿಡಿ"
ಎಲ ಇವನ!  " ಹೋಗಪ್ಪಾ ಹೋಗು,  ದುಡ್ಡು ಏನೂ ಇಟ್ಕಂಡಿಲ್ಲ "
" ಏನಮ್ಮ ಹಿಂಗಂತೀರಿ,  ಮಹಾಲಕ್ಷ್ಮಿ ಹಾಗಿದ್ದೀರಿ ಕೊಡಿ "
" ಇಲ್ಲಾಂದ್ರೆ ತಿಳಿಯೂದಿಲ್ವ,  ಹೋಗು ಸುಮ್ಮನೆ "
" ನೋಡೀಮ್ಮಾ ನಾನು ರಸೀದಿ ಬರೆದು ಆಯ್ತು,  ನೀವು ದುಡ್ಡು ಕೊಡ್ಲಿಲ್ಲಾಂದ್ರೆ ನಾನು ಕಂಪೆನಿಗೆ ನಷ್ಟ ಭರ್ತಿ ಮಾಡ್ಬೇಕಾಗ್ತದೆ ...  ನೂರು ರೂಪಾಯಿ ನಾನು ಕೈಯಿಂದ ಕೊಡಬೇಕಲ್ಲ "
" ಆಗ್ಲೀ,  ನಾನೇನು ಬೇಕೂಂತ ಕೇಳಿದ್ನಾ ?  ಸುಮ್ನೇ ಹೋಗು "
" ಒಂದ್ಲೋಟ ನೀರು ಕೊಡಿ ಅಮ್ಮ "
ಮಟ ಬಿಸಿಲಿನ ಅಂಗಳಲ್ಲಿ ನಿಂತು ಲೆಕ್ಚರ್ ಬಿಗಿದು ಗಂಟಲೊಣಗಿರಬೇಕು.   ಅಲ್ಲೇ ಟೇಬಲ್ ಮೇಲಿದ್ದ ನೀರಿನ ಬಾಟಲ್  ಎದುರಿಗಿಟ್ಟು  " ನೀರು ಕುಡಿದ್ಬಿಟ್ಟು ಹೋಗು ತಿಳೀತಾ..."
" ಬರ್ತೇನಮ್ಮ "Friday, 15 January 2016

ಪರ್ಣಕುಟೀರ


ಇಂದು ಮಕರಸಂಕ್ರಾಂತಿಯಲ್ವೇ,  ಹಿರಣ್ಯದ ಮಹಿಷಂದಾಯ ಗುಡಿಯಲ್ಲಿ ತಂಬಿಲಸೇವೆ.   ಸಂಜೆಯ ಹೊತ್ತು,  ಸುಮಾರು ಐವತ್ತೂ ಜನ ಭಕ್ತಾದಿಗಳು ಸೇರಿ ಸಂಭ್ರಮದ ವಾತಾವರಣ.

ಪುರೋಹಿತರು ಪೂಜೆ ಆರಂಭಿಸುತ್ತಿದ್ದಂತೆ ನನ್ನ ಗಮನ ಸ್ಥಳದ ಬದಿಯಲ್ಲಿದ್ದ ತೆಂಗಿನ ಮಡಲ ಚಪ್ಪರದ ಕಡೆ ಹೋಯಿತು.   ಆರೇಳು ತಿಂಗಳ ಹಿಂದೆ ಕಟ್ಟಿದ ಮಡಲ ಚಪ್ಪರ,  ದೈವಸ್ಥಾನದ ಆರಂಭೋತ್ಸವದ ಕಾರ್ಯಕ್ರಮಗಳ ಅಂಗವಾಗಿ ಸಾಮಗ್ರಿಗಳನ್ನು ಇರಿಸಲೆಂದು ಹಾಕಿದ್ದ ತಾತ್ಕಾಲಿಕ ಚಪ್ಪರ,  ಕಾರ್ಯಕರ್ತರು ನಂತರ ಅದರ ಗೊಡವೆಗೇ ಹೋಗಿಲ್ಲ.  ಗುಡ್ಡದ ಯಾವುದೋ ಮೂಲೆಯಿಂದ ಹರಿದು ಬಂದ ನೆಲ ಮುಚ್ಚಲಬಳ್ಳಿ ಚಪ್ಪರವನ್ನು ಆವರಿಸಿದ ಪರಿಯಂತೂ ತ್ರೇತಾಯುಗದ ರಾಮಾಯಣದ ಅರಣ್ಯಕಾಂಡದಲ್ಲಿ ಸೀತಾರಾಮರ ಪರ್ಣಕುಟಿ ಕಣ್ಣೆದುರು ನಿಂತ ಹಾಗೆ!

MucunaBracteata  ನೆಲ ಮುಚ್ಚಲಬಳ್ಳಿಯ ಸಸ್ಯಶಾಸ್ತ್ರೀಯ ಹೆಸರು.   ರಬ್ಬರು ತೋಟಗಳಲ್ಲಿ ಈ ಬಳ್ಳಿಯನ್ನು ಬೆಳೆಸುವರು.


Monday, 4 January 2016

ಚಟ್ಣಿಯ ಚಂದಿರಯಾನ

ಸಪ್ಟಂಬರ್ - ಅಕ್ಟೋಬರ್ ಬಂದಾಗ ಗೆಡ್ಡೆಗಳು ನೆಲದೊಳಗೆ ಅವಿತು ಬಿಡುತ್ತವೆ,  ಅಂದ್ರೆ ಮೇಲೆ ಕಾಣಿಸುವ ಸಸ್ಯದ ಕಾಂಡ ಒಣಗಿರುತ್ತದೆ.   ಗಮನಕ್ಕೆ ಬಾರದಿದ್ದರೆ ಗೆಡ್ಡೆಗಳು ನೆಲದೊಳಗೇ ಹುದುಗಿದ್ದು ಮುಂದಿನ ಮಳೆಗಾಲಕ್ಕೆ ಕೊಡೆ ಬಿಡಿಸಿದಂತೆ ಅರಳುತ್ತವೆ.   ಈ ಮಾಂಙನ್ನಾರೀ ಗೆಡ್ಡಯೂ ಹಾಗೇ ಆಯಿತು.   ಎರಡು ವರ್ಷಗಳಿಂದ  ಭೂಮಿಯಲ್ಲಿ ಅವಿತಿದ್ದ ಇದನ್ನು ಈ ಸರ್ತಿ ಬಿಡಬಾರದು ಎಂದು ಗೆಡ್ಡೆ ಎಲ್ಲಿದೆ ಎಂಬ ನೆನಪಿನಿಂದ ನೆಲ ಬಗೆದೆ.   ಅತ್ತಇತ್ತ ಹರಡಿದ ಮಲ್ಲಿಗೆ,  ಕಮಾನುಬಳ್ಳಿ,  ಬಿಸ್ಕೇಟ್ ಹೂಗಳೂ ಕತ್ತರಿಸಲ್ಪಟ್ಟಾಗ ಗೆಡ್ಡೆ ವಿಶಾಲ ಪರಿವಾರದೊಂದಿಗೆ ಗೋಚರಿಸಿತು.   ಎಲ್ಲ ಗೆಡ್ಡೆಗಳನ್ನೂ ತೆಗೆಯಬೇಕೆಂದೇನೂ ಇಲ್ಲ,   ಇವತ್ತಿನ ಮಟ್ಟಿಗೆ ಒಂದು ಚಟ್ಣಿ ಮಾಡಿಕೊಳ್ಳೋಣ.
ಚಟ್ಣಿ ಮಾಡೋ ಕ್ರಮ ಬರೆದು ಏನಾಗ್ಬೇಕು ?  ಎಲ್ಲರಿಗೂ ಗೊತ್ತು.   ಕಾಯಿತುರಿ,  ಹಸಿಮೆಣಸು,  ಒಂದಿಂಚು ಉದ್ದದ ಮಾವಿನಶುಂಠಿಯ ತುಂಡು,  ರುಚಿಗೆ ಉಪ್ಪು,  ಬೇಕಿದ್ದರೆ ಹುಳಿ ಇಷ್ಟನ್ನೂ ಅರೆದು ಒಂದು ಒಗ್ಗರಣೆ ಕರಿಬೇವಿನ ಘಂ ಘಮ ಪರಿಮಳದೊಂದಿಗೆ ಬಿದ್ದರೆ ಚಟ್ಣಿ ಆಗ್ಹೋಯ್ತು.   ಫೋಟೋ ತೆಗೆಯದಿದ್ದರೆ ಹೇಗೆ?  ಅದೂ ಆಯಿತು.   iPhone 6 ಬಂದ ಬೆನ್ನಿಗೇ ಹೊಚ್ಚಹೊಸದಾದ ಅಂದರೆ ಅಮೇರಿಕಾದಲ್ಲಿ ಆಪಲ್ ಕಂಪನಿ ಬಿಡುಗಡೆ ಮಾಡಿ ತಿಂಗಳಾಗುವಷ್ಟರಲ್ಲಿ iPadAir 2 ನಮ್ಮ ಮನೆಗೆ ತಲಪಿಯೇ ಬಿಟ್ಟಿದೆ.   ಅದುವರೆಗೆ ನನ್ನ ಕೈಯಲ್ಲಿದ್ದುದು ಐಪಾಡ್ ಪ್ರಥಮ ಆವೃತ್ತಿ,  ತುಂಬಾ ಹಳೆಯದು.   ಅದು ಬಂದ ಕಾಲದಲ್ಲಿ ನನ್ನ ಮಗಳು ಹೈಸ್ಕೂಲಲ್ಲಿದ್ದಳು.  ಅದರಲ್ಲಿ ಫೋಟೋಗ್ರಾಫಿಯ ಆಯ್ಕೆ ಇರಲಿಲ್ಲ.
ಹೊಸ ಐಪಾಡ್ ಫೋಟೋ ತೆಗೆಯಬಲ್ಲುದು.  ನನಗೆ ಬೇಕಾಗಿರುವ  ಎಲ್ಲ ಸಲಕರಣೆಗಳೂ ಇದೊಂದರಲ್ಲೇ ಇದೆ ಅಂದ ಹಾಗಾಯ್ತು.  
ಚಟ್ಣಿಯ ಫೋಟೋಗ್ರಾಫಿ ಸಾಮಾನ್ಯದ ಕೆಲಸ.  ಸಾದಾ ಚಿತ್ರವನ್ನು ಅಸಾಮಾನ್ಯವಾಗಿಸುವ ಪ್ರಾವೀಣ್ಯತೆಯನ್ನು  ಪರೀಕ್ಷಿಸ ಬೇಡವೇ,  ಅದಕ್ಕಾಗಿ ಒಂದು ಕಿರು ಪ್ರಯತ್ನ ನಡೆಯಿತು,  ಚಟ್ಣಿ ಚಂದಿರನೆಡೆಗೆ ನೆಗೆಯಿತು.

ಮಾವಿನಶುಂಠಿಯಿಂದ ತೊವ್ವೆ ಸಿದ್ಧ ಪಡಿಸೋಣ.   ತೊವ್ವೆಗೆ ತೊಗರಿಬೇಳೆ ಯಾ ಹೆಸ್ರುಬೇಳೆ ಬೇಕಾಗುವಂತದ್ದು.   ಹೆಸ್ರುಬೇಳೆ ತುಸು ಹುರಿದರೆ ಉತ್ತಮ.  ಆಯ್ತು,   ಒಂದು ಹಿಡಿ ಬೇಳೆ ಬೇಯಿಸಿದ್ದಾಯಿತೇ.
ಕಾಯಿತುರಿ,  ಹಸಿಮೆಣಸು,  ಮಾಂಙನ್ನಾರಿಗಳನ್ನು  ಅರೆದಾಯಿತೇ,   ಬೆಂದ ಬೇಳೆಗೆ ಕೂಡಿಸಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ನೀರಿನ ಹದ ಹಾಳಿತ ತೊವ್ವೆಗೆ ತಕ್ಕಂತೆ ಮಾಡಿಟ್ಟು ಕುದಿಸಿದ್ದಾಯಿತೇ.  ಕೊನೆಯಲ್ಲಿ ಘಮಘಮಿಸುವ ತುಪ್ಪದಲ್ಲಿ ಒಗ್ಗರಣೆ ಕೊಡದಿದ್ದರಾದೀತೇ,  ಕರಿಬೇವು,  ಚಿಟಿಕೆ ಅರಸಿಣ ಹಾಕದಿದ್ದರಾದೀತೇ....
ಮರಿಯಮ್ಮನ ಹಾಲು ಬಂದಿತ್ತು,  ಜೊತೆಯಲ್ಲಿ ಒಂದು ಪ್ಲಾಸ್ಟಿಕ್ ಪೊಟ್ಟಣ.   ಬಿಡಿಸಿ ನೋಡಲಾಗಿ ಬಸಳೇ ಸೊಪ್ಪು ಹೊರ ಬಂದಿತು.   ಅವಳಿಗೆ ತಿಂದೂ ತಿಂದೂ ಸಾಕಾಗ್ಬಿಟ್ಟಿದೆ,   ನನಗೂ ಕಳ್ಸಿದಾಳೆ...  ನಾರು ಅಧಿಕವಾಗಿರುವ ಹಸಿರು ತರಕಾರಿ ಬಸಳೆ ಬಹಳ ಒಳ್ಳೆಯದು.   ಇವತ್ತು ಒಂದು ಮಜ್ಜಿಗೆಹುಳಿ ಮಾಡೋಣ. 

" ಏನೂ,  ಬಸಳೇದು  ಮಜ್ಜಿಗೆಹುಳಿಯಾ ?  " ಚೆನ್ನಾಗಿರುತ್ತಾ..."

ಇದು ನಮ್ಮ ಗೌರತ್ತೆ ಹೇಳ್ಕೊಟ್ಟಿದ್ದು.    " ಚಪ್ಪರದಿಂದ ಬಸಳೆ ತಂದು ಎಷ್ಟೂಂತ ದಿನಾ ಕೊದ್ದೆಲ್ ಮಾಡ್ತೀಯ,  ಮೇಲಾರವೂ ಆಗ್ತದೆ "
" ಹೌದಾ.."  ನಂಗೂ ಆಶ್ಚರ್ಯ.
" ಹೂಂ ಮತ್ತೆ, ತೊಗರಿಬೇಳೆಯೂ ಹಾಕ್ಬೇಕು ಇದಕ್ಕೆ.  ತೆಂಗಿನಕಾೖ ಅರೆಯುವಾಗ ಎರಡು ಹಸಿಮೆಣಸೂ ಹಾಕ್ಬೇಕು "
" ಓಹೋ ಹೀಗೆಲ್ಲ ಉಂಟಲ್ಲ " ಅನ್ನುತ್ತಾ ಬಸಳೆ ಸೊಪ್ಪಿನ ಮಜ್ಜಿಗೆಹುಳಿ ಮಾಡಿ ತಿಂದಾಗಿತ್ತು.

ಈ ಬಾರಿ ನಮ್ಮ ಹಿತ್ತಿಲಲ್ಲಿ ಬಸಳೆ ಚಪ್ಪರ ಇಲ್ಲದಿರುವುದರಿಂದ ಮರಿಯಮ್ಮ ಬಸಳೆ ಸೊಪ್ಪು ಕಳಿಸಿದ್ದಾಳೆ,  ಇರಲಿ.   ಈಗ ಮಜ್ಜಿಗೆಹುಳಿ ತುಸು ಭಿನ್ನವಾಗಿ ಮಾಡೋಣ.

ಮಾವಿನಶುಂಠಿ ಇದೆಯಲ್ಲ,  ಇದು ಅರಸಿಣದ ಜಾತಿಗೆ ಸೇರಿದ್ದು,  ಹೆಸರಿಗೆ ಮಾತ್ರ ಶುಂಠಿ ಅಷ್ಟೇ.  ಯಾವುದೇ ಅಡುಗೆಯಿರಲಿ,  ಚಿಟಿಕೆ ಅರಸಿಣ ಹಾಕದೇ ಬಿಡುವವರಲ್ಲ ನಾವು.   ಮಜ್ಜಿಗೆಹುಳಿಯಿರಲಿ, ಉಪ್ಪಿನಕಾಯಿಯೇ ಆಗಲಿ ಅರಸಿಣ ಕಡ್ಡಾಯ.   ಈಗ ನಾವು  ಬಸಳೆ ಸೊಪ್ಪಿನ ಮಜ್ಜಿಗೆಹುಳಿಯನ್ನು ಮಾವಿನಶುಂಠಿಯಿಂದ ವಿಶಿಷ್ಟವಾಗಿ ತಯಾರಿಸೋಣ.

ಒಂದು ಹಿಡಿ ತೊಗರಿಬೇಳೆ ಬೇಯಿಸಿದ್ದಾಯಿತು.  ಬಸಳೆ ಸೊಪ್ಪನ್ನೂ ಆಯ್ದು ಇಟ್ಟಾಗಿದೆ,  ದಂಟು ಬೇಡ, ಸೊಪ್ಪು ಸಾಕಷ್ಟಿದೆ.   ಬಸಳೆಯೂ ರುಚಿಗೆ ಉಪ್ಪು ಕೂಡಿಕೊಂಡು ಬೇಯಲಿ.
ಅರ್ಧ ತೆಂಗಿನಹೋಳು,  ತುರಿ ಮಾಡಿದ್ರಾ,  ಯಾವಾಗಲೂ ಮಜ್ಜಿಗೆಹುಳಿಗೆ ಹಸಿ ಕಾಯಿಯನ್ನೇ ಬಳಸಿರಿ.
ಒಂದು ದೊಡ್ಡ ತುಂಡು ಅಂದ್ರೆ ಹೆಬ್ಬೆರಳ ಗಾತ್ರದ ಮಾವಿನಶುಂಠಿಯೊಂದಿಗೆ ನುಣ್ಣಗೆ ಅರೆದು ತೆಗೆಯಿರಿ.
ಬೆಂದ ಬೇಳೆ ಹಾಗೂ ಬೆಂದ ಬಸಳೆಗೆ ಸಿಹಿ ಮಜ್ಜಿಗೆ ಕೂಡಿಸಿ ಆಯ್ತೇ, 
ಈಗ ಅರೆದಿಟ್ಟ ತೆಂಗಿನ ಅರಪ್ಪು ಕೂಡಿಸಿ.
ಮಜ್ಜಿಗೆಹುಳಿ ಸಾರಿನಂತೆ ತೆಳ್ಳಗಾಗಕೂಡದು,  ಕುದಿಸಿರಿ.
ಕುದಿಯುವಾಗಲೂ ಅಷ್ಟೇ,  ಹಾಲು ಉಕ್ಕಿ ಬಂದಂತೆ ಉಕ್ಕಿ ಬರುವಾಗ ಕೆಳಗಿಳಿಸಿ,  ಗಳಗಳನೆ ಕುದಿಯಬಾರದು.
ಒಗ್ಗರಣೆ ಕೊಡದಿರಬಾರದು.

ಬಸಳೇ ಸೊಪ್ಪು ಹಾಗೂ ಮಜ್ಜಿಗೆ ಶೀತಕಾರಕ ಅಂತ ತಿನ್ನದೇ ಇರುವವರಿಗೂ ಈ ಮಾಂಙನ್ನಾರಿ ಮಜ್ಜಿಗೆ ಹುಳಿಯಿಂದ ಬಾಧಕವೇನೂ ಆಗದು.

ಹುಳಿಮೆಣಸು ಎಂಬಂತಹ ಈ ವ್ಯಂಜನ,  ನಮ್ಮ ಕರಾವಳಿಯ ಗ್ರಾಮೀಣ ಜನತೆಗೆ ಚಿರಪರಿಚಿತ.   ಹೆಚ್ಚಿನ ಮಸಾಲಾ ಸಾಮಗ್ರಿಗಳನ್ನೇನೂ ಇದು ಬಯಸದು.   ತೊಂಡೆ ಚಪ್ಪರ ಮನೆ ಹಿತ್ತಲಲ್ಲಿ ಇದ್ದೇ ಇರುತ್ತದೆ. ತೊಂಡೆಕಾಯಿಗಳು ಇರುವಾಗ ಹುಳಿಮೆಣಸು ಮಾಡದಿದ್ದರಾದೀತೇ,  ತೆಂಗಿನಕಾಯಿಗೂ ಕೊರತೆಯಿಲ್ಲ.  ಅರ್ಧ ಕಡಿ ಕಾಯಿತುರಿ ಇರಲೇಬೇಕು.
4-6 ಒಣಮೆಣಸು ಕುದಿನೀರಿನಲ್ಲಿ ಹಾಕಿಟ್ಟಿರಿ,   ಹುರಿಯುವ ಅಗತ್ಯವಿಲ್ಲ.
ತೊಂಡೆಕಾಯಿಗಳನ್ನು ಹೋಳು ಮಾಡಲಿಕ್ಕಿಲ್ಲ,  ಚೂರಿಯಲ್ಲಿ ಗೀರು ಹಾಕಿದ್ರೆ ಸಾಕು,  ಜಜ್ಜಿಕೊಂಡರೂ ನಡೆದೀತು.   ಉಪ್ಪು ಕೂಡಿಸಿ ಬೇಯಿಸಿಟ್ಕೊಳ್ಳಿ.
ಕಾಯಿತುರಿ ಅರೆಯುವಾಗ ಚಿಕ್ಕ ಅರಸಿಣ ಗೆಡ್ಡೆಯನ್ನೂ ಹಾಕುವುದಿದೆ,  ನಾವು ಈಗ ಮಾಂಙನ್ನಾರಿ ಹಾಕೋಣ.
ತೆಂಗಿನತುರಿ,  ಒದ್ದೆ ಮಾಡಿಟ್ಟ ಒಣಮೆಣಸು, ಒಂದೆರಡು ಇಂಚು ಉದ್ದದ ಮಾವಿನಶುಂಠಿ ಅರೆಯಿರಿ.  ಹುಳಿಯನ್ನೂ ಅರೆಯುವಾಗಲೇ ಹಾಕುವ ರೂಢಿ.  ಅರೆದ ತೆಂಗಿನ ಅರಪ್ಪನ್ನು ಬೇಯಿಸಿದ ತರಕಾರಿಗೆ ಕೂಡಿಸಿ.  ಸಾರಿನಂತೆ ತುಸು ತೆಳ್ಳಗೆ ಮಾಡಿ,  ಉಪ್ಪು ಹುಳಿಯ ಹದಹಾಳಿತ ನೋಡಿಕೊಂಡು,  ಬೇಕಿದ್ದರೆ ಬೆಲ್ಲವನ್ನೂ ಹಾಕಿ ಕುದಿಸಿ.  ಬೆಳ್ಳುಳ್ಳಿ,  ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ಹುಳಿಮೆಣಸು ಸಿದ್ಧ.

ಪಳದ್ಯ

ಬೇಸಿಗೆ ಬಂದಾಗ ಊಟದ ವಿಧಾನವೂ ಬದಲಾಗಬೇಕು.  ಹೆಚ್ಚು ಮಸಾಲೆ ಹಾಕಿದ ಪದಾರ್ಥಗಳು ಹಿತವಾಗುವುದಿಲ್ಲ.   ಪಳದ್ಯವನ್ನು ಅತಿ ಕಡಿಮೆ ಪರಿಕರಗಳಿಂದ ಸಿದ್ಧಪಡಿಸಲಾಗುತ್ತದೆ.   ಇದನ್ನೂ ನಾವೀಗ ಮಾವಿನಶುಂಠಿಯಿಂದಲೇ ಸಿದ್ಧಪಡಿಸೋಣ.

ಹಿಡಿ ಕಾಯಿತುರಿಯೊಂದಿಗೆ ಒಂದು ಹಸಿಮೆಣಸು,  ತುಂಡು ಮಾಂಙನ್ನಾರಿ ಅರೆದಿಡಿ.   
ಒಂದು ಚಮಚ ಕಡ್ಲೆ ಹಿಟ್ಟನ್ನು ಒಂದು ಲೋಟ ನೀರಿನಲ್ಲಿ ಗಂಟುಗಳಿಲ್ಲದಂತೆ ಕದಡಿ ಇಡಿ.
ಕಡ್ಲೆ ಹಿಟ್ಟನ್ನು ಕುದಿಸಿ,   ಗಳಗಳನೆ ಕುದಿದು,  ಉಕ್ಕಿ ಬಂದಾಗ ಗಂಜಿನೀರಿನಂತೆ ಬೆಂದ ಹಿಟ್ಟು ಲಭ್ಯ.  ಇದಕ್ಕೆ ಅರೆದಿಟ್ಟ ಕಾಯಿ ಅರಪ್ಪು ಕೂಡಿಸಿ,  ರುಚಿಗೆ ಉಪ್ಪು, ಒಂದು ಲೋಟ ಸಿಹಿಮಜ್ಜಿಗೆ ಎರೆದು ಕುದಿಸಿ.  ಪುಟ್ಟದಾಗಿ ಒಗ್ಗರಣೆಯೂ ಬೀಳಲಿ.  ತಿಳಿಸಾರಿನ ಸಾಂದ್ರತೆಯ ಈ ಪಳದ್ಯ ಊಟದೊಂದಿಗೆ ರಚಿಕರ,  ಸೂಪ್ ಥರ ಕುಡಿಯಲೂ ಆದೀತು.

ಇದೇ ಪಳದ್ಯವನ್ನು ಸೂಪ್ ಆಗಿ ಪರಿವರ್ತಿಸಬಹುದು,  ಅರೆದಿಟ್ಟ ಕಾಯಿ ಮಸಾಲೆ ಇದೆಯಲ್ಲ,  ಇದನ್ನು ಶುದ್ಧವಾದ ಬಟ್ಟೆಯಲ್ಲಿ ಅಥವಾ ಜಾಲರಿತಟ್ಟೆಯಲ್ಲಿ ಶೋಧಿಸಿ ಕಾಯಿಹಾಲನ್ನು ಮಾತ್ರ ಉಪಯೋಗಿಸಿ.

ಮಾಂಙನ್ನಾರೀ, ಬೆಡಗಿನ ವೈಯ್ಯಾರಿ
ಇನ್ನಷ್ಟು ವಿಸ್ತರಿತ ಬರಹಕ್ಕಾಗಿ,  ಓದಿರಿ.