Pages

Ads 468x60px

Saturday, 30 July 2016

ಚೀನೀ ಕಲಸುವರ್ಷಕ್ಕೊಮ್ಮೆ ಬರುವ ನವ ಋತುಮಾನದ ವಿಷು ಹಬ್ಬ ಬಂದಿದೆ.   ಸೌರಮಾನ ಯುಗಾದಿಯ ಈ ಪರ್ವದಿನದಂದು ಗೌಜಿ ಗದ್ದಲ ಇಲ್ಲದಿದ್ದರೂ, ಬೇಡವಾಗಿದ್ದರೂ ಹಬ್ಹದ ಆಚರಣೆ ಬಿಡುವಂತಿಲ್ಲ.  ಹಿಂದಿನಿಂದಲೂ ನಡೆದುಕೊಂಡು ಬಂದಿದ್ದಲ್ಲವೇ,  ಇಂದಿನ ಜೀವನಶೈಲಿಗನುಗುಣವಾಗಿ ಗ್ರಾಮದ ಮನೆಯಲ್ಲಿರುವ ನಾವಿಬ್ಬರು ಗಮ್ಮತ್ತಾಗಿಯೇ ಸ್ವಾಗತಿಸಿದೆವು.   ವಿಷುಕಣಿಯ ಅಲಂಕಾರಕ್ಕಾಗಿ ನಮ್ಮ ಮಣ್ಣಿನ ನೆಲದಲ್ಲಿ ಬೆಳೆದ ಫಲವಸ್ತುಗಳು,  ತರಕಾರಿಗಳು,  ಹೂವುಗಳು ಎಲ್ಲವೂ ನಮ್ಮ ಪರಿಸರದಲ್ಲೇ ಲಭ್ಯವಿದ್ದ ಕಾಲವೊಂದಿತ್ತು,  ದುಡ್ಡುದುಗ್ಗಾಣಿಯ ಅವಶ್ಯಕತೆಯೇ ಇಲ್ಲದ ಕಾಲ ಅದಾಗಿತ್ತು.   ಈಗ ಅದೇನಿದ್ದರೂ ಅಂಗಡಿಯಿಂದ ಕೊಂಡು ತರುವುದು, ಇಷ್ಟೇ ವ್ಯತ್ಯಾಸ.

ಮುಂಜಾನೆಗೆ ಬಾಳೆಲೆಯೊಳಗೆ ಇಡ್ಲಿ ಹಿಟ್ಟು ತುಂಬಿಸಿ,  ಅಟ್ಟಿನಳಗೆಯಲ್ಲಿ ಬೇಯಿಸಿದ ಉದ್ದಿನ ಕಡುಬು ಯಾ ನಮ್ಮೂರ ಪರಿಭಾಷೆಯಲ್ಲಿ ಹೇಳುವ  ' ಸೆಕೆಗೆರೆದದ್ದು.'     ಮಧ್ಯಾಹ್ನದೂಟಕ್ಕೆ ಗಂಧಸಾಲೆ ಅನ್ನ,  ಘಮಘಮಿಸುವ ತುಪ್ಪ, ತೊವ್ವೆ, ಸಂಡಿಗೆ ಹಪ್ಪಳ, ತೊಂಡೆ ಪಲ್ಯ,  ಎಳೆ ಗೇರುಬೀಜದ ಪಾಯಸ, ಮಿಡಿ ಉಪ್ಪಿನಕಾಯಿ,  ಗಟ್ಟಿ ಮೊಸರು ಜೊತೆಗೆ ನೀರುಮಜ್ಜಿಗೆ... ಇಂತಿಪ್ಪ ಭರ್ಜರಿ ಊಟದೊಂದಿಗೆ ಮಧ್ಯಾಹ್ನ ಸುಖನಿದ್ರೆ.

ದೇವರ ಮನೆಯಲ್ಲಿ ಬೆಳಗೆದ್ದೊಡನೆ ಫಲವಸ್ತುಗಳನ್ನು ಕಾಣಬೇಕು ಎಂಬ ಹಿರಿಯರ ಆಚಾರದಂತೆ ತರಕಾರಿಗಳನ್ನೂ,  ಹಣ್ಣುಗಳನ್ನೂ ಜೋಡಿಸಿಟ್ಟಿದ್ದೆ.   ಅವುಗಳಲ್ಲಿ ಒಂದು ಚೀನೀಕಾಯಿಯೂ ಇತ್ತು.  ಚೀನೀಕಾಯಿ ಅಂದ್ರೆ ಸಿಹಿಗುಂಬಳ ತಿಳಿಯಿತಲ್ಲ.   ಅಂಗಡಿಯಿಂದ ಕೊಂಡು ತಂದಿದ್ದು,  ಬೆಳೆದ ಚೀನೀಕಾಯಿ ಆಗಿದ್ದಿದ್ರೆ ದಾಸ್ತಾನು ಇಟ್ಟುಕೊಳ್ಳಬಹುದಾಗಿತ್ತು.  ಮನೆಯಲ್ಲಿ ಹತ್ತೂ ಹನ್ನೆರಡು ಮಂದಿ ಸೇರಿರುವ ಹೊತ್ತಿನ ಅಡುಗೆಗೆ ಉಪಯೋಗಿಸಬಹುದಾಗಿತ್ತು.   ಎಳೆಯ ಚೀನೀಕಾಯಿಯಿಂದ ಪದಾರ್ಥ ಮಾತ್ರವಲ್ಲದೆ ಮುಂಜಾನೆಯ ತಿಂಡಿಗೂ, ಬೇಕಿದ್ದರೆ ಸಿಹಿಭಕ್ಷ್ಯವನ್ನೂ ಮಾಡಿ ಸವಿಯಬಹುದಾಗಿದೆ, ಅಡುಗೆಯಲ್ಲಿ ನಾವೀನ್ಯತೆಯನ್ನೂ ತರಲವಕಾಶವಿದೆ.

ನನಗಂತೂ ನಿನ್ನೆಯ ಹಬ್ಬದ ಔತಣದೂಟ ಉಂಡು ಇಂದು ಸಿಕ್ಕಾಪಟ್ಟೆ ಆಲಸ್ಯ ಬಡಿದಿತ್ತು.  ಆದರೂ ಅಡುಗೆ ಮಾಡಲೇಬೇಕಾಗಿದೆ.  ಈ ಸಿಹಿಗುಂಬಳಕಾಯಿಯಿಂದ ಬೋಳುಹುಳಿ ಮಾಡಿಬಿಡೋಣ.

ತೀರಾ ಸರಳ ಹಾಗೂ ಸುಲಭವಾದ ಈ ವ್ಯಂಜನ ಹುಳಿಯನ್ನು ಬಯಸದು,  ತೊಗರಿಬೇಳೆಯಂತೂ ಬೇಡ್ವೇ ಬೇಡ.  ರುಚಿಗೆ ಉಪ್ಪು ಕೂಡಿ ತರಕಾರಿ ಹೋಳುಗಳನ್ನು ಬೇಯಿಸಿ.  ಒಂದೆರಡು ಹಸಿಮೆಣಸು ಸಿಗಿದು ಹಾಕುವುದು,  ಬೆಲ್ಲ ಹಾಕಬಹುದು.  ಬೆಳ್ಳುಳ್ಳಿ ,  ಕರಿಬೇವು ಕೂಡಿದ ಒಗ್ಗರಣೆ ಅತೀ ಅವಶ್ಯ,  ಹ್ಞಾ... ಚಿಟಿಕೆ ಅರಸಿಣ ಮರೆಯದಿರಿ.

                                                           ಚೀನೀ ಕಲಸು ( ಸಿಹಿಗುಂಬಳ ಬೆಂದಿ )

ಘನಗಾತ್ರದ ಚೀನೀಕಾಯಿಯನ್ನು ಒಂದು ದಿನದ ಅಡುಗೆಯಲ್ಲಿ ಮುಗಿಸಲು ಸಾಧ್ಯವಾಗದು,  ಈಗ ಕೃಷಿಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಂದಾಗಿ ಪುಟಾಣಿ ಗಾತ್ರದ ಚೀನೀಕಾಯಿಗಳೂ ಬಂದಿವೆ,  ಏನಿದ್ದರೂ ನಮ್ಮ ಪರಂಪರೆಯಿಂದ ಬಂದಿರುವ ಚೀನಿಯ ರುಚಿ ಇದಕ್ಕಿಲ್ಲ.   ಇರಲಿ,  ಈ ದಿನ ಮತ್ತೊಂದು ರೀತಿಯಲ್ಲಿ ಚೀನೀಕಾಯಿ ಅಡುಗೆ ಸಿದ್ಧಪಡಿಸೋಣ.

ತರಕಾರಿ ಹೋಳುಗಳನ್ನು ಸಿದ್ಧಪಡಿಸಿದ್ದಾಯಿತು.  ಧಾರಾಳವಾಗಿ ತೆಂಗಿನತುರಿ ಅವಶ್ಯವಿದೆ.
ಚೀನೀಕಾಯಿ ಹೋಳುಗಳನ್ನು ಉಪ್ಪು ಕೂಡಿ ಬೇಯಿಸಿ.  ಬೆಲ್ಲ ಹಾಗೂ ಹಸಿಮೆಣಸು ಹಾಕಿರಿ,  ಹುಣಿಸೆಹಣ್ಣು ಬೇಡ.
ಹಸಿ ತೆಂಗಿನಕಾಯಿ ತುರಿದುಕೊಂಡು ಅರೆಯಿರಿ,  ನುಣ್ಣಗೆ ಆಗಬೇಕೆಂದೇನೂ ಇಲ್ಲ.   ತೆಂಗಿನ ಅರಪ್ಪು ತೆಗೆಯುವ ಮೊದಲು ಒಂದು ಚಮಚ ಜೀರಿಗೆ ಹಾಗೂ ಚಿಟಿಕೆ ಅರಸಿಣ ಹಾಕಿಕೊಂಡು ಇನ್ನೊಂದು ಸುತ್ತು ಅರೆದು ತೆಗೆಯಿರಿ.   ಬೆಂದ ತರಕಾರಿಗೆ ಈ ತೆಂಗಿನ ಅರಪ್ಪನ್ನು ಕೂಡಿಸಿ,  ಕುದಿಸಿರಿ.  ಗಳಗಳನೆ ಕುದಿಯಬಾರದು.   ನೀರು ಆದಷ್ಟು ಕಡಿಮೆ ಹಾಕಿರಿ,  ಸಾರಿನಂತಾಗಬಾರದು.   ಒಂದು ಕುದಿ ಬಂದೊಡನೆ ಇಳಿಸಿ.  ವಾಸ್ತವವಾಗಿ ಇದನ್ನು ಕುದಿಸಬೇಕಿಲ್ಲ,  ಆದರೆ ತೆಂಗಿನ ಮಸಾಲೆ ಹಾಕಿದ ಪದಾರ್ಥ ರಾತ್ರಿ ತನಕ ಕೆಡದಿರಬೇಕಾದರೆ ಕುದಿಸುವ ಅಗತ್ಯವಿದೆ.  ಕರಿಬೇವಿನ ಒಗ್ಗರಣೆಯ ಅಲಂಕರಣ ಇರಲಿ.  ಈ ಪದಾರ್ಥ ನಮ್ಮಲ್ಲಿ  ' ಕಲಸು ' ಎಂಬ ಹೆಸರನ್ನು ಹೊಂದಿದೆ.  ಇಂದಿನ ಕಾಲಮಾನಕ್ಕೆ ತಕ್ಕ ಹೊಸ ಹೆಸರು ಇಟ್ಕೊಳ್ಳಿ.   ಪಂಪ್ಕಿನ್ ಕೋಕನಟ್ ಗ್ರೇವಿ ಕರಿ...  ಈ ಥರ.

                                                              ಮುಂಜಾನೆಯ ಸವಿರುಚಿ

ತರಕಾರೀ ಸಂತೆಯಿಂದ ತಂದ ಚೀನೀಕಾಯಿ, ಘನಗಾತ್ರದ್ದಾಗಿರಬೇಕು...  ನಾಲ್ಕನೇ ಒಂದು ಹೋಳು ಮನೆಗೆ ಬಂದಿತ್ತು.  ಇದನ್ನು ಇಟ್ಟುಕೊಳ್ಳುವಂತಿಲ್ಲ.
" ಸಿಹಿಗುಂಬಳದ ಕಡುಬು ಮಾಡೋದು ಹೇಗೆ? "   ಒಬ್ಬಾಕೆ ಫೇಸ್ ಬುಕ್ ಸ್ನೇಹಿತೆ ಕೇಳಿದ್ದು,  ಪ್ರಶ್ನೆಗೆ ಉತ್ತರವಾಗಿ ಮಾಡುವ ವಿಧಾನವನ್ನು ಬರೆದೇ ಬಿಡೋಣ.

ಮೊದಲಾಗಿ ಸಿಪ್ಪೆ ತೆಗೆದು,  ಬೀಜಗಳನ್ನು ಎಸೆದು...  ಹ್ಞಾ,   " ಬೀಜ ಎಸೆಯಬೇಡ.. " ಅನ್ನುತ್ತಾ ಗೌರತ್ತೆ ಓಡಿ ಬಂದರು.   ಗೌರತ್ತೆಯೇನು ಬೀಜ ಬಿತ್ತಿ ಮೊಳಕೆಯೊಡೆದು,  ಬಳ್ಳಿ ಹಬ್ಬಿಸಿ ಬೆಳೆ ತೆಗೆಯುವವರೆಂದು ತಿಳಿಯದಿರಿ.   ಬೀಜಗಳನ್ನು ಪರಪರಾಂತ ಹುರಿದು ಆಗಾಗ ಬಾಯಿಗೆ ಹಾಕಿಕೊಳ್ಳುವ ದೂರಾಲೋಚನೆ ಅವರದು.   ತುಸು ಉಪ್ಪು,  ಖಾರದಪುಡಿ ಹಾಕಿದ್ರಂತೂ ಕೇಳೋದೇ ಬೇಡ.  ಸಂಜೆಯ ಚಹಾದೊಂದಿಗೆ ಕುರುಕಲು ತಿಂಡಿಯೂ ಆಯ್ತು.

ಚೀನೀಕಾಯನ್ನು ತುರಿದು ಇಟ್ಟಾಯಿತು.  ನುಣುಪಾದ ಅಕ್ಕಿಹುಡಿ ಇಲ್ಲಿ ಬೇಕಾಗಿದೆ.  ಅಕ್ಕಿತರಿ,  ಚಿರೋಟಿರವೆ ಇಂತಹುದೆಲ್ಲ ಆಗದು.  ಮಾರುಕಟ್ಟೆಯಲ್ಲಿ ಎಲ್ಲವೂ ಸಿಗುವಾಗ ಯಾತರ ಚಿಂತೆ?   ಎರಡು ಪಾವು ಅಕ್ಕಿಹುಡಿ ಅಳೆದು ಇರಿಸಿ.   ಚೀನೀಕಾಯ್ ತುರಿಗೆ ಬೆರೆಸಿ.
ರುಚಿಗೆ ಉಪ್ಪು,  ಸಿಹಿಗೆ ಸಕ್ಕರೆ ಅಥವಾ ಬೆಲ್ಲದ ಹುಡಿ ಬೆರೆಸಿ.
ಹಸಿ ತೆಂಗಿನತುರಿ ಸ್ವಲ್ಪ ಹಾಕಬಹುದಾಗಿದೆ.
ಕೊತ್ತಂಬರಿ ಸೊಪ್ಪು ಚಿಕ್ಕದಾಗಿ ಹಚ್ಚಿಕೊಂಡು ಹಾಕಲಡ್ಡಿಯಿಲ್ಲ.
ನೀರು ಕೂಡಿಸುವಂತಿಲ್ಲ.
ಎರಡು ಗಂಟೆ ಮುಚ್ಚಿಟ್ಟಿರಿ.  
ಈ ಬಿಡುವಿನ ಹೊತ್ತಿನಲ್ಲಿ ನಾನಂತೂ ತೋಟದಿಂದ ಬಾಳೆಲೆ ತಂದು ಬಾಡಿಸಿ ಇಟ್ಕೊಂಡೆ,   ಬಾಳೆಲೆಯ ರಗಳೆ ಬೇಡದಿದ್ದರೆ ಇಡ್ಲಿ ತಟ್ಟೆ ಇದೆ!
ಅಟ್ಟಿನಳಗೆ ಅಥವಾ ಸ್ಟೀಂ ಕುಕ್ಕರ್ ಒಲೆಗೇರಲಿ,  ನೀರು ಕುದಿಯಲಿ.
ಬಾಳೆಲೆಯಲ್ಲಿ ಇಡ್ಲಿಗಾತ್ರದ ಹಿಟ್ಟನ್ನು ತುಂಬಿಸಿ,  ಅಚ್ಚುಕಟ್ಟಾಗಿ ಹಿಟ್ಟು ಹೊರ ಚೆಲ್ಲದಂತೆ ಮಡಚಿ ನೀರು ಕುದಿಯುತ್ತಿರುವ  ಪಾತ್ರೆಯಲ್ಲಿ ವೃತ್ತಾಕಾರವಾಗಿ ಜೋಡಿಸಿಟ್ಟು,  ಮುಚ್ಚಿ ಹದಿನೈದು ನಿಮಿಷ ಬೇಯಿಸಿ.
ತೆಂಗಿನಕಾಯಿ ಚಟ್ಣಿ,  ಮೊಸರು ಕೂಡಿ ಬಿಸಿ ಇರುವಾಗಲೇ ಸವಿಯಿರಿ.  ಇದು ನಮ್ಮ ಇಂದಿನ ಮುಂಜಾನೆಯ ಸವಿರುಚಿ.

ಸಿಹಿಭಕ್ಷ್ಯ ಅಂದ್ರೇ ಚೀನೀಕಾಯಿ ಹಲ್ವಾ ಮಾಡ್ಬೇಕೂಂತ ಇದ್ದೆ,  ತರಕಾರಿ ಸಂತೆಯಿಂದ ಈ ಘನ ತರಕಾರಿ ಬೇಕೂ ಅಂದ ಕೂಡಲೇ ಬರುವಂತಹುದಲ್ಲ.   ಮನೆಯಲ್ಲಿ ಹತ್ತಾರು ಜನ ಸೇರಿರಬೇಕು,  ಔತಣದೂಟದ ವ್ಯವಸ್ಥೆಯಾಗಬೇಕು,   ಬಾಣಸಿಗರ ಅಡುಗೇ ದರ್ಬಾರಿನಲ್ಲಿ ಚೀನೀಕಾಯಿ ಒಂದು ತುಂಡಾದರೂ ಉಳಿಕೆಯಾಗಿ,  ನನಗೂ ಕಿಂಚಿತ್ ಬಿಡುವಿನ ವೇಳೆ ಸಿಗಬೇಕು,  ಆಗ ಮಾಡಿ ತಿನ್ನೋಣ.

Saturday, 2 July 2016

ಬೇಸಿಗೆಯ ಧಗೆ

ಇಂದೂ ಒಂದು ಔತಣಕೂಟಕ್ಕೆ ಹೋಗುವುದಿತ್ತು.   ಮೊನ್ನೆಯೂ ಹೋಗಲಿದ್ದಿತು,  ಆದರೆ ಹೋಗಿರಲಿಲ್ಲ.   ದಿನವೂ ಪಾಯಸ ಹೋಳಿಗೆ ಲಡ್ಡುಗಳ ಔತಣದೂಟಕ್ಕೆ ಹೋಗುವುದೆಂದರೇನು?,  ದೇಹಾಲಸ್ಯವಾದೀತು.

ಇಂದಿನದು ತಪ್ಪಿಸುವಂತಿಲ್ಲ,  ಐಪ್ಯಾಡ್ ನಲ್ಲಿ ರಿಮೈಂಡರ್ ಆ್ಯಪ್ಸ್ ಇರುವಂತೆ ಸಂಬಂಧಿತರು ಮರೆಯದ ಹಾಗೆ ಎರಡು ದಿನ ಮುಂಚಿತವಾಗಿ ಫೋನ್ ಕಾಲ್ ಮಾಡಿ  " ಕಾಗದ ತಲುಪಿದೆಯಾ..."  ಎಂದೂ ವಿಚಾರಿಸಿದ್ದರು.

" ಇವತ್ತು ಬಾಯಾರು ದೇವಸ್ಥಾನದಲ್ಲಿಯೂ ಒಂದು ಉಪನಯನ ಇದೆ,  ಅಲ್ಲಿಗೆ ಹಾಜರಿ ಹಾಕಿ ಬರ್ತೇನೆ,  ನೀನು ಹೊರಟು ಕುಳಿತಿರು.."  ನಮ್ಮೆಜಮಾನ್ರು ಅಂದಿದ್ದು.

ನಾವು ಹೋಗಬೇಕಾಗಿದ್ದ ವೇಣೂರು,  ದೀರ್ಘಪ್ರಯಾಣವಾಗಿದ್ದರಿಂದ ಬೇಗನೇ ಎದ್ದು,  ಲಘು ಉಪಹಾರವಾದ ಸಜ್ಜಿಗೆ ಉಪ್ಪಿಟ್ಟು ಮಾಡಿಟ್ಟು,  ಜರತಾರೀ ಸೀರೆಯುಟ್ಟು ಸಿದ್ಧಳಾಗಿದ್ದೂ ಆಯ್ತು.

ಕಾಫಿ ಹೀರುತ್ತ,   ತಿಂಡಿ ತಿನ್ನುತ್ತ   " ನಿನ್ನದು ಆಗ್ಲೇ ಹೊರಟಾಯ್ತಾ,  ಹಾಗಿದ್ರೆ ದೇವಸ್ಥಾನದ ಉಪನಯನಕ್ಕೂ ಒಟ್ಟಿಗೆ ಹೋಗ್ಬಿಟ್ಟು ಬರೋಣ. "  ಅಂದಾಗ,  ವ್ಯಾನಿಟಿ ಬ್ಯಾಗ್ ಹೆಗಲಿಗೇರಿಸಿ,  ಚಪ್ಪಲಿ ಎಲ್ಲಿದೆಯೆಂದು ಹುಡುಕಾಡಿ ಧರಿಸಿದ್ದೂ ಆಯ್ತು.

ಬೆಳಗಿನ ಜಾವ ಅಲ್ವೇ,  ದೇವಸ್ಥಾನದ ಸಮಾರಂಭ ಜನಸಂದಣಿ ಏನೂ ಇಲ್ಲದೆ ಬಿಕೋ ಅನ್ನುತ್ತಿತ್ತು.   

ಒಂದು ಕಡೆ ಕಾಫಿ ತಿಂಡಿ ವ್ಯವಸ್ಥೆ,  ಅಚ್ಚುಕಟ್ಟಾಗಿ ಇಡ್ಲಿ ವಡೆ, ಸಾಂಬಾರ್ ಚಟ್ಣಿ,  ಮೊಸರು ಉಪ್ಪಿನಕಾಯಿಗಳ ಸಂಗಮ,  ಚಹಾ ಕಾಫಿಗಳ ಮಿಲನ,  ಶಿರಾ ಎಂಬ ಸಿಹಿ!  ಆಹಹ...

ಸುಮ್ನೇ ಮನೆಯಲ್ಲಿ ತಿಂಡಿ ಮಾಡಿದ್ದು... ಅನ್ನಿಸದಿರದೇ,  ಆದರೂ ಹೇಳುವಂತಿಲ್ಲ,  ಈ ಭರ್ಜರಿ ಉಪಹಾರ ತಪ್ಪಿಸುವಂತಿಲ್ಲ.   ಇನ್ನೊಂದು ದೂರ ಪ್ರಯಾಣದ ಔತಣಕೂಟಕ್ಕೆ ಹೋಗಲಿದೆಯೆಂದು ಹೇಳಿ ಅಲ್ಲಿಂದ ಹೊರಟೆವು.   ವಿಟ್ಲ,  ಪುತ್ತೂರು, ಉಪ್ಪಿನಂಗಡಿ, ಗುರುವಾಯನಕೆರೆ ರಸ್ತೆಯಲ್ಲಿ ನಾವು ವೇಣೂರು ತಲಪಿದಾಗ ಮಧ್ಯಾಹ್ನ ಗಂಟೆ ಹನ್ನೆರಡಾಗಿತ್ತು.

ಮಟಮಟ ಬಿಸಿಲು,  ಶಾಮಿಯಾನ ಹಾಕಿದ್ದರು,  ಅದರೊಳಗೆ ಮತ್ತೂ ಸೆಕೆ.   ಉಪನಯನದ ಧಾರ್ಮಿಕ ವಿಧಿಗಳೆಲ್ಲ ಮುಗಿದಿವೆ,  ವಟುವಿಗೆ ಆರತಿಯೆತ್ತುವುದೊಂದೇ ಬಾಕಿ.

ಒಂದು ಆಸರಿಗೆ ಕೇಳೋರು ಇಲ್ವೇ...,  ಎಂದು ಚಡಪಡಿಸುತ್ತ ಕುಳಿತಿದ್ದಾಗ ಉಷಕ್ಕ ಓಡಿ ಬಂದು,  " ಆಸರಿಗೆ ವ್ಯವಸ್ಥೆ ಎಲ್ಲ ಆ ಕಡೆ ಇದೆ,  ಬೊಂಡ ನೀರಿನ ಶರಬತ್ತು,  ಕಬ್ಬಿನಹಾಲು... ಯಾವ್ದು ಬೇಕೋ ಅದನ್ನು ಕುಡೀ... "

ಬಿಸಿಲಿಗೆ ಎಳನೀರು ಅತ್ಯುತ್ತಮ ಅಂದ್ಬಿಟ್ಟು ಮೊದಲು ಬೊಂಡ ಜ್ಯೂಸ್ ಕುಡಿದಾಯ್ತು.   ನಿಂಬೆ ಹಣ್ಣು ಹಾಕಿದಂತಿತ್ತು,  ಬೊಂಡದ ತಿರುಳನ್ನೂ ಅರೆದು ಸೇರಿಸಿದ ಹಾಗೂ ಇದ್ದಿತು,  ಅಂತೂ ಚೆನ್ನಾಗಿಯೇ ಇತ್ತು,  ಸಕ್ಕರೆಯನ್ನೂ ಹಾಕಿರಲೇಬೇಕು,  ಐಸ್ ಕೂಡಾ ಬಿದ್ದಿತ್ತು.

ಇನ್ನು ಕಬ್ಬಿನಹಾಲಿನ ಸರದಿ,  ಕಬ್ಬಿನ ರಸ ತೆಗೆಯುವ ಗಾಣವೇ ಬಂದಿತ್ತು.   ಬೇಕೆನಿಸಿದಾಗ ಕಬ್ಬಿನಹಾಲು ಕುಡಿಯುವ ಯೋಗ.   ಸುಧರಿಕೆಯವನು ಲೋಟಗಳನ್ನು ಅಚ್ಚುಕಟ್ಟಾಗಿ ತಟ್ಟೆಯಲ್ಲಿಡುತ್ತಿದ್ದಂತೆ,  ಕಬ್ಬಿನಹಾಲು ಲೋಟಗಳಿಗೆ ತುಂಬುತ್ತಿದ್ದಂತೆ ನನ್ನ ಐಫೋನ್6 ಕ್ಲಿಕ್ಕೆಂದಿತು!