Pages

Ads 468x60px

Monday, 12 August 2013

ತೆಂಗಿನ ಕಾಯಿ ಹಾಲು
ಮನೆಯ ಹಿತ್ತಿಲಲ್ಲಿ ಅಂಗೈ ಅಗಲ ಜಾಗ ಇದ್ದರೂ ಸಾಕು,  ಒಂದು ತೆಂಗಿನಸಸಿ ನೆಟ್ಟುಕೊಳ್ಳದವರಿಲ್ಲ.   ಅಗತ್ಯ ಬಿದ್ದಾಗ ಎಳನೀರು ಕುಡಿಯುವುದಕ್ಕಾದರೂ ಇರಲಿ ಎಂಬ ಭಾವ,  ವಾಸ್ತವವಾಗಿ ತೆಂಗಿನ ಪ್ರತಿಯೊಂದು ಭಾಗವೂ ಮನೆಬಳಕೆಗೆ ಉಪಯುಕ್ತ.   ಗರಿಗಳಿಂದ ಮಡಲ ತಟ್ಟಿ ಮಾಡಿಕೊಂಡು ಬೇಸಿಗೆಗೆ ನೆರಳಿನ ಚಪ್ಪರ ಹಾಕಿಕೊಳ್ಳಲೂ,  ಗರಿಗಳ ಕಡ್ಡಿ ಎಳೆದು ಕಸಪೊರಕೆ ಮಾಡಿಕೊಳ್ಳಲೂ,  ಕಾಯಿಸಿಪ್ಪೆ, ಗೆರಟೆ,  ಕೊತ್ತಳಿಗೆ,  ಮಡಲುಗಳನ್ನು ನೀರು ಕಾಯಿಸಲು ಉರುವಲಾಗಿಯೂ ಬಳಕೆ ಸಾಮಾನ್ಯ.   ಧೀರ್ಘಕಾಲ ಬದುಕುವ ತೆಂಗಿನಮರ,  ಸತ್ತ ನಂತರವೂ ಬೆಲೆಬಾಳುವಂತಹುದು.  ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ತೆಂಗಿನ ಕಾಂಡ ಗೃಹನಿರ್ಮಾಣಕ್ಕೆ ಉಪಯುಕ್ತ ಸಾಧನ.   ತೆಂಗಿನಮರದ ಅಂಗೋಪಾಂಗಗಳಿಗೆ ನಿಶ್ಚಿತವಾದ ಹೆಸರುಗಳಿವೆ.  ಅದೇ ಭಾರತೀಯ ಭಾಷೆಗಳ ಹಿರಿಮೆ.   ಇದನ್ನೇ ಆಂಗ್ಲ ಭಾಷೆಗೆ ಅನುವಾದಿಸಿ ಅಂದಿರಾ,  ಸಮರ್ಪಕ ಶಬ್ದಗಳೇ ಸಿಗದು.   ಎಳೆಯ ಹೀಚುಕಾಯಿಗೆ ಚೆಂಡುಪುಲ್ಲೆ ಅಂತೀವಿ.   ತುಸು ಬಲಿಯಲಾರಂಭಿಸಿದಾಗ  ಎಳನೀರು,  ಬೊಂಡ.   ಅದಕ್ಕಿಂತಲೂ ಬಲಿತದ್ದು ಬನ್ನಂಗಾಯಿ,  ಕೆಲವು ಕಾಯಿಗಳನ್ನು ಸುಲಿದಾಗ ಸಿಪ್ಪೆ ಹಾಗೂ ಖಾಲಿ ಕರಟ ಇರುವುದೂ ಇದೆ,  ಅಂಥಾದ್ದು ಬೋಡುಗಾಯಿ.   ಮುಂದಿನದು ಹಸಿ ತೆಂಗಿನಕಾಯಿ.   ಒಣಗಿತೋ ಗೋಟುಕಾಯಿ.   ಒಳಗಿನ ತಿರುಳು ಈಗ ಕೊಬ್ಬರಿ ಆಗಿ ಬಿಡುತ್ತದೆ.  ಇದೇ ಕೊಬ್ಬರಿಯಿಂದ ತೆಂಗಿನೆಣ್ಣೆ ತೆಗೆಯಿರಿ,  ಉಳಿದದ್ದು ತೆಂಗಿನ ಹಿಂಡಿ,  ಉತ್ತಮ ಪಶು ಆಹಾರ.   ಕರೆಯುವ ಹಸುಗಳಿಗೆ ದಿನವೂ ತೆಂಗಿನ ಹಿಂಡಿ ಹಾಕಿದ್ದೇ ಆದಲ್ಲಿ ಅಧಿಕ ಹಾಲು,  ಹಾಲಿನ ಗುಣಮಟ್ಟವೂ ಶ್ರೇಷ್ಠ,  ಮುದ್ದೆ ಮುದ್ದೆ ಬೆಣ್ಣೆ ದೊರಕೀತು.

ಹಸಿ ತೆಂಗಿನಕಾಯಿ ಒಡೆದು,  ಕಾಯಿ ತುರಿದು,  ಅವಶ್ಯವಿದ್ದಷ್ಟು ನೀರು ಸೇರಿಸಿ ಅರೆದು,  ಶುಭ್ರವಾದ ಜಾಲರಿಯಂತಹ ಬಟ್ಟೆಯಲ್ಲಿ ಶೋಧಿಸಿದಾಗ ಸಿಗುವ ಹಾಲಿನಂತಹ ದ್ರವವೇ ಕಾಯಿಹಾಲು.   ಬಟ್ಟೆಯಲ್ಲಿ ಹಿಂಡಿ ಉಳಿದ ಕಾಯಿ ಚರಟ ಜಾನುವಾರುಗಳಿಗೆ ಉತ್ತಮ ಆಹಾರ.

" ಜಾನುವಾರುಗಳಿಲ್ಲ ಏನು ಮಾಡೋಣ ? "

ಒಣಗಿಸಿಟ್ಟುಕೊಳ್ಳಿ,  ಮೈಕ್ರೋವೇವ್ ಸಹಾಯ ಪಡೆಯಿರಿ.  ಕೆಡುವುದಿಲ್ಲ.   ಪಲ್ಯ,  ಸಲಾಡ್,  ಕೊಸಂಬರಿ ಇತ್ಯಾದಿಗಳಿಗೆ ಬಳಸಿ.

ಕಾಯಿಹಾಲು ಹಿಂಡಿದ ಬಟ್ಟೆಯನ್ನು ಚೆನ್ನಾಗಿ ತೊಳೆದು ಬಿಸಿಲಿಗೆ ಒಣಗಿಸಿ ಇಟ್ಟುಕೊಳ್ಳಬೇಕಾಗುತ್ತದೆ.    ಈಗ ಉಪಯೋಗಿಸಿ ಎಸೆಯುವಂಥ ಬಟ್ಟೆಗಳೂ ಬಂದಿವೆ,  ಚಿಂತೆಯಿಲ್ಲ ಬಿಡಿ.

ತೆಂಗಿನಕಾಯಿ ಹಾಲಿನ ಉಪಯುಕತ್ತೆಯ ಬಗ್ಗೆ ಮೊದಲು ತಿಳಿದುಕೊಳ್ಳೋಣ.   ತೆಂಗಿನಕಾಯಿ ತುರಿ ವಿಶೇಷವಾಗಿ ನಾರು ಪದಾರ್ಥವನ್ನು ಹೊಂದಿರುವಂಥದ್ದು.   ಜೀರ್ಣಾಂಗಗಳಿಂದ ತ್ಯಾಜ್ಯವನ್ನು ಹೊರ ತಳ್ಳಲು ನಾರು ಅತ್ಯಾವಶ್ಯಕ.

ತೆಂಗಿನಕಾಯಿ ಹಾಲು ಖನಿಜಾಂಶಗಳಾದ ಕಾಪರ್, ಪೊಟ್ಯಾಷಿಯಂ,  ಫಾಸ್ಫರಸ್,  ಕ್ಯಾಲ್ಸಿಯಂ,  ಕಬ್ಬಿಣ,  ಸೆಲೆನಿಯಂ,  ಝಿಂಕ್,  ಮ್ಯಾಂಗನೀಸ್ ಮತ್ತು ಮೆಗ್ನೇಷಿಯಂಗಳ ಅತ್ಯುತ್ತಮ ಮೂಲವಾಗಿದೆ.   ಇದಲ್ಲದೆ ವಿಟಮಿನ್ ಸಿ ಹಾಗೂ ನಾರುಪದಾರ್ಥವೂ ಸೇರಿವೆ.

ದೇಹಕ್ಕೆ  ಹಿತವಾದ ಕಲ್ಪವೃಕ್ಷವೆನಿಸಿದ ತೆಂಗಿನಮರ ಸಸ್ಯಶಾಸ್ತ್ರೀಯವಾಗಿ Cocos nucifera ಎನಿಸಿಕೊಂಡಿದೆ.

ರಕ್ತದಲ್ಲಿನ ಸಕ್ಕರೆಯ ನಿಯಂತ್ರಣ  -  ಮ್ಯಾಂಗನೀಸ್
ರಕ್ತನಾಳಗಳಿಗೆ ಸ್ಥಿತಿಸ್ಥಾಪಕತ್ವ ಗುಣ ನೀಡುವುದಲ್ಲದೆ ಚರ್ಮದ ಕಾಂತಿವರ್ಧಕ  -  ಕಾಪರ್
ಎಲುಬುಗಳಿಗೆ ದೃಢತ್ವ  -  ಫಾಸ್ಫರಸ್
ರಕ್ತಹೀನತೆಗೆ ತಡೆ  -  ಕಬ್ಬಿಣ
ಮಾಂಸಖಂಡ ಹಾಗೂ ನರನಾಡಿಗಳಿಗೆ ಸಡಿಲಿಕೆಯ ಸುಖ  -  ಮೆಗ್ನೇಷಿಯಂ
ತೂಕ ನಿಯಂತ್ರಣ  -  ನಾರು
ಗಂಟುಗಳ ಉರಿಯೂತಕ್ಕೆ ನಿಯಂತ್ರಣ  -  ಸೆಲೆನಿಯಂ
ಹೆಚ್ಚಿದ ರಕ್ತದೊತ್ತಡವನ್ನು ಕಡಿಮೆಗೊಳಿಸುವ ಶಕ್ತಿ ಪೊಟ್ಯಾಷಿಯಂನಲ್ಲಿದೆ.
ರೋಗ ನಿರೋಧಕ ಶಕ್ತಿಗೆ ವಿಟಮಿನ್ ಸಿಯ ಬೆಂಬಲ.   ವಿಟಮಿನ್ ಸಿ ರಕ್ತನಾಳಗಳನ್ನು ಒತ್ತಡಮುಕ್ತಗೊಳಿಸುವಲ್ಲಿ ಸಹಕಾರಿ.
ಪುರುಷರಲ್ಲಿ ಜನನೇಂದ್ರಿಯಕ್ಕೆ ಸಂಬಂಧಪಟ್ಟ ಗ್ರಂಥಿಯ ಆರೋಗ್ಯ ರಕ್ಷಕ  -  ಝಿಂಕ್

ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ತೆಂಗಿನಕಾಯಿಹಾಲನ್ನು ಬಳಸಿ ಮಾಡಬಹುದಾದ  ತಿನಿಸುಗಳು ಬೇಕಾದಷ್ಟಿವೆ.   ಹಬ್ಬ ಹರಿದಿನಗಳಂದು ಮಾಡುವಂತಹ ಹೆಸರು ಬೇಳೆ ಪಾಯಸ ಮಾಡಿಕೊಳ್ಳೋಣ.
ಒಂದು ಕಪ್ ಹೆಸರು ಬೇಳೆ
ಅರ್ಧ ಕಪ್ ಸಬ್ಬಕ್ಕಿ
ಮೂರು ಅಚ್ಚು ಬೆಲ್ಲ

ಹೆಸರು ಬೇಳೆ ಕೆಂಪಗೆ ಹುರಿಯಿರಿ.   ಇದನ್ನು ಶುಕ್ರವಾರ ಹಾಗೂ ಮಂಗಳವಾರಗಳಂದು ಹುರಿಯುವಂತಿಲ್ಲ.   ಯಾಕೆಂದು ನಾನೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ.   ತಂದಿಟ್ಟ ಬೇಳೆಯನ್ನು ಹುರಿದು ಡಬ್ಬದಲ್ಲಿ ತುಂಬಿಸಿ ಇಟ್ಟಲ್ಲಿ ಹಾಳಾಗುವುದಿಲ್ಲ,  ಬೇಕಿದ್ದಾಗ ಬೇಕಾದಷ್ಟೇ ತೆಗೆದು ಬಳಸಿದರಾಯಿತು.   ಸಬ್ಬಕ್ಕಿಯನ್ನೂ ಹುರಿಯಿರಿ.

ಕಾಯಿಹಾಲು ಮಾಡಿಟ್ಟಾಯ್ತೇ,  ದಪ್ಪ ಹಾಲು ಪ್ರತ್ಯೇಕ ತೆಗೆದಿರಿಸಿ.   ನೀರು ಕಾಯಿಹಾಲಿನಲ್ಲಿ ಹೆಸರು ಬೇಳೆ ಹಾಗೂ ಸಬ್ಬಕ್ಕಿಗಳನ್ನು ಮೆತ್ತಗೆ ಬೇಯಿಸಿ.
ಬೆಂದ ನಂತರ ಬೆಲ್ಲ ಹುಡಿ ಮಾಡಿ ಹಾಕಿ,  ಕರಗಲು ಬಿಡಿ.  ತಳ ಹಿಡಿಯದಂತೆ ಜಾಗ್ರತೆ ವಹಿಸುವ ಅವಶ್ಯಕತೆ ಇದೆ.    ಬೆಲ್ಲ ಕರಗಿ ಕುದಿಯಲಾರಂಭಿಸಿದಾಗ ದಪ್ಪ ಕಾಯಿಹಾಲು ಎರೆದು ಇನ್ನೊಂದು ಕುದಿ ಬರುವ ತನಕ ಒಲೆಯ ಮೇಲಿಟ್ಟು ಇಳಿಸಿ.
 ಹುರಿದ ಹೆಸರುಬೇಳೆ ಸುವಾಸನಾಯುಕ್ತವಾಗಿರುವುದರಿಂದ ಏಲಕ್ಕಿ ಹಾಕಬೇಕೆಂದೇನೂ ಇಲ್ಲ. 


ಗಸಗಸೆ ಪಾಯಸ

ಅರ್ಧ ಕಪ್ ಚಿರೋಟಿ ರವೆ
ಮೂರು ಟೀ ಸ್ಪೂನ್ ಗಸಗಸೆ
ಮೂರು ಚಮಚ ಕಾಯಿತುರಿ
ಮೂರು ಕಪ್ ಸಕ್ಕರೆ

ಚಿರೋಟಿ ರವೆಯನ್ನು ಹುರಿಯಿರಿ.
ಗಸಗಸೆಯನ್ನೂ ಪ್ರತ್ಯೇಕವಾಗಿ ಹುರಿಯಿರಿ.

ಹುರಿದ ಗಸಗಸೆಯನ್ನು ಮೂರು ಚಮಚ ಕಾಯಿತುರಿಯೊಂದಿಗೆ ಅರೆಯಿರಿ.
ನೀರು ಕಾಯಿಹಾಲು ಎರೆದು ಚಿರೋಟಿ ರವೆ ಹಾಗೂ ಅರೆದ ಗಸಗಸೆಯನ್ನು ಬೇಯಿಸಿ.
ಬೆಂದು ಮೆತ್ತಗಾಯಿತೇ,  ಸಕ್ಕರೆ ಹಾಕಿ.
ಸಕ್ಕರೆ ಕರಗಿ ಕುದಿಯಿತೇ,  ದಪ್ಪ ಕಾಯಿಹಾಲು ಎರೆದು ಇನ್ನೊಂದು ಕುದಿ ಬರುವ ತನಕ ಒಲೆಯ ಮೇಲಿಟ್ಟು ಇಳಿಸಿ.
ಇದಕ್ಕೂ ಏಲಕ್ಕಿ ಬೇಡ.   ಗಸಗಸೆಗೆ ತನ್ನದೇ ವಿಶಿಷ್ಟ ಸುವಾಸನೆ ಇದೆ.

ಸಿಹಿ ಮಾಡುವುದನ್ನು ನೋಡಿಕೊಂಡಾಯ್ತು,  ಈಗ ಅನ್ನದೊಂದಿಗೆ ಕೂಟು ಮಾಡಿಕೊಳ್ಳೋಣ.
ಕೇರಳದ ಸಾಂಪ್ರದಾಯಿಕ ವ್ಯಂಜನ ವೋಳನ್,  ಅನ್ನದೊಂದಿಗೆ ಮಾತ್ರವಲ್ಲದೆ ಚಪಾತೀ, ಪೂರೀ, ನಾನ್ ಇತ್ಯಾದಿಗಳೊಂದಿಗೆ ಬಳಸಬಹುದು.

ಒಂದು ಕಪ್ ಅಲಸಂಡೆ ಕಾಳು
ಅವಶ್ಯವಿದ್ದಷ್ಟು ಕುಂಬಳಕಾಯಿ ಹೋಳು
2 - 3 ಸಿಗಿದ ಹಸಿಮೆಣಸು
ರುಚಿಗೆ ಉಪ್ಪು
2 ಕಪ್ ದಪ್ಪ ಕಾಯಿಹಾಲು

ಒಗ್ಗರಣೆ ಸಾಮಗ್ರಿಗಳು:  
4 ಚಮಚ ತೆಂಗಿನೆಣ್ಣೆ,  ಅರ್ಧ ಚಮಚ ಸಾಸಿವೆ, ಜೀರಿಗೆ,  ಕರಿಬೇವು,  ಇಂಗು.

ಯಾವುದೇ ಬೇಳೆ ಆಗಿರಲಿ, ಮುನ್ನಾದಿನವೇ ನೆನೆ ಹಾಕಿರಬೇಕು.  ಬೇಳೆ ಹಾಗೂ ತರಕಾರಿ ಉಪ್ಪು ಹಾಕಿ ಬೇಯಿಸಿ.   ಬೆಂದ ನಂತರ ಹಸಿಮೆಣಸು ಹಾಕಿಕೊಳ್ಳಿ.  ಬೇಕಿದ್ದರೆ ಎರಡು ನೀರುಳ್ಳಿ ಚಿಕ್ಕದಾಗಿ ಕತ್ತರಿಸಿ ಹಾಕಿ.  ಕಾಯಿಹಾಲು ಎರೆದು ಕುದಿಸಿ.   ತೆಂಗಿನೆಣ್ಣೆಯಲ್ಲಿ ಒಗ್ಗರಣೆ ಕೊಡಿ.


ಬರೆಯುತ್ತಾ,   ಫೋಟೋ ಎಡಿಟಿಂಗ್ ಹಾಗೂ ಬರೆದದ್ದನ್ನು ಪುನರ್ಪರಿಶೀಲಿಸುತ್ತಿರಬೇಕಾದರೆ ಮಗಳ ಬರ್ತ್ ಡೇ ಬಂದಿತು.   " ಅಮ್ಮ,  ನನ್ ಬರ್ತ್ ಡೇಗೆ ಖರ್ಜೂರ ಪಾಯಸವೇ ಆಗಬೇಕು "  ಅಂದಿದ್ದಳು ಮಗಳು.  " ಸರಿ, ಮಾಡೋಣ "  ಅಂದ್ಬಿಟ್ಟು ಮಾಡಿದ್ದೂ ಆಯಿತು,  ಚೆನ್ನಾಗಿದೆ ಎಂದು ಬಟ್ಟಲಿಗೆ ಸುರಿದು ತಿಂದಿದ್ದೂ ಆಯಿತು.  ಈಗ ಖರ್ಜೂರ ಪಾಯಸ ಮಾಡುವ ವಿಧಾನ ನೋಡಿಕೊಳ್ಳೋಣ.

ಖರ್ಜೂರ ಅಂದಾಜು 200 ಗ್ರಾಂ
ಬೆಲ್ಲ 3 ದೊಡ್ಡ ಸ್ಪೂನ್
ಕಾಯಿಹಾಲು

ಖರ್ಜೂರ ಬೀಜ ತೆಗೆದು ನೀರು ಕಾಯಿಹಾಲು ಎರೆದು ಕುದಿಸಿ.   ತಣಿಯಲು ಬಿಡಿ.   ತಣಿದ ನಂತರ ಮಿಕ್ಸಿಯಲ್ಲಿ ಎರಡು ಸುತ್ತು ತಿರುಗಿಸಿ.   ಹೆಚ್ಚು ನುಣ್ಣಗಾಗಬಾರದು.
ಇದಕ್ಕೆ ಬೆಲ್ಲ ಸೇರಿಸಿ ಒಲೆಯ ಮೇಲಿಟ್ಟು ಬೆಲ್ಲ ಕರಗಿಸಿಕೊಳ್ಳಿ.
ಬೆಲ್ಲ ಕರಗಿತೇ,  ದಪ್ಪ ಕಾಯಿಹಾಲು ಎರೆದು ಕುದಿಸಿ ಕೆಳಗಿಳಿಸಿ.   ಏಲಕ್ಕಿ ಪುಡಿ ಇದ್ದರೆ ಹಾಕಬಹುದು.
ಇಷ್ಟಕ್ಕೇ ಮುಗಿಯಲಿಲ್ಲ,   ಈ ಕಾಯಿಹಾಲಿಗೆ ಬೆಲ್ಲದ ಪಾಕ ಎರೆದು ದೋಸೆ, ಇಡ್ಲಿಗಳನ್ನು ತಿನ್ನಿ.   ಹಬ್ಬದ ಸಂಭ್ರಮದ ವಾತಾವರಣ ಮನೆ ಮನಗಳನ್ನು ವ್ಯಾಪಿಸುವುದು.   ದೋಸೆ, ಇಡ್ಲಿ ಅಲ್ಲದೆ  ಸಾದಾ ಅವಲಕ್ಕಿಯೊಂದಿಗೂ ಚೆನ್ನಾಗಿರುತ್ತದೆ.
ಭೂರಿ ಭೋಜನ,  ಔತಣಕೂಟಗಳಲ್ಲಿ ಕಡ್ಲೇಬೇಳೆ ಹೋಳಿಗೆ ಇರಲೇಬೇಕು.   ಅದರೊಂದಿಗೆ ತುಪ್ಪ, ಕಾಯಿಹಾಲು ಕಡ್ಡಾಯ.   ಕಾಯಿಹಾಲು ಹಾಕಿಸಿಕೊಂಡು 7 - 8  ಹೋಳಿಗೆಗಳನ್ನು ಹೊಡೆಯುವವರಿದ್ದಾರೆ.   Posted via DraftCraft app

0 comments:

Post a Comment