" ತೋಟದಲ್ಲಿ ನೀರ ಕಣಿ ಪಕ್ಕ ಕಿತ್ತಳೆ, ಮುಸಂಬಿ ಗಿಡ ಇರೂದು ನೋಡಿದ್ದೀಯಾ " ಕೇಳಿದ್ರು ನಮ್ಮತ್ತಿಗೆ.
" ಹ್ಞೂಂ, ಅದ್ರಲ್ಲಿ ಒಂದ್ ಗಿಡ ಸತ್ತಿದೆ, ಯಾವ್ದೂಂತ ನಂಗೇನ್ಗೊತ್ತು? ನೆಟ್ಟಿದ್ದು ನೀವಲ್ವೇ "
" ಅದನ್ನು ನಾನೇ ಬೀಜ ಹಾಕಿ ಸಸಿ ಮಾಡಿದ್ದು..."
" ಅಂದ್ರೆ ಒಂದಿಪ್ಪತ್ತು ವರ್ಷ ಆಯ್ತೂನ್ನಿ, ಹಾಗೆಲ್ಲ ಬೀಜ ಬಿತ್ತಿ ಸಸಿ ಮಾಡೋ ಬದಲು ಕಸಿ ಗಿಡ ತರಿಸಿ ನೆಟ್ಟಿದ್ದರೆ ಈಗ ಹಣ್ಣು ಕೊಯ್ಬಹುದಾಗಿತ್ತು "
" ಏನೊ ಶಾಲೆಗೆ ಹೋಗೋ ಪ್ರಾಯದಲ್ಲಿ ಅಷ್ಟೆಲ್ಲಾ ವಿಚಾರ ಯಾರಿಗೆ ಗೊತ್ತಿರ್ತದೆ.... ಅಂದ್ಹಾಗೆ ಚಕೋತ ಕೂಡಾ ನೆಟ್ಬಿಟ್ಟಿದ್ದೇನೆ " ಅಂದ್ರು ಅತ್ತಿಗೆ.
" ಚಕೋತ ಅಂದ್ರೆ ಸಿಹಿ ಕಂಚಿ ಅಲ್ವಾ, ಅದೂ ನಮ್ಮಪ್ಪನ ಮನೇಲೂ ಇದೆ, ಭಾರೀ ಗಾತ್ರದ ಹಣ್ಣು, ತುಂಬಾನೇ ಸಿಹಿ " ಅಂದೆ, ಈ ಫಲವಿಹೀನ ಗಿಡಗಳ ಬಗ್ಗೆ ಅಷ್ಟೇನೂ ಆಸಕ್ತಿ ಆಗ ವಹಿಸಲಿಲ್ಲ. ಇಬ್ಬರು ಮಕ್ಕಳಾದ ಮೇಲೆ ಈ ಗಿಡಗಳು ಯಾಕೆ ಹೀಗಿವೆ ಎಂಬ ಕಾಳಜಿ ತಾನಾಗಿಯೇ ಹುಟ್ಟಿತು.
ಮಾವ ಹಿರಣ್ಯ ಗಣಪತಿ ಭಟ್ಟರು ಎಲ್ಲಾ ಕನ್ನಡ ಪತ್ರಿಕೆಗಳನ್ನು ತರಿಸುತ್ತಿದ್ದರು, ಅಂಚೆ ಮೂಲಕವೂ ಕೆಲವು ಪತ್ರಿಕೆಗಳು.... ದೊಡ್ಡ ಗ್ರಂಥ ಭಂಡಾರವೂ ಇದ್ದಿತು. ಅವೆಲ್ಲ ಈಗ ನಮ್ಮ ಊರಿನ ಹೆದ್ದಾರಿ ಶಾಲಾ ಮಿತ್ರಮಂಡಳಿಯ ಲೈಬ್ರರಿಯಲ್ಲಿವೆ. ಅಂಚೆ ಮೂಲಕ ಬರುತ್ತಿದ್ದ ಅಡಿಕೆ ಪತ್ರಿಕೆ ಎಂಬ ಕೃಷಿ ಸಂಬಂಧಿತ ಮ್ಯಾಗಜೀನ್ ಒಳಗೆ ಒಂದು ಲೇಖನದಲ್ಲಿ ನೆಟ್ಟು ಸಾಕಷ್ಟು ವರ್ಷಗಳಾದರೂ ಫಲ ಕೊಡದ ಸಸ್ಯಗಳ ಕಾಂಡದ ಸಿಪ್ಪೆ ಎರಡಿಂಚಿನಷ್ಟು ಅಗಲವಾಗಿ ಕೆತ್ತಿ ತೆಗೆಯಬೇಕು, ಅದೂ ಸಪ್ಟಂಬರ - ಒಕ್ಟೋಬರದಲ್ಲೇ ಆಗಬೇಕು ಎಂಬಂತಹ ಮಾಹಿತಿಯನ್ನು ಯಾರೋ ಬರೆದಿದ್ದರು. ಗೌರತ್ತೆಯೂ ಈ ಅಭಿಪ್ರಾಯವನ್ನು ಅನುಮೋದಿಸಿದರು. " ಮೊದಲೆಲ್ಲ ಏನು ಮಾಡ್ತಿದ್ರು ಗೊತ್ತಾ, ಚಿಕ್ಕ ಮಕ್ಕಳ ಕೈಲಿ ಕತ್ತಿ ಕೊಟ್ಟು ಮರದ ಚಕ್ಕೆ ಏಳ್ಸೋದು... ಮರು ವರ್ಷಾನೇ ಮರ ತುಂಬಾ ಹಣ್ಣು ..."
" ನಮ್ದು ಹುಣಸೇ ಮರಕ್ಕೆ ಇದೇ ಪ್ರಯೋಗ ಮಾಡಿ ಮರ ಸತ್ಹೋಯ್ತು " ಅಂದರು ದೊಡ್ಡತ್ತಿಗೆ.
" ಹೌದೇ, ಮರದ ಕಾಂಡಕ್ಕೆ ಹೆಚ್ಚು ಪೆಟ್ಟು ಬಿದ್ದಿತೇನೋ... ಈಗ ಚೆನ್ನಪ್ಪನ ಹತ್ರ ಕೇಳಿ ನೋಡೋಣ "
ಚೆನ್ನಪ್ಪನ ಜೊತೆ ನಮ್ಮೆಜಮಾನ್ರೂ ಸೇರಿ ಚಕೋತಾ ಮರಕ್ಕೆ ಅಂಟಿದ್ದ ಗ್ರಹಚಾರ ಬಿಡಿಸಿದ್ದಾಯ್ತು.
ಎಪ್ರೀಲ್ - ಮೇ ತಿಂಗಳಲ್ಲಿ ಗೊಂಚಲು ಗೊಂಚಲಾಗಿ ಅರಳುವ ಚಕೋತಾ ಹೂಗಳು ಕಡು ಸುವಾಸನೆಯನ್ನೂ ಹೊಂದಿ ದುಂಬಿಗಳನ್ನು ಆಕರ್ಷಿಸುತ್ತವೆ. ಹೂಗಳು ಸುಗಂಧ ದ್ರವ್ಯ ತಯಾರಿಕೆಯಲ್ಲಿಯೂ ಬಳಸಲ್ಪಡುತ್ತವೆ. ಹಸಿರು ಬಣ್ಣದ ಕಾಯಿಗಳು ಬಲಿತು ಅರಸಿನ ವರ್ಣಕ್ಕೆ ತಿರುಗಲು ಸುಮಾರು ಏಳೆಂಟು ತಿಂಗಳು ಕಾಯಬೇಕು. ದೀರ್ಘಕಾಲ ಬದುಕುವಂತಹ ಮರ Rutaceae ಕುಟುಂಬವಾಸಿ, ಸಿಟ್ರಸ್ ಜಾತಿಯ ಹಣ್ಣುಗಳಲ್ಲೇ ಭಾರೀ ಗಾತ್ರದ ಚಕೋತಾ ವೈಜ್ಞಾನಿಕವಾಗಿ Citrus maxima (Citrus grandis) ಎನಿಸಿಕೊಂಡಿದೆ. ಈ ಮರಕ್ಕೆ ರೋಗಬಾಧೆಯೇನೂ ಇಲ್ಲ. ನಾವು ಅಡಿಕೆ ತೋಟದಲ್ಲಿ ಯಾವುದೇ ಕೀಟನಾಶಕಗಳ ಸ್ಪ್ರೇ ಮಾಡುವವರೂ ಅಲ್ಲ. ದಪ್ಪ ಸಿಪ್ಪೆಯ ಕವಚವೂ ಈ ಹಣ್ಣಿಗಿದೆ. ಹಣ್ಣಾಗಿ ಕೆಳ ಬಿದ್ದ ಚಕೋತಾ ಪಕ್ವವಾಗಿರುವುದು. ದಪ್ಪನೆಯ ಸಿಪ್ಪೆ ತೆಗೆಯಲೂ ಚೆನ್ನಾಗಿ ಮಾಗಿದ ಹಣ್ಣಾಗಿದ್ದರೇನೇ ಸುಲಭ.
ಅಡಿಕೆ ತೋಟದೊಳಗಿರುವ ನಮ್ಮ ಚಕೋತಾ ಮರದ ಪಕ್ಕದಲ್ಲೇ ಒಂದು ತೆಂಗಿನ ಮರವೂ ಇದೆ. ಒಂದು ಮಳೆಗಾಲದಲ್ಲಿ ತೆಂಗಿನ ಮಡಲು ಮರದ ಮೇಲೆ ಬಿದ್ದು ಕೆಲವು ಚಕೋತದ ಹೀಚುಗಾಯಿಗಳು ಮಡಲಿನೊಂದಿಗೆ ಧರಾಶಾಯಿಯಾದುವು. " ಛೆ, ಹಣ್ಣಾಗಬೇಕಿದ್ದ ಕಾಯಿಗಳಿಗೆ ಈ ಗತಿ ಬಂತಲ್ಲ " ಎಂದು ಮಡಲಿಗೆ ಹಿಡಿಶಾಪ ಹಾಕಿ, ಕಾಯಿಗಳನ್ನು ಹೆಕ್ಕಿ ಮನೆಗೆ ತಂದೆ.
ಕ್ರಿಕೆಟ್ ಬಾಲ್ ನಷ್ಟೇ ದೊಡ್ಡಗಿದ್ದ ಈ ಕಾಯಿಯೊಳಗೇನಿದ್ದೀತು ಎಂಬ ಕುತೂಹಲದಿಂದ ಕತ್ತರಿಸಿ ನೋಡಲಾಗಿ, ಅಬ್ಬಾ, ಒಳಗಿನ ಪರಿಮಳ! ಥೇಟ್ ಕಂಚು ಹುಳಿಯ ಕಮ್ಮನೆ ಬಂದಿತು. " ಸುಮ್ಮನೆ ಅಲ್ಲ ಇದನ್ನು ಸೀ ಕಂಚಿ (ಸಿಹಿ ಕಂಚಿ ) ಅಂದಿರೋದು " ಅಂದ್ಕೊಳ್ಳುತ್ತ ಹಣ್ಣಿನ ತಿರುಳು ಇನ್ನೂ ಮೂಡಿರದ ಕಾಯಿಗಳನ್ನು ಹೋಳುಗಳನ್ನಾಗಿಸಿ ಉಪ್ಪು ಬೆರೆಸಿ ಜಾಡಿಯಲ್ಲಿ ತುಂಬಿಸಿಟ್ಟಾಯಿತು. ಅಜೀರ್ಣ ಸಮಸ್ಯೆ ಬಂದಾಗ ಕಂಚು ಹುಳಿಯ ಸಿಪ್ಪೆ ಉಪ್ಪಿನಲ್ಲಿ ಹಾಕಿಟ್ಟಿದ್ದನ್ನು ತಂಬ್ಳಿ ಮಾಡಿ ಉಣ್ತೀವಲ್ಲ, ಇದನ್ನೂ ಅದೇ ಥರ ಮಾಡಿಕೊಳ್ಳಲಡ್ಡಿಯಿಲ್ಲ ಎಂದಿತು ಮನಸ್ಸು.
ಹುಣಸೇಬೀಜದಷ್ಟು ದೊಡ್ಡದಾದ ಬೀಜಗಳೂ ಈ ಹಣ್ಣಿನೊಳಗಿವೆ. ಬೀಜಗಳೇ ಹೊಸ ಸಸ್ಯೋತ್ಪತ್ತಿಗೆ ಆಧಾರ. ಬೀಜದ ಎಣ್ಣೆಯು ಆಂಟಿ ಓಕ್ಸಿಡೆಂಟ್ ಗುಣವುಳ್ಳದ್ದು ಹಾಗೂ ಪರಿಸರಸ್ನೇಹಿಯಾದ ಈ ಎಣ್ಣೆ ಕೀಟನಾಶಕ. ಕೈತೋಟದ ಸಸ್ಯಗಳು ಕೀಟಬಾಧೆಯಿಂದ ರೋಗಗ್ರಸ್ತವಾಗಿವೆಯೇ, ಚಕೋತಾ ಬೀಜದೆಣ್ಣೆಯನ್ನು ಸಿಂಪಡಿಸಿ. ಎಣ್ಣೆಯನ್ನು ಗಾಯಗಳಿಗೆ ಹಚ್ಚುವುದೂ ಗುಣಕಾರಿ, ಗಾಯದ ಕಲೆಗಳನ್ನೂ ಇನ್ನಿಲ್ಲದಂತೆ ನಿವಾರಿಸುವುದು. ಅಡುಗೆಮನೆಯನ್ನು ಶುಚಿಗೊಳಿಸಲೂ ಉಪಯುಕ್ತ, ಚಕೋತಾ ಬೀಜದ ಎಣ್ಣೆ ಬಳಸಿ ಫಂಗಸ್, ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಿ ಸುಗಂಧಪೂರಿತ ಅಡುಗೆ ಕೋಣೆ ನಿಮ್ಮದಾಗಿಸಿ. ಜಜ್ಜಿದ ಎಲೆಗಳನ್ನು ಸ್ನಾನಗೃಹದ ಬಿಸಿನೀರಿಗೆ ಹಾಕಿ, ಪರಿಮಳದ ನೀರಿನಲ್ಲಿ ಮಿಂದು ಬನ್ನಿ.
ಹಣ್ಣುಗಳನ್ನು ಹಲವು ತಿಂಗಳು ಕಾಪಾಡಿಕೊಳ್ಳಬಹುದು. ಒಮ್ಮೆ ಏನಾಯ್ತೂಂದ್ರೆ ಚಕೋತಾ ಹಣ್ಣುಗಳಾದವು. ಹಣ್ಣು ತಿನ್ಬೇಕಾಗಿದ್ದ ಮಗ ದೂರ ದೆಹಲಿಯಲ್ಲಿದ್ದ. ಅವನು ಬರದೇ ನಾನು ಕೀಳಲಿಲ್ಲ, ಮರದಿಂದ ಬೀಳಲೂ ಇಲ್ಲ. ಜನವರಿಯಲ್ಲಿ ಕೀಳಬೇಕಾಗಿದ್ದ ಹಣ್ಣುಗಳು ಮಾರ್ಚ್ ತಿಂಗಳು ಬಂದಾಗ ಮಗ ಮನೆಗೆ ಬಂದ ಹೊತ್ತಿನಲ್ಲಿ ಒಳಗೆ ಬಂದವು. ಮರದಲ್ಲೇ ಹಣ್ಣಾಗಿದ್ದು ತುಂಬ ಸ್ವಾದಿಷ್ಟವಾಗಿರುತ್ತವೆ ಅನ್ನೂದನ್ನು ಈ ಸಂದರ್ಭದಲ್ಲಿ ತಿಳಿಯುವಂತಾಯಿತು. ಸಿಪ್ಪೆ ಸುಲಿಯುವಾಗಲೂ ಅಷ್ಟೇ, ಕೈಗಳಿಗೆ ಅಹಿತಕರವಾಗಿರುವುದಿಲ್ಲ, ಪಪ್ಪಾಯಿ, ಅನಾನಸ್ ನಂತಹ ಕೆಲವು ಹಣ್ಣುಗಳ ಸಿಪ್ಪೆ ತೆಗೆಯುತ್ತಿದ್ದ ಹಾಗೆ ಕಿರಕಿರಿಯೆನಿಸುವಷ್ಟು ರಸ ಜಿನುಗಲಾರಂಭಿಸುವುದು ಸಾಮಾನ್ಯ.
ಸಂಧಿವಾತದಿಂದ ಬಳಲುತ್ತಿರುವವರಿಗೆ ಚಕೋತಾ ಹಣ್ಣಿನ ರಸ ಸೇವನೆ ಗಂಟುಗಳನ್ನು ಸಡಿಲಿಸಿ ಹಿತವನ್ನುಂಟು ಮಾಡುವುದು. ಚಕೋತಾ ಹಣ್ಣಿನ ಸಿಪ್ಪೆ ಹಾಗೂ ಶುಂಠಿ ಅರೆದ ಮಿಶ್ರಣದ ಲೇಪವನ್ನು ಗಂಟುನೋವಿಗೆ ಹಚ್ಚುವುದು ಸಂಧಿವಾತಕ್ಕೆ ಪರಿಣಾಮಕಾರೀ ಚಿಕಿತ್ಸೆಯೆನಿಸಿದೆ. ಕ್ಯಾಲ್ಸಿಯಂ ಹಾಗೂ ವಿಟಮಿನ್ ಸಿ ಪ್ರಬಲವಾಗಿರುವ ಹಣ್ಣು, ಚರ್ಮ ನೆರಿ ಕಟ್ಟದಂತೆ, ವಯಸ್ಸಾಗುತ್ತಿರುವುದನ್ನೂ ತಡೆಯುವ ಬಲಾಢ್ಯ ಶಕ್ತಿ ಇದರದ್ದು.
ಹಣ್ಣುಗಳನ್ನು ಹಾಗೇನೇ ತಿನ್ನುವುದೇ ಉತ್ತಮ. ದೊಡ್ಡ ಹಣ್ಣು, ಸಿಪ್ಪೆ ಸುಲಿದಿಟ್ಟು, ತೊಳೆ ತೆಗೆದಿಟ್ಟು ತಟ್ಟೆಯಲ್ಲಿಟ್ಟಿದ್ದು ಮುಗಿದಿಲ್ಲ. ಚಿಂತೆ ಮಾಡಬೇಕೆಂದಿಲ್ಲ. ಹಣ್ಣು ಹಾಳಾಗುವುದಿಲ್ಲ, ರೆಫ್ರಿಜರೇಟರ್ ಏನೂ ಬೇಡ, ಹಾಗೇ ಮುಚ್ಚಿಡಿ, ನಾಳೆ ತಿನ್ನಬಹುದು. ಇನ್ನಿತರ ಹಣ್ಣುಗಳೊಂದಿಗೆ ಸೇರಿಸಿ ಫ್ರುಟ್ ಸಲಾಡ್ ಬೇಕಿದ್ದರೂ ಮಾಡಬಹುದು. ಬಿಡಿ ಎಸಳುಗಳನ್ನು ಸ್ವಚ್ಛಗೊಳಿಸುವ ಕೆಲಸವೊಂದೇ ಇರೂದು ಇಲ್ಲಿ. ಸಕ್ರೆ ಕಂಚೀಕಾಯಿ ಎಂದೂ ಹೆಸರಿರುವ ಈ ಹಣ್ಣನ್ನು ಸಕ್ಕರೆ ಬೆರೆಸಿಯೂ ತಿನ್ನಿ. ಸಕ್ಕರೆ ಹಾಕಿ ಜಾಮ್ ಮಾಡಬಹುದು. ಮುರಬ್ಬ ಪಾಕ ಮಾಡಿ ಕೆಲವು ತಿಂಗಳು ಜೋಪಾನ ಮಾಡಬಹುದು, ಈ ಪ್ರಯೋಗಗಳನ್ನು ಇನ್ನೂ ಮಾಡಿಲ್ಲ. ಏನಿದ್ದರೂ ಹಲಸಿನ ಹಣ್ಣು ಬಿಡಿಸುವ ಶ್ರಮದ ಮುಂದೆ ಇದನ್ನು ಸುಲಿದು ತಿನ್ನುವುದು ಶ್ರಮವೇ ಅಲ್ಲ.
ವಿದೇಶೀಯರು pomelo, pummelo ಇತ್ಯಾದಿ ಹೆಸರಿರಿಸಿರುವ ಈ ಸಸ್ಯ ಏಷಿಯಾ ಮೂಲದ್ದಾಗಿರುತ್ತದೆ. ಗುಲಾಬಿ ವರ್ಣವಲ್ಲದೆ ಬಿಳಿ ಬಣ್ಣದ ಹಣ್ಣುಗಳೆಂದು ಎರಡು ಜಾತಿಯಾಗಿ ಚಕೋತಾ ಹಣ್ಣುಗಳು ಕಾಣ ಸಿಗುತ್ತವೆ. ಅಡಿಕೆ ತೋಟದೊಳಗೆ ಸ್ಥಳಾವಕಾಶ ಇರುವಲ್ಲಿ ಹಲವಾರು ಗಿಡಗಳನ್ನು ನೆಟ್ಟು ಸಾಕಿದರೆ ಉಪ ಆದಾಯವನ್ನೂ ಗಳಿಸಬಹುದು. ಮಾರುಕಟ್ಟೆಯಲ್ಲಿ ಒಳ್ಳೆಯ ಧಾರಣೆಯೂ ಇದೆ. ನೆಂಟರಿಷ್ಟರಿಗೆ, ಸ್ನೇಹಿತರಿಗೆ ಉಚಿತವಾಗಿ ಹಂಚಲೂ ಬಹುದು. ಮೊದಲ ಬಾರಿ " ಚಕೋತಾ ಹಣ್ಣಾಯ್ತು " ಎಂಬ ಸುದ್ದಿ ತಿಳಿದಾಕ್ಷಣ ನನ್ನತ್ತಿಗೆ ಧಾವಿಸಿ ಬಂದಿದ್ದರು. ನೆಟ್ಟ ಗಿಡ ಫಲ ಕೊಟ್ಟಿತು ಎಂಬ ಸಂತಸದ ಅನುಭೂತಿಯೇ ಬೇರೆ. ಅತ್ತಿಗೆ ತಾವೇ ಹಣ್ಣು ಸುಲಿದು ಸಂಭ್ರಮದಿಂದ ಎಲ್ಲರಿಗೂ ಹಂಚಿ, ಊರಿಗೆ ತೆರಳುವಾಗ ಮನೆಯಲ್ಲಿ ತಿನ್ನಲು ಹಣ್ಣುಗಳನ್ನು ಕೊಂಡೂ ಹೋದರು.
ಈ ಬರಹವನ್ನು ಸಿದ್ಧಪಡಿಸಿ ಮೂರು ತಿಂಗಳ ಮೇಲಾಯಿತು. ನಿನ್ನೆ ಯಾಕೋ ಮರದ ಬಳಿ ಬಂದು ಇನ್ನೆಷ್ಟು ಹಣ್ಣುಗಳು ಬಾಕಿಯಿವೆ ಎಂದು ಪಕ್ಷಿನೋಟ ಬೀರಿದಾಗ ಮರ ತುಂಬಾ ಗೆಜ್ಜೆ ಕಟ್ಟಿದಂತೆ ಹೂ ಗೊಂಚಲುಗಳು, ನೆಲದಲ್ಲೂ ಉದುರಿದ ಬಿಳಿ ಬಿಳೀ ಹೂ ಪಕಳೆಗಳು, ಓಹೋ, ಹೌದಲ್ಲ, ವಸಂತ ಕಾಲ ಬಂದಿದೆಯಲ್ಲ. ಸೌರಮಾನ ಯುಗಾದಿ ವಿಷು ಬಂದಿದೆ. ಸಸ್ಯಸಂಕುಲವೆಲ್ಲ ಹೊಸ ಸೃಷ್ಟಿಯತ್ತ ಹೊರಟಿವೆ. ನಾವೂ ಪ್ರಕೃತಿಯ ಈ ಆನಂದದಲ್ಲಿ ಭಾಗಿಯಾಗೋಣ. ಸೂರ್ಯನ ಪಥ ಎಂದಿಗೂ ಬದಲಾಗುವುದಿಲ್ಲ, ಮೇಷರಾಶಿಗೆ ಸೂರ್ಯನ ಪ್ರವೇಶದ ಘಳಿಗೆ ಎಂದಿಗೂ ಎಪ್ರಿಲ್ 14ರಂದೇ ಆಗುವಂಥದ್ದು, ಈ ಸಂಕ್ರಮಣ ಕಾಲವೇ ನಮ್ಮ ಪಂಚಾಂಗದಲ್ಲಿ ಸೌರಮಾನ ಯುಗಾದಿ ವಿಷು ಎಂದೇ ಗುರುತಿಸಿಕೊಂಡಿದೆ. ಸುಖ ಸಮೃದ್ಧಿಯ ಬದುಕು ನಮ್ಮೆಲ್ಲರದಾಗಲಿ. ಬ್ಲಾಗ್ ಓದುಗರಿಗೆಲ್ಲರಿಗೂ ಸೌರಮಾನ ಯುಗಾದಿಯ ಶುಭಾಶಯಗಳು.
Posted via DraftCraft app
0 comments:
Post a Comment