Pages

Ads 468x60px

Tuesday, 29 September 2026

ಬಾಳೆಹಣ್ಣಿನ ಪಲ್ಯ



ಅಡಿಕೆಯ ತೋಟದೊಳಗೆ ಬಾಳೆಯೂ ಸಾಮಾನ್ಯ ಬೆಳೆ,   ಹಿಂದೆ ಬಾಳೆಕಾಯಿ ವ್ಯಾಪಾರಿಗಳೇ ಬಂದು ಬಾಳೆಗೊನೆಗಳನ್ನು ತೋಟದಿಂದ ತಂದು ಅದಕ್ಕೊಂದು ನಿಶ್ತಿತ ದರ ನಿಗದಿ ಪಡಿಸಿ ಒಯ್ಯುತ್ತಿದ್ದರು.  ಈಗ ಬದಲಾದ ವ್ಯವಸ್ಥೆಯಲ್ಲಿ ನಾವೇ ಬಾಳೆಗೊನೆಗಳನ್ನು ಅಂಗಡಿಯ ತನಕ ಕೊಂಡೊಯ್ದರೂ ಕೊಳ್ಳುವವರಿಲ್ಲ,  ನಮ್ಮ ಗಾಡಿಯ ಇಂಧನದ ಖರ್ಚೂ ಸಿಗದು.  ತೋಟದ ಕೆಲಸಕ್ಕೆ  ಕಾರ್ಮಿಕರು ಬಂದಾಗ, ಅವರು ಅಂಗಳದಲ್ಲಿ ತಂದಿರಿಸುವ ಬಾಳೆಗೊನೆಗಳು ಹಣ್ಣಾದಂತೆ ಮುಗಿಸುವ ಕರ್ತವ್ಯ ನಮ್ಮದು.

ಈಗ ಬೂದಿ ಬಾಳೆಯ ಸರದಿ ಬಂದಿದೆ,   ಕೊಳೆದು ಬಿಸಾಡುವಂತಾಗಬಾರದು,   ಉಳಿದ ಹಣ್ಣುಗಳನ್ನು ಪಲ್ಯ ಮಾಡಿದರೆ ಹೇಗೆ?


ಗೊನೆಯಲ್ಲಿ ಕೆಲವೇ ಹಣ್ಣುಗಳು ಉಳಿದಿವೆ,  ಉರುಟುರುಟಾಗಿ ಕತ್ತರಿಸುವುದು.   ಬಾಣಲೆಗೆ ತುಪ್ಪ ಮೂರು ಚಮಚ ಎರೆದು ಒಗ್ಗರಣೆಯ ಸಾಹಿತ್ಯಗಳನ್ನು ಉದುರಿಸುವುದು.  ಕತ್ತರಿಸಿಟ್ಟ ಹಣ್ಣುಗಳನ್ನು ಸುರುವಿ, ರುಚಿಕರವಾಗಲು ಉಪ್ಪು ಹಾಗೂ ಬೆಲ್ಲ ಹಾಕುವುದು.  ಬೇಯಲು ಅಲ್ಪ ಪ್ರಮಾಣದಲ್ಲಿ ನೀರು ಇರಲಿ,  ಬೆಂದು ಮುದ್ದೆಯಾಗಕೂಡದು,  ಬಾಳೆಹಣ್ಣು ಬೇಯಲೆಷ್ಟು ಹೊತ್ತು? ಕಾಯಿ ತುರಿ ಪುಡಿ ಮಾಡಿ ಮೇಲಿನಿಂದ ಉದುರಿಸಿ,  ಸೌಟಾಡಿಸಿ, ಕಿಚ್ಚು ನಂದಿಸಿ ಮುಚ್ಚಿ ಇರಿಸಿ.

ಇಂತಹ ಪಲ್ಯ ಇದೇ ಮೊದಲು ಮಾಡಿದ್ದಲ್ಲ,  ತೋಟದ ಎಲ್ಲ ಮಾದರಿಯ ಬಾಳೆಹಣ್ಣುಗಳಿಂದ ಮಾಡಿದ್ದಾಗಿದೆ.  ಮೊದಲ ಬಾರಿ ಅಂಗಡಿಯ ನೇಂದ್ರ ನನ್ನ ಪ್ರಯೋಗಕ್ಕೆ ಒಳಪಟ್ಟಿತು.  ರುಚಿಯಾದ ಈ ಪಲ್ಯಕ್ಕೆ ನಮ್ಮ ತೋಟದ ಬಾಳೆಯೂ ಆಗುತ್ತದೆ, ಸಂಜೆಯ ಚಹಾಕೂಟಕ್ಕೂ ಸೂಕ್ತ.










0 comments:

Post a Comment