Pages

Ads 468x60px

Sunday, 21 August 2022

ದಾರೆಹುಳಿ ಸಿಹಿಪಾಕ

 

ಈ ವರ್ಷ ದಾರೆಹುಳಿ ಧಾರಾಳ,  ಒಂದು ಮರ ಹದಿನೈದು ವರ್ಷಗಳ ಹಿಂದೆ ಬೀಜ ಬಿತ್ತಿ ಆದದ್ದು,  ಮತ್ತೊಂದು ಎರಡು ವರ್ಷಗಳ ಹಿಂದೆ ನಮ್ಮ ಮಧುಕರ ನರ್ಸರಿಯಿಂದ ಗಿಡ ತಂದು ನೆಟ್ಟಿದ್ದು.  ಗಾತ್ರದಲ್ಲಿಯೂ ದೊಡ್ಡದು,  ಹುಳೀ ಅಂದ್ರೆ ಹುಳಿ.


ಹುಳಿ ಇರುವಂತಹ ಈ ಪ್ರಕಾರದ ಹಣ್ಣುಗಳು ಅಡುಗೆಗೆ ವಿಶೇಷ ರುಚಿ ನೀಡುತ್ತವೆ. ಚಟ್ಣಿ,  ಗೊಜ್ಜು,  ಸಾರು ಆಯ್ತು.

ಪತ್ರೊಡೆಗೂ ಹಾಕಲಾಯಿತು.  ಸಾಂಬಾರಿಗೆ ತೆಂಗಿನ ಕಾಯಿ ಅರೆಯುವಾಗ  ಸೇರಿಸಿ ಅರೆದಿದ್ದೂ ಆಯಿತು.  ಶರಬತ್ತು ಮಾಡಲು ಸಮಯವಲ್ಲ,  ಧಾರಾಕಾರ ಮಳೆ ಅಲ್ವೇ..


ಉಪ್ಪಿನಕಾಯಿ ಹಾಕಬಹುದಿತ್ತು,  ಎಳೆಯ ಕಾಯಿ ಆಗಿದ್ದರೆ ಚೆನ್ನಾಗಿರೋದು,  ಇನ್ನೊಮ್ಮೆ ಮಾಡೋಣ.  ಬುಟ್ಟಿಯಲ್ಲಿದ್ದ ದಾರೆಹುಳಿಗಳೆಲ್ಲ ಹಣ್ಣಾಗಿವೆ.  ಇನ್ನು ಅಡುಗೆ ಮಾಡುವಂತಿಲ್ಲ,   ಚಿಂತೆಯಿಲ್ಲ,  ರಸ ತೆಗೆದು ಸಕ್ಕರೆ ಬೆರೆಸಿ,  ಪಾಕ ಬರಿಸಿ ಜಾಡಿಯಲ್ಲಿ ತುಂಬಿಸಿಡೋಣ.


 10 ದಾರೆ ಹುಳಿಗಳಿವೆ.  ಕೈಯಲ್ಲಿ ಹಿಸುಕಿ ರಸ ಶೋಧಿಸಿ ಇಡುವುದು.  ಮಿಕ್ಸಿ ಯಂತ್ರ ಬೇಡ.  ಅಂದಾಜು 2 ಲೋಟ ರಸ ದೊರೆಯಿತು.

ಸ್ಟೀಲು ಪಾತ್ರೆ ಹುಳಿ ರಸದಿಂದ ಹೊಳಪು ಕಳಕೊಳ್ಳುವ ಸಾಧ್ಯತೆ ಇದೆ.  ನಾನ್ ಸ್ಟಿಕ್ ತಪಲೆ ಉತ್ತಮ.  ಇಂಡಕ್ಷನ್ ಬೇಸ್ ಇರುವ ತಪಲೆಗೆ ದಾರೆಹುಳಿ ರಸ ಎರೆದು ಒಲೆಯ ಮೇಲೆ ಇರಿಸಿ.   ಕುದಿಯಲಿ,   ಒಂದು ಲೋಟ ಸಕ್ಕರೆ ಅಳೆದು ಹಾಕಿ,  ಬಿಡದೆ ಮರದ ಸಟ್ಟುಗದಲ್ಲಿ ಕೈಯಾಡಿಸಿ.  ಸ್ಟೀಲ್ ಸೌಟು ಬೇಡ.

ದಾರೆಹುಳಿಯೂ ಸಕ್ಕರೆಯೂ ಜೇನಿನೋಪಾದಿಯಲ್ಲಿ ಬೆರೆತು ಕೂಡಿದಾಗ ಸ್ಟವ್ ಆರಿಸಿ.  ದಾರೆಹುಳಿಯ ಈ ಸಿಹಿ ದ್ರಾವಣ ಚಪಾತಿ,ದೋಸೆ, ಬ್ರೆಡ್ ಇತ್ಯಾದಿಗಳ ಜೊತೆ ಕೂಡಿ ತಿನ್ನಲು ಯೋಗ್ಯ.





ನಿನ್ನೆ ರಾತ್ರಿ ಚಪಾತಿಗೆ,  ಇಂದು ಮುಂಜಾನೆ ತೆಳ್ಳವು ಜೊತೆ ಕೂಡಿ ತಿನ್ನಲು ಹಿತವಾದ ರಸಗಟ್ಟಿ ನಮ್ಮದಾಯಿತು.  ಜೇನಿನ ಸಿಹಿ ಮಧುರತೆ ಇದರದ್ದು.


ನಮ್ಮ ದಾರೆಹುಳಿಗೆ ಅಖಂಡ ಕರ್ನಾಟಕದಲ್ಲಿ ನೂರಾರು ಹೆಸರುಗಳು.   ಆಂಗ್ಲ ಭಾಷೆ star fruit ಅಂದಿದೆ.  ವೈಜ್ಞಾನಿಕ ಪರಿಭಾಷೆಯಲ್ಲಿ ಇದು averrhoa carambola.  


91% ನೀರು,  41% ವಿಟಮಿನ್ ಸಿ ದಾರೆಹುಳಿಯ ಹೆಗ್ಗಳಿಕೆ.  ಉಳಿದಂತೆ ಖನಿಜಾಂಶಗಳು,  ಕಾರ್ಬೋಹೈಡ್ರೇಟ್ಸ್,  ಪ್ರೊಟೀನ್ ಅಲ್ಪಪ್ರಮಾಣದಲ್ಲಿ ಇರುತ್ತದೆ.


ದಾರೆಹುಳಿ ಮಧ್ಯಮ ಗಾತ್ರದ ಮರ ಆಗಿದ್ದು ಸದಾ ಹಸಿರೆಲೆಗಳು,  ಹೂಗೊಂಚಲು ನಯನಮನೋಹರ.  ಉದ್ಯಾನವನಗಳ ಶೋಭೆ ಹೆಚ್ಚಿಸುವಂತಹದು.  ಹಸಿರೆಲೆಗಳನ್ನು ತೋಟದ ಸಸ್ಯಗಳಿಗೆ ಮಳೆಗಾಲದ ಕೊನೆಯಲ್ಲಿ ಹಸಿರು ಗೊಬ್ಬರವಾಗಿ ಹಾಕಬಹುದಾಗಿದೆ,  ಆ ವೇಳೆಗೆ ಹಣ್ಣುಗಳು ಉದುರಿ ಮುಗಿದಿರುತ್ತವೆ.


ದಾರೆಹುಳಿಯ ಬೀಜಗಳಿಂದ ಹೊಸ ಸಸ್ಯವನ್ನು ಪಡೆಯಬಹುದು,  ಫಲ ಸಿಗಲು ಹಲವು ವರ್ಷ ಕಾಯಬೇಕು.  ಒಳ್ಳೆಯ ನೀರಾಶ್ರಯವೂ ಇದಕ್ಕೆ ಅಗತ್ಯವಿದೆ.  ಕಸಿ ಕಟ್ಟಿದ ಗಿಡಗಳು ನರ್ಸರಿಗಳಲ್ಲಿ ಸಿಗುತ್ತವೆ.  ನೆಟ್ಟ ಮೂರೇ ವರ್ಷದಲ್ಲಿ ದಾರೆಹುಳಿಗಳನ್ನು ಕೊಯ್ಯಬಹುದು.


ಹಣ್ಣಾದ ದಾರೆಹುಳಿಯಿಂದ ನೋವಿನೆಣ್ಣೆ ತಯಾರಿಸಿ ಇಟ್ಟುಕೊಳ್ಳುವ ಪದ್ಧತಿ ಇದೆ.  3 ಲೋಟ ದಾರೆಹುಳಿ ರಸ,  1 ಲೋಟ ಎಳ್ಳೆಣ್ಣೆ ಬೆರೆಸಿ,  ನೀರಿನಂಶ ಬತ್ತುವ ತನಕ ಕುದಿಸಿ,  ಆರಿದ ನಂತರ ಶೋಧಿಸಿ,  ಜಾಡಿಯಲ್ಲಿ ತುಂಬಿಸಿ.   ಚಳಿಗಾಲದಲ್ಲಿ ಮೈಕೈ ನೋವು ಇರುವಾಗ ಎಣ್ಣೆ ಹಚ್ಚಿ ಬಿಸಿನೀರು ಸ್ನಾನ ಮಾಡಿದರಾಯಿತು.   ಬಾಣಂತಿ ಸ್ನಾನಕ್ಕೂ ಸೂಕ್ತ ಈ ಎಣ್ಣೆ.






Wednesday, 10 August 2022

ಕೆಸುವಿನೆಲೆ ಚಟ್ಣಿ

 


ಅರ್ಧ ದಾರೆಹುಳಿ

ಕೆಸುವಿನೆಲೆ ಐದಾರು

ಬೆಳ್ಳುಳ್ಳಿ ಏಳೆಂಟು

ಒಂದು  ಹಸಿಮೆಣಸು

ಎಲ್ಲವನ್ನೂ ರುಚಿಗೆ ಉಪ್ಪು ಬೆರೆಸಿ ಬೇಯಿಸಿ.

ಕಾಯಿತುರಿಯೊಂದಿಗೆ ರುಬ್ಬಿ

ಚಟ್ಣಿ ಆಯಿತು.




ಪುಸ್ತಕ ಲೈಬ್ರರಿಯಿಂದ ಬಂದಿತ್ತು,  ಆಂಗ್ಲ ಭಾಷೆಯ ಈ ಪುಸ್ತಕ ಕನ್ನಡಕ್ಕೆ ಅನುವಾದಿಸಲ್ಪಟ್ಟಿದೆ.

ಝೀರೋ ಆಯಿಲ್ ಕುಕಿಂಗ್ ಎಂಬಂತಹ ಈ ಪಾಕಶಾಸ್ತ್ರವನ್ನು ಬರೆದವರು ಖ್ಯಾತ ಹೃದಯ ರೋಗ ತಜ್ಞರಾಗಿದ್ದಾರೆ.

  

ಆರೋಗ್ಯಕ್ಕೆ ಕೈಪಿಡಿಯಂತಿರುವ ಈ ಪುಸ್ತಕವನ್ನು ನಾನು ಎರಡೆರಡು ಬಾರಿ ಓದಿದೆ.   ' ವನಿತಾ ವಯೋಜನ ಪುಸ್ತಕ ವಿನಿಮಯಪದ್ಧತಿ ' ಎಂಬ ಕೇರಳ ಸರಕಾರದ ಯೋಜನೆಯಂತೆ ಕೋವಿಡ್ ಕಾರಣದಿಂದ ವಯಸ್ಕ ಮಹಿಳೆಯರಿಗೆ ಮನೆಗೇ ಪುಸ್ತಕ ಬರುತ್ತಲಿದೆ.  


ಎಣ್ಣೆರಹಿತ ಅಡುಗೆ ಇದಕ್ಕೆ ಸ್ಪೂರ್ತಿ,  ಹಾಗಾಗಿ ಚಟ್ಣಿಗೆ ಒಗ್ಗರಣೆಯನ್ನೂ ಹಾಕಿಲ್ಲ.



ಆಟಿಯ ಅಟಿಲ್

ಕೆಸುವಿನೆಲೆ ಚಟ್ಣಿ

ಬರಹ  ಬಂದಿದೆ

ಬಿಡುವು ಸಿಕ್ಕಾಗ

ದಾರೆಹುಳಿ ರಸಧಾರೆ

ಒಸರಲಿದೆ...



Friday, 3 June 2022

ಗೋಧಿ ಕಡಿ ಇಡ್ಲಿ

 



" ಬೆಳಗಾದ್ರೆ ದೋಸೆ ಎರೆಯುವುದೇ ಆಗ್ಹೋಯ್ತು,  ನಾಳೆ ಬೇರೆ ತಿಂಡಿ ಆಗ್ಬೇಕು.. "  ಮಕ್ಕಳೇನೂ ಅಂದಿದ್ದಲ್ಲ,  ನಾನೇ ನನ್ನ ಪಾಡಿಗೆ ಅಂದ್ಕೊಂಡಿದ್ದು.


ಅಡುಗೆಮನೆಯಲ್ಲಿ ಗೋಧಿ ನುಚ್ಚು ಯಾ ಗೋಧಿ ಕಡಿ ತಂದಿದ್ದು ಇದೆ.   ಪಾಯಸಕ್ಕೇಂತ ತಂದಿದ್ದು ಸಾಕಷ್ಟು ಉಳಿದಿದೆ.   ಇಡ್ಲಿ ಮಾಡಿದ್ರೆ ಹೇಗೆ?  ಉಪ್ಪಿಟ್ಟೂ ಆದೀತು.  

ಹಿಂದೆ ಗದ್ದೆ ಬೇಸಾಯ ಇದ್ದಾಗ ಕುಚ್ಚುಲಕ್ಕಿಯಿಂದಲೇ ಇಡ್ಲಿ ಮಾಡ್ತಿದ್ದೆವು.  1 ಉದ್ದು + 4 ಅಕ್ಕಿಯ ಅಳತೆ,  ಬಹಳ ಮೃದುವಾಗಿ ಬರುತ್ತಿದ್ದ ಈ ಇಡ್ಲಿ ಮನೆ ಮಂದಿ ಮಾತ್ರವಲ್ಲದೆ ಕೆಲಸದಾಳುಗಳ ಹೊಟ್ಟೆ ಭರ್ತಿ ಮಾಡುತ್ತಿದ್ದುದು ನೆನಪಾಯಿತು.

ಈಗ ಗೋಧಿ ನುಚ್ಚಿನ ಇಡ್ಲಿಗೂ ಇದೇ ಅಳತೆ ಸರಿ ಹೋದೀತು.  ಆದರೂ ಮನೆಯೊಳಗೆ ಸಾಕಷ್ಟು ಜನರಿಲ್ಲ,  ಗೋಧಿ ನುಚ್ಚು ತುಸು ಕಡಿಮೆ ಹಾಕಿದರಾಯಿತು.


ಒಂದು ಲೋಟ ಉದ್ದು ನೆನೆಯಿತು

3 ಲೋಟ ಗೋಧಿನುಚ್ಚು ಮುಳುಗುವಷ್ಟು ನೀರೆರೆದು ಇಡತಕ್ಕದ್ದು,  3 ಲೋಟ ನೀರು ಎರೆಯಿರಿ.

ಅರ್ಧ ಗಂಟೆ ಬಿಟ್ಟು ಉದ್ದು ಅರೆಯಿರಿ.

ಈಗ ಗೋಧಿ ನುಚ್ಚು ನೆನೆದು ನೀರನ್ನು ಹೀರಿರುತ್ತದೆ,  ಅರೆದ ಉದ್ದಿನ ಹಿಟ್ಟನ್ನು  ಬೆರೆಸಿ,  ರುಚಿಗೆ ಉಪ್ಪು ಹಾಕಿ,  ರಾತ್ರಿ ಬೆಳಗಾಗುವ ತನಕ ಮುಚ್ಚಿ ಇರಿಸಿರಿ.

ಪುನಃ ಬೇರೆ ನೀರು ಕೂಡಿಸುವ ಅಗತ್ಯ ನನಗೆ ಬರಲಿಲ್ಲ, ಇಡ್ಲಿ ಎರೆಯಿರಿ,  ಇಡ್ಲಿಯ ಮಾಮೂಲಿ ಸಮಯ 10 ನಿಮಿಷ ಸಾಲದು,  ನೀರು ಕುದಿದ ನಂತರ 20ರಿಂದ 25 ನಿಮಿಷ ಆದರೂ ಬೇಯಿಸಬೇಕಾಗುತ್ತದೆ.


ರುಚಿ ಶುಚಿಯಾದ ಇಡ್ಲಿಯನ್ನು ಕಾಯಿ ಚಟ್ಣಿ,  ಗಟ್ಟಿ ಮೊಸರಿನೊಂದಿಗೆ ಸವಿಯಿರಿ.


ಕೊತ್ತಂಬರಿ ಸೊಪ್ಪು ಇದ್ದರೆ ಇದನ್ನು ಪುಟ್ಟ ಒಗ್ಗರಣೆಯೊಂದಿಗೆ ಮಸಾಲಾ ಇಡ್ಲಿಯಾಗಿ ಪರಿವರ್ತಿಸಬಹುದು.   ನಿಮ್ಮ ಅಡುಗೆಯ ಕಲ್ಪನೆಯಂತೆ ಕ್ಯಾರಟ್ ತುರಿ,  ಬೀನ್ಸ್  ಇತ್ಯಾದಿಗಳನ್ನು ಸೇರಿಸಿ.   ಮಾರುಕಟ್ಟೆಯಲ್ಲಿ ಸಿಗುವ ಇಡ್ಲಿ ಮಿಕ್ಸ್ ಗೆ ಇದರ ಮುಂದೆ ನಿಲ್ಲುವ ಯೋಗ್ಯತೆಯಿಲ್ಲ.



Saturday, 28 May 2022

ಅಜ್ಜಿಯ ಲಾಲಿಪಾಪು

 



ಕೂದಲೇನೋ ಕಪ್ಪಗಿದೆ

ಅಜ್ಜಿಯಾದೆನು

ಇನ್ನೂ ಇವೆ ಹಲ್ಲುಗಳು 

ಅಜ್ಜಿಯಾದೆನು

ಊರಲಿಲ್ಲ ದಂಟೆ

ಅಜ್ಜಿಯಾದೆನು

ಬಾಗಲಿಲ್ಲ ಸೊಂಟ

ಆಹ... ನಾನು ಅಜ್ಜಿಯಾದೆನು


ಯಾಕಳುವೆ ನೀ ಕಂದ

ಮಲಗಿ ಏಳಲಾರೆ ಎಂದೇ

ಹಾಯಾಗಿ ಮಲಗು ನೀ ಕಂದ

ನಲಿನಲಿದು ಬರಲಾರೆ ಎಂದೇ 

ಗತಿಯೀಗ ನಿನಗೆ ಅಳುವೊಂದೇ

ನಿನ್ನಳುವೆ ಸುಗಮ ಸಂಗೀತವೆಂದೇ

ಹಾಯಾಗಿ ಮಲಗು ನೀ ಕಂದ

ಆಹ...  ನಾನು ಅಜ್ಜಿಯಾದೆನು



Monday, 16 May 2022

ಮ್ಯಾಂಗೋ ಶಿರಾ


 

ಹೇಳಿ ಕೇಳಿ ಈಗ ಮಾವಿನಹಣ್ಣುಗಳ ಕಾಲ,  ಮನೆ ತುಂಬ ಕಾಟು ಮಾವಿನ ಹಣ್ಣುಗಳ ಪರಿಮಳ.   ಊಟದಲ್ಲಿಉಪ್ಪಿನಕಾಯಿಯಂತೆ ಈ ಮಾವಿನಹಣ್ಣುಗಳದ್ದೇ ಭೋಜನ.

" ಈ ಮರದ ಹಣ್ಣಿನ ರುಚಿ ನೋಡು.. " ಎಂದು ಒಬ್ಬರಿಗೊಬ್ಬರು ಕೊಡುವುದೇನು,  ಆ ಕಡೆಯಿಂದ ಇನ್ನೊಂದಿಪ್ಪತ್ತು ಹಣ್ಣುಗಳನ್ನುಸ್ವೀಕರಿಸುವುದೇನು,  ವಸಂತ ಕಾಲದ ಈ ವೈಭವ ಇನ್ನೇನು ಮುಗಿಯಲಿಕ್ಕಾಯಿತು.


ಮಾವಿನ ಹಣ್ಣುಗಳ ರಸರುಚಿ ಬರೆದು ಮುಗಿಯಲಾರದು.   ಒಂದು ಸಂಜೆ ಇದ್ದಕ್ಕಿದ್ದಂತೆ ನನಗೂ ಒಂದು ಐಡಿಯಾ ಬಂದಿತು.  ಮಾವಿನ ಹಣ್ಣಿನ ಶಿರಾ ಮಾಡಿದರೆ ಹೇಗೆ?


ಚಿರೋಟಿ ರವೆ ಇರಲಿಲ್ಲ,  ಬಾಂಬಿನೋ ವರ್ಮಿಸಿಲಿ ಇತ್ತು,  ಮೈತ್ರಿ ತಂದಿಟ್ಟಿದ್ದು. ಎಷ್ಟಿದೇ?  ಅಳೆದಾಗ ಭರ್ತಿ ಒಂದು ಲೋಟಆಯ್ತು.  ಪ್ಯಾಕೇಟಿನಲ್ಲಿ ಹುರಿದೇ ಇಟ್ಟಿರೋದು ಅಂತ ಬರೆದಿದೆ,  ನಾವು ಹುರಿಯಬೇಕಿಲ್ಲ.


ಮೂರು ಕಾಟು ಮಾವಿನಹಣ್ಣು ಸಾಕು,   ತೊಳೆದು ತೊಟ್ಟು ತೆಗೆದು..

ಒಂದೂವರೆ ಲೋಟ ನೀರು ಅಳೆದು ಮಾವಿನಹಣ್ಣುಗಳ ರಸವೆಲ್ಲ ನೀರಿಗೆ ಸೇರಲಿ.

ದಪ್ಪ ಬಾಣಲೆಗೆ 2 ಚಮಚ ತುಪ್ಪ ಎರೆದು ಹುರಿದ ಶಾವಿಗೆ ಹಾಗೂ ನೀರು ಬೆರೆತ ಹಣ್ಣಿನ ರಸ ಎರೆದು ಬೇಯಿಸಿ.

ಬೆಂದ ನಂತರ ಅರ್ಧ ಲೋಟ ಸಕ್ಕರೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿ ಬೇಯಲಿ.


ಬೆಂದಿದೆ,  ಇನ್ನೆರಡು ಚಮಚ ತುಪ್ಪ ಬೆರೆಸಿ,  ಕೆಳಗಿಳಿಸಿ.  ಬಿಸಿ ಇರುವಾಗಲೇ ತಿನ್ನಿ.   

ಮಾವಿನಹಣ್ಣು ಇರುವಾಗ ಮಾಡಿದ್ದು.  ಗಡಿಬಿಡಿಯ ಈ ತಿನಿಸು ಮನೆ ಮಂದಿಯ ಒಲವಿಗೂ ಪಾತ್ರವಾಯಿತು.   "ಅತ್ತೇ,  ಇದನ್ನುನಿಮ್ಮ ಬ್ಲಾಗಿನಲ್ಲಿ ಬರೆಯಿರಿ.. "  ಮಾವಿನ ಹಣ್ಣುಗಳನ್ನು ಮರದ ಬುಡದಿಂದ ಹೆಕ್ಕಿ ತಂದ ಶ್ಯಾಮ ಸಲಹೆ ಕೊಟ್ಟ.