Pages

Ads 468x60px

Wednesday, 11 January 2023

ಜಟ್ ಪಟ್ ಪುಂಡಿ

 


ದಿನವೂ ಮಾಡುವ ಅಡುಗೆಯಲ್ಲಿ ವೈವಿಧ್ಯತೆ ಇರಲೇಬೇಕು.  ಒಂದೇ ಮಾದರಿಯ ಸಾಂಬಾರು,  ಏಕ ಪ್ರಕಾರದ ತಿಂಡಿತಿನಿಸು ಚೆನ್ನಾಗಿದ್ದರೂ ಸಪ್ಪೆಯೇ, ಮಾಡಲಿಕ್ಕೂ ಔದಾಸೀನ್ಯ ಬಂದೀತು.  ನಿನ್ನೆ ಇಡ್ಲಿ ಆಯ್ತು,  ಇಡ್ಲಿ ತಿಂದ ದಿನ ಜಡ ಜಾಸ್ತಿ.  ರಾತ್ರಿ ಊಟವಾದ ನಂತರ ನಾಳೆಯ ತಿಂಡಿಯೇನು ಎಂಬ ಚಿಂತೆ ಕಾಡಿತು,  ಅಕ್ಕಿ ಕೂಡಾ ನೆನೆ ಹಾಕಿಲ್ಲ,  ತೆಳ್ಳವು ಮಾಡಬಹುದಿತ್ತು.   ಇಡ್ಲಿ ಮಾಡಿದ ಅಕ್ಕಿರವೆಯ ನೆನಪಾಯ್ತು,  ಆ ಪ್ಯಾಕೇಟಿನಲ್ಲಿ ಇಡ್ಲಿ ಚಿತ್ರವೂ ಆ ರವೆಯಿಂದ ಇಡ್ಲಿಯನ್ನು ಮಾಡುವ ವಿಧಾನ ಇದ್ದಿತು.  ಅಕ್ಕಿ ರವೆಯಿಂದ ನಾಳೆ ಪುಂಡಿ ಮಾಡ್ಬಿಡೋಣ.  ಇದೀಗ ಪಾತ್ರೆಗಳನ್ನು ಬದಿಗಿಟ್ಟು ಮಲಗುವ ಸಿದ್ಧತೆ.


ಎಂದಿನಂತೆ ಬೆಳಗಾಯಿತು,

ಅಕ್ಕಿ ರವೆಯನ್ನು 2 ಲೋಟ ಅಳೆದು 3 ಲೋಟ ನೀರು ತೆಗೆದಿರಿಸುವುದು.

ಮೊದಲು ಅಟ್ಟಿನಳಗೆಯಲ್ಲಿ ಅಗತ್ಯ ಪ್ರಮಾಣದ ನೀರೆರೆದು ಕುದಿಯಲಿರಿಸಿ.  ಅಟ್ಟಿನಳಗೆ ಅಂದ್ರೆ ಇಡ್ಲಿಪಾತ್ರೆ ಎಂದು ನಾವುತಿಳಿದಿದ್ದೇವೆ.


ದಪ್ಪ ತಳದ ಬಾಣಲೆ ಒಲೆಗೇರಿಸಿ, ತುಸು ತೆಂಗಿನೆಣ್ಣೆ ಎರೆದು ಒಗ್ಗರಣೆ  ಸಿಡಿಸಿ,  ಕರಿಬೇವು ಇರಲಿ.

ಅಳೆದ ಅಕ್ಕಿ ರವೆ ಹಾಗೂ ನೀರು ಬಾಣಲೆಗೆ ಬೀಳಲಿ.

ಸೌಟಾಡಿಸಿ,  ಉಪ್ಪಿಟ್ಟು ಯಾ ರಾಗಿ ಮುದ್ದೆ ತರ ಆಯ್ತು ಅನ್ನಿ.

ಇದೀಗ ಒಂದು ಹಿಡಿ ತೆಂಗಿನತುರಿ ಬೀಳಿಸಿ,  ಸೌಟಿನಲ್ಲಿ ಮಿಶ್ರ ಗೊಳಿಸಿ.  ಒಲೆ ಆರಿಸಿ,  ಬಾಣಲೆ ಕೆಳಗಿಳಿಸಿ.

ಬೇಗನೆ ಆರಲು ಇನ್ನೊಂದು ಪಾತ್ರೆಗೆ ವರ್ಗಾಯಿಸಿ.

ಹದ ಗಾತ್ರದ ಉಂಡೆ ಮಾಡಿಟ್ಟು, 

ಅಟ್ಟಿನಳಗೆಯಲ್ಲಿ ನೀರು ಕುದಿಯುತ್ತಿದೆ….

ಉಂಡೆಗಳನ್ನು ಅಟ್ಟಿನಳಗೆಯೊಳಗಿಟ್ಟು,  ಮುಚ್ಚಿ 12 ನಿಮಿಷ  ಬೇಯಿಸಿ.


ಬಿಸಿ ಬಿಸಿಯಾದ ಅಕ್ಕಿ ಪುಂಡಿ ಜಟ್ ಪಟ್ ಆಗೇ ಹೋಯ್ತು.

ಶುಚಿರುಚಿಯಾದ ಪುಂಡಿಗಳನ್ನು ಇಷ್ಟ ಪಡುವ ಚಟ್ಣಿಯೊಂದಿಗೆ ತಿನ್ನಿರಿ.



Sunday, 11 December 2022

ರಾಗಿ ತರಿ ಇಡ್ಲಿ

 ಮಗುವಿಗಾಗಿ ರಾಗಿ ತರಿಸಿ, ಹುಡಿ ಮಾಡಿದ ವಿಧಾನ ಬರೆದಿದ್ದೇನಲ್ಲ,  ಇದನ್ನು ಅದರ ಮುಂದುವರಿದ ಭಾಗವೆಂದು ತಿಳಿದು ಓದಿರಿ.


ಜಗ್ಗಣ್ಣನ ಅಂಗಡಿಯಿಂದ ಎರಡು ಕಿಲೋ ರಾಗಿ ತರಿಸಿದ್ದಾಗಿದೆ.  ಮುಂದಿನವಾರ ಮಧುಕರ ಊರಿಗೆ ಬರುವವನಿದ್ದಾನೆ,  ಅವನುಬೆಂಗಳೂರಿಗೆ ಪುನಃ ಹೊರಡುವಾಗ ರಾಗಿ ಹುಡಿ ಕಳುಹಿಸುವ ಅಂದಾಜು ನನ್ನದು.


ಅವನೇನೋ ಬಂದ,  ಬರುವಾಗ ಸುಮ್ಮನೇ ಬರಲಿಲ್ಲ,  “ ಅಮ್ಮ,  ಏನೆಲ್ಲ ಬಂದಿದೆ ನೋಡು.. “

“ ಓ.. ರಾಗಿ ಹುಡಿಯೂ ಬಂದಿದೆ… ಅಲ್ಲ,  ಇದನ್ನು ಇಲ್ಲಿಗೆ ಯಾಕೆ ತಂದದ್ದೂ?  ಅಲ್ಲಿಯೇ ತಂಗಿಗೆ ಕೊಡಬಹುದಿತ್ತಲ್ಲ. “ ನನಗೋಅಚ್ಚರಿ.    “ ಹೋಗಮ್ಮ,  ಪಕ್ಕದಮನೆಯಾ ಹಾಗೆ ಕೊಟ್ಟು ಬರಲಿಕ್ಕೇ… “ ರೇಗಿದ.


ಸುಮ್ಮನಾಗಬೇಕಾಯಿತು.    “ ಅಮ್ಮ, ಇದು ಆರ್ಗೇನಿಕ್ ರಾಗಿ ಹುಡಿ ಗೊತ್ತಾಯ್ತಾ,  ನೀನೇ ಏನಾದ್ರೂ ಮಾಡು. “

“ ಆರ್ಗೇನಿಕ್ ಅಂದ್ರೇನು?  ಡಾಮರು ರಸ್ತೆ ಮೇಲೆ ರಾಗಿ ಒಣಗಿಸೂದಂತೆ ಗೊತ್ತಾ? “

“ಅದೇನೋ ನಂಗೊತ್ತಿಲ್ಲ,  ನಾನೂ ಕಂಡಿದ್ದೇನೆ ಆ ಕಡೆ ರಸ್ತೆ ತುಂಬ ಹುಲ್ಲು ಹರಡಿರ್ತಾರೆ,  ನಮ್ಮ ಕಾರು ಅದರ ಮೇಲೇಹೋಗ್ಬೇಕು..”


“ ನಂಗೆ ನೀನೇ ಪುಡಿ ಮಾಡಿ ಕೊಟ್ಬಿಡು,  ಅಣ್ಣನ ಓರ್ಗೇನಿಕ್ ರಾಗಿ ಬೇಡ. “  ಅನ್ನುವುದೇ ಮಗಳು.


ಹಿಂದಿನ ವಿಧಾನದಲ್ಲೇ ಈ ಬಾರಿಯೂ ರಾಗಿಮಣ್ಣಿಯ ಹುಡಿ ಸಿದ್ಧವಾಯಿತು.   

ಹುಡಿಯನ್ನು ಜರಡಿಯಾಡಿಸುವಾಗ ರಾಗಿಯ ತರಿ ಅರ್ಧ ಲೋಟ ದೊರೆಯಿತು.  ಈ ಮೊದಲು ರಾಗಿಹುಡಿ ತಯಾರಿಸುವಾಗ ನಾಲ್ಕುಹಸುಗಳನ್ನು ಸಾಕುವ ಲಲಿತಕ್ಕ ಇದ್ದಳು, ಅವಳಿಗೇ ಕೊಟ್ಟ ನೆನಪು.  ಈಗ ನಾನೇನ್ಮಾಡ್ಲೀ..  ಐಡಿಯಾ,  ಇಡ್ಲಿ ಮಾಡೋಣ.  ಹೇಗೆ?


ಒಂದು ಲೋಟ ಉದ್ದು ಅಳೆದು,  ತೊಳೆದು ನೀರು ಎರೆದು ಇಡುವುದು.

ಅರ್ಧ ಲೋಟ ರಾಗಿ ಸಾಕಾಗದು,  ಒಂದು ಲೋಟ ಅಕ್ಕಿ ತರಿ ಅಳೆಯಿರಿ.

ಒಟ್ಟಿಗೆ ಒಂದೂವರೆ ಲೋಟ ಆಯ್ತು.


ಉದ್ದು ನೆನೆದು ಹಿಗ್ಗಿದೆ,  ಇದೀಗ ಅರೆಯುವ ಸಮಯ.  ಅಕ್ಕಿ ರಾಗಿ ತರಿಗಳಿಗೆ  ಮುಳುಗುವಷ್ಟು ನೀರು ಎರೆದಿರಾ,  ಮಿಕ್ಸಿಯಲ್ಲಿಉದ್ದು ನುಣ್ಣಗೆ ಅರೆದಿರಾ, 

ಎಲ್ಲವನ್ನೂ ಒಟ್ಟಿಗೆ ಬೆರೆಸಿದಿರಾ,

ಉಪ್ಪು ಹಾಕಿ ಮುಚ್ಚಿ ಇಡುವಲ್ಲಿಗೆ ಇಡ್ಲಿ ಹಿಟ್ಟು ಆಯ್ತು.  

ಹುದುಗು ಬಂದ ಹಿಟ್ಟನ್ನು ನಾಳೆ ಮುಂಜಾನೆ ಇಡ್ಲಿ ಎರೆಯಿರಿ.  ಹುರಿದ ರಾಗಿ ಅಲ್ವೇ.  ಘಮಘಮಿಸುವ ಇಡ್ಲಿಯನ್ನು ಖುಷಿಖುಷಿಯಾಗಿ ತಿನ್ನಿ. 





Monday, 28 November 2022

ಬಪ್ಪಂಗಾಯಿ ರಸಂ

 

ನಾಲ್ಕು ದಿನ ಬಿಡುವು ಮಾಡಿಕೊಂಡು ಮಧು ಮನೆಗೆ ಬಂದಿದ್ದ.   ಅವನಿದ್ದಾಗ ಮಂಗಳೂರಿಗೆ ಹೋಗಿ ಸಿನೆಮಾ ನೋಡಿದ್ದಾಯ್ತು.   ನಿಜ ಹೇಳಬೇಕೂಂದ್ರೆ ನಾನು ಫಿಲ್ಮ್ ಥಿಯೇಟರ್ ಒಳಗೆ ಕಾಲಿಡದೆ ಸುಮಾರು ನಲ್ವತ್ತು ವರ್ಷಗಳಾಯ್ತು.   ಹ್ಞಾ,  ಬೆಂಗಳೂರಿನಲ್ಲಿ ಮಗಳೊಂದಿಗೆ ಒಂದು ಸಿನೆಮಾ ನೋಡಿದ್ದಿದೆ,  ಅದೇನೋ ಕಾಸರಗೋಡು ಶಾಲೆ ಅಂತ ಮೈಲುದ್ದ ಹೆಸರಿಟ್ಕೊಂಡಿತ್ತು ಆ ಸಿನೆಮಾ,  ಅನಂತನಾಗ್ ಇದ್ದುದರಿಂದ ಸಿನೆಮಾ ತಕ್ಕಮಟ್ಟಿಗೆ ಚೆನ್ನಾಗಿಯೇ ಇತ್ತು.


ನಮ್ಮ ಬೇಕು ಬೇಡಗಳನ್ನು ಪೂರೈಸಿ,  ಮಧುಕರ ಬೆಂಗಳೂರಿಗೆ ಹೊರಡುವ ಸಿದ್ಧತೆಯಲ್ಲಿದ್ದ.  “ ಮಧೂ, ಬಪ್ಪಂಗಾಯಿ ತಿನ್ನದೇ ತುಂಬ ಸಮಯ ಆಯ್ತಲ್ಲ..  ಸಮಯ ಇದ್ದರೆ ಕೊಯ್ದು ತಾ.. “

ಅವನೂ ತೋಟದಿಂದ ತಂದ,  ಬರೇ ಪುಟ್ಟದು,  ಆಗಲೇ ಹಣ್ಣೂ ಆಗಿತ್ತು.   “ ಅಮ್ಮ,  ತೋಟದ ಬಪ್ಪಂಗಾಯಿ ಮರ ಅಡಿಕೆಮರದಷ್ಟೇ ಎತ್ತರ ಆಗಿದೆ, ಇದೊಂದೇ ಕೊಯ್ಯಲಿಕ್ಕಾಯಿತು. “




ನಾಲ್ಕು ದಿನಗಳಿಂದ ಅಡಿಕೆ ಸುಲಿಯುತ್ತಿದೆ,  ಈಗ ಕೆಲಸಕ್ಕೆ ಬರುವ ಯುವಕರಲ್ಲಿ ಊಟ ಚಹಾ ಇತ್ಯಾದಿ ಬೇಡಿಕೆಗಳಿಲ್ಲ.  ಹಾಗಾಗಿ ನನ್ನ ಗಮನ ಅವರ ಕಡೆ ಹೋಗುವುದೇ ಇಲ್ಲ,  ಇವತ್ತು ಬೇಕಾಯಿತು,  “ ನೋಡಪ್ಪಾ ಚೆನ್ನಪ್ಪ, ಅಲ್ಲೊಂದು ಪೇರಳೆ ಮರ ಉಂಟಲ್ಲ, ಅದರ ಪಕ್ಕದಲ್ಲಿ ಬಪ್ಪಂಗಾಯಿ ಮರ, ಅದರಲ್ಲಿ ಬಪ್ಪಂಗಾಯಿ ಉಂಟೋ ನೋಡು… “

ಅಡಿಕೆ ಸುಲಿಯುತ್ತಿದ್ದವನು ಧಿಗ್ಗನೆ ಎದ್ದು ಅತ್ತ ಕಡೆ ಹೋದ,  “ ತುಂಬ ಉಂಟಲ್ಲ, ಹಣ್ಣಾಗಿದ್ದೂ ಇದೆ… “

“ ಒಂದ್ ನಾಲಕ್ಕು ಕೊಯ್ದು ಇಡ್ತೀಯಾ.. “ ಅಂತ ಹೇಳಿ ಒಳ ಹೋದೆ.


ಸಂಜೆ ಎದ್ದು ನೋಡಿದಾಗ ನಾಲ್ಕು ಘನಗಾತ್ರದ ಬಪ್ಪಂಗಾಯಿಗಳು ಜಗಲಿಯಲ್ಲಿ ಕೂತಿವೆ. 

ಪಲ್ಯ ಮಾಡಬಹುದು,  ಸಾಂಬಾರೂ ಆದೀತು.  ಹಣ್ಣಾದ ಮೇಲೆ ತಿನ್ನುವುದು, ಜ್ಯೂಸು,  ಮಿಲ್ಕ್ ಶೇಕ್,  ಸಕ್ಕರೆ ತುಪ್ಪದ ಪಾಕದಲ್ಲಿ ಹಲ್ವ, ಜಾಮ್…  ಮುಗಿಯದ ತಿನಿಸುಗಳು.


ಬಪ್ಪಂಗಾಯಿ ತಿನ್ನುತ್ತಿದ್ದರೆ ಪಚನಾಂಗಗಳು ಶುದ್ಧೀಕರಿಸಲ್ಪಡುತ್ತವೆ,  ಜಂತುಹುಳಗಳ ಬಾಧೆಯೂ ಇರದು.   ಬೆಳೆಯುತ್ತಿರುವ ಮಕ್ಕಳಿಗೆ ಅತ್ಯುತ್ತಮ ಹಣ್ಣು ಇದು.   ಬಪ್ಪಂಗಾಯಿಯ ಗುಣಕಾರಿ ಅಂಶಗಳು ಸಾಕಷ್ಟಿವೆ.  ಚೂರಿ ಇಲ್ಲವೇ ಮೆಟ್ಚುಕತ್ತಿಯಲ್ಲಿ ಹೆಚ್ಚುವಾಗ  ಜಾಗ್ರತೆ ಎಷ್ಟಿದ್ದರೂ ಸಾಲದು,  ಗಾಯವಾಗುವ ಸಂಭವ ಜಾಸ್ತಿ,  ಅದರ ರಸ ಅಷ್ಟೂ ತೀಕ್ಷ್ಣ ಎಂದು ತಿಳಿಯಿರಿ.


ಈಗ ನಾವು ಬಪ್ಪಂಗಾಯಿ ಪದಾರ್ಥ ಮಾಡುವವರಿದ್ದೇವೆ.  ಹೆಚ್ಚುವಾಗ ಒಂದು ಬಪ್ಪಂಗಾಯಿ ನಮ್ಮ ಅಡುಗೆಗೆ ಹೆಚ್ಚಾದೀತು ಅಂದ್ಬಿಟ್ಟು ಸ್ವಲ್ಪ ಹೋಳು ಉಪ್ಪಿನಕಾಯಿಗೆಂದು ತೆಗೆದಿರಿಸಲಾಯಿತು.   ನಮ್ಮ ಸಾಂಪ್ರದಾಯಿಕ ವಿಧಾನದ ಉಪ್ಪಿನಕಾಯಿ ಮಸಾಲೆಮಾಡಿ ಇಟ್ಕೊಂಡಿದ್ದೂ ಇದೆ, ನಿರಾಯಾಸದಿಂದ ಉಪ್ಪಿನಕಾಯಿ ಮಾಡಬಹುದು,  ಬಪ್ಪಂಗಾಯಿ ಹೋಳುಗಳಿಗೆ ಉಪ್ಪು ಬೆರೆಸಿ, ಮಸಾಲೆ ಸೇರಿಸಿದರಾಯಿತು.  ಅವಶ್ಯವಿದ್ದಲ್ಲಿ ಉಪ್ಪುನೀರು ಎರೆದರಾಯಿತು.   ಮಿಡಿ ಉಪ್ಪಿನಕಾಯಿ ಅದ್ದಿದ ಉಪ್ಪುನೀರು ತೆಗೆದಿರಿಸಿದ್ದು ಇದೆ,  ಅದನ್ನೇ ಎರೆದರಾಯಿತು,  ಉಪ್ಪಿನಕಾಯಿಯೂ ಪರಿಮಳ,  ಉಪ್ಪುನೀರಿಗೂ ಒಂದು ಗತಿ ಸಿಕ್ಕಂತಾಯಿತು.


 ಬಪ್ಪಂಗಾಯಿ ಪದಾರ್ಥ ಮಾಡಿದ್ದು ಹೇಗೆ?


ಹೋಳು ಮಾಡಿದ್ದಾಯ್ತಲ್ವೇ,  ಈ ವೇಳೆಗೆ ತೊಗರಿಬೇಳೆ ಬೆಂದಿರಬೇಕು,  ಹ್ಞಾ,  ನಾನು ಈ ಅಡುಗೆಯಲ್ಲಿ ಬೇಳೆಯೂ ಹಾಕಿಲ್ಲ,  ತೆಂಗಿನಕಾಯಿಯನ್ನೂ ತುರಿದಿಲ್ಲ.

 

ಮತ್ತೆ ಹೇಗೆ ಮಾಡಿದ್ದೂಽಽಽ


ಬಪ್ಪಂಗಾಯಿ ಬೇಯಲಿಟ್ಟು,  2 ಟೊಮ್ಯಾಟೋ, ನೀರುಳ್ಳಿ,  ಹಸಿಮೆಣಸು,  ಬೆಳ್ಳುಳ್ಳಿ, ಇತ್ಯಾದಿ ಹೆಚ್ಚಿ,  ಬಾಣಲೆಯಲ್ಲಿ ಬಾಡಿಸಿ, ಮಿಕ್ಸಿಯಲ್ಲಿ ತಿರುಗಿಸಿ.  ನುಣ್ಣಗೆ ಮಣ್ಣಿಯಂತಾಗಬಾರದು.


ಈ ಮಿಶ್ರಣವನ್ನು ಬೆಂದ ಬಪ್ಪಂಗಾಯಿ ಹೋಳುಗಳಿಗೆ ಕೂಡಿ,  ರುಚಿಗೆ ಬೇಕಾದ ಪ್ರಮಾಣದಲ್ಲಿ ಉಪ್ಪು ಹುಳಿ ಬೆಲ್ಲ ಹೊಂದಿಸಿಕೊಳ್ಳಿ.   ನೀರು ಎರೆಯದಿದ್ದಲ್ಲಿ ಪಪ್ಪಾಯಿ ಮುದ್ದೆ ಹುಳಿ ಎನ್ನಬಹುದು.  ನೀರು ಸೂಕ್ತ ಪ್ರಮಾಣದಲ್ಲಿ ಎರೆದು ಕುದಿಸಿ ಕೊತ್ತಂಬರಿಸೊಪ್ಪು ಉದುರಿಸಿ,  ಕರಿಬೇವು ಕೂಡಿದ ಒಗ್ಗರಣೆ ಕೊಡುವಲ್ಲಿಗೆ ಬಪ್ಪಂಗಾಯಿ ರಸಂ ಯಾ ಸಾರು ಎದ್ದು ಬಂದಿದೆ.  ಬೇಕಿದ್ದರೆಸಾರಿನಪುಡಿ ಹಾಕಬಹುದಿತ್ತು,  ಇದ್ದರೂ ಹಾಕಿಲ್ಲ.  ಊಟಕ್ಕೂ, ಚಪಾತಿಗೂ ಸೈ ಅನ್ನಿ.