Pages

Ads 468x60px

Wednesday, 20 September 2023

ಚಿನ್ನ ಚಿನ್ನ ದೋಸೈ

 



ಜ್ವರ ಬಂದಾಗ ಬಾಯಿ ರುಚಿ ಕೆಡುವುದೂ, ಕೇವಲ ಗಂಜಿಯೂಟ ಸಾಕೆನ್ನುವುದು ವಾಡಿಕೆಯ ಮಾತು.  ಕಳೆದ ಎರಡು ದಿನಗಳಿಂದ ನಮ್ಮಲ್ಲಿ ಗಂಜಿಯೂಟ.  ಮಾಡಿದ ಗಂಜಿ ಮುಗಿಯದೇ ಹೋಯಿತು.  ಉಳಿದ ಗಂಜಿ ಅನ್ನವನ್ನು ಅಕ್ಕಿಯೊಂದಿಗೆ ತಿರುಗಿಸಿ ದೋಸೆಹಿಟ್ಟು ಎಂದು ಹೆಸರಿಟ್ಟು,  ಮಾರನೇ ದಿನ ದೋಸೆ ಎರೆಯಲಾಯಿತು.  ಬ್ರೆಡ್ ನಂತಹ ದೋಸೆ ಎದ್ದು ಬಂದಿತು.  ತೆಂಗಿನತುರಿ, ಹುರಿಗಡಲೆ, ಹಸಿಮೆಣಸು ಸೇರಿದ ಚಟ್ಣಿ.


ಮಾರನೇ ದಿನ ಗಂಜಿಯೂಟದ ಜೊತೆಗೆ ಕೂಡಿಕೊಳ್ಳಲು ಪುನರ್ಪುಳಿ ಸಾರು ಹಾಗೂ ಬೀಟ್ರೂಟ್ ಪಲ್ಯ ತಯಾರಾದುವು. 


ರಾತ್ರಿ ಮಲಗುವ ಮೊದಲು ದೋಸೆಗೆ ಅರೆಯುವುದಿದೆ.  ಎರಡು ಲೋಟಾ ದೋಸೆ ಅಕ್ಕಿ ಹಾಗೂ ಎರಡು ಚಮಚಾ ಮೆಂತ್ಯನೆನೆದಿದ್ದುವು.  ಉಳಿದ ಪಲ್ಯವೂ, ಉಳಿದ ಗಂಜಿಯೂ ಸೇರಿ ದೋಸೆ ಹಿಟ್ಟನ್ನು ಸಂಪನ್ನಗೊಳಿಸುವಲ್ಲಿ ನೆರವಾದುವು.  ತೆಂಗಿನತುರಿ, ಹುರಿಗಡಲೆ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಸೇರಿದಾಗ ಒಂದು ಚಟ್ಣಿ ಆಯಿತು.


ಗಂಜಿ ಅನ್ನ ಹಾಗೂ ಅಕ್ಕಿಯ ಅಳತೆ ಒಂದೇ ಪ್ರಮಾಣದಲ್ಲಿರಲಿ.  ಪಲ್ಯವೂ ಸರಳವಾಗಿರಲಿ,  ಅತಿಯಾದ ಮಸಾಲೆಸಾಮಗ್ರಿಯೇನೂ ನಾನು ಹಾಕಿಲ್ಲ. 



Tuesday, 5 September 2023

ಹುರಿಯಕ್ಕಿ ತಿನಿಸು

 




ಅಡಿಕೆ ಸುಲಿಯಬೇಕಾಗಿದೆ.  ಒಬ್ಬ ಕೆಲಸಗಾರನ ಆಗಮನ ಆಯಿತು.  ಸಂಜೆಯಾಗುವಾಗ ಅಂದಾಜು ಮೂವತ್ತು ಕಿಲೋ ಅಡಿಕೆಸುಲಿದ.  “ ನಾಳೆ ಬರುವಾಗ ಇನ್ನೂ ಸಿಕ್ಕಿದವರನ್ನು ಕರೆದು ಕೊಂಡು ಬಾ. “ ಎಂದರು ಮನೆ ಯಜಮಾನ್ರು.  ಮೂರನೇ ದಿನಕ್ಕಾಗುವಾಗ ಮೂರು ಜನ ಆಯ್ತು.  ಈವಾಗ ಸುಲಿದ ಅಡಿಕೆ ಗೋಣಿ ತುಂಬಿ ತುಳುಕಿತು.


“ಇವತ್ತು ಸಂಜೆ ಹುರಿಯಕ್ಕಿ ಮಾಡಿ ತೋರಿಸ್ತಾನಂತೆ ನಿನಗೆ.. “ ಎಂದರು ನಮ್ಮವರು.  ವಾರದ ಹಿಂದೆ ಸಂಜೆ ಹಾಲು ತರುವಾಗನನಗಾಗಿ ಮಂಡಕ್ಕಿಪುರಿ ಬಂದಿತ್ತು.  “ ಎಷ್ಟು ಚೆನ್ನಾಗಿ ಮಾಡಿ ಮಾರಾಟ ಮಾಡ್ತಾರೆ ನೋಡು.  ಇಷ್ಟು ಮಂಡಕ್ಕಿಗೆ ಮೂವತ್ತು ರೂಪಾಯಿ.  ಈಗಲೇ ತಿನ್ನು, ಮತ್ತೆ ಮೆತ್ತಗಾದೀತು. “ 


ಇವತ್ತು ಅಡಿಕೆ ಸುಲಿಯಲು ಬಂದವನು ಅದೇ ಮಂಡಕ್ಕಿ ಸೇಲ್ ಮಾಡಿತ್ತಿದ್ದವನೇ ಆಗಿರಬೇಕು.   ಬೆಳಗ್ಗೆ ಬಂದವನೇ ನನ್ನ ಬಳಿ ಹುರಿಯಕ್ಕಿ ಇದೆಯಾ ಎಂದೂ ವಿಚಾರಿಸ್ಕೊಂಡಿದ್ದ.  “ಇದೆ ನೋಡು ಎರಡು ಮುಷ್ಠಿ..  ಟೊಮೇಟೋ ನೀರುಳ್ಳಿ ಹಸಿಮೆಣಸು ಇದೆ,  ಕೊತ್ತಂಬರಿ ಸೊಪ್ಪು ಪುಲಾವ್ ಮಾಡಿ ಮುಗಿದಿದೆ.  ಜಾಸ್ತಿ ಖಾರ ಏನೂ ಬೇಡ. “


ಸಂಜೆ ಚಹಾ ಮಾಡಬೇಕಾದರೇ  ಮಂಡಕ್ಕಿ ಪುರಿಗೆ ಬೇಕಾದ ಸಾಹಿತ್ಯಗಳೊಂದಿಗೆ ಒಳಗೆ ಬಂದ.


“ಅಕ್ಕ, ಒಂದು ಪೀಸಕತ್ತಿ ಕೊಡಿ.. “

“”ಅಲ್ಲೇ ಉಂಟು ನೋಡು ಟೇಬಲ್ ಮೇಲೆ.. “

“ ಇದು ನನ್ನ ಹುರಿಯಕ್ಕಿ. “ ತಂದಿಟ್ಟೆ.

“ ಅದು ಬೇಡ, ನಾನು ತಂದಿದೇನೆ ಫ್ರೆಶ್. “

ಕೊತ್ತಂಬರಿ ಸೊಪ್ಪು, ಕ್ಯಾರೆಟ್, ಹಸಿಮೆಣಸು ಇತ್ಯಾದಿ ಅವನೊಂದಿಗೆ ಬಂದಿತ್ತು.

“ ಒಂದು ನೀರುಳ್ಳಿ ಕೊಡಿ. “  ನೀರುಳ್ಳಿ ಕೊಚ್ಚಲ್ಪಟ್ಟಿತು.

“ ಟೊಮೇಟೋ ಇಲ್ವ? “

ಇಲ್ಲದೇ ಉಂಟೇ,  ಫ್ರಿಜ್ಜಿನಿಂದ ಹೊರ ಬಂದಿತು. 

“ ಶುಂಠಿ,  ಬೆಳ್ಳುಳ್ಳಿ ? “

“ಅದೆಲ್ಲ ಬೇಡ. “ ಎಂದ ನಾರಾಯಣ.

ಕೊಚ್ಚುವ ಕಾರ್ಯ ಮುಗಿಯಿತು.





ನಮ್ಮ ಊರ ಭಾಷೆ ತುಳು,  ನಮ್ಮ ತುಳು ಸಂವಹನ ಇಲ್ಲಿಗೆ ಕನ್ನಡದಲ್ಲಿ ಬಂದಿದೆ.

“ ಅಕ್ಕ, ಒಂದು ದೊಡ್ಡ ತೋಪು (ತಪಲೆ ) ಬೇಕಲ್ಲ.. “

“ ಅಲ್ಲೇ ಮೇಲೆ ಉಂಟು ನೋಡು. “

ಕೆಳಗಿಳಿಸಿ, ತೊಳೆದು ತಂದ.


ಹೆಚ್ಚಿಟ್ಟ ಸಾಮಗ್ರಿಗಳೆಲ್ಲ ತಪಲೆ ಸೇರಿದುವು.

“ ಉಪ್ಪು,  ಎಣ್ಣೆ… “

“ ಒಳ್ಳೆ ಎಣ್ಣೆಯನ್ನೇ ಕೊಡು.. “ ವೀಕ್ಷಕರಾಗಿ ನಿಂತಿದ್ದ ನಮ್ಮವರು ಅನ್ನೋದೇ.

“ ಒಳ್ಳೆಯ ತೆಂಗಿನೆಣ್ಣೆ ಮಧು ಪುತ್ತೂರಿನಿಂದ ತಂದದ್ದೇ ಇದೆ,  ಇನ್ನೂ ಪ್ಯಾಕ್ ಬಿಡಿಸಿಲ್ಲ. “

ನಾರಾಯಣ ಚಾಕುವಿನಲ್ಲಿ ಪ್ಯಾಕ್ ಬಿಡಿಸಿ ಜಾಡಿಗೆ ತುಂಬಿಸಿ ಕೊಟ್ಟ.  ಅಂದಾಜು ಮೂರು ಚಮಚ ಎಣ್ಣೆ ತಪಲೆಗೆ ಎರೆದ.

ಮೆಣಸಿನ ಹುಡಿಯೂ ಖಾರದ ಬಾಬ್ತು ಬಿದ್ದಿತು.

ಅವನೇ ತಂದಿದ್ದ ಹುರಿಯಕ್ಕಿ ಸುರಿದ,  ಒಂದು ಸೇರು ಆದೀತು. 

“ ಇಷ್ಟೂ ಹುರಿಯಕ್ಕಿ ಯಾರು ತಿನ್ನೂದು? “

“ ಅಡಿಕೆ ಸುಲೀತಿದಾರಲ್ಲ, ಎಲ್ಲರೂ ಸೇರಿ ತಿಂತಾರೆ… ಹಹ. “ 


“ಅಕ್ಕ, ಒಂದು ಸೌಟು ಕೊಡಿ. “

ಸೌಟು ಗಿರಗಿರ ತಿರುಗಿದ್ದೇ ತಿರುಗಿದ್ದು,  ನಮ್ಮ ಮಂಡಕ್ಕಿ ಪುರಿ ತಯಾರಾಯ್ತು.  

ಹಸಿ ಸಾಮಗ್ರಿಗಳಿಂದ ತಯಾರಾದ ಈ ತಿನಸು, ಮೆತ್ತಗಾಗುವ ಮೊದಲೇ ತಿನ್ನಿರಿ.  ತುಂಬ ಮಾಡಿಟ್ಟು ದಾಸ್ತಾನು ಇಡುವುದಕ್ಕಿಲ್ಲ,  ಮನೆ ತುಂಬ ಜನ ಇರಬೇಕು,  ಸಂಜೆಯ ಹೊತ್ತು ಬಾಯಾಡಿಸಲಿಕ್ಕೆ ಸೊಗಸಾದ ತಿನಿಸು.


ಇದು ನಮ್ಮೂರ ಸ್ಪೆಶಲ್ ಹುರಿಯಕ್ಕಿ ತಿನಿಸು.  ಜಾತ್ರೆ, ಸಂತೆ ಬಂದಾಗ ಮಾತ್ರ ಈ ತಿನಿಸು ನಮಗೆ ಸಿಗುತ್ತಿದ್ದ ಕಾಲವೊಂದಿತ್ತು.  ಅದರೊಂದಿಗೆ ಕಬ್ಬಿನ ಹಾಲು  ಇರಲೇಬೇಕು. ಖಾರ ಖಾರ ಹುರಿಯಕ್ಕಿ ತಿಂದು ದೊಡ್ಡ ಲೋಟ ತುಂಬ ಕಬ್ಬಿನಹಾಲು ಕುಡಿದಾಗ ಸಿಗುವ ಸುಖ, ಸ್ವರ್ಗಸಮಾನ.


ಖಾರ ಜಾಸ್ತಿ ಹಾಕುವುದಿದ್ದರೆ ಮಾವಿನಕಾಯಿ ತುರಿ, ನಿಂಬೆಹಣ್ಣಿನ ರಸ ಸೇರಿಸುವುದು.   ಹುರಿದ ನೆಲಕಡಲೆ ಬೀಜಗಳನ್ನೂ ಅಲ್ಪಪ್ರಮಾಣದಲ್ಲಿ ಹಾಕಿದಲ್ಲಿ ರುಚಿ ಜಾಸ್ತಿ.






Monday, 24 July 2023

ಮಸಾಲಾ ಮ್ಯಾಂಗೋ

 












ಮಳೆಗಾಲವೆಂದರೆ ಭರಪೂರ ಮಾವಿನ ಹಣ್ಣಿನ ಕಾಲ,  

ಎಲ್ಲೆಲ್ಲಿಂದಲೋ ಆಗಮಿಸುವ ಈ ಹಣ್ಣುಗಳ ಸ್ವಾದಕ್ಕೆ ಎಣೆಯಿಲ್ಲ.  ನೋಡಲಿಕ್ಕೆ ಹೋದರೆ ಹಿರಣ್ಯದ ತೋಟದ ರಾಜ್ಯದಲ್ಲಿ ಕಸಿ ಮಾವಿನ ಮರಗಳು ಸಾಕಷ್ಟಿವೆ.  ಅದನ್ನೆಲ್ಲ ನಾವು ತಿಂದು ಮುಗಿಸಲಿಕ್ಕುಂಟೇ,   ಹೇಳಿಕೇಳಿ ಇದು ಕೇರಳ ರಾಜ್ಯ,   ಕಾರ್ಮಿಕರ ಮಜೂರಿ ಅಂದರೆ ಅವರು ಕೇಳಿದಷ್ಟು ಕೊಡಲೇ ಬೇಕು.  “ ಹೋಗಯ್ಯ ಬಾರಯ್ಯ” ಅನ್ನುವ ಹಾಗೂ ಇಲ್ಲ.  ಮನೆಯ ಮಕ್ಕಳಿಗೆ ಅಷ್ಟಿಷ್ಟು ಕೊಟ್ಟು ಕಳಿಸುವಲ್ಲಿಗೆ  “ಸಾಕಪ್ಪ,  ಈ ಮಾವಿನಹಣ್ಣಿನ ವ್ಯವಹಾರ “ ಎಂದೆನ್ನಿಸುವಲ್ಲಿಗೆ ಮಾವಿನ ಹಣ್ಣುಗಳು ಕಳಿತು, ಕೊಳೆತು,  ಉದುರಿ ಬಿದ್ದೇ ಹೋದವು.


ಈಗ ಮಾವಿನಹಣ್ಣುಗಳನ್ನು ಕೊಂಡು ತರುವುದು.   ಮಾವಿನ ಹಣ್ಣುಗಳ ಸಿಪ್ಪೆ ಹೆರೆದು ಹೋಳು ಮಾಡಿ ತಿಂದರೇನೇ ರುಚಿ.  ಊಟಕ್ಕೆ ಉಪ್ಪಿನಕಾಯಿ ಇಲ್ಲದೇ ಹೋದ್ರೂ ಆದೀತು,  ತಟ್ಟೆ ತುಂಬ ಮಾವಿನ ಹಣ್ಣಿನ ಹೋಳುಗಳು ಇದ್ರೆ ಸಾಕು.


“ಹೀಗೆ ಮಳೆ ಸುರಿಯುತ್ತಿರುವಾಗ ಹಸಿ ಹಸಿ ಹಣ್ಣು ತಿಂದರೆ ಶೀತ, ಕೆಮ್ಮು ಜಾಸ್ತಿ ಆದೀತು. “

“ಮತ್ತೇನು ಮಾಡು ಅಂತೀರಾ? “

“ ಬೇಯಿಸಿ ತಿಂದರಾದೀತು. “

“ ಸರಿ,  ಉಪ್ಪಿನಕಾಯಿ ಹೊರಡಿ ಬೆರೆಸಿ ತಿನ್ನೋಣ. “

“ ನಿನ್ನ ಉಪ್ಪಿನಕಾಯಿ ಏನೂ ಬೇಡ,  ಸಕ್ಕರೆ ಹಾಕಿ ಬೇಯಿಸಿ ಇಟ್ಟರೆ ಫ್ರೀಜರ್ ನಲ್ಲಿ ಒಂದು ವರ್ಷ ಇಡಲಿಕ್ಕಾಗುತ್ತಂತೆ. “

“ ನೀವೇ ಮಾಡ್ಕೊಳ್ಳಿ. “

ಎರಡು ದಿನ ಸಕ್ಕರೆಯ ಮಾವಿನ ಹಣ್ಣು ತಿಂದಿದ್ದಾಯಿತು.

“ಸಕ್ಕರೆಯ ಬದಲು ಪೆಪ್ಪರ್, ಜೀರಾ, ಉಪ್ಪು ಹಾಕಿದ್ರೆ ಹೇಗೆ?  ಎಲ್ಲ ಹುಡಿಗಳೂ ಅಡುಗೆಮನೆಯೊಳಗೆ ಇವೆ.”

ಅನುಮೋದನೆ ದೊರೆಯಿತು.


ತಟ್ಟೆ ತುಂಬ ಮಾವಿನ ಹೋಳು ಇರಲಿ.

ನಾನ್ ಸ್ಟಿಕ್ ತಪಲೆ ಉತ್ತಮ, ತಳ ಹತ್ತುವ ರಗಳೆಯಿಲ್ಲ.

ಇಂಡಕ್ಷನ್ ಸ್ಟವ್ ಆದೀತು,  ನಿಮಿಷದ ಲೆಕ್ಕದಲ್ಲಿ ಸ್ಟವ್ ಆರಿಸಬಹುದು.


ಒಂದು ಚಮಚ ತಾಜಾ ತುಪ್ಪ ಹಾಗೂ ಮಾವಿನ ಹೋಳು ಬಿಸಿಯಾಗುತ್ತ ಇದ್ದಂತೆ ರುಚಿಗೆ ತಕ್ಕಷ್ಟು ಕಾಳುಮೆಣಸಿನ ಹುಡಿ,  ಜೀರಿಗೆಹುಡಿ,  ಚಿಟಿಕೆ ಅರಸಿಣ,  ಉಪ್ಪು,  ಇರಲೀ ಅಂತ ತುಸು ಸಕ್ಕರೆ ಹಾಕಿರಿ.  ಸೌಟು ಆಡಿಸಿ,  ಹೋಳುಗಳು  ಮೆತ್ತಗೆ ಆದ ಕೂಡಲೇ ಸ್ಟವ್ ಆರಿಸಿ.  ಮಾವಿನ ಹೋಳು ಚಮಚದಲ್ಲಿ ತೆಗೆದು ಬಾಯಿಗೆ ಹಾಕಿಕೊಳ್ಳಲು ಬರುವಂತಿದ್ದರಾಯಿತು.   ಬಿಸಿಯಾಗಿಯೂ ತಿನ್ನಿ,  ಆರಿದ ನಂತರವೂ ತಿನ್ನಿ.   ಉಳಿದದ್ದನ್ನು ಫ್ರೀಜರ್ ಒಳಗಿರಿಸಿ ನಾಳೆ ತಿನ್ನಿ.