ಬಿಸಿಲಿನ ಝಳ, ತಂಪಿನ ಗುಳ
ಅತಿಯಾದ ಸೆಕೆ, ಪಾನಕದ ಸುಖ
ಬೇಸಿಗೆಯ ಬಿಸಿ, ಪಾನೀಯ ತಯಾರಿಸಿ
ಇದೇನು ಕವನವೇ ಅಂತೀರಾ. ತರಹೇವಾರಿ ತಂಪು ಪಾನೀಯಗಳನ್ನು ಮನೆಯಲ್ಲಿಯೇ ತಯಾರಿಸೋಣ, ಬನ್ನಿ.
ದೊಡ್ಡಗಾತ್ರದ ಗಜಲಿಂಬೆಯ ರಸ ಹಿಂಡಿ ತಗೆದಿಡಿ. 1 ಕಪ್ ರಸಕ್ಕೆ 3 ಕಪ್ ಸಕ್ಕರೆ.
ಸಕ್ಕರೆ ಮುಳುಗುವಷ್ಟು ನೀರೆರೆದು ಕುದಿಸಿ.
ಸಕ್ಕರೆ ಕರಗಿತೇ, ಕುದಿದ ಸಕ್ಕರೆ ದಪ್ಪಗಾಗಿ ಜೇನಿನಂತಾಯಿತೇ, ಈಗ ಕೆಳಗಿಳಿಸಿ,
ಲಿಂಬೇ ರಸ ಎರೆದು ತಣಿಯಲು ಬಿಡಿ.
ಚೆನ್ನಾಗಿ ಆರಿದ ನಂತರ ಶುದ್ಧವಾದ ಬಾಟಲಿಯಲ್ಲಿ ಹಾಕಿಡಿ.
ದಿನವೂ ಸಂಜೆ ಬೇಕಾದ ಪ್ರಮಾಣದಲ್ಲಿ ತಂಪು ನೀರು ಸೇರಿಸಿ ಕುಡಿಯಿರಿ. ಬಿಸಿಲಿನ ಝಳ ನಿವಾರಿಸಿ.
ಗಜಲಿಂಬೇರಸ ಕಫ ನಿವಾರಕ. ಕೆಮ್ಮು, ದಮ್ಮು ಇದ್ದರೂ ನಿರಾತಂಕದಿಂದ ಕುಡಿಯಬಹುದಾಗಿದೆ.
ಕಿತ್ತಳೆ ಹಣ್ಣಿನಿಂದಲೂ ಹೀಗೆ ಮಾಡಬಹುದು. ಒಟ್ಟಿನಲ್ಲಿ ಹಣ್ಣು ರಸಭರಿತವೂ ಹುಳಿಯಾಗಿಯೂ ಇದ್ದರಾಯಿತು.
ಬೀಂಬುಳೀ ಹಣ್ಣು ಮನೆಯಂಗಳದಲ್ಲೇ ಇದೆ. ಅದನ್ನೂ ಮೇಲಿನ ಮಾದರಿಯಲ್ಲೇ ಪಾನೀಯ ತಯಾರಿಸಿದರಾಯಿತು. ಈ ಹಣ್ಣಿಗೆ ಪ್ರತ್ಯೇಕ ಸುವಾಸನೆಯಿಲ್ಲ, ಒಂದು ಲಿಂಬೇರಸ ಹಾಗೂ ಯಾಲಕ್ಕಿ ಪುಡಿ ಸೇರಿಸಿ.
ಬೀಂಬುಳೀ ಕೊಲೆಸ್ಟರಾಲ್ ನಿಯಂತ್ರಕ ಗುಣವುಳ್ಳದ್ದು, ನಿಯಮಿತ ಉಪಯೋಗದಿಂದ ಆರೋಗ್ಯ ಭಾಗ್ಯ ಉಳಿಸಿಕೊಳ್ಳಿ.
ಇದೇ ಜಾತಿಗೆ ಸೇರಿದ ದಾರೆಹುಳಿ ಹಣ್ಣನ್ನೂ ಉಪಯೋಗಿಸಬಹುದು. ಇದು ಆಯುರ್ವೇದ ಶಾಸ್ತ್ರ ರೀತ್ಯಾ ಔಷಧೀಯ ಗುಣಗಳುಳ್ಳದ್ದು.
ಅಡುಗೆಮನೆಯ ಡಬ್ಬಾದಲ್ಲಿ ಹುಣಸೇಹುಳಿ ಇದ್ದೇ ಇದೆ. ಈಗ ಹೊಸ ಹುಣಸೇಹುಳಿ ತೆಗೆದಿರಿಸುವ ಸಮಯ. ಹಳೆಯದು ಕಪ್ಪಗಾಗಿರುತ್ತದೆ. ಅದನ್ನು ಮೂಲೆಗೆಸೆಯಬೇಕಾಗಿಲ್ಲ.
ಲಿಂಬೇ ಗಾತ್ರದ ಹುಣಸೇಹುಳಿ, ನೀರೆರೆದು ಗಿವುಚಿ ರಸ ತಗೆದಿಡಿ.
3 ಅಚ್ಚು ಬೆಲ್ಲ, ಪುಡಿ ಮಾಡಿ.
ಹುಣಸೇ ರಸ ಹಾಗೂ ಬೆಲ್ಲ ಸೇರಿಸಿ ಒಲೆಯ ಮೇಲಿಡಿ.
ಒಂದು ತುಂಡು ಶುಂಠಿ ಜಜ್ಜಿ ಹಾಕಿ.
ಚಿಕ್ಕ ಚಮಚ ಕಾಳು ಮೆಣಸಿನ ಹುಡಿಯನ್ನೂ ಹಾಕಿ.
ದಪ್ಪ ಜೇನುಪಾಕ ಬಂದ ಮೇಲೆ ಕೆಳಗಿಳಿಸಿ.
ಈ ದ್ರವವನ್ನು ಪಾನಕ ಮಾತ್ರವಲ್ಲದೆ ಇನ್ನಿತರ ನಳಪಾಕಗಳಿಗೂ ಉಪಯೋಗಿಸಬಹುದು.
ಅಡುಗೆಮನೆಯಲ್ಲಿ ಇರುವ ಇನ್ನೊಂದು ಖಾದ್ಯ ವಸ್ತು ಪುನರ್ಪುಳಿ ಹಣ್ಣು. ಒಣಗಿಸಿಟ್ಟ ಸಿಪ್ಪೆ ಇದೆಯಲ್ಲ, ಒಂದು ಕಪ್ ತುಂಬಾ ತೆಗೆದು 3 ಕಪ್ ನೀರು ಹಾಕಿ ನೆನೆಯಲು ಬಿಡಿ. ಸಿಪ್ಪೆ ಮೆತ್ತಗಾಗಲು ಕುದಿಸಿ, ಏಲಕ್ಕಿ ಬೇಕಿದ್ದರೆ ಸೇರಿಸಬಹುದು. ಆರಲು ಬಿಡಿ. ಚೆನ್ನಾಗಿ ಆರಿದ ನಂತರ ಬೇಯಿಸಲು ಉಪಯೋಗಿಸಿದ ನೀರಿನೊಂದಿಗೆ ನುಣ್ಣಗೆ ಕಡೆಯಿರಿ. ಜಾಲರಿಯಲ್ಲಿ ಶೋಧಿಸಿ ರಸವನ್ನು ತಗೆದಿಡಿ.
3 ಕಪ್ ಸಕ್ಕರೆಗೆ ಈ ರಸವನ್ನು ಸೇರಿಸಿ ಕುದಿಸಿ.
ಆರಿದ ಮೇಲೆ ಬಾಟಲಿಗೆ ತುಂಬಿಸಿ.
ಬೇಕಾದಾಗ 3 : 1 ರಂತೆ ನೀರಿನೊಂದಿಗೆ ಬೆರಸಿ, ಪುನಃ ಜಾಲರಿಯಲ್ಲಿ ಶೋಧಿಸಿ, ಐಸ್ ತುಂಡು ಹಾಕಿಟ್ಟು ಕುಡಿದರಾಯಿತು.
ನೆನಪಿಡಿ, ಈ ಮೇಲಿನ ಯಾವ ಪಾನೀಯಗಳಿಗೂ ನಾವು ಕೃತಕ ರಸದ್ರವ್ಯಗಳನ್ನು ಸೇರಿಸಿಲ್ಲ. ಬಣ್ಣಗಳನ್ನೂ ಕೊಟ್ಟಿಲ್ಲ. ಕೃತಕ ಸುವಾಸನೆಯನ್ನೂ ನೀಡಿಲ್ಲ. ನಿಸರ್ಗದತ್ತ ಈ ಪಾನೀಯಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳುಂಟಾಗುವಂತಿಲ್ಲ.
ಇನ್ನು ನಿಮ್ಮ ಮನೆ ಹಿತ್ತಿಲಿನ ಇನ್ನಾವುದೇ ಹಣ್ಣುಗಳ ಮೇಲೆ ಪ್ರಯೋಗ ನಡೆಸಿಯೇ ಬಿಡಿ.
Posted via DraftCraft app
0 comments:
Post a Comment