Wednesday, 13 March 2013
ಕಾಫೀ ಡೇ
ಮುಂಜಾನೆಯ ಚುಮು ಚುಮು ಚಳಿಗು
ಅಡಿಕೆ ತೋಟದಲ್ಲಿ ಬರಿಗಾಲ ವಾಕಿಂಗು
ತೋಟ ತುಂಬಿದ ಹೊಸ ಬೆಳಗು |
ಬಿರಿದಿಹ ಕಾಫೀ ಹೂಗಳ ತೋರಣ
ಮದುವಣಗಿತ್ತಿಯ ಅಲಂಕರಣ
ದುಂಬಿಗಳ ಕಲರವದ ನರ್ತನ |
ಕಾಫೀ ಹೂಗಳ ಮಾದಕ ಸುಗಂಧ
ತೇಲಿ ತೇಲಿ ಬರುತಿದೇ
ಭ್ರಮರಗಳ ಝೇಂಕಾರದೆ
ಜೇನ್ನೊಣಗಳ ಸಂಗೀತ ಸುಧೆ|
ಅಂತಿಂಥ ಹೂವು ನೀನಲ್ಲ
ನಿನ್ನಂಥ ಹೂವು ಬೇರಿಲ್ಲ
ಅರಳಿರುವ ಹೂವು
ನಾಳೆ ಕಾಯಾಗಿ
ಮಾಗಿ ಕೆಂಪು ಹಣ್ಣಾಗಿ
ಹಕ್ಕಿಪಕ್ಕಿಗಳ ಮುದ್ದು ತಿನಿಸಾಗಿ |
ಅಂತಿಂಥ ಹೂವು ನೀನಲ್ಲ
ನಿನ್ನಂಥ ಹೂವು ಬೇರಿಲ್ಲ |
ಕಾಫೀ ಉಷ್ಣವಲಯದ ಬೆಳೆ. ಕರ್ನಾಟಕದ ಕೊಡಗು ಜಿಲ್ಲೆ ಕಾಫೀ ಬೆಳೆಗೆ ಪ್ರಸಿದ್ಧವಾಗಿದೆ. ಜಾಗತಿಕ ಮಟ್ಟದ ಪೇಯವಾಗಿರುವ ಇದರ ಬೆಳೆಯಿಂದ ಉತ್ತಮ ಆದಾಯವೂ ಇದೆ. ರಪ್ತು ವಿಭಾಗದಿಂದ ಸರ್ಕಾರದ ಬೊಕ್ಕಸವನ್ನೂ ತುಂಬಿಸುವ ಈ ಕಾಫಿ, ಕೇವಲ ಮಲೆನಾಡು ಮಾತ್ರವಲ್ಲದೆ ನಮ್ಮ ಕರಾವಳಿಯ ಅಡಿಕೆ ತೋಟದಲ್ಲೂ ಬೆಳೆಯುವಂತಹುದು. ಇಲ್ಲಿನ ಚಿತ್ರದಲ್ಲಿ ಇರುವುದು ರೋಬಸ್ಟಾ ತಳಿ. ಇದು Rubiaceae ಕುಟುಂಬಕ್ಕೆ ಸೇರಿದೆ. ಒಂದು ಗಿಡ ನೆಟ್ಟ 3 -4 ವರ್ಷಗಳಲ್ಲಿ ಫಲ ಕೊಡಲು ಪ್ರಾರಂಭ. ಅಂತಹ ರೋಗಬಾಧೆಯೇನೂ ಈ ಸಸ್ಯಕ್ಕಿಲ್ಲ. ಬಲು ಗಟ್ಟಿಯಾದ ರೆಂಬೆಗಳು, ಸದಾ ಹಸಿರಾದ ಎಲೆಗಳು. ವರ್ಷವಿಡೀ ಫಲ ಕೊಡುತ್ತಿರುತ್ತದೆ.
ಆದರೆ ನಮ್ಮ ಕಾಸರಗೋಡಿನ ಪರಿಸರದಲ್ಲಿ ಅದಕ್ಕೆಂದೇ ಮಾರುಕಟ್ಟೆಯಿಲ್ಲದಿರುವುದರಿಂದ ತೋಟದೊಳಗೆ ಅಲಂಕಾರಿಕ ಸಸ್ಯವಾಗಿ ಮೆರೆಯುತ್ತಿದೆ.
Posted via DraftCraft app
Subscribe to:
Post Comments (Atom)
0 comments:
Post a Comment