Pages

Ads 468x60px

Saturday 8 February 2014

ಯಶಸ್ವೀ ಮಹಿಳೆಯ ಹಿಂದೆ ....







ನಾವು ಎರಡೂ ದಿನ ಉಳಕೊಂಡಿದ್ದು ತಂಗಿಯ ಮನೆಯಲ್ಲಿ.   ಮಾರನೇ ದಿನ ಬೆಳಗೆದ್ದು ಪುಳಿಯೋಗರೆ ಹಾಗೂ ಕಾಯಿಹೋಳಿಗೆಯ ಆತಿಥ್ಯದೊಂದಿಗೆ ಮುಂದಿನ ಪ್ರಯಾಣಕ್ಕೆ ಸಜ್ಜಾದೆವು.   ಪುಳಿಯೋಗರೆ ತಿನ್ನುತ್ತಿರಬೇಕಾದರೆ  ಮೇಲುಕೋಟೆಯಲ್ಲಿ ತಿಂದ ಖಾರದ ಕೊಳ್ಳಿಯಂತಹ ಪುಳಿಯೋಗರೆ ನೆನಪಿಗೆ ಬರದಿದ್ದೀತೇ...   " ಈ ಪುಳಿಯೋಗರೆ ಇಷ್ಟು ರುಚಿಕಟ್ಟಾಗಿದೆ...ಹ್ಯಾಗೆ ಮಾಡಿದ್ದೂ "  ವಿಚಾರಿಸಿ ತಿಳ್ಕೊಂಡಿದ್ದೂ ಆಯಿತು.   ಪ್ರವಾಸದ ಆರಂಭದ ದಿನ ಚಿತ್ತುಪುಳಿ ಹಣ್ಣು ರಸ್ತೆ ಬದಿಯಿಂದ ಖರೀದಿಸಿದ್ದೆವು.   ಅದನ್ನು ಸಿಪ್ಪೆ ಸುಲಿದು ತಿನ್ಬೇಕಿದ್ರೂ ಉಪ್ಪು, ಮೆಣಸಿನ ಹುಡಿಯೂ ಬಂದಿತ್ತು.   ಚಾಮುಂಡಿ ಬೆಟ್ಟದ ರಾಜನೆಲ್ಲಿಕಾಯಿಗೂ ಅಷ್ಟೇ, ಉಪ್ಪು ಮೆಣಸು ಹಾಕಿಯೇ ಮಾರ್ತಿದ್ರು.   ಹೀಗೆ ಪ್ರವಾಸ ಹೋದಲ್ಲೆಲ್ಲಾ ಮೆಣಸು ತಿನ್ನುತ್ತಾ ಬಂದ್ರೆ ಮನೆ ತಲಪುವಾಗ ನಮ್ಮ ಜಠರದ ಗತಿಯೇನಾದೀತು ಅಂತ ಮನದೊಳಗೇ ಅಂದುಕೊಂಡಿದ್ದನ್ನು ಬಾಯಿ ಬಿಟ್ಟು ತಂಗಿಯ ಬಳಿ ಹೇಳಲಿಲ್ಲ.

  ತಂಗಿ ವರಲಕ್ಷ್ಮಿಯ ಪತಿ ಯು.ಕೆ. ಭಟ್ ಉದ್ಯಮಿ,  ಸುಮಾರು ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲಿದ್ದಾರೆ.   ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಯು. ಕೇಶವ ಭಟ್ ಲ್ಯಾಬ್ ಉಪಕರಣಗಳ ತಯಾರಿಕಾ ಘಟಕವನ್ನು ಪ್ರಾರಂಭಿಸಿ ಯಶಸ್ವೀ ಆದರು.    ಆ ವೇಳೆಗೆ ನನ್ನ ತಂಗಿ ವರಲಕ್ಷ್ಮಿ ಜೊತೆ ವಿವಾಹಿತರಾದ ಕೇಶವ ಭಟ್,  ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಹೊರ ಬಂದ ವಿದ್ಯಾರ್ಥಿನಿಯಾದ ವರಲಕ್ಷ್ಮಿಗೆ ಬೆಂಗಳೂರಿನಲ್ಲೇ ಪಿ. ಎಚ್ ಡಿ ಪದವಿ ವ್ಯಾಸಂಗಕ್ಕೆ ಬೇಕಾದ ಅನುಕೂಲತೆಗಳನ್ನು ಒದಗಿಸಿ ಕೊಟ್ಟು,  ಒಬ್ಬ ಯಶಸ್ವೀ ಮಹಿಳೆಯ ಹಿಂದೆ ಕಾಳಜಿ ವಹಿಸುವ ಪತಿಯಿರುತ್ತಾನೆ ಎಂಬುದನ್ನೂ ತೋರಿಸಿಕೊಟ್ಟರು.    ವಿಟ್ಲದ ಸಮೀಪ ಉಕ್ಕುಡ ಎಂಬಲ್ಲಿ ಹಿರಿಯರಿಂದ ಬಂದ ಗದ್ದೆ, ತೋಟಗಳ ಉಸ್ತುವಾರಿ ಮಾಡುತ್ತಾ ಇದ್ದ ಸಹೋದರ ಸತ್ಯನಾರಾಯಣನನ್ನೂ ಗ್ರಾಮೀಣ ಪ್ರದೇಶದ ಸಂಪನ್ಮೂಲಗಳನ್ನು ಬಳಸಿ ಉದ್ಯಮಿಯಾಗಿ ನೆಲೆ ನಿಲ್ಲಿಸಿದ್ದೂ ಇವರ ಸಾಧನೆ.   ಉಕ್ಕುಡದಲ್ಲಿರುವ ಇವರ ತಮ್ಮನ ಗೇರುಬೀಜದ ಫ್ಯಾಕ್ಟರಿ ನೂರಾರು ಕಾರ್ಮಿಕರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿದೆ.

ಮೊದಲು ಯು. ಕೆ. ಭಟ್ ಜೊತೆ ಅವರದ್ದೇ ಆದ Sharadatronic Instruments ಫ್ಯಾಕ್ಟರಿಯನ್ನು ನೋಡಿಕೊಂಡು ಮುಂದುವರಿಯೋಣ.





ದಾವಣಗೆರೆ ಬೆಣ್ಣೆ ದೋಸೆ ಇಲ್ಲಿ ಸಿಗುತ್ತದೆ -  ಎಂಬ ಫಲಕ ದೊಡ್ಡದಾಗಿ ಹಾಕಿದ್ದ ಹೋಟಲ್ ಎದುರಾಯಿತು.  " ಅಹ್ಹಾ... ಹೋಗೋಣ ಒಳಗೆ... ತಿಂದ್ಬಿಟ್ಟು ಬ್ಲಾಗ್ ಬರೆಯೋಣ ಅಕ್ಕಾ  "  ಗಿರೀಶ್ ರಾಗ ಶುರುವಾಯ್ತು.    ಹೋಟಲ್ ಒಳ ಹೊಕ್ಕಿದ್ದಾಯ್ತು,   ನೋಡಿದ್ರೆ ಸಂಜೆ ಮೂರು ಗಂಟೆಯ ನಂತರ ಈ ದೋಸೆ ಲಭ್ಯವಂತೆ.   ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗುವಂತಾಯಿತು.

ಮೈಸೂರಾಯ್ತು,  ಬೆಂಗಳೂರೂ ಸಾಕಾಯ್ತು ಎಂಬಂತೆ ನಾವಿಬ್ಬರಿದ್ದೆವು.   ಆದರೆ ಗಿರೀಶ್ ಕೇಳಬೇಕಲ್ಲ.  " ಇಸ್ಕಾನ್.... " ಅನ್ನುತ್ತಿದ್ದಂತೆ ನಾನೇ ಬೇಡ ಅಂದೆ.  ಅಲ್ಲಿಗೆ ಈ ಮೊದಲು ಕೇಶವ್ ಹಾಗೂ ತಂಗಿ ಜೊತೆ ಎರಡು ಮೂರು ಬಾರಿ ಹೋಗಿಯಾಗಿತ್ತು.   " ಕಬ್ಬನ್ ಪಾರ್ಕೂ ಬೇಡ " ಮನೆಗೆ ಹಿಂತಿರುಗುವ ಹಂಬಲ ನಮ್ಮದು.  ಇಲೆಕ್ಟ್ರಾನಿಕ್ಸ್ ಉಪಕರಣಗಳ ಶೋರೂಂ ಒಂದನ್ನು ಪ್ರವೇಶಿಸಿದ ಸ್ನೇಹಿತರು ಅಲ್ಲಿದ್ದ ಟೀವಿ,  ಅವುಗಳ ಸೌಂಡ್ ಸಿಸ್ಟಂ,  ವೀಡಿಯೋ ಕ್ವಾಲಿಟಿಗಳನ್ನು ತಪಾಸಿಸಿ ಏನನ್ನೂ ಕೊಳ್ಳದೆ ಹೊರಟರು.   ನಮ್ಮ ಮನೆಯಲ್ಲಿರುವ ಟೀವಿ ಎದುರು ಇವೆಲ್ಲ ಸಪ್ಪೆ ಎಂದು ನನಗೂ ಆನ್ನಿಸಿತ್ತು. 

 " ನಾವಿನ್ನು ಹಾಸನ ರಸ್ತೆಯಲ್ಲಿ ಮುಂದುವರಿಯಲಿದ್ದೇವೆ " ಎಂದ ಗಿರೀಶ್.   ಬೆಂಗಳೂರು ನಗರದಿಂದ ಹೊರ ಬರ ಬೇಕಾದರೇ ಸಾಕುಬೇಕಾಯಿತು.   



- ಮುಂದುವರಿಯಲಿದೆ.

Posted via DraftCraft app

0 comments:

Post a Comment