Pages

Ads 468x60px

Saturday, 15 February 2014

ಜೇನುಕಲ್ ಗಿರೀಶ

ಹಾಸನದಲ್ಲಿ ಹೋಟಲ್ ಊಟ.  ಕಾರು ಮುಂದುವರಿಯಿತು.   ಜೇನುಕಲ್ ಬೆಟ್ಟ ಗಿರೀಶನ ಮುಂದಿನ ಗುರಿ.   ನನಗಂತೂ ಇದೆಲ್ಲ ಹೊಸತು.   ಇದೂ ಒಂದು ಗಿರಿಧಾಮ.   ಇಲ್ಲಿಯೂ ಒಂದು ಗುಡಿ ಇದೆ.   ಸಿದ್ಧೇಶ್ವರ ಮುನಿಗಳ ತಪಸ್ಸಿಗೆ ಶಿವನೊಲಿದ ಕ್ಷೇತ್ರವಿದೆಂದು ಖ್ಯಾತಿ.   ಜೇನುಕಲ್ ಸಿದ್ಧೇಶ್ವರ ಬೆಟ್ಟವೆಂದೇ ಹೆಸರು ಪಡೆದಿದೆ.   ಹುಣ್ಣಿಮೆಯಂದು ಇಲ್ಲಿ ಜಾತ್ರೆ,  ಭಕ್ತಸಾಗರವೇ ಆ ದಿನ ಹರಿದು ಬರುತ್ತದೆ.   ಭಕ್ತಿಯಿಂದ ಪ್ರಾರ್ಥಿಸಿದವರಿಗೆ ಇಷ್ಟಾರ್ಥ ಸಿದ್ಧಿಯಾಗುವಂತಹ ವಿಶೇಷ ಕ್ಷೇತ್ರ.   ನಾವು ಇಲ್ಲಿ ತಲಪಿದಾಗ ಸಂಜೆಯಾಗಿತ್ತು.   ಅರಸೀಕೆರೆ  ರಸ್ತೆಯಲ್ಲಿ ಹೋಗುತ್ತಿರಬೇಕಾದರೆ ನಮ್ಮೆಜಮಾನ್ರಿಗೆ ನನ್ನ ಫೇಸ್ ಬುಕ್ ಸ್ನೇಹಿತರು,  ಈ ಊರಿನಲ್ಲಿರುವವರನ್ನು ನೆನಪಾಯಿತು.   ಮೊದಲೇ ಗೊತ್ತಿರುತ್ತಿದ್ರೆ ಫೋನ್ ಮಾಡಿ ಅಥವಾ ಮೆಸೇಜ್ ಕೊಟ್ಟು ಹೇಳಬಹುದಾಗಿತ್ತು ಎಂದು ಪೇಚಾಡಿಕೊಂಡರು.   

ದಾರಿಯುದ್ದಕ್ಕೂ ಗದ್ದೆಗಳು.   ಕಣ್ತುಂಬ ಹಸಿರು,   ಕೆಲವೆಡೆ ಕಟಾವ್ ಆಗಿತ್ತು.   ಒಣ ಹುಲ್ಲನ್ನು ಪೇರಿಸಿಟ್ಟಿದ್ದೂ ಕಂಡಿತು.   ಈ ಪರಿಸರ ಕೃಷಿಭೂಮಿ ಹೌದು,  ನಮ್ಮೂರಿನಂತಲ್ಲ ಎಂದು ಖುಷಿ ಪಟ್ಟೆ.   ರಾಗಿಯ ಗದ್ದೆ ಕಂಡಲ್ಲಿ ಒಂದು ಫೋಟೋ ಕ್ಲಿಕ್ಕಿಸಿ ಅಂತ ನಮ್ಮಜಮಾನ್ರಿಗೆ ಹೇಳ್ಬಿಟ್ಟು ಕಾರು ಮುಂದಕ್ಕೋಡುತ್ತಿದ್ದಂತೆ ಹೊಲ ಗದ್ದೆಗಳನ್ನು ಗಮನಿಸತೊಡಗಿದೆ.

" ಯಾಕೇ ..." ಕೇಳಿದ್ದು ಶೀಲಾ.

" ರಾಗೀ ಮೇಲೆ ಬರೆದಿದ್ದೇನಲ್ಲ,  ಆ ಬ್ಲಾಗ್ ಪೋಸ್ಟ್ ಗೆ ಹಳೇ ಫೋಟೋ ತೆಗೆದ್ಬಿಟ್ಟು ಹೊಸ ಚಿತ್ರ ಹಾಕೋಣಾಂತ "   ಹಾಗಂದ  ತರುವಾಯ ಶೀಲಾ ಗದ್ದೆಗಳ ಕಡೆ ದೃಷ್ಟಿ ಇಟ್ಟಳು.  ನನಗಂತೂ ತೂಕಡಿಕೆ ಶುರುವಾಯಿತು,  " ಜೇನುಕಲ್ ಬೆಟ್ಟ ಬಂತು..." ಅಂದಾಗಲೇ ಕಣ್ಣು ಬಿಟ್ಟಿದ್ದು.

ನಾವು ಬೆಟ್ಟದ ಬುಡದಲ್ಲಿದ್ದೆವು,   ಅದಾಗಲೇ ಅಲ್ಲಿ ಜನಸಂದಣಿ ನೆರೆದಿತ್ತು.   ಎತ್ತರದ ಬೆಟ್ಟ ನೋಡುತ್ತಲೇ  " ಇದನ್ನು ಏರಲು ನನ್ನಿಂದಾದೀತೇ..." ಕೇಳಿಯೇ ಬಿಟ್ಟೆ.   ಗುಡ್ಡ ಏರಲು ಎರಡೂ ಬದಿಯಿಂದಾಗಿ ಮೆಟ್ಟಿಲುಗಳಿದ್ದುವು.   ಒಟ್ಟು ಸಾವಿರದಿನ್ನೂರು ಮೆಟ್ಟಿಲುಗಳಿವೆಯಂತೆ,  ಶೀಲಾ ಹೇಳಿದ್ದು.   ಇಲ್ಲಿ ದೈವದರ್ಶನಕ್ಕೆ ಹುಣ್ಣಿಮೆಯಂದೇ ಪ್ರಾಶಸ್ತ್ಯ.   ಕಾಕತಾಳೀಯವೋ ಎಂಬಂತೆ ಆ ದಿನ ಹುಣ್ಣಿಮೆಯಾಗಿತ್ತು.   ಇಲ್ಲಿನ ಆಚರಣೆಗೆ ಸಂಬಂಧಿಸಿದ ಸ್ಥಳಪುರಾಣಗಳು ಸಾಕಷ್ಟಿವೆ,   ಅವನ್ನೆಲ್ಲ ಮೊದಲೇ ಸಂಗ್ರಹಿಸಿಟ್ಟುಕೊಳ್ಳಬೇಕಾಗಿತ್ತು,   ಈಗ ಊರಿಗೆ ವಾಪಸ್ ಆದ ಮೇಲೆ ಕೇಳುವುದು ಯಾರನ್ನು ?   

" ನೀವು ಕಾರಿನೊಳಗೇ ಕೂತಿರಿ ಹಾಗಿದ್ರೆ,  ಐ ಪ್ಯಾಡ್ ನಲ್ಲಿ ಅರಸೀಕೆರೆಯ ಸ್ನೇಹಿತರನ್ನು ಕಾಂಟ್ಯಾಕ್ಟ್ ಮಾಡ್ಲಿಕ್ಕಾಗುತ್ತಾ ನೋಡಿ "  ಅಂದ ಗಿರೀಶ.  ನನ್ನ ಕೈಯಲ್ಲಿ ಐ ಪಾಡನ್ನು ಹಿಡಿಸಿ ಬಿಟ್ಟು ಮೂವರೂ ಬೀಸು ನಡಿಗೆಯಲ್ಲಿ ಮುಂದೆ ಹೋದರು.   ಐ ಪಾಡು ಕೈ ತಪ್ಪಿ ದಿನ ಎಷ್ಟಾಯ್ತು ಅಂತ ಲೆಕ್ಕ ಹಾಕುತ್ತಾ ನನ್ನ ಫೇಸ್ ಬುಕ್ ಖಾತೆ ತೆರೆಯಲು ಯತ್ನಿಸಿದೆ.   ಬಾಗಿಲು ತೆರೆಯೇ ಪುಟ್ಟಕ್ಕ ಎಂದು ಹೇಗೆ ಪುಸಲಾಯಿಸಿದರೂ ನನ್ ಪುಟ್ಟಕ್ಕ ಒಪ್ಪಲಿಲ್ಲ. ಇದಾಗದ ಕೆಲಸವೆಂದು ಸುಮ್ಮನಿದ್ದು ಮಾಡುವುದಾದರೂ ಏನು?   ಬೆಟ್ಟ ಹತ್ತಿದವರು ವಾಪಸ್ ಬರಬೇಕಾದ್ರೇ ಗಂಟೆಯಾದೀತು.   ನಿದ್ರಿಸಲು ಯತ್ನಿಸಿದೆ.  ಅದೂ ಬರಲಿಲ್ಲ.   ಪುನಃ ಗಿರೀಶನ   ಐ ಪ್ಯಾಡ್ ಒಳಗೆ ಯಾವ apps ಗಳೆಲ್ಲಾ ಇವೆ ಅಂತ ಪರಿಶೀಲಿಸಲಾಗಿ ನನ್ನ ಕನ್ನಡ ಕೀ ಬೋರ್ಡ್ ಇದೆ !    ಇನ್ನೇತರ ಚಿಂತೆ, ಕನ್ನಡ  ಕೀಲಿಮಣೆಯಲ್ಲಿ ಒಂದೊಂದೇ ಅಕ್ಷರ ಛಾಪಿಸುತ್ತಾ ನನ್ನ ಪ್ರವಾಸದ ಆರಂಭದ ಮೊದಲ ಕಂತನ್ನು ಸರಸರನೆ ಬರೆದು ಮುಗಿಸಿ,  ನೋಟ್ ಪ್ಯಾಡ್ ಒಳಗೆ ಪೇಸ್ಟ್ ಮಾಡಿಟ್ಕೊಂಡಿದ್ದೂ ಆಯ್ತು.

ಮೂವರೂ ಬಂದರು.   " ಗುಡ್ಡದ ಮೇಲೆ ಏನ್ ದುಡ್ಡಿನ ರಾಶಿ ಗೊತ್ತಾ,  ಕಾಣಿಕೆ ಹಾಕೂದೆಲ್ಲಾ ನೋಟಿನ ಅಟ್ಟಿ ಅಟ್ಟಿ ಕಟ್ಟು.. " ಅಂದರು ಎಚ್.ಟಿ. ಭಟ್.  " ಜೇನುಗೂಡು ಹೇಳುವಷ್ಟೇನೂ ಕಾಣಿಸ್ಲಿಲ್ಲ "

" ಎಲ್ಲಿದೆ ಕೆಮರಾ?"  ಫೋಟೋ ನೋಡಿ ಆನಂದಿಸುವ ಹಂಬಲದಿಂದ ಕೇಳಿದ್ದು.

" ದುಡ್ಡಿನ ಫೋಟೋ ತೆಗೆಯಲು ಮನಸ್ಸು ಬರಲಿಲ್ಲ,  ಬೇರೆ ಫೋಟೋ ಇದೆ ನೋಡಿಕೋ "  ಐ ಫೋನ್ ಕೈಗಿತ್ತರು.

" ಬರೆದ್ರಾ ..." ಕೇಳುತ್ತಾ ಬಂದ ಗಿರೀಶ.  " ನೆಟ್ ಕನೆಕ್ಷನ್ ಸಿಕ್ತಾ ...."

" ಇಂಥಾ ಗ್ರಾಮದಲ್ಲಿ ನೆಟ್ಟೂ ಇಲ್ಲ..."

" ಅರಸೀಕೆರೆಯಲ್ಲಿ ನೆಟ್ ವರ್ಕ್ ಸಿಗಬಹುದು,  ಅಲ್ಲಿ ನೋಡುವಾ..." 

ಇಲ್ಲಿ ಅನ್ನ ದಾಸೋಹ ಅಂತ ಊಟದ ವ್ಯವಸ್ಥೆ ಇದೆ.   ನಮ್ಮ ಸಂಜೆಯ ಚಹಾ ಆಗಿರಲಿಲ್ಲ.   ಒಂದು ಛತ್ರದಂತಹ ಕಟ್ಟಡ.   ಭಕ್ತಾದಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳೂ ಇದರೊಳಗಿವೆ.  ಸ್ನಾನ,  ಶೌಚಗೃಹಗಳು ಚೆನ್ನಾಗಿವೆ.   ದಾಸೋಹದ ಅನ್ನ, ರಸಂಗಳನ್ನೇ ನಮಗೆ ಬೇಕಿದ್ದಷ್ಟೇ ಹಾಕಿಸಿಕೊಂಡು ತಿಂದು ಉಲ್ಲಸಿತರಾದ ನಂತರ ಅರಸೀಕೆರೆಯತ್ತ ಮುಂದುವರಿಯಿತು ನಮ್ಮ ವಾಹನ.   ಅರಸೀಕೆರೆ ಪಟ್ಟಣ ತಲಪುವಾಗ ರಾತ್ರಿ ಏಳೂವರೆಯಾಗಿತ್ತು.     " ಹೊತ್ತಲ್ಲದ ಹೊತ್ತಿಗೆ ಸ್ನೇಹಿತರನ್ನು ಹುಡುಕಿಕೊಂಡೂ ಹೋಗಿ ಅವರಿಗೆ ತೊಂದರೆ ಕೊಡುವುದು ಸರಿಯಲ್ಲ " ಎಂದರು ನಮ್ಮೆಜಮಾನ್ರು.   " ಸರಿ.  ಕಾರು ಮುಂದೆ ಮುಂದೆ ಹೋಗಲೀ "  ಅಂದ ಗಿರೀಶ್. 

ಜೇನುಕಲ್ ಬೆಟ್ಟದಿಂದ ಹಿಂತಿರುಗುವಾಗ ಶೀಲಾ ಮತ್ತೊಂದು ತೀರ್ಥಕ್ಷೇತ್ರ,  ಬೆಳಗೂರು ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿ ಸನ್ನಿಧಿಗೆ ಅವಳ ಸ್ನೇಹಿತೆಯ ಹುಕುಂ ಪ್ರಕಾರ ಹೋಗಲಿಕ್ಕಿದೆ ಎಂಬ ಹೊಸ ಸುದ್ದಿಯನ್ನು ಹೊರ ಹಾಕಿದಳು.   ಇದುವರೆಗೂ ತೆಪ್ಪಗಿದ್ದ ನಾನು ಮತ್ತೂ ತೆಪ್ಪಗಿರಬೇಕಾಯಿತು.   ಅಲ್ಲಿ ರಾತ್ರಿ ಉಳಕೊಳ್ಳುವ ವ್ಯವಸ್ಥೆಯೂ ಇದೆ ಎಂದೂ ತಿಳಿಯಿತು.   ಪುಟ್ಟ ಮಗೂ ಥರ  " ಅಲ್ಲಿ ಈ ದಿನ ಜಾತ್ರೆ ಇದೆ "  ಅಂದಳು.   ನನಗೂ ನಗು ಬಂದಿತು.   ಮುಖ್ಯ ರಸ್ತೆಯಿಂದ ಕವಲೊಡೆಯುವ ಮಾರ್ಗ ಬಂದಾಗ ಕಾರು ನಿಲ್ಲಿಸಿ, ನಾವು ಹೋಗುತ್ತಿರುವ ರಸ್ತೆ  ಬೆಳಗೂರು ಆಂಜನೇಯ ಸ್ವಾಮಿ ಇರುವಲ್ಲಿಗೆ ಎಂದೇ ಖಚಿತ ಪಡಿಸಿಕೊಂಡೇ ಮುಂದುವರಿದರೂ ದಾರಿ ತಪ್ಪಿತು.   ರಸ್ತೆಯಂತೂ ಬಹಳ ಕೆಟ್ಟದು,  ಡಾಮರೀಕರಣ ಇನ್ನೂ ಆಗಬೇಕಾಗಿದೆ,  ದಪ್ಪ ದಪ್ಪ ಜಲ್ಲಿಕಲ್ಲುಗಳನ್ನು ಹಾಕಿ ಬಿಟ್ಟಂತಹ ರಸ್ತೆ,  ನಮ್ಮ ಅತ್ಯಾಧುನಿಕ ವಾಹನ ಗುಡುಗುಡು ಗುಮ್ಮಟ ದೇವರಂತೆ ತೆವಳುತ್ತಾ ಮುಂದುವರಿಯಿತು.    ಸುತ್ತುಬಳಸಿನ ದಾರಿಯಿಂದಲಾದರೂ ಸನ್ನಿಧಿ ತಲಪಿದೆವು.   ಕಾರಿನ ಬಾಗಿಲು ತೆರೆಯುತ್ತಿದ್ದ ಹಾಗೇ ಹೊರಗಿನ ಚಳಿ ಅನುಭವಕ್ಕೆ ಬಂದು ಬೇಗ ಬೇಗ ದಪ್ಪ ಕೋಟುಗಳನ್ನು ಧರಿಸಿಯೇ ಹೊರಗಿಳಿಯುವಂತಾಯಿತು.   

" ಕೋಟು ತೆಕ್ಕೊಂಡಿದ್ದು ಸಾರ್ಥಕವಾಯಿತು "  ಅಂದರು ನಮ್ಮೆಜಮಾನ್ರು.

ಶೀಲಾ ಅಂದಂತೆ ಆ ಪರಿಸರದಲ್ಲಿ ಜಾತ್ರೆಯ ವಾತಾವರಣ.   ನಮಗೇನೂ ಜಾತ್ರೆ ಬೇಕಾಗಿರಲಿಲ್ಲ,  ಸಂತೆಗದ್ದಲವೂ ಬೇಡ.   ನಮಗಾಗಿ ಕಾದಿರಿಸಿದ್ದ ಅತಿಥಿಗೃಹದ ಕಡೆ ಹಜ್ಜೆ ಹಾಕಿದೆವು.  ಎರಡನೇ ಮಹಡಿ ಮೇಲಿತ್ತು ಆ ಕೋಣೆ.   ವಿಶಾಲವಾದ ಹಾಲ್,   ಅದನ್ನೇ ಹಲವು ರೂಮುಗಳಾಗಿ ವಿಭಾಗಿಸಿದ್ದರು.  ನಾವು ಹೊಕ್ಕ ರೂಮ್ ಒಳಗಡೆ ದೊಡ್ಡದಾದ ಒಂದು ಜಮಖಾನ,  ಐದಾರು ಮಂದಿ ಮಲಗಬಹುದಾದಷ್ಟು ದೊಡ್ಡದಿತ್ತು,  ಒಂದು ಚಾಪೆಯೂ ಇದ್ದಿತು.  

  " ಈ ಜಮಖಾನ ಒಮ್ಮೆ ಕೊಡವಿದ್ರೆ ಚೆನ್ನಾಗಿತ್ತು,  ತುಂಬಾ ಧೂಳು ಇದ್ದ ಹಾಗಿದೆ..."

" ಧೂಳು ಇದೇಂತ ಮುಟ್ಟೀ ತಟ್ಟೀ ಮಾಡಿದ್ರೆ ಅಲರ್ಜೀ ಕೆಮ್ಮು ಶುರು ಆಗಿ ಬಿಟ್ರೆ ದೇವ್ರೇ ಗತಿ....ಸುಮ್ಮನಿರಿ "

 ನಮ್ಮವರು  " ಒಂದು ಚಾಪೆ ಇದೆ,  ಚಳಿಗೆ ಸಾಕು "  ಎಂದು ಸಮಾಧಾನ ಪಟ್ಟರು.   " ಈ ಚಾಪೆ ಅಡ್ಡಲಾಗಿ ಬಿಡಿಸಿದರೆ ನಾಲ್ವರಿಗೂ ಮಲಗಬಹುದು "

" ಹೇಗೆ ಬೇಕಾದ್ರೂ ಬಿಡಿಸ್ಕೊಳ್ಳಿ,  ನಾನಂತೂ ಈಗ್ಲೇ ಮಲಗೂದು "

ಗಿರೀಶ್ ಹಾಗೂ ಶೀಲಾ ಕಾರಿನಲ್ಲಿದ್ದ ನಮ್ಮ ಲಗ್ಗೇಜ್ ಈ ಮೂರನೇ ಮಹಡಿಗೆ ಹೊತ್ತು ತರಲು ಹೋಗಿದ್ದರು.    ನಮಗಿಬ್ಬರಿಗೂ ಸುಸ್ತಾಗಿತ್ತು.   " ಮನೆ ಕಡೆ ಏನೂ ಚಿಂತೆ ಮಾಡ್ಬೇಡಿ,  ಸಾವಕಾಶವಾಗಿ ಬನ್ನಿ "  ಹೀಗೆ ಮನೆ ಉಸ್ತುವಾರಿ ಹೊಣೆ ತೆಗೆದುಕೊಂಡಿದ್ದ ಚಿದಾನಂದ್ ಇವತ್ತು ಕೂಡಾ ಹೇಳಿದ್ದರು.  ಆರಂಭದ ಮೂರು ದಿನಗಳಲ್ಲಿ ಸಂಬಂಧಿಕರ ಮನೆಯಿದ್ದಿತು.   ಊಟ ಉಪಾಹಾರಗಳಿಗೂ ತೊಂದರೆಯಿರಲಿಲ್ಲ.  ಗುರುತು ಪರಿಚಯದವರು ಯಾರೂ ಇಲ್ಲದ ಸ್ಥಳದಲ್ಲಿ ಸಿಕ್ಕ ಸೌಲಭ್ಯಕ್ಕೆ ತೃಪ್ತಿ ಪಡಬೇಕಾಯಿತು.  " ಗಿರೀಶ ಇಲ್ಲಿ ಹ್ಯಾಗೆ ಬೆಳಗಾಗೋ ತನಕ ಮಲಗಿರ್ತಾನೆ, ನೋಡ್ಬೇಕೀವಾಗ " ಎಂದರು ನಮ್ಮವರು.   

ಗಿರೀಶ್ ದಂಪತಿ ನಮ್ಮ ಬ್ಯಾಗುಗಳನ್ನು ಹೊತ್ತು ತಂದರು.   ಅವನ ಬ್ಯಾಗಿನಿಂದ ಬೆಡ್ ಶೀಟುಗಳು ಹೊರ ಬಂದವು.  ಹಾಕಿಕೊಂಡ ಕೋಟು, ಹೊದೆಯಲೊಂದು ಹೊದಿಕೆ,  ಚಳಿ ಎದುರಿಸಲು ಸಾಕು ಎಂದಿತು ಮನಸ್ಸು.   ಆ ಹೊತ್ತಿಗೆ ನಮ್ಮ ಕೊಠಡಿಯ ಬಾಗಿಲು ತಟ್ಟಿದ ಸದ್ದು.  ಗಿರೀಶ್ ಬಾಗಿಲು ತೆರೆದ.   ಹೊರಗಿದ್ದ ನಾಲ್ಕು ಜನರ ಗುಂಪು ತಮ್ಮದೊಂದು ಚಾಪೆ ಈ ರೂಮಿನಲ್ಲಿರುವುದಾಗಿ ಹೇಳಿಕೊಂಡಿತು.  ಚಾಪೆ ಹೊರ ಹೋಯಿತು.   

ರಾತ್ರಿಯೂಟಕ್ಕೆ ಪುನಃ ಎರಡು ಮಹಡಿ ಮೆಟ್ಟಿಲಿಳಿದು ಕೆಳ ಹೋಗಬೇಕಾಯಿತು.   ಬಾತ್ ರೂಂ ಹಾಗೂ ಟಾಯ್ಲೆಟ್ ಮೇಲ್ಗಡೇನೇ ಇದ್ದರೂ ತೀರಾ ಶೋಚನೀಯ ಸ್ಥಿತಿಯಲ್ಲಿದ್ದವು.   ಕೊರೆಯುವ ಚಳಿ ಹಾಗೂ ತಣ್ಣಗಿನ ನೀರು ನೋಡಿಯೇ ನಾನು ಹೌಹಾರಿದೆ.  " ಶೀಲಾ,  ಈ ಸ್ನಾನದ ಮನೆಯ ಒಳಗೆ ಕಾಲಿಡಲು ಸಾಧ್ಯವಿಲ್ಲ,  ನನ್ನ ಸ್ನಾನ ಏನಿದ್ರೂ ಇನ್ನು ಮನೆಗೆ ಹೋದ್ಮೇಲೆ "

" ನಾಳೆ ಚಿಕ್ಕಮಗಳೂರಿನಲ್ಲಿ ನನ್ ಫ್ರೆಂಡು ಮನೆಗೆ ಹೋಗ್ತೀವಲ್ಲ,  ಅಲ್ಲಿ ಮಿಂದರಾಯಿತು "  ಅಂದಳು ಶೀಲಾ.

ಊಟವೇನೂ ಬೇಕಾಗಿರಲಿಲ್ಲ,  ಆದರೂ ದೈವಸನ್ನಿಧಿಯ ಪ್ರಸಾದವೆಂದು ಊಟದ ಹಾಲ್ ಹುಡುಕಿಕೊಂಡು ಹೋದೆವು.   ದೊಡ್ಡದಾದ ಅಂಗಣ,  ಒಂದೇ ಬಾರಿ ಇನ್ನೂರು - ಮುನ್ನೂರು ಮಂದಿ ಕುಳಿತುಕೊಳ್ಳಬಹುದು.   ಅದಾಗಲೇ ಊಟಕ್ಕೆ ಕುಳಿತವರೊಂದಿಗೆ ನಾವೂ ಕುಳಿತೆವು.    ವೃತ್ತಾಕಾರದ ಎಲೆ,  ಹಲವು ಎಲೆಗಳನ್ನು ಕಡ್ಡಿಯಿಂದ ಜೋಡಿಸಿ ಮಾಡಿರುವಂಥದು.   " ಓ,  ಇದು ಮುತ್ತುಗದೆಲೆ... ಒಂದು ಫೋಟೋ ತಗೆದಿಡಿ "  ಅಂದೆ.  ನಮ್ಮ ನೆಚ್ಚಿನ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪ ,  ' ಗೃಹಭಂಗ '  ಕಾದಂಬರಿಯಲ್ಲಿ ಮುತ್ತುಗದೆಲೆಯ ತಟ್ಟೆಯನ್ನು ತಂದಿದ್ದಾರೆ.  ಅವರೂ ಇದೇ ಅರಸೀಕೆರೆಯವರು ತಾನೇ.    
ಊಟದ ಶಾಸ್ತ್ರ ಮುಗಿಸಿ,  ಜನಜಂಗುಳಿಯ ಎಡೆಯಲ್ಲಿ ಪ್ರಯಾಸಪಟ್ಟು ಕೈತೊಳೆದು ಪುನಃ ಮೇಲೆ ಹತ್ತಿ ಮಲಗುವ ಸಿದ್ಧತೆ ನಡೆಸಿದೆವು.   ಗಿರೀಶ್ ಹಾಗೂ ಶೀಲಾ ದೇವರ ದರ್ಶನ ಮತ್ತು ಅರ್ಚನೆ ಮಾಡಿಸಲಿಕ್ಕಿದೆಯೆಂದು ಕೆಳಗಿಳಿದು ಹೋದರು.

" ಇನ್ನು ಪ್ರಯಾಣ ಮುಂದುವರಿಸಲು ಬಿಡಬಾರದು "  ಇಷ್ಟು ದಿನಾ ಮನೆ ಊಟ, ವಸತಿ ದೊರೆತಿತ್ತು.    " ಅಂತಹ ಸೌಕರ್ಯ ಇನ್ನು ಸಿಗುವಂಹುದಲ್ಲ "

" ಹೌದೂ,  ಬಾಣಾವರದಿಂದ ಬಳ್ಳಾರಿಗೆ ಹೋಗ್ಬಹುದು ಅಂತಿದ್ನಲ್ಲ "

" ಎಲ್ಲಿಗೂ ಬೇಡ,  ಏನಿದೇ ಬಳ್ಳಾರಿಯಲ್ಲಿ ?    ನಾಳೆ ಉಪಾಯದಿಂದ ಮನೆ ಕಡೆ ತಿರುಗಿಸುವಾ,  ಬೀಗದಕೈ ಸಿಕ್ತಾ "

" ನಾನು ಎಲ್ಲೀಂತ ಹುಡುಕಲಿ,  ಅದೊಂದು ಕರ್ಮ..."  ಬಳ್ಳಾರಿಗೆ ಹಿಂದೆ ಸರ್ಕಾರಿ ನೌಕರರಿಗೆ ವರ್ಗಾವಣೆ ಅಯ್ತೂಂದ್ರೆ ಮೇಲಧಿಕಾರಿಗಳ ಕೋಪಕ್ಕೆ ಗುರಿಯಾದವನೆಂದೇ ಲೆಕ್ಕ,   ಎಲ್ಲೋ ಓದಿದ ನೆನಪಾಯಿತು.   ಪುನಃ ನನ್ನ ಮೂಡ್ ಕೆಟ್ಟಿತು.   ಜಮಖಾನದ ಮೇಲೆ,  ತಲೆದಿಂಬು ಕೂಡಾ ಇಲ್ಲದೆ ನೆಟ್ಟಗೆ ಸೂರು ದಿಟ್ಟಿಸುತ್ತ,  ಕೆಳಗಡೆಯಿಂದ ಕೇಳಿಬರುತ್ತಿದ್ದ ವಿಧವಿಧವಾದ ನಾದನಿನಾದಗಳನ್ನು ಆಲಿಸುತ್ತಾ ಮಲಗಿದ್ದಂತೆ...

ಗಿರೀಶ್ ಹಾಗೂ ಶೀಲಾ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳನ್ನೆಲ್ಲ ವೀಕ್ಷಿಸಿ ಮೇಲೆ ಹತ್ತಿ ಬಂದರು.   ಇವರು ಹ್ಯಾಗೆ ಮಲಗಲಿದ್ದಾರೆ ಎಂದೂ ನೋಡ್ಬೇಡವೇ,   ಗಿರೀಶ್ ಹಾಸಿಗೆ,  ಅಲ್ಲಲ್ಲ,  ಜಮಖಾನದ ಮೇಲೆ ಕುಳಿತು ಬ್ಯಾಗುಗಳನ್ನು ಬಿಡಿಸಿದ.   ಒಂದೊಂದಾಗಿ ನನ್ನ ಸೀರೆಗಳು ಹೊರ ಬಂದವು.   ಒಂದರ ಮೇಲೊಂದರಂತೆ ದಪ್ಪ ದಪ್ಪ ಸೀರೆಗಳನ್ನು ಪೇರಿಸಿಟ್ಟು ತಲೆದಿಂಬಾಗಿಸಿ ಗಿರೀಶ್ ಮಲಗಿಯೇ ಬಿಟ್ಟ.    ನಾವೂ ಅವನು ಖಾಲಿ ಮಾಡಿದ ಬ್ಯಾಗುಗಳನ್ನು ತಲೆಯಡಿಗೆ ಇರಿಸಿಕೊಳ್ಳುವಷ್ಟು ಬುದ್ಧಿವಂತರಾದೆವು.   
ಗದ್ದಲಗಳೆಲ್ಲ ನಿಲ್ಲುತ್ತಿದ್ದ ಹಾಗೇ ಇನ್ನೇನು ನಿದ್ರೆ ಬರಲಿದೆ ಅಂದುಕೊಂಡಿದ್ದ ಹಾಗೆ ಕರ್ಕಶ ಧ್ವನಿಯೊಂದಿಗೆ ಹಾರ್ಮೋನಿಯಂ ವಾದ್ಯಗೋಷ್ಠಿ ಆರಂಭವಾಯಿತು.   ನಾವು ಮೇಲೆ ಹತ್ತಿ ಬರುತ್ತಿರಬೇಕಾದರೇ ಈ ವಾದ್ಯಗಾರರನ್ನು ಗಮನಿಸಿದ್ದವು.   ಕರಿ ಕಂಬಳಿ ಹೊದ್ದುಕೊಂಡು ಮೂಲೆಯಲ್ಲಿ ತೆಪ್ಪಗಿದ್ದ ಈ ಮಂದಿ ಈಗೇಕೆ ಹಾಡುಗಾರಿಕೆ ಪ್ರಾರಂಭಿಸಿದರೆಂಬುದೇ ನಮಗೆ ಅರ್ಥವಾಗಲಿಲ್ಲ.    ಅದೇನು ಹಾಡುತ್ತಿದ್ದರೋ ಅವರಿಗೇ ಗೊತ್ತು.   ಜೊತೆಗೆ ಒಂದು ಚರ್ಮವಾದ್ಯದಿಂದ ಡಕ್ ಡಕ್... ಶಬ್ದ ಬೇರೆ.   ಈ ಸಂಗೀತದಲ್ಲಿ ಶ್ರುತಿ ತಾಳಗಳೇನೂ ಇದ್ದಂತಿರಲಿಲ್ಲ.   ನಿದ್ದೆ ಬಂತೋ ಇಲ್ವೋ ಮಲಗಿದೆವು.   

ನಮ್ಮ ರಥಸಾರಥಿ ದಢಕ್ಕೆಂದು ಎದ್ದ.  

 " ಏನಾಯ್ತು ಗಿರೀ..."

" ಆಯ್ತು ಗಂಟೆ ನಾಲ್ಕೂವರೆ,  ಹೊರಡುವಾ...."

" ಇಷ್ಟು ಬೇಗ,  ಈ ಕತ್ತಲಲ್ಲಿ ಎಲ್ಲಿಗೆ ?"

" ಇಲ್ಲಿಂದ ಗುಡು ಗುಡೂಂತ ಹೋಗುವಾಗ ಬೆಳಗಾಗ್ತದೆ ..."

ಮಲಗಿದಲ್ಲಿಂದ ಎದ್ದೆವು.   ಹೊದಿಕೆ ವಸ್ತ್ರಗಳು,  ತಲೆದಿಂಬಾಗಿದ್ದ ಸೀರೆಗಳು ಯಥಾಸ್ಥಾನ ಸೇರಿದಂತೆ ನಾವು ಉಪ್ಪರಿಗೆ ಮೆಟ್ಟಿಲಿಳಿದು ಕತ್ತಲಲ್ಲಿ ಮುಂದುವರಿದೆವು.   ಸಂಗೀತಗಾರರು ಈಗಲೂ ಹಾಡುತ್ತಲೇ ಇದ್ದರು....- ಮುಂದುವರಿಯಲಿದೆ.  Posted via DraftCraft app

0 comments:

Post a Comment