Pages

Ads 468x60px

Monday 15 May 2017

ಮಾವಿನಹಣ್ಣಿನ ದಾಲ್




   




ನೆರೆಮನೆಯ ಆಯುರ್ವೇದ ವೈದ್ಯರಾದ ವೆಂಕಟ್ರಮಣರು ಊರಿಗೆ ಹೋದಾಗ ತಂದ ಮಾವಿನಹಣ್ಣುಗಳನ್ನು ಕೊಟ್ಟರು.   ಈಗ ಮಾವಿನಹಣ್ಣುಗಳ ಕಾಲ ಅಲ್ವೇ,  ಆದ್ರೂ ಈ ವರ್ಷ ಮಾವಿನ ಬೆಳೆ ತುಸು ಕಮ್ಮಿಯೇ.   ಪುಟ್ಟ ಗಾತ್ರದ ಈ ಮಾವಿನಹಣ್ಣುಗಳಲ್ಲಿ ಸಿಪ್ಪೆ ಗೊರಟು ಬಿಟ್ರೆ ಮತ್ತೇನಿಲ್ಲವಾದರೂ ಹಣ್ಣಿನ ರಸದೊಂದಿಗೆ ವಿಶೇಷವಾದ ಸುವಾಸನೆ.    ಈ ಪರಿಮಳವು ಒಂದು ಮರದಿಂದ ಇನ್ನೊಂದು ಮರಕ್ಕೆ ಭಿನ್ನ,  ಹೋಲಿಕೆ ಮಾಡಲು ಸಾಧ್ಯವೇ ಇಲ್ಲ.   ಇದುವೇ ಕಾಟ್ ಮಾವುಗಳ ವಿಶೇಷತೆ.   ಇಂತಹ ಹಣ್ಣನ್ನು ಒಂದು ಗೊಜ್ಜು ಮಾಡಿ ಉಂಡಾಯಿತು.


" ಗೊಜ್ಜು ಹೇಗೆ ಮಾಡಿದ್ದು? "

ಐದಾರು ಹಣ್ಣುಗಳನ್ನು ತೊಳೆದು,  ತೊಟ್ಟು ತೆಗೆದು,  ಸಿಪ್ಪೆ ಬಿಡಿಸಿ.    ಸಿಪ್ಪೆಗಳನ್ನು ನೀರೆರೆದು ಗಿವುಚಿ ರಸ ತೆಗೆದು ಮಾವಿನಹಣ್ಣುಗಳೊಂದಿಗೆ ಬೇಯಿಸಿ.   ರುಚಿಗೆ ಉಪ್ಪು ಹಾಗೂ ಸಿಹಿಗೆ ಸಾಕಷ್ಟು ಬೆಲ್ಲದೊಂದಿಗೆ ಕುದಿಸಿ.  ಹಸಿಮೆಣಸು ಇದ್ದರೆ ಹಾಕಬಹುದು.   ಸಾಸಿವೆ, ಒಣಮೆಣಸು,  ಇಂಗು ಹಾಗೂ ಕರಿಬೇವು ಒಗ್ಗರಣೆ ಕೊಡುವಲ್ಲಿಗೆ ಗೊಜ್ಜು ಆಯ್ತು.   ಇದು ಮಧ್ಯಾಹ್ನದೂಟಕ್ಕೆ ಹಬ್ಬದುಣಿಸು.


ನಾಳ ಮುಂಜಾನೆಯ ತಿಂಡಿ ಚಪಾತಿ,   ಅದಕ್ಕೊಂದು ದಾಲ್ ಆಗಲೇಬೇಕು,  ಸೆಕೆಯ ವಾತಾವರಣ ಇರುವ ಹೊತ್ತಿನಲ್ಲಿ ಹೆಸ್ರುಬೇಳೆಯ ದಾಲ್ ದೇಹಕ್ಕೆ ತಂಪು.   ಅವಶ್ಯಕತೆಗೆ ತಕ್ಕಷ್ಟು ಹೆಸ್ರುಬೇಳೆಯನ್ನು ಬೇಯಿಸುವುದು,   ಕುಕರ್ ಒಂದು ವಿಸಿಲ್ ಕೂಗಿದಾಗ ಬೇಳೆ ಬೆಂದಾಯ್ತು.


ಒಂದು ಮಾವಿನಹಣ್ಣು ಗಿವುಚಿಟ್ಟುಕೊಳ್ಳುವುದು,   ಮಾವಿನ ಹಣ್ಣಿನ ರಸವನ್ನು ಬೇಯಿಸಿಟ್ಟ ಹೆಸ್ರುಬೇಳೆಗೆ ಎರೆದು,   ರುಚಿಕರವಾಗಲು ಬೇಕಾದಂತಹ ಉಪ್ಪು ಹಾಗೂ ಸಕ್ಕರೆ ಕೂಡಿ ತುಪ್ಪದಲ್ಲಿ ಒಗ್ಗರಣೆ ಕೊಡುವಲ್ಲಿಗೆ ಮಾವಿನಹಣ್ಣಿನ ದಾಲ್ ಸಿದ್ಧವಾಗಿದೆ.



   



0 comments:

Post a Comment