Pages

Ads 468x60px

Friday 26 March 2021

ಬೆಂಡೆಯ ಮಜ್ಜಿಗೆ ಹುಳಿ



 ಈಗ ತಾನೇ ಗಿಡದಿಂದ ಕೊಯ್ದ ಬೆಂಡೆಕಾಯಿಗಳು ಬಂದಿವೆ.  ಇಂತಹ ಊರ ಬೆಂಡೆಕಾಯಿಗಳು  ಕಡುಬೇಸಿಗೆಯಲ್ಲಿ ಸಿಗಬೇಕಾದರೆಪುಣ್ಯ ಮಾಡಿರಬೇಕು.   ಬೆಂಡೆ ಬೆಳೆದವರ ಹೊಟ್ಟೆ ತಂಪಾಗಿರಲಿ.   ಬೆಂಡೆಯಷ್ಟು ತಂಪು ತರಕಾರಿ ಇನ್ನೊಂದಿಲ್ಲ.


 ಬೇಸಿಗೆಗೆ ತಂಪು ತಂಪಾದ ಮಜ್ಜಿಗೆಹುಳಿಯನ್ನೇ ಮಾಡೋಣ ಸಾಕಷ್ಟು ಮಜ್ಜಿಗೆಯೂ ಇದೆ ಹಸಿ ತೆಂಗಿನಕಾಯಿಯೂ ಇದೆ.   ಇನ್ನೇಕೆ ತಡ..


ಕತ್ತರಿಸುವ ಮುನ್ನಬೆಂಡೆಕಾಯಿಗಳನ್ನು ತೊಳೆಯಿರಿ.

ಆಯ್ದು ಇರಿಸೋಣ.

ಬೆಳೆದ ಬೆಂಡೆಕಾಯಿಗಳನ್ನು ಹುಡುಕಿ ತೆಗೆದಿರಿಸಬೇಕು ಅಡುಗೆಗೆ ಆಗದು ಬೆಂಡೆಯ ತುದಿ ಕೈಯಲ್ಲಿ ಮುರಿಯಲು ಬಂದಿತಾದರೆ ಉತ್ತಮ ಮುರಿಯಲಾಗದಿದ್ದರೆ ಬೆಳೆದಿದೆ ಎಂದರ್ಥ.

ನನಗೆ ದೊರೆತ ಬೆಂಡೆಗಳೆಲ್ಲ ಚೆನ್ನಾಗಿದ್ದುವು.   ಏಳೆಂಟು ಬೆಂಡೆಗಳು ಇಂದಿನ ಪಾದಾರ್ಥಕ್ಕೆ ಸಾಕು ಉಳಿದದ್ದು ನಾಳೆಗಾಯಿತು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟು ತಂಪು ಪೆಟ್ಟಿಗೆಯಲ್ಲಿರಿಸುವುದು.


ಹದ ಗಾತ್ರದ ಹೋಳುಗಳಾಗಲಿ ತಪ್ಪಿಯೂ ನೀರಿನಲ್ಲಿರಿಸಬಾರದು ಅಡುಗೆಯೇ ಕೆಟ್ಟೀತು.


ಒಂದು ಲೋಟ ಹುಳಿ ಮಜ್ಜಿಗೆಗೆ ಬೆಂಡೆಕಾಯಿಗಳು ಮುಳುಗುವಷ್ಟು ನೀರೆರೆದು ಕುದಿಯಲು ಇರಿಸಿ ಸೂಕ್ತ ಪ್ರಮಾಣದಲ್ಲಿ ಉಪ್ಪುಹಾಕಿರಿ ಮಜ್ಜಿಗೆಯ ದ್ರಾವಣ ಕುದಿದ ನಂತರ ಬೆಂಡೆಯ ಹೋಳುಗಳನ್ನು ಹಾಕಿರಿ.   ಬೇಗನೇ ಬೇಯುವ ತರಕಾರಿಯಾಗಿರುವುದರಿಂದ ಕುಕ್ಕರ್ ಅವಶ್ಯವಿಲ್ಲ.

ಕುಕ್ಕರಿನಲ್ಲೇ ಬೇಯಿಸುವವರು ನೀವಾಗಿದ್ದರೆ ಒಂದು ಸೀಟಿ ಹಾಕಿದ ಕೂಡಲೆ ಕೆಳಗಿಳಿಸಿ ಒತ್ತಡವನ್ನೂ ಕೊಡಲೇ ತೆಗೆಯುವ ಜಾಣರೂ ನಾವಾಗಿರಬೇಕು ಕುಕ್ಕರನ್ನು ನೀರಿನ ನಲ್ಲಿಯ ಕೆಳಗೆ ಹಿಡಿದರೆ ಬೇಗನೆ ಮುಚ್ಚಳ ತೆರೆಯಲು ಬರುತ್ತದೆ.

ಇಲ್ಲದೇ ಹೋದಲ್ಲಿ ಬೆಂಡಯ ಹೋಳುಗಳೆಲ್ಲ ಬಿಡಿಸಲ್ಪಟ್ಟು ಬೆಂಡೆಯ ಬೀಜಗಳು ಮಜ್ಜಿಗೆಯಲ್ಲಿ ಮುಳುಗೇಳುತ್ತಿರುವುದನ್ನು ನೋಡಿ ಆನಂದಿಸಬೇಕಷ್ಟೆ


ಅಂತೂ ಬೆಂಡೆಕಾಯಿಗಳನ್ನು ಹುಳಿಮಜ್ಜಿಗೆಯ ನೀರಿನಲ್ಲಿ ಬೇಯಿಸಿ ಆಯಿತು.

ಮಜ್ಜಿಗೆ ಹುಳಿಗೆ ಮುಖ್ಯವಾಗಿ ತೆಂಗಿನಕಾಯಿಯನ್ನು ನುಣ್ಣಗೆ ಅರೆಯಬೇಕಾಗಿದೆ ನಮ್ಮ ಮಿಕ್ಸಿ ಅರೆದು ಕೊಡುವಷ್ಟು ನುಣ್ಣಗೆ ಅರೆಯುವುದು ನನ್ನ ಬಳಿ ಹಸಿ ಅರಸಿಣ ಗೆಡ್ಡೆ ಇದ್ದಿತು ಚಿಕ್ಕ ಚಿಕ್ಕ ಚೂರುಗಳನ್ನಾಗಿಸಿ ಅರೆಯುವಾಗ ಹಾಕಲಾಯಿತು ಸುವಾಸನೆಯನ್ನೂ ಬಣ್ಣವನ್ನೂ ನೀಡುವ ಅರಸಿಣ ರಕ್ತಶುದ್ಧಿಕಾರಕ ವಿವಿಧ ಅಡುಗೆಯಲ್ಲಿ ಬಳಸುವ ಜಾಣರು ನಾವೆಂದು ಹೇಳಿಕೊಳ್ಳೋಣ.


ಬೇಯಿಸಿದ ಬೆಂಡೆಯಲ್ಲಿರುವ ಮಜ್ಜಿಗೆಯ ದ್ರಾವಣವನ್ನು ಬಸಿಯಿರಿ.

ತೆಂಗಿನ ಅರಪ್ಪನ್ನು ಕೂಡಿರಿ.

ಒಂದು ಲೋಟ ಸಿಹಿ ಮಜ್ಜಿಗೆ ಎರೆಯಿರಿ.

ಬೇಕಿದ್ದರೆ ಚಿಕ್ಕದೊಂದು ಬೆಲ್ಲ ಹಾಕಿರಿ.

ಬೆಂಡೆಯ ಮಜ್ಜಿಗೆ ಹುಳಿಯೆಂಬ ದ್ರವ ಪದಾರ್ಥವು ದಪ್ಪ ಗಸಿಯಂತಾಗಬಾರದು.

ಬಸಿದಿಟ್ಟ ಬೇಯಿಸಿದ ನೀರನ್ನು ಅವಶ್ಯಕತೆಗೆ ತಕ್ಕಷ್ಟು ಎರೆಯಿರಿ.

ಕುದಿಸಿರಿ.   ಹಾಲಿನ ಕೆನೆ ಮೇಲೆದ್ದು ಬರುವಂತೆ ಕುದಿದಾಗ ಸ್ಟವ್ ಆರಿಸಿ.   ಗಳಗಳನೆ ಕುದಿಯಲು ಬಿಡಬಾರದು ಮಜ್ಜಿಗೆ ಹುಳಿಯ ರುಚಿಯೇ ಹೋಯ್ತೆಂದು ತಿಳಿಯಿರಿ.

ತೆಂಗಿನ ಎಣ್ಣೆಯೇ ಒಗ್ಗರಣೆಗೆ ಸೂಕ್ತ ಕರಿಬೇವು ಕೂಡಿದ ಒಗ್ಗರಣೆ ಇರಲಿ ಒಗ್ಗರಣೆಗೆ ಹಾಕುವ ಮೆಣಸಿನ ಚೂರುಗಳೇ ಇದರ ಖಾರ.   ಖಾರ ಬೇಕಿದ್ದವರು ಉಣ್ಣುವಾಗ ಹಸಿಮೆಣಸನ್ನು ಕೂಡಿ ತಿನ್ನಿರಿ ಮಜ್ಜಿಗೆ ಹುಳಿಯ ರಸದಲ್ಲಿ ಹಸಿಮೆಣಸನ್ನು ನುರಿನುರಿದು ಉಣ್ಣಿರಿ.






0 comments:

Post a Comment