ಮೈಸೂರು ಪ್ರವಾಸ ಮುಗಿಸ್ಕೊಂಡು ಬಂದಿದ್ದೇ ಬಂದಿದ್ದು, ಶೀತ, ಹಾ..ಕ್ಷೀಗಳೂ ಜೊತೆಯಲ್ಲಿ ಬಂದವು. ರಾತ್ರಿಯ ಹೊತ್ತಿಗೆ, ಮೈ ಬಿಸಿಯೇರುತ್ತಿದೆ... ಜ್ವರ ಬೇರೆ ಶುರುವಾಯ್ತೇ ಅನ್ನಿಸತೊಡಗಿತು.
" ಈ ಮಾತ್ರೆ ತಿಂದು ಮಲಗು, ಬೆಳಗ್ಗೆ ಏಳುವಾಗ ಸರಿ ಹೋದೀತು "
ಇವರು ಕೊಟ್ಟ ಮಾತ್ರೆ ಕಣ್ಮುಚ್ಚಿ ನುಂಗಿ ಆಯ್ತು, ಹೊಟ್ಟೆಯಲ್ಲೂ ಏನೋ ಸಂಕಟ. ಒಂದು ತುಂಡು ಕಂಚು ಸಟ್ಟು ಮಜ್ಜಿಗೆಯಲ್ಲಿ ಹಿಸುಕಿ, ಇನ್ನೂ ಒಂದಿಷ್ಟು ಮಜ್ಜಿಗೆ ಎರೆದು ಕುಡಿದಾಯ್ತು. ದೂರ ಪ್ರಯಾಣ ಇನ್ಮುಂದೆ ಹೋಗಲೇ ಬಾರದು ಎಂದು ಮನಸ್ಸಿನಲ್ಲೇ ದೃಢ ಶಪಥ ಮಾಡಿಯೂ ಆಯ್ತು. ಇನ್ನು ಒಂದು ವಾರದ ಮಟ್ಟಿಗೆ ಕಡು ಪಥ್ಯದ ಊಟ ಮಾಡಲೇಬೇಕು ಎಂಬ ನಿಶ್ಚಯ ಮಾಡಿ ನಿದ್ರೆಗೆ ಇಳಿದೆ.
ಬೆಳಗ್ಗೆದ್ದು ಎಂದಿನಂತೆ ಮನೆಯಂಗಳದಲ್ಲಿ ಅಡ್ಡಾಡುತ್ತಿದ್ದಾಗ, ಎದುರಿನ ಮನೆಯ ಬೇಲಿಯ ಪಕ್ಕದಲ್ಲಿ ಬೆಳ್ಳಗಿನ ನಂದಿಬಟ್ಲು ಹೂವಿನಂತೆ ಅರಳಿದ ಕೊಡಸಿಗೆ ಹೂ ಗೊಂಚಲು ಕಾಣಿಸಬೇಕೆ, ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದ ಹಾಗೆ.... ಇವರನ್ನು ಕರೆದೆ,
" ಇಲ್ಲಿ ಬನ್ನೀ... ಆ ಬೇಲಿ ಪಕ್ಕದಲ್ಲಿ ಹೂ ಅರಳಿದ್ದು ಕಾಣಿಸುತ್ತಾ .."
" ಯಾಕೇ, ಆ ಹೂ ಬೇಲಿ ಒಳಗಿದೆಯಾ, ಹೊರಗಿದೆಯಾ "
" ಬೇಲಿ ಹೊರಗೇ ಇರೂದು ಗಿಡ, ಆ ಹೂಗೊಂಚಲು ಕೊಯ್ದು ತನ್ನಿ "
ಇವರೂ ಅರೆಮನಸ್ಸಿನಿಂದ ಎದ್ದು ಹೋಗಿ ಹೂ ಕೊಯ್ದು ತಂದರು.
ಸಂಜೆ ಪೇಟೆ ಕಡೆ ಹೋಗೂದಿದೆಯಲ್ಲ, ಆಗ ರಸ್ತೆ ಬದಿಯ ನಮ್ಮ ಗದ್ದೆಯಲ್ಲೂ ಈ ಮರ ಇದೆ, ತನ್ನೀ "
ಆ ಮರವೇ ? ರಸ್ತೆ ಅಗಲ ಮಾಡೋರು ಕಡಿದು ಹಾಕಿದ್ದಾರಲ್ಲ "
" ಮರ ಕಡಿದ್ರೇನಂತೆ, ಚಿಗುರಿ ಮೇಲೆ ಬಂದಿರ್ತದೆ, ನೋಡಿ ತರಬಾರದೇ, ಗೌರತ್ತೆ ಈಗ ಇಲ್ಲಿದ್ದಿದ್ರೆ ತಂದ್ಕೊಡ್ತಿದ್ರು "
ಸಂಜೆ ಹಾಲು ಪ್ಯಾಕೇಟು, ಉದಯವಾಣಿ ಪೇಪರೊಳಗೆ ಕಳ್ಳೇಪುರಿ ತುಂಬಿಸಿದಂತೆ ಕುಟಜ ಹೂ ಗೊಂಚಲುಗಳೂ ಬಂದವು.
" ಇದು ಬೇಕಾದಷ್ಟಾಯ್ತು, ಇದನ್ನು ಒಣಗಿಸಿ ಇಟ್ಕೋಬಹುದು, ಬೇಕಾದಾಗ ತಂಬುಳಿ ಮಾಡಲೂಬಹುದು "
" ಸ್ವಲ್ಪ ಉಪ್ಪು ಬೆರೆಸಿ ಒಣಗಿಸ್ಕೊಂಡ್ರೆ ಬಾಳಕ ಆಯ್ತು, ಸಂಡಿಗೆ ಥರ ಹುರಿದು ತಿನ್ನಲೂಬಹುದು " ಗೌರತ್ತೆ ಅಂದಿದ್ದು ನೆನಪಾಯ್ತು.
ಅಂದು ಗೌರತ್ತೆ ಹೇಳಿದಂತೆ, ಚೆನ್ನಪ್ಪನ ಬಳಿ ಹೇಳಿ ಹೂಗಳನ್ನು ತರಿಸ್ಕೊಂಡಿದ್ದೆ. ಅವನೂ ಒಂದು ಬುಟ್ಟಿ ತುಂಬಾ ಹೂ ಕಿತ್ತು ತಂದಿದ್ದ. ಆಗ ಮಕ್ಕಳೂ ಚಿಕ್ಕವರಿದ್ದರು, ಅನ್ನದೊಂದಿಗೆ ಸಾರು ಕಲೆಸಿ ತಿನ್ನುವಾಗ ಈ ಹೂವನ್ನೇ ಸಂಡಿಗೆಯಂತೆ ತುಪ್ಪದಲ್ಲಿ ಹುರಿದು ಕೊಡ್ತಾ ಇದ್ದೆ.
ನನ್ನಮ್ಮನೂ ಬಂದಿದ್ದಾಗ, " ಇಷ್ಟು ಹೂ ಇಟ್ಕೊಂಡು ಏನ್ಮಾಡ್ತೀಯ, ಸ್ವಲ್ಪ ನನಗೂ ಕೊಟ್ಟಿರು " ಅಂದಿದ್ದರು. ಹೌದೂ, ಈಗ್ಲೂ ಇರಬೇಕು ಅಂದು ಒಣಗಿಸಿಟ್ಟ ಹೂ, ಯಾವ ಮೂಲೆಯಲ್ಲಿ ಇದೇಂತ ನೆನಪಿಗೆ ಬರ್ತಾ ಇಲ್ವೇ.. ಹೋಗ್ಲಿ, ಈಗ ಹೊಸದೇ ಬಂದಿದೆ, ತಂಬುಳಿ ಮಾಡಿಯೇ ಬಿಡೋಣ.
ಒಂದು ಹಿಡಿ ಕುಟಜಾ ಹೂಗಳನ್ನು ತುಪ್ಪದಲ್ಲಿ ಹುರಿಯಿರಿ.
ಒಂದು ಹಿಡಿ ತೆಂಗಿನ ತುರಿ.
ಒಂದು ಲೋಟ ಸಿಹಿ ಮಜ್ಜಿಗೆ.
ಎಂಟ್ಹತ್ತು ಜೀರಿಗೆ ಕಾಳು.
ರುಚಿಗೆ ಉಪ್ಪು.
ಇಷ್ಟೂ ಸಾಮಗ್ರಿಗಳನ್ನು ನುಣ್ಣಗೆ ಅರೆದು, ಸಾಕಷ್ಟು ತೆಳ್ಳಗೆ ಮಾಡಿ ಕುದಿಸಿ, ಒಗ್ಗರಣೆ ಕೊಡಿ.
ಭಾರತೀಯ ಸಸ್ಯವಾಗಿರುವ ಕೊಡಸಿಗೆ ಮರ ಸಂಸ್ಕೃತದಲ್ಲಿ ಕುಟಜಾ ಎಂದೇ ಪ್ರಸಿದ್ಧವಾಗಿದೆ. ಆಯುರ್ವೇದದಲ್ಲಿ ಔಷಧೀಯ ವೃಕ್ಷವಾಗಿರುವ ಈ ಮರದ ತೊಗಟೆ, ಎಲೆ ಎಲ್ಲವೂ ಅತಿಸಾರ ವ್ಯಾಧಿಯಲ್ಲಿ ಉಪಯುಕ್ತ. ವೈಜ್ಞಾನಿಕವಾಗಿ Hollarhena antidysenterica ಎನಿಸಿಕೊಂಡಿದೆ. ಕುಟಜಾರಿಷ್ಟವನ್ನು ಮನೆಯಲ್ಲಿ ಸಾಮಾನ್ಯವಾಗಿ ತಂದಿರಿಸಿಕೊಳ್ಳದವರಿಲ್ಲ. ಎಪ್ರಿಲ್, ಮೇ ತಿಂಗಳಲ್ಲಿ ಕುಟಜ ವೃಕ್ಷ ಹೂಗೊಂಚಲುಗಳಿಂದ ತುಂಬಿ, ಉದ್ಯಾನವನಗಳ ಸೌಂದರ್ಯವನ್ನೂ ಇಮ್ಮಡಿಸುವಂತಹದು, ವಸಂತಮಾಸದ ಆಕರ್ಷಕ ನೋಟಗಳಲ್ಲಿ ಒಂದಾಗಿರುವುದು ಈ ವೃಕ್ಷ.
Posted via DraftCraft app
0 comments:
Post a Comment