Pages

Ads 468x60px

Saturday, 25 June 2016

ಬನ್ನಂಗಾಯಿ ದೋಸೆ
                                           ಚೆನ್ನಪ್ಪ ಕೆಲಸಕ್ಕೆ ಬಾರದೇ ವಾರವಾಗಿತ್ತು.   ತೋಟದಿಂದ ಅವನೇ ಹೆಕ್ಕಿ ತಂದ ತೆಂಗಿನಕಾಯಿಗಳು ದಿನನಿತ್ಯದ ಅಡುಗೆಗೆ ಬಳಸಿ ಮುಗಿದಿವೆ.   ನೀರಾಡದ ಗೋಟುಕಾಯಿಗಳಿಂದ ಏನೂ ಉಪಯೋಗವಿಲ್ಲ.  ಹೌದೂ,  ನಮ್ಮೆಜಮಾನ್ರು ದಿನಾ ತೋಟ ಸುತ್ತುತ್ತಿರುತ್ತಾರೆ.

" ಅಡಿಕೆ ಹೆಕ್ಕೂದೂಂತ ತೋಟಕ್ಕೆ ದಿನ ಬೆಳಗಾದ್ರೆ ಹೋಗ್ತೀರಲ್ಲ,  ಬಿದ್ದಿರೋ ತೆಂಗಿನಕಾಯಿ ಕಾಣಿಸಲ್ವ? "
" ನಾಳೆ ಚೆನ್ನಪ್ಪ ಬರ್ತಾನಲ್ಲ,  ಅವನ್ಹತ್ರ ಹೇಳೂ ಕಾಯಿ ಕೊಯ್ಯಲಿಕ್ಕೆ.   ಎಲ್ಲವನ್ನೂ ನಾನೇ ನೆನಪಿಟ್ಟುಕೊಳ್ಳಲಿಕ್ಕೂ,  ಆರ್ಡರು ಮಾಡಲಿಕ್ಕೂ ಆಗುತ್ತ..? "  ಸಿಡಿಗುಟ್ಟಿದ್ರು.

ಅಂತೂ ಚೆನ್ನಪ್ಪ ಬಂದ,  ತೆಂಗಿನಕಾೖ ತೆಗೆದೂ ಕೊಟ್ಟ,  ಅವನೇ ತೋಟದಿಂದ ಹೊತ್ತೂ ತಂದ.   ನನಗೆಂದು ಬೊಂಡ ಕೆತ್ತಿಯೂ ಇಟ್ಟ.   ನಮ್ಮೆಜಮಾನ್ರು ಶೀತ ಆಗುತ್ತೇಂತ ಎಳನೀರು ಕುಡಿಯುವವರಲ್ಲ,  ಮಕ್ಕಳಿಬ್ಬರೂ ಮನೆಯಲ್ಲಿಲ್ಲ.

ಎಳನೀರು ಕುಡಿಯುತ್ತಿದ್ದಂತೆ ನಾಳೆ ಬೊಂಡ ದೋಸೆ ಮಾಡೋದು ಎಂದು ತೀರ್ಮಾನಕ್ಕೆ ಬಂದಾಯಿತು.   " ನೀವು ಕುಡಿದದ್ರಲ್ಲಿ ಬೊಂಡದ ತಿರುಳು ಏನೂ ಇಲ್ಲ ಅಕ್ಕ,  ಇಲ್ಲಿ ಬನ್ನಂಗಾಯಿ ಇದೇ.. " ಎಂದ ಚೆನ್ನಪ್ಪ ತೆಂಗಿನಕಾಯಿ ರಾಶಿಯಿಂದ ಬನ್ನಂಗಾಯಿ ಆರಿಸಿ ತೆಗೆದು ಸುಲಿದಿಟ್ಟ.


     


 ಬನ್ನಂಗಾಯಿ ಅಂದ್ರೇನೂ?
ಬನ್ನಂಗಾಯಿ ಎಂದರೆ ಅದು ಎಳನೀರೂ ಆಗಿರುವುದಿಲ್ಲ,   ತೆಂಗಿನಕಾಯಿ ಎಂದು ಹೆಸರಿಸಲೂ ಸಾಧ್ಯವಾಗದು.   ಎಳನೀರಿನಲ್ಲಿ ತಿರುಳು ಏನೂ ಇಲ್ಲವೆಂದು ಚೆನ್ನಪ್ಪ ಆಗಲೇ ಹೇಳಿದನಲ್ಲ,  ಒಂದು ಪಕ್ಷ ತಿರುಳು ಇದ್ದರೂ ಚಮಚಾದಲ್ಲಿ ತೆಗೆದು ತಿನ್ನಬಹುದಾಗಿದೆ.  ತೆಂಗಿನಕಾಯಿ ಆಗುವ ಮೊದಲ ಹಂತದ ಅರೆ ಬಲಿತ ತೆಂಗಿನಕಾಯಿ ಎಂದೂ ಅರ್ಥೈಸಬಹುದಾದ ಈ ಬನ್ನಂಗಾಯಿಯಿಂದ ಸೊಗಸಾದ ದೋಸೆ ಮಾಡೋಣ.   ಬನ್ನಂಗಾಯಿ ತುರಿಯನ್ನು ಅಕ್ಕಿಯೊಂದಿಗೆ ಅರೆದು ನೀರುದೋಸೆಯಂತೆ ಎರೆದರಾಯಿತು.

ದೋಸೆ ಮಾಡುವುದೆಂತು?
ತೆಂಗಿನತುರಿಯಂತೆ ಕಂಡರೂ ಚಟ್ಣಿಗಾಗಲೀ,  ಸಾಂಬಾರಿನ ಮಸಾಲೆ ಅರೆದರೂ ಚೆನ್ನಾಗಿರುವುದಿಲ್ಲ,  ಏನೋ ಒಂಥರಾ ಹಸಿ ವಾಸನೆ ಬಂದೀತು.  ಇದೇ ತುರಿಯಿಂದ ದೋಸೆ ಮಾಡಿದ್ರಾ,  ತೆಂಗಿನ ತಾಜಾ ಸುಗಂಧ ಹೊಂದಿದ ದೋಸೆ ನಿಮ್ಮದು.   ಅಪ್ಪಟ ತೆಂಗಿನ ಸುವಾಸನೆಯ ಈ ದೋಸೆಗೆ ಉದ್ದು, ಮೆಂತೆ ಇತ್ಯಾದಿಯಾಗಿ ಏನೂ ಹಾಕಬೇಕಾಗಿಲ್ಲ.

ಒಂದು ಬನ್ನಂಗಾಯಿಯ ತುರಿ + 2 ಪಾವು ಬೆಳ್ತಿಗೆ ಅಕ್ಕಿ,  ಇದು ಅಳತೆ.   
ಅಕ್ಕಿಯನ್ನು ಚೆನ್ನಾಗಿ ತೊಳೆದು ನೆನೆಸಿಡಿ.   ಮುಂಜಾನೆಯ ದೋಸೆಗಾಗಿ ರಾತ್ರಿ ಮಲಗುವ ಮುನ್ನ ಅರೆಯಿರಿ,  ಹುದುಗು ಬರಬೇಕೆಂದೇನೂ ಇಲ್ಲ.

ದಪ್ಪ ಹಿಟ್ಟನ್ನು ಕಾವಲಿಯಲ್ಲಿ ತೆಳ್ಳಗಾಗಿ ಹಚ್ಚುವ ಚಾಕಚಕ್ಯತೆ ಇದ್ದಲ್ಲಿ ಆ ಥರ ದೋಸೆ ಹಚ್ಚಿರಿ.
ತುಸು ನೀರುನೀರಾದ ಹಿಟ್ಟನ್ನು ನೀರುದೋಸೆಯಂತೆ ಹಾರಿಸಿ ಎರೆಯಿರಿ.
ನಮ್ಮ ಮನೆಯ ಸದಸ್ಯರು ನೀರು ದೋಸೆಯ ಹಾಗೆ ಎರೆದದ್ದನ್ನೇ ಇಷ್ಟಪಟ್ಟು ತಿನ್ನುವವರು.   ಕಾಯಿಚಟ್ಣಿ,  ಬೆಲ್ಲದ ಜೇನುಪಾಕ ಹಾಗೂ ಗಟ್ಟಿ ಮೊಸರು ಕೂಡಿ ತಿನ್ನಲು ಸ್ವರ್ಗಸುಖ!


                                      ಪಾಲಪ್ಪಂ
ನಾವು ಕರಾವಳಿಯವರಲ್ವೇ,  ಇಲ್ಲಿ ಅಡುಗೆಗೂ ತೆಂಗಿನಕಾಯಿಯೇ ಮೂಲಾಧಾರವಾಗಿದೆ.   ಬನ್ನಂಗಾಯಿ ದೋಸೆ ತಿಂದೆವಲ್ಲ,  ಇದೇ ಮಾದರಿಯ ಪಾಲಪ್ಪಂ ಎಂಬ ದೋಸೆ ಕೇರಳೀಯರ ಮುಂಜಾನೆಯ ತಿನಿಸು.  ಪಾಲಪ್ಪಂ ಕೇರಳದ ವಿಶೇಷ ಖಾದ್ಯಗಳಲ್ಲಿ ಒಂದಾಗಿದೆ.   ಇಲ್ಲಿ ಬನ್ನಂಗಾಯಿ ಬೇಕಾಗಿಲ್ಲ,  ಹಸಿ ತೆಂಗಿನಕಾಯಿ ಹಾಗೂ ಬೆಳ್ತಿಗೆ ಅಕ್ಕಿಯಿಂದ ಪಾಲಪ್ಪಂ ತಯಾರಿಸೋಣ.

2 ಪಾವು ಅಕ್ಕಿಯನ್ನು ಅಳೆದು,  ನೀರೆರೆದು ಚೆನ್ನಾಗಿ ತೊಳೆಯಿರಿ,  ಇದು ಮೊದಲ ಸಿದ್ಧತೆ.
ಸಂಜೆಯ ಹೊತ್ತು,  ತೆಂಗಿನ ತುರಿ ಮಾಡಿದ್ರಾ,  ನೀರು ಕೂಡಿಕೊಂಡು ಅರೆದು ಕಾಯಿಹಾಲು ತೆಗೆಯಿರಿ.

ಕಾಯಿಹಾಲು ತೆಗೆಯುವುದು ಹೇಗೆ?
ಭರ್ತಿ ಒಂದು ತೆಂಗಿನಕಾಯಿ ಅರೆದಿದ್ದೀರಲ್ಲ,   ಇದನ್ನು ಶುದ್ಧವಾದ ಒಣ ಬಟ್ಟೆಯಲ್ಲಿ ಜಾಲಿಸಿ,  ಚೆನ್ನಾಗಿ ಹಿಂಡಿದಾಗ ದಪ್ಪ ಕಾಯಿಹಾಲು ಲಭ್ಯ.

ಒಂದು ಸೌಟು ಗೋಧಿಹಿಟ್ಟು ಯಾ ಮೈದಾ ಯಾ ಚಿರೋಟಿರವೆ ಅಥವಾ ಅಕ್ಕಿಹುಡಿಯನ್ನು ನೀರಿನಲ್ಲಿ ಕಲಸಿಕೊಂಡು ಬಾಣಲೆಗೆರೆದು ದಪ್ಪವಾಗುವಂತೆ ಬೇಯಿಸಿ ಇಡಬೇಕಾದ್ದು ಎರಡನೇ ಸಿದ್ಧತೆ.  ಈಗ ಬೆಂದ ಹಿಟ್ಟು ದೊರೆಯಿತು.   ನಾನು ಉಪಯೋಗಿಸಿದ್ದು ಗೋಧಿಹಿಟ್ಟು.

ಇನ್ನು ತೊಳೆದಿಟ್ಟ ಅಕ್ಕಿಯನ್ನು ಅರೆಯುವುದು,  ಅರೆಯುವಾಗ ಬೆಂದ ಹಿಟ್ಟನ್ನೂ ಕೂಡಿಸಿ ಅರೆಯಿರಿ.  ರುಚಿಗೆ ಉಪ್ಪು ಹಾಗೂ ಕಾಯಿಹಾಲನ್ನೂ ಎರೆದು ರಾತ್ರಿ ಬೆಳಗಾಗುವ ತನಕ ಮುಚ್ಚಿ ಇಡಬೇಕಾಗಿದೆ.

ಹುದುಗು ಬರಬೇಕಾಗಿರುವ ಈ ದೋಸೆಯನ್ನು ದಿಢೀರನೆ ಎರೆಯಲು ಕೇರಳ ಕ್ರಿಶ್ಚಿಯನ್ನರು ಯೀಸ್ಟ್ ಬಳಸುತ್ತಾರೆ.   ನಾವು ಈಗ ಯೀಸ್ಟ್ ಹಾಕೋದೇನೂ ಬೇಡ.  

ಯೀಸ್ಟ್ ಬಳಕೆ ಹೇಗೆ?
ಏಳೆಂಟು ಯೀಸ್ಟ್ ಕಾಳುಗಳನ್ನು ಉಗುರುಬೆಚ್ಚಗಿನ ನೀರು ಅಥವಾ ಹಾಲಿನಲ್ಲಿ ಒಂದು ಚಮಚ ಸಕ್ಕರೆಯೊಂದಿಗೆ ನೆನೆಸಿಟ್ಟು,  ಕಾಳುಗಳು ಕರಗಿದಾಗ ಹಿಟ್ಟಿಗೆ ಸೇರಿಸಿದರಾಯಿತು.

ಮುಂಜಾನೆಯ ಹೊತ್ತು ದೋಸೆ ಎರೆಯಿರಿ,  ಬೇಕಾದಂತೆ ಚಟ್ಣಿ ಅಥವಾ ಕೂಟು ತಯಾರಿಸಿ ಸವಿಯಿರಿ. ಇದು ಕೇರಳೀಯರ ಪಾಲ್+ಅಪ್ಪಂ,  ತೆಂಗಿನಕಾಯಿ ಹಾಲು ಇಲ್ಲಿ  'ಪಾಲ್' ಆಗಿದೆ.  ದೋಸೆಯ ವೈವಿಧ್ಯಗಳು ಆಪ್ಪಂ ಎಂದು ವಾಡಿಕೆಯಲ್ಲಿ ಕರೆಯಲ್ಪಡುತ್ತವೆ,  ಊತಪ್ಪಂ,  ಉಣ್ಣಿಯಪ್ಪಂ.... ಈ ಥರ.

ದೋಸೆಗಾಗಿ,  ಪಾಯಸಕ್ಕಾಗಿ  ತೆಂಗಿನಕಾಯಿ ಹಾಲು ಬಳಸಿ ಆರೋಗ್ಯ ಲಾಭ ಪಡೆಯಿರಿ.    ತೆಂಗಿನಕಾಯಿ ಹಾಲು ಹಾಗೂ ಎಳನೀರು ಒಂದೇ ಎಂದು ತಿಳಿಯಬೇಡಿ,  ಎಳನೀರು ಎಳೆಯ ತೆಂಗಿನ ನೀರು.   ಬಲಿತ ತೆಂಗಿನಕಾಯಿಯನ್ನು ತುರಿದು,  ಅರೆದು,  ರಸ ಹಿಂಡಿ ತೆಗೆದಿದ್ದು ತೆಂಗಿನಕಾಯಿ ಹಾಲು.   ತಾಜಾ ತೆಂಗಿನಕಾಯಿ ಹಾಲು ಹಸುವಿನ ಹಾಲಿನಂತೆ ದಪ್ಪವೂ,  ಸಿಹಿಯೂ ಆಗಿದ್ದು 17% ಕೊಬ್ಬಿನಂಶವನ್ನೂ ಹೊಂದಿರುತ್ತದೆ.   ಆಯುರ್ವೇದವು ತೆಂಗಿನಕಾಯಿ ಹಾಲನ್ನು ಪರಿಪೂರ್ಣ ಹಾಗೂ ಆರೋಗ್ಯದಾಯಕ ಪೇಯವಾಗಿ ಪರಿಗಣಿಸಿದೆ.  ಪ್ರೊಟೀನ್,  ಕ್ಯಾಲ್ಸಿಯಂ,  ಖನಿಜಾಂಶಗಳೂ,  ವಿಟಾಮಿನ್ ಸಿ ಇತ್ಯಾದಿಗಳಿಂದ ಸಮೃದ್ಧವಾಗಿದೆ ತೆಂಗಿನಕಾಯಿ ಹಾಲು.


ಟಿಪ್ಪಣಿ:  ಇದು ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತ ಬರಹ,  ಮೇ, 2016

0 comments:

Post a Comment